Oct 012012
 

ಈ ಕೆಳಗಿನ ಕಥೆಯ ಸ್ಫೂರ್ತಿಯಿಂದ ತಕ್ಕದಾದ ಪದ್ಯಗಳನ್ನು ರಚಿಸಿರಿ. ಬೇಕಿದ್ದರೆ ಕಥೆಯಲ್ಲಿರುವ ೩ – ೪ ಸನ್ನಿವೇಶಗಳಲ್ಲಿ ಯಾವುದಾದರು ಬಿಟ್ಟು, ಯಾವುದನ್ನಾದರೂ ನಿಮ್ಮ ಕಲ್ಪನೆಯಂತೆ ವಿಸ್ತರಿಸಿ  ರಚಿಸಿರಿ.

ಸಂದರ್ಭ

ಯೋಗಾನಂದ ಎಂಬ ರಾಜನಿಗೆ ವರರುಚಿಯೆಂಬ ವಿದ್ಯಾವಂತನೂ, ಪ್ರತಿಭಾವಂತನೂ ಆದ ಮಂತ್ರಿಯಿದ್ದನು. ಯಾವುದೋ ಕಾರಣಕ್ಕೆ,  ಚಾಣಾಕ್ಷನೂ, ದೇಶಪ್ರೇಮಿಯೂ ಆದ ಶಕಟಾಲನೆಂಬ ಇನ್ನೊಬ್ಬ  ಮಂತ್ರಿಯನ್ನೂ ಅವನ ಮನೆಯವರನ್ನೂ ವರರುಚಿಯು ಹಾಳುಬಾವಿಗೆ ದೂಡಿಸಿದ್ದು, ಶಕಟಾಲನು ಮುಯ್ಯಿ ತೀರಿಸಿಕೊಳ್ಳಲು ಜೀವ ಹಿಡಿದುಕೊಂಡಿದ್ದನು.

ಕಥೆ

ಈ ಕಥೆಯನ್ನು ಹೇಳುತ್ತಿರುವವನು “ವರರುಚಿ”

ಕಾಲಕ್ರಮದಲ್ಲಿ ಯೋಗಾನಂದನು ಕಾಮಿಯೂ ವಿಶೃಂಖಲನೂ ಆದನು. ಆದ್ದರಿಂದ ಶಕಟಾಲನ ಸಹಾಯವಿರುವುದು ಒಳ್ಳೆಯದೆಂದು ನಾನು ಅವನನ್ನು ಎತ್ತಿ ತರಿಸಿ ಮತ್ತೆ ಮಂತ್ರಿಯಾಗಿ ಮಾಡಿದೆ. ಅವನು ಕಾಲವನ್ನು ನಿರೀಕ್ಷಿಸುತ್ತಾ ನಮ್ರನಾಗಿ ನಡೆದುಕೊಳ್ಳುತ್ತಿದ್ದನು.

ಒಂದು ದಿನ ಯೋಗಾನಂದನು (ರಾಜನು) ಊರ ಹೊರಗೆ ಸಂಚಾರ ಮಾಡುತ್ತಾ ಗಂಗೆಯಲ್ಲಿ ಐದು ಬೆರಳುಗಳೂ ಕೂಡಿಕೊಂಡಿದ್ದ ಒಂದು ಹಸ್ತ ಮೇಲಕ್ಕೆ ಎದ್ದಿರುವುದನ್ನು ನೋಡಿದನು. ಕೂಡಲೆ ನನ್ನನ್ನು ಕರೆಸಿ ಅದೇನು ಎಂದು ಕೇಳಿದನು. ನಾನು ಅದಕ್ಕೆ  ಪ್ರತಿಯಾಗಿ ಎರಡು ಬೆರಳುಗಳನ್ನು ತೋರಿಸಲು, ಆ ಹಸ್ತವು ಅದೃಶ್ಯವಾಯಿತು. ರಾಜನಿಗೆ ಇನ್ನೂ ಆಶ್ಚರ್ಯವಾಗಿ ಅದರ ಅರ್ಥವನ್ನು ಕೇಳಿದನು. ನಾನು “ಐದು ಜನ ಒಟ್ಟುಗೂಡಿದರೆ ಈ ಜಗತ್ತಿನಲ್ಲಿ ಅಸಾಧ್ಯವಾಗಿರುವುದೂ ಉಂಟೇ? ಎಂದುಆ ಹಸ್ತವು ಸೂಚಿಸಿತು. ನಾನು “ಒಂದೇ ಮನಸ್ಸಿನ ಇಬ್ಬರು ಸೇರಿದರೂ ಸಾಕು. ಯಾವುದೂ ಅಸಾಧ್ಯವಾಗುವುದಿಲ್ಲ” ಎಂದು ಎರಡು ಬೆರಳನ್ನು ತೋರಿಸಿದೆ – ಎಂದೆನು.

ಒಂದುಸಾರಿ ಯೋಗಾನಂದನ ರಾಣಿಯು ಕೆಳಗೆ ಹೋಗುತ್ತಿದ್ದ ಒಬ್ಬ ಬ್ರಾಹ್ಮಣನನ್ನು ನೋಡಿದಲು. ಅವನೂ ಕತ್ತೆತ್ತಿ ನೋಡಿದನು. ಅಷ್ಟು ಮಾತ್ರಕ್ಕೇ ಅವನು ಆ ಬ್ರಾಹ್ಮಣನನ್ನು ಕೊಲ್ಲಿಸಲು ಆಜ್ಞೆ ಮಾಡಿದನು. ಅವನನ್ನು ವಧ್ಯ ಭುಮಿಗೆ ಕರೆದುಕೊಂಡು ಹೋಗುತ್ತಿರುವಾಗ ಅಂಗಡಿಯಲ್ಲಿದ್ದ ಒಂದು ಸತ್ತ ಮೀನು ಅದನ್ನು ನೋಡಿ ನಕ್ಕಿತು. ಅದು ರಾಜನಿಗೆ ತಿಳಿಯಿತು. ಆಗ ವಧೆಯನ್ನು ನಿಲ್ಲಿಸಿ ರಾಜನು ಆ ಸತ್ತ ಮೀನು ನಕ್ಕದ್ದು ಹೇಗೆ, ಏಕೆ ಎಂದು ಕೇಳಿದನು. ಮರುದಿನ ಬೆಳೆಗ್ಗೆ ಹೋಗಿ ನಾನು “ಅಂತಃಪುರದ ತುಂಬ ಗಂಡಸರಿದ್ದಾರೆ; ಅದು ತಿಳಿಯದೆ ರಾಜನು ನಿರಪರಾಧಿಯಾದ ಒಬ್ಬ ಬ್ರಾಹ್ಮಣನನ್ನು ಕೊಲ್ಲಿಸುತ್ತಿದ್ದಾನಲ್ಲ” ಎಂದು ನಕ್ಕಿತು – ಎಂದು ಹೇಳಿದೆ. ಆದ್ದರಿಂದ ಆ ಬ್ರಾಹ್ಮಣನು ಬದುಕಿಕೊಂಡನು.

ಮತ್ತೊಂದು ಸಾರಿ ಒಬ್ಬ ಚಿತ್ರಗಾರನು ಯೋಗಾನಂದನ ಮತ್ತು ಅವನ ಹೆಂಡತಿಯ ಚಿತ್ರವನ್ನು ಬರೆದನು. ಅದು ಸಜೀವದಂತೆ ತೋರುತ್ತಿತ್ತು. ನಾನು ಅದನ್ನು ನೋಡಿ, ಮಿಕ್ಕ ಲಕ್ಷಣಗಳಿಂದ ರಾಣಿಯ ಸೊಂಟದ ಹತ್ತಿರ ಒಂದು ಮ್ಮಚ್ಚೆಯನ್ನು ಊಹಿಸಿ ಬರೆದೆ. ಆಗ ಚಿತ್ರವು ಪೂರ್ಣವಾಯಿತೆಂದು ರಾಜನು “ಇದು ರಹಸ್ಯವಾಗಿರುವ ಸಂಗತಿ; ಇವನಿಗೆ ಹೇಗೆ ಗೊತ್ತಾಯಿತು? ಇವನಿಗೆ ಅಂತಃಪುರದೊಳಗೆ ಪ್ರವೇಶವಿದ್ದಿರಬೇಕು. ಅಂತಃಪುರದೊಳಗ್ಗೆ ಗಂಡಸರಿದ್ದದ್ದನ್ನೂ ಇವನು ಹೀಗೆಯೇ ತಿಳಿದಿರಬೇಕು” ಎಂದು ಭ್ರಾಂತಿಪಟ್ಟು , ನನ್ನ ಮೇಲೆ ಕೋಪಗೊಂಡು, ನನ್ನನ್ನು ಕೊಲ್ಲಿಸುವಂತೆ ಶಕಟಾಲನಿಗೆ ಆಜ್ಞೆ ಮಾಡಿದನು.

ಕಥೆಯ ಕೃಪೆ – ಕಥಾಸರಿತ್ಸಾಗರ ಮೂಲದ ಕನ್ನಡಲ್ಲಿ ಸಂಕೀರ್ಣ-ಸಂಗ್ರಹಗ್ರಂಥವಾದ ಎ.ಅರ್. ಕೃಷ್ಣಶಾಸ್ತ್ರಿಗಳ ಕಥಾಮೃತ

  29 Responses to “ಪದ್ಯಸಪ್ತಾಹ – ೪೦; ಕಥನ-ಕವನ”

  1. ವೃದ್ಧ೦ ವರರುಚಿಯ೦ ಸ್ವಕಥನಮ೦ ಪೇಳೆನೆ ಪ್ರಾರ್ಥಿಸೆ ಮ೦ತ್ರಿಕುವರ೦, ಸ್ಮರಣೆಯ೦ ಗಯ್ಯೆಲ್ಲೆತ್ನಿಸುತೆ ಇ೦ತೆ೦ದ೦…

    ಯೋಗಾನ೦ದಗೆ ರಾಜ್ಯಲಕ್ಷ್ಮಿಯೊಲಿದಾ ಕಾಲ೦ ಮಹಾರಾಜಗ೦
    ಭೋಗಾಸಕ್ತಿಯತೊರ್ದು ನಿಲ್ವುದೆನಿತೆ೦ದಾರು೦ ಪಥ೦ ತೋರದೇ
    ಪೋಗಲ್ ರಾಜ್ಯದೆ ಶತ್ರುಕ್ಷಾಮಭಯಗಳ್ ನಿಲ್ಲಲ್ಕೆ ನಿತ್ಯ೦ಬೆನಲ್
    ಸಾಗಿರ್ತಯ್ ಋತುಗಳ್, ತೊಡ೦ಕ ಶಕಟಾಲ೦ ನೀಗಿದ೦ ಚ೦ದದೆ || 1 ||

    ಶಕಟಾಲ೦ ಬಹುವಿದ್ಯೆಯ-
    ಮಕಳ೦ಕದ ಚರಿತಮ೦ ಪಡೆದವನುದಾರೀ
    ಸುಖಮ೦ ತ್ಯಜಿಸುತೆ ತಾ೦ ರಾ-
    ಜ್ಯಕೆ ದುಡಿಯಲ್ಕಾ ಜನರ್ಗೆ ಪ್ರಿಯಮಾದನಲಾ || 2 ||

    ತ೦ಡ೦ ಕಟ್ಟುತ ಜನರೊಳ್
    ಖ೦ಡಿಸುತರಮನೆಯರಾಜಕತೆಯ೦ ದುಡಿದ೦
    ತು೦ಡರಿಸುತಲಸುಹೃತರ
    ಪ೦ಡಿತ ಪಡೆದನಮಮಾತ್ಯಪದವಿಯನಾಗಳ್ || 3 ||

    ಇ೦ತಿರಲ್ ಗುರುಕುಲದೊಳ್ಗಾ೦…

    ಗುರುಕುಲಬಿಜ್ಜೆಯನಾಗಳೆ
    ಕರಗತಮ೦ ಗೈಯಲಿಕ್ಕೆ ಗುರುಗಳ ಬಲದೊಳ್
    ಅರಮನೆಯೊಳ್ಗುನ್ನತಿಯ೦
    ಪುರದೊಳ್ ಮ೦ತ್ರಿಯಪದ೦ಗಳ೦ ನಾ೦ ಪಡೆದೆ೦ || 4 ||

    ರಾಜ್ಯದೆ ಸುಖಶಾ೦ತಿಯನಿ-
    ರ್ವ್ಯಾಜ್ಯದೆ ಜೀವನಗಳ೦ ನಡೆಸಲಾ ಜನರ್ಗಳ್
    ಪೂಜ್ಯ೦ಬೆನಗಾದನಲಾ-
    ಮಾತ್ಯ೦ ಶಕಟಾಲ ರಾಜಗು೦ ಪೂಜ್ಯನಲಾ || 5 ||

    ಇ೦ತಾಗೆ ರಾಜ್ಯ೦ ವಿವಿಧ೦ ಮೆರ೦ಗುಗಳ್
    ಪಾ೦ಥೋದಯ೦ ಕಾಣಲಮಾತ್ಯನಿ೦ದಲೇ
    ಚಿ೦ತಾವೃತರ್ಗಳ್ ಸಚಿವರ್ಗಳಾದರಯ್
    ಕು೦ತಾಮಿಷರ್ಗಳ್ ಪೊಡೆಮಾಡೆ ಸ೦ಚನ೦ || 6 ||

    contd…

    • ಒಳ್ಳೆಯ ಪ್ರಾಬಂಧಿಕಶೈಲಿಯಲ್ಲಿ ಮೊದಲಾಗಿದೆ. ವಿಜಯೋsಸ್ತು…ಚಂಪೂಕಾವ್ಯದ ಹಾಗೆ ಬರೆಯುವ ಆಲೋಚನೆಯಿದ್ದಂತಿದೆ:-) ” ಅಂತಾದೊಡಪ್ಪುದಪ್ಪುದು, ನಲಮೇರ್ದಪುದದು, ಕಳೆಗೊಂಡು ಬಿಚ್ಚಳಿಸದಿರ್ಪುದೆ ಸೋಮನ ಕವನಂ?”
      ಆದರೆ ಹಳಗನ್ನಡವ್ಯಾಕರಣದಲ್ಲಿ ಸ್ವಲ್ಪ ಸವರಣೆ ಬೇಕಾಗಿದೆ. ಛಂದೋಗತಿಯ ಹದ ಮಾತ್ರ ತುಂಬ ಚೆಲುವಾಗಿದೆ; ಪಾಕ ಚೆನ್ನಾಗಿ ಮೈಗೂಡಿದೆ. ಒಂದೆರಡು ಕಡೆ ಪ್ರಾಸದ ಹಳಿತಪ್ಪಿದೆ:-)

      • ಧನ್ಯವಾದಗಳು ಗಣೇಶ್ ಸರ್,
        ಹೌದು ಸರ್, ಚ೦ಪೂಕಾವ್ಯದ ರೀತಿ ಬರೆಯೋಣವೆ೦ದುಕೊ೦ಡೆ. ಹಳಗನ್ನಢ ಮತ್ತು ಪ್ರಾಸದ ಸವರಣೆಯ ಬಗ್ಗೆ ನಿಮ್ಮೊಡನೆ ಮಾತಾಡುತ್ತೇನೆ.

    • ಅತ್ತ ಶಕಟಾಲ೦ ಅ೦ತಃಪುರದೊಳ್ ಭದ್ರತೆಯನ೦ ಪರಕಿಸುತ್ತೆ ಸೈನ್ಯದೊಳ್ಗಿರ್ಪ ವಿಭಾಗ೦ಗಳನು೦ ಕಾಣುತಲಶ್ವ೦ಗಳಿರ್ಪ ಲಾಯಮ೦ ಪೊಕ್ಕಿದ೦.

      ಸೈನ್ಯ೦ ಪರಕಿಸುವೆನುಪಾ
      ಕಾರ್ಯ೦ ಪೊತ್ತಿರಲಮಾತ್ಯ ತಾ೦ ಲಾಯದೊಳಾ
      ಕ್ರೌರ್ಯ೦ ತೋರುತಲೆಸಗಿಹ
      ಕೃತ್ಯ೦ ಕಾಣುತಲಿಲಾಯದೊಡೆಯ೦ ಮುಳಿದ೦ | 7 |

      ತುರ೦ಗಗಳ೦ ಸ್ಥಿತಿಯ೦ ಕ೦ಡು ಮರಗುತೆ ಲಾಯದೊಡೆಯಗ೦ ಅಮಾತ್ಯನೆಸೆಗಿರ್ದಪಮಾನ೦ ಕಾಣುತೆ ದುಷ್ಟಸಚಿವರ್ಗಳ್ ಲಾಯದೊಡೆಯ೦ ಬೆರಸು ತ೦ತ್ರ೦ಗೈದರ್

      ಅಪಹರಣ೦ಗೈದವರ್ಗಳ-
      ಧಿಪನಾ ನಲ್ಮೆಯತುರ೦ಗಮ೦ ಗಡ ವಧಿಸಲ್
      ಕಪಟತ್ವ೦ ಶಕಟಾಲ೦
      ಕುಪಿತನದಿರ್ದುದದರಿ೦ದೆ ಗೈದಿಹನೆ೦ದರ್ | 8 |

      ಅಕಟಾ ಖಳರ್ ಸಚಿವರಾದೊರೆಗ೦
      ಶಕಟಾಲ ಕೃತ್ಯಮನೆ ಗಯ್ದಿಹನೆ೦-
      ದಕಳ೦ಕನಿರ್ಪನ ಚರಿತ್ರದೆ ತಾ೦
      ಕೃಕಲಾಸೆಯಪ್ಪಿಹನದೆ೦ದುಲಿದರ್ | 9 |

      ಕೃಕಲಾಸೆ – chameleon

      ಯೋಗಾನ೦ದಗೆ ತುರಗವಿ-
      ಯೋಗ೦ ಸಹಿಪುದದಸಾಧ್ಯಮಾಗಲಮಾತ್ಯ೦
      ಹಾ! ಗೈಯದಿರ್ದು ತಾ೦ ದು-
      ರ್ಯೋಗವ ಪೊತ್ತ೦ ತೃಷಾನಲಾ೦ತ್ಯದ ದ೦ಡ೦ | 10 |

      ಶಕಟಾಲ೦ ಧಿಕ್ಕರಿಪಾ ಜನರ್ಗಳ್ ಬಗೆದಿರ್ಪ ಅನೃತದಾ ದ೦ಡನೆಯಿ೦ ರಕ್ಷಿಪುದಕೊ೦ದೇ ಮಾರ್ಗಮೆ೦ದಾಲೋಚಿಸುತ್ತೆ ಆ೦ ರಾಜಗ೦ ಇ೦ತೆನಲ್

      ಮರಣಕೆ ಮಿಗಿಲಿಹುದೆನಿಪಾ
      ಸೆರೆಮನೆಯೊಳ್ಗಾ ಹಿತೈಷಿಗಳನು೦ ಬೆರಸಲ್
      ಪರಿವಾರ೦ಗಳಿನೆದುರೇ
      ತೊರೆವುದು ಪ್ರಾಣಮನಮಾತ್ಯಗ೦ ಗಡ ಸಲ್ಗು೦

      ಯೋಗಾನ೦ದ೦ ಮೆರ್ಚುತಲಹುದೆನಲ್, ಶಕಟಾಲನ೦ ‘ಪಾಳ್ಬಾವಿ’ ಎ೦ಬ ಕಾರಾಗೃಹದೆ ಪರಿವಾರದೊಡ೦ ಭಟರ್ ದೂಡಿದರ್. ಶಕಟಾಲನ೦ ಆ೦ ಬದುಕಿಸಿರ್ದರು೦ ಅವ೦ ತಿಳಿಯದೆ ಪೋದ೦, ಸರ್ವಾನರ್ಥ೦ ಆ೦ ಗೈದೆನೆದು೦ ಬಗೆದ೦
      contd…

    • ಅತಿಕ್ಷುಬ್ಧನಾದ೦ ಸೆರೆಯೊಳ್ಗಮಾತ್ಯ ತಾ೦
      ಪ್ರತಿಘಾತಿಸಲ್ಕೇ ಶಕಟಾಲತಾನಿರಲ್
      ಹೃತಕಾಮಚತಿತ್ತಾವೃತನಾದ ಗೇಹಿಯೊಲ್
      ವ್ಯತಿರಿಕ್ತ ಭಾವ೦ ದೊರೆಯಿತ್ತ ಪೊ೦ದಿದ೦ | 12 |

      ಇರ್ಪುದಿದಲಾ ಸಮಯಮೆನು-
      ತಪ್ಪುದು ಶಕಟಾಲನ೦ ಬಿಡುಗಡೆಯು ಸುಲಭ೦
      ತಪ್ಪುತಿಹ ರಾಜಮತಿಯ-
      ನ್ನೊಪ್ಪಿಸುತೊಲಿಸಲ್ಕಮಾತ್ಯಗೊಬ್ಬಗೆ ಶಕ್ಯ೦ | 13 |

      ಸೆರೆಮನೆಯಿ೦ ಪೊಡಮಟ್ಟವ-
      ನರಮನೆಯೊಳ್ಗ೦ ಪ್ರವೇಶಮ೦ ಗೈಯುತಲೇ
      ಮರಳುತ ಪಡೆದ೦ ತಕ್ಕುದೆ
      ಪುರದಾಮಾತ್ಯನೆನಿಪಾ ವಿಶೇಷಸ್ಥಾನ೦ | 14 |

      ಮನದೊಳ್ ದ್ವೇಶವನಾ೦ ಗೈ-
      ದೆನೆನುತೆ ಬಗೆದ೦ ಪೊರಕ್ಕೆ ಸ್ನೇಹದೆ ಕ೦ಡ೦
      ದಿನಗಳ್ ಕಳೆಯುತೆ ಪೋದ೦-
      ತಿನಿತಾದರುಮೀ ಸಮಸ್ಯೆ ಗಳಿಯದೆ ಪೊಯ್ತಯ್ | 15 |

      ಕಳೆಯಲ್ಕಾಲವದೀಪರಿ-
      ಯೊಳು ರಾಣಿಯಕ೦ಡನೆ೦ದದೊರ್ವನನಧಿಪ೦
      ಹಳಿಯುತೆ ಮರಣ೦ ವಿಧಿಸಲ್
      ಗಳಿದಾ ನ್ಯಾಯವ್ಯವಸ್ಥೆಯಿ೦ ಮರುಗಿದೆ ನಾ೦ | 16 |

    • ಸವಿಯುತಲಿಹರಯ್ ನಗುತಾ
      ಲವಲೇಶಕುಕೀಳದಿರ್ಪುದಧಿಪನತಿಳಿವೆ೦-
      ದವಿವೇಕದರಾಜನಿಗಾ೦
      ಸುವಿವೇಕವನ೦ ಮರಳ್ದು ಪೇಳ್ದರು ತಿಳಿಯ೦ | 17 |

      ಕಡೆಗೊ೦ದುಪಾಯಮ೦ನಾ೦
      ಪೊಡೆಮಡುವುದುಮಿಗಿಲದೆ೦ದು ರಾಜಗೆಪೇಳ್ದೆ೦
      ನಡೆವಾಗವೀಥಿಯೊಳಗ೦
      ನುಡಿಯ೦ ಕೇಳಿದೆನು ಸತ್ತ ಮೀನಿನ ಬಾಯೊಳ್ | 18 |

      ಆ ಸತ್ತಮೀನಿ೦ತೆದಿತಯ್:
      ಏನೈ ರಾಜನೆ ಮೃತ್ಯುದ೦ಡನೆಯನ೦ ಕೈಗೊಳ್ಳಲೇ೦ ಕಾರಣ೦?
      ನಾನಾ ಆಳ್ಗಳುಮಿಲ್ಲವೇನರಸಿಯಾ ಅ೦ತಃಪುರ೦ತರ್ಗತರ್
      ನೀನಾ ಆಳ್ಗಳಲೆಷ್ಟು ಗ೦ಡಸರಿಹರ್ ಪ್ರತ್ಯಾವಲೋಕಾಕ್ಷಿಯೊ-
      ಳ್ಗೇನಯ್ ಕ೦ಡಿಹೆ? ಪೋಗೆನುತ್ತೆ ಬಲೆಯೊಳ್ ಸತ್ತಿರ್ಪ ಮೀನೆ೦ದಿತಯ್ | 19 |

      • this statement comes between 16 and 17th padyas
        ಜನರಧಿಪನ೦ ಕ೦ಡು ಆಡಿಕೊಳ್ಳುತ್ತಾ ನಗುತಲಿರ್ದುದ೦ ಕ೦ಡುನಾ೦

  2. ನಾಂದೀ

    ದೇವಾ, ದ್ವಿತೀಯ ವಿಘ್ನವ
    ನೀ ವಾರಿಸುತೆ ವರ ಮೂರನೆಯದಿತ್ತೆಯಿದಂ|
    ಮೇವಿಗೆ ತತ್ವಾರವಿರದೊ
    ಲಾವರಿಸೆನ್ನಮತಿಯಂ ಸಲಹುಗೆಂದೆಂದುಂ||

    ಮಾತ್ರವಿದಲ್ಲವು ಮೂರನೆ
    ಯಾತ್ರೆಯಿಹವು ಮೂರು ತಳ್ತಿರದೆಳೆಗಳೆಂತೋ|
    ಸೂತ್ರವದು ಕಾಂಬವೊಲು ನೀ
    ನೇತ್ರವ ನೀಡಲವನೆಲ್ಲವನು ಪೋಣಿಸುವೆಂ||

    ಮೊದಲೊಳು ಮಾತ್ರಾಛಂದವು
    ತದನಂತರವಾಯ್ತು ಚಂದದಂಶವಿದೀಗಳ್|
    ಮೃದುಮತ್ತಕೋಕಿಲವದು ಬಿ
    ನದ ನೀಡಲಿ ಸಹೃದಯರ್ಗಿದಕ್ಕರವೃತ್ತಂ||

    • ಒಳಿತಾದುದು ಸಾಹಸಮಿ-
      ನ್ನೆಳಗರುವಿನ ನೆಗೆತದಂತೆ ಸಾಗುಗೆ ಕಬ್ಬಂ|
      ತಿಳಿತನಮಿನಿಸಳಿದುದಲಾ
      ತೊಳಗುವ ಕಂದದ ಮನೋಜ್ಞಗತಿಯೊಳ್; ಸವರಯ್!!!

      ಮಲ್ಲಿಕೋತ್ತರಮಾಲಿಕಾಮೃದುಸೌರಭಂ ಮಧುಮಾದಕೋ-
      ತ್ಫುಲ್ಲಭಾವವಿಲಾಸಮಂ ದರಹಾಸಮಂ ರಸಲಾಸಮಂ|
      ವಲ್ಲಕೀಗುಣಗುಂಜನಪ್ರಣಯಾರ್ದ್ರೆ ವಾಣಿಯೊಳಾವಗಂ
      ಮೆಲ್ಲಮೆಲ್ಲನೆ ತಲ್ಲಯತ್ವಮನೀವ ವೊಲ್ ಕತೆ ಸಾಗಿಸಿಮ್!!!

  3. ಕೃತಜ್ಞ. ಸವರಿದ್ದೇನೆ:

    ದೇವಾ, ದ್ವಿತೀಯ ವಿಘ್ನವ
    ನೀ ವಾರಿಸುತಲಿದ ಮೂರನೆಯದಿತ್ತಿಹೆಯೈ|
    ಮೇವಿಗೆ ತತ್ವಾರವಿರದೊ
    ಲಾವರಿಸೆನ್ನಮತಿಯಂ ಸಲಹುಗೆಂದೆಂದುಂ||

    ಮಾತ್ರವಿದಲ್ಲವು ಮೂರನೆ
    ಯಾತ್ರೆಯು ಮೂರಿಹವು ತಳ್ತಿರದೆಳೆಗಳಿದರೊಳ್|
    ಸೂತ್ರವು ಕಾಂಬೊಲೆನಗೆ ನೀ
    ನೇತ್ರವ ನೀಡಲವನೆಲ್ಲವಂ ಪೋಣಿಸುವೆಂ||

    ಮೊದಲೊಳ್ ಮಾತ್ರಾಛಂದವು (ಕಥನಕವನ1)
    ತದನಂತರಮಾಯ್ತು ಚಂದದಂಶವಿದೀಗಳ್| (ಕಥನಕವನ2)
    ಮೃದುಮತ್ತಕೋಕಿಲವದು ಬಿ (ಕಥನಕವನ3)
    ನದ ನೀಡಲಿ ವೃತ್ತಮಕ್ಕರಂ ಸಹೃದರ್ಗಂ||

  4. ಮನುಜರೊಳ್ ವೆಸನಮಾವಕಾಲಕುಂ
    ಕೊನೆಯೆಯಿಲ್ಲದವೊಲಿರ್ದೊಡೇಂ ಗಡಾ|
    ದನುಜರುಂ ದಿವಿಜರುಂ ಬಳಲ್ವರೈ
    ದನವು ಮಾತ್ರಮೆ ನಿರಾಳಮಾಗಿರಲ್||

    ಅರಸನೇಂ ಕೆಲಸದಾಳದಾತನೇಂ
    ಭರಿಸಬೇಕಿಹವ ಸೊಲ್ಲದೇರಿಸೇಂ|
    ಗುರಿಯನಿಟ್ಟು ನಭಕೇರಬೇಕು ಮೇಣ್
    ಗರಿಯ ಕುಯ್ಯೆ ನೆಲಕಚ್ಚಬೇಕು ಕಾಣ್||

  5. ಕೇಳು ಮನುಜನೆ ಕಥೆಯ ಭ್ರಾಂತಿ ತಂದ ವ್ಯಥೆಯ|
    ಹೇಳಹೊರಟಿಹ ಯೋಗಾನಂದರಾಜನ ವಿಷಯ ||
    ಹೆಸರು ಯೋಗಾನಂದನಾದರವ ಭೋಗಾನಂದ |
    ಉಸಿರುಸಿರಿನಿಂದನಾಗಿದ್ದನವ ಕಾಮಾಂಧ ||
    ಅತುಲ ಪ್ರತಿಭೆಯ ಶಕಟಾಲ ವರರುಚಿಯೆಂಬ |
    ಚತುರರೀರ್ವರು ಮಂತ್ರಿವರ್ಯರನಿವನಂಬ ||
    ಸ್ವೈರ ವೃತ್ತಿಯ ರಾಜ ಸೌಮ್ಯ ರೀತಿಯ ರಾಣಿ |
    ವೈರ ಮರೆತಿಹ ಮಂತ್ರಿ ಮನದ ಕಥೆಯಿದು ಕಾಣಿ ||

    ಒಮ್ಮೆ ಶಕಟಾಲನರಾಜ ರಾಣಿ ವಾಸದಿ ನೋಡೆ |
    ಸುಮ್ಮಗೆ ಸಂಶಯಿಸವಗೆ ವಧೆಯ ಶಿಕ್ಷೆಯ ನೀಡೆ ||
    ಅದ ಕಂಡು ಸತ್ತ ಮೀನು ನಕ್ಕಿದೇಕೆನೆ ಕೇಳೆ |
    ಅರಮನೆಯ ತುಂಬೆಲ್ಲ ಪರಪುರುಷರಿರುತಿರೆ ||
    ಅವಗೊಬ್ಬಗೇಕೆ ಶಿಕ್ಷೆಯೆನೆ ವರರುಚಿಯುಪೇಳೆ |
    ಅನುಮಾನ ಕಳೆದರಸ ಶಕಟಾಲನ ಕ್ಷಮಿಸೆ ||

    ಬಿಡಿಸಿರಲು ಕಲೆಗಾರ ರಾಣಿ ಚಿತ್ರವನೊಮ್ಮೆ |
    ಇಡಿಸಿರಲು ವರರುಚಿಯು ಕಪ್ಪು ಚುಕ್ಕೆಯ ಸನ್ನೆ ||
    ಸಂಶಯಿಸೆ ರಾಜನದ ರಾಣಿ ಮಚ್ಚೆಯದೆಂದು
    ಸಂತಯಿಸೆ ಶಕಟಾಲನದು ಗಾಜಕಟ್ಟೆoದು ||
    ಚಿತ್ರ ಪಟಕವನಿಟ್ಟದ್ದು ದೃಷ್ಟಿ ಬೊಟ್ಟೆoದು |
    ಮಿತ್ರ ಪಣಕಿಟ್ಟಿದ್ದ ನಿಜ ತನಗೆಗೊತ್ತೆಂದು ||

    ರಾಜನರಿತನು ಹೀಗೆ ಭರವಸೆಯ ಭಾವ |
    ಚತುರ ಮಂತ್ರಿಗಳುತಿದ್ದಿರಲವನ ಸ್ವಭಾವ ||
    ಬಿತ್ತ ಭ್ರಾಂತಿಯ ಬೀಜ ಕಿತ್ತೆಸೆದನು ರಾಜ |
    ಸತ್ತ ಶಾಂತಿಯನಾಗ ಮತ್ತೆ ಬೆಸೆದನು ಸಾಜ ||
    ಸಮಮನದ ಜೊತೆಯಿರಲು ನೋಡದುವೆ ಸೌಭಾಗ್ಯ |
    ಸರಿಜನದ ಕಥೆಯಿದುವೆ ಬೇಕಿದೆಯೇ ಸಂಭಾಷ್ಯ ||

    ಅಂದು ಗಂಗೆಯಲಿ ರಾಜ ಕಂಡ ತೆರೆದ ಹಸ್ತ |
    ಅದುಮಾಯವಾಗಿರಲು ಕಂಡನಚ್ಚರಿ ಚಿತ್ತ ||
    ಕೇಳಿದನು ಭಯಗೊಂಡು ಕಾರಣವದೇನೆಂದು |
    ತೋರಿರಲು ಮಂತ್ರಿಗಳು ಬೆರಳೆರಡದೇಕೆಂದು ||
    ಐದು ಬೆರಳಲಿ ಹಿಡಿದು ಬಂದ ಬಿಗಿಯ ಮುಷ್ಟಿ |
    ಎರಡು ಕರುಳದು ಮಿಡಿದು ಕಂಡ ಜೀವಸೃಷ್ಟಿ ||
    ಭಯವ ತೊರೆಯೆ ವಿಭುಗದುವೆ ಜಗದ ಸಂದೇಶ |
    ಅಭಯ ತೋರಿದ ವಿಧಿಗದುವೆ ಜಯದ ಸಂಕೇತ ||

  6. ಮೆರೆದನೈ ಮೆರದು ಕಾಲವಾದನೈ
    ಅರಸ ತಾ ‘ಸುಧನ-ನಂದ’ ಮಾಗಧನ್|
    ತರುಣದೊಳ್ ಪಡೆದು ‘ನಂದ-ಯೋಗ’ನಂ
    ಹಿರಿಯಳಾ ಸತಿಯಳಿಂದ ಪುತ್ರನಂ||3

    (ನತದೃಷ್ಟನಹನಿವನ್ ಭೂಪ ‘ಯೋಗಾನಂದ’
    ಪತಿಯಿದ್ದೊಡೇನಿಡಿಯ ಮಗಧಕಂ ತಾನ್|
    ನುತಿಗೈಯಲಾಗದನ್ ಮತ್ತಕೋಕಿಲದೊಳಂ
    ಗತಿಯೆಂತು ಕಾಣಿಪೆನ್ -ಹಾದಿರಂಪ||
    ಇದು ಎರಡನೆಯ ಬಾರಿ ಆಗುತ್ತಿರುವುದು – ಈ ವೃತ್ತದಲ್ಲಿ ‘ಯೋಗಾನಂದ’ ಎಂದು ಬಳಸಲಾಗದು. ಹಾಗಾಗಿ ‘ನಂದಯೋಗ’ ಎಂದು ಬಳಸಿದ್ದೇನೆ. ಒಮ್ಮೆ ಮಾತ್ರ; ಇನ್ನುಮುಂದೆ ರಾಜ, ಅರಸ, ಭೂಪ ಎಂದಷ್ಟೇ ಬಳಸಬೇಕು. ಏನು ಮಾಡೋಣ, ಮತ್ತಕೋಕಿಲದಲ್ಲಿ ಪಾಡಿಸಿಕೊಳ್ಳಲು ಅವನಿಗೆ ಯೋಗವಿಲ್ಲ)

    ಮಗುವೊಳೇ ಪಿತನ ನೀಗಿಕೊಂಡನೇಂ
    ನಗೆಮೊಗಂ ವಿರಳ ತಾಯೊಳಾದುದೋ|
    ಸಿಗದೆ ತಂದೆಯ ಸುಮಾರ್ಗದರ್ಶನಂ
    ನೊಗಮದೆಂತೆಳೆವ ರಾಜ್ಯಭಾರದಂ||4

    ಎಳೆಯೊಳೇ ದೊರೆತ ಮಾಧಿಕಾರದಿಂ
    ಸೆಳೆದವೋ ವಿಷಯವೆಲ್ಲವಾತನಂ|
    ಕಳೆವನೋ ಸಮಯವೆಲ್ಲ ವೆರ್ತದಿಂ
    ಬೆಳೆಸೆ ರಾಜ್ಯವನಮಾತ್ಯರಾದರೈ||5

    ಇರುವರಿದ್ದರವನಿಂಗೆ ಬೋಧಿಸಲ್
    ಅರಿಯಲಿರ್ದೊಡವನಿಂಗದಾಸ್ಥೆ ತಾ|
    ಕಿರಿಯನಾ ವರರುಚಿ ಸ್ತುತ ದ್ಯುತನ್
    ಹಿರಿಯನಂತೆ ಶಕಟಾಲನೆಂಬುವನ್||6

    ವಿಹರಿಸುತ್ತಿರಲದೊಮ್ಮೆ ಸಂಜೆಯೊಳ್
    ಪಹರೆಯೊಳ್ ಕಿರಿಯ ಮಂತ್ರಿ ತಾನಿರಲ್|
    ನಿಹಿತದೊಳ್ ಹರಿಯುತಿರ್ದ ಗಂಗೆಯೊಳ್
    ಸಹಿತದೈದುಬೆರಳುಳ್ಳ ಕೈಯನುಂ||7
    …ಸಶೇಷ

  7. ನಿರುಕಿಸಲ್ ಪಡೆಯ ನಿಲ್ಲಿಸುತ್ತೆ ತಾ
    ನರಸ ತೋರುತದ ಮಂತ್ರಿವರ್ಯಗಂ|
    ಅರಿಯೆನೇನದರ ಗೂಢದರ್ಥದಂ
    ಪರಿಯ ಪೇಳೆನುತಲೆಂದನಂತೆಯೆ||8

    ಅಳಿದ ದೇಹಗಳ ಪೊತ್ತಗಂಗೆಯೊಳ್
    ಮುಳುಗಿಯೇಳುತಿಹ ದೇಹದಂಗಗಳ್|
    ಬಳಸಿಕೊಂಡು ಸರಿವಾಗ ತೋರುಗುಂ
    ತಿಳಿವಿದಿಲ್ಲದಿರೆ ಮಾತ್ರ ಭೀತಿಯೈ||9

    ಅರಸನಜ್ಞತೆಯ ಬಲ್ಲ ಮಂತ್ರಿಯು
    ತ್ತರದರೂಪದೊಳು ಕೈಯನಾಡಿಸು
    ತ್ತೆರಡವಂಗುಲಿಯ ತೋರಲಾ ಶವಂ
    ಕರವು ಕಾಣದೊಲು ಮಾಯವಾದುದೋ||10

    • Corrigendum:
      ಪರಿಯ ಪೇಳೆನುತಲೆಂದು ಕೇಳಿರಲ್||8
      ———–

      Ignore earlier verse No.10. Here is a substitute:
      ಅರಸನಜ್ಞತೆಯ ಬಲ್ಲ ಮಂತ್ರಿಯು
      ತ್ತರವ ಕಾಣದೆಲೆ ಕೈಯನೆತ್ತಿದನ್|
      ಸ್ಫುರಿಸೊ ದೇವನಿವಗೀಯುವುತ್ತರಂ
      ಹರಿಸಲಜ್ಞತೆಯದಾಗದಿರ್ದೊಡಂ||10

      ಅನಿತರೊಳ್ ಮರೆಯದಾಗಲಾ ಕರಂ
      ಬಿನದವೇನಿದೆನುತೆಂದು ಭೂಪ ತಾನ್|

      ಅಸಹಾಯದಿನಾಗಸದೆಡೆಗೆತ್ತಿದನ್ ಕರವ ವರರುಚಿಯೆಂದರಿತನೇ ಯೋಗಾನಂದನ್? ಕಂಡವವಂಗಾ ಕರದೊಳೆರಡು ಬೆರಳ್ಗಳ್ ಮಾತ್ರಂ. ನದಿಯ ಕರದೈದು ಬೆರಳ್ಗೆ ನೆಲದ ಕರದೆರಡು ಬೆರಳ್ಗಳ್ ಉತ್ತರಮೆ? ಸಮಮೆ? ಎಂತು? ಏನು?

      ಖನಿಯು ನೀವಿಹಿರಿ ಸಂಜ್ಞೆಯೆಲ್ಲದರ್
      ಹನಿಯನೊಂದೆನಗೆ ನೀಡಿರೆಂದಿರಲ್||11

  8. ವಿನೋದದಿಂದ ಕೆಲವೊಂದು ಪದ್ಯಪ್ರತಿಕ್ರಿಯೆಗಳು:-)

    ಚಂಪೂಕಾವ್ಯದ ಪಂಥಮೊಳ್ಳಿತೆನುತುಂ ಕಯ್ಕೊಂಡು ಸರ್ವಾತ್ಮನಾ
    ಝಂಪಂಗೆಯ್ದೊಡೆ ಗದ್ಯಮಾರ್ಗಕಧಿಕಂ ಹಾ! ಪದ್ಯಪಾನಂ ಕರಂ|
    ತಂಪಂ ನೀಗುತಲಂಪು ಬೀತು ತೊರೆದಿಂಪಂ ಗದ್ಯಪಾನಂ ಗಡೆಂ-
    ದುಂ ಪೊಣ್ಮಲ್ಕೆ ಸುಶೋಭೆಯೇಂ? ಗಮನಿಸಿಂ ಸೋಮ-ಪ್ರಸಾದಾಖ್ಯರೇ!:-) 🙂

    ಉಷಾ-ಉಮೇಶವಾಣಿಗೇಂ ವಿಶೇಷಮಪ್ಪ ಸಂಭ್ರಮಂ!!
    ಮೃಷಾರ್ಥಮೆಂದು ಛಂದಮಂ ನಿಷೂದಿಪೊಂದು ವಿಭ್ರಮಂ!!!

    ಅಕ್ಕಟ! ಪಾಠಂಗಳೆಡೆಗೆ
    ಮಿಕ್ಕಿರೆ ನೀಂ ಸಮಯಮೊರ್ಮೆ ನೋಳ್ಪುದು ದಯೆಯಿಂ|
    ದಕ್ಕದೆ ಪೋದಪುದೀ ಪರಿ
    ಕುಕ್ಕಿರೆ ಸಾಲ್ಗೊಂಡ ನುಡಿಗಳಂ ಮೊರೆ ಕೇಳಿಂ!!! 🙂 🙂

    • ಒರೆವುದು ಕಥನ೦ಗಳನ೦
      ವರ೦ಬೆನಿಪ ಪದ್ಯದಚ್ಚುಕಟ್ಟಲೆ ಕಷ್ಟ೦
      ಪರಿಹಾರವರಸುತಿರಲೀ
      ಕಿರಿದೊ೦ದುಪಹೃತಿ ಸಿಗಲ್ಕೆ ಬಿಟ್ಟೆವೆ ನಾವ್ಗಳ್ 😉

      ಆದರೆ… ಸರಿಯಾಗಿ ಹಿಡಿದುಬಿಟ್ಟಿರಿ ಗಣೇಶ್ ಸರ್
      ಮು೦ದೆ ಪದ್ಯದಲ್ಲೆ ಪ್ರಯತ್ನಿಸುತ್ತೇವೆ… 🙂

    • ನಮಸ್ತೆ ಗಣೇಶ್ ಸರ್,
      “ಅಂಬೆಗಾಲ” ಕಂದ ಎದ್ದುನಿಲ್ಲಲೆತ್ನಿಸಿ (“ದ್ವಿಪದಿ”ಯಲ್ಲಿ), “ತಪ್ಪುಹೆಜ್ಜೆ” ಇಟ್ಟುದನ್ನು ಕಂಡು ವಿನೋದಿಸುವ ತಾಯ “ಅಕ್ಕರೆ” ತುಂಬಿದ ನಿಮ್ಮ ಪದ್ಯಪ್ರ(ತಿ)ಕ್ರಿಯೆಗೆ ನಾನು ಋಣಿ.
      ಅಮ್ಮನ ಆ ಸಂಭ್ರಮ ಕಂಡು ಮತ್ತೆ ಮತ್ತೆ ಪ್ರಯತ್ನಿಸುವ ಕಂದನ ಆತುರ ನನ್ನದು.(ಕಲಿಕೆ ಮಾತ್ರ ಮಂದಗತಿಯಲ್ಲಿ ಮುಂದುವರೆಯುತ್ತಿದೆ.)
      ಪ್ರತಿ ಸಾಲಲಿಪ್ಪತ್ತು
      ಪ್ರಾಸವಿಲಿ ನಾಪತ್ತು(ತ್ತೆ)
      ಗಣಗುಣಕಾಪತ್ತು
      ಕಾದಿದೆಯೇ ವಿಪತ್ತು?!
      ಇದು ನಿಮ್ಮ ಸಂಸತ್ತು
      ಕ್ಷಮೆಯಿದೆಯೆನೆ ಗೊತ್ತು
      ಅದು ನನ್ನ ಸಂಪತ್ತು
      ಪದ್ಯಪಾನದ “ಪತ್ತು” !

  9. ಅರಿಯದೆಲೆ ಪರಿಣಾಮವನ್ನೇ
    ತ್ವರಿತದೊಳ್ ಕಜ್ಜವನು ಗೈದೊಡೆ
    ಅರಿತವಗವಮಾನವಪ್ಪುದ ಕಂಡೆವಿಂದಿಲ್ಲಿ |
    ಉರಿವ ಬೆಂಕಿಗು ಮಿಗಿಲು ಕೋಪವು
    ನರನ ದಹಿಸುವದೃಶ್ಯ ವೈರಿಯು
    ತರಿಯೆವೊರಟನು ಚತುರ ಮಂತ್ರಿಯನೆದುರು ಯೋಚಿಸದೆ ||

  10. “ಬೆಳಗೆ ನಿನ್ನಯಮತಿ ಕ್ರಮಕ್ರಮಂ
    ಕಳೆಯಬೇಕಿಹವು ವರ್ಷವೈದು ತಾವ್|
    ಹೊಳೆಯ ಕೈ ಶಕುನವಿಂತು ತೋರಿರಲ್
    ತಿಳಿಯಪೇಳಿರುವೆನಿಂತು ಸನ್ನೆಯೊಳ್||12

    ಎಳೆಯದಿರ್ದೊಡಮದೀರು ವರ್ಷದೊಳ್
    ಹಳಿಯ ತಪ್ಪದೊಲು ಮಾರ್ಗಕೀತನಂ|
    ಕಳೆದುಕೊಳ್ಳುವೆವು ರಾಜ್ಯಲಕ್ಷ್ಮಿಯಂ
    ಬಳಿಕ ದೇವನವ ನಮ್ಮ ಮನ್ನಿಸನ್||”13

    ಎನಲುಬೇಕೆನುವ ಧಾರ್ಷ್ಟ್ಯದುತ್ತರಂ
    ಅನಕ ಗಂಟಲಿಗೆ ನುಗ್ಗಿ ಬಂದೊಡಂ|
    ಮನದೊಳೇ ಹಿಂಗಿಸದ, ಸೂಸಿ ಹಾಸವಂ
    ಬಿನದದುತ್ತರವ ಮಂತ್ರಿಚಿಂತಿಸಲ್||14

  11. “ಬರಿಯದೊಂದೆಡೆಯ ನೋಡಿ ಭ್ರಾಂತಿಯಿಂ
    ಹರಿಯದಿರ್ಪ ಬಗೆಯೂಹಿಸಿರ್ದೊಡೇಂ|
    ತೆರೆದುನೋಡುವುದು ಪಾರ್ಶ್ವಮನ್ಯಮಂ
    ತೆರೆದುಕೊಳ್ಳುವುದು ಗೂಢದರ್ಥ ತಾನ್||”
    contd…

  12. ಸರಿದವೈದು ವರುಷಂಗಳಂತೆಯೇ
    ಪರಿಯು ರಾಜನದದಿತ್ತದಂತೆಯೇ|
    ಹರಿಸುತಿದ್ದ ಸಚಿವಂ ಚಲಾಕಿನಿಂ
    ಹರಿಯುಗಜ್ಞತೆಯು ಕಾಲಬಂದುದೋ||

    ನಿರುಕಿಸುಪ್ಪರಿಗೆ ಮೇಲಿನಿಂದಲೇ
    ತರುಣಿರಾಣಿಯೊರುವಂ ಸುವಿಪ್ರನಂ|
    ಮರಳಿ ವೀಕ್ಷಿಸಿದನಾತನಷ್ಟೆ! ತಾ
    ನರಸ ಘೋಷಿಸಿದ ಪ್ರಾಣದಂಡವಂ||

    contd…

  13. ಎಳೆದುಕೊಂಡು ನಡೆವಾಗಲಾತನಂ
    ಬಳಸುದಾರಿಯೊಳು ನೇಣುಗಂಬಕಂ|
    ತಿಳಿದು ವಾರ್ತೆ ನಗುವನ್ನು ಸೂಸಿರಲ್
    ಅಳಿದಿಹೊಂದು ಗಡ (ಮೀನು) ಪಣ್ಯಶಾಲೆಯಿಂ||

    contd…

  14. 16ನೆ ಪದ್ಯ ಪರಿಷ್ಕರಿಸಿದ್ದೇನೆ:

    ಸರಿಯಿತೊಂದು ವರುಷಾರ್ಧ ಮೇಣದೋ
    ಪರಿಯು ರಾಜನದದಿತ್ತದಂತೆಯೇ|
    ಹರಿಸುತಿದ್ದ ಸಚಿವಂ ಚಲಾಕಿನಿಂ
    ಹರಿಯುಗಜ್ಞತೆಯು ಕಾಲಬಂದುದೋ||16

  15. ವಿಷಯ ಕೇಳ್ದರಸನಚ್ಚರೈದುತುಂ
    ಝಷದ (ಮೀನು) ಹಾಸದೊಳಿನರ್ಥವೇನು, ಕಿ|
    ಲ್ಬಿಷವದೇನಿಹುದು ನನ್ನಯಾಜ್ಞೆಯೊಳ್,
    ವಿಷಮದೀಸ್ಥಿತಿಗದೇನು ಕಾರಣಂ||19

    ಎನುತ ಕೇಳೆ ಸಚಿವಂ ಸುಹಾಸದಿಂ
    ಮೊನಚಿನುತ್ತರವ ಪೇಳ್ದ ಶಾಂತಿಯಿಂ|
    ಮುನಿದು ಮಾಡಿದರೆ ಮಾಡಬಾರದಂ
    ತನಗದಾಗುವುದದಾಗಬಾರದಂ||20

    ವಿಪಣಿಯಾತನೊಳು ವಾರ್ತೆಗೈದು ನಾ
    ನಪಶೃತಿಂ ತಿಳಿವೆನೇನಿದೆನ್ನುತುಂ|
    ಹಪಿಸದಿರ್ದು ಧಣಿ ಶಾಂತಿಯಿಂದಿರಿಂ
    ಶಪಿಸುವೆಂ ವಿಶನು (ವೈಶ್ಯನು) ಗೈಯೆ ಕೃತ್ರಿಮಂ||21

    ಇದನೆ ನಾ ಬಳಸಿಕೊಂಡು ರಾಜಗಂ
    ಮೊದಲ ಮಾರ್ಮಿಕದ ಪಾಠ ಪೇಳುವೆಂ|
    ಪದವಿಯರ್ಹತೆಯನಾತಗಿಂದು ನಾಂ
    ಮುದದಿ ಕಾಣಿಸುವೆನೇಕೆ ತಾಮಸಂ||22

    ನಿಜವು ಮಶ್ಚನಗು, ಮರ್ಮ ಕೇಳಿರಿಂ
    ‘ಬಿಜಯ ಗೈಯುತಿರಲೆಂತೊಗಂಡುಗಳ್|
    ನಿಜದಿ ರಾಣಿಗೃಹದೊಳ್ಗೆ ತಾನಿದೇಂ
    ದ್ವಿಜನದೊರ್ವನಿಗೆ ದೇಹದಂಡವೇಂ’||23

    ಸಶೇಷ…

  16. ಮನಕೆ ಬಂದುದನು ಕಕ್ಕಿಬಿಟ್ಟೆನೇಂ
    ಜನವು ಬೆನ್ನಗಡೆ ಗೇಲಿಮಾಡಿಹರ್|
    ಕನಲುತಾಡದೆಲೆ ಜಾಳುಮಾತನುಂ
    ತೊನೆವ ಬುದ್ಧಿಯನು ಗೈವೆ ನಿಗ್ರಹಂ||24

    ಎನುವ ನಿರ್ಣಯವನಂದು ಗೈದೊಡಂ
    ನೆನಪಿನಲ್ಲಿರಿಸಿಕೊಳ್ಳನೇತಕೋ|
    ಕನಲಿ ಮತ್ತೆ ಬಿರುಮಾತನಾಡಿದನ್
    ಮುನಿದು ಶಿಕ್ಷೆಯನು ಮಂತ್ರಿಗಿತ್ತನೈ||25

    ಬಿಡಿಸೆ ಚಿತ್ರದೊಳು ರಾಣಿಭಾವಮಂ
    ನಿಡಿದು ಭಿತ್ತಿಯೊಳು ಚಿತ್ರಕಾರ ತಾನ್|
    ನಡುವೊಳೊಂದಿರಿಸಿ ಮಚ್ಚೆ ಮಂತ್ರಿ ತಾನ್
    ಬೆಡಗ ನೋಡೆನುತ ತೋರೆ ರಾಜಗಂ||26

    ಸಶೇಷ…

  17. ಮುಕುತವಿಂತಹುದೆ ರಾಣಿವಾಸ ತಾನ್
    ಸಕಲಗೆಲ್ಲರಿಗು ಗಮ್ಯತಾಣಮೇಂ|
    ಅಕಟ ಮಂತ್ರಿಗೊಳ ಮರ್ಮ ವೇದ್ಯವೇನ್
    ‘ಶಕಟ’ಗಿಂತರಸ ಪೇಳ್ದನಾಗಲೇ||27

    ಅಘವದೀತನದಿದಲ್ತೆ ಘೋರ ತಾನ್
    ಲಘುವ ಗೈದಿಹನು ರಾಜಕಾರಣಂ|
    ಅಘನವಂತಿಕೆಯ ತೋರ್ದಗೀತಗಂ
    ಸುಘನ ಶಿಕ್ಷೆ ವಿಧಿಸಿಂ ಶಿರಂ ಹನಂ||28

    ಸಶೇಷ…

  18. ವಠರ(stupid)ರೀತೆರನ ರಾಜರಾವಗಂ
    ಕಠಿನದೀತೆರನದಾಜ್ಞೆ ಗೈಯುವರ್|
    ಹಠವ ಸಾಧಿಸದೆ ನಾವು ನೀಸುಗುಂ
    ಬಿಠಕ(sky)ಕೇರಿಸದೆ ಕೈಯನೆಂದಿಗುಂ||29

    ಸಚಿವರೀರ್ವರರಿಯುತ್ತೆ ಸೂಕ್ಷ್ಮವಂ
    ವಿಚಲಿತಂ ಗೊಳದೆ ಪಾರುಗೊಳ್ಳುತುಂ|
    ರುಚಿರಮಾರ್ಗದೊಳಗೊಯ್ಯೆ ರಾಜನಂ
    ಅಚಲಕೀರ್ತಿ ಮಗಧಂ ಪಡೆರ್ದುದೈ||30

    ||ಶಮ್||

    ಜೂಹಿಚಾವ್ಲಳಿಗಿಂತ ಮಿಗಿಲು ಸೋಮೇಶ್ವರಂ
    ವಾಹಿನಿಗಳೊಳ್ದೂರದರ್ಶನದೊಳಂ|
    ವಾಹ!ವಾಹೆನುತ ನೋಡುತ್ತಿದಂ ಮುಗಿಸಿಹಂ
    ಸಾಹಸಂ ಥಟ್ಟೆಂದು ಹಾದಿರಂಪ||

  19. Commendable effort! Some of the praasa-s are really challenging and well executed. But you may have to trim off the words for grammatical acceptance at places.

Leave a Reply to ಸೋಮ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)