Jul 082011
 

ಲಿಂಗ ಪಂಪಾಪತಿಯದಾಲಯ
ತುಂಗಭದ್ರೆಯ ಬಲದ ತಟದಲಿ
ಭಂಗಗೊಂಡಿಹ ಹಂಪೆಯೂರಲಿ ಕಂಡು ನಿಂದಿಹುದು ||
ಸಿಂಗ ಸಂಗಮ ರಾಯರಾಳಿದ
ಸಾಂಗ ವಿಜಯದ ನಗರ ಮೆರುಗಿದ
ಜಂಘ ಕಡಿದಾ, ಶೌರ್ಯ ನೀಗಿದ ಪಾಳು ಸಾಕ್ಷಿಯಲಿ || ೧ ||

ಎತ್ತ ನೋಡಿದರತ್ತ ಗುಡಿಗಳ
ಕೆತ್ತನೆಯು ಮುಕ್ಕಾದ ನೋಟವೆ
ಸತ್ತ ನಗರದ ಶೋಭೆಯಿಂದಿಗು ಮುದವ ತರಲಹುದೇ? ||
ಎತ್ತ ಮಹಿಷರ ಭವ್ಯದರಮನೆ ?
ಮತ್ತೆ ಅಂದಿನ ಸಿರಿತನಾದಿಗ –
ಳೆತ್ತಣಿನ ಕಲ್ಮಣ್ಣು ಪೇಳವೆ ಗತದ ನಲ್ಗತೆಯಾ? || ೨ ||

ಕತ್ತಲಿನ ಚಳಿ ಬೆಳಗಿನುರಿಯಾ
ಸುತ್ತಲೂ ಬಿರುಸಾದ ಡಕ್ಕಣ
ವೆತ್ತಲೆತ್ತಲೊ ಬಂಡೆಗಳ ವಿನ್ಯಾಸದಾಕೃತಿಗಳ್ ||
ಭತ್ತ ಕಬ್ಬಿನ ಬೆಳೆಗೆ ಹಸಿರ –
ನ್ನಿತ್ತುದಾಕಾಲುವೆಯ ತುಂಗಾ
ಮತ್ತೆ ಶಿಲ್ಪದ ಕಾಯಕದೊಳಿಂದಾದ ಸುಂದರತೆ || ೩ ||

ಪಾಳು ಪಂಪೆಯ ಪೂರ್ಣ ನೋಟಕೆ
ಗಾಳಿ ಹಿತದಾ ಸಂಜೆ ಸಮಯ
ಲೇಳು ನಡೆ ಮಾತಂಗ ಪರ್ವತವೇರು ಹುರುಪಿನಲಿ ||
ಕಾಲ ಪಥದಲಿ ಮಳಲೊಳಿಂಗಿದ
ಗೋಳುಗಟ್ಟಿದ ಸಿರಿಯ ಸೊಬಗಾ
ಬೀಳಲೆರಗುವ ರವಿಯು ದೊರಕಿಸೊ ನೋಟ ದಿವ್ಯಮಯ || ೪ ||

ನೈರುತದಲೊಂಬತ್ತು ಮೈಲಿಗೆ
ವೈರಿಗಳ ತಡೆಗಾಗಿ ದುರ್ಗವು
ದ್ವಾರವಾಗಮಕಾಗಿಯಿದ್ದುದು ಶಕ್ತ ರಕ್ಷೆಯಲಿ ||
ಪಾರುಪತ್ಯದ ತಾಣ ಹೊರಗು
ತ್ತರದಲಾನೆಯಗುಂದಿಯಿದ್ದುದು
ಸೂರಿ ಮೂಡುವ ದಿಕ್ಕಿನೆಡೆ ಕಂಪಿಲಿಯ ರಕ್ಷಣೆಯು || ೫ ||

ಮಾಗದಾ ಯೌವನದಲೊಲಿದಾ
ನಾಗಲಾದೇವಿಯನೆ ನಂತರ
ದೇಗುಲದೆ ವರಿಸಿದನು ಕೃಷ್ಣನು ರಾಜ್ಯದಾಧಿಪನು ||
ಈಗಿನಾ ಹೊಸಪೇಟೆ ನಗರವು
ನಾಗಲಾಪುರವೆಂದು, ಮಡದಿಯ
ಭೋಗದಿಂ ಕಟ್ಟಿದ್ದ ಪುರವಾಗಿತ್ತು ಪ್ರೀತಿಯಲಿ || ೬ ||

ನಾಗಲಾಪುರದಗ್ನಿಮೂಲೆಗೆ [ದಾಗ್ನೆಯದಲಿs]
ಸಾಗಿದೊಡೆ ಸಿಕ್ಕುವುದು ಕೊಂಡವು
ಜಾಗ ಮೇಲಿನ ಹದದಿ ಜಂಬೂನಾಥನಾಲಯವು ||
ಯೋಗವಿಲ್ಲಿಯ ನೀರ ಬುಗ್ಗೆಯು
ರೋಗಿಗಳ ಬಲು ರೋಗಗಳ ಗುಣ –
ವಾಗಿಸುವುದೆಂದೆಂಬ ಧೃಢ ವಿಶ್ವಾಸ ಬಹು ಜನಕೆ || ೭ ||

ಹೋಗೆ ಹಂಪೆಯ ಕಡೆಗೆ ರಸ್ತೆಯ
ದಾಗ ಬಯಲಷ್ಟಗಲವಿರ್ದುದು
ಬಾಗಿದೆಡೆ ಮಾರುತ್ತಲಿದ್ದರು ಸಕಲ ವಸ್ತುಗಳ ||
ಸಾಗೆ ನಾಲಕು ಮೈಲು ದೂರದಿ
ಬೇಗೆ ದಾರಿಯ ಹೋಕರೆಲ್ಲರ
ನೀಗೆ ಕಟ್ಟಿದ ಬಾವಿಯಿರ್ಪುದು ಸೂಳೆವೆಸರಿನಲಿ || ೮ ||

ಕಮಲಪುರದಾ ಹತ್ತಿರದಲೊಂ –
ದು ಮಡುವಿರ್ಪುದು ಬದುವ ಬದಿಯಲಿ
ವಿಮಲ ನೀರಲಿ ಮೀನುಗಳು ಮತ್ತಿತರ ಜಲಜಗಳು ||
ಅಮರಿಸಿದುದಾ ರಾಯ ಕಾಲುವೆ
ಗಮಿಸಿ ತುಂಗೆಯ, ಮಡುವ ಮಡಿಲಿಗೆ
ಸಮದಿ ನೀರಾವರಿಯು ಐನೂರೆಕರೆಗಳ ಬೆಳೆಗೆ || ೯ ||

ಗುಡಿಯದದು ಪಟ್ಟಾಭಿರಾಮನ
ನಡೆಯಲರ್ಧದ ಮೈಲು ಪೂರ್ವಕೆ
ಕಡೆಗೆ ಪೋಳಿಗ ಕೋಟೆಯದು ಕಾಣ್ ಚೂರು ಪಾರುಗಳು ||
ಎಡಕೆ ಸಾಗುವ ಹಂಪೆ ರಸ್ತೆಯ
ಕಡೆಗೆ ನಡೆದರೆ ಬಹಳ ಚೋದಗ
ಗುಡಿಗಳೂ ಗೋಪುರಗಳೂ ಕಟ್ಟಡಗಳಟ್ಟಗಳು || ೧೦ ||

[ಇನ್ನೂ ಮುಂದುವರಿಯಲಿದೆ … :-)]

– ರಾಮಚಂದ್ರ

  4 Responses to “ಹಂಪೆ – ೧”

  1. Ram,

    ಅದ್ಭುತ, ತುಂಬಾ ಚೆನ್ನಾಗಿದೆ… ಭಾಗ ೨ ಎದಿರುನೋದುತ್ತಿದ್ದೇವೆ 🙂

  2. ಶ್ರೀಷ – ನಿಮ್ಮ ಮೆಚ್ಚುಗೆ ಹಾಗು ಸಲಹೆಗೆ ಧನ್ಯವಾದ. ನಿಮ್ಮ ಸಲಹೆಯ ಮೇರೆಗೆ, ಸಣ್ಣ ತೊಡಕುಗಳನ್ನು ಸರಿ ಮಾಡಿದ್ದೇನೆ (ಸಂಧಿ ಹಾಗು ಕಳೆದ ಮಾತ್ರೆ). ಬದಲಾವಣೆಗಳು ನೀಲಿ ಬಣ್ಣದಲ್ಲಿವೆ.
    ಸೋಮ – ಧನ್ಯವಾದ. ಭಾಗ -೨, ೩ ಇತ್ಯಾದಿ [:-)] ಇನ್ನೂ ಮಾಡಿಲ್ಲ. ಮಾಡಬೇಕು.

  3. ವಂದ್ಯ ವಿದ್ಯಾರಣ್ಯ ರನುಗ್ರಹ- (ಶಿಥಿಲ ದ್ವಿತ್ವ 🙁 ಬಂದ್ಬಿಟ್ಟಿದೆ)
    ದಿಂದೆ ಶತಮಾನಂಗಳೆರೆಡೊಳ-
    ಗಿಂದು, ಸೂರ್ಯ, ವರಾಹ, ಖಡ್ಗದ ಲಾಂಛನವು ಮೆರೆಯೆ
    ಹಿಂದೂ ಸಾಮ್ರಾಜ್ಯವನು ಜವನರ
    ಹಿಂದೆಯಟ್ಟುತ ಕಟ್ಟೆ ರಾಯರು
    ಚಂದ ಬೆಳೆಯಿತು ಶಿಲ್ಪಕಲೆ ಸಾಹಿತ್ಯ ಸಂಪತ್ತು

  4. ಕೊನೆಗೆ ೨ ಪದ್ಯಗಳನ್ನು ಕೂಡಿಸಿದ್ದೇನೆ (೯ ಹಾಗೂ ೧೦)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)