Sep 172012
 

ತಬ್ಬಲಿಯು ನೀನಾದೆ ಮಗನೆ

ಈ ಚಿತ್ರಕ್ಕೆ ತಮ್ಮ ಆಯ್ಕೆಯ ಛ೦ದಸ್ಸಿನಲ್ಲಿ ಪದ್ಯರಚನೆಯನ್ನು ಮಾಡಿ (ಇದು ಧರಣಿಮ೦ಡಲ ಮಧ್ಯದೊಳಗೆ ಪದ್ಯದ ಚೌಕಟ್ಟಿನಲ್ಲಾದರೂ ಸರಿಯೆ ಅಥವಾ ಚಿತ್ರವನ್ನು ನೋಡಿ ತಮಗನಿಸಿದ ಮತ್ತಿನ್ನಾವ ವಿಷಯವಾದರೂ ಸರಿಯೆ).

  18 Responses to “ಪದ್ಯ ಸಪ್ತಾಹ – ೩೮; ಚಿತ್ರಕ್ಕೆ ಪದ್ಯ”

  1. ಇದೊಂದು ವಿಡಂಬನೆ:-

    ಕಪಿಲೇ! ನಿನ್ನಯ ವತ್ಸನಂ ರಸನೆಯಿಂ ನೀನಿಂತು ವಾತ್ಸಲ್ಯದಿಂ-
    ದುಪಲಾಲಿಪ್ಪುದನಿಂದು ನೀಂ ಲವಣಲೋಭಕ್ಕಾಗಿ ಮಾಳ್ಪೊಂದು ನಿ-
    ಸ್ತ್ರಪಕಾರ್ಯಂಗಡೆನುತ್ತೆ ಸಾರಿದಪರೀ ವಿಜ್ಞಾನಿಗಳ್ ಕೇಳುತೀ
    ಲಪನಂ ನಮ್ಮ ಕವೀಶರೆಲ್ಲ ರಸಮಂ ಬಿಟ್ಟೋಡಿದರಕ್ಕಕ್ಕಟಾ!!

    (ಕಪಿಲೆ = ಕಂದುಬಣ್ಣದ ಗೋವು)

  2. ಪುಲಿಗಾಹಾರವು ತಾನೆನುತ್ತೆ ಕರುವ೦ ಕಾಣಲ್ಕೆ ಬ೦ದಿರ್ಪಳಯ್
    ಪೊಳೆವಾ ಕ೦ದನ ಮುಗ್ಧದೃಷ್ಟಿ ಮನಮ೦ ಹಿ೦ಡಲ್ಕೆ ಕಾರುಣ್ಯದಿ೦
    ಸೆಳೆದಳ್ ಕತ್ತನುನೆಕ್ಕುತಿರ್ದು ದಿಟಮ೦ ಪೇಳ್ದಳ್ ಮಹಾಸತ್ವೆ ತ-
    ಬ್ಬಲಿಯಯ್ ನೀ೦ ತೊಡೆಶೋಕಮ೦ ಗಡಮೆನಲ್ಕಶ್ರುಪ್ರವಾಹ೦ ಧೃವ೦

  3. ಅಲ್ಲೆ ಹಾ! ಅಲ್ಲಲ್ಲೆ ಬಲ
    ಕಲ್ಲಲ್ಲೆ ಸಾಕಿನ್ನೆಡಕೆ ಹಾ!ಯೆಂ
    ದೆಲ್ಲಿ ಬೇಡಿದರೊಡನೆ ನೆಕ್ಕುತ
    ಲಲ್ಲಿ ಹರಿಸಿತು ತುರಿಕೆಯಾ

  4. ಘನಮತ್ತೇಭದ ವನ್ಯಮಾರ್ಗಮದುತಾಂ ವ್ಯಾಘ್ರಪ್ರವೇಶಾಸ್ಪದಂ
    ಬೆನೆ ವತ್ಸಂಬೆದರಿರ್ಪ ದೃಶ್ಯವನು ತಾಯ್ನೋಡುತ್ತ ಸಂತೈಸುತಂ
    ಮನಕಂಧೈರ್ಯವ ಶೇಮುಷೀಬಲವನುಂ ನೀಡಲ್ಕೆವಾತ್ಸಲದಿಂ
    ದಿನಿವಾತಂಕಿವಿಗಾನಿಸುತ್ತ ನಲವಿಂ ಪೇಳ್ದಿಪ್ಪು”ದಾ ಧಾಟಿ”ಯಿಂ

    ಆ ಹಳೆಯಮಟ್ಟಿನಧಾಟಿಯಲ್ಲೇ ಅಂದಿನ ಗೋವಿನಹಾಡು ಮುಂದುವರೆದರೆ? ವತ್ಸನಿಗೆ ಪ್ರೋತ್ಸಾಹದ ಉಪದೇಶದ ಒಂದು ಹಂತ ಹೀಗಿರಬಹುದೇ? ಆಸಕ್ತರು ಮುಂದುವರೆಸಬಹುದು…

    ತನ್ನ ತಾನೇ ನೋಡಿಕೊಳ್ಳುತ
    ಕನ್ನಡಿಯ ಬಿಂಬದಲಿ ಸುಖಿಸುವ
    ನನ್ನಕಂದನು ’ನಾನೆ’ ಎನ್ನುವ
    ಬಿನ್ನಣದ ನರ ಭಾವವು

    ಸ್ವಾರ್ಥವೇ ಪ್ರಾರಂಭದಲ್ಲಿನ
    ವರ್ತನೆಯದು ವಿಕಾಸವಾಗಲು
    ವ್ಯರ್ಥವೇನೆಂಬರಿವು ಮೂಡುತ
    ಅರ್ಥತಿಳಿವುದು ಸತ್ಯದ

    ಆತ್ಮನೆನೆ ನಾನೆಂಬಹಂ ಜೀ
    ವಾತ್ಮಗಿರುವುದು ಸಾಜಮಲ್ತೇ
    ಆತ್ಮಭಾವವ ವಿಸ್ತರಿಸೆ ಪರ
    ಮಾತ್ಮ ದರ್ಶನ ವೆಲ್ಲೆಡೆ

    ಬಿಂಬಿಸಿರ್ಪುದು ಗೋವುಕರು ನಾ
    ನೆಂಬುದರ ಮಮತಾ ವಿಶೇಷವ
    ಕಂಬುದನಿಯಲಿ ಸಾರಿಹೆನು ಧ-
    ರ್ಮಾಂಬುಧಿಯ ನಾನಾರ್ಥವ

    ಧರ್ಮಪಾದಗಳಿರಲು ಸುಸ್ಥಿರ
    ಕರ್ಮಘರ್ಮಗಳೆಲ್ಲ ಸುರಜಲ
    ಮರ್ಮವಿದು ಗೋರೂಪಿನಿಂದಲಿ
    ನಿರ್ಮಲತ್ವವ ತಿಳಿಪೆನು!

    ಇಷ್ಟಸಂಕೇತವಿದು ಧರ್ಮದ
    ಪುಷ್ಟಿಯುಣಿಸುತ ಬೆಳಸಿರಲು ಪರಿ-
    ಪುಷ್ಟರಾಗಿಯು ನೋಡುತಿರ್ಪೆರು
    ದುಷ್ಟರುಪಟಳ ಸಹಿಸುತ

    ಬೇಗೆಯಾರಿಗೊ ನನಗದೇತಕೆ
    ಹೋಗಲೆನ್ನುತ ಸುಮ್ಮನಾಗುತ
    ಬೇಗೆತನಗೇ ಬಂದರೆನ್ನಯ
    ಯೋಗವಿಷ್ಟೇ ಎನ್ನುವ

    ಸಹನೆಯೇ ದೌರ್ಬಲ್ಯವಾದರೆ
    ವಹಿಸುವವರಾರ್ ಧೀರ ಕಾರ್ಯವ
    ಸಹಿಸಿ ಸುಮ್ಮನೆ ಕುಳಿತೆನೇ ನಿ-
    ರ್ವಹಿಸಲಿಲ್ಲವೆ ಧರ್ಮವ

    ಹರಿತವಾಗಿಹ ಕೊಂಬು ರಕ್ಷೆಯ
    ಗೊರಸಬಳಸುವ ನಯಭಯಂಗಳ
    ಮರೆತು ಬರಿಹಾಲನ್ನೆ ಕರೆಯುಲು
    ಸೊರಗಿಹೋಗುವೆ ಖಂಡಿತ

    ಹಿಂದಿನಾ ಹೆಬ್ಭುಲಿಯ ಕಥೆಯನು
    ಚೆಂದದಲಿ ಕಂದನಿಗೆ ಪೇಳುತ
    ಮುಂದೆ ಸಾಗುವ ಮಾರ್ಗ ನೀನೇ”
    ಹೊಂದಿಸಿಕೊ ಮಗು’ ಎಂದಿತು

    (ಕೊನೆಯ ಪದ್ಯದ ಭಾವವನ್ನುಸೂಚಸಿದ ಚಿ:ವಿನಯಾ ಗೆ ನನ್ನ ಕೃತಜ್ಞಾತಾಪೂರ್ವಕ ಶುಭಹಾರೈಕೆಗಳು)

    • ಗೋವಿದೋ ಗೋವಿಂದನೋ ಪೇಳ್
      ಕಾವ ಧರ್ಮದ ಬಗೆಯನೀ ಪರಿ
      ಯೋವಿ ಮಗುವಿಗೆ ತಿಳಿಪುವಂದವ
      ನಾವು ಕಾಂಬೆವು ಗೀತೆಯೊಳ್

      ಮೌಳಿಯವರೆ, ನಿಮ್ಮ ಎಂದಿನ ಸಿಕ್ಸರ್ ಬಾರಿಸಿದ್ದೀರಿ. ಧನ್ಯವಾದಗಳು.

    • ಕಾನನದ ವ್ಯಾಘ್ರನೊಲು ನಮ್ಮನು
      ಮಾನವನು ಸಹ ಶೋಷಿಪನು ಕೇಳ್
      ಮೌನದಿ೦ ದೌರ್ಜನ್ಯ ಸಹಿಸುವ-
      ಧೀನತೆಯ ಬಾಳ್ಮೆಯು ಗಡಾ

      ಜೀವಹರಣವನೊಮ್ಮೆ ಗೈವಾ,
      ನೋವ ಬದುಕಿಡಿ ನಮಗದೀವಾ
      ಈರ್ವರೊಳು ವ್ಯತ್ಯಯವ ಕಾ೦ಬೆನ-
      ದಾವುದನು ದಿಟ ಪೇಳ್ವೆನಯ್

      ನಾರಿಯಭಿಮಾನವನಲಕ್ಷಿಸಿ
      ಹೋರಿಗಳ ಕೂಡಿಸುವ ಸ್ವಾರ್ಥೀ
      ಪೂರಯಿಸೆ ಜೀತಕೆನೆ ಬಳಗವ
      ನೂರ ಮಾಳ್ಪನು ಲಾಭಕೆ

      ಪೊಲದೆ ಮಗ ತಾ ದುಡಿಯೆಸ೦ತತ
      ಮೊಲೆಯ ಹಿ೦ಡುತ ಮಗಳ ದೋಚುವ
      ಪೊಲಸು ತ್ಯಾಜ್ಯಗಳನ್ನು ಬಿಡದೆಲೆ
      ಸುಲಿಗೆ ಗೈವನು ನಮ್ಮನು

      ಪಾಲಿಗಧಿಕಾರಮಿಹ ಕ೦ದಗೆ
      ಧೂಲು ಕಸಕಡ್ಡಿಗಳನುಣಿಸುತ
      ಮೂಲೆಯೊಳು ಕಟ್ಟುವನು ತಾಯಿಯ
      ಲಾಲಿಯಾಟದೆ ವ೦ಚಿಸಿ

      ಮೂಜಗದ ತಾಯಿಯೆನೆ ಪೊಗಳುತ
      ಪೂಜೆಗೈವನು ಹಬ್ಬದೊಳು ತಾ
      ರಾಜನಾಥಿತ್ಯವನು ನೀಡುತ
      ಸೋಜಿಗವನು೦ ಮಾಳ್ಪನು

  5. ತಬ್ಬಿದ ಕಂದನ ಉಬ್ಬಿದ ಕೊರಳೋ |
    ತಬ್ಬಿದ ಅಮ್ಮನ ಹಬ್ಬಿದ ಕರುಳೋ |
    ಇಬ್ಬಗೆ ಭಾವದ ನೋವಿನ ಎಳೆಯೋ |
    ತಬ್ಬಲಿಯ ಮೊರೆಯೊ ತಬ್ಬಲಿಹ ಹೊರೆಯೊ ||

    • ಎರಡನೆಯ ಪಾದದ ‘ಅಮ್ಮನ’ ಎಂಬುದನ್ನು ‘ತಾಯಿಯ’ ಎಂದೂ, ಮೂರನೆಯ ಪಾದದ ‘ಎಳೆಯೋ’ ಎಂಬುದನ್ನು ‘ದೆಳೆಯೋ’ ಎಂದೂ ಮಾಡಿದರೆ, ವಿಸಂಧಿದೋಷ ತಪ್ಪುತ್ತದೆ.

    • ಸ್ವಲ್ಪ ಶ್ರಮವಹಿಸಿ ಇದನ್ನು ದೋಧಕಕ್ಕೆ (ನಾನನ ನಾನನ ನಾನನ ನಾನಾ) ಹೊಂದಿಸಬಹುದು.
      (ಕ್ಷಮಿಸಿ, ಮೊದಲೆರಡು ಪಾದಗಳ ಕೊನೆಯ ಗಣಗಳ ಗ್ರಾಮ್ಯರೂಪವು ಸ್ಫುರಿಸಿತು: ಕೊರಳೋ > ಕೊಳ್ಳೋ. ಕರುಳೋ > ಕಳ್ಳೋ)

      • praSadu Sir,
        “ತಿದ್ದಿ-ನಡೆ”ಸುತ್ತಿರುವುದಕ್ಕೆ ನಾನು ಋಣಿ.
        “ತಿದ್ದಿ-ಪಡೆ”ದದ್ದು :

        ಉಬ್ಬಿದ ತಬ್ಬಿದ ಕುತ್ತಿಗೆ ಕಾಣಾ
        ತಬ್ಬಿದ ಹಬ್ಬಿದ ಮುತ್ತಿಗೆ ಮಾಣಾ |
        ಇಬ್ಬಗೆ ಭಾವವು ನೆಟ್ಟಿದೆ ನೋಡಾ
        ತಬ್ಬಲಿ ಮೌನವು ಮುಟ್ಟಿದೆ ಕೇಳಾ ||

        ಭಾವ ಬದಲಾಯಿತೆ?

        • ‘ಭಾವ’ ಬದಲಾದರೆ ಚಿಂತಿಲ್ಲ, ‘ಅಕ್ಕ’ನೇ ಬದಲಾಗಿಬಿಟ್ಟಿದೆ! ಹಿಂದಿನ ಪದ್ಯದಲ್ಲಿದ್ದ ‘ಅಮ್ಮನ’ ಎಂಬ ಸ್ತ್ರೀವಾಚಕ ಶಬ್ದ ಇಲ್ಲಿ ಲುಪ್ತವಾಗಿದೆ 😉

          • “ಅಕ್ಕ” (ಉಷಕ್ಕ?) ಬದಲಾಗಲು ಕಾರಣ “ತಮ್ಮ” ಸಲಹೆಯೇ!

  6. ಆ ಜೋಡಿಯಲ್ಲಿ ಹಿರಿಯದನ್ನು ಎಲ್ಲರೂ ‘ಹಸು’ ಎಂದೇ ತಿಳಿದಿರುವಂತಿದೆ. ಅದರ ದಿಬ್ಬವನ್ನು (ಕಕುದ) ನೋಡಿದರೆ ತಿಳಿಯುತ್ತದೆ, ಅದು ಹೋರಿ ಎಂದು.

    ಪರಿಯೇನಿದೆಲ್ಲರದನಾ ಪಿರಿದಂ
    ಕರೆದಿರ್ಪರಲ್ತೆ ಹಸುವೆಂದೆನುತಂ|
    ಗಿರಿಯಂದದಾ ಕಕುದದಿಂದದು ಗುಂ
    ಡರಗೂಳಿಯೆಂದು ಚಣದೊಳ್ ತಿಳಿಗುಂ||
    (ಪ್ರಮಿತಾಕ್ಷರ)

  7. ಕಾಯದಿಂದೆನ್ನ ನೀ ಬೇರಾದೊಡೇನಂತೆ
    ಮಾಯವಹುದೇಂ ಸ್ವಂತ ದೇಹದೊಲವು ?
    ಗಾಯವಾಗಲ್ ನಿನ್ನ ಮೈಮನಕ್ಕೊಂದೊಮ್ಮೆ
    ಮಾಯದೆನ್ನಯ ನೋವು ನೀನಲಿಯದೆ

    • ೧) ಎರಡನೆಯ ಸಾಲಿನಲ್ಲಿ ಪ್ರಶ್ನಚಿನ್ಹೆಗೆ ಮುನ್ನ ಸ್ಪೇಸ್ ಇರಬಾರದು.
      ೨) ಕೊನೆಯ ಸಾಲು, ಕೊನೆಯ ಪದ – ನೀ ನಲಿಯದೆ ಎಂದು ಒಡೆಯಬೇಕು.
      ೩) ಇವೆರಡು ವಿನಃ, ಪದ್ಯದ ಬಗೆಗೆ ಎರಡು ಮಾತಿಲ್ಲ.

  8. ಹೋರಿಗರುವನ್ನು ಕೊಂಡೊಯ್ಯಲು ಕಟುಕ ಬಂದಾಗ –

    ಹೇ ಮಾತರ್ವದನಂ ತವೇಂದುಸದೃಶಂ ಶೋಕಾಂಬುದಾಚ್ಛಾದಿತಮ್ |
    ರೂಕ್ಷಂ ಭೀಷಣಮೀಕ್ಷ್ಯ ತಂ ತಿಮಿರವತ್ ಕಿಂ ದೂಯತೇ ತೇ ಮನಃ |
    ಇತ್ಯೂಚಂತಮಿವ ಸ್ವನನ್ತಮಬಲಂ ಮಾತ್ರಾಭಿಲೀಢಂ ಶುಚಾ
    ದೃಷ್ಟ್ವಾ ಬರ್ಬರಸೌನಿಕೋ ವಿಚಲಿತಃ ಸ್ವೀಯಂ ಸುತಂ ಸಂಸ್ಮರನ್ ||

  9. “ತಬ್ಬಲಿಯು ನೀನಾದೆ ಮಗನೆ” ಎಂದು ಅಲ್ಲಿ ಬರೆದಿದ್ದರೂ ಚಿತ್ರದಲ್ಲಿ ನನಗದು ಕಾಣಿಸದೆ, ಕಾಮಧೇನುವು ವಸಿಷ್ಠರ ಆಶ್ರಮಕ್ಕೆ ತೆರಳುತ್ತಿರುವ ತನ್ನ ಕರುವಾದ ನಂದಿನಿಗೆ ಕೊಡುವ ಕಿವಿಮಾತು ಕೇಳಿಸಿತು. ರಘುವಂಶದಲ್ಲಿ ನಂದಿನಿಯ ಬಣ್ಣವನ್ನು ಬಿಳಿಯಲ್ಲದ ಬೇರೆಂದು ಬಣ್ಣಿಸಿದ್ದರೂ ಈ ಒಂದು ಸ್ವಾತಂತ್ರ್ಯವನ್ನು ತೆಗೆದುಕೊಂಡಿದ್ದೇನೆ. ಕನ್ನಡದಲ್ಲಿ ಕವನಿಸುವ ಅಭ್ಯಾಸವನ್ನು ಮಾಡಿಲ್ಲವಾದ್ದರಿಂದ ಸಂಸ್ಕೃತವನ್ನೇ ಆಶ್ರಯಿಸಿದ್ದೇನೆ.

    ब्रह्मर्षेः श्रियमाश्रमं मुनिपदं गन्तुं सुते मा शुचः ।
    मैत्री-मन्थन-सङ्गरे धर धुरं विश्वार्थमृष्यर्थिता ।।
    सौरं राघवमन्वयं शुभकरं कृत्वा नृपं सान्त्वय ।
    रामो धेनुविगोपने पटुतरो गोपालराजो भवेत् ॥

    ಬ್ರಹ್ಮರ್ಷಿಗಳ ಶ್ರೀಯಾದ ಆಶ್ರಮಕ್ಕೆ, ಮುನಿಪದಕ್ಕೆ, ನನ್ನಿಂದ ದೂರ ಹೋಗುತ್ತಿರುವೆಯೆಂದು ಮಗಳೇ! ದುಃಖಿಸದಿರು….
    ಮೈತ್ರಿಯನ್ನು ಮಥಿಸುವ ಯುದ್ಧದಲ್ಲಿ ಹೊರು ನೊಗವ, ವಿಶ್ವಕ್ಕಾಗಿ – ಮುನಿಗಳು ಹೇಳಿದಾಗ! (ವಿಶ್ವ-ಮೈತ್ರೀ-ಯುದ್ಧ – ರಾಜಾ ಕೌಶಿಕ ವಿಶ್ವಾಮಿತ್ರನಾದ ಕಥೆಗೆ ನಂದಿನಿಯಲ್ಲವೇ ನಾಂದಿ ಹಾಡುವುದು?)
    ಸೂರ್ಯವಂಶವನ್ನು ಜಗತ್ತಿಗೆ ಶುಭಕರವಾದ ರಘುವಂಶವನ್ನಾಗಿ ಮಾಡಿ ರಾಜನನ್ನು ಸಂತೈಸು! (ನಂದಿನೀ-ವರ-ಪ್ರದಾನ)
    ರಾಮನು (ಕಲಿಯಲು ವಸಿಷ್ಠರ ಆಶ್ರಮಕ್ಕೆ ಬಂದಾಗ) ಪಶುಪಾಲನೆಯಲ್ಲಿ ಪಟುತರನಾಗಲಿ! ಮುಂದೆ ಗೋಪಾಲರ ರಾಜ (ಅಥವಾ ರಾಜಗೋಪಾಲ)ನಾಗುವ ಹಾಗೆ!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)