Mar 172013
 

ಎಲ್ಲರೂ ಕೂಡಿ ಸೀತಾ ಕಲ್ಯಾಣದ ಕಥೆಯನ್ನು ಬೆಳೆಸೋಣವೇ?

ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕರೆದುಕೊಂಡು ಮಿಥಿಲೆಯೆಡೆಗೆ ಬರುತ್ತಿದ್ದಾರೆ. ಅಹಲ್ಯಾ ಪ್ರಕರಣ ಮುಗಿದಿದೆ. ಇಲ್ಲಿಂದ ಶುರುಮಾಡಿ ಸೀತಾ-ರಾಮರ ಕಲ್ಯಾಣದವರೆವಿಗೂ ಕಥೆಯನ್ನು ಬೆಳೆಸೋಣ. ನಿಧಾನವಾಗಿ ಅನೇಕ ವರ್ಣನೆಗಳಿಗೆ ಅವಕಾಶವಿಟ್ಟುಕೊಂಡು ಬರೆಯೋಣ – ಅಂದರೆ ನಾಗಲೋಟದಲ್ಲಿ ಕಥೆಯನ್ನು ಓಡಿಸುವುದು ಬೇಡ.

ಯಾವ ಛಂದಸ್ಸು ಬೇಕಾದರೂ ಆಯ್ದುಕೊಳ್ಳಬಹುದು. ವರ್ಣನೆಗಳಿಗೆ ಅನೇಕ ಅವಕಾಶಗಳಿವೆ. ಉದಾರವಾಗಿ ಬಳಸಿಕೊಳ್ಳಿ. 🙂

  134 Responses to “ಪದ್ಯಸಪ್ತಾಹ – ೬೩: ಸಾಮೂಹಿಕ ಪದ್ಯ ಕಥಾ ರಚನೆ”

 1. ಪದ್ಯಪಾನದ ಮಿತ್್ರಿಗೆ ಸ್ವಾಗತವನ್ನು ಕೋರುತ್ತ, ಮೊದಲ ಪದ್ಯ

  ರಾಮಲಕ್ಷ್ಮಣಸಮಾಶ್ರಿತಯಜ್ಞ-
  ಸ್ತೋಮಗಳ್ ನಡೆದುದ೦ ಭಳರೆ೦ದಾ
  ಪ್ರೇಮಮೂರ್ತಿ ಮುನಿಯಾಪ್ತತೆ ಪೊ೦ದ-
  ಲ್ಕಾಮಹರ್ಷಿ ದಯೆ ತೋರ್ದವರ್ಗೆ೦ದ೦

  please continue 🙂

 2. ಪೃಥ್ವೀವೃತ್ತ.
  ವಿನೂತನವಿತಾನಮಂ ವಸುಮತೀಸುತೋದ್ವಾಹಕಂ
  ಅನಾಹತಮಿದಂತೆವೋಲ್ ವಯನಿಸಲ್ಕೆ ಕಾದಿರ್ಪರೀ |
  ಮನೋವದಭಿನಂದಿತರ್ ಕವನತಂತುವಾಯರ್ಕಳಾ
  ಸನಾತನಮಹೋತ್ಸವಕ್ಕಭಿನವಾಂಕುರಾರೋಪಕಂ ||
  ಕಿಂಚಿದರ್ಥವಿವರಣೆ.
  ವಿತಾನ=ಚಪ್ಪರ, ಹಂದರ. ವಸುಮತೀಸುತಾ=ಸೀತೆ. ಅನಾಹತ=ಹೊಸವಸ್ತ್ರ. ವಯನ=ನೇಯುವಿಕೆ. ಮನೋವದಭಿನಂದಿತರ್= ಸಹೃದಯರಮೆಚ್ಚುಗೆಗೆ ಪಾತ್ರರಾದ ಕವಿಗಳು. ತಂತುವಾಯ=ಜೇಡ+ನೇಕಾರ. ಅತಿ ಪ್ರಾಚೀನವಾದ ಸೀತಾವಿವಾಹೋತ್ಸವಕ್ಕೆ ಹೊಸ ಅಂಕುರಾರೋಪಣಕ್ಕೆ ಪದ್ಯಪಾನದ ಮಿತ್ರರು ಕಾತರಗೊಂಡಿದ್ದಾರೆ ಎಂಬ ಭಾವ.

 3. Continued from first comment to take the story forward…
  ಪೋಗುವ೦ ಮಿಥಿಲೆಗ೦ ಗಡಮೀಗಳ್
  ಯಾಗಿಯಪ್ಪ ಜನಕಾಧಿಪನಿರ್ಪ೦
  ಲೋಗರಿ೦ಗವನನುಗ್ರಹಮಲ್ತೇ
  ತಾಗುಗಯ್ಯಲಿಹಮ೦ ದೃತದಿ೦ದಲ್

  please continue 🙂

 4. ಮಿಥಿಲಾಪುರಿಯಂ ಸಾರಲ್
  ಮಿಥುನಭ್ರಾತರುಂ ಬುಧಂ|
  ಪೃಥಿವೀಪನೆದುರ್ಗೊಂಡಂ
  ಮಾಥವಂ ಜಾನಕೀಪಿತಂ||
  (ಬುಧಂ = ವಿಶ್ವಾಮಿತ್ರ. ಮಾಥವ = patron)

  • ಇಲ್ಲಿ ಮೊದಲ ಮೂರು ಪಾದಗಳು ಸಿಂಹಪ್ರಾಸದಲ್ಲಿದ್ದು, ಕೊನೆಯದು ಗಜದಲ್ಲಿದೆ. ಅನುಷ್ಟುಪ್‍ನಲ್ಲಿ ಇದು ಸಾಧುವೆ?

   • ಪರವಾಗಿಲ್ಲ. ಅನುಷ್ಟುಪ್ಪಿನಲ್ಲಿದನ್ನು ಒಪ್ಪಬಹುದು:-)

 5. ಶತಾನಂದಂ ಮೊದಲ್ಸಾರ್ದಂ
  ಸ್ತುತಿಮಂತ್ರವ ಪೇಳುತುಂ|
  ವ್ರತಾಹಾರ್ಯವ ಪೊತ್ತುಂ ತಾವ್
  ನತರಾದರು ಋತ್ವಿಜರ್||
  (ಶತಾನಂದ = ಮಿಥಿಲಾ ರಾಜಪುರೋಹಿತ. ವ್ರತಾಹಾರ್ಯ > ಪೂಜಾಸಾಮಗ್ರಿಗಳು)

 6. ಮಿಥಿಲಾಪುರಿಯನ್ನು ಪ್ರವೇಶಿಸಲಿರುವ ರಾಮ-ಲಕ್ಷ್ಮಣರು ಕಾಣುತ್ತಿದ್ದ ಪರಿ:

  ಕವಿಗುರೂದಿತನೀತಿಗಳಂದದಿಂ
  ಜವನವಹ್ನಿಗಳಂದದಿನಿರ್ವರುಂ |
  ಸವನಜೀವನಮಪ್ಪ ವಿದೇಹರಾ-
  ಡ್ಭವನದತ್ತೊಲೆದರ್ ವರಸೋದರರ್ ||

  ಪಗಲಿರುಳ್ಗವೊಲ್ ರಘುವಂಶಜರ್
  ಸೊಗಯಿಸಿರ್ಪರೆನಲ್ಕುಚಿತಾರ್ಥಮೇಂ?
  ಯುಗಪದುತ್ಪಲಪಂಕಜಹಾಸಮೆಂ-
  ದು ಗಣಿಸಲ್ ಕವನಂ ಸೊಗಸಾಗದೇಂ?

  ಸುಕಾವ್ಯದೊಳ್ ಶಬ್ದಮುಮರ್ಥಮಂತೆಯೇ
  ಪ್ರಕಾಮಸೌಂದರ್ಯದೆ ಸೇರ್ದವೊಲ್ ಕರಂ |
  ಪ್ರಕಾಶಕಾಯರ್ ವಿಧುಭಾನುಗಳ್ ನಭೋ-
  ನಿಕಾಯದೊಳ್ ಬಂದವೊಲಾದರಿರ್ವರುಂ ||

  ತ್ರಿವರ್ಗಮುಂ ಮೇಣಪರ್ಗಸಂಗತಂ
  ಕವಿತ್ವಮುಂ ಗಾನದೊಡಂ ನೆಗಳ್ದವೊಲ್ |
  ಸವಾವನರ್ ಪಾಶಿಪುರಂದರರ್ ಸ್ವಯಂ
  ಕವರ್ಚಿ ಬಂದಂತೆವೊಲಾದರಿರ್ವರುಂ ||

  • ೧) ’ಸವನಜೀವನಮಪ್ಪ’ ಎಂದರೆ, ’ಯಜ್ಞ ನಡೆಯುತ್ತಿರುವ’ ಎಂದೆ?
   ೨) ೨ನೆಯ ಪದ್ಯ: ರಾಮಲಕ್ಷ್ಮಣರ ಮೈಬಣ್ಣಗಳೂ ಆ ಎರಡು ಹೂಗಳ ಬಣ್ಣಕ್ಕೆ ಹೋಲಿಕೆಯಾಗುತ್ತವೆ.
   ೩) ೫ನೆಯ ಸಾಲು – ಪಗಲಿರುಳ್ಗಳವೊಲ್ ಎಂದಾಗಬೇಕೆ?
   ೪) ೧೦ ನೆಯ ಸಾಲು – ’ಮೇಣಪವರ್ಗಸಂಗತಂ’ ಎಂದಾಗಬೇಕೆ? ಈ ಸಾಲಿನ ಅರ್ಥ ತಿಳಿಸಿ.
   ೫) ಪಾಶಿಪುರಂದರರ್ ಎಂದರೆ ಶಿವ-ಇಂದ್ರರೆ? ಸವಾವನರ್, ಕವರ್ಚಿ ಎಂದರೆ?

   • ಧನ್ಯವಾದಗಳು. ಅತ್ಯಾಶುಪದ್ಯಗಳನ್ನು ನನ್ನ ಟಂಕನವೇಗಕ್ಕಿಂತ ಮಿಗಿಲಾಗಿ ನಿರೂಪಿಸುವಾಗ ಆದ ಸ್ಖಾಲಿತ್ಯಗಳಿಗೆ ಕ್ಷಮೆಯಿರಲಿ. ನೀವೆದಂತೆ “ಪಗಲಿರುಳ್ಗಳವೊಲ್” ಹಾಗೂ “ಮೇಣಪವರ್ಗಸಂಗತಂ” ಎಂಬ ಸವರಣೆಗಳು ಸರಿ. ಇನ್ನು ಕಠಿನಪದಗಳಿಗೆ ಅರ್ಥ:
    ಪಾಶಿ = ವರುಣ, ಸವಾವನರ್ = ಯಜ್ಞರಕ್ಷಕರರು, ಕವರ್ಚಿ = ಪ್ರೀತಿಗೊಳಿಸಿ

 7. ರಾಮ-ಲಕ್ಷ್ಮಣರನ್ನು ಕರೆತರುತ್ತಿದ್ದ ವಿಶ್ವಾಮಿತ್ರಮುನಿಯು ಕಂಡ ಪರಿ:

  ಸುಪ್ತಿಙಂತಂಗಳಂ ಮುಂಕೊಂಡಾಪ್ತಭಾವದೆ ಬರ್ಪವೊಲ್ |
  ಕ್ಲಪ್ತವಾಕ್ಯಮಿದೋ ಬಂದಂ ತೃಪ್ತಂ ಕೌಶಿಕದೇಶಿಕಂ ||

  ಛಂದೋವ್ಯಾಕರಣಂಗಳ್ ತಾಂ ಚಂದದಿಂದನುಗಾಮಿಸಲ್ |
  ಸಂದಲಂಕೃತಿಯಂ ಮೌನೀಶಂ ದಲೊಪ್ಪಿದನಂತೆವೊಲ್ ||

  ಅರುಣನನನುಗಮಿಸುವ ಭಾ-
  ಸ್ಕರದಿವಸಂಗಳವೊಲಾ ಮುನಿಯನಾ ರಘುಜರ್ |
  ಭರದಿಂದನುಗಮಿಸಿದರೆನೆ
  ನೆರೆ ನೋಳ್ಪರ್ಗಾದುದಲ್ತೆ ನಲ್ಬೆಳಗಾಗಳ್ ||

  ಶ್ರುತಿವಾದ್ಯಂ ಲಯವಾದ್ಯಂ
  ಹಿತಕರಗಾನಮನಲರ್ದು ಪಿಂಬಾಲಿಪವೊಲ್ |
  ಜತೆಯಾದರ್ ದಾಶರಥಿ-
  ಳತಿಮಾತ್ರವಿನೀತರಾಗಿ ಕೌಶಿಕಮುನಿಯೊಳ್ ||

  • ಸುಪ್ತಿಙಂತಂಗಳಂ ಮುಂಕೊಂಡು – ದಯವಿಟ್ಟು ಅರ್ಥ ತಿಳಿಸಿ.
   (ಟೈಪೊ: ದಾಶರಥಿಗ)

   • ಸುಬಂತವೆಂದರೆ ನಾಮಪದವೆಂದೂ ತಿಙಂತವೆಂದರೆ ಕ್ರಿಯಾಪದವೆಂದೂ ಸಂಜ್ಞೆ. ಮತ್ತೆ ನಿಮ್ಮ ತಿದ್ದುಗೆಯು ಸರಿಯಾಗಿದೆ. ಅದು ನೀವೆಂದಂತೆ “ದಾಶರಥಿಗಳತಿಮಾತ್ರವಿನೀತರಾಗಿ”

    ಭರದಿಂ ಕಬ್ಬಮನೊರೆಯುವ
    ಸರಸೋತ್ಸಾಹದ ಕಡಲ್ಗೆ ಕಾಲಿಡುವಾಗಳ್ |
    ಮರೆತೇವೋದೆಂ ಟಂಕನ-
    ದರಿವಂ ಮೇಣ್ ಈಜು-ದೋಣಿಗಳನುಳಿಯುವವೊಲ್ ||

 8. ದೃತಪದ

  ಜನಕನುತ್ಸುಕತೆಯಿ೦ದಲೆ ಕೇಳ್ದ೦
  ಮುನಿವರಾ ಕುವರರೀರ್ವರಿದಾರಯ್?
  ತನುವಿನಿ೦ ಧೃಢರಿಹರ್ ಮೊಗಮಿರ್ಕು೦
  ಮಿನುಗುತು೦ ಸೆಳೆದು ಮಾನಸಮಲ್ತೇ

  Will take this back, will use this later in the story 🙂

 9. ಸೋಮ-ಪ್ರಸಾದುಗಳಿಗೆ ರಾಮ-ಸೀತೆಯರ ಮದುವೆಮಾಡಿಸಲು ಅದೇನಿಂಥ ಅವಸರ?
  ತುಸು ನಿಧಾನವಾಗಿ ಸಾಲಂಕಾರ-ರಸಾವಹವೆನಿಸುವ ವರ್ನನೆಗಳನ್ನು ನಿರ್ವಹಿಸುತ್ತ ಸಾಗಬಾರದೆ?:-) ಹೀಗಾಗಿಯೇ ನಾನು ಈ “ಸಾಮೂಹಿಕರಾಮಾಯಣ”ರಥಕ್ಕೆ ವರ್ಣನಾವೇಗನಿರೋಧಕವನ್ನು ಅಳವಡಿಸುತ್ತಿದ್ದೇನೆ:-)

  • ರಾಮ, ಲಕ್ಷ್ಮಣ, ವಿಶ್ವಾಮಿತ್ರರು ಮಿಥಿಲೆಯಲ್ಲಿ ಕಾಲಿಟ್ಟರು, ಋತ್ವಿಜಸಮೇತರಾಗಿ ಶತಾನಂದ-ಜನಕರು ಅವರನ್ನು ಎದುರ್ಗೊಂಡರು ಎಂದಷ್ಟೇ ಹೇಳಿದ್ದೇನೆ. ಮದುವೆಯ ತನಕ ಹೋಗಿಯೇ ಇಲ್ಲ ನಾನು.

  • ಹೌದು. ಗಣೇಶರೇ,
   ಪ್ರಸಾದರು ಬಹಳ ಬೇಗ ಮಿಥಿಲೆಗೆ ತಲುಪಿಬಿಟ್ಟಿದ್ದಾರೆ. ಹೀಗಾದರೆ ಇನ್ನೂ ಒಂದು ವಾರಗಟ್ಟಲೆ ಅಲ್ಲಿ ಕಾಲ ಕಳೆಯುವುದು ಹೇಗೆ? ಈ ವೇಗನಿಯಂತ್ರಕ ುಚಿತವಾದದ್ದೇ. ಅದಕ್ಕಾಗಿ ಸೋಮಣ್ಣನವರ ಮೊದಲ ಪದ್ಯದ ಅನಂತರ ಓದಿಕೊಳ್ಳಬಹುದಾದ ೊಂದು ಪದ್ಯವನ್ನು ನಾನು ಭಾಮಿನಿಯಲ್ಲಿ ಹೀಗೆ ಟಂಕಿಸಿದ್ದೇನೆ.
   ತರಳ! ಕೇಳ್ ಕೌತುಕವ ವಸುಧಾ
   ವರಣದೊಳು ಮಿಗಿಲಾದ ಮಿಥಿಲಾ
   ಪುರವು ಸಗ್ಗದ ಪುರವನಗ್ಗವ ಗೊಳಿಸಿ ಮೆರೆದಿಹುದು |
   ಅರಿವುಗರಿಯನು ಧರಿಸಿ ಶಿರದೊಳು
   ಮೆರೆವ ಜನಕನು ರಾಜನೀ ಪುರ
   ವರಕೆ ನೇಗಿಲ ಯೋಗಿವೋಲ್ತಾ ನೆಲವನುಳುವನೆಲಾ! ||

  • Ganesh Sir,

   I have taken back my 8th comment, will use it once more interesting poems are filled 🙂

 10. Okay I will slow down.

  ಅವಸರಿಸದಿರಿ ಪದ್ಯಪಾನಿಗಳಹಲ್ಯೆಯಳ
  ಭವಕಳೆದ ಮೇಲ್ಧನುರ್ಭಂಗಂವರಂ|
  ಲವವಲ್ಲವಿಹುವಪರಿಮಿತದ ಪ್ರಸಂಗಗಳು
  ಕವನದಾಚೆಯಿದೆಯೆಲ್ಲದರ ಪಟ್ಟಿ||
  1. ವಸಿಷ್ಠರು ವಿಶ್ವಾಮಿತ್ರರನ್ನು ಸತ್ಕರಿಸುವುದು
  2. ಶಬಲೆ ಪ್ರಸಂಗ
  3. ವಸಿಷ್ಠ-ವಿಶ್ವಾಮಿತ್ರ ಪ್ರಸಂಗ
  4. ತ್ರಿಶಂಕುಪ್ರಸಂಗ
  5. ಶುನಃಶೇಫವಿಕ್ರಯ
  6. ಅಂಬರೀಷಯಜ್ಞ
  7. ಮೇನಕಾನಿರ್ವಾಸ
  8. ರಂಭಾಶಾಪ

  • ಇಷ್ಟು ಉಪಕಥೆಗಳು ಬಂದರೆ ಮೂಲಕಥೆಯ ಸ್ವಾರಸ್ಯ ಮರೆಯಾದೀತು. ಹೀಗಾಗಿ ಮೂಲಕಥೆಯಾದ ಸೀತಾಸ್ವಯಂವರದ ಜಾಡಿನಲ್ಲಿಯೇ ಸಾಗಿ ಇದಕ್ಕೆ ಸಂಗತವಾಗುವ ವರ್ಣನೆಗಳನ್ನು ಮಾಡಿದಲ್ಲಿ ಯುಕ್ತವಾದೀತು. ಮುಖ್ಯವಾಗಿ ಕಥೆಯು ಎಲ್ಲರಿಗೂ ಗೊತ್ತಿರುವ ಕಾರಣ ಇದರಲ್ಲಿ ಯಾರದೂ ಯಾವುದೇ ಸ್ವಂತಿಕೆಗೆ ಅವಕಾಶವಿಲ್ಲ. ಹೀಗಾಗಿ ವರ್ಣನೆಗಳಲ್ಲಿಯೇ ಸ್ವೋಪಜ್ಞತೆಗೆ ಆಸ್ಪದ. ಇದನ್ನು ಬಲಸಿಕೊಂಡು ಕಳೆಗಟ್ಟಿಸಿದಲ್ಲಿ ಮಾತ್ರ ಕವಿತ್ವದ ಪಟ್ಟ ದಕ್ಕುತ್ತದೆ. ಇಲ್ಲವಾದಲ್ಲಿ ಬರಿಗತೆಯ ಗೀಳಾಗುವುದು.

 11. ಜನಕ ಅತಿಥಿಗಳಿಗೆ ಕ೦ಡ ಬಗೆ

  ಭವ್ಯಮೂರ್ತಿಗಡ ಮೇರುಸಮ೦ ದಲ್
  ಹವ್ಯವಾಹಸಮನಾಪರಿತೇಜ೦
  ದಿವ್ಯಮಪ್ಪ ನಯನ೦ಗಳೊಳಾ೦ ಸ೦
  ಸೇವ್ಯಮಾನರ್ಗಳನಾಧರಿಪೆ೦ಬ೦

 12. ಸಾರಿರಲು ಡಂಗುರವ ಮಿಥಿಲೆಯ
  ಚಾರ ಗಡಣವು ನಾಳೆಯರಸು ಕು-
  ಮಾರಿ ಶಿವಧನುವೆತ್ತಿದನ ತಾ ವರಿಸುವಳೆನುತಲಿ
  ಊರ ಜನ ಕಾತರದಿ ನುಡಿದಿಹ-
  ರಾರು ಬರುವರೊ? ಹೆದೆಯನೇರಿಸಿ
  ಯಾರೊ? ಸೀತೆಯ ದೈವಕಾಯಲೆನುತ್ತ ಹರಸಿಹರು

  ಕೊ: ಡಂಗುರದಲ್ಲಿ ಸೀತೆ ಶಿವಧನುಸ್ಸನ್ನು ಎತ್ತಿದವರನ್ನು ಮದುವೆಯಾಗುವಳೆಂಬ ವಿಷಯವನ್ನು ಕೇಳಿದ ಮಿಧಿಲೆಯ ಜನರು ಕುತೂಹಲ-ಆತಂಕದಲ್ಲಿ ತಮ್ಮ ರಾಜಕುಮಾರಿಗೆ ತಕ್ಕ ವರನು ಸಿಕ್ಕಾನೋ ಇಲ್ಲವೋ ಎಂದು, ಅವಳಿಗೆ ಒಳಿತಾಗಲೆಂದು ಮನದಲ್ಲೇ ಹರಸಿದ (ನನ್ನ ಊಹೆಯ) ಸಂದರ್ಭ

 13. ಮಿಥಿಲೆಯನ್ನು ಪ್ರವೇಶಿಸುತ್ತಿದ್ದ೦ತೆ ರಾಮಲಕ್ಷ್ಮಣರಿಗೆ ಆದ ಅನುಭವದ ಕಲ್ಪನೆ – ಸರಳಗನ್ನಡದಲ್ಲಿ.

  ಆಟಪಾಟದಿ ಮಗ್ನರಾಗಿರ್ದ ಪ್ರಜೆಗಳಿ೦
  ಸಾಟಿಯಿಲ್ಲದ ಭವನಸೌಧ೦ಗಳಿ೦ |
  ವಾಟಿಕೆಗಳಿ೦ದೊಪ್ಪುತಿರ್ದುದಾ ಜನಕಪುರಿ
  ನೋಟದಲೆ ಮರುಳಾದರರಸುಮಕ್ಕಳ್ ||

  ಆಟಪಾಟ = ವಿನೋದ ಸ೦ಭ್ರಮ.
  ಭವನ = ವಾಸಿಸುವ ಮನೆಗಳು. ಸೌಧ = ಅರಮನೆ, ಉಪ್ಪರಿಗೆ ಮನೆ.

 14. ಸೋಲೆ ಸುಬಾಹು ಮಾರೀಚರ್
  ಕಾಲವದಾಗೆ ತಾಟಕಳ್|
  ಕಾಲುಕಾಯಲಹಲ್ಯಾಳಂ
  ಪಾಲನಂ ಗುರುವಾಜ್ಞೆಯಂ||
  ಬಹುಮಾನವದೇನುಂಟಿ
  ಲ್ಲಿಹುದೆನ್ನಲ್ಕೆ ರಾಮಗಂ|
  ಮೇಲಿನ ವಿಕ್ರಮಗಳಲ್ಲಿ ಬಹುಮಾನವೇನಿಲ್ಲ ರಾಮನಿಗೆ, ಬರಿಯ ಆಜ್ಞಾಪಾಲನೆ. ಆದರೆ ಮುಂದೆ ಮಿಥಿಲಾದಲ್ಲಿ ಜಯವೂ ಬಹುಮಾನವೂ…
  ಬಹ ನಾಳೆಯು ತಾನೀಗುಂ
  ಮಹನೀಯ ಫಲಂ-ಜಯಂ||

  • *ಬಹ ನಾಳೆಯೊಳಾಸಾದ್ಯಂ (’ಬಹ ನಾಳೆಯು ತಾನೀಗುಂ’ ತಪ್ಪು)

  • ನಿಮ್ಮ ಶ್ಲೋಕರಚನಾಯತ್ನಗಳು ಸ್ತುತ್ಯವೇ.ಇವುಗಳ ಕಲ್ಪನೆಯೂ ರಮಣೀಯ. ಆದರೆ ಇಲ್ಲಿಯ ಮೊದಲ ಪದ್ಯದ ಮೊದಲ ಸಾಲಿನಲ್ಲಿಯೇ ಗತಿ ತಪ್ಪಿದೆ. (ಕೆಲವು ವ್ಯಾಕರಣಶೈಥಿಲ್ಯಗಳೂ ಇವೆ ಉದಾ: ತಾಟಕಳ್, ಅಹಲ್ಯಾಳಂ ಇತ್ಯಾದಿ) ಪ್ರಾಯಿಕವಾಗಿ ಅನುಷ್ಟುಪ್ ಶ್ಲೋಕದ ಲಕ್ಷಣಗಳೆಲ್ಲ ಪಾಲಿತವಾದಂತೆ ತೋರಿದರೂ ಈ ಛಂದಸ್ಸಿನ ಗತಿಸೂಕ್ಷ್ಮತೆಯನ್ನು ಬಲ್ಲವರಿಗೆ ಈ ಪದ್ಯದ ಲೋಪ ಸುವೇದ್ಯ. ಈ ಬಗೆಗೆ ನಾನು ವಿಡಿಯೋಪಾಠಗಳಲ್ಲಿ ಚರ್ಚಿಸಿದ್ದೇನೆ. ಈ ಮೂಲಕ ಎಲ್ಲರಿಗೂ ಮತ್ತೊಮ್ಮೆ ನಿವೇದಿಸುವುದೆಂದರೆ ಒಳ್ಳೆಯ ಪದ್ಯರಚನೆಗೆ (ಮುಖ್ಯವಾಗಿ ಶ್ಲೋಕ, ಆರ್ಯಾ, ಕಂದ, ಷಟ್ಪದಿ, ಚೌಪದಿ, ಸಾಂಗತ್ಯ, ತ್ರಿಪದಿ ಇತ್ಯಾದಿ) ಕೇವಲ ಅವುಗಳ ಸ್ಥೂಲಲಕ್ಷಣಜ್ಞಾನಕ್ಕಿಂತ ಈ ಛಂದಸ್ಸುಗಳಲ್ಲಿ ರಸಸಿದ್ಧರಾದ ಮಹಾಕವಿಗಳು ಇವುಗಳನ್ನು ಹೇಗೆ ಬಳಸಿದ್ದಾರೆಂಬ ಲಕ್ಷ್ಯಪುರಸ್ಸರವಾದ ಪ್ರಯೋಗವಿಜ್ಞಾನವೇ ತುಂಬ ಒದಗಿ ಬರುವ ಹಾದಿ. ಪ್ರಕೃತಪದ್ಯವನ್ನು ಹೀಗೆ ತಿದ್ದಬಹುದು:
   ಸೋಲಲ್ ಸುಬಾಹುಮಾರೀಚರ್ ಕಾಲಂ ತಾಟಕೆಯಾ ಸಲಲ್ |
   ಕಾಲೆ ಕಾಯಲಹಲ್ಯಾರ್ಥಂ ಪಾಲಿತಂ ದೇಶಿಕಾಜ್ಞೆಯುಂ ||

 15. ಕಾಡಿನೊಳು ನಡೆದು ಬರಿತ್ತಿರುವಾಗಿನ ಒಂದು ವರ್ಣನೆ ::

  ಕಾಡಿನೊಳು ಪಸರಿಸಿದ ರವಿಕಾಂತಿಯಂ ಕಂಡು
  ಪಾಡಲೆಳಸಿದವು ಬಾನಾಡಿಯಾಗ |
  ನೋಡುತಲೆ ದಣಿದಿರ್ದ ಕಂದಮ್ಮಗಳನಂದು
  ತೀಡಿದವು ತಂಗಾಳಿಯಿಂ ತರುಗಳು ||
  [ರವಿ ಕಾಂತಿ = ರಾಮಲಕ್ಷ್ಮಣರಿಂದ ಹೊಮ್ಮುತ್ತಿದ್ದ ಕಾಂತಿ]

 16. ಮಿಥಿಲೆಯ ವರ್ಣನೆ:

  ಮುನಿಯಾಜ್ಞವಲ್ಕ್ಯಪದಪೂತಮೀ ಪುರಂ
  ಜನಕಾತ್ಮಹರ್ಷಸುಧೆಯಿಂದೆ ಪಾವಿತಂ |
  ಘನಶೈವಕಾರ್ಮುಕಸುರಕ್ಷಿತಂ ಹಿತಂ
  ಮನದಂತೆ ಮೋಹಕಮಿದಲ್ತೆ ಸೀತೆಯಾ ||

  ಕಳೆಯನಾಂತ ಸ್ವಯಂವರವೀರರು-
  ಜ್ಜ್ವಳಮುಖಂಗಳವೊಲ್ ಸರಸೋಜ್ಜ್ವಳಂ |
  ನಳನಳಿಪ್ಪುದೆನಲ್ ಮುಗುಳೆತ್ತಲುಂ
  ತಳಿರ ತೋರಣಮೋರಣಮೊಪ್ಪುಗುಂ ||

 17. ಸೀತಾಸ್ವಯಂವರದ ಬಗ್ಗೆ ಜನಕ ರಾಜ ಡಂಗೂರವಂತೂ ಸಾರಿದ್ದಾಯಿತು – ಇನ್ನು ಶಿವಧನುವನ್ನು ಹೆದೆಯೇರಿಸಿ ಸೀತೆಯ ಮನಗೆಲ್ಲುವನಾರಿರಬಹುದೆಂಬ ಕುತೂಹಲವುಂಟಾಗಿರಲು ಈ ಷಟ್ಪದಿ:

  ಪುರವು ಮಿಥಿಲೆಯು ಸಡಗರಿಸುತಿದೆ
  ಬರುವರೆನ್ನುತ ರಾಜಕುವರರು
  ಸರಳತರಳೆಯ ಮುಗುದೆಸೀತೆಯ ಕೈಯ ಹಿಡಿಯಲಿಕೆ!
  ಇರುವುದಾರಿಗೊ ಭಾಗ್ಯವಿಂಥದು?
  ಸರಸಿಜವ ನಾಚಿಸುವ ಮೊಗವಿಹ
  ಸಿರಿಯಿವಳ ಮನವನ್ನು ಗೆಲ್ಲುವ ಮನ್ನನಾರಿಹನೊ!

 18. ವಿಶ್ವಾಮಿತ್ರನೊಡನೆ ಬರುತ್ತಿದ್ದ ರಾಮನನ್ನು ನೋಡಿದ ಕೆಲವರು ಮಾತಾಡುತ್ತಿದ್ದ ರೀತಿ.

  ಮನವ ಮೋಹಿಪ ರೂಪವ೦ತನು
  ಇನಕುಲೋದ್ಭವ ರಾಮಚ೦ದ್ರನು
  ಇನಿಯನಾಗಲು ಜನಕಪುತ್ರಿಗೆ ತಕ್ಕ ವರನಿವನು |
  ಎನಿತು ಭಾವಿಸಲೇನು ಫಲವೆನೆ
  ಧನುವ ಭ೦ಗಿಪ ಪಣವನೊಡ್ಡಿದ
  ಜನಕರಾಯನ ಶಪಿಸುತಿದ್ದರು ಪುರದ ವಾಸಿಗರು ||

 19. ರಾಜಗೋಪಾಲರ ಪದ್ಯವನ್ನೇ ಮುಂದುವರೆಸುತ್ತಾ:

  ರಾಮ ಲಕ್ಷ್ಮಣರು ಮಿಥಿಲೆಯ ಸೊಗಸಿನ ಬಗ್ಗೆ ಮಾತಾಡುತ್ತ ರಸ್ತೆಯಲ್ಲಿ ಬರುವಾಗ, ಒಬ್ಬ ವೃದ್ಧೆ ರಾಮನ ಬಳಿಸಾರಿ, ಆವನ ಅಂದಕ್ಕೆ ಬೆರಗಾಗಿ ಅವನಿಗೆ ದೃಷ್ಟಿಯಾಗಬಾರದೆಂದು ದೃಷ್ಟಿತೆಗೆದ ಪರಿ:

  ಬಹಳ ಸೊಗವೀ ನಗರಿ ಲಕ್ಷ್ಮಣ!
  ಇಹರು ಸಜ್ಜನನಿಕರ! ಶೋಭಿಸು-
  ತಿಹುದು ಸಗ್ಗಕೆ ಸಾಟಿಯೆನಿಸುತ್ತ ಮೆರೆದಿಹುದು!
  ಅಹಹ ಹಿತವೆನುತಿರಲು ರಾಮನು
  ಮಹಿಳೆಯೋರ್ವಳು ಬಳಿಗೆ ಸಾರುತ
  ಸಹಜದಲಿ ರಘುರಾಮನಿಗೆ ಮಿಗೆ ದಿಟ್ಟಿ ತೆಗೆದಿಹಳು

  • hahahah 🙂 good one. 3rd line there is some maatre deficiency please correct it…

   • Thanks for pointing it, Shreesha 🙂

    ಬಹಳ ಸೊಗವೀ ನಗರಿ ಲಕ್ಷ್ಮಣ!
    ಇಹರು ಸಜ್ಜನನಿಕರ! ಶೋಭಿಸು-
    ತಿಹುದು ಸಗ್ಗಕೆ ತಾನು ಸಾಟಿಯೆನಿಸುತ ಮೆರೆದಿಹುದು!
    ಅಹಹ ಹಿತವೆನುತಿರಲು ರಾಮನು
    ಮಹಿಳೆಯೋರ್ವಳು ಬಳಿಗೆ ಸಾರುತ
    ಸಹಜದಲಿ ರಘುರಾಮನಿಗೆ ಮಿಗೆ ದಿಟ್ಟಿ ತೆಗೆದಿಹಳು

 20. ಲಲಿತರಗಳೆಯಲ್ಲೊ೦ದು ಪ್ರಯತ್ನ.

  ಜಾನಕಿಯ ವರಿಸಲ್ಕೆ ಚಾಪವನು ಮುರಿಯಲ್ಕೆ
  ಮೇನೆಯಲಿ ಯಾನದಲಿ ಸೈನ್ಯದೋಪಾದಿಯಲಿ
  ಮಾನಸೋತ್ಸಾಹದಿ೦ ಬರುತಿರ್ಪ ನೃಪರನ್ನು
  ಜ್ಞಾನಿಮುನಿಗಳನ೦ತೆ ಸಾಮಾನ್ಯಜನರನು೦
  ಮಾನಸಮ್ಮಾನದಿ೦ದಾದರಿಸುತಿರುವ೦ತೆ
  ಮಾನಧನ ಮಿಥಿಲೇಶನಾಣೆಯಿತ್ತಿರುವುದನು
  ಊನವಾಗದ ತೆರದಿ ಪಾಲಿಸುತ್ತಿಹ ಜನರ-
  ನೇನೆ೦ದು ಬಣ್ಣಿಸಲಿ ಧನ್ಯರಾಗಿಹರವರು ||

 21. ಸೀತೆಯ ದುಗುಡ….
  (ಸ್ವಯಂವರಕ್ಕೆ ಹಲವು ರಾಜರ ಆಗಮನವಾಗುತ್ತಿರುವುದನ್ನು ಕೇಳಿ ಸೀತೆಗೆ ಭಯವಾಗಿ, ರಾತ್ರಿಯೆಲ್ಲಾ ನಿದ್ರೆ ಬರುತ್ತಿಲ್ಲ. ಅ೦ತಹ ಮುಗ್ಧ ಮನಸ್ಕಳಲ್ಲಿ ಹುಟ್ಟಿರುವಂತಹ ಈ ಸಮಸ್ಯೆಗೆ, ರಾಮನು ಶಿವಧನಸ್ಸನ್ನು ಮುರಿಯುವುದೊಂದೇ ಪರಿಹಾರ(ರಾಮಬಾಣ))

  ಹಲವು ವೀರರ ಹಾಜರಿಯೆಗೊ೦
  ದಲವ ಮೂಡಿಸಿ ಜನಕ ಸುತೆಯಲಿ
  ನಿಲಲು ಬಿಡದೆಯೆ ಕೂರಗೊಡದೆಯೆ ನಿದಿರೆ ಗೈರಿನಲೀ |
  ಲಲಿತಮನದೊಳು ಭಯದ ಬೀಜದಿ
  ಮೊಳೆತ ದುಗುಡಕೆ ಮೆಚ್ಚಿದಾವರ
  ಬಲದಿ ಮುರಿವುದೆ ಶಿವನಬಿಲ್ಲನು ರಾಮಬಾಣಮೆನಲ್ ||

  • ಹಗಲಿದಿರುಳೆನೆ ಲೆಕ್ಕಿಸದೆ ನೀ೦
   ಹೆಗಲನೊಡ್ಡಿಹೆ ಪದ್ಯಪಾನಕೆ
   ಚಿಗುರುತಿರ್ಪುದು ನಿನ್ನೊಳ೦ ಕೇಳುತ್ಸುಕತೆ ಭಳರಿ೦
   ಬಿಗುಗಳ೦ ತೋರುತ್ತೆ ಬಣ್ಣಿಸೆ
   ಬಗೆಗಳೊಳ್ ನಾ೦ ನಿತ್ಯಕಾರ್ಯದೆ
   ತೊಗಲುಗೊ೦ಬೆಯ ಪೋಲ್ವೆನಯ್ ಕೇಳ್ ನಿನ್ನ ಸಮ್ಮುಖದೆ

   ಪ್ರಿಯ ಶ್ರೀಶ, ನಿನ್ನ ಉತ್ಸಾಹ ಬಹಳ ಮೆಚ್ಚುಗೆಗೆ ಅರ್ಹವಾದದ್ದು, ನನಗೆ ಗೊತ್ತು ನೆನ್ನೆ ರಾತ್ರಿ ೧೧.೩೦ ತನಕ ನೀವೆಲ್ಲ… ಸಹೃದಯರು ಕಾತುರದಿ೦ದ ನಿರೀಕ್ಷಿಸುತ್ತಿರುವ ಶತಾವಧಾನದ ಡಿವಿಡಿಗಳನ್ನು ಹೊ೦ದಿಸುತ್ತಿದ್ದಿರಿ, ಇ೦ದು ಬೆಳ್ಳ೦ಬೆಳಗ್ಗೆಯೂ ಇದೇ ಜವಾಬ್ದಾರಿಯನ್ನು ಹೊತ್ತಿರುವೆ. ಶತಾವಧಾನದ ಎಷ್ಟೋ ಕೆಲಸಗಳಲ್ಲಿ ನನ್ನ ಸಹಕಾರ ಗೌಣವಾಗಿರುವುದನ್ನು ಬಗೆಬಗೆಯಲ್ಲಿ ಬಣ್ಣಿಸುವ ನಾನು ಇನ್ನೊ೦ದೆಡೆ… ಈ ಮಧ್ಯದಲ್ಲಿ ನೆನ್ನೆ ರಾತ್ರಿಯೇ ಬರೆದ ನಿನ್ನ ಉತ್ತಮವಾದ ಪದ್ಯ ಬಹಳ ಹಿಡಿಸಿತು. ಈ ಪದ್ಯವು ನನ್ನ ಜಡತ್ವಕ್ಕೆ ರಾಮಬಾಣವಾಗಲಿ 🙂

 22. ಶರ್ವನಿಬ್ಬಗೆಯೊಳಿರ್ಪನೇ೦?, ದ್ವಿಧರ್
  ತೋರ್ವರೇಕಮೆನೆ ಬಣ್ಣಿಪರ್, ಬಹ
  ರ್ಗೊರ್ವನಿರ್ಪ ವಿನಯಪ್ರತಿಷ್ಟಿತ೦
  ಗರ್ವದಿ೦ದಮೆನಲೊರ್ವ ತೋರ್ವನಯ್

  ಮಿಥಿಲಾಪುರಿಯ ಜನಕ್ಕೆ ರಾಮಲಕ್ಷ್ಮಣರು ಹೇಗೆ ಕ೦ಡರು? ರಾಮಲಕ್ಷ್ಮಣರಲ್ಲಿರುವ ಸಾಮ್ಯ/ವ್ಯತ್ಯಯ ಗುಣಗಳಿ೦ದ ಇಬ್ಬರೋ, ಒಬ್ಬನೇ ಎರಡು ವಿಧದಲ್ಲಿ ಕ೦ಡನೋ ಎ೦ದಿರಬಹುದೇ? ಚರ್ಚಿಸಿರಬಹುದೇ?

 23. ದೃಷ್ಟಿ ತೆಗೆದ ನಂತರ ಆಕೆ , ತನ್ನ ಬಳಿಯಿದ್ದವರಿಗೆ ಹೇಳಿದ್ದು ಹೀಗೆ:

  ಮುಗಿಲಬಣ್ಣನು ನವಿರುನುಡಿವನು
  ಹಗಲ ನೇಸರ ಹೊಳೆವ ತಿಂಗಳ
  ಮಿಗಿಲ ಕಾಂತಿಯನಾಂತ ಚೆಲುವನು ರಾಮಚಂದಿರನು
  ನಗುವ ಮುಖವನು ನೋಡಿದಾಕ್ಷಣ
  ಹಗುರವೆನಿಸಿಹನೆನ್ನ ಮನವನು
  ಚಿಗುರು ಪೂಶರವಿಡಿದ ಮನ್ಮಥಗಿಂತ ಸುಂದರನು

  • ಪೂಶರ ಅರಿಸಮಾಸವಾಯಿತು. ಪೂಗಣೆ ಎಂದು ಹಾಕಿದರೆ ಸರಿ ಹೋಗುತ್ತೆ.

 24. ಸೋಮ-ಶ್ರೀಶರ ನೇಹಮಂ ಪರಗುಣಪ್ರೇಮಸ್ತವಾಭಿಜ್ಞೆಯಂ
  ಸ್ಥೇಮಂಗೊಂಡವಧಾನಕಾರ್ಯಕಲನಶ್ರೀಯಂ ಸದಾ ಕರ್ಮಯೋ-
  ಗಾಮೀಕ್ಷಾಪ್ರತಿಪತ್ತಿಯಂ ಪರಿಕಿಸುತ್ತುಂ ಪದ್ಯಪಾನದ್ರುಮಂ
  ಕ್ಷೇಮಂ ತಾಳ್ದು ಮಲರ್ದು ಪಣ್ತಳರ್ದು ಬಾಳ್ಗುಂ ಸಲ್ಗುಮೆಂದೆಂಬೆನಾಂ ||

 25. ಪದ್ಯಪಾನದಲ್ಲಿ”ಭೂಮ”ದೂಟದಸಂಭ್ರಮ!!.”ಧಾರೆ”ಯ ವೇಳೆಗೆಬರುವವಳಿದ್ದೇನೆ.

 26. ರಾಮ-ಲಕ್ಷ್ಮಣರ ಬಗೆಗೆ, ಸೀತೆಗೆ, ಅವಳ ಸಖಿರಿಂದ ಬಂದ ವರದಿ ::

  ಬಣ್ಣನೆಗಿವರೆಡಿಯರಲ್ಲದೆ
  ಕಣ್ಣ ನೋಟವ ಸೆಳೆದು ಪಿಡಿಯುವ –
  ರಣ್ಣ ತಮ್ಮರು ಸಹಜವೆಂಬೊಲು ಮನವನಪಹರಿಪರ್ |
  ಮಣ್ಣಿಗಿಳಿದಾ ಕಾಮ ಸದೃಶರು
  ಸಣ್ಣ ನಗುವಿನ ಮುಗ್ಧ ಮೊಗಗಳು
  ಪೆಣ್ಣುಗಳ ನಾಚಿಕೆಯ, ಸಂಯಮಗಳನೆ ಕೊಲ್ಲುವರೌ ||

 27. ರಾಮ ಲಕ್ಷ್ಮಣರು ಅರಮನೆಯ ದಾರಿಗೆ ಬಂದು ಮುಂದಿನ ಮೆಟ್ಟಿಲು ಹತ್ತುತ್ತಿರುವಾಗ ಮೇಲೆ ಅಂತಃಪುರದ ಉಪ್ಪರಿಗೆಯಲ್ಲಿ ನಡೆದದ್ದೇನು?

  ಚಟುವಟಿಕೆ ಚಿಮ್ಮುತಿಹ ಕೋಮಲೆ
  ತಟವಟವನರಿಯಳೀ ಊರ್ಮಿಳೆ
  ಕಿಟಕಿಯಲಿ ಕುಳಿತವಳು ಬರುತಿರುವವರ ಕಂಡಿಹಳು
  ಸಟೆಯನಾಡದ ಬಾಲೆ ಕಣ್ಣೆವೆ
  ಮಿಟುಕಿಸದೆಯೆ ನೋಡಿ ನುಡಿದಳು
  ದಿಟದಲಿಬ್ಬರು ಸೂರ್ಯರೊಟ್ಟಿಗೆ ಬಂದರಿಲ್ಲೆಂದು!

  • ಚಟುವಟಿಕೆ ಚಿಮ್ಮುತಿಹ ಕೋಮಲೆ
   ತಟವಟವನರಿಯಳೀ ಊರ್ಮಿಳೆ
   ಕಿಟಕಿಯಲಿ ಕುಳಿತವಳು ಬರುತಿರುವವರ ಕಂಡಿಹಳು
   ಸಟೆಯನಾಡದ ಬಾಲೆ ಕಣ್ಣೆವೆ
   ಮಿಟುಕಿಸದೆಲೆಯೆ ನೋಡಿ ನುಡಿದಳು
   ದಿಟದಲಿಬ್ಬರು ಸೂರ್ಯರೊಟ್ಟಿಗೆ ಬಂದರಿಲ್ಲೆಂದು!

   • ಎರಡನೆಯ ಸಾಲಲಿ ಲಗಂ ಬಂದಿದೆ. ಅದನ್ನು ಸರಿಪಡಿಸಿಕೊ

 28. ಮುಂದುವರಿಯುತ್ತಾ ಊರ್ಮಿಳೆ ಅಕ್ಕ ಸೀತೆಗೆ ಹೀಗೆ ನುಡಿದಳು:

  ಏನು ಹೇಳಲಿ ಕೇಳೆ ಜಾನಕಿ
  ಸಾನುರಾಗದಲೆನ್ನ ಮಾತನು
  ಮಾನಿಸರಿಗೆಲ್ಲಿರುವುದಿಂತಹ ಕಳೆಯು ಮೊಗದಲ್ಲಿ?
  ಜ್ಜಾನಿಗಳ ಕೇಳಿದರೆ ಪೇಳುವ
  ರೀ ನಿರಂಜನ ರೂಪಿ ಯುವಕರು
  ಮಾನಿನೀಯರ ಮನಕೆ ಲಗ್ಗೆಯ ಹಾಕೆ ಬಂದಿಹರು!

 29. ನಾಗರಿಕರು ಅಲ್ಲಲ್ಲಿ ಮಾತಾಡಿಕೊಳ್ಳುತ್ತಿದ್ದುದು ಹೀಗೆ —

  ಅಂಗವಂಗಕಳಿಂಗದಿಂದಲಿ
  ತುಂಗವಿಕ್ರಮಭೂಪರೆಲ್ಲರು
  ಭಂಗಿಸಲ್ಕೀ ಚಾಪವನು ಭೂಸುತೆಯ ಗೆಲ್ವುದಕೆ |
  ಸಂಗಡಲೆ ಕೊಂಡೊಯ್ದು ತರುತಿಹ–
  ರಿಂಗದಾ ಪರಿವಾರಜನರನು
  ಅಂಗನೆಯ ಕರ ಯಾರ ಪಾಲಿಗೊ ಯಾರು ಕಂಡಿಹರು ||

  ಇದೇ ಸಮಯದಲ್ಲಿ ಮತ್ತೊಂದು ಬೆಳವಣಿಗೆ —

  ಸೀತೆಸ್ವಯಂವರ ನಡೆಯುವುದೆನ್ನುವ
  ಮಾತನು ಚಾರ ನಿವೇದಿಸಲು
  ಜಾತದುರಾಸೆಯ ದಶಮುಖನಾಗಲೆ
  ಸೀತೆಯ ವರಿಸಲು ತೆರಳಿರ್ದನ್ |

  ಚಾರರು ಧಾವಿಸಿ ಬಂದರು ಜನಕಗೆ
  ಸಾರುತ ನೂತನವೃತ್ತವನು |
  ” ದೂರದ ಲಂಕೆಯನಾಳುವ ರಾವಣ
  ವೀರನು ಸಾರ್ದಿಹನೀ ಪುರಕೆ ” ||

 30. ರಾಮನನ್ನು ಕಂಡ ಮಿಥಿಲಾಜನತೆಯ ಅನಿಸಿಕೆ:

  ನಾಮದೆ ರಾಮನಂತೆ! ಅಭಿರಾಮತೆಯಿಂದೆ ಮನೋಭಿರಾಮನೇ!
  ಪ್ರೇಮದೆ ಸೋಮನಂತೆ! ಮಹನೀಯತೆಯಿಂದಹಿಶಾಯಿಯೇ! ರಣ-
  ಸ್ಥೇಮದೆ ಭೀಮನಂತೆ! ಮತಿಭೂಮತೆಯಿಂ ಗುರುವಂತೆ! ಸೀತೆಗಂ
  ಸ್ವಾಮಿಯೆನಿಪ್ಪೊಡಲ್ತೆ ಚತುರಾಸ್ಯನೆ ದಲ್ ಚತುರಾಸ್ಯನಾವಗಂ.

  ಸೆಳೆದೋಳ್ಗಳ್ ವನಗಂಧಸಿಂಧುರಮಹಾಶುಂಡಾಪ್ರಕಾಂಡಂಗಳೀ
  ನಳಿನಾಕ್ಷಂಗಣಿಯಾಗೆ ಪರ್ವತಸುತಾಸುಪ್ರೇಮಿಕೋದಂಡಕೇ-
  ನಳವೇ ಜಗ್ಗದೆ ನಿಲ್ಲಲ್? ಒಮ್ಮೆಲೆ ರಸಂದೀವಿರ್ಪ ಕರ್ಬಂತೆವೋಲ್
  ಘಳಿಲೆಂದಾಗದೆ ಖಂಡಕೋಟಿ! ಯಿದೆ ದಲ್ ಮತ್ತೇಭವಿಕ್ರೀಡಿತಂ!!

 31. Some more worldly-wise advice from Urmila :

  ಅಕ್ಕ! ಕೇಳೀಗೆನ್ನ ಮಾತನು
  ಚಿಕ್ಕವಳು ನಾನೆಂದು ಗಣಿಸದೆ
  ನಕ್ಕು ಬಿಡದೆಲೆ ಸಿಗ್ಗು ತೋರದೆ ಕಡೆಯಗಾಣಿಸದೆ |
  ತಕ್ಕವನು ನಿನಗಿವನು ಕಣ್ಣಿಗೆ
  ಸಿಕ್ಕಿರಲು ಬಹುಮೂಲ್ಯ ರತುನವು
  ಮಿಕ್ಕವರ ಮೇಲಕ್ಕರೆಯ ಕಿಂಚಿತ್ತು ತೋರದಿರು! ||

  • ಹಂಸ
   ಪದ್ಯಗಳ ಹಾರವನ್ನು ಕೋದಿದ್ದೀಯ. ಚೆನ್ನಾಗಿವೆ. ವೃತ್ತದ ಪ್ರಯತ್ನವೂ ಪ್ರಶಂಸನೀಯ. ಈ ಪದ್ಯದಲ್ಲಿ “ಸಿಗ್ಗು” ಏಕೆ ಬಂತು? ಸಿಗ್ಗೆಂದರೆ ನಾಚಿಕೆ. ನೀನು ವಿವತಿಸಿರುವ ಸಂದರ್ಭದಲ್ಲಿ ನಾಚಿಕೆಗೆ ಎಡೆಯಿಲ್ಲವಲ್ಲ?

 32. ಸ್ವಯಂವರಮಂಡಪಕ್ಕೆ ಬರುತ್ತಿದ್ದ ರಾಮನನ್ನು ನೋಡಲೆಳಸಿದ ಸೀತೆಯ ಭಾವ:

  ಕಾರ್ಮುಕಲತಾಂಗನೆಯನೆನ್ನಿಂದೆ ಮುನ್ನಮೇ
  ಕಾರ್ಮೋಡದಂತಪ್ಪ ಚೆಲುವನೀತಂ |
  ಪೆರ್ಮೆಯಿಂ ಕಯ್ವಿಡಿವನೆಂದಸೂಯೆಯನಾಂತ
  ನರ್ಮಕೋಪದೆ ಸೀತೆ ಕೆಂಪಾದಳೇಂ?

  ನಲ್ಲನಂ ಕಾಣಲಾಗದ ಲಜ್ಜೆಯಂ ಜವದೆ
  ಗೆಲ್ಲಲೆಳಸಿದ ಸೀತೆ ಕಣ್ಗೆ ಕವಿದು |
  ಗುಲ್ಲಾಗಿಪ ಹ್ರೀಯನಳಿಸಲೆಂಬಂದದಿಂ
  ಸಲ್ಲಲಿತೆ ಕಾಡಿಗೆಯ ತೀಡಿರ್ಪಳೇಂ?

  ರಾಮನಾಳ್ತನಮನಾಲೋಕದಿಂದಳೆಯುತ್ತೆ
  ಕಾಮನ ಕಲಂಬಂಗಳಿಂ ಮಾಲೆಯಂ |
  ಭಾಮಿನಿಯು ಕೋದು ಮತ್ತಾರಿಗಂ ಹಾರಮಿದು
  ಸೇಮಮೆನಿಸದ ರೀತಿ ರೂಪಿಸಿದಳೇಂ?

  ಆ ಮಧೂಕಸ್ರಜಕೆ ಮುಗಿಬಿದ್ದ ಮಧುಪಾಳಿ
  ರಾಮಕಾತರೆಯಪ್ಪ ರಾಮೆಯವಳಂ |
  ಪ್ರೇಮದಿಂ ಸಂತವಿಸಿ ಧೈರ್ಯಮಂ ಪೇಳ್ವಂತೆ
  ರಾಮಣೀಯಕಮೆನಲ್ ಗುಂಜಿಸಿರ್ಕುಂ ||

  (ಸ್ವಯಂವರದ ಮಾಲೆಯನ್ನು ಮಧೂಕ(ಇಪ್ಪೆ)ಸುಮಗಳಿಂದಲೇ ರೂಪಿಸಬೇಕೆಂದು ವಿಧಿ)

  ಸೀತೆಯ ನೋಟಮೆಂಬ ಕುಮುದಂಗಳ ಸಾಲ್ಗಳೆ ರಾಮಕರ್ಣಮೂ-
  ಲಾತತಮಪ್ಪ ಗುಂಗುರುನವಿರ್ಗಳೆನಲ್ ಕೆಳೆಗೊಂಡು ಲೋಕವಿ-
  ಖ್ಯಾತಪುರಾರಿಚಾಪಗುಣಯೋಜನಕರ್ಮದ ಮರ್ಮಕೋಟಿಯಂ
  ಪ್ರೀತಿಪುರಸ್ಸರಂ ನುಡಿವುವೆಂಬಿನಮಾಗೆ ಮಲರ್ದರೀರ್ವರುಂ.

 33. ಸ್ವಯಂವರ ಮಂಟಪಕ್ಕೆ ಬರುತ್ತಲಿದ್ದ ಸೀತೆ ಕುಳಿತ ರಾಜಕುಮಾರರ ಮುಂದೆ ಹಾದುಹೋಗುವಾಗ:

  ಮಾಲೆ ಪಿಡಿದಳು ಮೆಲ್ಲನಡೆದಳು ಪುಲ್ಲಲೋಚನೆ ಚೆಂದದಿಂ
  ಸಾಲು ಕುಳಿತಿಹ ರಾಜ ಕುವರರು ಓರೆನೋಟಕೆ ಬಿದ್ದಿಹರ್
  ಕಾಲು ಮುಂದಕೆ ಹೋಗಲೊಲ್ಲದು ರಾಮಚಂದಿರ ಕಂಡಿರಲ್
  ನೀಲವರ್ಣನ ಭಾನುತೇಜನ ರೂಪವನೆ ಸಲೆ ನೋಡುತಂ

  • ಮಲ್ಲಿಕೋತ್ತರಮಾಲಿಕಾಮೃದುಮಿಶ್ರಗತ್ಯನುಸಾರಮು-
   ತ್ಫುಲ್ಲಮಾಗುತಲಿರ್ಪ ನಿಮ್ಮಯ ಪದ್ಯಪುಷ್ಪಚಯಂಗಳಾ |
   ಸಲ್ಲಲತ್ಕಮನೀಯಕಲ್ಪನಶಿಲ್ಪನಂಗಳನೀಕ್ಷಿಸಲ್
   ಝಲ್ಲನಾಯ್ತು ಮನಂ ನಿವಾಳಿಸುತಿರ್ಪೆನಂಗುಲಿಪಂಕ್ತಿಯಂ ||

 34. ಸ್ವಯಂವರ ಮಂಟಪದಲ್ಲಿ – ಎಲ್ಲಾ “ರಾಮಮಯ”ವಾಗಿ ಕಂಡ ಸೀತೆಯ ವರ್ಣನೆ

  ಉಟ್ಟಿಹಳು ನೋಡದೋ ರಾಮಬುಟ್ಟಾ ಸೀರೆ
  ಇಟ್ಟಿಹಳು ರಾಮತಿಲಕವಾನೀರೆ
  ಕಟ್ಟಿ ಮುಡಿದಿರೆ ಮುಡಿಗೆ ರಾಮಪುಷ್ಪದ ದಂಡೆ
  ಒಟ್ಟೊಡನೆ ಪೂಸಿಹಾ ರಾಮಗಂಧ ।

  ನೋಡದೋ ಬೆರಳಲಿ ರಾಮವರ್ಣದ ಹರಳು
  ತೀಡಿದಾ ರಾಮಲಿಪಿ ಮುಂಗುರುಳು
  ಹಾಡಿದೇ ಹೆಜ್ಜೆಯಲಿ ರಾಮನಾದವ ಗೆಜ್ಜೆ
  ಮೂಡಿದೇ ಮೊಗದಲ್ಲಿ ರಾಮಲಜ್ಜೆ।

  ಕಾಡಿಗೆಯ ಕಡೆತುದಿಯ ರಮಣೀಯ ಕಣ್ಮಿಣುಕು
  ಜೋಡಿಕಂಗಳಿಗೆ ರಾಮನದೆ ಹುಡುಕು
  ನಾಡಿಯಾ ಬಡಿತದಲಿ ರಾಮನಾಮದ ಮಿಡುಕು
  ಕಾಡಿರಲು ಕೆಳದಿಯರು ರಾಮಮುಖಿಯ।

  • ಅಹಹ! ರಾಮಮಯವೇ ಸೈ! ಸೊಗಸಾಗಿದೆ.

  • ಮತ್ತಷ್ಟು “ರಾಮಮಯಿ”ಯ ವರ್ಣನೆ:

   ತೊಟ್ಟಿಹಳು ತಾ ರಾಮರತ್ನಕಂಠೀಹಾರ
   ಕಟ್ಟಿರುವ ವಡ್ಯಾಣ ರಾಮಭಾರ
   ಇಟ್ಟಿರುವ ಎಡಬಲದ “ರಾ-ಮ”ನೋಲೆಗಳೊತ್ತು
   ಗಟ್ಟಿಯದು ರಾಮಮುತ್ತಿನಾ ನತ್ತು ।

   ನೋಡಲ್ಲಿ ಸೀತೆಗದುವಾತುರದ ನಿರೀಕ್ಷೆ
   ನೋಡದೋ ರಾಮಗದು “ವರಪರೀಕ್ಷೇ”
   ಕೂಡೆತಾ ಕೊಂಡಿಹಳು ಕಂಡಿಹಳು ರಾಮದೀಕ್ಷೆ
   ಬೇಡಿಹಳು ತಾಯಿಯಾ ರಾಮರಕ್ಷೇ।

  • **ಕೂಡೆತಾ ಕೊಂಡಿಹಳು ರಾಮಮಂತ್ರದ ದೀಕ್ಷೆ **

 35. ಸೀತೆ ಮೊದಲ ಬಾರಿ ರಾಮನನ್ನು ಕಂಡ ಸಂದರ್ಭದ ಬಗ್ಗೆ ಒಂದು ವರ್ಣವೃತ್ತದ ಪ್ರಯತ್ನ – ನಡೆಯಲ್ಲಿ, ಮತ್ತೆ ನುಡಿಯಲ್ಲಿ ತಪ್ಪುಗಳಿದ್ದರೆ ದಯವಿಟ್ಟು ತೋರಿರಿ:

  ಮಾತೊಂದಿಲ್ಲದೆ ನೋಡಿದಳ್ ಸುದತಿ ತಾನ್! ಶ್ರೀರಾಮನಂ ದಿಟ್ಟಿಸು-
  ತ್ತಾ ತಿಂಗಳ್ಪಗಲಲ್ಲಿ ಕಾಣುತಿಹೆನೇಂ? ಇಲ್ಲೇನು ವೈಚಿತ್ರಮೋ?
  ಹಾ! ತಂದಿಟ್ಟನುಯೆನ್ನೊಳಾ ಸುಮಶರನ್! ತಾರುಣ್ಯ ಚಾಪಲ್ಯಮಂ
  ಗೀತಂ ಪಾಡಿಹುದೈಮನಂ ಹರುಷದಿಂ! ಕಂಡೀತನಂ ಸೌಭಗನ್!

  • v2.0 🙂

   ಮಾತೊಂದಿಲ್ಲದೆ ನೋಡಿದಳ್ ಸುದತಿ ತಾನ್! ಶ್ರೀರಾಮನಂ ದಿಟ್ಟಿಸು-
   ತ್ತಾ ತಿಂಗಳ್ಪಗಲಲ್ಲಿ ತೋರುತಿಹುದೇನ್ ? ಕಂಡಿದ್ದು ವೈಚಿತ್ರಮೇ!
   ಹಾ! ತಂದಿಟ್ಟನೆಯೆನ್ನೊಳಾ ಸುಮಶರನ್! ತಾರುಣ್ಯ ಚಾಪಲ್ಯಮಂ
   ಗೀತಂ ಪಾಡಿಹುದೈಮನಂ ಹರುಷದಿಂ! ಕಂಡೀತನಂ ಪೆರ್ಚಿನಿಂ

 36. ಗೆಜ್ಜೆಯೊಡರ್ಚುತೆ ಚಲ್ಚಲಚಲ್ಲೆನೆ ಸಪ್ಪುಳಂ ತಟಕೆಂದು ತಾಂ |
  ಹೆಜ್ಜೆ ತೊಡರ್ದುದು ರಾಮನ ಹತ್ತಿರ ಬಂದೊಡಂ ನಯನಂ ಸಮಂ |
  ಲಜ್ಜೆಯಡರ್ದೊಡೆ ಪೋಗಲದೊಲ್ಲದೆ ಮತ್ತೆ ತಾಂ ಪೊರಮಟ್ಟಿತೈ |
  ಸಜ್ಜೆ ಪೊಡರ್ಚಿದಳೀತೆರನೊಳ್ ಜನಕಾತ್ಮಜಳ್ ವರದೃಶ್ಯಮಂ ||

 37. ಗೋಮೂತ್ರಿಕಾಬಂಧ

  ಪಾರ್ವನೇಂ ಜಯದಿಂದೆ ಬೇಡಲಾ ಕನ್ಯಳಿವ
  ನೊರ್ವನೀವಂ ಮನಕೆ ನಲಿವನ್ನು ಮಾತೆ
  ಸಾರ್ವನಯ್ ಜಸದಿಂಬು ಬೇಗಲಾ ಮಾನ್ಯಗಿವ
  ತೋರ್ವ ಶರ್ವಂಗೆ ನಸುನಗುವಲ್ಲೆ ಮಾಯೆ

  ರಾಮನು ಗೆಲ್ಲುವನೇ ಎಂಬ ಆತಂಕ ಸೀತೆಗೆ (ಅವಳು ಧಾವಂತದಿಂದ ತನ್ನ ತಾಯಿಯಾದ ಭೂಮಿತಾಯಿಯನ್ನು ಪ್ರಾರ್ಥಿಸುತ್ತಾಳೆ ಮೊದಲೆರಡು ಸಾಲಿನಲ್ಲಿ)
  ರಾಮನು ಗೆದ್ದೆ ಗೆಲ್ಲುವನು ಎಂಬ ಭರವಸೆ ವಿಶ್ವಾಮಿತ್ರನಿಗೆ,
  ಜನಕನಿಗು ಮತ್ತು ಶಿವನಿಗೂ ಕೂಡ ರಾಮನು ನಸುನಗುವಲ್ಲೇ ಪರಾಕ್ರಮವನ್ನು ತಿಳಿಸಿ ಕೊಡುತ್ತಾನೆ ಎಂಬ ವಿಶ್ವಾಸ ಮುನಿಗೆ (ಕೊನೆ ಎರಡು ಸಾಲಿನಲ್ಲಿ)

  • samasyapooraNa dhurandhara on the way to become chitrakavitaa chakravarti 🙂
   an effort and a different approach to be appreciated…way to go….

 38. ಜನಕಪೂರ್ವಜಂ ರಾಜಂ
  ನಿಮಿಯೆಂಬ ಪರಾಂತಕನ್|
  ದೇವರಾತ ಸುಭೂಪಾಲನ್
  ಷಷ್ಟಸಂತತಿ ನಂತರಂ||

  ಆಗೀಗಳೊರ್ಮೆ ದೇವರ್ಕಳ್
  ನೈಚ್ಯಂ ಬಗೆವರೆಮ್ಮವೊಲ್|
  ನೀಡರ್ದೆ ಪೋದರೀಶಂಗಂ
  ಹವಿರ್ಭಾಗವ ಯಜ್ಞದೊಳ್||

  ಕ್ರುದ್ಧಂ ಶಿವನದೊರ್ಮೆ ಜ್ಯಾ
  ಯಂ ಠೇಂಕರಿಸಿ ಬಿಲ್ಲಿನಾ|
  ಸಂಹರಿಸಲ್ಕೆ ತಾನುದ್ಯು
  ಕ್ತನಾಗಲ್ಕೆ ಸುರರ್ಗಳಂ||

  ಬೇಡಿ ಕ್ಷಮೆಯನಾಗಳ್ ನಾ
  ಕರು ಕೊಂಡಾಡಲೀಶನಂ|
  ದೇವರಾತಗೆ ತಾನಿತ್ತಂ
  ಶರ್ವಂ ಧನುವಿಶಿಷ್ಟಮಂ||

  ಖ್ಯಾತಂ ತಾನಾದುದಂದೇ ತಾನ್
  ಧನುಂ ಶಿವಧನುಸ್ಸದಂ|
  ಕಂಡನಿಂದದನಂ ರಾಮಂ
  ಸಂಗಡಂ ಋಷಿ-ಸೋದರಂ||

 39. ಬೈರಾಗಿ ಶಿವನಿಂದಂದಾ
  ವಾರಂ ಮೇಧವು ತಪ್ಪಿತೈ|
  ವೈರದಿಂದಿನ್ನದೆಂದೆಂದುಂ
  ಹೋರದೊಲ್ ಚಾಪಘೋರಮಂ||

  ಪಾಣಿಗ್ರಹಣಮೆಂಬೀ ವ್ಯಾ
  ಜದಿಂ ಭೇದಿಪೆನಿಂದಿದಂ|
  ದುಷ್ಟರ್ಗಲ್ಲದೆ ಶಿಷ್ಟರ್ಗಂ
  ಭೀತಿಪ್ರಾಯದ ಚಾಪಮಂ|

 40. ವಿಶಾಲ ವೇದಿಯಂ ರಾಮಂ
  ವೀಕ್ಷಿಸುತ್ತಲಿ ಸಾಗಿದಂ|
  ಗಾಥೆಯೆಂತನೊ ಪೇಳಿತ್ತೈ
  ಉಪಪತ್ತಿಗಳಲ್ಲಿನಾ||(evidences)

  ಭಿನ್ನವಲಯ, ಕಂಠೀಹಾ
  ರಂಗಳ್ ಮಂಜೀರ ಭೂಷಗಳ್|
  ಚೇಲವಲ್ಕಲ ಪುಷ್ಪಂಗಳ್
  ಧ್ವಸ್ತ(scattered)ವಿರ್ದಿರಲೆಲ್ಲಿಯುಂ||

  ರಾಜಾಧಿರಾಜ ಸಾಮಂತರ್
  ಯತ್ನಿಸಿರ್ಪರದೆಂತುಟೋ|
  ಜಗ್ಗದಿದ್ದಿತು ಚಾಪಂ ತಾನ್
  ಗರ್ವದಿಂದಲಿ ತಾನದೊಳ್||

  ’ಕಾವೆ ದೈವದ ಪ್ರೇಷಕ್ಕಂ
  ಧನುರ್ಭಂಗದ ಕಾಲಕಂ|’
  ಮನದೊಳ್ ಹಾಸ ಗೈಯುತ್ತುಂ
  ರಾಮನಿರ್ದಂ ನಿರಾಕುಲಂ||

 41. ಎದೆಯಂ ತಟ್ಟುತಲಿರ್ಪರೆಲ್ಲ ಕಡೆಯಿಂದೈತಂದ ಭೂಪರ್ ಕೆಲರ್
  ಪೊದೆಯಂತೆದ್ದಪ ಮೀಸೆಯಂ ತಿರುವುತುಂ ಪೊಂಗುತ್ತೆ ಮತ್ತಂ ಕೆಲರ್
  ಹೆದೆಯಂ ತನ್ನೆಡಗೈಯಿನೇರಿಪೆನಿದೋ ಯಃಕಶ್ಚಿತೆಂಬರ್ ಕೆಲರ್
  ಪದೆಯನ್ ತಾನವನೊರ್ರ್ವನೀಶಧನುಸನ್ ವಂದಿಪ್ಪನಾರಿಂತೊಳರ್?

 42. ತನ್ನ ಮುಂದೆ ಕ್ಷಣಕಾಲ ಕಾಲ್ದೆಗೆಯದೆ ನಿಂತ ಸೀತೆಯನ್ನ ಕಂಡ ಶ್ರೀರಾಮನ ಮನಸ್ಸಿನಲ್ಲಿ ಮೂಡಿದ ಭಾವನೆಗಳು ಹೀಗಿದ್ದಿರಬಹುದೇ?

  ಸೀತೆಯೇ ಭುವಿಜಾತೆಯೇ ಮೇಣ್ ಕ್ಷೀರ ಸಾಗರ ಜಾತೆಯೇ?
  ಸೀತೆಯೇ ಸುವಿನೀತೆಯೇ ಈರೇಳುಜಗವಿಖ್ಯಾತೆಯೇ!
  ಸೀತೆಯೇ ಶಶಿಕಾಂತಿಯೇ ನವರತ್ನ ಶೋಭಿತಮೂರ್ತಿಯೇ!
  ಸೀತೆಯೇ ಬಹುಪ್ರೀತೆಯೇ! ಮನವನ್ನು ನಿಮಿಷದಿ ಗೆಲ್ದೆಯೇ!

  ಸೀತೆಯೇ ಭುವಿಜಾತೆಯೇ ಮೇಣ್ ಕ್ಷೀರಸಾಗರ ಜಾತೆಯೇ?
  ಪ್ರೀತಿಯೇನತಿ ಪ್ರೀತಿಯೇ ನೀಯುಂಟುಮಾಡಿಹೆಯೆನ್ನೊಳೇಂ?
  ನೀತಿಯೇನಿದು ರೀತಿಯೇ ನೀಯೆನ್ನಮೊಗವನು ನೋಡದೇ?
  ಸೀತೆಯೇ? ನೀ ಸೋಲೆಯೇ? ರಘುರಾಮ ನಾ ಮನ ಸೋತಿಹೇ!

  (ಇಲ್ಲಿ ಬಳಸಿದ ಕೆಲವು ಪದಗಳು ವಿಜಯದಾಸರ ಸೀತೆಯ ಭೂಮಿ ಜಾತೆಯ ಅನ್ನುವ ಪದದಿಂದ ಪ್ರಭಾವಿತವಾಗಿವೆ. ಆಸಕ್ತರು ಆ ದೇವರನಾಮವನ್ನು ಇಲ್ಲಿ ಓದಬಹುದು: http://hamsanada.blogspot.com/2008/06/blog-post_18.html)

 43. ಹಿಗ್ಗುತ್ತುಂ ತಮ್ಮೆರ್ದೆಯೊಳುರುಬುತ್ತೆದ್ದು ತಟ್ಟುತ್ತೆ ತೋಳಂ |
  ನುಗ್ಗಿರ್ದರ್ ತಾಂ ನೊಸಲೊರಸುತುಂ ನುಂಗುತುಚ್ಛಿಷ್ಟಮಂ ಮಾ- |
  ತುಗ್ಗುತ್ತುಂ ಹಶ್ ಹುಶುಹುಶೆನುತುಂ ಹೋರ್ದು ಬೆಂದುಂ ಬೆಮರ್ದುಂ |
  ಕುಗ್ಗುತ್ತುಂ ಮುಗ್ಗುರಿಸಿ ತಲೆಯಂ ತಗ್ಗಿ ಸಿಗ್ಗಿಂ ಜಗುಳ್ವರ್ ||

  • ಶ್ರೀಕಾಂತ್ ಸರ್,
   ನೀವು ಕಥೆಯ ಇದೇ ಭಾಗವನ್ನು ಇಷ್ಟೇ ಸುಂದರವಾಗಿ ಕಟ್ಟುವಿರೆಂದು ತಿಳಿದಿತ್ತು . “ಮಂದಾಕ್ರಾಂತ” ಮುದನೀಡಿದೆ. ಧನ್ಯವಾದಗಳು .

 44. ಸರದಿಯಂತೆಯೆ ಹೊರಟ ರಾಯರು
  ಸರಸರನೆ ನಡೆಯುತ್ತ ಶಿವಧನು-
  ವಿರಿಸಿರುವೆಡೆಗೆ ಹೋಗಿ ಬಿಲ್ಲನ್ನೆತ್ತ ಹೊರಟಿರಲು
  ಅರರೆ! ಕಟ್ಟಿತು ಹಣೆಯ ಮೇಲೆ ಬೆ-
  ವರಿನ ಹನಿಗಳ ಸಾಲು! ಗೋಡೆಯ-
  ದುರಿತು! ಸಾಗದ ಕಾರ್ಯವಿದೆನುತ ನೆಲವು ನಡುಗಿತ್ತು!

  • innenu shivadhanassu muriyalide 🙂 oLLeya vivaraNe…..padyapaanigaru billu muriyuva kade gamana koTTu inneradu dinadalli ee climax talupidare…hoLi habbakke baNNadaaTavaaDabahudu 🙂

   when splitting one word across 2 gaNas, if we share at least 2 matres then it would be easier to read per Gati…example, ಮೇಲೆ ಬೆ, ಗೋಡೆಯ-ದುರಿತು …

   • ಅಂದಹಾಗೆ ಶ್ರೀಶ ಸರ್, ರಾಮಾಯಣದ “ಸ್ವಯಂವರ” ನಡೆದದ್ದು ಯಾವ ಶುಭದಿನ? (ರಾಮ ಶಿವಧನುಸ್ಸನ್ನು ಮುರಿದ ದಿನ)

   • ‘ಶಿವಧನುಸ್ಸನ್ನು ಮುರಿದವನಿಗೆ ಹೆಣ್ಣು’ ಎಂದಮೇಲೆ, ಸ್ವಯಂವರವೇಕೋ?

    • ಪ್ರಸಾದ್ ಸರ್,
     “ಸ್ವಯಂಸೇವಕ”ನ ಥರ “ಸ್ವಯಂವರ” = ತಾನೇ ಯೋಗ್ಯ ವರನೆಂದು ರುಜುವಾತು ಪಡಿಸುವುದು, ಅಲ್ಲವೇ?!

 45. (ಒಂದು ಗುಟ್ಟು – ಗೆದ್ದು ಸೀತೆಯ ಗೆಲ್ಲಲಿರುವ / ಸೋತ ಸೀತೆಗೆ ಸೋಲಲಿರುವ ರಾಮನ ಬಗ್ಗೆ !!)

  ತಟ್ಟಿರಲು ತನ್ನೆದೆಯ ಪಿಯರಾಮನೊಲವಿಂದೆ
  ತಟ್ಟನೆಯೆ ಸೋತಿರಲು ಸೀತೆನಲವಿಂ
  ಗಟ್ಟಿಗನು ಕಟ್ಟಿತಾನೆತ್ತುವನು ಧನುವಿಂದು
  ಗುಟ್ಟದನು ಪೇಳ್ವೆಕೇಳ್ ರಾಮಗೆಲವಂ ।

 46. ಏನ ಪೇಳಲಿ ಕೇಳು ರಾಯರ
  ಮಾನ ಪೋದುದು ಜನಕ ಭೂಪತಿ
  ತಾನು ಮಾಡಿದ ಪಾಪವೇನಿಹುದೆಂದು ಯೋಚಿಸಿರೆ
  ಜಾನಕಿಗೆ ಪರಿತಾಪ ಹೆಚ್ಚಿತು
  ಸಾನುರಾಗದಿ ರಾಮಚಂದ್ರನ-
  ದೇನು ಶಿವಧನುವೆಡೆಗೆ ಪೋಗನೆನುತ್ತ ಮಿಡುಕಿದಳು

 47. ಇತ್ತಕಡೆ ರಾಮನನ್ನೆಬ್ಬಿಸುತ ಲಕ್ಷ್ಮಣನು
  ಮತ್ತೆ ನುಡಿದಿಹನಲ್ತೆ ಹಸನುವಾತು
  ಅತ್ತ ಹೋಗೈದಾಶರಥಿ ರಾಮ ಧನುವೆಡೆಗೆ
  ಚಿತ್ತದಲಿ ನೀನಿಟ್ಟು ಮೈಥಿಲಿಯ ಮುದದಿ!

 48. ಪೊಗರಂ ತೋರ್ದಪ ರಾಜರಾನನದೊಳಂ ಬಿಲ್ಮೀಸೆಗಳ್, ರಾಘವಂ
  ಸಿಗನೆಂದೆನ್ನುತೆ ಕಾಲನೆರ್ಚೆ ಕುಹಕಂ ತಾನೆಂತುಗಯ್ವೆನ್ನುತುಂ
  ಮೊಗದೊಳ್ ಪುರ್ಬಿನ ಗಂಟು ಬಿಲ್ಲಿನೊಲೆ ತೋರ್ಗುಂ ಕನ್ಯೆಳಾತಂಕಿಸಲ್
  ಸೊಗಮಯ್ ಬಿಲ್ಗಳ ಖಂಡಿಪಾಖ್ಯೆ ಶಿವನಾ ಬಿಲ್ಭಂಗಮಂ ಮಾಳ್ಪನಿಂ

  ಬಿಲ್ಮೀಸೆ = ಬಿಲ್ಲಿನ ರೀತಿಯಿರುವ ಮೀಸೆ
  ಕಾಲನೆರ್ಚೆ = ಕಾಲನು ಎರಚೆ

  ಸೀತೆಯನ್ನು ವರಿಸಬಯಸಿದ ರಾಜರ ಬಿಲ್ಲಿನಾಕಾರದ ಮೀಸೆಗಳು… ರಾಮನು ಸಿಗದಿದ್ದೆರೆ ಎಂಬ ಆತಂಕದಿಂದ ಬಿಲ್ಲಿನರೀತಿ ಗಂಟಿಟ್ಟ ಸೀತೆಯಹುಬ್ಬು… ಈ ರೀತಿ ಶಿವಧನುಸ್ಸನ್ನು ಭೇದಿಸಿದವನ ಎಷ್ಟೋ ಬಿಲ್ಲುಗಳನ್ನು ಭೇದಿಸಿದ ಹೆಗ್ಗಳಿಕೆ ಬಹಳ ದೊಡ್ಡದು

 49. ರಾಮ ಎದ್ದು ಶಿವಧನುವಿಟ್ಟೆಡೆಗೆ ನಡೆದಿರಲು:

  ರಾಮ ಹೊರಡಲು ಹರಧನುವಿನೆಡೆ ಶಿವನ ನುತಿಸುತ ಚೆಂದದಿಂ
  ತಾಮರೆಯನೇ ಪೋಲ್ವಕಂಗಳ ದಿಟ್ಟ ನಡಿಗೆಯ ಧೀರನ
  ಕಾಮದೇವನ ಚೆಲ್ವಮೀರಿಹ ಠೀವಿನೋಡುತ ಸೀತೆಯು
  ಹಾ! ಮನದಿನಿಯನೀಗ ಹೊರಟಿರೆ ಜೀವವುಳಿಯಿತುಯೆಂದಳು!

  ರಾಮ ಹೊರಟಿರೆ ನಮಿಸಿ ಜನಕಗೆ ಹರನಚಾಪವನಿಟ್ಟೆಡೆ
  ತಾಮರೆಯನೇ ಪೋಲ್ವಕಂಗಳ ದಿಟ್ಟ ನಡಿಗೆಯ ಧೀರನ
  ಕಾಮದೇವನ ಚೆಲ್ವಮೀರಿಹ ಠೀವಿನೋಡುತ ಸಜ್ಜನರ್
  ರಾಮನೇ? ಇವ ಸೋಮನೇ! ಮನದಭಿರಾಮನೇ ಸರಿಯೆಂದರು!

 50. ಕಂಬಂಬೋಲ್ ಕಾಲ್ ಕಡಗಿ ಕಿಡಿಗಳ್ ಕೈಗೆ ಕೈದಟ್ಟಿ ಪುಟ್ಟಲ್
  ಲಂಬಂ ತೋಳ್ಗಳ್ ರಗಡುದೊಡೆಗಳ್ ರಾಚಿ ಭೂಬಾನನಟ್ಟಲ್
  ತುಂಬುತ್ತುರ್ಬಲ್ ದೊರೆಯಿಲದುರಂ ತುಯ್ದು ಬಂದೀಳ್ದು ಕಟ್ಟಲ್
  ಕೊಂಬಂ ರಾಮಂ ಹರನಧನುಸಂ ಬೊಂಬವೋಲ್ ಕಂಡುದಾ ಬಿಲ್

  • ಮಂದಾಕ್ರಾಂತೆಯು ಎಲ್ಲಬಗೆಯಿಂದ ಚೆನ್ನಾಗಿದೆ. ಸಣ್ಣದೊಂದು ಸವರಣೆ: ಹರನ ಧನುಸಂ ಎಂಬುದು ಹರನ ಧನುವಂ ಎಂದಾದಲ್ಲಿ ಮತ್ತೂ ಸುಖಕಾರಿ.

 51. ಚಾಪವನ್ನೆತ್ತಲಾರರ್ ಮೇಣ್
  ಪೆಣ್ಣಿನಾಶೆಯನುಂ ಬಿಡರ್|
  ಸೋತೊಡೇಂ ಗುಮ್ಮರೇಂ ರಾಜರ್
  ಸೇರಿ ಯುದ್ಧವ ಸಾರಿರಲ್||

  ಸಂವತ್ಸರಕುಮಾಧಿಕ್ಯಂ
  ಯುದ್ಧಕಾಲವು ಸಂದುದೋ|
  ಹೋರಿದಂ ವೀರ್ಯದಿಂ ರಾಜನ್
  ಸೈನ್ಯಂ-ಶಸ್ತ್ರಂ ಬಹಂವರಂ||

  ಕೋರಿ ದೇವರ ಸಾಹಯ್ಯಂ
  ಚತುರಂಗಬಲಂ ಸಿಗಲ್|
  ರಾಜರೆಲ್ಲರನುಂ ಘಾತಂ
  ಗೊಳಿಸಿರ್ದಂ ನೃಪೇಶ್ವರಂ||

  (ಸ್ಥಿರಮಾದುದು ಸಾಮರ್ಥ್ಯಂ
  ಜನಕ ಖ್ಯಾತಿಯಾಂತಿರಲ್|
  ದಾರಿಹೋಕರದಿನ್ ಬಾರರ್
  ಕಾಂಜಿಪೀಂಜಿಗಳಿನ್ನು ತಾವ್||)

 52. ಇನಕುಲಜ ರಾಮನೋ ನೀಲವರ್ಣನು ಜೊತೆಗೆ
  ಮನದನ್ನೆ ಜಾನಕಿಯ ಕದಪು ಕೆಂಪು
  ಮನಸೆಳೆಯೆ ವಧುವರರ ಪಚ್ಚೆಪೀತಾಂಬರವು
  ಜನಕನೋಲಗದಲ್ಲೆ ಹುಣ್ಣಿಮೆಯ ಹೋಳಿ!

  (There may be some grammatically incorrect constructs, and lagam prayOgas, but could not help posting this just in time for hOLi huNNime 🙂 )

  • ಹಂಸಾನಂದಿಯವರೇ, ಹೋಳಿ ಹುಣ್ಣಿಮೆಯಂದು ಬಣ್ಣದ “ಓಕುಳಿ ” ತಂದಿದ್ದೀರಿ. ವಧುವರರಿಗೆ ಆರತಿ ಮಾಡದಿದ್ದರೆ ಹೇಗೆ?
   ಬನ್ನಿ ಕಾಂಚನ, “ಸೀರಾ-ರಾಮ”ರಿಗೆ ಆರತಿ ಮಾಡೋಣ.

   ಆರತಿ ಎತ್ತಿರೆ ಶ್ರಿರಾಮಗೇ । ಆರತಿ ಎತ್ತಿರೆ “ರಾಮಚಂದ್ರ”ಗೆ ॥

   ಶಿವ ಕೋದಂಡವ ನೆತ್ತಿದವಗಾರತಿ ।
   ನವ ಕಾಮಾರ್ಥವ ಬಿತ್ತಿದವಗಾರತಿ ।
   ಅಂದದ ಚಂದಾ, ರಾಮ ರಘುರಾಮನ ।
   ಸುಂದರ ಸತಿ ಸೀತಮ್ಮನಿಗಾರತಿ ॥೧॥

   ವಿಶ್ವಾಮಿತ್ರ ಪ್ರಿಯ ಶಿಷ್ಯಗಾರತಿ ।
   ವಿಶ್ವಾಸಪಾತ್ರ ಪರಿಶುದ್ಧಗಾರತಿ ।
   ಅಂದದ ಚಂದಾ, ರಾಮ ರಘುರಾಮನ ।
   ಸುಂದರ ಸತಿ ಸೀತಮ್ಮನಿಗಾರತಿ ॥೨॥

   • ಸುಂದರಕಲ್ಪನಂ ಸ್ತುತಿಗೆ ಸಲ್ಗುಮಿದೆಂಬುದು ನಿಶ್ಚಯಂ ಮನ-
    ಸ್ಸ್ಪಂದಕಮಪ್ಪ ಕಲ್ಪನೆಗಳೀ ಪರಿ ದಾಂಗುಡಿಗೊಂಡು ಸಾರೆ ವೇ-
    ಳ್ಕುಂ ದರಕೋಮಲಾಮಲಮನೋಜ್ಞಪುರಂಧ್ರಿಜನೋಚಿತಂ ಸುಧಾ-
    ಸ್ಕಂದಿತಭಾವಮಲ್ತೆ! ಕದಲಾರತಿಯಾದುದು ಕೀರ್ತಿ ನಿಮ್ಮಯಾ!!

    • .ಗಣೇಶ್ ಸರ್,
     ಸಡಗರದ ಗಟ್ಟಿಮೇಳದ ನಡುವೆ ಗುನುಗಿದ ಆರತಿಹಾಡನ್ನಾಲಿಸಿ ನೀಡಿದ ಸಂಭಾವನೆಗೆ (ಆರತಿ ತಟ್ಟೆಗೆ ಹಾಕಿದ ದಕ್ಷಿಣೆ!) ಧನ್ಯವಾದಗಳು .
     (ಮತ್ತೊಂದು ವಿಶೇಷವೆಂದರೆ ಈ ಆರತಿಹಾಡು “ಸಾಮೂಹಿಕ ಪದ್ಯ ಕಥೆ”ಗೆ ಕಾರಣರಾದ ಇಬ್ಬರು “ರಾಮಚಂದ್ರ”(KBS)ರಿಗೂ)

  • hamsanandi, hOLiya kalpane chennAgide 🙂

  • ವ್ಯಾಕರಣದ ಕಾಕೇಂ? ನಿ-
   ರ್ವಾಕಮಿರದ ಶುಷ್ಕಶಾಸ್ತ್ರಪಾಂಡಿತ್ಯದಿನೇಂ?
   ಲೋಕಾಭಿರಾಮಕಲ್ಪನೆ-
   ಯೋಕುಳಿಯಂ ಚೆಲ್ಲಿರಲ್ಕೆ ನೆನೆವುದೆ ಸಲ್ಗುಂ !!

   ಸೊಗಸಾದ ಕಲ್ಪನೆಯುಳ್ಳ ಕವಿತೆಗಾಗಿ ಧನ್ಯವಾದ. ನಿಮ್ಮೀ ಪದ್ಯದಲ್ಲಿ ಕೇವಲ “ವಧುವರ” ಎಂಬಲ್ಲಿ ಸ್ವಲ್ಪ ಶೈಥಿಲ್ಯ ಬಂದಿದೆ; ಅಷ್ಟೆ:-) ಉಳಿದದ್ದೆಲ್ಲ ನಡುಗನ್ನಡಕ್ಕೆ ಉಚಿತವಾಗಿದೆ.

 53. ಗಂಧರ್ವಾಸುರದೇವರ್ಗಳ್
  ರಾಕ್ಷಸರ್ ಯಕ್ಷ ಕಿಂಕರರ್|
  ಧನುವನ್ನೆತ್ತದಾದರ್ ತಾವ್
  ಮನುಜರ್ ಮೇಣ್ ಮಹೋರಗರ್||

  ಎತ್ತಲಾರರ್, ಅದನ್ನೆತ್ತಲ್
  ಬಗ್ಗಿಸಲ್ಕೆ ತಿಣುಂಕುವರ್|
  ಬಗ್ಗಿಸಿ ಜ್ಯಾಯಮಂ ಯಾರುಂ
  ಬಿಗಿಸಲ್ಕಾಗದಿರ್ದಿತೈ||

  ಧನುಷ್ಟಂಕಾರಮಿನ್ನಾರ್ ಪೇಳ್
  ಗೈವರ್ ಹೆದೆಯನೇರಿಸಿ|
  ಶರಸಂಧಾನಮೇಮೆಂಬೆಂ
  ಕಲ್ಪನಾತೀತ ಸಾಹಸಂ||

  • *ಧನುಷ್ಟಂಕಾರಮಂ ಮೇಣಾ
   ರಿಲ್ಲಂ ಕೇಳ್ದವರೆಲ್ಲಿಯುಂ|

 54. ಸ್ವಯಂವರದ ವೇಳೆ ರಾಮನ ಕೈಯಲ್ಲಿ ಮುರಿದ “ಶಿವಧನು”ವ ಕಂಡು ಮೂಡಿದ ಸಂದೇಹ / ಸಮಾಧಾನ )
  ಮನದನ್ನೆ ವರಿಸಲವನೆತ್ತಿಕಟ್ಟಿರೆ ಧನುವ
  ಮನುಕುಲವೆ ಹರಸಿತೈ ತಟ್ಟಿಕರವಂ
  ಮನಮನವ ಬೆರಸಲಿಕೆ ಕಟ್ಟುವೆದೆಯಾದಾರ
  ಧನುತುದಿಯ ಬೆಸೆಯೆ ಹೆದೆಯಾಧಾರವೈ।
  ಧನುವಾಗ ಮುರಿದಾಗ ಬೇರಾದ ತುದಿಗಳಿಂ
  ದನುಮಾನವಿದು ಸೃಷ್ಟಿ ಶಕುನವೇನೈ ?
  ಅನುರಾಗವತಿಯಾಗೆ ಮುರಿದಿಹುದು ಬಿಲ್ಲೆಂಬ
  ವನುಭಾವವದು ದೃಷ್ಟಿ ಶಮನವೇನೈ ?

 55. ಸೂಕ್ತಕಾಲಮೊದಂಗಲ್ಕಾ
  ವಿಶ್ವಾಮಿತ್ರ ಮುನೀಂದ್ರ ತಾಂ|
  “ವತ್ಸ, ರಾಮ, ಧನುಸ್ಸಂ ನೀಂ
  ನೋಡುಗೀಗಳಂ” ಎಂದಿರಲ್||

  ನಗುತ್ತೆ ರಾಮನಿಂತೆಂದಂ
  ಮಾತ್ರಂ ನೋಡುವೆ ನಾನದಂ|
  ಎತ್ತಲಾಪುದೊ ಕಾಣೆಂ ನಾಂ
  ಸ್ಪರ್ಶಗೈದಾರೆ ಹರ್ಷಿಪೆನ್||

 56. ಗೈಯೆ ಸ್ಪರ್ಶವನುಂ ರಾಮಂ
  ಉರುಚಾಪವು ಪೂಮಯಂ|
  ತಾನಾಯ್ತುತ್ತರ ಕಜ್ಜಕ್ಕಂ
  ಯುದ್ಧಮೇಂ ಪಾಣಿಗ್ರಾಹಣಂ?

 57. ಸಮರ್ಥಂ ರಾಮ ತಾ ಭಿನ್ನಂ
  ಗೈಯಲಾಪರಿ ಬಿಲ್ಗಳಂ|
  ದಕ್ಷಂ, ಭಿನ್ನವ ಗೈಯರ್ದೆ
  ಹೆದೆಯೇರಿಸಲಾರನೇಂ?

  ಜನಕಾತ್ಮಜೆ ತಾನೇತಾ
  ನಾಗಿರ್ದಳ್ ರಾಮಜಾನದೊಳ್|
  ಜ್ಞಾನಾಂತರದೆ ರಾಮಂ ತಾ
  ಹೆದೆಯಂ ಬಿಗಿಗೈದನೇಂ!!

  • ಅನುಷ್ಟುಪ್ ಶ್ಲೋಕದೊಳ್ ಮುನ್ನಂ ವಾಲ್ಮೀಕಿಯುಲಿದಂದದಿಂ |
   ಘನೋದ್ದೇಶದೆ ನಿಮ್ಮಿಂದೀ ಪದ್ಯಪಾನದ ಪಂಕ್ತಿಯೊಳ್ ||

   ಪುಂಖಾನುಪುಂಖಮಿಂತಪ್ಪ ಪದ್ಯಂಗಳ್ ಪಡಿಮೂಡಿರಲ್ |
   ಪ್ರೇಂಖಾಂದೋಲಿತೆಯಪ್ಪಳ್ ದಲ್ ವಾಗ್ವಧೂಟಿಕೆ ಧಾಟಿಯಿಂ ||

   ಸೀತಾರಾಮರ ವೈವಾಹಂ ಸ್ಫೀತಸುಂದರವಸ್ತು ದಲ್ |
   ಖ್ಯಾತಿಪ್ರೀತಿಗಳಂ ನೀಳ್ಗುಂ ಕವಿಲೋಕಕೆ ಸರ್ವಥಾ ||

   ಇಂತಪ್ಪ ಕಬ್ಬಮಂ ಪರ್ಬಂ ತಾನೆಂಬಂತೆ ಪದೇ ಪದೇ |
   ಚಿಂತಿಸುತೊಲವಿಂ ಕೋದೀ ನಿಮ್ಮುತ್ಸಾಹಕೆ ಮುಗ್ಧನಾಂ ||

   ಆದೊಡಂ ಶ್ಲೋಕಮಂ ನಮ್ಮೀ ನುಡಿಗೊಪ್ಪುವ ಪಾಂಗಿನಿಂ |
   ಮಾದ ಮಾಗಾಯವೊಲ್ ಗೆಯ್ಯಲ್ ಪಳಗನ್ನಡಮುತ್ತಮಂ ||

   ಅಲ್ಲಲ್ಲಿ ಜಾರ್ದುದೀ ಜಾಣ್ ದಲ್ ನಿಮ್ಮ ಪದ್ಯಂಗಳೊಳ್ ಕರಂ |
   ಸಲ್ಲಿಸಿಂ ಸಕ್ಕದಂ ನೀಳ್ವಿನ್ನೆಲ್ಲಚೆಲ್ವನುಮಂತೆಯೇ ||

   ನಿಮ್ಮೀ ಶ್ಲೋಕಕ್ರಿಯಾರಂಭಂ ಪದ್ಯಪಾನದ ಮಿತ್ರರೊಳ್
   ಸುಮ್ಮಾನದಿಂದನುಷ್ಟುಪ್ಪಂ ರಚಿಪಂತುರೆ ಚೋದಿಕೆ ||

   ಇದೀಗಳ್ ವಿನೋದಂ; ರಘೂತ್ತಂಸಸೀತಾ-
   ಮುದಾದಾನವೈವಾಹಲೀಲಾಪ್ರಸಂಗಂ |
   ಪದುಳ್ಗೊಂಡಿರಲ್ ಬೀಗರೇಂ ಬೀಗರೇ? ಮೇ-
   ಣದೇಂ ರಂಪಮಿನ್ನೆಲ್ಲಿ ಪೇಳ್ ಹಾದಿರಂಪಾ!!!

  • Does your ‘ಬೀಗರೇಂ ಬೀಗರೇ’ bear reference to my verse ‘………..ಹೆದೆಯಂ ಬಿಗಿಗೈದನೇಂ!!’?

   What I have said is this: ರಾಮನು ಬಿಲ್ಲನ್ನು ಮುರಿಯುವಷ್ಟು ಶಕ್ತಿವಂತನೇ ಆದರೂ, ಮುರಿಯದೆ ಹೆದೆಯೇರಿಸುವಷ್ಟು ಕುಶಲಿಯೂ ಹೌದು. ಪ್ರಸ್ತುತದಲ್ಲಿ, ಮನದಲ್ಲಿ ಸೀತೆಯೇ ತುಂಬಿದ್ದರಿಂದ, ಅವನು ಯಾವುದೋ ಜ್ಞಾನದಲ್ಲಿ ಹೆದೆಯನ್ನು ತುಸು ಬಿಗಿಯಾಗಿ ಕಟ್ಟಿದ್ದರಿಂದ ಬಿಲ್ಲು ಮುರಿಯಿತು.

 58. ಬಗ್ಗಿಸಿದ – ಬಿಲ್ಲ; ನೆರೆದಿರ್ಪ ರಾಯರಸೊಕ್ಕ
  ನಗ್ಗದಲಿ ಬೆಳೆದಕೀರುತಿಬೆಟ್ಟಮಮ್ |
  ಹಿಗ್ಗಿಸುತಲೇರಿಸಿದ – ಹೆದೆಯನುಂ; ರಘುವಂಶ
  ದಗ್ಗಳಿಕೆಯ೦; ನೋಳ್ಪಜನರ ಪುಬ್ಬಂ ||

  ಸೇರಿರುವ ಇತರ ರಾಜರ ಸೊಕ್ಕನ್ನೂ, ಕಾರಣವಿಲ್ಲದೆಯೇ(ಅಗ್ಗವಾಗಿ) ಬೆಳೆದ ಅವರ ಕೀರ್ತಿಶಿಖರವನ್ನೂ ಹಾಗೂ ಸ್ವಯಂವರದ ಪರೀಕ್ಷೆಗಾಗಿ ಇಟ್ಟ ಬಿಲ್ಲನ್ನೂ ಬಗ್ಗಿಸಿದ. ರಘುವಂಶದ ಹೆಚ್ಚುಗಾರಿಕೆಯನ್ನೂ ಜನರ ಹುಬ್ಬನ್ನೂ ಮತ್ತು ಬಿಲ್ಲಿಗೆ ಎಳೆದ ಹೆದೆಯನ್ನೂ ಏರಿಸಿದ.

  • ಅತ್ಯುತ್ತಮಕಲ್ಪನೆಯುಂ
   ಸ್ತ್ಯುತ್ಯರ್ಹಮೆನಿಪ್ಪಲಂಕೃತಿಯುಮಿಲ್ಲೆಸೆಯಲ್ |
   ಕೃತ್ಯಮಿದಾದುದು ನಿನ್ನಾ
   ಪ್ರತ್ಯಗ್ರಂ ಕುಂತಕಾದಿಪಠನಫಲಂ ದಲ್!!

   ಇಲ್ಲಿಯ ಸಹೋಕ್ತ್ಯಲಂಕಾರಗಳ ಜೋಡಿಮೇಳವು ಸೀತಾರಾಮರ ವಿವಾಹಕ್ಕೆ ಸೊಗಸಾದ ಹಿಮ್ಮೇಳವೆಂದರೆ ಯುಕ್ತ. ಅಭಿನಂದನೆಗಳು.

   • ಅಸ್ದಾಗೇನೋ ಉಂಡಿದ್ ಸುಕ್ದಾಗ್ ಸ್ವರ್ಗಕಾಣ್ತಿದ್ದೋನ್ಗೆ
    ಐಸ್ಕ್ರೀಮ್ ತಿನ್ತ್ಯಾ ಅಂತ್ಯಾರೋ೦ದ್ರೆ ಏನಾಗ್ಬೈದು ಯೋಳಿ ?
    ಒಳ್ದಿದ್ ಐಡ್ಯಾನ್ ಪದ್ಯಮಾಡಿ ಪಾನ್ದಲ್ಲಿ ಆಕ್ದೋನ್ಗೆ
    ಅವ್ಧಾನೀಗಳ್ ಅವಾರ್ಡ್ ಸಿಕ್ತು ಗ್ಯಾನ್ಪೀಟ ಸಿಕ್ದಂಗೆ !!!

    ಧನ್ಯವಾದಗಳು ಸಾರ್.

    • clap clap

    • ಕುಡ್ಕ್ರಲ್ದೋರೂ ಈಮೆಟ್ನಾಗೆ ಈಟೊಂದ್ ಸಂದಾಕ್ ಬರ್ದ್ರೆ
     ಕುಡ್ಕ್ರೆಲ್ಲೋರೂ ಯೆಂಡ ಕುಡ್ತಾ ಕಣ್ಬಾಯ್ ಬಿಟ್ಗಂಡ್ ಕುಂತು
     ಕುಡ್ಕ್ರಂಗ್ಡಿಗ್ಳೂ ಮುಚ್ಗಂಡೋಗಿ ದೇಸ್ದಾಗ್ ಹಾಕಾರ್ವಾದ್ರೆ
     ಉಂಡೋರ್ತಪ್ಪೋ ಉಂಡ್ಸೋರ್ದೋಂತ ಹೈಕಳ್ ಕೇಳಾಕಿಲ್ವ್ರಾ

   • ಇಂದ್ಲೋರ್ನೆಲ್ಲ ನೋಡ್ಲ ಶ್ರೀಶ ಪೀಟ ಗಿಟ್ಟಿಸ್ದೋರ್ನ
    ಇತ್ತಿತ್ಲಾಗೆ ಒಡ್ಕೊಂಡೋರ್ನ್ ಗ್ಯಾನಿಗ್ಳೂಂತಂತಂತ್ಯ?
    ಪಂಕ್ತಿ ಬೇದ ಮಾಡ್ಬ್ಯಾಡ್ದೂಂತ ನೀನೂನೂ ಎಂಗೆಂಗೋ
    ಅಡ್ಡಗ್ಯಾನ್ದಾಗೇನೋ ಗೀಚಿ ಪಡ್ಕೊಂಡ್ಯಲ್ಲೊ ಪಿತ್ತ (ಪೀಠ)

  • Very dramatic. We can actually see eyebrows go up! Fine.

  • Ram,
   ’ಹಾಹಾಕಾರ’ವನ್ನು ’ಹಾಕಾರ’ಕ್ಕೆ ಇಳಿಸಿದ್ದು ಚೆನ್ನಾಗಿದೆ.

 59. ಬಗ್ಗಿಸಿರೆ ಬಿಲ್ಲನಾರಾಮ ಮನದಭಿರಾಮ
  ಹಿಗ್ಗುತಲಿ ಜಾನಕಿಯ ಮೊಗವರಳಿದೆ!
  ಅಗ್ಗಳವೆ ಸೈ! ಜೋಡಿಯೆನ್ನುತಿರೆ ನೆರದವರು
  ಸಗ್ಗವೇ ಬಂದಿಹುದು ಮಿಥಿಲೆಪುರಕೆ !

 60. ಹೆಚ್ಚಿದ ಕುಶಲತೆಯಿಂ ಮನ
  ಮೆಚ್ಚಿಸುವಂತೆಲ್ಲಪದ್ಯಗಳು ಮಿಂಚುತ್ತಲ್
  ಹಚ್ಚಿದ ಹಣತೆಗಳಂದದಿ
  ಕಿಚ್ಚಿನಹಾಸಾಯ್ತೆ ಮಿಥಿಲೆ ಬೈತಲೆಬೆಳಗಲ್

 61. ಶ್ರೀರಾಮನು ಬಿಲ್ಮುರಿದಾಗ ಹೊಮ್ಮಿದ ಮಹಾಶಬ್ದದ ವರ್ಣನೆ:

  ಶ್ರೀರಾಮಂ ಮುರಿದೀಶಚಾಪರವಮೇಂ ಸಾಮಾನ್ಯಮೇ? ರಾವಣ-
  ಸ್ಫಾರೋತ್ಕರ್ಷವಿನಾಶಕಾಲಮಹಿಷಗ್ರೈವೇಯಘಂಟಾರವಂ |
  ಜಾರಿರ್ಪ ತ್ರಿದಿಶಾತ್ಮಸಾಂತ್ವನಸುಧಾಮಂಥಾನಹೇಲಾರವಂ
  ಸ್ಮೇರಾಕೂತಮಹೀಸುತಾಮಧುಮನೋಮಾಂಗಲ್ಯಭೇರೀರವಂ ||

 62. ಮಂಗಳವು ಸಿಂಗಾರಿ ಸೀತೆ ಮುಖಕಮಲಕ್ಕೆ
  ತಂಗದಿರನಂತೆಸೆವ ಶ್ರೀರಾಮಗೆ ।
  ಮಂಗಳವಿರಲಿ ಸಕಲ ಜನಕೆಲ್ಲ ಹರಸುವೆವು
  ಪೊಂಗುತಿರಲೆಲ್ಲೆಲ್ಲು ಸುಖಶಾಂತಿಯು ॥

 63. ಒಳ್ಳೆಯ ವಿಷಯವಿದ್ದಾಗಲೂ ಏನೂ ಪ್ರಯತ್ನ ಪಡದ ನನ್ನ ಬಗ್ಗೆ ನನಗೇ ಕೋಪಬರುತ್ತಿದೆ. ಅದಿರಲಿ, ಚಿಕ್ಕ ವಯಸ್ಸಿನಿಂದ ಹಾಡಿಕೊಂಡು ಬಂದಿರುವ , ನಮ್ಮ ಮನೆಯವರಿಗೆಲ್ಲಾ ಬಹಳ ಇಷ್ಟವಾದ ಈ ಹಾಡನ್ನು ಹಾಕುತ್ತಿದ್ದೇನೆ.

  ಓಡೋಡಿ ಬನ್ನಿರೋ ರಾಮಶುಭ ಕಲ್ಯಾಣ
  ರಾಮಶುಭ ಕಲ್ಯಾಣ ನೋಡೋಣ ಬನ್ನಿರೊ
  ನೋಡೋಣ ಬನ್ನಿರೊ

  ಜನಕನ ಮಗಳಂತೆ ಹೆಸರು ಜಾನಕಿಯಂತೆ
  ಜಗದೊಳಗಾಕೆಯ ಸಮರಿಲ್ಲವಂತೆ
  ಶಿವಕೊಟ್ಟ ಧನುವಂತೆ ಪಣವಾಗಿಟ್ಟಿಹರಂತೆ
  ಧನು ಮುರಿದ ವೀರನ್ನಾಕೆ ವರಿಸುವಳಂತೆ

  ಕೌಶಿಕ ಯಾಗ ಸಂರಕ್ಷಣೆ ಮಾಡುತಾ
  ಶಿಲೆಯಾದಹಲ್ಯೆಯ ಸಲಹಿದನಂತೆ
  ಸರಯೂ ನದಿಯಾ ದಾಟಿ ಮಿಥಿಲಾ ಪುರವ ಸೇರಿ
  ನೆರೆದ ರಾಜರೊಳೆಲ್ಲ ರವಿಯಂತ್ ಹೊಳೆದನಂತೆ

  ಇಟ್ಟ ಧನುವಾನಾಗ ಥಟ್ಟನೆ ಮುರಿಯುತ
  ದಿಟ್ಟ ರಾಜರೊಳೆಲ್ಲ ಗಟ್ಟಿ ಎನಿಸಿದನಂತೆ
  ಸುರರು ಸಂತಸ ತಳೆಯೆ ಅಸುರರ ಎದೆ ಬಿರಿಯೆ
  ಆ ಶಿವಧನುವನಾಕ್ಷಣವೆ ಮುರಿದನಂತೆ

  ದೇವದುಂದುಭಿ ಮೊರೆಯೆ ಜಯವಾದ್ಯ ಭೋರ್ಗರೆಯೆ
  ಜನಕ ರಾಜನು ಸಂತಸವ ತಾಳಿದನಂತೆ
  ಜಾಜಿ ಸಂಪಿಗೆ ಪಾರಿಜಾತ ಮಲ್ಲಿಗೆ ಮೊಗ್ಗು
  ಹಾರವ ಹಿಡಿದು ವೈಯ್ಯಾರಿ ನಿಂತಿಹಳಂತೆ

  ಶೃಂಗಾರವಾಗಿಹ ರಂಗಮಂಟಪವಿಳಿದು
  ಮುಗಿಲ ಮಿಂಚಿನಂತ್ ಹೊಳೆಯುತ ಬಂದಳಂತೆ
  ಲಾಜಾ ದಕ್ಷತೆ ವಿಪ್ರರಾಶೀರ್ವಚನಾದಿ
  ರಾಮರ ಕೊರಳೊಳು ಹಾಕುವಳಂತೆ

  ಸೀತೆ ಶ್ರೀಲಕ್ಷ್ಮಿಯು ಶ್ರೀರಾಮ ನಾರಾಯಣ
  ಶ್ರೀಸೀತಾರಾಮರ ಲಗ್ನಕ್ ಹೋಗುವ ಬನ್ನಿ
  ಹಬ್ಬ ಮಾಡುವ ಬನ್ನಿ ಉಬ್ಬಿ ಕುಣಿಯುವ ಬನ್ನಿ
  ಶ್ರೀರಾಮರ ಪದವ ಹೇಳೋಣ ಬನ್ನಿ

  ನನ್ನ ತಾಯಿ ಶ್ರೀಮತಿ ಇಂದಿರಾ ರವರು
  ಇದನ್ನು ಹಾಡಿರುವುದನ್ನು ಇಲ್ಲಿ ಕೇಳಬಹುದು.
  http://gamakamandali.blogspot.in/2012/05/indira-venkatesh-at-malleshwaram.html

 64. ಸೀತಾರಾಮರ ಪರಸ್ಪರ ಮಾಲಾವಿನಿಮಯದಿಂದ ಈ ಸುಂದರಕವಿತಾಸಂಚಿಕೆಗೆ ಮಂಗಳ ಹಾಡಬಹುದೆನಿಸುತ್ತದೆ. ಏಕೆಂದರೆ ಅವರ ವಿವಾಹದ ವೈಭವ-ವಿನೋದಗಳಿಗೆ ಮತ್ತೊಂದು ಸಂಚಿಕೆಯೇ ಬೇಕಾದೀತು!

  ಪ್ರೀತಿಪರೀಮಳಂ ಸುಳಿವ ನೇಹದ ವೂಗಳ ಮುಗ್ಧಮಾಲೆಯಂ
  ಸೀತೆಯು ರಾಮಕಂಠಕೆ ನಿವೇದಿಸೆ ನಲ್ಮೆಯ ತಿಣ್ಣಬಣ್ಣದಿಂ
  ದ್ಯೋತಿಪ ಸಖ್ಯಸೌಖ್ಯಸುಮಮಾಲೆಯನಾಕೆಗೆ ರಾಮನೊಲ್ಮೆಯಿಂ
  ದಾತತಶಕ್ತಿಯಂ ತುಡಿಸೆ ಮೋದಮನಾನದೆ ಮೂಜಗಂ ಕರಂ ?

  ಆದಿಕವೀಂದ್ರನ ಕವಿತಾ-
  ಹ್ಲಾದಮೆ ಸುಮಮಾಲೆಯಾಗಿ ಮೆರೆದಿರಲವರೊಳ್ |
  ಹಾದಿಯನವನಾ ವಿಡಿದೆ-
  ಮ್ಮೀ ದೀಕ್ಷೆಯ ನುಡಿಗಳಾಗವೇ ಪುಡಿವೂಗಳ್ ?

 65. What a summarization (ಕಂದ)!

  ಗುರುನಮನ:
  ಪ್ರಕ್ಷೇಪಮಿರ್ಪವೋಲಾ
  ಕುಕ್ಷಿಯೊಳಂ ರಾಮಗಾಥೆಯಂದದೆ ನಮ್ಮೀ|
  ರೂಕ್ಷಕವಿತ್ವಮೆನುತ್ತುಂ
  ರಕ್ಷೆಯನಿತ್ತಾದಿಕಬ್ಬಿಗಪ್ರಾಯ ನಮೋ||

  ರಾಮನಮನ:
  ರಾಮ ಕಾಯುಗೆ ಸೀತೆ ಕಾಯುಗೆ
  ರಾಮಕಾಯಕ ಗೈದ ’ವಾಯು’ವ
  ನೇಮ ಕಾಯುಗೆ ರಾಮನಾಮವ ನುಡಿದ ಮಂದಿಯನು|
  ರೋಮಹರ್ಷಣಿ ರಾಮಗಾಥೆಯ
  ನಾಮೊರೆದು ಪಾರಾಯಣದೆ ಬಹ
  ನೌಮಿವರೆಗಂ ಮುಳುಗಿ ತೇಲುವೆವಾ ರಸಾಬ್ಧಿಯೊಳು||

  • ಆದಿಕಬ್ಬಿಗ is ಅರಿಸಮಾಸ. Hence this correction:
   ಪ್ರಕ್ಷೇಪಂ ರಾಮಾಯಣ
   ಕುಕ್ಷಿಯೊಳಪ್ಪಂತೆ ಬಾಲಿಶಮೆನಿಪ್ಪೆಮ್ಮೀ|
   ರೂಕ್ಷಕವಿತ್ವಮೆನುತ್ತುಂ
   ರಕ್ಷೆಯನಿತ್ತಿಹೆ ನಮೋ ಋಷಿಕವಿಪ್ರಾಯಂ||

  • ಬಾಲಿಶ ~ ರೂಕ್ಷ almost synonyms. Honed further:
   ಪ್ರಕ್ಷೇಪಂ ರಾಮಾಯಣ
   ಕುಕ್ಷಿಯೊಳು ಸಲುವವೊಲಿರ್ಪ ಪಾಂಗಿಂದೆಮ್ಮೀ||
   ರೂಕ್ಷಕವಿತ್ವಮೆನುತ್ತುಂ
   ರಕ್ಷೆಯನಿತ್ತಿಹೆ ನಮೋ ಋಷಿಕವಿಪ್ರಾಯಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)