Oct 232012
 

ಈ ಚಿತ್ರಕ್ಕೆ ಸೂಕ್ತವಾದ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ಬರೆಯಿರಿ ::

ದುರ್ಗೆ

  40 Responses to “ಪದ್ಯಸಪ್ತಾಹ – ೪೨; ಚಿತ್ರಕ್ಕೆ ಪದ್ಯ”

  1. ನರರಿಮವಧ್ಯತೆ ಪೊ೦ದುವುದಾಶಿಸುತಾಪರಿ ತಪ್ತತೆ ದರ್ಶಿಸಲುs
    ಸುರರಿಗಭೇದ್ಯನದಾದನು ಹಾ! ಕಮಲಾಸನ ಮೆಚ್ಚಲು ದಾನವನಾ
    ದುರಿತದೆ ಮೂಜಗ ತ್ರಸ್ತತೆಯಪ್ಪಲು ಶಕ್ತಿಯನೊದೆಡೆ ಕ್ರೋಡಿಸುತಾ
    ಸುರರಿಪುಮರ್ದನಕಾರಣದುರ್ಗೆಯೆ ಶಾ೦ತದೊಳೀಪರಿ ತೋರು ಸದಾ

    • typo correction:
      ನರರಿಮವಧ್ಯತೆ ಪೊ೦ದುವುದಾಶಿಸುತಾಪರಿ ತಪ್ತತೆ ದರ್ಶಿಸಲುs
      ಸುರರಿಗಭೇದ್ಯನದಾದನು ಹಾ! ಕಮಲಾಸನ ಮೆಚ್ಚಲು ದಾನವನಾ
      ದುರಿತದೆ ಮೂಜಗ ತ್ರಸ್ತತೆಯಪ್ಪಲು ಶಕ್ತಿಯನೊ೦ದೆಡೆ ಕ್ರೋಡಿಸುತಾ
      ಸುರರಿಪುಮರ್ದನಕಾರಣದುರ್ಗೆಯೆ ಶಾ೦ತದೊಳೀಪರಿ ತೋರು ಸದಾ

      • ಸೋಮ, ಯಾವ ಛಂದಸ್ಸಿದು?

        • hoLLa,

          ayigiri nandini… idyalla adara hAge barede

        • ನಾಲ್ಕು ಮಾತ್ರಾ ಗತಿಯಲ್ಲಿದೆ. ಉದಾಹರಣೆಗೆ ::
          ಬಾಳೆಯ ತೋಟದ ಪಕ್ಕದ ಕಾಡೊಳು ವಾಸಿಸುತಿದ್ದವು ಮಂಗಗಳು

          • ಒಳ್ಳೆಯ ಪ್ರಯತ್ನ ಸೋಮ! ಹೊಸತಾದ ಛಂದಸ್ಸನ್ನು ಸ್ವಯಂಕೌಶಲದಿಂದ ಆರಿಸಿದ ಆರ್ಪೂ ಮೆಚ್ಚುವಂತಿದೆ:-) ಇದು ಹಂಸಗತಿ ಎಂಬ ಸತಾನವರ್ಗದ ವರ್ಣವೃತ್ತ. ಇದರಲ್ಲಿ ಚತುರ್ಮಾತ್ರಾಗತಿಯಿದ್ದೇ ಇದೆ. ಇದನ್ನು ತೆಲುಗರು ಕವಿರಾಜವಿರಾಜಿತ ಎಂದೂ ಕರೆಯುತ್ತಾರೆ. ನಿಮ್ಮ ರಚನೆಯ ವ್ಯಾಕರಣ ಸ್ವಲ್ಪ ಸವರಣೆಗೆ ಅರ್ಹ:-)

  2. ಧವಳೇ, ನಿನ್ನೊಳ್ಪಿನಿಂದಲ್ ಮನಭಯಮಿನಿಸುಂ ತತ್ಕ್ಷಣಂ ಮಾಯವಕ್ಕುಂ
    ಭುವಿಯೊಳ್ ನಿನ್ನಳ್ಕಿನಿಂದಲ್ ದುರುಳಗುಣಗಣಂ ಭೂಗತಂ ಸೇರ್ವುದಿತ್ತಂ
    ತವರೊಳ್ ಬೀಜಾಸುರರ್ಕಳ್ ಬಳೆದಿಹರಳವಂ ಮೀರ್ದು ದುವ್ವಾಳಿಯಿಂದಲ್
    ಬವರಕ್ಕಾಗೆಮ್ಮತಾಯೌ ವಿಜಯದಶಮಿಯೊಳ್ ಗೆಲ್ವಿನಾ ನೆಪ್ಪನಾರ್ದುಂ||
    [ದುವ್ವಾಳಿ = ವೇಗವಾಗಿ, ತೀವ್ರವಾಗಿ, ಆರ್ = ತುಂಬು]

    • ಹೊಳ್ಳ! ಒಳ್ಳೆಯ ಹಳಗನ್ನಡಶೈಲಿ!!! ಜಯ ವಿಜಯೋsಸ್ತು!! ಮಹಾಸ್ರಗ್ಧರಾವೃತ್ತವೂ ಔಚಿತ್ಯಪೂರ್ಣವಾಗಿದೆ. ಆದರೆ ಮನಭಯ ಎಂಬಲ್ಲಿ ವ್ಯಾಕರಣ ತಪ್ಪಿದೆ. ಅದು ಮನೋಭಯ ಎಂದಾಗಬೇಕು(ಮನಸ್ಸು ಸಕಾರಾಂತಶಬ್ದ). ಆಗ ಛಂದಸ್ಸು ಹೋಗುತ್ತದೆ:-) ಹೀಗಾಗಿ ಮತಿಭಯ ಎಂದರೆ ಸಾರಿಯಾದೀತು. ದುರುಳಗುಣ ಎಂಬಲ್ಲಿ ಅರಿಸಮಾಸವಾಗಿದೆ. ಖಳರ ಗುಣಗಣಂ ಎಂದರೆ ಸರಿಯಾದೀತು.

    • ಗಣೇಶರೇ, ಧನ್ಯವಾದಗಳು..ಸರಿಪಡಿಸಿದ ಪದ್ಯ:

      ಧವಳೇ, ನಿನ್ನೊಳ್ಪಿನಿಂದಲ್ ಮತಿಭಯಮಿನಿಸುಂ ತತ್ಕ್ಷಣಂ ಮಾಯವಕ್ಕುಂ
      ಭುವಿಯೊಳ್ ನಿನ್ನಳ್ಕಿನಿಂದಲ್ ಖಳರಗುಣಗಣಂ ಭೂಗತಂ ಸೇರ್ವುದಿತ್ತಂ
      ತವರೊಳ್ ಬೀಜಾಸುರರ್ಕಳ್ ಬಳೆದಿಹರಳವಂ ಮೀರ್ದು ದುವ್ವಾಳಿಯಿಂದಲ್
      ಬವರಕ್ಕಾಗೆಮ್ಮತಾಯೌ ವಿಜಯದಶಮಿಯೊಳ್ ಗೆಲ್ವಿನಾ ನೆಪ್ಪನಾರ್ದುಂ||

  3. ತಿಳಿನಗೆಯ ಹೂಮೊಗದಿ ಕರುಣೆಯನು ಚೆಲ್ಲುತ್ತ
    -ರಳಿದೆರಡು ತಾವರೆಯ ಹೋಲ್ವ ಕಣ್ಣುಗಳು
    ಬಳಿ ಸಾರಿ ನಿಂದವರ ಕೂಗಿ ಹೇಳುತಲಿಹವು
    ಅಳಿದಿರಲಿ ಮನದೊಳಗಿನೆಲ್ಲ ತಾಪಗಳು!

    ಕೊ: ಈ ನಸುನಗೆಯ ದೇವಿಗೆ ದುರ್ಗೆ ಎಂಬ ಹೆಸರೇ ಸರಿಯಿಲ್ಲ ಎನ್ನಿಸುತ್ತಿದ್ದಾಗಲೇ ಕಾಳಿದಾಸನ(ದೆನ್ನಲಾದ) ಕಮಲೇ ಕಮಲೋತ್ಪತ್ತಿಃ ನೆನಪಿಗೆ ಬಂದು ಈ ಚೌಪದಿ.

    • ಹಂಸಾನಂದಿಯವರೆ, ಚೆನ್ನಾಗಿದೆ. ಚಿತ್ರದ ಸತ್ಚಕ್ತಿಯನ್ನು ಚೆನ್ನಾಗಿ ಸೆರೆಹಿಡಿದಿದ್ದೀರಿ. ಸ್ವಲ್ಪ ಲಘುಗಳ ಬಳಕೆ ಜಾಸ್ತಿಯಾದಂತನಿಸುತ್ತದೆ. ಅಳಿದಿರಲಿ – ಬಗ್ಗೆ ಯೋಚಿಸಿದರೆ, ಅಳಿದು + ಇರಲಿ ಎಂದಾಗುತ್ತದೆ. ಅಳಿದಾದ ಮೇಲೆ ಇರುವುದೇ ಬೇಡವೆಂದಾದರೆ, ಅಳಿಯಲೈ ಎಂದು ಬಳಸಬಹುದೇನೋ?

      • ರವೀಂದ್ರ ಅವರೆ, ಧನ್ಯವಾದಗಳು. ಹೌದು, ನೀವು ಹೇಳಿದಂತೆ ಅಳಿಯಲೈ ಅನ್ನುವುದು ಇನ್ನೂ ಚೆನ್ನಾಗಿರುತ್ತೆ.

        • ರವೀಂದ್ರನ ಕವೀಂದ್ರನಾ ಸವರಣೆ ಸ್ತುತಂ ಸರ್ವಥಾ
          ಕವಿತ್ವಪರಿಪಾಟಿಯೊಳ್ ಪೆರರ ಪದ್ಯಮಂ ತಿರ್ದಲಾ|
          ವಿವೇಕಫಲಮಾವಗಂ ನಿಜಸರಸ್ವತೀಸೇವೆಯೂಳ್
          ನವೀನರಸಪೋಷಣಕ್ಕನುವನಾಗಿಕುಂ ಮಾಗಿಕುಂ||

  4. ಕೂಳರ ರಕ್ತದೋಕುಳಿಯ ತಾಳ್ದೊಡೆ, ಭಕ್ತನ ಬಿಂದುವೊಂದನುಂ
    ತಾಳದೆ ಬರ್ಪಳಂ, ಸುಳಿಯದೇ ಥಳುಕೇರ್ದ ಒಣಪ್ರತಿಷ್ಟೆಯೊಳ್,
    ಸೋಲುತ ಬಂದು ನಿಲ್ವಳಿದೊ ಸಜ್ಜನರರ್ಚಿತ ಸೇಸೆಯಾಸೆಯಿಂ
    ಕಾಲದುಕೂಲಮಂ ಸರಿಸಿ ಸತ್ತೆಯ ತೋರ್ಪಳಿಗಾನು ವಂದಿಪೆಂ
    [ಸೇಸೆ = ಮಂತ್ರಾಕ್ಷತೆ]

    • ಮತ್ತೆ ಕೆಲವು ಅರಿಸಮಾಸಗಳು:-) ಒಣಪ್ರತಿಷ್ಠೆ ಎಂಬುದಕ್ಕೆ ಬದಲಾಗಿ ವೃಥಾಪ್ರತಿಷ್ಠೆ ಎಂದೂ ಅರ್ಚಿತಸೇಸೆ…ಇತ್ಯಾದಿಯನ್ನು ಸಜ್ಜನರೀಯುವ ಸೇಸೆಯಾಸೆಯಿಂ ಎಂದೂ ಸವರಿಸಬಹುದು. ಕಡೆಯಲ್ಲಿ ….ಸತ್ತೆಯ ತೋರ್ಪಳನಾಂ ಸಮರ್ಚಿಪೆಂ ಎಂದೂ ತಿದ್ದಿದರೆ ನುಡಿಗೆ ಮತ್ತಷ್ಟು ಹದ ಬಂದೀತು:-)

    • ಹಮ್ಮ್…ಗಾಡಿ ಒಂದು ಹೆಜ್ಜೆ ಮುಂದೆ ಹೋದರೆ, ಮೂರು ಹೆಜ್ಜೆ ಹಿಂದೆ ಬರುತ್ತದೆ. ಸರಿ ಪಡಿಸಿದ್ದೇನೆ.

      ಕೂಳರ ರಕ್ತದೋಕುಳಿಯ ತಾಳ್ದೊಡೆ, ಭಕ್ತನ ಬಿಂದುವೊಂದನುಂ
      ತಾಳದೆ ಬರ್ಪಳಂ, ಸುಳಿಯದೇ ಥಳುಕೇರ್ದ ವೃಥಾಪ್ರತಿಷ್ಟೆಯೊಳ್,
      ಸೋಲುತ ಬಂದು ನಿಲ್ವಳಿದೊ ಸಜ್ಜನರೀಯುವ ಸೇಸೆಯಾಸೆಯಿಂ
      ಕಾಲದುಕೂಲಮಂ ಸರಿಸಿ ಸತ್ತೆಯ ತೋರ್ಪಳನಾಂ ಸಮರ್ಚಿಪೆಂ

  5. ಸಪ್ತಾಹ ಸೂಪರ್ ಸಾರ್…

    • ಬದರೀನಾಥ್ ಅವರಿಗೆ ಸ್ವಾಗತ. 🙂
      ಆದರೆ ನಿಮ್ಮ ಮಾತಿನ ತಾತ್ಪರ್ಯವಾಗಲಿಲ್ಲ…ದಯಮಾಡಿ ವಿವರಿಸುವಿರಾ?

  6. ಎಲ್ಲರರಿವಿನ ಸೂರ್ಯ ಕಾಂತಿಂ
    ಎಲ್ಲರೊಲವಿನ ಚಂದ್ರ ಶಾಂತಿಂ
    ಎಲ್ಲರಿರುವಿನ ಭೂಮಿ ಭಾವನೆ ಭವ್ಯ ಭಾರತಿಯೇ |
    ಎಲ್ಲ ನಲಿವಿನ ನಾದ ರೂಪಿಣಿ
    ಎಲ್ಲ ಚಲುವಿನ ಚಿತ್ತ ಚೇತನಿ
    ಎಲ್ಲ ಗೆಲವಿನ ಚಂಡಿ ದುರ್ಗಾ ಲೋಕ ರಕ್ಷಕಿಯೇ ||

    • ಭಾರತಿಯೇ / ಭಾರತಿನೀಂ , ರಕ್ಷಕಿಯೇ / ರಕ್ಷಕಿನೀಂ

    • ಉಶಾರವರೆ, ಚೆನ್ನಾಗಿದೆ. ನೀವು ಪ್ರಯತ್ನಶೀಲರಾದ್ದರಿಂದ ಒಂದೆರಡು ಅನಿಸಿಕೆಗಳು. ಒಂದೇ ತರಹದ ಆದಿಪ್ರಾಸವನ್ನು ಒಂದೇ ಅರ್ಥದಲ್ಲಿ ಬಳಸಿದರೆ ಸ್ವಾರಸ್ಯಗುಂದುತ್ತದೆ. ಹೊಸಸಾಲಿನಲ್ಲಿ ಬರುವ ಹೊಸತಿನ ಅಂಶ ಕಡಿಮೆಯಾಗುತ್ತದೆ. ಜೊತೆಗೆ, ಎಲ್ಲಾ ಸಾಲುಗಳಲ್ಲಿ ೩ ೪ ಕ್ಕೇ ಸರಿಯಾಗುವಂತೆ ಪದಗಳು ಬಂದರೆ, ಏಕತಾನತೆ ಬರುತ್ತದೆ. ಕಾಂತಿಂ, ಶಾಂತಿಂ ಬಳಕೆ ಅಷ್ಟಾಗಿ ಸರಿಯಲ್ಲ. ಕಾಂತಿಯಂ ಆಗಬೇಕು, ಇಲ್ಲವಾದರೆ ಕಾಂತಿಯೆ ಎಂದು ನಿಲ್ಲಿಸಿಕೊಳ್ಳಬಹುದು.

      • ರವೀಂದ್ರ ಸರ್,
        ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ನನ್ನ ಪದ್ಯಗಳ ಏಕತಾನತೆ ಬಗ್ಗೆ ಚಿಂತೆಇದೆ. ಅದರಿಂದ ಹೊರಬರಲಾಗುತ್ತಿಲ್ಲ. ಆದಿಪ್ರಾಸ ತರಲು ನನ್ನ ಅರಿವಿನ ಮಿತಿ, ಅಧ್ಯಯನದ ಕೊರತೆ ಕಾಡುತ್ತಿದೆ.ಕಲಿಕಾ ಸಾಮಗ್ರಿಗಳ ಸಂಗ್ರಹ ನಡೆದಿದೆ. ಪದ್ಯಪಾನದ ಜೊತೆ ಕಲಿಕೆ ಸಾಗುವ ಭರವಸೆಇದೆ. ನಿಮ್ಮೆಲ್ಲರ ಪ್ರೇರಣೆಗೆ ನಾನು ಚಿರಋಣಿ. (ಕಾಂತಿನಿ / ಕಾಂತಿಣಿ ಎಂದು ಬಳಸಬಹುದೇ?)

    • ಇದೀಗ ನನಗೆ ಹರ್ಷ!! ಧನ್ಯವಾದಗಳು.

      ಈ ಭಾಮಿನಿಯಲ್ಲಿ ಸ್ವಲ್ಪ ವ್ಯಾಕರಣದೋಷಗಳನ್ನು ತಿದ್ದಿದರೆ ಹೀಗೆ ಸಲ್ಲುವುದು:
      ರವೀಂದ್ರ ಹೇಳಿದಂತೆ ಶಾಂತಿಯೆ, ಕಾಂತಿಯೆ ಎಂದೂ ಚಿತ್ತಚೇತನೆ, ದುರ್ಗೆಯೆ ಎಂದೂ ಸವರಿಸಿದರೆ ಸರಿ. ಅವರ ಮತ್ತಿತರ ಸಲಹೆಗಳೂ ಗ್ರಾಹ್ಯ.

      • ಎಲ್ಲ ಮನಸಿನ ಮೌನ ಧಾರಿಣಿ
        ಎಲ್ಲ ಕನಸಿನ ಕಲ್ಪ ಕಾರಣಿ
        ಎಲ್ಲ ನೆನಸಿನ ನೀತ ನಿಲಯಾ ನಿತ್ಯ ನಾಯಿಕೆನೀಂ |
        ಎಲ್ಲ ಹರಿವಿನ ಪೂರ ಪೂರಣಿ
        ಎಲ್ಲ ಹರವಿನ ತೀರ ತಾರಣಿ
        ಎಲ್ಲ ಹರುಷದ ಸಾರ ಸಾಕ್ಷಿಣಿ ಸರ್ವ ಶಂಕರಿನೀಂ ||

  7. ವದನವಿಂದಿನ ನಟೀಮಣಿ ರೂಪಂ
    ಕದಪು ನುಣ್ಪಹುದು ಸಾಧನದಿಂದಂ|
    ಹದನು ತಾನಿಹುದೆ ಗಾತ್ರಕಿರೀಟಂ
    ಮುದದ ನೋಟವದು ನನ್ನೆಡೆಗಿಲ್ಲಂ||
    (ದೃತಪದ)

    • ದೃತಪದ ಅಲ್ಲ, ಅದು ದ್ರುತಪದ:-)

      ಗಹನಗೂಢಗುಣಗಣ್ಯಪದಾರ್ಥಂ
      ವಿಹಿತವಸ್ತುವೆನೆಪದ್ಯವಿಧಾನ-
      ಕ್ಕಹಹ! ಗೇಲಿಯನೆ ಗೋಲಿಯ ಪಾಂಗಿಂ-
      ದಿಹಕೆ ಬೀಳಿಸುವ ಚೋದ್ಯವಿದೇನಯ್???:-)

  8. ದುರುಳ ಶಕ್ತಿಯು ಕೊನೆಯಗೊಂಡಿರೆ
    ಮಿರುಗುತಿರ್ಪುದು ಮಂದಹಾಸವು
    ಕರಿಯ ಮೋಡವ ತರಿದ ನೀಲಾಂಬರದ ಶುಭ್ರತೆಯಿಂ
    ಜರಿತಗೊಂಡಿಹೆ ದುಷ್ಟ ಗುಣದಿಂ
    ಬರಿದುಗೈಯ್ಯುವ ಶಕ್ತಿಗೋಸುಗ
    ನಿರುತ ನಿನ್ನಯ ಮಹಿಮೆಗಳನಾ ಪಾಡುವೆಂ ನಿಜದಿ

    • line 1) ಕೊನೆಯನೈದಿರೆ
      3) ಕರಿಯ ಮೋಡವು ಸರಿದ (idea is fine)
      5) Could not get the import of this line

      • Thanks Prasad for your comments.
        5th line :: ಬರಿದು = empty. ನನ್ನಲ್ಲಿ ತುಂಬಿರುವ ದುಷ್ಟಗುಣಗಳನ್ನು ಬರಿದು ಮಾಡಲು ಶಕ್ತಿ ಕೊಡು ಎಂಬ ಅರ್ಥ.

    • ಚೆನ್ನಾದ ಭಾಮಿನೀಪದ್ಯಂ ಚಿನ್ನಾದೆ ಜಗದಂಬೆಯಂ|
      ಮನ್ನಿಪೊಂದಾನುರೂಪ್ಯಂ ತಾಂ ಚಿನ್ನದಂತಾಯ್ತು ಕಾಂಚನಾ!!

  9. ಚಂಡಿಕೆ ದುರ್ಗೀ ನೀ ಚಾ
    ಮುಂಡೀ ರೂಪಿಣಿಯೆಂಬರು ತಾಯೇ ನಿನ್ನೀ
    ಮಂಡನವೆನಿತು ಮಧುರವೆಲೆ
    ಕಂಡಿದೆ ಚಂದ್ರವದನದೊಳ್ ರವಿಕಾಂತಿಯದೇಂ ||

    • ಶ್ಲಾಘ್ಯಪ್ರಯತ್ನ. ಆದ್ರೆ ಕಂದದ ಸಮಪಾದಗಳಲ್ಲಿ ಮೂರನೆಯ ಗಣವು ಜಗಣವೋ ಅಥವಾ ಸರ್ವಲಘುಗಣವೋ ಆಗಿರಬೇಕು. ಸರ್ವಲಘುವಾಗಿದ್ದಲ್ಲಿ ಮೊದಲ ಅಕ್ಷರದ/ಮಾತ್ರೆಯ ಬಳಿಕ ಯತಿಸ್ಥಾನವಿರಬೇಕಾಗುತ್ತದೆ. ಅಂದರೆ ಪದವು ಮುಗಿದಿರಬೇಕಾಗುತ್ತದೆ ಇದನ್ನರಿಯಲು ಪಾಠಗಳನ್ನೂ ಹತ್ತಾರು ನಿರ್ದುಷ್ಟರೀತಿಯಲ್ಲಿ ರಚಿತವಾದ ಕಂದಗಳನ್ನೂ ಗಮನವಿಟ್ಟು ನೋಡಿರಿ. ಉಳಿದಂತೆ ನಿಮ್ಮ ಪದ್ಯವು ನಿರ್ದುಷ್ಟ.

      • ಚಂಡಿಕೆ ದುರ್ಗೀ ನೀ ಚಾ
        ಮುಂಡೀ ರೂಪಿಣಿಯು ಬಲ್ಲೆ ತಾಯೇ ನಿನ್ನೀ
        ಮಂಡನವೆನಿತು ಮಧುರವೆಲೆ
        ಕಂಡಿದೆ ಚಂದ್ರಮುಖದಲ್ಲೆ ರವಿಕಾಂತಿಯದೇಂ ||

  10. I have concluded the kathana-kavana. I request you to visit http://padyapaana.com/?p=1303 and comment.

  11. ಹಗೆಯ ಹರಿಸಿದ ಬಗೆದು ಬಿಸುಡಿದ
    ಬಗೆಯ ಕಾಣಿರೆ ಬಿಗುವಿನಿಂದಲಿ
    ನಗೆಯ ಸೂಸುವ ಮುಗುಳು ಮಾಯೆಯ ಮೌನ ಮುದ್ರೆಯನು |
    ಜಗವ ಕಾಯುವ ಲೋಕ ನಾಯಕಿ
    ಸೊಗವ ಕಾಣಿರೆ ಸರಳ ಸರಸಿಯ
    ಮೊಗವ ಮುಸುಕಿದ ಮುಗುದ ಮನಸಿನ ಮಾತೃ ಮಮತೆಯನು ||

    (ಆದಿಪ್ರಾಸ ಹೊಂದಿದ ಭರದಲ್ಲಿ ಬಂದ ಮತ್ತೊಂದು ಸುಕು-ಮಾರಿ ಬಂಧ !)

  12. ನಾನಾಭಕ್ತರುಮಳ್ತಿಯಿಂ ತೊಡಿಸಿದಾ ಸ್ತೋತ್ರಾವಲೀಮೌಲಿನೀ!
    ತಾನಾರೆಂಬ ವಿಚಾರಮಾರ್ಗಪರಮೇ ಪ್ರಶ್ನಾವತಂಸೇ ಶುಭೇ!
    ನಾನಾಕರ್ಮದ ಚಿತ್ರವಕ್ರಗತಿಯಂ ಬೋಧಿರ್ಪ ಕಾನ್ತಾಲಕೇ |
    ಮೌನೀಡ್ಯೇ! ಪರಿಪಾಲಿಸೌ ತ್ರಿಜಗವಂ ಕಾರುಣ್ಯಸಾರಾಂಬಕೇ ||

  13. ಕಣ್ಣಿಂದುಂ ದಯೆ ತೋರುತಂ ಕದಪಮೇಲ್ ಕಾರುಂಗುರುಳ್ ಸೋರುತಂ |
    ಮಣ್ಣಿಂದೇಳ್ದುದ ಕೂರುತಂ ಮಣಿಗಳಿಂಮಸ್ತಂ ಪೊದಳ್ವೇರುತಂ |
    ಕಣ್ಣಿಂಗದದಳಾ ಋತಂ ಗಮನದೊಳ್ ತಂದಳ್ತಿಯಿಂದಾರುತಂ |
    ಪಣ್ಣಿಂ ನೀಂ ಮಣಿಹಂ ದ್ರುತಂ ಬದುಕುವಿರ್ ಪಾಡೆಲ್ಲಮಂ ಮೀರುತಂ ||

    ಕಾರುಂಗುರುಳ್- ಕಪ್ಪಡರಿದ ಕುದಲು; ಕೂರು- ಪ್ರೀತಿಸು, ರಕ್ಷಿಸು; ಪೊದಳ್ವು- ಚೆಲ್ವು, ಕಾಂತಿ;
    ಕಣ್ಣಿಂಗದದಳ್- ದೃಷ್ಟಿಗೆ ಎಟುಕದವಳು ಮತ್ತೆ ಕಣ್ಣಿಗೆ ಚೆಲ್ವಾದವಳು ಎಂಬ ಎರಡರ್ಥಗಳೂ ಬರುವುದು
    ಅಳ್ತಿ- ಪ್ರೀತಿ, ಭಕ್ತಿ
    ಆರು- ತುಂಬು
    ಪಣ್ಣಿಂ- ಮಾಡಿರಿ

    • ಮೂರನೆಯ ಪಾದದಲ್ಲಿ “ಕಣ್ಣಿಂಗಂದದಳ್” ಎಂದಿರಬೇಕು. ಅಚ್ಚು ತಪ್ಪಾಗಿ ಬಿದ್ದಿದೆ

  14. ಕದಪೇಂ ಕಣ್ಣೇಂ ಕುರುಳೇಂ
    ಮುದವೊಗೆವ ಮೊಗಮೇಂ ತಾಯೆ ಮಂಗಳೆ ನಿನ್ನೀ |
    ವದನಮಂ ಕೆಡೆದು ಬೊಮ್ಮಂ
    ಪದವಂ ಪಡೆದನೆನೆ ದಿಟಂ ವಿಶ್ವಕರ್ಮನಾ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)