Nov 162013
 

‘ದೋಸೆ’, ‘ಸಾರು’, ‘ಪಲ್ಯ’, ‘ಪೂರಿ’ ಪದಗಳನ್ನುಪಯೋಗಿಸಿ ನಿಮ್ಮ ಇಷ್ಟದೇವತೆಯ ಸ್ತುತಿಯನ್ನು ಪದ್ಯರೂಪದಲ್ಲಿ ರಚಿಸಿರಿ.

ಛಂದಸ್ಸು ನಿಮ್ಮ ಆಯ್ಕೆ.

  92 Responses to “ಪದ್ಯ ಸಪ್ತಾಹ ೮೭: ದತ್ತಪದಿ”

 1. ಎನ್ನಿಷ್ಟದೇವತೆಗೆ ದೋಸೆ-ಪೂರಿಗಳಲ್ಲ
  ದಿನ್ನಿಷ್ಟು ಬೇಕಂತೆಲೇನೆಲ್ಲಮುಂ|
  ಬನ್ನಗೊಂಡೆಂದಳೈ ಪಲ್ಯ-ತಿಳಿಸಾರು ಸರಿ,
  ಚೆನ್ನಿನಾ ಚಟ್ಣಿ ತಾ ಹಾದಿರಂಪ||

 2. ಆರದೋ ಸೇವೆಯೊಳ್ ನನ್ನ ಮರೆತುದು ಸರಿಯೆ?
  ಸಾರುತಿರ್ಪೆನು ರಾಮ ತವನಾಮವಂ
  ದಾರಿಯಮ್ತೋರ್ವವೊಲ್ ಸಾಪಲ್ಯದೆಡೆಗಿಂದು
  ಪೂರೈಸುತುಂ ಮೆನ್ನ ಬೇಡಿಕೆಯನು

  • ಅದು ’ಸಾಫಲ್ಯ’ ಎಂದಾಗಬೇಕು.
   ಪೂರೈ – ಇಲ್ಲಿ ’ಪೂರಿ’ ಇಲ್ಲ. ಪೂರಿ-ಪೂರೀ ಎರಡೇ ಆಯ್ಕೆಗಳು.
   ಉತ್ತರಾರ್ಧ: ವಾಕ್ಯ ಪೂರ್ಣವಾಗಿಲ್ಲ.
   ತುಂ+ಎನ್ನ=ತುಮೆನ್ನ. ’ತುಂ ಮೆ’ ಸರಿಯಾಗದು.
   ದಯವಿಟ್ಟು ಸವರಿಸಿ.

   • Prasadu avare, Thanks for the correcting my mistakes…. 🙂 have tried to make it better…..

    ಆರದೋ ಸೇವೆಯೊಳ್ ನನ್ನ ಮರೆತುದು ಸರಿಯೆ?
    ಸಾರುವೆನುಮನುದಿನವು ತವನಾಮವಂ
    ತೋರು ಸಾಫಲ್ಯಮಂ ಪಲ್ಯಂಕಶಯನನೇ
    ಪೂರಿಸೈ ನನ್ನ ಬೇಡಿಕೆಯನಿಂದು

    • ಪಲ್ಯಕ್ಕೇತಕೆ ಬಂದುದಿಂತು ಗೆಳೆಯಾ! ತಾನೀ “ಮಹಾಪ್ರಾಣ”ವೈ-
     ಫಲ್ಯಂ? ಮತ್ತರರೂರ್ಜೆಯಂ ಕವನಿಸಲ್ ಚಾಪಲ್ಯಮಿಂತಾದುದೇಂ?
     ಕಲ್ಯಾಣಪ್ರದಮಾದೊಡಂ ಭವದುದಾರಪ್ರೀತಿರೀತ್ಯಾದಿಗಳ್
     ಮಾಲ್ಯಂ ತಾನೆನಿಸಿರ್ಕೆ ವಾಗ್ವಧುವಿಗಂ ತ್ವತ್ಕಾವ್ಯಸಂಗುಂಫನಂ

     • ಗಣೇಶ್ ಸಾರ್, ಈ ಪದ್ಯದ ಅರ್ಥ ಸರಿಯಾಗಿ ತಿಳಿಯದಿದ್ದರೂ, ಮೆಚ್ಚಿರಬಹುದೆಂದುಕೊಂಡು ನನ್ನ ಧನ್ಯ ವಾದದಗಳಿಂದ ನಮಸ್ಕರಿಸುತ್ತಿದ್ದೇನೆ:-) 😉

 3. ಎಂದೋ ಸೇರ್ದಪೆನುನ್ನಡಿ-
  ಯಂ ದೇವೀ ನಿನ್ನ ಪೆಸರನೇ ಸಾರುವೆನೌ
  ಕುಂದು ಮನಃಚಾಪಲ್ಯಮ-
  ನಿಂದೇ ಕಳೆದೆನ್ನ ಮನದೊಳಿಂಪೂರಿಸುಗೆ

 4. ತಾಯೆ ನಿನ್ನನಿದೋಸೆರೆ ಪಿಡಿದಿರ್ಪೆಮೆನ್ನೆರ್ದೆಯೊಳ್
  ಶ್ರೀಯೆ ನನ್ನನೀಗಳ್ ಗೆಲ್ವ ಗಂಡಗೂಸಾರುಂಟು ಪೇಳ್
  ತೋಯಜಂಬೋಲ್ವ ನಯನದೆ ಕಾರುಣ್ಯಸಂಪೂರಿತೆ
  ಮಾಯೆ ನೀನೊಪ್ಪಲ್ ಯಮನಿಗಂ ಅಂಡುವ ಕೆಚ್ಚಾದೀತೆ

  • ದೋಸೆ, ಸಾರು, ಪಲ್ಯಗಳನ್ನು ಹೊಂದಿಸಿರುವುದು ಅನನ್ಯವಾಗಿವೆ. ಪಲ್ಯ ಬೆಸ್ಟ್.

   • ಹೌದು ಪ್ರಸಾದು, ಶ್ರೀಕಾಂತ್ ಅವರು ಎಂದೂ ಒಳ್ಳೆಯ ಜಿಗಿ-ಬಿಗಿ ಇರುವ ಬಗೆಯಲ್ಲಿಯೇ ತಮ್ಮ ಪದ್ಯಗಳನ್ನು ರೂಪಿಸುತ್ತಾರೆ.

  • ಸರ್ ಒಂದು ಅನುಮಾನ.. “ಯಮನಿಗಂ” ಎನ್ನುವ ಶಬ್ದ ಸರಿಯಾದ ರೂಪವೇ? ಯಮಂಗಂ, ಯಮಂಗೆ, ಯಮಗಂ, ಯಮಗೆ ಈ ರೂಪಗಳಂತೆ ‘ಯಮನಿಗಂ’ ಬಳಸಬಹುದೆ? ಅಥವಾ “ಯಮನಿಗೂ” ಎಂಬರ್ಥದಲ್ಲಿ ಹೀಗೆ ಬಳಸಬಹುದೆ? ಪೂರ್ವಕವಿಪ್ರಯೋಗ ಯಾವುದಾದರೂ ಇದೆಯೇ?

   • ಎಲ್ಲವೂ ವಿವಿಧಕನ್ನದಗಳ ನೆಲೆಯಿಂದ ಸಾಧುರೂಪಗಳೇ. ಆದರೆ ಯಮನಿಗಂ ಎಂಬುದು ಯಮಗಂ ಇತ್ಯಾದಿಗಳಿಗಿಂತ ಮತ್ತೂ ಉತ್ತಮ

  • ಶ್ರೀಕಾಂತರೆ ಬಹಳ ಚೆನ್ನಾಗಿದೆ 🙂

  • ಪ್ರಸಾದು, ಉಭಯ ಗಣೇಶರು, ಸೋಮ ಎಲ್ಲರಿಗೂ ನನ್ನ ಧನ್ಯವಾದಗಳು. ಕೊಪ್ಪಲತೋಟರ ಅನುಮಾನವನ್ನು ತೀರಿಸಿದ ಗಣೇಶರಿಗೆ ವಿಶೇಷ ನಮನ.

  • ಶ್ರೀಕಾಂತ ಸರ್,ಸೊಗಸಾದ ಪದ್ಯ.ಧನ್ಯವಾದ.

 5. ಗನ್ನಮಹಿಮೆ ಪಾಡುತಾನು
  ನಿನ್ನನಿದೋ ಸೇವಿಸಿಹೆನು
  ಎನ್ನಬದುಕ ಸಾಫಲ್ಯವ
  ಮುನ್ನಮೆ ಪೂರಯಿಸೆಯೇನು
  ಇನ್ನುಕಾಯಲಾರೆ ತಾಯೆ
  ಮನ್ನಿಸೆನ್ನ ನೀನು ಕಾಯೆ |
  ನಿತ್ಯೋತ್ಸವ ನಿನಗೆ ನಿತ್ಯೋತ್ಸವ….!
  (ಗನ್ನ = ಗಹನ,ಗುರುತರವಾದ)

  • ದಯವಿಟ್ಟು ಸಾಂಪ್ರದಾಯಿಕಚ್ಛಂದೋಬಂಧಗಳಲ್ಲಿ ಬರೆಯಿರಿ. ನೀವೀಗ ರಚಿಸಿದಂಥ ಬಂಧಗಳಿಗೆ ಇತರತ್ರ ಪ್ರಕಟನಾವಕಾಶವಿದೆ. ಆದರೆ ವೃತ್ತ-ಕಂದ-ಷಟ್ಪದಿ-ಅಕ್ಕರ ಮುಂತಾದುವುಗಳಿಗಾಗಿ ತಾನೆ ಪದ್ಯಪಾನವು ಮುಡಿಪಾಗಿರುವುದು:-)

   • ಕಾವುದೆನ್ನನು ತಾಯೆ ಮನಸಾರ ಯಾಚಿಸಿಹೆ
    ನಾವುದೋ ಸರಮೆಂದು ಕಡೆಗಣಿಸದೇ |
    ನೋವನುಂಡಿಹೆನಮ್ಮ ವೈಫಲ್ಯಗಳೊಳಾನು
    ಭಾವಪೂರಿತಳಾಗಿ ಬೇಡಿತಿಹೆನುಂ ||
    ಸರ = ಧ್ವನಿ
    (ಕ್ಷಮಿಸಿ ಗಣೇಶ್ ಸರ್, ದತ್ತ ಪದಗಳ ಬಳಕೆ ಪುನರಾವರ್ತನೆ ತಪ್ಪಿಸುವ ಆತುರದಲ್ಲಿ (ಚೌಪದಿಗೆ ಹೊಂದಿಸಲಾಗದೆ) ಬರೆದದ್ದು)

 6. ವಸುಮತಿಯನೆಂದೋ ಸೆಣಸಿ ಮೇಲೆ ತಂದಿರ್ವೆ
  ವಸುದೇವ ಸುತನಾಗಿ ಪೂರಿತನು ನೀನು
  ಬೆಸನದಲಿ ಪಾಲ್ಗುಣಗೆ ಪಲ್ಯಯನ ಪಿಡಿದಿರ್ವೆ
  ಬೆಸೆದು ಸಾರುವೆಯೆ೦ದೊ ಮನುಜ ಧರ್ಮ?

  ಪಲ್ಯಯನ =ಲಗಾಮು , (ಇಂದ್ರಿಯಗಳೆ೦ಬ ಕುದುರೆ ಮತ್ತು ರಥದ ಕುದುರೆಗಳ)
  ಪಾಲ್ಗುಣ =ಅರ್ಜುನ

  • ದತ್ತಪದಗಳ ನಿರ್ವಾಹ ಸೊಗಸಾಗಿದೆ. ಆದರೆ ಯುಕ್ತವಾದ ವಿಭಕ್ತಿಪ್ರತ್ಯಯಗಳಿಲ್ಲದೆ {ಉದಾಹರಣೆಗೆ ಪಲ್ಯಯನ (ಪಲ್ಯಯನಮಂ) ಮನುಜಧರ್ಮ (ಮನುಜಧರ್ಮಮಂ)} ಭಾಷಾಬಂಧವು ತುಸು ಸೊರಗಿದೆ. ಪಾಲ್ಗುಣ ಎಂಬುದು ಅಸಾಧುರೂಪ. ಅದು ಫಲ್ಗುನ ಎಂದಾಗಬೇಕು. ಅಲ್ಲದೆ ತಂದೆಯಯ್, ಪಿಡಿದೆಯಯ್ ಎಂಬಂಥ ರೂಪಗಳು ಹೆಚ್ಚು ಸೌಷ್ಠವಯುಕ್ತ. ಎರಡನೆಯ ಸಾಲಿನಲ್ಲಿ ಪೂರಿತನು ಎಂಬ ಸಕರ್ಮಕಕ್ರಿಯಾಪದವನ್ನು ಅಕರ್ಮಕದಂತೆ ಬಳಸಿರುವುದು ಹಿತವಾಗದು (ಪೂರಿತನು ಎಂದರೆ ಯಾವುದನ್ನು ಎಂಬ ಪ್ರಶ್ನೆಗೆ ಏನುತ್ತರ?) ವ್ಯಾಕರಣದ ಬಗೆಗೆ ಇಲ್ಲೀಗ ತುಂಬ ರಗಳೆ ಮಾಡಿದ್ದೀನಿ; ಮನ್ನಿಸಿರಿ:-)

   • ಸರ್ ,
    ರಗಳೆಯಿಂದ ಬಹಳ ಉಪಕಾರವಾಯಿತು 🙂 .ತಮಗೆ ಧನ್ಯವಾದಗಳು.

    ವಸುಮತಿಯನೆಂದೋ ಸೆಣಸಿ ಮೇಲೆ ತಂದೆಯಯ್
    ವಸುದೇವ ಸುತನಾಗಿ ಪೂರಿತವತಾರ
    ಕುಸಿದ ಸಖಗಂದು ಪಲ್ಯಯನಮಂ ಪಿಡಿದೆಯಯ್
    ಬೆಸೆದೆ೦ದು ಸಾರುವೆಯೊ ನರ ಧರ್ಮಮಂ?
    ಪೂರಿತವತಾರ =ಪೂರ್ಣಾವತಾರ .ಸಖ = ಅರ್ಜುನ . ಈಗ ಸರಿಯಾಗಿದೆಯೇ?

 7. ಖಳರಂ ಚೂರ್ಣಿಸಿ ಮೇಣದೋ ಸೆಣಸುತುಂ ಕೊಂದಂ ಗಡಂ ಕಂಸನಂ
  ಮಳೆಯೊಳ್ ಬೆಟ್ಟಮನೆತ್ತಿದಂ ಸ್ವಜನಕಂ ನಿರ್ಭೀತಿಯಂ ಸಾರುತುಂ |
  ಇಳೆಯೊಳ್ ನಿದ್ರಿಸುತಿರ್ದ ಪಾಂಡುಸುತರಿಂಗಿತ್ತಂ ಸುಪಲ್ಯಂಕಮಂ
  ಕೆಳೆಯಾ ! ಪೂರಿತಸರ್ವಭಕ್ತಲಷಿತಂ ಕೃಷ್ಣಂ ಸದಾ ಕಾಯ್ವನಯ್ ||

  ಪಲ್ಯಂಕ = ಮಂಚ.

  • ತುಂಬ ಸೊಗಸಾದ ಪದ್ಯ. ಸಮರ್ಥವಾದ ದತ್ತಪದನಿರ್ವಾಹ. ಅಭಿನಂದನೆಗಳು. ವಿಶೇಷತಃ ಮೂರನೆಯ ಸಾಲಿನಲ್ಲಿ ಕೃಷ್ಣನು ಪಾಂಡವರಿಗೆ ನೆಮ್ಮದಿಯನ್ನು ದಕ್ಕಿಸಿಕೊಟ್ಟ ಬಗೆಯನ್ನು ಸಾಂಕೇತಿಕವಾಗಿ ತಂದ ಚಮತ್ಕಾರವು ಹೃದಯಹಾರಿ.

  • Super pejettayare 🙂

  • Clap clap

 8. ದೇವದೇವನಿದೋ ಸೆರೆಪಿಡಿದು
  ಸಾವಧಾನದಿ ಸಾರುತಿರ್ಪಳು
  ಯಾವ ಚಣವೂ ನಿನ್ನ ಚರಣವ ತೊರೆಯೆ ತಾನೆಂದು
  ಮಾವು,ಬೆಳೆದಿಹ ಪಲ್ಯ ಪುಷ್ಪವ
  ಜಾವದಲ್ಲಿಯೆ ಪೂರಿಸುತ ತಾ
  ಕಾವಳಾಕೆಯು ಕೊಳಲ ನಾದಕೆ ದಿನದ ಕಡೆತನಕ

  ಸೆರೆ = ಬೊಗಸೆ
  ಪೂರಿಸು = ತುಂಬಿಡು
  ಪಲ್ಯ = ತರಕಾರಿ

  • ಪಲ್ಯ ಎನ್ನುವ ಪದದ ಸಂಯೋಜನೆ ಸ್ವಲ್ಪ ಕೃತಕವಾಯಿತು. ಆದರೆ ಉಳಿದಂತೆ ಪದ್ಯವು ಅನವದ್ಯ.

   • Thank you 🙂
    ಬೆಳೆದ ತರಕಾರಿಯನ್ನೂ ಅರ್ಪಿಸಿದ್ದೇನೆ ಅಷ್ಟೇ 🙂

 9. ಪದ್ಯಪಾನಿಗಳು ಕ್ಷಮಿಸಬೇಕು. ಪ್ರಸ್ತುತ ಪದ್ಯದಲ್ಲಿ ಯಾವುದೇ ಒಂದು ದೈವದ ವರ್ಣನೆ ಯಾ ಸ್ತುತಿಯಿಲ್ಲ. ಕಾರಣ, ನನಗೆ ಯಾವುದೇ ನಿರ್ದಿಷ್ಟವಾದ ಇಷ್ಟದೈವವಿಲ್ಲ (ಅಥವಾ ತೋಚುತ್ತಿಲ್ಲ) :-). ಏಕಮೇವಾದ್ವಿತೀಯನಾದ ನಿರಾಕಾರನಾದ ಪರಮಾತ್ಮನೇ ನನಗೆ ಆರಾಧ್ಯನು. ಆದ್ದರಿಂದ ಆ ಪರಬ್ರಹ್ಮವಸ್ತುವನ್ನೇ ಪದ್ಯವಸ್ತುವನ್ನಾಗಿಸಿ ದತ್ತಪದಿಯನ್ನು ಪೂರೈಸುವ ಪ್ರಯತ್ನವನ್ನು ಮಾಡಿದ್ದೇನೆ. ಯಥಾಪ್ರಕಾರ ಲೋಪ ದೋಷಗಳ ಸವರಣೆಗಾಗಿ ಹಿರಿಯರನ್ನು ಬೇಡುತ್ತಿದ್ದೇನೆ.

  ದಿಟದಿಂ ಪಲ್ಯಮದಲ್ತೆ ಭೂತನಿಚಯಂ, ದೈಹ್ಯಂ ಸುಸೀತ್ಯಂ ಗಡಾ
  ಸಟೆಯಾ ಗೋಣಿಯದಿರ್ಪುದೋ ಸೆಡೆಯೊಳಂ ಮೂಢಭ್ರಮಾಲೋಕದೊಳ್
  ಘಟಿಸಲ್ಕೆಂದಿಗಮಾ ಬೃಹದ್ವಿಘಟನಂ, ಬೊಮ್ಮಂ ಕೃಪಾಪೂರಿತಂ
  ತ್ರುಟಿಯೊಳ್ ಮತ್ತಮದೊಂದರೊಳ್ ನಿಱಿಸಿದಂ ಸಾರಂ ಸುಪಕ್ವಂಗೊಳಲ್

  ಪಲ್ಯ – ಜೋಳದ ಮೂಟೆ
  ಭೂತನಿಚಯ – ದೇಹ
  ದೈಹ್ಯ – ಆತ್ಮ
  ಸೀತ್ಯ – ಧಾನ್ಯ (ಈ ಸಂದರ್ಭದಲ್ಲಿ ಜೋಳ)
  ಸೆಡೆ – ಅಹಂಕಾರ

  ತಾತ್ಪರ್ಯ : ದೇಹವು ಜೋಳದ ಮೋಟೆಯಾದರೆ ಆತ್ಮವು ಅದರಲ್ಲಿನ ಜೋಳವಾದೀತು. ಜೋಳದಮೂಟೆಯು ತಾನೇ ಶಾಶ್ವತವೆಂದು ತಿಳಿದು ಭ್ರಮಾಲೋಕದಲ್ಲಿ ವಿಹರಿಸುತ್ತದೆ. ಆದರೆ ಮೂಟೆಯು ಹರಿದರೆ ಅದರಲ್ಲಿನ ಜೋಳವು ಹೊರಚೆಲ್ಲುತ್ತದೆ. ಅರ್ಥಾತ್ ದೇಹವು ಜೀರ್ಣವಾದೊಡನೆ ಆತ್ಮವು ಶರೀರದಿಂದ ಹೊರಬರುತ್ತದೆ. ಆಗ ಭಗವಂತನು ಅಪಕ್ವವಾದ ಜೋಳವನ್ನು ಶೀಘ್ರವೇ ಮತ್ತೊಂದು ಗೋಣಿಯಲ್ಲಿ ಪಕ್ವವಾಗಲೆಂದು ಸ್ಥಾಪಿಸಿದನು ಅರ್ಥಾತ್ ಆತ್ಮನನ್ನು ಮುಕ್ತಿಯೋಗ್ಯನನ್ನಾಗಿಸಲು ಮಗದೊಂದು ಜನ್ಮವನ್ನು ಕರುಣಿಸಿದನು.

  • ಬಹಲೋದಾರಗಭೀರಧೀರರುಚಿರಪ್ರಸ್ಫಾರಪದ್ಯಕ್ರಮಂ
   ವಿಹಿತಂ ಮೌರ್ಯ! ಭವದ್ವಚೋವಿಭವದಿಂ ಸಂದಿರ್ಪುದಿಂದಿಲ್ಲಿ ಕೇಳ್!
   ಮಹಿಮೋತ್ಕರ್ಷದೆ ಕಾಂಬೊಡಂ ಮಿಗಿಲಲಾ ಬ್ರಹ್ಮಂ ನಿರೌಪಾಧಿಕಂ
   ವಹಿಸಲ್ ನಾಣ್ಮುಗುಳೇತಯ್? ಯುವಕವೀ! ನಿನ್ನೊಳ್ಪು ಸಯ್ಪೊಪ್ಪುಗುಂ ||

  • ಭಲಾ ಮೌರ್ಯ 🙂

  • BhaLA bhaLA

  • ಪ್ರಿಯ ಮೌರ್ಯ,
   “ಗತಿಗಾಂಭೀರ್ಯದ ತುಂಬುಚೆಲ್ವು ಮೆರೆಯಲ್ಮತ್ತೇಭವಿಕ್ರೀಡಿತಂ”

   • ಗುರುಗಳೇ,
    ತಮ್ಮ ಕವಿತಾಪ್ರಾಗಲ್ಭ್ಯವನ್ನು ಎದುರಿಸುವಷ್ಟು ಶಕ್ತ ನಾನಲ್ಲ.:-) ತಾವು ನನ್ನನ್ನು ಇಷ್ಟೊಂದು ಹೊಗಳಿರುವುದರಿಂದ ಸಂಕೋಚವಾಗುತ್ತಿದೆ. 🙂 ತಮ್ಮ ಹಾಗೂ ಇತರ ಪದ್ಯಪಾನಿ ಶ್ರೇಷ್ಠರ ಔದಾರ್ಯಕ್ಕೆ ಸಾಷ್ಟಾಂಗ ಪ್ರಣಾಮಗಳು, ಮನಸಾ ಧನ್ಯವಾದಗಳು. 🙂

  • ಮೌರ್ಯ ಸರ್,
   ಛಂದಸ್ ಕ್ಲಾಸ್ ನಡುಸ್ತೀರ ಸರ್? ಕಲಿಯೋಣ ಅಂತ.

   • Hahahahaha…sure sure sir….ROFL !!! 🙂 😛

    • ಅಂತೂ ಇಷ್ಟು ದಿನಗಳ ನಂತರ ತಮ್ಮ ಕೃಪಾಕಟಾಕ್ಷವೀಕ್ಷಣವು ನನ್ನೆಡೆಗೆ ಆಯಿತಲ್ಲ sir….ಧನ್ಯೋಸ್ಮಿ !! ಹಹ್ಹಹ್ಹ 😀

  • ಮೌರ್ಯರೇ, ಬಹಳ ಅರ್ಥಗರ್ಭಿತವಾಗಿ, ಪ್ರೌಢವಾಗಿ ಬರೆದಿದ್ದೀರಿ.ಧನ್ಯವಾದ.

 10. ಅತಿಚಾಪಲ್ಯದ ವಾನರವ್ರಜದ ಸಾರೂಪ್ಯರ್ಕಳೊಳ್ ಪೂರ್ವಜಂ
  ಹತನಾಗಲ್ ಪರಿಪೂರಿತೋಕ್ತವಚನಿಂ ವಕ್ರತ್ವಮಂ, ಶಂಬುಕಂ
  ಕ್ಷತಮಾಗಲ್ ಕಣೆಯಿಂದಿದೋ ಸೆಡೆವೆನಲ್ಕಾ ಬಂಧುರಾಧಿಕ್ಯಸಂ
  ತತಿಯಂ ಗೆಲ್ದಪ ಕೃಷ್ಣಕೈತವಚರಿತ್ರಂ ಕಾಯಲೆಮ್ಮಂ ಸದಾ

  ರಾಮಾವತಾರದಲ್ಲಿ ಋಜುವಲ್ಲವೆಂಬಂತೆ ತೋರುವ ಸಂಧರ್ಬಗಳನ್ನು ವಕ್ರತೆಯಲ್ಲಿ ಮೀರುವಂತಹ ಕೃಷ್ಣನ ಚರಿತೆ ನಮ್ಮನ್ನು ರಕ್ಷಿಸಲಿ.

  ಪರಿಪೂರಿತೋಕ್ತವಚನಿಂ ವಕ್ರತ್ವಮಂ -> (ಸುಗ್ರೀವನಿಗೆ) ಕೊಟ್ಟ ಮಾತನ್ನು (ನೇರ ಯುದ್ಧವಲ್ಲದ ವಾಲಿವಧೆಯ ಪ್ರಸಂಗದಿಂದ) ತೀರಿಸಿದವನ ವಕ್ರತೆಯನ್ನು
  ಕಣೆಯಿಂದಿದೋ ಸೆಡೆವೆನಲ್ಕಾ -> ಕಣೆಯಿಂದೆ ಇದೋ ಸೆಡೆವೆ ಎನಲಿಕ್ಕೆ ಆ

  • ಸೊಗಸಾಯ್ತಯ್! ಕವನಂ ವಯಸ್ಯವರ ಸೋಮಾ! ಆದೊಡಂ “ಕೃತ್ಯ”ದೊಳ್
   “ಕೃ”ಗತಂ ರೇಫಮದೆಲ್ಲಿ ಪೇಳ್? ಸ್ವರಮಲಾ “ಕ್ರುತ್ಯಂ” ಗಡೇನಪ್ಪುದೇ?
   ಮಿಗೆ ನೀಂ “ಬಂಧುರಕೃತ್ಯ”ಮೆಂದುಳಿಸೆ ಛಂದಸ್ಸಿನ್ನು ಠುಸ್ಸೆನ್ನದೇ?
   ತೆಗೆಯಲ್ಕೀ ಲಘುದೋಷಮಂ ರಚನೆ ಸಲ್ಗುಂ ಪೂರ್ಣಿಮೇಂದುಪ್ರಭಂ 🙂

   • ಧನ್ಯವಾದ ಗಣೇಶ್ ಸರ್, ಈಗಲೇ ಬರೆದದ್ದು… ಒಮ್ಮೆ ಓದಿಕೊಂಡಾಗ ನನ್ನ ಕಣ್ಣಿಗೆ ಈ ದೋಷ ಬಿತ್ತು, ಸರಿಪಡಿಸಿ ಹಾಕಿ ರೆಫ್ರೆಶ್ ಮಾಡಿದೆ ಅಷ್ಟರಲ್ಲಿ ನೀವು ಗಮನಿಸಿಬಿಟ್ಟಿರಿ, ಈಗ ಸರಿಹಹೊಂದುತ್ತದೆಯಲ್ಲವೇ 🙂

  • ಸೋಮ- ಚೆನ್ನಾಗಿರುವುದು. ಮೀರ್ದಪ- ಮೀರ್ದ, ಮೀರ್ದು ಇತ್ಯಾದಿ ಪ್ರಯೋಗಗಳಿಗೆ ಪ್ರಸಿದ್ಧ ಪೂರ್ವಪ್ರಯೋಗಬಲವುಂಟೆ? ಹಿಂದೆ ಇಂತೆಯೆ ಬೇರೊಂದು ಪದದಬಗ್ಗೆ ನಾನು ಪ್ರಶ್ನಿಸಿದ ನೆನಪು. ಮೀರು ಎನ್ನುವ ಕ್ರಿಯಾಪದ ಶಕಟರೇಫಸಹಿತವಾದದ್ದು, ಸಾಧಾರಣ ರೇಫವಿರುವ “ಮೀರ್” ಅಲ್ಲ- ಆದ್ದರಿಂದ ಅನುಮಾನ.

   ವಾಲಿಸುಗ್ರೀವರ ಕಾಳಗದ ಸಂದರ್ಭ ಗೊತ್ತಯಿತು. ಪರಿಪೂರಿತೋಕ್ತವಚನಾ ವಕ್ರತ್ವಮಂ, ಶಂಬರಂ ಮತ್ತು ಗಣೆಯೆರ್ಚಿದೋ ಸೆಡೆವೆನಲ್ ಇವು ಅರ್ಥವಾಗ್ತಿಲ್ಲ. ದಯವಿಟ್ಟು ತಿಳಿಸಬೇಕು. ಗಣೆಗಿಂತ ಕಣೆ ವಾಸಿ. ಅಲ್ಲಿ ಸಂಧಿಯಾಗುವ ಸಂದರ್ಭವಿಲ್ಲ.

   • ಶ್ರೀಕಾಂತರೆ, ಧನ್ಯವಾದಗಳು ನಿಮ್ಮ ಸೂಚನೆಯ ಮೇರೆಗೆ ಮೂಲದಲ್ಲೆ ಬದಲಿಸಿದ್ದೇನೆ :),

    ಮೀರ್ದಪ ಸಾಧುಪ್ರಯೋಗವೇ ಅಲ್ಲವೇ ಅನ್ನೋದನ್ನ ಗಣೇಶರ ಬಳಿಯಲ್ಲಿ ಕೇಳಿತಿಳಿಯುತ್ತೇನೆ

    • ಪ್ರಿಯ ಸೋಮ, ಶ್ರೀಕಾಂತರೆಂದಂತೆ ಈ ಪದ್ಯದಲ್ಲಿ ಸ್ವಲ್ಪ ಕ್ಲಿಷ್ಟತೆಯಿದೆ. ಇರಲಿ, ದತ್ತಪದಿಯ ದುರ್ಘಟತೆಗೆ ಇದೂ ಒಂದು ಕಪ್ಪ:-) ಅಲ್ಲದೆ ಮೀರು ಪದವು ಅವರೆಂದಂತೆ ಶಕಟರೇಫಯುಕ್ತ. ಆದರೆ ಮೀರ್ದ, ಮೀರ್ದು ಇತ್ಯಾದಿ ರೂಪಗಳು ಮಹಾಕವಿಗಳಿಂದಲೇ ಪ್ರಯುಕ್ತವಾದ ಕಾರಣ ಅಡ್ಡಿಯಿಲ್ಲ:-)

 11. ಊಟತಿಂಡಿಯ ವಿಚಾರವಾದ್ದರಿಂದ ಅನ್ನಪೂರ್ಣೆ, ಇಲ್ಲವೇ ಶಾಕಾಂಬರಿಯನ್ನು ತಾನೇ ಸ್ತುತಿಸಬೇಕು 🙂

  ಕಾಯಿಪಲ್ಯದ ಹಾರತೊಟ್ಟಿಹ
  ತಾಯೆ ಶಾಕಾಂಬರಿಯೆ ವರವ
  ನ್ನೀಯೆ ಸಾರುತ ನಂಬಿದವರನು ಪೊರೆವೆ ನಾನೆನುತ
  ಹಾಯೆನಿಸಿದೋ ಸೆರೆಯ ಜೀವವ
  ಕಾಯುವುದೆ ತರ ಸಕಲ ಲೋಕವ
  ನ್ಯಾಯವದುವೇ ಕರುಣ ಪೂರಿತೆ ಹಸಿವನಿಂಗಿಸುತ

  • ಹಂಸ- ಒಳ್ಳೆಯ ಸರಳಕಲ್ಪನೆ. ಕೆಲವು ಸೂಚನೆಗಳು. ಶಾಕಾಂಬರಿ ರೂಪ ಸರಿಯಲ್ಲ. ಅದು ಶಾಕಂಭರಿ ಆಗಬೇಕು. ಲೋಕವ ನ್ಯಾಯ ಇಲ್ಲಿ ಶಿಥಿಲದ್ವಿತ್ವ ಬರುತ್ತಿದೆ. ಅದನ್ನು ತಪ್ಪಿಸಿದರೆ ವಾಸಿ. “ನೇಯ” ಎಂದು ಹಾಕಿದರೆ ಹೇಗೆ? ಕರುಣಪೂರಿತೆ ತಪ್ಪಲ್ಲವೆ- ಕರುಣಾಪೂರಿತೆ ಆಗಬೇಕು, ಆದರೆ ಆಗ ಛಂದಸ್ಸು ತಪ್ಪುತ್ತೆ. ನೋಡಿ ಸರಿಪಡಿಸು.

   • ಶಿಥಿಲದ್ವಿತ್ವವೇನೋ ಗೊತ್ತಾಗಿತ್ತು, ಹಾಗೇ ಹಾಕಿಬಿಟ್ಟೆ. ಮತ್ತೆ ದಯಾಪೂರಿತೆ ಅಂದರೆ ಲಗಂ ದೋಷ ಬರುತ್ತೆ, ಅಂತ, ಕರುಣಪೂರಿತೆ ಮಾಡಿದೆ.ಸರಿಪಡಿಸಬೇಕು. ಅಂದಹಾಗೆ ಶಾಕಂಭರಿಯನ್ನು ತಿದ್ದಿ ತಿಳಿಸಿದ್ದಕ್ಕೆ ಧನ್ಯವಾದಗಳು. ನಾನು ಎರಡೂ ಸರಿರೂಪಗಳೇ ಇರಬಹುದು ಎಂದುಕೊಂಡಿದ್ದೆ.

    • ತಿದ್ದುಪಡಿಗಳೊಂದಿಗೆ:

     ಕಾಯಿಪಲ್ಯದ ಹಾರತೊಟ್ಟಿಹ
     ತಾಯೆ ಶಾಕಂಭರಿಯೆ ನೀ ವರ
     ವೀಯೆ ಸಾರುತ ನಂಬಿದವರನು ಪೊರೆವೆನೆನ್ನುತಲಿ
     ಹಾಯೆನಿಸಿದೋ ಸೆರೆಯ ಜೀವವ
     ಕಾಯುವುದು ತರ ನಿಖಿಳ ಜಗಕೆ-
     ನ್ಯಾಯ ಕರುಣಾ ಪೂರಿತೆಯೆ ಹಸಿವನ್ನು ನೀನಳಿಸಿ

     • ಬಹುದಿನಗಳ ಬಳಿಕ ಹಾ(ರಾ)ಡುತ್ತಿರುವ ಹಂಸಾನಂದಿಗೆ ಸ್ವಾಗತ:-)
      ಅಮರಕೋಶದಲ್ಲಿ ಕಾರುಣ್ಯಂ ಕರುಣಾ ಘೃಣಾ ಎಂದು “ಕರುಣಾ” ಶಬ್ದದ ಆಕಾರಾಂತರೂಪವೂ
      ಇದೆ. ಅಲ್ಲದೆ ಆಸಮಂತಾತ್ ಕರುಣಪೂರಿತಮಿತಿ ಕರುಣಾಪೂರಿತ ಎಂದೂ ನಿಷ್ಪತ್ತಿಯನ್ನು ಹೇಳಬಹುದು.

 12. ಊಟದ ವಿಷಯವಾದರೂ ಗಣಪತಿಯ ಸ್ತುತಿ ಬಂದೇ ಇಲ್ಲವಲ್ಲ;-)
  ಮತ್ತೇಭ ವದನನಿಗೆ ಮತ್ತೇಭವಿಕ್ರೀಡಿತ-

  ಶಿವನಿತ್ತಂ ಗಜವಕ್ತ್ರಮಂ ನಿನಗೆ ತಾಯ್ಗಣ್ಣೀರದೋ ಸೇರಿರಲ್
  ರವಿಕೋಟಿಪ್ರಭ! ಶಾಪಮಂ ಶಶಿಗೆ ನೀನಂದಿತ್ತು ಸಾರುತ್ತುಮಾ –
  ಕವಿದಂಧತ್ವಫಲಂಗಳಂ, ತೊಡೆಯುತುಂ ಚಾಪಲ್ಯಮಂ, ಲೋಗರೊಳ್
  ತವೆ ನಿಚ್ಚಂ ಪ್ರಥಮಾರ್ಚಿತಾ! ಮೆರೆವೆಯಯ್ ಕಾರುಣ್ಯಸಂಪೂರಿತಾ!!

  (“ನೀರದೋಸೆ” ಕೊಟ್ಟಿದ್ದೇನೆ. ಸ್ವಲ್ಪ ಚೇಂಜ್ ಇರಲಿ ಅಂತಾ!!:-))

  • ಇಭವಕ್ತ್ರಂಗತಿವೇಲಲೀಲೆಯ ಮಹಾಮತ್ತೇಭವಿಕ್ರೀಡಿತ-
   ಪ್ರಭವಪ್ರಾಭವಭವ್ಯನವ್ಯಕವಿತಾನೈವೇದ್ಯಮಂ ಸ್ವಾದ್ಯಮಂ |
   ಶುಭದಂಕಾರ್ಮಣಮಾಗಿ ನೀಳ್ದ ಸುಕವೀ! ತನ್ನಾಮಧಾಮಾ! ಧಮಾ-
   ರಿಭುಜಾಲಂಕೃತಯಜ್ಞಸೂತ್ರಯುಗಲಂ ನಿನ್ನಂಸಕಕ್ಕೆ ದ್ರುತಂ 🙂

   (ಧಮಾರಿ = ಚಂದ್ರನ ವೈರಿಯಾದ ಗಣಪತಿ) ಆತನ ಹೆಗಲಮೇಲಿನ ಯಜ್ಞೋಪವೀತದ ಮತ್ತೊಂದು ಜೋಡಿಯು ನಿನ್ನ ಹೆಗಲ(ಅಂಸ) ಮೇಲೆಯೂ
   ಆದಷ್ಟು ಬೇಗ ಬಂದು ಬೀಳಲೆಂದು ಹಾರೈಕೆ:-)

   • ಭವದೀಯೋಕ್ತಿವಿಶೇಷರಕ್ತಿಮಯವೈದರ್ಭೀಯಪದ್ಯಾನ್ವಿತ
    ಚ್ಛವಿರಾಜಿಪ್ರಕಟೀಕೃತಪ್ರತಿಭೆಯಿಂ ಶಾರ್ದೂಲವಿಕ್ರೀಡಿತಂ
    ಕವಿತಾರಣ್ಯದೊಳೆಂದು ಭಾಸಿಕುಮಿದಂ ಸಂಭಾಳಿಸಲ್ ಸೂತ್ರಮಂ
    ತವೆ ಕಷ್ಟಂ ಸಲಲೆಯ್ದೊಡನ್ಯಮಿವನೇಂ ನೈವೇದ್ಯಮಂ ಮಾಳ್ಪನೇ!!

    • ಅಹಹಾ! ಸುಂದರ ವಾಗ್ವಿಲಾಸ ಕವಿತಾಮತ್ತೇಭರಕ್ರೀಡಿತಂ
     ಬಹುಳಂ ಕೌತುಕಮಲ್ತೆ ಬ್ರಹ್ಮಗಮನರ್ ಮಾತಾಡೆ ವೈವಾಹದಾ
     🙂

     • ಮಹನೀಯರ್ಕಳೆ ನಿಂದಿಸುತ್ತುಮಿಹದೊಳ್ ದಾಂಪತ್ಯಕ್ಲೇಶಂಗಳಿಂ
      ಗಹನಂ ತತ್ವಮದಲ್ತು ಬ್ರಹ್ಮಗಮನಂ ಸೌಖ್ಯಂ ಗಡಾ ಎಂಬರೈ!!:-)

     • …… ’ಗಡಾ’ ಎಂಬರೇಂ?
      ’ಗಡಾ’ಯೆಂಬರಿಂಗಂ ಗಢಾರಿಪ್ರಯೋಗಂ
      ಗುಡುಂಗುತ್ತೆ ಗೈಯೈ ಗಡಂಗಿಂದೆ ಹಾಯ್ದುಂ|
      ಉಡುಂಗುತ್ತಲಾಗಳ್ ಮಿಡುಂಕರ್ದೆಲಿರ್ಪರ್
      ತೊಡಂಗೈ ಬೆಡಂಗಿಂ ಕಡೆಂಗೋಡ್ಲುವೋಲ್ ನೀಂ||

     • ಕೊಪ್ಪಲತೋಟ, ಗಣೇಶ್ ಸರ್,
      ಬಹಳ ಚೆನ್ನಾಗಿದೆ ಪದ್ಯಗಳು 🙂

    • ಎಲ್ಲರಿಗೂ ಧನ್ಯವಾದಗಳು:-)

     ಪ್ರಸಾದು ಅವರೇ,
     ಒಡಂಬಟ್ಟನಾಗಳ್ ಗುಡುಂಗಾಗುವಾಗಳ್
     ದಡಂ ಕಾಣದಾಗಲ್ ಜಡಂ (ಜಲಂ) ತುಂಬಿದಾಗಳ್
     ಧಡಂದಡ್ ಧಡಂ ಶಬ್ದದಿಂದೀಸುತುಂ ಸಲ್-
     ವೊಡಂ ಕಾಂಬನಾತಂ ಗಡಂ ಲೋಕದೊಳ್ಪಂ || 😉

   • ಬ್ರಹ್ಮಚರ್ಯದ ಆ ಸುಖವನ್ನು ನೂರ್ಮಡಿಗೊಳಿಸುವ ಉಪಾಯವೊಂದಿದೆ:
    ಪರಿಪಾಕಂಗೊಳು ನೀಂ, ನಿಜಾನುಭವಮೇ| ಪ್ರಾಮಾಣ್ಯ ತಾನಲ್ತೆಲೈ
    ಪೆರರೀ ಮಾತುಗಳಿಂದಲೆಂತುಟೊ ವಿವೇ|ಕಂ ಪ್ರಾಪ್ತಮಾಯ್ತೆನ್ನದಿರ್
    ತೊರೆದುಂ ಬ್ರಹ್ಮದ ಚರ್ಯಮಂ ಬಳಿಕದೊಳ್| ಸಂಸಾರಮಂ ಸ್ಥಾಪಿಸಲ್
    ಪರಿಯಾ ಸೌಖ್ಯದ*ದಾಗ ಜ್ಞೇಯವಹುದೈ| ನೂರ್ಪಟ್ಟದೆಂದೆನ್ನುತುಂ 🙂
    *ಬ್ರಹ್ಮಚರ್ಯದ

  • ಛಂದೋಸೇನೆಯು ಪೂರಿಸಿರ್ದ ಕವಿಚಾಪಲ್ಯಂ ರಸಾರೂಢಮೈ !!

   • ಓಹೋ! ಪಾದದೊಳೊಂದರೊಳ್ ಪದಗಣಂ ನಿಮ್ಮಿಂದೆ ಸಂಸ್ಥಾಪಿತಂ..

    • ಒಂದೇ ವಂದನೆ ವಾಣಿಗಂ ರಸಕವಿಶ್ರೇಣಿಪ್ರಭಾವಾಣಿಗಂ

    • 🙂 howdalla gamanisalE illa.. chennAgide comment mouLiyavare

     • Yes, Soma, me too observing now and this is really wonderful. But one small grammatical error has crept in: chandOsEne should be chandassEne as per the rules of visarga-sandhi. However, it would just nimajjateendoH kiraNEShu

     • As RG noted, I am aware of the flaw which came in to bring ‘Dosai’ so avaoided ‘dassE.’ Sorry. ಏಕೋ ಹಿ ದೋಷೋ ಗುಣಸನ್ನಿಪಾತೇ ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ.. My ‘name’ is also is in that category ! Thanks.

      Alas, as I saw the pooranas very lately, I noted that most of the possibilities were already placed in shelf by Srikanth, Koppala Thota, Soma, Sudheer and others… Instead of writing another poorana I enjoyed reading and appreciating the evolving classic dattapada purana in modern times…And thanks to you all for sparing lines for one line 🙂

    • ಕೊಪ್ಪಲತೋಟರೆ,
     ಆಶ್ಚರ್ಯಂ ಗಡಮೇನ, ಚಂದ್ರಶಿಖರಂ (Sri Chandramowly)| ತಾನಲ್ತೆ ಸಂಸ್ಥಾಪಿತಂ (ಪದ್ಯಪಾನ ಎಂಬ ಈ ಸಂಸ್ಥೆಗೆ ಹಿರಿಯರು)

   • ಸತ್ಯ ಮೌಳಿಯವರೆ, ಏಕೆಂದರೆ,
    ಎಂದೋ ಸೇನೆಯೊಳೆನ್ನ ಪೂರಿಸಿರೆ ಸಾರೂ (Sir) ತಳ್ಳಿ (ನನ್ನನ್ನು) ಪಲ್ಯಂಕದಿಂ

    • ಪ್ರಸಾದು ಅವರೇ,

     ಒಂದೇ ಬಾರಿಗೆ ಪೂರಿಪಲ್ಯ heavyಯೈ ದೋಸೇ? no. ಸಾರೂ? नही

   • वाह….!! दो पल यानी, दो(पहर)से सारा पूरी(तरह) जानकर खुशी हुई ।
    (ಗಮನಿಸಿಯೇ ಇರಲಿಲ್ಲ ಇವತ್ತು ಮಧ್ಯಾಹ್ನ ನೋಡಿ ತುಂಬಾ ಆಶ್ಚರ್ಯವಾಯ್ತು!)

   • Chandramowly- you have gone one better than all of us by doing it in one line. Great stuff.

    • Thanks Srikanth, Usha and all others. Honestly speaking, each one of you is capable of writing better than that. Appreciate your reflections.

 13. ಪೂರಿ-ಪಲ್ಯ,ದೋಸೆಗಳನು
  ತೋರಿ ಬೇಡಿಕೊಂಬೆ ತಾಯೆ,
  ಸಾರುತೆ ಬಳಿ,ನೆಲಸು ನಿರುತಮೆನ್ನ ಜಿಹ್ವೆಯೊಳ್ |
  ಶಾರದೆಯೆ,ಕೃಪಾಕಟಾಕ್ಷ
  ಬೀರಿಯೊಲಿದು,ತಮವ ಕಳೆದು,
  ಚಾರುಮತಿಯನಿತ್ತು ಕಲಿಸು,ಪದ್ಯವಿದ್ಯೆಯಂ ||

  • ಶಕುಂತಲ ಅವರೆ,
   “ಪಲ್ಯ-ಪೂರಿ(ತ) ದೋಸೆ” = ಮಸಾಲೆ ದೋಸೆ! (ರುಚಿ) ತೋರಿಸಿ ಪದ್ಯವಿದ್ಯೆಯನ್ನ (ನಿಮ್ಮ ಜಿಹ್ವೆಗೆ!) ಬೇಡುತ್ತಿರುವಿರಾ ?!

   • ಉಷಾ ಅವರೆ,ನನ್ನ ಸಾದಾದೋಸೆ ನಿಮ್ಮ ಕಲ್ಪನೆಯಲ್ಲಿ ಮಸಾಲೆದೋಸೆಯಾಗಿದೆ ! ಸವಿದಿರುವುದಕ್ಕೆ ಧನ್ಯವಾದ.

  • ಶಕುಂತಲಾರವರೆ,
   ಶಾರದೆಗೆ ಬರಿಯ ’ತೋರಿಸಿ’ ಬೇಡಿಕೆ ಒಡ್ಡುತ್ತಿದ್ದೀರಿ. ನ್ಯಾಯವೆ? ಅಷ್ಟು ಸಾಲದೆಂಬಂತೆ, (ತಿನ್ನಬೇಕಾದರೆ) ನನ್ನ ನಾಲಗೆಯ ಮೇಲೆ ಬಂದು ಕೂಡು ಎಂದುಬೇರೆ ಹೇಳುತ್ತಿದ್ದೀರಿ! ಹಾಗಾಗಿ ದೇವಿ ಹೇಳುತ್ತಾಳೆ:
   ತ್ರಿಪದಿ|| ದೋಸೆಪೂರಿಯ ತೋರಿಸಾಸೆಯ ಪುಟ್ಟಿಸಿ
   ಮೋಸವ ಗೈದೌ, ಸಾಲರ್ದೆ| ತಿಂಬಲ್ಕೆ
   ವಾಸಿಸಬೇಕೇಂ ಜಿಹ್ವೆಯೊಳ್? 🙂

   • ಪ್ರಸಾದು ಸರ್,

    ತಮ್ಮ ವಿನೋದಾತ್ಮಕಪದ್ಯ ಮನರಂಜಿಸಿದೆ,ಧನ್ಯವಾದ.

    ಲೋಕದೊಳ್ ನರರೆಲ್ಲಂ ಪಾಕಂಗೈದಿರೆ, ಭಾರಿ
    ಷೋಕಿಯಿಂ ತೋರ್ಪರ್ ದೈವಕ್ಕೆ| ತಿನಿಸೆಲ್ಲಂ
    ಬೇಕೆಂದು ತಿಂಬರ್ ಪಸಿದಾಗಳ್ ||

    ಹೀಗಾಗಿ ಶಾರದೆಗೆ ಇದು ರೂಢಿಯಾಗಿರುವುದರಿಂದ ಸಮಸ್ಯೆಯಾಗದು. ನಮ್ಮಮ್ಮ ತಾನೇ ? ಮನ್ನಿಸುವಳು. 🙂

    • ಹೇಗೆ ಸ್ವೀಕರಿಸುವಿರೋ ಎಂಬ ಆತಂಕವಿತ್ತು. ಪ್ರತಿಕ್ರಿಯಾಪದ್ಯ ಚೆನ್ನಾಗಿದೆ. ಧನ್ಯವಾದಗಳು.

 14. A Shalini in English

  Though sages say thou art abstract and abstruse,
  Don’t people yearn all the time just to see you?
  Those Who saw rules of the Cosmic Dimensions
  cant describe you ; speech is poor in that aspect!

  p.s. don’t take it too seriously, I beg you 🙂

  • ಸಾಮಾನ್ಯವಾಗಿ ದತ್ತಪದಗಳು ಪದ್ಯಕ್ಕಿಂತ ಬೇರೆಯಾದ ಭಾಷೆಯದಾಗಿರುತ್ತವೆ. ಕನ್ನಡದ ಪದಗಳನ್ನು ಹೀಗೆ ಬೇರೆ ಭಾಷೆಯಲ್ಲಿ ಹೊಂದಿಸಿರುವುದರಿಂದ, by definition ಇದೇ ನಿಜವಾದ ದತ್ತಪದಿ.

  • Shallowness runs away from you
   Hollowness has no role to lay |
   This poem has the novelty
   Of your taste to say the least ||

   (ಸುಧೀರಸ್ತವನಕ್ಕೆ ನನ್ನದಾದ ಒಂದು ಸರಳ ಶ್ಲೋಕ:-)

  • Brilliant weaving of the datta padas sudeep. As for shAlini vRtta, the second line is perfect. The rest are not so due to the stress and accents on certain syllables. Ignoring those, poor is a two syllable word. Leaving the analysis aside, still brilliant.

   I had similarly composed in English in the pramANikA metre, on a pen 🙂 this was in a forum dedicated to fountain pens.

  • ವಿಶಿಷ್ಟವಾದ ಪರಿಹಾರ ಸುಧೀರ್ ಸರ್, ಧನ್ಯವಾದಗಳು

 15. I tried composing it in ಏಳೆ (Tripadi converted into chaupadi). But could not achieve the anuprAsa in the third pAda. Doesn’t matter, for the verse is overall very naive, and this could well be one of the many nuances of ಏಳೆ 😉
  ಪಾಶುಪಲ್ಯವ ಗೈದು ದೇಶವನಾಳ್ವನೆ
  ಈಶ ಸಾರುವೆನು ನಿನಗಯ್ಯ|
  ಕೈಶೋರದಿಂದೆಂದೋ ಸೇವ್ಯನಾದವ ನೀನೇ
  ರಾಶಿ ಕಾರುಣ್ಯ ಪೂರಿತನ್||

 16. ಚೆನ್ನವೈ ನೀ ಶಲ್ಯ-ಪಲ್ಯವಂ ತೊಟ್ಟ ಬಗೆ
  ಯೆನ್ನದೋ ಸೆಣಸಾಟ ಸಿಂಗರಗೊಳಲ್ |
  ಮುನ್ನಮೇ ಕಂಡೆನೈ ಜಗಕೆ ಸಾರಿಹ ನಗೆಯ
  ಕನ್ನನೀನಲ್ಲವೇಂ ಪರಿಪೂರಿತಂ ||

  ಶಲ್ಯ-ಪಲ್ಯ (= ಆಡುಭಾಷೆಯಲ್ಲಿ ಸರ-ಪರ ಅನ್ನುವಹಾಗೆ)
  ಎನ್ನದೋ = ಎಂತಹ

 17. ಬಂದುದೀ ಚಿತ್ತ ಚಾಪಲ್ಯದೊಳು ಮಿಂದುನಾ
  ನಿಂದಿದೋ ಸೆರೆಯಾಳು ನೋಡತಾಯಿ |
  ಸಂದ ನಿನ್ನಿಚ್ಚೆಗನುಸಾರ ಸಾಗಿಹೆನಮ್ಮ
  ಕಂದನಾ ನಿನ್ನ ಕರುಣಾಪೂರದೊಳ್ ||

 18. ಜನಿಸಿಯೆಂದೋಸೆರೆಯೊಳುಧ್ದರಿಸೆ ಬಂದವನ
  ಮನಸಾರುಕುಮಿಣಿಯಂ ವರಿಸಿದವನ
  ಜನಮನದಿ ಗೀತೆಯಾ ಕಂಪೂರಿ ಸಲಹಿದನ
  ನೆನಪಲ್ಯೆಳೆ ಮನೋರಥವ ಮರುಳ ನೀ

 19. 2 AnuShTups for shivA and shankara. doShe instead of dose.

  निर्दोषेयं शिवा यस्याः तेजसा रूपितं जगत् ।
  चापल्यं नाशयत्वम्बा नः कृपाजलपूरिता ॥

  निर्दोषेशु कृपा यस्य तेजसा रुध्यते कलिः।
  चापल्यं नाशयत्वाशु शङ्करो ज्ञानपूरितः ॥

Leave a Reply to hamsanandi Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)