Jun 292013
 

Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರು ಘಟನಾವಳಿಯನ್ನು ಆಧರಿಸಿ (ಅಥವಾ ಕೃಷ್ಣಸ್ತುತಿಯ)ಪದ್ಯಗಳನ್ನು ನಿಮ್ಮ ಇಷ್ಟದ ಛಂದಸ್ಸಿನಲ್ಲಿ ರಚಿಸಿರಿ.

  81 Responses to “ಪದ್ಯ ಸಪ್ತಾಹ ೭೩: ದತ್ತಪದಿ”

  1. ತೇ|ಗೀ||

    ಎರಡು ಸೈನ್ಯಗಳ ಮಧ್ಯೆ ನಿಂತಾಗ ತಾನೆ?
    ಹೊರಳು ದಾರಿ! ಸತ್ವವಿಕಾಸ ಕಳೆದು ಬೇನೆ
    ಧುರದೊಳೇನಿದಕಟಾ! ನರನ ಮೋಹ ತರವೆ?
    ಧರೆಯ ಬೆದಕಾಟವಳಿಸೆ ಹರಿಗೀತೆ ವರವೆ?

    • ಸದಮಲಾನಂದಗೀತಾವಿತಾನಲಗ್ನ-
      ಮುದಿತಗೋಸ್ತನೀಪಾಕಮವ್ಯಾಜಮಧುರ-
      ಮಿದು ಮನೋಹಾರಿ ಹಾರಿ-ಕೇಯೂರಿ-ಶೌರಿ-
      ಗೊದವಿದತ್ಯಂತಸುಸ್ನಿಗ್ಧನುತಿಸಮರ್ಚೆ

    • ಚಂದ್ರಮೌಳಿಯವರೇ,

      ಪದ್ಯಬಹಳ ಚೆನ್ನಾಗಿದೆ, ಅಂತ್ಯಪ್ರಾಸವನ್ನೂ ಕೂಡ ಚೆನ್ನಾಗಿ ನಿರ್ವಹಿಸಿದ್ದೀರಿ:)
      ‘ಧುರದೊಳೇನಿದಕಟಾ! ನರನ ಮೋಹ ತರವೆ?’ ಎಂಬುವುದು ಖಂಡಿತವಾಗಿಯೂ ಎಲ್ಲರೂ ಯೋಚಿಸಬೇಕಾದುದು…

    • ಪ್ರಿಯ ಚಂದ್ರಮೌಳಿಯವರೆ

      ಸರಳ ಸುಂದರ ಸೊಗಸು ಸೂಸುವ ಪದ್ಯ . ಅಭಿನಂದನೆಗಳು ವಂದನೆಗಳು

  2. ನುಡಿಸಯ್ ನರ್ಮಸ್ವರಮಂ
    ಮಡಿಯಾಗೆ ಮನಂ ಮಲರ್ದ ರಸಿಕಾಸ್ಯ! ಹರೀ !!
    ನಡಸಯ್ ವೈಕಟ್ಯಾನ್ತಕ!
    ಬಡವನಲಾಂ; ನೀನಕಾಟ್ಯಕಾಲಿಯನಾಟ್ಯಾ!!

    (ಅಕಾಟ್ಯ = ತೊಡಕಿಲ್ಲದ)

    • ಗಣೇಶ್ ಸರ್,

      ‘ಅಕಾಟ್ಯಕಾಲಿಯನಾಟ್ಯಾ’ ಎಂಬ ಪ್ರಯೋಗ ಕೃಷ್ಣಸ್ತುತಿಗೆ ಬಹಳ ಆಪ್ಯಾಯಮಾನವಾಗಿದೆ, ಬಹಳ ಹಿಡಿಸಿತು 🙂

      ‘ವೈಕಟ್ಯಾನ್ತಕ! ನೀನಕಾಟ್ಯಕಾಲಿಯನಾಟ್ಯಾ!!’ ಇಲ್ಲಿ ಶಬ್ಧಾಲಂಕಾರವು ಸೊಗಸಾಗಿ ಮೂಡಿದೆ

      ‘ಮಡಿಯಾಗೆ’ ಎಂದರೆ ಏನರ್ಥ ಸರ್

      • ಮಡಿಯು ಆಗೆ = ಮಡಿಯಾಗೆ (ಮನಸ್ನು ನಿರ್ಮಲವಾಗಿ) ಪವಿತ್ರವಾಗುವಂತೆ…ನರ್ಮಸ್ವರವನ್ನು ನುಡಿಸೈ..

        • ನನ್ನ ಪ್ರವಾಗಿ ಸೋಮನಿಗೆಯುಕ್ತವಿವರಣೆ ನೀಡಿದುದಕ್ಕಾಗಿ ಧನ್ಯವಾದ.

  3. ಜಯದ್ರಥವಧೆಯ ಸಂಧರ್ಭ ನನಗೆ ಬಹಳ ಇಷ್ಟ, ಅದನ್ನೇ ಹಿಂದೊಮ್ಮೆಯೂ ಬರೆದಿದ್ದೆ (http://padyapaana.com/?p=9#comment-1410)

    ಅಂಧತೆಯಿಂ ವಿಲಾಪಿಸುತಲರ್ಜುನನಾತ್ಮಜಶೋಕವಹ್ನಿತ-
    ಪ್ತಂ ಧೃತಮಪ್ಪ ಪೂಣ್ಕೆಗೆನೆ ಗೌಪ್ಯಮನಾಂತನಲಾ ಜಯದ್ರಥಂ
    ಬಂಧುರಮಪ್ಪ ವಿಗ್ರಹದ ಜಾಣ್ಮೆಗಳಾಶ್ರಿಪುವಲ್ತೆ ಕೃಷ್ಣನಂ
    ಸೈಂಧವನಾರ್ಭಟಾಂತ್ಯಕೆನೆ ಕಾಸಿಗನೊಳ್ ಚುಟುಕಾಟಮಾಳ್ದನಯ್

    ಅಂಧತೆಯಿಂ = ಪುತ್ರಶೋಕದಿಂದ ವಿವೇಚನೆಯನ್ನು ಕಳೆದುಕೊಂಡ
    ಬಂಧುರ = ವಕ್ರತೆ
    ವಿಗ್ರಹ = ಯುದ್ಧ
    ಸೈಂಧವ = ಜಯದ್ರಥ
    ಕಾಸಿಗ = ಕಾಯಿಸುವವನು (ಸೂರ್ಯ), ಈ ರೀತಿ ಮಾಡಬಹುದೆ?
    ಚುಟುಕು = ಸಣ್ಣ
    ಆಳ್ದ = arranged

    • ಪದ್ಯ ಚೆನ್ನಾಗಿದೆ. ವಿಶೇಷತಃ ಎಲ್ಲ ದತ್ತಪದಗಳನ್ನೂ ಒಂದೇ ಪಾದದಲ್ಲಿ ತಂದಿರುವ ಚಾತುರಿಯಂತೂ ಅತಿಸ್ತುತ್ಯ. ಆದರೆ “ಸಂಧಿಯ ಪೂಣ್ಕೆಗೆಯ್ಯೆ…..” ಎಂಬುದಕ್ಕೆ ಯುದ್ಧಾನಂತರ ಎಂಬ ಅರ್ಥ ಬಾರದು. ಅದು ಸಂಧಿಯ ಶಪಥ ಎಂದೇ ಅರ್ಥವಾಗುತ್ತದೆ. ಪದಗಳಿಗೆ ಪ್ರಧಾನವಾದ ಅರ್ಥವಿಧಿಯೆನಿಸಿದ ಅಭಿಧಾವೃತ್ತಿಯಲ್ಲಿ (designated meaning) ನಾವು ನೈಘಂಟುಕವಾದ ಅರ್ಥವನ್ನಲ್ಲದೆ ನಮ್ಮಿಚ್ಛೆಯ ಅರ್ಥವನ್ನು ಹಚ್ಚುವಂತಿಲ್ಲವಷ್ಟೆ:-) ಇದೇನಿದ್ದರೂ ವ್ಯಂಜನಾವೃತ್ತಿಯಲ್ಲಿ (suggested meaning) ಸಾಧ್ಯ. ಆದರೆ ಇದಾದರೂ ಔಚಿತ್ಯ ಮತ್ತು ಸಂದರ್ಭಶಕ್ತಿ ಹಾಗೂ ಸಮಗ್ರತಾತ್ಪರ್ಯಗಳಿಗೆ ಕಟ್ಟುಬಿದ್ದಿರುತ್ತದೆ.

      • ಗಣೇಶ್ ಸರ್,

        ಪುತ್ರಶೋಕದಲ್ಲಿ ಕೆರಳಿದ ಅರ್ಜುನ ಸಂಧಾನದ ಶಪಥ ಮಾಡಿದನು ಎಂಬ ಅರ್ಥ ಬರುವ ಹಾಗೆ ನನ್ನ ಪದ್ಯವಿರುವುದನ್ನು ಕಂಡು ಪ್ರಮಾದದ ತೀವ್ರತೆ ತಿಳಿಯಿತು 🙂

        ಮೂಲದಲ್ಲೇ ಸವರಿಸಿದ್ದೇನೆ ಈಗ ಸರಿಹೊಂದುತ್ತದೆಯೇ?

  4. ಕಾಲಿಯಮರ್ದನ ಪ್ರಸಂಗವು ಕೃಷ್ಣನ ಲೀಲೆಗಳ ಪಟ್ಟಿಯಲ್ಲಿ ಗಣ್ಯಸ್ಥಾನವನ್ನು ಪಡೆದಿದೆ. ಅದನ್ನು ಆಧರಿಸಿದ ಪದ್ಯವನ್ನಿಲ್ಲಿ ಅರ್ಪಿಸುತ್ತಿದ್ದೇನೆ –

    ವರವೃಂದಾವನತಾರಕೇಂದುವಚಲಂ ವಾತಾಶಕಾಲಾಪ ಸೈ
    ನ್ಯರವಸ್ತಬ್ಧಿಗಮಂದು ಕಾಟಕಭುಜಂಗೋತ್ತುಂಗಶೀರ್ಷಾಗ್ರದೊಳ್
    ಗುರುಕಂಠಂ ಘನಕಾಲದೊಳ್ ನಟಿಪವೊಲ್ ಸಾನಂದದಾ ಲಾಸ್ಯಮಂ
    ಹರಿ ಗೆಯ್ದನ್ ಮದಕಾಸರಾಂತ್ಯಕಕಟಾ ನಾಗಗ್ನೆಯರ್ ಕಂಡಿರಲ್

    ವಾತಾಶ – ಸರ್ಪ
    ಕಾಲಾಪ – ಹೆಡೆ
    ಕಾಟಕ – ತೊಂದರೆ ಕೊಡುವವನು
    ಗುರುಕಂಠ – ನವಿಲು
    ಘನಕಾಲ – ಮಳೆಗಾಲ
    ಕಾಸರ – ಅರಣ್ಯ
    ಗ್ನೆ – ಪತ್ನಿ (ನಾಗಗ್ನೆಯರ್ – ಕಾಲಿಯನ ಪತ್ನಿಯರು)

    • ಪದ್ಯವೇನೋ ಚೆನ್ನಾಗಿದೆ; ಸಾಲಂಕೃತವೂ ಆಗಿದೆ. ಆದರೆ ತುಂಬ ಅಪ್ರಸಿದ್ಧಪದಗಳನ್ನು (ಔಚಿತ್ಯದ ಅನನ್ಯತೆಯ ಅನಿವಾರ್ಯತೆಯಿಲ್ಲದಾಗಲೂ) ಹೆಚ್ಚಾಗಿ ಬಳಸಿದದುದು ಅಪ್ರತೀತ ಎಂಬ ಅಲಂಕಾರಶಾಸ್ತ್ರೀಯದೋಷಕ್ಕೆ ಎಡೆಯನ್ನಿತ್ತಿದೆ. ಕೆಲಮಟ್ಟಿಗೆ ಸುಬೋಧ ಅಥವಾ ವಿದ್ವತ್ಪ್ರಚುರಪದಗಳನ್ನು ಬಳಸಿದಲ್ಲಿ ಒಳಿತು.

  5. ಗುರುಗಳು ಕ್ಷಮಿಸಬೇಕು. ಆದರೆ ಅಲಂಕಾರಶಾಸ್ತ್ರದ ವಿಚಾರದಲ್ಲಿ ನಾನು ತೀರಾ ಅಜ್ಞಾನಿ. ಅಲಂಕಾರಶಾಸ್ತ್ರಾಧ್ಯಯನವು ಪದ್ಯರಚನೆಯ ನಿಟ್ಟಿನಲ್ಲಿ ಬಹುಮುಖ್ಯವೆಂದು ತಿಳಿದಿದ್ದರೂ ಅದಕ್ಕೆ ಅಗತ್ಯವಾದ ಕಲಿಕೆಯ ಸಾಮಗ್ರಿಗಳು ದೊರೆಯುತ್ತಿಲ್ಲ. ತಮ್ಮಿಂದಲೇ ಲಿಖಿತವಾದ “ಅಲಂಕಾರಶಾಸ್ತ್ರ” ಹಾಗೂ ಎಂ.ಎ. ಹೆಗಡೆಯವರ “ಅಲಂಕಾರತತ್ತ್ವ” ಎಂಬ ಹೊತ್ತಗೆಗಳಿಗಾಗಿ ಪಟ್ಟ ಅನೇಕ ಪ್ರಯತ್ನಗಳ ನಂತರವೂ ಅವು ದೊರೆತಿಲ್ಲ. ಹೀಗಾಗಿ ಅಜ್ಞಾನದಿಂದುಂಟಾಗುವ ದೋಷಗಳು ನನ್ನ ಇತ್ತೀಚಿನ ಬಹುತೇಕ ಅಥವಾ ಎಲ್ಲ ಪದ್ಯಗಳಲ್ಲಿಯೂ ತೋರುತ್ತಿವೆ. ತಾವು ಕೃಪೆಮಾಡಿ ಆ ಪುಸ್ತಕಗಳನ್ನು ದೊರಕಿಸಿಕೊಳ್ಳುವ ಮಾರ್ಗವನ್ನು ತಿಳಿಸಿದರೆ ತಮ್ಮಿಂದ ಬಹಳ ಉಪಕಾರವಾದೀತು.

    • ತೀನಂ ಶ್ರೀ ಅವರ ಭಾರತೀಯಕಾವ್ಯಮೀಮಾಂಸೆಯನ್ನೂ ನೋಡಬಹುದು. ಅದು ತುಂಬ ಉತ್ತಮಗ್ರಂಥ. ಇದು ಮೈಸೂರು ವಿ.ವಿ.ಯಿಂದ ಪ್ರಕಾಶಿತ. ಅಂಕಿತಪುಸ್ತಕದಂಗಡಿಯಲ್ಲಿ ಸಿಗಬಹುದು. ಎಂಎ. ಹೆಗಡೆಯವರ ಕೃತಿಯು ಧಾರವಾಡದ ಸಮಾಜಪುಸ್ತಕಾಲಯದ ಪ್ರಕಟನೆ. ನನ್ನ ಪುಸ್ತಕವು ಬೆಂಗಳೂರಿನ ಭಾರತೀಯವಿದ್ಯಾಭವನದ ಗಾಂಧಿ ಕೇಂದ್ರದಿಂದ ಪ್ರಕಾಶಿತ. ಆದರೆ ಈ ಯಾವ ಕೃತಿಗಳಲ್ಲಿಯೂ ಕಾವ್ಯ/ಪದ್ಯವೊಂದರ ರಚನೆಯ ದೋಷಗಳನ್ನು ಕುರಿತು ತುಂಬ ವಿವರಗಳಿಲ್ಲ. ಇದಕ್ಕಾಗಿ ನೇರವಾಗಿ ಅಲಂಕಾರಶಾಸ್ತ್ರಗ್ರಂಥಗಳನ್ನೇ ಆಶ್ರಯಿಸಬೇಕು; ಮುಖ್ಯವಾಗಿ ಮಮ್ಮಟನ ಕಾವ್ಯಪ್ರಕಾಶ, ವಾಮನನ ಕಾವ್ಯಾಲಂಕಾರಸೂತ್ರವೃತ್ತಿ, ವಿಶ್ವನಾಥನ ಸಾಹಿತ್ಯದರ್ಪಣ ಇತ್ಯಾದಿಗಳಿಲ್ಲಿ ಗಮನಾರ್ಹ. ತಾವು ಕನ್ನಡ ಕೈಪಿಡಿ ಎನ್ನುವ ಮೈಸೂರು ವಿ.ವಿ. ಪುಸ್ತಕವನ್ನೂ ಗಮನಿಸಬಹುದು.

      • ತಮ್ಮಿಂದ ದೊರೆತ ಅಮೂಲ್ಯ ಮಾಹಿತಿಗೆ ನಾನು ಕೃತಜ್ಞ. ಆದರೆ ಮಮ್ಮಟನ ಕಾವ್ಯಪ್ರಕಾಶ, ವಾಮನನ ಕಾವ್ಯಾಲಂಕಾರಸೂತ್ರವೃತ್ತಿ, ವಿಶ್ವನಾಥನ ಸಾಹಿತ್ಯದರ್ಪಣಾದಿ ಗ್ರಂಥಗಳು ಪರಿಷತ್ತಿನಲ್ಲಿ ದೊರೆಯುತ್ತವೆಯೇ ಸರ್ ? ಒಂದು ವೇಳೆ ದೊರೆತರೂ ಅವುಗಳಲ್ಲಿ ನಿಹಿತವಾಗಿರುವ ಗಹನ ವಿಚಾರಗಳು ನನ್ನಂತಹ ಹದಿನೆಂಟರ ಹರೆಯದವನಿಗೆ ಸುಲಭಗ್ರಾಹ್ಯವೇ ?

        • I have no hope of you getting these books in ay library:-) and above all, to you it would be rather difficult to comprehend. Hence please be satisfied with what ever little that is relevant and pertinent I would inform you here:-)…over the years, you may go to those originals.

  6. ಇಲ್ಲಿ ನನ್ನ ಮೊದಲ ಯತ್ನ. ಭಯೇನಾಪಿ ರಚನಾಧಾರ್ಷ್ಟ್ಯಂ ಕರಿಷ್ಯೇ.

    सैन्याधीश्वरसंस्थिते कुरुगृहे भीष्मादिभिर्भूषिते
    चीत्कारं हृतशाटिकासमुदितं श्रुत्वागतस्त्वं विभुः ।
    तस्या भीकरसंकटानि हृतवान् वस्त्रप्रदानाद् भृशं
    लोको काटयतेऽद्य दुर्जनकृतं वस्त्रैस्त्वदीयैर्ननु ॥

    (द्रौपदीरक्षणार्थं कृष्णेन प्रदत्तं प्रभूतं वस्त्रम् उपयुज्य लोकोऽद्य दुर्जनकृत्यं काटयते आच्छादयति किम् इति भावः । कट् धातुः आवरणार्थकः ।)

    • चतुर्थे पादे लोकः काटयते इति पाठेन विसर्गसन्धिदोषः परिहार्यः ।

      • ಸ್ವಾಗತಂ ವಃ | ಪದ್ಯಪಾನವಿನೋದನಾರ್ಥಂ ಸರ್ವರಸಿಕವಯಸ್ಯಜನಪರತಃ ಪುನಶ್ಚ ಭವತೇ ವ್ಯಾಹರಾಮಿ ಸ್ವಾಗತಸುಮಾಂಜಲಿಮ್ | ಪದ್ಯಮಿದಮನವದ್ಯಮೇವ ಭವತಃ | ಭವತ್ಪರಿಚಯಜಿಜ್ಞಾಸುರಸ್ಮಿ ಚ |

        • प्रणमामि । पद्यपानं प्रविशतो मम प्रमोदः । बेङ्गलूरु नगरे प्रवृद्धः, न्यू यार्क् राज्ये यन्त्रदृष्टिक्षेत्रे (computer vision) संशोधनवृत्तिं कल्पयामि । साम्प्रतं विरामार्थं गृहमागतोऽस्मि । ಕನ್ನಡದಲ್ಲಿ ಪದ್ಯ ರಚಿಸುವ ಸಾಹಸವನ್ನು ಒಮ್ಮೆ ಮಾಡಿದೆ. ಹೆಚ್ಚಾಗಿ ಸಂಸ್ಕೃತಪದಗಳೇ ಬಂದದ್ದನ್ನು ನೋಡಿ ಮತ್ತೆ ಆ ಸಾಹಸ ಮಾಡಿಲ್ಲ.

          • ನಿಮ್ಮ ಪರಿಚಯವಾದದ್ದು ತುಂಬ ಸಂತೋಷ.
            ನಿಮ್ಮಂಥ ಹಲವಾರು ಮಿತ್ರರ ಸಹಕಾರವಿದ್ದಲ್ಲಿ ಪದ್ಯಪಾನದ ಸಂಸ್ಕೃತಾವೃತ್ತಿಯನ್ನು (Sanskrit-edition) ಹೊರಡಿಸಲು ಸಾಧ್ಯವಾದೀತು. ಈಗಾಗಲೇ ನಮ್ಮ ಈ ಜಾಲಸ್ಥಾನದಲ್ಲಿ ಸಂಸ್ಕೃತಪದ್ಯಪಾನದ ಸ್ವಾಗತಪದ್ಯಗಳೂ
            ಪರಿಚಯೋದ್ದೇಶಗಳೂ ಇವೆ. ದಯಮಾಡಿ ನೋಡಿರಿ. ನಮ್ಮ ಗೆಳೆಯರಾದ ಆರ್. ಶಂಕರ್, ವಾಸುಕಿ, ಜಿ. ಎಸ್. ರಾಘವೇಂದ್ರ, ಸೋಮ, ಮೋಹನ್, ಬಾಪಟ್, ಅರ್ಜುನ್ ಮತ್ತಿತರರು ಗಟ್ಟಿಯಾದ ಸಹಕಾರ ನೀಡುವುದೇ ಆದಲ್ಲಿ ಇದು ಸಾಧ್ಯವಾದೀತು. ಇಲ್ಲವಾದರೆ ಬರಿಯ ನಾನೊಬ್ಬನೇ ಉಳಿದೇನೆಂದು ಅಳುಕುತ್ತಿದ್ದೇನೆ:-)

  7. ಕೃಷ್ಣ ನರಕಾಸುಸನಿಂದ ಶೋಷಿತರಾದ ವನಿತೆಯರನ್ನು ರಕ್ಷಿಸಿ ತನ್ನ ಹೆಸರಿನ ಸ್ಥಾನಮಾನಗಳನ್ನಷ್ಟೇ ಕೊಟ್ಟಿದ್ದನ್ನೇ ಕವಿಗಳು ಕಲ್ಪನೆಯಿಂದ ಬೆಳೆಸಿ ನಿರ್ಮಮಮೂರ್ತಿಯಾದ ಕೃಷ್ಣನನ್ನು 16 ಸಾವಿರಹೆಂಡಿರೊಡನೆ ಸರಸವಾಡುತ್ತಾನೆಂದು ಚಿತ್ರಿಸುವ ಹಿನ್ನಲೆಯಲ್ಲಿ…

    ಸಾಸಿರವೆಣ್ಗಳನಾ ನರ-
    ಕಾಸುರನಿಂ ರಕ್ಷಿಸಿರ್ಪ ಸೈನಡೆಯೊಳ್ ಹಾ
    ರಾಸಿಕ್ಯಮೆಂತುಟಯ್? ಪೆಸ-
    ರ್ಗಾಸರೆಕೊಟ್ಟಾ ನೆಗಳ್ತಿಯುಂ ಕಾಟಮೆ ದಲ್

    ಸಾಸಿರ – ಹೆಚ್ಚಿನಸಂಖ್ಯೆಯ
    ಸೈನಡೆ -> ನೇರವಾದ ನಡತೆ
    ಪೆಸರ್ಗಾಸರೆ -> ಶಿಥಿಲದ್ವಿತ್ವ

    • ಭಲರೆ! ಸೋಮ, ಮನೋಹರಮಾರ್ಗದಿಂ-
      ದಲರವೊಲ್ ಸಹಜೋಜ್ಜ್ವಲಭಾವದಿಂ-
      ದೊಲಿಸಿದಯ್ ನವದತ್ತಪದಂಗಳಂ;
      ನಿಲಿಸಿದಯ್ ರಸದೊಳ್ ಸುಕವಿತ್ವಮಂ ||

  8. ಕನ್ನನ “sign”ಇನ ಮಾಟದಿ ಕಂಡೆನು
    ಮುನ್ನದೆ “cause”ಇನ ತೀಟವನುಂ।
    ತನ್ನದೆ “tan”gent ರೂಪದೆ ಕಂದನ
    ತನ್ನೊಳು “caught”ಇಹ ಗೋಪಿಯನುಂ॥

    sign = ಲಕ್ಷಣ, cause= ಉದ್ದೇಶ, ತೀಟ = ಚೇಷ್ಟೆ, tangent = ಸ್ಪರ್ಶರೇಖೆ, caught = ಹಿಡಿದುಕೊಂಡ
    (ತುಂಟ ಕೃಷ್ಣನ ಮುದ್ದಿಸುವ ಯಶೋದೆಯ ಕಲ್ಪನೆಯಲ್ಲಿ – “data”ಪದಿ)

    • ಒಳ್ಳೆಯ ಜಾಣ್ಮೆಯ ಹಾದಿಯನ್ನೇ ಹಿಡಿದಿದ್ದೀರಿ:-) ಆದರೆ ತೀಟ ಎಂಬುದು ತೀಟ್ಯೆಂದಾಗಲು ವ್ಯಾಕರಣವೊಪ್ಪದು.

      • ಹೌದು ಗಣೇಶ್ ಸರ್, ಅದಕ್ಕೆ ಇದು “ತ” ಒತ್ತಿಲ್ಲದ “data”ಪದಿ! sin,cos ಜೊತೆಗೆ “ತೀಟ” ಬಂದುಬಿಟ್ಟಿತು. ತಿದ್ದಿದ ಪದ್ಯ

        ಕನ್ನನ “sign”ಇನ ಮಾಟದಿ ಕಂಡೆನು
        ಮುನ್ನದೆ “cause”ಇನ ನೋಟವನುಂ।
        ತನ್ನದೆ “tan”gent ರೂಪದೆ ಕಂದನ
        ತನ್ನೊಳು “caught”ಇಹ ಗೋಪಿಯನುಂ॥

  9. ಕೃಷ್ಣನನ್ನು ವಿದ್ಯಾರ್ಥಿಯೊಬ್ಬನು ತನ್ನನ್ನು ಗಣಿತದ ಪರೀಕ್ಷೆಯ ಹಿಂದಿನ ರಾತ್ರಿ ದೂಷಿಸುವ ಪರಿ. ಆಲ್ ಜೀಬ್ರಾವನ್ನು ಪದ್ಯಕ್ಕೆ ಸರಿಹೊಂದುವಂತೆ ಆಲುಜೀಬ್ರಾ ಎಂದು ತಿರುಚಲಾಗಿದೆ. ಗಣಿತದ ಮೇಷ್ಟ್ರುಗಳು ನನ್ನ ತಪ್ಪನ್ನು ಮನ್ನಿಸಬೇಕು 🙂 :

    ಇರಲು ಸೈನ್,ಕಾಸ್,ಟ್ಯಾನ್ಗಳಾರ್ಭಟ
    ವಿರಲು ಕ್ಯಾಲ್ಕುಲಸಾ ಜೊಮೆಟ್ರಿಯು
    ಬರಲು ಸಂಗಡವಾಲುಜೀಬ್ರದ ಕಾಟವೇನೆನಲಿ ?
    ಸರಿಯೆ ಸೃಷ್ಟಿಯ ಗಣಿತವಾಗರ ?
    ತರವೆ ವಿದ್ಯಾರ್ಥಿಗಳ ಮೊರೆಯ
    ನ್ನರಿಯದಂತಿಹ ನಿನ್ನ ಲೀಲಾನಾಟಕವು ಹರಿಯೇ ?

    • ಅರಿವ ನಿಮ್ಮಯ ಪದ್ಯಪಾತ್ರದ
      ಜರೆತವನು ಗೋವಿಂದನೆಂದೂ
      ಮರೆಯಿಸುವನಲ ಮುರಳಿಯಿಂ ಮೇಣ್ ಗಣಿತದಣಕವನು:-)

      • ಸರಿಯದೆನಿಪುದೆ ಗುರುಮಹೋದಯ
        ರರಿಯನೇಂ ನಿಮ್ಮಾತ್ಮಬಂಧುವು ?
        ಬರಿಯ ಕಪಟದ ನಾಟಕದೊಳಾಟವನು ಕಟ್ಟಿಹನೆ !
        ಕರೆಗದೋಗೊಡನೇಕೆ ಮುರಹರ ?
        ಪರಿಕಿಸಲು ಮೇಣ್ ಮಾರ್ಕ್ಸನೀಯಲು
        ಬರಿದೆ ಲಂಚಕೆ ಕೈಯನೊಡ್ಡುವ ವ್ಯಾಲ್ಯುಯೇಟರನೇಂ ?

        ಕೃಷ್ಣನನ್ನು ಬೈದದ್ದಕ್ಕೆ ಬೇಸರಿಸದಿರಿ ಗುರುಗಳೆ ಪ್ಲೀಸ್ 🙂 ….ತಿಳಿದೂ ತಿಳಿದೂ ಕೃಷ್ಣನು ಹೀಗೆ ಮಾಡುವವನಲ್ಲವೆಂದು ತಿಳಿದಿದ್ದರೂ ಆತನ “ಸಂಭವಾಮಿ ಯುಗೇ ಯುಗೇ” ಎಂಬ ಮಾತಿನ ಮೇಲೆ (ಈಗಿನ ದೇಶದ ವ್ಯವಸ್ಥೆಯನ್ನು ನೋಡಿದ ಮೇಲೆ) ಈಚೀಚೆಗೆ ಅದೇಕೋ ಸಂಶಯ ಹುಟ್ಟುತ್ತಿದೆ… no offence meant sir…!!! 🙂 🙂

        • ಸಂಭವಾಮಿ ಯುಗೇ ಯುಗೇ ಎಂಬುದಕ್ಕೆ ಹೀಗೆ ಅರ್ಥ ಮಾಡುವುದಾದರೆ, ಅದರ ಹಿಂದಿನ ಸಾಲನ್ನು ಹೀಗೆ ಅರ್ಥೈಸಬೇಕಾಗುತ್ತದೆ:
          ಧರ್ಮ ಸಂಸ್ಥಾ अपना ಅರ್ಥಾಯ 😉

  10. ಕೃಷ್ಣನನ್ನು ನಂದನ ಮನೆಯಲ್ಲಿ ಬಿಟ್ಟುಬಂದ ಮೇಲೆ ಶಿಶುರೂಪದ ಮಾಯೆ ಅಳುವ ಶಬ್ದ ಕೇಳಿ

    ಕಲ್ಲೆದೆಯ ಕಂಸನಿಗೆ ಸೈನಿಕರು ಬಂದೊರೆಯೆ
    ಕಲ್ಲೆಸೆದ ಕಾಸಾರವಾಯ್ತು ಮನವು |
    ಕಲ್ಲಿಗಪ್ಪಳಿಸಲ್ಕೆ ಶಿಶುವನಕಟಾ ನೆಗಹಿ-
    ತಲ್ಲಿಯೇ ಗಗನಕಾಟಿಕೆಯ ತೆರದಿ ||

    ನೆಗಹಿತು = ಚಿಮ್ಮಿತು.

  11. (ಇದು ನನ್ನದೇ ಅನುಭವ. ನಲ್ಲಿಯಲ್ಲಿ ನೀರು ಬರದೆ ಸ೦ಪು ಖಾಲಿಯಾದಾಗ ಟ್ಯಾ೦ಕರ್ ಬುಕ್ ಮಾಡಲು ಹೋಗಿದ್ದೆ. ಅರ್ಜೆ೦ಟಾಗಿ ಬೇಕಾಗಿದೆ ಎ೦ದಾಗ ಬೇಸರದಿ೦ದ -ಡ್ರೈವರಿಲ್ಲ. ಅವನು ಬ೦ದಾಗಲೇ ಬನ್ನಿ. ಈಗ ಸುಮ್ಮನೆ ನನಗೆ ಕಾಟ ಕೊಡಬೇಡಿ ಎ೦ದು ಸಿಡುಕಿದ್ದ ಆ ಅಧಿಕಾರಿ.)

    ಸೈನ್ ಬೋರ್ಡ್ ನೋಡುತ ಹೊಕ್ಕೆ ನಾನು ತ್ವರೆಯಿ೦ ಜಲಮ೦ಡಳಿಯ ಹಾಲಿನೊಳ್ |
    ಏನ್ ಬೇಕೆ೦ದಧಿಕಾರಿ ಕೇಳಿ ಬಳಿಕಾ ಸೋಪಾನವೇರಿರ್ದಪ೦ |
    “ನಾನ್ ಬ೦ದಿರ್ಪುದು ನೀರಿಗಾಗಿ , ಕಳಿಸೊ೦ದೀ ಟ್ಯಾ೦ಕರ೦” ಎ೦ದೆನಲ್ ||
    ‘ಜಾನ್ ಬ೦ದಾಗಲೆ ಬನ್ನಿ ಕಾಟ ಕೊಡ ಬೇಕಾಗಿಲ್ಲವೀಗೆ’೦ದನೈ ||

    (ಹಾಲ್ = Hall ;
    ಸೋಪಾನ = ಮಹಡಿಮೆಟ್ತಲು ;
    ಜಾನ್ = ಟ್ಯಾ೦ಕರ್ ಡ್ರೈವರ್ ;
    ಬೇಕಾಗಿಲ್ಲ+ಈಗ+ಎ೦ದನೈ.) ತಪ್ಪುಗಳಿದ್ದರೆ ತಿಳಿಸಿರಿ

    • . ಡ್ರೈವರ್ ಎನ್ನುವ ಕಡೆ ಉಸ್ತುವಾರಿ ವ್ಯವಸ್ಥಾಪಕ ಎ೦ದುಕೊಳ್ಲಬೇಕು.

    • ಪ್ರಿಯ ರಾಜಗೋಪಾಲರೇ! ಆ ಸುಭಗಸುಂದರಚೌಪದಿಯಲ್ಲಿ ನೀವು ಗಳಿಸಿದ್ದನ್ನೆಲ್ಲ ಈ ಶಿಥಿಲಶಾರ್ದೂಲವಿಕ್ರೀಡಿತದಲ್ಲಿ ಕಳೆದಿರಲ್ಲಾ!!! 🙁 ಹತವಿಧೀ!!!!!!

      • ನನಗೂ ಹಾಗೆಯೇ ಅನಿಸಿತ್ತು. ಮು೦ದೆ ಹೀಗಾಗಲಾರದು

      • ಚಿಂತಿಸದಿರಿ ರಾಜಗೋಪಾಲರೆ. ನಿಮಗೆ ಬಹಳ ನಯವಾಗಿ ಹೇಳಿದ್ದಾರೆ ಅವಧಾನಿಗಳು ಈಗ. ಈ ಶಾಸ್ತಿ ನನಗೆ ಯಾವಾಗಲೋ ಸಂದಿದೆ, ಒಂದು ತೆಲುಗು ಗಾದೆಯ ದೃಷ್ಟಾಂತವಾಗಿ: ಎತ್ಲ ವಚ್ಚಿಂದಿ………

  12. ಕುರ್ವನ್ ಸೈಂಧವಪಾಲನಂ ರಣಭುವಿ ಪ್ರೇಮ್ಣಾ ಮಮತ್ವಂ ತ್ಯಜ-
    ನ್ಯಶ್ಶಂಕಾಸುರಮರ್ಜುನೋದ್ಭವಮಹನ್ ಜ್ಞಾನಾಸ್ತ್ರಮಾತ್ರಾಹತಿಂ |
    ಯನ್ನಾಟ್ಯಾನುವಶೋ ವಮನ್ ಗರಮಹಿರ್ನದ್ಯಾಃಪ್ರಭಾಮೈಧತ ,
    ಶೋಕಾಟವ್ಯದ-ದಾವ-ರೂಪ-ಕರುಣಾ ಯಸ್ಯಾಸ್ತು ನಃ ಸರ್ವದಾ ||

    * ೩ನೇ ಪಾದದ ಕೊನೆಯ ಹ್ರಸ್ವಾಕ್ಷರ ಬಾಧಿಸುವುದೇ?

    * ಸೈಂಧವ = ಕುದುರೆ
    * ಶಂಕಾಸುರ – ಬಾಲ್ಯದಿಂದಲೂ ಅಸುರರನ್ನು ಲೀಲೆಯಿಂದ ಕೊಂದು ಜನೋಪಕಾರ ಮಾಡಿದ ಕೃಷ್ಣನು ಕೊಂದ ಅತಿ ದೊಡ್ಡ ಅಸುರನೆಂದರೆ ಅರ್ಜುನನಲ್ಲಿ ಉದ್ಭವಿಸಿದ ಶಂಕೆ ಎಂಬ ಅಸುರ. ಆದರಿಂದ ಆ ತಲೆಮಾರಿನವರಿಗಷ್ಟೇ ಅಲ್ಲದೆ ಸದಾ ಕಾಲಕ್ಕೂ ಜನೋಪಕಾರ ಆಗಿದೆ ಎಂಬ ಆಶಯ.
    * ಜ್ಞಾನಾಸ್ತ್ರಮಾತ್ರಾಹತಿಂ – ಜ್ಞಾನವೆಂಬ ಅಸ್ತ್ರದಿಂದ ಮಾತ್ರ ಕೊಲ್ಲಲ್ಪಡಲಾಗುವ (ಅಸುರರು ಒಂದು ರೀತಿಯಲ್ಲಿ ಮಾತ್ರ ಸಾವು ಬರುವಂತೆ ವರವನ್ನು ಪಡೆಯಲು ಪ್ರಸಿದ್ಧರಲ್ಲವೇ?)
    * ಗರಂ ವಮನ್ ಅಹಿಃ = ವಿಷವನ್ನು ವಾಂತಿ ಮಾಡಿಕೊಲ್ಲುತ್ತಿರುವ ಹಾವು (=ಕಾಲೀಯನು)
    * ನದ್ಯಾಃ ಪ್ರಭಾಮೈಧತ = ಯಮುನೆಯ ಕಪ್ಪಾದ ಕಾಂತಿಯನ್ನು ಹೆಚ್ಚಿಸಿದನು
    * ಶೋಕಾಟವ್ಯದ = ಶೋಕ+ ಅಟವೀ + ಅದ = ಶೋಕವೆಂಬ ಕಾಡನ್ನು ತಿನ್ನುವ
    * ದಾವ-ರೂಪ-ಕರುಣಾ = ಕಾಳ್ಗಿಚ್ಚಿನಂತಿರುವ ಕರುಣೆ
    * ಶಂಕಾಸುರ – ಬಾಲ್ಯದಿಂದಲೂ ಅಸುರರನ್ನು ಲೀಲೆಯಿಂದ ಕೊಂದು ಜನೋಪಕಾರ ಮಾಡಿದ ಕೃಷ್ಣನು ಕೊಂದ ಅತಿ ದೊಡ್ಡ ಅಸುರನೆಂದರೆ ಅರ್ಜುನನಲ್ಲಿ ಉದ್ಭವಿಸಿದ ಶಂಕೆ ಎಂಬ ಅಸುರ. ಆದರಿಂದ ಆ ತಲೆಮಾರಿನವರಿಗಷ್ಟೇ ಅಲ್ಲದೆ ಸದಾ ಕಾಲಕ್ಕೂ ಜನೋಪಕಾರ ಆಗಿದೆ ಎಂಬ ಆಶಯ.

    • ಪ್ರಿಯ ಸುಧೀರ್, ಎಂದಿನಂತೆ ನಿಮ್ಮ ಕಲ್ಪನೆ ಹಾಗೂ ಭಾಷಾಸೌಷ್ಠವಗಳು ಅನವದ್ಯ ಮತ್ತು ಸ್ವೋಪಜ್ಞನಾವೀನ್ಯದಿಂದ ಕೂಡಿವೆ. ಅಭಿನಂದನೆಗಳು. ಆದರೆ ನೀವೇ ಸಂದೇಹಿಸಿದಂತೆ ಮೂರನೆಯ ಪದಾಂತದಲ್ಲಿ ಗುರುವೇ ಬರಬೇಕಿತ್ತು. ಸಾಮಾನ್ಯವಾಗಿ ಅನುಷ್ಟುಪ್ ಮತ್ತು ಉಪಜಾತಿವೃತ್ತಗಳಿಗೆ ಮಾತ್ರ ವಿಷಮಪಾದಾಂತದಲ್ಲಿ ಅನಿವಾರ್ಯಗುರುವಿನಿಂದ ವಿನಾಯಿತಿ ಇದೆ. ವಸಂತತಿಲಕಕ್ಕೂ ಈ ನಿಯಮವನ್ನು ಅನ್ವಯಿಸುವುದುಂಟು. ಆದರೆ ಈ ಬಗೆಗೆ ಯಾವುದೇ hard and fast rule ಇರುವಂತೆ ತೋರದು. ಎಲ್ಲ ನಮ್ಮ conditioning:-) ಆದರೂ ವೃತ್ತಗತಿಪ್ರಜ್ಞೆಯ ಆಧಾರದ ಮೇಲೆಯೇ ಈ ನಿಯಮಗಳು ರೂಪುಗೊಂಡಿರುವುದು ಸ್ಪಷ್ಟ. ನಿರ್ಯತಿವೃತ್ತಗಳಿಗೆಲ್ಲ ಈ ನಿಯಮವು ಅನ್ವಯಿಸುವುದೆಂದು ಊಹಿಸಬಹುದಾದರೂ ರಥೋದ್ಧತ, ಸ್ವಾಗತ, ದ್ರುತವಿಲಂಬಿತ, ತೋಟಕ, ಸ್ರಗ್ವಿಣಿ, ತೋ(ದೋ)ಧಕ, ಭುಜಂಗಪ್ರಯಾತ, ವಿಯೋಗಿನಿ, ಔಪಚ್ಛಂದಸಿಕ, ಅಪರವಕ್ತ್ರ, ಪುಷ್ಪಿತಾಗ್ರ ಮುಂತಾದುವುಗಳಿಗೆ ಈ ನಿಯಮ/ವಿನಾಯಿತಿ ಅನ್ವಯಿಸುವಂತೆ ತೋರದು. ಬಹುಶಃ ಇವೆಲ್ಲ ಸತಾನವೃತ್ತಗಳಾದ ಕಾರಣ ಹೀಗಾಗುವುದೇನೋ? ಈ ಬಗೆಗೆ ಹೆಚ್ಚಿನ ಚಿಂತನೆ ಆವಶ್ಯಕ. ಇದನ್ನು ಶಂಕರ, ವಾಸು ಹಾಗೂ ನೀವೇ ಸಾಗಿಸಬಲ್ಲಿರೇನೋ:-)

      • ಮಂದಾಕ್ರಾಂತದಲ್ಲಿ ವಿನಾಯಿತಿಯಿದೆಯಲ್ಲವೆ?

  13. ಗೃಹ್ಣನ್ ರಶ್ಮೀಃ ಸೈಂಧವಾನಾಂ ಸ ಕೃಷ್ಣಃ
    ಕಾಸಾರೇ ತಾನ್ ಸ್ನಾಪಯನ್ನೇವ ನಿತ್ಯಂ।
    ಘಂಟಾನಾದಂ ಪಾಂಡವಾನಾಂ ಜಯಸ್ಯ
    ಚಕ್ರೇ ದೇವೋ ಗೋಪಿಕಾಟವ್ಯಧೀಶಃ॥

    ಗೋಪಿಕಾನಾಂ ಅಟವ್ಯಾಃ ಸ್ವಾಮೀ ಕೃಷ್ಣ ಇತಿ ಕಲ್ಪಯಿತ್ವಾ ದತ್ತಂ ಪದಂ ಕಥಂಚಿತ್ ನ್ಯಸ್ತಂ।

    • ಉತ್ತಮಂ ಪದ್ಯಮ್ | ಕಿಂ ಚ ಸುಧೀರಸ್ಯ ಪದ್ಯ ಇವ ಭವತಃ ಪದ್ಯೇsಪಿ ತೃತೀಯಪಾದಾಂತೇ ಗುರುತ್ವಭಂಗಸ್ಸಂಜಾತಃ | ಕೃಪಯಾ ಕಥಂಚಿದಯಂ ಲೋಪಃ ಪರಿಹರಣೀಯಃ | ಪ್ರಾಯೇಣ “ಪಾಂಡವಾನಾಂ ಜಯಯಾಪ್ಯಂ”ಇತಿ ಸಮಂಜಯಿತುಂ ಶಕ್ಯಮ್ |

  14. ಅರಿಸೈನ್ಯವಿದಾರನಂ ವಸುದೇವಕುಮಾರನಂ
    ನರಕಾಸುರವೈರಿಯಂ ನಗಧಾರಕನೀಶನಂ
    ನರ ನಾರಿಯರಾಪ್ತನಂ ಶಕಟಾನಲತೋಯನಂ
    ಉರೆ ಪೂಜಿಸೆ ಭಕ್ತಿಯಿಂ ತಿಣುಕಾಟವ ನೀಗುವಂ ||

    ನರ ನಾರಿ = ಅರ್ಜುನ ದ್ರೌಪದಿ; ಮಾನವರು
    ಶಕಟಾನಲತೋಯ = ಶಕಟಾಸುರನೆಂಬ ಬೆಂಕಿಗೆ ನೀರಿನಂತಿರುವವನು
    ಉರೆ = ಅತಿಶಯವಾಗಿ. ತಿಣುಕಾಟ = ಜೀವನದಲ್ಲಿ ಹೆಣಗುವಿಕೆ

    • ಎಲ್ಲ ಚೆನ್ನಾಗಿದೆ. ಆದರೆ ಕಡೆಯ ಪಾದಾದಿಯಲ್ಲಿ ಸ್ವರವು ಬಂದ ಕಾರಣ (ಉರೆ ….)
      ಅಲ್ಲಿ ಸಂಧಿಯಾಗಲೇ ಬೇಕಾಗುತ್ತದೆ; ಆಗ ಛಂದಸ್ಸು ಕೆಡುತ್ತದೆ. ಹೀಗಾಗಿ ”ನೆರೆ’ ಎಂದು ಸವರಿಸಿದರೆ ಯುಕ್ತವಾದೀತು.

      • ಸವರಣೆ ಸೂಚಿಸಿದ್ದಕ್ಕಾಗಿ ಧನ್ಯವಾದಗಳು. ಈ ಪದ್ಯ ಛ೦ದೋಬದ್ಧವಾಗಿದೆಎನಿಸಿತು. ಆದರೆ ಯಾವ ಛ೦ದಸ್ಸು ಎ೦ದು ತಿಳಿಯಲಿಲ್ಲ. ದಯವಿಟ್ಟು ತಿಳಿಸಬೇಕಾಗಿ ವಿನ೦ತಿ.

        • ಇದೊಂದು ಸತಾನವರ್ಣವೃತ್ತವಾದರೂ ಅಪ್ಪಟ ಸಂತುಲಿತಮಧ್ಯಾವರ್ತಗತಿಗೆ ಸಲ್ಲುವ ಮಾತ್ರಾಜಾತಿಯಾಗಿಯೇ ಸಲ್ಲುತ್ತದೆ. ಧವಳ ಎಂಬ ಛಂದಃಪ್ರಕಾರಗಳಲ್ಲಿ ಅಡಗಬಹುದು. ಆದರೆ ಆವುದಾದರೂ ಛಂದೋಗ್ರಂಥಗಳಲ್ಲಿ ಇದರ ಸತಾನವೃತ್ತವಿನ್ಯಾಸವೂ (ಸ-ಸ-ಜ-ಜ-ಜ-ಗು) ಹೆಸರೂ ನಾನರಿತ ಯಾವುದೇ ಪ್ರಸಿದ್ಧಗ್ರಂಥಗಳಲಿಲ್ಲ.

  15. ಚೌಪದಿ:

    ಕೊರಳಲ್ಲಿ ಮೆರೆಯುತಿದೆ ಕಾಸಿನಾ ಸರವು ಮುಂ-
    ಗುರುಳಲ್ಲೊ ಸೈ! ನಗುವ ನವಿಲಗರಿ ಸೊಗಸು!
    ಮರೆತೆನೇನಕಟಾ! ನಲಿವ ಹರಿಯ ನೆನಕೆಯನು?
    ಹರಸಲೀತನ ನೋಟ ಕಾಟಗಳ ಕಳೆದು

    ಭಾಮಿನಿ ಷಟ್ಪದಿ:

    ಕೊರಳಿನಲಿ ಕುಣಿಯುತಿಹ ಕಾಸಿನ
    ಸರದ ನಲಿದಾಡುತಿಹ ಪಾದದಿ
    ಮೆರೆವ ಗೆಜ್ಜೆಯ ಮೊಗದ ನಗುವನು ನೋಳ್ಪ ಸೊಗವೇ ಸೈ!
    ನರರೊಳುತ್ತಮ ಗೊಲ್ಲ ಬಾಲನ
    ತುರುವ ಕಾಯ್ದನ ಮರೆತೆನಕಟಾ!
    ನರೆತ ಜೀವದ ಭವದ ಕಾಟವನಿವನೆ ಕಳೆವುದೆ ಸೈ!

    • ಚೌಪದಿಯ ೨ ಮತ್ತು ೪ ನೇ ಸಾಲುಗಳಲ್ಲಿ ೧೮ ಮಾತ್ರೆಗಳಿರಬೇಕೆ? ೧೬ ಮಾತ್ರೆಗಳಿರಬೇಕೆ? ೧ ಮತ್ತು ೩ ನೇ ಸಾಲುಗಳಲ್ಲಿ ೨೦ ಮಾತ್ರಗಳಿರಬೇಕೆಂಬ ನಿಯಮವಿದೆಯೇ?

      • ೧ ಮತ್ತು ಮೂರನೇ ಸಾಲಿನಲ್ಲಿ ೨೦ ಮಾತ್ರೆಗಳಿರುತ್ತವೆ. ೨ ಮತ್ತು ೪ರಲ್ಲಿ ೧೬ ಮತ್ತೆ ೧೮ ಮಾತ್ರೆ ಎರಡೂ ರೀತಿ ಇರುವುದನ್ನು ನೋಡಿದ ನೆನಪು.

        • ಸಮಪಾದಗಳ ಕೊನೆಯ ಲಘುವೂ ಗುರುವಾಗುವ ಕಾರಣ ಅಲ್ಲಿ ಹದಿನೇಳು ಮಾತ್ರೆಗಳಿರುತ್ತವೆ. ಕರ್ಷಣದ ಕಾರಣ ಮತ್ತೆ ಮೂರು ಮಾತ್ರಾಪ್ರಮಾಣಕ್ಕೆ ನಾದದಿಂದಲೇ ತುಂಬಿಕೊಳ್ಳುತ್ತವೆ. ಇಷ್ಟಾಗಿಯೂ ಚೌಪದಿಯನ್ನು ಹಲವು ಹತ್ತು ಮಾತ್ರಾಗಣನೆಗೆ ಒಳಪಡಿಸಿ ರೂಪಿಸಬಹುದು.ಕನ್ನಡಸಾಹಿತ್ಯ ನವೋದಯದ ಛಂದಸ್ಸುಗಳೆಲ್ಲ ಹೀಗೆಯೇ ರೂಪುಗೊಂಡದ್ದು.

        • ಹಂಸನಂದಿಯವರೇ ನಿಮ್ಮ ಚೌಪದಿಯನ್ನೂ ರಾಜಗೋಪಾಲರ ಚೌಪದಿಯನ್ನೂ ನೋಡಿ ಛಂದೋನಿಯಮದ ಬಗ್ಗೆ ಸಂಶಯವಾಯಿತು. ಅದಕ್ಕೇ ಪ್ರಶ್ನಿಸಿದೆ. ದಿನಕರ ದೇಸಾಯಿಯವರ ಅನೇಕ ಚೌಪದಿಗಳ ವಿಷಮಪಾದಗಳಲ್ಲಿ ೧೮ ಮಾತ್ರೆಗಳಿವೆಯಲ್ಲವೆ?

  16. ಕೆಲವೇ ಬದಲಾವಣೆಗಳೊಂದಿಗೆ ಮತ್ತೊಂದು ಭಾಮಿನಿಯಲ್ಲಿ:

    ಕೊರಳಿನಲಿ ಕುಣಿಯುತಿಹ ಕಾಸಿನ
    ಸರದ ನಲಿದಾಡುತಿಹ ಪಾದದಿ
    ಮೆರೆವ ಗೆಜ್ಜೆಯ ನಾದದಿಂಚರ ಕೇಳ್ವ ಸೊಗವೇ ಸೈ!
    ನರರೊಳುತ್ತಮ ಗೊಲ್ಲ ಬಾಲನ
    ತುರುವ ಕಾಯ್ದನ ಮರೆತೆನಕಟಾ
    ನುರವಣಿಸಿರುವ ಭವದ ಕಾಟವನವನೆ ಕಳೆವುದೆ ಸೈ!

  17. ಎಮ್ಮಯ ಕೂಸೈ ನುರಿತನು ತುಡುಗಲಿ
    ಗುಮ್ಮನೆ ಕಾಡಿಹನಮ್ಮನತಾಂ ।
    ಗಮ್ಮನೆ ಕಾಸಿಹ ಹಾಲಿನ ಕೆನೆಯನು
    ಸುಮ್ಮನೆ ಕದ್ದಿಹನೊಮ್ಮೆಲೆತಾಂ ॥

    ದಿಮ್ಮನೆ ಕಟ್ಟಿಹ ನೆಲವಿಂ ಕದ್ದವ
    ನೆಮ್ಮಿಸಿ ಕೊಟ್ಟಾನವನೀತಂ ।
    ದುಮ್ಮಳಗೊಂಡಿರುವಮ್ಮಗೆ ಮನದೊಳ್
    ಸಮ್ಮತವೇನೀ ಹುಡುಕಾಟಂ ॥

  18. ಗೋಪಾಲ ಸೈನ್ಯದುತ್ತುಂಗನಲ್ತೇ ಮುರಳಿ
    ಪಾಪಿಗಳ ತಲೆಕಾಸುವನು ಕೆರಳುತಾ|
    ಸೈಪಿನಿಂದೆತುಟಾನಾಕಂಗೈಯುತುಂ
    ಗೋಪಿಯರ್ ಪುಡುಕಾಟನಿವನಾದನಯ್|

    ಸೋಮನ ಸವರಣೆಗೆ ಧನ್ಯವಾದಗಳು 🙂

    • ಮೂರನೆಯ ಸಾಲಿನಲ್ಲಿ ಪ್ರಾಯಶಃ ಕೆಲವು ಅಕ್ಷರಗಳು ಬಿಟ್ಟುಹೋಗಿವೆಯೆಂದು ಕಾಣಿಸುತ್ತಿದೆ.

      • Thanks Rajagopalare… I have corrected it.. 🙂

        ಗೋಪಾಲ ಸೈನ್ಯದುತ್ತುಂಗನಲ್ತೇ ಮುರಳಿ
        ಪಾಪಿಗಳ ತಲೆಕಾಸುವನು ಕೆರಳುತಾ|
        ಸೈಪಿನಿಂದೆತುಟಾನಾಟಕಂ ಗೈಯುತುಂ
        ಗೋಪಿಯರ್ ಪುಡುಕಾಟನಿವನಾದನಯ್|

  19. ಕೃಷ್ಣನ ತುಂಟಾಟಗಳನ್ನು ಸಹಿಸಲಾಗದೆ ಅವನನ್ನು ಬಹಳ ಹೊತ್ತಿನಿಂದ ಹುಡುಕುತ್ತಿದ್ದ ಗೋಪಬಾಲಿಕೆಯರು ಅವನು ಗೆಳೆಯರೊಡನೆ ಸಿಕ್ಕಿಬಿದ್ದಾಗ – ಇನ್ನು ನಮ್ಮ ಹುಡುಕಾಟ ಮುಗಿಯಿತಂದುಕೊಳ್ಳುತ್ತ ಅವನಲ್ಲಿ ಮುನಿಸಿಕೊಳ್ಳುತ್ತಾರೆ.

    ಆಲಿಸೈ ನವನೀತಚೋರನೆ
    ಮೇಲದೇಕಾ ಸೋಗಿನಾಟವು
    ಬಾಲನಕಟಾ ನಿನ್ನ ಕಾಟವ ಸಹಿಸಲಾರೆವಲಾ |
    ಬಾಲಕರ ಮರಿಸೈನ್ಯದೊಟ್ಟಿಗೆ
    ಬಾಲಿಕಾ ಸಂದೋಹವೆಮ್ಮೊಳು
    ಸಿಲುಕಿದೈ ವಿಕಟಾನನಾ ಹುಡುಕಾಟ ಕೊನೆಯಾಯ್ತು ||

    ಸೋಗು = ಏನೂ ಅರಿಯದ ಸಂಭಾವಿತನಂತೆ ಕಾಣುವುದು.
    ವಿಕಟಾನನ = ಅಣಕಿಸುವಂತೆ ಮುಖ ಮಾಡಿರುವವನು ; ಅಂದವಾದ ಮುಖವುಳ್ಳವನು.

    • Good way of getting the first word from Aalisai Navaneeta chorane. Rhyming word for the last line needs correction.

      • ಬಾಲಕರ ಮರಿಸೈನ್ಯದೊಟ್ಟಿಗೆ
        ಬಾಲಿಕಾಸಂದೋಹವೆಮ್ಮೊಳು
        ಗೇಲಿಯೇ ವಿಕಟಾನನಾ ಹುಡುಕಾಟ ಕೊನೆಯಾಯ್ತು ||

        ಎಂದರೆ ಸರಿಯಾಗಬಹುದೇ? ( ಗೇಲಿ = ಪರಿಹಾಸ್ಯ)
        (ದತ್ತಪದಗಳನ್ನು ಪೂರ್ವಾರ್ಧ ಪರಾರ್ಧವೆರಡರಲ್ಲೂ ಬಳಸುವ ಪ್ರಯತ್ನ ಮಾಡಿದ್ದೇನೆ)

  20. ಸೈಂಧವಚೂರ್ಣಂ (ಉಪ್ಪು), ಕಾಟುವು (ಕಟು>ಖಾರ)
    ಸಿಂಧುವು ಪುಳಿಯೊಂದಿಗಾದುದುಂಟೇನೆಂಬೆಂ| (ಟ್ಯಾನ್>ಟೇನ್)
    ಗಂಧವು ಪೊರಮಟ್ಟಲು ಸಂ
    ಬಂಧವ ಕಲ್ಪಿಪುಗು ಬೆಲ್ಲ ತುಸು ಕಾಸಿದೊಡಂ||

  21. ಅಯ್ಯೊ! ಕಂಸದಲ್ಲಿರುವ ‘(ಅಥವಾ ಕೃಷ್ಣಸ್ತುತಿಯ)’ ಎಂಬುದನ್ನು ಮಾತ್ರ ಗಮನಿಸಿದೆ, ‘ಕೃಷ್ಣಾವತಾರದ’ ಎಂಬುದನ್ನು ಗಮನಿಸಲೇ ಇಲ್ಲ. ಮತ್ತೆ ಪ್ರಯತ್ನಿಸುವೆ.
    ಅಲ್ಲದೆ, ಯಾರೇನು, ಸ್ವತಃ ಕೃಷ್ಣನೇ ಮಾಡಿದರೂ ಅಡುಗೆ ಪಾಕಗೊಳ್ಳುವುದು ಇಂತೆಯೇ ಅಲ್ಲವೆ?

    • ಪ್ರಸಾದು, ನಿಮ್ಮ ಪದ್ಯದಲ್ಲಿ…

      ಕಂಸನೇತ್ರಗಳಿಂದೆ ನೋಳ್ಪರ್ಗೆ ಕೃಷ್ಣವಿ-
      ಧ್ವಂಸನಮೆ ತರಮೆಂಬುದಭಿಮತಮೆ ಪೇಳ್?

      ಕೃಷ್ಣವಿಧ್ವಂಸನ – ಕೃಷ್ಣನನ್ನೇ ಇಲ್ಲವಾಗಿಸುವುದು 🙂

  22. ಕಡೆಗುಂ ಹೊರಟಾನ ನರಂ
    ಪಡೆಯಲ್ಗೆಲವಂ ವಿಲಾಸ ಬದುಕಾಟದೊಳುಂ।
    ನುಡಿಸೈ ನಲವಿಂ ಕೊಳಲಂ
    ಮಿಡಿಸಲ್ಕೊಲವಿಂ ವಿಕಾಸವಂ ಜನಮನದೊಳ್ ॥

    • ಗದುಗ ನಾರಣ ತಾನೆ ಬಳಸದ
      ಖದರ ಹುಬ್ಬಳ್ಳಿಯಿನ ಭಾಷೆಯ (ಹೊರಟಾನ)
      ಮುದದಿ ಬಳಸಕ ಹತ್ತಿರೇಂ ನೀಮಿಂದು ಬೇಂದ್ರೆವೊಲು|

      • ಎದಿsಗ ಬಂದವನೊದ್ದಹಂಗಾ-
        ಗದ ಪ್ರಸಾದೂ! ನಿಮ್ಮ ಖೋಡೀ
        ಹದವೆ ತಪ್ಪಿದ ಪದ್ಯಕೊಳ್ಳೀ ಕೊಳ್ಳಿಯಾಗಿತ್ತಾsss

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)