Oct 302012
 

ತನ್ನಂ ತಾನೆ ಪೊಗಳ್ವುದು
ಬನ್ನಮದುತ್ತರನ ಪೌರುಷಂ ಚಿಃ ಪೊಲ್ಲಂ|
ಮುನ್ನಂ ಯೋಚಿಸಲಕ್ಕುಂ
ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ||

ಸಮಸ್ಯೆ: ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ||
ಕಂದದೊಳ್ ಪರಿಹರಿಸಿಂ

  90 Responses to “ಪದ್ಯಸಪ್ತಾಹ – ೪೩; ಸಮಸ್ಯಾಪೂರಣ”

  1. ಬನ್ನಂಗೊಳೆ ನರನಣ್ಣನ-
    ನಿನ್ನಿರದೆಯೆ ಪಳಿದೆನದಕೆ ಮಡಿವೆನೆನುತ್ತುಂ|
    ಮನ್ನಿಸಿ ಹರಿ ಶುದ್ಧಿಯನೊರೆದಂ
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ||

    ಅತ್ಯಾಶುವಾಗಿ ಅವಸರದ ಪರಿಹಾರವನ್ನು ಇದೀಗ ತೋರಿದ ಬಗೆಯಲ್ಲಿ ಹೊಸೆದಿದ್ದೇನೆ. ಇದು ಮಹಾಭಾರತದ ಕರ್ಣಪರ್ವದಲ್ಲಿ ಬರುವ ಅರ್ಜುನ-ಧರ್ಮಜಕಲಹದಲ್ಲಿ ಕೃಷ್ಣನು ನೀಡಿದ್ದ ಪ್ರಾಯಶ್ಚಿತ್ತದ ಬಗೆಯನ್ನು ಆಧರಿಸಿ ಮಾಡಿದ ಪರಿಹಾರ.
    ಹಿರಿಯಣ್ಣನನ್ನು ನಿಂದೆಗೆಯ್ದ ಪಾಪಕ್ಕೆ ಆತ್ಮಹತ್ಯೆಯೇ ಪ್ರಾಯಶ್ಚಿತ್ತವೆಂದು ಹಳಹಳಿಸುವ ನರನಿಗೆ ನಾರಾಯಣನು ಆ ತೀವ್ರತೆಯೆಲ್ಲ ಬೇಕಿಲ್ಲ, ಆತ್ಮಪ್ರಶಂಸೆಯು ಆತ್ಮಹತ್ಯೆಯಷ್ಟೇ ಹೀನಾಯವಾದುದರಿಂದ ಅದನ್ನು ಮಾಡಿಕೊಂಡು ಶುದ್ಧನಾಗೆಂಮ್ದು ಹೇಳುತ್ತಾನೆ. ಇದು ಸದ್ಯದ ಪದ್ಯದ ಹಿನ್ನೆಲೆ. ಆದರೆ ಕಂದದ ಅಲ್ಪಕುಕ್ಷಿಯಲ್ಲಿ, ತುಸುಮಟ್ಟಿಗೆ ತೊಡಕಾಗಿಯೇ ಇರುವ (ನೋಡಲಿಕ್ಕೆ ಮಾತ್ರ ಹೊಳ್ಳನಂತೆಯೇ ಮುಗ್ಧವಾಗಿರುವ:-) ’ನ್ನ’ ಪ್ರಾಸದ ತ್ರಾಸದೊಡನೆ ಇಡಿಯ ಪ್ರಸಂಗವೆಲ್ಲ ಸ್ಫುಟವಾಗುವಂತೆ ಪದ್ಯವನ್ನು ಬರೆಯಲಾಗಿಲ್ಲ. ಇವೆಲ್ಲ ಸಮಸ್ಯಾಪೂರಣದ ತಾಂತ್ರಿಕಕೇಶಗಳನ್ನೂ ಅವನ್ನೆಲ್ಲ ನಿಭಾಯಿಸಲು ಬೇಕಾದ ಭಾಷೆ-ಕಲ್ಪನೆಗಳ ಪ್ರಭುತ್ವವನ್ನೂ ಹೇಳದೆಯೇ ಹೇಳುತ್ತವೆ:-).

    ಸೋಮ-ರಾಮರ, ಹಾದಿರಂಪರ, ಶ್ರೀಶ-ಹೊಳ್ಳರ ಹಾದಿಯಂ
    ಸೀಮೆಯೊಳ್ ನೆಲಸಿರ್ಪ ಮಿತ್ರರ, ಕಾಂಚನಾದಿಳೆಲ್ಲರಾ
    (ಹಂಸಾನಂದಿ, ಬೆ.ವೆಂ., ಇತ್ಯಾದಿ ಮಿತ್ರರು ಸೀಮೆಯಲ್ಲಿರುವವರು)
    ಭೂಮರೀತಿಯ ಕಲ್ಪನೋಜ್ಜ್ವಲಪಾರಿಹಾರ್ಯಕಲಾಪಮಂ
    ಪ್ರೇಮದಿಂದೆ ವಿಲೋಕಿಸಲ್ಕೆಳಸಿರ್ಪೆನಾಂ ಸಕುತೂಹಲಂ||

    • ಕೆಲಸದ ಗೋಜಿನೊಳೆಲ್ಲರ್
      ಹಲುಬುವರೈ ತಮ್ಮ ಶೇಷ ಗುಣಗಳ ನೆಲೆಯಿಂ
      ಕಲಿಕೆಯದೀ ಭಾರತದಿಂ
      ಕಲಕಿದುದೆನ್ನಂತರಂಗ ಹಿರಿಭಾವಗಳಿಂ

      [Resume, Bio-Data, Profile, ಗಳ ಸ್ವಯಂ-ಪ್ರಶಂಸೆಯ ಈ ಕಾಲದಲ್ಲಿ, ಜನರು ತಮ್ಮಲ್ಲಿ ಉಳಿದಿರುವ ಕೆಲ ಗುಣಗಳ ಆಧಾರದ ಮೇಲೆ ಇನ್ನಿಲ್ಲದಂತೆ ಹಲುಬುವರು (selling oneself all the time, based on few remaining merits). ಈ ಹಿನ್ನೆಲೆಯಲ್ಲಿ ಸ್ವಪ್ರಶಂಸೆಯು ಆತ್ಮಹತ್ಯೆಗೆ ಸಮ ಅಥವಾ ಅದಕ್ಕಿಂತ ಹೆಚ್ಚು ಎಂಬ (ನೀವು ತೋರಿಸಿದ) ಮಹಾಬಾರತದ ಉನ್ನತ ಭಾವಗಳು ಮನ ಕಲಕಿದವು]

      • ದಯಮಾಡಿ ಪದ್ಯದ ಭಾವವನ್ನು ಮತ್ತಷ್ಟು ವಿವರಿಸುತ್ತೀರಾ?

        • ಅಲ್ಲಿಯೇ ವಿಸ್ತರಿಸಿದ್ದೇನೆ. ಎರಡನೆಯ ಸಾಲಿನಲ್ಲಿದ್ದ ಮಾತ್ರಾ ಲೋಪವನ್ನೂ ಸರಿಪಡಿಸಿದ್ದೇನೆ.

    • ಕಂದನೆ ಬಾಯ್ದೆರೆದೊಡೆ ಸಾ-
      ನಂದದೆ ತೋರ್ದಂ ತ್ರಿಲೋಕರೂಪವಿಶೇಷಂ
      ಇಂದೀ ಕಂದದೊಳಂತೆಯೆ
      ಚಂದದಿ ತೋರ್ದಿರಿ ಗಡಂ ರಸದ ಮೂಲೋಕಂ

      ಪ್ರಾಸದ ತ್ರಾಸದಲ್ಲೂ ಪರಿಹಾರದ ಲಾಸಂ…ಇಂಥಾ ಸಂದರ್ಭದಲ್ಲಿ, ಲಘುಗಳೇ ಒಂದಿಷ್ಟು ಉಸಿರಾಟದ ಜಾಗಕೊಡುತ್ತವೆ ಎಂದೆನಿಸುತ್ತದೆ. ರಾಮ್ ಹೇಳಿದಂತೆ, ಈ ಪರಿಹಾರದ ಪರಿಣಾಮ ಮಾತ್ರ ವಿಶೇಷವಾಗಿದೆ. ಇದರ ಅನುರಣನ ಮನಸ್ಸಿನ ದೇವಸ್ಥಾನವನ್ನೆಲ್ಲಾ ತುಂಬಿದಂತೆನಿಸುತ್ತದೆ.

  2. ನನ್ನಂ ಸುತ್ತಿರೆ ದಿವಸಂ
    ನಿನ್ನಂ ನಾ ಸುತ್ತೆ ವರ್ಷಮದೆನಗೆ ಹರ್ಷಂ |
    ನನ್ನಂ ಸುತ್ತಿದೆ ಚಂದಂ
    ತನ್ನಂತಾನೆ ಪೊಗಳಾಡಿಕೊಳ್ವುದೆ ಚೆನ್ನಂ ||

    (ತನ್ನತಾ ಸುತ್ತುತ್ತ ಸೂರ್ಯನ ಸುತ್ತುವ ಭೂಮಿ, ಭೂಮಿ ಸುತ್ತುವ ಚಂದ್ರ,
    ದಿನ /ವರ್ಷ / ತಿಂಗಳು, ಬರುವ ಹಗಲು / ಮಳೆ / ಬೆಳದಿಂಗಳು
    ಇದೆಲ್ಲ ತನ್ನ ಚಂದವೆಂದು ಬೀಗುವ ಭೂಮಿ !!)

    • Ramachandra sir,
      Please admit Usha and allot a student number to her.

      • ಪ್ರಸಾದು – ನಿಮ್ಮ ಮೋಜಿನ ಸ್ವಭಾವ ಅರಿಯದೆ ಉಷಾರವರು ನೊಂದಾರು !

        • ಹಾಗಾದರೆ ನಾನು ಧನ್ಯೆ, ನಿಜವಾಗಿಯೂ, ಗಣೇಶ್ ಸರ್ ಅವರನ್ನು ತಮ್ಮ ಶಿಷ್ಯರ ಪಟ್ಟಿಯಲ್ಲಿ ನನ್ನನ್ನೂ ಸೇರಿಸಿಕೊಳ್ಳಲು ಬೇಡುವವಳಿದ್ದೆ .

    • ಉಷಾರವರೇ, ನಿಮ್ಮ ಪ್ರಯತ್ನ ಸ್ತುತ್ಯ. ಗಣೇಶರು ಹೇಳಿದಂತೆ, ಪ್ರಾಸವೇ ೪ ಮಾತ್ರೆಯನ್ನು ತಿನ್ನುವುದರಿಂದ ಹೇಳಬೇಕಾದದ್ದನ್ನು ಹೇಳುವುದು ಕಷ್ಟ. ಮೂರನೆಯ ಪಾದದಲ್ಲಿ ’ಎನುತಲ್’ ಬಂದಿದ್ದರೆ, ೪ನೇ ಸಾಲಿಗೆ ಒಂದು ಕೊಂಡಿ ಸಿಗುತ್ತಿತ್ತು. ಕಲ್ಪನೆ ದೊಡ್ದದಾಗಿದ್ದರೆ, ಭಾಮಿನಿಯಲ್ಲಿ ’ತನ್ನ ತಾನೆಯೆ ಪೊಗಳಿಗೊಳ್ವುದು ಚೆನ್ನಮಾಗಿಹುದು’ ಎಂದಿರಿಸಿ ಪ್ರಯತ್ನಿಸಬಹುದು.

      • ನನ್ನ ಸುತ್ತಲು ದಿವಸವಾಗಿರೆ
        ನಿನ್ನ ಸುತ್ತಲು ವರುಷ ಸಂದಿರೆ
        ನಿನ್ನ ಸುತ್ತಲು ದಿವಸ ನನ್ನ ಸುತ್ತಲು ವರುಷವಾಗಿಹುದು |
        ನನ್ನ ಸುತ್ತುವ ನೀನು ಯಾರಲೆ
        ನನ್ನ ಚಂದಿರ ತಾನೆ ಎನುತಲ್
        ತನ್ನ ತಾನೆಯೆ ಪೊಗಳಿಗೊಳ್ವುದು ಚೆನ್ನಮಾಗಿಹುದು ||
        (ಭೂಮಿಗೆ ತನ್ನ ಸುತ್ತಲು ಒಂದು ದಿನ, ಸೂರ್ಯನ ಸುತ್ತಲು ಒಂದು ವರ್ಷ / ಭೂಮಿ ದಿನಾ ಸೂರ್ಯನ ಸುತ್ತಲು, ಭೂಮಿಯ ಸುತ್ತಾ ಮಳೆ)

    • ಅನವದ್ಯಕಂದಪದ್ಯದ
      ನವನಿರ್ಮಾಣಂ ಗಡೀಗಳಾದುದು ನಿಮಗಂ|
      ಜವದಿಂದಿತ್ತೆಂ ಮೆಚ್ಚಿನ
      ಕವನಮನಿದನಳ್ತಿಯಿಂದೆ ಕೊಳ್ವುದು ದಯಯಿಂ||

      • “ಗುರು-ಲಗು ಹಚ್ಚಿರೆ ಸರಿ-ಗಮ
        ಗುರು ಲಗು ಮೆಚ್ಚಿರೆ ಸಡಗರ !!”
        ಧನ್ಯವಾದಗಳು ಗಣೇಶ್ ಸರ್.

      • ಉಷಾರವರs,
        ‘ಗುರು ಲಗು ಮೆಚ್ಚಿರೆ ಸಡಗರ’ ಅಂತ ಹೇಳಕ್ ಬರಂಗಿಲ್ರಿ.
        ‘ಗುರು’ಗಳು ‘ಲಗು’sನ ಎಲ್ಲಿ ಮೆಚ್ಯಾರ್ರೀ? ಇಷ್ಟು ದಿನ “ಪಾಠ ಓದ್ಕೋರಿ, ಪಾಠ ಓದ್ಕೋರಿ” ಅಂತ ಹೇಳ್ತಿದ್ದೋರು, ಭಾಳ ದಿನದ ಮ್ಯಾಗ ಈಗ ಮೆಚ್ಯಾರ ನೋಡ್ರಿ, ಛಲೋ ಕಂದನ್ನ ಬರೆದದ್ದಕ್ಕ.

        • ಗುರು”ಗಳು “ಲಗು”(ಅಲ್ಪಳನ್ನ)ವನ್ನ ಮೆಚ್ಚಿದಕ್ಕೆ ಸಡಗರ / ಗುರುಗಳು “ಜವದಿಂದಿತ್ತ” ಮೆಚ್ಚುಗೆ ಅದು! ಅಲ್ಲವೇ?

  3. ಕನ್ನಡದೊಳ್ ಕಂದಂ ತಾಂ
    ತನ್ನನೆ ಬಣ್ಣಿಪುದ ಕೇಳ್ವದೊಂದನುಮೋದಂ
    ರನ್ನವದೊರೆಯುತಲಿನಿತಂ
    ತನ್ನಂತಾನೆ ಪೊಗಳಾಡಿಕೊಳ್ವುದೆ ಚೆನ್ನಂ

    [ಕಂದ ಪದ್ಯ (ಅಥವ ಸಣ್ಣ ಮಗು) ಸ್ವಲ್ಪದರಲ್ಲೇ ತನ್ನನ್ನು ತಾನೆ ವರ್ಣಿಸುವ ಬಗೆಗೆ.]

    • ಬಹುಶಃ ಈ ಸಮಸ್ಯೆಗೆ ಬಂದ ಎಲ್ಲ ಪರಿಹಾರಗಳ ಪೈಕಿ ಅತ್ಯಂತ ಹೃದ್ಯವೂ ಸ್ನಿಗ್ಧವೂ ಆದ ಪೂರಣವಿದೆಂದರೆ ತಪ್ಪಲ್ಲ. ಇಷ್ಟು ಪರಿಹಾರಗಳ ಬಳಿಕವೂ ಹೊಸಬಗೆಯ ಪೂರಣವು ಸಾಧ್ಯವೆಂಬುದೇ ಕಲೆಯ ಅಸೀಮತೆಯನ್ನು ಧ್ವನಿಸುತ್ತದೆ.

    • KBS sir,

      ಮುದ್ದು ಮಾತನಾಡುವ ಕಂದನನ್ನು ಅದರ ತೊದಲುನುಡಿಯಲ್ಲಿಯೇ ಮುದ್ದಿಸುವ ತಾಯಿಯ ಕಲ್ಪನೆ ತಂದಿದೆ !

  4. ತನ್ನಿಂಬಂ ತುಂಬುಪೆರೆಯ
    ದಿನ್ನುಂ ತಿಳಿಗೊಳದ ಮುಕುರದೊಳ್ ದಿಟ್ಟಿಸುತಲ್
    ಜೊನ್ನಂ ಸೂಸುವ ನಗೆಯಿಂ
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ||
    ಇಂಬು = ಸೊಗಸು, ಮುಕುರ = ಕನ್ನಡಿ
    [ಹುಣ್ಣಿಮೆಯ ಚಂದ್ರ ತನ್ನನ್ನು ತಾನೆ ತಿಳಿಗೊಳದಲ್ಲಿ ನೋಡಿಕೊಳ್ಳುತ್ತಾ ಸಂಭ್ರಮಿಸುವುದು. ಸಾಧಾರಣವಾಗಿ, ಹದಿಹರೆಯದವರು, ಕನ್ನಡಿಯ ಮುಂದೆ ಮೈಮರೆಯುವುದು ಸಾಮಾನ್ಯ. ಅಂತೆಯೇ ಚಂದ್ರನಿಗೂ ಆಗಿದೆಯೇ?]

    • ಪರಿಹಾರವು ತುಂಬ ಸೊಗಸಾಗಿದೆ. ಪ್ರಕೃತಿಚಿತ್ರಣವಿಲ್ಲಿ ಚೆಲುವಾಗಿದೆ. ’ತುಂಬುಪೆರ” ಎನ್ನುವೌದನ್ನು”ತುಂಬುವೆರೆ’ ಎಂದು ಸವರಿಸಿದರೆ ಮತ್ತೂ ಹಳಗನ್ನಡದ ಬಿಗಿ ಬರುವುದು.

      ನಿಮ್ಮ ಮೊದಲಿನ (ಅಭಿನಂದನ)ಪದ್ಯದಲ್ಲಿ ಎರಡನೆಯ ಸಾಲು ತುಸು ಮಾತ್ರಾ/ಗಣಸಂಖ್ಯೆಯಲ್ಲಿ ಕಡಮೆಯಾದಂತಿದೆ, ದಯಮಾಡಿ ನೋಡಿ ಸವರಿಸಿರಿ.

      • ಕ್ಷಮಿಸಿರಿ, ಈ ( ಮಾತ್ರಾ/ಗಣಸಂಖ್ಯೆ) ಸವರಣೆ ರಾಮಾಚಂದ್ರರ ಪದ್ಯಕ್ಕೆ ಸಂಬಂಧಿಸಿದ್ದು. ಅವರ ಪದ್ಯವು ನನ್ನ ಪರಿಹಾರದ ಬಳಿಕವೇ ಕಾಣುತ್ತದೆ.

        • ರವೀಂದ್ರ ಸರ್,
          “ಚಂದ ಕಂಡ ಬಿಂಬದಂದ” ದ ಕಲ್ಪನೆ ತುಂಬಾ ಚನ್ನಾಗಿದೆ.

  5. ಚೆನ್ನಾಗ್ಬರ್ದಿದ್ದೀನೀಂ
    ತ್ನನ್ನಾಟ್ಕಕ್ಪ್ರೈಜು ಬಂತು ನಂಗೊತ್ತಿಲ್ಲ್ವೇ
    ನನ್ನ್ಯೋಗ್ತೆ? ಟೀಪಿಕೈ ದಲ್
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ||

    “ಈ ಕಾಲ್ದಲ್ಲಿ ಅವರವರ್ಯೋಗ್ತೆ ಅವರವರಿಗ್ಗೊತ್ತೇ ಹೊರ್ತು ಇತರ್ರಿಗೇನ್ಗೊತ್ತು” ಎಂದ ‘ಕಂದ’ಕ್ಕೊಬ್ಬನೇ ಆದ ಕೈಲಾಸನ ವಾಣಿಯಿದು , “ಟೊಳ್ಳು ಗಟ್ಟಿ” ನಾಟಕದ ಪೂರ್ವರಂಗದಿಂದ.

    • 🙂 ಒತ್ತಕ್ಷರಕ್ಕೆ ೩ ಮಾತ್ರೆ ಮಿನಿಮಮ್ಕೊಡಬೇಕು. ಕ್ + ಪ್ + ರ್ + ಐ = ಕ್ಪ್ರೈ ನಾಲಗೆಗೆ ಒಳ್ಳೇ ವ್ಯಾಯಾಮ. ೨ನೇ ಸಾಲಲ್ಲಿ ತ್ನ ನೋ, ತ ನೋ?

      • ರವೀಂದ್ರ, ೩ ಬರೇ ಮಾತ್ರೆ ಅಲ್ಲ, ಭರತಮಾತ್ರೆ! 😀 ೨ನೇ ಸಾಲಿನಲ್ಲಿ ತ್ನ-ನೇ – ..ನೀಂತ್ + ನನ್ನ್ + ನಾಟ್ಕಕ್

        • ಅಭಿನವಗುಂಡೂರಾಯಾ!
          ವಿಭವೋದಿತಕಾವ್ಯಗರಿಮಚಂಡತರಾಯಾ!!
          ಶುಭಕರಕೈಲಾಸವಚಃ –
          ಪ್ರಭುವೇ! ಗ್ರಾಮ್ಯೋಕ್ತಿವೆತ್ತ ಋಭುವೇ! ಸ್ವಭುವೇ!!!

  6. ಹಿನ್ನಡೆಯಲ್ತೇ ಆತ್ಮಕೆ
    ತನ್ನನೆ ಬಣ್ಣಿಪುದು, ಕಲಾರಸಿಕರ್ಗೆನೆ ಗೈ-
    ದುನ್ನತಮಿಹ ಶಿಲ್ಪದೆ ಕಲೆ
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ

    ಒಬ್ಬ ಕಲಾವಿದ ಕಲಾರಸಿಕರಿಗೆ೦ದು ಮಾಡಿದ ಉನ್ನತ ಕೃತಗಳಲ್ಲಿ(ಶಿಲ್ಪ, ಚಿತ್ರ, ಗೀತ, ಪದ್ಯ ಇತ್ಯಾದಿ) ಕಲೆಯು ತನ್ನನ್ನು ತಾನೆ ಹೊಗಳಾಡಿಕೊ೦ಡರೆ ಚೆನ್ನ

  7. correction
    ಹಿನ್ನಡೆಯಲ್ತೇ ಆತ್ಮಕೆ
    ತನ್ನನೆ ಬಣ್ಣಿಪುದು, ಕಲೆಯರಸಿಕರ್ಗೆನೆ ಗೈ-
    ದುನ್ನತಮಿಹ ಶಿಲ್ಪದೆ ಕಲೆ
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ

    • ಸೋಮ, ಚೆನ್ನಂ. ಕಲೆಯರಸಿಕರ್ಗೆನೆ ಯನ್ನು ಕಲೆಯ ರಸಿಕರ್ಗೆನೆ ಅಥವಾ, ಕಲೆಯರಸುವರ್ಗೆನೆ ಎಂಬುದಾಗಿ ಯೋಚಿಸಿದ್ದೆನಿಸುತ್ತದೆ.

      • ಹೊಳ್ಳ, ಹೌದು ಕಣಯ್ಯ ನಾನು ಬರೆದಿರುವುದು ‘ಕಲೆಯ ಅರಸಿಕರ್ಗೆನೆ’ ಎ೦ಬುದಾಗಿ ತೋರಿಕೊಳ್ಳುವ೦ತಿದೆ, ಸರಿಪಡಿಸಿದ್ದೇನೆ

        ಹಿನ್ನಡೆಯಲ್ತೇ ಆತ್ಮಕೆ
        ತನ್ನನೆ ಬಣ್ಣಿಪುದು, ಕಲೆಯ ರಸಿಕರ್ಗೆನೆ ಗೈ-
        ದುನ್ನತಮಿಹ ಶಿಲ್ಪದೆ ಕಲೆ
        ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ

  8. ಮನ್ನಿಸದೊಡೇಂ ಜನರಿವರ
    ಮುನ್ನುಗ್ಗಿ ಗೆಲಲ್ ಚುನಾವಣೆಯ ಸೂತ್ರಮಿದುಂ
    ‘ಸೊನ್ನೆ’ಗೆಲಸವಂ ಬಣ್ಣಿಪ
    “ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ”

    • ಸಾಗಿರೆ ಗಂಭೀರಾರ್ಥದೆ,
      ಬಾಗಿರೆ ತದ್ಭಾರದಿಂದೆ ಹೃದಯವಿನೋದಂ|
      ತೂಗಿದಿರೌ ತುಲಸಿಯೆನಲ್
      ಮಾಗಿದ ಖಳರಾಜಕೀಯದ ವಿಡಂಬನೆಯಿಂ||

    • fine

  9. ಸನ್ನುತ ’ವಿಭೂತಿ’ಯೋಗದೊ
    ಳೌನ್ನತ್ಯೋತ್ಕೃಷ್ಟಮಾದುದೆಲ್ಲಂ ಜಗದೊಳ್
    ತನ್ನಯ ಸಂಕೇತಮೆನುತ
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ

    ಭಗವದ್ಗೀತೆಯ ಹತ್ತನೆಯ ಅಧ್ಯಾಯದಲ್ಲಿ ತನ್ನ ವಿಭೂತಿ (ವಿಶಿಷ್ಟಭೂತಿ)ಯನ್ನು ವಿವಿಧ ವಸ್ತು ಗುಣವಿಶೇಷಗಳಿಂದ ಅಭಿವರ್ಣಿಸಿ, ಸಮಸ್ತವೂ ತನ್ನ ಅಂಶದಿಂದಲೇ ಆವಿರ್ಭವಿಸಿದ್ದು ಎಂದುಹೇಳಿ, ಅಶಾಶ್ವತವಾದ ನಿಕೃಷ್ಟಾಂಶಗಳನ್ನು ಬಿಟ್ಟು, ಖ್ಯಾತವಾದ ಎಲ್ಲ ವಿಶಿಷ್ಟಾಂಶಗಳಲ್ಲೂ ನಾನಿದ್ದೇನೆ (I am not in them, they are in me) ಎಂದ ಭಗವಂತನ ನುಡಿ ಚೆನ್ನವಷ್ಟೇ ಆಲ್ಲ, ಚಿನ್ನವೇ. ಈ ತತ್ತ್ವ, ಎಂದಿಗೂ ಬೋಧಪ್ರದವೇ. ಇದನ್ನು ಅರ್ಥೈಸಿಕೊಂಡರೆ, ಭಿನ್ನಗಳೆಲ್ಲ ಛಿನ್ನವಾಗಿ, ಪ್ರತಿವ್ಯಕ್ತಿಯಲ್ಲೂ ಇರುವ ಅಲ್ಪತ್ವವನ್ನು ಗಣಿಸದೆ-ಗುಣಿಸದೆ, ಎಲ್ಲೆಲ್ಲೂ ಎಲ್ಲರಲ್ಲೂ ಇದ್ದೇ ಇರುವ ವಿಶಿಷ್ಟಗುಣವನ್ನು ಕಾಣುವ ಸದಭ್ಯಾಸ ಬೆಳೆದರೆ ಮನುಕುಲದ ಸಕಲ ವ್ಯಾಕುಲಗಳೂ ಖಿಲವಾಗಬಹುದಲ್ಲವೇ !

    • ಬಲ್ಗಾಲದ ಬಳಿಕಂ ನೀಂ
      ಬಿಲ್ಗಾದಿರೆ ಪದ್ಯಪಾನಲಕ್ಷ್ಯಾಭಿಮುಖರ್:-)
      ವಲ್ಗದಭಂಗುರಗೀತೆಯ
      ಸೊಲ್ಗಿದಿರೇ? ನಿಮ್ಮ ಸಲ್ವ ಸೊಲ್ಗಿದಿರೇ ನಾಮ್?

      ತುಂಬ ಸೊಗಸಾದ ಪರಿಹಾರ.

    • ಚಂದ್ರಮೌಳಿ ಸರ್,
      ನಿಮ್ಮ ಕಲ್ಪನೆ ಸೊಗಸಾಗಿದೆ.
      ನಿಮ್ಮಭಾವಕ್ಕೆ ನನ್ನ ಭಾಷೆ :

      ತನ್ನಯ ಸಮಸ್ತ ಸೃಷ್ಟಿಯೊ
      ಳುನ್ನತವೆಲ್ಲವದುತಾನೆನುವ ಗೀತವದೋ
      ನಿನ್ನಯ ಲೀಲೆಯದೆಂತೋ
      ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ ||

  10. ಚೆನ್ನೆಯ ಸ್ವಯ೦ವರದೊಳಾ
    ಚೆನ್ನಿಗರಾಯರ್ಗಳಿ೦ಬು ನೋಟದೆ ಗಯ್ದಲ್
    ಬಿನ್ನಹದುಲಿಯೊಳ್ ಮೌನದೆ
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ

    • Correction:
      ಚೆನ್ನೆಯ ಸ್ವಯ೦ವರದೊಳಾ
      ಚೆನ್ನಿಗರಾಯರ್ಗಳಿ೦ಬು ನೋಟದೆ ಗಯ್ದರ್
      ಬಿನ್ನಹದುಲಿಯೊಳ್ ಮೌನದೆ
      ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ

  11. ಮುನ್ನಂ ಹಗಲುಮಳೆಗರೆಯೆ
    ಚೆನ್ನಂ ಬಣ್ಣಿಪುದು ನೀಲ ನಭವ ರವಿಯುತಾಂ |
    ಹೊನ್ನಂ ಪಸರಿಸಿ ನಲಿದಿರೆ
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ ||

  12. ಘನ್ನಂ ವಿಪುಲದಧೀತನ
    ಚೆನ್ನಂ ಪೊಗಳಲ್, ಪೊಗಳ್ದವೊಲೆ ಶಾಸ್ತ್ರಗಳಂ|
    ಪೊನ್ನಂ ಕಡೆಗಣಿಸುತ್ತುಂ
    ತನ್ನಂ ತಾನೆ ಪೊಗಳಾಡಿಕೊಳ್ವುದೆ(?) ಚೆನ್ನಂ?

    • ಸ್ಪಷ್ಟವಾಗಲಿಲ್ಲ:-)

      • ರಾಮ್‍ಗೂ ಇದೇ ಪ್ರತಿಕ್ರಿಯೆ ಸಂದಿದೆ.

        ಗೆದ್ದೆನೈ! ಶೃಂಗದೊಳಗೊಂಟಿಯಾಗದೊಲು ಜೊತೆ
        ಗಿದ್ದೆನಗೆ ಜೊತೆಯಾದೆಯೈ ಸಖನೆ ನೀ|
        ಪೆದ್ದನಾನೋರ್ವನೆಂದೆನಿಸದೆಲೆ ಕಾಪಾಡ
        ಲುದ್ದಂಡ ರಾಮಂಗೆ ಹಾದಿರಂಪ||

      • Correction:
        ಗೆದ್ದೆನೈ! ಪಾತಾಳದೊಂಟಿತನ ನೀಗಿ ನೀ
        ನಿದ್ದೆಯೈ ನನ್ನಜೊತೆ ಮುನಿಯುತಲ್ಲಿ|
        ಪೆದ್ದನಾನೋರ್ವನೆಂದೆನಿಸದೆಲೆ ಕಾಪಾಡ
        ಲುದ್ದಂಡ ರಾಮಂಗೆ ಹಾದಿರಂಪ||

    • ಘನ್ನ = ಘನ. If we praise an accomplished (ಘನ್ನಂ) well-read (ವಿಪುಲಧತೀತ) man, it is as good as appreciating good literature. Ignoring such finesse (gold) in others, is it good to praise oneself?

    • Correction:
      ಘನ್ನನನಧೀತವಿಪುಲನ
      ಚೆನ್ನಂ ಪೊಗಳಲ್; ಪೊಗಳ್ದವೊಲೆ ಶಾಸ್ತ್ರಗಳಂ|
      ಪನ್ನತಿಕೆಯಂ ಜರೆಯುತಲ್
      ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ?

      ವಾಕರಣವನ್ನೇನೋ ತಿದ್ದಿದ್ದೇನೆ. ಪೂರ್ತಿ ಹಳಗನ್ನಡವಾಗಿದೆಯೋ ತಿಳಿಯದು.

    • Correction:
      ಘನ್ನನನಧೀತವಿಪುಲನ
      ಚೆನ್ನಂ ಪೊಗಳಲ್; ಪೊಗಳ್ದವೊಲೆ ಶಾಸ್ತ್ರಗಳಂ|
      ಪನ್ನತಿಕೆಯಂ ಜರೆಯುತಲ್
      ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ?
      (ವಿವರಣೆ ಮೇಲೆ ಕೊಟ್ಟಿದ್ದೇನೆ)
      ‘ಘನ್ನನನ್+ಅಧೀತ’ ಸರಿಯಿದೆಯೆ? ಪೂರ್ತಿ ಹಳಗನ್ನಡವಾಗಿದೆಯೋ ತಿಳಿಯದು.

  13. ಚೆನ್ನ೦ ಕುವೆ೦ಪು, ದಾ೦ಟೆಯ,
    ರನ್ನ೦, ಶ್ರೀನಾಥರಾ ಪ್ರತಿಷ್ಥೆಯ ಬಗೆಯ-
    ತ್ಯುನ್ನತನಿಹನೊರ್ವನು ಕೇಳ್
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ

    ನಾನು ಓದಿಲ್ಲ ಗಣೇಶರ ಒ೦ದು ಭಾಷಣದಲ್ಲಿ ಈ ಬಗ್ಗೆ ಪ್ರಸ್ಥಾಪಿಸಿದ ನೆನಪು, ಗ್ರಹಿಸುವಿಕೆಯಲ್ಲಿ ಏನಾದರು ಅಚಾತುರ್ಯವಿದ್ದರೆ ಕ್ಷಮಿಸಿ 🙂

  14. ಜನ್ನದೆ ಋಷಿಗಳ್ ಕಾಣುತೆ
    ಜೊನ್ನದವೊಲು ಜ್ಞಾನಧಾರೆ ಪಸರಿಸಲದರಿ೦
    ಮುನ್ನಡೆದಿಹಾರ್ಷದರ್ಶನ
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ

    ಋಷಿಗಳು ತಾವು ಕ೦ಡ ದರ್ಶನವು ಮೇಲೆ೦ದು ಮಿಗಿಲಾದುದೆ೦ದು ಹೊಗಳಿ ಜ್ಞಾನಭ೦ಡಾರವನ್ನು ಜಗತ್ಕಲ್ಯಾಣಕ್ಕಾಗಿ ಬೆಳೆಸಿದ ಹಿನ್ನಲೆಯಲ್ಲಿ

    • ಅಬ್ಬಾ! ಹರ್ಷದ ಭರದಿಂ
      ತಬ್ಬಿಬ್ಬಾದೆಂ ವಯಸ್ಯ! ನಿನ್ನಯ ಬಗೆಯಿಂ-
      ದುಬ್ಬಿದುದಯ್ ಹೃದಯಂ, ತಾಯ್
      ತಬ್ಬಿದಳಲ ಶಾರದಾಂಬೆ ನಿನ್ನಂ ನುಡಿಯೊಳ್||

      ಪ್ರತಿಯೊಂದು ಪರಿಹಾರವೂ ಅಭಿನವ, ಅಭಿರಾಮ. ಮುಖ್ಯವಾಗಿ ಸೋಮನ ಕಲ್ಪನೆಗಳೇ ನಿರ್ವಿರಾಮ, ನಿಸ್ಸೀಮ!!

      • ಧನ್ಯನಾದೆ ಗಣೇಶ್ ಸರ್ :), ನಾನು ಬರೆದಿರುವ ಪದ್ಯಗಳಿಗೆ ನೀವೇ ಪ್ರವಚನಗಳಲ್ಲಿ ಹೇಳಿರುವುದು ಆಕರವಾಗಿದೆ, ಅಲ್ಲಲ್ಲಿ ಕೆಲವೊ೦ದಶಗಳು ನನ್ನ ಅಲ್ಪ ಬುದ್ಧಿಗೆ ಪ್ರಾಪ್ತಿಯಾದದ್ದಷ್ಟೇ ನನ್ನ ಸರಕು. ಹೀಗಿರುವಾಗ ಈ ಪದ್ಯಗಳನ್ನು ನೀವು ನನ್ನದೆ೦ದು ಹೊಗಳಿದರೆ…

        ಎನ್ನದು ಗಿಳಿಪೇಳ್ವವೊಲುಲಿ-
        ಯಿನ್ನೆಗುಮಾ೦ ಒರೆದ ಪದ್ಯಗಳ್ ಕೇಳ್ಕೆಯೆ ದಲ್
        ನನ್ನಾಕರಮಿಹ ನಿಮ್ಮಿ೦
        ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ!

    • ಸೋಮ ಸರ್,
      ನಿಮ್ಮ ಕಲ್ಪನೆ ಸೊಗಸಾಗಿದೆ.
      ನಿಮ್ಮಭಾವಕ್ಕೆ ನನ್ನ ಭಾಷೆತರುವ ಪ್ರಯತ್ನ ನಡೆದಿದೆ.

  15. ಎನ್ನಂ ಬಿಂಕದ ಭಂಗಿಯು
    ಮೆನ್ನಂ ಪುರ್ಬೇರ್ಚಿ ಮುಕುರಮಂ ನೋಳ್ಪ ಮದಂ
    ಕೆನ್ನಂ ಮದನಿಕೆ ಕಣ್ಣೊಳ್
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ
    [ಕೆನ್ನಂ = ಬಹಳವಾಗಿ, ಹೆಚ್ಚಾಗಿ, ಎನ್ನ = ಎಂತಹ, ಎನ್ನಂ ಅದೇ ಅರ್ಥದಲ್ಲಿ ಬಳಸಿದ್ದೇನೆ.]
    ಚೆನ್ನಕೇಶವ ದೇವಾಲಯದಲ್ಲಿರುವ ಮುಕುರಮುಗ್ಧೆಯನ್ನು ನೆನೆದು

  16. ತನ್ನಯ ರೂಪವ ತುಂಬಿಸಿ
    ಚಿನ್ಮಯ ಮೂರ್ತಿಗವನಾಕೃತಿಯನಿತ್ತ ಮನುಜ |
    ತನ್ಮಯದೆ ಪಾಡಿ ಪೊಗಳಿರೆ
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ ||

    • ಉಷಾ ಅವರೆ,
      ೧) ಎರಡನೆ ಪಾದಾಂತ್ಯದ ಗಣವು ನನನಾ ಇಲ್ಲವೆ ನಾನಾ ಇರಬೇಕು. ಇಲ್ಲಿ ನನನನ ಆಗಿದೆ
      ೨) ಆದಿಪ್ರಾಸ ತಪ್ಪಿದೆ. ಒಂದು ಸ್ವಲ್ಪ relaxation ಮಾಡುವುದಾದರೆ, ಅದರಲ್ಲಿ symmetry ತರಬೇಕು. ನನಗೆ ತಿಳಿದಂತೆ ಇಲ್ಲಿ ಬದಲಿಸಿದ್ದೇನೆ. ಬೆಸಪಾದಗಳ ಪ್ರಾಸ ಒಂದೇ, ಸಮಪಾದಗಳ ಪ್ರಾಸ ಒಂದೇ:

      ಚಿನ್ಮಯ ಮೂರುತಿಗಾಕೃತಿ
      ತನ್ನದೆ ತುಂಬಿಸುತೆ ನೋಡಿನಲಿದನೆ ಮನುಜಂ|
      ತನ್ಮಯದಿನವನ ನೆವದೊಳು
      ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ||

    • ಮರೆತೆ, ಐಡಿಯ ತುಂಬಾ ಚೆನ್ನಾಗಿದೆ

      • ಎಷ್ಟೊಂದು ತಪ್ಪುಗಳು ನುಸುಳಿವೆ!?ಮೆಚ್ಚಿ ತಿದ್ದಿದಕ್ಕೆ ಧನ್ಯವಾದ ಪ್ರಸಾದ್ ಸರ್, relaxationಗೆ ಶ್ರೀಶ ಸರ್ ಒಪ್ತಾರ?
        ಅದಕ್ಕೆ ಈ ತಿದ್ದುಪಡಿ :
        ತನ್ನಯ ಭಾವವ ತುಂಬಿಸಿ
        ಚನ್ನದ ಮೂರ್ತಿಗವನಾಕೃತಿಯನಿತ್ತು ನರನ್ |
        ತನ್ನದೆ ರೂಪವ ಪಾಡಿರೆ
        ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ ||

        • ಇಲ್ಲಿ ಎಲ್ಲೂ ‘ದೇವರು’ ಎನ್ನುವುದು ಬರಲಿಲ್ಲವಲ್ಲ!

          • ಹೌದು “ದೇವರು” ಮಾಯ !
            “ತನ್ನೆದೆ ಮೂರ್ತಿ” ದೇವರಾಗುವನೆ?

          • ಆದರೇಂ? ದೇವರೆಲ್ಲೆಡೆಯೊಳಿರ್ಪನಲ್ತೆ ಮಹರಾಯ..:)

    • ರವೀಂದ್ರ,
      “ಎಲ್ಲೆಲ್ಲೂ ದೀಪ ಇರುವಾಗ, ನನ್ನ ಸೈಕಲ್ಲಿನೊಳೇಕೆ ದೀಪ?” ಎಂದು ಹೇಳಿದ ಹುಡುಗನಿಗೆ ಪೇದೆ, “ಎಲ್ಲೆಲ್ಲೂ ಗಾಳಿ ಇರುವಾಗ, ನಿನ್ನ ಸೈಕಲ್ಲಿನೊಳಗೇಕೆ ಗಾಳಿ?” ಎಂದು ಹೇಳಿ, ಸೈಕಲ್ ಚಕ್ರದ ವಾಲ್ವ್-ಟ್ಯೂಬ್ ಕೊಂಡುಹೋದಂತಿದೆ ನೀವು ಹೇಳಿರುವುದು.

  17. ಅನ್ನಮಮಿಕ್ಕುವ ಮನೆಯೊಳ್
    ಕನ್ನವ ತಡೆಯುತಲಿ ಕುನ್ನಿ ಪಿಡಿಯಲ್ ಖಳನ೦
    ಬೆನ್ನ೦ ಸವರಲ್ ‘ಕುಯ್’ಎನೆ
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ

  18. ಮುನ್ನಿರಿವಾಳ್ಗಳ ನಾಚಿಪ-
    ನೆನ್ನುವ ಪರಿಯೊಳ್ಗೆಗೈಯುತಳಿದ೦ ರಣದೊಳ್
    ಚೆನ್ನಿಗನಾ ಶೌರ್ಯ೦ ಗಡ
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ

  19. ಕನ್ನಡ ಹಬ್ಬದ ಸಂಭ್ರಮ
    ಚೆನ್ನವದೆಲ್ಲರೊಳು ಹೆಮ್ಮೆ ಮೂಡಿಮೊಳಗಲೀ
    ನುಡಿಯದೆಮ್ಮದೆನ್ನಲು
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ ||
    (ಕನ್ನಡ “ಕಂದ”ನ ನುಡಿ ನಮನ)

  20. 3ನೇ ಸಾಲಿನ ಸರಿರೂಪ ದೊಂದಿಗೆ,
    ಕನ್ನಡ ಹಬ್ಬದ ಸಂಭ್ರಮ
    ಚೆನ್ನವದೆಲ್ಲರೊಳು ಹೆಮ್ಮೆ ಮೂಡಿಮೊಳಗಲೀ
    “ಚನ್ನುಡಿಯದೆಮ್ಮದೆನ್ನಲು”
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ ||

  21. ಪುರಾಣಾಧಾರಿತ ಚಲನಚಿತ್ರದ ಯುದ್ಧರ೦ಗದಲ್ಲಿ ನಡೆವ ಸ೦ಭಾಷಣೆ ನನಗೆ ತು೦ಬಾ ಹಿಡಿಸುತ್ತದೆ…

    ಸನ್ನದ್ಧನಿರ್ದು ಯುದ್ಧದೆ
    ಚೆನ್ನಾದ ವರಸೆ ಗಳಿ೦ದೆ ಹಳಿಯಲ್ಕರಿಯ೦
    ಹಿನ್ನಿಯ ಪಿಡಿಯುತ ದರ್ಪದೆ
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ

    ಹಿನ್ನಿ – ಬಾಣದ ಹಿ೦ಬಾಗ

    • ಉಗ್‍ಗ್‍ಗ್ರಪ್ರತಾಪೀ…ಈ…ಈ…ಈ…ಈ

      • 🙂 exactly that seen…

      • Don’t create a scene. It is in direct speech, and I am saying so to you 😉

        • ಸೀನ೦(scene) ಸೀನೆ(seen)ನುತೊರೆವಾ
          ನಾನೇ೦ ಪೇಳಯ್ ಪ್ರತಾಪಿ? ಕಾವ್ಯಕಥನದಾ-
          ಖ್ಯಾನವ ಪೂರ್ಣಿಸಲೊ೦ದು೦
          ನ್ಯೂನತೆಯಿರದೊಲ್ ಪ್ರಸಾದುವೆದುರಿಸೆ ರಣದೊಳ್ 🙂

        • ಇದರಲ್ಲೂ ಒ೦ದು typo ಮಾಡಿದ್ದೇನೆ… ಹಾ! ಕಷ್ಟಕಷ್ಟಾ ಕಷ್ಟಕಷ್ಟಾ 😉

          ಸ್ಕೀನ೦(scene) ಸೀನೆ(seen)ನುತೊರೆವಾ
          ನಾನೇ೦ ಪೇಳಯ್ ಪ್ರತಾಪಿ? ಕಾವ್ಯಕಥನದಾ-
          ಖ್ಯಾನವ ಪೂರ್ಣಿಸಲೊ೦ದು೦
          ನ್ಯೂನತೆಯಿರದೊಲ್ ಪ್ರಸಾದುವೆದುರಿಸೆ ರಣದೊಳ್

    • Very fine idea Soma

  22. ಬೆನ್ನಂ ತಟ್ಟಿ ಪೊಗಳುವರ್
    ಬೆನ್ನಂ ತಿರುಗಿಸಿರೆ ನಗುತ ಛಿನ್ನಂಗೈವರ್ |
    ಇನ್ನರ ಪೊಗಳಿಕೆಯಿಂದೇನ್
    ತನ್ನಂ ತಾನೆ ಪೊಗಳಾಡಿ ಕೊಳುವುದೆ ಚೆನ್ನಂ ||

    —-

    ಪದ್ಯಪಾನವೆಂಬದೊಂದು
    ಮದ್ಯಪಾನ ಮಾಡಿ ಬಂದು
    ಪದ್ಯವೊಂದನಂತು ಇಂತು ಕಟ್ಟಿ ತಂದೆನೈ |
    ಸ್ವಾದ್ಯವೆಂದು ಭಾವಿಸಿರ್ಪೆ
    ಸದ್ಯ ನೀಂ ಕೊಡಂಕೆಯಿಟ್ಟು
    ಮಧ್ಯ ಕೊಂಚ ಜಾಗಕೊಟ್ಟು ಕೇಳಿಯೆಂದೆನೈ ||

    – ಶ್ರೀಕಾಂತ್

    • ಇ೦ದೆ ಮೊದಲು ಪದ್ಯಪಾನ-
      ಕೆ೦ದು ಬರೆದರಲ್ತೆ ನೀವು
      ಚ೦ದ ನಿಮ್ಮ ಭಾಷೆ ಬ೦ಧ ಮೆಚ್ಚುವ೦ತಿದೆ
      ಮು೦ದು ಬರೆದು ರಸಿಕಮೊಗದೆ
      ಮ೦ದಹಾಸ ತರುತಲದರ-
      ವಿ೦ದದ೦ತಲರಳಿಸಲ್ಕೆ ನಿಮಗೆ ಸ್ವಾಗತ

    • Idea is fine. ನಗುತೆ will make it all ಹಳಗನ್ನಡ. In the given line, it is ಪೊಗಳಾಡಿಕೊಳ್ವುದೆ; not ಪೊಗಳಾಡಿಕೊಳುವುದೆ.

  23. ಚೆನ್ನವದೆಂತವ ತನ್ಮನ
    ದನ್ನೆ ವರಿಸುವ ಪರಿ ಚಿನ್ನ ನನ್ನರಗಿಣಿನೀ
    ನೆನ್ನುತವಳ ರಮಿಸುತಿರಲ್
    ತನ್ನಂತಾನೆ ಪೊಗಳಾಡಿಕೊಳ್ವುದೆ ಚೆನ್ನಂ ||

    ತನ್ನ ಮೊಲೆಯ ಹಾಲ ಕುಡಿಸಿ
    ಮುನ್ನ ಮಡಿಲ ಮುಸುಕ ಹೊದಿಸಿ ಹರಸುವ ತಾಯೇ |
    ಕೆನ್ನೆ ಸವರಿ ರಕ್ಷೆಯಿರಿಸೆ
    ತನ್ನಂತಾನೆ ಪೊಗಳಾಡಿಕೊಳ್ವುದೆ ಚೆನ್ನಂ ||

  24. ಇನ್ನೀ ನಾಡಿನೊಳಿಲ್ಲಂ
    ಸನ್ನುತಿಯೆಮಗೆಂದು ದೂರಿ ತಲ್ಲಣದಿಂದಲ್
    ಖಿನ್ನತೆಯೊಳ್ ಕಂತದೆಯೇ
    ತನ್ನಂತಾನೆ ಪೊಗಳಾಡಿಕೊಳ್ವುದೆ ಚೆನ್ನಂ ||
    [ಕಂತು = ಮುಳುಗು]

  25. 9ನೇ ಪರಿಹಾರ:

    ಜೊನ್ನಝರಿಯನೆರೆವಿನೊಳ-
    ತ್ಯುನ್ನತಮಿಹ ಮುತ್ತ ಪೋಲ್ವ ಪನಿಗಳೊಳಿ೦ ಸ೦-
    ಪನ್ನನೆನುತೆ ಭೋರ್ಗರೆಯಲ್
    ತನ್ನಂತಾನೆ ಪೊಗಳಾಡಿಕೊಳ್ವುದೆ ಚೆನ್ನಂ

    ರತ್ನಾಕರನು ತನ್ನಯ ಭೋರ್ಗರೆತದ ಅಲೆಗಳ ಹನಿಗಳೊಳು ಮುತ್ತಿನ್ನೆ ಹೋಲುವ ಬೆಳದಿ೦ಗಳ ಪ್ರತಿಫಲನದಿ೦ದ (ನೆರವಿನಿ೦ದ), ತಾನು ಸ೦ಪನ್ನ(ಮುತ್ತಿನಿ೦ದ ಸ೦ಪನ್ನ)ನೆ೦ದು ಹೊಗಳಿಕೊಳ್ಳುವುದು ಚೆನ್ನ

  26. 10ನೇ ಪರಿಹಾರ

    ಚೆನ್ನದೆ ನಾಟ್ಯ೦ಗೈಯುತ-
    ಲಿನ್ನಿತರ ವಿಹಗಕುಲ೦ಗಳ೦ ಮೂದಲಿಸ-
    ಲ್ಕುನ್ನತನೆನ್ನುತ ಸೋಗೆಯು
    ತನ್ನಂತಾನೆ ಪೊಗಳಾಡಿಕೊಳ್ವುದೆ ಚೆನ್ನಂ

    ನವಿಲಿನ ಅಹಕಾರ ಚೆನ್ನ

  27. ಪನ್ನತಿಯಿ೦ಬೀಗಿಹನೀ-
    ರುನ್ನತನಾ೦ ಪಾಕಲೋಕದೊಳೆನಲ್, ಜಲನ೦ |
    ಗನ್ನದಿ ಹಬೆಯಾಗಿಸಿನಗು-
    ತನ್ನ೦ ತಾನೆ ಪೊಗಳಾಡಿ ಕೊಳ್ವುದೆ ಚೆನ್ನ೦
    (ಗರ್ವದಿಂದ ತಾನು ಪಾಕಲೋಕದೊಳ್ ಉನ್ನತನ್ ಎ೦ದು ಬೀಗಿರುವ ನೀರನ್ನು ಮೋಸದಿಂದ ಆವಿಯಾಗಿಸಿ ಬಿಳಿಯಾದ(ನಕ್ಕ) ಅನ್ನವು, ತನ್ನ ಕಾರ್ಯಕ್ಕೆ ತಾನೆ ಪೊಗಳಾಡಿಕೊಳ್ವುದು ಚೆಲ್ವ೦
    ನಗುತ + ಅನ್ನ೦ = ನಗುತನ್ನ೦, ಪನ್ನ = ಗರ್ವ, ಗನ್ನ = ಮೋಸ, ಉನ್ನತನ್ + ಆ೦ = ಉನ್ನತನಾ೦)

    • ಅತಿನೂತನವಿಧಿಯಿಂದಂ
      ಕೃತಿ! ನೀನಿತ್ತಿರ್ಪ ಪೂರಣಂ ಸೊಗಸಾಯ್ತಯ್!!
      ಜತನದೆ ಪಾಕಾನುಭವಂ
      ಜತೆಯಾದುದು ಸದ್ಯದೀ ಸಮಸ್ಯೆಯನೆಣಿಸಲ್|

    • ಶ್ರೀಶ ಸರ್,
      ನಿಮ್ಮ ಅನ್ನದ / ನೀರಿನ “ಇಂಗಿತ” ತುಂಬಾ ಸೊಗಸಾಗಿದೆ.

  28. ತಾನೇ ಮಣ್ಣಾಗಿ ದಲಂ
    ತಾನೇ ಪೆಣ್ಣಾಗಿ ಬಣ್ಣಮಾಗಿ ಮನುಜರೊಳ್
    ತಾನೇ ಕಣ್ಣಾಗಿ ವರಂ
    ತಾನೇ ತನ್ನ ಪೊಗಳಾಡಿಕೊಳ್ವುದೆ ಚೆನ್ನಂ
    [ಹಿಂದಿನ ಚಿತ್ರದ ಪ್ರೇರಣೆಯಿಂದ.]

  29. ಈ ಸಮಸ್ಯೆಗೆ ಸುರಿದ ಪರಿಹಾರಗಳು ನಿಜಕ್ಕೂ ಅದ್ಭುತ:

    ಪರಿಹಾರದ ಹೊಚ್ಚಗೆಯಿಂ
    ತ್ವರಿತದಿನೆಮ್ಮೆರ್ದೆ ಬೆಚ್ಚಗಾದುದು ನೀಲಂ
    ಕೊರೆದಿರ್ಪ ಚಳಿಯ ಮೀರ್ದುಂ
    ಸರಸತಿಯುಮೆ ಮೆಚ್ಚದಿರ್ಪಳೇನೀ ಸೊಗಸಂ

    ಜೊತೆಗೆ, ಶ್ರೀಕಾಂತ ಮೂರ್ತಿಯವರನ್ನು ಒರ್ಮೊದಲ ಬಾರಿಗೆ ಪದ್ಯಪಾನಕ್ಕೆ ಕರೆತಂದೆನೆಂದು, ಸಮಸ್ಯೆ, ’ತನ್ನಂ ತಾನೇ ಪೊಗಳಾಡಿಕೊಳ್ವುದೆ ಚೆನ್ನಂ’. 🙂

  30. ತನ್ನಡಿಯ ತನಿಯನೊತ್ತಿಂ
    ತನ್ನುಡಿ ತುಂಬಿಸಿಹ ಹಸಿರ ತನ್ಮುಡಿ ಬೆಡಗಂ
    ತನ್ನುಸಿರ ತುಂಬಿ ಪಾಡಲ್
    ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ ||

    (ಹಸಿರು ತುಂಬಿ ಮೇಲೆ ಹೂಬಿಟ್ಟು ನಲಿವ ಮರದ ಕಲ್ಪನೆಯಲ್ಲಿ )

  31. ಈ ಪರಿ ಪರಿಹೃತಿಯೊಳ್ ಮಿಗೆ
    ಭಾಪೆಂಬಂತೆಲ್ಲ ಗೆಳೆಯರುಂ ಪಾಲ್ಗೊಂಡಾ|
    ಛಾಪಿದು ಮಿಗಿಲೊಪ್ಪುಗುಮಿ-
    ನ್ನೀ ಪಾಟವದಲ್ಲಿ ಸೋಮ-ಉಷೆಯರ್ ದಿಟ್ಟರ್:-)

Leave a Reply to ಗಣೇಶ್ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)