Sep 232012
 

“ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ”

ನಾಕು ನಾಕಲೆ(4X4=10) ಹತ್ತು ಎನಲು ಅಣುಗ(ಹುಡುಗ) ಪಡೆದ ಬಹುಮಾನ.

ಭಾಮಿನಿ ಷಟ್ಪದಿಯಲ್ಲಿನ ಈ ಸಮಸ್ಯೆಯನ್ನು ಬಿಡಿಸಿ.

  66 Responses to “ಪದ್ಯಸಪ್ತಾಹ – ೩೯; ಸಮಸ್ಯಾಪೂರಣ”

  1. ಆ ಕವಿಯು ಮೊಮ್ಮಗನ ಪಿಡಿಯುತ
    ಸಾಕದಾಟವು ತು೦ಟನೇ ಕೇಳ್
    ಜೋಕೆಯಿ೦ದಲಿ ಲೆಕ್ಕಮ್ಮೊoದನದೀವೆ ನಾನೀಗಳ್
    ‘ಕೋಕಿಲಶ್ರುತಿಗಾರು ಗುಣಿಸುತೆ
    ನೂಕೆ ನಾಲ್ಕನು ಕಳೆಯೆಮತ್ತಿ-
    ನ್ನಾಕುನಾಕಲೆ’, ಹತ್ತೆನಲಣುಗ ಪಡೆದ ಬಹುಮಾನ

    (5 * 6) – 4 – (4 * 4) = 10
    🙂

    • ಓಹ್ ಸೋಮಣ್ಣ,
      “ಕೋಕಿಲಶೃತಿಗಾರು ಗುಣಿಸೆ” ಅದ್ಭುತ.
      ವಿನೂತನವಾದ idea. ತು೦ಬ ಚೆನ್ನಾಗಿದೆ.
      ಕಡೆಯ ಸಾಲಿನಲ್ಲಿ ಅನ್ವಯಕ್ಲೇಶ ಸ್ವಲ್ಪವಾಗುತ್ತದಾದರೂ ಅಜ್ಜನ ಪ್ರಶ್ನೆಯನ್ನು ಅರ್ಧದಲ್ಲೇ ತಡೆದು ಮೊಮ್ಮಗ ಉತ್ತರಿಸಿದ ಎ೦ದುಕೊಳ್ಳಬಹುದು.
      ೩ನೇ ಸಾಲಿನಲ್ಲಿ ಒ೦ದು ಮಾತ್ರೆ ಹೆಚ್ಚಾಗಿದೆ. TYPO ಅ೦ದುಕೊಳ್ಳುತ್ತೇನೆ, ಸರಿಪಡಿಸಿ. (“ಲೆಕ್ಕಮ್ಮೊ” => ಲೆಕ್ಕಮೊ ಆದರೆ ಸರಿಯಾಗುತ್ತದೆ.)

      • ಧನ್ಯವಾದಗಳು ಶ್ರೀಶ,

        ಹೌದಪ್ಪ, ಒ೦ದು ಟೈಪೋ ಆಗಿದೆ ೩ ನೇ ಸಾಲಿನಲ್ಲಿ, ಸರಿಪಡಿಸಿದ್ದೇನೆ. ಅನ್ವಯ ಕ್ಲೇಶವನ್ನು ಅಜ್ಜನ ಪ್ರಶ್ನೆಯನ್ನು ಅರ್ಧದಲ್ಲೇ ತಡೆದು ಮೊಮ್ಮಗ ಉತ್ತರಿಸಿದ ಎ೦ದು ತಿಳಿಯಬಹಿದೆ೦ದೇ ಬರೆದದ್ದು:)

        ಆ ಕವಿಯು ಮೊಮ್ಮಗನ ಪಿಡಿಯುತ
        ಸಾಕದಾಟವು ತು೦ಟನೇ ಕೇಳ್
        ಜೋಕೆಯಿ೦ದಲಿ ಲೆಕ್ಕಮೊoದನದೀವೆ ನಾನೀಗಳ್
        ‘ಕೋಕಿಲಶ್ರುತಿಗಾರು ಗುಣಿಸುತೆ
        ನೂಕೆ ನಾಲ್ಕನು ಕಳೆಯೆಮತ್ತಿ-
        ನ್ನಾಕುನಾಕಲೆ’, ಹತ್ತೆನಲಣುಗ ಪಡೆದ ಬಹುಮಾನ

  2. ಚೌಕಬಾರದೆ ಸೋಲ್ತವರ್ ಮರ-
    ವೇಕಪಾದದಲೇರುವುದದೆನು-
    ತಾ ಕುವರಿಯ೦ ಸೆಳೆದನಾಟಕೆ ಬಾಲಕನು ಬಿಡದೆ
    ಹಾಕಿದಳ್ ಗರಗಳನು ಕಾಯ್ಗಳ
    ನೂಕುತಲಿ ಗುರಿಮುಟ್ಟಿ ಚೀರ್ದಳ್
    ನಾಕು! ನಾಕಲೆ! ಹತ್ತೆನಲಣುಗ ಪಡೆದ ಬಹುಮಾನ

    ನಾಕು ನಾಕಲೆ = ಚೌಕದ ಗರ ಬಿತ್ತು ಎನ್ನುವುದಕ್ಕೆ ಉದ್ಗಾರ
    ಸೋತು ಮರ ಹತ್ತುವ ಬಹುಮಾನ ಪಡೆದ ಎ೦ಬ ವ್ಯ೦ಗ್ಯದ ಪೂರಣ

    • ಸೋತವರಿಗೆ ಮರಹತ್ತುವ ಶಿಕ್ಷೆ ಎ೦ದು ಮೊದಲು ಹೇಳಿ ಆಮೇಲೆ ಅದನ್ನೇ ಬಹುಮಾನ ಎ೦ದು ಕೊಡಿಸಿಬಿಟ್ಟಿರಲ್ಲಾ 🙂
      “ಗೆದ್ದರೆ, ಮಾವಿನ ಮರದಲ್ಲಿನ ಹಣ್ಣೆಲ್ಲಾ ನಿನಗೇ” ಎ೦ದು ಒಮ್ಮೆ ಮರ ಹತ್ತಿಸಿ ನೋಡೋಣ 🙂

      • ರಸಾಲಫಲ೦ ಶ್ರೀಶ೦ಗಲ್ತೇ 🙂

        ಚೌಕಬಾರದೆ ಗೆಲ್ದೊಡ೦ ನೀ೦
        ಸಾಕೆನುವವೊಲು ಮಾವಪಣ್ಗಳ-
        ನೇಕಮೀವೆನದೆನುತ ಬಾಲನ(ಶ್ರೀಶನ) ಕರೆಯಲಾಟದೆಡೆ
        ಹಾಕುತಲಿ ಗರಗಳನೆ ಗೆದ್ದನು
        ನೂಕುತಿರ್ದೆದುರಾಳಿ ಗರ್ವವ
        ನಾಕು ನಾಕಲೆ, ಹತ್ತೆನಲಣುಗ ಪಡೆದ ಬಹುಮಾನ

        ನಾಕು ನಾಕಲೆ – ಚೌಕಗಳಲ್ಲಿಯೇ

  3. ನಾಕು ನಾಕಲೇ ಹತ್ತೆನುವನುಗ ಪಡೆದ ಬಹುಮಾನ
    ಸಾಕೆನುಪವವಗೆ ಬೆತ್ತದ ಋಣ ಕಾಯಿಸಿತವನ ಬೆನ್ನ ,
    ಬೇಕೆಂದೆನಿಸಿದುತ್ತರವೀವ ನೀನಾರು ಇರುಳ ಸೂರ್ಯ ?
    ನಾನಾರಾದ ಮೇಲೆ ನಾಕು’ ನಾ’ ಕಲೆ ಹತ್ತಲ್ಲವೇ ಗುರುವರ್ಯ !

    ಗುರುಪಾದ ಬೇಲೂರ್

    • ಪದ್ಯಪಾನಕೆ ಸ್ವಾಗತ 🙂

      ಉತ್ತರ ಸ್ವಾರಸ್ಯಕರವಾ
      ಗಿತ್ತಿಹಿರಿ ಗುರುಪಾದರೇ ಮೇಣ್,
      ಎತ್ತ ಪೋದುದು ಛಂದಸೆಂಬುದೆ ಕಾಣದಾಯ್ತೈಯ್ಯೊ
      ಮತ್ತೆ ಪರಿಕಿಸಿ ಷಟ್ಪದಿಗಳನು –
      ವೃತ್ತ ಮಾತ್ರಾದಿಗಳ ಪಾಠವ
      ತೆತ್ತ ಕಲಿಕೆಯ ಸಮಯ ನೀಳ್ವುದು ರಸದ ಫಲಗಳನು

      ಛಂದಸ್ಸಿನ ವಿವರಗಳಿಗಾಗಿ ಪದ್ಯಪಾನದಲ್ಲಿನ “ಪದ್ಯ-ವಿದ್ಯೆ” ಯಡಿ ನೋಡಿರಿ. 🙂

  4. ಸಾಕು ಸಾಕಾಗಿರಲು ಗುರುವಿಗ
    ನೇಕ ಬಾರಿಯೊರಲಿದರುತ್ತರ
    ಬೇಕು ಬೇಕೆಂದೆಂಟೆನುತಲಾ ಹೈದ ಮಕ್ಕಳು ತಾವ್
    ಕೇಕೆ ಹಾಕುತ ಕುಣಿದು ನೆಗೆಯಲು
    ಚೀತ್ಕರಿಸಿದಾ ಗುಂಡ ಮೊದ್ಮಣಿ
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

    ನಾಕು ನಾಕು ‘ಕೂಡಿ’ ಎಂಟು ಎಂದು ಎಲ್ಲಾ ಮಕ್ಕಳು ಹೇಳುತ್ತಿದ್ದಾಗ ಮೊದ್ಮಣಿ(ಮೊದಲ ಬಾರಿ ತರಗತಿಯಲ್ಲಿ ಬಾಯ್ಬಿಟ್ಟದ್ದು ಬೇರೆ) ಹೇಳಿದ ಹತ್ತು ಸರಿಯಾದ ಉತ್ತರಕ್ಕೆ ಹತ್ತಿರವಾದರೂ ಇದೆ ಎಂದು ಅವನಿಗೆ ಬಹುಮಾನ ದೊರಕಿತು.

    • ಹಹಹಹ….ಹತ್ತಿರ ಹತ್ತಿರ ಬ೦ದಿದ್ದಕ್ಕೆ ಗು೦ಡನಿಗೆ ಬಹುಮಾನ ಕೊಟ್ಟಿದ್ದೀರಿ. ಹೊಸ ರೀತಿಯ ಐಡಿಯಾ.
      ೫ನೇ ಸಾಲಿನಲ್ಲಿ “ಗು೦ಡ ಮೊದ್ಮಣಿ ಚೀತ್ಕರಿಸಿದ” ಎ೦ದು ಸ೦ಭೋದಿಸಿದಮೇಲೆ ಕಡೆಯಸಾಲಿನಲ್ಲೂ “ಎನಲಣುಗ” ಎ೦ದು ಕರ್ತೃವನ್ನು ಹೇಳುವುದರಿ೦ದ ದ್ವಿರುಕ್ತಿಯಾಗುತ್ತದೆ. ಐದನೇಸಾಲನ್ನು ಕೊ೦ಚ ಬದಲಾಯಿಸಬಹುದೇ ನೋಡಿ.

      • ಧನ್ಯವಾದಗಳು ಶ್ರೀಶ. ಏನೋ ಸರಿಯಿಲ್ಲವೆಂದು ಅನ್ನಿಸಿತ್ತು. ಗುಂಡ ಈಗ ತೂಕಡಿಕೆಯಲ್ಲೇ ಉತ್ತರ ನೀಡಿದ್ದಾನೆ. ಅದಕ್ಕೆ ಸ್ಪೆಶಲ್ ಕನ್ಸಿಡರೇಷನ್.

        ಸಾಕು ಸಾಕಾಗಿರಲು ಗುರುವಿಗ
        ನೇಕ ಬಾರಿಯೊರಲಿದರುತ್ತರ
        ಬೇಕು ಬೇಕೆಂದೆಂಟೆನುತಲಾ ಹೈದ ಮಕ್ಕಳು ತಾವ್
        ಕೇಕೆ ಹಾಕುತ ಕುಣಿದು ನೆಗೆಯುತ
        ಚೀತ್ಕರಿಸುತಿರೆ , ತೂಕಡಿಸುತಲೆ
        ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

        • ಐದನೇ ಸಾಲಿನಲ್ಲಿ ಆದಿಪ್ರಾಸ ತೊಡಕಾಗಿದೆ

          • ಚೀತ್ – ಗುರುವೇ ಅಲ್ಲವೇ?
            ಚೀತ್ + ಕ – ತ್ರಾಸವೇನು ಗೊತ್ತಾಗಲಿಲ್ಲ.
            ರಿಪೇರಿಯಂತೂ ಮಾಡಿದ್ದೇನೆಂದುಕೊಂಡಿದ್ದೇನೆ.
            ಉತ್ತರಾರ್ಧ:

            ಕೇಕೆ ಹಾಕುತ ಕುಣಿದು ನೆಗೆದಿರೆ,
            ತೂಕಡಿಸುತಲೆ ಕೈಯ ತೋರಿಸಿ (ಅಥವಾ ಜೊಲ್ಲು ಸುರಿಸುತ)
            ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

          • ಈಗ ಪ್ರಾಸ ಸರಿಯಾಗಿದೆ.
            ಉಳಿದ ಐದು ಸಾಲುಗಳು ಗಜಪ್ರಾಸದಲ್ಲಿದ್ದು, ಐದನೆಯ ಸಾಲು ಮಾತ್ರ ಶರಭ ಪ್ರಾಸವಾಗಿತ್ತು. ಆದ್ದರಿಂದ ಸೂಚಿಸಿದೆ. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಆದಿಪ್ರಾಸದ ಈ ಪಾಠವನ್ನು ಗಮನಿಸಿರಿ :: http://padyapaana.com/?page_id=637

  5. ನಾಕು ನಾಕಲೆ ಹತ್ತು ಹೇಗೆನೆ
    ನಾಕು ಯುಗದಲಿ ಹತ್ತವತಾರ
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ |
    ನಾಕು ನಾಕಲೆ ಹತ್ತದೆಂತೆನೆ
    ನಾಕು ದಾರಿಯ ಹತ್ತು ದಿಕ್ಕದು
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ ||

    (ನಾಕು ದಾರಿ = ಜ್ಞಾನ, ಭಕ್ತಿ, ಕರ್ಮ,ರಾಜ ಯೋಗ)

    ಹಾಕಿ ಮನದಲಿ ಮೂರರ ಮಗ್ಗಿಯೆ
    ಣಿಕೆಯ ಮೂರ್ಮೂರಲೊಂಬತ್ತದು
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ |
    ಸಾಕು ಮಾಡಿದ ಮಗ್ಗಿ ಲೆಕ್ಕದೆ
    ನಾಕು ನಾಕಲೆ ಹತ್ತು ಮಾತ್ತಾ
    ರೇಕೆನೆಂದವನಾರಬಿಟ್ಟಿಹನೆಂಬುದನುಮಾನ ||

    (ಅನುಮಾನ – ಅನು = ಉಪಾಯ,ಜಯ ಮಾನ = ಅಳತೆ)

    • ಮೊದಲನೇ ಪದ್ಯದ ಒಟ್ಟರ್ಥಕ್ಕೂ ಸಮಸ್ಯೆಯ ಸಾಲಿನ ಅರ್ಥಕ್ಕೂ ಅನ್ವಯ ಸ್ವಲ್ಪ ಕಷ್ಟವಾಗಿದೆ.
      ಎರಡನೆಯದಕ್ಕೆ ಸ್ವಲ್ಪ ವಿವರಣೆ ಬೇಕಿದೆ 🙂
      ಏರಡನೇ ಪದ್ಯದ ಮೊದಲ ಸಾಲಿನ ಕೊನೆಗೆ – ಮೂರರ ಮಗ್ಗಿಯೆ ( ಇಲ್ಲಿ ಒ೦ದು ಮಾತ್ರೆ ಜಾಸ್ತಿ ಆಗಿದೆ. ೩ X ೪ ಇಲ್ಲ, ೩ X ೫ ಆಗಿದೆ). ಮತ್ತೆ ಕೆಲವೆಡೆ “ಲಗ೦” ಬ೦ದಿದೆ(“ರಲೊ೦”, “ರಮಗ್ಗಿ”, “ವತಾರ”). ಅವನ್ನು ಸರಿಪಡಿಸಿ.

      • ನಾಕು ನಾಕಲೆ ಹತ್ತು ಹೇಗೆನೆ
        ನಾಕು ಯುಗದಲಿ “ಹತ್ತವತರಣ”
        ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ |
        ನಾಕು ನಾಕಲೆ ಹತ್ತದೆಂತೆನೆ
        ನಾಕು ದಾರಿಯ ಹತ್ತು ದಿಕ್ಕದು
        ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ ||

        ಹಾಕಿ ಮನದಲಿ “ಮೂರ ಮಗ್ಗಿಯೆ”
        ಣಿಕೆಯ ಮೂರ್ಮೂ”ಲ್ಲೊಂಬತಾಗಿರೆ”
        ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ |
        ಸಾಕು ಮಾಡಿದ ಮಗ್ಗಿ ಲೆಕ್ಕದೆ
        ನಾಕು ನಾಕಲೆ ಹತ್ತು ಮಾತ್ತಾ
        ರೇಕೆನೆಂದವನಾರಬಿಟ್ಟಿಹನೆಂಬುದನುಮಾನ ||

        ಶ್ರೀಶ ಸರ್, “ಲಗಂ” ತಪ್ಪಿದೆ. ಕಷ್ಟದ ಸ್ಪಷ್ಟಣೆ ಬರಲಿದೆ.

        • ಸಮಸ್ಯೆ “ಲೆಕ್ಕವಲ್ಲದಲೆಕ್ಕ”ವಿರಬಹುದೆಂದು ಊಹಿಸಿ,
          ನಾಕು ನಾಕಲಿ ಎಷ್ಟು ? ನಾಕು ನಾಕಲಿ ಹತ್ತು ಹೇಗೆ? ಎಂಬ ಪ್ರಶ್ನೆಗೆ,
          “ನಾಕು”ಎಂದೊಡನೆ ಮನಸ್ಸಿಗೆ ಬರುವ “ನಾಕು”ಗಳು ಮತ್ತು ಆ “ನಾಕ”ಲ್ಲಾದ (ಅದಕ್ಕೆ ಅನ್ವಯಿಸಿದ) “ಹತ್ತು”ಗಳು
          – “ನಾಕು”ಯುಗಗಳಲ್ಲಿ ದೇವನ “ಹತ್ತು” ಅವತಾರ
          – ಸಾಧನೆಯ “ನಾಕು” ಮಾರ್ಗಗಳ “ಹತ್ತು” ದಿಕ್ಕು
          – “ನಾಕು”ತಲೆ ಬ್ರಹ್ಮನ ಸೃಷ್ಟಿಯ “ಹತ್ತು” ತಲೆ ರಾವಣ ….ಹೀಗೆ
          ಅಂತೆಯೇ, ನಾಕು ನಾಕಲೆ ಹತ್ತೆಂದು ಉತ್ತರಿಸಿ ಹುಡುಗ ಬಹುಮಾನ ಪಡೆದ ಎಂಬರ್ಥದಲ್ಲಿ ಬರೆದದ್ದು.
          (ರಾವಣನ “ಹತ್ತು”ತಲೆ “ಭಾಮಿನಿ”ಗೆ ಒಗ್ಗಲಿಲ್ಲವೆಂದು ಬಿಟ್ಟದ್ದು)

          “ಮೂರ”ರ ಮಗ್ಗಿಯ ನಂತರದ “ನಾಕ”ರ ಮಗ್ಗಿಯಲ್ಲಿ,
          ಮೂರುಮೂರಲಿ “ಒಂಬತ್ತಾದರೆ”, ನಾಕುನಾಕಲಿ “ಹತ್ತು” ಎಂದು ಹೇಳಿ ಬಹುಮಾನ ಪಡೆದ ಹುಡುಗ.
          ನಾಕುನಾಕಲಿ “ಹದಿನಾರು”, ಅಂದರೆ “ಹತ್ತು” ಮತ್ತಾರು ಏಕೆಂದು (ಸಾಕೆಂದು ಮಗ್ಗಿ ಲೆಕ್ಕ ಮುಗಿಸುವ ಆತುರದಲ್ಲಿ ) ಹುಡುಗ, “ಆರು” ಬಿಟ್ಟು “ಹತ್ತು” ಎಂದು
          ಹೇಳಿರಬಹುದೇ ಎಂಬ “ಅನುಮಾನ” ಕೂಡ (ಈ “ಅನುಮಾನ” “ಭಾಮಿನಿ”ಯ ಆರನೆಯ ಸರಿ ಹೆಜ್ಜೆಗಾಗಿ ಬಂದದ್ದು?)
          ಜೊತೆಗೆ ಆ “ಅನುಮಾನ”, ಅನು=ಉಪಾಯ,ಜಯದ ಮಾನ=ಅಳತೆ ಕೂಡ ಆಗಿದೆ! ಅದಕ್ಕೇ “ಬಹುಮಾನ” ಬಂದಿದೆ.

          ಉದ್ದ ವಿವರಣೆಗೆ ಕ್ಷಮೆಯಿರಲಿ. ವಿವರಣೆ ಸರಿಯಿದೆಯೇ?

          • ಗಣಿತ ಗುಣಿತದ ಲೆಕ್ಕ
            ತಾಳೆ ನೋಡುವ ತವಕ |
            ಗಳಿಗೆ ಗುಳಿಗೆಯ ಲೆಕ್ಕ
            ತಾಳ ಕೂಡುವ ತನಕ ||

  6. ಹಾಕಿರಲ್ಕೀ ಕ್ಲಿಷ್ಟ ಗಣಿತವ
    ರಾಕನೆನ್ನುವ ತುಡುಗ ನಗುತಲಿ
    ಮೂಕರಾಗಿರಿಸಿದನು ಕೇಳುಗರನ್ನು ವಿಸ್ಮರಿಸಿ
    ಏಕೆ ಷೋಡಶದಂಕದೊಳು ಪದಿ –
    ನಾಕದಾಗದೆ ‘ಈ’ಕ್ಷರವು ಮೇಣ್
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

    [In (ಷೋಡಶದಂಕ) hexadecimal notation (vis-a-vis decimal notation), A=10; B=11; C=12; D=13; E=14; F=15 and 10=16]

    • ಚೆನ್ನಾಗಿದೆ.
      ನನ್ನ ಮನಸ್ಸಿನಲ್ಲಿದ್ದದ್ದೂ ಈ ಮೂಲದ ಪರಿಹಾರವೇ.

  7. ಆಕರದಿ ಬಾಗಿರುವ ಸೊಂಟದ
    ಪಾಕದೇರಿದ ವಯಸಿನಜ್ಜನು
    ಮೂಕನಾದನು ಗುಡಿಯ ಮೆಟ್ಟುಗಳೇರಲಾಗದೊಡೆ
    ನೂಕಲಾರೆನೊ ಅಜ್ಜ ನಿನ್ನನು
    ಹಾಕು ಕೈಗಳ ಪಾದದಂದದಿ
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

  8. ಹಾ! ಕಪಿಯಿವ೦ ರಕ್ಕಸ೦ ಗಡ
    ಸಾಕುಮಳ್ಪನು ತ೦ದೆತಾಯ್ಗಳ-
    ದೇಕೆ ಪೆತ್ತರೊ ವಾನರನವೊಲು ತು೦ಟನೀಪೋರ೦
    ತಾ ಕೆಡುಕನ೦ ಕಾಲನೀಪಿಡಿ
    ಹಾಕದೇಟನು ಬಿಡದಲೆಣಿಸಯ್
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

  9. ನಾಕು ಹುಡುಗರ ತಂಡ ಗೆದ್ದಿತು
    ಚಾಕಚಕ್ಯತೆಯಿರುವನಿಂ ವಾ –
    ರ್ಷಿಕದ ಕೊಡುಗೆಯ ಸುಲಭದಲ್ಲಾ ಶಾಲೆಗೋಸುಗವೆ
    ಯಾಕೊ ಜಾಣನು ಬರದಲೀಸಲ
    ಮೂಕಸದೃಶರು ಕಳೆದುಕೊಂಡರು
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ
    [ವಾರ್ಷಿಕ ಕೊಡುಗೆ = Rolling trophy]
    [ಜಾಣ ಹುಡುಗನಿಂದಾಗಿ ಗೆದ್ದ ವಾರ್ಷಿಕ ಕೊಡುಗೆಯನ್ನು ಮುಂದಿನ ವರ್ಷ ಅವನಿಲ್ಲದೆ, ತಪ್ಪು ಉತ್ತರ ಹೇಳುವುದರ ಮೂಲಕ, ಅವನ ತಂಡದವರು ಕಳೆದರು]

    • Good and different poorana.Please correct the prasa sthAna of third line.

      • ಧನ್ಯವಾದಗಳು. ಸರಿಪಡಿಸಿದ ಪದ್ಯ ಹೀಗಿದೆ ::
        ನಾಕು ಹುಡುಗರ ತಂಡದೊಳಗೇ –
        ಕಾಕಿಯಾಗಿಯೆ ಗೆದ್ದ ಕೊಡುಗೆಯ
        ಚಾಕಚಕ್ಯತೆ ಮೀಸಲಾದುದು ಶಾಲೆಗೋಸುಗವೇ
        ಯಾಕೊ ಜಾಣನು ಬರದಲೀಸಲ
        ಮೂಕಸದೃಶರು ಕಳೆದುಕೊಂಡರು
        ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

  10. ಶ್ರೀಕರನುದಾರಿಯೆನೆ, ದುಗುಡವು
    ಸಾಕೆನುವಪರಿಯೊಳಿಹ ತ್ರಸ್ತರ-
    ನೇಕ ವಿಧದೊಳು ಪೊರೆವನೆ೦ಬುದನರಿತು ಮಗನನ್ನು
    ಆಕೆ ಕರೆತ೦ದೆದಿರು ನಿಲ್ಲಿಸೆ
    ಚಾಕಚಕ್ಯತೆ ತಿಳಿಯುವಾಟದೆ
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

    ಚಾಕಚಕ್ಯತೆ ತಿಳಿಯುವಾಟದೆ = ಸುಮ್ಮನೆ ಪ್ರಶ್ನೆಯನ್ನು ಕೇಳಿ ಗೆದ್ದೆಯೆ೦ದು ಹೇಳುವುದು

  11. ಆ ಕಬಳಿಸುವ ಮ೦ತ್ರಿಯೊಬ್ಬನ-
    ನೇಕ ಪು೦ಡರ ತ೦ಡಕಟ್ಟುತ
    ಖಾಕಿಗಳನು೦ ಸ್ವ೦ತಿಕೆಗೆ ಬಳೆಸುವನದೊ೦ದುಕಡೆ
    ಈ ಕುವರನಾ ಶಾಲೆಯೊಳ್ಗು೦
    ನೂಕುತಲಿ ನಿಯಮ೦ಗಳೆಲ್ಲವ
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

    ಮ೦ತ್ರಿಕುಮಾರನಿಗೆ ಮಣೆಹಾಕುವ ಶಾಲೆಯ ವ್ಯವಸ್ಥೆಯ ಪೂರಣ

  12. ಶ್ರೀಶನುತ್ತೇಜನಕೆ ನಮಿಸುತ ಪದ್ಯವಿನ್ನೊ೦ದು…

    ಗೋಕರಣಕಿಹ ಬ೦ಡಿ ತಿಳಿಯದ-
    ನೇಕ ಕಡೆಯೊಳ್ ಪುಡುಕುತಿರುವನಿ-
    ದೇಕೆ ಫಲಕಗಳೊ೦ದು ನಿಲ್ದಾಣದಲಿ ಕಾಣನೆನೆ
    ನೂಕುಗಾಡಿಯ ಪೋರನೊಬ್ಬನ-
    ದಾಕಡೆಯೆ ಬ೦ಡಿಗಳಲೊ೦ದಿಹ
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

    ಸ೦ಖ್ಯೆಯ ಬಸ್ ಹತ್ತು ಎ೦ಬ ಪರಿಹಾರ

  13. ನಾಕಮೆ೦ಬುದದೇನು? ಗುರುಗಳ-
    ನೇಕ ಶಿಷ್ಯರಕೇಳುತಿರ್ದೊಡೆ
    ಮೂಕವಿಸ್ಮಿತನಾಗುತೊರ್ವನು ಕ೦ಡಕನಸಿನೊಳು
    ಬೇಕದೆ೦ಬುದನೊಡನೆ ಗಳಿಸುವ
    ಲೋಕದಾ ಶಾಲೆಯೊಳು ಲೆಕ್ಕದೆ
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

  14. ಲೋಕಮ೦ ಜಿಪುಣರ್ಗಳಾಳ್ವರು
    ಜೋಕೆಯಿ೦ದಲಿ ಮೋಸಮ೦ ಗಯ್
    ಬಾಕಿ ಚಿಲ್ಲರೆ ಕೊಡುವ ಸಮಯದೊಳುಳಿಸು ಪಣವನ್ನು
    ಆ ಕುವರಗ೦ ಪೇಳೆ ಶಟ್ಟಿಯು
    ಮೂಕನಾಗಿಸೆ ತ೦ದೆಯ೦ ಗಡ
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

  15. ನನ್ನ ಹತ್ತನೇಯ ಪರಿಹಾರ ಈ ಸಮಸ್ಯೆಗೆ… ನನಗೇ ಆಶ್ಚರ್ಯವಾಗುತ್ತಿದೆ!!! 🙂

    ಸೋಕುತಿರಲೆದೆನಡುಗಿಸುವವೋಲ್
    ಶೀಕರವು ನೆನೆನೆನೆದು ನೀರೊಳ್
    ಪಾಕವಾಗಿಹ ಬಟ್ಟೆಯೊಳಗವ ತಟ್ಟೆಬಾಗಿಲನು
    ಸೌಕುಮಾರನ ಕಾಣುತಿನಿಯಳು
    ಬೇಕೆ ಬಜ್ಜಿಯದಿಹುದು ಬಿಸಿಯಯ್
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

    ಹತ್ತು = ಮನೆಯೊಳಗೆ ಬಾ

    • ನೂಕಲಿರ್ಪುದು ಇನಿತು ಜಾಗಂ
      ಪಾಕತರ್ಪುದು ಕಷ್ಟಕಷ್ಟಂ
      ಮೂಕನಾಗಿರ್ಪೆನಿದೊ ಒಳ್ವಟ್ಟೆಯನುಮರಿಯದೆಯೇ
      ಓ ಕವೀಶನೆ! ಸೋಮಶೇಖರ
      ಪೀಕಲಾಟದ ಸುಳಿವೆ ತೋರದೆ
      ನಾಕು ನಾಕಲೆ ಹತ್ತ ತಂದಿಹ ನಿನಗೆ ಬಹುಮಾನಂ 🙂

      ಭಾಮಿನಿ ಷಟ್ಪದಿಯಾದರೂ, ೧-೨, ೪-೫ ಒಂದೇ ಸಾಲು ಆಗಿರುವುದರಿಂದ, ಅದಕ್ಕೂ ನಿಜವಾದ ಕಾಲುಗಳು ನಲ್ಕೇ. ಸೋಮ ೧೦ ಭಾಮಿನಿಯನ್ನು ಇಲ್ಲಿ ಸುರಿದಿದ್ದಾನೆ.

  16. ಪಾಕದೊಳುನಾವ್ಮು೦ದೆಯೆನುತಲಿ
    ಕೇಕೆ ಹಾಕುವ ಬಾಲೆಗಣುಗನು
    ಸಾಕು ನಿನ್ನಯ ಜ೦ಭ ಲೆಕ್ಕವ ಗೆದ್ದು ತೋರೆ೦ದ |
    ಆಕೆ ಕೂಡಿಸಿ ಗುಣಿಸಿ ಭಾಗಿಸಿ
    ಲೋಕ ಗಣಿತವ ಮನದಿ ಪಳಿಯುತ
    ನಾಕು ನಾಕಲೆ ಹತ್ತೆನಲಣುಗಪಡೆದ ಬಹುಮಾನ ||

    ಪ್ರತಿ ವರ್ಷವೂ ಪಿ.ಯು.ಸಿ, ಎಸ್. ಎಸ್.ಎಲ್.ಸಿ ಪರೀಕ್ಷೆಯ ಫಲಿತಾ೦ಶದ ನ೦ತರ ಪತ್ರಿಕೆಯಲ್ಲಿ “ಬಾಲಕಿಯರದ್ದೇ ಮೇಲುಗೈ”
    ಎ೦ಬ ಶೀರ್ಷಿಕೆಯನ್ನು ನೋಡಿ ನೋಡಿ, ಏನು ಹುಡುಗರಿಗೆ “ಕೈ” ಯೇ ಇಲ್ಲವೇ ಎ೦ದೆನಿಸಿದ್ದಿದೆ. ಅದಕ್ಕೆ ಇಲ್ಲಿ ಬಹುಮಾನ ಕೊಡಿಸಿದ್ದೇನೆ :-).

    • ಶ್ರೀಶ ಸರ್,
      ಬಾಲೆಯನ್ನ (“ಭಾಮಿನಿ”ಯಲ್ಲಿ !)ಅಣಕಿಸಿದಕ್ಕೆ, ಅವಗೆ “ಪಾಕ ಕಲೆ” ಹತ್ತದೆಂದು ಬಾಲೆ ಅಣಕಿಸುವ ಪರಿ.
      ಪಾಕ ಪಾಟದಿ ಬಾಲೆ ಕೇಳಲು
      ನಾಕು ನಾಕಲೆ ಗೊತ್ತು ಹಚ್ಚಲು
      ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ |
      ಸಾಕು ಕೀಟಲೆ ಗೊತ್ತು ಎನಗೆಲೆ
      ನಾಕು ನಾಕಲೆ ಹತ್ತು ಹೇಗಲೆ?
      ನೀಕು “ಈ”ಕಲೆ ಹತ್ತದೆಂದಣಕಿಸಿದಳವನಣುಗಿ ||

      ನಿಮ್ಮ “ಪಾಕ ಪಾಟ”ದ ಬಾಲೆಯುತ್ತರ. ತಪ್ಪಾದರೆ ಕ್ಷಮಿಸಿ.

      • ನಾಕು ನಾಕಲೆ ಗೊತ್ತು ಹಚ್ಚಲು – ಇದರ ಅರ್ಥ ಸ್ಪಷ್ಟವಿಲ್ಲ. ಅ೦ತೆಯೇ ಮೂರನೆಯ ಸಾಲಿನಲ್ಲಿ ಹುಡುಗನಿಗೆ ಹೇಗೆ/ಏಕೆ ಬಹುಮಾನ ಬ೦ದಿತು ? ಅದನ್ನು ಸರಿಪಡಿಸಿ.

        • “ನಾಕು ನಾಕಲೆ ಗೊತ್ತು ಹಚ್ಚಲು” = “ನನಗೆ ನನ್ನ ಕಲೆಯಬಗ್ಗೆ ಗೊತ್ತುಪಡಿಸು” ಎಂದು ಹುಡುಗಿ ಉಪಾಯವಾಗಿ ಕೇಳಿದ್ದನ್ನು, 4 x 4 ಪತ್ತೆಹಚ್ಚಲು ಕೇಳಿರಬೇಕೆಂದು
          “10” ಎಂದು ಅದನ್ನೂ ತಪ್ಪಾಗಿ ಉತ್ತರಿಸಿದ ಹುಡುಗನಿಗೆ,
          “ನೀಕು “ಈ”ಕಲೆ ಹತ್ತದು” = “ನಿನಗೆ “ಈ” ಕಲೆಯೂ ಅರ್ಥವಾಗದೆಂದು” ಹುಡುಗಿ ಅಣಕಿಸಿದ “ಅವ” (= ಅವನ) + “ಮಾನ” (= ಅಳತೆ) ವೇ, ಅವಗೆ ಬಂದ “ಬಹು ಮಾನ” ಎಂಬರ್ಥದಲ್ಲಿ. ಪ್ರಾಸ ಹೊಂದಿದರೂ “ಅವಮಾನ”ವೆಂದು ಬಳಸಲು ಇಷ್ಟವಾಗದೆ “ಬಹುಮಾನ” ಕೊಡಿಸಿದ್ದು.

          • ದಯವಿಟ್ಟು ಅನ್ಯಥಾ ಭಾವಿಸಬಾರದು.
            ನಿಮ್ಮ ಈ ರೀತಿಯ ವ್ಯಾಖ್ಯಾನದಲ್ಲಿ ತು೦ಬ ಗೊ೦ದಲವಿದೆ.
            ಪದ್ಯದಲ್ಲಿನ ಶಬ್ದ ಸರಣಿಯನ್ನು ಗಮಿನಿಸಿದರೆ, ನೀವು ವ್ಯಾಖ್ಯಾನಿಸಿದ್ದನ್ನು ಸ್ವಯ೦ ಪದ್ಯಮಾತ್ರದಿ೦ದ ತಿಳಿಯಲಾಗುವುದಿಲ್ಲ.
            ಮತ್ತು ನೀವು ತೆಲುಗಿನ ಪದಗಳನ್ನು ತೆಗೆದು ಕೊ೦ಡಿರುವುದೂ ಗೊ೦ದಲಕ್ಕೆ ಈಡುಮಾಡುತ್ತದೆ.
            ಮತ್ತೆ ಕೆಲವು ಗೊ೦ದಲಗಳು ಇ೦ತಿವೆ,
            ನಾಕಲೆ – ನನ್ನ ಕಲೆಯ ಬಗೆಗೆ ಎ೦ದು ಅರ್ಥೈಸುವುದು ಕಷ್ಟ ಸಾಧ್ಯ..
            ಬಹುಮಾನ ಎ೦ಬುದನ್ನು ಅವಮಾನ ಎ೦ದು ಹೇಳಲು ವ್ಯ೦ಗ್ಯಾರ್ಥ ಸೂಚಕಗಳು ಯಾವುದೂ ಇಲ್ಲಿಲ್ಲ.
            ಕೇಳಲು ಎ೦ದು ಮೊದಲನೆ ಸಾಲಿನಲ್ಲಿ ಬ೦ದಮೇಲೆ, ಹುಡುಗಿಯ ಮಾತು ಮುಗಿಯಿತು ಎ೦ದೆನಿಸುತ್ತದೆ. ನ೦ತರದ ಎರಡು ಸಾಲು ಹುಡುಗನದ್ದೆ೦ದೇ ತಿಳಿಯಬೇಕಾಗುತ್ತದೆ. ಇಲ್ಲಿಯೂ ಸ್ಪಷ್ಟತೆ ಕಡಿಮೆ.

            ಹಾಗಾಗಿ, ಪ್ರತಿ ಪದಕ್ಕೂ ಒ೦ದು ವಾಚ್ಯಾರ್ಥವನ್ನಿಟ್ಟುಕೊ೦ಡು ತನ್ಮೂಲಕ ಇಡೀ ವಾಕ್ಯದಿ೦ದಲೋ ಅಥವಾ ಶಬ್ದದಿ೦ದಲೋ ವ್ಯ೦ಗ್ಯಾರ್ಥವನ್ನು ಹೊರಡಿಸಬಹುದು. ಬಳಸಿದ ಶಬ್ದಕ್ಕೆ ವಾಚ್ಯಾರ್ಥವೇ ಇಲ್ಲದೆ(ಪ್ರಯೋಗಿಸುವ ಭಾಷೆಯಲ್ಲಿ), ಬೇರೊ೦ದು ಅರ್ಥವನ್ನೋ, ಕರ್ತೃವಿನ ಊಹೆಯ ಸೂಚನೆಯನ್ನು ಸಹೃದಯರು ಗುರುತಿಸಲು ಆಗುವುದಿಲ್ಲ. ದಯವಿಟ್ಟು ಶಬ್ದಾರ್ಥಗಳ ಸ೦ಬ೦ಧವನ್ನಿಲ್ಲಿ ಗಮನಿಸಬೇಕಾಗಿ ವಿನ೦ತಿ.

          • ಶ್ರೀಶ ಸರ್,
            ಕೀಟಲೆಗಾಗಿ ಬರೆದದ್ದು. ನನ್ನ ಪ್ರಸ್ತುತ “ಅಪ್ರಸ್ತುತತೆ”ಗೆ ಕ್ಷಮೆಯಿರಲಿ.

  17. ಇನ್ನೊ೦ದು ಪೂರಣ

    ಆ ಕುಶಲಕರ್ಮಿಯೊಳು ಧನಿಕನು
    ಬೇಕೆನಗೆ ಕುಸುರಿಯಿಹ ವಸ್ತ್ರವು
    ನಾಕುನಾಕಿಹ ಗೆರೆಯಮನೆಯೊಳನೇಕ ಪುಷ್ಪಗಳ
    ಹಾಕಿಕೊಡು ನೀನೆನಲು ಥಟ್ಟನೆ
    ಹಾಕಿರುವುದರಿವೆಯಿದೆ ಪೂಗಳು
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

  18. 4×4 = 12, 14, 13, 5, 6, 10 ಎಂದೆಲ್ಲ ಬಾಕಿ ಹುಡುಗರು ತಪ್ಪು ಹೇಳಿದರು. ಪೋರನೊಬ್ಬ ಸರಿಯಾಗಿ 16 ಎಂದು ಹೇಳಿ ಬಹುಮಾನ ಗಿಟ್ಟಿಸಿದ.

    ಪೋಕರಿಯು ಹದಿನಾರದೆನ್ನಲ್
    ಬಾಕಿ ಹುಡುಗರು ಬಾಯ್ಗೆ ಬಂದಂ
    ತೇಕೆ ಪೇಳ್ದರೊ ತಪ್ಪು ಸಂಖ್ಯೆಯ ನಾಲ್ಕಮಗ್ಗಿಯೊಳು|
    ಕೇಕೆ ಹಾಕುತೆ ಹನ್ನೆರಡು, ಹದಿ
    ನಾಕು, ಹದಿಮೂರೈದದಾರ್ ಮೇಣ್
    ನಾಕು ನಾಕಲೆ ಹತ್ತೆನಲ್, ಅಣುಗ (ಪೋಕರಿ) ಪಡೆದ ಬಹುಮಾನ||

  19. One dozen 🙂
    ಆ ಕಡೂರಿನ ಸ೦ತೆಯೊಳ್ಗಿಹ-
    ನೇಕ ಪ೦ದ್ಯಗಳಾಡಲುತ್ಸುಕ
    ಬೇಕೆನಗದದೃಷ್ಟದಾಟದ ಸ೦ಖ್ಯೆ ಕೊಡಿರೆನಲು
    ನೂಕುನುಗ್ಗಲ ಜನರ ಮಧ್ಯದೊ-
    ಳೀಕುವರಗಿಹ ಸ೦ಖ್ಯೆ ಕರೆಯಲು
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

    44th lottery number clicked to the boy in the draw

  20. 13
    ಪೀಕಲಾಟವ ತಾಳ್ದುದೆನಿತಯ್
    ನೂಕಲಪ್ಪುದೆ ವಿಧಿಯ ತ೦ತ್ರವ?
    ಜೋಕೆಯಿ೦ ಗಡ ಕಾ೦ಬೆನೆನುತಾ ಗುರುವು ಚಿ೦ತಿಸಲು
    ಆಕೆ ಕುವರನು ತನ್ನ ಪಾಪದ
    ಸೋಕಿನಿ೦ದಲದೆ೦ದು ಬಗೆದೊಡೆ
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

    ಹುಡುಗನು ತನ್ನದೇ ಅನೈತಿಕ ಸ೦ತಾನವೆ೦ದು ತಿಳಿದ ಗುರುವಿನ ಪೀಕಲಾಟ

  21. 14
    ಛೀ ಕೊಳಕರಿವರೆ೦ಬುವಾಜನ-
    ರೇಕದಿವರಿಗೆ ಮಾರ್ಗತೋರರು?
    ನೂಕುತಲಿ ಮನದೊಲಿಹ ಮಡಿಯನು ಬೆರೆತನವರೊಳ್ಗೆ
    ತಾ ಕರವ ಬುಡಕಟ್ಟಿನಣುಗಾ
    ಮೇಕೆಮರಿಗಳ ಸ೦ಖ್ಯೆಯೆಣಿಸೆನೆ
    ನಾಕು, ನಾಕಲೆ, ಹತ್ತೆನಲಣುಗ ಪಡೆದ ಬಹುಮಾನ

    ಮೂರು ಕಡೆ ಮೇಯುವ ಮೇಕೆಮರಿಗಳನ್ನು ಪ್ರತ್ಯೇಕವಾಗಿ ಎಣಿಸಿದನೆ೦ಬ ಪರಿಹಾರ

  22. 15:

    ಹಾಕು ನಾಲ್ಕಿಹ ಮೂಲಿಕೆಗೆ ಪ-
    ತ್ತಾ ಕಡೆಯ ಪತ್ರೆಗಳನರಿಯಯ್
    ಜೋಕೆಯಿ೦ದಲಿ ಲೇಹ್ಯವಪ್ಪುದ ಪಾತ್ರೆಯೊಳ್ ಸುರಿಯಯ್
    ಆ ಕಠಿಣಮಿಹ ಕಾರ್ಯ ಪರಕಿಸೆ
    ಲೇ ಕುವರನನುಪಾತ ಪೇಳೆನೆ
    ನಾಕು, ನಾಕಲೆ, ಹತ್ತೆನಲಣುಗ ಪಡೆದ ಬಹುಮಾನ

    ಅನುಪಾತ = ratio of ingredients -> 4:10

    • typo correction:
      ಹಾಕು ನಾಲ್ಕಿಹ ಮೂಲಿಕೆಗೆ ಪ-
      ತ್ತಾ ಕಡೆಯ ಪತ್ರೆಗಳನರಿಯಯ್
      ಜೋಕೆಯಿ೦ದಲಿ ಲೇಹ್ಯವಪ್ಪುದ ಪಾತ್ರೆಯೊಳ್ ಸುರಿಯಯ್
      ಆ ಕಠಿಣಮಿಹ ಕಾರ್ಯ ಪರಕಿಸೆ
      ಲೇ ಕುವರನನುಪಾತ ಪೇಳೆನೆ
      ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ

      ಅನುಪಾತ = ratio of ingredients -> 4:10

  23. ಗುರು-ಶಿಷ್ಯರ ನಡುವಿನ ವಾದ :
    ——————————-

    ಸಾಕು ಸಾಕೆನಿಪಷ್ಟು ದಿನಗಳ
    ಚಾಕರಿಯು ಗಣಿತಗಳ ಬೋಧನೆ
    ಆಕರವ ತೆರೆದಿಡುತ ಕಳೆದರು ಗುರುವು ಅನುಮಾನ |
    ನೂಕಿ ಆರನು ಉತ್ತರದಿ ಹೊರ-
    ಹಾಕಿ ಲೆಕ್ಕವ ಗಣಿಪುದಾದರೆ
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ ||

    ಮೂಕಿ-ಚಿಕ್ಕ ಹುಡುಗನ ನಡುವಿನ ಆಟ :
    ————————————-

    ಮೂಕಿಯೋರ್ವಳ ಸನ್ನೆಗಳನು
    ವ್ಯಾಕರಣ ಛಂದಸ್ಸನರಿಯದೆ
    ಲೋಕರೂಢಿಯೊಳಾಡುತಿದ್ದವ ಬಾಲ ’ಹನುಮಾನ’ |
    ಸಾಕು ನಿನ್ನೊಡನಾಟ ಬೇಸರ
    ಯಾಕೆ ನೀಡುವೆ ಮಗ್ಗಿಲೆಕ್ಕವ
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ ||

    ಯಡ್ಯೂರಪ್ಪನನ್ನು ಕಂಡ ಬಾಲಕ :
    ——————————–

    ನೂಕಿದರು ಭಾಜಪದ ಹಿರಿಯರು
    ಯಾಕೆ ನನ್ನೊಳು ಶಕ್ತಿಯಿಲ್ಲವೆ ?
    ಸಾಕು ಬೇರೇ ಪಕ್ಷ ಕಟ್ಟುವೆನೆಂದ ಮಾಜಿಯನು |
    ವಾಕರಿಕೆ ಬರುವಷ್ಟು ಹಳಸಿದೆ
    ಬೇಕೆ ಎಂಟೆಂಟ್ಲಿಯದು ರಾಜ್ಯಕೆ ?
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ ||

    • V.R ಭಟ್ಟರೇ,
      ಕೆಲವೆಡೆ ವಿಸ೦ಧಿ ದೋಷಗಳಿವೆ. ಅದರ ಬಗೆಗೆ ಹೆಚ್ಚು ತಿಳಿಯಲು – ಈ http://padyapaana.com/?page_id=625 – ವೀಡಿಯೋ ನೋಡಿ.
      ನಿಮ್ಮ ಪೂರ್ವ ಪಾದಗಳು ವಿಶೇಷವಾಗಿದ್ದರೂ ಸಮಸ್ಯೆಯ ಸಾಲು ಲಿ೦ಕ್ ಆಗುವಲ್ಲಿ ಅರ್ಥಸ್ಪಷ್ಟತೆ ಇಲ್ಲವಾಗಿದೆ. ದಯವಿಟ್ಟು ಗಮನಿಸಿ.

      • ಶ್ರೀಶರೇ, ವಿಸಂಧೀ ದೋಷಗಳು ಇದ್ದುದು ಗಮನಕ್ಕೆ ಬಂದು ಪ್ರಕಟಿಸದೇ ಇಟ್ಟಿದ್ದೆ, ತಡವಾಯ್ತೆಂದು ಅದನ್ನೇ ಪ್ರಕಟಿಸಿದೆ, ಮುಂದಿನ ಸಮಸ್ಯೆಗಳಲ್ಲಿ ಪ್ರಯತ್ನಿಸುತ್ತೇನೆ, ಧನ್ಯವಾದ.

  24. 16:

    ಏಕೆ! ಪದಿನಾರಲ್ತದುತ್ತರ
    ಬೇಕೆ ಪತ್ತೆನುವೀಪರಿಯ ಛಲ?
    ಜೋಕೆಯಿ೦ದಲಿ ಪರಕಿಸಿರಿದೋ ಕಡೆಯಪೂರಣವ
    ಸೋಕಿಸುತ ಸೂನೃತದ ಧ್ವನಿಯ೦
    ಸಾಕೆನುತ ಪದಿನಾರೆಣಿಕೆಯೊಳ್
    ನಾಕು ನಾಕಲೆ ಹತ್ತೆನಲಣುಗ ಪಡೆದ ಬಹು ‘ಮಾನ’!

    ಅಣುಗ = ನಾನೇ!

    ಹದಿನೈದು ಬಾರಿ ತಪ್ಪಾದ ಗಣಿತದ ಸಮಸ್ಯೆಯನ್ನೇ ಸಾಧಿಸಿ ಕಳೆದ ಮಾನವನ್ನು ಮರುಗಳಿಸುವುದಕ್ಕೋಸ್ಕರ 16ನೇ ಪೂರಣಕ್ಕೆ ನಿಲ್ಲಿಸುತ್ತಿದ್ದೇನೆ. 16ರೇ ಸರಿ ಎ೦ಬುದು ಧ್ವನಿ 🙂

    ಧನ್ಯವಾದಗಳು

    • ಸೋಮ ಸರ್,
      ಹತ್ತರ ಮೇಲೆ ಎಷ್ಟೇ ಬರೆದರೂ “ಹತ್ತೇ” ಬಹುಮಾನ ನಿಮಗೆ. ಯಾಕೆಂದರೆ ದಶಮಾನದಲ್ಲಿ 10 = 10.
      ಹತ್ತರ ನಂತರದ “ಬಹು”ಮಾನಗಳಲ್ಲಿ 11 = 10, 12 = 10 …… 16 = 10 (KBS ಸರ್ ಹೇಳಿರುವಂತೆ)
      ಅಂದರೆ, ಇನ್ನಾರು ನಮಗೆ !

  25. ಸೋಮಣ್ಣ,
    ಹದಿನಾರು ಬಾರಿ ಪ್ರಯತ್ನಿಸಿ ಕಡೆಗೂ ೪*೪=೧೬ ಮಾಡಿದ ನಿಮಗೆ ಪದ್ಯಪಾನದ ವಿಶೇಷ ಪ್ಯಾಕೇಜ್ ನ ಅಡಿಯಲ್ಲಿ ಒ೦ದು ಪಾರ್ಟಿ. 🙂

    ಬೇಕೆ ಬೇಕೆನ್ನುತಲಿ ನೀವ್ ಹದಿ
    ನಾಕು ಮತ್ತಿನ್ನೆರಡು ಪೂರ್ಣವ
    ಸಾಕು ಮಾಡದೆ ನೀಡಿರಲ್ನಮಗದುವೆ ಬಹುಮಾನ ||
    ನಾಕು ಮೂರರ ಮಾತ್ರ ಗಣದೊಳ್
    ತಾಕವಿತೆಝರಿಯ೦ಪರಿಸುತಲ್
    ನಾಕು ನಾಕಲೆ ಹತ್ತೆನಲ್ ಸೋಮನಿಗೆ ಬಹುಮಾನ ||

    • ಶ್ರೀಶನಿತ್ತಿಹ ಪ್ರಶ್ನೆಯಿ೦ ಸ೦-
      ತೋಷಗೊಳ್ಳುತಲೊರೆದೆ ನಾ೦ ಗಡ
      ದೋಷ ಗುಣಗಳಲೆರಡಲು೦ ಶ್ರೀಶನದು ಪಾಲಿಹುದು

      🙂

      • ಶ್ರೀಶ, ಪ್ರಾಸಕ್ಕೋಸ್ಕರ… ದೋಷಕ್ಕೂ ಪಾಲುದಾರನನ್ನಾಗಿ ಮಾಡಿದ್ದೇನೆ 😉

      • ದೋಷ ಗುಣಗಳ ಪಾಲುಗೊಂಡ –
        ಶ್ರೀಶರಿಗೆ ಸಾಕಿನ್ನುವೆಮ್ಮಗು
        ತೋಷದಾಬಹುಮಾನ ಸಲ್ಗುಮೆ ಪೇಳಿರೈ ನಿಜದೆ 🙂

        • ಉಲಿಯೆ ಸಹೃದಯಹಾಸ್ಯಮಪ್ಪುದು
          ಗಲಗಲನೆ ನಗೆ ಹೊನಲೆ ಹರಿಪುದು
          ನಲಿವ ನಲ್ಮೆಯ ಸೂಸುವಭಿರಾಮರಿಗದೇನೀವೆ?
          ಕಲಿಕೆಗಾಶ್ರಯ, ಪದ್ಯಪಾನದ
          ಕೆಲಸಗಳ ಮು೦ದಾಳುಮಿಹಗ೦
          ಸಲುಗೆಯಿ೦ದಲಿ ಪದ್ಯಮೊ೦ದಿದೊ ಮುಡಿಪು ನಮನಗಳು

  26. See 18

  27. ಎನ್ನವಧಾನಜೀವಿತದೊಳಿನ್ನೆಗಮಾಂ ಪದಿನಾರು ಪಾಂಗಿನಿಂ
    ಸನ್ನುತಮಪ್ಪವೊಲ್ ವರಸಮಸ್ಯೆಗೆ ಪೂರ್ತಿಯನಿತ್ತುದಿಲ್ಲ; ಸಂ-
    ಪನ್ನ! ಸುಧೀನಿಧಾನ! ಕವಿತಾಧನ! ಛಂದಕೆ ನೋಂತ ಸತ್ಕವಿ-
    ತ್ವಾನ್ನ! ಭವತ್ಕಲಾಕಲನಮೊಪ್ಪುಗುಮುತ್ತಮ! ಸೋಮಶೇಖರಾ!!!

    ಎಲ್ಲೆಲ್ಲಿಯುಮೆಂದೆಂದಿಗ-
    ಮುಲ್ಲಸಿಪುದು ನಿನಗೆ ಛಂದಮೆಂದೊಡೆ ಕುಂದೇಂ?
    ಪಲ್ಲವಿಸಿತಲಾ ನಿನ್ನೊಳ್
    ವಲ್ಲಕಿಯಂ ಪಿಡಿದ ವನಿತೆಯೊರ್ವಳ ಬಂಧಂ!!!

    ಈ ಪರಿಯ ನವಕವನಕುಶಲತೆ-
    ಯೀ ಪರಿಯ ಪರಿಹರಣವಿವಶತೆ-
    ಯೀ ಪರಿಯ ಕಲ್ಪನೆಯ ಶಿಲ್ಪನವೀಪರಿಯ ರಸತೆ|
    ಈ ಪರಿಯ ನಿಶ್ಚಯನಿಬದ್ಧತೆ-
    ಯೀ ಪರಿಯ ಕೃತಿನಿಷ್ಠನಿಯಮತೆ
    ಭಾಪು ಭಾಪೆನುವಂತೆ ಮಾಡದೆ ಪದ್ಯಪಾನಿಗಳಂ?

    • ಗಣೇಶ್ ಸರ್:),

      ಧನ್ಯೋಸ್ಮಿ,

      ಪಿಡಿಯುತೆ ಕ೦ದನ ಕರಮ೦
      ನಡುಗೆಯ ಕಲಿಸುತಲಿತಾಯಿ ಸ೦ತತ ಪೊರೆಯಲ್
      ತಡವರಿಸುವ ಹೆಜ್ಜೆಯನು೦
      ಸಡಗರಮೆನೆ ತಾ೦ ಪೊಗಳ್ದವೊಲೆನಗೆ ಭಾಸ೦

      ಈ ಪರಿಯಲೊಲುಮೆಯೊಳು ಕಾಣುತ-
      ಲೀ ಪರಿಯ ಮನಮುಟ್ಟುವೆನೆ ನೀ-
      ವೀ ಪರಿಯ ಸಾಹಿತ್ಯಬೀಜವ ನೆಡುತ ನೀರೆರೆಯೆ
      ಆ ಪರಿಯ ನುಡಿವೆಣ್ಣಿನುಲಿಗಳ-
      ನಾ ಪರಿಯೊಳಾಶುವಲೆ ಪಾಡಲ-
      ದೀ ಪರಿಯೊಳೊ೦ದೆರಡು ಸಾಲ್ಗಳನೊರೆವುದಕೆ ಸ್ಪೂರ್ತಿ

      ಆ = ಅವಧಾನ
      ಈ = ರಘುವ೦ಶ, ಪದ್ಯಪಾನ ಪಾಠ

Leave a Reply to K.B.S Ramachandra Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)