Jul 022011
 
ತಂಪು ದೇಶದಲೆಲ್ಲ ಹರಡಿರೆ
ಹಂಪೆಯತ್ತೆಡೆ ಪಯಣ ಹೊರಡೆನೆ
ಗುಂಪುಗೂಡಿತು ತುಂಬು ಹರುಷದಿ ಸಾನುರಾಗದಲಿ ||
ಪೆಂಪ ನಾಡಿನ ಕೆಂಪ ಸೆರೆಯೋ
ಸೊಂಪು ರಾಷ್ಟ್ರದ ಕಂಪ ನೆನಪೋ
ಕಂಪನವೊ ಸಮಹೃದಯರಲಿ ಗೆಳೆತನದ ಸೆಳೆತಗಳೋ ||

[ಇನ್ನೂ ಸೇರಿಸುವರಿದ್ದರೆ ಒಳ್ಳೆಯದು]

– ರಾಮಚಂದ್ರ

  2 Responses to “ಹಂಪೆಗೆ ಪಯಣ”

  1. ಭಾಮಿನಿಯಲ್ಲಿ ಆಸಕ್ತಿ ಹುಟ್ಟಿಸಿದ ರಾಮಚಂದ್ರರವರಿಗೆ ಅರ್ಪಣೆ

    ಅಶೋಕ ನಮನ
    (ಭಾಮಿನೀ ಷಟ್ಪದಿಯಲ್ಲಿ)

    ಮೇದಿಯನಾಳಿ ಬಹುಕಾಲ ಮೆ
    ರೆದರು ಭೂತಳದಲ್ಲಿ ಕಣ್ಮರೆ
    ಯಾದರು ಹಲವು ಚಕ್ರವರ್ತಿಗಳು ನೆನಪಾಗದೆ
    ಆದರಿಸುವರು ಅಶೋಕನೃಪ ಜ
    ಗದೊಳು ಜನರನವರತ ನೀ ಮಾ
    ಡಿದಾ ಸತ್ಕಾರ್ಯವನು ನಿನ್ನಾ ದೂರದೃಷ್ಠಿಯನು (1)

    ಹೊತ್ತ ಕೈದುವ ಬಿಸುಟೆ ನೀ ಭೀ
    ಭತ್ಸ ಕಳಿಂಗ ಕದನದಿ ನೊಂದೆ
    ಸತ್ತ ಮುಗ್ಧರಿಗಾಗಿ ಪಶ್ಚಾತ್ತಾಪ ಬೇಗೆಯಲಿ
    ಕೆತ್ತಿ ನಿಲಿಸಿದೆ ಸ್ತಂಭಶಾಸನ
    ಒತ್ತಿ ಹೇಳಿದೆ ನೀತಿಧರ್ಮವ
    ಬಿತ್ತಿ ಬೆಳೆಸಿದೆ ಮಾನವತೆಯನು ಮನುಜ ಹೃದಯದಲಿ (2)

    ಬದ್ಧನಾಗಿಹೆ ಜಗದ ಒಳಿತಿಗೆ
    ಬೌದ್ಧಧರ್ಮದ ನೀತಿಯರುಹಲು
    ಬುದ್ಧ ಧಮ್ಮಂ ಸಂಘಗಳಲ್ಲಿ ಕಂಡೆ ಸತ್ಯವನು
    ಸಿದ್ದನಾದೆ ಹರಡಲು ಲೋಕಕೆ
    ಸದ್ಧಮ ಮತದ ವಿಚಾರಗಳನು
    ಶುದ್ಧ ಮನಸಲಿ ಸಾಧಿಸಿದೆ ನೀ ಧರ್ಮಕಾರ್ಯವನು (3)

    ಧರ್ಮಕಾರಣವನರುಹಿ ಜಗಕೆ
    ಕರ್ಮಯೋಗದಿ ನಡೆವ ರೀತಿಯ
    ಮರ್ಮವನು ನೀ ತಿಳುಹಿದೆ ಸರಳ ಭಾಷೆಯಲಿ ಜನಕೆ
    ನಿರ್ಮಲ ಭಾವದಲಿಯೆ ಯೋಚಿಸಿ
    ಸರ್ವ ಚರಾಚರಗಳಿಗೊಳಿತನು
    ಧರ್ಮನೀತಿಯಲಿ ಬಾಳಿದಾ ನಿನಗೆ ಜಗದ ನಮನ (4)

    – ಡಾ. ಎಸ್. ಶಿವರಾಂ

    • ಡಾ|| ಶಿವರಾಮರಿಗೆ ಪದ್ಯಪಾನಕ್ಕೆ ಸ್ವಾಗತ. ಸ್ವಯಂಪ್ರೇರಿತ ಮೊದ-ಮೊದಲ ಪ್ರಯತ್ನವು ಸ್ತುತ್ಯ, ಅಭಿನಂದನೀಯ. ಹಲಕೆಲವು ದೋಷಗಳಿವೆ. ದಯವಿಟ್ಟು ಈ ಮೇಲೆ ’ಪದ್ಯವಿದ್ಯೆ’ಯಲ್ಲಿರುವ ವಿಡಿಯೊ ಪಾಠಗಳನ್ನು ಗಮನಿಸಿಕೊಂದು ಮತ್ತೆ ಪ್ರಯತ್ನಿಸಿ. ಬಿಡದಿರಿ.

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)