Nov 102013
 

ಈ ಸಮಸ್ಯೆಯ ಸಾಲನ್ನು ಪೂರ್ಣಗೊಳಿಸಿರಿ

ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

  234 Responses to “ಪದ್ಯ ಸಪ್ತಾಹ ೮೬: ಸಮಸ್ಯಾಪೂರಣ”

  1. ಮುತ್ತಿನಸರಮಂ ತರುವೆನೆ
    ವೃತ್ತಿಯನೀಕ್ಷಿಸುತೆ ಪಥಿಕನಗಲಲ್ ಸತಿಗಂ
    ಮುತ್ತುತೆ ಮನಮಂ ವಿರಹದ
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

  2. ತೊತ್ತೆಯನೀಕ್ಷಿಪ ಪತಿಯಂ
    ಸುತ್ತಿರ್ಪ ಭ್ರಮೆಯ ನಿರಸನದೆ ಸೋಲುಣ್ಣಲ್
    ಚಿತ್ತಂ ನೊಂದು ಪರಿಭವದ
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

  3. ಎತ್ತಣ ಪೋಗಲ್ ಕೀಳ್ಮೆಯ-
    ವೆತ್ತಿರ್ಪನೆನುತೆ ವಿಮುಕ್ತದಂಡಂಗೆಲ್ಲರ್
    ಮತ್ತದೆ ಕೂಪಕೆ ನೂಂಕಲ್
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

    ವಿಮುಕ್ತದಂಡಂ = ಕಾರಾಗೃಹದಲ್ಲಿ ದಂಡವನ್ನು ಅನುಭವಿಸಿ ಹೊರಬಂದವನು

  4. ವೃತ್ತಿಯನೀಕ್ಷಿಸೆ ಪಲವೆಡೆ-
    ಯಿತ್ತಂ ತನ್ನೆಡೆಯ ವೃತ್ತಮಕಟಾ ಭ್ರಷ್ಟರ್
    ನೆತ್ತರ್ ಕುದಿವೆನೆ ವರ್ತಿಸೆ
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

    ತನ್ನೆಡೆಯ ವೃತ್ತ – biodata
    ಭ್ರಷ್ಟರ್ ನೆತ್ತರ್ ಕುದಿವೆನೆ – corruption due to politics, asking favors, money

  5. ಪತ್ತೆಂದೊರೆಯುತೆ ತಪ್ಪಿಂ-
    ದುತ್ತರಮೀಯಲ್ಕಸಫಲನಾದಂ ಕಾಡಲ್
    ಸುತ್ತರಿಸುತೆ ಭಾವಿತ್ವಂ
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

    ಪತ್ತೆಂದೊರೆಯುತೆ – he wrote 10 which was the wrong answer
    ಭಾವಿತ್ವಂ – inevitableness (of failure)

  6. ಮೆತ್ತನಲರ್ವಾಸಿಗೆಯೊಳ್
    ಚಿತ್ತಮನಾಕರ್ಷಿಸಲ್ಕೆ ಸೋಲ್ತಳ್ ಪ್ರಾಯ-
    ಶ್ಚಿತ್ತಮನರಿಯದೆ ಬೆದರಲ್
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

  7. ತತ್ತರಿಸಿದನಾಳ್ ಯುಧಿಯೊ-
    ಳ್ವೆತ್ತಾಕಾರ್ಯದೆ ‘ಪರಾಜಯಮನೀ ಭುವಿಗೆಂ-
    ದಿತ್ತೆನೆ ಛೀ:’ ಮುಳಿತದೆ ಹಾ
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

    ತನ್ನಿಂದ ಸೋಲನ್ನು ಮಾತೃಭೂಮಿ ಕಾಣುವುದನ್ನು ಗ್ರಹಿಸಿ ತನ್ನನ್ನೇ ನಿಂದಿಸಿಕೊಳ್ಳುತ್ತಿರುವ ಯೋಧನ ಪೂರಣ

  8. ನೆತ್ತಮನಾಡಲ್ ಸೋಲ್ತಂ
    ಸತ್ತೆಯನಾಣ್ಮರನುಮಿನಿಯಳಂ ಗೌರವಮುಂ
    ಚಿತ್ತದೆ ವನವಾಸದ ಕಡು-
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

  9. ಕುತ್ತಿಗೆಗಳ್ ಸೀಳುತೆ ಹಾ
    ನೆತ್ತಿಯ ರಕ್ತಮನುಪೀರ್ದ ಭೀಮನ ಕಾಣಲ್
    ಸುತ್ತಲು ದುರ್ಯೋಧನಗಂ
    ಕತ್ತಲು ಮೂಡಿತ್ತುನೋಡು ಸೂರ್ಯೋದಯದೊಳ್

  10. ಕುತ್ತಿನವೊಲ್ ಭೋಗವು ತಾಂ
    ಮೆತ್ತನೆ ಮಣ್ಣಿನ ನಿವಾಸಮಂ ಪೊಕ್ಕಿರಲಾ
    ಪುತ್ತದ ಗೆದ್ದಲ ಗುಂಪಿಗೆ
    ಕತ್ತಲು ಮೂಡಿತ್ತುನೋಡು ಸೂರ್ಯೋದಯದೊಳ್

  11. ಕಿತ್ತೊಗೆಯರಸುಗೆ ನೀಂ ಪರ-
    ವಿತ್ತಮನತ್ತಿಗೆಯನೀಕ್ಷಿಪುದೊ? ಸುಗ್ರೀವಾ
    ತೊತ್ತೆನಲನುಜಂಗೆ ಭಯದ
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

  12. ಎತ್ತಣ ಪೌರುಷಮೈ ಸ್ತ್ರೀ-
    ವಿತ್ತದೆ ಬಾಳ್ಮೆಯನೆ ಗೆಯ್ವೆಯೇಂ ಪೋ ಎನಲಾ-
    ಉತ್ತರಮೀಯದ ಮನದೊಳ್
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

    ಹೆಂಡತಿಯ ನೆರವಿಂದಲೇ ಜೀವನ ಮಾಡುತ್ತಿದ್ದ ಪುರುಷನಿಗೆ ನಿತ್ಯವಾಗುವ ಗತಿ

  13. ನೆತ್ತಮಿದಲ್ತೆನೆ ಸಂಪ-
    ದ್ವಿತ್ತದತರುವೆನೆ ಸಮಸ್ತಸಂಚಯಮಂ ತಾ-
    ನಿತ್ತಂ ನಶಿಸಲ್ ಸರ್ವಂ
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

    ಶೇರುಪೇಟೆಯಲ್ಲಿ ಸರ್ವಸ್ವವನ್ನು ಕಳೆದವನ ಪೂರಣ

    ಸಂಪದ್ವಿತ್ತದತರು – ಕಲ್ಪವೃಕ್ಷ

  14. ಸತ್ತನಲಾ ಪುರುಷಂ, ಪರ-
    ನಿತ್ತಂ ಬಾಳ್ಮೆಯನು ಮರಳ್ದು, ಪೂರ್ವಕನಿರವಂ
    ಪೊತ್ತಾ ದೌತ್ಯಮನರಿವೊಡೆ
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

    ಒಬ್ಬಳಿಗೆ ಗಂಡ ಸಾಯುತ್ತಾನೆ… ಇನ್ನೊಬ್ಬನೊಡನೆ ಮರು ವಿವಾಹವಾಗುತ್ತದೆ… ಅದೆಲ್ಲಿಂದಲೋ ಹಳೆಯಗಂಡ ಸತ್ತಿಲ್ಲವೆಂದು ಟಪಾಲು ಬಂದದ್ದನ್ನು ನೋಡಿದಾಗ

    • ಅಂತಾದೊಡಮಂತ್ಯೇಷ್ಟಿಯ
      ನೆಂತುಮದಾರಾವ ದೇಹಕಂ ಗೈದರ್ ಪೇಳ್|
      Or, if he is not dead,
      ಚಿಂತಿಪೆನವನಾವ ಸತಿಯು
      ನಿಂತಿರ್ದಪಳೈ ನಿವಾರಿಸುತೆ ಸವತಿಯರಂ|

      • ಪಲವೈ ಭಾಷೆಗಳದರೊಳ್
        ಪಲವಿರೆ ವಾಹಿನಿಯು ದೂರದರ್ಶನದೊಳಮಾ
        ಪಲ ಧಾರವಾಹಿಗಳ್ ದಲ್
        ಫಲಮಿರ್ಪುದು ಪಲವು ನಿಮ್ಮ ಪ್ರಶ್ನೆಗದರೊಳೇ

        ಪ್ರಶ್ನೆಗೆ ಉತ್ತರವೇ ಫಲವಲ್ಲವೇ
        ಪಲಧಾರವಾಹಿ – ಅರಿಸಮಾಸ ಹಾಸ್ಯದ ಪದ್ಯವೆಂದು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ

        ಯಾವುದಾದರೂ ಒಂದು ಭಾಷೆಯ ಯಾವುದಾದರೂ ಒಂದು ವಾಹಿನಿಯ ಯಾವುದಾದರೂ ಒಂದು ಧಾರವಾಹಿಯನ್ನು ನೋಡಿ ನಿಮ್ಮ ಪ್ರಶ್ನೆಗೆ ಹಲವು ಉತ್ತರಗಳು ಸಿದ್ಧಿಸುತ್ತದೆ 🙂

      • Good one, Rampa. ಗಯ್ಯಾಳಿಯಾದ ಹೆಂಡತಿಯಿದ್ದು ಸಂಸಾರ ಸರಿಹೋಗದಿದ್ದರೆ ಗಂಡನಿಗೆ ಬದುಕಿದ್ದಾಗಲೇ ನಿತ್ಯ ತಿಥಿ. ಸತ್ತಮೇಲೆ ವರ್ಷಕ್ಕೆ ಒಮ್ಮೆ ಮಾತ್ರ 🙂

  15. ಇದು ಕಾಂಗ್ರೆಸ್ ಸರಕಾರದಂತಾಯಿತು – ಒಂದೇ ಕುಟುಂಬ ರಾಜ್ಯವಾಳುವುದು.

    • ಪ್ರಸಾದು ಕಾಂಗ್ರೆಸ್ ಎಂದುಬಿಟ್ಟರಲ್ಲ :). ಬಹಳ ಸಾಧ್ಯತೆಗಳಿವೆ ಎಂದು ಪೂರಣ ಕೊಟ್ಟಿದ್ದಷ್ಟೆ… ಈಗ ಸ್ವಲ್ಪ ಕೆಲಸದಿಂದ ವಿರಮಿಸುವೆ… ಮತ್ತೆ ನಾಳೆ ಏನು ತೋಚುತ್ತದೋ ನೋಡೋಣ…

  16. ಇತ್ತು ಸಮಸ್ಯೆಯುಮಂ ತಾಂ
    ಧುತ್ತೆಂದಾರೇಳು ಪದ್ಯಮನೊರೆಯೆ ಸೋಮಂ
    ಮತ್ತೇನುಳಿದುದೆಮಗೆ ಕ-
    ಣ್ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್

    • ಪಲವಿರ್ಪುದು ಪೂರಣಮೆನೆ
      ಕೆಲವಂ ಯತ್ನಿಪುದು ವಾರದಂತ್ಯದೊಳೆಂದಾಂ
      ಕೆಲಸಂ ಮರಯುತಲೊರೆದೆಂ
      ಖಲನಾದೆ ಗೃಹದೊಳುಮಾನು ವಿರಮಿಪೆನೀಗಳ್

      ಧನ್ಯವಾದ ಶ್ರೀಕಾಂತರೆ, ಬಹಳ ಸಾಧ್ಯತೆಗಳಿದೆಯಲ್ಲಾ ಎಂದು ಬರೆದೆ. ಮತ್ತೆ ನಾಳೆ ಪ್ರಯತ್ನಿಸುತ್ತೇನೆ 🙂

    • ಹೌದು ಮೂರ್ತಿಯವರೇ.

  17. ಪೊತ್ತು ಪರೆವ ಮುಂ ಪದ್ಯಂ
    ಪತ್ತಂ ಬರೆದಿಟ್ಟ ಮೇಲೆ ಸೋಮಂ ತಾನೇ
    ಇತ್ತಂ ಸಮಸ್ಯೆ ಮೋಸದ
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್

    • ಹಾ ಹಾ!, ಚೆನ್ನಾಗಿದೆ! ಈ ವಿಷಯದಲ್ಲಿ ನನ್ನ ವಿರುದ್ಧ ನಿಮಗೆ ಹಲವು ಸಾಕ್ಷಿಗಳೂ ಸಿಗುತ್ತಾರೆ, ನೆನ್ನೆ ಸಂಜೆ (IST) ಸಮಸ್ಯೆ ಹಾಕಬೇಕಿತ್ತು ಕಾರಣಾಂತರಗಳಿಂದ ಇಂದು ಹಾಕಿದೆ. ಈ ಸಮಸ್ಯೆಯನ್ನು ಹಾಕುವುದೆಂದು ಕೆಲವರು ಗೆಳೆಯರಒಡನೆ ನಿರ್ಧರಿಸಿದೆ. ತಡವಾಗಿ ಹಾಕಿದ್ದು ನನ್ನ ವಿರುದ್ಧ ಕೆಲಸ ಮಾಡಬಹುದೇ ನೋಡಬೇಕು 😉

  18. ಮುತ್ತಿತು ಮೋಡ ನಸುಕಿನೊಳ್
    ಮತ್ತನಿಳಿಸುವಾಸೆಯಿಂದಲಾತನದಂದೇ
    ಕತ್ತಲ್ಕಿನತನ್ನೊಳಗಂ
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್

    ಕತ್ತಲ್ಕಿನ = ಕತ್ತಲ್ಕೆ + ಇನ = ಉರಿದುಕೊಳ್ಳಲು ಸೂರ್ಯ (ಸಿಟ್ಟನ್ನು ಹೊರ ಹಾಕಲಾರದೇ)

    • ಐಡಿಯ ಚೆನ್ನಾಗಿದೆ. ಎರಡನೆಯ ಪಾದದಲ್ಲಿನ ’ಆತ’ ಸೂರ್ಯ ಎಂದು ಸ್ಪಷ್ಟವಾಗದು. ಮೂರನೆಯ ಪಾದದಲ್ಲಿರುವ ’ಇನ’ನನ್ನು ಅನ್ವಯಿಸಿಕೊಳ್ಳಲೂ ಈ ಎರಡನೆಯ ಸಾಲನ್ನು ಸವರುವ ಅವಶ್ಯಕತೆ ಇದೆ. ’ಮತ್ತಿನನಂದಿಳಿಸಿ ಕಾಡಲಿಚ್ಛಿಸುತಲಿ ತಾಂ ’ ಎಂದು ಸವರಬಹುದು.

      • ಧನ್ಯವಾದ ಪ್ರಸಾದರಿಗೆ. ಪದ್ಯವ ತಿದ್ದಿಹೆನು
        ಮುತ್ತಿತು ಮೋಡ ನಸುಕಿನೊಳ್
        ಮತ್ತನಿಳಿಸುವಾಸೆಯಿಂ ರವಿಯದಾ ದಿನದೊಳ್
        ಕತ್ತಲ್ಕಾತನೊಳೊಳಗಂ
        ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್

  19. ಅತ್ತಲಲಾಬಾಮಾದೊಳ್ (Alabama)
    ಕತ್ತಲೆ ಮೂಡಿತ್ತು ನೋಡೆ ಸೂರ್ಯೋದಯದೊಳ್-
    ಗಿತ್ತಲ್ ಭಾರತದೊಳ್ಗಂ,
    ಸುತ್ತಿರಲಿಳೆ ತನ್ನಯಕ್ಷದೊಳಗನವರತಂ||

  20. ಶ್ರೀಕೃಷ್ಣಜನನವೇ ಮಾನವೇತಿಹಾಸದೊಂದು ಕಾಲಖಂಡದ ಸೂರ್ಯೋದಯ

    ಕೊತ್ತಲದೆ ಪುಟ್ಟಿದನನೆ
    ತ್ತುತ್ತಲಿ ವಸುದೇವ ಪಾರುಗಾಣಿಸಲಾಗಳ್|
    ಬತ್ತುತೆ ಜಗುನೆಯು ಬಿರಿಯಲ್
    ಕತ್ತಲೆ ಮೂಡಿತ್ತು ನೋಡೆ ಸೂರ್ಯೋದಯದೊಳ್||

    • ಬಹಳ ಚೆನ್ನಾಗಿದೆ ಪ್ರಸಾದು 🙂

      ಮುರಳಿಯ ಜನನದ ಪೂರ್ಣಂ
      ಪರಿಹರಿಪುದು ಜಾಣ್ಮೆಯಿಂದಲೀ ಆಹವಮಂ

      ಆಹವ = challenge

    • Sorry. Posted my solution in the wrong place

    • ಚೆನ್ನಾಗಿದೆ ಪ್ರಸಾದು. ಕತ್ತಲೆ= ಕೃಷ್ಣ? (ಕಪ್ಪು)
      ಒಡೆಯಲ್ ಗಿಂತ ಬಿರಿಯಲ್ ಹೊಂದುತ್ತೆ. ಬತ್ತುತೆ ಜಗುನೆಯು/ಯಮುನೆಯು ಬಿರಿಯಲ್ ಎನ್ನಬಹುದು.

  21. ಒತ್ತುತಹಿ ಸೂರ್ಯದೇವಗೆ (ಅಹಿ=ರಾಹು)
    ಕುತ್ತಾಗಿರುತೆತ್ತಲುಂ ತಡೆದಿರಲ್ ಕರಮಂ|
    ಧುತ್ತೆನುತಲಿ ಗ್ರಹಣದೊಳ್
    ಕತ್ತಲೆ ಮೂಡಿತ್ತು ನೋಡೆ ಸೂರ್ಯೋದಯದೊಳ್||

  22. ಎತ್ತಣ ನೋಡಲ್ ಕವಿದೆರೆ
    ಕತ್ತಲೆ, ಮೂಡಿತ್ತು ನೋಡು ಸೂರ್ಯೋದಯದೊಳ್
    ಬಿತ್ತಿರ್ಪ ಬೆಳ್ಪ ಬೀಜಂ
    ಬಿತ್ತರಿಸುತೆ ಚಾಚುತೆಳೆದು ತಬ್ಬುತೆ ಜಗಮಂ

  23. ಪಿತ್ತವು ಶಿರಕೇರಿ ಖಿಲಾ
    ಫತ್ತು, ಸುಭಾಶ, ಸರದಾರರೊಳು ತಪ್ಪೆಳಸಲ್|
    ಸತ್ತೆಯಿನೇಂ ಮೋಹನದಂ?
    ಕತ್ತಲೆ ಮೂಡಿತ್ತು ನೋಡೆ ಸೂರ್ಯೋದಯದೊಳ್ (1947)||

    ಮೋಹನ – ಗಾಂಧಿ (Pun on another Mohan – Manmohan)

  24. ಹೊತ್ತಿರೆ ರಾಣಿಯು (ರಾಜ್ಞಿಯು) ಗರ್ಭವ
    ಹತ್ತಿರದಲಿರೆ ರಘುವಂಶಕೆ ಸುಖದಿವಸಗಳ್ |
    ಸತ್ತಿರಲವನೀಪಾಲಂ
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್ ||

    ಸೂರ್ಯವಂಶದ ಉತ್ತರಾಧಿಕಾರಿ ಹುಟ್ಟುವ ದಿವಸಗಳನ್ನು ಎದುರು ನೋಡುತ್ತಾ ಆಶಾಭಾವನೆಯಿಂದ ಇದ್ದವವರಿಗೆ ಅಗ್ನಿವರ್ಣನ ಸಾವು ದುಃಖ ತಂದ ಸಂದರ್ಭ.
    ಯಾರಿಗೆ ದುಃಖವಾದರೂ ಕತ್ತಲೆ ಎಂದು ಬಿಡಿಸಬಹುದಾದರೂ, ಸೂರ್ಯವಂಶದ
    ಕುಡಿ ಹುಟ್ಟುವ ಸಂದರ್ಭಕ್ಕೆ ಸೂರ್ಯೋದಯ ಪದ ಚೆನ್ನಾಗಿ ಹೊಂದಬಹುದು ಎಂಬ ಆಶಯ.
    ಕಾವ್ಯದಲ್ಲಿ ಮಗು ಹುಟ್ಟುವುದಕ್ಕೆ ಇನ್ನೂ ಬಹಳ ಸಮಯವಿತ್ತು ಎಂದು ಇರಬಹುದು. ಸಮಸ್ಯಾಪೂರಣಕ್ಕೆ ಅನುಕೂಲವಾಗುವಂತೆ ನಾನು ಇನ್ನು ಕೆಲವೇ ದಿವಸಗಳಲ್ಲಿ ಪ್ರಸವ ಎಂಬಂತೆ ತೆಗೆದುಕೊಂಡಿದ್ದೇನೆ.

    • ಸೂರ್ಯೋದಯಮಂ ಪುಟ್ಟುವ
      ಕಾರ್ಯಕ್ಕೆನ್ನುತ್ತೆ ಕಳ್ತಲೆಯನಂ ವಿಪದ-
      ಕ್ಕಾರ್ಯಂ ಪೊಂದಿಸುತೊರೆದಭಿ-
      ಘಾರ್ಯದ ಲೀಲೆಯನು ಗೆಯ್ದ ಬಗೆಯೇ ಚಂದಂ

      ಸಮಸ್ಯೆಯ ಸಾಲಿನ (ಕತ್ತಲೆ, ಸೂರ್ಯೋದಯಗಳಿಗೆ) ಬಹಳ ಅರ್ಥಪೂರ್ಣವಾದ ಪರಿಹಾರ ಸುಧೀರ್ ಸರ್ 🙂

    • ದುಷ್ಟನಲ್ಲವೆ ರಾಜನಗ್ನಿವರ್ಣನು ತಾನು
      ನಷ್ಟಮೇನವನ ಸಾವಿನೊಳು ಪೇಳೈ|
      ಇಷ್ಟಿಫಲ ದಾಂಪತ್ಯದಂ ಸಲ್ಲಿಸಿಹನಿನ್ನು
      ದೃಷ್ಟಿಯಿರಿಸೈ ಭ್ರೂಣದಾರೋಗ್ಯದೊಳ್|| 🙂

    • In response to your last para:
      ಯುಗನಿಮ್ಮದಿರೆ ಸಿಸೇರಿಯನೇಕೆ ಕಾದಿರೈ
      ಹಗುರಾಗಲವಳು ಕಾಲಾಂತರದೊಳಂ|
      ಸೊಗದ ತಿಥಿಯೊಳ್ ಪ್ರಸವಮಂ ಮಾಡಿಸಿರ್ದೊಡಂ
      ಮಗುವು ಪಿತನಂ ಕಾಂಬ ಯೋಗಮಿತ್ತೈ||

    • ಐಡಿಯ ಬಲುಚಂದ. ಮೊದಲೆರಡು ಅಡಿಗಳಲ್ಲಿ ಓಟ ಸ್ವಲ್ಪ ಎಡವಿದೆ. ಲಘ್ವಕ್ಷರಗಳನ್ನು ಕಡಿಮೆಮಾಡಿದರೆ ಸುಧಾರಿಸೀತು. ಹಳಗನ್ನಡದ ಸೊಗಡು ಹೆಚ್ಚಿಸಬಹುದು.

  25. Communist idea:
    ಮೊತ್ತದೆ ಬೆನ್ನೊಳಿರಿವರೈ
    ತತ್ತರಿಸದಿರಿ ಪೊರತಲ್ಲವಿದಕಂ ಸುರರುಂ|
    ಇತ್ತಾಗರ್ಘ್ಯವ ಛಾಯೆಯ (ಅರ್ಘ್ಯ ನೀಡುತ್ತಿರುವವನ ಹಿಂದೆ)
    ಕತ್ತಲೆ ಮೂಡಿತ್ತು ನೋಡೆ ಸೂರ್ಯೋದಯದೊಳ್||

  26. ಇತ್ತಳ್ ಹೃದಯಮನಿನಿಯಂ-
    ಗುತ್ತರಮವನಿಂದೆ ಬರ್ಪುದನೆ ಕಾದಳ್ ಸೂಳ್
    ಪೊತ್ತೊಳ್ ಗೆಲೆ ಮತ್ತೊರ್ವಳ್
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

    ತಡವಾಗಿ ಪ್ರೇಮವನ್ನು ಸೂಚಿಸಿದವಳ ನಿರಾಶೆ

  27. ಹಿತ್ತಲ ‘ಕೋಳಿ’ಯು ಕೂಗಲು
    ಹೊತ್ತಾಯಿತು ಶೌಚಕೆಂದು ಗೌತಮ ನಡೆದನ್ |
    ಮತ್ತ-ಸುರೇಂದ್ರನ ಜಾಲದಿ
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್ ||

    ಪ್ರಸಿದ್ಧ ಪುರಾಣ ಕಥೆ. ಕತ್ತಲೆಯಲ್ಲಿ ಸೂರ್ಯೋದಯವನ್ನು ಭ್ರಮಿಸಿದ ಗೌತಮನ ಬಾಳಿನಲ್ಲಿ ಸೂರ್ಯೊದಯದಲ್ಲಿ ಕತ್ತಲೆ ಮೂಡಿತ್ತು ಎನ್ನುವ twist!

  28. ಮತ್ತಿನ ಮಾತುಗಳಾಡುತ
    ಲೊತ್ತುತ ಕೆನ್ನೆಗಳ ದಂಪತಿ ರಾತ್ರಿಯ ಕಳೆಯಲ್ |
    ಸುತ್ತಿದ ಹೊದಿಕೆಯ ಒಳಗಡೆ
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್ ||

    ಅವಿರಲಿತ-ಕಪೋಲ, ರಾತ್ರಿರೇವ ವ್ಯರಂಸೀತ್, ಜಲ್ಪತೋರಕ್ರಮೇಣ,
    ಇತ್ಯಾದಿ ಜ್ಞಾಪಕಕ್ಕೆ ಬಂದರೆ ಸ್ವಾರಸ್ಯ ಇನ್ನೂ ಹೆಚ್ಚಬಹುದು.

    • ಮತ್ತಿನ ಮಾತುಗಳಾಡುತ
      ಲೊತ್ತುತ ಕೆನ್ನೆಗಳ ದಂಪತಿ ರಾತ್ರಿಯ ಕಳೆಯಲ್ |
      ಸುತ್ತಿದ ಹೊದಿಕೆಯ ಒಳಗಡೆ
      ಕತ್ತಲೆ ‘mood’ ಇತ್ತು ನೋಡು ಸೂರ್ಯೋದಯದೊಳ್ ||

      ಅಂತ ಬೇಕಾದರೂ ಅರ್ಥೈಸಬಹುದು 🙂

      • ಶುಚಿರುಚಿಭರಿತಂ ಪರಿಹೃತಿ- (ಶುಚಿ =ಶೃಂಗಾರ)
        ಯುಚಿತಜ್ಞತೆಯಿಂದಮೊಂದಿಬರಲೇಂ ಸೊಗಮೋ !
        ಪ್ರಚುರಪ್ರತಿನವಕಲ್ಪನ-
        ಸಿಚಯಂ ಸೌಧೀರಕಾವ್ಯರಮಣೀವಿಜಯಂ ||

        ಸ್ವಲ್ಪ ಛಂದೋವ್ಯಾಕರಣಗಳ ಸವರಣೆಯಿಂದ ಪದ್ಯ ಹೀಗಾಗಬಹುದು:

        ಮತ್ತೇರ್ದ ಮಾತನಾತನಾಡು-
        ತ್ತೊತ್ತುತೆ ಕದಪಿರುಳನುಳಿಯೆ ನವದಂಪತಿಗಳ್ |
        ಸುತ್ತಿರ್ದ ಹಚ್ಚಡದೊಳಗೆ
        ಕತ್ತಲೆ “mood” ಇತ್ತು ನೋಡೆ ಸೂರ್ಯೋದಯದೊಳ್ 🙂

        • ಬಹಳ ಸೊಗಸಾದ ಪದ್ಯಗಳು, ಧನ್ಯವಾದ ಗುರುಗಳೇ.

        • ಗಣೇಶರೆ,
          ಎರಡನೆಯ ಪದ್ಯದ ಮೊದಲ ಪಾದದ ಕೊನೆಯ ಗಣದಲ್ಲಿ ’ತನಾ’ ಪುನರುಕ್ತಿಯಾಗಿದೆ.

      • OMG….super sudheer..

      • ಕಲ್ಪನೆ ಸೊಗಸಾಗಿದೆ,ಸುಧೀರರೇ.

    • ‘ಹೊದಿಕೆಯ ಒಳಗಡೆ’ ಎಂಬಲ್ಲಿ ಸಂಧಿ ಆಗಬೇಕೆ?
      ಹಾಗಿದ್ದಲ್ಲಿ, ‘ಸುತ್ತಿದ ಹೊದಿಕೆಯ ಮುಸುಕಲಿ’ ಎಂದು ಇಟ್ಟುಕೊಳ್ಳಬಹುದೆ?

    • Nice

    • ಹಿರಿಯರಿಂದ ಮೊದಲುಗೊಂಡು ಅತಿಕಿರಿಯರ ವರೆಗೂ ಕಾಮೆಂಟ್ ಗಳನ್ನು ಪಡೆದ ಈ ಪದ್ಯ ಜಯಭೇರಿ ಬಾರಿಸಿದೆ, ಸುಧೀರ್ ಸರ್ 🙂

    • Lovely solution 🙂

  29. ಕತ್ತಲವೊತ್ತೊಳ್ ಮಕ್ಕಳ
    ಕತ್ತಂ ಕತ್ತರಿಸಿ ಪೋಗಲಶ್ವತ್ಥಾಮಂ
    ಪೆತ್ತಳ್ ಹಾ ದೌರ್ಭಾಗ್ಯ-
    ಕ್ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್

    ದೌರ್ಭಾಗ್ಯಕ್ಕೆ ಅತ್ತು ಅಲೆ ಮೂಡಿತ್ತು

  30. ಪೆತ್ತಳ್ ವರದಿಂ ಕರ್ಣನಿ
    ಗುತ್ತರಿಸಲ್ಕೇನುಮೆಂದು ತೊರೆದಳ್ ಸುತನಂ
    ಚಿತ್ತದೊಳಾದಾಘಾತಕೆ
    ಕಟ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್

  31. ಕೊತ್ತಲದ ತುಂಬುಡುಗೆಯಂ,
    ಮುತ್ತುರತುನವಂ ಖಳಂ ಭಯ,ತ್ರಾಸಿರದಲ್
    ಪೊತ್ತು ನಡೆವಷ್ಟು ದಟ್ಟನ
    ಕತ್ತಲು ಮೂಡಿತ್ತು ನೋಡು ಸೂರ್ಯೋದಯದೊಳ್

  32. ಕತ್ತರಿಸಿರೆ ಗುರುಪುತ್ರಂ
    ಮತ್ತಿಂ ಕೃಷ್ಣಾಜಶೀರ್ಷಗಳನಾ ನಿಶೆಯೊಳ್ |
    ಪೆತ್ತೊಡಲಿಗೆ ಕಟ್ಟಳಲಿಂ
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್ ||
    ಕಾಕತಾಳೀಯವೆಂಬಂತೆ ಇದೇ ಕಲ್ಪನೆಯಲ್ಲಿ ಶ್ರೀಕಾಂತರ ಪದ್ಯವು ಸೂರ್ಯೋದಯದೊಳ್ ಮೂಡಿ ಆಗಿದೆ.

  33. ನೆತ್ತಿಯನುರೆ ಕೆರೆಯುತ್ತುಂ
    ಸತ್ತಿತೆ ಕಲ್ಪನೆಯ ವಳ್ಳಿಯೆನುತುಂ ಚಿಂತಾ-
    ಚಿತ್ತಂ ನಿದ್ರಿಸುತೇಳೆ ಸ-
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್ ||
    ಸಕತ್ ತಲೆ = Super Idea 😉

    • ಬೊಂಬಾಟಾಗಿದೆ ಪೂರಣ-
      ಮಿಂಬಾದ ವಿನೂತ್ನಕಲ್ಪನೆಯ ಶಿಲ್ಪನದಿಂ |
      ತುಂಬಿದ ಗಾಂಭೀರ್ಯಕ್ಕಂ
      ಚೊಂಬಿತ್ತು ಬಯಲ್ಗೆ ಸಾಗಿಸಿದಿರಲ ನಗುತುಂ 🙂

      • ರಾಮಕೃಷ್ಣರ ಪದ್ಯ ಮತ್ತು ಗುರುಗಳ ಪದ್ಯೋತ್ತರ ತಕ್ಷಣ ನಗೆಯುಕ್ಕಿಸಿದವು, ಧನ್ಯವಾದಗಳು.

    • ಪರಿಣಾಮಕಾರಿಯಾದ ಅನಿರೀಕ್ಷಿತ ಪೂರಣ. ಸೊಗಸಾಗಿದೆ. ಆಂತೆಯೇ ಪ್ರತಿಕ್ರಿಯಯಲ್ಲಿನ “ಚೊಂಬಿತ್ತು ಬಯಲ್ಗೆ ಸಾಗಿಸಿದಿರಲ ” ಎಂಬ ವಿಸ್ಮಯಕಾರಕ ಪ್ರಯೋಗ, ಪ್ರಾಸ, ತ್ರಾಸವಾಗದೆ ಹೇಗೆ ಹೊಸಚಿತ್ರಗಳನ್ನು ರೂಪಿಸಬಲ್ಲದು ಎಂಬುದಕ್ಕೆ ನಿದರ್ಶನ (ಚಿತ್ರ ನಗರ ಯುವ ನಾಗರಿಕರಿಗೆ ಹೊಸತಾದರೂ)

      • ಮೌಳಿಯವರೇ! ಕವಿರೇವ ವಿಜಾನಾತಿ ಕವೇರನ್ಯಸ್ಯ ಖೇದನಂ ಎಂಬ ಮಾತಿನಂತೆ ನಿಮಗೆ ಅದೆಷ್ಟು ಚೆನ್ನಾಗಿ ಬಿಂದುಪೂರ್ವಕ-ಬಕಾರ ಪ್ರಾಸದ ತ್ರಾಸ ಒಡನೆಯೇ ಗಮನಕ್ಕೆ ಬಂದಿತು! ವಿನೋದವಾಗಿರಲೆಂದು ಮೊದಲು ಬೊಂಬಾಟಿನಿಂದ ಆರಂಭಿಸಿದಾಗ ಕಡೆಗೆ ಗತ್ಯಂತರವಿಲ್ಲದೆ ಚೊಂಬು-ಬಯಲುಗಳನ್ನು ತರಬೇಕಾಯಿತು:-).ಆದರೆ ಇದೂ ಮತ್ತಷ್ಟು ವಿನೋದವನ್ನು ತಂದದ್ದು ನನ್ನ ಪುಣ್ಯ:-) ಈ ಕಾರಣದಿಂದಲೇ ಛಂದಸ್ಸು-ಪ್ರಾಸ ಮುಂತಾದುವು ಹೊಸಹೊಸ ಕಲ್ಪನೆಗಳಿಗೆ ಅದೆಷ್ಟು ಇಂಬಾಗುತ್ತವೆಂದು ತಿಳಿಯದಿರದು.

      • ಬೊಂಬಾಟಾಗಿದೆ !
        ಕತ್ತಲ ಸೂರ್ಯೋದಯದ ಚಿತ್ರಣವಲ್ಲವೇ !?

      • ಚೊಂಬುಂ ರಾಗಕರಮನಾ-
        ಲಂಬಿಸೆ ದಲ್ ಸ್ವರ್ಣಕುಂಭರುಚಿಯಂ ಗೊಳ್ಗುಂ |
        ಧನ್ಯವಾದಗಳು ಸರ್ 🙂

    • ಸಖತ್ತಾಗಿದೆ…ಪೆಜತ್ತಾಯರ ಐಡಿಯ ಮತ್ತು ಗಣೇಶರ ಚೊಂಬು … ಎರಡೂ 🙂

    • ಗಣೇಶ್ ಸರ್, ಚಂದ್ರಮೌಳಿ ಸರ್, ಕಾರಂತರೆ,
      ಮೆಚ್ಚುಗೆಗೆ ಧನ್ಯವಾದಗಳು 🙂

    • 🙂 chennAgide

  34. ಕಂದ ಪದ್ಯದ ಮೊದಲ ಪ್ರಯತ್ನದಲ್ಲಿ…

    ಹೊತ್ತಿಯುರಿದ ಬಂಡಿಯ ಸು-
    ದ್ದಿತ್ತ ಬರುತಿರಲ್ ಕುಟುಂಬವ ಕಳೆದು ಕೊಂಡೆಂ-
    ದತ್ತು ಹಲುಬಲಾ ದಿನದೊಳ್
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್

    ಕೊ೦ಡೆ +ಎಂದು +ಅತ್ತು= ಕೊಂಡೆ೦ದತ್ತು
    (ಆಂಧ್ರ ಪ್ರದೇಶದ ಬಸ್ ನಲ್ಲಿ ಬೆಂಕಿ ಹತ್ತಿದ ಘಟನೆ ಕಲ್ಪಿಸುತ್ತಾ )

    • ಸೊಗಸಾದ ಪದ್ಯ. ತಾಯೀ! ನಿಮ್ಮ ಮೊದಲ ಕಂದಪದ್ಯಕ್ಕಾಗಿ ಅಭಿನಂದನೆಗಳು.

      • ಸರ್ , ಪಡ್ಯದಲ್ಲೇ ಧನ್ಯವಾದ ಹೇಳುವ ಪ್ರಯತ್ನ ,

        ಹೊಂದಿಹ ತಾಯ್ತನಕೀಯಭಿ
        ನಂದನೆ ಸೇರಲ್ ಕಿರೀಟದೊಳ್ ಗರಿ ಸೇರ್ತುಂ
        ಕಂದದ ಪಾಠವು , ಛಂದ-
        ಸ್ಸಂದದಿ ಲೇಖನ ವಿಧಾನಕಿದೊ ನಾ ನಮಿಪೆಂ

        ಮೊದಲ ಕಂದ ಪದ್ಯ ರಚಿಸಿದ್ದಕ್ಕಾಗಿ ಅವಧಾನಿಯವರಿಂದ ದೊರೆತ ಅಭಿನಂದನೆ ನನ್ನ ತಾಯ್ತನದ ಕಿರೀಟಕ್ಕೆ ಗರಿ ಸೇರಿದಂತಾಯ್ತು . ಪದ್ಯ ಪಾನದಲ್ಲಿರುವ ಕಂದ ಪದ್ಯದ ಪಾಠ , ಮತ್ತು ಬೇರೆ ಬೇರೆ ಗಣಗಳಿಗೆ ಬಣ್ಣ ಹಚ್ಚಿ ಅಂದವಾದ ಛಂದಸ್ಸಿನ೦ತೆ ಬರೆದ ವಿಧಾನ ಅರ್ಥ ಮಾಡಿಕೊಳ್ಳಲು ಸುಲಭವಾಯಿತು . ಅದಕ್ಕಾಗಿ ನಮಿಸುತ್ತೇನೆ ಅನ್ನುವುದು ಇಲ್ಲಿ ರಚಿಸಿದ ಪದ್ಯದ ಆಶಯ
        .

        • ನಿಮ್ಮ “ಕಂದ”ನಿಂದ ನಿಮಗೆ ದೊರೆತ ತಾಯ್ತನದ ಹಿರಿಮೆಗೆ ಅಭಿನಂದನೆಗಳು ಭಾಲ ಅವರೆ. (ನಿಮಗೂ ನಿಮ್ಮ ಕಂದನಿಗೂ) ನಿಮ್ಮ “ಅಭಿವಂದನ” ಕಂದವೂ ಬಹಳ ಸೊಗಸಾಗಿದೆ.

    • ಬಹುಸರಳರಮಣೀಯ ವರ್ಣನೆ.

  35. ಸೋಮೋದಯದಿಂ ಶರಧಿ-
    ಪ್ರೇಮೋದಯಮಪ್ಪುದೆಂತೊ ಅಂತೆವೊಲೀಗಳ್ |
    ಸೋಮೋದಯದೆ ಸಮಸ್ಯಾ-
    ಶ್ರೀಮಂತಿಕೆಯಿಂತು ಲಹರಿಯೇರಿರೆ ಸಲ್ಗುಂ ||

    ಶ್ರೀಕಾಂತರ ಪರಿಹಾರಂ
    ಪ್ರಾಕಟವೈನೋದಿಕಾಧಿಕರಸಸ್ಮೇರಂ |
    ಶ್ರೀಖಂಡಕಾಂತಿಪೂರಂ
    ಸ್ವೀಕಾರ್ಯಂ ಸೋಮಕಾರ್ಯಕೌಶಲಧುರ್ಯಂ ||

  36. ಬತ್ತಿಯ ಸವರಿ ಪಟಾಕಿಯ
    ಹತ್ತಿಸಿ, ಬಾಲನನುಮಾನದಿಂದಲಿ ಬಗ್ಗಲ್ |
    ಹತ್ತಿರವೇ ಅದು ಸಿಡಿಯಲು
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್ ||

    ದೀಪಾವಳಿ ದಿನ ಎಲ್ಲರಿಗಿಂತ ಮುಂಚೆ ಪಟಾಕಿ ಹೊಡೆಯುವ ಉತ್ಸಾಹ ಹುಡುಗರಿಗೆ ಇದ್ದಿದ್ದೇ. ಆದರಿಂದ ಸೂರ್ಯೋದಯ ಪದ ಸೂಕ್ತ.
    ಟ್ರಾಜೆಡಿ ಇಷ್ಟವಿಲ್ಲದವರಿಗೆ ಸಮಾಧಾನ ಎಂದರೆ ಆ ಹುಡುಗನಿಗೆ ಮತ್ತೆ ಕಣ್ಣು ಬಂದಿತು ಅಂತ ಕಥೆಯನ್ನು ಮುಗಿಸುತ್ತೇನೆ.
    P.S. ಸಾಧಾರಣವಾಗಿ ದ್ವಿತೀಯಾಕ್ಷರ ಪ್ರಾಸದ ಪದಗಳಿಗೆ ತಿಣುಕುವ ನನಗೆ ಇನ್ನೊಂದೆರಡು ಸಾಲುಗಳಿದ್ದರೂ, ‘ನೆತ್ತಿಗೆ’ ‘ಮೆತ್ತಿದ’ ಎಣ್ಣೆ ಮುಂತಾದ ದೀಪಾವಳಿ ಸಂಬಂಧಿತ ಐಡಿಯಾಗಳನ್ನು ತರುವ ಅವಕಾಶವಿತ್ತು 🙂

    • ಆಹಾ! ಕರುಣರಸಾವಹ-
      ಮೀ ಹೃದಯವಿದಾರಿಪದ್ಯಮನವದ್ಯಮಲಾ!
      ಗಾಹಿತಶೃಂಗಾರಸುಧಾ-
      ವ್ಯೂಹಂ ಮೊದಲಲ್ಲಿ ಮತ್ತದಿಲ್ಲಿಯೊ ಸದಯಂ!!

  37. ಮೆತ್ತನೆ ಪೊಸಪಾಸಿಗೆಯಂ
    ಪತ್ತಿ ಮಲಗಲದರೊಳಿರ್ದ ಕೂದಲೆಳೆಯು ತಾ-
    ನೊತ್ತಿದರಿಂದಿಳಿಲೆಗೆ ಬರೆ
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್

    ಇಳಿಲೆ- ಸುಂದರಿ
    ಬರೆ ಕತ್ತಲೆ ಮೂಡಿತ್ತು- ಕತ್ತಲ್ಲೆ ಬರೆ ಮೂಡಿತ್ತು

  38. ಕತ್ತಲ್ ಕವಿದಾಗಳ್ ಮನ-
    ಕತ್ತಲೆದಾನ್ ದಾರಿ ಕಾಣದಯ್ಯೋ ಎನುತಂ-
    ದೆತ್ತಲ್ ಕುಳಿತಿರ್ದೆನೊ ಬೆಳ-
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್

    ಕವಿದಾಗಳ್ ಮನಕತ್ತಲೆದಾನ್- ಮನಕೆ ಕವಿದಾಗ ಅತ್ತು ಅಲೆದು ನಾನು

  39. ಕತ್ತಲೆಯ ಕರಿಯ ಛಾಯೆಯ
    ನೆತ್ತಲೊ ಸರಿಸುತ್ತ ಭೂರಮೆಯು ಸುತ್ತಲು ತಾ
    ನಿತ್ತ ಹರಸಿದಳು ಮಬ್ಬಿನ
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

    • ಕಂದ ಅನವದ್ಯವಾಗಿದೆ. ಆದರೆ ಆಶಯವೇನೆಂದು ಸ್ಪಷ್ಟವಾಗಲಿಲ್ಲ. ಸ್ವಲ್ಪ ಭಾಷೆಯಲ್ಲಿ ಹಳಗನ್ನಡದ ಬಿಗಿ ಮಿಗಿಲಾಗಲಿ:-)

      • ಸರ್ ,
        ಭೂಮಿ . ತಾನು ಸುತ್ತುತ್ತಾ ಕತ್ತಲನ್ನು ಆಚೆ ಸರಿಸಿ ಈಕಡೆಯವರಿಗೆ ಮಬ್ಬುಗತ್ತಲೆ( ಹರಸಿದಳು )ಮೂಡಿಸಿದ್ದಾಳೆ . ಇನ್ನು ಸ್ವಲ್ಪ ಹೊತ್ತಲ್ಲೇ ಕಣ್ಣಿಗೆ ಕಾಣುವ೦ತಹ ಸೂರ್ಯೋದಯವಾಗಲಿದೆ ಅನ್ನುವುದು ನನ್ನ ಕಲ್ಪನೆಯ ಆಶಯ.
        .
        ಪದವಿ ಪೂರ್ವ ಮತ್ತು ಪದವಿ ತರಗತಿಗಳಲ್ಲಿ ಹಿಂದಿಯನ್ನು ಐಚ್ಹಿಕ ಭಾಷೆಯಾಗಿ ಓದಿದ್ದರಿಂದ ವ್ಯಾಕರಣ ಮತ್ತು ಹಳೆಗನ್ನಡ ಬಳಸಿ ರೂಢಿ ಇಲ್ಲ .ಪದ್ಯದಲ್ಲಿ , ಮುಂದೆ ಹಳೆಗನ್ನಡದ ಬಳಕೆ ಬಗ್ಗೆ ಸಾಧ್ಯದಷ್ಟು ಗಮನಿಸುತ್ತೇನೆ

        ಕತ್ತಲೆಯ ಕರಿಯ ಛಾಯೆಯ
        ನೆತ್ತಲೊ ಸರಿಸುತ್ತ ಭೂರಮೆಯು ಸುತ್ತಲ್ ತಾ
        ನಿತ್ತ ಹರಸಿದಳ್ ಮಬ್ಬಿನ
        ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

  40. ಪೊತ್ತು ಪರೆಯಿತೇಳ್ ಪ್ರಿಯ ಎನೆ
    ಮೆತ್ತಗುಸಿರ್ದೊಡತಿ ಕಣ್ಣಿಗೊತ್ತುತೆ ತುಟಿಯಂ
    ಮುತ್ತೀಯಲ್ಕಹಹಾ! ಸವಿ
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್

    • ಶ್ರೀಕಾಂತರೆ,

      ನಿಮ್ಮ ಎಲ್ಲಾ ಪೂರಣಗಳೂ ಬಹಳ ಚೆನ್ನಾಗಿವೆ, ಬಹಳ ಹಿಡಿಸಿತು 🙂

  41. ಸತ್ತಪದರ್ಘ್ಯಂ ರವಿಯಂ
    ಪತ್ತಿರೆ ಫಲಿಸಿತಲ ಹೇಮವಾಂಛಿತ ಸತ್ರಾ-
    ಜಿತ್ತಿಗೆ ವರಶ್ಯಮಂತಕ
    ಕತ್ತಲೆ ಮೂಡಿತ್ತು ನೋಡು, ಸೂರ್ಯೋದಯದೊಳ್

    (ಕತ್ತಲೆ.. ಕಂಠದಲ್ಲೆ)

    • ಸ್ಯಮಂತಕಮಿತ್ತವೊಲ್ ಸುವರ್ಣಮನೀಗುಮೀ ಪೂರಣಮುಂ ಸುವರ್ಣಂಗಳಂ:-)

  42. ಕುತ್ತುರೆ ವಸಂತಸೇನೆಯ
    ಕತ್ತಂ ಬಂದಿರ್ದ ಖಲಶಕಾರನ ಕಂಡಾ
    ತತ್ತರನಾದವನೆಂದಂ
    ಕತ್ತಲೆ ಮೂಡಿತ್ತು ನೋಡೆ ಸೂರ್ಯೋದಯದೊಳ್||

    (ವಸಂತಸೇನೆಯ ಕತ್ತಂ ಉರೆ ಕುತ್ತಿ ಬಂದಿರ್ದ ಖಲ ಶಕಾರನ ಕಂಡು ತತ್ತರನಾದವಂ ಎಂದಂ-ಕತ್ತಲೆ ಮೂಡಿತ್ತು ನೋಡೆ ಸೂರ್ಯೋದಯದೊಳ್ )

    (ತರಗತಿಯೊಳೆ ಸಿಕ್ಕಿರೆ ಮೇಣ್
    ಪರಿಹಾರಮಿದೀ ಸಮಸ್ಯೆಗಂ ಮಣ್ವಂಡಿಯೊಳಂ (ಮೃಚ್ಛಕಟಿಕ)
    ಬರೆಯಲ್ಕಾಗೆ ವಿಲಂಬಂ
    ತೆರತೆರ ಪರಿಹಾರಮೆಂತುಟೋ ಬಂದಿರ್ಕುಂ)

    • ಸಮಯೋಚಿತಪರಿಹಾರಂ!

    • ತರಗತಿಯೊಳ್ ಕಲಿತಿನಿತುಂ
      ಪೊರವಿಶ್ವದೊಳಂ ಪ್ರಮಾಣಿಸಲುಬೇಕದನುಂ|
      ತೊರೆಯದೆ ಮಠವನ್ನಲ್ಲಿಯೆ
      ದರುಶನ ನಿರುಕಿಸಿರೆ ಕಾಯ್ವುದೇಂ ವಿಶ್ವಂ ತಾಂ||

      (ತಪ್ಪೆಣಿಸದಿರೈ ಸಖ ನೀನೀಗಳ್
      ಕೊಪ್ಪಲತೋಟನೆ, ಮೀನಾಕ್ಷಿ|
      ಧೊಪ್ಪನೆ ಸುಳಿದಳು ನೆನಪೊಳ್ ಸ್ವಾಮಿಯು
      ಒಪ್ಪದಿ (Ballet) ಬ್ಯಾಲೆಯೊಳೊರೆದಿರುವೋಲ್|| ;))
      In his kathanakavana ‘ಮೀನಾಕ್ಷಿ ಸೌಗಂಧ’, BGL Swamy has related how a classmate of his confined herself to the classroom and yet prevailed over him in exam results. Your verse brought it to memory instantly.
      And who else could it be other than Swamy who would engage himself in such mundane mudslinging when the whole nation was engaged in driving out the British – in 1947.

      • ಭಾರತದ ಸ್ವಾತಂತ್ರ್ಯದ
        ವಾರ್(war) ಇನ ಕಾಲದೆ ಪ್ರಸಾದು ನೀವಿರ್ಪಿರಿಮೀ
        ದಾರಿಯೊಳೀಕ್ಷಿಸಲೆರಡನೆ
        ಬಾರಿಗುಲಿಯುತಿರ್ಪಿರಲ್ತೆ ನಾಲ್ವತ್ತೇಳಂ(೧೯೪೭)||

  43. ಕತ್ತಲೆಯೆಂದೊಡೆ ಸೊಗಮಾ
    ದತ್ತೆನುತುಂ ಸೋಮನೊಳ್ಪಿನಿಂ ಕದಿರ್ಗಳಿನಾ
    ಕತ್ತಲೆಯುಮಂ ರವಿಯುಮಂ
    ಬೆತ್ತಲೆಗೊಳಿಸಿರ್ಪನಲ್ತೆ ರಜನೀಕಾಂತಂ:-)

  44. ಕೆತ್ತಲ್ ಸೂರ್ಯನಶಿಲೆಯಂ
    ಪೊತ್ತುತೆ ಕಲ್ಗಳನುತಮ್ಮ ಪೆದೆಗೇರಿಸುತುಂ
    ಕಿತ್ತೊಡೆಯಲ್ ಖಳರಿಂದಂ
    ಕತ್ತಲೆ ಮೂಡಿತ್ತುನೋಡು ಸೂರ್ಯೋದಯದೊಳ್

  45. ಮತ್ತಾರ್ಗುಂ ತಿಳಿಯದವೊಲ್
    ಹಿತ್ತಲ ಕೋಣೆಯೊಳುಮಾಂತ್ರಿಕನ ಛೂ ಮಂತ್ರಕೆ
    ತತ್ತಳಿಸಲ್ ಜನಮನದೊಳ್
    ಕತ್ತಲೆ ಮೂಡಿತ್ತುನೋಡು ಸೂರ್ಯೋದಯದೊಳ್

    • ಅಣ್ಣನ ಜಾಡಂ ವಿಡಿದೇ
      ತಿಣ್ಣನೆ ಪೋಗಿರ್ಪನಲ್ತೆ ತಮ್ಮಂ ಕೂಡಂ |
      ಟಣ್ಣನೆ ನೆಗೆದು ಸಮಸ್ಯೆಯ
      ದಿಣ್ಣೆಗಳಂ, ರಚಿಸಿ ವಿಪುಲಪದ್ಯಂಗಳನಾಹ್ !! 🙂

  46. ಇತ್ತಣ ಸಂಜೆಯ ಹೊತ್ತೊಳ್
    ಮುತ್ತಿರೆ ಕೆಂಬಣ್ಣ ಬಾನ ಸೂರ್ಯೋದಯದೊಲ್ |
    ಹತ್ತುವ ರವಿತಾ ಕುತ್ತಿರೆ
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್ ||

    ಕುತ್ತಿರೆ = ಕೆಳಗಿಳಿದಿರಲು
    (ನಸುಗೆಂಪು ಮುತ್ತಿದ ಸಂಜೆಯ ಸೂರ್ಯಾಸ್ತ, ಬೆಳಗಿನ ಸೂರ್ಯೋದಯದಂತೆ ಕಂಡ ಕಲ್ಪನೆಯಲ್ಲಿ.)

  47. ಎತ್ತರದಾಗಸದೊಳ್ಗಂ
    ಹತ್ತಿಯವೊಲ್ಪೇರಿರಲ್ಕೆ ಕಾರ್ಮೋಡಗಳಿಂ
    ಡೆತ್ತಣಮುಂ ಬೆಳಕಿಲ್ಲದೆ
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊ

    • ಎತ್ತರದಾಗಸದೊಳ್ಗಂ
      ಹತ್ತಿಯವೊಲ್ಪೇರಿರಲ್ಕೆ ಕಾರ್ಮೋಡಗಳಿಂ
      ದೆತ್ತಣಮುಂ ಬೆಳಕಿಲ್ಲದೆ
      ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊ
      Typo corrected

  48. ಎತ್ತಿ ಸುರಿಯೆ ಹರಿ ಮಳೆಯಂ
    ತತ್ತರಿಸಿದ ಗೊಲ್ಲರಂ ಸಲಹಲಾ ಕೃಷ್ಣಂ
    ಪೊತ್ತಿರೆ ಮಲಯಮನದರಿಂ
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್

    ಹರಿ- ಇಂದ್ರ

  49. ಶರಪರಂಪರೆಯಂದದೆ ಪಾರ್ಥನಾ
    ಮೆರೆಗುಮಲ್ತೆ ಸಮಸ್ಯೆಯ ಪೂರಣಂ |
    ಬರಮದೆಲ್ಲಿ ವಿನೂತನಕಲ್ಪನಾ-
    ಚರಣೆಗಂ ಪ್ರತಿಭಾರುಣಮಿರ್ಪಿನಂ !

    • ’ಪ್ರತಿಭಾರುಣಮಿರ್ಪ ಇನಂ’ ಎಂದಿರೆ?

      ಶಾ|| ಏನೆಂಬೆಂ ನಾಂ? ನಿಮ್ಮ ಸೊಲ್ಲೆಂತೊ ಸೈಪುಂ|
      ತಾನೇನಾತ್ಮಪ್ರತ್ಯಯಂ ನಿಮ್ಮೊಳೈಬುಂ?
      ನಾನುಂ ಮೇಣಾ ಛಾತ್ರಪಾದರ್ಗಳಿರ್ಪೀ, (ಪಾದ=ಅರುಣ)
      ಪಾನಾಸ್ಥಾನಕ್ಕಲ್ತಿನಂ ನೀಂ? ನತರ್ ನಾಂ||

      • ಪ್ರತಿಭೆಯೆಂಬ ಅರುಣನು ಇರುವವರೆಗೂ (ಇರ್ಪಿನಂ)ಎಂದು ತಾತ್ಪರ್ಯ

  50. ಕತ್ತಲೆಪೊತ್ತೊಳ್ ಮಲಗಿರೆ,
    ಮುತ್ತುವ ಮಶಕಕ್ಕೆ ಪೋಗು,ಪೋಗೆಂದಾಗಳ್ |
    ಸುತ್ತಿರೆ ಮೊಗಕೆ ಪೊದಕೆಯಂ,
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್ ||

    • ಮೊದಲನೆಯ ಪಾದದ “ಪೊತ್ತೊಳ್” -ಪದವು ತಪ್ಪೆಂದು ಅನಿಸುತ್ತಿದೆ.
      ದಯವಿಟ್ಟು ಮೊದಲನೆಯ ಸಾಲನ್ನು-
      ಕತ್ತಲೆಪೊತ್ತಿನೊಳೊರಗಿರೆ
      ಎಂಬುದಾಗಿ ಸವರಿಸಿಕೊಂಡು ಓದಿರಿ.

  51. ಹಿತ್ತಲೊಲೆಗಿಟ್ಟು ಕೊಳ್ಳಿಯ
    ಕತ್ತುದ್ದವಮಾಡುತೂದೆ,ಬೆಂಕಿಯುರಿಯದೇ,
    ಮುತ್ತಿತು ಹೊಗೆ. ಕಟ್ಟಿಗೆಯರೆ
    ಗತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್

    ಅರೆಕತ್ತು + ಅಲೆ = ಅರೆಗತ್ತಲೆ
    ಅಲೆ = ಹೊಗೆಯಲೆ

    • ಕತ್ತುದ್ದ ಮಾಡುತ ಊದೆ. ಚೆನ್ನಾಗಿದೆ.
      ಬಾಲ್ಯದ ಒಲೆಯ ಮುಂದಿನ ಸಾಹಸಗಳು ಮತ್ತು ಸಾಲು ಸಾಲು ಕೆಮ್ಮುಗಳು ಜ್ಞಾಪಕಕ್ಕೆ ಬಂದವು…ಧನ್ಯವಾದ…

    • chennAgide 🙂

  52. “ಹೊತ್ತಾತೆದ್ದೇಳ್ಲಾ” ಎ-
    ನ್ನುತ್ತುಂ ನೀರೆರಚೆ ಮಿತ್ರರಾನಾಯಕನಾ|
    ಚಿತ್ತಭ್ರಾಮಕ ಕನಸೊಳ್
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್||
    (“ಹೊತ್ತಾತ್ ಎದ್ದೇಳ್ಲಾ” ಎನ್ನುತ್ತುಂ ನೀರೆರಚೆ ಮಿತ್ರರ್, ಆ ನಾಯಕನಾ ಚಿತ್ತಭ್ರಾಮಕ ಕನಸೊಳ್ ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್)
    (ಲೂಸಿಯಾ ಚಲನ ಚಿತ್ರದ ವಸ್ತು)

  53. ತೊತ್ತಿನ ಮಗಳೆಂದೆನ್ನುತು
    -ಮತ್ತೆಗೆ ಬಯ್ಯುತಿರಲಡುಗೆ ಮಾಳ್ಪಾ ಸೊಸೆ ಮೇಣ್
    ಅತ್ತೆಯ ಕಾಣಲ್ಕಿದಿರೊಳ್
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್||
    (ಸೂರ್ಯೋದಯದೊಳ್ ಅತ್ತೆಗೆ ‘ತೊತ್ತಿನ ಮಗಳ್’ ಎಂದು ಬಯ್ಯುತಿರಲ್ ಆಡುಗೆ ಮಾಳ್ಪ ಸೊಸೆ ಮೇಣ್ ಇದಿರೊಳ್ ಅತ್ತೆಯ ಕಾಣಲ್ಕೆ ಮೂಡಿತ್ತು ನೋಡು )
    ಇತ್ತೀಚಿನ ಧಾರಾವಾಹಿಗಳ ಪ್ರಭಾವದಿಂದ:-)

  54. ಕತ್ತಲೆಯಂ ತೊಲಗಿಸುವನೆ
    ಮುತ್ತಿನ ಕದಿರ ಮಗಂ ಜನಿಪನೆನೆ ತಾಯ್ಗಂ
    ಸತ್ತಿರ್ಪಂಡಂ ಪುಟ್ಟಿರೆ
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್||
    (ಕತ್ತಲೆಯಂ ತೊಲಗಿಸುವನೆ ಮುತ್ತಿನ ಕದಿರ ಮಗಂ ಜನಿಪಂ ಎನೆ ತಾಯ್ಗಂ ಸತ್ತಿರ್ಪ ಅಂಡಂ ಪುಟ್ಟಿರೆ ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್)
    ಮಾರ್ತಂಡ-ಸೂರ್ಯ; ಮೃತ ಅಂಡದಿಂದ ಜನಿಸಿದವ

    • ಕೊಪ್ಪಲತೋಟ, ಪೂರಣಗಳು ವಚೆನ್ನಾಗಿ ಮೂಡಿಬರುತ್ತಿದೆ 🙂

  55. ಹೆತ್ತಿಹ ಕಂದನ ನಾಮವ
    ನಿತ್ತಿಹ ಗೃಹದೊಳ್ ಹಠಾತ್ತನಗಲಿರಲುದಯನ್ |
    ಹೊತ್ತಿಹ ದೀಪವದಾರಲ್
    ಕತ್ತಲೆ ಮೂಡಿತ್ತು ನೋಡು “ಸೂರ್ಯೋದಯ”ದೊಳ್ ||
    (ಮಗ “ಉದಯ”ನ ಹೆಸರಿಟ್ಟಿದ್ದ ಮನೆ – “ಸೂರ್ಯೋದಯ” ದಲ್ಲಿ, ಆಕಸ್ಮಿಕವಾಗಿ ಸಂಭವಿಸಿದ ಮಗನ ಸಾವಿನಿಂದ ಕತ್ತಲು ಮುಸುಕಿತ್ತು.)

  56. ನನ್ನ ಮೊದಲ ಕಂದ…ತಪ್ಪು ಇದ್ದಲ್ಲಿ ಇವನನ್ನು ಸರಿದಿದ್ದಿ .
    ————————————————————–
    ನೆತ್ತರು ಚೆಲ್ಲಿದ ಕಣದಲಿ
    ಸತ್ತವರ ದೇಹಗಳ ಸುಡಲು ಕಾಷ್ಟಗಳಪೋಲ್
    ಸುತ್ತ ಹರಡಿರಲು ಕರಿಪೋಗೆ
    ಕತ್ತಲೆ ಮೂಡಿತು ನೋಡು ಸೋರ್ಯೋದಯದೊಳ್

    • ಸಾಲು ೧ = ಸರಿ
      ೩ = ಪೋ ವನ್ನು ಪೊ ಮಾಡಬೇಕು
      ೨ = ವಿಷಮ ಸಂಖೆಯ ಗಣ ಜ ಗಣವಾಗಬಾರದು. ಇಲ್ಲಿ ೫ನೇ ಗಣವನ್ನು ತಿದ್ದಬೇಕು.
      ೬ , ೧೪ ನೇಯವು ಜ ಗಣವಾಗಬೇಕು. ೭ ಕೂಡ ಜ ಗಣ ವಾಗಿದೆ

      • ಕಾಂಚನಾರವರೆ ಧನ್ಯವಾದಗಳು. ನೀವು ತೋರಿದ ತಪ್ಪುಗಳನ್ನು ತಿದ್ದಿದ್ದೇನೆ. ಆದರೆ ಇಲ್ಲಿ ೨ ನೆಯ ಸಾಲಿನಲ್ಲಿ ೬ನೆಯದು ಸರ್ವ ಲಘುವಾಗಿ ಪ್ರಯೋಗಿಸಿದ್ದೀನಿ. ಪ್ರಯೋಗ ಸೂತ್ರ ಬೇರೆ ಯಾವುದಾದರೂ ಎಡವಿದಲ್ಲಿ ತಿಳಿಸಿ.
        ———————————————–
        ನೆತ್ತರು ಚೆಲ್ಲಿದ ಕಣದೊಳ
        ಗೆತ್ತಿ ಶವಗಳನ್ನು ಸುಡಲು ಕಟ್ಟಿಗೆಗಳಪೋಲ್
        ಸುತ್ತ ಪಸರಿಸಿ ಕರಿಪೊಗೆಯು
        ಕತ್ತಲೆ ಮೂಡಿತು ನೋಡು ಸೋರ್ಯೋದಯದೊಳ್

        • ಸರಿಯಾಗಿದೆ. 6 ನೆಯ ಗಣವು ಸರ್ವಲಘು ಆಗಬಹುದು.ಆ ನಾಲ್ಕರಲ್ಲಿ ಮೊದಲಕ್ಕರದ ನಂತರ ಯತಿ ಬರಬೇಕು.ಅದಿಲ್ಲೀಗ ಬಂದಂತಿದೆ.

    • ಕಮಲಪಾದರೆ,
      “ನನ್ನ ಮೊದಲ ಕಂದ…ತಪ್ಪು ಇದ್ದಲ್ಲಿ ತಿದ್ದಿ” ಎಂದಿರೆ?
      ಉಂಟೆ! ತಪ್ಪನು ತೋಡಿಕೊಂಬುದೇನೊರುವನೇ
      ಜಂಟಿಯತ್ನದೆ ತಳೆದ ’ಕಂದ’ನಿಂಗಂ|
      ಈಂಟಿರೆಂದಿರ್ದೊಡಂ ’ಕಂದಪದ್ಯ’ದ ಕಂಪ
      ತಂಟೆಯಂ ತೆಗೆವನೇಂ ಹಾದಿರಂಪ||

      • ಪ್ರಸಾದುರವರೆ,

        ಏನೆಂದು ಹೇಳಲಿ.??? ನಿಮ್ಮ ಬರಹ ಮನ ಮುಟ್ಟಿ ಮುಗುಳುನಗೆ ತರುವುದೀ ಮುಖದಲ್ಲಿ….:)
        ಧನ್ಯವಾದಗಳು.

  57. ಹೊತ್ತಾರಕಳುವಗೆ ಜನನಿ-
    ಯಿತ್ತಿರೆ ಮಿಗಮೊಗದ ವಿವಿಧ ಬಿಸ್ಕೇಟ್ಗಳ, ಗ-
    ಮ್ಮತ್ತಿನ ಮೃಗಧಾಮವು ಬಿಸ್-
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್ ||

    ನಾವು ಸಣ್ಣವರಿದ್ದಾಗ ಬರುತ್ತಿದ್ದ ಹಲವು ಪ್ರಾಣಿ-ಪಕ್ಷಿಗಳ ಮುಖದ ಆಕಾರದ ಬಿಸ್ಕತ್ತು ಗಳನ್ನು ಕಚ್ಚಾಡಿಕೊಂಡು ತಿನ್ನುತ್ತಿದ್ದದ್ದನ್ನು ನೆನೆದು. ಎರಡನೇ ಸಾಲಿನ ಕೊನೆಗೆ ಯತಿಯನ್ನು ತರಲಾಗದ್ದಕ್ಕೆ ಕ್ಷಮೆಯಿರಲಿ. ಸಣ್ಣ ಕಂದನ ಅಳುವನ್ನು ನಿಲ್ಲಿಸಲು ಮಾಡಿದ ಒಂದು ಕೃತಿಮವಷ್ಟೆ ಎಂದು ಮನ್ನಿಸಿ.
    ಸೂರ್ಯೋದಯವೆನ್ನುವುದಕ್ಕೆ ಬೇರೆಯ ರೀತಿಯ ಸಮರ್ಥನೆ ತರುವುದಕ್ಕೆ ಸಾಧ್ಯವಾಗದ್ದಕ್ಕೆ, ಬೆಳಗಿನ ಜಾವ ಅಳುತ್ತಿರುವ ಕಂದ ಎಂಬ ಹಿನ್ನಲೆ ತೆಗೆದುಕೊಂಡಿದ್ದೇನಷ್ಟೆ.

  58. ಕತ್ತಲೆಯರಿ ರವಿ ಕಣ್ಗಳ
    ಲಿತ್ತು, ಪತಿಗೆ ಧರಿಣಿ ನಾಚಿದ ಮೊಗವು, ಮರೆಮಾ-
    ಡಿತ್ತಳು ಶಶಿಯನು, ಭುವಿಯೋಳ್
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್ ||

  59. ಹಿತ್ತಲ ತೋರಲು ನೆನ್ನೆಯೆ
    ಕತ್ತಲೆಮೂಡಿತ್ತು. ನೋಡು ಸೂರ್ಯೋದಯದೊಳ್,
    ಸುತ್ತಲಿಹಪೂವರಿಲ್ಗಳ
    ಗತ್ತಂ ಬಹುವರ್ಣದೊಳ್ಮಿನುಗಿನನಣುಕಿರಲ್ ||

    Alternative option ಒಂದು ಇರಲಿ ಅಂತ ಎರಡನೇ ಸಾಲಿನಲ್ಲಿ ಸಮಸ್ಯೆಯನ್ನು ಇಟ್ಟು ಒಂದು ಪರಿಹಾರ. Late entry ಗೆ ಇದೇ ಗತಿಯಷ್ಟೆ.
    ಅರಿಲ್ – ನಕ್ಷತ್ರ = ಪೂವರಿಲ್ = ಹೂ ನಕ್ಷತ್ರಗಳು.
    ಬಹುವರ್ಣ ದೊಳ್ ಮಿನುಗಿ ಇನನ ಅಣುಕಿರಲ್.

    • ಈ ಬಗೆಯ ಪೂರಣವೇನೂ ದೋಷವಲ್ಲ ಶ್ರೀಶ:-)
      ಪ್ರಸ್ತುತ ಪರಿಹಾರದ ನಾವೀನ್ಯ ನಿಜಕ್ಕೂ ಮೆಚ್ಚುವಂತಿದೆ. ಆದರೆ ಕಡೆಯ ಸಾಲಿನಲ್ಲಿ ಸ್ವಲ್ಪ ಇಕ್ಕಟ್ಟಾದಂತಿದೆ. ನನಗೂ ಸವರಣೆ ತಿಳಿಯುತ್ತಿಲ್ಲ.

  60. ಬತ್ತಲೆ ಗೈದರ್ ನಾಡಂ
    ಪೊತ್ತೊಯ್ದೈಸಿರಿಯನಾಳ್ವ ಭೂಪರ್ ಸಚಿವರ್
    ಸುತ್ತಲುಮಿಂತಿರೆ ದಿನಮುಂ
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್

  61. ಕತ್ತಲೆ ಕವಿಯಲ್ಕೇಗಳ್
    ಸುತ್ತುತುಮುಲ್ಲೂಕನಿಕರಮಾ ಕಾಗೆಗಳಂ
    ಕುತ್ತುತೆ ಕೊಲ್ಲಲ್ಕವಕಂ
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್||

    (ಅವಕಂ- ಅವುಗಳಿಗೆ-ಕಾಗೆ ಅಥವಾ ಗೂಗೆ ಎರಡಕ್ಕೂ ಅನ್ವಯಿಸಿಕೊಳ್ಳಬಹುದು:-))

    • ಆಹಾ! ಎಂಥ ಸುಂದರಪೂರಣ! ಆದರೆ ಉಲ್ಲೂಕ ಎಂಬ ಶಬ್ದವುಂಟೇ? ಈ ಸಾಲನ್ನು “ಸುತ್ತುತ್ತುಮುಲೂಕನಿಕರಮಾ ಕಾಗೆಗಳಂ” ಎಂದಾಗಿಸಿದರೆ ಯುಕ್ತತರವಾದೀತು.

      • ನಿಜ.. ಪಂಚ ತಂತ್ರದ “ಕಾಕೋಲೋಕಿಯಂ” ಇಂದ ಪ್ರಭಾವಿತನಾದೆ. ಹಿಂದಿಯ ‘ಉಲ್ಲೂ’ ಇಂದ ‘ಉಲ್ಲೂಕ’ ಮಾಡಿಕೊಂಡುಬಿಟ್ಟೆ:-(
        ಸವರಣೆಯೊಂದಿಗೆ-
        ಕತ್ತಲೆ ಕವಿಯಲ್ಕೇಗಳ್
        ಸುತ್ತುತ್ತುಮುಲೂಕನಿಕರಮಾ ಕಾಗೆಗಳಂ
        ಕುತ್ತುತೆ ಕೊಲ್ಲಲ್ಕವಕಂ
        ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್||

  62. ಚಿತ್ತದೆ ಮೊಳೆಯಲ್ ಕಲ್ಪನೆ
    ಗುತ್ತರಿಸಲ್ಕವಿಯುತನ್ನಕುಂಚದೊಳೊರೆಯಲ್
    ಮೆತ್ತಿದ ಬಣ್ಣಗಳ್ ಆ.. ಹಾ..!!
    ಕತ್ತಲು ಮೂಡಿತ್ತುನೋಡು ಸೂರ್ಯೋದಯದೊಳ್

    ಒಬ್ಬಕವಿಯು ತನ್ನ ಕಲ್ಪನೆಯ ಚಿತ್ರವನ್ನು ಚಿತ್ರಿಸಿದಾಗ ಅದೆಷ್ಟು ಚೆನ್ನಾಗಿ ಮೂಡಿಬಂತು ಎಂಬ ಕಲ್ಪನೆ…

    (ಸೋಮನ idea ದಂತೆ) ಇದೇ ಮೂರನೇ ಸಾಲನ್ನು ಸ್ವಲ್ಪ twist ಮಾದಿದಾಗ…
    “ಮೆತ್ತಿದ ಬಣ್ಣಗಳಕಟಾ” – ಹಯ್ಯೋ ಏನೋ ಮಾಡಕ್ಕೆ ಹೋಗಿ ಇನ್ನೇನೋ ಆಯ್ತಲ್ಲಪ್ಪಾ 😉

    ತಪ್ಪಿದ್ದಲ್ಲಿ ಸವರಿಸಿ

    • ಶ್ರೀಧರ್ ! ನಿಜಕ್ಕೂ ಅತ್ಯಂತಸುಂದರಪೂರಣ. ಈ ಪಾಟಿ ಪರಿಹಾರಗಳು ಪ್ರವಾಹರೂಪದಿಂದ ಹೊಮ್ಮುತ್ತಿದ್ದಾಗಲೂ ಇಂಥ ನೂತನವೂ ಶ್ಲಾಘ್ಯವೂ ಆದ ಸಾಧ್ಯತೆಯು ಸುತರಾಂ ಸ್ತುತ್ಯ. ಆನಂದವರ್ಧನನು “ವಾಚಸ್ಪತಿಸಹಸ್ರಾಣಾಂ ಸಹಸ್ರೈರಪಿ ಯತ್ನತಃ | ಪ್ರಮೃಷ್ಟಾಪಿ ಕ್ಷಯಂ ನೈತಿ ಪ್ರಕೃತಿರ್ಜತಾಮಿವ ||” ಎಂದ ಮಾತುಗಳಿಗೆ ನಿಮ್ಮೆಲ್ಲರ ಈ ಪರಿಯ ಕಲ್ಪನಸಮೃದ್ಧಿಯು ಪದ್ಯರೂಪದಲ್ಲಿ ಮೆರೆವ ಸುಂದರಸಾಕ್ಷ್ಯವಾಗಿದೆಯೆಂದರೆ ಅತಿಶಯವಲ್ಲ.

  63. ಕುತ್ತೇಂ ದಿನಪಗೆ ಬಾನೊಳ್
    ತುತ್ತಾದನೆ ಧೂಮಕೇತು ಖಳರಿಂ ಸೋಲ್ತುಂ
    ಬತ್ತುತಲಿರೆ ಕರಶೌರ್ಯಂ
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್
    [ಸೂರ್ಯಗ್ರಹಣ]

    ಶ್ರೀಶನ ದಾರಿಯಲ್ಲಿ:

    ಮುತ್ತಿಹ ಶತ್ರುಗಳಂ ಬೆಂ-
    ಬತ್ತಿದ ಶೂರಂ ಮರಳ್ಚಿ ಪೇಳ್ದಂ “ರಕ್ತಂ
    ಮೆತ್ತುವ ಮುನ್ನಮೆ ದೊರೆಯೇ,
    ಕತ್ತಲೆ ಮೂಡಿತ್ತು, ನೋಡ ಸೂರ್ಯೋದಯದೊಳ್”

  64. ಕಿತ್ತೊಗೆದಾರಾತಿಯರಂ
    ಪೊತ್ತಳ್ ನಕ್ತದೊಳೆ ಮಾತೆ ಜಸಮನದೆರಗಲ್
    ಧುತ್ತೆನೆ ತನುಜಾತಖಳರ್
    ಕತ್ತಲೆಮೂಡಿತ್ತು ನೋಡು ಸೂರ್ಯೋದಯದೊಳ್

    ರಾತ್ರಿಯಲ್ಲಿ ಶತ್ರುಗಳಿಂದೆ ಸ್ವತಂತ್ರಳಾದ ಭಾರತಿ ಬೆಳಕು ಹರಿಯುವಷ್ಟರಲ್ಲಿ ತಾನೇ ಹೆತ್ತ ಖಳರ ಪಾಲಾದ ಪೂರಣ

  65. ಅತ್ತಿರಲೇಳಲರುಣ ನಸು
    ಗತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್ |
    ಒತ್ತಿರಲವನ ಕರುಣ ವದ
    ಕುತ್ತರ ಕಂಡಿತ್ತು ನೋಡ ಸರ್ವೋದಯದೊಳ್ ||

  66. ಕತ್ತೆಯ ಮೋಸದೆ ಕರೆಯುತೆ
    ಚಿತ್ತೈಸಿರಿಯೆಂದು ಸಿಂಹಕೀಯಲ್ ನಿಶೆಯೊಳ್
    ತುತ್ತಂಬೊಂದದ* ನರಿಗಂ
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್||

    *ತುತ್ತಂ+ಪೊಂದದ=ತುತ್ತಂಬೊಂದದ
    (ಪಂಚತಂತ್ರದ ಕಥೆಯೊಂದರ ಪ್ರಭಾವ; ಸಮಸ್ಯೆಯ ವಾಕ್ಯಕ್ಕೆ ಸ್ವಲ್ಪ ದೂರವೇ ಆಯಿತೇನೋ ಈ ಪರಿಹಾರ)

  67. ಬೆತ್ತವ ಪಿಡಿದಾಚಾರ್ಯರ್
    ಹೊತ್ತಿಗೆ ಪಾಠಕ್ಕೆ ಬಾರದಾಶಿಷ್ಯನಿದಿರ್
    ಧುತ್ತನೆ ನಿಲ್ಲಲವಗೆ ಕಣ್-
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್||

  68. ಮೆತ್ತಗೆ ವಿಮಾನವಿಳಿಯ-
    ಲ್ಕೆತ್ತಲು ನೋಡಲ್ಕಸಾಧ್ಯ ಹಿಮದಮಳೆಯವೊಲ್
    ಪೊತ್ತೆಂಟಾದರುಮಿನ್ನುಂ
    ಕತ್ತಲು ಮೂಡಿತ್ತುನೋಡು ಸೂರ್ಯೋದಯದೊಳ್

    ಇತ್ತೀಚೆಗೆ(March) ಚಿಕಾಗೋ ನಲ್ಲಿ ವಿಮಾನದ ಲ್ಯಾಂಡಿಂಗ್ ಸಮಯದಲ್ಲಿ ಕಿಟಕಿಯಿಂದ ಹೊರಗೆ ನೋಡಿದಾಗ (saw snowfall for the first time) ನನಗಾದ ಸ್ವಂತ ಅನುಭವದ ಪದ್ಯ…
    ಮೆತ್ತಗೆ ವಿಮಾನವಿಳಿಯಲ್ – ಅಂದರೆ, ನಾವು ವಿಮಾನದೊಳಗಿದ್ದಾಗ ವಿಶೇಷವಾಗಿ ಲ್ಯಾಂಡಿಂಗ್ ಆಗುವಾಗ ( ವಿಳಂಬಗತಿಯಲ್ಲಿ ಚಲಿಸುತ್ತಿದ್ದೆವೆನ್ನಿಸುತ್ತದೆ… (hope most of you agree this)

  69. ನೃತ್ತಮನಾಡಲ್ ಸರಸತಿ
    ಸುತ್ತಿತು ಶೀತಾಂಶುವಿಂದಮಭಿಜಾತಪಥಂ|
    ಸತ್ತಿರಲುಷ್ಣದಮೆಲ್ಲಂ ತಣ್ಣನೆ
    ಕತ್ತಲು ಮೂಡಿತ್ತು ನೋಡು ಸೂರ್ಯೋದಯದೊಳ್||

    (ಸೂರ್ಯೋದಯ- ಉಷ್ಣದ (ಉಷ್ಣವನ್ನು ಕೊಡುವುದು)-ಅಭಿಜಾತವಲ್ಲದ ಕವಿತೆಗಳು ಉದಯವಾಗುವಾಗ)
    (ಈ ಸಮಸ್ಯೆಯಲ್ಲಿ) ಸರಸ್ವತಿ ನೃತ್ಯವಾಡುತ್ತಿರುವಾಗ ಅಭಿಜಾತ ಪಥದಲ್ಲಿ ಎಲ್ಲೆಡೆ ಶೀತಾಂಶುವೇ ಸುತ್ತಿತು. ಹಾಗಾಗಿ ಉಷ್ಣದವಾದ ಸೂರ್ಯೋದಯದಲ್ಲಿಯೂ ತಣ್ಣನೆ ಕತ್ತಲೆ ಕವಿದಿತ್ತು.
    ಪದ್ಯದ ಭಾವ ಸ್ಪಷ್ಟವಿಲ್ಲದ ಕಾರಣ ಟಿಪ್ಪಣಿಯೇ ದೊಡ್ಡದಾಯಿತು. ಮೂಗಿಗಿಂತ ಮೂಗುತಿಭಾರವೆಂಬಂತೆ!! 😉

    • ನೃತ್ತಂ ಪೊಂದಿಪ ಪೂರಣ-
      ಮಿತ್ತಂ ಚಂದದಿ ಗಣೇಶಕೊಪ್ಪಲತೋಟಂ
      ಕತ್ತರಿಸಲ್ ಗಣಮೊಂದಂ
      ಚಿತ್ತೈಸುವುದೀ ಪ್ರಯತ್ನದಾಶಯಮಲ್ತೇ

      3ನೇ ಪಾದದಲ್ಲಿ ಟೈಪೋ ಇಂದ ಒಂದು ಗಣ ಹೆಚ್ಚಿದೆ 🙂

      • ಹೌದು.. ‘ತಣ್ಣನೆ’ ಕತ್ತಲು ಬರಲಿ ಎಂದು ಮೊದಲೇ ಮುದ್ರಿಸಿಟ್ಟಿದ್ದೆ. ಕೊನೆಯಲ್ಲಿ ಗಮನಿಸಲೇ ಇಲ್ಲ 😛

        ನೃತ್ತಮನಾಡಲ್ ಸರಸತಿ
        ಸುತ್ತಿತು ಶೀತಾಂಶುವಿಂದಮಭಿಜಾತಪಥಂ|
        ಸತ್ತಿರಲುಷ್ಣದಮೆಲ್ಲಂ
        ಕತ್ತಲು ಮೂಡಿತ್ತು ನೋಡು ಸೂರ್ಯೋದಯದೊಳ್||

  70. ಕತ್ತೆಯನೇರಿದ ಹುಚ್ಚನು
    ಎತ್ತಿದ ಧ್ವನಿಯಿಂ ಪ್ರಚಾರಮಂಗೈದಿಪನೈ
    `ಸುತ್ತಣದೂರಿನೊಳೆಲ್ಲೆಡೆ
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್`

    • ಒಳ್ಳೇ ಮಾರ್ಗ:-)
      ಯಾವ ಸಮಸ್ಯೆಗೆ ಬೇಕಾದರೂ ಪರಿಹಾರವಾದೀತು!!!;-)

  71. ಮತ್ತಿನುದಧಿಯಂ ಮಥಿಸಲ್
    ಪೆತ್ತ ವಿಷಮನೀಶನೆತ್ತಿಯೀಂಟಲ್ ಶಿವೆ ತಾ-
    ನೊತ್ತಿ ಪಿಡಿದ ಗುರುತಿದಿಗೋ
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್

    ಸೂರ್ಯೋದಯಕಷ್ಟು ಸಂಬಂಧವಿಲ್ಲದಿದ್ದರೂ ಪೂರಣಕ್ಕಾಗಿ ಅದನ್ನು ಉಳಿಸಬೇಕಾಯಿತು.

  72. ಪತ್ತೂರಂ ಕಂಡ ವರಂ
    ಗತ್ತಿಂದೈತರ್ಪ ದೃಶ್ಯಮಂ ವಧು ಕಂಡಳ್
    ಪತ್ತುಗೆ ಮೊದಲನೆಯ ಮಿಲಾ-
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್

    ಮಿಲಾಕತ್ತು- ಭೇಟಿ

  73. ಮುತ್ತಿನ ಹಾರವ ಕೊರಳಿಂ
    ದೆತ್ತಿದ ಖಳನನ್ನುಕಂಡಿದಾರಕ್ಷಕ ಕೈ
    ಎತ್ತೊಂದ್ಕೊಟ್ಟೇಟಿಗೆಕಣ್
    ಕತ್ತಲು ಮೂಡಿತ್ತುನೋಡು ಸೂರ್ಯೋದಯದೊಳ್

    ಈ ಪದ್ಯ ಸಾಧುವೇ??

  74. ಮುತ್ತಿಹ ಕನಸಿನೊಳಂದುಂ
    ಹುತ್ತದೆ ಹೊರಬಂದು ಹಾವು ಸುತ್ತಿದುದೆನ್ನಂ |
    ಧುತ್ತೆಂದು ಪಟದ ಪರಶಿವನ
    ಕತ್ತಲೆ ಮೂಡಿತ್ತು ಕಾಣ ಸೂರ್ಯೋದಯದೊಳ್ ||

    ಕತ್ತಲೆ = ಕಂಠದಲ್ಲಿ (ಕಂಡದ್ದು – ಚಂದ್ರಮೌಳಿ ಯವರ ಕೃಪೆ)
    ( ರಾತ್ರಿ ಸ್ವಪ್ನದಲ್ಲಿ ನನ್ನನ್ನು ಸುತ್ತಿದಂತೆ ಕಂಡ ಸರ್ಪ ಬೆಳಗಾದಮೇಲೆ, ಪಟದಲ್ಲಿ ಶಿವನ ಕುತ್ತಿಗೆಯಲ್ಲಿ ಕಂಡ ಬೆರಗಿನ ಕಲ್ಪನೆ !)

  75. ಮತ್ತೊಂದು ಪ್ರಯತ್ನ. ತಪ್ಪುಗಳಿದ್ದಲ್ಲಿ ತೋರಬೇಕಾಗಿ ಪ್ರಾರ್ಥನೆ.

    ಸಂದರ್ಭ: ಸೆರೆಯಲ್ಲಿ ಖೈದಿ ತನ್ನ ಕಣ್ಣೋಟ ಕಳೆದುಕೊಂಡದ್ದು.
    ————————-
    ಹತ್ತು ಹಲವು ವರುಷ ಸೆರೆಯ
    ಸುತ್ತ ಹರಡಿದಂಧಕಾರದೊಳವನ ಕಣ್ಗಳ್
    ಹೊತ್ತಿನೊಡೆ ಕಳೆದು ಕಾಂತಿಯ
    ಕತ್ತಲೆ ಮೂಡಿತ್ತು ನೋಡು ಸೋರ್ಯೋದಯದೊಳ್

  76. ಅತ್ತೊಡೆ ಕಂಬನಿ ಪರಿದುದು
    ಸತ್ತೊಡುಸಿರ್ ನೀಗಿತಿದರೊಳೇನಾಶ್ಚರ್ಯಂ?
    ಗೊತ್ತಿರ್ಪುದನೇನ್ ಪೇಳ್ವುದು!
    ಕತ್ತಲೆ ಮೂಡಿತ್ತು ನೋಡಸೂರ್ಯೋದಯದೊಳ್

    ಅಸೂರ್ಯ- ಸೂರ್ಯನಿಲ್ಲದಿರುವಿಕೆ, ಕತ್ತಲು

    • ಅಮಮಾ!! ಪರಿಯೆಂತಿದು ಮೇಣ್
      ಸಮಸ್ಯೆಯಾ ಪಾದಮಾದುದೆಂತನ್ಯಮೆನಲ್|
      ಕಮನೀಯಕವಿತೆಯ ಬನದೆ
      ಸುಮಮೊಂದರಳ್ದುದೇನಪರ ಪರಿಮಳದೊಳ್||

      • ಅಮಮಾ!! ಪರಿಯೆಂತಿದು ಮೇಣ್
        ಸಮಸ್ಯೆಯಾ ಪಾದಮಾದುದೆಂತನ್ಯಮೆನಲ್|
        ಕಮನೀಯಕವಿತೆಯ ಬನದೆ
        ಸುಮಮೊಂದರಳ್ದುದೆ ಬೇರೆಯಾ ಪರಿಮಳದೊಳ್||
        (ಕ್ಷಮಿಸಿ, ಕೊನೆ ಸಾಲಿನ ಮಾತ್ರೆ ವ್ಯತ್ಯಾಸವಾಗಿತ್ತು)

    • ಮೂರ್ತಿಗಳೆ, ಪದ್ಯದ ಕೆಳಗಿನ ವಿವರಣೆಯಲ್ಲಿ ’ಅಸೂರ್ಯ’ ಎಂದು ಮಾತ್ರ ಹೇಳಿದ್ದೀರಿ; ’ಉದಯ’ವನ್ನೇ ಬಿಟ್ಟಿರಿ! ಅಸೂರ್ಯೋದಯದೊಳ್> ಸೂರ್ಯೋದಯವಲ್ಲದ ವೇಳೆಯಲ್ಲಿ> ಮಧ್ಯಾಹ್ನದೊಳ್ ಕತ್ತಲೆ ಮೂಡಿತ್ತು ಎಂದು ನಿಗಮನ ಮಾಡಬಹುದೆ?
      ಎಳೆಯಂ ಕೊಪ್ಪಲತೋಟಂ
      ಥಳುಕಿಂದವನಿಂದೆ ಗಿಟ್ಟಿಸುವಿರೈ ಶ್ಲಾಘಂ|
      ಬಳಿಯೆಮ್ಮಯ ನಡೆಯದಿದೈ
      ಪಳಗಿಹೆವೈ ನಾವುಮೀಪರಿಯ ತಂತ್ರದೊಳಂ||

      • ಪ್ರಸಾದರೆ- ಅಸೂರ್ಯೋದಯ ಅಂದರೆ ತಮಸ್ಸಿನ ಉದಯ ಅದು ಮಧ್ಯಾಹ್ನ ಹೇಗಾಯಿತು? ನಿಮ್ಮ ಕಂದದ ಮೂರನೆಯ ಪಾದದಲಿ ಛಂದಸ್ಸೆಡವಿದೆ. ತಿದ್ದಿರಿ

        ರಾ ಗಣೇಶರೂ ಮೆಚ್ಚಿದ್ದಾರಲ್ಲ. ಅವರೂ ನಿಮಗೆ ಕಿರಿಯರಿರಬೇಕು 🙂

        • ಗಣೇಶರು ಮೆಚ್ಚಿರುವುದು ಕೊಪ್ಪಲತೋಟರ ಪದ್ಯವನ್ನು 😉

          • ಅಹುದೇನ್ ಪ್ರಸಾದು ಅದರೊಳ
            ಗಿಹುದೆ ಚಮತ್ಕಾರಮೆನಗೆ ಕಂಡಿಲ್ಲಕಟಾ

        • ಕಂಡಂ ಕವಿ ರವಿ ಕಾಣ
          ದ್ದಂ ಡಂಬರಗೈಯಲೇಕೆ ನೀಮಾಂ ಪೇಳೈ 🙂

      • You have rectified the 3rd paada by the time I posted the reply.

  77. ಪೊತ್ತರೆಯೊಳ್ಕಂಗಳ ಮೇ-
    ಲೊತ್ತಿಟ್ಟಡಕಮದು ಕರಿಯ ಬಣ್ಣದೊಳಿರಲಾ |
    ಪೊತ್ತುಂ ಕರಿದೇ ಕಂಡಿರೆ,
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್ ||

    ಪೊತ್ತರೆ=ಪ್ರಾತಃಕಾಲ
    ಪೊತ್ತರೆಯೊಳ್ಕಂಗಳ =ಪೊತ್ತರೆಯೊಳ್+ಕಂಗಳ
    ಮೇಲೊತ್ತಿಟ್ಟಡಕಮದು = ಮೇಲೆ+ಒತ್ತಿ+ಇಟ್ಟ+ಅಡಕಂ+ಅದು
    ಮುಂಜಾನೆಯಲ್ಲಿ ಧರಿಸಿದ ಕನ್ನಡಕವು ಕಪ್ಪಿರುವುದರಿಂದ,ಆ ವೇಳೆಯು ಕತ್ತಲಾಗಿ ಕಂಡಿದೆಯೆಂಬ ಕಲ್ಪನೆ.

  78. ಇನ್ನೊಂದು ಪ್ರಯತ್ನ. ತಪ್ಪುಗಳಿದ್ದಲ್ಲಿ ತೋರಬೇಕಾಗಿ ಪ್ರಾರ್ಥನೆ.
    ಅತಿವೃಷ್ಟಿಯಲ್ಲಿ ರೈತನ ಪಾಡು:
    ——————————–
    ಸುತ್ತಲಿರುವ ತನ್ನ ನೆಲದಿ
    ಹೊತ್ತಿಗುಳಿಮೆಗೈದು ಕಷ್ಟದಿಂದ ಬೆಳೆಸಿದಾ
    ಬತ್ತವು ನಶಿಸಲು ಮಳೆಯಲಿ
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್

    ಅನಾವೃಷ್ಟಿಯಲ್ಲಿ ರೈತನ ಪಾಡು:
    ——————————–

    ಸ್ವತ್ತನ್ನಡವಿಟ್ಟು ಕೃಷಿಸೆ
    ಹೊತ್ತಿಗೆ ಮಳೆಬಾರದಾಗಲವ ಕೂ
    ಗುತ್ತ ನಡುಗಲಾ ನೋವಲಿ
    ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್

    • ಹಳೆಗನ್ನಡಮೊದವಿ ಬರಲ್
      ಕಳೆಗೊಳ್ಳುವುದಲ್ತೆ ಪದ್ಯಮೆಲ್ಲವುಮೀಗಳ್
      ಪಳತಾದೊಡಮಂತುಟೆ ರುಚಿ-
      ಯೊಳಕ್ಕು ಮಧುರತೆಯುಮೆಂಬರಾ ಮದಿರೆಯೊಳಂ||

      • ಆಹ! “ಪಳತಾದೊಡಮಂತುಟೆ ರುಚಿಯೊಳಕ್ಕು ಮಧುರತೆಯು| (ನಾನ್) ಮೆಂಬರ್ ಆ ಮದಿರೆಯೊಳಂ” ಎಂದಿರೆ?
        ತಿಳಿದುಂ ಸಂತಸಮಾದುದು
        ಗೆಳೆಯನೆ ನೀನೆಮ್ಮವೋಲೆ ಗೋಷ್ಟಿಗನೆಂದುಂ|
        ಎಳೆಯನೆ ಹರಿಸೈ ಪಾರ್ಷದ,
        ಹೊಳೆಯಂ ನಿನ್ನವೊಲು ಪಡ್ಡೆಮೆಂಬರ್ಶಿಪ್ಪಂ||
        (ಪಾರ್ಷದ=ಪರಿಷತ್ ಸದಸ್ಯ=ಮೆಂಬರ್)

        • ಅನುಭವಿಗಳ್ “ಪಳತಾದೊಡಂ ಅಂತುಟೆ ರುಚಿಯೊಳಕ್ಕು ಮಧುರತೆಯುಂ ಎಂಬರ್ ಆ ಮದಿರೆಯೊಳಂ|”

          ಅನುಭವಿಯಾನೆಂದವರಾರ್
          ಧ್ವನಿಯೊಳಮೆಲ್ಲಿರ್ಕುಮಿಂತು ಪೇಳಕಟಕಟಾ|

  79. ಮುತ್ತಿರೆ ಸಮಸ್ಯೆ ಸಾಲ್ಗಳ್
    ಬತ್ತಿರೆ ಭಾವಗಳ ಬಂಧವಿರುರೊಳ್ ನೊಂದಂ
    ದತ್ತಿರಲಾನುಂ, ಮನದೊಳ್
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್ |

    (ಸಮಸ್ಯೆಯ ಸಾಲಿಗೆ ಪದ್ಯರಚಿಸಲಾಗದ ವ್ಯಥೆಯಲ್ಲಿ)

  80. ಕೊನೆಗಾಣದೀ ಸಮಸ್ಯೆಗೆ ಪರಿಹಾರ ಹುಡುಕುವ ಮತ್ತೊಂದು ಯತ್ತ್ನ.

    ಮತ್ತರಳರ್ದಜಲಜದೊಳು
    ಮತ್ತೇರಿ ಮಲಗಿದ ದುಂಬಿ,ದಿನದಾಟದೊಲೆ
    ಳ್ಚೆತ್ತು ಗಮಿಸದಂತಾಗ
    ಲ್ಕತ್ತಲೆ ಮೂಡಿತ್ತು ನೋಡು ಸೂರ್ಯೋದಯದೊಳ್

  81. ಮತ್ತಾ ಸಾಲಿಗರಲ್ಲಲ –
    ವತ್ತುತೆ ಗೋಗೆರೆಯಲೀಯದವನಭಿಮಾನಂ
    ಕತ್ತದ ನೇಣಾತನ ಬಡ
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್ 🙁

    ಕತ್ತಲೆ = ಕತ್ತೊಳು

    • ರಾಮಚಂದ್ರ- ಸ್ಪಷ್ಟವಾಗ್ತಿಲ್ಲ ಅರ್ಥ.
      ಒಳ್ಗಲವತ್ತುತೆ?
      ಒಳಗೆ ಅನ್ನೋದಕ್ಕೆ ಒಳ್ಗೆ ಅಂದಿದ್ದರೆ ಅದು ಸರಿಯಲ್ಲ. ಅಲವರು ಪದದಿಂದ ಅಲವರುತೆ ಆಗೊತ್ತೆಯೆ ಹೊರತು, ಅಲವತ್ತುತೆ ಆಗೋಲ್ಲ.

      • ಅಲವತ್ತುಕೊಳ್ಳುವುದು ಎಂಬ ಉಪಯೋಗವಿದೆ – ಬೇಡಿಕೊಳ್ಳುವುದು ಎಂಬರ್ಥದಲ್ಲಿ
        ಒಳ್ಗೆ ಎಂಬುದನ್ನು ಹೊಸಗನ್ನ್ನಡದುಪಯೋಗದಿಂದ ಸವರಿಸಿದ್ದೇನೆ. ಇನ್ನೇನಾದರು ಹೊಳೆದರೆ ನೋಡುವೆ

      • ಗುರುತಿಸಿದ್ದೆ ರಾಮಚಂದ್ರ. ಆ ಅಲವತ್ತುಕೋ ಅನ್ನೋ ಪ್ರಯೋಗ ಅಲವರು ಸೊಲ್ಲಿನಿಂದಲೇ ಬಂದಿರುವುದು. ಅಳು ಅನ್ನೋ ಕ್ರಿಯಾಪದ ಅಳುತಾ ಆಗಬಹುದೆ ಹೊರತು ಅತ್ತುತ ಅಂತ ಹೇಗೆ ಆಗೋಲ್ವೋ ಹಾಗೆಯೆ ಅಲವರು ಅಲವರುತ ಆಗಬೇಕು, ಅಲವತ್ತುತ ಅಲ್ಲ. ಅಲವತ್ತುಕೊಳ್ಳೋದು ಅಂದರೆ, ಸಂಕಟಪಡುವುದು, ಅದನ್ನು ವ್ಯಕ್ತಪಡಿಸುವುದು, ಹಂಬಲಿಸುವುದು ಇತ್ಯಾದಿ ಅರ್ಥಗಳುಂಟು.

  82. ಮುತ್ತಿದ ರೋಷದೊಳರ್ಜುನ
    ಕೊತ್ತುವ ದಿನದೊಳ್ ಪ್ರತಿಜ್ಞೆಯಂ ಗೈದಿರೆ ಮೇಣ್
    ಮುತ್ತಯ್ದೆಗಮರಿಸತಿಗಂ
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್

  83. ಬತ್ತಳಿಕೆಯ ಬಾಣವುಬೆಂ
    ಬತ್ತಿರೆಕೊಲ್ಲಲ್ಕೆಶ್ರವಣಕುಮಾರಂ
    ಪೆತ್ತವರ ಕುರುಡು ಜೀವಕೆ
    ಕತ್ತಲು ಮೂಡಿತ್ತುನೋಡು ಸೂರ್ಯೋದಯದೊಳ್

    • ಬತ್ತಳಿಕೆಯ ಬಾಣವುಬೆಂ
      ಬತ್ತಿರೆಕೊಲ್ಲಲ್ಕೆಶ್ರವಣಕುಮಾರಂತನ್ನಾ
      ಪೆತ್ತವರ ಕುರುಡು ಜೀವಕೆ
      ಕತ್ತಲು ಮೂಡಿತ್ತುನೋಡು ಸೂರ್ಯೋದಯದೊಳ್

      There was a mistake in the the second line… corrected it..

  84. ಹೊತ್ತಿನೊಳೆದ್ದಂದಮ್ಮನು
    ಮುತ್ತಿಕ್ಕಿ ರಮಿಸೆನೆ ತಬ್ಬೆ ತೊಟ್ಟಿಲ ಕೂಸಂ |
    ಮುತ್ತಿಹ ಮುಂಗುರುಳಿಂ ಮುಂ-
    ಗತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್ ||
    (ಅಮ್ಮನಿಗೂ / ಕಂದನಿಗೂ!)

  85. ಬತ್ತಿಯದಾರಿದುದೆನೆ ನೋ-
    ಡುತ್ತಲೆ ಸರಿಪಡಿಪೆನೆಂದು ಕೈಯಿಕ್ಕುತೆ ಹಾ
    ಕಿತ್ತೆಂ ಫ್ಯೂಸ್ ತಂತಿಯನೇ
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್

  86. ಜಾಗಿಂಗು ಹೋದವಳು
    ರ್ಯಾಗಿಂಗೆ ಸಿಲುಕಿರಲು
    ಸಾಕೆಂದು ಜೀವನವ ತೊರೆಯೆ ಜಗವ
    ಹೆತ್ತವರ ಗೃಹದಿ ಕಂ
    ತಿತ್ತು ಜೀವಜಲ
    ಕತ್ತಲೆ ಮೂಡಿತ್ತು ನೋಡ ಸೂರ್ಯೋದಯದೊಳ್

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)