Jul 232013
 

‘ಬಾಲ್ಯಮೇ ಬಾಳ ಭಾಗ್ಯಂ’ ಎಂಬ ಸೊಲ್ಲನ್ನುಪಯೋಗಿಸಿ ಪದ್ಯವನ್ನು ಪೂರ್ಣಗೊಳಿಸಿರಿ. ಈ ಸಾಲು ಶಾಲಿನಿ, ಮಾಲಿನಿ, ಮಂದಾಕ್ರಾಂತ ಹಾಗೂ ಸ್ರಗ್ಧರಾ ವೃತ್ತಗಳಿಗೆ ಹೊಂದುತ್ತದೆ.

  151 Responses to “ಪದ್ಯ ಸಪ್ತಾಹ ೭೬: ಪದ್ಯ ಪೂರಣ :: ಬಾಲ್ಯಮೇ ಬಾಳ ಭಾಗ್ಯಂ”

 1. ತಾರುಣ್ಯಂ ದಿಙ್ಮೂಢರಾಗಲ್ಕೆ ಸಲ್ಗುಂ
  ಘೋರಂ ಗಾರ್ಹಸ್ಥ್ಯಂಗಳಿಂ ದೂಷಣಂಗಳ್
  ಕಾರುಣ್ಯಂ ಕೋರಲ್ಕೆವೃದ್ಧಾಪ್ಯಮಲ್ತೇ?
  ಪೋರರ್ ಪೇಳ್ದರ್ ಬಾಲ್ಯಮೇ ಬಾಳ ಭಾಗ್ಯಂ

  ಒಂದಷ್ಟು ಪೋರರು ಈ ರೀತಿ ಹೇಳುತ್ತಾ ಆಡುತ್ತಿದ್ದರು

  • ಪದ್ಯಭಾವ ಸೊಗಸಾಗಿದೆ. ಆದರೆ ಅಲ್ಪಮಾತ್ರದ ಸವರಣೆ ಬೇಕು: ಅದು ಹೀಗಿರಬಹುದು:
   ………ದಿಙ್ಮೂಢರಾಗಲ್ಕೆ…….
   ………ಗಾರ್ಹಸ್ಥ್ಯಂಗಳಿಂ…….
   …….ಕೋರಲ್ಕೆ………..

 2. Using “जीवभाग्यं हि बाल्यम्”,

  जीवाजीवातीत-मैत्रं समन्तात्
  सत्याख्याने निर्भयं सर्वदैव ।
  लीलाभावं स्वर्ण-लोष्टोपलेषु
  सर्वैर्धर्मैः जीवभाग्यं हि बाल्यम् ॥ शालिनी

  “Friendship that transcends the distinction of living and non-living,
  Fearlessness in speaking the truth,
  A playful attitude towards a lump of mud, stone or gold —
  By every rule of Dharma, childhood is the best of life!”

  न खलु कुजनसेवा नो च दारा-विदाहः
  न हि मनसि नियुक्ता भूत-भव्यादिभाराः ।
  अशन-शयन-पानं काममाराधितं च
  किमिह बहु-वचोभिः जीवभाग्यं हि बाल्यम् ॥ मालिनी

  “No obligation to serve base men; no pain from wives;
  No need to bear the weight of past and future;
  Eating, sleeping and drinking whenever one pleases;
  What more needs to be said? Childhood is the best of life!”

  प्रौढापाङ्ग-प्रणिहित-तृषा-पाश-नद्धो युवात्र
  कान्तासेवा-विदलित-समस्ताङ्ग-शक्तिः गृहस्थः ।
  कुम्भाण्डीनां विघटनजुषा बद्धजीवेव वृद्धः
  व्यर्थालापैः किमिह बहुभिः जीवभाग्यं हि बाल्यम् ॥ मन्दाक्रान्ता

  “Youth is trapped in the snare of desire cast by the playful glances of haughty girls.
  All of the Grhastha’s energies are spent in the wife’s service.
  The old man seems to hold on to life only because of his desire to smash pumpkins 🙂
  What’s the point of complaining thus? Childhood is the best of life!”

  Will try Sragdhara later 🙂

  • Verse 1, Line 1 can be, जीवाजिव-न्यस्त-मैत्रं समन्तात् in case yati isn’t allowed across the savarna-dirgha-sandhi
   Verse 3, Line 2 can be, कान्ता-सेवा-विदलित-सिम-स्वाङ्ग-शक्तिः गृहस्थः for the second yati.

   • Your ideas are fresh and versification is also lucid. Now it is more akin to the idiom of Sanskrit.and yet maintains the welcoming flavor of new thoughts. But you have not followed the metrical rule that barring a few metres of the arSha origin (like the anuShTup and upajaati) thhe rest are to be consgruted in such a way that all the last letters of Ojapaada-s (odd feet) must be guru by their own nature. They cannot be taken as guru-s just because of their paadaantatva.

    Please make saMdhi-s at all places like sarvairdhamai-rjeevabhaava….” etc., It is not a good shlOkaneeti to ignore good good saMdhi-s:-)
    daaravivaaha is the right usage in compounding
    vighaTanajuShaa is in tRuteeyaa. How to.set the anvaya? jeevabhaava iva vRddhaH is the correction as it has to satisfy the gender and this disrupts the metre. Pl correct it for your self:-)

    • Many thanks sir; didn’t know the padAnta-guru rule didn’t apply everywhere. I can fix the rest by minor changes, but please let me know if the anvaya I had in mind here applies:

     कुम्भाण्डीनां विघटनजुषा बद्धजीवो हि वृद्धः == कुम्भाण्डीनां फलविशेषाणाम्, विघटनजुषा हि (तेषां विघटन-क्रियायाम् उत्साहेन एव) बद्धजीवः वृद्धः

     • Still the anvaya is not understandable to me. Basically the word juShaa is in tRteeya-vibhakti and where is the noun for this adjective. Should it also be not in tRteeyaa? But the only noun vRddha is in prathamaa. Hows to reconcile this? The rule of maintaining equanimity of linga, vacana and vibhakti is a must in samasta-pada-s adn this seams to be violated here.

     • विघटनजुषा is not an adjective qualifying वृद्धः, it is independent — the intended anvaya is “the वृद्धः, because of विघटन-जुष्, is a बद्धजीवः”

      Same form as
      अहं भवद्दयया प्राप्तबोधः , where भवद्दयया is the reason why अहं is प्राप्तबोधः

     • If the use of juS is incorrect, would replacing it with विघटन-रुचा (tRtIya again, — “oDeyuva Aseyinda”) work?

     • Still I see problems in grammar:-). Pl call me or chat with so that we can discuss better.

 3. ಸರ್ವಾವಸ್ಥಾಗ್ರಮೆನೆ ಋತದಿಂ ಲಕ್ಷಣಪ್ರಾಪ್ತಮಲ್ತೇ
  ಸರ್ವಾವಸ್ಥರ್ಕಳಿನೆ ತರಮೆಂದೀಕ್ಷಿಪ ಸ್ಥಾನಮಲ್ತೇ
  ಸರ್ವಾವಸ್ಥಾವಧಿಯನೆ ವಿನೋದಂಗಳಿಂ ಕ್ರೀಡೆಗೆಂದೇ
  ಪಾರ್ವಾ ಮುಗ್ಧಕ್ರಮಮೆ ಮೆರುಗೈ ಬಾಲ್ಯಮೇ ಬಾಳ ಭಾಗ್ಯಂ

  ಋತದ ಕ್ರಮದಲ್ಲಿ ಬಾಲ್ಯಕ್ಕೆ ಮೊದಲ ಸ್ಥಾನವೆಂದು (ಇನ್ನುಳಿದ ಅವಸ್ಥೆಗಳಿಗಿಂತ) ನಿರ್ದೇಶಿಸಿದೆಯಲ್ಲವೇ, ಎಲ್ಲಾ ಅವಸ್ಥೆಯ ಜನರೂ ಬಾಲ್ಯವೇ ಉತ್ತಮವಾದದ್ದೆಂದು ಬಗೆಯುತ್ತಾರಲ್ಲವೇ? ಎಲ್ಲಾವಸ್ಥೆಗಳನ್ನು ವಿನೋದದ ಕ್ರೀಡೆಯಾಗಿಯೇ ನೋಡುವ (ಅಜ್ಜನ ಆಟ, ಟೀಚರ್ ಆಟ, ಅಪ್ಪ ಅಮ್ಮ ಆಟ… ಇತ್ಯಾದಿ) ಮುಗ್ಧತೆಯೇ ಮೆರುಗು…

  ಸರ್ವಾವಸ್ಥಾಗ್ರಂ ಎಂದು ಬಳಸಬಹುದೆ?

  • ಪದ್ಯವೂ ಅದರ ಭಾವ-ನಾವೀನ್ಯಗಳೂ ಚೆಲುವಾಗಿವೆ. ಆದರೆ ಅವಸ್ಥೆ ಎಕಾರಾಂತವಾದ ಕಾರಣ ಸರ್ವಾವಸ್ಥಂ ಎಂಬ ರೂಪಸಾಧುವಾಗದು.
   “ಸರ್ವಾವಸ್ಥಾವಧಿಯನೆ ವಿನೋದಂಗಳಿಂ….” ಎಂದು ಬೇಕಾದರೆ ಸವರಿಸಬಹುದು.
   ಮಾಲಿನೀವೃತ್ತದ ಪದ್ಯ ಮಾತ್ರ ತುಂಬ ಸೊಗಸಾಗಿ ನಿರ್ದುಷ್ಟವಾಗಿದೆ.

   ಆ ಸೋಮನ ತುಂಬುತನಂ
   ಮಾಸದೆ (ತಿಂಗಳಿನಲ್ಲಿ) ಸೊರಗಲ್ಕೆ ಬರ್ಕುಮೇನಿದು ವಿಧಿಯೇ?
   ಈ ಸೋಮನ ತುಂಬುತನಂ
   ಮಾಸದೆ (ಮಾಸದ ಹಾಗೆ) ಮಿರುಗಲ್ಕೆ ಬರ್ಕುಮೇನಿದು ಮುದವೇ !!

   • ಧನ್ಯವಾದಗಳು ಸರ್, ಮೂಲದಲ್ಲೆ ತಿದ್ದಿದ್ದೇನೆ.
    ನಿಮ್ಮ ಪದ್ಯದಲ್ಲಿ ಸಧ್ಯದಲ್ಲಿರುವ ಕೃಷ್ಣಪಕ್ಷವನ್ನು ತಂದಿದ್ದೀರಿ 🙂

 4. Malini
  ಹರಿತನಯನದೃಷ್ಟಿ ಪ್ರೀತಿಯಾಲಿಂಗನಂಗಳ್
  ಸುರರವೊಲೆನೆ ರಮ್ಯಂ ಸ್ನೇಹಮಂ ತೋರ್ಪ ಹಾಸಂ
  ಮರೆಸೆದುಗುಡದಾಟಂ ನೀಳ್ದಪರ್ ಜೀವಕರ್ಥಂ
  ಬೆರಯೆ ತಿರೆಯೆ ದಿವ್ಯಂ ಬಾಲ್ಯಮೇ ಬಾಳ ಭಾಗ್ಯಂ

 5. ಚಂದಕ್ಕಿಮಾಮನಿಹ ಗೊಂಬೆಗೂ ಜೀವಮಿಹ
  ನೊಂದುದೇಂ? ಹಾಸ್ಯಮೇಂ?! ಭೇದಕಾಣದಿಹ
  ಕುಂದಿರದ ನಡತೆ ನಲ್ವಾತುಗಳ ಮೆರಗಿನೊಳು
  ಸುಂದರವು ಬಾಲ್ಯಮೇ ಬಾಳ ಭಾಗ್ಯಂ

  • ಭಲೇ! ಚೌಪದಿಯಲ್ಲಿ ಪದ್ಯಪೂರಣ!! ….ಆದರೆ ಸಮುಚ್ಚಯಾರ್ಥಕವಾದ ದೀರ್ಘಾಕ್ಷರಗಳು ಬರಬೇಕಾದಲ್ಲಿ ಹ್ರಸ್ವವನ್ನು ಬಳಸಿರುವುದು ಅಯುಕ್ತ.
   (ಉದಾ: ಪುತ್ಥಳಿಗು,ನೊಂದುದಕು, ಸಂತಸಕು… ಇವೆಲ್ಲ ಕ್ರಮವಾಗಿ ಪುತ್ಥಳಿಗೂ, ನೊಂದುದಕೂ ಸಂತಸಕೂ ಎಂದೇ ಹೊಸಗನ್ನಡ-ನಡುಗನ್ನಡಗಳಲ್ಲಿ ಆಗಬೇಕು)

 6. ಮಂದಾಕ್ರಾಂತ||
  ವೃದ್ಧಾಪ್ಯಂ ಸಂದುದು, ಸರದಿಯಿಂ ಪುತ್ರರೊಳ್ ವಾಸದಿಂದಂ
  ರಾದ್ಧಾಂತಂ ಮಾಳ್ಪರನುದಿನಮುಂ ವ್ಯಾಜಮೇ ಕಾಣದಿರ್ದುಂ
  ಕ್ರುದ್ಧರ್ ತಾವಾಗುವರನುದಿನಂ ಸಾಯಲಿಲ್ಲಿಂದೆನುತ್ತುಂ
  ಶ್ರಾದ್ಧಂ ತಾನೊಂದೆ ಹಿತಮೆ! ಪುನರ್ಬಾಲ್ಯಮೇ ಬಾಳಭಾಗ್ಯಂ?
  (ಪುನರ್ಬಾಲ್ಯ = ವೃದ್ಧಾಪ್ಯ)

  • ಪ್ರಸಾದು, ಪುನರ್ಬಾಲ್ಯವೆಂಬ ಪೂರಣ ಬಹಳ ಚೆನ್ನಾಗಿದೆ :). ಅದರಲ್ಲೂ ‘ಸಾಯಲಿಲ್ಲಿಂದೆನುತ್ತುಂ’ (ಪ್ರತಿದಿನವೂ ಇವತ್ತು ಅಂತ್ಯವಾಗಲಿಲ್ಲವೆಂದು ನೋಡುವುದು) ಎಂಬುದು ಮನಕಲಕುವಂತಿದೆ ಮೂರನೇಯ ಸಾಲನ್ನು ಹೊರತುಪಡೆಸಿದರೆ ಯತಿಸ್ಥಾನಪಲ್ಲಟವಾಗಿರುವುದರಿಂದ ಮಿಕ್ಕವನ್ನು ಓದಿಕೊಳ್ಳುವುದು ಕಷ್ಟವಾಗುತ್ತಿದೆಯಲ್ಲ…

   • ಪ್ರಿಯ ಪ್ರಸಾದು,
    ನನಗೆ ತುಂಬ ಪ್ರಿಯವಾಗುವ ಶೈಲಿಯಲ್ಲಿ, ಗಂಭೀರೋದಾರರೀತಿಯಲ್ಲಿ ಒಳ್ಳೆಯ ಪದ್ಯವನ್ನು ರಚಿಸಿದ್ದೀರಿ; ತುಂಬ ಧನ್ಯವಾದಗಳು. ಕ್ರುದ್ಧ ಎಂಬುದು ಸಾಧುರೂಪ. ಕೃದ್ಧ ಎಂಬುದು ಈಚಿಗೆ ಹೊಮ್ಮಿದ ಪತ್ರಿಕಾ/ಲೇಖಕ/ಲೋಕದ ಕೆಟ್ಟಕೊಡುಗೆ.

    ಪ್ರಿಯ ಸೋಮ,
    ಕನ್ನಡದ ವೃತ್ತಗಳಿಗೆ ಯತಿನಿಯಮವೇನಿಲ್ಲ. (ಕಂದಕ್ಕೆ ಉಂಟು!) ಹೀಗಾಗಿ ಪ್ರಸಾದರ ಪದ್ಯ ಅನವದ್ಯ.
    ಜನಾಂತಿಕವಾಗಿ ಒಂದು ಮಾತು (aside talk) ಗಾದೆಯೇ ಉಂಟಲ್ಲ, ಕನ್ನಡಕ್ಕೆ ಯತಿಯಿಲ್ಲ ಕೋಣನಿಗೆ ಮತಿಯಿಲ್ಲ ಎಂದು:-)

    • ಗಣೇಶ್ ಸರ್,

     ಒಪ್ಪುತ್ತೇನೆ ಸರ್, ಮತ್ತೆ ಈ ಪದ್ಯವನ್ನು ಓದಿಕೊಂಡೆ, ಒಂದು ಪ್ರಶ್ನೆ ಮೂಡುತ್ತಿದೆ…
     ಕೆಲವೊಂದು ಪದ್ಯವನ್ನು ಓದುವಾಗ ಯತಿಯಿಲ್ಲದಕಾರಣ ಗದ್ಯದಂತೆಯೇ ಓದುವುದಾಗುತ್ತದೆ. ಆದರೆ ಕೆಲವೊಂದು ಪದ್ಯವನ್ನು ಯತಿಸ್ಥಾನ ಪಲ್ಲಟವಾಗಿದ್ದರೂ ಪದ್ಯದಂತೆಯೇ ಓದಿಕೊಳ್ಳಬಹುದು. ಏನು ವ್ಯತ್ಯಾಸವೆಂದು ಯೋಚಿಸುತ್ತಿದ್ದೇನೆ.

     ಲಘುಬಾಹುಳ್ಯವಿರುವೆಡೆ ಈ ಅಡತಡೆ ಪಂಚಮಾತ್ರಾ ಗಣಗಳಲ್ಲಿ ಹೆಚ್ಚು ಗೋಚರವಾಗುವುದು ಹಿಂದೆ ಗಮನಿಸಿ ಚರ್ಚಿಸಿದ್ದೇವೆ, ಆ ಅಂಶವನ್ನು ಇಲ್ಲೂ ಪರಿಗಣಿಸಬಹುದಲ್ಲವೆ?
     ಉದಾಹರಣೆಗೆ ಈ ಪದ್ಯದಲ್ಲಿ ಮೊದಲ 2 ಸಾಲಿನ 2ನೇ ಲಘುಬಾಹುಳ್ಯಗಣದಲ್ಲಿ 2 ಅಕ್ಷರವಾದ ಮೇಲೆ ಯತಿಯಿದೆ… ಇದಾದರೂ ಸ್ವಲ್ಪತೇಲಿಸಿ ಪದ್ಯದ ಧಾಟಿಯಲ್ಲಿ ಓದಿಬಿಡಬಹುದು

     ಆದರೆ ಸರ್ವಲಘು ಗಣದಲ್ಲಿ ಒಂದೇ ಒಂದು ಅಕ್ಷರವನ್ನು ಹಿಂದಿನ ಗಣಕ್ಕೆ ಕೊಡುವುದು ಅಥವಾ… ಮುಂದಿನ ಗಣಕ್ಕೆ ಕೊಟ್ಟಾಗಲಂತೂ ಪದ್ಯರೂಪದಲ್ಲಿ ಓದುವುದು ಅಸಾಧ್ಯವೆಂದೆನಿಸುತ್ತದೆ…
     ಉದಾಹರಣೆಗೆ ಈ ಪದ್ಯದಲ್ಲಿ 4ನೇ ಸಾಲಿನ 2ನೇ ಗಣವನ್ನು ಗಮನಿಸಿದರೆ ಹಿಂದಿನ ಗಣ ಮತ್ತು ಮುಂದಿನ ಗಣ ಎರಡೂ ಒಂದಕ್ಷರದ ಎರವಲು ಪಡೆದಿದೆ “ದೆ ಹಿತಮೆ ಪು” ಈ ಬಳಕೆಯನ್ನು ಮನಸ್ಸು ಒಪ್ಪುತ್ತಲೇ ಇಲ್ಲ 🙂

     ನಿಮ್ಮ ಅಭಿಪ್ರಾಯ ತಿಳಿಸಿ ಸರ್

     ಪ್ರಸಾದು, ಈ ಪದ್ಯವನ್ನು ಬಹಳ ಮೆಚ್ಚಿಕೊಂಡಿದ್ದೇನೆ, ಇತರರಿಗೂ ನನಗೂ ಸಂಶಯ ನಿವಾರಣೆಗೆ ಉದಾಹರಣೆಗಯಾಗಿ ತೆಗೆದುಕೊಂಡಿದ್ದೇನಷ್ಟೆ 🙂

    • ಲಕ್ಷ್ಯಪದ್ಯವೆಂಬಷ್ಟಾದರೂ ಪುರಸ್ಕಾರ ನೀಡಿದಿರಲ್ಲ. ಧನ್ಯವಾದಗಳು ಸೋಮ 😉

     • ಪ್ರಸಾದು, ಯತಿಯ ಬಳಕೆಯಲ್ಲಿ ಕೆಲವೊಮ್ಮೆ ನನಗೆ ಸಂದೇಹಗಳು ಬರುತ್ತಿದೆ, ನೀವೆ ಹಲವಾರು ಬಾರಿ ಈ ವಿಷಯದಲ್ಲಿ ನನ್ನ ಪದ್ಯಗಳನ್ನು ತಿದ್ದಿದ್ದೀರಿ. ನಾನು ಸಧ್ಯಕ್ಕೆ ಬಳಸುತ್ತಿರುವ ಮಾರ್ಗವೇನೆಂದರೆ ಪದ್ಯದ ಸಾಲನ್ನು ಹೇಳಿಕೊಂಡಾಗ ಪದ್ಯದ ಛಂದಸ್ಸಿನ ಧಾಟಿ ಬಂದಿದೆಯೇ ಎಂದು ನೋಡಿಕೊಳ್ಳುವುದು. ಯಾವ ಅಂಶವನ್ನು ಪರಿಹರಿಸಿದರೆ ಯತಿತಪ್ಪಿಸಿದರೂ ತಡೆಯುತ್ತದೆ ಎಂದು ತಿಳಿಯಬೇಕಿತ್ತು. ನಿಮ್ಮ ಪದ್ಯವನ್ನು ಓದಿದಾಗ ಈ ಅನಿಸಿಕೆಗಳ ನೆನಪಾಯಿತು ಅಷ್ಟೆ 🙂

      ಗಣೇಶ್ ಸರ್ ಅವರ ಅಭಿಪ್ರಾಯ ಎಲ್ಲರಿಗೂ ಮಾರ್ಗದರ್ಶನ ನೀಡುವುದರಿಂದ ನನ್ನ ಮನದ ಗೊಂದಲವನ್ನು ವಿವರಿಸಿದ್ದೇನೆ

     • If u had noticed my smilie, you would not have taken so much pains 🙂

    • ಕೃತಜ್ಞತೆಗಳು ಸರ್. ಮೂಲದಲ್ಲೇ ಸರಿಪಡಿಸಿದ್ದೇನೆ.

   • ಸೋಮ,
    ಓದೋದಕ್ಕೇ ನಿಮ್ಗಷ್ಟ್ ಕಷ್ಟ್ವಾದ್ರಿನ್ನೆಷ್ಟ್ಕಷ್ಟ ನನ್ಗೆ|

    ಓದಕ್ಕಾಗ್ಲಾರ್ದಂಗ್ಬರ್ಯಕ್ಕಾಗಿರ್ಬೇಡಯ್ಯ ಸೋಮ?

 7. ಕದ್ದಂದುಂನಾಂ ಮೆಲ್ಲಲುಂ ಬೆಲ್ಲಮಾಗಲ್
  ಬಿದ್ದತ್ತಿದ್ದಾ ಬಾಲ್ಯವುಂ ಕಷ್ಟಸಾಧ್ಯಂ ।
  ಸದ್ದಂಕೇಳ್ದಂದಮ್ಮನುಂ ಮೆಲ್ಲನೆತ್ತಿಂ
  ಮುದ್ದಿಟ್ಟಿದ್ದಾ ಬಾಲ್ಯಮೇ ಬಾಳ ಭಾಗ್ಯಂ ।।

  • ಒಳ್ಳೆಯ ಪದ್ಯ, ಚೆನ್ನಾದ ಭಾಷೆ ಮತ್ತು ಬಂಧಗಳು ಕೂಡಿಬಂದಿವೆ. ಅಭಿನಂದನೆಗಳು.
   ಒಮ್ದು ಸಣ್ನ ಸವರಣೆ:
   ಸದ್ದಂ ಕೇಳ್ದಂದಮ್ಮನೆತ್ತೆನ್ನನೊಳ್ಪಿಂ
   (ಎತ್ತಿಂ ಎಂಬುದು ಅಸಾಧುರೂಪ ಹೀಗಾಗಿ ಈ ತಿದ್ದುಗೆ)

   • ಧನ್ಯವಾದಗಳು ಗಣೇಶ್ ಸರ್,
    ತಿದ್ದಿದಿರಿ, ಅಮ್ಮನಂತೆನ್ನನೊಳ್ಪಿಂ. ನಿಜವಾಗಿ “ಪದ್ಯಪಾನವದೆನ್ನ ಬಾಳ ಭಾಗ್ಯಂ “

 8. ಪಳೆಯದಿನಗಳಂದಂ|ಕಾಣುಲುತ್ಸುಕ್ತನಾಗ
  ಲ್ಕುಳಿದನೆನಪಿನಿಂದಂ|ಮುಚ್ಚಿದಂ ಕಣ್ಗಳಂ ಮೇಣ್
  ಬಿಳಿಯ ಪಟಲಚಿತ್ತಂ|ಗೈಯ್ಯೆ ಚಿತ್ರಾವೃತಂ ತಾಂ
  ಕುಳಿತುಮನಕೆಪೇಳ್ದಂ|ಬಾಲ್ಯಮೇ ಬಾಳ ಭಾಗ್ಯಂ

  ಮಾಲಿನಿಯಲ್ಲಿ ನನ್ನ ಮೊದಲನೆ ಪ್ರಯತ್ನ…

  • ೩ನೆಯ ಪಾದ: ’ಪಟಲ’ ಎಂದರೆ ’ಪಟಲದೊಳ್/ಪಟಲವಂ’ ಎಂದಂತಾಗದು. ’ಪಟಲವ ಚಿತ್ತಂ ಗೈಯೆ’ ಅಥವಾ ’ಪಟಲಚಿತ್ತಂಗೊಳ್ಳೆ’ ಎಂದು ಸವರಬೇಕಾಗುತ್ತದೆ.
   ೪ನೆಯ ಪಾದ: ’ಮನಕೆ ಪೇಳ್ದ’ ಎನ್ನುವುದಕ್ಕಿಂತ (ಪುಳಕಿತ) ’ಮನವು ಪೇಳಿತು’ ಎಂದರೆ ಇನ್ನೂ ಸೊಗಯಿಸುತ್ತದೆ.
   ಕಲ್ಪನೆ ಚೆನ್ನಾಗಿದೆ.

  • ಪ್ರಿಯ ಚೀದಿ,
   ಒಳ್ಳೆಯ ಪ್ರಯತ್ನ. ಈ ನಿನ್ನ ಮೊದಲ ವೃತ್ತರಚನೆಗಾಗಿ ಹಾರ್ದಿಕ ಅಭಿನಂದನೆಗಳು.
   ಒಂದೇ ಒಂದು ಸವರಣೆಯಿದೆ:
   …………………….ಕಾಣಲೌತ್ಸುಕ್ಯಮುರ್ಕ-
   ಲ್ಕು……………………………………

   • ಧನ್ಯವಾದಗಳು ಸಾರ್…. ಉರ್ಕು ಎಂಬ ಪದವನ್ನು ಕೇಳಿರಲಿಲ್ಲ… ಸೋಮನಿಂದ ಅರ್ಥವನ್ನು ತಿಳಿದೆ 🙂

    • ನಮಗೂ ತಿಳಿಸಿದರೆ ಉತ್ತಮ

    • ಉಕ್ಕು-ಉರ್ಕು, ಪೆಚ್ಚು-ಪೆರ್ಚು, ಕಪ್ಪು-ಕರ್ಪು.
     ‘ಟ’ವರ್ಗ ಹಾಗೂ ‘ತ’ವರ್ಗಗಳಲ್ಲಿ ಹೀಗೆ ಮಾಡಲಾಗದೆ? ಕೊಬ್ಬಿದ-ಕೊರ್ವಿದ. ಗೌಡೀಯರ ‘ಬ”ವ’ಯೋರಭೇದದ ಮೂಲವು ಇದೇ ಇರಬೇಕು.

 9. ಮಾಲಿನೀ||
  ಮಗುವದು ’ಮನೆಮುದ್ದನ್’| ಮೀರ್ದೊಡಂ ಪತ್ತು ವರ್ಷಂ
  ವೆಗಟದಹುದೆ? ಮುದ್ದುಂ| ಹೆಗ್ಗಣಂ ಪೆತ್ತವರ್ಗಂ|
  ಸೊಗಸುಗು ’ಜನಮುದ್ದನ್’| ನಾಲ್ಕರೊಳ್ಗಿರ್ಪ ಕಂದಂ
  ಹೊಗರನಿಬರಿಗಿಷ್ಟಂ| ಬಾಲ್ಯಮೇ ಬಾಳಭಾಗ್ಯಂ||

 10. ಮಕ್ಕಳೆಷ್ಟು ಮುಗ್ಧರೆಂದು ನಮ್ಮಮ್ಮ ಹೇಳಿದ ಕಥೆಯನ್ನು ಸ್ವಲ್ಪ ಬದಲಿಸಿದ ಪೂರಣ, ಇಂಥ ಮುಗ್ಧಬಾಲ್ಯವೆ ಸೊಗಸು:

  ಬಾಲಂ ಬೆಚ್ಚುತ್ತೆ ಬಿಂಬಂ ಕೊಳದೆ ನಡುಕಮಂ ಗೈವುದಂ ಕಂಡು ರಾಕಾ-
  ಪಾಲಂ ಸಂತ್ರಸ್ತನಲ್ತೇ! ಎಳೆವೆ ತಟಕೆ ನೀರ್ವಳ್ಳಿಯೊಡ್ಡುತ್ತೆನಲ್ ಹಾ
  ಕಾಲನ್ನೊತ್ತುತ್ತೆ ಜಗ್ಗುತ್ತೆಳೆದ ಕರವು ಜಾರುತ್ತೆ ಬೀಳಲ್ಕದಭ್ರ-
  ಕ್ಕೇಲಾಟಂ ಮಾಳ್ದಪಂ ದಲ್ ಬದುಕಿದನೆನಿಪಾ ಬಾಲ್ಯಮೇ ಬಾಳ ಭಾಗ್ಯಂ

  ಒಬ್ಬ ಹುಡುಗನು ಚಂದ್ರಬಿಂಬವನ್ನು ಕೊಳದಲ್ಲಿ ಕಂಡು ಚಂದ್ರನೇ ಮುಳುಗುತ್ತಿದ್ದಾನೆಂಬ ಭ್ರಮೆಯಿಂದ ಅವನನ್ನು ರಕ್ಷಿಸಲು ಕೊಳದಲ್ಲಿದ್ದ ನೀರಿನಬಳ್ಳಿಯ ಆಸರೆ ಆಬಿಂಬಕ್ಕೆ ಕೊಟ್ಟು ಎಳೆದನು, ಆಗ ಜಾರುತ್ತ ಬಿಳಲು ಅವನಿಗೆ ಆಕಾಶದಲ್ಲಿರುವ ಚಂದ್ರ ಕಂಡನು. ಸಧ್ಯ ತಾನು ಎಳೆದದ್ದಕ್ಕೆ ಚಂದ್ರ ಮತ್ತೆ ಆಗಸ ಸೇರಿದನೆಂದು ತೃಪ್ತಿಪಡುವ (ಮುಗ್ಧ) ಮುಗ್ಧಬಾಲ್ಯವೆ ಸೊಗಸು/ಭಾಗ್ಯ

  ಏಲು = swing -> ಅಭ್ರಕ್ಕೇಲಾಟಂ = swung to sky

  • ಪ್ರಿಯ ಸೋಮ,

   ಅಂತೂ ಎಲ್ಲ ಬಗೆಯ ಛಂದಸ್ಸಾಧ್ಯತೆಯಿಂದ ಒಳ್ಳೆಯ ಹುರುಪಿನಲ್ಲಿ ಪದ್ಯಗಳನ್ನು ಬರೆದ ನಿನಗೆ ಹಾರ್ದಿಕಾಭಿನಂದನೆಗಳು. ಇ ಸ್ರಗ್ಧರೆಯೂ ಚೆನ್ನಾಗಿದೆ. ಅಲ್ಲಲ್ಲಿ ಒಂಡೆರಡು ನಡು-ಹೊಸಗನ್ನಡಗಳ ಪ್ರಯೋಗಗಳನ್ನು ವಿನಾಯಿಸಿದರೆ ಇದು ಸಮರ್ಥವಾದ ಹಳಗನ್ನಡದ ರಚನೆಯೇ ಆಗಿದೆ.
   ಇನ್ನು .ವೃತ್ತಗಳಲ್ಲಿ ಯತಿಸ್ಥಾನದ ಬಗೆಗೆ ನೀನು ಎತ್ತಿರುವ ಪ್ರಶ್ನೆ ಗಟ್ಟಿಯಾದುದು; ಇಲ್ಲಿ ನಿನ್ನ ಆನಿಸಿಕೆಯೇ ಯುಕ್ತವೆನ್ನಬೇಕು. ನಾನು ಯತಿವಿಲಂಘನವನ್ನು ಒಪ್ಪಿದ್ದು ಕೇವಲ ಕನ್ನಡದ ಪೂರ್ವಕವಿಗಳೆಲ್ಲ ಒಪ್ಪಿದ್ದಾರೆಂದು, ಮತ್ತಿದು ಹಲವರ ಪಾಲಿಗೆ ವೃತ್ತರಚನೆಯನ್ನು ಕೆಲಮಟ್ಟಿಗೆ ಸುಲಭವಾಗಿಸುವುದೆಂದು. ಆದರೆ ವೈಯಕ್ತಿಕವಾಗಿ ನನಗೆ ಯತಿಪ್ರಬಲವಾದ ಮಂದಾಕ್ರಾಂತೆ, ಶಾಲಿನಿ, ಮಾಲಿನಿ, ಹರಿಣಿ, ಶಿಖರಿಣಿ, ಪೃಥ್ವಿ ಪ್ರಹರ್ಷಿಣಿ, ರುಚಿರೆ ಮುಂತಾದುವುಗಳಲ್ಲಿ ಯತಿಪಾಲನೆಯೇ ಇಷ್ಟ ಹಾಗೂ ಶ್ರೇಷ್ಠವೆನಿಸಿದೆ. ಕೇವಲ ಚಂಪಕೋತ್ಪಲಮಾಲೆಗಳು, ಮಲ್ಲಿಕಾಮಾಲೆ-ತರಳಗಳು,
   ಹಾಗೂ ಕೆಲಮಟ್ಟಿಗೆ ಮಾತ್ರ ಶಾರ್ದೂಲ-ಮತ್ತೇಭವಿಕ್ರೀಡಿತಗಳು ಯತಿಯನ್ನು ಮೀರಲು ಅವಕಾಶವಿತ್ತಾವೆನಿಸುತ್ತದೆ.

   ಅವಧಾನ ಮತ್ತು ಪದ್ಯಪಾನಗಳಂಥ ಸಾಂಪ್ರದಾಯಿಕಪದ್ಯವಿದ್ಯಾವೇದಿಕೆಗಳ ಆಚೆಗೆ ನಾನು ಕಂದ-ವೃತ್ತಾದಿಗಳನ್ನು ರಚಿಸುವಾಗ ಆದಿಪ್ರಾಸವನ್ನು ಇಟ್ಟೂ ಬಿಟ್ಟೂ ಕೂಡ ಹೆಣೆಯುತ್ತೇನೆ. ನನ್ನ ಮಟ್ಟಿಗೆ ಆದಿಪ್ರಾಸ ಮತ್ತು ಯತಿಗಳನ್ನು ಕುರಿತಂತೆ ಹೀಗೆ ತೋರುತ್ತದೆ. ಯತಿಪಾಲನೆಯು ಆದಿಪ್ರಾಸಪಾಲನೆಗಿಂತ ಮಿಗಿಲು ಯುಕ್ತ, ಹಿತ.ಹಾಗೂ ಪದ್ಯವು ಅನುಪ್ರಾಸಭರಿತವಾಗಿದ್ದಲ್ಲಿ ಯತಿರಹಿತವಾಗಿ ಕೇವಲ ಆದಿಪ್ರಾಸಕ್ಕೆ ಅಂಟಿಕೊಳ್ಲುವುದು ಬೇಕಿಲ್ಲ. ಆದರೆ ಅಭ್ಯಾಸಿಗಳು ಮಾತ್ರ ಪ್ರಾಸಾದಿನಿಯಮಗಳನ್ನೆಲ್ಲ ಪಾಲಿಸಿ ಕೈಯನ್ನು ಕುದುರಿಸಿಕೊಳ್ಳಬೇಕು.ಇಲ್ಲಿ ವಿನಾಯಿತಿ ಇಲ್ಲ:-)

   • ಧನ್ಯವಾದಗಳು ಸರ್, ಯತಿಯ ವಿಷಯದಲ್ಲಿ ಇನ್ನೊಂದೆರಡು ಸಂದೇಹಗಳಿವೆ… ನಿಮ್ಮೊಡನೆ ಮಾತಾಡಿ ತಿಳಿದಉಕೊಳ್ಳುತ್ತೇನೆ 🙂

    ಈ ಪ್ರಯೋಗಗಳಲ್ಲಿ ಹಳಗನ್ನಡ ಸಡಿಲಿಸಿದೆಯಲ್ಲವೇ, ಒತ್ತಕ್ಷರ ಬೇಕಿಲ್ಲವೇನೋ ಎನಿಸುತ್ತದೆ? ಈ ಒತ್ತಕ್ಷರದ ಬಗ್ಗೆ ಸಾಧುಬಪ್ರಯೋಗವಾವುದು?
    ಬೆಚ್ಚುತ್ತೆ -> ಬೆಚ್ಚುತೆ
    ಒಡ್ಡುತ್ತೆನಲ್ -> ಒಡ್ಡುತೆನಲ್
    ಕಾಲನ್ನೊತ್ತುತ್ತೆ -> ಕಾಲನೊತ್ತುತೆ
    ಜಗ್ಗುತ್ತೆ -> ಜಗ್ಗುತೆ

    ಇನ್ನಾವುದಾದರು ತಪ್ಪಿದ್ದರೆ ತಿಳಿಸಿಕೊಡಿರಿ

 11. ಎಡೆಬಿಡದಲೆ ತಾನೇಕದೇಕೆಂದು ಕೇಳ್ಗುಂ
  ನುಡಿವೊಡೆ ಮೊಗಮನ್ನೋಡು ನೋಡೆನ್ನುತೀಳ್ಗುಂ
  ತಡೆವೊಡೆ ಗಳಮಂ ತಳ್ವಿ ಮುತ್ತಿಟ್ಟು ಪೇಳ್ಗುಂ
  ಪಡೆದ ತನಯನಾ (ತನುಜೆಯಾ) ಬಾಲ್ಯಮೇ ಬಾಳ ಭಾಗ್ಯಂ

  • ಪ್ರಿಯ ಶ್ರೀಕಾಂತಮೂರ್ತಿಗಳೇ,

   ಬಹುದಿನಗಳ ಬಳಿಕ ಮತ್ತೆ ಬರೆಯುತ್ತೀದ್ದೀರಿ; ದಯಮಾಡಿ ಹೆಚ್ಚು ಬರೆಯುತ್ತಿರಿ.
   ಈ ವೃತ್ತವಾವುದು? ತಿಳಿಯಲಿಲ್ಲ. ದಯಮಾಡಿ ತಿಳಿಸಿರಿ. ಪದ್ಯಭಾವ ತುಂಬ ಚೆಲುವಾಗಿದೆ

   • ಧನ್ಯವಾದ ಗಣೇಶರೆ. ಇದು ವಸಂತ ವೃತ್ತ- ಛಂದೋಂಬುಧಿಯಲ್ಲಿ ಕೊಟ್ಟಿದೆ

 12. ಬದುಕು ಬವಣೆಯಲ್ತೀ ಜವ್ವನಂ ಬರ್ಪ ಕಾಲ-
  ಕ್ಕುದರಭರಣಭಾರಂ ಮತ್ತೆ ಸಂಸಾರಭಾರಂ |
  ಮುದಿತನ ಬರಲಾಗಳ್ ತಾನೆ ಪುತ್ರರ್ಗೆ ಭಾರಂ
  ಮುದದೆ ನಲಿವ ಕಾಲಂ ಬಾಲ್ಯಮೇ ಬಾಳ ಭಾಗ್ಯಂ ||

  • ಹೌದು ಪೆಜತ್ತಾಯ ಸರ್,
   ಕರುಳಿನೆಳೆಯ ಗಾಳಂ ಕಂದನುಂ ತಾಯ ಬಾಳುಂ
   ಮುದದಿ ನಲಿದ ಕಾಲಂ ಬಾಲ್ಯಮೇ ಬಾಳ ಭಾಗ್ಯಂ ।
   ಬೆರಳತುದಿಯ ಮೇಳಂ ಕಂದಗಂ ತಾಯ ತಾಳಂ
   ಮರಳಿ ಬರದ ಕಾಲಂ ಬಾಲ್ಯಮೇ ಬಾಳ ಭಾಗ್ಯಂ ।।

  • ನಳನಳಿಸುವ ಪದ್ಯಂ ಮಾಲಿನೀವೃತ್ತವಾದ್ಯಂ
   ತೊಳಗಿರೆ ಕವಿವೇದ್ಯಂ ಪದ್ಯಪಾನಕ್ಕೆ ಮೋದ್ಯಂ

 13. ವ್ಯಗ್ರತೆಯ ಭರದೊಳಾಗ್ರಹದಿ ಮನಮಿಡಿವ ಸಂ
  ದಿಗ್ಧತೆಯ ಬಾಲ್ಯವುಂ ಬಾಳ ಭಾಗಂ ।
  ನಗ್ನತೆಯರಿವಿರದ ನಿಮಗ್ನತೆಯ ವರವಿರುವ
  ಮುಗ್ಧತೆಯ ಬಾಲ್ಯಮೇ ಬಾಳ ಭಾಗ್ಯಂ ।।

  (ಸಮಸ್ಯೆಯ ಸಾಲು “ಚೌಪದಿ”ಗೆ ಹೊಂದುವುದೆಂದು ಸೋಮನಿಂದ ನಂತರ ತಿಳಿದದ್ದು !!)

  • ಐಡಿಯ ಚೆನ್ನಾಗಿದೆ. ಶರಭಪ್ರಾಸ ತಪ್ಪಿದೆ. ಬೆಸಸಾಲುಗಳಲ್ಲೂ ‘ಗ್ಧ’ ಪ್ರಾಸವನ್ನೇ ಬಳಸಿ ಸವರಿಸಿ.

   • ಧನ್ಯವಾದಗಳು ಪ್ರಸಾದು ಸರ್,
    ಯಾವಾಗಲೂ, ಈ ಶರಭಪ್ರಾಸ ಸಮೀಪಪ್ರಾಸವಾಗಿ ಹಾದಿತಪ್ಪುತ್ತದೆ. ತಿದ್ದಿದ ಪದ್ಯ:

    ದುಗ್ಧಕಂಠನಿಗದುವೆ ಬದ್ಧತೆಯ ಬದುಕ ಸಂ
    ದಿಗ್ಧತೆಯ ಬಾಲ್ಯವುಂ ಬಾಳ ಭಾಗಂ ।
    ಸ್ನಿಗ್ಧತೆಯಿರುವಿನಲಿ ನಿಮಗ್ನತೆಯ ವರವಿರುವ
    ಮುಗ್ಧತೆಯ ಬಾಲ್ಯಮೇ ಬಾಳ ಭಾಗ್ಯಂ ।।

 14. ಮಹಾಸ್ರಗ್ಧರೆ 🙂
  ಇಳೆಯೊಳ್ ವ್ಯಾಪಾರದಿಂ ಹಾ ಬಹುವಿಧದಿಮಹಂಕಾರದಬ್ಧಿಪ್ರವಿಷ್ಟರ್
  ಸುಳಿಗಳ್ ದಾಂಟುತ್ತೆ ಲಾಭಂ ಗಳಿತಮೆನುತೆ ವೃದ್ಧಾಪ್ಯಮಂ ಕಾಂಬುವರ್ ಮೇಣ್
  ಮೊಳೆಯಲ್ ಪಂಚತ್ವಭೀತಿಪ್ರಖರತೆಯಿನೆ ಚಿಂತಾವೃತರ್ ಗ್ಲಾನಿಯಿಂ ದಲ್
  ತಿಳಿಯಾ ಚಿದ್ವೃತ್ತಿಯಾಂಪರ್ ಪೊಳೆಯಲು ‘ಮನದೊಳ್ ಬಾಲ್ಯಮೇ ಬಾಳ ಭಾಗ್ಯಂ’

  ಆದದ್ದಾಯ್ತು feel young at heart to come out of misery

  ‘ಪೊಳೆಯಲು’ ಹಳಗನ್ನಡಕ್ಕೆ ಒಗ್ಗುವುದಿಲ್ಲವೆನಿಸುತ್ತದೆ
  ಚಿದ್ವೃತ್ತಿಯಾಂಪರ್ -> ಚಿದ್ವೃತ್ತಿಯನಾಂಪರ್ ಆಗಬೇಕು

 15. ನೇಮಂ ಮೀರ್ವಾ ಕಲ್ಪನೋತ್ಸುಕ್ತಚಿತ್ತಂ
  ರೋಮಂ ನಿಲ್ವೊಲ್ ವಾಜದಿಂ ಕ್ರೀಡೆಯಲ್ತೇ
  ರಾಮಸ್ಕಂದಂ ಪೇಳ್ವ ಮುನ್ನಂ ಸುಷುಪ್ತ್ಯಾ-
  ರಾಮಂ ಪಾರ್ವಾ ಬಾಲ್ಯಮೇ ಬಾಳ ಭಾಗ್ಯಂ

  ವಾಜ – speed, sound
  ಮಲಗುವಮುನ್ನ ಹೇಳಿಕೊಳ್ಳುವ ಶ್ಲೋಕ – ರಾಮಸ್ಕಂದಂ ಹನೂಮಂತಂ ವೈನತೇಯಂ ವೃಕೋದರಂ ಶಯನೇ ಯಃ ಸ್ಮರೇನ್ನಿತ್ಯಂ ದು:ಸ್ವಪ್ನಂ ತಸ್ಯನಶ್ಯತಿ

  • ಸೋಮ,
   ಯಾಕೋ (ನನ್ನ ಭಾಷಾಜ್ಞಾನದ ಮಿತಿಯಿಂದಾಗಿ?), ಆ ಶ್ಲೋಕದಲ್ಲಿ ’ಹನುಮಂತನಿಗೆ ದುಃಸ್ವಪ್ನವು ನಶಿಸುತ್ತದೆ’ ಎಂದೇ ಬೋಧೆಯಾಗುತ್ತಿದೆ!

   • ಯಃ ಶಯನೇ ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಂ ನಿತ್ಯಂ ಸ್ಮರೇತ್ ತಸ್ಯ ದು:ಸ್ವಪ್ನಂ ನಶ್ಯತಿ… 🙂

    • ಅದು ಶಯನೇಯಃ ಎಂದಿರಬೇಕು ಅಂತ ಕಾಣುತ್ತೆ

     • ಶ್ರೀಕಾಂತರೆ,
      ಹೌದಲ್ಲ… “ಶಯನೇ ಯ:”ವೇ ಸರಿ, ಎಷ್ಟು ವರ್ಷ ತಪ್ಪು ಹೇಳಿಕೊಂಡಿದ್ದೇನೆ.
      ಅದಕ್ಕೆ ದು:ಸ್ವಪ್ನ ತಪ್ಪಿಲ್ಲವೇನೋ 😉

      ತಿದ್ದಿದ್ದೇನೆ…

     • ಅದೇ ತಪ್ಪನ್ನೇ ನಾನು ಮಾಡ್ತಿದ್ದೆ ಸೋಮ. ನನ್ನ ಯಜಮಾನಿ ಸ್ವಲ್ಪ ವ್ಯತ್ಯಾಸವಾಗಿ ಹೇಳುತ್ತಿದ್ದರಾಗಿ ತತ್ಪರಿಣಾಮದ ಚಿಂತನೆಯ ಫಲವೇ ಈ ಸರಿ ರೂಪದ ಜ್ಞಾನೋದಯ

     • 🙂

     • ನೀತಿ: ಯಜಮಾನಿಯ ಯಾವತ್ತೂರೀತಿ ತುಸು ವ್ಯತ್ಯಸ್ತವಾಗಿರುವುದು ಶ್ರೇಯಸ್ಕರ 🙂

  • ಎರಡೂ ಒಳ್ಳೆಯ ಯತ್ನಗಳು. ಆದರೆ ಕೆಲವೊಂದು ಭಾಷಾದೋಷಗಳನ್ನು ನೇರವಾಗಿ ನಾಡದ್ದರ ವ್ಯಾಸಂಗಗೋಷ್ಠಿಯಲ್ಲಿ ತಿಳಿಸುವೆ.

 16. ಶಾಲಿನೀ|| ಕೂಸೆಲ್ಲಿದ್ದಲ್ಲೇ ಮಲಂ-ಮೂತ್ರಮಾಳ್ಗುಂ|
  ಮೋಸಂಗೊಂಡೇಂ ವಹ್ನಿಯಂ ಮುಟ್ಟಿತೇಂ ದಲ್?
  ವ್ಯಾಸಂಗಕ್ಕಾಲಸ್ಯಮೇ ಕಾಣದೆಂದುಂ*
  ಲೇಸಾ ಮೌಗ್ಧ್ಯಂ ಬಾಲ್ಯಮೇ ಬಾಳಭಾಗ್ಯಂ||

  *ಕಲಿಯಬೇಕಾದ ವಿಷಯಬಾಹುಳ್ಯ ಗೋಚರವಾದಂದಿನಿಂದ ಆಲಸ್ಯವೂ ಮೊದಲ್ಗೊಳ್ಳುತ್ತದೆ. ಇದರ ಪರಿವೆಯಿರದ ಮಗು ಎಚ್ಚವಿದ್ದಷ್ಟು ಹೊತ್ತೂ ಕಲಿಯುತ್ತಲೇ ಇರುತ್ತದೆ.

  • ಹಾಸ್ಯಪ್ರಜ್ಞಾಭ್ಯಕ್ತಪದ್ಯಂ ಪ್ರಸಾದುs 🙂
   ಮೊದಲನೆ ಸಾಲಿನ ಸ್ವಭಾವೋಕ್ತಿಯಲಂಕಾರದ ವರ್ಣನೆ ಬಹಳ ನಗುತರಿಸಿತು…

   • ವರ್ಣನೆ? ಕಂಡದ್ದನ್ನು ಕಂಡಂತೆ ಹೇಳಿದ್ದೇನೆ. ವರ್ಣಿಸಿಲ್ಲವಲ್ಲ!

    • ಪ್ರಸಾದು, ಮೊದಲಪದ್ಯದ ಸಾಲೇ ಅಲ್ಲದೆ, ನಿಮ್ಮ ಕಾಮೆಂಟ್ ಕೂಡಾ ವರ್ಣನೆಯೇ ಎನಿಸುತ್ತದೆ…
     ನನಗೂ ಗೊತ್ತಿರಲಿಲ್ಲ ಅಪ್ಟೆಯಲ್ಲಿ ಹೀಗೆ ಹೇಳಿದೆ:
     search `varNana’ in `Apte Dic’
     meanings of “varNana”
     n.{a-stem}
     1.painting;
     2.description;
     3.writing;
     4.a statement;
     5.praise

 17. ಗಡಿಗೆಯೊಡೆದು ತಾನ್ ಬೆಣ್ಣೆಯಂ ಕದ್ದು ಚಪ್ಪರಿಸಿಯುಂಬಂ
  ಬಡಿಗೆಯಿಂದೂರ ಮಕ್ಕಳಂ ಬಡಿದೋಡಿ ಬೈತುಕೊಂಬಂ
  ಉಡಿಗೆಯಂಬೊತ್ತು ಮರನೇರಿಯೋ ಗೋಪಿ! ಬಾ ಕೊಳ್ಳೆಂಬಂ
  ಬಡ ಗೊಲ್ಲರಿಗವ್ವೆ ಕೃಷ್ಣನ ಬಾಲ್ಯಮೇ ಬಾಳ ಭಾಗ್ಯಂ !!!

  • ಗೊಲ್ಲರಿಗವ್ವೆ?

   • ಗೊಲ್ಲರಿಗೆ+ಅವ್ವೆ
    ಗೊಲ್ಲರು ಯಶೋದೆ ಅವ್ವೆಗೆ ಬಂದು ದೂರುತ್ತಿದ್ದಾರೆ- ನಡುವಣಕ್ಕರದಲ್ಲಿ

   • ವಣಕ್ಕಂ 🙂
    ’ದೂರು’ ಅಥವಾ ತತ್ಸಮಾನ ಶಬ್ದ ಪದ್ಯದಲ್ಲಿಲ್ಲವಲ್ಲ!
    ದಯವಿಟ್ಟು ಕೊನೆಯ ಪಾದದ ಅರ್ಥವನ್ನು ಬಿಡಿಸಿ ಹೇಳಿ. ಇದರ ಮೊದಲ ಏಳು ಅಕ್ಷರಗಳಲ್ಲಿ ’ಇಷ್ಟು ತುಂಟನಿದ್ದೂ ಪ್ರಿಯನಾದ’ ಎಂದು ಹೇಳಿದರೆ ಸೊಗಯಿಸುತ್ತದೆ ಎಂದು ನನ್ನ ಮತ.

    • ಬಡಗೊಲ್ಲರಿಗೆ ತಾಯೆ(ಯಶೋದೆ) ಕೃಷ್ಣನ ಬಾಲ್ಯವೇ ಬಾಳ (ದೌರ್/ಸೌ)ಭಾಗ್ಯವಾಗಿದೆ!

     ಹೀಗೆ ಕೊನೆಯಸಾಲಿನ ಅರ್ಥ.

     ದೂರು ಅಂತ ಬಂದಿದ್ದರೇ ದೂರಾಗಬೇಕೆ? ಅದು ಸೂಚ್ಯ ಅಷ್ಟೆ.

     ಕೃಷ್ಣ ಹೀಗೆಲ್ಲ ಮಾಡಿದರೂನು ಚಂದ ಅಂತ ನಮಗೆನಿಸಬಹುದು. ಅನುಭವಿಸಿದವರಿಗೆ ಹಾಗೇ ಅನ್ನಿಸಿರುತ್ತಯೆ?

   • ‘ಬಡಗೊಲ್ಲರಿಗವ್ವೆ’ ಎಂಬುದು ಸಂಬೋಧನೆ ಎಂದಾದರೆ, ‘ಕೃಷ್ಣ ಹೀಗೆಲ್ಲ ಮಾಡಿದರೂನು ಚಂದ ಅಂತ ನಮಗೆನಿಸಬಹುದು. ಅನುಭವಿಸಿದವರಿಗೆ ಹಾಗೇ ಅನ್ನಿಸಿರುತ್ತಯೆ?’ ಎಂಬ ನಿಮ್ಮ ಮಾತನ್ನು ನೀವೇ ಅಲ್ಲಗೆಳೆದಂತಾಯಿತು!
    “ಬಡಗೊಲ್ಲರಿಗವ್ವೆಯೆ ಕೇಳು. ಬೆಣ್ಣೆಯಂ ಕದ್ದು, ಬೈತುಕೊಂಡು, ಉಡಿಗೆಯಂಬೊತ್ತುಕೊಂಡೊಯ್ವ ಕೃಷ್ಣನ ಬಾಲ್ಯಮೇ ಭಾಗ್ಯಂ.” ಎನ್ನುವಲ್ಲಿ, ಆ ಕಷ್ಟಗಳನ್ನು ಅನುಭವಿಸಿದವರೇ ಮೆಚ್ಚಿದಂತಾಗಲಿಲ್ಲವೆ?
    ಸಲಹೆಯೆನ್ನದಿರ್ಪುದಯ್ಯ ಕವಿಯ ಮಾತೊಲ್|
    ಪಲುಕಿರುವಿರಿ ನೀಮಾ ನೊಂದವರ ಮಾತೊಲ್|
    ನಿಲವೊಳಿನಿತಯ್ಯ ವ್ಯತ್ಯಾಸಂ| (ಕುರಟ್‍ಪಾ :))

    • ಸ್ವಾಮಿ. “ಐರನಿ” ಅಂತ ನೀವು ಕೇಳಿಲ್ಲವೆ? ಇಲ್ಲಿ ನಾನು ಅದನ್ನೇ ಬಳಸಿರೋದು. ಅದಕ್ಕೇ ಕೊನೆಯಲ್ಲಿ ಒಂದಲ್ಲ ಮೂರು ಆಶ್ಚರ್ಯಸೂಚಕ ಗುರುತನ್ನು ಹಾಕಿರೊದು.
     ನೀವು ಹೇಳಿದಂತೆಯೂ ಅರ್ಥೈಸಿಕೊಳ್ಳ ಬಹುದು (ನಿಂದಾಸ್ತುತಿಯಾಗಿ). ಅದು ಓದುವವರಿಗೆ ಬಿಟ್ಟಿದ್ದು. ಅದು ನನ್ನ ಪದ್ಯದ ಕುಂದಲ್ಲ ಅಂತ ನಾನಂದುಕೊಂಡಿದ್ದೀನಿ

     ಮೊದಲ ಅರ್ಥವಾದರೆ ಅವ್ವೆ ಸಂಬೋಧನೆ. ಎರಡನೆಯ ಅರ್ಥವಾದರೆ ಆಸ್ಚರ್ಯಸುಚಕ ಸೊಲ್ಲು.

    • ನಿಂದಾಸ್ತುತಿಯಲ್ಲಿ ನಿಂದೆಯು ವಾಚ್ಯವಾಗಿಯೂ ಸ್ತುತಿಯು ಸೂಚ್ಯವಾಗಿಯೂ ಇರುತ್ತದೆ. ನಿಮ್ಮ ಪದ್ಯದಲ್ಲಿ ಎರಡೂ ವಾಚ್ಯವಾಗಿದೆಯಲ್ಲ!

    • ಪ್ರಸಾದು-ರವರೆ. ನನ್ನ ಒಂದು ಬಿಡಿಪದ್ಯದ ಬಗ್ಗೆ ಇಷ್ಟು ಮುತುವರ್ಜಿ ವಹಿಸ್ತಿದ್ದೀರ- ಅದು ನನ್ನ ಭಾಗ್ಯ. ನಿಮ್ಮ ಆಕ್ಷೇಪಣೆ ಏನು ಅನ್ನೋದನ್ನ ದಯವಿಟ್ಟು ಸ್ಪಷ್ಟೀಕರಿಸಿ.

     ಮೊದಲು ಇದು ದೂರಲ್ಲ ಹೊಗಳಿಕೆ ಅಂದಿರಿ. ದೂರು ಅನ್ನೋದನ್ನ ಬಿಡಿಸಿ ಹೇಳಿದಮೇಲೆ ಈಗ ಸ್ತುತಿಯಲ್ಲ ಅಂತೀರಿ. ನಿಂದೆ ಸ್ತುತಿ ಎರಡು ವಾಚ್ಯವಾಗಿದೆ ಅಂತಿದ್ದೀರ. ನಾನು ಪದ್ಯದಲ್ಲಿ ಹೇಳಿರುವುದು ವಿವರಣೆ- ಅದರಲ್ಲಿ ನಿಂದೆ ಎಲ್ಲಿ ವಾಚ್ಯವಾಗಿದೆ, ಸ್ತುತಿ ಎಲ್ಲಿ ವಾಚ್ಯವಾಗಿದೆ ಅಂತ ಸ್ವಲ್ಪ ತಿಳಿಸಿ.

     ರವಿ ಕಾಣದ್ದನ್ನು ಕವಿ ಕಾಣೋದು ಹಾಗಿರಲಿ, ಕವಿ ಕಾಣದ್ದನ್ನು ನೀವು ಕಾಣ್ತಿದ್ದೀರಿ.

    • ಶಂ||

  • ಶ್ರೀಕಾಂತರೆ ಪದ್ಯವನ್ನು ನಡುವಣಕ್ಕರಕ್ಕೂ ಹೊಂದಿಸಬಹುದೆಂದು ತೋರಿದ್ದಕ್ಕೆ, ಧನ್ಯವಾದಗಳು 🙂

   ಗಣೇಶ್ ಸರ್, ಅಕ್ಕರಗಳ ಲಕ್ಷಣಬವೇನು? ಬಗೆಗಳಾವುವು? ತಿಳಿಸಿಕೊಡಿರಿ

   • ಹಲವಾರು ಛಂದೋಬಂಧಗಳು ಪ್ರಸ್ತುತ ದತ್ತವಾಕ್ಯಕ್ಕೆ ಸೂಕ್ತವಾಗುತ್ತವ. ಉದಾ: ಮೇಘವಿಸ್ಪುರಿತ (ಯ-ಮ-ನ-ಸ-ರ-ರ-ಗ). ಅವಕ್ಕೆ ಕೈಹಾಕದೆ ಗಮನಿಸುತ್ತಿದ್ದಾಗ, ಕಂಡುಬಂದ ಶ್ರೀಕಾಂತರ ನಿರಂತರ ನೂತನಾನ್ವೇಷಣೋತ್ಸಾಹ ಪ್ರಶಂಸನೀಯ.

    ಅವರ ಪದ್ಯಪೂರಣ ಪ್ರಶಸ್ತವಾದ ನಡುವಣಕ್ಕರ ನಿಬದ್ಧ. ಇದರ ಮತ್ತೊಂದು ರೂಪ, ಬದಲಾವಣೆಯೊಂದಿಗೆ ತೆಲುಗಿನಲ್ಲಿ ಮಧ್ಯಾಕ್ಕರವಾಗಿದೆ. (ಅಲ್ಲಿ ಪ್ರತಿಪಾದದಲ್ಲಿ ಎರಡು ಇಂದ್ರಗಣ, ಒಂದು ಸೂರ್ಯಗಣ, ಮತ್ತು ಎರಡು ಇಂದ್ರಗಣ ಮತ್ತು ಒಂದು ಸೂರ್ಯಗಣ (ಅಲ್ಲಿನ ಇಂದ್ರಗಣ ಕನ್ನಡಕ್ಕೆ ವಿಷ್ಣುಗಣ, ಸೂರ್ಯಗಣ- ಬ್ರಹ್ಮಗಣ). ವಿಶ್ವನಾಥ ಸತ್ಯನಾರಾಯಣ ಮಧ್ಯಾಕ್ಕರದಲ್ಲಿ ಹನ್ನೊಂದು ಶತಕಗಳನ್ನೇ ರಚಿಸಿದ್ದಾರೆ.

    ನಡುವಣಕ್ಕರದ ಪ್ರತಿಪಾದದಲ್ಲಿ ಬರುವ ಗಣಗಳು: ಒಂದು ಬ್ರಹ್ಮಗಣ ಮೂರು ವಿಷ್ಣುಗಣಗಳು ಮತ್ತು ಒಂದು ರುದ್ರಗಣ, ಒಟ್ಟು ಐದು ಗಣಗಳು (ಕಾಮಬಾಣಾವಳಿ). ಈ ಕ್ರಮದಲ್ಲಿ ತಾಳಬದ್ದವಾಗಿಸಿ ಪದ್ಯವನ್ನು ಅಂಶಗಣದ ಧಾಟಿಯಲ್ಲಿ ಹಾಡಿಕೊಂಡಾಗ, ತಾಳಪ್ರಕ್ರಿಯೆಯಲ್ಲಿ ಆರು ಘಾತಗಳು ಬೀಳುತ್ತವೆ.

    ೧(ಗಡಿಗೆ) ೨(ಯೊಡೆದು ತಾನ್) ೩(ಬೆಣ್ಣೆಯಂ)೪ (ಕದ್ದುಚ) ೫ (ಪ್ಪರಿಸಿಯುಂ೬ಬಂ) ಬ್ರ-ವಿ-ವಿ-ವಿ-ರು

    ಲಕ್ಷಣ ಪದ್ಯ||

    ಜಲಜಸಂಭವ ಗಣಮಕ್ಕೆ ಮೊದಲೊಳ ನಡುವೆ ಮೂರುಂ
    ಜಲರುಹೋದರ ಗಣಮಕ್ಕೆ ಕಾಮಾಂತಕ ಗಣಮಕ್ಕುಂ
    ತಿಲಕದಂತಿರೆ ತಲೆಯೊಳೆ ಬಂದಿಕ್ಕೆ ಕಾಮಬಾಣಾ
    ವಳಿಯ ಪಾಂಗೆಯ್ದೆ ಗಣಮಕ್ಕೆ ನಡುವಣಕ್ಕರಕೆ, ಸಖೀ (ನಾಗವರ್ಮಕೃತ ಛಂದೋಂಭುಧಿ ೩೦೪)

    • ಸೋಮ, ಚಂದ್ರಮೌಳಿಯವರೆ- ನಿಮ್ಮ ಮೆಚ್ಚುಗೆಯ ಮಾತಿಗೆ ನಾನು ಋಣಿ. ಚಂದ್ರಮೌಳಿಯವರು ಸ್ವಯಂ ನವನಬೀನತೆಯನ್ನು ತಮ್ಮ ಕವನಗಳಲ್ಲಿ ಸದಾ ಮೆರೆಯುವವರು.

     ಮೇಘವಿಸ್ಫೂರ್ಜಿತಕ್ಕೆ ಹತ್ತಿರವಾದ ವಿಜಯಾನಂದ ವೃತ್ತದಲ್ಲಿ ನಾನು ಆಗಲೆ ರಚಿಸಿದ್ದೆನಾಗಿ (ದ್ರೌಪದೀವಸ್ತ್ರಾಪಹರಣ ಸಂದರ್ಭ) ಅದಕ್ಕೆ ಕೈಹಾಕಲಿಲ್ಲ.

     http://padyapaana.com/?p=1593#comment-11254

     ಅಂದಹಾಗೆ ನೀವು ಕೊಟ್ಟಿರುವ ತೆಲುಗಿನ ಮಧ್ಯಾಕ್ಕರ ಕನ್ನಡದ ದೊರೆಯಕ್ಕರಕ್ಕೆ ಸಮಾನವಾದದ್ದು. ನಡುವಣಕ್ಕರಕ್ಕೆ ಸಮಾನವಾದದ್ದು ತೆಲುಗಿನ ಮಧುರಾಕ್ಕರ. ಹಾಗೆ ಎಡೆಯಕ್ಕರವು ಅಂತರಕ್ಕರವಾಗುತ್ತೆ.

     • ಸಾಧು. ಸಾಧು. ದುಶ್ಶಾಸನನೇ ಮತ್ತೆ ಕೈಹಾಕಲಿಲ್ಲ!

    • ಚಂದ್ರಮೌಳಿಯವರೇ,ಶ್ರೀಕಾಂತರೆ, ಬಹಳ ಧನ್ಯವಾದಗಳು, ಎಲ್ಲಾ ಅಕ್ಕರಗಳೂ ಅಂಶಛಂದಸ್ಸಿನ ಪ್ರಭೇದಗಳೇ ಏನು?

    • ನಡುವಣಕ್ಕರಮೊರೆವುದು ಕವಿಗಳ್ಗೆ ಸುಲಭಸಾಧ್ಯಂ
     ಇಡಿರೈ ಮೊದಲೊಂದು ಬ್ರಹ್ಮಗಣಂ ಮೂರು ವಿಷ್ಣುಗಳಂ
     ಕಡೆಗೊಂದಿರಿಸಿರಿ ರುದ್ರಗಣಮನಿಂತು ನಾಲ್ವಡಿಸಲ್
     ನಡೆವುದೀ ಚತುಷ್ಪಾದಿಯು ನಡುವಣಕ್ಕರಮೇ ಕರಂ

 18. ಸ್ರಗ್ಧರಾ|| ಎಂತೆಂದುಂ ಪೇಳ್ವುದೋ ನಾಂ| ಬದುಕಿನ ಪರಿಯಂ| ಬಾಲ್ಯದಾರಭ್ಯಮೆಲ್ಲಂ
  ಹಂತಂಹಂತಂ ಸರಾಗಂ| ನೆನಪಿನ ಖನಿಯಿಂ| ಪೇಳ್ಗುಮಷ್ಟಿಷ್ಟು ಗಾಥಂ|
  ಕಿಂತುಂ ಪೇಳ್ಗುಂ ನಶಕ್ಯಂ| ನೆನಪಿನ ಪರದಂ*| ವಕ್ರಮಾರ್ಗಂ ಶರಣ್ಯಂ
  ಇಂತುಂ ನಾನಿರ್ದೆನೆಂದುಂ| ತಿಳಿಸುಗೆ ಮಗನೀ| ಬಾಲ್ಯಮೇ ಬಾಳಭಾಗ್ಯಂ||

  *ಪರ ಶಬ್ದಕ್ಕೆ ಹಿಂದಿನ/ಮುಂದಿನ ಎಂಬ ಎರಡೂ ಅರ್ಥಗಳಿವೆ. ಇಲ್ಲಿ (ನೆನೆಪು ಹರಿಯುವುದಕ್ಕಿಂತಲೂ) ಹಿಂದಿನ ಎಂಬ ಅರ್ಥದಲ್ಲಿ ಬಳಸಿದ್ದೇನೆ.

 19. ಉಡುಗೆಯಿರ್ದೊಡೆ ಚೆನ್ನಮಿಲ್ಲದಿರ್ದರು ಚೆನ್ನ-
  ಮಡಿಗಡಿಗೆ ಬಿದ್ದೊಡಂ ನುಡಿಯಲ್ಕದೇನನುಂ
  ಪಡೆವುದೈ ಮೆಚ್ಚುಗೆಯ, ತುಂಟತನ-ಪೋಲಿತನಗಳಿನೆ ಜಸಮಾ ಬಾಲ್ಯದೊಳ್ |
  ಬಡನಡುವ ಬೆಡಗಿಯರ್ ಬರಸೆಳೆದು ಮುದ್ದಿಪರ್
  ನುಡಿ ಮುಂದೆಯೆಂದು ಸಿಕ್ಕುವುದಿಂಥ ಭಾಗ್ಯಗಳ್
  ಬಿಡುಗಣ್ಣರುಮಸೂಯೆಯಿಂ ಕಾಂಬ ಚೆಲ್ವಿನಾ ಬಾಲ್ಯಮೇ ಬಾಳ ಭಾಗ್ಯಂ ||

  • ಬೆಡಗಿಯರ ನಡುಕೃಶಕದೇನಿಹುದೊ ನಿಮ್ಮ ಮತ?
   ಕಿಡಿಕಾರುವೆಜಮಾನಗನ್ನವಿಕ್ಕಲುಮಾಕೆ
   ಗಡಿಗೆಯೊಳು ನೀರ ತರೆ ದೇವನಂತಾಗಿಸಿಹನಾನಡುವ ಮತ್ತೆ ಕೇಳಿಂ|
   ಗಡಿಯ ದಾಂಟದೆಲೆ ಮರ್ಯಾದೆಮಿತಿಯೊಳಗಿರ್ಪ
   ತೊಡರುಕಂದಮ್ಮಗಳನೆತ್ತಿಕೊಳೆ ಕೊರೆದಿರ್ಪ
   ಬಡನಡುವನಿಂತು ಪೀತದ ಕಣ್ಣಿನೊಳು ನೋಡಲಕ್ಕುಮೆ ಪೆಜತ್ತಾಯ ನೀಂ||

   • ಬಡನಡುವ ಕೆಡುನೋಟದಿಂ ನೋಡಿದಪನಲ್ಲ
    ಬಡವನಾಂ ಹಾಸ್ಯಕಂ ನುಡಿದ ವಾಕ್ಯವದಲ್ತೆ
    ಕಡುಪಾಪಿಯಂ ಕೇಳ್ವವೋಲಿಂತು ಘುಡುಘುಡಿಸಲಕ್ಕುಮೆ ಪ್ರಸಾದಣ್ಣ ನೀವ್ ? 😉

  • ಪ್ರಿಯ ಪೆಜತ್ತಾಯರೇ!
   ವಾರ್ಧಕಷಟ್ಪದಿಯಲ್ಲಿ ಸದ್ಯದ ಪಾದಭಾಗವನ್ನು ಹೊಂದಿಸಿದ್ದಲ್ಲದೆ ಹೊಸತಾದ ಹಾಸ್ಯ-ಶೃಂಗಾರಗಳ ಹೊಗರೂ ಸೇರುವಂತೆ ಒಳ್ಳೆಯ ರಸವತ್ಕವಿತೆಯನ್ನೇ ರಚಿಸಿದ್ದೀರಿ; ಧನ್ಯವಾದ.

 20. ಪಣಕ್ಕೆಂದು ನಿತ್ಯಂ ಪೆಣಂಗಾಡದಿರ್ಕುಂ
  ಕ್ಷಣಕ್ಕೊಂದು ಕಷ್ಟಂ ಗೊಣಂಗಾಡದಿರ್ಕುಂ
  ಋಣಕ್ಕೆಂದು ಮಾಳ್ಪಾ ಬಣಂಗಲ್ಲದಿರ್ಕುಂ
  ಗುಣಕ್ಕೆಂದುಮಾ ಬಾಲ್ಯಮೇ ಬಾಳ ಭಾಗ್ಯಂ

  • ಶ್ರೀಕಾಂತ್ ಸರ್, ಚಂದ್ರಮೌಳಿ ಸರ್ ,
   ಬಹಳ ಇಷ್ಟವಾದ ಧಾಟಿ, ಛಂದಸ್ಸು ಯಾವುದೆಂದು ತಿಳಿದಿರಲಿಲ್ಲ. “ನ ಜಾನಾಮಿ ಪದ್ಯಂ ನ ಜಾನಾಮಿ ಗದ್ಯಂ” – ಭುಜಂಗ ಸ್ತೋತ್ರದ್ದು. !! ಧನ್ಯವಾದಗಳು .

  • ನಿತಾಂತಂ ಪ್ರಯಾಸಂ ಭುಜಂಗಪ್ರಯಾತಮ್
   ಶ್ರಿಕಾಂತಸ್ಯ ದಸ್ಮಂ ಭುಜಾಂತಂ ಕರಾಗ್ರಮ್|
   ಹಿ ತತ್ರಾಪಿ ಮಂಜೂಮಯಾ(?) ಲೇಖನೀ ಸಾ
   ಸುಲೇಖ್ಯಂ ಯಯಾ ಪದ್ಯಬಾಹುಳ್ಯಮಿತ್ಥಮ್|

   Please let me know even if somebody understood this!

 21. ಸವಂಗೈಯೆ, ಸಾಯಲ್ ಭಯಂಗೊಂಡ ವೃದ್ಧರ್
  ಜವಂ ನಾಣ್ಚಿ ಸೋಲ್ತನ್ ಕುಮಾರದ್ವಯಕ್ಕಂ
  ಶಿವಂಗಾದ ಮಾರ್ಕಂಡನುಂ ನಾಚಿಕೇತಂ
  ಭುವೀಂದ್ರರ್ಗಡಾ! ಬಾಲ್ಯಮೇ ಬಾಳ ಭಾಗ್ಯಂ!

  “ಸವನ, ಮಾರ್ಕಂಡೇಯ, ನಚಿಕೇತ” ಭುಜಂಗಪ್ರಯಾತದಲ್ಲಿ ಬಂದಾಗ ಸವಂ, ಮಾರ್ಕಂಡ– ನಾಚಿಕೇತ” ಆಗಿರುವ “ಪ್ರಯಾಸದೋಷಕ್ಕೆ” ಕ್ಷಮೆಯಿರಲಿ.

  • ಆಹ! ನೀವೂ ಶ್ರೀಕಾಂತರೂ ವಿನೂತನವಿಧಿಯಿಂದ ಭುಜಂಗಪ್ರಯಾತದಲ್ಲಿ ಪ್ರಕೃತಪಾದಭಾಗವನ್ನು ಹೊಂದಿಸಿದ ಬಗೆ ಬಲುಸೊಗಸಾಗಿದೆ. ಧನ್ಯವಾದ.

 22. ಹುದುಗಿ ಮಡಿಲೊಳಗಂದು ಬಿಡದೆ ಕುಡಿದಿರಲಮ್ಮ
  ನೆದೆಹಾಲ, ಬಾಲ್ಯಮೇ ಬಾಳ ಭಾಗ್ಯಂ ।
  ಮುದುಡಿ ಮಲಗಿಹಕಂದನೊಡನೆ ಮುದದೊಳುಸುಮ್ಮ
  ನೊದೆಕಾಲ, ಬಾಲ್ಯಮೇ ಬಾಳ ಭಾಗ್ಯಂ ।।

  (ಕಂದನ ಬಾಲ್ಯವು, ತಾಯ ಬಾಳ ಭಾಗ್ಯವಲ್ಲವೇ?)

  • ಅಹಾ! ತಾಯಿ ಮಾತ್ರ ಬರೆಯಬಹುದಾದ ರಮಣೀಯಕಲ್ಪನೆಯ ಪದ್ಯವಿದು. ತುಂಬ ಸೊಗಸಾಗಿದೆ.ಅಭಿನಂದನೆಗಳು.

  • Like

  • ನೊಂದುಂ ಪೆತ್ತಾ ಕಂದತಾಂತಾಯ್ಗೆ ಚೆಂದಂ
   ಮುಂದುಂಕಾಣ್ವಾ ಬಾಲ್ಯಮೇ ಬಾಳ ಭಾಗ್ಯಂ ।
   ಹೊಂದಿಂ ಪೂತಾ “ಕಂದ”ನಿಂದಾಗೆ ಬಂಧಂ
   ಚಂದಂಗೊಂಡಾ ಬಾಳದುಂ ನಿತ್ಯ ಕಾವ್ಯಂ ।।

   ಪದ್ಯಪಾನದಲ್ಲಿ ನನ್ನ ಬಾಲ್ಯದ ದಿನಗಳು., ಸಂತಸ ತುಂಬಿದೆ !! ಧನ್ಯವಾದಗಳು ಸರ್.

   • There is a remarkable progress in Ms Usha’s grip on prosody, degree of learning and construction quality. I am happy indeed to watch the ‘ acutal making ‘of many budding and blooming poets/poetesses in padyapaana.

   • ಮಾನ್ಯ ಉಷಾರವರೆ

    ಮೇಲೆ ಉತ್ತಮ ಕವಿಗಳು ನಿಮ್ಮ ಪದ್ಯಗಳನ್ನು ಮೆಚ್ಚಿ ಬರೆದಿರುವುದನ್ನು ಅನುಮೋದಿಸುವುದಕ್ಕಿಂತ ಹೆಚ್ಚು ಮಾಡಲಾರೆ . ನನ್ನಂಥ novice ಗಳಿಗೆ ನಿಮ್ಮ ಕನ್ನಡ ಸಾಹಿತ್ಯದ ಹಿನ್ನೆಲೆ (grounding ) ಮತ್ತು ನಿಮ್ಮ ಅಧ್ಯಯನ ಶೈಲಿಗಳ ಬಗ್ಗೆ ವಿವರ ಕೊಟ್ಟರೆ ಉಪಕಾರವಾಗುವುದು

   • Agree with Sri Mowly’s words.
    The vRshabhaprAsa rule applies only to the first letter.
    The AdiprAsa rule does not stipulate that it (the 2nd letter) be anunAsika throughout. The extra embellishment is welcome though. ಆದರೆ, ಹೊಂದಿಂ = ಹೊಂದಿರಿ. ಅದು ’ಹೊಂದಿ’ ಎಂದೂ ಅರ್ಥಬರುತ್ತದೆಯೆ? ತಿಳಿದವರು ದಯವಿಟ್ಟು ಪರಿಹಾರ ಹೇಳಬೇಕು.

    • ಪ್ರಸಾದು ಅವರ ಗಮನಿಕೆ ಸರಿಯೇ. ಹೊಂದಿಂ = ಹೂಂದಿರಿ ಎಂದಾಗುತ್ತದೆಯೇ ಹೊರತು ಹೊಂದಿ, ಹೊಂದಿಯೂ ಎಂದಾಗದು. ಹೊಂದಲ್ ಇತ್ಯಾದಿಯಾಗಿ ಬದಲಿಸಿದರೂ, ಪ್ರಾಸಭಂಗವೇನೂ ಆಗದು.

     • ಹೊಂದಿಂ ಪೂತಾ = ಹೊಂದಿಕೊಂಡು ಬೆಳೆದ / ಒಪ್ಪವಾಗಿ ಅರಳಿದ ಎಂಬ ಅರ್ಥದಲ್ಲಿ ತಂದದ್ದು. (ಹಳೆಗನ್ನಡ ಕ್ರಿಯಾಪದ / ವಿಭಕ್ತಿ ಬಳಕೆಯಲ್ಲಿ ಸ್ವಲ್ಪ ತೊಡಕಿದೆ)

     • ಹೊಂದಿಕೊಂಡು ಎಂಬ ಅರ್ಥಬರಬೇಕಾದಲ್ಲಿ, ಹೊಂದಿಯುಂ, ಪೊಂದಿಯುಂ, ಪೊಂದುತಂ, ಪೊಂದಿರ್ದುಂ ಅಥವಾ ಹೊಂದಿ /ಪೊಂದಿ ಎಂದಾಗಬೇಕು. ಹೊಂದಿಂ ಎಂಬು ಪ್ರಯೋಗ ಅಸಾದುವಲ್ಲವೇ.

     • “ಹೊಂದಿಂ” “ಅಸಾದು”ವೇ? ಛಂದಸ್ಸು ಕೆಡದಂತೆ ಬದಲಿಸುವುದು ಹೇಗೆ? ಚಂದ್ರಮೌಳಿ ಸರ್,
      ಇಲ್ಲದಿದ್ದರೆ “ಪ್ರಸಾದು”ಸರ್ ಬಿಡಲ್ಲ !!

     • ಉಷಾರವರೆ
      ಕಾಣ್ವಾ ಅನ್ನೋದಕ್ಕಿಂತ ಕಾಣ್ಬಾ ಅನ್ನೋದು ಸರಿಯಾಗುತ್ತೆ. ಹೊಂದು ಅನ್ನೋದು ನಾಮಪದವೂ ಹೌದು. ಆ ರೂಪದಲ್ಲಿ ಹೊಂದಿಂ ಸರಿಯಾದೀತು. ಹೊಂದಿಕೆಯಿಂದ ಅಂತ ಅರ್ಥ ಹುಟ್ಟುತೆ. ಪಕಾರ ಬಂದರೆ ಒಳ್ಳಿತು (ಪೊಂದು)

     • ಪ್ರಸಾದು ~ ಅಸಾದು: ನನ್ನನ್ನು ಹೀಗೆಲ್ಲ ಹಂಗಿಸಬಾರದು ನೀವು 😉
      ಅನ್ಯಥಾ ಭಾವಿಸಬೇಡಿ. ‘ಅಸಾದು’ ಕಾಗುಣಿತ ತಪ್ಪು ಎನ್ನುವುದನ್ನು ಹಾಗೆ ಹೇಳಿದೆ ಆಷ್ಟೆ.

     • ಶ್ರೀಕಾಂತರೆ,
      ನಾಮಪದವಾಗಿ ‘ಹೊಂದಿಂ’ ಪದದ ಅರ್ಥವೇನು ತಿಳಿಸಿ

     • ಪ್ರಸಾದು ಅದನ್ನೂ ನಾನಾಗಲೆ ಹೇಳಿದೀನಲ್ಲ. ಹೊಂದಿಂ= ಹೊಂದಿಕೆಯೊಂದ
      ಅದರಿಂ, ಅವನಿಂ, ನೋಳ್ಕೆಯಿಂ ಇವುಗಳಂತೆ

     • ಶ್ರೀಕಾಂತರೆ,

      ಅದರಿಂ, ಅವನಿಂ, ನೋಳ್ಕೆಯಿಂ ಎಲ್ಲವೂ ಸರಿಯೇ. ಆದರೆ ‘ಹೊಂದಿಂ’ ಎನ್ನುವುದು ಹೇಗೆ ಸರಿ ಎಂದು ತಿಳಿಯುತ್ತಿಲ್ಲ. ಯಾವುದಾದರು ಪ್ರಯೋಗದ ಉದಾಹರಣೆ ಇದೆಯೇ. ಹೊಂದು ಎನ್ನುವುದು ನಾಮಪದ ಹೇಗೆ?

     • ಸೋಮ

      ಪ್ರಸಾದು ಅವರು ಕೇಳಿದ್ದು “ನಾಮಪದವಾಗಿ ಹೊಂದಿಂ” ಅರ್ಥವೇನು ಅಮ್ತ. ಅದನ್ನು ನಾನು ಅರ್ಥಮಾಡಿಕೊಂಡಿದ್ದು ಪ್ರಶ್ನೆ ಹೊಂದಿಂ ಬಗ್ಗೆ, ನಾಮಪದದ ಬಗ್ಗೆಯಲ್ಲ ಅಂತ.

      ಇರಲಿ, ನೀವು ಹೊಂದು ಅನ್ನುವುದು ನಾಮಪದ ಹೇಗೆ ಅಂತಲ್ವೆ? ನಿಘಂಟುವನ್ನು ನೋಡಿಲ್ಲ. ಹೊಂದು ಮತ್ತು ಹುದುಗು ಈ ಎರಡು ಪದಗಳನ್ನು ಅದಿಗೆಯ ವಿಷಯದಲ್ಲಿ ಸರ್ವೇಸಾಮಾನ್ಯವಾಗಿ ನಮ್ಮಲಿ ದೋಸೆಹಿಟ್ಟಿಗೆ ಮತ್ತು ಹುಳಿಗೆ (ಮುಂತಾದ)ಹಾಕುವ ಸಾಮಗ್ರಿಗೆ ಉಪಯೋಗಿಸ್ತೀವಿ. ಇಲ್ಲಿ ಇದು ನಾಮಪದವಾಗಿಯೆ ಬಳಸೊದು. ಹೊಂದು ಅನ್ನೋದರ ಸಾಮಾನ್ಯಾರ್ಥದಿಮ್ದ ಬಮ್ದಿರೊದಿದು. ಅದರಿಂದ ಹೊಂದು ಅನ್ನೋದು ಹೊಂದಿಕೆ/ಸಹವಾಸ ಈ ಎರ್ಥದಲ್ಲಿ ಬಲಸೋದು ತಪ್ಪಿಲ್ಲ ಅನ್ನಿಸ್ತು. ಹೇಳಿದೆ ಅಷ್ತೆ. ಇದು ನನ್ನ ಅಭಿಪ್ರಾಯ. ಅದಕ್ಕೆ ಆಧಾರಗಲನ್ನು ಕೊಟ್ಟಿದ್ದೀನಿ. ತಪ್ಪು ಅನ್ಸಿದ್ದರೆ ಬಿಟ್ಟುಬಿಡಿ.

      ಕ.ಸಾ.ಪ ನಿಘಂಟುವನ್ನು ಪರಿಶೀಲಿಸಿದರೆ ಇದಕ್ಕೆ ಇನ್ನೂ ಉದಾಹರಣೆಗಳು ಸಿಗಬಹುದು

     • ಹೀಗೆ “ಹೊಂದಿಂ” ಬಿಟ್ಟುಬಿಟ್ಟರೆ ಈ “ಬೇಬಿ-ಶಾಲಿನಿ” ಗತಿ ?!

     • “ಪೊಂದು”: ಕ್ರಿಯಾಪದ (ಸೇರಿಕೆಯಾಗು, ಸೇರು, ಪಡೆ),ಕೋಪಮನೊಂದಿ, ಶಾಪಮನೊಂದಿ (ಪಡೆದು, ಗಳಿಸಿ ಎಂಬರ್ಥದಲ್ಲಿ).
      (ಉದಾ: ಹರಿದಾಸರೊಳು ಪೊಂದಿ, ನಷ್ಟವನ್ನು ಹೊಂದಿ, ಪುರಸ್ಕಾರವನ್ನು ಹೊಂದಿ..) ತೆಲುಗಿನಲ್ಲಿ ಇದು ಕ್ರಿಯಾವಾಚಕವಾದರೂ (ಪೊಂದುಪರಚಿ, ವಿಶ್ವಾಸಮುನುಪೊಂದಿ), ’ಪೊಂದು’ ನಾಮವಾಚಕವಾಗಿಯೂ ಬಳಕೆಯಲ್ಲಿದೆ,(ದಾನಿ ಪೊಂದುಗೋರಿ’ ಅವಳ ಸಂಗವನ್ನು ಬಯಸಿ). “ಪೊಂದು” ನಡುಗನ್ನಡದಲಿ “ಹೊಂದು” ಆದರೂ ಅರ್ಥವೊಂದೇ. (ಸಾಯು, ಮೇಳವಾಗು, ಸೇರು, ಸಲು,ಪಡೆ, ಜತೆಗೂಡಿಸು ಈ ಕ್ರಿಯಾರೂಪಗಳೇ ರೂಢಿಯಲ್ಲಿವೆ). “ತಾಳ್ಮೆಯಂ ಪೊಂದಿ “ ಸಾಧುವಾದರೂ, ಕಾವ್ಯಭಾಷೆಯ ಸಂಧಿರೂಪಗಳಲ್ಲಿ ಪೊಂದಿ/ಹೊಂದಿ ಶಬ್ದಗಳು “ಒಂದಿ”ಯಾಗುವುದುಂಟು. ತಾಳ್ಮೆಯನ್+ ಹೊಂದಿ=ತಾಳ್ಮೆಯನೊಂದಿ.” ಒಂದಿಸು= ಸೇರಿಸು, ಕಟ್ಟು, ಒಂದಿಗ = ಜತೆಯವ, ಒಂದು=ಹೊಂದು=ಸೇರು” ಈ ಪದಗಳನ್ನು ಗಮನಿಸಿದಾಗ “ಒಂದು” ಎಲ್ಲವನ್ನೂ ಸೇರಿಸಿಕೊಳ್ಳವ “ಒಂದಾಗುವ” ಕ್ರಿಯಾವಾಚಕವೇ ಮೂಲದ್ರಾವಿಡ ಶಬ್ದವಿರಬಹುದು. ಕನ್ನಡದಲ್ಲೆಲ್ಲೂ ’ಪೊಂದಿ’/ಹೊಂದಿ ಪದ ನಾಮವಾಚಕವಾಗಿ ಬಳಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇದು ಭಾಷೆಯ ಬಳಕೆಯ ಈಗಿನ ತಿಳಿವಳಿಕೆಯಷ್ಟೆ. ತಪ್ಪಿದ್ದರೆ, ವಿಜ್ಞರು ತಿಳಿಸಿಕೊಟ್ಟಲ್ಲಿ ತಿದ್ದಿಕೊಳ್ಳಬಹುದು.

      ಎಂದಿಗಾನುಂ ನಿನ್ನ ಪೂರ್ವಋಣಗಳ ಲೆಕ್ಕ ।
      ನೊಂದಬೇಕೆಂದಿರ್ದೊಡಿಂದೆ ಮೊದಲನಿಡು ॥
      ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ ।
      ಹೊಂದು ವಿಶ್ವಾತ್ಮತೆಯ – ಮಂಕುತಿಮ್ಮ ॥ ೭೩೭ ॥

     • ಚಂದ್ರಮೌಳಿಯವರೆ. ಹೊಂದು ಅನ್ನೋದನ್ನ ನಾಮಪದವಾಗಿ ಬಳಸುವದಕ್ಕೆ ಉದಾಹರಣೆಯನ್ನು ನಾನು ಆಡುಮಾತಿನಲ್ಲಿ ಕೊಟ್ಟಿದ್ದ್ದೀನಿ. ಅದು “ಹೊಂದು” ಪದದ ಸಂಕುಚಿತಾರ್ಥವಷ್ಟೆ? ಅದರಿಂದ ಸಾಮಾನ್ಯ ಅರ್ಥದಲ್ಲೂ ಅದನ್ನು ಬಳಸಿದರೆ ತಪ್ಪಿಲ್ಲ ಅನ್ನೋದು ನನ್ನ ನಿಲುವು. ಇಲ್ಲಿ ಪದವನ್ನು ಹೊಸತಾಗಿ ಸೃಷ್ಟಿ ಮಾಡಿಕೊಳ್ಳುತಿಲ್ಲ, ಕೇವಲ ಅದರ ಮೂಲಾರ್ಥವನ್ನು ಪುನರುಜ್ಜೀವಗೊಳಿಸಿದೆ ಅಷ್ಟೆ. ನಿಮ್ಮ ಪದ್ಯಗಳಲ್ಲಿ ನೀವು ಹೊಸಪದಗಳನ್ನ್ನು ಟಂಕಿಸಿರುವುದುಂಟು. ನಿಮಗೆ ಇದರ ತಪ್ಪು ಒಪ್ಪುಗಳು ಚೆನ್ನಾಗಿ ಮನಡಟ್ಟಾಗುವುದೆಂದು ನನಗೆನುಸುತ್ತೆ

      ಅಂದಹಾಗೆ ಹೊಂದು ಮತ್ತೆ ಒಂದು ಈ ಎರಡು ಸೊಲ್ಲುಗಳು ಒಂದೇ ಮೂಲದ್ದವಲ್ಲ. ಒಂದು ಸಂಖ್ಯಾಪದದಿಂದ ಬಂದಿರುವುದು. ಮೂಲದಲ್ಲಿ ಇದು ಕ್ರಿಯಾಪದವಾಗಿದ ಅದರಿಂದಲೇ ಸಂಖ್ಯಾವಾಚಕ ಬಂದಿರಲಿಕ್ಕೂ ಸಾಧ್ಯ. ಪೊಂದು ಶಬ್ದದ ಮೂಲರೂಪ ಪೊರುಂದು. ತಮಿಳಿನಲ್ಲಿ ಇದೇ ರೂಪ ಇರುವುದು. ಕನ್ನಡದಲ್ಲಿ ಇದು ಪೊರ್ದು, ಪೊಂದು ಎಂದು ಎರಡು ರೂಪಗಳು ತಾಳಿದೆ. ಬಹುಶಃ ಇದು ಮೊದಲು “ಪೊರ್ಂದು” ಎಂದಾಗಿ ಅದರಿಂದ ರಕಾರಲೋಪ ಮತ್ತು ಅನುನಾಸಿಕಲೋಪ ಎಂದು ಇಬ್ಬಗೆಯಾಗಿ ಈ ಎರಡು ರೂಪಗಳೂ ಪರಿಣಮಿಸಿರಬೇಕು.

     • ಹೊಂದು(ಕ್ರಿ) – ಹೊಂದಿಕೆ(ನಾ) – ಹೊಂದಿಕೆಯಿಂದ(ಸಮನ್ವಯದಿಂದ) = ಹೊಂದಿ – ಹೊಂದ(ದು) – ಹೊಂದಿಂ,
      ನಂಬು(ಕ್ರಿ) – ನಂಬಿಕೆ(ನಾ) – ನಂಬಿಕೆಯಿಂದ = ನಂಬಿ – ನಂಬ(ಬು) – ನಂಬಿಂ – ಸರಿಯಾಗುವುದಿಲ್ಲವೇ ?

     • ಉಷಾ ಅವರೆ,

      ನಿಮ್ಮ ಭಾವಕ್ಕನುಗುಣವಾಗಿ ಬರೆಯಲು ನೀವೇ ಸಮರ್ಥರು.ಪೊಂದುತ್ತಾಳ್ವಾ…ಹೀಗೆಮಾಡಿದರೂ ನಿಮ್ಮ ನಿರ್ಮಿತಿಗೆ ಹೊಂದುತ್ತದೆ 🙂

    • ಧನ್ಯವಾದಗಳು ಶ್ರೀಕಾಂತ್ ಸರ್,
     ಸರಿಪಡಿಸಿದ್ದೇನೆ. ಮತ್ತೂ ಸಂತೋಷವಾಗ್ತಾಯಿದೆ !

     ನೊಂದುಂ ಪೆತ್ತಾ ಕಂದತಾಂತಾಯ್ಗೆ ಚೆಂದಂ
     ಮುಂದುಂಕಾಣ್ಬಾ ಬಾಲ್ಯಮೇ ಬಾಳ ಭಾಗ್ಯಂ ।
     ಪೊಂದಿಂಪೂತಾ “ಕಂದ”ನಿಂದಾಗೆ ಬಂಧಂ
     ಚಂದಂಗೊಂಡಾ ಬಾಳದುಂ ನಿತ್ಯ ಕಾವ್ಯಂ ।।

     • ಸರಿಯೇ. ನಂಬಿಂ… ನಂಬಿರಿ, ಹೊಂದಿಂ…ಹೊಂದಿರಿ ಇವು ಸಿದ್ಧಪ್ರಯೋಗಗಳೇ – ಅವು ಕ್ರಿಯಾಸೂಚಕಗಳಾಗುತ್ತವೆಯೇ ಹೊರತು ನಾಮಪದಗಳಲ್ಲ. ’ಪೊಂದಿಂ’ ಎಂಬ ಪದವನ್ನು ನೀವು ಹೊಂದಿಯೂ ಎಂಬ ಅರ್ಥದಲ್ಲಿ ಬಳಸಿದ್ದೀರಲವೇ.

     • ಹೊಂದಿಂ ಪೂತಾ ಕಂದ = ಸಮನ್ವಯದಿಂದ ಅರಳಿದ (ಹೊಂದಿಕೆಯಿಂದ ಬೆಳೆದ) “ಕಂದ” – ಎಂಬ ಅರ್ಥದಲ್ಲಿ ಬಳಸಿದ್ದು. “ಶಾಲಿನಿಗೆ” – ನಾನಾನಾನಾ…. ಬರಬೇಕೆಂದು “ಹೊಂದಿಂ” ಮಾಡಿದ್ದು. ನನಗೆ “ನಿಜವಾಗಿ ಅದರ ಬಳಕೆಯ ಅರಿವಿರಲಿಲ್ಲ”. “ಹೊಂದಿಂ” ಬದಲು ಮತ್ತಾವ ಪದ ಸರಿಹೊಂದುತ್ತದೆ ತಿಳಿಸಿ (ಅರ್ಥ/ಛಂದಸ್ಸಿಗೂ). ಸರಿಪಡಿಸುವೆ .

     • ಉಷರವರೆ- ಬದಲಿಸುವ ಮುನ್ನ, ಒಮ್ಮೆ ನಾನ ಕೊಟ್ಟಿರುವ ಕೊಂದೊಯಲ್ಲಿನ ನಿಘಂಟುವಿನಲ್ಲಿ ಪರಿಶೀಲಿಸಿ

  • Very nice

  • ಎಳೆಗಂದಗೆದೆಪಾಲನಕ್ಕರೆಯೊಳುಣಿಸಲ್ಕೆ
   ತುಳಿತಮೊದೆತಂಗಳುಂ ತಾಯ್ಗರುಳಿನೊಳ್
   ಪುಳಕಂಗೊಳಿಪ ನಾದಮಂ ಗೈವ ಸಾಜತೆಯ
   ತಿಳಿಮನದ ಪೂರಣಕೆ ಬಹುನಮನಗಳ್

   • ಮೀಂಟಿಪು’ವು’ದೆಂಬ – ’….ಗಳುಂ’ ಇರುವುದರಿಂದ ಮತ್ತೆ ’ಅದು’ ಬೇಕಿಲ್ಲ.
    Typo – ಪುಳುಕಂ ~ ಪುಳಕಂ

    • ಧನ್ಯವಾದ ಪ್ರಸಾದು, ಮೂಲದಲ್ಲೆ ತಿದ್ದಿದ್ದೇನೆ 🙂

   • ಹೌದು ಸೋಮ, ತಾಯಿ ಹೃದಯದ ತುಡಿತವೇ ಹಾಗೆ. ಇಡೀ ವಿಶ್ವವನ್ನ ಹಿಡಿದಿಟ್ಟಿರುವುದು ಈ ತುಡಿತವೇ !!
    ಅಮ್ಮನಿಗಾಗಿ ಈ ಸಾಲುಗಳು :
    “ನನ್ನ ಮುದ್ದಿಸುವಾಗ, ನಾ ನುಡಿದ ತೊದಲುನುಡಿ
    ನಿನ್ನ ಮಮತೆಯು ಬೆರೆತು
    ಸ್ಪಷ್ಟವಾಗಿದೆ ಹೀಗೆ ಕವಿತೆ ಸಾಲೊಳಗೆ “

  • ನಿಮ್ಮೆಲ್ಲರ ಮೆಚ್ಚುಗೆಯ ನುಡಿಗಳು ನನ್ನ ಮನ ತುಂಬಿವೆ. ಮತ್ತಷ್ಟು ಸ್ಫೂರ್ತಿ ತಂದಿವೆ. ನಿಮ್ಮೆಲ್ಲರ ಮಾರ್ಗದರ್ಶನದಲ್ಲಿ ಮುಂದುವರೆಯುವ ಭರವಸೆಯೊಂದಿಗೆ – ತುಂಬು ಹೃದಯದ ಧನ್ಯವಾದಗಳು.

 23. ಪಂಚಮಾತ್ರಾ ಚೌಪದಿಯಲ್ಲಿ ಪ್ರಯತ್ನ

  ಚಂದದಾ ಮೊಗದಿಂದ ಚಿಮ್ಮುತಿರೆ ನಗೆಯನ್ನು
  ತಂದೆಕೋಪವ ಮರೆತು ತಾನುನಗಲು
  ಹಿಂದಿನಾ ದಿನಗಳನು ನೆನೆಯುತಲಿ ಮನದೊಳಗೆ
  ಸಂದುದೀ ಬಾಲ್ಯಮೇ ಬಾಳ ಭಾಗ್ಯಂ

  • ೧) ’ಚಿಮ್ಮುತಿರೆ ನಗೆಯನ್ನು’ ಸರಿಯಾಗದು. ’ಚಿಮ್ಮುತಿರೆ ನಗೆಯು’ ಅಥವಾ ’ಚಿಮ್ಮಿಸುತಿರೆ ನಗೆಯನ್ನು’ ಎನ್ನಬೇಕಾಗುತ್ತದೆ. ’ಹೊಮ್ಮಿಸಿರೆ ನಗೆಯನ್ನು’ ಎಂದು ಸವರಬಹುದು
   ೨) ತಾನು ನಗಲು ~ ನಗಲು ತಾನುಂ

   • ಧನ್ಯವಾದಗಳು ಪ್ರಸಾದು ಅವರೆ! ತಮ್ಮ ಸವರಣೆಯಂತೆ ಸರಿಪಡಿಸಿದ್ದೇನೆ

    ಚಂದದಾ ಮೊಗದಿಂದ ಹೊಮ್ಮಿಸಿರೆ ನಗೆಯನ್ನು
    ತಂದೆಕೋಪವ ಮರೆತು ನಗಲುತಾನು|
    ಹಿಂದಿನಾ ದಿನಗಳನು ನೆನೆಯುತಲಿ ಮನದೊಳಗೆ
    ಸಂದುದೀ ಬಾಲ್ಯಮೇ ಬಾಳ ಭಾಗ್ಯಂ|

 24. ದೇವರಂಥ ಮಗುವನ್ನು ಮರೆಸಿ ದೊಡ್ಡವರು ಸಿನೆಮಾಗೆ ಹೋಗುವುದು:

  ಸ್ರಗ್ವಿಣೀ|| ಸುತ್ತಲೆಲ್ಲೆಲ್ಲು ಚೈತನ್ಯದೂಳ್ ಜಾಡ್ಯದೊಳ್
  ಪೆತ್ತವರ್ ದೇವರೆಲ್ಲಿಲ್ಲಮೆಂಬರ್ ಗಡಾ!
  ಮತ್ತದೇತಕ್ಕೊ ತಾವ್ ಪೋಗುವರ್ ನಾಟ್ಯಕಂ
  ಹಿತ್ತಲಿಂ? ಬಾಲ್ಯಮೇ ಬಾಳಭಾಗ್ಯಂ? ಸುಡಾ!!

 25. ಶ್ರೀಕಾಂತರೆ,
  ‘ಹೊಂದು’ ಶಬ್ದದ ಆಡುಮಾತಿನ ನಿಮ್ಮ ಉದಾಹರಣೆಯಬಗ್ಗೆ ಅಭ್ಯಂತರವೇನಿಲ್ಲ. ಆದರೆ ಕಾವ್ಯಪ್ರಯೋಗದಲ್ಲಿ ಆಡುಮಾತಿನ ಸ್ವಾತಂತ್ರವಿಲ್ಲವಷ್ಟೆ. ಹೊಂದು ಎಂಬ ಶಬ್ದ ನಾಮಪದವಾಗಿ ಗದ್ಯಪದ್ಯಗಳಲ್ಲಿ ಪ್ರಯೋಗವಾಗಿದ್ದಲ್ಲಿ (ತೆಲುಗಿನಲ್ಲಿ ಆಗಿರುವಂತೆ) ತೊಡಕಿರಲಿಲ್ಲ. ಕನ್ನಡದಲ್ಲಿ ಅದು ನಾಮಪದವಾಗದು. ಹೊಸಪದವನ್ನು ಟಂಕಿಸಿದ್ದರೂ ಒಪ್ಪಬಹುದು. ಆದರ ಪ್ರಸ್ತುತ ಪದ್ಯದಲ್ಲಿ, ’ಹೊಂದಿಂ’ ಎಂಬಪ್ರಯೋಗ, ಅದು ಹೊರಡಿಸುವ ’ಪಡೆಯಿರಿ’ ಎಂಬ ಅರ್ಥವನ್ನು ಉದ್ದೇಶಿಸಿರದೆ “ಪಡೆದೂ ಸಹ” ಎಂಬ ಅರ್ಥಪಡೆಯಲು ಹೊರಟಿದೆ. ಆ ಕಾರಣಕ್ಕಾಗಿ ಅದನ್ನು ಅಸಾಧುರೂಪವೆಂದೆ. ಇನ್ನು, ಒಂದು ಶಬ್ದದಮೂಲ ಹೀಗಿರಬಹುದು ಎಂಬ ನನ್ನ ಹೇಳಿಕೆ ಮೂಲದ್ರಾವಿಡಕ್ಕೆ ಸೇರಿದ್ದೇ ಹೊರತು ಪಂಚದ್ರಾವಿಡಭಾಷೆಗಳಿಗಲ್ಲ. ಉದಾ: ಬೆಳ್ಳಿ-ವೆಳ್ಳಿ-ವೆಂಡಿ (ಕನ್ನಡ, ತಮಿಳು, ತೆಲುಗು) ಈ ಪದಗಳ ಮೂಲ ವೆಳ್ (ಬಿಳುಪು). ಹಾಗೆಯೇ ಒನ್ ಮೂಲದ್ರಾವಿಡದ ಧಾತುವಿರಬೇಕೆಂಬುದು ಸಧ್ಯದ ಊಹೆ. ನಿಮ್ಮ ಹೇಳಿಕೆಯೂ ವಿಚಾರಣೀಯ. ಚರ್ಚಾಸ್ಪದವಾದ ವಿಷಯವೇ.
  ಕಲಿಕೆಯ ಹಂತದಲ್ಲಿರುವ ಕವಿ/ಕವಯತ್ರಿಯರು ಆಡುಮಾತನ್ನೋ ಹೊಸ ಪದದ ಸೃಷ್ಟಿಯಯತ್ನದಲ್ಲಿ ಅಸಾಧುರೂಪಗಳನ್ನೋ ಬಳಸದಿರಲಿ ಎಂದಷ್ಟೇ ಕಳಕಳಿ. ನಂತರ ಹೇಗಿದ್ದರೂ ಬೆಳೆದು ನಿಂತಾಗ ’ಮಹಾಕವಿ’ ಯ ನುಡಿಗಳಿಗೇ ಹೊಸವ್ಯಾಕರಣ ಛಂದಸ್ಸು ಸೃಷ್ಟಿಯಾಗುವುದಲ್ಲವೇ :)-

  • ಚಂದ್ರಮೌಳಿಯವರೆ

   ಹೊಂದು ಪದ ನಾಮಪದವಾಗಿ ಬಳಕೆಯಾಗಿಲ್ಲ ಅಂತ ತೀರ್ಮಾನ ಮಾಡೋಕೆ ಮುಂಚೆ ಯಾರಾದರು ಕ.ಸಾ.ಪ ನಿಘಂಟುವನ್ನು ಒಮ್ಮೆ ಪರಿಶೀಲಿಸಿದರೆ ಒಳಿತು. ಇಲ್ಲದ ಪದಗಳನ್ನು ಹೊಸತಾಗಿ ಟಂಕಿಸುವುದಕ್ಕಿಂತಲೂ ಇರುವ ಸೊಲ್ಲುಗಳ ಅರ್ಥವ್ಯಾಪ್ತಿಯನ್ನು ಸ್ವಲ್ಪ ಅಗಲಿಸಿ ಬಳಸುವುದು ಹೆಚ್ಚು ಸೂಕ್ತ ಹಾಗು ಕಡಿಮೆ ತೊಡಕಿನದು ಅನ್ನೋದು ನನ್ನ ಅಭಿಪ್ರಾಯ. ಆಡುಮಾತು ಹಾಗು ಜಾನಪದ ಸಾಹಿತ್ಯವು ಶಿಷ್ಟ ಸಾಹಿತ್ಯವಲ್ಲದಿದ್ದರೂ ಅವುಗಳಲ್ಲಿನ ಅಂಶ ಮತ್ತು ಪ್ರಯೋಗಗಳ ಪರಿಶೀಲನೆಯಿಂದ ಅನೇಕ ಹೊಸಹೊಳಹುಗಳು ದೊರಕುವುದು ಹೊಸತೇನಲ್ಲ. ಆಡು ಮಾತಿನಲ್ಲಿರುವ ಅನ್ಯಭಾಷಾಪ್ರಯೋಗಗಲನ್ನು, ವಿರೂಪಗೊಂಡ ಪದಗಳನ್ನು ಒಪ್ಪಬೇಕಿಲ್ಲ ಸರಿ, ಅದರಲ್ಲಿ ಸ್ಪಷ್ಟವಾಗಿ ಇರುವ ಅರ್ಥವ್ಯಾಪಿತ್ಯನ್ನು ಒಪ್ಪುವುದರಲ್ಲಿ ಏನು ಅಭ್ಯಂತರ.

   ಗಣೇಶರೇ ತಮ್ಮ ಶತಾವಧಾನದಲ್ಲಿ ಬ್ಯಾರಿಭಾಷೆಯ ಒಂದು ಪ್ರಯೋಗವನ್ನು ಬಳಸಿದ್ದು ನನಗೆ ನೆನಪು. ನಾನು ಹೇಳುತ್ತಿರುವ ಪ್ರಯೋಗ ಅಷ್ಟು ಸೀಮಿತ ಕೂಡ ಅಲ್ಲವಲ್ಲ- ಸಾಮಾನ್ಯ ಆಡುಗನ್ನಡದ ಬಳಕೆ ತಾನೆ? 🙂

   ಉಷರವರು ಯಾವ ಅರ್ಥದ ಉದ್ದೇಶದಿಂದ ಬಳಸಿದರೋ ಅದು ತಪ್ಪಾದರು, ಅದರ ವಿಶ್ಲೇಷನೆ ಬೇರೆರೀತಿ ಮಾಡಿದಾಗ ಆ ಪದಪ್ರಯೋಗ ತಪ್ಪಾಗಲಾರದು ಎಂದಷ್ಟೆ ನಾನು ಹೇಳಿದ್ದು. ಅವರು ಹೇಳಿದ ಅರ್ಥದಲ್ಲಿ ಅದು ಸರಿಯಲ್ಲ ಎಂದ ಮಾತ್ರಕ್ಕೆ ಆ ಪ್ರಯೋಗವನ್ನು ನಿರಾಕರಿಸಬೇಕಿಲ್ಲವಷ್ತೆ?

   ಮೂಲದ್ರಾವಿಡದ ಮಾತು- ಇದು ಪಂಚದ್ರಾವಿಡಗಳ ಪರಿಶೀಲನೆಯಿಂದಲೆ ಊಹಿಸತಕ್ಕದು. ಮೂಲ ಇಂಡೋಊರೋಪಿಯನ್-ಅಂತೆಯೆ. “ಒಣ್2 ಎಂಬ ,ಊಲಧಾತುವನ್ನು ಊಹಿಸಿಸ್ ಈ ವಿಷಯ ಚರ್ಚಾಸ್ಪದವೆಂದಿದ್ದೀರ. ಕ್ಷಮಿಸಿ, ಆದರೆ ಈ ಪದದ ಮಟ್ಟಿಗೆ ಆ ಚರ್ಚೆಗೆ ಅವಕಾಶವಿಲ್ಲ. ನಿಮ್ಮ ಊಹೆ ಹೊಂದು ಶಬ್ದದ ಆಧಾರದ ಮೇಲೆ. ಆದರೆ ಹೊಂದು ಎನ್ನುವುದು ಪೊಂದು ಪದದ ಪಕಾರ ಹಕಾರವಾಗಿ ಮಾರ್ಪಟ್ಟು ಸಿದ್ಧಿಸಿದ ರೂಪ. ಆದ್ದರಿಂದ ಹೊಂದು ಶಬ್ದದ ಆಧಾರದ ಮೇಲೆ “ಒನ್” ಧಾತು ಸೃಜಿಸಿವುದು ಅಸಾಧು. “ಒನ್” ಅಥವಾ “ಒಕಾರ” ಪೊಕಾರವಾಗಿ ಪರಿವರ್ಯಿಸುವ ಕ್ರಿಯೆ ದ್ರಾವಿಡ ಭಾಶೆಗಳಲ್ಲಿ ಎಲ್ಲೂ ಇಲ್ಲ. ಆದ್ದರಿಂದ ಒಂದು ಮತ್ತೆ ಪೊಂದು ಇವು ಪ್ರತ್ಯೇಕ ಮೂಲದವೇ ಹೊರತು, ಒಂದೇ ಧಾತುವಿನಿಂದ ಇವನ್ನು ಸಾಧಿಸಲಾಗುವುದಿಲ್ಲ.

   • ಶ್ರೀಕಾಂತರೆ,
    ಹೊಂದು ಪದ ನಾಮಪದವಾಗಿ ಬಳಕೆಯಾಗಿಲ್ಲ ಎಂಬುದು ನನ್ನ ಗಮನದ ಹರಹಿನ ಮಾತು. ಮೂಲತಃ ಹೊಂದಿಂ ಪದದ ಉದ್ದೇಶಿತಾರ್ಥ ಸರಿಯಿಲ್ಲವೆಂಬುದರಬಗ್ಗೆ ಬಂದ ನನ್ನ ಅಭಿಪ್ರಾಯವನ್ನು ತಿಳಿಸಿದ್ದು, ಉಷಾರವರ ಪದ್ಯರಚನೆ ಉತ್ತಮವಾಗುತ್ತಿದ್ದು, ಇನ್ನೂಪರಿಷ್ಕೃತವಾಗಲಿ ಎಂಬ ದೃಷ್ಟಿಯಿಂದ. ಪೊಂದಿಂ ಎಂಬ ಪದಕ್ಕೆ ಹೊಂದಿಯೂಕೂಡ ಎಂಬ ಅರ್ಥಬರುವ ಪ್ರಯೋಗವನ್ನು ನಾನು ಕಂಡಿಲ್ಲ. ನಿಘಂಟನ್ನು ನೋಡಿ ವಿಮರ್ಶಿಸಿ, ತಿಳಿದವರು, ಆಕ್ಷೇತ್ರದಲ್ಲಿ ಪರಿಣತರು, ಪ್ರಯೋಗಾದಿಗಳ ಉದಾಹರಣೆಗಳ ಸಮೇತ ತಿಳಿಸಲಿ. ವಿಚಾರಿಸಿ ಒಪ್ಪೋಣ.
    ಇಲ್ಲದ ಪದವನ್ನು ಟಂಕಿಸುವುದೂ ಬಿಡುವುದೂ ಕವಿಪ್ರತಿಭೆಗೆ ಸೇರಿದ ವಿಷಯ. ಕವಿಗೆ, ನೀನು ಹೊಸಪದವನ್ನು ಸೃಷ್ಟಿಸಬೇಡ, ಇರುವ ಪದಗಳನ್ನೇ ವಿಸ್ತರಿಸಿ ಬಳಸು ಎಂಬ ನಿಬಂಧನೆ ಇದ್ದಿದ್ದರೆ ಯಾವಭಾಷೆಯೂ ಬೆಳೆಯುತ್ತಿರಲಿಲ್ಲ. ನಿಮ್ಮ ಅಭಿಪ್ರಾಯ ಅಥವಾ ಯಾರದೇ ಅಭಿಪ್ರಾಯಕ್ಕೂ ನನ್ನ ಗೌರವವಿದೆ. ಅಭಿಪ್ರಾಯಗಳೇ ಪರಮಸತ್ಯಗಳಾಗುವುದಿಲ್ಲ. ಆಡುಮಾತು ಎಂಬುದು ಒಬ್ಬರು ಆಡುವಮಾತಲ್ಲ. ಜನಪದ ಅವನ್ನು ಉಪಯೋಗಿಸಿ ಬಳಕೆಗೆ ಬಂದು ಮಾನ್ಯವಾದರೆ ಪದಕ್ಕೆ ನಾಣ್ಯತೆ ಬಂದು ಚಲಾವಣೆ ಸಾಧ್ಯ. ಪೊಂದು ಎಂಬುದು ನಾಮಪದವಾಗುತ್ತದೆ ಎಂಬುದಕ್ಕೆ ನೀವುಕೊಟ್ಟಿರುವ ಉದಾಹರಣೆಯೊಂದರಿಂದಲೇ ನಾಣ್ಯತೆ ಬರಲಾರದು. ಅಂಥ ಪದಗಳಿಗೆ ಪೂರ್ವಪ್ರಯೋಗವಿರಬೇಕು – ಜನರ ಬಳಕೆಯಿರಬೇಕು ಆಗಲೇ ಅರ್ಥೈಕೆ ಸಾಧ್ಯ. ಹಾಗೆಂದು ಒಬ್ಬರು ನನಗೆ ತಿಳಿಯದ ಒಂದು ಪದವನ್ನು ಬಳಸಿದರೆ ನನ್ನ ವಿರೋಧವಿದೆಯೆಂದು ಅರ್ಥವಲ್ಲ.
    ನೀವಂದಂತೆ ಉಷಾರವರು ಯಾವ ಅರ್ಥದಿಂದ ಬಳಸಿದರೋ ಅದು ತಪ್ಪು. ಅದರ ವಿಷ್ಲೇಷಣೆಯನ್ನು ಬೇರೆರೀತಿ ಮಾಡಿ ಅದು ತಪ್ಪಲ್ಲ ಎಂದು ತೋರಿಸಿಕೊಡಲು ಆಧಾರಗಳು, ಪ್ರಯೋಗ ನಿದರ್ಶನ, ನಿಘಂಟುಗಳ ಅವಲೋಕನ ಇವುಬೇಕಾಗುತ್ತವೆ. ಆ ರೀತಿಯ ಪ್ರಯೋಗ ಕಂಡುಬಂದರೆ, ತಪ್ಪಾಗಲಾರದು ಎಂದು ಒಪ್ಪಬಹುದು. ಅಲ್ಲಿಯವರೆಗೆ ಅಂಥ ಪದಪ್ರಯೋಗವನ್ನು ಮಾಡಿದಾಗ, ’ನಾನು ಈ ಅರ್ಥದಿಂದ ಪ್ರಯೋಗಿಸಿದ್ದೇನೆ’ ಎಂದು ಸ್ಪಷ್ಟನೆ ಬಯಸುವ ಗೊಂದಲವನ್ನು ಒಪ್ಪಲಾಗದು.
    ಬೇರೆ ಭಾಷೆಯ ಪದಗಳನ್ನು ಬಳಸುವುದಕ್ಕೆ ಅಡ್ಡಿಯೆಲ್ಲಿದೆ? ಹಾಗಾಗಿ ಗಣೇಶರು ಅವಧಾನದಲ್ಲಿ ಉಪಯೋಗಿಸಿದ ಬ್ಯಾರಿಭಾಷೆಯ ಪ್ರಯೋಗ ಅಲ್ಲಿ ಸರಿಯೇ, ಇಲ್ಲಿ ಪ್ರಸ್ತುತವಲ್ಲ. ಇನ್ನು “ ಆಡುಮಾತಿನ ಅನ್ಯಭಾಷಾಪ್ರಯೋಗಗಳನ್ನು ಒಪ್ಪಬೇಕಿಲ್ಲ ಎನ್ನುವುದು ಸರಿ “ ಎಂಬದನ್ನು ಒಪ್ಪಲಾರೆ. ಕವಿತೆಗೆ ಯಾವುದೂ ವರ್ಜ್ಯವಲ್ಲ. ಭಾವ ಮತ್ತು ರಸೋತ್ಪತ್ತಿಯಾಗಲು ಸಂದರ್ಭಾನುಸಾರ ಪದಗಳ ಪೊಂಛಾವಣೆ, ಈ ಬೆರಕೆಯನ್ನು ಸಾಹಿತ್ಯಕ್ಷೇತ್ರದಲ್ಲಿ ಕಾಣಬಹುದು. ಒಂದು ಪದ ಉದ್ದೇಶಿತ ಅರ್ಥವನ್ನು ಓದುಗರಿಗೆ ಕೊಡದಿದ್ದರೆ ಅದರೆ ಸಾರ್ಥಕ್ಯವೇನು. ಸ್ಪಷ್ಟವಾಗಿ ಅರ್ಥವ್ಯಾಪಿತ್ವ ಕಂಡುಬಂದರೆ ಒಪ್ಪುವುದರಲ್ಲಿ ಅಭ್ಯಂತರವಿಲ್ಲ.ಪೊಂದಿಂ ಎಂಬ ಪದದಲ್ಲಿ ಹೊಂದಿಕೊಂಡಿದ್ದರೂ ಸಹ ಎಂಬ ಅರ್ಥವ್ಯಾಪಕತೆ ಬರುತ್ತಿಲ್ಲ.
    ಒಂದಿಸು= ಸೇರಿಸು, ಕಟ್ಟು, ಒಂದಿಗ = ಜತೆಯವ, ಒಂದು=ಹೊಂದು=ಸೇರು” ಈ ಪದಗಳನ್ನು ಗಮನಿಸಿದಾಗ “ಒಂದು” ಎಲ್ಲವನ್ನೂ ಸೇರಿಸಿಕೊಳ್ಳವ “ಒಂದಾಗುವ” ಕ್ರಿಯಾವಾಚಕವೇ ಮೂಲದ್ರಾವಿಡ ಶಬ್ದವಿರಬಹುದೇ ಎಂದು ಅನ್ನಿಸಿದ್ದನ್ನು ಹಂಚಿಕೊಂಡನೇ ಹೊರತು. ಸಿದ್ಧಾಂತಮಾಡಲು ಹೊರಟಿಲ್ಲ. ಒಂದುವಿನಿಂದ ಹೊಂದು ಆಗಿದೆ – ಎಂಬುದು ನನ್ನ ಮಾತಲ್ಲ. ಅಲ್ಲಿ ನೀವೆಂದಂತೆ ಚರ್ಚೆಗೆ ಅವಕಾಶವಿಲ್ಲ. ಶಾಂತಮನೊಂದಿ, ಶಾಂತಮಂ ಪೊಂದಿ ಈ ಪ್ರಯೋಗ ನೆನಪಾಗಿ ಈ ಬಗ್ಗೆ ಚಿಂತನೆ. ಒಂದಾಗಿ = ಸೇರಿ, ಬೆರೆತು, ಹೊಂದಿ= ಸೇರಿ, ಪಡೆದು, ಎರಡು ಪದಗಳೂ ಚಿಂತನೀಯವೆ. ನನ್ನ ಪಾಲಿಗಂತೂ ಈ ಹೊತ್ತಿಗೆ ಇದು ಸಾಗಿರುವ ಅಧ್ಯಯನ.

   • . ಉಷರವರ ಪದ್ಯದ ಬಗೆಗಿನ ಚರ್ಚೆಯನ್ನು ಸಾಕಷ್ಟು ಹೊತ್ತಿನವರೆಗೆ ಗಮನಿಸಿ ಆಮೇಲೆ ನನ್ನ ಅಭಿಪ್ರಾಯವನ್ನು ತಿಳಿಸಿದೆ. ಉಷರವರು ಬಳಸಿದ ಅರ್ಥದಲ್ಲಿ ತಪ್ಪಿದ್ದರೂ, ಅದನ್ನು ಬದಲಿಸದೆಯೇ ಬೇರೆ ರೀತಿ ಬಿಡಿಸಿ ಅರ್ಥೈಸಿದರಾದೀತು ಅಂತ ತಿಳಿಸಿದೆ. ಇದೂ ನಮ್ಮ ಸಾಹಿತ್ಯಪ್ರಜ್ಞೆ ಮತ್ತು ಭಾಷಾಪ್ರಜ್ಞೆ ಬೆಳೆಯಲು ಅನುಕೂಲ ಕಲ್ಪಿಸುತ್ತೆ ಅನ್ನೋ ದೃಷ್ಟಿಯಿಂದ. ಒಂದು ತೆರನಾಗಿ ಹೇಳಿದಮೇಲೆ ತಿದ್ದಿಕೊಳ್ಳುವ ಅವಕಾಶವೆ ಇಲ್ಲವೆ? 🙂 ” ನೀನು ಹೇಳಿದ್ದು ಹಾಗಲ್ಲ. ಈಗ ಬದಲಾಯಿಸಿ ಹೇಳಬೇಡ” ಅಂದರೆ ಹೇಗೆ?

    ಹೊಸಪದಗಳನ್ನು ಟಂಕಿಸಬಾರದು ಅಂತ ನಾನೆಲ್ಲಿಯೂ ಹೇಳಿಲ್ಲವಲ್ಲ? ಅರ್ಥವ್ಯಾಪ್ತಿಯ ಹರಹಿಗೆ ನಿಷೇದವನ್ನು ನೀವು ಕಲ್ಪಿಸುವಂತೆ ನನಗನ್ನಿಸ್ತು. ಅದು ನಿಮ್ಮ ವೈಯಕ್ತಿಕ ಅಭಿಪ್ರಾಯವೆ ತಾನೆ. ಪರಮಸತ್ಯವಲ್ಲವಲ್ಲ. ನಮಗೆ ತಿಳಿಯದ್ದೆಲ್ಲವನ್ನು ನಾವು ಅಲ್ಲಗಳೆದು ನಿರಾಕರಿಸಿದರೆ ನಾವಾದರು ಬೆಳೆಯುವುದು ಹೇಗೆ? ಅಥವ ಸತ್ಯ ಸುಳ್ಳಾದೀತೆ? ಹೊಂದು ಅನ್ನೋದನ್ನ ನಾನು ನಾಮಪದವಾಗಿ ಇಲ್ಲಿ ಬಳಸಿಲ್ಲ. ಸಹಪದ್ಯಪಾನಿ ಒಬ್ಬರಿಗೆ ಸಹಾಯವಾಗುವಂತೆ ಆ ಬಳಕೆಯಬಗ್ಗೆ ಇಲ್ಲಿ ಹೇಳಿದೆ. ಇಲ್ಲಿ ನನ್ನ ಸ್ವಪ್ರಯೋಜನವೇನು ಇಲ್ಲ. ಹೊಂದು ಪದವನ್ನು ನಾಮಪದವಾಗಿ ಬಳಸಿರುವುದನ್ನು ನೀವು ಕೇಳಿಲ್ಲ ಆನ್ನೋದು ಸುಸ್ಪಷ್ಟ. ಅಂದಮೇಲೆ ಇದು ನನ್ನೊಬ್ಬನ ಆಡುಮಾತೊ ಅಥವಾ ಅನೇಕ/ಬಹುತೇಕರು ಬಳಸುವ ಮಾತೊ ಅನ್ನೋದನ್ನು ನೀವು ಹೇಗೆ ತೀರ್ಮಾನಿಸಿದಿರಿ. ಒಂದು ಪದಪ್ರಯೋಗದ ಸರಿತಪ್ಪನ್ನು ಅದರ ಬಳಕೆಯನ್ನು ಕೇಳರಿಯದವರೆ ಮಾಡಬೇಕೆನ್ನುವ ನಿಬಂಧನೆಯುಂಟೆ? ಪೂರ್ವಪ್ರಯೋಗವಿರದ ಯಾವುದೇ ಫ್ರಾಯೊಗವು ಒಪ್ಪತಕ್ಕುದಲ್ಲ ಎಂಬ ಸಂಕುಚಿತ ನಿಲುವಿಟ್ಟುಕೊಂದರೆ ಏನೂ ಸಾಧಿಸಲಸಾಧ್ಯ. ಪೂರ್ವಪ್ರಯೋಗ ಬೆಂಬಲ ತುಸುವೂ ಇಲ್ಲದ ಹೊಸಪದಗಳ ಸೃಜನೆಯನ್ನು ಮರುಮಾತಿಲ್ಲದೆ ಒಪ್ಪುವಾಗ, ಅರ್ಥವ್ಯಾಪ್ತಿ ಮತ್ತು, ಆಡುಮಾತಿನ ಪ್ರಯೋಗದ ಮೇರೆಗೆ ಸುಲಭವಾಗಿ ಒದಗುವ ಅರ್ಥದ ಬೆಳೆವಣಿಗೆಯನ್ನು ಒಪ್ಪದುದು ವಿನೋದವಾಗಿ ತೋರುತ್ತೆ ನನಗೆ.

    ಗಣೇಶರೆ ಬ್ಯಾರಿಷೆಯ ( ಕನ್ಬಡದ ಆದುಮಾತಿನ ಒಂದು ಸೀಮಿತ ರೂಪ) ಬಳಕೆ ಇಲ್ಲಿ ಬಹುಪ್ರಸ್ತುತವಾಗಿ ನನಗೆ ಅನ್ಸುತ್ತೆ. ನೀವು ಅದನ್ನು ಒಂದೇ ಏಟಿಗೆ ಅಲ್ಲಗಳೆದ ಕಾರಣ ನನಗರ್ಥವಾಗ್ತಿಲ್ಲ.

    ಇನ್ನು ಬೇರೆಭಾಷೆಗಳ ಪದಗಳ ಸ್ವೀಕರಣ- ಆ ಮಾತನ್ನು ಇಲ್ಲಿ ಬೆಳೆಸೋದು ಬೇಡ. ಯಾಕೆಂದರೆ, ನಾವು ಹೇಳೋದೆ ಒಂದು ಇನ್ನೊಬ್ಬರು ಅರ್ಥೈಸುವುದೇ ಒಂದು ಆಗುತ್ತೆ. ಮುಖ್ಯವಾಗಿ ಆ ಚರ್ಚೆ ಈ ಪ್ರಸ್ತುತ ವಿಷಯಕ್ಕೆ ಅಪ್ರಸ್ತುತ. ಒಂದು ಮಾತ್ರ ನನಗನಿಸುತ್ತೆ- ಹೊಸಪದಗಳ ಸೃಜನೆಯಂತೆ, ಇದನ್ನು ಒಪ್ಪುವ ವಿಶಾಲಮನೋಭಾವ ಕನ್ನಡದ್ದೇ ಆದ ಶಬ್ದಗಳ ಅರ್ಥದ ಹರಹಿನಲ್ಲು ಇದ್ದರೆ ಚೆನ್ನಾಗಿರುತ್ತೆ.

    • ಪೊಂದು ಅನ್ನುವುದೂ ನಾಮಪದವೇ ಎಂದು ನೀವು ಹೇಳಿದ್ದು ಇದಕ್ಕೆಲ್ಲಾ ಮೂಲಕಾರಣ. ಅದಕ್ಕೆ ಪ್ರಸಾದು ಮತ್ತು ಸೋಮ ಪ್ರತಿಕ್ರಯಿಸಿದಾಗ ತಪ್ಪೆನಿಸದ್ದಲ್ಲಿ ಬಿಟ್ಟು ಬಿಡಬಹುದು ಎಂದು ನೀವು ಬರೆದಾಗ ಅಲ್ಲಿಗೆ ಆ ವಿಷವನ್ನು ಮರೆತೆ. ಮತ್ತೆ ಉಷಾರವರು “ಹೀಗೆ “ಹೊಂದಿಂ” ಬಿಟ್ಟುಬಿಟ್ಟರೆ ಈ “ಬೇಬಿ-ಶಾಲಿನಿ” ಗತಿ ? ಎಂದು ವಿನೋದಿಸಿದಾಗ ಮತ್ತೆ ಆ ಪದದ ಬಗ್ಗೆ ಯೋಚಿಸಿನೋಡಿ ಬರೆದೆ. ಅದಕ್ಕೆ ಬಂದ ನಿಮ್ಮ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಕಾಯಿತು.
     “ನೀನು ಹೇಳಿದ್ದು ಹಾಗಲ್ಲ. ಈಗ ಬದಲಾಯಿಸಿ ಹೇಳಬೇಡ” ಅಂದರೆ ಹೇಗೆ?” “ ಅರ್ಥವ್ಯಾಪ್ತಿಯ ಹರಹಿಗೆ ನಿಷೇದವನ್ನು ನೀವು ಕಲ್ಪಿಸುವಂತೆ ನನಗನ್ನಿಸ್ತು” ನಮಗೆ ತಿಳಿಯದ್ದೆಲ್ಲವನ್ನು ನಾವು ಅಲ್ಲಗಳೆದು ನಿರಾಕರಿಸಿದರೆ ನಾವಾದರು ಬೆಳೆಯುವುದು ಹೇಗೆ? ಪೂರ್ವಪ್ರಯೋಗವಿರದ ಯಾವುದೇ ಫ್ರಾಯೊಗವು ಒಪ್ಪತಕ್ಕುದಲ್ಲ ಎಂಬ ಸಂಕುಚಿತ ನಿಲುವಿಟ್ಟುಕೊಂದರೆ ಏನೂ ಸಾಧಿಸಲಸಾಧ್ಯ ಗಣೇಶರೆ ಬ್ಯಾರಿಷೆಯ ( ಕನ್ಬಡದ ಆದುಮಾತಿನ ಒಂದು ಸೀಮಿತ ರೂಪ) ಬಳಕೆ ಇಲ್ಲಿ ಬಹುಪ್ರಸ್ತುತವಾಗಿ ನನಗೆ ಅನ್ಸುತ್ತೆ. ನೀವು ಅದನ್ನು ಒಂದೇ ಏಟಿಗೆ ಅಲ್ಲಗಳೆದ ಕಾರಣ ನನಗರ್ಥವಾಗ್ತಿಲ್ಲ. ಇವೆಲ್ಲಾ ನಿಮ್ಮ ಮಾತುಗಳು ಮತ್ತು ಅರ್ಥೈಕೆ.
     ನನ್ನ ಮಾತುಗಳಲ್ಲಿ ನಿರ್ಭಂದ, ನಿರೋಧ, ನಿಷೇದ, ಅಲ್ಲಗಳೆಯುವಿಕೆ ಇದ್ದರೆ, ಇತರ ಸ್ನೇಹಿತರು ತಿಳಿಸಿಯಾರು.

     • —- ಇವೆಲ್ಲಾ ನಿಮ್ಮ ಮಾತುಗಳು ಮತ್ತು ಅರ್ಥೈಕೆ.
      ನನ್ನ ಮಾತುಗಳಲ್ಲಿ ನಿರ್ಭಂದ, ನಿರೋಧ, ನಿಷೇದ, ಅಲ್ಲಗಳೆಯುವಿಕೆ ಇದ್ದರೆ, ಇತರ ಸ್ನೇಹಿತರು ತಿಳಿಸಿಯ——–

      ಚಂದ್ರಮೌಳಿಯವರೆ, ಮತ್ತೆ ನೀವು ಬರೆದಿರುವುದನ್ನು ಓದಿನೋಡಿ. ನನ್ನ ಗ್ರಹಿಕೆ ನಿರಾಧಾರವಾದದ್ದೊ ಸಾಧಾರವೊ ಕಂಡೀತು. ನಿರ್ಬಂಧ ನಿಷೇದ ಮುಂತಾದ ಇದೇ ಆರೋಪಗಳನ್ನು ನೀವು ನನಗೆ ಹೊರೆಸಿರುವಿರಲ್ಲವೆ? ಅದು ನಿಮ್ಮ ಆರ್ಥೈಕೆ ತಾನೆ? ಅದಕ್ಕೆ ನಾನು ಪ್ರತಿಕ್ರಿಯಿಸಿದೆ ಅಷ್ಟೆ.

      ಹೊಂದು ಅನ್ನುವ ಶಬ್ದವನ್ನು ನಾಮಪದವಾಗಿ ಉಪಯೋಗಿಸಿದಲ್ಲಿ ನನಗೆ ಸರಿಯನ್ನಿಸುತ್ತೆ. ಉಷರವರಿಗೆ ಅದು ಒಪ್ಪತಕ್ಕುದು ಅನ್ನಿಸಿದರೆ ಅವರ ಪದ್ಯವನ್ನು ಅವರು ಬದಲಿಸದೆ ಇಟ್ಟುಕೊಳ್ಳಬಹುದು. ಇತರರಿಗೆ ಸರಿಯಲ್ಲಯೆನಿಸಿದರೆ ಹಾಗೆ ಎಂದುಕೊಳ್ಳೋದು ಅವರ ಹಕ್ಕು. ಸರಿಯಲ್ಲ ಎನ್ನೋದುಕ್ಕು ತಪ್ಪು ಅನ್ನೋದಕ್ಕು ಕೆಲವೊಮ್ಮೆ ಬಹುವ್ಯತ್ಯಾಸವುಂಟು.

     • ನಾನು ಹೇಳಿದ ಯಾವುದೆ ಮಾತು ನಿಮಗೆ ಬೇಸರ ತಂದಿದ್ದಲ್ಲಿ ನಿಮ್ಮ ಕ್ಷಮೆಯಿರಲಿ. ಸತ್ಯ ಮತ್ತು ಸತ್ತ್ವಾನ್ವೇಷಣೆಯಲ್ಲಿ ನಾನು ಯಾವುದೇ ಔಪಚಾರಿಕತೆ ಕಟ್ಟಳೆಗಳನ್ನು ಇಟ್ಟುಕೊಳ್ಳುವುದಿಲ್ಲ

 26. ಶ್ರೀಕಾಂತರೇ

  ಬೇಸರವೇನಿಲ್ಲ. ನಿಮ್ಮ ಸಹನೆಗೆ ಧನ್ಯವಾದ.ನಮ್ಮಿಬರ ಮಧ್ಯೆ ಮುಂದುವರೆಯಬಹುದಾದ ಪ್ರತಿಕ್ರಿಯೆಗೆ, ಪರಸ್ಪರ ವಿಷಯಗಳನ್ನು ಟಂಕಿಸುವ ಅಕ್ಷರಗಳಿಂದಲೇ ಅರ್ಥಮಾಡಿಸುವ ಶಕ್ತಿ ಮಿತವಾದದ್ದು. ದೂಷಣೆಗಳತ್ತವಾಲುತ್ತಿರುವ ಮಾತುಗಳಿಗೆ ಉತ್ತರಕೊಡುವುದು ಯಾವರೀತಿಯಿಂದಲೂ ಒಳಿತಲ್ಲ. ಇಬ್ಬರೂ ಚರ್ಚೆಯನ್ನು ಮುಂದುವರಿಸಬಲ್ಲೆವಷ್ಟೆ. ಹಿಂದೆಯೂ ಒಮ್ಮೆ ನಿಮಗೆ ಇದನ್ನು ಸೂಚಿಸಿ ವಿರಮಿಸಿದ ನೆನಪಿದೆ. ಮತ್ತೆ ಉತ್ತರಪ್ರತ್ಯುತ್ತರಗಳ ಮುಂದುವರಿಕೆಯಿಂದ ನನಗಾಗಲೀ ನಮ್ಮ ಉಳಿದಮಿತ್ರರಿಗಾಗಲೀ ಲಾಭವೇನಿಲ್ಲ.

 27. ಚಹದ ಬಟ್ಟಲಿನಲ್ಲಿ ಎದ್ದಿರುವ ಚಂಡಮಾರುತವನ್ನು ಈಗ ತಾನೇ ಕಾಣುತಿದೇನೆ:-) ಈ ವಿಳಂಬಕ್ಕಾಗಿ ಕ್ಷಮೆಯಿರಲಿ. ಮೊದಲಿಗೆ ನನ್ನ ಸ್ಪಷ್ಟನೆ: ನಾನು ಅವಧಾನದಲ್ಲಿ ಬ್ಯಾರಿಭಾಷೆಯನ್ನು ಎಂದೂ ಬಳಸಿದ ನೆನಪಿಲ್ಲ. ಕಾರಣ ಆ ಉಪಭಾಷೆಯ ಪರಿಚಯವೇ ನನಗೆ ಗಟ್ಟಿಯಾಗಿಲ್ಲ. ಅದಕ್ಕಿಂತ ಕರಾವಳಿಯ ಇತರ ಉಪಭಾಷೆಗಳಾದ ಹವ್ಯಕ, ಕುಂದಾಪುರದ ನುಡಿಗಳೂ ತುಳುಭಾಷೆಯೂ ಹೆಚ್ಚು ಪರಿಚಿತ.ಇನ್ನಾರಾದರೂ ಅವಧಾನಿಗಳು ಬಳಸಿದ್ದಿರಬಹುದು. ದಿಟವೇ, ಅನ್ಯಭಾಷೆಗಳನ್ನೂ (ತೆಲುಗಿನಲ್ಲಿ ಹೇಳುವಂತೆ “ದ್ರಾಭಭಾಷೆ” ಅರ್ಥಾತ್ ಕಲಬೆರಕೆನುಡಿಯನ್ನೂ ನಾನು ಸಭಾಕವಿತೆ-ಗೃಹಕವಿತೆಗಳಲ್ಲಿ ಹಾಗೂ ಗದ್ಯದಲ್ಲಿಯೂ ಬಳಸಿದ್ದೇನೆ. ಆದರೆ ಇವೆಲ್ಲ ಬಲುಮಟ್ಟಿಗೆ, ನಿರಪಾವಾದವೆನ್ನುವ ಮಟ್ಟಿಗೆ ಹಾಸ್ಯ-ವಿಡಂಬನೆ-ವಿನೋದಸಂದರ್ಭಗಳಲ್ಲಿಯೂ ಔಚಿತ್ಯಕ್ಕೆ ಒಪ್ಪಾಗುವಂಥ ಆತ್ಮೀಯಸಂದರ್ಭಗಳಲ್ಲಿಯೂ ಸೇರಿವೆ.

  ಇನ್ನು ಪದ್ಯಪಾನದ ಸದ್ಯಸ್ಕವಾದ ಧ್ಯೇಯದ ಮಟ್ಟಿಗೆ ಹೇಳುವುದಾದರೆ ಆಸಕ್ತರಿಗೆ ಅಭಿಜಾತಪದ್ಯರಚನಾಭ್ಯಾಸ ಮತ್ತು ಆ ಬಗೆಯ ಕಾವ್ಯಗಳ (ಕನ್ನಡ ಮತ್ತು ಸಂಸ್ಕೃತ) ಅಧ್ಯಯನ ಮತ್ತು ಆಸ್ವಾದಗಳಿಗೆ ಸಹಕಾರವಾಗುವಂಥ ವೇದಿಕೆಯಿದಾಗಬೇಕೆಂಬ ಹಂಬಲವೇ ಮುಖ್ಯ.

  • ಗಣೇಶರೆ- ನೀವು ಇಲ್ಲಿ ಹೇಳಿರುವ ಅಭಿಪ್ರಾಯ ಸರ್ವಥಾ ಮಾನ್ಯ. ಮಾತು ಮುಂದುವರಿದಾಗ ನೀವು ಬ್ಯಾರಿಭಾಷೆಯ ಪದವೊಂದನ್ನು ಬಳಸಿದುದಾಗಿ ಕನ್ನದ ಶತಾವಧಾನದಲ್ಲಿ ಹೇಳಿದ ನೆನಪು ಬಂದು ಉಲ್ಲೇಖಿಸಿದೆ- ನಾನು ತಪ್ಪಾಗಿ ಗ್ರಹಿಸಿರಬಹುದು. ಕ್ಷಮಿಸಿ. ಅದೆ ನನ್ನ ಅಭಿಪ್ರಾಯದ ಒಳದಿರುಳೂ ಅಲ್ಲ, ಮುಖ್ಯಾಂಗವೂ ಅಲ್ಲ. ಇಲ್ಲಂತು “ಪೊಂದು/ ಹೊಂದು” ಪದವನ್ನು ನಾಮಪದವಾಗಿ ಬಲಸಬಹುದೇ ಅನ್ನೋದು ಪ್ರಶ್ನೆಯಾಗಿತ್ತು. ನಾನು ಕೊಟ್ಟಿರುವ ಆ ಕೊಂಡಿಯಿಂದ ಅದು ಇತ್ಯರ್ಥವಾಗಿ, ಅದು ಸಾಧ್ಯ ಅಂತ ತೋರಿಸಿದೆ. ಅಂತೂ ಕೇವಲ ನನ್ನ ಮಾತಿನ ಮೇಲೆ ಈ ಪ್ರಯೊಗ ನಿಲ್ಲಬೇಕಿಲ್ಲ. ನನಗೂ ಇದು ತಿಳಿಯಾದಂತಾಯಿತು

   • ಸಹೋದರಿ ಶ್ರೀಮತಿ ಉಷಾ ಅವರ ಪದ್ಯದ ಪೊಂದಿಂ ಎಂಬ ಪದವು ಯಾವ ರೀತಿಯಿಂದಲೂ ಸಮರ್ಥನೆಗೆ ದಕ್ಕಲಾಗದ ರೂಪ. ಆದರೆ ಪೊಂದು ಎಂಬ ಕ್ರಿಯಾಪದಕ್ಕೆ ನಾಮಪದಾತ್ಮಕತೆಯೂ ಇದೆಯೆಂಬುದು ದಿಟ. ಇದೊಂದೇ ಶ್ರೀಕಾಂತರ ನಿಲವಾದರೆ ಅಲ್ಲಿಗೆ ಎಲ್ಲವೂ ಇತ್ಯರ್ಥವಾದಂತೆ. ಮುಖ್ಯಚರ್ಚೆಯಿದ್ದದ್ದು ಈ ವಿಚಾರದ ಬಗೆಗೇ ಎಂದು ನನ್ನ ತಿಳಿವಳಿಕೆ.

  • ಮಾನನೀಯ,
   ನಮ್ಮ ವಾದದ ಇತ್ಯರ್ಥಕ್ಕಾಗಿ ಕೃತಜ್ಞತೆಗಳು. ದಯವಿಟ್ಟು ನಮ್ಮ ಪದ್ಯಗಳ ಮೂಲ್ಯಾಂಕನ ಮಾಡಿರೆಂದು ವಿನಮ್ರ ಕೋರಿಕೆ.

 28. ಬೆಟ್ಟಂತಿಂದುಂ ಬೆಳೆವನವನುಂಮಮ್ಮನ ಪ್ರೀತಿಪಾತ್ರಂ
  ಪೆಟ್ಟಂತಿಂದುಂ ತಿಳಿವನವನುಂಮಪ್ಪನಾ ರೀತಿಮಾತ್ರಂ
  ಕೊಟ್ಟುಂತಿಂದುಂ ನಲಿವನವನುಂಮೆಲ್ಲರಾ ನೀತಿಶಾಸ್ತ್ರಂ
  ಗುಟ್ಟಂಪೇಳ್ವೆಂ ನಿಜಜಗದೊಳುಂ ಬಾಲ್ಯಮೇ ಬಾಳ ಭಾಗ್ಯಂ।।
  (“ಮಂದಾಕ್ರಾಂತ” ಬಂದ ಸಡಗರದಲ್ಲಿ – “ಮಗು ಮನುಜನ ತಂದೆ” ಎಂಬ ಲೋಕೋಕ್ತಿಯಿಂದ ಪ್ರೇರಿತ )

 29. ಅಡ್ಗೇಲೆಲ್ಲಾ ಅಮ್ಮನಡ್ಗೇನೆ ಟೇಸ್ಟು,
  ನಾಡಲ್ಲೆಲ್ಲಾ ನಮ್ಮ ನಾಡೇನೆ ಬೆಸ್ಟು |
  ಮೈ ಡ್ಯಾಡೀನೇ ಜಾಸ್ತಿ ಸ್ಟ್ರಾಂಗಂತ ನಂಬ್ಕೊಂ-
  ಡ್ಕೊಂಡಾಡ್ಕೊಳ್ಳೋ ಬಾಲ್ಯಮೇ ಬಾಳ ಭಾಗ್ಯಂ ||

  • ಆದಿಪ್ರಾಸಕ್ಕೂನಮೆಂತಾದೊಡೇಂ ಪ್ರ-
   ಹ್ಲಾದಕ್ಕಾದಂ ತರ್ಪುದೀ ಸ್ನಿಗ್ಧಮುಗ್ಧಾ-
   ಮೋದಂ ಪದ್ಯಂ ನೋಡೆ ಸೌಧೀರಶೇಮು-
   ಷ್ಯಾದರ್ಶಂ ದಲ್ ಲೋಕಭಾಷಾವಿಭೂಷಂ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)