Sep 012011
ನಾವುಮಿತ್ರರು ಪಯಣ ಬೆಳೆಸಿರೆ
ಭಾವ ಕಲಕುವ ಸಾಲು ಕಂಡೆವು
“ರಾವಣಾಗಮನವನುಕಾದಳುಸೀತೆಕಾತುರದಿ”
ತಾವು ಕಾವ್ಯದಿ ಚತುರ ಮತಿಗಳು
ಸಾವಕಾಶದಲಿದನು ಚಿಂತಿಸಿ
ಬೇವಸಾಲಿಗೆಬೆಲ್ಲಬೆರೆಸುತಹಿತವನುಣಿಸುವಿರಾ?
ಭಾಮಿನಿ ಕೊನೆ ಸಾಲು – “ರಾವಣಾಗಮನವನುಕಾದಳುಸೀತೆಕಾತುರದಿ”
ನಾವುಮಿತ್ರರು ಪಯಣ ಬೆಳೆಸಿರೆ
ಭಾವ ಕಲಕುವ ಸಾಲು ಕಂಡೆವು
“ರಾವಣಾಗಮನವನುಕಾದಳುಸೀತೆಕಾತುರದಿ”
ತಾವು ಕಾವ್ಯದಿ ಚತುರ ಮತಿಗಳು
ಸಾವಕಾಶದಲಿದನು ಚಿಂತಿಸಿ
ಬೇವಸಾಲಿಗೆಬೆಲ್ಲಬೆರೆಸುತಹಿತವನುಣಿಸುವಿರಾ?
ಭಾಮಿನಿ ಕೊನೆ ಸಾಲು – “ರಾವಣಾಗಮನವನುಕಾದಳುಸೀತೆಕಾತುರದಿ”
ರಾವಣನ ಸೆರೆಯಿಂದ ಬಿಡುಗಡೆ
ಯಾವಕಾಲಕೆ, ರಾಮನಿಲ್ಲದ
ಜೀವನವಿದೇಕೆನುತ ಜಾನಕಿ ಶಮವಸಾಧಿಸುತ
ಯಾವ ಮಾಸ ದುಪಾಸನೆಯು ಬಹು
ಪಾವನವದೆಂದೆಣಿಸಿ ಧ್ಯಾನದಿ
ಶ್ರಾವಣಾಗಮನವನುಕಾದಳು ಸೀತೆ ಕಾತುರದಿ
ಆವುದೋ ಮೃಗದಾಸೆ ಮನದೊಳು
ಕಾವನೆಬ್ಬಿಸೆ ಕಳಿಸೆ ಪತಿಯಿನ
ನೋವಿನುದ್ಗಾರದಲಿ ಮೈದುನ ರಕ್ಷಣೆಯು ಕಳೆಯಲ್
ಸೇವಿಸೆನೆ ಕದ್ದೊಯ್ದ ಕೇಡಿಗ
ಜೀವ ಹರೆಸುವ ರಾಮಯುದ್ಧಕೆ
ರಾವಣಾಗಮನವನುಕಾದಳುಸೀತೆಕಾತುರದಿ
ದೈವನಿಯತಿಯು ದಾಟಲರಿದೆನೆ
ಸಾವತರೆ ವೇದವತಿ ಶಾಪದ
ಭಾವ ನಾರೀರೂಪಮೃತ್ಯುವೊ ಯಜ್ಞದೀಕ್ಷಿತಳೋ
ಪಾವಕವೊ ಪಾಪಾಂಧಕಾರವ
ದಾವರಿಸಿದಪಮೃತ್ಯುಕೂಪಕೆ
ರಾವಣಾಗಮನವನುಕಾದಳು ಸೀತೆ ಕಾತುರದಿ
ಚಂದ್ರಮೌಳಿಯವರ ಎರಡೂ ಬಗೆಯ ಪರಿಹಾರಗಳೂ ತುಂಬಾ ಚೆನ್ನಾಗಿವೆ…ಮೊದಲ ಪರಿಹಾರಕ್ರಮದಲ್ಲಿ ಬಹಳ ಒಳ್ಳೆಯ ಕೀಲಕಾಕ್ಷರದ ಪ್ರಯೋಗವಿದ್ದರೆ ಎರಡನೆಯದರಲ್ಲಿ ಅತಿಸುಂದರಕಾವ್ಯಕಲ್ಪನೆಯಿದೆ. ಸೋಮನ ಪರಿಹಾರದ ಕಾವ್ಯತ್ವವೂ ಗಮನಾರ್ಹ. ಇಲ್ಲಿ ಲಕ್ಷಣಾವೃತ್ತಿಯ ಸೊಗಸಾದ ಬಳಕೆಯ ಕಾರಣ ನುಡಿಗಟ್ಟಿನ ಬೆಡಗು ರಂಜಿಸಿದೆ. ಒಟ್ಟಿನಲ್ಲಿ ಇಂಥ ಪದ್ಯಗಳು ದಿಟವಾಗಿ ವಾಣೀಭೂಷಣಗಳು.
ಯಾವ ಪರಿಯಲಿ ವಾಯು ಪುತ್ರನು
ನೋವ ತಂದಿಹ ಲಂಕಪುರಿಗೆಂ
ಕಾವಲಿನ ರಕ್ಕಸಿಯರರುಹಿರೆ ಶೋಕವನದಲ್ಲಿ |
ಗರ್ವಮದದಮಲಿನಲಿ ಬೀಗುವ –
ತೀವಹಮ್ಮಿಳಿದಿಹುದ ಕಾಣಲು
ರಾವಣಾಗಮನವನುಕಾದಳು ಸೀತೆ ಕಾತುರದಿ ||
ಮೂರನೇ ಸಾಲಿನಲ್ಲೇ ಪರಿಹಾರವಿದೆ – ಸಹಕರಿಸಬೇಕು ::
ಸಾವು ಇಂದಿರಜಿತನನಪ್ಪಲು
ದೀವಸದ ಕಾಳಗದಿ ಮಡಿದಾ
ರಾವಣಾಗಮನವನುಕಾದಳು ಸೀತೆ ಕಾತುರದಿ |
ರಾವಣಾಂತಕ ಯುಧ್ಧದಲಿ ಮೆರೆ –
ದೀವ ತನ ಮನಸಿನದಕಾಂಕ್ಷೆಯ
ಭಾವದುನ್ಮತ್ತೆಯಲಿ ಕಾದಳು ನೋವ ಪರಿಹರಿಸೆ ||
ದೀವಸ = ಧೈರ್ಯ, ಕೆಚ್ಚು
ಚಂದ್ರಮೌಳಿಯವರೆ, ತುಂಬಾ ಸುಂದರವಾದ ಪರಿಹಾರಗಳನ್ನು ಸೂಚಿಸಿದ್ದೀರಿ. ಮೊದಲ ಪರಿಹಾರವನ್ನಂತೂ, ಮೂರು ನಾಲ್ಕು ಸಲ ನನ್ನಷ್ಟಕ್ಕೆ ನಾನೇ ಹಾಡಿಕೊಂಡೆ. ತುಂಬಾ ಕರುಣ ಭಾವದಿಂದ ತುಂಬಿದೆ. ಸೋಮ ಮತ್ತು ರಾಮಚಂದ್ರರ ಪರಿಹಾರಗಳೂ ಮನೋಜ್ಞವಾಗಿದೆ. ಗಣೇಶ ಚತುರ್ಥಿಯಂದು ಕಾವ್ಯಶಿವೆಯ ಮಗನಾದ ಗಣೇಶರ ಹಿತವಚನ ದೊರೆತಿರುವುದು ಕಾವ್ಯ ಕುತೂಹಲಿಗಳಲ್ಲಿ ಇನ್ನಷ್ಟು ಉತ್ಸಾಹ ತುಂಬಲಿ. ಇನ್ನಷ್ಟು ಜನರಿಂದ ಇನ್ನಷ್ಟು ಪರಿಹಾರಕ್ಕಾಗಿ ಕಾಯುತ್ತಿರುವೆ.
ಉತ್ತಮವಾದ ಸಮಸ್ಯೆಯನ್ನು ಕೊಟ್ಟ ರವಿಂದ್ರರಿಗೂ ಪ್ರೊತ್ಸಾಹಕ ನುಡಿಗಳಿಂದ ಮಾರ್ಗದರ್ಶನ ನೀಡುತ್ತಿರುವ ವಾಣೀವಾಗ್ವಿಭೂಷಣರಿಗೂ ಧನ್ಯವಾದಗಳು.
ಯಾವ ಕಥೆ ಸಿತಾಚರಿತೆ ರಾ
ಮಾವತಾರದ ಮುಖ್ಯ ತಿರುವಿನ
ಠಾವು ಸಿತಾಹರಣ ಕೀಲಕ ಸನ್ನಿವೇಶವದೊ
ಆ ವಿಶೇಷವನಾದಿಲಕ್ಷ್ಮಿ ವಿ
ಭಾವ ರಂಗದಿ ನೋಡಿ ಬಾಹ್ಯದಿ
ರಾವಣಾಗಮನವನುಕಾದಳು ಸೀತೆ ಕಾತುರದಿ
ಪಾವನಿಯು ಸಂದೇಶ ತರೆ ಖಳ
ರಾವಣಾಂತ್ಯವ ರಾಮದರ್ಶನ
ಭಾವಿತವ ಹರ್ಷಾಂಬುರಾಶಿಯ ಮಾತೆ ಸುಸ್ನಾತೆ
ಏವಮಳಿದುತ್ಸಾಹದಲಿ ರಾ
ಜೀವನೇತ್ರ ಸುಗಾತ್ರನ ವಿಜಿತ
ರಾವಣಾಗಮನವನುಕಾದಳು ಸೀತೆ ಕಾತುರದಿ
ಚಂದ್ರಮೌಳಿಯವರ ನಾಲ್ಕೂ ಪರಿಹಾರಗಳು ಚೆನ್ನಾಗಿವೆ. ರಾಮಚಂದ್ರರ 'ಒಬ್ಬ ಕಪಿಯಿಂದ ಸೋಕ್ಕಿಳಿದಿರುವ ರಾವಣನ ನೋಡುವ ಕಾತುರ' ಎಂಬ ಪರಿಹಾರ ಚೆನ್ನಾಗಿದೆ. ಅವಧಾನಿಯವರ ಔದಾರ್ಯದ ಮಾತುಗಳು ನಮ್ಮೆಲ್ಲರ ಉತ್ಸಾಹವನ್ನು ಇಮ್ಮಡಿಸುತ್ತದೆ. ಒಳ್ಳೆಯ ಸಮಸ್ಯೆ ಕೊಟ್ಟ ರವೀಂದ್ರರಿಗೆ ಧನ್ಯವಾದಗಳು 🙂
ಸೀತೆಯನ್ನು ಮಂಡೋದರಿ ಅಶೋಕವನದಲ್ಲಿ ನೋಡಿದ್ದರೆ ಈ ಸಂಧರ್ಭ ಬರಬಹುದು… ಈ ರೀತಿ ಮೂಲಕ್ಕೆ ಅಡ್ಡಿಬರದಂತೆ ಸ್ವಲ್ಪ ಸ್ವಾತಂತ್ರ್ಯ ತೆಗೆದುಕೊಳ್ಳಬಹುದೆ?
ಆವಲಂಕೆಯ ಸಿರಿಗು ಒಲಿಯದೆ
ಸಾವೆ ಮಿಗಿಲಪವಾದಕೆನೆ ಬೆಂ-
ಗಾವಲಾದಳು ಜಾನಕಿಗೆ ಮಂಡೋದರಿಯು ವನದೊಳ್
ಭಾವುಕಳು ಪತಿಗರಹಿಕೊಳುವೆನು
ಪಾವನಿಯೆ ಬಿಡು ದುಗುಡಮನವೆನೆ
ರಾವಣಾಗಮನವನುಕಾದಳು ಸೀತೆ ಕಾತುರದಿ
ವನದೊಳ್ = ಅಶೋಕವನದೊಳ್
ಮೇಲಿನ ಪರಿಹಾರದಲ್ಲಿ "ಮಂಡೋದರಿಯು ಸೀತೆಯನ್ನು ಅಶೋಕವನದಲ್ಲಿ ನೋಡಿ, ಅವಳ ದುಃಖಕ್ಕೆ ಸ್ಪಂದಿಸಿದಾಗ, ಸೀತೆಯ ಮನಸ್ಸಿನಲ್ಲಿ ಬಿಡುಗಡೆಯ ಮರೀಚಿಕೆಯೊಂದು ಸುಳಿಯಿತು" ಎಂದಷ್ಟೇ ಹೇಳಿದ್ದೇನೆ. ಈ ಸ್ವಾತಂತ್ರ್ಯಗಳು ಸಾಧುವಲ್ಲದಿದ್ದರೆ ಕ್ಷಮಯಿರಲಿ
ಕಾವ್ಯದ ಮೂಲ ಕಥೆ, ಸನ್ನಿವೇಶಗಳಿಗೆ, ಪಾತ್ರಸ್ವಭಾವಗಳ ಮೂಲ ಚಿತ್ರಣಕ್ಕೆ, ಒಟ್ಟಾರೆ ರಸಪೋಷಣೆಗೆ ಅನುಕೂಲವಾದ ಎಲ್ಲಾ ಸ್ವಾತಂತ್ರ್ಯಗಳೂ ಸ್ವಾಗತಾರ್ಹ. ಕಾಳಿದಾಸಾದಿಗಳೇ ಈ ಮೇಲ್ಪಂಕ್ತಿಯನ್ನು ತೋರಿಸಿಕೊಟ್ಟಿದ್ದಾರೆ. ಪ್ರಾಚೀನ ಕಾವ್ಯಾಧಾರಿತ ಸಮಸ್ಯಾಪೂರಣಕ್ಕೆ, ಅರ್ಥಪುಷ್ಟಿಗಾಗಿ ಕೆಲವು ಪೌರಾಣಿಕ ಕಟ್ಟುಪಾಡುಗಳಿರುತ್ತವೆ. ಒಂದೇಪದ್ಯದಲ್ಲಿ ಹೊಸತೊಂದನ್ನು ಗೊಂದಲವಿಲ್ಲದ ರೀತಿಯಲ್ಲಿ ಕಟ್ಟಿಡುವುದೇ ಸವಾಲು. ನಮ್ಮ ಯುವಪೀಳಿಗೆ ಇಂಥ ಪ್ರಯತ್ನಗಳನ್ನು ಮಾಡುತ್ತಿರುವುದು ನನಗೆ ಬಹಳ ಸಂತಸ ತಂದಿದೆ. ರಸಸೃಷ್ಟಿ, ಹೊಸ ಆಯಾಮಗಳನ್ನು ಪಡೆದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂಬುದು, ಇಂದಿನ ಸಾಹಿತ್ಯಿಕ ಗೊಂದಲಮಯವಾತಾವರಣದಲ್ಲಿ, ಸಮಾಧಾನ ತರುವ ಸಂಗತಿ
ಶ್ರಾವಣದಿ ನಡೆದೊಂದು ದಿನ ರಾ –
ಮಾವತಾರದ ನಾಟಕದಿ ರಾ –
ಜೀವನಾ ಕರೆ ಕೇಳಿ ಲಕ್ಷ್ಮಣನಟ್ಟಿಯಾಗಿತ್ತು |
ಸಾವಕಾಶದೆ ಮಾತು ಮುಗಿದಿ –
ನ್ನಾವ ಕೆಲಸವದಿಲ್ಲ ರಂಗದಿ,
ರಾವಣಾಗಮನವನು ಕಾದಳು ಸೀತೆ ಕಾತುರದಿ ||
ಸಾವಕಾಶದಿ ಬಂದಿಳಿದೇಕ
ಮೇವ ರಾಮನನುಚರ ಲಂಕೆಗೆ
ಕಾವನಿಟ್ಟೊಡೆ, ಸೀತೆದೇವಿಯು ಭರವಸೆಯ ತಳೆದು|
ನೋವ ಮರೆಯುತ, ಪತಿಯ ಸಂಗಡ
ಸಾವಿರದಿ ಬರಲಿರುವ ವಾನರ
ರಾವಣಾಗಮನವನು ಕಾದಳು ಸೀತೆ ಕಾತುರದಿ||
ಇಲ್ಲಿ ರಾವಣ = ಗರ್ಜನೆ ಎಂಬ ಅರ್ಥದಲ್ಲಿ ಉಪಯೋಗಿಸಿದ್ದೇನೆ.
(http://dsal.uchicago.edu/cgi-bin/philologic/getobject.pl?c.5:1:133.apte)
ಚಂದ್ರಮೌಳಿಯವರೇ,
ಗೊಂದಲ ಪರಿಹರಿಸಿದ್ದಕ್ಕೆ ಧನ್ಯವಾದಗಳು 🙂
ರಾಮ್, ನಾಟಕದಲ್ಲಿ ಸೀತೆ ಪಾತ್ರಧಾರಿ ರಾವಣಾಗಮನವನ್ನು ಕಾತುರದಿಂದ ಕಾಯುವ ಪರಿಹಾರ ಚೆನ್ನಾಗಿದೆ… ಅದರಲ್ಲೂ
"ಸಾವಕಾಶದೆ ಮಾತು ಮುಗಿದಿನ್ನಾವ ಕೆಲಸವದಿಲ್ಲ ರಂಗದಿ" ಎಂದಾಗ ಮುಂದಿನ ಕಾತುರತೆ ಇರುವುದು ಬಹಳ ನೈಜ… ತುಂಬಾ ಇಷ್ಟವಾಯಿತು 🙂
ಹೊಳ್ಳ, ರಾವಣ = ಘರ್ಜನೆ ಗೊತ್ತಿರಲಿಲ್ಲ, ಪರಿಹಾರ ಚೆನ್ನಾಗಿದೆ 🙂
ವ್ಹಾವೆನದಿರಲು ಸಾಧ್ಯವೆ ವಿಧಿಯ
ಲೇವಡಿಗೆ, ಪುರದಸಿರಿ ತೊರೆಯಲ
ತೀವ ಶಮವನು ತೋರಿದಾಕೆಗೆ ಬುದ್ಧಿ ಮಂಕಾಯ್ತೇ|
ದೇವಲೀಲೆಯ ರಂಗ ತಾಣದಿ
ಕಾವಲಿರುವನ ಜರಿದು ನಿಂದಿಸಿ
ರಾವಣಾಗಮನವನು ಕಾದಳು ಸೀತೆ ಕಾತುರದಿ||
ರಾಮಚಂದ್ರರ ’ನಾಟಕೀಯ’ ಪೂರಣ ಸೊಗಸಾಗಿದೆ. ರವೀಂದ್ರರ ಕಪಿಘರ್ಜನೆಯ ಪೂರಣ ಸ್ವಾರಸ್ಯಕರ,ಇಲ್ಲಿ, ’ಸಾವಕಾಶದಿ ಬಂದಿಳಿದೇಕ’ ಸರಿಪಡಿಸಬೇಕಿದೆ. ’ಳಿದೇಕ’ ಜಗಣ ವಾಗುತ್ತದೆ. ರವೀಂದ್ರರ ಇನ್ನೊಂದ ಪೂರಣದಲ್ಲಿ, ವ್ಹಾವ್ ನವ್ಯಪದ ಶೈನಿಸಿದೆ. ಇಲ್ಲಿ ಜಯವಿಜಯರ ಶಾಪಪ್ರಸ್ತಾಪ ಬಂದಂತಿದೆ. ನನ್ನ ಬುದ್ಧಿ ಮಂಕಾಯ್ತೋ? ಪೂರಣದ ಸ್ವಾರಸ್ಯ? ಜರಿದು ನಿಂದಿಸಿದ್ದು ಸನಕಾದಿಗಳು, ಸೀತೆಯತಪ್ಪೇನು?
ಚಂದ್ರಮೌಳಿಯವರೆ, ಏನೋ ಬರೆಯಲಿಕ್ಕೆ ಹೋಗಿ ಏನೋ ಆಗಿದೆ. ಇಲ್ಲಿ, ಕಾವಲಿರುವವನು ಲಕ್ಶ್ಮಣ. ವಿಧಿ ಮುನಿದಾಗ, ಸೀತೆ ಅವಿವೇಕದಿಂದ ಈ ಪರಿಸ್ಥಿತಿ ತಂದುಕೊಂಡಳು ಅಂಥ ಬರೆಯುವುದು ಪ್ರಯತ್ನ ವಾಗಿತ್ತು.
ಇನ್ನು ಜಗಣನಿಂದ ತಪ್ಪಿಸಿಕೊಳ್ಳಲು,
ಸಾವಕಾಶದಿ ಬಂದಿಳಿದ ಪತಿ – ದೇವನನುಚರ ಹನುಮ ಲಂಕೆಗೆ
ಅಂಥ ಮಾಡಬಹುದನಿಸುತ್ತದೆ.
ಈ ಪರಿಯೊಳುದ್ದಾಮರೂಪದಿ
ಭಾಪೆನಲು ಕವಿತಾತಸಿಕರು-
ದ್ದೀಪಿಸಿರೆ ನವನವಲಕಲ್ಪನಶಿಲ್ಪನಗಳೆನಿತೋ
ಸ್ತೂಪಿಸುತ್ತಿಹ ವರಸಮಸ್ಯಾ-
ಶ್ರೀಪುಲಕವನು ಕಂಡು ಹರ್ಷಕ-
ಲಾಪಿಯಂತಾಯ್ತೆನ್ನ ಮನವೆಲ್ಲರಿಗೆ ಮಣಿದಪೆನಾಂ
ನಾನು ಛಂದೋಬದ್ಧಕವಿತಾ-
ಧ್ಯಾನವನು ನಿಮ್ಮೊಡನೆ ನಲವಿಂ
ಮಾನಿಸುತೆ ಮೇಣ್ ಹಂಚಿಕೊಡಿರೆ ನೀವಿದೀ ಪರಿಯಿಂ
ಸಾನುರಾಗದೆ ಪದ್ಯಗಳ ಸುರ-
ಧೇನುವನೆ ಕರೆಕರೆಯಯುತಿರುವುದ-
ನೇನು ಬಣ್ಣಿಪೆನಿದುವೆ ಭಾಮಿನಿಯಿಂದ ವಂದಿಸುವೆ
"…ನೋವ ತಂದನು ಲಂಕೆಗೆನುತಲಿ
ಕಾವಲಿನ ರಕ್ಕಸಿಯರರುಹಲಶೋಕವನದಲ್ಲಿ"
ಎಂದೂ
"ಸಾವದಪ್ಪಲು ಶಕ್ರಜಿತನನು"
ಎಂದೂ
ರಾಮಚಂದ್ರರ ಪರಿಹಾರಗಳಿಗೆ ವ್ಯಾಕರಣದ ಸಂಧಿನಿಯಮಗಳ ದೃಷ್ಟಿಯಿಂದ ಸ್ವಲ್ಪ ಸವರಣೆ ಮಾಡಿದರೆ ಮತ್ತೂ ಚನ್ನಾದೀತು..ಪ್ರತಿಯೊಬ್ಬರ ಕಲ್ಪನೆಗಳೂ ತುಂಬ ಚೆನ್ನಾಗಿವೆ. ನಿಜಕ್ಕೂ ಇಷ್ಟು ಸೊಗಸಾಗಿ ಈ ಸಮಸ್ಯಾಪೂರಣ ಸಾಗಬಹುದೆಂಬ ಓಹಯೂ ನನಗಿರಲಿಲ್ಲ..ಎಲ್ಲ ಕವಿತಾಸಾಧಕರಿಗೂ ನನ್ನ ಧನ್ಯವಾದಗಳು
ಗಣೇಶ್ – ಸಲಹೆಗಳು ಉಪಯುಕ್ತವಾಗಿವೆ. ಧನ್ಯವಾದಗಳು.
ಎಲ್ಲಾ ಪೂರಣಗಳೂ ಉತ್ತಮವಾಗಿವೆ. ರವೀಂದ್ರರ ಪೂರ್ಣತೆಯಲ್ಲಿ ಒಂದು ವಿಶೇಷ – ವಿಧಿ ಲೀಲೆಯೆಂಬ ಎತ್ತರದ ನಿಟ್ಟಿನಿಂದ ನೋಡಿ, ಎಲ್ಲರಿಗೂ ಸಮಸ್ಯೆಯೆಂದು ತೋರುವ ಸಾಲಿನಲ್ಲಿ ಸಮಸ್ಯೆಯೇ ಇಲ್ಲವೆಂಬತಿದೆ. (Different perspective – bigger picture, etc). ಬಹಳ ಇಷ್ಟವಾಯಿತು.
ಈ ಸಮಸ್ಯೆಗಳಾ ಮನೋಜ್ನತೆ
ದೇಶಕಾಲಗಳಂತರಗಳನು
ಮಾಸಿಸುತ್ತಿರೆ ಪಡೆವೆವೆಲ್ಲರು ಸೊಗದ ಸನ್ನಿಧಿಯ |
ಪಾಶ ಕವಿತೆಯದಿರಲು ಮೇಲೆ ಗ-
ಣೇಶರುತ್ತೇಜನವು ಸಿಗಲೆನೆ
ಮೀಸುವೆವು ಪದಧೇನುವಿನ ಕ್ಷೀರಂಬುರಾಶಿಯಲಿ ||