Apr 072013
ಸದ್ಯದ ಶತಾವಧಾನದಲ್ಲಿ ಶ್ರೀ ಬಿ. ಆರ್. ಪ್ರಭಾಕರ್ ರವರು ನೀಡಿದ ಸ್ರಗ್ವಿಣೀ ಛಂದಸ್ಸಿನ ಈ ಸಮಸ್ಯೆಗೆ ನಿಮ್ಮ ಪೂರಣಗಳನ್ನು ನೀಡಿರಿ ::
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
[ಸಾಗರವು ಆಳದಲ್ಲಿ ಮೊಳಕಾಲಿನಷ್ಟೇ ಎಂಬ ಭಾವ]
ಸದ್ಯದ ಶತಾವಧಾನದಲ್ಲಿ ಶ್ರೀ ಬಿ. ಆರ್. ಪ್ರಭಾಕರ್ ರವರು ನೀಡಿದ ಸ್ರಗ್ವಿಣೀ ಛಂದಸ್ಸಿನ ಈ ಸಮಸ್ಯೆಗೆ ನಿಮ್ಮ ಪೂರಣಗಳನ್ನು ನೀಡಿರಿ ::
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
[ಸಾಗರವು ಆಳದಲ್ಲಿ ಮೊಳಕಾಲಿನಷ್ಟೇ ಎಂಬ ಭಾವ]
ಮೇಘನುಂ ಒಡ್ಡುತುಂ ಸ್ಪರ್ಧೆಯನ್ನಾತಗಂ
ವೇಗದಿಂ ಪೀರಿದನ್ ಕಂಠಪೂರ್ಣಂ ಜಲಂ
ರೇಗುತುಂ, ತಾನಿದಂ ಭೂಮಿಯೊಳ್ ಸಾರಿದನ್
“ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ”
[ಮೇಘನು ಸಾಗರದೊಂದಿಗೆ ಸ್ಪರ್ಧೆಯನ್ನೊಡ್ಡುತ್ತಾ ಜಲವೆಲ್ಲಾ ಹೀರಿ ಗುಡುಗುತ್ತಾ ಇಂತೆ ನುಡಿದನು]
Wonderful Kalpane…
ಕಲ್ಪನೆ ಸೊಗಸಾಗಿದೆ. ಆದರೆ ಮೊದಲನೆಯ ಪಾದವನ್ನು ಹಳಗನ್ನಡದ ಛಂದೋವ್ಯಾಕರಣಶುದ್ಧವಾಗಿ ಹೀಗೆ ಸವರಿಸಬಹುದು:
ಬೀಗುತುಂ ಸ್ಪರ್ಧೆಯಂ ಮೇಘನೊಡ್ದುತ್ತದೋ
……………………………………….
ನಿಮ್ಮಿಬ್ಬರಿಗೂ ಧನ್ಯವಾದಗಳು. ಪದ್ಯವನ್ನು ತಿದ್ದಿರುವೆ
ಬೀಗುತುಂ ಸ್ಪರ್ಧೆಯಂ ಮೇಘನೊಡ್ದುತ್ತದೋ
ವೇಗದಿಂ ಪೀರಿದನ್ ಕಂಠಪೂರ್ಣಂ ಜಲಂ
ರೇಗುತುಂ, ತಾನಿದಂ ಭೂಮಿಯೊಳ್ ಸಾರಿದನ್
“ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ”
ಮಾಗಲೆಂದಾದೊಡಂ ಕಾದರೇನಪ್ಪುಗುಂ
ಸಾಗದಾಗಿರ್ದೊಡಂ ಕಾಂಬೆಯೇನೀಸುಖಂ
ಭೋಗವಿಲ್ಲಿರ್ಪುದೈ ಬಾರ ಸಂಸಾರದಾ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
[ಸಂಸಾರ ಸಾಗರಕ್ಕೆ ನುಗ್ಗಲು ಹೆದರುತ್ತಿರುವವರಿಗೆ ಆಶ್ವಾಸನೆಯ ಮಾತು :-)]
ಅತ್ಯದ್ಭುತಪರಿಹಾರ! ಅಭಿನಂದನೆಗಳು.”ಕಾದೊಡೇನಪ್ಪುಗುಂ’ ಎಂದು ಸವರಿಸಿದರೆ ಮತ್ತೂ ಚೆನ್ನ.
Thanks for Motivating Ram..!!
ಬಾಗಿದಾ ಬೆನ್ನಿರಲ್ ಮಾಗಿದಾಯುಷ್ಯದಿಂ
ಸಾಗು
ತಾತುಂ ಕಾಂಬರೇಂ ಲೋಕದಾ ಮೋರೆಯಂ ?ವೇಗದಿಂದೋಡುವಾ ಶುಷ್ಕ ಜೀವರ್ಗಳಾ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ ||
[ ವೇಗದಿಂದ ಸಾಗುವ ಜನಸಾಗರದಾಳವು, ಮುದಿ ವಯಸ್ಸಿನಿಂದ ಬಾಗಿದ ಬೆನ್ನಾದವರಿಗೆ, ಕೇವಲ ಜಾನು ಮಾತ್ರವೆಂಬ ಭಾವ 🙁 ]
ಸಾಗುತುಂ ಎಂದು ಸವರಿಸಿದರೆ ಚೆನ್ನ.
ಸರಿಪಡಿಸಿದ್ದೇನೆ. ಧನ್ಯವಾದಗಳು
ರಾಜನ ಆಪ್ತಭಟನ ಬಗ್ಗೆ ತಿಳಿದವರು ಆಡಿಕೊಳ್ಳುವ ಮಾತು
ಸಾಗಿಪಂ ಯುದ್ಧದಿಂ ತ್ರಸ್ತನಂ ಪೊಯ್ದು ಪೆ-
ರ್ಚಾಗೆ, ಮೇಣ್ ರಕ್ಷಣಂ ಗಯ್ವನಾ ರಾಜಗಂ
ಮಾಗಿದಾಳ್ ಸಿದ್ಧನಯ್ ಸಂತತಂ ದಲ್ ಯಶ-
ಸ್ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
ಗರ್ತದೊಳ್ ಜಾನುಮಾತ್ರಂ – ತನ್ನ ಆಸನದಲ್ಲಿ ಮಂಡಿಯನ್ನು ಮಾತ್ರ ಇಡುವವನು (ವೀರಮಂಡಿಯಲ್ಲಿ ಕುಳಿತುಕೊಳ್ಳುವನು/ಸದಾ ಸಿದ್ಧನಿರುವವನು)
ಕಲ್ಪನೆ ತುಂಬ ವಿನೂತನವಾಗಿದೆಯಾದರೂ ಇದು ಸ್ವಲ್ಪ ದೂರಾನ್ವಿತವಾಗಿ ತೋರಿದೆ:-)
ಸೋಗಿನಿಂ ಪೀರುವನ್ ನೋಟದಿಂ ರೂಪಮಂ
ಬೀಗುವನ್ ಕಂಡೊಡಂ ಗಿಡ್ಡವಸ್ತ್ರಂಗಳ –
ನ್ನಾಗ ತೇಲಿರ್ಪ ಕಣ್ಣೋಟಕಂ ಚೆಂದಪೆಣ್ –
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
🙂 ram chennagide nimma parihaaragaLu… saagali…
Ram, ohhh…First Day three shows…bharjery…giDDaVastra …. enemy samaasa 🙂
ಕೊಂಚ ಬದಲಿಸಿ ಗಿಡ್ಡಸ್ಕರ್ಟಂಗಳಂ ಎಂದು ಮಾಡಲೇ? enemity may be less between Kannada and English 🙂
ಕಲ್ಪನೆಯೇನೋ ಚೆನ್ನ. ಆದರೆ ಅದು ಪದ್ಯದಲ್ಲಿ ಸ್ಪಷ್ಟವಾಗಿಲ್ಲ ಹಾಗೂ ಭಾಷೆಯಲ್ಲಿ ಮತ್ತೂಶುದ್ಧಿ ಅಪೇಕ್ಷಿತ:-)
ನೋಳ್ಪೆನಾಂ ತಾಳ್ಮೆಯಿಂ ಶುದ್ದಿಯಂ ಗೈಯಲೆಂ 🙂
“ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ”
ಕೂಗಿ ಪೇಳಲ್ಕೆ ಮಂಥಾಚಲಕ್ಕಲ್ಲದಾ
ರ್ಗೀಗಳಿಂತೆಂದೆನಲ್ಕಾಗುಗುಂ ಪೇಳಿರೈ|
ಕಾಗೆಗೇಂ ಪಾರಿಪೋಗಿರ್ದೊಡಂ ಮೇಲಿನಿಂ?
Based on
अब्धिर्लङ्घितमेव वनभटैः किं तस्य गम्भीरता।
आपातालनिमग्न पीवरतनुर्जानाति मन्थाचलः॥
ಕಲ್ಪನೆಯೇನೋ ಚೆನ್ನ. ಆದರೆ ಪದ್ಯದಲ್ಲಿದು ಸ್ಫುಟವಾಗಿಲ್ಲ.
“ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ” ಎಂದು ಕೂಗಿ ಹೇಳಲು ಮಂಥಾಚಲಕ್ಕಲ್ಲದೆ ಯಾರಿಗೆ ಆಗುತ್ತದೆ ಹೇಳಿರಿ. ಸಾಗರದ ಮೇಲಿನಿಂದ ಹಾರಿಹೋದ ಕಾಗೆ ಹೇಳಬಲ್ಲದೆ?
ಮಂಥಾಚಲಕ್ಕಲ್ಲದೆ+ಆರ್ಗೆ+ಈಗಳ್+ಇಂತೆಂದು+ಎನಲ್ಕೆ+ಆಗುಗುಂ
ಒಂದು ಸಣ್ಣ ವಿಷಯ. ಕಾಗೆ ಸಮುದ್ರದ ಮೇಲೆ ಹಾರಿಹೋಗುವುದಿಲ್ಲ. ಅದಕ್ಕೆ ಅಷ್ಟು ಶಕ್ತಿಯಿಲ್ಲ ಹಾಗೂ ಅದು ಸಮುದ್ರದ ಮೀನುಗಳನ್ನು ಬೇಟೆಯಾಡುವ ಪಕ್ಷಿಯಲ್ಲ. 🙂
ಕಾಗೆ ಪ್ರಾಸಕ್ಕಾಗೆ ?
[ಉಳಿದವರಾರಾದರೂ ಇದನ್ನು ಬರೆದಿದ್ದರೆ ಈ ವಿಷಯವನ್ನು ಎತ್ತುತ್ತಿರಲಿಲ್ಲ – ನಿಮನ್ನು ಬಿಡಲಾಗಲಿಲ್ಲ :-)]
ಹೌದು. ’ಕಾಗೆ’ ಪ್ರಾಸಕ್ಕಾಗಿ. ಪಕ್ಷಿ ಎಂಬ ಸಾಮಾನ್ಯಾರ್ಥದಲ್ಲಿ ಗ್ರಹಿಸಬೇಕು. ಇಷ್ಟು ಸಣ್ಣ ವಿಷಯವನ್ನು ಉಳಿದವರಾರೂ ಗ್ರಹಿಸದಿದ್ದರೆ ಬೇಡ, ನೀವಾದರೂ ಗ್ರಹಿಸುತ್ತೀರಿ ಎಂಬ ನನ್ನ ಅನುಮಾನ ಕೈಕೊಟ್ಟಿತು. ವಾಸ್ತವವಾಗಿ ನೀವು ನನ್ನ(ಅರ್ಥವ)ನ್ನು ಹಿಡಿಯಲಿಲ್ಲ; ಬಿಟ್ಟಿದ್ದೀರಿ 😉
ಸಿಂಹ ಆನೆ ಖಂಡದಂತೆ ಬೀಗೋ ಪ್ರಾಸಾ
ಹಾದಿರಂಪ ಹಾಕಿದರೇ,ಕಾಗೇ ಪ್ರಾಸಾ !!!
ಮೆಲ್ಲನೀಂ ಪೇಳ್ದೊಡಂ ಪಕ್ಷಿಯೆಂ ಕಾಗೆಗಂ
ಸೊಲ್ಲನೆತ್ತೊಲ್ಲರಾರೆಲ್ಲ ಧೀಮಂತರೈ
ಸಲ್ಲದೈ ಕಾಗೆ ವಿಸ್ತಾರದರ್ಥಾಂತರ –
ಕ್ಕಿಲ್ಲದಾ ಮೀಸೆ ತಾ ಮಣ್ಣ ತಿಂದಿರ್ದುದೇಂ ?
😉
ಪ್ರಸಾದು, ರಾಮ್,
ಪ್ರಾಸಕ್ಕೋಸ್ಕರ ಕಾಗೆಯನ್ನು ಪಕ್ಷಿಯೆಂಬ ಸಾಮಾನ್ಯಾರ್ಥದ ಇನ್ನೊಂದು ಬಳಕೆಯ ಪ್ರಯತ್ನ.
ಸೋಗೆಯಂ ಬಣ್ಣಿಸಲ್ ಸೊಲ್ಗಳೇ ಸಾಲದೀ
ಕಾಗೆಯಂ ಕಾಂಬುವರ್ ಪುಣ್ಯವಂತರ್ ಗಡಾ
ಸೋಗೆ – ನವಿಲು
😉
ಕೇಳಿದಿರ ರಾಮ್? ಸೋಮರ ಮಾತನ್ನು, ಇಂತಹ ಕಾಗೆಯನ್ನು ಕಂಡವರೇ ಪುಣ್ಯವಂತರು ಎಂದುದನ್ನು? ನಿಮಗೆ ಪುಣ್ಯವಿಲ್ಲ!
ಸ್ರಗ್ವಿಣೀ ಛಂದಸ್ಸಿನಲ್ಲಿ ನನ್ನ ಮೊದಲ ಪದ್ಯ…
ಹನುಮಂತನು ಸಾಗರವನ್ನು ದಾಟಿ ಹೋಗುವಾಗ ತನ್ನ ಬೃಹದಾಕಾರದ ದೇಹಕ್ಕೆ ಸಾಗರವನ್ನು ಹೋಲಿಸಿದಾಗ…
ಲಾಗಮಂ ಹಾಕುತಾ ಬಾನಿನೊಳ್ ವೇಗದಿಂ
ಸಾಗಿರಲ್ ವಾಯುಪುತ್ರಂಬೃಹದ್ದೇಹದಿಂ
ಬಾಗುತುಂ ನೋಡಿತಾಂ ತುಚ್ಛಮಲ್ತೇ ಜಗತ್
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
ಸೋಮಣ್ಣನಿಂದ ಸವರಿಸಲ್ಪಟ್ಟಿರುವ ಪದ್ಯ…. 😀
ಲಾಗಮಂ ಹಾಕುತಾ ಬಾನಿನೊಳ್ ವೇಗದಿಂ
ಸಾಗಿರಲ್ ವಾಯುಪುತ್ರಂಬೃಹದ್ದೇಹದಿಂ
ಬಾಗುತುಂ ನೋಡೆತಾಂ ತುಚ್ಛಮಲ್ತೇ ಜಗತ್
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
Type Corrected…
ಸಾಧುಪದ್ಯಂಗಳಂ ನೂತನೋತ್ಸಾಹದಿಂ
ಶೋಧಿಸುತ್ತೀಯುವೀ ’ಚೀದಿ” ಸಂಸ್ತುತ್ಯನಯ್!!
ಧನ್ಯವಾದಗಳು ಸಾರ್ 🙂
ಭೋಗಿಯಂ ನೃತ್ಯದೊಳ್ ತೋರಲಾ ನರ್ತಕಂ
ಬಾಗಿದಂ ಕಾಲ್ವೆರಳ್ಗಳ್ ನೆಲಕ್ಕೊತುತುಂ
ಬೀಗುವಂ ನೋಡಿರೈ ಚರ್ಯೆಯೆಂಬಂ ಕಲಾ-
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
ಭೋಗಿ – ಹಾವು
ಯೋಗಿಯಾ ಯೋಗಮೇಮೇಂತಪಂ ಕಾಣೆನೈ
ಸಾಗಿದಂ ಸಾಗರೋಲ್ಲಂಗನಂ ಗಯ್ಯಲಿ-
ಕ್ಕಾಗೆ ಪಾದಂಗಳಿಂ ಯೋಜನಂಗಳ್, ಬೃಹ-
ತ್ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
ಯೋಗಿಯ ಪವಾಡದ ವರ್ಣನೆ
ಸೋಮನೀ ಪದ್ಯದಾಲೋಚನಂಗಳ್ ಕರಂ
ಧೀಮದುಲ್ಲಾಸಕಾರಿ ಪ್ರಿಯಂ ಸಲ್ವೊಡಂ |
ರಾಮಣೀಯತ್ವದಿಂ ನೈಜಮೆಂಬಂದದಿಂ
ಸೀಮೆಯಂ ಮೀರ್ವವೊಲ್ ತೋರುಗಿನ್ನೇತಕೋ!
dhanyavaada sir 🙂
“ಪೋಗದಿರ್ ಬಾಲನೇ ಮುಂದೆ ಗಂಭೀರವೈ
ರಾಗದಾಕರ್ಷಣಂ ನುಂಗುಗುಂ ಪ್ರಾಣಮಂ” |
“ಬೇಗನಾಂ ಈಸಿ ಪಿಂಬರ್ಪೆ ತಾಯ್ ಬೇಯದಿರ್
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ” ||
[ಒಬ್ಬ ತಾಯಿ ಹಾಗು ಈಜಲು ಹೊರಟ ಆಕೆಯ ಮಗನ ಸಂವಾದ]
[ಗಂಭೀರ = ಆಳ]
ಭೋಗವಂ ಯೋಗದಿಂ ರೋಗವಂ ತ್ಯಾಗದಿಂ
ಮಾಗಿಸುತ್ತುಂ ನಿಯಂತ್ರಿಪ್ಪ ರಾಸಿಕ್ಯದಿಂ
ಸಾಗುವರ್ಗಾವಗಂ ಲೋಕಮೆಂಬೀ ಬೃಹತ್
ಸಾಗರಂ ಗರ್ತದೊಳ್ ಜಾನುಮಾತ್ರಂಗಡಾ
ಸಂಯಮ ಸಾಮರ್ಥ್ಯಗಳ ಸಾಧನೆಯ ಸಮನ್ವಯದಿಂದ ಲೋಕಸಾಗರ ಜಾನುಮಾತ್ರವೇ…
ಆಗಮಿಪ್ಪೆಲ್ಲ ಸಂದಿಗ್ಧಮಂ ಸಂಧಿಸು
ತ್ತಾಗಳೇನ್ ಯುಕ್ತಮೋ ಗೆಯ್ದದನ್ ಯುಕ್ತಿಯಿಂ
ರಾಗಮಂ ಬಿಟ್ಟಿರಲ್ ಕಷ್ಟಮೆಂಬಾ ಮಹಾ
ಸಾಗರಂ ಗರ್ತದೊಳ್ ಜಾನುಮಾತ್ರಂಗಡಾ
ರಾಗದ್ವೇಷವಿದೂರನಾಗಿ ಬಂದದ್ದನ್ನೆಲ್ಲಾ (ಸುಖವನ್ನು ಮೈತ್ರಿಯಿಂದ, ದುಃಖವನ್ನು ಕರುಣೆಯಿಂದ, ಪುಣ್ಯವನ್ನು ಸಂತೋಷದಿಂದ, ಅಪುಣ್ಯವನ್ನು ಉಪೇಕ್ಷೆಯಿಂದ ನಿಭಾಯಿಸಲು) ಕಷ್ಟಸಾಗರ ಜಾನುಮಾತ್ರ…
ನೀಗಿರಲ್ ವೃತ್ತಿಗಳ್ ಚಿತ್ತದೊಳ್ ಸತ್ವವೊಂ
ದಾಗಿ ತನ್ನಿಷ್ಟದೊಳ್ ಮಗ್ನವಾಗೇಳುತಂ
ಮಾಗೆ ಯತ್ನಂಫಲಂ ವಿದ್ಯೆಯೆಂಬಾ ಮಹಾ
ಸಾಗರಂ ಗರ್ತದೊಳ್ ಜಾನುಮಾತ್ರಂಗಡಾ
ಏಕಚಿಂತನೆಯ ಸಾಧನೆಯಿಂದ ಚಿತ್ತವೃತ್ತಿಗಳಿಲ್ಲದೆ ತನ್ನ ಇಷ್ಟವಾದ ವಿಷಯ ವಿಭಾಗದ ಆಳ-ಅಗಲಗಳನ್ನು ತಿಳಿದಾಗ ಯಾವೊಂದು ವಿದ್ಯೆಯೂ ತನ್ನ ಅಧೀನವಲ್ಲವೆ !
ಸಾಗಿರಲ್ ಪಾಪಿ ತಾಂ ಸಾಯ್ವೆನೆಂದೆನ್ನುತುಂ
ಆಗುವಂತಿಲ್ಲವೈ ತಪ್ಪಿಸಲ್ ಲಬ್ಧಮಂ
ಬಾಗಿಬಿದ್ದಾಗಳುಂ ಪಾದಭೂಮೇಲ್ಮೆಗೇ
ಸಾಗರಂ ಗರ್ತದೊಳ್ ಜಾನುಮಾತ್ರಂಗಡಾ
ಪಾಪಿ ಸಮುದ್ರ ಹೊಕ್ಕರೂ….
ರಾಗದಿಂ ಲಕ್ಷಿಯಂ ಸಾಗರಂ ನೀಡಿದಂ
ಯೋಗಿವಂದ್ಯಂಗೆ ಪಾದೋದಕಂ ತಾನೆದಲ್
ಬಾಗುತಂ ಶ್ರೀಶಪಾದಂಗಳಂ ವಂದಿಪಾ
ಸಾಗರಂ ಗರ್ತದೊಳ್ ಜಾನುಮಾತ್ರಂಗಡಾ
ಸಮುದ್ರ ಸಂಭವೆಯಾದ ಮಹಾಲಕ್ಷ್ಮಿಯನ್ನು ನಾರಾಯಣನಿಗೊಪ್ಪಿಸಿ ಅವನ ಪಾದಗಳನ್ನು ತೊಳೆದು ಕನ್ಯಾದಾನ ಮಾಡಿದ ಸಮದ್ರರಾಜ ಶ್ರೀಹರಿಗೆ ನಮಿಸಿದಾಗ ತಾನು ’ಜಾನು ಮಾತ್ರವೇ’
ಸಾಗೆ ಕಾಲುಷ್ಯಕೃತ್ಯಂ ನೆಲಕ್ಕುತ್ತರಂ
ಬೇಗೆಯಿಂ ಶೈತ್ಯದಟ್ಲಾಂಟಿಕಂ ಜಾರಿರಲ್
ನೀಗಿ ನೀರ್ಗಲ್ಲಕಾಠಿನ್ಯ ನೀರಾಗಿರಲ್
ಸಾಗರಂ ಗರ್ತದೊಳ್ ಜಾನುಮಾತ್ರಂಗಡಾ
ಪರಿಸರಮಾಲಿನ್ಯದಿಂದ ಉತ್ತರಸಮದ್ರದ ನೀರ್ಗಲ್ಲುಗಳು ಯಾತ್ರಿಕರ ಮಂಡಿಯಮಟ್ಟಕ್ಕೆ ಕರಗಿರುವ ಸ್ಥಿತಿಯನ್ನು ಭಾವಿಸುತ್ತಾ…
ನೀಗಿಸೈ ಕಾಲಕೂಟೋಗ್ರಮಂ ಕಾಯೆನಲ್
ಭೋಗಿಭೂಷಂ ಗಿರೀಂದ್ರಾಸನಂ ಧಾವಿಸ
ಲ್ಕಾಗ ತದ್ಭಾಗಮಾತ್ರಂ ಸಮುದ್ರಾವೃತಂ
ಸಾಗರಂ ಗರ್ತದೊಳ್ ಜಾನುಮಾತ್ರಂಗಡಾ
ಕಾಲಕೂಟದಿಂದ ಜಗವನ್ನು ಕಾಪಾಡಲು ತಡೆಮಾಡದೆ, ಕೈಲಾಸಪರ್ವತದ ಸಮೇತ ಶಿವ ಕ್ಷೀರಸಮುದ್ರಕ್ಕಿಳಿದಾಗ ಅದು ಅವನ ಜಂಘೆಯಮಟ್ಟಕ್ಕೆ ಬಂತು ಎಂಬ ಕಲ್ಪನೆ.
ಬೇಗೆಯಂ ನೀಗಲಾ ಕ್ರೀಡೆ ಡೈವಿಂಗಿನೊಳ್
ಸಾಗಿ ಮೇಲಿಂದ ಹಾರುತ್ತ ಬೀಳುತ್ತಿರಲ್
ಯೋಗವೊಂದೇಕ್ಷಣಮ್ ಮಂಡಿಗುಂ ನಿರಿಗುಂ
ಸಾಗರಂ ಗರ್ತದೊಳ್ ಜಾನುಮಾತ್ರಂಗಡಾ
ಸ್ಕೈ ಡೈವಿಂಗ್ ಸಂದರ್ಭದಲ್ಲಿ ತಲೆಕೆಳಗಾಗಿ ಸಮುದ್ರದ ನೀರನ್ನು ಸೀಳಿ ಒಳಹೊಗುವಾಗ ಮಂಡಿಯವರೆಗೆ ನೀರು ಒಂದು ಕ್ಷಣ ಬರುವುದಷ್ಟೆ !
ಸಾಗಿರಲ್ ದಂಡೆಯೊಳ್ ಬಾಲಕಕ್ರಿಡೆಗಳ್
ತೂಗಿಬಂತೊಂದದೋ ’ಬಾರ್ಬಿ ’ತಾ ಬಿದ್ದುದೈ
ಮೇಗಣರ್ಧಂ ಮುಳುಂಗಲ್ ಪದಂ ತೇಲಿರಲ್
ಸಾಗರಂ ಗರ್ತದೊಳ್ ಜಾನುಮಾತ್ರಂಗಡಾ
ಮಕ್ಕಳೆಸೆದ ಬಾರ್ಬಿ ಬೊಂಬೆ ಕಡಲಲ್ಲಿ ತಲೆಕೆಳಗಾಗಿ ಅರೆಮುಳುಗಿ ಕಡಲು ಅದರ ಮಂಡಿಯ ಮಟ್ಟಕ್ಕೆ ಬಂದಾಗ…
ಇನ್ನೂ ಹತ್ತಾರು ರೀತಿಯಲ್ಲಿ ಸಾಧ್ಯ….ಇಲ್ಲಿಗೆ ನಿಲ್ಲಿಸದಿದ್ದರೆ ಸರಸ ನೀರಸವಾದೀತು…
ಆಹ! ಪದ್ಯಂಗಳಾ ಸ್ವಾದಮೇನದ್ಭುತಂ 🙂
ಸ್ನೇಹದೀ ಮಾತಿಗಂ ಧನ್ಯವಾದಂಗಳಯ್
ಚಂದ್ರನಿಂ ಸೂಸುವೋಲಮೃತಂ ಸಂತತಂ
ಚಂದ್ರಮೌಳೀ ಸುಧಾಪಾನಮಂ ನೀಳ್ದರೈ
ತಂದ್ರಿಯುಂಟರ್ಧಮಾಸಕ್ಕೆಚಂದ್ರಂಗೆದಲ್
ಚಂದ್ರನಿಂ ಸೋಮತಾನುತ್ತಮಂ ಪಾನಕಂ !! (:-
ಬೀಗುವರ್ ಕೊಬ್ಬಿನಿಂ ಶಕ್ತಿ ಸಂದಿರ್ದುದೆಂ
ಬಾಗಿಸಲ್ಕೇಗುವರ್ ಕೂಟದೊಳ್ ಮಿತ್ರರಂಬಾಗಿಸಲ್ಕೇಗುತೊಕ್ಕೂಟದಾ ಮಿತ್ರರಂ
ಸಾಗದೇಂ ದಿಟ್ಟಿ ದೂರಕ್ಕೆ? ಯೀ ಭಂಡ ಧೀ –
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
[ಒಕ್ಕೂಟದ ಮಿತ್ರರನ್ನು CBI ಮತ್ತಿತರ ಶಕ್ತಿಗಳಿಂದ ಬಾಗಿಸಲು ಏಗುವವರ ಬುದ್ಧಿಮತ್ತೆಯನ್ನು ಕುರಿತು]
..ಬುದ್ಧಿ ಮೊಣಕಾಲುಕೆಳಗೇ ಎಂಬ ನಾಣ್ಣುಡಿಯನ್ನು ಇಟಲಿಗೂ ಅನ್ವಯಿಸಿದ್ದೀರಿ. ಬಹಳ ಸಮರ್ಪಕ
ಏನುಮಾಡುವುದು, .. ಬುದ್ಧಿ (ಆ) ಮೊಳ”ಕೈ”ಯೊಳಗೇ ಇದೆಯಲ್ಲಾ?!
ಉಷಾರವರು ಬಿಡಿಸಿಟ್ಟು, ಸೂಚ್ಯವನ್ನು ವಾಚ್ಯಮಾಡಿಯೇಬಿಟ್ಟರು !!
ನವನವವಿಧದ ಸಮಸ್ಯಾ-
ಕವನವಿನಿರ್ವಾಹದೀಹಿತಂ ಹಿತಮಹಹಾ !!!
ಸವರಿಸಿಮಿದರೊಳ್ ನಾಲ್ಕನೆ-
ಯ ಕವಿತೆಯಂ ಸ್ವಲ್ಪಮಾತ್ರಮುಳಿದುದತಿಶಯಂ ||
ಕ್ಷಮಿಸಿರಿ; ಇದು ಶ್ರೀ ಚಂದ್ರಮೌಳಿಯವರ ಪರಿಹಾರಗಳನ್ನು ಕುರಿತ ಮೆಚ್ಚಿಕೆಯಾಗಿ ಅವರ ಪೂರಣಗಳ ಕೆಳಗೇ ಬರಬೇಕಿತ್ತು. ನನ್ನ ಅನವಧಾನದಿಂದ ಇದೀಗ ಹೀಗೆ ಸ್ವತಂತ್ರವಾಗಿ ನಿಂತು ಅತಂತ್ರವಾಗಿದೆ:-)
ಸಾರಮನ್ನಿಂತು ವಿಸ್ಫಾರದಿಂ ಪೇಳ್ವ ವೈ
ಚಾರದಾಚಾರಕಮ್ ಧನ್ಯವಾದಂ ಮಹಾನ್
ನೇರಮಾಗೊಮ್ಮೆಯೇ ಟಂಕಿಸಲ್ ಬಂದವೈ
ಭಾರಮಾಗಲ್ ಕ್ಷಮಾದಾನವೇ ಸಾಧುವೈ
ಮತ್ತೊಂದು ಪ್ರಯತ್ನ, ವಾಮನಾವತಾರ – ಊಹೆ, ಮೊದಲನೇ ಹೆಜ್ಜೆಯನ್ನು ಸಾಗರದೊಳಿಟ್ಟಿರಬಹುದೆಂದು
ಜಾಗಮಂ ವಾಮನಂ ರಾಜಗಂ ಕೇಳಿರ-
ಲ್ಲೀಗಳೇ ಕೊಳ್ಳಿರೆಂದರ್ಘ್ಯಮನ್ನೀಡಿದಂ
ವೇಗದಿಂ ಕಾಲನೆತ್ತಿಟ್ಟನಾ ಬಾಲಕಂ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
ಜಾಗಮಂ ಸಾಧುವಲ್ಲವೆನಿಸಿದರೂ ಬೇರೇನೂ ತೋಚದೇ ಬಳಸಿದ್ದೇನೆ…. 😛
ಚೆನ್ನಾಗಿದೆ. ರಾಜನಂ (ಮೊದಲಸಾಲು) ಅರ್ಘ್ಯವಂ ಅಥವಾ ಅರ್ಘ್ಯಮಂ ನೀಡಿದನ್ (ಎರಡನೇ ಸಾಲು) ಎಂದು ಸವರಣಿಸಿದರೆ ಮತ್ತೂಚೆನ್ನ.
ಧನ್ಯವಾದಗಳು ಚಂದ್ರಮೌಳಿ ಸಾರ್… ನೀವುಪೇಳ್ದಂತೆ ತಿದ್ದಿರ್ಪೆನೈ ಪದ್ಯಮಂ
ಜಾಗಮಂ ವಾಮನಂ ರಾಜನಂ ಕೇಳಿರ-
ಲ್ಲೀಗಳೇ ಕೊಳ್ಳಿರೆಂದರ್ಘ್ಯಮಂ ನೀಡಿದನ್
ವೇಗದಿಂ ಕಾಲನೆತ್ತಿಟ್ಟನಾ ಬಾಲಕಂ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
ಸಾಧುವೀ ಕ್ಷಿಪ್ರಶುದ್ಧಕ್ರಿಯಾ ಪಾಟವಂ
ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಸಾಗರದಲ್ಲಿ ಈಜಿದ ಘಟನೆಯನ್ನಾಧರಿಸಿ –
ಜಾಗರೂಕರ್ ಸದಾ ಭಾರತೀಯಾದಿಗಳ್
ಆಗಿರಲ್ಕೆನ್ನುತುಂ ಧ್ಯಾನಮಂ ಗೈಯಲೆಂ
ಸಾಗಿರಲ್ ವಾರ್ಧಿಯೊಳ್ ; ಧೀರಸಂನ್ಯಾಸಿಗಂ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ…
ಮೌರ್ಯರೆ,
ಗೈಯಲೆಂ ..ಪ್ರಯೋಗ, ಮುಂದಿನಪದಕ್ಕೆ ಸಂಧಿಸದೆ ಅಸಾಧುವಾಗಿದೆ. ಸವರಣೆ ನೀವೇಮಾಡಬಲ್ಲಿರಿ. ವಂದನೆಗಳು
ಪ್ರಳಯಕಾಲದಲ್ಲಿ ಸಾಗರಾಧೀಶನು ಎಲ್ಲವನ್ನೂ ಕಬಳಿಸುತ್ತ ಪರ್ವತರಾಜನನ್ನೂ ಮಣಿಸಲೆಂದು ಬರುವನು. ಆದರೆ ಎಷ್ಟು ರಭಸದಿಂದ ಬಂದರೂ ಸಾಗರೇಶನಿಗೆ ಪರ್ವತೇಂದ್ರನ ಮೊಳಕಾಲಿನವರೆಗಷ್ಟೇ ಬರಲು ಸಾಧ್ಯವಾಯಿತು ಎಂಬರ್ಥದಲ್ಲಿ –
ಸಾಗಿ ಬಂದಿರ್ಪನಿಂತುಂ ರಮಾವಪ್ರ ತಾಂ
ವೇಗದಿಂ ಝಾಡಿಸಲ್ಕೆಂದುಮಾತಾತನಂ
ಬೀಗುತಲ್ ಬಂದರುಂ ಚೇಗಿನಿಂದಾ ಮಹಾ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
ರಮಾವಪ್ರ = ಲಕ್ಷ್ಮಿಯ ತಂದೆ ಸಮುದ್ರರಾಜ
ಉಮಾತಾತ = ಪಾರ್ವತಿಯ ತಂದೆ ಪರ್ವತರಾಜ
ಉತ್ತಮಂ, ಸುಂದರಂ, ಮೌರ್ಯ ನಿಮ್ಮೀ ಪದಂ
ಚಿತ್ತಮಂ ಮೋದಿಸುತ್ತೆತ್ತರಕ್ಕೊಯ್ದುದೈ
ಮೌರ್ಯ, ಕಲ್ಪನೆ ಚನ್ನಾಗಿದೆ, ಆದರೆ ಪದ್ಯದ ಧಾಟಿ ಸುಗಮವಾಗಿಲ್ಲವೆನಿಸುತ್ತಿದೆ(ಮೊದಲೆರಡುಸಾಲು). ಕಾರಣ ತಿಳಿಯುತ್ತಿಲ್ಲ.
ಧಾಟಿ ಸರಿಯಿಲ್ಲವೆ ? ಓಹ್…ಬಹುಶಃ ಪದಗಳ ಸಂಧಿಯಿಂದ ತಮಗೆ ಹಾಗನ್ನಿಸುತ್ತಿರಬಹುದು…ಅದಕ್ಕೂ ಮೀರಿದ ದೋಷಗಳು ಇದ್ದರೆ ದಯವಿಟ್ಟು ತಿಳಿಸಿ…ಇಲ್ಲದಿದ್ದರೆ ನನ್ನದೂ ತಮ್ಮ ಪರಿಸ್ಥಿತಿಯೆಂದೇ ತಿಳಿಯಿರಿ…ತಿಳುವಳಿಕೆಯಲ್ಲಿ ನಾನು ಕಿರಿಯ…ಹಾಗೊಂದು ವೇಳೆ ದೋಷಗಳಿದ್ದದ್ದೇ ಆದರೆ ಯಾರಾದರೂ ಅವುಗಳನ್ನು ಎತ್ತಿ ತೋರಿಸುವ ಸಹಾಯವನ್ನು ಮಾಡಬೇಕಷ್ಟೇ…ಈ ವಿಷಯದಲ್ಲಿ ನನಗೂ ಏನೂ ತೋಚುತ್ತಿಲ್ಲ..!
ಧಾಟಿಯಲ್ಲಿ ಓದುವಾಗ ನನಗೇನೂ ತೊಂದರೆಯಾಗಲಿಲ್ಲ.
ವಿನಾಯಕ ಚತುರ್ಥಿಯ ಆಚರಣೆಯಲ್ಲಿ ಬಹುಶಃ ಮುಂಬೈ ನಗರವನ್ನು ಸರಿಗಟ್ಟುವ ಮತ್ತೊಂದು ನಗರ ವಿಶ್ವದಲ್ಲಿಲ್ಲ. ಗಣಪತಿ ವಿಸರ್ಜನೆಯ ಸಂದರ್ಭವಂತೂ ಕಣ್ಣಿಗೆ ಹಬ್ಬ. ವಿವಿಧ ಮಂಡಲಗಳಿಂದ ವಿವಿಧಾಕೃತಿಯ, ವೈವಿಧ್ಯಮಯ ರೂಪಗಳಲ್ಲಿನ ಗಣನಾಥನನ್ನು ನೋಡುವುದೇ ಸೊಗಸು. ಆದರೆ ಈ ಗಣಪತಿ ವಿಸರ್ಜನೆಗೊಂದು ಕರಾಳ ಮುಖವೂ ಉಂಟು. ಮುಂಬೈನ ಗಣಪತಿ ಮೂರ್ತಿಗಳು ಬಹುತೇಕ ಪ್ಲಾಸ್ಟರ್ ಆಫ಼್ ಪ್ಯಾರಿಸ್ (POP) ಎಂಬ ತಯಾರಾಗುತ್ತವೆ. ಈ ಮಿಶ್ರಣದಿಂದಾದ ಗಣಪತಿ ಮೂರ್ತಿಗಳು ನೀರಿನಲ್ಲಿ ಬೇಗ ಕರಗುವುದು ಕಷ್ಟ. ಜನರೇನೋ ತಮ್ಮ ಪಾಡಿಗೆ ತಾವು ದೈತ್ಯಾಕಾರದ ಮೂರ್ತಿಗಳನ್ನು ವಿಸರ್ಜಿಸಿ ಹೊರಟುಹೋಗುತ್ತಾರೆ. ಆದರೆ ಆ ಮೂರ್ತಿಗಳು ಮಾತ್ರ ಪೂರ್ಣ ಸಮುದ್ರದ ನೀರಿನಲ್ಲಿ ಮುಳುಗದೆ ಅರೆಬರೆಯಾಗಿ ತೇಲಾಡುತ್ತಿರುತ್ತವೆ. POP ಮತ್ತು ರಾಸಾಯನಿಕ ಬಣ್ಣಗಳ ಮಿಶ್ರಣದಿಂದ ಸಮುದ್ರ ಜಲವು ಮಲಿನವಾಗಿ ಜಲಚರಗಳು ಸಾಯುತ್ತವೆ. ಈ ಸನ್ನಿವೇಶವು ಪದ್ಯವಾಗಿ ಮಾರ್ಪಾಡಾದಾಗ – (ವಿ. ಸೂ : ಇಲ್ಲಿ “ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ” ಎಂದಿದ್ದರೆ ಅದೊಂದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ)
ಭೋಗದಾ ಮುಂಬೆಯೊಳ್ ಶ್ರೀಗಣಾಧೀಶನಂ
ಸಾಗರಂಗೊಪ್ಪಿಸುತ್ತೋಡುವರ್ ಮಾನಿಸರ್
ಮೇಗಣಂ ತೇಲುತಿರ್ಪಾಗಜಾಕಂದಗಂ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
ಗಣೇಶ ಬಪ್ಪ, Mo.r.ya … !!
अगले ಸಾಲ್ जल्दी आ …..
(ನಿನ್ನ ಈ ಕಳಕಳಿಯಲ್ಲಿ ನನ್ನದೂ ಪಾಲಿದೆ)
Adu Ganpati bappa morya
Pudcha varshi lavkarya !!
ನೀವ್ ಹೇಳ್ತಿರೋದು ಕರೆಕ್ಟ್ ಸರ್…’ಗೈಯಲೆಂ” ಎನ್ನುವುದನ್ನು ’ಗೈಯಲುಂ” ಅಂತಾ ಸವರಿಸಬೇಕಿತ್ತು..!
ಸಾಗಿರಲ್ ನಾರದರ್ ಮೇಘದಾ ಮಾರ್ಗದೊಳ್
ರಾಗದಿಂ ಪಾಡುತೇ ಜಾನಮಂತ್ರಂ ಗಡಾ ।
ಆಗಸಂ ತೋರಿರಲ್ ಸಾಗರಾದಂತೆವೋಲ್
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ ।
(ಸಾಗರದಂತೆ ಕಾಣುತ್ತಿರುವ ಮೋಡಗಳ ಮಧ್ಯೆ, ಹರಿನಾಮಸ್ಮರಣೆ ಮಾಡುತ್ತಾ ಸಾಗುತ್ತಿರುವ ನಾರದರು ಕಂಡ ದೃಶ್ಯದ ಕಲ್ಪನೆ )
usha avare, chennagide kalpane ”ಸಾಗರಾದಂತೆ’yannu savarisabEku 🙂
thanks ಸೋಮ, ” *ವಾರಿಧೀಯಂತೆವೋಲ್ ” ಸರಿಯಾಗುವುದೇ?
ಇಲ್ಲ. ಹಾಗೆಮಾಡಿದರೆ,ಅದೇ ದೋಷ ಉಳಿಯುತ್ತದೆ. ಸಾಗರಂ ಪೋಲ್ವವೋಲ್ ಮಾಡಿದರೆ ಸಾಕು.
ಧನ್ಯವಾದಗಳು ಚಂದ್ರಮೌಳಿ ಸರ್, ಸರಿಪಡಿಸಿದ್ದೇನೆ.
ಸಾಗಿರಲ್ ನಾರದಂ ಮೇಘದಾ ಮಾರ್ಗದೊಳ್
ರಾಗದಿಂ ಪಾಡುತೇ ಜಾನಮಂತ್ರಂ ಗಡಾ ।
ಬೀಗಿರಲ್ ವಾರಿದಂ ವಾರಿಧಿಂ ಪೋಲ್ವವೋಲ್
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ ।
ಪ್ರಯತ್ನ ಪ್ರಶಂಸನೀಯ.ವಾರಿಧಿಂ ಪೋಲ್ವ ಅಸಾಧು. ವಾರ್ಧಿಯಂ ಪೋಲ್ವವೋಲ್ ಎಂದು ಮಾಡಬಹುದು.ಪಾಡುತೇ ಎನ್ನಲಾಗದು. ತಾವು ಅನ್ಯಥಾ ಭಾವಿಸಿದದ್ದರೆ ಮತ್ತೊಮ್ಮೆ ಇಡಿಯಪದ್ಯವನ್ನು ಅವಲೋಕಿಸಿ ನೀವುಭಾವಿಸಿರುವ ಅರ್ಥಶುದ್ಧಿ ಒದಗುವಂತೆ ರಚಿಸಿದರೆ ಚೆನ್ನ ಎಂದು ಬಿನ್ನಹ.
ಕ್ಷಮಿಸಿ ಚಂದ್ರಮೌಳಿ ಸರ್,
“ಪಾಡುತಲ್” ಸರಿಯೇ? (ನನ್ನ ಮತ್ತೊಂದು ಪದ್ಯದಲ್ಲೂ “ಪಾಡುತೇ” ಬಂದಿದೆ, ನನ್ನ ಭಾಷಾ ಮಿತಿಯ ಅರಿವಾಗುತ್ತಿದೆ)
ಆಗಬಹುದು. ನಿಮ್ಮ ಉದ್ದೇಶಿತ ಅರ್ಥವಾಹಿನಿಯಾಗುವಂತೆ ಪದ್ಯವನ್ನು ಮತ್ತೆ ಬರೆದರೆ ಚೆನ್ನ.
ಸಾಗಿರಲ್ ನಾರದರ್ ಮೇಘದಾ ಮಾರ್ಗದೊಳ್
ರಾಗದಿಂ ಪಾಡುತಲ್ ಜಾನಮಂತ್ರಂ ಗಡಾ ।
ಆಗಸಂ ತೋರಿರಲ್ ಸಾಗರಂ ಪೋಲ್ವವೋಲ್
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ ।
ಬೀಗನಾಟೋಪಮಂ ನೋಡೆ ಕಣ್ ಸಾಲ್ಗುಮೇ
ಝಾಗಝಗ್ಯಂಗಳಂ ಕೇಳ್ದುದಂ ಪೊಂದಿಸಲ್
ಸಾಗಿಸಲ್ಕೊಲ್ಲನಯ್ ಕಾರ್ಯಮಂ, ತೋರಿಪಂ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
ಹೆಚ್ಚು ಹಣ ಕೇಳುತ್ತ ಮದುವೆಯನ್ನು ನಡೆಸಲು ಬಿಡದ ಬೀಗನ ದುರ್ನಡತೆಯ ಬಗ್ಗೆ
ಬಾಗಿರಲ್ ಭಾರತಂ ವಿಶ್ವದಾ ನಕ್ಷೆಯೊಳ್
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ ।
ಬೀಗಿರಲ್ ಭಾರತಂ ವಿಶ್ವದಾ ರಕ್ಷೆಯೊಳ್
ಯೋಗಮೇ ವರ್ತದೊಳ್ ಜಾನಸೂತ್ರಂ ಗಡಾ ।
(ತಾಯಿ ಭಾರತಿಯ ಕಾಲ್ತೊಳೆಯುತ್ತಿರುವ ಸಾಗರ, ಅವಳ ಜ್ಞಾನಕ್ಕೆ ಮಣಿದು ಕಾಲ್ಗೆರಗುತ್ತಿರುವ ವಿಶ್ವದ ಹೆಮ್ಮೆಯಲ್ಲಿ)
ಉಷಾರವರೆ – ಈ ಪದ್ಯದಲ್ಲಿ ಅರ್ಥ ಸ್ಪಷ್ಟತೆ ಕಾಣುತ್ತಿಲ್ಲ.
ವಿಶ್ವದಲ್ಲಿ( ನಕ್ಷೆ / ಯೋಗವಿದ್ಯೆಯಲ್ಲಿ) ತಲೆಯೆತ್ತಿ ನಿಂತಿರುವ ಭಾರತ ಮಾತೆಯ ಕಾಲ ಬುಡದಲ್ಲಿ ಸಾಗರ / ಜನಸಾಗರ ಎಂಬ ಅರ್ಥದಲ್ಲಿ ಬರೆಯಲು ಪ್ರಯತ್ನಿಸಿದ್ದು . (ಬಾಗಿರುವುದು ನಕ್ಷೆಯ ರೇಖೆ)
ನೀವು ಗದ್ಯದಲ್ಲಿ ಅರ್ಥೈಸಿರುವುದು ತಿಳಿಯಿತು, ಆದರೆ ಪದ್ಯದಲ್ಲಿ ಅದು ಕಾಣಲಿಲ್ಲ. 🙂
ಮೊದಲನೆಯ ಸಾಲಿನಿಂದ ಎರಡನೆಯ ಸಾಲು ಹೊಮ್ಮುವುದಿಲ್ಲ / ಜೋಡಣೆಯಾಗಿಲ್ಲ. ಸಾಗರವು ಆಳದಲ್ಲಿ ಮೊಳಕಾಲಿನಷ್ಟು ಮಾತ್ರ ಎಂಬುದರಲ್ಲಿ ಕಾಲ್ತೊಳೆಯುವ ಅರ್ಥವೂ ತೋರುವುದಿಲ್ಲ. ಹಾಗೆಯೇ, ವರ್ತ, ಜಾನುಸೂತ್ರ, ‘ವಿಶ್ವಾದಾ ರಕ್ಷೆಯೊಳ್’ ಎಂಬುವದೂ ಅರ್ಥವಾಗಲಿಲ್ಲ.
ದೋಷ ಹುಡುಕುತ್ತಿದ್ದೇನೆಂದು ತಿಳಿಯಬೇಡಿ. ನೀವು ಸಲಹೆಗಳನ್ನು ಸ್ವೀಕರಿಸುತ್ತೀರೆಂಬ ಭಾವನೆಯಿಂದ ನನಗೆ ಕ್ಲಿಷ್ಟವಾದುದ್ದನ್ನು ಹೇಳಿದ್ದೇನೆ 🙂
ರಾಮಚಂದ್ರ ಸರ್,
ನಿಮ್ಮ ಕಾಳಜಿಗೆ ಧನ್ಯವಾದಗಳು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸಮಸ್ಯೆಯ ಸಾಲಿಗೆ ಪ್ರಾಸ ಪದಗಳನ್ನು ಹೊಂದಿಸಿ ಬರೆದದ್ದು . ಈಗ ನಿಘಂಟಿನ ಸಹಾಯದಿಂದ ಅರ್ಥಕೊಡಲು ಪ್ರಯತ್ನಿಸಿದ್ದೇನೆ . ಮೊದಲೆರಡು ಸಾಲು : ನಕ್ಷೆಯಲ್ಲಿ ಸಾಗರದ ನೀರು “ಜಾನು ಮಾತ್ರ”ಕಂಡಂತೆ ಕಂಡದ್ದು ಒಂದು ಕಲ್ಪನೆ ಅಷ್ಟೆ.
ಕೊನೆ ಎರಡು ಸಾಲು : ಈಗಿನ ಪರಿಸ್ಥಿತಿ (ವರ್ತ)ಯಲ್ಲಿ, ವಿಶ್ವದ ರಕ್ಷಣೆಗೆ, ಭಾರತದ ಜ್ಞಾನ(ಜಾನ) ಸೂತ್ರವು (ಯೋಗವಿದ್ಯೆಯು) ಔಚಿತ್ಯ(ಯೋಗ)ವಾಗಿದೆ ಎಂಬ ಹೆಮ್ಮೆ.
ನನ್ನ ಪದ್ಯವು ಅರ್ಥವಾಗದ / ಅರ್ಥಸಾಲದ ಅಸ್ತವ್ಯಸ್ತ ಪದಗಳ ಮಾಲೆ ಆಗಿರುವುದಕ್ಕೆ ಕ್ಷಮೆಯಿರಲಿ. ಸರಿಪಡಿಸಲು ಪ್ರಯತ್ನಿಸುತ್ತೇನೆ.
ಮಾಗಿರಲ್ ಸೂರ್ಯನಾಯುಷ್ಯಮಂ ಭವ್ಯದೊಳ್
ವೇಗದಿಂ ವರ್ಧಿಪನ್ ಹೀರುವನ್ ವಾರ್ಧಿಯಂ
ಸಾಗುತಾ ಪೇಳುವನ್ ಭಾನು ತಾನಭ್ರದೊಳ್
“ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ”
ಭವಿಷ್ಯದಲ್ಲಿ ಸುಮಾರು ೪-೫ ಬಿಲಿಯನ್ ವರ್ಷಗಳಲ್ಲಿ ಸೂರ್ಯ ದೊಡ್ಡದಾಗಿ ಬೆಳೆದು ಬುಧ ಮತ್ತು ಶುಕ್ರ ಗ್ರಹಗಳನ್ನು ನುಂಗುತ್ತಾ ಭೂಮಿಯನ್ನೂ ನುಂಗಲು ಅನುವಾಗುವ ಮುಂಚೆ ಸಾಗರಗಳ ನೀರನ್ನೆಲ್ಲ ಹೀರುವನೆಂಬ ಕಲ್ಪನೆ.
ಸಾಗಿರಲ್ ದಾರಿಯೊಳ್ ತೊಟ್ಟಿಯಂ ದಿಟ್ಟಿಸಲ್
ಈಗಲೈ ದಾಟುವೇನೆಂದನೈ ಮತ್ತಿನಿಂ
ವೇಗದಿಂ ಹಾರಿದಂ ದೀಸುತಲ್ ಕೂಗಿದಂ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
ಇದು ಒಬ್ಬ ಕುಡುಕನ ಕಥೆ. ಕುಡಿದ ಮತ್ತಿನಲ್ಲಿ ನೀರು ತುಂಬಿದ ತೊಟ್ಟಿಯನ್ನು ಸಮುದ್ರವೆಂದು ಭಾವಿಸಿ ಅದಕ್ಕೆ ಹಾರಿ ಈಜುತ್ತಾ(ಅಥವಾ ನಡೆಯುತ್ತಿದ್ದನೋ ಏನೋ, ಈಜುತ್ತಿದ್ದೇನೆ ಎಂಬ ಭಾವನೆಯಲ್ಲಿ) ಹೇಳಿದ ವಾಕ್ಯವಿದು.
ಗಾಯತ್ರಿ – ತುಂಬ ಒಳ್ಳೆಯ ಕಲ್ಪನೆ.
Thanks Ram for the feedback.
ಜೋಗುಳಂ ಪಾಡುತೇ ತೂಗುವಾ ತಾಯಿಗಂ
ಆಗಲೇಂ ಕಂದನುಂ ಪ್ರೀತಿಯಾ ಸಾಗರಂ
ಸಾಗಿರಲ್ ಸುತ್ತತಾನಂಬೆಗಾಲಿಕ್ಕುತಂ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ ।
ಪಾಡುತಂ …ಸರಿಯಾದೀತು
ಪೃಚ್ಛಕರ ಪರಿಹಾರ
ಮೇಗಳ ಕೈಗಳೊಳ್ ಶಂಖ ಚಕ್ರಂಗಳಂ
ವೇಂಗಡಂ ತೋರ್ವನೈ ನಿಮ್ನ ಹಸ್ತಂಗಳಿಂ |
ಬೇಗಲೀ ಪಾದನೀ ನಂಬೆ ಸಂಸಾರದಾ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ ||
ಅವಧಾನಿಗಳ ಪರಿಹಾರ
ಸಾಗೆ ವಾಗ್ದೇವತಾ ಪೂಜೆಗೆಂದೋ ಜಯಂ
ರಾಗನೀ ಸಾಹಿತೀ ಲೋಕದೊಳ್ ಶೋಕಿಪಂ |
ಬಾಗಿತೇಂ ಪುಣ್ಯಮೆನ್ನಾಮಹಾಪಾಪಿಯೇಂ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ ||
“ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲು ನೀರು” ಎಂಬ ಗಾದೆಯ ಪರಿಯಲ್ಲಿ ಸ್ವಲ್ಪ ಉದ್ದನೆಯ ಪರಿಹಾರ ::
ನೀಗಲೆಂ ನೀಡಿದಂ ಮುಂಡಮಂ ರೈಲಿಗಂ
ಹಾಗೆ ಕಾದಿರ್ದನೈ ಬಾರದಾ ಮಿತ್ತಿಗೆಂ
ಕೈಗೆ ಸಿಕ್ಕಿರ್ದ ಪಾಷಾಣಮಂ ನುಂಗುತುಂ
ತೇಗಿ ಕಾರಾಡಿದಂ ಪೊಟ್ಟೆ ಚೊಕ್ಕಾಗುತಂ
ಬೇಗೆಯಿಂ ಕಟ್ಟಿದಂ ನೇಣಪಗ್ಗಂ ಗಡಾ
ಪೋಗದಾ ಪ್ರಾಣ ತಾ ಟೊಂಗೆಯಂ ಕೊಂದುದೈ
ಸಾಗಿರಲ್ ದೂಡಲೆಂ ನೀರೊಳಾಯುಷ್ಯಮಂ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
[ಮಿತ್ತು = ಮೃತ್ಯು; ಕಾರು = ವಾಂತಿ]
[ ಇದು ಸ್ವಲ್ಪ depressing ಪದ್ಯ. ಯಾರಿಗಾದರು ಬೇಜಾರದರೆ, ದಯವಿಟ್ಟು ಕ್ಷಮಿಸಿ ]
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
ಲೋಗರೀ ವಾರ್ತೆಯಂ ಕೇಳಿ ಸಂತೋಷದಿಂ
ಸಾಗರೇಂ ತುರ್ತಿನೊಳ್ ನಾನು ಮಾತ್ರಂ ಗಡಾ
ಪೋಗಿ ಸಂಪಾದಿಪೆಂ ಮುತ್ತುರತ್ನಂಗಳಂ
ಕೊಂಗರೇ! ಕೊಳ್ಳಿರೆಂದೆಮ್ಮ ರಾಜ್ಯಾಧಿಪರ್
ಬೇಗನೇ ಸೋತು ಕಾವೇರಿಯಂ ಬಿಟ್ಟರೆ,
ಆಗದೇ ಖೇದದಿಂ ಕೃಷ್ಣರಾಜಾಖ್ಯಮಾ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ.
ಕೃಷ್ಣರಾಜಸಾಗರ ಅಂದು ಬಹಳ ಒಳ್ಳೆಯ ಕೀಲಕವನ್ನು ಔಚಿತ್ಯಪೂರ್ಣವಾಗುಪಯೋಗಿಸಿದ್ದೀರಿ. ಚೆನ್ನಾಗಿದೆ 🙂
🙂
ಇಡಿಯ ಈ ಸಮಸ್ಯಾಪೂರಣಗುಚ್ಚದಲ್ಲಿಯೇ ಇದು ಅತ್ಯಂತಸುಂದರಪರಿಹಾರ. ಧನ್ಯವಾದಗಳು.
ನಿತ್ಯವೈಶಿಷ್ಟ್ಯಕ್ಲಪ್ತಂ ಕರಂ ರಾಜಿಕುಂ ಸ್ತುತ್ಯಸೌಧೀರಧೈಷಣ್ಯಗಣ್ಯಂ ಗಡಂ
ಈ ಸಮಸ್ಯೆಯನ್ನೂ ಮತ್ತೂ ಭಾಷಾಬಂಧುರವಾಗಿಸುವುದಾದರೆ ಅದು ಹೀಗೆ:
ಭಾ(ಭೋ)ಗಮಂ ಕೊಂಗರೇ! ಕೊಳ್ಳಿರೆಂದೆಮ್ಮವರ್
ಬೇಗದಿಂ ಸೋಲ್ತು ಕಾವೇರಿಯಂ ಬಿಟ್ಟೊಡಿ-
ನ್ನಾಗದೇ ಖೇದದಿಂಮ್ ಕೃಷ್ಣರಾಜಾಖ್ಯಮಾ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ ||
As many people in PadyaPaana must have experienced, there is no encomium in the world to match Sri Ganesh’s appreciation. Thank you, Sirji ! 🙂
ಸುಧೀರ್ ಸರ್,
ನಿಮ್ಮ “(ಜಯ) ಲಲಿತ ರಗಳೆ” ಸೊಗಸಾಗಿದೆ. ಹತ್ತಿರದ ಬತ್ತಿರದ ಕೃಷ್ಣರಾಜ “ಸಾಗರ !” ನೆನಪಿಸಿದ್ದಕ್ಕೆ ಧನ್ಯವಾದಗಳು.
Ha Ha Ha. Good one!
ಲಂಕೆಯೊಳ್ ಸೀತೆಯಂ ಶೋಧಿಸಲ್ ಪೋಯೆನಲ್
ಅಂಕೆಮೀ ರಿರ್ಪುದೆಂದೆಲ್ಲರುಂ ಶೋಕಿಸಲ್
ಲಂಘಿಸಲ್ ಗಾತ್ರಮಂ ಹಿಗ್ಗಿಸಲ್ ಮಾರುತಿ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
ಗುರುವರೇಣ್ಯರೆಲ್ಲರಿಗೂ ನಮಸ್ಕಾರ. ಇದು ನನ್ನ ಪ್ರಥಮ ಪ್ರಯತ್ನ. ತಿದ್ದಿ ತೀಡುವವರಿಗೆಲ್ಲಾ ನನ್ನ ಅಡ್ವಾನ್ಸ್ ಪ್ರಣಾಮಗಳು
ಸೋಗಿನೊಳ್ ಪೆರ್ಚಿಹಾ ಸ್ಟಾರ್ ರೆಸಾರ್ಟ್ಗ್ ಹೋಲಿಸಲ್
ವೇಗದೊಳ್ ಬೋಳಿಪಾ ಫೈವು ಸ್ಟಾರ್ಗ್ ಹೋಲಿಸಲ್
ಜಾಗದೊಳ್ ಖರ್ಚಿನೊಳ್ ಸೋಗಿನೊಳ್ ದರ್ಶಿನೀ
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ