Aug 032013
 

ಕಂದ ಪದ್ಯದ ಸಮಸ್ಯೆಯ ಸಾಲು ಹೀಗಿದೆ :: ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ [ಮೂಗಿಲಿ ಎಂದರೆ ಚಿಕ್ಕ ಗಾತ್ರದ ಉದ್ದ ಮೂತಿಯ ಇಲಿಯೆಂದು ಅರ್ಥ]

ಪದ್ಯದ ಉಳಿದ ಸಾಲುಗಳನ್ನು ರಚಿಸಿ, ಈ ಸಮಸ್ಯೆಯನ್ನು ಸರಿಪಡಿಸಿರಿ.

  292 Responses to “ಪದ್ಯ ಸಪ್ತಾಹ ೭೭: ಸಮಸ್ಯಾ ಪೂರಣ :: ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್”

  1. The rat is akin to a King who sucks the farmer by collecting his produce in the form of taxes:
    ತಿರೆಯಂ ತಾನುಳೆ ರೈತಂ
    ಸುರಿಸಿ ಬೆಮರ, ಮೋಡಮಿಲ್ಲದೊಡಮಾಗಸದೊಳ್|
    ದೊರೆಗರದವೊಲವನಾ ಚಾ-
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್||

  2. ತಿರಿಯುತ್ತೆ ಜೊನ್ನ ತಂದು
    ತ್ವರೆಯಿಂ ಪಾಕಗೊಳಿಸುತ್ತಿರಲು ಸಂಗವ್ವಳ್|
    ಮರಿಗೆನ್ನುತ್ತುಂ ಸವಿಭ-
    ಕ್ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್||

    (ಭಕ್ಕರಿ = ಉತ್ತರಕರ್ಣಾಟಕದ ಜೋಳದರೊಟ್ಟಿ)

  3. ವರಭೋಜನಕೂಟವದೈ-
    ಸಿರಿಯಿಂ ಮೆರೆದಿರೆ ಸುಗಂಧದಿಂ ಹೃತಚಿತ್ತಂ |
    ಭರದೊಳ್ ಬಂದಮಮ ! ರೋಟಿ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    • ಕ್ಷಮಿಸಿ. ಮೂರನೇ ಪಾದವನ್ನು ಪರಿವರ್ತಿಸಿದ್ದೇನೆ. ಪದ್ಯ ಇಂತಿದೆ.

      ವರಭೋಜನಕೂಟವದೈ-
      ಸಿರಿಯಿಂ ಮೆರೆದಿರೆ ಸುಗಂಧದಿಂ ಹೃತಚಿತ್ತಂ |
      ಭರದಿಂ ಬಂದಾ ಮೀನಿನ
      ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    • ಪೆಜತ್ತಾಯರೆ, ರೋಟಿ curryಗಿಂತ ಮೀನಿನ curryಯೇ ಇಷ್ಟವಾಯ್ತೆ?

      ವಾಸನೆ ಸೆಳೆದಿರೆ ನಿಮ್ಮಾ
      ನಾಸಿಕಮನಿದೇನಿದೆಂಬೆ ನಾಂ ಪ್ರಾಚೀನಂ!
      ಲೇಸಾಯ್ತೆ ರೋಟಿcurryಗಿಂ
      ಮೂಸಿದ ಚಣಮೇ ಸಮುದ್ರಮೀನಿನ curry ತಾಂ||
      (ಸಮುದ್ರಮೀನು ~ ಹೊಳೆಬಾಳೆ :))

      • ಪ್ರಸಾದು ಸರ್…
        ವಾಸನಾಶ್ಲೇಷ ಚೆನ್ನ್ಜಾಗಿದೆ 🙂 ಪೂರ್ವಜನ್ಮದ ವಾಸನೆ ಹೇಗಿದೆಯೋ ತಿಳಿದಿಲ್ಲ. ಈ ಜನ್ಮದಲ್ಲಂತೂ ಮೀನಿನ ವಾಸನೆ ಹಲವು ಬಾರಿ ಮೂಗಿಗೆ ಬಡಿದಿದೆ 😉

        ಜನಿಸಿರ್ಪೆನ್ ಮಂಗ್ಳೂರೊಳ್
        ಗುಣಿಸಿರ್ಪೆನೆನ್ನನುಡುಪಿಯೊಳೀ ಪರಿ ಮಜ್ಜೀ-
        ವನವಿರೆ ಮೀನಿನ ಬಹುವಾ-
        ಸನೆ ಸಾಜಮೆಯೆಂದುಸುರ್ವರಿದೊ ನಲ್ಗೆಳೆಯರ್ || 😉

      • ಪ್ರತಿಕ್ರಿಯೆ ಚೆನ್ನಾಗಿದೆ.
        ಎರಡನೆಯ ಪಾದದ ಎರಡನೆಯ ಹಾಗೂ ಮೂರನೆಯ ಗಣಗಳು ದುಷ್ಟವಾಗಿವೆ. ಸವರಿ.

        • ಧನ್ಯವಾದ ಸರ್ 🙂
          ಎರಡನೇ ಪಾದದ ಸವರಣೆ –
          ಗುಣಿಸಿರ್ಪೆನ್ ಬಾಳನುಡುಪಿಯೊಳ್ ಮೇಣ್ ಮಜ್ಜೀ-
          ಸರಿಯಾಯ್ತೇ ?:-)

        • ಇಲ್ಲ. ಸರ್ವಲಘು-ಜಗಣದಲ್ಲಿ ಮೊದಲನೆಯ ಅಕ್ಷರವಾದ ಮೇಲೆ ಯತಿ ಬರಬೇಕು.

          • ಹ್ಹಾಂ ! ಗೊತ್ತಾಯ್ತು ಸರ್ 🙂
            ಯತಿಭಂಗ ಪರಿಹರಿಸುವಲ್ಲಿ ಮತಿ ಕೈಕೊಟ್ಟಿದೆ 🙁 ಸವರಣೆಯ ದಾರಿ ಹೊಳೆಯುತ್ತಿಲ್ಲ.

  4. ಪ್ರಿಯ ಪದ್ಯಪಾನ ಮಿತ್ರರೆ

    ಪದ್ಯಪಾನ ಬಳಗದವರಲ್ಲಿ ನನಗೆ ಇತ್ತೀಚಿಗೆ ಸಿಕ್ಕಿರುವ ನಿಧಿಯನ್ನು ಹಂಚಿಕೊಳ್ಳಬೇಕೆಂದು ನನ್ನ ಬಯಕೆ. ಗೆಳೆಯರಲ್ಲಿ ಬಹಳರು ಹಳಗನ್ನಡ ಮಹಾಕಾವ್ಯಗಳನ್ನುಮೂಲಗ್ರಂಥಗಲಿಂದಲೇ ಓದಿರುತ್ತಾರೆ ಆದರೆ ಕೆಲವರು ನನ್ನಂತೆ ಅಲ್ಪಾಧ್ಯಾಯಿಗಳೂ ಇರುತ್ತಾರೆನ್ದು ನಂಬಿ ಈ ಸಂದೇಶ.

    ಈಚೆಗೆ ಶ್ರೀ ರಾ ಗಣೇಶರ ‘ ರನ್ನನ ಗದಾಯುದ್ಧ ‘ ಮಹಾಕಾವ್ಯದ ವ್ಯಾಖ್ಯಾನ ಮತ್ತು ಪ್ರವಚನ CDಅನ್ನು ಕೇಳಿ ಆದ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಮಹದಾಸೆಯಾಗಿದೆ. ಕೇಳುತ್ತಾ ಶ್ರೀ ಗಣೇಶರ ಕಾವ್ಯಪ್ರಜ್ಞೆ ಎದ್ದು ಕಾಣಿಸುವುದಲ್ಲದೆ ಅವರ ಕಾವ್ಯಾಸ್ವಾದನೆಯ ಉತ್ಸಾಹ ಮತ್ತು ಕಡುತನ (depth) ನಮ್ಮನ್ನು ಸಂಪೂರ್ಣವಾಗಿ ರಸಸಮುದ್ರದಲ್ಲಿ ಮುಳುಗಿಸುತ್ತದೆ. ಅದಲ್ಲದೆ ಹಳಗನ್ನಡದ ಸುಲಭ ರೀತಿಯ ಪರಿಚಯ ಸಿಗುತ್ತದೆ.

    I heartily recommend it to anybody who has not heard it.

    • ಬದರೀನಾಥರು ಹೇಳಿರುವಂತೆ, ಗಣೇಶರ ರನ್ನನ ಗಧಾಯುದ್ಧದ ವಿವರಣೆಯು ಹಳಗನ್ನಡಾಸಕ್ತರಿಗೆ ಸುವರ್ಣನಿಧಿಯೇ ಸರಿ ಮತ್ತು ಸಾಹಸಭೀಮವಿಜಯವವನ್ನು ಓದುವುದರಿಂದ ಹಳಗನ್ನಡಕ್ಕೆ ಒಳ್ಳೆಯ ಪ್ರವೇಶ ದೊರೆಯುತ್ತದೆ ಹಳಗನ್ನಡದ ಪ್ರಯೋಗವು ಸುಧಾರಿದುತ್ತದೆ.

    • ಉಪಯುಕ್ತ ಮಾಹಿತಿಗೆ ಧನ್ಯವಾದಗಳು. ಖಂಡಿತ ಇದರ ಸದುಪಯೋಗ ಪಡಿಸಿಕೊಳ್ಳುವೆವು.
      ನಿಮ್ಮಿಂದ ಮತ್ತಷ್ಟು ಸಲಹೆಯ ನಿರೀಕ್ಷೆಯಲ್ಲಿ …

  5. ಅರಿತರಣಕೂಟತಂತ್ರದೆ
    ಸುರಂಗಮಂ ತೋಡಿ ಗೆಲ್ದುದನಮೈತಿಹ್ಯನ್
    ಪೊರಟಂ ಮೊದಲ್ಗೆನೊರೆಯ-
    ಲ್ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    ತರಣ – overcoming
    ಐತಿಹ್ಯನ್ – ಇತಿಹಾಸಕಾರ (ಸರಿಯಾಗುತ್ತದೆಯೇ ಈ ಪ್ರಯೋಗ?)
    ಮೊದಲ್ಗೆನೊರೆಯಲ್ಕರಿಯಂ – ಮೊದಲ್ಗೆ ಎನೆ ಒರೆಯಲ್ಕೆ ಅರಿಯಂ
    ಅರಿಯಂ – ಶತ್ರುವನ್ನು

    ಶತ್ರುರಾಜನನ್ನು ಕೂಟನೀತಿಯಿಂದ ಸುರಂಗವನ್ನು ತೋಡಿ ಸೋಲಿಸಿದ ಘಟನೆಯನ್ನು ಒಬ್ಬ ಇತಿಹಾಸಕಾರ ಮೊದಲಿಗೆ ಈ ರೀತಿ ಬರೆಯಲು ಶುರು ಮಾಡಿದನು “ಅರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್” (ಇದು ಕೂಟಪದವಾಗಿತ್ತು – code word of the operatoin)

    • ಸೋಮ- ಮೊದಲೇ ಜಗಣ ಬರದಿದ್ದಿದ್ದರೆ ಒಳಿತು. ಈ ಪದ್ಯದ ಅರ್ಥವನ್ನು ಬಿಡಿಸಿ ಹೇಳ್ತೀರ?

    • ಸೋಮ, ಮೂರ್ತಿಗಳು ತುಂಬ ಲಿಬರಲ್ ಆಗಿದ್ದಾರೆ. ಮೊದಲಿಗೆ ಜಗಣ ಬರಲೇಕೂಡದು. ಪದ್ಯದ ಅರ್ಥ ನನಗೂ ಸ್ಪಷ್ಟವಾಗಲಿಲ್ಲ.

      • ಹೌದು ಶ್ರೀಕಾಂತರೆ ಹಾಗು ಪ್ರಸಾದರೆ (ಇದನ್ನೇ ಮಹೇಶರು ಕೂಡ SMSನಲ್ಲಿ ತಿಳಿಸಿದ್ದರು) ನಿಮ್ಮ ಆಕ್ಷೇಪವನ್ನು ಒಪ್ಪುತ್ತೇನೆ. ಕಂದದ ನಿಯಮಾನುಸಾರ ನನ್ನ ಪದ್ಯವಿರಲಿಲ್ಲ, ಸ್ವಲ್ಪ ಎಡವಿದ್ದೆ, ಸರಿಪಡಿಸುವ ಯತ್ನವನ್ನು ಮೂಲದಲ್ಲೆ ಮಾಡಿದ್ದೇನೆ ಗಮನಿಸಿ

  6. ಕರಮೀವೆಂ ಗಡ ಸಂತ್ರ-
    ಸ್ತರ ಬಾಳ್ವೆಗೆನಿಪ ನೆಗಳ್ತಿಯಂ ಪೊರ್ದಪಳಂ
    ಖರನರವರಿಸಲ್ ಹಾ! ಶಂ-
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

  7. ಮರಿಯೋಡಿರ್ದುದು ಕಡೆ ಸಾ –
    ವಿರಕಂ ತಡೆಯದ ಕುತೂಹಲದಿ ಭಯರಹಿತಂ |
    ಕೆರಳುತೆ ಬಡಿಯುತ್ತಾ ಪೋ –
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

  8. ಪುರಭವನದೊಳಾ ಮಾಂತ್ರಿಕ-
    ಕರಕೌಶಲಕೃತ್ಯಮಕ್ಕಜಮನೀವುದು ಕೇ-
    ಳೊರೆಯಲ್ ಛೂ ಮಂತ್ರಗಳಂ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

  9. ಭರದಿಂ ಬಾಲಂ ಚಕ್ಕುಲಿ-
    ಮುರುಕಂ ಸವಿಯಲ್ಕೆ ತೈಲಮಂಟಿದ ಕರದೊಳ್ |
    ತಿರುಗಿಸುತೆಸೆದಿರ್ಪಾಟದ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    • ಮಹೇಶ್ ಚೆನ್ನಾಗಿದೆ ಆಟದ ಆನೆಯ ಪೂರಣ!

    • Cute pUraNa. thanks

    • ಹಾಗೇ ಆಟದ ಆನೆ ಎನ್ನುವ ಬದಲು, ಚಕ್ಕುಲಿಯ ಎಣ್ಣೆಯ ಸಂಬಂಧ ಕಲ್ಪಿಸಿದ್ದು ಬಹಳ ಹಿಡಿಸಿತು 🙂

      • ಧನ್ಯವಾದ…
        ಇಲ್ಲದಿದ್ದರೆ ಮೂಗಿಲಿ ಅದನ್ನು ಒಯ್ಯುವುದರಲ್ಲಿ ಅಂತಹ ಔಚಿತ್ಯವಿರುವುದಿಲ್ಲವೆಂದು ಹಾಗೆ ಕಲ್ಪಿಸಿದ್ದು 🙂

  10. ಆನೆ = tax payers’ money
    ಮೂಗಿಲಿ = The politicians’ hands
    ಬಿಲ = The politicians’ belly

    ಕರಿ ತಾನಲ್ತೆ ಕರಂಗಳ್ (Tax)
    ಕರಂಗಳಲ್ತೆಲವು (Hands) ರಾಜಕಾರ್ಯದರಿಲಿಯುಂ|
    ಹಿರಿದು ಬಿಲಮವರ ಪೊಡೆಗಳ್
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್||

    • ಪ್ರಸಾದು,
      ಯಾವುದಾದರೂ ಉಪಮೆಗಳನ್ನು ಆರೋಪಿಸಬಹುದಾದರೆ, ಯಾವ ಸಮಸ್ಯೆಯನ್ನೂ ಬಿಡಿಸಬಹುದೇನೋ !
      ಉದಾ ::
      ೧. ಮೂಗಿಲಿ = ಕೈ, ಕರಿ = ತಿಂಡಿ, ಬಿಲ = ಬಾಯಿ;
      ೨. ಮೂಗಿಲಿ = ಹೆಂಡತಿ, ಕರಿ = ಗಂಡ, ಬಿಲ = ಮನೆ;
      ಇತ್ಯಾದಿ

    • ಆ ಎರಡನೆಯ ನಿದರ್ಶನ – ಗಂಡ ಗಾತ್ರದಲ್ಲಿ ಯಾವತ್ತೂ ಮನೆಬಾಗಿಲಿಗಿಂತ ಹೆಚ್ಚಿನವನಾಗಿರುವುದಿಲ್ಲ. ಮದುವೆಯಾದಮೇಲಂತೂ ತಮಾಮ್ ಕುಗ್ಗಿಹೋಗಿರುತ್ತಾನೆ.

      ನಿರುಕ್ತ:
      ಮಾತ್ರಪರಿಮಿತಂ = ಮಾತ್ರದಲ್ಲಿ (quantity) ಸೀಮಿತನಾದವನು
      ಬಹುತನುಕಂ = ಬಹಳ ತೆಳ್ಳಗಿನವನು. Physically smaller than the door frame.

      ಗಾತ್ರದೊಳು ಗಂಡನೆಂದುಂ
      ಮಾತ್ರಪರಿಮಿತಂ, ಕಪಾಟಕಿಂ ಬಹುತನುಕಂ|
      ಧಾತ್ರಿಗಿಳಿದುಪೋಪನವಂ
      ಸೂತ್ರಬಿಗಿದ ಮರುಚಣಂ ಸತಿಯ ಕೊರಳಿಂಗಂ||

  11. ಸುರಿಯಲ್ ಭರದಿಂದೆಳೆಯಲ್
    ಹರಿವಂ ಕಂಡಿದ್ದನವಂ ಮೂಗಿನ ಬಿಲದೊಳ್ ।
    ಸರಿಸಲ್ ಭಯದಿಂದೊಳಗುಂ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ।।

    ಕರಿ = ಒಂದು ಬಗೆಯ ಮೂಲಿಕೆ !
    (ನೆಗಡಿ ಬಂದವನ ಚಿತ್ರಣ !? ಪ್ರಾಸ (ತ್ರಾಸ) ಹೊಂದಿದ್ದರಿಂದ ವಿನೋದಕ್ಕಾಗಿ ಬರೆದದ್ದು)

    • ಉಷಾ ಅವರೇ 2 ನೇ ಸಾಲಿನ 3 ನೇ ಗಣವನ್ನು ಜಗಣ/ಯತಿಯೊಡನೆ ಸರ್ವಲಘು ಮಾಡುವುದನ್ನು ಮರೆತಿದ್ದೀರಿ 🙂

      • (ನೆಗಡಿಯಾಗಿ ಮೂಗಲ್ಲಿ ಬಂದ ಮೂಗಿಲಿಯಿಂದಾದ ಅವಾಂತರದಿಂದ ಕಂದ ತಪ್ಪಿದ್ದು !!)
        ತಿದ್ದಿದ ಪದ್ಯ:
        ಸುರಿಯಲ್ ಭರದಿಂದೆಳೆಯಲ್
        ಹರಿವಂ ಕಂಡಿದ್ದನಲ್ತೆ ಮೂಗಿನ ಬಿಲದೊಳ್ ।
        ಸರಿಸಲ್ ಭಯದಿಂದೊಳಗುಂ
        ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ।।

    • ಸೋಮ,
      ’ನೆಗಡಿ’ ಕುರಿತಾದ ಪದ್ಯವನ್ನು ’ರಸಮಯ’ ಎಂದು ಹೊಗಳಿದಿರೆ? ಕಣ್ಣಲ್ಲಿ ನೋಡಿದ (ಸಾಹಿತ್ಯಪಠನ ಮತ್ತು ನೋಟ) ಹಾಗೂ ನಾಲಗೆಯಿಂದ ಸವಿದ (ಅಡುಗೆ) ರಸಗಳು ಸುಪರಿಚಿತ. ನಿಮ್ಮ ರಸಪ್ರಜ್ಞೆ ಇವೆರಡು ಅಂಗಗಳ ನಡುವಿನದು!

      ಕಣ್ಣೊಳ್ ಕಂಡಿಹ ರಸಮೊಂ
      ದೆಣ್ಣೆಯೊಳು ಕರಿದ ಪದಾರ್ಥಗಳದಿನ್ನೊಂದುಂ|
      ಬಣ್ಣನೆಯಿದೇನ ಮಾಡಿಹೆ?
      ಗೊಣ್ಣೆಯು ರಸಮಾಯ್ತೆ ನಿನ್ನಯ ವ್ಯಾಖ್ಯೆಯೊಳಂ?|

    • ಉಷಾರವರೇ,
      “ಮೂಗಿಲಿ ಬಿಲದೊಳ್ ” ಎಂಬುದನ್ನು ಯಾವ context ನಲ್ಲಿ ಅರ್ಥೈಸಬೇಕು ಇಲ್ಲಿ ಎಂಬುದು ತಿಳಿಯಲಿಲ್ಲ.

      • ಶ್ರೀಶ,
        ನೆಗಡಿ ಮಾಯವಾಗಿ “ಮೂಗಿಲಿಯೂ” ಮಾಯವಾಗಿದೆ. ನನಗೂ ತಿಳಿಯುತ್ತಿಲ್ಲ. ಬಹುಶಃ ಸೋಮರಿಗೆ ಗೊತ್ತಿರಬೇಕು, ಕೇಳಿ !!

  12. ಶರವೇಗದಾಕ್ರಮಣದಿಂ
    ದುರಿದುದು ರಾಜ್ಯಂ, ವಿನಾಶವದೊ ಕೊತ್ತಲಗಳ್|
    ಅರಿಸೈನ್ಯಂ ಸ್ತ್ರೀ-ಶ್ರೀ-ಹಯ-
    ಕರಿಯಂ ಕೊಂಡೊಯ್ದುದಲ್ತೆ! ಮೂಗಿಲಿ ಬಿಲದೊಳ್||

    ಮೂಗಿಲಿ = ಹೇಡಿ
    ಬಿಲ = ಬಂದೀಖಾನೆ

    • ಪ್ರಸಾದು ನಬಹಳ ಹಿಡಿಸಿತು 🙂

      • ’ನಬಹಳ’ – ಸ್ವಲ್ಪವಾದರೂ ಹಿಡಿಸಿತಲ್ಲ, ಧನ್ಯೋಸ್ಮಿ 😉

    • ಪ್ರಸಾದು ಚೆನ್ನಾಗಿದೆ ಐಡಿಯ.. ಮೂರನೆಯ ಪಾದಾದಿಯಲ್ಲಿ ವಿಸಂಧಿಯಾಯ್ತಲ್ಲ. ಮೂಗಿಲಿ ಅನ್ನೋದಕ್ಕೆ ಹೇಡಿ ಎನ್ನುವ ಅರ್ಥ ಹೇಗೆ? ಮೊದಲು ಬಂದ ವಸ್ತುಗೆ ಆಮೇಲೆ ಬಂದಿರುವ “ಮೂಗಿಲಿ ಬಿಲದೊಳ್” – ಇವೆರಡಕ್ಕು ಅರ್ಥಸಂಬಂಧ ಹೇಗೆ ಹರಿಯಿಸಿದ್ದೀರ ಅಂತ ಗೊತ್ತಾಗ್ತಿಲ್ಲ. It does not appear to flow directly

      • ಶ್ರೀಕಾಂತಮೂರ್ತಿಯವರೆ, ೩ನೆಯ ಪಾದದ ಆದಿಯಲ್ಲಿ ವಿಸಂಧಿತ್ವವು ಪ್ರಾಚೀನಕಾವ್ಯಗಳಲ್ಲಿ ಅಲ್ಲಲ್ಲಿ ಕಾಣಿಸುತ್ತದೆಯಲ್ಲವೇ?

        ೧)ನುಡಿವನ್ನಮೆನ್ನನೀ ಪರಿ
        ಸಿಡಿಲೇತಕೆ ಕೆಡೆದುದಿಲ್ಲ ನಿನ್ನಯ ಸಿರದೊಳ್ |
        ಉಡುಗಿದುದಿಲ್ಲಮುಸಿರ್ ನೂ-
        ರ್ಮಡಿಯೆನಲೀ ಜಿಹ್ವೆ ಬಿರಿದುದಿಲ್ಲ ದುರಾತ್ಮಾ ||
        -ನಾಗವರ್ಮನ ಕರ್ಣಾಟಕಕಾದಂಬರೀಸಂಗ್ರಹ, ಚಂದ್ರಾಪೀಡನ ಪ್ರಾಣವಿಯೋಗ-೨೩

        ೨)ವಿವಿಧಮಣಿಶಬಲಿತಂ ರ-
        ಮ್ಯವಿಧಾನಸುವರ್ಣಕಲಶಕಿರಣೋದ್ದ್ಯೋತಂ |
        ಅವಿರಳವಾದ್ಯಸಮೇತಂ
        ಧವಳಪ್ರಾಸಾದಸಾರದೇವಾಗಾರಂ ||
        -ರುದ್ರಭಟ್ಟನ ಜಗನ್ನಾಥವಿಜಯ, ದ್ವಿ.ಆ-೨೩

        ೩)ಚರರೆಂದುದ ಕೇಳುತಲಾ
        ಧರಣಿಪ ನಿಜಮಂತ್ರಿಯ ಕರೆದವನೊಡನಾಗಲ್ |
        ಒರೆದನು ಕೇಳೈ ಸಚಿವನೆ!
        ಪರನೃಪರೆಮ್ಮಯ ಪುರಕೈತಂದಿಹರೆನುತಂ ||
        -ಮುದ್ದಣನ ರತ್ನಾವತೀಕಲ್ಯಾಣ-೪೧

    • ೧) ಪದ್ಯದ ಪೂರ್ವಾರ್ಧಕ್ಕೆ ಒಂದು idea ಮುಗಿದರೆ, ಉತ್ತರಾರ್ಧವನ್ನು ಸ್ವರಾಕ್ಷರದಿಂದ ಆರಂಭಿಸಬಹುದು. ವಿಸಂಧಿಯಾಗದು. ಹಾರ್ಯಾಡಿಯವರ ಅನುಮೋದನೆಗೆ ಕೃತಜ್ಞತೆಗಳು.
      ೨) ಮೂಗಿಲಿ – ಮೂಗಿಲ್ಲದವನು – ಹೇಡಿಗೆ ಕೊಡುತ್ತಿದ್ದ ಶಿಕ್ಷೆ
      (ನಾಣಿಲಿ – ನಾಚಿಕೆಯಿಲ್ಲದವನು)
      ೩) ಹೇಡಿತನದಿಂದ ಓಡಿಹೋಗುತ್ತಿದ್ದ ಆಕ್ರಮಿತ ರಾಜ್ಯದ ರಾಜ/ಮಂತ್ರಿ/ಅಧಿಕಾರಿಯನ್ನು ಆಕ್ರಮಣಕಾರರು ಕಾರಾಗೃಹಕ್ಕೆ ಹಾಕಿದರು ಎಂದು ಕಲ್ಪನೆ.

  13. ನರನನುಕರಿಸುತ್ತಲಿದುಂ
    ನರಿಗೂಮೀರ್ದಮತಿಯಂಪ್ರದರ್ಶಿಸುತಿಹುದೇಂ?
    ಬರಿಯೊಂದಲದೇ ಪಣ್ಮ್ಂ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    • ಪಣ್ಮಂಕರಿಯಂ?

      • ಪ್ರಸಾದರೇ, ಚಿಕ್ಕ ಹಣ್ಣ ಬುಟ್ಟಿಯೆಂದು ತಿಳಿಯಿರಿ ಹಾಗೂ ಅದರ ಬಿಲ ಸ್ವಲ್ಪ ದೊಡ್ಡದು. [ಬಿಲ ಎಂದರೆ ಗುಹೆ ಎಂದೂ ಅರ್ಥವಿದೆ] 🙂

  14. ವರನು ಪರಿಗ್ರಹಕಿರ್ಪುಂ-
    ಗುರಮಂ ತಿನಿಸೊಳಗಡಂಗಿಸಲ್ ಹಾಸ್ಯಕೆ, ಹಾ
    ತರಮೇ ನಿಯತಿಯ ನಿಯಮ-
    ಕ್ಕರಿಯಂ! ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    ನಿಯಮಕ್ಕೆ? ಅರಿಯಂ! (ತಿಳಿಯಲಿಲ್ಲ)

    • ಸೋಮ, ಒಳ್ಳೆಯ ಕೀಲಕ. ಸ್ವಲ್ಪ ಕಾಡಿಸಿತಾದರೂ ಕೊನೆಗೆ ಸ್ಪಷ್ಟವಾಯಿತು.

  15. ಕೊರೆಯಲ್ ಬಿಲವಂಮಿಲಿಗಳ್
    ಕಿರಿಕಿರಿ ಕಳೆಯಲ್ಕವನಿಡೆ ಪಾಷಾಣವನುಂ
    ಪುರಿಯೆಂದದನರಿತುಂ ಮಂ-
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಳದೊಳ್ ।।

    ಮಂಕರಿಯಂ = ಮಂಕ (ಮೂಢ) + “ಅರಿ”ಯಂ(ಶತ್ರುವನ್ನು)

    • ೧) ಬಿಲವಂಮಿಲಿಗಳ್ ತಪ್ಪು. ಬಿಲವನ್ನಿಲಿಗಳ್ ಎಂದು ಸವರಿಸಿ.
      ೨) ಎರಡನೆಯ ಪಾದದ ಮಧ್ಯಗಣ ಜಗಣವಾಗಿಲ್ಲ. ಸರ್ವಲಘು-ಜಗಣದಲ್ಲಿ ಮೊದಲಕ್ಷರವಾದಮೇಲೆ ಯತಿ ಬರಬೇಕು.
      ೩) ಮಂಕರಿಯಂ = ಮಂಕ+ಅರಿಯಂ ಎಂಬಲ್ಲಿ ಸಂಧಿದೋಷವಿಲ್ಲವಾದರೂ, ವಿಗ್ರಹವು ಸ್ಪಷ್ಟವಾಗಿ ಕಾಣದು. ಇದಕ್ಕೆ ಕಾರಣ ಬಹುಶಃ ’ಮಂಕ’ ಎಂಬುದು ಪುಲ್ಲಿಂಗವೂ, ’ಒಯ್ದುದು’ ಎಂಬುದು ನಪುಂಸಕಲಿಂಗವೂ ಆಗಿರುವುದಿರಬೇಕು.

      • ಕೊರೆಯಲ್ ಬಿಲವನ್ನಿಲಿಗಳ್
        ಕಿರಿಕಿರಿ ಕಳೆಯೆ ಕಲಸಿಟ್ಟ ಪಾಷಾಣವನುಂ
        ಚುರುಮುರಿಯೆಂದರಿತುಂ ಮಂ-
        ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಳದೊಳ್ ।।

        ಮಂಕರಿಯಂ = “ಮಂಕು” + “ಅರಿ”ಯಂ – ಎಂದಾದರೆ ಸರಿಯಾದೀತೆ?

      • ಸರಿ. ವಿಷವು (ಅರಿ) ಮಂಕಾದರೆ ಅದು ಪರಿಣಾಮಕಾರಿಯಾಗುವುದಿಲ್ಲ. ಹಾಗಾಗಿ, ಮಂಕು ಮೂಗಿಲಿಯು ವಿಷವೆಂಬ ಅರಿಯನ್ನು ಕೊಂಡೊಯ್ದಿತು ಎಂದು ಅನ್ವಯಮಾಡಬೇಕು.

  16. ಕರಿಯಂ ತಿರಸ್ಕರಿಸಿ ಮೆಯ್
    ಸಿರಿಯಂ ಕೆಡಿಸಿರ್ಪನಣ್ಣ ಸೇಡಿಗೆ ನೀನುಂ
    ಸಿರಿಯಂ ತಾರೆನ್ನುತ ಭಾ-
    ಸ್ಕರಿಯಂ ಕೊಂಡೊಯ್ದುದಲ್ತೆಮೂಗಿಲಿ ಬಿಲದೊಳ್

    ಕರಿಯಂ- ರಾಮ
    ಸಿರಿ- ಸೀತೆ
    ಭಾಸ್ಕರಿ- ಶನಿ (ಸೂರ್ಯನ ಮಗ)
    ಮೂಗಿಲಿ- ಶೂರ್ಪಣಖಿ
    ಬಿಲ- ಮನೆ

    • ೧) Well thought out. ಕೀಲಕ ಚೆನ್ನಾಗಿದೆ.
      ೨) ’ಒಯ್ದುದು’ ಎಂಬುದನ್ನು ಸ್ತ್ರೀಲಿಂಗವಾಗಿ (ಶೂರ್ಪಣಖಿ ಒಯ್ದಳು) ಗ್ರಹಿಸಬಹುದೆ?

      • Thanks prasad
        “ಅವರು ಮಾಡಿದ್ದು” ಅನ್ನುವ ರೀತಿ ಇಲ್ಲಿ ಹೇಳಿದ್ದು ಲಿಂಗಾರೋಪ ಇಲ್ಲಿ ಬೇಕಿಲ್ಲ. ” ಶೂರ್ಪಣಖಿ ತನ್ನ ಮನೆಗೇ ಶನಿಯನ್ನ್ಯ್ ಹೊಹೊಗಿಸಿದ್ದಲ್ಲವೆ- ಹೀಗೆ ಅರ್ಥೈಸಬೇಕು.

    • good idea Shrikanth

  17. ಪರಿಯೇಂ ಕಾರ್ಟೂನುಗಳೊಳ್
    ಮರೆಮಾಚುತ್ತೆಲ್ಲ ಬೇಧ ಮೋಡಿಯ ಮಾಳ್ಗುಂ |
    ಹರುಷದ ಕೂಟಕ್ಕೆನುತುಂ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    [cartoon ನಲ್ಲಿ ಮೂಗಿಲಿ, ಆನೆಯನ್ನು partyಗೆಂದು, ಬಿಲಕ್ಕೆ ಕರೆದೊಯ್ಯಿತೆಂಬ ಕಲ್ಪನೆ]

  18. ಸೋಮ-ರಾಮ-ಪ್ರಸಾದುಗಳೆಲ್ಲ ಅತ್ಯದ್ಭುತವಾಗಿ ಪರಿಹಾರಗಳನ್ನು ಪುಂಖಾನುಪುಂಖವಾಗಿ ನೀಡುತ್ತಿದಾರೆ. ಮಹೇಶ್ ಭಟ್ಟ್, ಶ್ರೀಕಾಂತಮೂರ್ತಿ, ಚಂದ್ರಮೌಳಿ, ಕಾಂಚನ, ಉಷಾ ಮುಂತಾದವರೆಲ್ಲ ಒಂದೆರಡು ಪರಿಹಾರಗಳನ್ನಿತ್ತಿದ್ದರೂ ಅಲ್ಲಿ ಸೊಗಸಿದೆ.ಅಂತೂ ಕೇವಲ ಎರಡನೆಯ ದಿನಕ್ಕೇ ಈ ಪಾಟಿಯ ಪಾಟವದಿಂದ ಚಾಟವವನ್ನು ತೋರುತ್ತಿರುವ ಪದ್ಯಪಾನಿಗಳಿಗೆಲ್ಲ ಧನ್ಯವಾದ. ಸಮಸ್ಯೆಯು ನನ್ನದೇ ಆಗಿದ್ದರೂ ನಾನಂತೂ ಇಂಥ ನವನವೀನ-ರಸೋದಾರ-ಪರಿಹಾರಗಳನ್ನು ಊಹಿಸಿಯೇ ಇರಲಿಲ್ಲ.

    • ಊಹಿಸಿಯೇ ಇರಲಿಲ್ಲವೆ?

      “ಹಲವಿಹವು ಪರಿಹಾರವೀ ಸಮಸ್ಯೆಗಿದೀಗ
      ಬಲುಮೆಯಿರ್ಪುದ ಮಾಳ್ಪೆ ಕೇಳಿರಿಂ ನೀಂ|”
      ಹಲವಾರು ಬಾರಿಯವಧಾನದೊಳು ಪೇಳುತಿಂ
      ತುಲಿದಿರೇ ನೀಮೀಗ! ಬಯಲು ಮರ್ಮಂ||

  19. ಅರೆನಿಮಿಷಕೊಮ್ಮೆ ಮೂಗ೦
    ತೂರಿಸಿ, ತೈಲದೊಳು ಕರಿದ ಪಕೋಡೆವಡೆಯ೦
    ವಾರೆಗಣ್ಣಿ೦ ನೋಡುತೆ, ಬೇ
    ಕರಿಯ೦ ಕೊ೦ಡೊಯ್ಯದಲ್ತೆ ಮೂಗಿಲಿ ಬಿಲದೊಳ್

    • ಮೂರ್ತಿಗಳಿಗೆ ಪಾನಗೋಷ್ಠಿಗೆ ಸ್ವಾಗತ. ದಯವಿಟ್ಟು ತಮ್ಮ ಪರಿಚಯ ಹೇಳಿ. ಪದ್ಯ ಒಳ್ಳೆ ಮಜವಾಗಿದೆ:
      ೧) ಎರಡನೆಯ ಪಾದದ penultimate ಗಣ ಜಗಣವಾಗಿದೆ. ‘ವಡೆ-ಬೋಂಡಗಳಂ’ ಎಂದು ತಿದ್ದಬಹುದು.
      ೨) ಮೂರನೆಯ ಪಾದದ ಮೊದಲ ಗಣದಲ್ಲಿ ಒಂದು ಮಾತ್ರೆ ಹೆಚ್ಚು ಇದೆ. ‘ಓರೆಯಲಿ ನೋಡುತಿಡಿಯ ಬೇ’ ಎಂದು ತಿದ್ದಬಹುದು
      ೩) ಕೊನೆಯ ಪಾದದಲ್ಲಿ ಟಂಕನದೋಷವಿದೆ.
      ಪದ್ಯರಚನೆ ನಿಮ್ಮ ನಿತ್ಯದ ಪರಿಪಾಠವಾಗಲಿ ಎಂದು ಆಶಿಸುವೆ.

      • praasa sthaanas need some tweaking too.

      • ಅರೆ, ಹೌದಲ್ಲ. ಪ್ರಾಸವನ್ನೇ ಗಮನಿಸದೆಹೋದೆ. ೧ ಮತ್ತು ೪ನೆಯ ಪಾದಗಳು ಸಿಂಹಪ್ರಾಸದಲ್ಲೂ ಉಳಿದೆರಡು ಗಜಪ್ರಾಸದಲ್ಲೂ ಇವೆ. ಮಾದರಿ ಸವರಣೆ:

        ಅರೆನಿಮಿಷಕೊಮ್ಮೆ ಮೂಗಂ
        ಹೊರಳಿಸಿ, ತೈಲದೊಳು ಕರಿದ ವಡೆ-ಬೋಂಡಗಳಂ|
        ನಿರುಕಿಸುತಲೋರೆಯಿಂ, ಬೇ
        ಕರಿಯ೦ ಕೊ೦ಡೊಯ್ದುದಲ್ತೆ ಮೂಗಿಲಿ ಬಿಲದೊಳ್||

        ನೀವು ಬೇರೆ ರೀತಿ ಪ್ರಯತ್ನಿಸಿ

  20. ಕರಿದಿಹ ತಿಂಡಿಯ ಕಂಡೊಡೆ
    ಸರಸರನೆ ನೆಗೆದು ಮುಲಾಜು ನೋಡದೆ ಹಾ ಹಾ |
    ಮರೆಯುತ ಕಂಠದ ಮೇಗಡೆ
    ಕರಿಯಂ, ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    ಕಂಠದ ಮೇಗಡೆ ಕರಿ = ಕಂಠೋಪರಿಷ್ಠಾತ್ ಗಜಃ = ಗಣೇಶ.

    ಕರಿಮುಖನ ವಾಹನವಾದ ಇಲಿಯು ಪೂಜೆಯ ಸಮಯದಲ್ಲಿ ನೈವೇದ್ಯ ಮಾಡಿದ ಕರಿದ ತಿಂಡಿಯ ಆಸೆಗೆ ಸ್ವಾಮಿಯನ್ನೂ ಮರೆತು ಅದನ್ನು ಕಚ್ಚಿಕೊಂಡು ಬಿಲದೊಳು ಹೊಕ್ಕಿತು ಎಂದು ಅಭಿಪ್ರಾಯ. ‘ಮುಲಾಜು’ ಪದವನ್ನು ಉಪಯೊಗಿಸಿ ನನ್ನ ಹಸ್ತಾಕ್ಷರವನ್ನು ಮೆರೆದಿದ್ದೇನೆ. ಕ್ಷಮೆಯಿರಲಿ 🙂

    • ಅನೂಹ್ಯ! ಸ್ವಾದುವಾದ ಪರಿಹಾರ. ಇದು ನಿಮ್ಮ ಹಸ್ತಾಕ್ಷರವಲ್ಲ; ಸಿಗ್ನೇಚರ್ ಪರಿಭಾಷೆ.

      • “ಮುಲಾಜು” ಹಿಂದಿ ಅಲ್ಲವೇ?

        • ಏನ್ರಿ, ನಾನು ಆಡೋ ಪದಗಳನ್ನೆಲ್ಲ ನೀವು ಒಂದಲ್ಲ ಒಂದು ಭಾಷೆಗೆ ಕೊಡುತ್ತಾ ಬಂದರೆ ಕೊನೆಗೆ ಕನ್ನಡಕ್ಕೆ ಉಳಿಯೋದಾದರೂ ಏನು? 🙂

        • ಹಿಂದಿಯ ಮುಲಾಜು ಏಕೆ ಎಂದಷ್ಟೇ ಕೇಳಿದ್ದು ಅವರು

  21. ನೀರಿನಲ್ಲಿ ನೆನೆದ ಮರಿಯನ್ನು ಬೆಚ್ಚಗಿಡಲು ಸರಿಯಾದ ಜಾಗವನ್ನು ಹುಡುಕುತ್ತಿದ್ದ ಕರಿನಾಗರವೊಂದು ಅಲ್ಲೇ ಇದ್ದ ಬರಿದಾದ ಇಲಿಯ ಬಿಲಕ್ಕೆ ಕರೆದೊಯ್ದಿತು.

    ಹರಿವಾ ನೀರಲಿ ನೆನೆದಿಹ
    ಮರಿಯಾ ನಡುಕವ ನಿವಾರಿಸಲ್ಕೆನೆ ಬರಿದೊಂ-
    ದಿರವಂ ಹುಡುಕುತ ಹೊರಟಿಹ
    ಕರಿಯಂ, ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    ಕರಿಯಂ = ಕರಿಯ ನಾಗರಹಾವು.

  22. ಕೊರಳಂ ಕಡಿಯುತ್ತತ್ತಿಲಿ
    ಕಿರುಕುಳ ಪೆರ್ಚಲ್ವಿಚಾರ ಗೈಯುತ ಸೊಸೆಯುಂ
    ತುರುಚೆಯರುಚಿ ಸರಿಯೆನೆ ತ-
    ಸ್ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    (ಅತ್ತಿಲಿ= ಮೂಗಿಲಿಯ ಅತ್ತೆ, ಸೊಸೆ = ಮೂಗಿಲಿ, ತಸ್ಕರೀ =ಮುಟ್ಟಿದರೆ ಮುನಿ ಅಥವಾ ತುರುಚೆಸೊಪ್ಪಿನಂಥ ಮೂಲಿಕೆ)

  23. ಮರೆತುಂ ವಿವೇಕ ವಯಸೊಳ್
    ಮರುಳಾಗುತೆ ಪೆಣ್ಣ ರೂಪ ಕಂಡೊಡೆ ಬೀಳಲ್
    ಹರಟುವದನವರತಾ ಕರೆ –
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್
    🙂
    [ಕರೆಕರಿ = irritator]

  24. ನೆರೆಕರೆಯೊಳ್ ಬಾಂಧವ್ಯಮ-
    ನರಸುತೆ ಪುಡುಕಲ್ಕೆ ನೇಹದಾ ಸಂಭ್ರಮದಿಂ
    ಕರೆಯುತೆ ಮನೆಗಂ ಗಡ ಸೂ-
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    ಹಂದಿ, ಇಲಿಗಳಿಗೂ ನೆರೆಕರೆ ಬಾಂಧವ್ಯವಿರುವುದಲ್ಲವೇ 🙂

  25. ಮರಿಗಳ್ಗೆಂದುಂ ತಾನ-
    ಕ್ಕರಿಯಿಂ ಕೊಂಡೊಯ್ದ ಖಾರದೊಡೆಯಂ ತಿನ್ನ-
    ಲ್ಕುರಿಯಲ್ ಸರಕ್ಕನುಂ ಸ-
    ಕ್ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ।।

    (ಪ್ರಸಾದು ಸರ್, ಅದು ಉತ್ತರಕರ್ನಾಟಕದ ಮೂಗಿಲಿ )

    • ಸೊಗಸಾದ ಪರಿಹಾರ. ನೀವು ಜಾಣ್ಮೆಯಿಂದ ಉತ್ತರಕರ್ಣಾಟಕದ ಭಾಷೆಯನ್ನು ಅಕ್ಕರಿ ಎಂಬಲ್ಲಿಯೇ ಬಳಸಿ ನಿಮ್ಮ ಪೂರಣಕ್ಕೆ ಗಟ್ಟಿಯಾದ ಮುಂಗಡ ವಿಮೆಯನ್ನೇ ಮಾಡಿದ್ದೀರಿ:-)

      • ಉಷಾ ಅವರೇ, ಒಳ್ಳೆಯ ಕಲ್ಪನೆ. ನಿಜಕ್ಕೂ luxurious ಇಲಿ ಇದು…ವಡೆ ಖಾರ ಆದ್ರೆ ಸಕ್ರೆನೂ ಸಿಗ್ತಿದ್ಯಲ್ಲ.

        ರಂಪ್ರಾ, ನೋಡಿ ನಿಮ್ಮ ವಕೀಲಿತನಕ್ಕೆ ಹೆದರಿ, ಪದ್ಯಪಾನಿಗರು Anticipatory Bail ತೊಗೊಳಕ್ಕೆ ಶುರುಮಾಡಿದಾರೆ.

        • Anticipatory bail – Fine interpretation. ಆದರ, ವಕೀಲಿತನ ಮಾಡೂದಂದರ ಏನಂತ ತಿಳಿದಿರಿ? ನಮ್ಮ ಕಕ್ಷಿ ಕೊಲೆ ಮಾಡಿದ್ದರೂ ಸುತ ಅವರನ್ನು ಗೆಲ್ಲಿಸುವುದು. ಅದನ್ನs ಮಾಡ್ಲಾಕತ್ತೀನ್ ನೋಡ್ರೆಪಾ.

    • ಉಷಾರವರ,
      ಪದ್ಯ ಅಗದಿ ಛಲೋ ಅದ ಬಿಡ್ರಿ!

    • ಧನ್ಯವಾದಗಳು ಗಣೇಶ್ ಸರ್,ಪ್ರಸಾದು ಸರ್, ಶ್ರೀಶ (ಕ್ಷಮಿಸಿ, ಉಷಸಿಂಧು ಹೆಸರಿನಲ್ಲಿ ಅಂದೇ ಬರೆದಿದ್ದ ಪ್ರತಿಕ್ರಿಯೆ ಕಾಣಿಸುತ್ತಿಲ್ಲ)
      ಗಣೇಶ್ ಸರ್, ಇದು ಬರಿ “ಸಕ್ಕರಿ”, ನಿಮ್ಮದು “ಸಕ್ಕರಿಕರಿ”. ವೈವಿಧ್ಯಮಯ “ಪೂರಣ”ಗಳನ್ನು ತಂದ ಎಲ್ಲಾ ಪದ್ಯಪಾನ ಮಿತ್ರರಿಗೂ (ವಯಕ್ತಿಕವಾಗಿ ಪ್ರತಿಕ್ರಯಿಸಲು ಸಾಧ್ಯವಾಗುತ್ತಿಲ್ಲ) ಮತ್ತು ಅದಕ್ಕೆ ಕಾರಣವಾದ “ಮೂಗಿಲಿ”ಗೂ ನನ್ನ ತುಂಬು ಹೃದಯದ ಅಭಿನಂದನೆಗಳು.

  26. ಸಮಸ್ಯಾಪೂರಣವು ಪದ್ಯಪಾನಚಿತ್ರಮಂದಿರದ houseful feature ಎಂದರೆ ತಪ್ಪಲ್ಲ. ಆದರೆ ಈ ಬಾರಿಯಂತೂ ಮೊದಲೆರಡು ದಿನಗಳಿಗೇ ಈ ಪ್ರಮಾಣದ ಚಮತ್ಕಾರಪ್ರತಿಕ್ರಿಯೆ!! ನಾರಾಯಣಮೂರ್ತಿಯವರಿಗೆ ಸ್ವಾಗತ. ರಾಜಗೋಪಾಲರ ಕಲ್ಪನೆಯೂ ಚೆಲುವಾಗಿದೆ.
    ಸೋಮ, ರಾಮ್, ಸುಧೀರ್, ಮೌಳಿ ಮುಂತಾದವರ ವಿನೂತನವೂ ಪ್ರತಿಭಾಪ್ರಾಣಿತವೂ ಆದ ಪರಿಹಾರಗಳನ್ನು ಕಂಡು “ದೇವರೇ! ಅವಧಾನಗಳಲ್ಲಿ ನನಗೇಕೆ ಈ ಪಾಟಿಯ ಕಲ್ಪನಾಪಾಟವವಿಲ್ಲ”ವೆಂದು ಹಲುಬುವಂತಾಗಿದೆ.ಇಷ್ಟು ಒಳ್ಳೆಯ ಪರಿಹಾರಗಳ ಬಳಿಕ ನಾನು ಹೊಸಬಗೆಯ ಪರಿಹಾರವನ್ನು ನೀಡುವುದು ಕಷ್ಟ. ಆದರೂ ಯತ್ನಿಸಿರುವೆ. ಪರಾಂಬರಿಸಿರಿ:

    ವರಚಾತುರ್ಥಿಕಕಂ ಶಾ-
    ರ್ಕರಚತುರಂಗೀಯಮೊಪ್ಪೆ ಶಯ್ಯಾಗೃಹದೊಳ್ |
    ಮರೆತಿರೆ ಮಿಥುನಂ ರತಿಯೊಳ್;
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    (ಪ್ರಸ್ತದ ಮನೆಯಲ್ಲಿ ಬಗೆಬಗೆಯ ತಿಂಡಿತಿನಿಸುಗಳನ್ನು ಕಲಾಪೂರ್ಣವಾಗಿ ನಿರ್ಮಿಸಿ ಸಜ್ಜುಗೊಳಿಸುವುದು ಸರ್ವಸುವೇದ್ಯ. ಹಾಗೆಂದೇ ಪ್ರಕೃತದಲ್ಲಿ ಸಕ್ಕರೆಯ ಚತುರಂಗಸಾಮಗ್ರಿಯನ್ನು ಹವಣಿಸಿದ್ದಾರೆ. ಇಲ್ಲಿ ಕಾಯಿಗಳ ರೂಪದಲ್ಲಿ ಆನೆ-ಕುದುರೆ-ಒಂಟೆ ಮುಂತಾದುವು ಇದ್ದೇಇರುವುವಷ್ಟೆ. ಆದರೆ ನವದಂಪತಿಗೆ ಇವುಗಳತ್ತ ಗಮನ ಹರಿದೀತೇ? ಅಂತೂ ಅವರು ಮೈಮರೆತಿರುವಾಗ ಅಲ್ಲಿದ್ದ ಸಕ್ಕರೆಯ ಆನೆ(ಕಾಯಿ, pawn)ಯನ್ನು ಇಲಿಯು ಕೊಂಡೊಯ್ದುದರಲ್ಲಿ ಅಚ್ಚರಿಯಿಲ್ಲ. ಚಾತುರ್ಥಿಕ ಅಥವಾ .ಚತುರ್ಥೀಕರ್ಮ ಎಂಬುದು ಪ್ರಸ್ತಕ್ಕೆ ಧಮಶಾಸ್ತ್ರದಲ್ಲಿರುವ ಅಭಿಧಾನ; ಸಕ್ಕರೆ(ಶರ್ಕರಾ)ಯಿಂದಾದದ್ದು ಶಾರ್ಕರ. ಚತುರಂಗಕ್ಕೆ ಸಂಬಂಧಿಸಿದುದು ಚತುರಂಗೀಯ; ಅರ್ಥಾತ್ ಅಲ್ಲಿಯ ಬಗೆಬಗೆಯ ಕಾಯಿಗಳು ಮಣೆ ಇತ್ಯಾದಿ)

    • ಔಚಿತ್ಯವಿವೇಕದ ಪಾಠ !!!
      ಒಟ್ಟಿನಲ್ಲಿ ಪ್ರಸ್ತದಲ್ಲಿ ಚದುರಂಗವಾಡಿದರೆ, ಆನೆ ಆದ್ರೂ ಇಲಿಬಾಯಿಗೆ ಸಿಕ್ಕಿಹಾಕೊಳತ್ತೆ ಅಂದಂಗಾಯ್ತು…. :-).
      ಇಂತಹ ವಿನೂತನ ಕಲ್ಪನೆಗಳನ್ನು ಸೃಷ್ಟಿಸಿದವರು, ನಮ್ಮಂತಹ ಹುಲುಮಾನವರ ರಚನೆಗಳನ್ನು ನೋಡಿ ಹಲುಬುವ ಅವಶ್ಯಕತೆ ಖಂಡಿತಾ ಇಲ್ಲ.

    • ಗಣೇಶ್ ಸರ್, ನಿಮ್ಮ ಪದ್ಯ ಬಹಳ ಚೆನ್ನಾಗಿದೆ. ನಿಮ್ಮ ಪದ್ಯವೊಂದರಲ್ಲೇ ಮೂಗಿಲಿಯಿಂದಾದ ನಷ್ಟವು ನಗಣ್ಯವಾಗಿರುವುದಲ್ಲವೇ 🙂

      ಈ ಸಾಲನ್ನಂತು ಯಾರೂ ಒಪ್ಪುವುದಿಲ್ಲ:
      “ದೇವರೇ! ಅವಧಾನಗಳಲ್ಲಿ ನನಗೇಕೆ ಈ ಪಾಟಿಯ ಕಲ್ಪನಾಪಾಟವವಿಲ್ಲ”ವೆಂದು ಹಲುಬುವಂತಾಗಿದೆ
      ಇದನ್ನು ನಿರ್ಹೇತು-ಉತ್ಪ್ರೇಕ್ಷಾಲಂಕಾರವೆನ್ನೋಣವೆ?! 🙂

    • ಸೊಗಸಾದ ಪರಿಹಾರ 🙂

      ನನ್ನ ಮನಸ್ಸಿನಲ್ಲಿಯೂ ಮೊದಲಿಗೆ ಇದೇ ತೆರನಾದ ಸಕ್ಕರೆಯಚ್ಚಿನ ಆನೆಯ ಪರಿಹಾರವೇ ಮೂಡಿತ್ತು. ಆದರೆ ತತ್ಕ್ಷಣವೇ ’ಕನ್ನಡದಲ್ಲಿ ಅವಧಾನಕಲೆ’ ಪುಸ್ತಕದಲ್ಲಿ ಉಲ್ಲೇಖಿಸಿದ ಈ ಕೆಳಗಿನ ನಿಮ್ಮ ಸಮಸ್ಯಾಪೂರಣದ ಪದ್ಯ ನೆನಪಾಯಿತು-

      ಅಕ್ಕರೆಯಿಂ ಸಂಕ್ರಾಂತಿಗೆ
      ಚೊಕ್ಕಮೆನಲ್ಕಂಬೆ ಗೆಯ್ದು ಸಜ್ಜಾಗಿಸಿದಾ |
      ಸಕ್ಕರೆಯಚ್ಚುಗಳೊಳ್ ಗಡ
      ಕುಕ್ಕುಟ-ಕರಿ-ಹರಿಗಳಂ ಭುಜಿಸಿದಂ ಬಾಲಂ ||

      ಆದ್ದರಿಂದ ನಾನು ಪುನಃ ಅದೇ ಅರ್ಥದಲ್ಲಿ ಮಾಡುವುದು ಯುಕ್ತವಲ್ಲವೆಂದು ಸುಮ್ಮನಾದೆ 🙂

  27. ಕರಗಿರ್ಪುಗ್ರಾಣದಸ-
    ಕ್ಕರೆಕಂಡೆಣಿಸಿರೆ ರಹಸ್ಯಮಂ ಕಾವಲಿಗ೦ |
    ತ್ವರೆಯಿಂ ಹುಡುಕಲವನ ನೌ-
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್. ||

    ಕರಗಿರ್ಪ + ಉಗ್ರಾಣದ, ಕಂಡು + ಎಣಿಸಿರೆ.

    ಉಗ್ರಾಣದಲ್ಲಿ ನಿಧಾನವಾಗಿ ಸಕ್ಕರೆಯು ಖಾಲಿಯಾಗುತ್ತಿರುವ ರಹಸ್ಯವನ್ನು ತಿಳಿದ ಕಾವಲುಗಾರ ಬೇಗನೆ ಇಲಿಗಳನ್ನು ಹುಡುಕಲು ಆರಂಭಿಸಿದ್ದರಿಂದ, ಅವನ ಕಾವಲಿನ ಕೆಲಸದ(ನೌಕರಿ) ಜಾಗವಾದ ಬಾಗಿಲನ್ನು ಬಿಟ್ಟು ಇಲಿಗಳ ಬಿಲದ ಬಳಿ ಬರುವ೦ತೆ ಮಾಡಿದವು ಈ ಮೂಗಿಲಿಗಳು.

    • ಶ್ರೀಶ, (ಈ ಹೆಸರನ್ನ ಎಲ್ಲೋ ಕೇಳಿದ ನೆನಪು ;)). ಪದ್ಯ ಚೆನ್ನಾಗಿದೆ, ಒಂದು ಅಂಶ ತ್ವರೆಯಿಂದ ಹುಡುಕದ ಕಾರಣ ನೌಕರಿಯನ್ನೇ ಇಲಿಯು ಬಿಲಕ್ಕೆ ತೆಗೆದುಕೊಂಡು ಹೋಯಿತು ಎಂದು ಮಾಡಿದರೆ ಇನ್ನು ಸೊಗಸು 🙂

      • ಎರಡು ಮಕ್ಕಳಾದಮೇಲೆ ಮರವು ಸಹಜ ಸೋಮಣ್ಣ…ಇರಲಿ ಎಲ್ಲೋಕೇಳಿದ ನೆನಪಿಗೇ ನಾವು ಧನ್ಯ…ಇನ್ನು ನೆನಪಿಸಿಕೊಳ್ಳುವ ತೊಂದರೆ ಕೊಡುವುದಿಲ್ಲ 🙂
        Alternative ಚೆನ್ನಾಗಿದೆ…

        • ಹೌದು ಶ್ರೀಶ, ಬಾಲ್ಯಮೇ ಬಾಳ ಭಾಗ್ಯಂ ಅಲ್ಲವೇ 😉

          • ಸೋಮ-ಶ್ರೀಶರ ಸರಸ ಸೊಗಸಾಗಿದೆ. ಬಲ್ಲವರೇ ಬಲ್ಲರು ಬೆಲ್ಲದ ಸವಿಯ!! @ಸೋಮ,
            ತೇಟಗೀತಿ||
            ಪಾಪದ ಶ್ರೀಶನಂ ಗೋಳುಗುಟ್ಟಿಪುದರೊಳ್
            ಭೂಪತನವದೇನುಂಟೆಲೈ ಸೋಮ! ನಿನ್ನೊಳ್ |
            ಲೋಪಗೊಂಡ ವಾಸುಕಿ-ಹೊಳ್ಳ-ಚಂದ್ರರಂ ನೀಂ
            ಕಾಪಿನಿಂ ತಾರ ಕ್ಲಾಸಿಗಂ; ನಿನ್ನನೊಲಿವೆಂ:-)

          • ಶ್ರೀಶಂಗೆ ಪಾಪ ಎನ್ನುವುದೇ ಗಣೇಶ್ ಸರ್,

            ಶ್ರೀಶಂ ಪಾಪನದೆಂತು ಮೀಸೆತಿರುವಲ್ ಶೀರ್ಷಾಸನಂ ಗೈವೆನಾ
            ಹಾಸಂ ಕಾಣುತೆ ಚಂದ್ರನೊಳ್ ಮರೆತನಯ್ ಕ್ಲಾಸಂ, ಮಹೋತ್ಸಾಹದಿಂ
            ಹೊಳ್ಳಂ ನಲ್ನುಡಿ ‘ಬರ್ಪೆ-ಬರ್ಪೆನೆ’ನೆನಾಂ ಸೋಲುಂಡೆ ಸಂಭ್ರಾಂತಿಯಿಂ,
            ವಾಸೂ ಭೂಧರತರ್ಕಮೊಡ್ಡೆ ತೆವೆಳುತ್ತಾನೇನ ಗೈವೆಂ ಗಡಾ

            ಹಾಸ್ಯದ ಪದ್ಯವಾದ್ದರಿಂದ ಆದಿಪ್ರಾಸ ತಪ್ಪಿಸಿದ್ದೇನೆ 🙂

      • ಶ್ರೀಶನ ಪದ್ಯ ಚೆನ್ನಾಗಿದೆ; ಸೋಮನ ಸವರಣೆಯೂ ಸೊಗಸಾಗಿದೆ.

  28. ಕರಿ-ಮುಖ-ವಾಹಂ ವಧುವಂ,
    ದರ-ಹಸಿತಾಧರ-ವಿಲಾಸ-ಲವ-ಜಿತ-ಸರ್ವಾ- |
    ಮರ-ಛೋಕರಿಯಂ, ನುತ-ಶಂ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    ಗಣೇಶನ ವಾಹನವಾದ ಮೂಗಿಲಿಯು
    ಮುಗುಳ್ನಗೆಯ ಲೇಶದಿಂದಲೇ ಸಕಲ ದೇವಕನ್ಯೆಯರನ್ನೂ ಗೆದ್ದ (ಇಲಿಯ ದೃಷ್ಟಿಯಲ್ಲಿ!) ಮತ್ತು ಪಾರ್ವತಿಗೆ ನಮಸ್ಕರಿಸಿದ ತನ್ನ ವಧುವನ್ನು ಬಿಲದೊಳಗೆ ಕರೆದೊಯ್ಯಿತು 🙂

    Chokari – Signature word 🙂

    • ಜಲೋದ್ಧತಗತಿವೃತ್ತ||

      ಮುಲಾಜು ದಿಟದಿಂ ಸಹಿ ಪ್ರಕಟಿತಂ
      ವಿಲಾಸ್ಯ’ಜಗಣಂ’ ಭವತ್ಕೃತಿ ಗಡಾ |
      ಖಲೀಕೃತಮಿದೇನೊ ಛೋಕರಿ ಬರಲ್
      ಕಲಿಪ್ರಭವಮಿಂತಲಾ “ಭಗಣ”ಮೀ || 🙂

  29. ವರ, ರವಿಯಾದರುಮಧಿಕರು
    ಗಿರಿಮುಗಿಲೆಲರೆಂದು ಶಠಿಸೆ ಮುನಿ ಮುನಿದಾಗಳ್
    ತರುಣಿತ್ವ ತೊಲಗೆ ಗಿರಿಭೀ-
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್
    (ಗಿರಿ-ಮುಗಿಲ್-ಎಲರ್)

    ಬಹಳ ನವೀನ ಹಾಗೂ ಉತ್ತಮ ಪೂರಣಗಳನ್ನು ಮೂಗಿಲಿ ಗಳಿಸುತ್ತಿದೆ . ಎಲ್ಲ ಪರಿಹಾರದ ಜಾಡುಗಳೂ ಮುಕ್ತವಾದಂತಿವೆ. ಅವಕ್ಕೆ ಸಾಟಿಯಲ್ಲವದರೂ
    ಮತ್ತೊಂದು ರೂಪದ ಪರಿಹಾರ ಇಲ್ಲಿದೆ. ಪ್ರಸಿದ್ಧವಾದ ಕಥೆಯಸಂಗ್ರಹ ರೂಪ:

    ಹೊಳೆಯಲ್ಲಿ ಕೊಚ್ಚಿಹೊಗುತ್ತಿದ್ದ ಇಲಿಯೊಂದನ್ನುಋಷಿಯೊಬ್ಬ ಕರುಣಿಸಿ ತರುಣಿಯನ್ನಾಗಿಸಿದ. ಎಲ್ಲರಿಗೂ ಅಧಿಕನಾದ ಸೂರ್ಯನನ್ನೇ ಅವಳಿಗೆ ವರನನ್ನಾಗಿಸಲು ನಿಶ್ಚಯಿಸಿದ. ಮುಗಿಲು ತನ್ನನ್ನು ಮುಚ್ಚುವುದೆಂದು ಸೂರ್ಯನೂ, ಗಾಳಿ ತನ್ನನ್ನು ದೂಡುವುದೆಂದು ಮೋಡವೂ, ಬೆಟ್ಟ ತನ್ನನ್ನು ತಡೆಯುವುದೆಂದು ಗಾಳಿಯೂ ಹೇಳಿದಾಗ, ಬೆಟ್ಟವೇ ಅಧಿಕವೆಂದು ನಿರ್ಣಯಿಸಿ ಅ ಇಲಿವೆಣ್ಣಿಗೆ ಬೆಟ್ಟವೇ ವರನೆಂದಾಯಿತು. ಆಗ ಬೆಟ್ಟ ತನ್ನನ್ನು ಕೊರೆದು ಸುರಂಗಮಾಡುವ ಇಲಿಗೆ ತಾನೇ ಹೆದರುವೆನೆಂದಿತು. ಅಧಿಕ್ಯವನ್ನು ಹುಡುಕುತ್ತ ಅಧಿಕಪ್ರಸಂಗಿಯಾದ ಇಲಿವೆಣ್ಣಿಗೆ ಮುನಿದ ಮುನಿ, ಮತ್ತೆ ಅವಳನ್ನು ಇಲಿಯನ್ನಾಗಿಸಿದ. ಆಗ ಅಲ್ಲಿದ್ದ ಒಂದು ಮೂಗಿಲಿ ಈ ” ಗಿರಿಭೀಕರಿ”ಯನ್ನು ವರಿಸಿ ಬಿಲಪ್ರವೇಶಮಾಡಿತು !!

    • ಎಷ್ಟು ದೊಡ್ಡ ಘಟನಾವಳಿಯನ್ನು ಕಂದಪದ್ಯದಲ್ಲಿ ಅದರಲ್ಲೂ ಸಮಸ್ಯೆಯಲ್ಲಿ ಅಳವಡಿಸುವುದು ಬಲು ಕಷ್ಟ, ಬಹಳ ಚೆನ್ನಾಗಿದೆ.

      • ವಿವರಣೆಯ ಅಗತ್ಯವಿಲ್ಲದೆ ಪದ್ಯವನ್ನು ತಕ್ಷಣ ಬರೆಯಲಾಗಲಿಲ್ಲವಲ್ಲಾ ಎಂಬ ಖೇದಕ್ಕೆ ನಿಮ್ಮ ಮೆಚ್ಚೊಂದು ಸಾಂತ್ವನ, ಧನ್ಯವಾದಗಳು.

        • ವಿವರಣನಿರಪೇಕ್ಷಂ ತಾವಕೀನಂ ಕವಿತ್ವಂ
          ಕವಿವರ! ಜನವೇದ್ಯಂ ಪಂಚತಂತ್ರೀಯಗಾಥಾ-
          ಪ್ರಭವಮಿದು ಮನೋಜ್ಞಂ ಕಂದಕುಕ್ಷಿಪ್ರತಿಷ್ಠಂ
          ಸವಿಯೆನಿಸದೆ?ಕೃಷ್ಣಾಸ್ಯಸ್ಥವಿಶ್ವೋಪಮಾನಂ ||

  30. ಇರುವೆಯು ಬೀಳಿಸಿ ಪೋಗಿಹ,
    ವರವೇ ದೊರೆತಂತೆ ಸಿಕ್ಕ, ಶರ್ಕರೆಯಂ ತಾಂ |
    ಭರದಿಂ ಮಧುಮೇಹಿ-ಭಯಂ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    • ಸುಧೀರ್ ಸರ್, ನಿಮ್ಮ ಹಾಸ್ಯಪ್ರಜ್ಞೆ ಅತ್ಯುತ್ತಮವಾದುದು, ಮಧುಮೇಹಿಭಯಂಕರಿ ಎಂತಹ ಅದ್ಭುತ ವಿಶೇಷಣ ಸಕ್ಕರೆಗೆ 🙂

      • ಪ್ರಿಯ ಸೋಮ, (ಗಣೇಶರು ಚಾಲ್ತಿಗೆ ತಂದ ಸಂಭೋಧನಾ ಶೈಲಿ 🙂 )
        Thank you.
        ಈ ಕಥೆ ಕೇಳಿದರೆ ನೀವು ಇನ್ನೂ ಸಂತೋಷ ಪಡಬಹುದು.
        ಒಂದು ಅವಧಾನದಲ್ಲಿ ಗಣೇಶರು ಒಂದು ಪ್ರಸಿದ್ಧ ಸಮಸ್ಯೆಯನ್ನು ಬಿಡಿಸುತ್ತಿದ್ದರು.
        ಕೇಸರೀಭಾತ್ ಪಲಾಯತೇ ಎಂದು ಸಮಸ್ಯೆ. ಕೇಸರೀ = ಸಿಂಹವು ಇಭಾತ್ = ಆನೆಯನ್ನು ಕಂಡು ಪಲಾಯತೇ = ಓಡಿಹೋಗುವುದು.
        ಸಮಸ್ಯೆಯನ್ನು ಬಿಡಿಸಿದ ಮೇಲೆ, ನಮ್ಮ ಗಣೇಶರಲ್ಲವೇ? ಯಥಾಪ್ರಕಾರ ಇನ್ನೊಂದು ರೀತಿಯಲ್ಲಿ ಬಿಡಿಸುವೆ. ಕೇಸರೀಭಾತ್ ಎನ್ನುವ ತಿಂಡಿ ಎಂದೇ ಇಟ್ಟುಕೊಂಡು ಪದ್ಯ ರಚಿಸುವೆ ಎಂದು ತಾವೇ ಸವಾಲು ಹಾಕಿಕೊಂಡರು. ಪದ್ಯ ನೆನಪಿಲ್ಲ. ಆದರೆ ಪಲ = ಮಾಂಸ. ಪಲಾಯತೇ = ಮಾಂಸದಂತೆ ಆಗುತ್ತದೆ ಎಂದು ಇಟ್ಟುಕೊಂಡು ಮಧುಮೇಹ ಇರುವ ಮಡಿ ಆಚಾರವಂತನಿಗೆ ಕೇಸರೀಭಾತ್ ಪಲಾಯತೇ ಎಂದು ಪರಿಹರಿಸಿದ್ದರು!

        • ಅತ್ಯುತ್ತಮವಾದ ಗಣೇಶರ ಅವಧಾನಪದ್ಯದ ನೆನಪನ್ನು ಬೇರೆ ಪದಗಳಲ್ಲಿ ಸಧ್ಯದ ಸಮಸ್ಯೆಯ ಕೀಲಕವಾಗಿ ಮೂಗಿಲಿಯೊಡನೆ ಹೊಂದಿಸಿದ್ದೀರಿ, full marks to you Sir 🙂

        • ಹತ್ತಾರು ವರ್ಷಗಳ ಹಿಂದೆ ಎಂದೋ ಹೇಳಿ ಮರೆತ ಪದ್ಯವನ್ನು ನೆನಪಿಸಿದ ಸುಧೀರರಿಗೆ ಧನ್ಯವಾದ.
          “ನ ಹಿ ಕೃತಮಿಹ ಕಾವ್ಯಂ ಸಾಧವೋ ವಿಸ್ಮರಂತಿ!”

          ಮಲ್ಲೇಶ್ವರದ ಗಾಂಧಿಸಾಹಿತ್ಯಸಂಘದಲ್ಲಿ ಅವಧಾನಿಸಿದಾಗ ವೈಯಾಕರಣ-ಗಣಿತಜ್ಞ ಕೀ.ಶೇ.ಗರ್ಗೇಶ್ವರಿ ವೆಂಕಟಸುಬ್ಬಯ್ಯನವರು ಸಭಾಮುಖವಾಗಿ ಒಡ್ದಿದ ಸಮಸ್ಯೆಗೆ ನೀಡಿದ್ದ ಪರಿಹಾರರೂಪದ ಆ ಪದ್ಯ ಹೀಗಿದ್ದಂತೆ ನೆನಪು:

          ಮಧುಮೇಹಮಹಾವ್ಯಾಧಿಪೀಡಿತಾಯ ದ್ವಿಜನ್ಮನೇ |
          ಪರ್ವೋತ್ಸವೇಷು ಸರ್ವೇಷು ಕೇಸರೀಭಾತ್ ಪಲಾಯತೇ||

        • ಪ್ರಿಯ ಸುಧೀರ್, ಇದೀಗ ಆ ಕಸದಿಂದ (ಹಳತೆಲ್ಲ ಕಸವೇ ತಾನೆ:-) ಸದ್ಯದ ಸಮಸ್ಯಾಪೂರಣರೂಪದ ರಸವನ್ನು ತೆಗೆದಿದ್ದೀರಿ. ಧನ್ಯವಾದ

        • ಎಷ್ಟೊರಸ ಸಮಯದ ಸ್ಪೂರ್ತಿ ಕೀರ್ತಿಯ ಬೆಳಕ
          ನಷ್ಟವಾಗದೆ ಹಿಡಿದು ದಾಖಲಿಪ ಜುಲುಮೆ(ಬಲುಮೆ)
          ಇಷ್ಟವಾಯ್ತೈ ಸುಧೀರರೆ ಮೌಲ್ಯವಿದಕುಂಟು
          ಮೃಷ್ಟಾನ್ನ ವಿದುನಮಗೆ ಲೇನಾ ಸಲಾಮ್

  31. ನೆರೆ ಪೆಣ್ ಸುಂಡಿಲಿ ಮನಸೆಳೆ
    ದಿರೆ ತಾನುಂ ಕರ್ಪು ಬಣ್ಣವಂಬಡೆ ಬೆಳ್ಪುಂ
    ದುರ ಮಸಿಲೇಪಿಸಿ ಕೊಳಲಡ
    ಕರಿಯಂಕೊಂಡೊಯ್ದುದಲ್ತೆ ಮೂಗಿಲಿಬಿಲದೊಳ್

    ಬೆಳ್ಪುಂದುರ : ಬಿಳಿ ಇಲಿ
    ಅಡಕರಿ: ಇದ್ದಿಲು

    • Beautiful!

    • Wow…ಕಂಡು ಕೇಳಿರದ ಇಲಿಗಳ love story ಯನ್ನು ಹೇಳುವುದಲ್ಲದೇ ಕರಿ-ಬಿಳಿ ಎಂಬ variety ಯನ್ನೂ ತಂದ ತಮಗೆ ಪದ್ಯಪಾನಕ್ಕೆ ಸ್ವಾಗತ.
      ತಮ್ಮ ಪರಿಚಯವಾಗಲಿ. ಒಟ್ಟಿನಲ್ಲಿ ಕದ್ದುಮುಚ್ಚಿ Love ಮಾಡೋದೂ ಅಂದ್ರೆ ಇಲಿಗಳಲ್ಲೂ ಮುಖ ಕಪ್ಪು ಮಾಡಿಕೊಳ್ಳುವುದು(मू काला कर्ना) ಎಂದಿದೆ ಅ೦ದಹಾಗಾಯ್ತು 🙂

    • Not to take away anything from a beautiful and nicely worded solution. But it looks like Beldundura and moogili are both nouns (kannada pandits can confirm). If you substitute beldundura with an adjective, it will be an even better solution.

      • ಹೌದು ನೀವ್ ಹೇಳಿದ್ದು ಸರಿಯಾಗಿದೆ.. ಮೂಗಿಲಿ ಮತ್ತು ಬಿಳಿ ಇಲಿ ಇವೆರಡೂ ಸ್ನೇಹಿತರು. ಮಸಿ ಹಚ್ಚಿಸಿ ಕೊಳ್ಳೋಕೆ ಬಿಳಿ ಇಲಿ ತನ್ನ ಸ್ನೇಹಿತ ಮೂಗಿಲಿ ಬಿಲದೊಳಗೆ ಹೋಯ್ತು.. ಅಂತ ಅರ್ಥೈಸಿದ್ರೆ ಸರಿ ಹೋಗ್ ಬಹುದು.

    • (ಅಡುಕರಿ : ಇದ್ದಿಲು) : typo
      thanks

      • ಹೃದಯರಾಮರಿಗೆ ಹಾರ್ದಿಕಸ್ವಾಗತ. ಒಳ್ಳೆಯ ಸ್ವೋಪಜ್ಞಪೂರಣದಮೂಲಕವೇ ನಿಮ್ಮ ಪದಾರ್ಪಣೆಯಾಗಿದೆ; ತುಂಬ ಸಂತೋಷ. ಆದರೆ ಬೆಳ್ಪುಂದುರ ಎಂಬಲ್ಲಿ ಅರಿಸಮಾಸವಾಯಿತಲ್ಲ!

    • ಕೀಲಕ ಹೊಂದಿಸಿರುವುದು ತುಂಬ ಚೆನ್ನಾಗಿದೆ.
      ’ಬಣ್ಣವಂಬಡೆ’ ಎಂದರೆ ’ಬಣ್ಣವನ್ನು ಆಗಲು’ ಎಂದಾಗುತ್ತದೆ. ಬಣ್ಣವಂಬ(ಪ)ಡೆಯಲ್ (ಬಣ್ಣವನ್ನು ಹೊಂದಲು) ಎಂದಗಬೇಕು, ಇಲ್ಲವೇ ಬಣ್ಣಂಬಡೆ (ಬಣ್ಣವಾಗೆ) ಎಂದಾಗಬೇಕು.
      I beg to disagree with Sudhir. The white mouse wants to become black. There is no warrant to make an adjective of either the black one or the white one.

  32. ಚಿರಜೀವಿಯ ಪಿಡಿತದೊಳಿಂ
    ಸರಪರಮೆನುತಿರ್ದ ಮತ್ಸ್ಯಮಿಳೆಗಂ ಜಾರಲ್
    ವರಮಿದೆನಗೆನುತೆ ದುರ್ನಲ-
    ಕರಿಯಂಕೊಂಡೊಯ್ದುದಲ್ತೆ ಮೂಗಿಲಿಬಿಲದೊಳ್

    ಚಿರಜೀವಿ = ಕಾಗೆ
    ವರಮಿದೆನಗೆನುತೆ = ವರಮಿದೆ ಎನಗೆ ಎನುತೆ
    ದುರ್ನಲಕರಿ = ಕೆಟ್ಟವಾಸನೆಯ (ಮೀನು)

  33. ಗುರುಗುಟ್ಟಿರ್ದರಿಯಿಂ ತಾಂ
    ಕೊರಳಂ ಕಾಪಾಡಿಕೊಂಬುವುದೆ ಕಷ್ಟಕರಂ
    ಮರಿಯೂಟವ, ತಪ್ಪಿಸಿ ಭೀ –
    ಕರಿಯಂ, ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    [ಗುರುಗುಟ್ಟುವ ಭೀಕರಿ = ಬೆಕ್ಕು]

    • ರಾಮ್, ಸೋಮ,
      ಇನ್ನೂ ಇವತ್ತು ಮಂಗಳವಾರ. ವಾರಾಂತ್ಯದೊಳಗೆ ಅದಿನ್ನೆಷ್ಟು ತರಹದ ಸಾರುಗಳು (curry) ನಮ್ಮ ತಟ್ಟೆಗೆ ಬೀಳುತ್ತವೆಯೋ ನೋಡಬೇಕು!

      • ರಾಮ-ಸೋಮರ ಪೂರಣಗಳು ರಾಮ-ಫಲ್ಗುನರ ಬಾಣಗಳಂತೆ ಪುಂಖಾನುಪುಂಖವಾಗಿ ಹೊಮ್ಮಿ ಹೃದಯವನ್ನೇ ಭೇದಿಸಿವೆಯಾದರೂ ರಸಿಕರಿಗೆ ನೋವಿಲ್ಲ; ನಲವೇ ಎಲ್ಲ!!!

      • ಪ್ರಸಾದು, ಬರಿ ರಾಮ್ ಮತ್ತು ನನ್ನ ಪ್ರಸ್ತಾಪವೇಕೆ?

        ಶ್ರೀಕಾಂತಮೌಳಿಯುಷೆ ರಾಗರು ನೀಂ ಪ್ರಸಾದುs
        ಲೇಸಿಂ ಸುಧೀರರಿನೆ ಭೋ! ಎನೆ ಪದ್ಯಧಾರಾ-
        ಸ್ನಿಗ್ಧರ್ ದ್ವಿರೇಫರಸಿಕರ್ ಬಹವರ್ಕಳಲ್ತೇ
        ಆನುಂ ರಸೇಪ್ಸು ಗಡ ತಾಣದ ಪೂಗಳಿಂಗೆ 🙂

        ಮತ್ತೆ ಹಾಸ್ಯದ ಪದ್ಯವಾದುದ್ದರಿಂದ ಆದಿಪ್ರಾಸವನ್ನು ಪಾಲಿಸಿಲ್ಲ, ಕ್ಷಮಿಸಿರಿ

  34. ಬರಿಗೈಯಿಂ ಕೊಂದೇನಾ
    ಹರಿಯಂ ನೀಂ ಬೆದರಿ ಪೋಪಯಸುಟೇಯೆಂದು-
    -ತ್ತರಗೆಂದಳ್ನೀರೆ ದಿಟಂ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್!

    ಉತ್ತರಕುಮಾರನ ಸ್ವಪ್ರಶಂಸೆಗೆ ಅದನ್ನು ಕೇಳುತ್ತಿದ ಹೆಣ್ಣಿನ ಪ್ರತಿಕ್ರಿಯೆ.

    ಗಣೇಶರೆ- ಇದು ಯಾವ ಅಲಂಕಾರ? ಕುವಲಯಾನಂದವನ್ನು ಪರಿಶೀಲಿಸಿದೆ. ನನಗೆ ಇತ್ಯರ್ಥವಾಗಲಿಲ್ಲ

    • ಪೋಪಯಸುಟೇ = ಪೋಪೆ ಅಷ್ಟೇ?
      ಮೇಲೆ ಸಂಖ್ಯೆ 10ರಲ್ಲಿ ರಾಮಚಂದ್ರ ನನಗೆ ಹೇಳಿದ ಮಾತು ಇಲ್ಲಿಯೂ ಅನ್ವಯವಾಗುತ್ತದೆ. ’ದಿಟಂ’ ಎಂಬ ಲೇವಡಿಶಬ್ದವನ್ನು ಕೀಲಕರೂಪವಾಗಿಸಿಕೊಂಡರೆ, ಅದಕ್ಕೆ ಮುನ್ನ ಏsssನನ್ನೂ ಹೇಳಬಹುದು. ಈ ಅಲಂಕಾರದ ಹೆಸರೇನೆಂದು ತಿಳಿಯುವ ಕುತೂಹಲ ನನಗೂ ಇದೆ, ಏಕೆಂದರೆ ಇದರಲ್ಲಿ ಸುಲಭವಾಗಿ ಮಹತ್ಸಾಧನೆಯನ್ನು ಮೆರೆಯಬಹುದಾಗಿದೆ 🙂
      ಮೂರ್ತಿಗಳೆ, ಅನ್ಯಥಾ ಭಾವಿಸಬೇಡಿ. ಅಭಿಜಾತ ಪರಿಹಾರವಂತೂ ಚೆನ್ನಾಗಿದೆ.

    • ಪೂರಣ ಸೊಗಸಾಗಿದೆ. ನನಗೂ ಈ ದಾರಿಯಲ್ಲಿ ಪೂರಯ್ಸಬೇಕೆಂಬ ಹಂಬಲವಿತ್ತು; ಇದೆ ಕೂಡ. ಇದು ದೃಷ್ಟಾಂತಾಲಂಕಾರ. ಸಮಸ್ಯೆಯ ಸಾಲು ಸುಪ್ರಸಿದ್ಧವೇ ಹೌದೆಂದಲ್ಲಿ ಲೋಕೋಕ್ತ್ಯಲಂಕಾರವೂ ಆದೀತು:-)

    • Dear Shrikaanth – Very nice solution. Like Sudheer said above somewhere – I wish I had thought about this type of pUraNa.

      • Dear ramachandra
        You come up with some very nice and unique solutions- I came up up with what was left behind 🙂

  35. ಹರಿಯಂ ಕಂಡವಸರದಿಂ
    ಮರಿಯಂ ಪೊರಗಟ್ಟಿ ಜಿಗಿದು ಮಮತೆಯ ಪರಿವಿಂ
    ಪರಿಯುತೆ ತನ್ನಂ ತಿನ್ನಲ್-
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    ಹರಿ- ಹಾವು

    • ಪ್ರಾಣಿಯಲ್ಲೂ ಪ್ರೊಜೆನಿ ಬಗೆಗಿನ ಮಮಕಾರವನ್ನು ಚೆನ್ನಾಗಿ ಬಿಂಬಿಸಿದ್ದೀರಿ.
      ಪರಿವಿಂ = ’ಪರಿವೆಯಿಂ’ ಎಂತಲೆ? ಅಥವಾ ’ಹರಿವಿನಿಂ’ ಎಂತಲೆ?

    • ಪದ್ಯದ ತಾತ್ಪರ್ಯವೂ ಪೂರಣದ ವಿನೂತನೆಯೂ ವಿಶೇಷವಾಗಿವೆ. ಆದರೆ ಅನ್ವಯ ಮಾತ್ರ ಸ್ಫುಟವಾಗಿ ತಿಳಿಯುತ್ತಿಲ್ಲ. ದಯಮಾಡಿ ಪಾದತ್ರಯಕ್ಕೂ ಸಮಸ್ಯಾಪಾದಕ್ಕೂ ಅನ್ವಯವು ಹೇಗೆಂದು ತಿಳಿಸುವಿರಾ?

    • ಪ್ರಸಾದು, ಗಣೇಶರೆ- ಧನ್ಯವಾದಗಳು.

      ಪ್ರಸಾದು- ಪೋಪಯ್+ ಅಸುಟೇ- ಪೋಪಯಸುಟೇ. ಅಸುಟು ಅನ್ನೋದೆ ಅಷ್ಟು ಆಗಿರೋದು.

      ಪರಿವಿಂ- ಹರಿವಿನಿಂದ

      ಗಣೇಶರೆ- ಹಾವ ಗಮನವನ್ನು ಮರಿಯಕಡೆಯಿಂದ ತಪ್ಪಿಸಿ ತನ್ನಕಡೇಗಾಕರ್ಷಿಸಿ ತನ್ನನ್ನೇ ಅದು ತಿನ್ನಲಿ( ಮರಿ ಬದುಕಲಿ) ಎನ್ನುವ ಉದ್ದೇಶದಿಂದ ಜಿಗಿದು ಮುಂಬರಿದು, ಆ ಹಿಂಬಾಲಿಸುವ ಶತ್ರುವನ್ನು ಬಿಲದೊಳಗೆ ಮೂಗಿಲಿ ಹೋಯಿತು ಅಂತ ತಾತ್ಪರ್ಯ.

    • ಬಹಳ ವಿನೂತನ ಪರಿಹಾರ. ಸೊಗಸಾಗಿದೆ 🙂

  36. Jerry takes a lute (ಕರ್ಕರಿ) into its burrow to dodge Tom by popping up in random holes of the lute when chased by the latter. (In the cartoon we have seen Tom making merry inside Jerry’s abode!)
    ಪಿರುಕಣೆ ತಾನೇ ಟಾಮಿಗೆ
    ತರಿಸಲ್ಕೀ ರಂಧ್ರದೊಳ್ಗೆ ಮೇಣೊಂದರೊಳಂ|
    ಹರಿದಾಡುತಲಾಡಲು ಕ-
    ರ್ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ (ಜೆರ್ರಿ) ಬಿಲದೊಳ್||

    • ahaa! 🙂

    • ಪ್ರಸಾದು – ಒಳ್ಳೆಯ ಪದಗಳನ್ನು (ಪಿರುಕಣೆ, ಕರ್ಕರಿ) ಬಳಸಿ ಒಳ್ಲೆಯ ಪದ್ಯ ರಚಿಸಿದ್ದೀರಿ.
      ಕೇವಲ್ಲ ಒಂದು ಸಣ್ಣ ವಿಷಯ. ಒಂದೇ ವಾಕ್ಯದಲ್ಲಿ, ಜೆರ್ರಿ ಮತ್ತು ಮೂಗಿಲಿ ಎರಡೂ ಬಂದಿವೆ. ಸಮಸ್ಯೆಯ ಮೂಗಿಲಿ ಇರಲೇಬೇಕಾದ್ದರಿಂದ, ಜೆರ್ರಿಯನ್ನು ತೆಗೆಯಬಹುದೆನಿಸುತ್ತದೆ.

    • When others make such mistakes, I will readily point it out (like you have done now ;)) But it doesn’t strike me when I commit such bloomers myself! Have rectified in the original. Thanks Ram.

  37. “ಕರಿ”ಮೇಲಿಲಿಯುಂ ಸರ್ರನೆ
    ಸರಿದುಂ “ಬಲ”ದೊಳದನೊತ್ತಿ ಕತ್ತರಿಸದನುಂ
    ತೆರೆದುಂ “ಬಿಲ”ವಂ, ಮೆತ್ತಿಂ
    “ಕರಿ”ಯಂ ಕೊಂಡೊಯ್ದುದಲ್ತೆ ಮೂಗಿಲಿ “ಬಿಲ”ದೊಳ್ ।।

    ( “ಕರಿ” (file)ಮೇಲೆ, “ಇಲಿ”(mouse) moveವಾಗಿ – right click ಮಾಡಿ – cut ಮಾಡಿ, “ಬಿಲ”(folder) openಮಾಡಿ – “ಕರಿ”ನ pasteಮಾಡಿತು : ಹೀಗೆ “computer” ಪರದೆ ಮೇಲೆ – “ಕರಿ”ಯಂ ಕೊಂಡೊಯ್ದುದಲ್ತೆ ಮೂಗಿಲಿ “ಬಿಲ”ದೊಳ್ !! )

    • ಚೆನ್ನಾಗಿದೆ. ಮೆತ್ತಿಂ ಬದಲು ಮೆತ್ತಲ್ ಎಂದರೆ ಸರಿಯಾಗುತ್ತದೆ.

  38. ನರಿಯಂ ಪುರಿದುಂ ಹರಿಯಂ
    ಪರಿದುಂ ಖೇಚರಿಯನಟ್ಟು ಭುಜಿಪ ಗ್ರಫೆಲೋ
    ಮರಿಯನಡಲ್ ಲವಣದ ಶೀ-
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    ಲವಣದ ಶೀಕರಿ- ಉಪ್ಪನ್ನು ಉದುರಿಸುವ ಸಾಧನ, salt sprinkler

    ಪ್ರಸಿದ್ಧ ಮಕ್ಕಳ ಕಥೆಗಳಾದ ಗ್ರಫೆಲೋ (Gruffalo) ಮತ್ತು ಗ್ರಫೆಲೋಸ್ ಚೈಳ್ಡ್ (Gruffalo’s child) ಇವುಗಳ ಸ್ಫೂರ್ತಿಯಿಂದ ಎಸಗಿದ ಪೂರಣ

  39. ಕರಿಯಂ ಕೊಂಡ ಕೊಯಿಲ್ ಶ-
    ಕ್ಕರಿಯಂ ಕೊಂಡೊಕ್ಕಲಹುದೆ ಕರೆತಂದಾ ದಿ-
    ಕ್ಕರಿಯಂ ಕೊಂಡು ತುಳಿಸಲೊ-
    ಕ್ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    ಶಕ್ಕರಿ- ಎತ್ತು/ಹೋರಿ
    ಒಕ್ಕರಿ- ಒಕ್ಕ+ಅರಿ= ಹರವಿದ ತೆನೆಯ ಗುಡ್ಡೆ

    ಆನೆಯನ್ನೆ ತನ್ನೊಳಗೆ ಅಡಗಿಸುವಂತಹ ಕುಯ್ಲನು ಎತ್ತುಗಳಿಂದ ಒಕ್ಕಿಸಲಾದೀತೆ? ಆ ಕೆಲಸಕ್ಕೆ ದಿಗ್ಗಜಗಳನ್ನು ತಂದು ಅವುಗಳಿಂದ ಮಾಡಿಸಲೋಸುಗ ತೆನೆಯನ್ನು ಗುಡ್ಡೆ ಮಾಡಿ ರಾಶಿ ಹಾಕಿರಲು, ಮೂಗಿಲಿ ಅದನ್ನು ತನ್ನ ಬಿಲಕ್ಕೆ ಕೊಂಡೊಯ್ಯಿತು.

  40. ಮೆರೆದಿರೆ ವಿಹಾರದೊಳ್ ಮೇಣ್
    ಪರಿಯಲ್ ಶೃಂಗಾರ ಭಾವ, ಮುದದಿ ಗೆಳತಿಯಂ,
    ಸರಸರ ದಾಟುತೆ ಬನಶಂ –
    ಕರಿಯಂ, ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    [ಮೂಗಿಲಿಯ ಬಿಲಕ್ಕೆ ಬನಶಂಕರಿಯನ್ನು ದಾಟಿ ಹೋಗಬೇಕಿತ್ತು :-)]

    • ಇರಲೇಕೈ ಗೆಳತಿಯ ಮನೆ ಬನಶಂ
      ಕರಿಯೊಳು, ಹತ್ತಿರ ಪೋಪಾಗಳ್|
      ಬರುವಾಗಲ್ತೆಲದರಿವಪ್ಪುದು ದು
      ಷ್ಕರವೆಂಬುದದೇ ದಾರಿಯು ತಾಂ||

    • good!

  41. ಮೇಲಿನ ಪೂರಣಗಳನ್ನು ಓದಿದ ನಂತರ ಬಹಳ ಸಂತೋಷವಾಯಿತು… ಇದೋ ನನ್ನ ಅಂಬೆಗಾಲಿಡುತಿರುವ ಕಂದ…

    ನೆರೆಬಿಲದಿಲಿಗಳು ರೋದಿಸೆ
    ಮೊರೆಯಂ ಪೊಕ್ಕಲು ಗಜೇಂದ್ರನಾರ್ಭಟದಿಂದಂ
    ಸೆರೆಯಂ ಪಿಡಿದಿರೆ ಕನಸೊಳ್
    ಕರಿಯ೦ ಕೊ೦ಡೊಯ್ದುದಲ್ತೆ ಮೂಗಿಲಿ ಬಿಲದೊಳ್

  42. ಮರೆಮಾಡುತಲೆಲ್ಲವನುಂ
    ಸೆರೆಪಿಡಿಯಲ್ತನ್ನಮಾಯೆಯಿಂಪ್ರೇಕ್ಷಕರಂ
    ಕರದಿಂ ಪುಟ್ಟಿಸೆ ಮಾಯದ
    ಕರಿಯಂ ಕೊ೦ಡೊಯ್ದುದಲ್ತೆ ಮೂಗಿಲಿ ಬಿಲದೊಳ್

  43. ಸುರಿಯಲ್ ಮೂಟೆಯ ಸಿಹಿಯಂ
    ತೆರೆದಾ ಬಾಗಿಲಿನೊಳಿಂದ ಸದ್ದಿಲ್ಲದೆತಾ
    ಭರದಿಂ ಸಕ್ಕರೆಯಚ್ಚಿನ
    ಕರಿಯಂ ಕೊ೦ಡೊಯ್ದುದಲ್ತೆ ಮೂಗಿಲಿ ಬಿಲದೊಳ್

  44. ಕರಿಗಂಭೀರಂ ತಾನೆಂ-
    ದುರುಭಾಷಣಗೆಯ್ವನಂ ಮಡದಿ ಮುಳಿದೊಯ್ಯಲ್ |
    ನೆರೆದಿರ್ದರ್ ಚಾಳಿಸಿದರ್
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

  45. ಕರಿದಾ ತೀನಿಯ ಪರಿಮಳ
    ಹರಿಯಲ್ಕಾರಿಗುಮರಿಯದ ಪರಿ ಕಳ್ತಲೆಯೊಳ್ |
    ಸರಸರನೈತಂದೊಡೆಯಂ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    ಕರಿಯಂ ಮೂಗಿಲಿ = ಕಪ್ಪುಬಣ್ಣದ ಮೂಗಿಲಿ |
    ವಿಶೇಷಣದ ವೈಯರ್ಥ್ಯಾಪತ್ತಿಯನ್ನು ಪರಿಹರಿಸಲು ಕತ್ತಲೆಯಲ್ಲಿ, ಯಾರಿಗೂ ಅರಿಯದ ತೆರದಲ್ಲಿ ಕೊಂಡೊಯ್ದಿತು ಎಂಬ ಕಲ್ಪನೆ.

  46. ಕರುಷಕ ಹರ್ಷದೆ ಕುಡಲಿಂ
    ತರಿದೊಟ್ಟಿರೆಶಾಳಿವನವ ಪಲಜನ ನೆಱವೊಳ್
    ಹೊರಲಾರದುಳಿದಿರಲ್ಮಿ
    ಕ್ಕರಿಯಂಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    ಕರುಷಕ : ಆರಂಬಕಾರ
    ಕುಡಲ್ : ಪೈರು ಕುಯ್ಯುವ ಸಣ್ಣ ಕತ್ತಿ.
    ಅರಿ : ಕತ್ತರಿಸಿ ಗುಡ್ಡೆ ಮಾಡಿದ ಭತ್ತದ ತೆನೆಯ ರಾಶಿ

    • ಹೃದಯ ರಾಮರೆ, ನಿಮ್ಮ ಎರಡೂ ಪದ್ಯಗಳು ಹಿಡಿಸಿದವು, ನಿಮ್ಮ ಹಳಗನ್ನಡದ ಹಿಡಿತ ನಿಮ್ಮ ಪ್ರಯೋಗಗಳಲ್ಲಿ ಎದ್ದು ತೋರುತ್ತಿದೆ. ಹೀಗೆಯೆ ಉತ್ತಮ ಪದ್ಯಗಳನ್ನು ಕೊಡುವಿರೆಂದು ನಂಬಿದ್ದೇನೆ

      ಎರಡಂಶಗಳು,
      1. ಕರ್ಷಕವನ್ನು ‘ಕರುಷಕ’ವೆನ್ನುವುದು ಹಳಗನ್ನಡದಲ್ಲಿ ಉತ್ತಮ ಬಳಕೆಯಲ್ಲವೆಂದು ತೋರುತ್ತದೆ (ನಡುಗನ್ನಡದಲ್ಲಿ ನಡೆಯುವುದೇನೋ ತಿಳಿಯದು).
      2. ಅಂತೆಯೇ ಪ್ರಥಮಾವಿಭಕ್ತಿಯಲ್ಲಿ ಕರ್ಷಕಂ ಎಂದಾಗುತ್ತದೆ, ನೀವು ಶಕ್ತರಾದುದರಿಂದ ವಿಭಕ್ತಿಪಲ್ಲಟದಿಂದಾಗುವ ದೋಷಗಳನ್ನು ಯಶಸ್ವಿಯಾಗಿ ನಿಭಾಯಿಸುವಿರೆಂಬ ವಿಶ್ವಾಸದಿಂದ ಹೇಳುತ್ತಿದ್ದೇನೆ 🙂

  47. ಮೆರೆಯುತ ವಾಪಸ್ 🙂 ಬಂದವ
    ಕರದೊಳ್ ಪಿಡಿಯಬಹುದಾದ ಮೃಗಗಳ ತೋರಲ್ |
    ಹರುಷದಿ ಗಲಿವರನಯ್ಯೋ!
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ |

    Based on Gulliver’s travels.
    This Kanda doesn’t sound right to me. Can someone point out the mistake if any?

    • ಸುಧೀರ್
      ಚೆನ್ನಾಗಿದೆ. ಕಂದನಿಗೆ ಯಾವ ವಿಕಲ್ಪವೂ ಒದಗಿಲ್ಲ. ಆದರೆ, ಅರ್ಥದ ಹರಿವಿನಲ್ಲಿ ಸ್ವಲ್ಪ ಸ್ಪಷ್ಟವಾದರೆ ಚೆನ್ನಾಗಿರುತ್ತೆ. ಈಗಿರುವಹಾಗೆ, ಹರುಷದಿ ಅನ್ನೋದು ಸ್ವಲ್ಪ ಅರ್ಥ ಸಂದಿಗ್ಧತೆಯನ್ನು ತಂದಹಾಗೆ ನನಗೆ ಅನ್ಸುತ್ತೆ. ಕೊಂಡುಹೋಗಿದ್ದು ಹರ್ಷಕರ ಎನ್ನುವಂತೆ. ಇದನ್ನ ಹೀಗೆ ಮಾಡಬಹುದೇನೊ

      ಮೆರೆಯುತ ವಾಪಸ್ 🙂 ಬಂದವ
      ಕರದೊಳ್ ಪಿಡಿಯಬಹುದಾದ ಮೃಗಗಳ ಗಲಿವರ್ |
      ಹರುಷದಿ ತೋರಿರಲಯ್ಯೋ!
      ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ |

    • No mistakes really. I feel ಪಿಡಿಯಬಹುದಾದ is very ಹೊಸಹೊಸಕನ್ನಡ. Here is my (unwarranted) rephrasing:

      ಮೆರೆದುಂ ಮರಳುತೆ ಗಲಿವರ್
      ಹರುಷದಿ ಮುಷ್ಟಿಯೊಳು ತೋರೆ ಲಿಲಿಪುಟ್ ಮಿಗವಂ|
      ನರಕಕ್ಕೆನ್ನುವವೋಲಾ
      ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್||

  48. ಮರುಳಂ ಮಾಡುತೆ ತಾ ಛೋ –
    ಕರಿಯಂ, ಮೀಂಟಿತ್ತದೆಷ್ಟೊ ಹಾಸ್ಯರಸಾಲಂ
    ಭರದಿಂ ಮಾಡುತೆ ಬಲ್ಮಸ್ –
    ಕರಿಯಂ, ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    [ಮಸ್ಕರಿ = Marathi word meaning Joking and Jesting, buffoonery, etc]
    [Sudheer – sorry about forging your signature :-)]

    • 🙂 No copyrights to my signature. It is like most women’s signature. (They just write their name) and that can be copied by anyone.

      • Interestingly, the full name signatures are the most difficult to forge.- any minor change will also be too obvious. Not so with many a scrawl that passess off for a signature!

        • ಹೌದು ಶ್ರೀಕಾಂತ್ ಸರ್, ನೀವು ಹೇಳಿದ್ದು ಸರಿ.ಸಾಮಾನ್ಯವಾಗಿ “ನಾಮಾಕ್ಷರ”ವೇ ಹಸ್ತಾಕ್ಷರ ಅಲ್ಲವೇ?
          (ನಾನು ಚಿಕ್ಕವಳಿದ್ದಾಗ, “ಸಹಿ”ಗಳನ್ನ ನೋಡಿ spelling ಗೊತ್ತಾಗದೆ ಹಾಗೆ ಗೀಚುತ್ತಾರೇನೋ ಅಂದುಕೊಂಡಿದ್ದೆ !!)

  49. ತರಮಲ್ತು ಪ್ರಾಚೀರಂ
    ಸ್ಥಿರಮಿರ್ದಪುದೇಂ ನಿವೇಶನಂ ತಂತ್ರಜ್ಞಾ
    ಕೊರೆಯುತೆ ಡೊಗರಂ ಗಡ ಮದ-
    ಕರಿಯಂ ಕೊಂಡೊಯ್ವುದಲ್ತೆ ಮೂಗಿಲಿ ಬಿಲದೊಳ್

    ಪ್ರಾಚೀರಂ – wall
    ಮದಕರಿಯಂ – ಅಭಿಮಾನವೆಂಬ ಆನೆ

    ಒಬ್ಬ ಮನೆ ಕಟ್ಟಿಸುವವನು Engineerಗೆ “ಮನೆ ಕಟ್ಟುವಲ್ಲಿ ಕಳಪೆ ಕೆಲಸ ಮಾಡಿದ್ದೀಯ, ನೀ ಕಟ್ಟಿದ ನಿವೇಶನದಲ್ಲಿ ಮೂಗಿಲಿಯು ದೊಗರನ್ನು ಕೊರೆದು ನನ್ನ ಅಭಿಮಾನವೆಂಬ ಆನೆಯನ್ನು ಕೊಂಡೊಯ್ಯುತ್ತದೆ ಅಲ್ಲವೇ” ಎಂದು ಹಂಗಿಸುತ್ತಿದ್ದಾನೆ

  50. ಬರೆ ಹಿಂಬಾಲಿಸಿ ವಾಲಿ, ಬೆ-
    ದರುತುಂ ದುಂದುಭಿ ಸುರಾರಿ ಸಾರುತ ಗವಿಯಂ ||
    ಹರಿಭೂಪನನುಂ ಕರೆದಂ |
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    ಸುರಾರಿ = ಅಸುರ.
    ಹರಿಭೂಪ = ವಾನರರಾಜ್ಯದರಸು = ವಾಲಿ.

  51. ತಿರುಕಂ ಭಿಕ್ಕೆಯ ಧಾನ್ಯದ
    ಸಿರಿಯಂ ಕಾಣುತಲಿರಲ್ಕದುರುಳಲ್ ನೆಲಕಂ
    ತ್ವರೆಯಿಂ ಗಡ ದಗ್ಧಕೃಪಾ-
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    ದಗ್ಧಕೃಪಾಕರಿಯಂ – ತಪ್ತರಿಗೆ ಕೃಪೆಯನ್ನು ಮಾಡುವುದನ್ನು (ಭಿಕ್ಕೆಯ ಧಾನ್ಯವನ್ನು)

  52. ಭರದಿಂ ಸಾಗಿರೆ ಬಂಡಿಂ
    ಕರಿಯಂ ಪೋಲ್ವಂತ ಗಿರಿಯೊಡನೆತಾನಾಗಲ್
    ಸರಿಯಲ್ ಸುರಂಗದೊಳಗದೊ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    ರೈಲು ಪ್ರಯಾಣda ಸಮಯದಲ್ಲಿ : “ಆನೆ”ಯಂತೆ ಕಾಣುತ್ತಿರುವ ಬೆಟ್ಟದ ಪಕ್ಕದಲ್ಲಿ, ಓಡುತ್ತಿರುವ ರೈಲುಬಂಡಿ, ಸುರಂಗದೊಳಗೆ ನುಗ್ಗಲು – ಬೆಟ್ಟವು ಮಾಯವಾಗಲು – ಪಕ್ಕದಲ್ಲಿ ಬರುತ್ತಿದ್ದ ಬೆಟ್ಟವನ್ನು(ಕರಿಯನ್ನು), ರೈಲುಬಂಡಿ(ಮೂಗಿಲಿ) ಸುರಂಗ(ಬಿಲ)ದೊಳಗೆ ಕೊಂಡೊಯ್ದಂತೆ ಭಾಸವಾದದ್ದು.

  53. ಸೋಮ, ರಾಮ, ಶ್ರೀಕಾಂತ್, ಹೃದಯರಾಮ, ಪೆಜೆತ್ತಾಯ, ಚೀದಿ ( ವಾವ್! ಸಾಲಾಗಿ ಮೂರು ಕಂದ), ಸುಧೀರ್ ಮುಂತಾದವರೆಲ್ಲ ಚೆಲುವಾದ ಪರಿಹಾರಗಳನ್ನೇ ಇತ್ತಿದ್ದಾರೆ. ಪ್ರಸಾದು, ಶ್ರೀಕಾಂತ್ ಮತ್ತು ಸೋಮರಂತೂ ಪೂರಣಗಳೊಡನೆ ಇತರರ ಪದ್ಯಗಳಿಗೂ ಸವರಣೆ ನೀಡಿದ್ದಾರೆ; ಧನ್ಯವಾದಗಳು. ಇದೀಗ ನನ್ನ ಮತ್ತೊಂದು ಪೂರಣ:

    ವರವಿಜ್ಞಾನಿಯು ಕುಂಚಿಸೆ
    ಭರದಿಂ ತನ್ನ ಪ್ರಯೋಗಶಾಲೆಯೊಳಿಭಮಂ |
    ಮರೆಗುಳಿಕಣ್ತಪ್ಪಿಸಿ ತ-
    ತ್ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    “Honey! I shrunk the kids!!” ಚಲನಚಿತ್ರದ ಸ್ಫೂರ್ತಿಯಿಂದ ಈ ಪದ್ಯವು ರೂಪುಗೊಂಡಿದೆ. ಅಲ್ಲಿಯ ಪ್ರಾಧ್ಯಾಪಕನಂತೆಯೇ ಇವನೂ ಮರೆಗುಳಿ. ಇವನ ಕಣ್ತಪ್ಪಿಸಿ ಹ್ರಸ್ವೀಕೃತಗಜವನ್ನು ಇಲಿಯು ಬಿಲಕ್ಕೆ ಸೆಳೆದೊಯ್ದಿದೆ:-)

    ಮತ್ತೊಂದು ಪರಿಹಾರ:

    ಹರ! ಹರ! ತರವೇಂ? ಸಾವ-
    ರ್ಕರರಂ ಕೈತವದಿನಾಂಗ್ಲಶಾಸನಮದಟಿಂ |
    ಸೆರೆವಿಡಿಯುವುದೇಂ ಭಾವ್ಯಂ?
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    ಸ್ವಾತಂತ್ರ್ಯವೀರ ಶ್ರೀ. ಸಾವರ್ಕರ್ ಅವರ ಬಾಳ ಘಟನೆಯನ್ನುಆಧರಿಸಿದ ಪರಿಹಾರವಿದು.

    • Nice pUraNas Ganesh- one contemporary fiction, the other historic fact!

    • ಗಣೇಶ್ ಸರ್, “Honey! I shrunk the kids!!” ಇದೇ ಚಲನಚಿತ್ರದ ಪೂರಣದ ಬಗ್ಗೆ ಯೋಚಿಸುತ್ತಿದ್ದೆ, ಚೆನ್ನಾಗಿದೆ ಸಾವರ್ಕರರ ಮತ್ತು ಚಲನಚಿತ್ರದ ಪೂರಣಗಳು!

    • ಸಾವರ್ಕರರ ಪದ್ಯ ಹೃದಯಂಗಮವಾಗಿದೆ.

    • ವರವಿಜ್ಞಾನಿಯು ಹಿಗ್ಗಿಸೆ
      ಭರದಿಂ ತನ್ನ ಪ್ರಯೋಗಶಾಲೆಯೊಳಿಲಿಯಂ |
      ತಿರುಗುತೆ ಗಡ ಮೃಗಶಾಲೆಯ-
      ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

      🙂

      Based on ‘Honey I Blew Up the Kid’

      • ಸೋಮ – ಹಿಗ್ಗಿಸಲಿಲಿಯಂ, ಹಿಗ್ಗಿತೆ ಬಿಲಮುಂ ? 🙂

        • 😉

        • ರಾಮ್,

          ಇಲಿಯಂ ಹಿಗ್ಗಿಸಿದವಗಂ
          ಬಿಲಮಂ ಹಿಗ್ಗಿಸುವುದೆಂತು ಕಠಿಣಂ? ಐದೇ
          ಕಲಭಂ ಕುಂಚಿತಮಿರ್ದುದ
          ತಿಳಿದೇ ಪೂರಣಮನಿತ್ತೆ ತಪ್ಪೇಂ ಪೇಳೈ?

          ಕಲಭಂ ಕುಂಚಿತಮಿರ್ದುದ – ಗಣೇಶ್ ಸರ್ ಪದ್ಯದಂತೆ ಆನೆ ಆಗಲೇ ಸಣ್ಣದ್ದಾದ್ದರಿಂದ ಹಾಗಾಯಿತು 😉

    • ಧನ್ಯವಾದಗಳು ಗಣೇಶ್ ಸರ್ ,
      ಬ್ರಿಟಿಷರನ್ನು ಮೂಗಿಲಿಗೆ ಹೋಲಿಸಿ, “ಸಾವರ್ಕರ”ರನ್ನು ಕಲಿಯಾಗಿಸಿದ ಪದ್ಯ ಬಹಳ ಇಷ್ಟವಾಯಿತು.

  54. ವರಕವಿ ಶಿಶುಪದ್ಯಂಗಳ-
    ನೊರೆವಂ ವಿಸ್ಮಯವಿಶೇಷಘಟನಾವಳಿಯಿಂ
    ಭರದಿಂ ಜಗ್ಗುತಲದೊರೊಳ್
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

  55. ಕರಮಂ ತೆರುತಾ ಸಖಿಗೆಂ
    ಸೊರಗುತೆ ದುಡಿದು ದಣಿದಿರ್ದನೆಡೆ ದುರ್ದಶೆಗಂ
    ಮರುಕದಿ ಪೇಳ್ದರ್ ಹಾ! ಸಿತ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    [ಸಿತಕರಿ = white elephant = expensive for acquiring and maintenance]

    • 🙂 super Ram

    • ರಾಮ್, ತುಂಬ ಸೊಗಸಾದ ಪೂರಣ!

      ಈ ಪರಿ ಪರ್ಯಾಯಕ್ರಮ-
      ದೀಪೋಜ್ಜ್ವಲಪೂರಣಂಗಳಂ ಪೂರಯಿಸಲ್ |
      ಭಾಪುರೆ! ರಾಮಂಗೇ ಸರಿ!!
      ಕಾಪಿರೆ ಕಲ್ಪನೆಯ ಶಿಲ್ಪರತ್ನದ್ಯುತಿಯುಂ ||

      ಒಂದು ಸವರಣೆ: ಬಿಳಿಕರಿ ಎಂಬುದು ಅರಿಸಮಾಸ:-) ಇದನ್ನು ಸಿತಕರಿ ಎಂದು ಸವರಿಸಬಹುದು.

      • ಧನ್ಯವಾದಗಳು 😀
        ಅರಿಸಮಾಸವನ್ನು ಮೇಲೆಯೇ ಸರಿಮಾಡಿದ್ದೇನೆ

  56. ಕರೆಯಲ್ ಕೂಗಲ್ಕಾರುಂ
    ತಿರುಗುತೆ ನೋಡದಿರೆ ಪಣಿಕನಾ ಸುಳ್ಸೊಲ್ಲಿಂ
    ನೆರೆದರ್ ಮಂದಿಯು ಸುತ್ತಲು
    “ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್”

    ತನ್ನ ಸರಕನ್ನು ಮಾರಲು ವ್ಯಾಪಾರಿಯು ಅಚ್ಚರಿಯ ಸುಳ್ಳೊಂದನ್ನು ಹೇಳಿ ಜನರ ಗಮನವನ್ನು ತನ್ನೆಡೆ ಸೆಳೆದನು

    • Dear SOma, Most of the time you are so prolific and persistent in providing pretty, profound and placid pUraNa-s!! It is least to say that all of us are happy with it. However, along with these of course, Why can’t you attempt something like an independent lyric (khaNDakaavya) and explore beyond the horizons of an external stimulus/challenge?

      This can as well be taken by other such friends of padyapaana too.

      • ಗಣೇಶ್ ಸರ್, ನಿಮ್ಮ ನಲ್ನುಡಿಗಳಿಗೆ ನಾವೆಲ್ಲರೂ ಅಭಾರಿಯಗಿದ್ದೇವೆ, ಖಂಡಿತ ಪ್ರಯತ್ನಿಸುತ್ತೇವೆ 🙂
        ನಿಮ್ಮ ಮಾರ್ಗದರ್ಶನದಿಂದ ಸಾಧ್ಯ, ಏನಾದರು ಯೋಚನೆ ಮಾಡುತ್ತೇನೆ

  57. ಮೆರೆದಿರ್ಪಿಲಿಗಳನಳಿಸ-
    ಲ್ಕಿರಿಸಿರ್ದಾ ಗರಳಗರ್ಭಿವಡೆಯಂ ಸ್ಪೃಹೆಯಿಂ-
    ದರಿಯದೆ ನಿಜದೊಳ್ ದೈವಾ-
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ |

    ದೈವಾಕರಿ = ದಿವಾಕರ(ಸೂರ್ಯ)ನ ಮಗ, ಯಮ ಎಂದರ್ಥ.

    • ಪೆಜತ್ತಾಯರೆ – ಬಹಳ ಚೆನ್ನಗಿದೆ ಪೂರಣ 🙂

    • ಆಹ! ತುಂಬ ಚೆಲುವಾದ ಕಲ್ಪನೆ ಮತ್ತು ಸೊಗಸಾದ ಪದ್ಯಶಿಲ್ಪ. ಮಾತ್ರವಲ್ಲ, ದೈವಾಕರಿ ಎನ್ನುವ ಅದೆಷ್ಟು ಸುಂದರವಾದ ತದ್ಧಿತರೂಪದ ಕೀಲಕಪದ !! ಈ ತೆರನಾದ ಸಾಧಿತರೂಪಗಳನ್ನು ದಯಮಾಡಿ ಎಲ್ಲ ಪದ್ಯಪಾನಿಗಳು ಗಮನಿಸಬೇಕು. ಏಕೆಂದರೆ ಎಷ್ಟೋ ಬಾರಿ ಬಗೆಬಗೆಯ ಸಮಸ್ಯೆಗಳಿಗೆ ಇಂಥ ವೈಯಾಕರಣಪಥವೇ ಶರಣ್ಯ. ಈ ಬಗೆಯ ವ್ಯುತ್ಪತ್ತಿಯತ್ತ ಎಲ್ಲರ ಗಮನವಿರಲಿ.

      • Thank you very much sir 🙂

      • ಗಣೇಶರೆ,
        ನೆನ್ನೆ ಮೊನ್ನೆ ಬಂದವರನ್ನೆಲ್ಲ ಹೀಗೆ ಹೊಗಳಿಬಿಟ್ಟರೆ ಹೇಗೆ ನೀವು 😉

        ಪೊಗಳಲ್ ನೀಮೀ ತೆರದೊಳ್
        ಮಿಗೆ ಸುರದೀಶ್ವರರನಾವು ಮುನಿಯೆವೆ ಪಿರಿಯರ್?
        ವೆಗಟಿಂ ಹಸ್ತಾಮಲಕರ್,
        ಹೊಗೆಯಾಡೆವೆ ಪದ್ಮಪಾದ-ತೋಟಕರಾದ್ಯರ್||

        ಪೆಜತ್ತಾಯರೆ,
        ಗಣೇಶರ ಮೆಚ್ಚುಗೆಗಿಂತ ಹೆಚ್ಚೇನನ್ನೂ ಹೇಳಲಾರೆ. ಒಳ್ಳೆಯ ಪದ್ಯಕ್ಕಾಗಿ ಧನ್ಯವಾದಗಳು.

        • ಪ್ರತಿಕ್ರಿಯಾರಮ್ಯಮಿಹ ಪ್ರತಿಷ್ಠಂ
          ಪ್ರಸಾದುಪದ್ಯಂ ಸ್ಪೃಹಣೀಯಶೋಭಮ್ |
          ಸುರೇಶ್ವರೋ ವೃದ್ಧತಮಃ ಕಿಲಾಸೀ-
          ಶ್ರೀಶಂಕರಸ್ಯ ಪ್ರಿಯಶಿಷ್ಯವರ್ಗೇ 🙂 ||

        • ಪ್ರಶಂಸನಕ್ಕಾಗಿ ಕೃತಜ್ಞತೆಗಳು.

          ಅನುಕ್ರಮದಲ್ಲಿ ಸುರೇಶ್ವರರು ಕೊನೆಯವರಲ್ಲವೆ (junior)? ‘ಪಿರಿಯರ್’ ಎನ್ನುವುದನ್ನು senior ಎಂದು ಗ್ರಹಿಸಬೇಕೆಂದು ವಿನಂತಿ. ಇಲ್ಲಿ ವಯಸ್ಸಿನ ಪ್ರಸ್ತಾವವಿಲ್ಲ.

          ಒಂದು ಸಂದೇಹ: ’ಕಿಲ ಆಸೀತ್ ಶ್ರೀ’ ಗೊತ್ತು. ದಯವಿಟ್ಟು ’ಕಿಲಾಸೀಶ್ರೀ’ ಬಿಡಿಸಿ ತಿಳಿಸಿ.

        • ಧನ್ಯವಾದಗಳು ಸರ್ 🙂
          ಗಣೇಶರ ಬಗೆಗಿನ ತಮ್ಮ ನರ್ಮ ಆಕ್ಷೇಪಕ್ಕೆ ನನ್ನದ್ದೂ ನರ್ಮ ಪ್ರತಿಕ್ರಿಯೆ. ಬೇಸರಿಸದಿರಿ 🙂

          ಕಿರಿಯರ್ ಪೆಜ್ಜೆಯನಿಕ್ಕಲ್
          ಪಿರಿಯರ್ ಸಂತಸದಿನುಲ್ವವೋಲ್ ನಲ್ವಾತ-
          ನ್ನೊರೆದಿರೆ ಗುರುರಾಗರಿದಂ
          ಕರುಬಲ್ಕಾಸ್ಪದಮದೆಂತು ದಲ್ ಪಿರಿಯರ್ಗಂ ? 😉

          ಗುರುರಾಗರು = ೧. ಗುರುಗಳಾದ ರಾ. ಗಣೇಶರು. ೨. ಅಮಿತ ಅನುರಾಗವುಳ್ಳವರು.

    • Bharjariyaagide 🙂

    • ಸೊಗಸಾದ ಕೀಲಕ 🙂

    • a winner by a long way!!

  58. ಖರೆ,ಖರೆ ಕಂಡಿಹೆನು ಪ್ರಿಯ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ।
    ಅರೆ! ಅರೆ! ನೋಡಿಂದದೆ ಕರಿ
    ಮರಿಯಂ ಕೊಂಡೊಯ್ದುದಲ್ತೆ ಬೀಗಲಿ ಬಿಲದೊಳ್ ।।

    ( ಹೃದಯ ರಾಮರ ಪದ್ಯದ ಮುಂದುವರಿದ ಭಾಗ, ಗಣೇಶ್ ಸರ್ ಪದ್ಯ ಮಧ್ಯದಲ್ಲಿ ಪ್ರಸ್ತುತವಲ್ಲವೇ?!)

    • ಉಷರವರೆ – “ಕರಿಮರಿಯಂ ಕೊಂಡೊಯ್ದುದಲ್ತೆ ಬೀಗಲಿ ಬಿಲದೊಳ್” – ಇದು ಅರ್ಥವಾಗಲಿಲ್ಲ.

      • ಮುಂದೆ ಅದೇ “ಮೂಗಿಲಿ” ತನ್ನ “ಕಪ್ಪು!” ಮರಿಗಳನ್ನ ಉತ್ಸಾಹದಿಂದ ಬಿಲದೊಳಗೆ ಕೊಂಡೊಯ್ಡುದನ್ನು ಕಂಡು, ಆದ ಅಚ್ಚರಿ

    • ಉಷಾರವರೆ,
      ರಾಮಚಂದ್ರರ ಆಲೋಚನೆ ಇಂತಿರಬಹುದು: ಹೃದಯರಾಮರ ಪದ್ಯದಲ್ಲಿನ ಜೋಡಿಯಲ್ಲಿ ಒಂದು ಇಲಿ ಬಿಳಿ ಇನ್ನೊಂದು ಕರಿ. ಆ ಜೋಡಿಯ ಮರಿಗಳು ’ಕರಿ’ ಎಂದೇ ಖಚಿತವಾಗಿ ಹೇಗೆ ಹೇಳುತ್ತೀರಿ ಎಂದು. ಅಲ್ಲಿ ಹೆಣ್ಣಿಲಿ ಕಪ್ಪುವರ್ಣದ್ದಾದ್ದರಿಂದ ಸ್ತ್ರೀಪಾರಮ್ಯ ಮೆರೆದಿದ್ದೀರಿ ಎಂದು ಅವರಿಗೆ ತಿಳಿಯದು ಪಾಪ!

    • ಖರೆ ಖರೆ – ಅರೆ ಅರೆ
      ಕಂಡು – ನೋಡಿ
      ಕರಿಯಂ – ಮರಿಯಂ
      ಮೂಗಿಲಿ – ಬೀಗಲಿ
      ಕೆಲವೊಂದೇ ಅಕ್ಷರಗಳನ್ನು ಬದಲಿಸಿ ಒಳ್ಳೆಯ ಪದ್ಯ ರಚಿಸಿದ್ದೀರಿ.

      • ವರದಬದುಕಿನಲೊಲಿದ ಮಧು
        ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ।।

        ಅಲ್ಲವೇ ಪ್ರಸಾದ್ ಸರ್?!

  59. ನೆರೆದಿರ್ದ ಕಣಜಮಂ ಕೊರೆ-
    ಕೊರೆದು ಬರಿದುಗೈಯೆ ನೋಡಿ ಗೊಣಗಿದನರಸಂ
    “ಅರೆ ಮಾರಿ ಕೊಳ್ಳಲಿರ್ದಾ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    • ನೈಸ್ತುಲ್ಯರುಚಿರಪದ್ಯಂ
      ಪ್ರಸ್ತುತಮೀ ಪೂರಣಾರ್ಥಮಾಃ ಶ್ರೀಕಾಂತಾ!!
      ವಿಸ್ತರಿಸಿರೆ ನುಡಿಗಟ್ಟಿನ
      “ಮಸ್ತಿ” ಮಹೋದಾರಧೀರವಾಗ್ವೈಖರಿಯಿಂ ||

  60. ಹರಿಗಲ್ಲದೆ ಹೆದರದೆ ತಾಂ
    ತಿರಿಯುತೆ ಪುರಿಬಿರಿದು ಕೊಬ್ಬಿದೀ ದಿಗ್ವಸನಂ
    ಗಿರಿಯೆಂದೆನಿಸಿದೊಡೇನೈ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    ಹರಿ- ಹಾವು
    ತಿರಿ- ಅಲೆದಾಡು, ಆಯ್ದುಕೋ/ಬೇಡು
    ಪಿರಿದುಂಡು- ಕಿತ್ತು ತಿಂದು/ ದೊಡ್ಡದನ್ನುಂಡು
    ಪುರಿ- ಊರು, ಲಾಜೆ
    ಬಿರಿದು- ಸೀಳಿ/ಧ್ವಂಸಮಾಡಿ ಅಥವಾ ಚೆನ್ನಾಗಿ ತಿಂದು
    ಗಿರಿ- ಇಲಿ
    ಕೊಂಡೊಯ್ದುದಲ್ತೆ- ಕೊಂಡೊಯ್ಯಲಿಲ್ಲ

  61. ಮೋಡಗಳ ಆಕಾರ ನಮಗೆ ಕೆಲವೊಮ್ಮೆ ವಿಚಿತ್ರವಾಗಿ ಕಾಣುವ ಕಲ್ಪನೆಯ ಮೇಲೆ….

    ಬರಿಯಾಕಾಶದೆ ತೇಲುತ
    ಲಿರುವಾಮೇಘಗಳನೇಕ ರೂಪವತಾಳಲ್
    ತೆರೆದಾ ಕಣ್ಣಿಗೆ ಕಂಡಿತು
    ಕರಿಯಂ ಕೊ೦ಡೊಯ್ದುದಲ್ತೆ ಮೂಗಿಲಿ ಬಿಲದೊಳ್

  62. ಸರಿಪೂರಣಗಳ್ ನೀಡಿರಿ
    ತೆರೆದಿಟ್ಟಿರಲೀ ಸಮಸ್ಯೆಯಂ, ನೀಡುವೆನಾಂ
    ಕೊರಳಾ ಹಾರವ ನಿಮಗಂ
    “ಕರಿಯಂ ಕೊ೦ಡೊಯ್ದುದಲ್ತೆ ಮೂಗಿಲಿ ಬಿಲದೊಳ್”

    ಎಂದು ಒಬ್ಬ ಕವಿ ಸವಾಲನ್ನು ಹಾಕುತ್ತಾನೆ

  63. ಧರೆಯೊಳ್ ಚೌತಿಯ ದಿನದಂ
    ಭರದಿಂದೆಲ್ಲೆಡೆ ಗಣೇಶಪೂಜಯು ಮೊಳಗಲ್
    ವರಮಂ ಪಡೆಯಲು ಗೊಂಬೆಯ
    ಕರಿಯಂ ಕೊ೦ಡೊಯ್ದುದಲ್ತೆ ಮೂಗಿಲಿ ಬಿಲದೊಳ್

  64. ತೆರದಳ್ ಪುಟ್ಟಿಯು ಡಬ್ಬಿಯೊ
    ಳಿರುವಾ ಬಗೆಬಗೆಯ,ಬಳಪದಿಂದಂ, ನೋಡೈ
    ಬರೆದಾ ಕಲ್ಪಿತ ಚಿತ್ರದೆ
    ಕರಿಯಂ ಕೊ೦ಡೊಯ್ದುದಲ್ತೆ ಮೂಗಿಲಿ ಬಿಲದೊಳ್

    • ಸೋಮಣ್ಣನವೊಲ್ ತಮ್ಮಂ
      ಸ್ತೋಮಿಸೆ ಪರಿಹಾರರಾಜಿ ಪದ್ಯಶ್ರೀಯಂ |
      ಧೂಮಧ್ವಜರಸನಾಂಚಲ-
      ವಾಮತೆಯಿಂ ಬಿತ್ತರಿಪುದೆ ಚೋದ್ಯಂ ಚೀದೀ!!

  65. ಮುರುಡನ ಪೆರ್ಮಗ, ಮಹದುಂ-
    ದುರವರವಾಹನನಬಿಣ್ಪನೊರೆಯುವ ಚಲದೊಳ್
    ದರದರ ಕಬಂಧ ಮಾನಿಸ
    ಕರಿಯಂಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    ಮುರುಡ : ಶಿವ
    ಉಂದುರವರವಾಹನ : ಗಣಪತಿ, ( ಮಹತ್ + ಉಂದುರ : ಶ್ರೇಷ್ಟವಾದ ಇಲಿ )
    ಬಿಣ್ಪು : ಭೀಮ ಗಾತ್ರ,
    ಒರೆಯುವ : ಅಳೆಯುವ
    ಕಬಂಧ ಮಾನಿಸ ಕರಿಯಂ : ರುಂಡವಿಲ್ಲದ ಮನುಷ್ಯ + ಆನೆಯಂ : ( ಗಣೇಶನನ್ನು )

    • ಹೃದಯ ರಾಮರೆ. ಒಳ್ಳೆಯ ಪದ್ಯಗಲಿಮ್ದ ತಮ್ಮ ಪದಾರ್ಪಣವಾಯಿತು ಪದ್ಯಪಾನದಲ್ಲಿ.

      ಈ ಪದ್ಯದಲ್ಲಿ ಕೆಲವು ತೊಡಕುಗಳಿವೆ ಅಂತ ನನಗನಿಸುತ್ತಿದೆ. ಕಬಂಧ ಮಾನಿಸಕರಿ- ಇಲ್ಲಿ ಅರಿಸಮಾಸವಾಗಿದೆ, ಅದೊಂದು ಕಡೆ ಇರಲಿ. ಕಬಂಧಮಾನುಷಕರಿ ಎಂದರೂ ಗಣಪತಿ ಅನ್ನೋ ಅರ್ಥ ಹುಟ್ಟುವುದು ಕಷ್ಟಸಾಧ್ಯವಲ್ಲವೆ? ಅದಕ್ಕಿಂತ ಬೇಗ “ಗಜಗಾತ್ರದ ತಲೆಯಿಲ್ಲದ ಮನುಷ್ಯ” ಅಂತಲೆ ಹೊಳೆಯುತ್ತೆಯಲ್ಲವೆ? ಮುಂದೆ ಇದನ್ನು ಬಿಲದೊಳಗೆ ಹೇಗೆ ಎಳೆದೊಯ್ಯಿತು ಆ ಇಲಿ?

      • ಯಾವುದು ಸಕ್ಕದ, ಯಾವುದು ದೇಸಿಯ ಪದ ಅನ್ನೋದೆ ತಲೆ ಬಿಸಿ ನಂಗೆ.. ನೀವು ಅರಿ ಅಂತ ಅಂದಾಗಲೆ ನನಗೂ ಅದು ಹೊಳೆಯೋದು. ಮಾನಿಸಕರಿ, ಅದನ್ನು ಮನುಷ್ಯಾನೆ ಅನ್ನೋ ಅರ್ಥ ಕೊಡಬಹುದು ಅಂದ್ಕೊಂಡು ಎಡವಿದೆ.. ಹಳೆಗನ್ನಡ ನಂಗೆ ತೀರಾ ಹೊಸತು. ಕ್ಷಮೆಯಿರಲಿ..

        • ಕ್ಷಮೆಯಾಚಿಸುವಂತ ಪ್ರಮಾದವೇನು ಆಗಿಲ್ಲ ಬಿಡಿ. ನಾವೆಲ್ಲರೂ ಎದವಿರೋದೆ- ಈಗಲು ಎದವುತ್ತೀವಿ. ಕರಿ, ಮಾನುಷ, ಕಬಂಧ ಇವೆಲ್ಲವೂ ಸಕ್ಕದವೇ. ಪದದಲ್ಲಿ ತಪ್ಪಿದ್ದರೂ ಒಮ್ಮೊಮ್ಮೆ ಪರವಾಗಿಲ್ಲ ಅನ್ನಬಹುದು, ಅರ್ಥಸಂದಿಗ್ಢವನ್ನು ತಪ್ಪಿಸಿ

  66. ಕರಿಯಾ, ಐ ಲೌ ಯೂ. ನಾ
    ಕರಿದೆನು ನಿನಗಾಗಿಯೆಂದು ಬೆಳ್ಳಿಯು ಕೊಟ್ಟಾ|
    ಯೆರಿಯಪ್ಪವ, ಬೀಳಿಸಿದೊಡೆ
    ಕರಿಯಂ, ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    * ಯೆರಿಯಪ್ಪ, ಎರಿಯಪ್ಪ, ಅಥವಾ ಯರಿಯಪ್ಪ – ಅವರವರ ಭಾಷೆಗೆ ತಕ್ಕಂತೆ

    • “Belli olleya hudugi (ಆಂಗ್ಲ ಉಚ್ಚಾರಣೆ),” said the voyeuristic foreigner in the movie ಚೋಮನ ದುಡಿ. ನೀವು ಅಂಥ ’ಬೆಳ್ಳಿ’ಗೆ ಒಬ್ಬ ’ಕರಿಯ’ನನ್ನೂ ಗಂಟುಹಾಕಿದಿರಿ!

      • ಗಮನಿಸಿದ್ದಕ್ಕೆ ಧನ್ಯವಾದಗಳು, ಪ್ರಸಾದು. ನನಗೆ ಇಷ್ಟವಾದ ಪೂರಣ ಇದು.
        ಕರಿಯಂ ಎನ್ನುವ ಪದವನ್ನು ‘ಕರಿಯ’ ಎಂಬ ವ್ಯಕ್ತಿಯನ್ನಾಗಿ ಇಟ್ಟುಕೊಂಡು ಪೂರಣಗಳಿರಲಿಲ್ಲವಾದ ಕಾರಣ ಬರೆದೆ.
        ಒಂದೆರಡು ವರ್ಷಗಳ ಹಿಂದೆ ಜನಪ್ರಿಯವಾಗಿದ್ದ ಸಿನಿಮಾ ಹಾಡಲ್ಲಿ,
        “ಕರಿಯಾ ಐ ಲೌ ಯೂ, ಕರುನಾಡ ಮೇಲಾಣೆ” ಗೆ ಉತ್ತರವಾಗಿ “ಬೆಳ್ಳಿ ಐ ಲೌ ಯೂ. ಬಿಳಿ ಮೋಡದಾ ಮೇಲಾಣೆ” ಎಂಬ ಸಾಲು ಇದೆ.
        ಕರಿಯ ಮತ್ತು ಬೆಳ್ಳಿ ಆ ಹಾಡಿನ ಜೋಡಿ. ಎಲ್ಲರಿಗೂ ತತ್-ಕ್ಷಣ ಗೊತ್ತಾಗಬಹುದೆಂದು ನಾನು ಬರೆದೆ.

  67. ಹಿರಿಯರು ಶುಭವನು ಬಯಸಿ ಹೆ-
    ಸರಿಡೆ ರಜನಿಕಾಂತನೆಂದು, ತಿಂಗಳ ಒಳಗೇ |
    ಸೊರಗಿದ ಕೈಗಳಲೆಳೆಯುತ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    • ಪದ್ಯದದಲ್ಲಿ ಬಹುರಮಣೀಯಕಲ್ಪನೆಯಿರುವಂತಿದೆ ಆದರೆ ನನಗೆ ಸ್ವಲ್ಪ ವಿವರಣೆ ಬೇಕಾಗಿದೆ…ದಯಮಾಡಿ ಅದನ್ನು ನೀಡೋಣವಾಗಲಿ

      • ಈಚೆಗೆ “ರಜನೀಕಾಂತ್” ಜೋಕ್ಸ್ ಅಂತ ಒಂದು ಟೈಪೇ ಸೃಷ್ಟಿಯಾಗಿದೆ. ಆದರಲ್ಲಿ ಯಾರಿಗೂ ಸಾಧ್ಯವಾಗದ ಕೆಲಸಗಳನ್ನು ರಜನೀಕಾಂತ್ ಮಾಡುತ್ತಾನೆ ಎಂಬುದೇ ವಿಷಯ. ಹೆಚ್ಚು ಹೆಚ್ಚು ಅಸಾಧ್ಯವಾದ ಕೆಲಸ ಹೇಳಿದಷ್ಟೂ ಜೋಕ್ ಚೆನ್ನಾಗಿದೆ ಅಂತ. ಉದಾ:
        * ರಜನೀಕಾಂತ್ ಮಿಸ್ಡ್ ಕಾಲನ್ನೂ ಉತ್ತರಿಸಬಲ್ಲ.
        * ರಜನೀಕಾಂತ್ ಒಂದರಿಂದ ಇನ್ಫ಼ಿನಿಟಿ ವರಗೆ ಎಣಿಸಿದ್ದಾನೆ. ಎರಡು ಬಾರಿ!
        * ಕ್ರಿಕೆಟ್-ನಲ್ಲಿ ರಜನೀಕಾಂತನ “ವೆಲ್ ಲೆಫ಼್ಟ್” ಶಾಟ್ ಕೂಡ ಸಿಕ್ಸ್ ಹೋಗುತ್ತದೆ.
        * ರ್‍ಅಜನಿ ಕ್ರಿಕೆಟ್ ಆಡುವಾಗ ಮ್ಯಾಚ್ ಕಾರಣದಿಂದಾಗಿ ಮಳೆಯನ್ನು ರದ್ದು ಮಾಡಲಾಗಿದೆ.
        * gmailನ ಈ-ಮೇಲ್ ಅಡ್ರೆಸ್ gmail@rajani.com
        ಹೀಗೆ ಸಾಗುತ್ತದೆ.
        ಪ್ರಸ್ತುತ ನನ್ನ ಪದ್ಯದಲ್ಲಿ ಅಣಕವೇನೆಂದರೆ ಅವನ ಹೆಸರಿಟ್ಟಿದ್ದಕ್ಕೇ ಇಲಿಯು ಆನೆಯನ್ನು ಬಿಲಕ್ಕೆ ಎಳೆದುಕೊಂಡು ಹೋಗಲು ಸಾಧ್ಯವಾಯಿತು (ಅವನ ಮಹಿಮೆ ಇನ್ನೆಷ್ಟು) ಅಂತ ಅವನ ‘ಫ಼್ಯಾನ್’ ಗಳ ಕಾಲೆಳೆಯುವುದಾಗಿದೆ. 🙂

        • ದಿಸೀಸ್ ಸುಧೀರ್ಸ್ ಮಾರ್ವೆಲ್ ಅಟಾಪ್ ಹೆರಾಲ್ಡ್ಸ್ ಎವರ್
          (This is Sudheer’s marvel atop heralds ever)

  68. DhanyavAda Karantare: -)

  69. ಮತ್ತೊಂದು ಪೂರಣವನ್ನು ಸೂಚಿಸುವ ಸಾಹಸ ಮಾಡುತ್ತಿದ್ದೇನೆ:

    ವರಕವಿ ಕುವೆಂಪುವಿನ ಕಿಂ-
    ದರಿಜೋಗಿಯ ಕವಿತೆಗೊಂದು ನವಕಲ್ಪನೆಯಂ |
    ಕಿರಿಯ ಕವಿ ಕೂಡಿಸಿರಲದೊ;
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ||

    ವಿ.ಸೂ. “ಬೊಮ್ಮನಹಳ್ಳಿಯ ಕಿಂದರಿಜೋಗಿ” ಕೈತೆಯಲ್ಲಿ ಬರುವ ಇಲಿಗಳ ಕಾಟದ ವರ್ಣನೆಯು ಮೂಲದ ಬ್ರೌನಿಂಗ್ ಕವಿಯ ಪದ್ಯವನ್ನು ಹಲವುಪಟ್ಟು ಮೀರಿಸಿರುವುದು ಸಹೃದಯವೇದ್ಯ. ಈ ನೀಳ್ಗವಿತೆಯ ಭಾವಕ್ಕೆ ಅನುಗುಣವಾಗಿ ಒಂದೆರಡು ಸಾಲುಗಳನ್ನು
    ಕಿರಿ(ಕಿರಿ)ಯ ಕವಿಯು ಸೇರಿಸಿದ; ಹೀಗೆ:

    ತನ್ನಯ ಮರಿಗಳಿಗೆಲ್ಲರಿಗೊಂದು
    ಜಂಬುಸವಾರಿಯ ಮಾಡಿಸಲೆಂದು |
    ಊರಿನ ದೇಗುಲದಾನೆಯನೊಯ್ಯನೆ
    ಮೂಗಿಲಿ ಸೆಳೆಯಿತು ಬಿಲದೊಳ್ ಸುಯ್ಯನೆ ||
    ಚೀರಿತು ಮದಕರಿ ನಾಣ್ಗೇಡಿಂ
    ಹಾರಿರೆ ಸುಂಡಿಲಿ ಮುಂಗೋಡಿಂ ||

    ಈ ಪ್ರಕ್ಷೇಪಪದ್ಯಗಳ ಅನುಸಾರ ಪ್ರಕೃತಸಮಸ್ಯಾಪರಿಹಾರ ಸಿದ್ಧ:-)

    • ಗಣೇಶ್ ಸರ್, “ಅವಧಾನ”ದಲ್ಲಿ ನೀವು ಸಮಸ್ಯಾ ಪೂರಣ ಮಾಡುವ ವಿಧಾನವನ್ನು ನೋಡಿ ಕಲಿತು, ಪದ್ಯಪಾನದಲ್ಲಿ ಪ್ರಯತ್ನಿಸುತ್ತಿರಲು, “ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ” ಅಂತ ಯೋಚಿಸುತ್ತಿದ್ದೆ. ಮೂಗಿಲಿಗಳ “ಜಂಬುಸವಾರಿ” ಬಹಳ ಇಷ್ಟವಾಯಿತು.

  70. ಕರಿದಿರ್ದ ಕೋಡುಬಳೆಯಂ
    ಕಿರಿಯಂ ಕದ್ದುಣ್ಣುವಾಗ ತಾಯ್ ಮರಳಲ್ ಕಾ-
    ತರಿಸುತಲೊಡನದನವಿಸ-
    ಲ್ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    ಅರಿಯಂ- ಅರಿಯದ ಹುಡುಗ

  71. ನರುವಂ ಸವಿವಿಂದ್ರಿಯಮಿದು
    ಕರಿವದನನ ರಥಮಿದೇಯೆ ಗಣಿಕೆಯದಲ್ತಯ್
    ಗರತಿಯ ಶೀಲದ ಗುಣಮಿದು
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿಬಿಲದೊಳ್

    ನರು- ಕಂಪು
    ಕರಿಯಂ- ಕೃಷ್ಣ/ರಾಮ
    ಮೂಗಿಲಿಬಿಲದೊಳ್- ಮೂಗು+ಇಲಿ+ಬಿಲದು+ಒಳ್

    ಬಿಲದು- ಮಾರಾಟವಾಗದು/ವಿಕ್ರಯಿಸದು
    ಒಳ್- ಒಳಗು/ಮನಸ್ಸು/ಆತ್ಮ

    ಪದಬಂಧದಲ್ಲಿರುವಂತೆ ನಾಲ್ಕು ಸುಳುಹುಗಳನ್ನು ಕೊಟ್ಟು ಅವುಗಳ ಉತ್ತರಗಳನ್ನು ಕ್ರಮವಾಗಿ ಸೇರಿಸಿರಿ 🙂 ಮೊದಲೆರಡು ಸುಳುಹುಗಳು “ಈಸಿ. ಕೊನೆಯೆರಡು “ಕ್ರಿಪ್ಟಿಕ್” 🙂

  72. ಮರಿಚೀಲಿವೊಗಲ್ ಪಿಂದೆಯೆ
    ಬರದೇನ್ ತಾಯೆಂದು ಬಗೆದು ಫಕ್ಕನೆ ತಾನೆ-
    ಚ್ಚರದಿಂ ಪಿಂಗಡೆಯಿಂ ಬ-
    ರ್ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    ಮರಿಚೀಲಿ- ಬೆಕ್ಕಿನಮರಿ
    ಬರ್ಕರಿ- ಮರಿ

    “ಬಿಲದೊಳ್ ಮರಿಚೀಲಿವೊಗಲ್” ಎಂದು ಓದಿಕೊಂಡು ಅರ್ಥೈಸುವುದು.

    • ಪೂರಣ ಚೆನ್ನಾಗಿದೆ. ಹೊಸ ಪದಗಳನ್ನು (ಬರ್ಕರಿ) ಕಲಿಯುವುದಾಗುತ್ತಿದೆ. ಧನ್ಯವಾದಗಳು.

  73. ಮುರುಕಲು ಗುಡಿಯೊಳ್ ವಾಸಿಪ
    ತಿರುಕಂ ತಿರಿದನ್ನವನ್ನಿರಿಸಿರಲ್ಕಂದುಂ
    ಹರುಕಲು ಜೋಳಿಗೆಯಿಂ ಮಧು
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ।।

    • ಎಂಥ ಸೊಗಸಾದ ಪೂರಣವನ್ನಿತ್ತಿದ್ದೀರಿ!! ಧನ್ಯವಾದಗಳು. ಪಂಚತಂತ್ರದ ಮಿತ್ರಸಂಪ್ರಾಪ್ತಿಯಲ್ಲಿಯ ಕಥೆಯೇ ನೆನಪಾಯಿತು. ನಿಮ್ಮ ಪದ್ಯದ ಬಂಧ-ಭಾಷೆಗಳೂ ಬಿಗಿ-ಬನಿಯಿಂದ ಕೂಡಿದ್ದು ಮುದತರುವಂತಿವೆ. ಈಚೆಗೆ ಮಿತ್ರ ಚಂದ್ರಮೌಳಿಯವರು ಅಭಿಪ್ರಾಯಿಸಿದಂತೆ ನಿಮ್ಮ ಪದ್ಯಶೈಲಿಯಲ್ಲಿ ಗಮನೀಯಪ್ರಗತಿಯು ತೋರಿದೆ. ಇದು ನಿಮ್ಮ ನಿರಂತರಪರಿಶ್ರಮ ಹಾಗೂ ವಿಮರ್ಶೆ-ಸವರಣೆಗಳನ್ನು ತೆರೆದ ಮನದಿಂದ ಸ್ವೀಕರಿಸಿ ಸ್ನೇಹ-ಸೌಜನ್ಯಗಳಿಂದ ಹಿತಹಾಸ್ಯದ ಹಿರಿಮೆಯೊಡನೆ ಎಲ್ಲ ಸಹಪದ್ಯಪಾನಿಗಳ ಜೊತೆಗೆ ಕಲೆತು ಸಾಧಿಸಿದ ಕವಿತಾಕಾಯಕದ ಫಲ. ತುಂಬ ಧನ್ಯವಾದಗಳು.

      • ನಮಸ್ಕಾರಗಳು ಗಣೇಶ್ ಸರ್,
        ಎಂಥ ಹಿತವಾದ ಮಾತನಾಡಿದಿರಿ. ನನ್ನ ಮನಸ್ಸಿನ ಬೇಗುದಿಯನ್ನ ಪರಿಹರಿಸಿದಿರಿ. ನಿಮ್ಮ ಈ “ಪ್ರೇರಣೆ”ಯೇ ನಮ್ಮೆಲ್ಲರ ಪ್ರತಿಭೆ. ತುಂಬು ಹೃದಯದ ಧನ್ಯವಾದಗಳು . ಮತ್ತಷ್ಟು ಅಧ್ಯಯನದ ಭರವಸೆಯೊಂದಿಗೆ – ಉಷಾ

    • ಎಲ್ಲ ಕೀಲಕಗಳೂ ಮುಗಿದವೇನೋ ಎನ್ನುವ ಹೊತ್ತಿಗೆ ಎಂಥ ಸೊಗಸಾದ ಪೂರಣ!

  74. ಗಿರಿಯಿಂ ಪೊರಮಟ್ಟೇರುತೆ
    ಶಿರಸ್ಸ ಮೇಲುರಿದು ಪಡುವ ಸೇರ್ವಾಗಳ್ ತಾಂ
    ಕರಿಮುಖನಂದಣಕೆ ಮಣಿದು
    ಕ ರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    ಕ- ಸೂರ್ಯ
    ರಿ- ಬೆಳಕು, ಕಾಂತಿ

    ಇಳಿಯುತ್ತಿರುವ ಸೂರ್ಯನ ಕಿರಣಗಳು ಇಲಿಯ ಬಿಲದೊಳಗೆ ತೂರುತ್ತಿರುವುದನ್ನು, ಗಣಪತಿಗೆ ಸಲ್ಲಿಸುವ ನಮನವೆಂದು ಕಲ್ಪನೆ ಮಾಡಿ ಕವನಿಸಿದ್ದೇನೆ.

  75. h

  76. ತಿರೆಯೊಳ್ ನರಮೇಧದ ಸಂ
    ಗರವಂ,ದುರ್ಗದರಿ ಹೈದರನ ತರಿದಭಯಂ
    ಕರಿಯಂ ತೋರಲು ತಾ ಮದ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ ।।

    ಕನ್ನಡ ನಾಡಿನ ವೀರರಮಣಿ … ಒನಕೆ ಓಬವ್ವನ ನೆನಪಿನಲ್ಲಿ, (ಕಳ್ಳಗಂಡಿಯ ಬಳಿಯ ಹೆಣದರಾಶಿಯನ್ನು ಕಂಡು ದಿಗ್ಬ್ರಮೆಗೊಂಡು ಮೂಕನಾಗಿದ್ದ ಸೇವಕ (ಮೂಗಿಲಿ), ಅದನ್ನು ತೋರಲು ದೊರೆ ಮದಕರಿನಾಯಕನನ್ನು ಕಿಂಡಿಯಬಳಿ ಕೊಂಡೊಯ್ದನೆಂಬ ಕಲ್ಪನೆಯಲ್ಲಿ.)

  77. The mouse says to its lord Ganesha (ವದನಕರಿ), “Gone are the days of BG Tilak. Now this festival is mafia. Don’t be witness to it. Come, let’s go to my home.”
    ಸರಿದುದು ಟಿಳಕರ ಕಾಲವು
    ಕುರಿಮಂದೆ ವೊಲಿಂದಿಗಾಚರಿಪ ಪರ್ವಮಿದಂ|
    ತೊರೆಯೆನ್ನುತಲಿ ದೊರೆ ವದನ-
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್||

  78. ಜೆರಿ-ಟಾಂಗಳು ಕಾದಾಡುತ
    ಲಿರೆ ತಮ್ಮೊಳ್ ಗೇಲಿಗೀಡು ತಾವಾದುದರಿಂ|
    ತೊರೆದು ಚಣ ವೈರವನ್ನ
    ಕ್ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್||
    (ಕ್ಷಣಕಾಲ ತೊರೆದು ವೈರವನ್+ನಕ್ಕು+ಅರಿಯಂ…)

  79. ಇಲಿಯ ವೈರಿ ಗೂಬೆ. ಇದಕ್ಕೆ ಹಗಲಿನಲ್ಲಿ ಕುರುಡು:

    ಹುರಿದು ಭುಜಿಸುವುವು ಜಂತುಗ
    ಳು ರಿಕ್ತರಕ್ಷಣದವನ್. ಇಲಿಯುಲೂಕವನುಂ|
    ಕುರುಡುವಗಲೆ (ಹಗಲೊಳೆ) ಪಲ್ಲಿಂ ಕು
    ಕ್ಕರಿಯಂ (ಕುಕ್ಕಿ+ಅರಿಯಂ) ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್||

    • ಪ್ರಸಾದು ಅವರೆ,
      ಕುಕ್ಕಿ+ಅರಿಯಂ = ಕುಕ್ಕಿಯರಿಯಂ ಎಂದಾಗುತ್ತದಲ್ಲವೇ?
      ಕುಕ್ಕು+ಅರಿಯಂ ಎಂದಾಗಿದ್ದರೆ ನೀವೆಂದಂತೆ ಕುಕ್ಕರಿಯಂ ಎಂದಾಗುತ್ತದೆ ಅಲ್ಲವೇ?

    • ಹೌದು. ಎಡವಿದೆ. ತಿದ್ದುಗೆಗೆ ಕೃತಜ್ಞತೆಗಳು. This is what I could salvage:

      ಹುರಿದು ಭುಜಿಸುವುವು ಜಂತುಗ
      ಳು ರಿಕ್ತರಕ್ಷಣದವನ್ ಬಿಡಾಲದೊಲಿಲಿಯಂ|
      ಹರಿಸಂಕಲ್ಪದೆ ಮರಿ-ಕೊ(ಕ್ಕರೆಯಂ)
      ಕ್ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್||

      ಹರಿಸಂಕಲ್ಪದೆ – ಹೀಗೆ ಒಂದನ್ನೊಂದು ತಿನ್ನುವುದು ದೈವನಿಯಾಮಕ

      • ಪ್ರಸಾದು ಅವರೇ, ಕೊಕ್ಕರೆ ಎಂಬರ್ಥದಲ್ಲಿ ’ಕೊಕ್ಕರಿ’ ಎಂಬ ಶಬ್ದವಿದೆಯೇ?!

        • ಧಾರವಾಡಕ್ಕ ಬನ್ರೀ ಸರs

          • ಹಾಗಿದ್ದರೆ ಇಡೀ ಪದ್ಯವನ್ನು ಧಾರವಾಡಕನ್ನಡದಲ್ಲಿ ಮಾಡಬೇಕು 🙂

        • “This is all I could salvage’ ಎಂದು ಹೇಳಿ ಆಗಲೇ ಸೋಲೊಪ್ಪಿದ್ದೇನೆ.

  80. ತನ್ನ ಸ್ವಾಮಿಯನ್ನು ಮನೆಗೆ ಕರೆಯಬೇಕೆಂದೆನಿಸಿದರೂ ಅದು ಚಿಕ್ಕದಾಗಿರುವುದರಿಂದ ಶಿವನನ್ನು ಬೇಡಲು ಅವನು ಅದನ್ನು ಹಿಗ್ಗಿಸಿದನು. ಆಗ ಆ ಇಲಿಯು ಗಣಪನನ್ನು ಬಿಲಕ್ಕೆ ಕರೆದೊಯ್ದಿತು ಎಂಬ ಕಲ್ಪನೆ.

    ಒಂದು ದುಸ್ಸಾಹಸ. ಪ್ರಯೋಗವು ಸಾಧುವೇ? ರಚನೆಯಲ್ಲಿ ದೋಷವೇನಾದರೂ ಇದ್ದರೆ ಸೂಚಿಸಿರಿ.

    ಹರನಾದೇಶದಿ ವಿಘ್ನನಾಶಕನ ವಾಹನವಾದುದಾ ಮೂಷಿಕಂ
    ಕಿರಿದಾಗಿರ್ಪುದು ತನ್ನ ಗೇಹಮೊಡೆಯಂ ಬರುವಾಗಲೇಂ ಮಾಳ್ಪುದೆಂ-
    ದಿರಲಾ ದೇವನೆ ಮೆಚ್ಚಿ ಹಿಗ್ಗಿಸಲದಂ ಹೇರಂಬನನ್ನಾಸ್ಯದಿಂ
    ಕರಿಯಂ ಮೂಗಿಲಿಯೊಯ್ದಿತಲ್ತೆ ಬಿಲದೋಳೇನೆಂಬೆನಾ ಭಾಗ್ಯಮಂ ||

    ಹೇರಂಬನನ್ನು + ಆಸ್ಯದಿಂ ಕರಿಯಂ ( ಮುಖದಿಂದ ಆನೆಯಂತಿರುವವನು)

    • ೧) ಮೊದಲೆರಡು ಪಾದಗಳ ಉತ್ತರಾರ್ಧದಲ್ಲಿ ಛಂದಸ್ಸು ತಪ್ಪಿದೆ – ’ಹನ’ ಹಾಗೂ ’ಬರು’ ಬದಲಿಗೆ ಒಂದೊಂದು ಗುರ್ವಕ್ಷರ ಬರಬೇಕು.
      ೨) ’ಬಿಲದೋಳ್’ ಸರಿಯಾಗದು. ’ಬಿಲದೊಳ್’
      ೩) ಸಮಸ್ಯೆಯನ್ನು ಮತ್ತೇಭಕ್ಕೆ ಅಳವಡಿಸಿಕೊಂಡಿರುವುದು ಶ್ಲಾಘ್ಯವೇ. ’ಭಾಗ್ಯ’ ಬದಲು ಆಶ್ಚರ್ಯಸೂಚಕವಾದ (ಸೋಜಿಗ) ಶಬ್ದ ಬಳಸಿದರೆ ಸೂಕ್ತವೆನಿಸುತ್ತದೆ.

  81. ತಡವಾಗಿ ಮತ್ತೊಂದು ಪೂರಣ. ನಿನ್ನೆಯೇ ರಚಿಸಲ್ಪಟ್ಟಿದ್ದರೂ ನೆಟ್ ನೆಟ್ಟಗಿರದಿದದ್ದುದರಿಂದ ತಡವಾಯ್ತು 🙁 ಕ್ಷಮೆಯಿರಲಿ.

    ತರಳನ ಶಾಲೆಯನೊಲ್ಲನ
    ಪರಿಪರಿ ಗದರಿಸುತೆ ಮತ್ತೆ ಕಲ್ಪಿತಕಥೆಯ-
    ನ್ನೊರೆಯುತೆ ಪೇಳ್ದಪಳ್ “ಆ ಚ-
    ಕ್ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್” ||

    ಚಕ್ಕರಿ = ಚಕ್ಕರ್ ಹಾಕುವವನು 😉 ಸರಿಯಾದೀತೇ ?

  82. ಕಿರಿಯಂ ತನಗಿತ್ತ ತಿಂಡಿಯಂ ತಿನ್ನದೇ ನಾಯ್
    ಮರಿಯಂ ಕುರುಕುರು ಕರೆದೀಯಲ್ಕದು ಕೊಬ್ಬಿನಿಂ
    ತಿರುಗಿ ನೋಡದೇ ಮಲಗಿರೆ ಬಿಸ್ಕತ್ತಿನ
    ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್

    zoo biscuits

    ಲೆಕ್ಕವಿಲ್ಲದಷ್ಟು ಕಂದಗಳನ್ನು ನಾವೆಲ್ಲರೂ ಹಡೆದಾಯ್ತು. ಅದಕ್ಕೆ ಈ ಸಮಸ್ಯೆಯನ್ನು ಎಡೆಯಕ್ಕರದಲ್ಲಿ ಹೊಂದಿಸಿದ್ದೀನಿ- ಪ್ರತಿಪಾದಕ್ಕೆ ಒಂದು ಬ್ರಹ್ಮ, ಎರಡು ವಿಷ್ಣು ಒಂದು ರುದ್ರ.

    • ಕಂದದಲ್ಲಿರುವ ಸಮಸ್ಯಾಪಾದವನ್ನು ಎಡೆಯಕ್ಕರಕ್ಕೆ ಹೊಂದಿಸುವ ಕಲ್ಪನೆಯೇ ಚೆನ್ನಾಗಿದೆ 😉

      • ನಿಮ್ಮ ಮಾತಿನ ಅರ್ಥವೇನೇ ಇರಲಿ, ಅಂತೂರತಿಕ್ರಿಯಿಸಿದಿರಿ. ಇದಕ್ಕೆ ಹಿಂದೆ ನಾನು ಕೆಲವು ಪದ್ಯಗಳನ್ನು ಬಲು ಹುಮ್ಮಸ್ಸಿನಿಂದ ಕವನಿಸಿದ್ದೆ- ಹೊಸ ತಂತ್ರಗಳನ್ನು ಮತ್ತೆ ಕೀಲಕಾಗಳನ್ನು ಬಳಸಿ (ನನಗೆ ತಿಳಿದಮಟ್ಟಿಗೆ). ಅವಕ್ಕೆಲ್ಲೆ ಪ್ರತಿಕ್ರಿಯೆಯೇ ಬರದೆ ಟುಸ್ ಆಗಿಹೋದವು.

      • ನನಗೆ ಅಕ್ಕರಗಳ ಪರಿಚಯವಿಲ್ಲ. ಹಾಗಾಗಿ ಪ್ರತಿಕ್ರಿಯೆ ನೀಡಲಿಲ್ಲ ಅಷ್ಟೇ. ನಿಮ್ಮ ಹಾಗೂ ಸೋಮರ ನಡುವಿನ ಸಂವಾದಗಳನ್ನು ಗಮನಿಸುತ್ತಿದ್ದೆ.

Leave a Reply to ಸೋಮ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)