Mar 032013
 

ನಲವಿಂ ತೋರಿಪೆ ತೆಂಗ ಚಿತ್ರವಿದೆಕೋ ತೋಯಕ್ಕೆ ಬಾಗಿರ್ಪುದಂ
ಬಲದಿಂ ವರ್ಣಿಪಲಾಗುಮೇ ಪ್ರಕೃತಿಯೊಳ್ ವೈಚಿತ್ರ್ಯದೀ ಲಾಸ್ಯಮಂ

ಈ ಚಿತ್ರದಿಂದ ಮೂಡುವ ನಿಮ್ಮ ಕಲ್ಪನೆಗಳಿಗೆ ಛಂದೋಬದ್ಧ ಕವಿತೆಯ ರೂಪ ನೀಡಿರಿ. ನಿಮ್ಮ ಆಯ್ಕೆಯ ಛಂದಸ್ಸು ಬಳಸಿರಿ.

ತೆಂಗು-ನೀರು

ತೆಂಗು-ನೀರು

  83 Responses to “ಪದ್ಯಸಪ್ತಾಹ – ೬೧: ಚಿತ್ರಕ್ಕೆ ಪದ್ಯ”

 1. ಉಡುಪಿಯ ಅವಧಾನದಲ್ಲಿ ಅಳವಡಿಸಲಾದ ಚಿತ್ರಕ್ಕೆ-ಪದ್ಯ ವಿಭಾಗದಲ್ಲಿ, ಈ ಚಿತ್ರಕ್ಕೆ ಶತಾವಧಾನಿಗಳ ಉತ್ತರ ::
  ಜಗದೊಳ್ ಸನ್ನಿದಮಾದುದಲ್ತೆ ಬಗೆಯಲ್ ಬೇರಿಂದೆ ನೀರಂ ಸದಾ
  ಮೊಗೆದೀಂಟಿರ್ಪುದು ಸಸ್ಯಸಂತತಿಯಿದಂ ಸುಳ್ಳಾಗಿಪೆಂಬಂತೆವೋಲ್
  ಸೊಗದಿಂದಾರ್ಜವ ವಾರ್ತೆಯಂ ಬಿಸುಟು ವಕ್ರೌವ್ಯಾಕೃತಿಪ್ರೀತಿಯಿಂ
  ವೊಗುವಾ ಸತ್ಕವಿಯಂತೆ ತೆಂಗಿನ ಮರಂ ಬಾಗಿರ್ಪುದೈ ನೀರಿನೊಳ್

  • ಅಂದಿನ ತಮ್ಮ ಪರಿಹಾರವೂ ಸೊಗಸಾಗಿತ್ತು. ಅದನ್ನು ಹಾಕಿ ರಾಮ್.

 2. ಬಾಗುತೆದ್ದಿದೆ ತೆಂಗುತಾನೆಯೆ ತಾಗಿ ನೀರನು ಮುಟ್ಟಲೂ
  ನೀಗಿ ಬೇಗೆಯ ನೀಗಲೀಗಲೆ ತುಂಬಿ ನೀರನು ಕಟ್ಟಲೂ
  ತೂಗಿ ಸೋಗೆಯು ಸೋನೆಯಾಗಿದೆ ಸಾಗಿ ಸೊಂಪನೆ ಸೂಸಿದೇ
  ಮಾಗಿ ಮಾತದು ಮೌನವಾಗಿದೆ ಮೌನ ಮಾತನೆ ಮೀಟಿದೇ ॥

  • ವೃತ್ತದಲ್ಲಿ ಪದ್ಯರಚನೆ ಹಳೆಗನ್ನಡದಲ್ಲಿ ಸೊಗಸಲ್ಲವೇ? ಹಳೆಗನ್ನಡ ಬರಲಿಲ್ಲವೆಂಬ ಬೇಸರವಿದೆ. ಮತ್ತೆ ಪ್ರಯತ್ನಿಸುತ್ತೇನೆ, ದಯವಿಟ್ಟು ಸಹಾಯಮಾಡಿ.

 3. ಮಲೆಗಳ ಕರುಗೋಡಿಂ ಚಿಮ್ಮಿಧುಮ್ಮಿಕ್ಕುತುಂ ಮಂ
  ಜುಲಜುಳುಜುಳು ನಾದಂ ಗೆಯ್ಯುತಾರ್ತರ್ಗೆ ತಣ್ಣೀರ್
  ಹಲಕೆಲವರಿಗನ್ನಂ ನೀಳ್ದು ತೇಗಿರ್ಪೆಯೌ ಬಾ
  ನೆಳಲೊಳಿನಿತು ತಂಗಾಯಾಸಮಂ ನೀಗಿ ಸಾಗೌ

  • ಎಲ್ಲರೂ ಆ ಮರದ ಬಗೆಯೇ ಯೋಚಿಸುತ್ತಿರುವಾದ, ಅದರ ಕೆಳಗೆ ಹರಿವ ನೀರಿಗೆ ಋಣಸಂದಾಯ ಮಾಡಿದ ’ಯೋಪಾಂ ಪುಷ್ಪಂ ವೇದ’ ನೀವೇ. ಪುಷ್ಪವಾನ್ ಭವತು.

 4. ಜೊತೆಗಾರರ್ ಸರಿಭೂಮಿಯಂಚವರೆಗಂ| ನೂಕಿರ್ದೊಡೇಂ ನಿನ್ನನುಂ
  ಖತಿಗೊಳ್ಳರ್ದೆಲೆ ಸೈಸಿಕೊಳ್ಳುತವರಂ| ನೀ ನಿಂದುಮಾ ಸೀಮದೊಳ್|
  ಕಿತವಂ ಗೈವರಿವರ್ ಬುಡಂ ನಲುಗಿಪರ್| ನಾ ಜಾಗರಂ ತಾಳುಗುಂ
  ನತನಾಗಿರ್ಪೆಯ ಯೋಚಿಸಿಂತು ಪದಮಂ| ನೀ ನೋಡಿ ಕಾದಿರ್ಪೆಯೇಂ||

 5. ಕೆಲವು ಮಕ್ಕಳು ಹಿರಿಯರೊಡನೆ ಮಾತಾಡುವುದು ಹೀಗೆ ಅಲ್ಲವೆ?

  ಜಗದೊಳ್ ನೇರಮೆ ಚ೦ದ೦
  ಮಗನೇ ಡೊ೦ಕಿರ್ಪುದೇಕೆ? ಕೇಳಲ್, ಪೋರ೦
  ಬಿಗುಮಾನದಿ೦ದೆ ಪೇಳ್ದ೦
  ಜಗಮೇ ಡೊ೦ಕಿರ್ಪುದಲ್ತೆ ನೇರಮದಾ೦ ದಲ್

  • ಎರಡನೆಯ ಪಾದದ ಜಗಣದಲ್ಲಿ ಟೈಪೋ, ನೇ~ನೀ, ‘?’ ಪಲ್ಲಟ: ‘ಮಗ ನೀ ಡೊಂಕಿರ್ಪುದೇಕೆ? ಕೇಳಲ್ ಪೋರಂ’ ಎಂದರೆ ಇನ್ನೂ ನಿರ್ದಿಷ್ಟತೆ ಇರುತ್ತದೆ. ಪದ್ಯ ಚೆನ್ನಾಗಿದೆ. ಇದು ಮಗನಿಗೆ ಅನ್ವಯವಾದಂತೆ ಕುಡುಕ-ನನ್ಮಗನಿಗೂ ಅನ್ವಯವಾಗುತ್ತದೆ.

   • ಧನ್ಯವಾದ ಪ್ರಸಾದು,

    typo ಸರಿಪಡಿಸಿದ್ದೇನೆ.

    ‘ಮಗನೇ’ ಎ೦ಬ ಸ೦ಭೋದನೆ ಮಾಡಬಹುದೆ ಹಳಗನ್ನಡದಲ್ಲಿ, ಅ೦ದರೆ ಮಗ೦ + ಏ = ಮಗನೇ?

    ಇದರಿ೦ದ ಇನ್ನೊ೦ದು ಸ೦ದೇಹವೂ ಬ೦ತು. ಜಗಮೇ ಎ೦ಬ ಪ್ರಯೋಗದಲ್ಲಿ ನಾನು ಜಗವೇ ಎ೦ಬ ಹೊಸಗನ್ನಡದ ಪ್ರಯೋಗದ ರೀತಿ ಭಾವಬರುತ್ತದೆ ಹಳಗನ್ನಡದಲ್ಲಿ ಎ೦ದು ತಿಳಿದು ಬಳಸಿದ್ದೇನೆ. ಇದರ ಸಾಧುತ್ವದ ಬಗೆಗೂ ನನಗೆ ಶ೦ಕೆಯಾಗಿದೆ.
    ಸ೦ದೇಹ ನಿವಾರಣೆಯಾಗಬೇಕು…

 6. ವಕ್ರತೆಯೇ ಚ೦ದ-

  ನಗೆಯ೦ ತೋರುತೆ ಯುವಕ೦
  “ಜಗದಾ ವಕ್ರತೆಯೆತೋರ್ಗುಮಿದರೊಳೆನಲ್”, ಕೇಳ್
  “ಸೊಗಸಯ್ ವಕ್ರತೆ ಕಲ್ಪನೆ-
  ಮಿಗೆ ಕಾವ್ಯಸ್ಫುರಿಪುದಲ್ತೆ ಸತ್ಕವಿಮನದೊಳ್!”

  • ಒಳ್ಳೆಯ ಕಂದ. “ಜಗತಿಯ ವಕ್ರತೆ……” ಮತ್ತು “ಕಾವ್ಯಂ ಸ್ಫುರಿಪುದಲ್ತೆ……” ಎಂಬ ಸವರಣೆಗಳು ಮತ್ತೂ ಹಿತವಿತ್ತಾವು.

 7. ತೀರದಲ್ಲಿನ ಮರದ ಬೇರದು
  ನೀರ ಸೆಳೆತಕೆ ಸೋತು ಬಾಗಿದೆ
  ಮಾರಕವು ಜೀವಕ್ಕೆ ತುಸು ತಪ್ಪಿದರು ತೋಲನವು
  ಮೀರಿ ಭೀತಿಯ ತಾನು ಬೆಳೆಯುತ
  ಸಾರಿ ತೋರಿದೆ ಬಾಳ ನೀತಿಯ
  ಹಾರಿ ಬಾನಿಗೆ ಮಿತಿಯ ಹೇರದೆ ತನ್ನ ಸಾಧನೆಗೆ

  ಹಳೆಗನ್ನಡದಲ್ಲಿ ಪ್ರಭುತ್ವವಿಲ್ಲದ ಕಾರಣ ಹೊಸಗನ್ನಡದಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ.
  ತಪ್ಪಿಗಳಿದ್ದಲ್ಲಿ ದಯವಿಟ್ಟು ಮಾರ್ಗದರ್ಶನ ನೀಡಿ.

  • ವಸ್ತು ಮತ್ತು ಓಟ ಚೆನ್ನಾಗಿರುವುದರಿಂದ ಬೇರೆ ವಿಮರ್ಶೆ ಅನಗತ್ಯ.

  • ನಿಮ್ಮ ಪದ್ಯ ಸರಿಯಾಗಿಯೇ ಇರುವುದರಿಂದ, ಇದು ತಿದ್ದುಗೆ ಅಲ್ಲ. ನೀವು ಕೇಳಿರುವುದರಿಂದ, ನನಗೆ ತಿಳಿದಂತೆ ಹಳಗನ್ನಡವಾಗಿಸಿದ್ದೇನೆ:

   ತೀರದಲ್ಲಿಹ ಮರದ ಬೇರದು
   ನೀರ ಸೆಳೆತದೆ ಸೋತು ಬಾಗಿರೆ
   ಮಾರಕಂ ತಪ್ಪಿದೊಡೆಯುಂ ತಾಂ ತುಸುವು ತೋಲನವು|
   ಮೀರಿ ಭೀತಿಯ ಬೆಳೆಯುತೆಂದುಂ
   ಸಾರುತಿಹುದೈ ಬಾಳ ನೀತಿಯ
   ಪಾರಿ ಬಾನಿಗೆ ಮಿತಿಯ ಹೇರದೆ ತನ್ನ ಸಾಧನೆಗಂ||

 8. ಮನುಜರ್ ತೇಲುತೆ ಕೈಯ ನೀರಿನೊಳಗಂ ತಾವದ್ದುವೊಲ್ ಮಾಳ್ಪಳೇಂ ?
  ತನ ಪಾದಂಗಳ ತೋಯ್ವ ತಾಯ ನಲವಂ ಪೂರ್ಣಾಂಗಕುಂ ಬೇಳ್ವಳೇಂ ?
  ಮನಮಾಯ್ತೇ ಫಲ ನೀಡಿ ಬಾಗಿ ನಮಿಸಲ್ ಮೈಯಿತ್ತು ಪೋಷಿಪ್ಪಳಂ ?
  ತನು ಸೌಂದರ್ಯದ ಪೆಂಪ ಬಿಂಬದೊಳಗಂ ಕಾಂಬಲ್ಕೆ ಮೇಣುತ್ಸುಕಳ್ ?

  • Ram,
   In an earlier post, Sri RG had told me that ತನ is not = ತನ್ನ. It should be ನಿಜಪಾದಂಗಳ.

   ತನು = ತಂಪು. ಹಾಗಾಗಿ ಎರಡನೆಯ ಪಾದವನ್ನು ಹೀಗೆ ಸವರಬಹುದೇನೋ:
   ತನು ಪಾದಂಗಳ ಗೈದ ತಾಯ್ಗೆ ನಲವಿಂ ಪೂರ್ಣಾಂಗದಿಂ ಬೀಳ್ವಳೇಂ?

   • ಪ್ರಸಾದ್,
    ನೀವೆಂದಂತೆ ಬದಲಿಸಿದರೆ, ಅರ್ಥ ಸಂಪೂರ್ಣ ಬೇರೆಯಾಗುತ್ತದೆ – not the intended meaning 🙂

 9. ರಾಮ್,
  ನಿಮ್ಮ ಪ್ರಸ್ತಾವನಾಪದ್ಯದ ಎರಡನೆಯ ಸಾಲಿನಲ್ಲಿ ‘ಬಲದಿಂ’ ಬದಲು ಬೇರೆ ಪದವನ್ನು ಬಳಸಬಹುದಿತ್ತು. ಆ ಪದಕ್ಕೆ ನ್ಯಾಯಮಾಡಬೇಕೆಂದರೆ, ಹೀಗೆಂತೋ ಹೇಳಬೇಕಾಗುತ್ತದೆ: ಬಲದಿಂದೆತ್ತೆ ಸಮರ್ಥರೈ, ಗುರುತರಂ|ಕಾವ್ಯಾವಲೀಲಾರತರ್

 10. ಹೀರಿದೆ ನೀರಂ ಬೇರಿಂ
  ತೂರಿದೆ ತಾನಾರ ನೀರಲಿ ನಲಿಯೆ ಬಾಗಿಂ
  ನಾರಿಯೆ ಕೇಳಾ ತರುವಂ
  ತೀರದಿ ತೋಯಲ್ಕೆ ತಂದಿತೇನೀ ತಿರುವಂ ॥

 11. ಸೂರಂ ಸೋಲುತ್ತಲಿರ್ಪಂ ಚುರುಚುರುಬಿಸಿಲಿಂ ಸೋಕಿ ನನ್ನೀಶಿರಸ್ಸಂ
  ಸಾರಂ ಬೀರುತ್ತಪಾರಂ ಸಲೆ ಪಡೆದಪುದೈ ಸಂತತಂ ಸಾರ್ಥಕತ್ವಂ
  ಬೇರಂ ಕೂರುತ್ತೆ ಮೀರಂ ಬಿಡದೆ ತೊಳೆದು ತಾಂ ಪೆತ್ತುದೈ ಪುಣ್ಯಮೆಂದೇ
  ನೀರೊಳ್ ನೋಡುತ್ತೆ ತನ್ನಂ ನೆನೆವುದನುದಿನಂ ನೆಟ್ಟನಾ ನಾರಿಕೇಳಂ

  ಸೂರ-ಸೂಫ್ಯ
  ಅಪಾರ-ಭೂಮಿ
  ಮೀರ-ಸಮುದ್ರ
  —-

  2nd

  ಸೂರನೀವಪ್ರಕಾಶಕ್ಕಂ ಸಾರಮನೀವ ಭೂಮಿಗಂ
  ನೀರಿಗಂ ನಿತ್ಯಮಾ ನಾಳಿಕೇರಂ ಬಾಗಿ ನಮಿಪ್ಪುದೈ

  • ತುಂಬ ಸೊಗಸಾದ ಪದ್ಯಶಿಲ್ಪ ಮತ್ತು ಕಲ್ಪನೆ. ಅಭಿನಂದನೆಗಳು.
   ಆದರೆ ಎರಡನೆಯ ಪದ್ಯವಾದ ಅನುಷ್ಟುಪ್ ಶ್ಲೋಕದಲ್ಲಿ ತುಸು ಸವರಣೆ ಬೇಕು. ಏಕೆಂದರೆ ಎರಡನೆಯ ಸಾಲಿನಲ್ಲಿ ಈ ಛಂದಸ್ಸಿನ ಸಾಮಾನ್ಯಲಕ್ಷಣವು ಪಾಲಿತವಾಗಿದ್ದರೂ ಛಂದೋಗತಿಯು ಎಡವಿದೆ. ಇದು ಸಾರಮಂ ನೀಳ್ವ ಭೂಮಿಗಂ ಎಂದಾದರೆ ಯುಕ್ತತರ.

   • ಧನ್ಯವಾದ ಗಣೇಶರೆ. ತಾವು ಸೂಚಿಸಿರುವ ಸವರಣೆಯಲ್ಲಿ “ನೀಳ್ವ”- ಈ ಪದಕ್ಕೆ ಅರ್ಥವೇನು? “ನೀಡು- ನೀಳ್ವ” ಈ ರೀತಿ ಸಂಭವಿಸಿದ್ದೆ?

 12. ಹರಿವ ನೀರನು ನೋಡಿ ತೆಂಗಿನ
  ಮರವು ಜೀಕಿತು ಗರಿಯ ಬಿಚ್ಚುತ
  ತರುತಲೋಟದ ಕೇಳಿಯಂದವ ಮುಟ್ಟು ನೀನೆನುತಾ
  ಬರಿಯ ಕಣ್ಣಿಗೆ ಕಂಡ ಸತ್ಯವು
  ಪರಮ ಸುಳ್ಳಿನ ಮುಗ್ಧ ಮೋರೆಯು
  ಸರಿದ ಬೇರಿನ ಬುಡವು ಕೊಚ್ಚಿಯೆ ಹೋಗೆ ಭಯವಿಹುದು

  • ಆ ಮರ ಎಷ್ಟು precarious ಅಗಿ ನಿಂತಿದೆ ಎಂಬುದರ ಸುಂದರ ವರ್ಣನೆ. ’ಮೋರೆಯು’ಗಿಂತ ಇನ್ನೂ ಸೂಕ್ತವಾದ ಪದ ಯೋಚಿಸಿ. ಉಳಿದಂತೆ ತುಂಬ ಚೆನ್ನಾಗಿದೆ.

   • “ಮಾಯೆಯು” ಸರಿಹೊಂದೀತೆ?

    • ಸಹಾಯಕ್ಕಾಗಿ ಧನ್ಯವಾದಗಳು ಉಷಾ ಅವರೇ.

     ನಾನು ‘ಮುಗ್ಧ ನೋಟವು’ ಸರಿಹೊಂದುತ್ತದೆಯೇ ಎಂದು ಆಲೋಚಿಸುತ್ತಿದ್ದೆ..

    • yes

     • ಹಾಗೆಯೇ ತಿದ್ದಿಕೊಳ್ಳುತ್ತೇನೆ.ಧನ್ಯವಾದ ಪ್ರಸಾದು ಅವರೇ.

  • 1) ಪೂರ್ವಾರ್ಧದ ಕೊನೆಯ ಪದ – ’ನೀನೆನುತಾ’ ತಪ್ಪು. ಹೇಗೂ ಕೊನೆಯ ಅಕ್ಷರ ಗುರ್ವಕ್ಷರವೇ ಆಗುತ್ತದೆ. ’ನೀನೆನುತ’ ಎಂದು ಕಾಗುಣಿತಶುದ್ಧವಾಗಿಯೇ ಬರೆಯಿರಿ.
   2) ಉಷಾರವರು ಹೇಳಿದಂತೆ ’ಮಾಯೆಯು’ ಸೂಕ್ತವಾಗಿದೆ.
   3) ಕೊನೆಯ ಪಾದವನ್ನು ’ಸರಿಯೆ ಬೇರಿನ ಬುಡವು ಕೊಚ್ಚಿಯೆ ಪೋಪ ಭಯವಿಹುದು’ ಎಂದು ಸವರಿದರೆ ಮತ್ತೂ ಸ್ಪಷ್ಟತೆಯಿರುತ್ತದೆ.

 13. ಧನ್ಯವಾದಗಳು ಪ್ರಸಾದುರವರೇ.ಸೂಕ್ತ ಪದಕ್ಕೆ ಪ್ರಯತ್ನಿಸುತ್ತೇನೆ.

  • ಪದ್ಯಪಾನಕ್ಕೆ ಸ್ವಾಗತ. ತಮ್ಮ ಪರಿಚಯ?

   • ನಾನು ಮೂಲತ: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನವಳು. ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ವಾಸವಿದ್ದೇನೆ. ಆಗೊಮ್ಮೆ ಈಗೊಮ್ಮೆ ಪುಸ್ತಕ ಓದುವ ಹವ್ಯಾಸವಿದೆ.ತೀರ ಇತ್ತೀಚೆಗೆ ನನ್ನ ತಂಗಿ ಅದಿತಿಯಿಂದ ಪ್ರೇರಿತಳಾಗಿ ಕವನ, ಬರವಣಿಗೆಯನ್ನು ಪ್ರಾರಂಭಿಸಿದ್ದೇನೆ. ಈ ವಿಷಯದಲ್ಲಿ ಇನ್ನೂ ವಿದ್ಯಾರ್ಥಿ. ಎಲ್ಲರ ಪ್ರೋತ್ಸಾಹದಿಂದ ಕವನಿಸುವುದಕ್ಕೆ ಮತ್ತಷ್ಟು ಉಲ್ಲಸಿತಳಾಗಿ ಮುಂದುವರಿಸಬಯಸಿದ್ದೇನೆ.

    ತಮ್ಮ ಬಗ್ಗೆ ಕೊಂಚ ತಿಳಿಯಬಹುದೇ?:)

   • ಗಂಡಸು. 54. ನಿವೃತ್ತ ಕೆನರಾ ಬ್ಯಾಂಕ್ ಉದ್ಯೋಗಿ. ಸದ್ಯ http://www.frlht.org ಯಲ್ಲಿ ಉದ್ಯೋಗ. ಹವ್ಯಾಸ ಅನುವಾದ (ಕನ್ನಡಆಂಗ್ಲ< ಹಿಂದಿ).

    • ನನ್ನ ಪದ್ಯವನ್ನು ತಿದ್ದಿ, ತಮ್ಮ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು

 14. commodity earns more value when exported than when sold locally.
  ತರಳ||
  ನೆಲವನಾಶ್ರಯಿಸಿರ್ಪ ಬಾಳ್ವೆಯು ನಾಡ ಸೀಮೆಗೆ ಸೀಮಿತಂ
  ಜಲವನಾಶ್ರಯಿಸಿರ್ಪ ಯಾನವಪಾರ ಸೀಮೆಗಳಂವರಂ|
  ತಲದೊಳಾರ್ಜಿಪ ಮೌಲ್ಯಕಿಂತಲು ಮೇಲು ತಾನೆನುತೆನ್ನುತುಂ
  ವಲಸೆವೋಗಲು ಕಾಯಿ ಬಾಗಿಹ ವೃಕ್ಷದಾಶ್ರಯ ಪೊಂದಿತೈ||

  • ಪೊಂದಿತೇಂ? would be better

  • ‘ತಾನೆನುತೆನ್ನುತುಂ’ ದ್ವಿರುಕ್ತಿ-ದ್ವಿರುಕ್ತಿಯಾಯಿತಲ್ಲ? ಅಲ್ಲದೆ ಕಾಯಿಗೆ ಯಾವೊಂದು ವೃಕ್ಷವನ್ನು ಆಶ್ರಯಕ್ಕಾಗಿ ಅರಿಸಿಕೊಳ್ಳುವ ಸ್ವಾತಂತ್ರ್ಯವಿಲ್ಲವಲ್ಲ? ಬಾಗಿದ ಮರ ಕಾಯ್ತರೆ ಅದು ಆ ಕಾಯಿಯ ಅದೃಷ್ಟ. ಇಷ್ಟಕ್ಕೂ ಆಶ್ರಯ ಪೊಂದಿದ ಕಾಯಿ ಮರದ ಮೇಲೇರಿದ್ದಾದರೂ ಹೇಗೆ? ‘ತಾಲಸ್ಯ ಪತನಮ್’, ‘ಪತತಾ ಮಹಾಫಲೇನ’ ಮುಂತಾದ ಪ್ರಮಾಣವಾಕ್ಯಗಳೆಲ್ಲ ಊರ್ಧ್ವಗಮನಕ್ಕೆ ವಿರುಧ್ದ್ಧವಾಗಿಯೇ ಇವೆ. ಹಾಗೆ ದಡಕ್ಕೆ ಬಂದು (ನೆಲವನಾಶ್ರಯಿಸಿ) ಬಾಗಿದ ಮರವನ್ನು ಆಶ್ರಯಿಸಿದ್ದಾದರೂ ಏಕೆ? ನೇರವಾಗಿ ಜಲವನ್ನೇ ಆಶ್ರಯಿಸಬಹುದಿತ್ತಲ್ಲ?

   • ಆಹಾ! ಎಂತಪ್ಪ ಮಹಾ-
    ಮೋಹಕಮಿಥ್ಯಾಗಭೀರತಾಭರಿತಕಥಾ-
    ವಾಹಂ!! ಪ್ರಸಾದುವಾಕ್ಯವಿ-
    ಗಾಹನಮೀ ಪರಿಯೊಳೇಂ ತರಮೆ ಜೀವೆಂ ಪೇಳ್!!

    • ಅವರು ಕಾಯಿಯನ್ನು ನೀರಿಗೆ ಹಾಕಹೊರಟಿದ್ದಾರೆ, ನಾನು ಇಷ್ಟಾದರೂ ಮಾಡದಿದ್ದರೆ ಹೇಗೆ? 😀

    • ಬಾಗಿರುವ ಮರದಲ್ಲಿರುವ ಕಾಯಿಯ ಸಂಖ್ಯೆಯ ಸಾವಿರಪಟ್ಟು ಕಾಯಿಗಳನ್ನು ನೀರೊಳಗೆ ಹಾಕದಿರುವ ನಾನು, ಈ ಕೆಲವನ್ನು ಮಾತ್ರ ಹಾಕಹೊರಟಿದ್ದೇನೆಯೆ? ಉಳ್ದ್ ಕಾಯ್ಗುಳ್ನ್ ಆಯ್ಕತಿರೋವಾಗ, ಅವೊಂದೆಳ್ಡು ನೀರಾಕ್ ಬುದ್ರೆ ನಾನೇನ್ ಮಾಡ್ಲಿ ಬುದ್ದಿ?

  • 1) ‘ತಾನೆನುತೆನ್ನುತುಂ’ ದ್ವಿರುಕ್ತಿ-ದ್ವಿರುಕ್ತಿಯಾಯಿತಲ್ಲ? – ಲಕ್ಷ್ಮೀಶನನ್ನು (‘ನುಡಿ ನುಡಿ ಮತ್ತೆ ನುಡಿಯುತ್ತಲಿಂತೆಂದನು’) ಟೋನ್ ಡೌನ್ ಮಾಡಿದ್ದೇನೆ.
   2) ಕಾಯಿ ಮರದ ಮೇಲೇರಿದ್ದಾದರೂ ಹೇಗೆ? – ಅಣುಅಣುವಾಗಿ ಬೇರಿನ ಮೂಲಕ.
   3) ಉಳಿದೆಲ್ಲ ಆಕ್ಷೇಪಗಳು – 2 ನೋಡಿ

   • ಅಣುಅಣುವಾಗಿ ಬೇರಿನ ಮೂಲಕ – ಬೇರಿಗೆ ಬಂದದ್ದು ನೇರವಾಗಿ ನೀರಿಗೆ ಹೋಗದೆ ಮರವೇರಿದ್ದಾದರೂ ಏಕೆ? 😉

 15. ವಸಂತತಿಲಕ||
  ದಾಪಿಟ್ಟು ಬಾನಕಡೆಗಂ ಬೆಳೆದಿರ್ದೊಡೇಂ ನೀಂ
  ನೇಪಥ್ಯಮಂ ಬಿಡದೆ ಸೇರ್ದಪೆಯಿಂದೊಯೆಂದೊ|
  ಪೈಪೋಟಿಯೇಂ ನಗಕದಂತೆ ಚಿರಾಯುವೆಂದುಂ (ಪಕ್ಕದಲ್ಲೇ ಇದೆ ಬೆಟ್ಟ)
  ಸೈಪಿಂದೆ ಬಾಳ್ವೆವೆನುವರ್ ನತರಾಗಿ ಯಾರೋ (ಒಬ್ಬಿಬ್ಬರು)||

 16. ಆ ಬಾಗಿದ ಮರಕ್ಕೆ ಒಂದು ಬಳ್ಳಿ ತನ್ನ ಭಾರವನ್ನು ಹೇರಿದೆ:

  ಆಶ್ರಯಿಸು ತಪ್ಪಲ್ತು ದಾತರಿಹರಿಲ್ಲಲ್ಲಿ
  ಪ್ರಶ್ರಮದಿ ಮುಂದೊಮ್ಮೆ ದಾತನಾಗು|
  ಆಶ್ರಯಿಪ ಮುನ್ನ ದಾತನ ತಾಳಿಕೆಯನರಿಯು
  ವಾ ಶ್ರದ್ಧೆಯಳಿಯೆ ಮುಳುಗುವಿರೀರ್ವರುಂ||

 17. ಒಳನೀರನೊತ್ತಿನೀ ನೆಳೆನೀರ ಹೊತ್ತೆತ್ತಿ
  ಹೊಳೆಯ ಹರಿಸಿಹೆಯೆ ಬಾಗಿ ಬದಿಗೊತ್ತೀ ।
  ತಿಳಿಯೆ ನಿನ್ನನೆನೀನೆ ಕಳೆದುಕೊಂಡಾ ಪರಿಯ
  ಬಳಿಯ ನೀರನೆ ಕೇಳೆ ನಾರಿಕೇಳೇ ॥

  ( “The best way to “FIND” yourself is to “LOSE” yourself – in the service of others.” ಎಂಬ ನುಡಿಗಳನ್ನು ತೆಂಗಿನ ಮರಕ್ಕೆ ಅನ್ವಯಿಸಿ ಬರೆದದ್ದು.)

  • ಒಳ್ಳೆಯ ಕಲ್ಪನೆ. ಆದರೆ ಮತ್ತೂ ಸ್ವಲ್ಪ ಸ್ಪಷ್ಟವಾಗುವಂತೆ ಬರೆದರೆ ಒಳಿತು. ತಮ್ಮ ಬರೆಹಗಳಲ್ಲಿ ನಿರಂತರವಾಗಿ ಕಾಣುವುದು ನಿಮಗಿರುವ ಶಬ್ದಾಲಂಕಾರಪ್ರೀತಿ. ಇದು ಒಳ್ಳೆಯ ಗುಣವೇ. ಪ್ರಕೃತ ರಚನೆಯಲ್ಲಿಯೂ ಅದು ಸೊಗಸಾಗಿ ಮೂಡಿದೆ. ಆದರೆ ಈ ಮುನ್ನ ಹಲವು ಬಾರಿ ಶಬ್ದಾಲಂಕಾರರಾಸಿಕ್ಯವು ಅರ್ಥಕ್ಕೆ ತೊಡಕನ್ನು ತರುತ್ತಿತ್ತು:-) ಇಲ್ಲಿಯೂ ಅದು ಸ್ವಲ್ಪ ಚೇಷ್ಟೆ ಮಾಡಿದಂತಿದೆ:-)
   ಈ ಪದ್ಯದ ಎರಡನೆಯ ಪಾದದಲ್ಲಿ ಛಂದೋಗತಿ ತಪ್ಪಿದೆ. ದಯವಿಟ್ಟು ಸವರಿಸಿರಿ.

   • ಧನ್ಯವಾದಗಳು ಗಣೇಶ್ ಸರ್,
    ನನ್ನ ಪದ್ಯರಚನೆಯಲ್ಲಿನ ದೋಷಗಳ ಅರಿವಾಗುತ್ತಿದೆ. ನನಗೆ ಅಲಂಕಾರಶಾಸ್ತ್ರದ ನಿಜವಾದ ಅರಿವಿಲ್ಲ. (ನಿಮ್ಮ ಪುಸ್ತಕ ಓದುತ್ತಿದ್ದೇನೆ.ಅರ್ಥಮಾಡಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ.ಪದ್ಯ ಪಾಠ ಬೇಕಿದೆ.) ಕೆಲವು ದ್ವಂದ್ವಗಳಿವೆ. ಪದ್ಯ ರಚನೆಯಲ್ಲಿ, ಬಳಸುವ ವಸ್ತು / ವಿಷಯದಬಗ್ಗೆ ಹೆಚ್ಚು ಗಮನಕೊಡಬೇಕೋ? ರಚನಾಕ್ರಮ / ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕೋ? ದಯವಿಟ್ಟು ತಿಳಿಸಿಕೊಡಿ. ಪದ್ಯ ಸ್ವಲ್ಪ ಸರಿಪಡಿಸಿದ್ದೇನೆ, ಸರಿಯಿದೆಯೇ?
    ಒಳನೀರನೆತ್ತಿನೀನೆಳೆನೀರ ತಂದಿರುವೆ
    ಹೊಳೆಯ ತುಂಬಲು ಬಾಗಿ ದಣಿಯುತಿಹೆಯಾ?
    ತಿಳಿಯೆ ನಿನ್ನನೆನೀನೆ ಕಳೆದುಕೊಂಡಾ ಪರಿಯ
    ಬಳಿಯ ನೀರನೆ ಕೇಳೆ ನಾರಿಕೇಳೇ ॥

 18. It is a geological fact that the hills/mountains hold the earth together.

  ವನಸ್ಪತಿ ಬೆಟ್ಟಕ್ಕೆ ಹೇಳುತ್ತಿದೆ:

  ನೆಲವ ಹಿಡಿದಿಡೆ ನೀನು ನಾಮೇನು ಹಿಂದಲ್ಲ
  ನಲುಗದಿಹ ಕಲ್ಲಾಗಿಸಿಹೆ ನೆಲವನು|
  ಬಲುಹದೆಮ್ಮದು ಕೇಳು ಹಿಡಿದಿಟ್ಟಿಹೆವು ಮಣ್ಣ
  ಶಿಲೆಯನಾಶ್ರಯಿಸದೆಲೆ, ಬೇರ ನರದಿಂ||

  ಕಲ್ಲ ಪಾಯದ ಮೇಲೆ ನೀನಿರ್ದೊಡೇನಹುದು
  ತಲ್ಲಣದೆ ಸೋದರರ್ವೆರೆಸಿರ್ಪಿರೈ|*
  ನಿಲ್ಲಲೇಂ ಹುಡಿಮಣ್ಣ ಮೇಲೆ ನಾಂ ನೋಡೆಂದು –
  ಮಲ್ಲಲ್ಲೆ ಬಿಡಿಬಿಡಿಯೆ ಪಸರಿಸಿಹೆವು ||

  *ಬೆಟ್ಟದಲ್ಲಿ ಹಲವಾರು ಶಿಲೆಗಳು ಸೇರಿಕೊಂಡಿವೆ. ಬಿಡಿಯಾಗಿ ನಿಂತರೆ ಉರುಳಿಬಿಡುತ್ತೇವೆಂಬ ಭಯದಿಂದ ಒಗ್ಗಟ್ಟಾಗಿ ಎತ್ತರಕ್ಕೆ ನಿಂದಿವೆ ಮುಳುಗಲು ಆಸ್ಪದವೇ ಇರದಂತೆ ಎಂಬ ಕಲ್ಪನೆ

 19. ಎಲ್ಲರ ಪದ್ಯಗಳನ್ನು ಪರಿಶೀಲಿಸುತ್ತ, ಸವರಣಗಳಿಗೂ ರಣಗಳಿಗೂ ಅನುರಣಿಸುತ್ತ ಬಲುಸುಟಿಯಾಗಿ ಚಟುವಟಿಕೆಯನ್ನು ಕಯ್ಕೊಂಡ ಪ್ರಸಾದು ಅವರಿಗೆ ಹಾರ್ದಿಕಧನ್ಯವಾದ:

  ಏಕಾಂಗಕ್ರಮದಿಂದೆ ಪದ್ಯರಚನಾಧೌರೇಯತಾಭಾರಮಂ
  ಪ್ರಾಕಾರಾಂತರುದಾರಧೀರಪೃತನಾನಾಥಂ ಜಲಕ್ಕೆಂದು ನಿ-
  ರ್ಭೀಕಂ ನುರ್ಗುತೆ ವೈರಿವರ್ಗದೆರ್ದೆಯಂ ನುರ್ಗಾಗಿಪಂತೆ ಸ್ಫುಟಾ-
  ಲೋಕಂ ಸಂದಿರೆ ಸರ್ವರೊಳ್ ಗೆಲಿದಿರಯ್ ಪದ್ಯಪ್ರಯಾಣಾಧ್ವದೊಳ್ !

  • ತಿಳಿಹಾಸ್ಯ೦ ಬೆಸೆಯುತ್ತೆ ಪದ್ಯರಚನಾಸಾಮರ್ಥ್ಯಮ೦ ಪ್ರಶ್ನಿಸು-
   ತ್ತೆಳಿಯುತ್ತನ್ಯರನಳ್ಕಿಸುತ್ತೆ ಸತತ೦ ರ೦ಧ್ರ೦ಗಳ೦ ತೋರ್ದಪ೦
   ಗೆಳೆಯರ್ಗು೦ಗಡ ಹಾದಿರ೦ಪನಿದು ಕೊಳ್ ಪೇಳುತ್ತರ೦ ಟೀಕೆಗೆ೦
   ದುಳಿಸಲ್ ಸಾರಸಭಾವಮ೦ ಹಗಲಿರುಳ್ ತಾಣರ್ಗದುಲ್ಲಾಸಮಯ್

  • ಮಾ,
   ನಿಮ್ಮ ಪದ್ಯದ ಒಟ್ಟು ಭಾವ ತಟ್ಟಿತು. ತುಂಬ ಕೃತಜ್ಞನಾಗಿದ್ದೇನೆ.
   ೧) ಏಕಾಂಗಕ್ರಮ ಎಂದರೇನು?
   ೨) ಎರಡನೆಯ ಪಾದವನ್ನು ತುಸು ವಿವರಿಸಬೇಕು (ಜಲಕ್?)
   ೩) ವೈರಿವರ್ಗದೆರ್ದೆಯಂ – ಮುಂದಿನ ಶಬ್ದದಲ್ಲಿರುವ ಅರ್ಕವೊತ್ತನ್ನು (ನುರ್ಗಾಗಿಪಂತೆ) accentuate ಮಾಡುವ ಸಲುವಾಗಿ ಬೇಕೆಂದೇ ಮಾಡಿದ ಶಿ.ದ್ವಿ. ಬೋಧಪ್ರದವಾಗಿದೆ.

  • ಸೋಮ,

   ೧) ತುಂಬ ಧನ್ಯವಾದಗಳು ಮಿತ್ರ.

   ೨) “ಇದು ಕೊಳ್ ಪೇಳುತ್ತರ೦” – direct speech ಅಲ್ಲವೆ?

   ೩) ಹದದೊಳ್ ಗಟ್ಟಿಗ ನೀನುಮೇಂ ಕಡಿಮೆಯೇಂ ಇಟ್ಟಿರ್ಪೆಯೈ ಬತ್ತಿಯಂ
   ಮೊದಲೊಳ್ ಟಂಕಿಸಿದಕ್ಕರಂ ಮರೆಸುಗೇಂ ’ಟೈಪೋ’ವದೆಂದೆನ್ನುತಂ|
   I know. You meant it to be ತು. Not ತಿ 😉

 20. ನೋಟವಾತನ ತಮ್ಮ ದಿಟ್ಟಿಗೆ
  ಕೂಟಗೊಳಿಸುತ ನಾಚಿ ಬಾಗಿವೆ
  ದಾಟಿ ಗುಂಪನು ಕಲ್ಪತರುಗಳು ಬೇರೆಯಾಗುತಲಿ
  ಮೀಟಬಲ್ಲೆವು ರವಿಯ ಹೃದಯವ
  ಸಾಟಿಯಾರಿಹರೆಂದು ಚೆಲುವಿಗೆ
  ಚೂಟಿತನವನು ಮೆಚ್ಚಿ ನಕ್ಕಿವೆ ಜಲದ ಮುಕುರದೊಳು

 21. ಸಾಮಾನ್ಯವಾಗಿ ತನ್ನ ಚೆಲುವಿಗೆ ತಾನೇ ಮರುಳಾಗುವುದು ಹೆಣ್ಣು. ಈಗ ಗಂಡಸರ ಸರದಿಯೇ (ನೋಟವಾತನ)?

  ನೋಟವಾತನ, ಕಲ್ಪತರುಗಳು, ಮೀಟಬಲ್ಲೆವು ಹಾಗೂ ನಕ್ಕಿವೆ: ವಚನವ್ಯತ್ಯಾಸವಿದೆ. ಎಲ್ಲವನ್ನೂ ಏಕವಚನ ಮಾಡಿ (ಕಲ್ಪತರುವದು, ಮೀಟಬಲ್ಲೆನು, ನಕ್ಕಿದೆ). ಬಾಗಿದ ಮರವೊಂದನ್ನು ಕುರಿತು ಹೇಳಿದ್ದು ಇತರ ಬಾಗುಮರಗಳಿಗೂ ಅನ್ವಿತವಾಗುತ್ತದೆ.

  ಕಲ್ಪನೆ ಚೆನ್ನಾಗಿದೆ.

  • ಬಾಗಿವೆ ~ ಬಾಗಿದೆ also

   • ಪ್ರಸಾದರೇ,
    ನಾನು ಹೇಳುತ್ತಿರುವುದು ಪೊದೆಯಿಂದಾಚೆ ಬಂದು ರವಿಯ ನೋಟದೊಂದಿಗೆ ತಮ್ಮ ನೋಟವ ಮಿಲಾಯಿಸುತ್ತಿರುವ ೨
    ತೆಂಗಿನ ಮರಗಳ ಬಗ್ಗೆ. ನೋಟವಾತನ = ಆತನ ನೋಟವ = ರವಿಯ ನೋಟವ

  • ರವಿ = ಒಬ್ಬನೇ – ಏಕ ವಚನ
   ಕಲ್ಪತರುಗಳು = ಅನೇಕ ಬಾಗಿದ ತೆಂಗಿನ ಮರಗಳು
   ನೋಟವಾತನ = ಆತನ ನೋಟವ
   ಮೀಟಬಲ್ಲೆವು, ನಕ್ಕಿವೆ => ಕಲ್ಪತರುಗಳಿಗೆ ಸಂಬಂಧ ಪಟ್ಟಿದ್ದು.

   ವಚನ ವ್ಯತ್ಯಾಸ ಕಾಣುವುದಿಲ್ಲವಲ್ಲ !

  • ಓಹ್. Sorry, I withdraw my objection. ’ನೋಡುಗರ (ತಮ್ಮ) ದೃಷ್ಟಿ ತಗುಲಿ ಮರ ನಾಚಿ ಬಾಗಿದೆ’ ಎಂದು ಗ್ರಹಿಸಿ ಹಾಗೆ ಹೇಳಿದೆ.

 22. पुष्टा नु सूर्यकिरणैरनिलैस्तथाद्भिः
  मृत्स्नैस्तथा हि ललिताहमिदम् न चित्रम् |
  का सा जले वसति चारुतरा ममेति
  स्वस्यैव बिम्बमवलोक्य जले शशङ्के |

  ನೀರು ಮಣ್ಣು ಸೂರ್ಯನ ಕಿರಣಗಳಿಂದ ಪೋಷಣೆ ಪಡೆದ ತಾನು ಸುಂದರಿಯಾಗಿರುವುದು ವಿಚಿತ್ರವೇನಲ್ಲ ಆದರೆ ಯಾರವಳು ಬರೀ ನೀರಿನಲ್ಲಿದ್ದುರೂ ಅಷ್ಟೊಂದು ಸೌಂದರ್ಯವತಿಯಾಗಿದ್ದಾಳೆ ಎಂದು ವೃಕ್ಷಸುಂದರಿಯು ನೀರಿನಲ್ಲಿರುವ ತನ್ನ ಪ್ರತಿಬಿಂಬವನ್ನೇ ನೋಡುತ್ತಾ ಶಂಕಿಸಿದಳೆಂಬ ಭಾವ.

 23. ಕಲ್ಪನೆಯು ತುಂಬ ಅಭಿರಾಮವಾಗಿದೆ. ಇದು ದಿಟವಾಗಿ ಮನೋಹರಕಾವ್ಯ. ಆದರೆ ತರುಸುಂದರಿಯೆಂಬ ರೂಪಕವು ಸ್ಪಷ್ಟವಾಗಿ ವ್ಯಾಚ್ಯಗೊಳ್ಳಬೇಕು. ಇಲ್ಲವಾದಲ್ಲಿ ಇದಕ್ಕೆ ಮುಕ್ತಕತ್ವವು ಲಭಿಸದು. ಜೊತೆಗೆ ಮೃತ್ಸ್ನಾ ಎಂಬುದು ಸ್ತ್ರೀಲಿಂಗಶಬ್ದ. ಇದು ನಿಮ್ಮ ಪದ್ಯದಲ್ಲಿ ಪುಂ(ನಪುಂ)ಲಿಂಗವಾಗಿದೆ. ದಯಮಾಡಿ ಸವರಿಸಿಕೊಳ್ಳಿರಿ. ಉಳಿದಂತೆ ಶೈಲಿ ಸೊಗಸಾಗಿದೆ; ಒಳ್ಳೆಯ ಪದಪಾಕವಿದೆ.

  • the future commerce shall be carried on upon terms of equality and reciprocity between the two communities parties to the trade, for the benefit of both.questo mi pare molto poco razzista, caro Miguel, in teoria. la pratica fu assai differente, allora; oggi che lo è meno i benefici si vedonociao

 24. ತಿಂಗಳ ಪಾಸನು ಹೊಂದಿದ ಹುಡುಗರು ನಗರದ ಬಸ್ಸಿನೊಳು
  ಹೆಂಗೆಳೆಯರ ಕುಡಿನೋಟವ ಬಯಸುತ ಸಾಹಸ ಮಾಡುವರು,
  ಮಂಗಗಳಂದದಿ ಬಾಗಿಲ ಹೊರಗಡೆ ಬಾಗುವರೆಂದಿಲ್ಲಿ
  ತೆಂಗಿನ ಮರಗಳು ಹುಡುಗರನಣಕಿಸಿ ತೂಗುತ ನಗುತಿಹವೇ?

  on the lines of ಚಂದಿರನೇತಕೆ ಓಡುವನಮ್ಮ? ಮೋಡಕೆ ಬೆದರಿಹನೇ?

  • ಸುಧೀರ್ ಸರ್,
   ನೀವು ಪದ್ಯಪಾನಕ್ಕೆ “ತಿಂಗಳ” ಪಾಸ್ ಹುಡುಗನೇ? ತಿಂಗಳಿಗೊಮ್ಮೆ ಪೂರ್ಣ ಚಂದಿರನಂತೆ ಬಂದು ನಗಿಸಿ ಹೋಗುವಿರಲ್ಲ !

  • ಹಂಗಿಸಬೇಕಿಂತಾ ಪೋರರೊಳಾ
   ಚಂಗಲ ತಪ್ಪಿಸಲಾಗೀಗಳ್|
   ಹಂಗಿಸಿ ನಂತರ ನೆಟ್ಟಗೆ ನಿಲ್ಲದೆ
   ತೊಂಗುತ ತೆಂಗದದೇಕಿರ್ಕುಂ||
   ——
   ಬಿದ್ದೊಡೆ ಪೋರನದೃಷ್ಟಂ ಚೆನ್ನಿರ
   ಲೆದ್ದು ಕೊಡವಿಕೊಂಡೈದುವನು|
   ಬಿದ್ದೊಡೆ ತೆಂಗದು ಮುಳುಗುತೆ ನೀರಿಂ
   ದೆದ್ದೇ ಬಾರದೆ! ನಗೆ ಪೋರನ್||

  • Sudhir, is this the era of aunties?
   ಸೊಬಗಿನಸೋನೆ|| ವೃಷಭsಪ್ರಾಸಕೆ* ಪದ್ಯsಮಂ ಪೊಂದಿsಪಾತುರದೆs
   ವಿಷಮsದs ಶಬ್ದsವs ಬಳಸsಲೇಕೈ|
   ಸುಷಮsಬಾಲೆಯರsನsವಗಣಿsಸಿs ಬಾಲsರಿಂ
   ಕಷಗೈಸsಲೇಕಯ್ಯs ಹೆಂಗsಳೆಯರಂ||

   *ಮೊದಲ ಅಕ್ಷರ ಅನುನಾಸಿಕವಾಗಿರುವುದು

   • ಸೊಬಗಿನ ಸೋನೆ ವರ್ಣ (ಮಟ್ಟು) ಎನ್ನುವ ಛಂದಃಪ್ರಕಾರದ ಮೂಲರೂಪ “ಸರ್ವಂ ವಿಷ್ಣುಮಯಂ.” ಬೆಸ ಪಾದಗಳಲ್ಲಿ 4 ವಿಷ್ಣು ಗಣಗಳು. ಸರಿ ಪಾದಗಳಲ್ಲಿ 3 ವಿಷ್ಣು ಗಣಗಳು. ಒಟ್ಟು ನಾಲ್ಕು ಪಾದಗಳು. 1 ಮತ್ತು ಮೂರನೆಯ ಪಾದಗಳಲ್ಲಿ ಕ್ವಚಿತ್ತಾಗಿ ವಿಷ್ಣುವಿಗೆ ಪರ್ಯಾಯವಾಗಿ ಇತರ ಗಣಗಳು ಬರಬಹುದು. 2 ಮತ್ತು 4ನೆಯ ಪಾದಗಳಲ್ಲಿ ಈ ಬದಲಾವಣೆಯ ಸೌಕರ್ಯ ಇಲ್ಲ ಎಂದೇ ಹೇಳಬೇಕು (ಇದಕ್ಕೆ ಅಪವಾದಗಳು ಬಹುವಿರಳ). ಬಿಡಿಪದ್ಯಗಳನ್ನು ಬರೆಯೋವಾಗ ಆದಷ್ಟು ಮೂಲಕ್ಕೆ ಹೊಂದಿಸೋದುತ್ತಮ.

    ನಿಮ್ಮ ಪದ್ಯದ ಸರಿಸಂಖ್ಯೆಯ ಪಾದಗಳು ದಾರಿತಪ್ಪಿವೆಯಲ್ಲ. 2ನೆಯದರಲ್ಲಿ ಕೊನೆಯದು ರುದ್ರಗಣವಾಗಿದೆ. 4ನೆಯದರಲ್ಲಂತೂ ಒಂದು ಗಣವೇ ಹೆಚ್ಚಾಗಿದೆ. ತಿದ್ದಿದರೆ ಒಳಿತು ಪ್ರಸಾದು.

    ಹಾಗೆಯೆ ನನ್ನದಿನ್ನೊಂದು ಅಭಿಪ್ರಾಯ. “ಪದ್ಯಮನು” ಅಷ್ಟು ಸರಿಯಾಗಿ ಕಾಣ್ಸೊಲ್ಲ. ಪದ್ಯಮಂ ಹಾಕಬಹುದು, ಇಲ್ಲವೆ ಪದ್ಯವನು ಹಾಕಬಹುದು. ಎರಡೂ ಛಂದಸ್ಸಿಗೆ ಹೊಂದಿಕೊಳ್ಳುತ್ತವೆ. ಇವುಗಳ ಹೈಬ್ರಿಡ್ ಬೇಡ.

    • ಮೂರ್ತಿಗಳೆ,
     ನಾನು ಸಮಪಾದಗಳಲ್ಲಿ ವಿಷ್ಣು-ವಿಷ್ಣು-ಬ್ರಹ್ಮ-ಬ್ರಹ್ಮ ಮಾಡಿದ್ದೇನೆ.
     ಪದ್ಯಮಂ ಎಂದು ತಿದ್ದಿದ್ದೇನೆ. ಧನ್ಯವಾದಗಳು.

     • ಅದನ್ನೇ ಹೇಳ್ತಿರೋದು, ಸಮಪಾದಗಳಲ್ಲಿ ತಪ್ಪಿದೆ ಅಂತ. ಮೂರು ವಿಷ್ಣುಗಣಗಳಿರಬೇಕಾದ ಕಡೆ, ನಾಲ್ಕು ಗಣಗಳನ್ನು ಹಾಕಿಕೊಂಡು ಅವಲ್ಲಿ ಎರಡನ್ನು ಬ್ರಹ್ಮ ಮಾಡಿದರೆ ಹೇಗಾಗುತ್ತೆ?

   • ಪ್ರಸಾದ್, ನೀವು ಹೇಳುವುದು ಒಂದು ರೀತಿ ಸರಿಯಾಗೇ ಇದೆ. ಆದರೆ, ಇಷ್ಟು ಸಣ್ಣ ವಿಷಯಕ್ಕೆ ಹಾದಿರಂಪವೇ? 🙂
    ಈ ’context’ನಲ್ಲಿ,
    ಹೆಣ್ಣು + ಗೆಳೆಯರು = ಹೆಂಗೆಳೆಯರು (girl friends) ಅಂತ ತೊಗೋಬೇಕು.
    ಹುಡುಗಿಗೆ ಹುಡುಗಿ friend ಆದರೆ, ಗೆಳತಿ.
    ಹುಡುಗನಿಗೆ ಹುಡುಗ friend ಆದರೆ, ಗೆಳೆಯ.
    ಹುಡುಗರಿಗೆ ಹುಡುಗಿಯರು friend ಆದರೆ ಹೆಂಗೆಳೆಯರು 🙂
    p.s. ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗದೆ ಇರುವುದೇ ಮುಖ್ಯ 🙂
    p.s.2. Incidentally, ಈಚೆಗೆ girl friend ಅಂದರೆ ವಿಶೇಷ ಅರ್ಥ ಬರುವುದರಿಂದ ನನ್ನ ಗೆಳತಿಯರಿಗೆ ನಾನು englishನಲ್ಲಿ female-friends ಎಂದು ಕರೆಯುತ್ತೇನೆ.

    • ಹೆಂಗೆಳೆಯರು ಎನ್ನುವುದನ್ನು ಹೆಂಗಳೆಯರು ಎಂದು ಓದಿಕೊಂಡು ನಾನೇನೋ ಅನಾವಶ್ಯಕವಾಗಿ ರಂಪ ಮಾಡಿದೆ ನಿಜ.
     ಆದರೆ ಗೆಳೆಯ (xಗೆಳತಿ) ಮೂಲತಃ ಪುಲ್ಲಿಂಗವಲ್ಲವೆ? ಹೆಣ್ಗೆಳತಿ ಎಂಬ ಪ್ರಯೋಗವಿಲ್ಲದಿದ್ದರೂ, ಹೆಣ್+ಗೆಳೆಯ ಎಂದರೆ ಹುಡುಗನ ಹೆಣ್-friend ಎಂದು ಹೇಗಾಗುತ್ತದೆ? ಇಲ್ಲಿ ’ಹುಡುಗನ’ ಎನ್ನುವುದನ್ನು ಸೂಚಿಸುವುದೇನಿದೆ?
     ಆಂಗ್ಲದ friend ಶಬ್ದ ಲಿಂಗರಹಿತವಾದದ್ದು. Girl friend, boy friend ಎಂದು ಸ್ಪಷ್ಟೀಕರಿಸಬೇಕಾಗುತ್ತದೆ. ಹಾಗಾಗಿ ನೀವೂ ಆ ಪದವನ್ನು ಅಯಾಚಿತವಾಗಿ ಬಳಸಬೇಕಾಯಿತು. ನಮ್ಮಲ್ಲಿ ಸ್ಪಷ್ಟವಾಗಿ ಗೆಳೆಯ/ಸಖ, ಗೆಳತಿ/ಸಖಿ ಎಂದು ನಿರ್ದೇಶಿಸಬೇಕಲ್ಲವೆ?
     p.s 1: ನಿಮ್ಮ ನಿರುಕ್ತದಲ್ಲಿ ಹುಡುಗಿಯ ಹುಡುಗ-friend ಎಂಬುದಕ್ಕೆ (ಗಂಡ್ಗೆಳತಿ ಎಂಬಂಥ) ಏನಾದರೂ ಶಬ್ದವಿದೆಯೆ?
     p.s 2: girl friend ಬದಲು female friend ಎಂದದ್ದರಿಂದ ಸ್ವಲ್ಪ ಮರ್ಯಾದೆ ಉಳಿಯಿತು ಸರಿ. ಆದರೆ ಆ ಉತ್ತರಪದವನ್ನು ಬಹುವಚನ ಮಾಡಿದ್ದರ ಕುರಿತು ಮುಂದೊಮ್ಮೆ ಸಂದರ್ಭ ಬಂದಾಗ ಚರ್ಚಿಸೋಣ.

   • prasAdu sir, this is the era of ANTs ! (Automatic Negative Thougths)

  • What for pass?
   ತ್ರಿ|| ಕ್ಲಾಸಿsಗೆs ನಿಯತsದಿಂ ನೀಸಲ್ಕsದಲ್ಲsದೆs
   ಪಾಸsದುs ಪರವಾನಗಿಯೇನೈ| ಸುರಧೀರs
   ಪೋಸನ್ನುs ನೀಡಲ್ ಪೆಣ್ಗಳ್ಗಂ||

   • ಪ್ರಸಾದ್ರೆ- ತ್ರಿಪದಿಯ ಮೊದಲನೆಯ ಪಾದದಲ್ಲಿ ಒಳಪ್ರಾಸದ ನಿಯಮವುಂಟು- ಎಂದರೆ, ಮೂರನೆಯ ಗಣದಲ್ಲೂ ದ್ವಿತೀಯಾಕ್ಷರಪ್ರಾಸ ಇಡಬೇಕು. ಹಿಂದೆಯೂ ನೀವು ಇದನ್ನು ಬಿಟ್ಟಿದ್ದಾಗ ನಾನು ಪರೋಕ್ಷವಾಗಿ ತಿಳಿಸಿದ್ದೆ.

   • ಅಯ್ಯಯ್ಯೋ ತಪ್ಪಿದೆ. ಸರಿಪಡಿಸಿದ್ದೇನೆ.

 25. ನಾವೀನ್ಯಜೀವನೋ ನೂನಂ ಕವಿತಾಸವಿತಾ ಧ್ರುವಮ್ |
  ಸುಧೀರಃ ಕಲಯನ್ನಾಸ್ತೇ ವಿಧಿಯೋಷಾವಿಲಾಸನಮ್ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)