Jul 072013
 

ಈ‌ ಕೆಳಗಿನ ಚಿತ್ರಕ್ಕೆ ನಿಮ್ಮ ಪದ್ಯಗಳನ್ನು ರಚಿಸಿರಿ. ಉತ್ತರಖಂಡದಲ್ಲಾದ ಪ್ರವಾಹದ ಹಿನ್ನೆಲೆಯಲ್ಲಿ ವಿಸ್ತರಿಸಲೂ ಬಹುದು. ಛಂದಸ್ಸು ನಿಮ್ಮ ಆಯ್ಕೆ.

ಗಂಗಾ ಪ್ರವಾಹ

ಗಂಗಾ ಪ್ರವಾಹ

  82 Responses to “ಪದ್ಯ ಸಪ್ತಾಹ ೭೪: ಚಿತ್ರಕ್ಕೆ ಪದ್ಯ”

  1. ಹರನಿಂ ತಾಂಡವಮಲ್ತ-
    ಲ್ತರತಿಯು ತೋರ್ದಪುದೆ ಶಾಂತನಾನನದೊಳ್? ಮೇಣ್
    ಸುರಧೀ ಸೌಮ್ಯದೆ ಕಾಂಬಳ-
    ಸುರರಿಂ ಕುಹುಕಮೆ ನರರ್ಗೆ, ಕಾಪಿಡುವರ್ಗುಂ!?

    ಅಲ್ತಲ್ತು = ಅಲ್ಲವೇ ಅಲ್ಲ
    ಅರತಿ = ಸಿಟ್ಟು
    ಸುರಧೀ ಸೌಮ್ಯದೆ ಕಾಂಬಳ್ – ಶಿವನ ತಲೆಯಮೇಲಿರುವ ಗಂಗೆ ಶಾಂತದಲ್ಲೆ ಕಾಣುತ್ತಿದ್ದಾಳೆ

  2. ಏಕಾದಶಾನನದಿ ಶಿವನು ನಕ್ಕ

    ಆಕಾಶ ದರ್ಶನಕೆ ನೂಕಿನುಗ್ಗಿತು ಭಕ್ತಿ
    ಬೇಕುಗಳ ತಣಿಸಲ್ಕೆ ಬೇಡಿಪಡೆದು
    ಶೋಕ ನಾರಕ ನೆಲನ ಬಾಯ್ಬಿರುಕಿನೊಳಗದ್ದೆ
    ಬೇಕೆ ನಿಮಗಿದೆನುತ್ತ ಶಿವನು ನಕ್ಕ ..1

    ನೆರೆಯ ತಾಂಡವದಾಟ ಕುಪಿತ ಮೇಘಸ್ಫೋಟ
    ಮುರಿದು ಕುಸಿಯುವ ಬಾಳ್ವೆ ಸಾಸಿರಗಳು
    ಬರಿದುಗೌರೀಕುಂಡ ಕೇದಾರನುದ್ದಂಡ
    ಕರಿದೆ ನರನರಿವೆನುತ ಶಿವನು ನಕ್ಕ…2

    ಬಂಡೆಯಂತುರುಳೆಗಿರಿ ಪರ್ವತವೆಕರಗಿದೊಲು
    ಚಂಡವೇಗದಿ ಗಂಗೆ ಚಾಚಿ ಚುಂಬಿಸುತ
    ಖಂಡಿಸುತ ಮುಂಡಿಸೆ ಹೃಷೀಕೇಶವೇಷಗಳ
    ದಂಡೆಯಲಿ ತಣ್ಣಗಿಹ ಶಿವನು ನಕ್ಕ…3

    ತನ್ನವರ ಪಾಪಶಮನಕೆ ಭಗೀರಥ ಭಜಿಸೆ
    ಪನ್ನಗಾಭರಣ ಕಳುಹಿದ ಗಂಗೆಯವಳು
    ಭಿನ್ನ ಪಾಪವಿರೂಪ ಧರ್ಮ ಗೋಳಿಡೆ ಋತವ
    ಮನ್ನಿಸೆ ಧುಮುಕಿದಳೆನೆ ಶಿವನು ನಕ್ಕ…4

    ಎಲ್ಲೆಡೆಯೊಳಿರುವ ತತ್ತ್ವವ್ಯಾಪಕತ್ವವನು
    ಕಲ್ಲುಗುಡಿಯಲಿ ಬಂಧಿಸಿದೆವೆಂದು ತಿಳಿದು
    ಇಲ್ಲೆ ಮುಕ್ತಿಯತಾಣವಿಲ್ಲಬೇರೊಂದೆನುವ
    ಕ್ಷುಲ್ಲಕತ್ವವ ಕಂಡು ಶಿವನು ನಕ್ಕ…5

    ಭುವನ ಭವನಪ್ರಗತಿಗಡಿಪಾಯ ಮೌಲ್ಯ, ತೇ
    ಗುವ ಲೋಭಗೋಪುರಗೃಹಗಳಿಗೆ ಪಾಯ
    ಜವನಮೇಲ್ವಾಸದನು ದುಡುಕಿಸೋಕಲು ಕುಸಿಯೆ
    ಬವಣೆತೊಳಲಾಟಕ್ಕೆ ಶಿವನು ನಕ್ಕ…6

    ವೇಗ, ದಾಹ, ದುರಾಸೆ ಮೇಳವಿಸಿ ಮೈಮರೆತು
    ಬಾಗಿಸಿದ ಗಿರಿಯ ಬೇರುಗಳೆತ್ತಿ ಸವರಿ
    ಮೇಗಡೆ ರಥಾಗ್ರದಲಿ ಕುಳಿತನೊಣ ತನ್ನಿಂದ
    ಸಾಗುವುದು ರಥವೆನಲು, ಶಿವನು ನಕ್ಕ….7

    ಉತ್ತರದಭಾಗತತ್ತರಿಸೆ ದಕ್ಷಿಣದೊಡೆಯ
    ನುತ್ತರವೆ ಭಕ್ತಿಚಾಂಚಲ್ಯಕೇಳ್ವಿಕೆಗೆ
    ಹತ್ತಿಸಾಗಿದಗಾಡಿ ಮೇಲುಕೆಳಗಾಗೋಡೆ
    ಹತ್ತಿರವೆತನಗೆಂದು ಶಿವನು ನಕ್ಕ…8

    ಚಿಕ್ಕ ತುಂಡುಗಳ ಕಟ್ಟಡಕಟ್ಟೆ ಹೊಂದಿಸುತ
    ಚೊಕ್ಕಜೋಡಿಸಿ ನಿಲಿಸಿ ಮೆಚ್ಚಿ ಬೀಳಿಸಲು
    ಬಿಕ್ಕಿಡುತ ಮತ್ತದನು ಮೇಲೆತ್ತಿ ನಿಲ್ಲಿಸುವ
    ಮಕ್ಕಳಾಟವನೋಡಿ ಶಿವನು ನಕ್ಕ…9

    ರಕ್ಷಕರು ನಾವೆಂಬ ನಾಯಕತ್ವದಪೋಟಿ
    ರಕ್ಷಣಾನ್ನದಸುರಿವ ಗಂಗೆನುಂಗೆ
    ರಕ್ಷಿಸುವ ರಾಜ್ಯಗಳ ವಾಣಿಜ್ಯಸಾಮ್ರಾಜ್ಯ
    ಭಕ್ಷಣಕ್ಷಣಗಳಲಿ ಶಿವನು ನಕ್ಕ…10

    ಮರಳದಂಡೆಯ ಪುಟ್ಟಗೂಡುಗಳ ತೆರೆಯಳಿಸಿ
    ಮೆರೆವಂತೆ ಕಾಲಪಾದಾಘಾತಹತರ
    ಕರುಣೆಯಿಂ ತನ್ನತ್ತ ಕರೆದು ಮಣ್ಣೊಳಗಿಟ್ಟು
    ಮರುವುಟ್ಟದಿರದಂತೆ ಶಿವನು ನಕ್ಕ…11

    • ಶಿವರುದ್ರನೆಂಬೆರೆಡು ಪೆಸರಿರ್ಪ ದೇವಂಗೆ
      ಸವರಾರು? ಲಯವು ಲೀಲೆಯದೆನ್ನುತಾ
      ಕವಿಚಂದ್ರಮೌಳಿಯೊರೆದಿಹ ಮೇರು ಪದ್ಯಗಳ
      ಸವಿಯಲ್ಲಿ ಮೈಮರೆತ ಶಿವನು ನಕ್ಕ

      ಬಹಳ ಚೆನ್ನಾಗಿದೆ ಪದ್ಯಗಳು:)

    • ತುಂಬ ಅರ್ಥಗರ್ಭಿತವಾದ ಅಪ್ಪಟನೀಳ್ಗವಿತೆ. ಧನ್ಯವಾದಗಳು

  3. ತರಮೇ ಇಬ್ಬಗೆನಡೆಗಳ್
    ಗಿರೀಶವಲ್ಲಭೆಗೆ? ನಯದೆ ಶಿವನೊಳ್ ಕಾಂಬಳ್,
    ಹರಿಯುತೆ ರಭಸದೆ ಶಿವಭ-
    ಕ್ತರನಾಹುತಿ ಗಯ್ವ ಘೋರರೂಪಮನಾಂಪಳ್

    • ಪದ್ಯಭಾವ ಚೆನ್ನಾಗಿದೆ ಸೋಮ. ಗಿರಿಶಾಲಂಕೃತೆ ಎಂದರೆ ಗಿರಿಶನಿಂದ ಅಲಂಕೃತಳಾದವಳು ಎಂದು. ಗಿರಿಶನನ್ನು ಅಲಂಕರಿಸಿದವಳು ಎಂದೂ ಆಗುತ್ತದೆಯೆ?

      • ಹೌದು ಪ್ರಸಾದು, ಗಿರಿಶಾಲಂಕೃತೆಗೆ ಸರಿಯಾಗುವುದಿಲ್ಲ, ಗಿರೀಶವಲ್ಲಭೆಗೆ ಎಂದು ಸವರಿಸಿದ್ದೇನೆ

  4. ಋತದೀಕ್ಷೆs ಮನುಜsನs ಹಿತಮನ್ನುs ಗಣಿಪುsದೆs?
    ಮಿತಮಲ್ತುs ನರಲೋಕsಕದು ಮsರುsಳೆs, ಸುಖದುಃಖs
    ಗತಮೆಂಬs ಚರ್ಚೆಗೆs ತಿರುಳೆಲ್ಲಿ?

    • ಪ್ರಿಯ ಸೋಮ, ತ್ರಿಪದಿಯ ಲಕ್ಷಣವು ಸರಿಯಾಗಿಲ್ಲ. ಮತ್ತೊಮ್ಮೆ ನೋಡಿ ತಿದ್ದುವುದು. ಏಕಿದ್ದಲ್ಲಿ ಹಾದಿರಂಪರ ಸಲಹೆ ಕೇಳಬಹುದು. ಅವರೂ ರಾಮ್ ಅವರೂ ತುಂಬ ತ್ರಿಪದಿಗಳನ್ನು ಬರೆದವರಷ್ಟೆ.

      • ಋತದೀಕ್ಷೆs ಮನುಜsನs ಹಿತಮನ್ನುs ಗಣಿಪುsದೆs?
        ಮಿತಮಲ್ತsದೆಂದುs ನರನಿsಗೆs, ಸುಖದುಃಖs
        ಗತಮೆಂಬುsವುದಕೆs ತಿರುಳೆಲ್ಲಿ?

        ಬ್ರಹ್ಮಗಣಗಳು ತಪ್ಪಿದ್ದವಲ್ಲವೆ ಸರಿಪಡಿಸಿದ್ದೇನೆ, ಇನ್ನಾವುದಾದರು ತಪ್ಪಿದೆಯೆ?

  5. ವ್ಯೋಮವ್ಯಾಪ್ತಂ ಕೇಶ
    ಸ್ತೋಮಮದಿರ್ದೊಡೆ ಭಗೀರಥಪ್ರಾಪ್ತಳ್ ಬಿ
    ದ್ದಾ ಮುಡಿಯೊಳ್ ಬದ್ಧಳೆನ
    ಲ್ಕೀ ಮಾನವಮಾನಮೂರ್ತಿಗಳವೇಂ ಪಿಡಿಯಲ್?

  6. ಧರೆಯ ಮುನಿಸಿನ ಪರಿಯಿದೇಂ ಜಲ
    ಭರದಿ ಸರಿದಿಹ ಹರಿವಿದೇಂ ಹಿಮ
    ಗಿರಿಯೆ ಸುರಿದಿಹ ತರವಿದೇನಿಂದಿಳೆಯ ಮಡಿಲಿನೊಳುಂ।
    ನರನ ಬಯಕೆಯ ಬದುಕಿನೊಳ್ ಶಂ
    ಕರನು ಹರಸಿಹ ಹರವಿನೊಳ್ ಕಾಣ್
    ಹರನೆ ಮುಳುಗುವ ಕಾಲದೊಳ್ ತಾಂ ನರರ ತುಳಿದಿಹನೇಂ ॥

    (ಸಾವಿರಾರು ಜನರನ್ನು ಬಲಿತೆಗೆದುಕೊಂಡ ಜಲಪ್ರಳಯದ ಮಧ್ಯೆ ಮುಳುಗುತ್ತಿರುವ ಶಿವನನ್ನು ಕಂಡು – ಪ್ರವಾಹದ ಕಾಲದಲ್ಲಿ ತಾನೇ ಮುಳುಗುವ ಸಮಯಬಂದಾಗ, ತಾನೆತ್ತಿಹಿಡಿದಿದ್ದ ತನ್ನ ಕಂದನನ್ನೇ, ಮೆಟ್ಟಿ ನಿಲ್ಲುವ ತಾಯಿಯ ಸಂದಿಗ್ಧ ಪರಿಸ್ಥಿತಿಯ ಕಲ್ಪನೆಯಲ್ಲಿ )

    • ಇಲ್ಲಿ ನೀವು ಭಾಮಿನೀಷಟ್ಪದಿಯ ಶಿಲ್ಪವನ್ನು ಸೊಗಸಾಗಿ ಸಾಧಿಸಿದ್ದೀರಿ; ಧನ್ಯವಾದಗಳು. ಈ ಪದ್ದಲ್ಲಿ ಖಂಡಪ್ರಾಸಗಳ ಹರಿವು, ಎತ್ತುಗಡೆಯ ನಿರ್ವಾಹ ಹಾಗೂ ವಸ್ತುವಿನ್ಯಾಸಗಳೆಲ್ಲ ಚೆನ್ನಾಗಿವೆ; ಅಭಿನಂದನೆಗಳು

      • ಧನ್ಯವಾದಗಳು ಗಣೇಶ್ ಸರ್,
        ವರ್ಣವೃತ್ತಗಳಲ್ಲಿ ಪದ್ಯ ರಚಿಸುವಾಸೆ. ಸಾಧ್ಯವಾಗುತ್ತಿಲ್ಲವೆಂಬ ಬೇಸರವಿದೆ.

    • ಖಂಡಪ್ರಾಸಗಳು ಮನೋಹರವಾಗಿವೆ. ಅಕ್ಷರವೃತ್ತಗಳೇ? ಶುರು ಮಾಡಿ. ತಾನೇ ಸಿದ್ಧಿಸುತ್ತದೆ.
      ಇದೇ ಪದ್ಯವನ್ನು ವಸಂತತಿಲಕದಲ್ಲಿ ರಚಿಸಿ. ಮೊದಲ ಸಾಲು ಬೇಕೆ?
      ಭೂಭಾಗಮುಂ ಮುಳುಗುವೊಲ್ ಸಲೆ ಗಂಗೆ ತೊಯ್ಯಲ್

  7. ಭವಚೂಡಾಗ್ರವಿಹಾರಿಣಿ
    ಜವರಾಯನ ದೌತ್ಯಗೆಯ್ಯೆ ತಾಂ ತವಿಸಿರ್ದಪಳ್
    ಭವಬಂಧಮನೞ್ಗಿಸೆ ತಾವ್
    ಜವದಿಂದವ್ವೆಯೆಡೆವಂದ ಶರಣರನಾಗಳ್

    ಛಲಮೇನೀಗ ಭವಾಂತಜೂಟಚರಿಣೀ, ಲಕ್ಷ್ಮೀಧ್ರಪಾದೋತ್ಥಿತೇ ?
    ಬಲಕರ್ವೀಕೃತ ಮಾನಿಸರ್ಗಮಳವೇನಾನಲ್ಕಮೀ ತೂರ್ಣಿಯಂ ?
    ದಲದಾ ರೋಷಣಘೋಷವರ್ಷಣ ಮಹಾಹೂಂಕಾರ ಭಾಂಕಾರಮಾ
    ಜಲಜಾತಾಹಿತಧಾರನಿಂ ಕುಪಿತಳೇನಾ ಧೂರ್ಜಟಾಬಂಧದಿಂ ?

    ಜವ – ಯಮ, ತ್ವರೆ
    ಅೞ್ಗಿಸು – ಕ್ಷೀಣವಾಗುವ ಹಾಗೆ ಮಾಡು
    ಬಲಕರ್ವೀಕೃತ – ಶಕ್ತಿಗುಂದಿದ
    ತೂರ್ಣಿ – ವೇಗ
    ಆನ್ – ಎದುರಿಸು
    ಜಲಜಾತಾಹಿತಧಾರ – ಜಲಜಾತ+ಅಹಿತ+ಧಾರ – ಕಮಲದ ವೈರಿಯನ್ನು ಧರಿಸಿದವನು – ಚಂದ್ರನನ್ನು ಧರಿಸಿದವನು ಅರ್ಥಾತ್ ಶಿವ

    • small correction – ಚರಿಣೀ must be corrected as ಚರಣೀ – typing mistake

    • ಆಹಾ! ಮೌರ್ಯಮಹೋದಯ!!
      ಓಹೋ! ಹದಿನೆಂಟು ತುಂಬುವಷ್ಟರೊಳೇನಯ್ |
      ಮೋಹಕಮಪ್ಪೀ ಕಂದಮ-
      ನೀಹಿತದಿಂ ಹಡೆದಿರಲ್ತೆ ಮದುವೆಯದೆಲ್ಲಯ್? 🙂

      ಒಳ್ಳೆಯ ಲಕ್ಷಣಶುದ್ಧವಾದ ಕಂದ, ಭಾಷೆ-ಬಂಧಗಳ ರೀತಿಯಿಂದಲಂತೂ ಅನವದ್ಯ.ಧನ್ಯವಾದ.

      • ಥ್ಯಾಂಕ್ ಯೂ ಗುರುಗಳೆ…ಈ ಬಾರಿ ತಮ್ಮ ಕಂದಪದ್ಯದ ವಿಡಿಯೋವನ್ನು ಚೆನ್ನಾಗಿ ಗಮನಿಸಿದ್ದರಿಂದಲೇ ಇದು ಸಾಧ್ಯವಾಯಿತು…ಆದ್ದರಿಂದ ಮೊದಲ ಪ್ರಣಾಮಗಳು ತಮಗೆ…ಮತ್ತು ನಾನಿನ್ನೂ ನವೋದಯನಷ್ಟೇ, ಮಹೋದಯನಲ್ಲ…ತಮಗೆ ಸಂತೋಷವಾದರೆ ನನಗೂ ಸಂತೋಷ..!! 🙂 🙂

        • ಪ್ರಗತಿಪಥದಲ್ಲಿ ಈಗ ನವೋದಯನಾಗಿದ್ದೀಯೆ. ಮುಂದಿನ ಹಾದಿ ಕಟ್ಟಿಟ್ಟದ್ದೆ.

          ಗತಿಶೀಲನಪ್ಪೆಯೈ ಮೌ
          ರ್ಯ ತೀವಿತೈ ನಿನ್ನ ಖ್ಯಾತಿ ಶರವೇಗದೊಳಂ|
          ನತನಪ್ಪೆ ನವೋದಯನು (ನೆ+ಉ)
          ನ್ನತಿಯಾಂಪೆಯ ನವ್ಯ, ದಲಿತ, ಬಲಿತ, ಕೊಳೆತ cub(ಬಿಗ)||

          • ಹಾದಿಯದೇಂ ರಸಹೀನಂ
            ಹಾದಿಯೊಳಂ ರಂಪಮಲ್ತೆ ನವರಸಪೂರ್ಣಂ
            ಚೋದನಮೀಯಲ್ ಹಾಸ್ಯರ
            ಸದೊಳಾ ಪರಬೊಮ್ಮನಿಂತು ಸೃಜಿಸಿದ ತಂತ್ರಂ

            ಅಂತಹ ಹಾದಿರಂಪರಿಗೆ ನಮೋ ನಮಃ !
            ನೀವು ನನ್ನನ್ನು ಮೌರ್ಯ ಎಂದು ಕರೆಯುವುದಕ್ಕಿಂತ “ಹೈವಾನ್” ಎಂದು ಕರೆಯುವುದೇ ನನಗೆ ಬಹಳ ಇಷ್ಟ…seriously ! 🙂 🙂

          • ಅವಸರವದಾವುದರೊಳೋ ನಿನ್ನನೆಂದಿರ್ದೆ
            ಯುವಕವಿಯೆ ’ಹೈವಾನ’ನೆಂದೊಮ್ಮೆ ನಾನ್|
            ಛವಿವಿಶೇಷಣಗಳಂ ಬಳಸುವೆನನುಕ್ರಮದೆ
            ತವ ಬಹುಮುಖಗಳು ತೋರ್ದಾಗೆಲ್ಲಮುಂ||

          • ಸದ್ಯ, ನನ್ನ ಪರ್ಸನಾಲಿಟಿಯನ್ನು ನೋಡಿ “ಬಹುಮುಖಂ” ಬದಲು “ದಶಮುಖಂ” ಎಂದು ಪದ್ಯದಲ್ಲಿ ಬಳಸಲಿಲ್ಲವಲ್ಲ….ಅದಕ್ಕಾಗಿ ಥ್ಯಾಂಕ್ ಯೂ ಸರ್ !! 😀 #joke

          • ಹೀಗೆಲ್ಲ ಒಳಗನ್ನು ಬಯಲುಮಾಡಿಕೊಳ್ಳುವುದೆ? Personality ಎಂದರೆ ವ್ಯಕ್ತಿತ್ವ. Physique ಬದಲು Personality ಪದ ಬಳಸುವುದು ಅನಾಹುತ! ರಾವಣತ್ವ ನಿನ್ನ ವ್ಯಕ್ತಿತ್ವದಲ್ಲಿದೆಯೆ? ನನ್ನಿಂದ ದೂರ ಇರು ಪಾಪಿ!

  8. ಇದೊಂದು ವೇದನಾಮಯ ಪದ್ಯ, [ಕಾರಣಾಂತರಗಳಿಂದ, ಕೆಲಸದ ಒತ್ತಡದಲ್ಲಿ ಭಾಗವಹಿಸದಿದ್ದರೂ [ಉಳಿದವರಿಗೆ ಕೆಲಸವಿಲ್ಲವೆಂದಲ್ಲ!] ನಡು ನಡುವೆ ಪಾಲ್ಗೊಳ್ಳುತ್ತೇನೆ, ದಯಮಾಡಿ ಸಹಿಸಿಕೊಳ್ಳಿ]

    ಎಲವೆಲವೊ ಕೇದಾರನಾಥನೆ
    ಹಲವು ಜನರನು ಸೆಳೆದುಕೊಂಡೆಯೆ ?
    ಬಲದಿ ಗಂಗೆಯ ಹರಿಸಿ ರಭಸದೆ ತಿರೆಯ ತರಿತಂದು !
    ಸುಲಭವೇನ್ ದರುಶನವು ನಿನ್ನಯ
    ಲಲನೆಗೇನ್ ಗೊತ್ತೆಮ್ಮ ಸಂಕಟ
    ತಲೆಯ ಜಾಹ್ನವಿಗಷ್ಟು ಪೇಳ್ ನೀ ಮತಿಯ ಕುರಿತಿಂದು ||

    • ಕೆಲಸವಿಲ್ಲದವನ ಕರೆಕರೆ: ಬುದ್ಧಿ ಇರುವ ಕುರಿಯನ್ನು ತಿಂದರೆ ಶಿವ ಬುದ್ಧಿವಂತನಾಗುತ್ತಾನೆಯೆ?

      ಅರ್ಥಮಾಗದೆ ಪೂರ್ವದರ್ಧದೆ
      ವ್ಯರ್ಥದಲಿ ತಿಣುಕಿದೆನು ಕೊನೆಯೊಳು
      ಪ್ರಾರ್ಥಿಪೆನು ಪೇಳ್ನೀನಿದೇನೈ ’ತಿರೆಯ ತರಿತಂದು’|
      ಅರ್ಥಮಿದ್ದೊಡಮುತ್ತರಾರ್ಧ, ಸ
      ಮರ್ಥನೆನಿಪನೆ ಪರಮಶಿವನು ಪ
      ದಾರ್ಥವನು ಚಪ್ಪರಿಸುವಂದದ ‘ಮತಿಯ ಕುರಿ ತಿಂದು’||

    • ಭಟ್ಟರೇ, ಒಳ್ಳೆಯ ಭಾವದ ಚೆಲುವಾದ ಪದ್ಯ. ಧನ್ಯವಾದಗಳು.

  9. ಆ ಮಂದಸ್ಮಿತಮೇಂ? ವಿರಾಗಿವೊಲು ನೀಂ| ಸಂಸಾರಮಂ ಗೈಯ್ದವೋಲ್
    ನೇಮಂ ವಿಸ್ಮೃತಿಗೊಳ್ಳಲಾಯ್ತು ಮನುಜರ್ಗ್| ಆಘಾತಮೆಂದೇಂ ವಲಂ?
    ವ್ಯೋಮಂ ಪೊಯ್ದಿರೆ ವೃಷ್ಟಿಭೀಕರವನುಂ| ಸೋಲಲ್ ಮಹಾಮಾನಿಸರ್
    ಭಾಮಾವಾಹಿನಿ (ಗಂಗೆ) ನಿನ್ನ ಕೊಂಕಳೆನುತಲ್| ಕಣ್ವಾಯಮಂ (ಕೀಟಲೆಯ ನಗೆ) ಗೈವೆಯೇಂ?

  10. ಇವಳೆ ದೇವನದಿ ಇವಳೆ ವಿಷ್ಣುಪದಿ
    ಭವವ ಹರಿವಳಿವಳು |
    ಭುವಿಗೆ ಜೀವನದಿ ಪರಮಪುಣ್ಯನದಿ
    ದಿವದ ಗ೦ಗೆಯಿವಳು || ೧ ||

    ಹರಿಯ ಪದ ತೊರೆದು ಹರನ ಮುಡಿಯುಳಿದು
    ಧರೆಯ ಕೊಳೆಯ ತೊಳಯೆಽ |
    ಭರದಲವತರಿಸಿ ಹರಿದು ಬರುತಿಹಳು
    ನರರಿನಘವ ಹರಿಯೆಽ || ೨ ||

    ಪಾರಾವಾರವ ಸೇರಲೆ೦ದು ಗಿರಿಯಿ೦ ಸಾಗಿರ್ದಳಾ ಗ೦ಗೆ ಕೇ-
    ದಾರಾಧೀಶನ ಭಕ್ತವೃ೦ದದೆನಿತೋ ಪಾಪ೦ಗಳ೦ ನೀಗುತು೦ |
    ಧಾರಾಕಾರದಿ ಬೀಳುತಿರ್ದ ಮಳೆಯೋ ಜೀಮೂತ ವಿಸ್ಫೋಟವೋ
    ಘೋರಾಕಾರಪ್ರವಾಹನಾಟ್ಯ ನಡೆದಿತ್ತಾ ದಿವ್ಯ ಕ್ಷೇತ್ರ೦ಗಳೊಳ್ || ೩ ||

    ಜೀಮೂತವಿಸ್ಫೋಟ = Cloud burst

    ನೆರೆಯಲ್ಲಿ ಸಿಲುಕಿದ ಹಿರಿಯರು ದೇವರಲ್ಲಿ ಮೊರೆಯಿಡುತ್ತಿದ್ದಾಗ ಮುಗ್ಧಬಾಲಕನ ಪ್ರಾರ್ಥನೆ:

    ಹರನೆ ಕುಳಿತೆ ನೀನೇಕೆ ಧ್ಯಾನದಲಿ
    ಬರದೆ, ಮೌನ ತರವೇ |
    ನೆರೆಯ ನೀರಿನಲಿ ಸಿಲುಕಕೊ೦ಡಿಹೆಯ
    ತರೆಗೆ ಬರಲು ಭಯವೇ || ೪ ||

    • ೩-೫ರ ಓಟ ಚೆನ್ನಾಗಿದೆ.
      ನರರಿನಘವ ಹರಿಯೆ – ನರರೊಳಘವ ಹರಿಸೆ
      ಧಾರಾಕಾರದಿ ಬೀಳುತಿರ್ದ ಮಳೆಯೋ ಜೀಮೂತ ವಿಸ್ಫೋಟವೋ – ಧಾರಾಕಾರದ ರುದ್ರತಾಂಡವಮೊ ಮೇಣ್ ಜೀಮೂತವಿಸ್ಫೋಟಮೋ (one word)
      Typo – ತೊಳೆಯೆ, ಸಿಲುಕಿಕೊಂಡಿಹೆಯ
      ಹೇಗೂ ಪಾದಾಂತ್ಯದ್ದು ಗುರ್ವಕ್ಷರವೇ. ‘ತರವೆ’, ‘ಭಯವೆ’ ಸಾಕು. ಅಥವಾ ‘ತರೆಯ ಸಾರೆ ಭಯಮೇಂ’ ಎನ್ನಿ.
      ನಡೆದಿತ್ತಾ ~ ನೆರೆದಿತ್ತಾ

      • Thanks for the suggestions.
        ರುದ್ರತಾಂಡವ ಶಬ್ದಪ್ರಯೋಗವೇ ಮೊದಲು ಅನಿಸಿತ್ತು. ಆದರೆ ಅದರಿಂದ ಪ್ರಳಯ ಪ್ರವಾಹ ಎಂಬ ಅರ್ಥ ಬರುವುದೋ ಇಲ್ಲವೋ ಎಂಬ ಸಂದೇಹ ಕಾಡಿತ್ತು.

      • ವೆರಿ ವ್ಯಾಲಿಡ್ ಪ್ರತಿಕ್ರಿಯೆ. ನನಗೂ ಅದೇ ಸಂದೇಹ ಕಾಡಿತ್ತು. ಆದರೆ ‘ಧಾರಾ’ ಶಬ್ದ ಇದೆಯಲ್ಲ ಎಂದು ಸಮಾಧಾನ ತಾಳಿ ಹಾಗೆ ಸವರಿದೆ.

    • ಅಭಿನಂದನೆಗಳು.; ನೀವು ಸಂಸ್ಕೃತ-ಕನ್ನಡಸವ್ಯಸಾಚಿಯಾಗುತ್ತಿದ್ದೀರಿ:-)
      ಘೋರಾಕಾರಪ್ರವಾಹ….ಇತ್ಯಾದಿಯಲ್ಲಿ ಶಿಥಿಲದ್ವಿತ್ವವು ಅಸಾಧು ಏಕೆಂದರೆ ಇದು ಒಂದೇ ಸಮಾಸವಾಗಿದೆ. ಹೀಗಾಗಿ ಇದನ್ನು ತಿದ್ದಬೇಕು “ಘೋರಾಕಾರದ ಪೂರನಾಟ್ಯ…ಇತ್ಯಾದಿಯಾಗಿ. ಪೂರ ಎಂದರೆ ಪ್ರವಾಹವೇ ತಾನೆ!

  11. ಹರನಮೈ ತಣಿಸುತಲಿ ಗಂಗೆಹರಿದಳು ಭರದಿ
    ನರಲೋಕವನು ನುಂಗುತಿಹಳು ಕಾಣಾ
    ಪರಿತಪಿಸಿರೆಲ್ಲಜನರಳುತ ಬೇಡಿರೆಶಿವಗೆ
    ಸುರಿಸಿದರು ಕಣ್ಣೀರಿನಭಿಷೇಕವ

    • ಪರಿತಪಿಸಿರೆಲ್ಲಜನ=ಪರಿತಪಿಸಿರಿ+ಎಲ್ಲಜನ ಎಂದಾಗುತ್ತದೆ.
      ಪರಿತಪಿಸುತೆಲ್ಲಜನ ಎಂದೇನೋ ಸವರಬಹುದು, ಆದರೆ ’ಪರಿತಪಿಸಿರೆ+ಎಲ್ಲಜನ’ ಎಂದಾಗುತ್ತದೆಯೆ?

      • ಹರನಮೈ ತಣಿಸುತಲಿ ಗಂಗೆಹರಿದಳು ಭರದಿ
        ನರಲೋಕವನು ನುಂಗುತಿಹಳು ಕಾಣಾ
        ಪರಿತಪಿಸಲೆಲ್ಲಜನರಳುತ ಬೇಡುತೆಶಿವಗೆ
        ಸುರಿಸಿದರು ಕಣ್ಣೀರಿನಭಿಷೇಕವ

        ಧನ್ಯವಾದ ಪ್ರಸಾದು ಅವರೆ… ಹೀಗೆ ಸವರಣೆ ಮಾಡಬಹುದೆ?

      • ಮೊದಲೆರಡು ಸಾಲುಗಳಲ್ಲಿ ಅಖಂಡತೆ (continuity) ಇಲ್ಲ. ಪೂರಕವಾಗಿರಲಿ, ವೈರುಧ್ಯವಿರಲಿ (contradiction), ಅಖಂಡತೆ ಇರಬೇಕು. ತಣಿಸು ಮತ್ತು ನುಂಗು – ಇವುಗಳನ್ನು ಪೋಣಿಸುವ ಸೂತ್ರವಿಲ್ಲಿಲ್ಲ.
        ಇಲ್ಲಿ, ’ಪರಿತಪಿಸಲು’ ಎನ್ನುವುದು ’ಪರಿತಪಿಸುವುದಕ್ಕೋಸ್ಕರ’ ಎಂದೇ ಅರ್ಥ ಹೊರಡಿಸುತ್ತದೆ. ಸವರಿಸಿ.

  12. ಶಿವ ತಾಂಡವ ನಾಡುತಿರಲ್
    ನವನಾವೀನ್ಯಪ್ರಕಾರದಿಂಬಳುಕುತಿರ-
    ಲ್ಲವನಾ ಜಟೆಯಿಂ ಗಂಗೆಯು
    ಭುವಿಯೊಳ್ ಧುಮುಕುತೆ, ಪ್ರವಾಹವೊಲ್ ತಾಕುಣಿದಳ್

    ಕಂದ ಪದ್ಯವು ಸರಿಯೋ??

    • ಕಲ್ಪನೆ ಸೊಗಸಾಗಿದೆ.
      ೧) ತಾಂಡವವಾಡುತಿರಲ್ ಎಂದಾಗಬೇಕು
      ೨) ಬಳುಕುತಿರಲ್ಲವನಾ = ಬಳುಕುತಿರಲ್+ಲವನಾ. ಸರಿಯಾಗದು. ಬಳುಕುತ್ತಿ/ರ್ಪವನಾ.. ಎಂದು ಸವರಬಹುದು.
      ೩) ಪ್ರವಾಹದೊಳ್ ತಾ ಕುಣಿವಳ್ – ಪ್ರವಾಹದಂತೆ ಎನ್ನುವಿದಕ್ಕಿಂದ ಪ್ರವಾಹದಲ್ಲಿ ಎನ್ನಬಹುದೇನೋ.

    • ಸ್ವಲ್ಪ ವ್ಯಾಕರಣವನ್ನು ಸುಧಾರಿಸಿಕೊಳ್ಳಬೇಕು. ಸೋಮನು ನೆರವಿತ್ತಾನು:-)

      • ಸಾರ್ ತಪ್ಪುಗಳು ತಿಳಿಯಲಿಲ್ಲ.. ಖಂಡಿತವಾಗಿ ತಿದ್ದಿಕೊಳ್ಳುತ್ತೇನೆ…

  13. ( ಮತ್ತೇಭವಿಕ್ರೀಡಿತದಲ್ಲೊಂದು ಪ್ರಯತ್ನ. ಕೊನೆಯ ಲಘುವನ್ನು ಗುರುವೆಂದೇ ಲೆಕ್ಕಿಸಿದ್ದೇನೆ. ಅಲ್ಲದೆ ಎರಡನೇ ಅಕ್ಷರದ ಪ್ರಾಸವನ್ನು ಕೈಬಿಟ್ಟಿದ್ದೇನೆ. ಅಲ್ಲದೆ ಶೈಲಿಯೂ ಕಲಸುಮೇಲೋಗರವಾಗಿದೆ. ಅದಕ್ಕಾಗಿ ಮನ್ನಿಸಿ. )

    ದಿಗಿಲೊಳ್ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದೋದ್ಭವೆ
    ಭರದೊಳ್ ಬೀಳುವ ಸೊಕ್ಕಿನಾರ್ಭಟವನುಂ ಸಂತೋಷದಿಂ ನಿಲ್ಲಿಸಿ
    ಹಿತದೊಳ್ ಗಂಗೆಯನಂದು ನೀನೆ ಶಿರದೊಳ್ ಕಾಪಿಟ್ಟು ಕಾಯ್ದೆಲ್ಲರಂ
    ಅಕಟಾಯೇಕಿದು ಪೇಳುಯಿಂದು ಜನರಂ ಕೈಬಿಟ್ಟು ನೀ ಪೋದೆಯೋ?

    • ಸ್ವಲ್ಪ ಬದಲಾಯಿಸಿ, ಕಡೆಯ ಗುರುವನ್ನು ನಿಜಗುರುವಾಗಿಸುತ್ತ:

      ದಿಗಿಲೊಳ್ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದಂಗಳಿಂ
      ಭರದೊಳ್ ಬೀಳುವ ಗಂಗೆಯಾರ್ಭಟವನುಂ ನೀ ಜಟಾಜೂಟಂಗಳಿಂ –
      ಹಿತದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಕಾಯ್ದೆಲ್ಲರಂ
      ಅಕಟಾ! ನೋಡದೆ ಹೋದೆಯಿಂದು ಶಿವನೇ ಕಾರುಣ್ಯದಾಕಂಗಳಿಂ!

    • ಕಲ್ಪನೆ ಚೆನ್ನಾಗಿದೆ.
      ೧) ’ಮುದಲ್’ ಎಂದರೆ ಭಾಷೆ ತುಸು ಹಳತಾಗಿ ಸೊಗಯಿಸುತ್ತದೆ. ’ಬೀಳುವ’ ಬದಲು ’ಸಾಗಿಪ’ ಎನ್ನಬಹುದು. ಹೇಗೂ ಅಲ್ಲಿ ’ಭರದೊಳ್’ ಇದೆ.
      ೨) ನೀ ಜಟಾಜೂಟಂಗಳಿಂ – ಛಂದಸ್ಸು ತಪ್ಪಿದೆ. ಸವರಿಸಿ. (’ಗಮಗಮಿಪ’ ಎನ್ನುವುದನ್ನು ’ಮಗಮಗಿಪ’ ಎಂದು ಬಳಸಿದ್ದಾರೆ ಕವಿಗಳು. ಆ precedent ಇಟ್ಟುಕೊಂಡು ನೀವು ’ನೀ ಟಾಜಟೂಜಂಗಳಿಂ’ ಎಂದು ತಿದ್ದಿದರೆ ಛಂದಸ್ಸು ಸರಿಹೋಗುತ್ತದೆ. ಭಾಷಾಶಾಸ್ತ್ರಿಗಳು ಹಾರಿಬಿದ್ದರೆ, ನನ್ನ ಹೆಸರು ಹೇಳಬೇಡಿ ;))
      ೩) ಕಾಯ್ದೆಲ್ಲರಂ+ಅಕಟಾ=ಕಾಯ್ದೆಲ್ಲರಮಕಟಾ. ವಿಸಂಧಿಯಾಗಿದೆ. ಕಾಪಿಟ್ಟ ನೀನಿಂದದೇ/ಕಕಟಾ ಎಂದು ಸವರಬಹುದು. ಕಾಪಿಟ್ಟು ಮತ್ತು ಕಾಯ್ದು – ಸಮಾನಾರ್ಥಕ ಪದಗಳು.

      • ಪ್ರಸಾದರೆ, ಧನ್ಯವಾದಗಳು. “ಟಾಜಟೂಜಂಗಳಿಂ” ಅಂತೂ ತುಂಬಾ ಚೆನ್ನಾಗಿದೆ. ಮೂರಕ್ಕೆ ಮುಕ್ತಾಯವೆಂದು ಈ ಕೆಳಗಿನ ಆವೃತ್ತಿ. 🙂

        ದಿಗಿಲೊಳ್ ಬೇಡಿರಲಾ ಭಗೀರಥ ಮುದಲ್ ಶ್ರೀವಿಷ್ಣು ಪಾದಂಗಳಿಂ
        ಭರದೊಳ್ ಬೀಳುವ ಗಂಗೆಯಾರ್ಭಟವನುಂ ಸಂತೈಸುತುಂ ತಾಳ್ಮೆಯಿಂ
        ಹಿತದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಭೂಲೋಕಮಂ
        ಶಿವನೇ ಭೋರ್ಗರೆದಿರ್ಪ ನೀರಹರಿವೊಳ್ ನೀನೆಂತು ತೇಲಾಡಿಹೆಯ್?

      • ಕೊನೆಯ ಸಾಲು – ಈಗ ನೋಡದೆಹೋದನೆ? ಎಂಬ ಕಲ್ಪನೆಯೇ ಚೆನ್ನಾಗಿತ್ತು.

  14. ಪ್ರಿಯ ಗಣೇಶರೆ ಹಾಗೂ ಪದ್ಯಪಾನ ಮಿತ್ರರೇ

    ಸಂಸ್ಕ್ರತ ಪದ್ಯ ವಿಭಾಗ ಪ್ರಾರಂಭವಾದದ್ದು ನೋಡಿ ಸಂತಸವಾಯಿತು . ಆದರೆ ಕೆಲವೊಂದು ಅಭಿಪ್ರಾಯದಗಳು ಹಾಗೂ ನಮ್ರ ವಿನಂತಿಗಳನ್ನು ವ್ಯಕ್ತಪಡಿಸಲು ಅನುಮತಿ ಬೇಡುತ್ತೇನೆ .

    ೧. ಸಂಸ್ಕೃತ ಪದ್ಯಗಳನ್ನು ಬೇರೆಯಾಗಿ publish ಮಾಡುವುದರಿಂದ ನನಗೆ ಸ್ವಲ್ಪ ನಿರಾಶೆ ಆಯಿತು. ತುಂಬಾ ಪಾಂಡಿತ್ಯವಿಲ್ಲದಿರುವ ನನಗೆ ವಿವಿಧ ಪದ್ಯಗಳನ್ನು ಓದಿ ಆಸ್ವಾದಿಸಲು ಕೊಂಚ ಶಿಕ್ಷಣ ವಿವರಣೆಗಳಿದ್ದರೆ ಒಳಿತು. ಈ ಕಾರಣದಿಂದ ಕೆಳಗಿರುವ ಸಲಹೆಗಳನ್ನು consider ಮಾಡಲು ನನ್ನ ವಿನಂತಿ

    ೨ ಪದ್ಯಗಳನ್ನೆಲ್ಲ ( ಕನ್ನಡ, ಸಂಸ್ಕೃತ ಮತ್ತಾವ ಭಾಷೆಯಾದರೂ ಸರಿ) ಒಂದೇ ವಿಭಾಗದಲ್ಲಿ ಇರುವುದು

    ೩ ಬೇರೆ ಭಾಷೆಗಳ ಪದ್ಯಗಳನ್ನು ಒಮ್ಮೆ ಕನ್ನಡ ಲಿಪಿಯಲ್ಲೂ ಹಾಕಿದರೆ ಓದುವುದು ಸುಲಭ ದೇವನಾಗರಿ ಲಿಪಿಯಲ್ಲಿ ಓದುವುದು ನನ್ನಂಥವರಿಗೆ ಕಷ್ಟಸಾಧ್ಯ

    ೪ ಕನ್ನಡ- ಸಂಸ್ಕ್ರತಗಳೆರಡರಲ್ಲೂ ಪಾಂಡಿತ್ಯವಿರುವವರು ಆದಷ್ಟುಪದ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಿದರೆ ನನ್ನಂಥವರಿಗೆ ಉಪಕಾರವಾಗುವುದು

    ೫ ಪದ್ಯಪಾನ ಮಿತ್ರರು ಇತರ ಭಾಷೆಗಳಲ್ಲೂ ( ತೆಲುಗು ,ತಮಿಳು) ಪದ್ಯ ಬರೆದು ಕನ್ನಡೀಕರಿಸಿದರೆ ಇನ್ನೂ ಸೊಗಯಿಸುವುದು

    ೬ ಕನ್ನಡಕ್ಕೂ ಸಂಸ್ಕೃತಕ್ಕೂ ನಿಕಟ ಸಂಬಂಧ ಇರುವುದರಿಂದ ಕನ್ನಡ ಲಿಪಿಯಲ್ಲಿ ಸಂಸ್ಕ್ರತ ಪದ್ಯಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಮತ್ತು horizon widening ಸುಲಭವಾಗುವುದು

  15. ಭುವಿಯಾಗ ಗಿರಿಕರಗಿ ಶಿವಶಿರವ ತಿರುವಾನ
    ಸವತಿ ಸೆಳೆದಾಳ ನಾಥಾನs ನಾಥಾನು
    ಶಿವೆಯನಿರಿಸಾನ ಶಿರದೊಳಗ ॥

    (ಕೈಲಾಸ ಗಿರಿನಡುಗಿ, ಶಿವನ ತಲೆ ತಿರುಗಿ, ತಲೆಯ ಮೇಲಿನ ಗಂಗೆಯುಕ್ಕಿ, ಶಿವನನ್ನೇ ಎಳೆದು ತಂದಾಗ – ಅನಾಥನಾದ ಶಿವ “ಪಾರ್ವತಿ”ಯನ್ನ ತಲೆಯ ಮೇಲಿರಿಸಿಕೊಂಡಿಹನೆಂಬ
    ಕಲ್ಪನೆಯಲ್ಲಿ )

    • ೧) ಶಿವಶಿರವ ತಿರುಪಾನ – ಶಿವಶಿರವು ತಲ್ಲಣಿಸೆ
      ೨) ಸವತಿs ಸೆಳೆ/ ಶಿವೆಯsನಿರಿ/ ಶಿರದೊsಳಗ – ನನನsನನ ಗಣ ಅಸಾಧು. ಸವತಿsಯುs ಸೆಳೆಯೆs ನಾಥsನs (ನಾಥsನs, ನಾಥsನುs ಎಂದೇ ಬರೆಯಿರಿ) & ಶಿವೆಯನ್ನುs ಶಿರದೊಳ್ ಪೊತ್ತಾನs ಎಂದು ಸವರಬಹುದು. (ಶಿವೆ ಬಂದು ಶಿರದೊಳ್ ನೆಲೆಯಾದಳ್ ಎಂದೂ.)

  16. ಸಮುದ್ರಮಥನದಲ್ಲಿ ಬ೦ದ ಹಾಲಾಹಲವನ್ನೇನೋ ಕುಡಿದುಬಿಟ್ಟಿದ್ದಾಯಿತು. ಆದರೆ ಈಗ ನದಿಯ ತಳದಿ೦ದ ಚಿಮ್ಮಿದ ಮಣ್ಣು ನೀರಿನ ಪ್ರವಾಹದೊ೦ದಿಗೆ ಸೇರಿ ಹಾಲಾಹಲಕ್ಕಿ೦ತ ಘೋರವಾದ ಅನಾಹುತವನ್ನು೦ಟುಮಾಡಿದೆ. ಆ ವಿಷದ೦ತೆ ಇದನ್ನು ಕುಡಿದು ಜನರ ರಕ್ಷಣೆ ಮಾಡಲಾಗದು . ಅದಕ್ಕೇನು ಮಾಡುವುದೆ೦ದು ಶಿವನು ವಿಚಾರ ಮಥನ ನಡೆಸಿದ್ದಾನೆಯೇ ?

    ವಾರಿಧಿಯ ಮಥನದಿ೦ ಕಾಲಕೂಟವು ಜನಿಸೆ
    ಪೀರಿದನು ಶಿವನದನು ಜನಕ್ಷೇಮಕೆ |
    ಪೂರದಿ೦ದುಮ್ಮಳಿಸೆ ಗ೦ಗೆಯಡಿಯಿ೦ ಮಣ್ ವಿ-
    ಚಾರಮಥನದೊಳಿಹನೆ ಮದನವೈರಿ !

    • ’ಮಣ್’ ಬಲಲು ಕರ್ದ ಅಥವಾ ಕರ್ದಮ ಬಳಸಿನೋಡಿ.

      • ನಿಮ್ಮ ಸಲಹೆಯ೦ತೆ ಸವರಿಸಿದ್ದೇನೆ. ಈಗ ಸರಿಯಾಗಬಹುದೇ?

        ವಾರಿಧಿಯ ಮಥನದಿ೦ ಕಾಲಕೂಟವು ಜನಿಸೆ
        ಪೀರಿದನು ಶಿವನದನು ಜನಕ್ಷೇಮಕೆ |
        ಪೂರದಿ೦ದುಮ್ಮಳಿಸೆ ಕರ್ದಮವು ತಲದಿ೦ ವಿ-
        ಚಾರಮಥನದೊಳಿಹನೆ ಮದನವೈರಿ !

      • ಪೂರದಿಂ~ತಲದಿಂ – Almost synonymous

        ವಾರಿಧಿಯ ಮಥನದಿ೦ ಕಾಲಕೂಟವು ಜನಿಸೆ
        ಪೀರಿದನು ಶಿವನಂದು ಜನಕ್ಷೇಮಕಂ|
        ಪೂರದಿ೦ದುಮ್ಮಳಿಸೆ ಗರಲಸಮ ಕರ್ದಮಂ
        ವಾರಿಸುವುದೆಂತೆಂದು ಚಿಂತಿಸಿಹನೇಂ||

        • ಸು೦ದರವಾದ ಪೂರಣ. ಸವರಣೆಗಾಗಿ ಧನ್ಯವಾದಗಳು.

  17. ಗಂಗೆ,

    ಸುಭದ್ರ ಪತ್ನಿಯನಭದ್ರ
    ಗೊಳಿಸುತ ತೊಡೆಯೆಂದೋಡಿಸುತ ಧಾವಿಸುತ ತಾ
    ಏಕ ಪತ್ನಿ ವ್ರತದ ಪಣ
    ತೊಡಿಸುತ ಭೋರ್ಗರೆತ ಅತ್ತ ಇತ್ತ ಸುತ್ತುತ್ತ ।।

    ಇತ್ತ ಶಿವ,

    ಈಶ ಮೊದಲ ಸತಿಯಂ ಕಾ
    ಪಿಡುತ ತಲೆ ಮೇಲಿಡುತ ಸ್ವಯಂ ತಾ ಲಯವೇ
    ಲಯ ಕಂಡು ಭಯ ಭಯ ಎನುತ
    ಜಗಕಂಜದ ಜಗದೊಡೆಯ ಜಲಕ್ಕಂಜಿ ಒಡೆಯುತ ವಿರಕ್ತಿ।।

    • ವೇದಪ್ರಕಾಶರಿಗೆ ಪದ್ಯಪಾನಕ್ಕೆ ಸ್ವಾಗತ. ಕಲ್ಪನೆ ಚೆನ್ನಾಗಿದೆ. ದಯವಿಟ್ಟು http://padyapaana.com/?page_id=438 ಕ್ಕೆ ಭೇಟಿನೀಡಿ ಕಂದಪದ್ಯದ ಲಕ್ಷಣಗಳನ್ನು ಮನನಮಾಡಿಕೊಳ್ಳಿ; ಪರಿಷ್ಕರಿಸಿ.
      ಆದಾಗ್ಯೂ, ಆ ಮೊದಲಸಾಲಿನ ಜಗಣಗಳದು ಒಂದು ತೆರನಾದ ವಿನೂತನ ಓಟ. ಹೊಸ ಛಂದಸ್ಸಿನ ಹುಟ್ಟಿಗೆ ನಾಂದಿಯೋ?
      ನನಾನ ನಾನನ ನನಾನ ನಾನನ
      ನನಾನ ನಾನನ ನನಾನ-ನಾ|
      ಅಥವಾ ಇಂಥದ್ದೊಂದು ಈಗಾಗಲೇ ಇದೆಯೋ?

      • ನನ್ನ ಮೊದಲ ಪದ್ಯಕ್ಕೆ ನೀಡಿದ ಪ್ರೋತ್ಸಾಹಕ್ಕೆ ಧನ್ಯವಾದಗಳು. ಗಂಗಾ ಪ್ರವಾಹ ಶಿವ, ಶಿವೆಯನ್ನೇ ಬಿಡುವಂತೆ ಕಾಣುತ್ತಿಲ್ಲ ……ಇನ್ನು ಗಣಗಳು ಉಳಿಯುವುದುಂಟೆ…?…..ಎಲ್ಲ ಕೊಚ್ಚಿಹೊಗಿವೆ 🙂 ……….ನೀವು ನೀಡಿದ ಲಿಂಕ್ ನೋಡಿ ತಿದ್ದುವ/ ಬರೆವ ಪ್ರಯತ್ನ ಮಾಡುವೆ…..ಮತ್ತೊಮ್ಮೆ ಧನ್ಯವಾದಗಳು ……

  18. ಹಿ೦ದೆ ಗ೦ಗಾವತರಣದಲ್ಲಿ ಭೂಮಿಗೆ ಬಿಡದೆ ತನ್ನ ಜಟೆಯಲ್ಲಿ ಬ೦ಧಿಸಿಟ್ಟನೆ೦ಬ ಸಿಟ್ಟಿಗೆ ಈಗ ಪ್ರವಾಹದ ನೀರಿನಲ್ಲಿ ಸಿಕ್ಕಿಹಾಕಿಕೊ೦ಡಿರುವ ಶಿವಮೂರ್ತಿಯನ್ನು ನೋಡಿ ಗ೦ಗೆಯು ಅಣಕಿಸುತ್ತಿರುವಳೇ ?

    ಹರಿಪದಚ್ಯುತೆಯಾಗಿ ನಭದಿ೦
    ಧರೆಗೆ ಧುಮುಕುವ ಸಮಯದೊಳು ನೀ೦
    ಶಿರದೊಳೆನ್ನನು ಬ೦ಧಿಸಿದೆಯೈ ಹರನೆ ನಿಷ್ಠುರನೆ |
    ಮರೆಯೆನಾ ಪರಿಭವವನೆ೦ದಿಗು
    ದೊರಕಿತೆನಗೀ ಸ್ವರ್ಣಸ೦ಧಿಯು
    ನೆರೆಯ ನೀರೊಳು ನಿನ್ನ ಕಟ್ಟಿದೆನೆ೦ದಳಾ ಗ೦ಗೆ ||

  19. ಶಿವನ ಮೂರ್ತಿಯ ತಲೆಯ ಮೇಲಿನ ಹೆಣ್ಣು ಯಾರದು ರೂಪಸಿ ?
    ನನ್ನ ಸ್ಥಾನವನಾರು ಕಬಳಿಸುವಾಸೆಯಿಂದಲಿ ಬಂದಳು? |
    ಎಂದು ರೋಷದಿ ಉಕ್ಕಿ ನುಗ್ಗಿದ ಗಂಗೆಯ ಕ್ಷಣಮೌಢ್ಯಕೇಂ?
    ಶಾಂತಮುದ್ರೆಯ ಧೀರಮೂರ್ತಿಯ ತುಟಿಗಳೂ ತುಸು ಬಿರಿದವು ||

    • ತುಂಬ ಒಳ್ಳೆಯ ಕಲ್ಪನೆ. ಆದರೆ ರೂಪಸಿ ಎಂಬ ಅಸಾಧುರೂಪವನ್ನು ಸುಧೀರ್ ಬಳಸಿದ್ದು ಆಶ್ಚರ್ಯ ತರುತ್ತಿದೆ:-) ಅಂತೆಯೇ ಹಲಕೆಲವು ವಿಸಂಧಿದೋಷಗಳೂ ಇಲ್ಲಿವೆ.
      ದಯಮಾಡಿ ಸವರಿಸಿಕೊಳ್ಳಿರಿ.

      • Thanks, Ganesh. I know the word ‘Roopasi’ is not saadhu, but my Kannada is corrupted(?) by Cinema songs. I would not use it in a serious situation.

      • On second thoughts, the word ‘ರೂಪಸಿ’ may be correct after all – ರೂಪವನ್ನೇ ಅಸಿಯಾಗಿ ಮಾಡಿಕೊಂಡವಳು!

      • ಕನ್ನಡದಲ್ಲ್ಲಿ ’ರೂಪಸಿ’ ಎಂಬ ಪದ ಬಹುಶಃ ಕುವೆಂಪು ಟಂಕಿಸಿದ್ದಿರಬೇಕು. ಮಧುಮಾಲತಿ ಎಂಬ ಚಿತ್ರದ ಅವರಗೀತೆಯಲ್ಲಿ ಷೋಡಶಿ-ಪ್ರೇಯಸಿ-ರೂಪಸಿ ಪ್ರಾಸಪದಮಾಲೆ ತಿಳಿದದ್ದೇ.

        ತೆಲುಗಿನಲ್ಲಿ ರೂಪಸಿ /ರೂಪರಿ ಎಂಬ ಪದ ( A beuty ಎಂಬ ಅರ್ಥದಲ್ಲಿ) ಅಧಿಕೃತವಾಗಿ ಬಳಕೆಯಲ್ಲಿದ್ದು ’ರೂಪು’ ಮೂಲದ ನಾಮವಾಚಕವಾಗಿದೆ. ಆಂಧ್ರ ಭಾರತ-ಹರವಿಲಾಸ ಕಾವ್ಯಾದಿಗಳಲ್ಲಿಯೇ ಈ ಪದದ ಬಳಕೆ ಕಂಡುಬರುತ್ತದೆ. ವಿಶೇಷವೆಂದರೆ ಈ ಪದ ಪುಂಸ್ರ್ರೀಲಿಂಗಗಳೆರಡರಲ್ಲೂ ಬಳಕೆಯಾಗಿದೆ.”ರೂಪಸಿಯಗು ಸುತುಗೋರುದು ಸುರಗಣವಂದ್ಯಾ” – ಆಂಧ್ರಭಾರತ- ದ್ರೋಣಪರ್ವ. “ರೋಗಶಂಕಾವಿಹೀನುಡು ರೂಪಸಿಯುನು… ಶ್ರೀನಾಥನ ಹರವಿಲಾಸಮು. “ಬಾಪುರೇಯನುಕೊನ ಬನಿಲೇದುಗಾಕ, ರೂಪಿಂಪ ನಾಕಂಟೆ ರೂಪಸಿ ಗಲದೇ”- ದ್ವಿಪದಕಾವ್ಯ-ಹರಿಶ್ಚಂದ್ರೋಪಾಖ್ಯಾನ. ಕನ್ನಡಕ್ಕೆ ಅಸಾಧುವೇ, ಸುಧೀರೆಂದಂತೆ ಇದು ಸಿನೆಮಾಕನ್ನಡವೇ.

    • ಆದಿಪ್ರಾಸವನ್ನೂ ಹೊಂದಿಸಿ ಸವರಿದ್ದೇನೆ:

      ಧವನ ಮೂರ್ತಿಯ ಶಿರದೊಳಿರ್ಪವಳಾವಳಾಕೆಯು ರುಚಿರಳು?
      ಹವಣಿಸಿಹಳೇನೆನ್ನ ಸ್ಥಾನವ ಕಬಳಿಸುತ್ತಲಿ ಮೆರೆಯಲು?
      ಭವಿಗಳಂದದೆ ಕ್ರುದ್ಧಗೊಂಡಿಹ ಗಂಗೆಯ ಕ್ಷಣಮೌಢ್ಯಕೇಂ?
      ಶಿವನು ಸಡಿಲಿಸಿ ಶಾಂತಮುದ್ರೆಯ ಧೀರಮೂರ್ತಿಯು ನಕ್ಕನೇಂ?

  20. ಪಾರ್ವತಿಯ ಪರ್ಸ್ಪೆಕ್ಟಿವ್

    ಕಂಡಕಂಡಂತೆನ್ನ ಗಂಡನ ಶಿರವೇರಿ
    ತೊಂಡುಗೆಯ್ಯುತಲೀ ಹರಿವಳು ಗಂಗೆಯ
    ಭಂಡಗಾತಿಯನೇಂ ಜರಿಯಲಿ

    ಮಾಟಗಾತಿಯಕೂಟವಾಟವೆಂದು ಬಗೆದು
    ಬೇಟಕ್ಕೆಳಸಿದ ಬೈರಾಗಿ ಸವತಿಯ
    ಕಾಟವನಿತ್ತ ಗರತಿಗೆ

    ಮುಡಿಯ ಮಿಂಡಿಗೆ ಕೊಟ್ಟನೊಡೆಯ ನೆಟ್ಟನೆ ಕೆಟ್ಟನ್
    ಒಡಲೊಳಗೆನ್ನ ಮುಚ್ಚಿಟ್ಟನ್ ಅವನ ಸಂ
    ಗಡಲೆನ್ನನಾಕೆ ಕೊಚ್ಚೊಯ್ದಳ್

    • ಅರ್ಧನಾರೀಶ್ವರತತ್ತ್ವವನ್ನು ಸೊಗಸಾಗಿ ತಂದಿದ್ದೀರಿ. ಸವತಿಯನ್ನು ಕೊಚ್ಚುವ ಆತುರದಲ್ಲಿ ತನ್ನ ಪತಿಯನ್ನೂ ಕೊಚ್ಚುವಂತಾದುದು ತಿಳಿಯಲಿಲ್ಲವೆ ಎಂದು ಹೇಳುವ ಇನ್ನೊಂದು ಆಯಾಮವನ್ನೂ ತೋರಿಸಬಹುದು.
      ನೆಟ್ಟನೆ ಕೆಟ್ಟನ್ – ಸ್ವಲ್ಪ ವಿವರಿಸಿ

      • ಧನ್ಯೋಸ್ಮಿ. ಒಡನೆಯೆ ಎಂಬರ್ಥದಲ್ಲಿ ನೆಟ್ಟನೆ (‘ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೆ’ ಎಂಬಂತೆ). ಅರ್ಧಾಂಗಿ ಒಬ್ಬಳಿರುತ್ತ ಆಕೆಯನ್ನು ಕೇಳದೆ ಗಂಗೆಯನ್ನು ಧರಿಸಿದಂದೆ ಮಹಾದೇವ ಜಾರತ್ವಕ್ಕೆ ಜಾರಿದನೆಂದು ಪಾರ್ವತಿಯ ಅಂಬೋಣ, ಅದಕ್ಕಾಗಿಯೇ ಭಂಡಗಾತಿ ಮಾಟಗಾತಿ ಮಿಂಡಿ ಇತ್ಯಾದಿಗಳ ಪ್ರಯೋಗ. ಅಲ್ಲದೆ (ಪರ)ಸ್ತ್ರೀಯಳ ಕೈಗೆ ಜುಟ್ಟು ಕೊಟ್ಟವ ಕೆಟ್ಟನಲ್ಲವೆ 🙂

  21. ಮುಳಿದು ಕೇಳ್ದಳ್ ಗಂಗೆ ಮೇಘವಿಸ್ಫೂರ್ಜಿತಂ
    ಬಳಿಯೆ ವರುಣನುಮೊರೆದ ಕಿವಿಮಾತನಾಲಿಸಲ್
    ತೊಳೆವೆ ಪಾಪಗಳೆನುತೆ ಘೂರ್ಣಿಸಿರಲನ್ನೆಗಂ
    ಪ್ರಳಯರುದ್ರನದಾಯ್ತು ನಗುವೊಂದೆ ಉತ್ತರಂ

    ಘೂರ್ಣಿಸು = ಅಲ್ಲೋಲಕಲ್ಲೋಲ ಮಾಡು.
    [ಪಂಚಮಾತ್ರಾಚೌಪದಿ]

    • ಒಳ್ಳೆಯ ಪದ್ಯ. ವಿಶೇಷತಃ ಮೇಘವಿಸ್ಫೂರ್ಜಿತಂ ಎಂಬ ಹೆಸರು cloud burst ಗೆ ತುಂಬ ಸೊಗಸಾಗಿದೆ. ಈ ಹೆಸರಿನಲ್ಲಿ ಹತ್ತೊಂಬತ್ತು ಅಕ್ಷರಗಳ ಒಂದು ಛಂದಸ್ಸೂ ಇದೆ. ಶಿಖರಿಣಿ ಮತ್ತು ಮಂದಾಕ್ರಾಂತೆಗಳ ಮಿಶ್ರನದಂತೆ ತೋರುತ್ತದೆ.
      u – – – – – | u u u u u – | -u – – u – -| (ಉದ್ದ ಗೆರೆಗಳು ಯತಿಸ್ಥಾನವನ್ನು ತೋರುತ್ತವೆ.)

    • ಸೊಗಸಾದ ಪದ್ಯ. ರವೀಂದ್ರ ಅವರಿಗೆ ಪದ್ಯಪಾನಕ್ಕೆ ಸ್ವಾಗತ. ತಮ್ಮ ಪರಿಚಯ?

  22. ಗಂಗೆ ತಾ ನೊಂದಿಹಳ್ ನಿನ್ನ ನಿರ್ಲಕ್ಷ್ಯದಿಂ
    ಹಂಗಿಸುತ್ತಿರ್ಪಳೇಂ ಮಣ್ಣನೆರ್ಚುತ್ತಲುಂ ?
    ಕಂಗಳಿಂ ಸೋರಿತೇಮೀ ಮಹಾ ಸಾಗರಂ ?
    ಸಂಗದೊಳ್ ಶಾಂತಿಯಂ ಸ್ಥಾಪಿಸೈ ಶಂಭುವೇ !

  23. ಪೊಗಿರಲ್ ಪಾರ್ವತಿ ಮಕ್ಕಳಂ ಕರೆಯಲೆಂ ಮಳೆಯಾಟ ಬೇಡೆನ್ನುತುಂ
    ನಗಿಸುತ್ತಿರ್ಪಳು ಗಂಗೆ ಶಂಭುವನು ತಾಂ ಶೃಂಗಾರದಾಟಂಗಳೊಳ್
    ಮೊಗಮಂ ತಟ್ಟುವೆನೆಂದು ನಾಟ್ಯವನು ಗೈಯುತ್ತಿರ್ಪಳಾಟೋಪದಿಂ
    ಜಗ ನೊಂದಿರ್ಪುದ ಕಾಣೆಯೇಂ ಹರಹರಾ, ಕಟ್ಟೈ ಜಟಾಜೂಟದೊಳ್

    • ಪದ್ಯಭಾವವು ಸೊಗಸಾಗಿದೆ. ಆದರೆ ಪೊಗಿರಲ್ ಎಂದರೆ ಏನೆಂದು ತಿಳಿಯಲಿಲ್ಲ. ಮೊದಲ ಪಾದದಲ್ಲಿ ಛಂದೋದೋಷವಿದೆ. ಪದ್ಯಬಂಧವು ಮತ್ತಷ್ಟೂ ಬಿಗಿಯಾದರೆ ಒಳಿತು.

      • ‘ಪೋಗಿರಲ್’ ಎಂಬುದಂ ‘ಪೊಗಿರಲ್’ ಎಂದೆಂ. ಅಸಾಧು ಅಸಾಧು. ತಿದ್ದಿರ್ಪೆಂ ಗಡ ಮೊದಲ ಸಾಲಂ. ಪದ್ಯವಿಂತಾದುದೈ [ಬಂಧಮಂ ಬಿಗಿಯಲ್ಕೀಗಶಕ್ತನ್. ಮಾಳ್ಪೆಂ ಪ್ರಯತ್ನಂ] ::

        ಸೊಗದಿಂ ಷಣ್ಮುಖ ನೀರೊಳಾಡುತಿರೆ ಮೇಣ್ ಕೂಗಲ್ಕುಮಾ ಪೋಗಿರಲ್
        ನಗಿಸುತ್ತಿರ್ಪಳು ಗಂಗೆ ಶಂಭುವನು ತಾಂ ಶೃಂಗಾರದಾಟಂಗಳೊಳ್
        ಮೊಗಮಂ ತಟ್ಟುವೆನೆಂದು ನಾಟ್ಯವನು ಗೈಯುತ್ತಿರ್ಪಳಾಟೋಪದಿಂ
        ಜಗ ನೊಂದಿರ್ಪುದ ಕಾಣೆಯೇಂ ಹರಹರಾ, ಕಟ್ಟೈ ಜಟಾಜೂಟದೊಳ್

Leave a Reply to ಜೀವೆಂ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)