May 252015
 

ಈ ಸಮಸ್ಯೆಯನ್ನು ಬಗೆಹರಿಸಿರಿ

ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ

ಆಖು – ಇಲಿ

  129 Responses to “ಪದ್ಯಸಪ್ತಾಹ ೧೫೨: ಸಮಸ್ಯಾಪೂರಣ”

  1. kandpadya right? A typo it seems. It should be – ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ

  2. ದೈವೀವಾತ್ಸಲ್ಯ೦ ಗಡ
    ಶೈವಸ್ಥಲದೊಳ್ ಪಿತಾಸುತರ ಮಧ್ಯೆ ಸಲಲ್
    ಭಾವಿಸಿ ಜ೦ತುಗಳೊಪ್ಪಿರೆ
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ

    • ಎರಡನೆ ಸಾಲಿನಲ್ಲಿ “ಪಿತಾಸುತರ” ಎಂಬ ಶಬ್ದ ಸಾಧುವಾಗಲಾರದು ಎನಿಸುತ್ತದೆ. ಸಮಸ್ತಪದವಾದಾಗ ಪಿತೃ ಎಂಬರೂಪವೇ ಬರುತ್ತದೆ ಎಂದುಕೊಂಡಿದ್ದೇನೆ ..

      • “maataapitrubhyo namah” anta dEvapoojAdi-mantragaLalli hELuttEvalla

        • ನಮಸ್ಕಾರ. ನೀಲಕಂಠ ಅವರೇ, ಗಣೇಶ ಕೊಪ್ಪಲತೋಟ ಅವರು ಹೇಳಿದ್ದು ಸರಿಯಾಗಿದೆ.

          ದ್ವಂದ್ವಸಮಾಸದ ಕೆಲವು ನಿಯಮಗಳನ್ನು ತಿಳಿದುಕೊಂಡಾಗ ಈ ಗೊಂದಲವು ಪರಿಹೃತವಾಗುತ್ತದೆ.

          ಅಷ್ಟಾಧ್ಯಾಯಿಯಲ್ಲಿ “ಆನಙೃತೋ ದ್ವಂದ್ವೇ” ಎಂಬ ಸೂತ್ರವಿದೆ. ಅದರ ಪ್ರಕಾರ ವಿದ್ಯಾಸಂಬಂಧವಿರುವ ಅಥವಾ ಯೋನಿಸಂಬಂಧವಿರುವ ಋಕಾರಾಂತಶಬ್ದಗಳಿಗೆ ದ್ವಂದ್ವಸಮಾಸವಾದರೆ ಉತ್ತರಪದವು ಪರದಲ್ಲಿರುವಾಗ ಪೂರ್ವಪದದ ಋಕಾರಕ್ಕೆ ಆನಙಾದೇಶ ಬರುತ್ತದೆ.

          ಉದಾ- ಮಾತಾಪಿತರೌ.

          “ಮಾತಾ ಚ ಪಿತಾ ಚ” ಎಂಬ ವಿವಕ್ಷೆಯಿರುವಾಗ ಮಾತೃ ಮತ್ತು ಪಿತೃ ಎಂಬ ಶಬ್ದಗಳಿಗೆ ದ್ವಂದ್ವಸಮಾಸವಾಗುತ್ತದೆ. ಎರಡೂ ಶಬ್ದಗಳು ಋಕಾರಾಂತಗಳು. ತದ್ವಾಚ್ಯರಾದ ತಾಯಿ-ತಂದೆಯ ನಡುವೆ ಯೋನಿಸಂಬಂಧವಿದೆ. ಆದ್ದರಿಂದ ಪಿತೃ ಎಂಬ ಉತ್ತರಪದವು ಪರದಲ್ಲಿರುವಾಗ ಮಾತೃಶಬ್ದದ ಋಕಾರಕ್ಕೆ ಆನಙಾದೇಶವಾಗುತ್ತದೆ. ಅನಂತರ ಮುಂದಿನ ವ್ಯಾಕರಣಪ್ರಕ್ರಿಯೆಗಳಾಗಿ “ಮಾತಾಪಿತರೌ” ಎಂದಾಗುತ್ತದೆ.

          ಹಾಗಾಗಿಯೇ ಪೂರ್ವಸೂರಿಗಳು “ಮಾತಾಪಿತೃಭ್ಯಾಂ ಜಗತೋ ನಮೋ ವಾಮಾರ್ಧಜಾನಯೇ”, “ಪ್ರಪಂಚಮಾತಾಪಿತರೌ ಪ್ರಾಂಚೌ ಜಾಯಾಪತೀ ಸ್ತುಮಃ” ಇತ್ಯಾದಿ ಪ್ರಯೋಗಗಳನ್ನು ಮಾಡಿದ್ದಾರೆ.

          ಇದಲ್ಲದೆ ಅಷ್ಟಾಧ್ಯಾಯಿಯಲ್ಲಿರುವ “ಮಾತರಪಿತರಾವುದೀಚಾಮ್” ಎಂಬ ಸೂತ್ರದಿಂದ ಮಾತರಪಿತರೌ ಎಂಬ ಒಂದು ರೂಪವು ಔತ್ತರಾಹಸಮ್ಮತವೆಂದು ತಿಳಿಯುತ್ತದೆ.

          ಇದನ್ನೆಲ್ಲ ಗಮನಿಸಿಕೊಂಡೇ ಅಮರಕೋಶಕಾರನು “ಮಾತಾಪಿತರೌ ಪಿತರೌ ಮಾತರಪಿತರೌ ಪ್ರಸೂಜನಯಿತಾರೌ” ಎಂದು ಪರ್ಯಾಯಪದಗಳನ್ನು ಹೇಳಿದ್ದಾನೆ.

          ಹೀಗೆಯೇ ಹೋತೃ – ಪೋತೃ ಎಂಬ ಶಬ್ದಗಳಿಗೆ ದ್ವಂದ್ವಸಮಾಸವಾದಾಗ “ಹೋತಾಪೋತಾರೌ” ಎಂದು ರೂಪವಾಗುತ್ತದೆ. “ಮಾತಾಪಿತರೌ” ಎಂಬಲ್ಲಿ ಯೋನಿಸಂಬಂಧವಿದ್ದರೆ ಇಲ್ಲಿ ವಿದ್ಯಾಸಂಬಂಧವಿದೆಯೆಂಬುದಷ್ಟೇ ವಿಶೇಷ. ಮತ್ತೆಲ್ಲವನ್ನೂ ಮೊದಲಿನಂತೆಯೇ ತಿಳಿಯಬೇಕು.

          ಹಿಂದೆ ಹೇಳಿದ ಎಲ್ಲ ಲಕ್ಷಣಗಳಿದ್ದು ಒಂದುವೇಳೆ ದ್ವಂದ್ವಸಮಾಸದ ಘಟಕಗಳಾಗಿ ಎರಡಕ್ಕಿಂತ ಹೆಚ್ಚು ಪದಗಳಿದ್ದರೆ ಆಗ ಉಪಾಂತಿಮಪದಕ್ಕೆ ಮಾತ್ರ ಆನಙಾದೇಶವಾಗುತ್ತದೆ.
          ಉದಾ- “ಹೋತಾ ಚ ಪೋತಾ ಚ ನೇಷ್ಟಾ ಚ ಉದ್ಗಾತಾ ಚ” ಎಂಬ ವಿವಕ್ಷೆಯಿದ್ದಾಗ ಹೋತೃ, ಪೋತೃ, ನೇಷ್ಟೃ, ಉದ್ಗಾತೃ ಎಂಬ ನಾಲ್ಕು ಶಬ್ದಗಳಿಗೆ ದ್ವಂದ್ವಸಮಾಸವಾಗುತ್ತದೆ. ಆ ನಾಲ್ಕರಲ್ಲಿ ಉಪಾಂತಿಮವಾದ ನೇಷ್ಟೃಶಬ್ದಕ್ಕೆ ಆನಙಾದೇಶ ಬಂದು “ಹೋತೃಪೋತೃನೇಷ್ಟೋದ್ಗಾತಾರಃ” ಎಂದಾಗುತ್ತದೆ.

          ಇನ್ನು ನಿಮ್ಮ “ಪಿತಾಸುತರ” ಎಂಬ ಪ್ರಯೋಗಕ್ಕೆ ಬಂದರೆ ಅಲ್ಲಿ ಪಿತೃ ಮತ್ತು ಸುತರ ನಡುವೆ ಜನ್ಯಜನಕಭಾವರೂಪವಾದ ಯೋನಿಸಂಬಂಧವಿದ್ದು ದ್ವಂದ್ವಸಮಾಸವಾಗಿದ್ದರೂ ತದ್ವಾಚಿಗಳಾದ ಶಬ್ದಗಳಲ್ಲಿ ಸುತಶಬ್ದವು ಋಕಾರಾಂತವಾಗಿಲ್ಲ. ಆದ್ದರಿಂದ ಪಿತೃಶಬ್ದಕ್ಕೆ ಆನಙಾದೇಶ ಬರುವುದಿಲ್ಲ. “ಪಿತೃಸುತರ” ಎಂದೇ ಆಗುತ್ತದೆ.

          ಆದರೆ ಇದಕ್ಕೆ ಒಂದೇ ಒಂದು ಅಪವಾದವಿದೆ. ಅದು “ಪಿತಾಪುತ್ರೌ” ಎಂಬ ಶಬ್ದ. ದ್ವಂದ್ವದಲ್ಲಿ ಪಿತೃಶಬ್ದಕ್ಕೆ ಪುತ್ರಶಬ್ದವು ಉತ್ತರಪದವಾದರೆ ಪೂರ್ವದಲ್ಲಿರುವ ಪಿತೃಪದಕ್ಕೆ ಆನಙಾದೇಶ ಬರುತ್ತದೆ.
          ಇದು ಪುತ್ರಶಬ್ದಕ್ಕೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಅದರ ಪರ್ಯಾಯಗಳಾದ ಸುತಾದಿಶಬ್ದಗಳಿಗೆ ಅನ್ವಯಿಸುವುದಿಲ್ಲ.

          ಒಟ್ಟಾರೆ ಸಂಗ್ರಹವಾಗಿ ಹೀಗೆ ಹೇಳಬಹುದು.

          ೧) ದ್ವಂದ್ವಸಮಾಸವಿರಬೇಕು.
          ೨) ಅದರ ಘಟಕಗಳಾದ ಶಬ್ದಗಳು ಋಕಾರಾಂತಗಳಾಗಿರಬೇಕು.
          ೩) ಆ ಋಕಾರಾಂತಶಬ್ದವಾಚ್ಯರಾದವರ ನಡುವೆ ವಿದ್ಯಾಸಂಬಂಧ ಅಥವಾ ಯೋನಿಸಂಬಂಧವಿರಬೇಕು.

          ಇವಿಷ್ಟು ನಿಯಮಗಳು ಅನ್ವಯವಾಗುವಲ್ಲಿ ಉಪಾಂತಿಮವಾದ ಶಬ್ದಕ್ಕೆ ಆನಙಾದೇಶವು ಬರುತ್ತದೆ.

          “ಪಿತಾಪುತ್ರೌ” ಎಂಬಲ್ಲಿ ೨ ನೆಯ ನಿಯಮವು ಅನ್ವಯವಾಗದಿದ್ದರೂ ಆನಙಾದೇಶವು ಬರುತ್ತದೆ. ಇದೊಂದು ಸ್ಥಳ ಅಪವಾದವಾಗಿದೆ.

          ಇದಲ್ಲದೆ ಔತ್ತರಾಹಸಮ್ಮತವಾದ “ಮಾತರಪಿತರೌ” ಎಂಬ ಒಂದು ವಿಶಿಷ್ಟರೂಪವೂ ಸಂಭವಿಸುತ್ತದೆ.

          ಇವುಗಳ ಅರಿವು ನಿಮಗಿದ್ದಲ್ಲಿ ಮೇಲೆ ಹೇಳಿರುವುದೆಲ್ಲವನ್ನೂ “ಶಾಸ್ತ್ರಾಭ್ಯಾಸಿಯೊಬ್ಬ ಅವನ ತಿಳಿವಿನ ದಾರ್ಢ್ಯಕ್ಕಾಗಿ ಮಾಡಿಕೊಂಡ ಪುನರ್ಮನನ” ಎಂದಷ್ಟೇ ತಿಳಿಯಿರಿ 🙂

          • _/\_

          • ಹಾರ್ಯಾಡಿಯವರ೦ಥ ಸೂರ್ಯsನ ಶಾಸ್ತ್ರದೊಳು
            ಯಾರ್ಯಾರು ಹುಡುಕಿ ದಣಿದsರು | ಸಿಕ್ಕೋಲ್ಲ
            ಹಾರ್ಯಾಡಿ ಹೇಳ್ತಾನೆ ನೀಲ್ಕ೦ಠ

            ಆವಾವ ಶಾಸ್ತ್ರsದ ಕೋವಿsದರಿರುವಿsರಿ
            ನೀವಲ್ತೆ ತಲಿಮ್ಯಾsಲಿಟ್ಟೋರು | ಘನಮಣಿಯ
            ಹಾವಿsನ ಹೆಡೆಕೆಳಗೆ ಇಲಿಯಾಡ್ತು

            ಸರ್, ನೀವೇನೋ ಇಷ್ಟೆಲ್ಲ ಹೇಳಿ ನಿಮ್ಮ ದಾರ್ಢ್ಯ ಹೆಚ್ಚಿಸಿಕೊ೦ಡಿರಿ. ಇಷ್ಟೆಲ್ಲ ಕೇಳಿ ಗಾಬರಿಯಿ೦ದ ಇದ್ದುಬಿದ್ದ ನನ್ನ ದಾರ್ಢ್ಯ ಕುಗ್ಗಿತಲ್ಲ…
            ಧನ್ಯವಾದಗಳು, ವಿವರಗಳಿಗೆ 🙂

  3. ಸಾವನಿದಿರ್ಗೊಂಬಂದಂ
    ಧಾವಿಸುತುಂ ತೆರೆಯನೇರ್ವ ಸಾಸಕೆ ಬೆರಗಿಂ,
    ಗಾವುದ ದೂರದಿನೆಂದೆಂ
    “ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ!”

    (ಸಮುದ್ರದ ತೆರೆಯೊಡನೆ ಆಡುತ್ತಿರುವನನ್ನು ಕಂಡು..)

  4. ಸೇವೆಯ ಗೈದು ಗಣಪನಿಂ
    ಗಾವಿಷ ದಶನಗಳ ಛೇಡಿಸಲ್ ಸಾರಥಿತ-
    ನ್ನಾವರಣದೆ ಕುಣಿದಾಡಲ್
    ಹಾವಿನಹೆಡೆಯಡಿಯೊಳಾಖು ನಲಿದುದು ನೋಡಾ

    • ಒಳ್ಳೆಯ ಕಲ್ಪನೆ. 😛 ಗಣಪನಿಂಗೆ ಎಂಬ ರೂಪ ಬರುವುದಿಲ್ಲ.. ಗಣಪಂಗೆ ಎಂದೇ ಆಗಬೇಕು. ಸೇವೆಯ ಗೆಯ್ಯುತೆ ಗಣಪತಿಗಾ ವಿಷ.. ಎಂದು ಬದಲಾಯಿಸಬಹುದು.

  5. ದೇವಾಲಯಮಂ ಪೊಗುತುಂ
    ನಾವೀನ್ಯದಭವ್ಯನಾಗವಿಗ್ರಹವಿರೆ ಮುಂ-
    ಜಾವಿನ ಪಾಲನ್ನುಣುತುಂ
    ಹಾವಿನಹೆಡೆಯಡಿಯೊಳಾಖು ನಲಿದುದು ನೋಡಾ

    • ಚೆನ್ನಾಗಿದೆ . ಪಾಲನುಣುತ್ತುಂ ಎಂದಲ್ಲಿ ಹೆಚ್ಚು ಸೂಕ್ತ.

  6. ನೋವನದಾರ್ಗುಂ ಬಗೆಯರ್,
    ದೇವನಗರಿಯಿಂತಿರಲ್, ಜನರ್ ವಿಶ್ವಸಿತರ್|
    ಜೀವರ್ಗಳಿಂತಿರಲಹಾ!
    “ಹಾವಿನಹೆಡೆಯಡಿಯೊಳಾಖು ನಲಿದುದು ನೋಡಾ!”

  7. ಭಾವಿಸೆ ಗಣೇಶರೆಡೆಯೊಳ
    ಗಾವಗಮಿರ್ದಂತು ಕಬ್ಬಮಂ ಕೇಳುತ್ತುಂ
    ಪಾವೆನಲೆರರುಣಿಯೆನುತುಂ
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡ!

    ಯಾವತ್ತೂ ಶತಾವಧಾನಿ ಗಣೇಶರ ಮನೆಯಲ್ಲಿ ವಾಸಿಸುತ್ತಿದ್ದ ಇಲಿಯೊಂದು ಅವರು ಹೇಳುವ ಕಾವ್ಯಗಳನ್ನೆಲ್ಲಾ ಕೇಳಿಕೊಂಡಿತ್ತು. (ಎಲರ್-ಗಾಳಿ,ಹಾವು ಗಾಳಿಯನ್ನೇ ತಿಂದು ಬದುಕುತ್ತದೆ ಎಂದು ಕವಿಸಮಯ, ಹಾಗಾಗಿ ಎಲರುಣಿ ಎಂದರೆ ಹಾವು) ಹಾಗಾಗಿ ಇಲಿ ಕೂಡ ಇದು ಎಲರುಣಿ, ತನ್ನನ್ನು ತಿನ್ನಲಾರದು ಎಂದುಕೊಂಡು ಹಾವಿನ ಹೆಡೆಯಡಿಯಲ್ಲಿ ನಲಿದಿತ್ತು

    • ಕವಿಸಮಯಂಗಳನರ್ಥೈಸಿಕೊಂಡಿರಲ್ಕದು ಬೇರೆಲ್ಲಿರ್ದೀತು? 🙂

    • ಅಹಹ, ರವಿಯಾಕಾಶಕೆ ಭೂಷಣ೦ ಎ೦ಬ೦ತೆ ಮರೆಯಾಗಿದ್ದ ಭಟ್ಟರು ಬ೦ದೀ ಪದ್ಯಮನ್ನೊರೆಯಲ್ಕೆ –

      ವಾವೆನುತು೦ ಸ೦ಭ್ರಮದಿ೦ (ವಾವ್ ಎನುತು೦)
      ಭಾವಿಸಿ ಕೊಪ್ಪಲರದೀ ಸುಪೂರಣಮನೆ ತಾ-
      ನಾ ವಿಪದಮ೦ ಗಣಿಸದಲೆ
      ಹಾವಿನ ಹೆಡೆಯೆಡೆಯೊಳಾಖು ನಲಿದುದು ನೋಡಾ

      • *……..ತಾ-
        ನಾ ಕವಿಪದವಂ ಗಣಿಸುತುಂ !!

      • _/\_
        ಆದರೆ ಇದನ್ನು ಸಮಸ್ಯೆಗೆ ಪೂರಣವೆಂದು ಪರಿಗಣಿಸಲಾಗುವುದಿಲ್ಲ 🙂

    • ಬರೆಯದೆಲೇಕುಳಿದೈ ಪೇಳ್
      ಎರಡನೆ ಪದ್ಯವ: ಸುಷುಪ್ತಿಗೈದುತೆ ಮೇಣಿಂ|
      ಮರಳದೆಲೆಚ್ಚರಕಾಖುವು
      ಪರಮಪದಪ್ರಾಪ್ತಿಯಂ ಗಳಿಸಿದಾ ಪರಿಯಂ||

  8. ದೇವರ ಪೆಸಱೊಳ್ ಪಸಿವಂ
    ಬೇವಸದಿಂ ತಡೆದುನೋಂಪಿಯಂ ತಾಂ ಗೊಳ್ಳಲ್
    ಸಾವಿಂಗಳುಕದೆ ಪರಿಕಿಸೆ
    ಹಾವಿನ ಹೆಡೆಯಡಿಯೊಳಾಖು ನಲಿದೆದೆ ನೋಡಾ

    ದೇವರ ಹೆಸರಿನಲ್ಲಿ ಉಪವಾಸವಿರುವ ಹಾವನ್ನು (ಅದರ ಉಪವಾಸವನ್ನು) ಪರೀಕ್ಷಿಸಲು ತನ್ನ ಸಾವನ್ನೂ ಲೆಕ್ಕಿಸದೆ ಆ ಇಲಿ ಹಾವಿನ ಹೆಡೆಯಡಿಯೊಳು ನಲಿದಿದೆ ನೋಡಾ..!

    • ಒಂದೊಮ್ಮೆ ಇಲಿಯೆಣಿಕೆಯಂತಲ್ಲದೆಲೆ ಪಾವು
      ಪೊಂದೆ ಆರೋಗ್ಯಮನ್ನುಪವಾಸಮಂ|
      ಹಿಂದಿನೊಂಭತ್ತುದಿವಸಗಳಿಂದೆ ಗೈಯ್ಯುತ್ತ-
      ಲಿಂದು ಮುಗಿದಿರೆ ವ್ರತವು ಗತಿಯದೇನೈ!!

    • ಸೊಗಸಾದ ಪರಿಹಾರ.
      ಒಂದು ಅನುಮಾನ- ಶಕಟರೇಫ ಇರುವ ಪೆಸಱ್ ಎಂದರೆ ಹೆಸರುಕಾಳು ಎಂಬ ಅರ್ಥವಿದೆ. ನಾಮಧೇಯ-ಹೆಸರು ಎಂಬರ್ಥದಲ್ಲಿ ಬರಿಯ ರೇಫ- ಪೆಸರ್ ಎಂದಿರಬೇಕೆನಿಸುತ್ತದೆ. ಯಾವುದಾದರೂ ಪೂರ್ವಕವಿಪ್ರಯೋಗವಿದೆಯಾ?

      • ಬಹುಶಃ ಪೆಸರ್ ಎಂಬುದೇ ಸರಿಯಾದ ಪ್ರಯೋಗ… ‘ಬಸಿಱ್’ ಎಂಬುದರ ಪ್ರಯೋಗದಿಂದ ಗೊಂದಲಗೊಂಡೆ ಎನಿಸುತ್ತದೆ..

  9. ತೀವುತುದರಕಂ ಸವಿಯಂ
    ಸಾವರಿಸಲ್ ಬಿಗಿದುರಗವನುಂ ಸಾಗಲ್ ಸಂ-
    ಭಾವಿಸೆ ಗಣೇಶನೆಡೆಯೊಳ್
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ !!

    • oLLeya svabhAvOkti

      • ಧನ್ಯವಾದಗಳು ಪ್ರಸಾದ್ ಸರ್,
        ಸವಿಯಂ ~ ಕಡುಬಂ ಆದರೆ ಮತ್ತೂ ಸರಿ ಅಲ್ಲವೇ?!

    • ಚೆನ್ನಾಗಿದೆ ಪರಿಹಾರ.. ಕಟ್ಟಲ್ಪಟ್ಟ ಹಾವು ಎಂದು ಇಲಿ ನಿರ್ಭೀತಿಯಿಂದ ನಲಿಯುತ್ತಿತ್ತು ಎನ್ನಬಹುದು 😉

  10. ತ೦ದಿರಿಸಿರ್ಪೆಯೇನಿನಕುಲಾ೦ಗನೆಯನ್ನರಿದಲ್ದೆ ರಾಮನಾ-
    ರೆ೦ದರರೇ ವಿಕಾರವೆಸಗಿರ್ಪೆಯಲಾ ಮತಿಗೆಟ್ಟು ಲ೦ಕೆಯೊಳ್
    ತ೦ದಿರಿಸಿರ್ಪೆಯೈ ಪರಿಜನರ್ಗಪಮೃತ್ಯುವನೆ೦ದು ರಾವಣ೦-
    ಗ೦ದದೆ ಕು೦ಭಕರ್ಣನೊರೆದ೦ ಮಗುಳಿ೦ತು ವಿಷಾದಚರ್ಯೆಯಿ೦

    ತನ್ನಣ್ಣನ ಬಟ್ಟೆಗೆಟ್ಟ ನಡೆಯ೦ ಕ೦ಡು ಮನದೊಳಗಿ೦ತೆ೦ದ೦ –

    ಕಾವುದಲೆ ದೇವ ರಾವಣ-
    ನೀ ವಿಪರೀತಮತಿಯ ಗತಿಯಿ೦ದೆಮ್ಮ೦ ಹಾ
    ಭಾವಿಪೊಡೆ ಸೀತೆಯೆ೦ಬೀ
    ಹಾವಿನ ಹೆಡೆಯೆಡೆಯೊಳಾಖು ನಲಿದುದು ನೋಡಾ

    • ಪಾಪ.. ಸೀತೆಯನ್ನೇ ಹಾವನ್ನಾಗಿಸಿಬಿಟ್ಟಿದ್ದೀರಲ್ಲ!! ಅದೂ ಕುಂಭಕರ್ಣ ಹೇಳುವುದು!!

      • ಹೌದು, ರಾವಣನ೦ಥವರ ಪಾಲಿಗೆ ಅವಳು ಹಾವೆ. ಕು೦ಭಕರ್ಣ ರಾವಣನಿಗೆ ಬೈಯುವುದು ನನಗೆ ಇಷ್ಟವಾಗುತ್ತದೆ… 🙂

  11. ಜೀವನದೊಳ್ ಗಳಿಸೆ ಸಿರಿಯ-
    ನಾವುದಕಂಜುವನು, ಮಾನುಷನೆನುತೆ ,ತಾಂ ಮುಂ-
    ಜಾವದೊಳೆ ಪೊಂದೆ ಮಣಿಯಂ,
    ಹಾವಿನಹೆಡೆಯಡಿಯೊಳಾಖು ನಲಿದುದು ನೋಡಾ!

    • ಎರಡನೆಯ ಸಾಲಿನ ಕೊನೆಯ ಎರಡು ಗಣಗಳನ್ನು ನೋಡಿ.

  12. ಆವರ ಸರಿಸಿಂ ಲ್ಯಾಪ್-ಟಾ-
    ಪಂ ವಿಸ್ತರಿಸಿಂ ವಿ”ಶೇಷ” ಮಾನೀಟರನುಂ
    ಸೇವಾರಂಭಿಸೆ ಮೌಸೊಳ್
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ !!

    ತೆರೆದ ಲ್ಯಾಪ್-ಟಾಪ್ ನ ಮಾನೀಟರ್ – ಎತ್ತಿದ ಹಾವಿನಹೆಡೆಯಂತೆ / ಪಕ್ಕದಲ್ಲಾಡುವ ಮೌಸ್(= ಮೂಗಿಲಿ) ಕಂಡ ಕಲ್ಪನೆಯಲ್ಲಿ!!

    • ಹಹ್ಹಹ್ಹಹ್ಹಹಾ… ಈ ಪರಿಯ ಕಲ್ಪನೆಯನಾವ ಕವಿಯೊಳು ಕಾಣೆ
      ಪದ್ಯಪಾನಪ್ರೀಯೆಯೀ ಉಷಾರೊಳಗುಳಿದು..

      • ಹಹ್ಹಹ್ಹಹ್ಹಹಾ…
        ನಿಗಮ ಗೋಚರ ನಮ್ಮ ನೀಲಕಂಠನಲ್ಲದೇ
        ಮಿಗಿಲಾದ ಕವಿಗಳಿಂದೀ ಭಾಗ್ಯವುಂಟೇ ?!!

    • ತುಂಬಾ ವಿಶೇಷಕಲ್ಪನೆ.. ಸೊಗಸಾಗಿದೆ. ಎರಡನೆಯ ಸಾಲಿನಲ್ಲಿ ಪ್ರಾಸ ತಪ್ಪಿದೆಯಲ್ಲ..

      • ಧನ್ಯವಾದಗಳು ಕೊಪ್ಪಲತೋಟ,
        ಆದಿಪ್ರಾಸ ತಪ್ಪಿದ್ದು ಗಮನಿಸಲಿಲ್ಲ, “ಲ್ಯಾಪ್ ಟಾ-ಪನ್ ವಿಸ್ತರಿಸಿ…” ಎಂದರೆ ಸರಿಯಾಗುವುದೇ? ತಿಳಿಯುತ್ತಿಲ್ಲ. ಸಹಾಯಮಾಡು ಪ್ಲೀಸ್.

  13. ಬೇವಸಮಂ ನೀಗೆ ಬಿಲದ
    ತಾವಂ ತೊರೆದಿರ್ದು ತೆಂಗನೇರಿ ಕುಣಿದಿರಲ್ |
    ಭಾವದೆ ಕಾಯೊಳ್, ಸೋಗೆಯ
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ ||

    • ಸೋಗೆಯ ಹಾವು ಎಂಬ ಕಲ್ಪನೆ ಚೆನ್ನಾಗಿದೆ .

      • ಧನ್ಯವಾದಗಳು ಕೊಪ್ಪಲತೋಟರೆ.

  14. ಪಾವನ ಪನ್ನಗ ಧರನೊಡ
    ನಾ ವರ ಷಣ್ಮುಖ ಗಣೇಶರಾಡುತಲಿರೆ ಮೇ
    ಣಾ ವನಮಯೂರ ನಾಟ್ಯಕೆ
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ

    ತಂದೆಯಾದ ಶಿವನೊಡನೆ ಷಣ್ಮುಖ ಗಣೇಶರು ಆಡುತ್ತಿದ್ದಾರೆ. ಇನ್ನವರ ವಾಹನಗಳಿಗಾಗಲೀ, ಶಿವನ ಕಂಠಾಭರಣಕ್ಕಾಗಲೀ ಏನು ಕೆಲಸ. ಈ ಆಟವನ್ನು ನೋಡುತ್ತಾ ಸಂತಸಗೊಂಡು ಷಣ್ಮುಖನ ವಾಹನವಾದ ನವಿಲು ನಾಟ್ಯವಾಡುತ್ತಿದೆ. ಅದನ್ನು ನೋಡಿ ಹೆಡೆದೂಗುತ್ತಿರುವ ಶಿವನ ಕಂಠಾಭರಣವಾದ ಹಾವಿನ ಹೆಡೆಯಲ್ಲಿ ಗಣಪನ ವಾಹನವಾದ ಇಲಿಯು ನಲಿಯುತ್ತಿದೆ. ಈ ದೈವಿಕ ಆನಂದದಲ್ಲಿ ಅವು ಮೂರೂ ತಮ್ಮ ಸಹಜ ಶತ್ರುತ್ವವನ್ನು ಮರೆತಿವೆ.

    ಭೂ ವನಿತೆಯರಬ್ಬರಕಿಂ
    ಶ್ರೀವನಿತೆಯೆ ನೆರೆ ದಯಾಳುವೆನ್ನುತ ಮುದದಿಂ
    ದಾ ವೈಕುಂಠದೊಳಾ ಹೆ
    ಬ್ಬಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ

    ಭೂಮಿಯ ಮೇಲಿನ ಹೆಂಗಸರು ಇಲಿಗಳನ್ನು ಬಡಿದಟ್ಟಲು, ಅವರ ಕಾಟವನ್ನು ತಡೆಯಲಾರದೇ ಈ ವನಿತೆಯರಿಗಿತಾ ಶ್ರೀವನಿತೆಯೇ ಎಷ್ಟೋ ದಯಾಳುವೆಂದು ಇಲಿಗಳು ವೈಕುಂಠಕ್ಕೆ ಲಗ್ಗೆಯಿಟ್ಟುವು. ಅಂಥದ್ದೊಂದು ಇಲಿ, ವಿಷ್ಣುವಿನ ಹಾಸಿಗೆಯನ್ನೇ ಏರಿ, ಆದಿಶೇಷನ ಹೆಡೆಯಡಿಯಲ್ಲಿ ಆಡುತ್ತಿತ್ತು. ವಿಷ್ಣುವಿಗಿಂತಾ, ಲಕ್ಷ್ಮಿಯ ಭಕ್ತಪರಾಧೀನತೆಯನ್ನು ಕೊಂಡಾಡಹೊರಟ ಪದ್ಯ ಇದು 🙂 🙂

    ಹೆಬ್ಬಾವು = ಹಿರಿದು ಹಾವು = ಆದಿಶೇಷ 🙂

    • ಎರಡೂ ಪರಿಹಾರಗಳು ಚೆನ್ನಾಗಿವೆ. ಆದಿಶೇಷನನ್ನು ಹೆಬ್ಬಾವನ್ನಾಗಿಸಿಬಿಟ್ಟಿದ್ದೀರ! ಸಾವಿರ ಹೆಡೆಗಳಿರುವವನನ್ನು ಹೆಡೆ ಇಲ್ಲದ ಹೆಬ್ಬಾವು ಎಂದರೆ ಹೇಗೆ 🙂 ಆದರೆ ದೊಡ್ಡ ಹಾವು ಎಂದು ಗುಣವಾಚಕವಾಗಿ ಒಪ್ಪಬಹುದು.

      • ಹಹ… ಆ ಆದಿಶೇಷನ ಮುಂದೆ ಹೆಬ್ಬಾವಿಗೆ ಆ ಹೆಸರೇ ದಂಡ ಎಂದು ನನ್ನ ಅನಿಸಿಕೆ. ಅದಕ್ಕೆಂದೇ “ಹೆಬ್ಬಾವು = ಆದಿಶೇಷ” ಎಂದು ವಿವರಿಸುವಾಗ ಅಲ್ಲೊಂದು ” 🙂 ” ಹಾಕಿದ್ದೇನೆ

  15. ಸಾವಿರಸುಳ್ಳುಗಳನಿಶಂ
    ಪೂವೆತ್ತುವವೋಲೆ ಸುಲಭದಿಂ ಪೇಳ್ವಾತಂ |
    ಭಾವನೊಡನಿಂತೊರೆದನೇಂ ?!
    “ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ ” ||

    • Really good one madam.. 🙂

      • ಧನ್ಯವಾದಗಳು ನೀಲಕಂಠರೆ.

    • ಹಹ್ಹ.. ಸಮಸ್ಯೆಯನ್ನು ಕೊಟ್ಟವರೇ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿಬಿಟ್ಟಿರಲ್ಲ 😛

      • 🙂

      • ಛೆ ಛೆ.. ಕೊಪ್ಪಲತೋಟರೆ, ಸೋಮರಂಥ ಸಜ್ಜನರು ಸುಳ್ಳುಹೇಳುತ್ತಿದ್ದಾರೆಂದು ನಾನೇಕೆ ಸುಳ್ಳು ಹೇಳಲಿ?
        ಯಾರೋ ಸುಳ್ಳಗಾರರು ಹೇಳಿದ್ದನ್ನು ನಿಜವೆಂದು ನಂಬಲು ಸಮಸ್ಯೆಯಾಗಿ, ನಮಗೆ ನೀಡಿದ್ದಾರೆ . (ಪದ್ಯದಲ್ಲಿರುವ “ಭಾವ” ಸೋಮರೇ ಇರಬಹುದೆ ? ) 🙂

        • ಓಹ್, ಶಕು೦ತಲಾ ಮೇಡಮ್, ನಾನು ಅದು “ಭಾವದೊಡನಿ೦ತೊರೆದನೇ೦” ಎ೦ದು ತಿಳಿದು ನಿಮ್ಮ ಪದ್ಯಕ್ಕೆ ದೊಡ್ಡ ತತ್ತ್ವಾರ್ಥವನ್ನು ಗ್ರಹಿಸಿ ಮೆಚ್ಚುಗೆಯನ್ನು ಸೂಚಿಸಿದೆ. ಜನರ ಮು೦ದೆ ಇವನ ಸುಳ್ಳು ಎ೦ಬ ಇಲಿ ಬಾಲ ಬಿಚ್ಚಿ ಆಡೀತು, ಆದರೆ ತನ್ನದೇ ಮನಸ್ಸಾಕ್ಷಿಯೆ೦ಬ ಸರ್ಪದ ಮು೦ದೆ ಅದು ಆಡಿದ೦ತೆ (ಹಾಗೇನಾದರೂ ಆಡಿದರೆ ಅದಕ್ಕೆ ಉಳಿಗಾಲವಿಲ್ಲ ….) ಎ೦ದು ಅರ್ಥೈಸಿದೆ. ನದಯೋರಪಾರಭೇದಃ 🙂

  16. ಭಾವಿಸೆ ಭವಬಾಧೆಗಳಂ
    ಜೀವನಮೇ ದುಷ್ಕರಂ ಕರಮೆನುತ್ತದಕಂ |
    ಸಾವಂ ಕಾಮಿಸುತೆ ಹಸಿದ
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ !!

    • ಚೆನ್ನಾಗಿದೆ.. ಇಲಿಯ ಸುಯ್ ಸೈಡಲ್ ಟೆಂಡೆನ್ಸಿ 🙂

    • ಸುಸೈಡಲ್ ಅಟೆ೦ಪ್ಟ್ ಆದ್ರೆ ನಲಿಯುತ್ತೆ ಯಾಕೆ? ಸುಮ್ಮನೆ “ಸುಳಿದುದು ನೋಡಾ” 🙂

      • ನಲಿ=ಕುಣಿ=ನೆಗೆ=ಜಿಗಿ ,ಆಗಿರುವದರಿಂದ ಇಲಿಯು ಹಾವಿನ ಹೆಡೆಯಡಿ ಸುಳಿದಾಡಿದ ಪರಿಯೇ ಇದಾಗಿದೆಯಲ್ಲ ನೀಲಕಂಠರೇ ! 🙂

        • ಕುಣಿದಾಡುತ್ತಿರುವುದು ಇಲಿಯಲ್ಲ. ಕಾ೦ಚನಾ ಮೇಡಂ ಅವರ ಪದಚಮತ್ಕಾರ 🙂

          • ಹೌದು 🙂 ಅಂತೂ ನಮ್ಮನ್ನೂ ಕುಣಿವಂತೆ ಮಾಡಿತು 🙂

  17. ಹಾವೆನ್ನುತೆ ಪೆದರ್ದೆಂ ಗಡ
    ಮಾವಿನತೋರಣದ ಹುರಿಯನೀಕ್ಷಿಸಲಿಲಿಯೊಲ್
    ಭಾವದ ವಿಭ್ರಮಕುಲಿದೆಂ
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ

    (ಸಧ್ಯ ಹಾವಲ್ಲ ಎಂದು ನಲಿದುದು 🙂 )

  18. ಜೀವಮಿರದ ಕೃತಕದ ಈ
    ಪಾವನುಮಿಲಿಯನ್ನು ಮಿಂದ್ರಜಾಲಿಕ ಸೃಜಿಸ-
    ಲ್ಕೀವೇಗದ ಕೈಚಳಕದೆ
    ಹಾವಿನಹೆಡೆಯಡಿಯೊಳಾಖು ನಲಿದುದು ನೋಡಾ

  19. ಕಾವಲಿಯಿಂ ಬೆಕ್ಕಿಗೆ ಪೊಡೆ
    ದಾವ ಭಯಮುಮಿಲ್ಲದಂತೆ ಟಾಮ್ ಅಂಡ್ ಜೆರಿಯೊಳ್
    ಠೀವಿಯೊಳಿಂ ಟೀವಿಯೊಳಾ (TV)
    ಹಾವಿನಹೆಡೆಯಡಿಯೊಳಾಖು ನಲಿದುದು ನೋಡಾ

  20. ಸಾವೇ ಗತಿಯಿನ್ನೆನಗಂ
    ತಾವೀ ಬೋನಾಯ್ತೆ ಇಂದೆನುತೆ ದುಃಖಿಸಲೇಂ|
    ಆವರೆಗಲ್ಲಿಗೆ ಸಾರಿದ
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ||

  21. ರಾಜಾ ಶಿವಛತ್ರಪತಿಯನ್ನು ದ್ವೇಷಿಸುತ್ತಿದ್ದವರು ಆತನನ್ನು “ಬೆಟ್ಟದ ಇಲಿ” ಎಂದೇ ಕರೆಯುತ್ತಿದ್ದದ್ದು. ಉತ್ತರದಲ್ಲಿ ಮೊಗಲಶಾಹಿ, ದಕ್ಷಿಣದಲ್ಲಿ ಆದಿಲ್ ಶಾಹಿಯಂತಹ ಮತಾಂಧ ಶಕ್ತಿಗಳ ಮಧ್ಯದಲ್ಲಿದ್ದುಕೊಂಡೇ, ಅವರಿಗೆ ಸಿಂಹಸ್ವಪ್ನವಾಗಿ, ಸರ್ವತಂತ್ರ ಸ್ವತಂತ್ರನಾಗಿ ಮೆರೆಯಲಿಲ್ಲವೇ ಆ ವೀರಾಗ್ರಣಿ ?…ಆ ಮತಾಂಧತೆಯೆಂಬ ಕಾಳೋರಗನ ಹೆಡೆಯಡಿಯೊಳು ಈ “ಇಲಿ” ನಲಿದಾಡಿತು…

    ಆವಗಮಿಂತಿಂತಾ ಮ್ಲೇ
    ಚ್ಛಾವಳಿ ವೆಟ್ಟಿಲಿಯೆನಿಪ್ಪ ಪೆಸಱಿತ್ತುದೊ, ಮೆಱೆ
    ವಾ ವಿಕೃತ ಮತಾಂಧತೆಯಾ
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ

    • tumba chennagide Maurya re. eradane saalina koneyalli guru barabekallave kandapadyadalli?

      • Sorry…unedited…

        ಆವಗಮಿಂತಿಂತಾ ಮ್ಲೇ
        ಚ್ಛಾವಳಿ ವೆಟ್ಟಿಲಿಯೆನಿಪ್ಪ ಪೆಸಱಿತ್ತುದೊ, ಕಾ
        ಣಾ ವಿಕೃತ ಮತಾಂಧತೆಯಾ
        ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ

    • Good one Maurya. Keep them coming.

  22. ಆವುದೊಳಸಂಚದಿಂತಾಂ
    ಭಾವಸಮಾಧಿಗದೊ ಹಾವಭಾವವನಿತ್ತುಂ
    ಕಾವುಗೊಡೆ ಹಸಿವೆಗೊಡಲೊಳ್
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ !!

    ಕುಂಡಲಿನಿ ಶಕ್ತಿ (ಹಾವು) / ಹಸಿವು (ಇಲಿ)ಗಳ ಒಡನಾಟ !!

    • पेट में चूहा दौड रहा है ಎಂಬ ಹಿಂದಿ ನಾಣ್ಣುಡಿಯನ್ನು ಬಳಸಿಕೊಂಡ ಒಳ್ಳೆಯ ಪರಿಹಾರ.
      ಸಂಚದಿಂತಾಂ?

      • ಧನ್ಯವಾದಗಳು ಪ್ರಸಾದ್ ಸರ್,
        ಸಂಚು + ಅದು + ಇಂತು + ಆನ್(ತಾಂ) = ಸಂಚದಿಂತಾನ್ ಆಗಬೇಕಲ್ಲವೇ?

  23. ಕಾವಿಂ ತತ್ತರಿಸುತೆ , ನಲ್
    ಠಾವಂ ಕಾಣದಲತೀವ ಸಂಕಟದೊಳಿರಲ್,
    ಸಾವರಿಸಲ್ನೆರಳಾದೀ
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ!

    • ಘರ್ಮದಿಂ ಬೇಯುತ್ತೆ ಸುಡುತಿರಲು ಮೂಷಕವು
      ಕರ್ಮಮೆನ್ನುತೆ ಪಾವು ನೆರಳೀಯುತುಂ|
      ಚರ್ಮಮಾ ಇಲಿಯದಾಗಲು ಕೊಂಚ ತಣ್ಣಗಾ-
      ಗೊರ್ಮೆಗೇ ಬಾಯೊಳಗೆ ಪೊಗಿಪ ಸಂಚೌ|| 😀

      • ನಿಮಗಾದೊಡಂ ಅರ್ಥಮಾದುದು ಹಾವಿನೀ ಸಂಚು. ಬಡಪಾಯಿ ಇಲಿಯಿದನರಿಯದಾಯ್ತೇ! 🙂

        • ಸಮಾನಮನಸ್ಕರು 🙂

        • ಸಂಚು ಹಾವಿನದಾಗಬಹುದನೂರ್ಜಿತಮೆಂತೊ
          ವಂಚಿತವದಾಗಿರಲ್ ವಾಸ್ತವ್ಯದಿಂ|
          (ಕಾವು)ಅಂಚಿತಿಯು ಮೂಷಕದ ಘರ್ಮಮೂಲದ್ದಿರದೆ
          ಹೊಂಚಿರಲ್ ಜೊತೆಗಾರಗದು ವೀಟಿನಿಂ (Heat)||

  24. ದೇವಗದೋ ಪೂಜಾ ವಿಧಿ-
    ಯೊಳ್ ನಾಗಾಭರಣವಂ ತೊಡಿಸಿರಲ್ಕಂದುಂ ।
    ಸೇವಿಸುತುಂ ಸೇಸೆಯತಾಂ
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ !!

    ದೇವರಿಗೆ ನಾಗಾಭರಣವನ್ನು ತೊಡಿಸಿದ್ದ ಗರ್ಭಗುಡಿಯಲ್ಲಿ ಅಕ್ಷತೆಕಾಳು ತಿನ್ನುತ್ತಿರುವ ಇಲಿಯ ಚಿತ್ರಣ !!

    • ಇಲಿಯು ಅಕ್ಷತೆ ಕಾಳು ತಿ೦ದರೆ ನೀವೇಕೆ ಒ೦ದು ಆದಿಪ್ರಾಸ ತಿ೦ದಿರಿ? 🙂

      • ಪ್ರಾಸಾದಿಯ ತಪ್ಪನು ಮನ್ನಿಸುವುದು ನೀಲಕಂಠ !!
        ತಿದ್ದಲು ಪ್ರಯತ್ನಿಸುತ್ತೇನೆ.

        ದೇವಾಲಯದೊಳ್ ಕಾಣ್ ಪೂ-
        ಜಾ ವಿಧಿ ! ನಾಗಾಭರಣವ ಧರಿಸಿರೆ ಶಿವಗಂ ।
        ಸೇವಿಸುತುಂ ಸೇಸೆಯತಾಂ
        ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ !!

        • ನಾನು ಯಾವ ತಪ್ಪನ್ನೂ ಮಾಡಿಲ್ಲ ನೀಲಕಂಠ. ನನ್ನನ್ನು ಯಾರೂ ತಿದ್ದಬೇಕಾಗಿಲ್ಲ.

          • ಅಯ್ಯೋ ದೇವರೇ …. !! ಪ್ರಸಾದ್ ಸರ್, ಸರಿಯಾಗಿ ಗಮನಿಸಿ. ಅದು “ಮಂಜುನಾಥ” ಪ್ರಸಾದ, “ರಂಗನಾಥ” ಪ್ರಸಾದ ಅಲ್ಲ !!

  25. ತಾವಿದು ನೋಡೈ ಶಿಷ್ಯಾ
    ಪಾವನತಮವಾದುದೈ, ತಪವಗೈದರ್ ಕಾ-
    ಣಾ ವೈಭಾ೦ಡಕರಿಲ್ಲಿಯೆ,
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ

    Known story from Adi Shankaracharya at Shringeri. (Please replace the pregnant frog with mouse :))

  26. ಜೀವಂಗಡಮಿನ್ನೆಂದುಂ
    ಪಾವಿನ ನಂಜಿಂದಸಾವ ಕೊಳ್ಳದುದರಿತುಂ
    ಪಾವಾಡಿಗನಡುಮನೆಯೊಳ್
    ಹಾವಿನಹೆಡೆಯಡಿಯೊಳಾಖು ನಲಿದಿದೆ ನೋಡ..

    ( ಪಾವಾಡಿಗನ್ ಅಡುಮನೆಯೊಳ್ )

    ಹಾವಾಡಿಗನ ಮನೆಯ ಹಾವಿಗೆ ಈ ಮೊದಲೇ ಹಲ್ಲುಕಿತ್ತಿರುವುದನ್ನ ಅರಿತ ಇಲಿ, ಆ ಹಾವಿನ ಹೆಡೆಯಡಿ ನಲಿದಿದೆ..

  27. ಸಾವನು ತಪ್ಪಿಸೆ, ಹೆದರುತೆ,
    ಗಾವುದ ಓಡುತೆ ಶಿಕಾರಿಕುಕುರಗಳಿಂದಿಂ-|
    ತಾ ವನಮಾರ್ಜಾರವಡರೆ
    ಹಾವಿನ ಹೆಡೆಯಡಿಯೊಳ್, ಆಖು ನಲಿದುದು ನೋಡಾ||

  28. ಜೀವಬೆದರಿಕೆಯನೊಡ್ಡುತೆ
    ನೋವನನುಕ್ಷಣದೊಳೀದ ಮಾರ್ಜರಮೊಂದುಂ
    ಸಾವಿಗೆನೆ ಸಂದಿರಲ್ಕಾ
    ಹಾವಿನಹೆಡೆಯಡಿಯೊಳ್, ಆಖು ನಲಿದುದು ನೋಡಾ!!

  29. ಜೀವಕ್ಕಿಲ್ಲಂ ದುಗುಡಂ-
    ಭೂವನದೊಳ್ ,ವೈರಿಯಿಲ್ಲಮೆನುತುಂ,ಕೆರೆದುಂ
    ಸಾವಂ ಕಂಡಾ ನಾಗರ
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ!!

    (ಭೂಮಿಯಲ್ಲಿ ತನ್ನ ವೈರಿಯು ಗತಿಸಿತೆಂದು ಸತ್ತ ಹಾವಿನ ಹೆಡೆಯಡಿಗೆ ಸಾರ್ದು, ಕೆರೆಯುತ್ತಾ ,ಇಲಿಯು ಸಂತೋಷಿಸಿತು)

    • ನೆಲಕೊರಗಿದ ಹಾವಿನ ಹೆಡೆ-
      ಯುಳಿದ ಪರಿಯದೆ೦ತು ಮೇಗಡೆಯೊಳಾಡುತಲೇ?!!
      ಇಲಿಗೆ೦ತು ಸಾಧ್ಯವದರಡಿ-
      ಯೊಳಾಡಲು ಮಕಾಡೆ ಬಿದ್ದಿರೆ ಮೊಗಮೆ ಕೆಡೆದು೦

      • ಹೆಡೆಯಂ ಬಿಚ್ಚಿಯೆ ಸಾಯದೆ?(ಹಾವು),
        ಹೆಡೆಯಂ ನೆಲಕಪ್ಪಳಿಪ್ಪ್ಪುದಂ ಕಣ್ಣಾರೆಯೆ ಕಂಡುಂ
        ಕಡೆದಿಹೆನೀಪದ್ಯಮ,ಮೇಣ್
        ಗುಡುಗುಡುವೋಡ್ವಿಲಿಗಸಾಧ್ಯಮೇ ನುಸುಳುವುದುಂ?(ಅದರಡಿಗೆ)

        (ಸತ್ತ ಹಾವಿನ ಹೆಡೆಯ ಅಡಿಯಲ್ಲಿ ನುಸುಳಿ ,ಕೆರೆಯುತ್ತಾ ಇಲಿಯು ಸಂತೋಷಿಸುತ್ತಿದೆ. (ಇಲಿಗೆ ಇದೇ ನಲಿಯುವ ವಿಧಾನವಾಗಿರಬಹುದಲ್ಲವೇ? 🙂 )

  30. ಗೋವದು ಹುಲಿಯೊಳ್ ಮೇಣಿಂ
    ಸೌವರ್ಣಮೃಗಂ (deer) ಶೃಗಾಲದೆ (fox), ಶಶಂ (rabbit) ವುಕದೊಳ್ (wolf)|
    ಕಾ(ದಾಡು)ವುವೆ (Baba)ಆಮ್ಟೆವನದೆ ಪೇಳ್?
    (ಅಲ್ಲಿ) ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ||

  31. ವೈವಾಹಿಕ ಬಂಧದೆ ಸಾ-
    ಲಾವಳಿಯು, “ಮೃಗಶಿರ”ಕನ್ಯೆಗದೊ “ಪುಬ್ಬೆ”ವರಂ
    ಮೇಣ್ ವಾಸಿ ಮಧ್ಯಕೂಟಂ !
    “ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ” !!

    ವಿನೋದವಾಗಿ :
    ಮೃಗಶಿರ ನಕ್ಷತ್ರದ ವಧು(ಪ್ರಾಣಿ – ಹಾವು) ಮತ್ತು ಪುಬ್ಬ ನಕ್ಷತ್ರದ ವರನ(ಪ್ರಾಣಿ – ಇಲಿ) ನಡುವಿನ ಗ್ರಹಮೈತ್ರಿ ಕೂಟದ ವರ್ಣನೆ – ಮಧ್ಯಮ ಯೋನಿಕೂಟ !!

    • ಆವಾವ ರಾಶಿಗಳೊ ತಾ-
      ರಾವಳಿಗಳೊ ಮೇಣದಾವ ದಿವಿಪಥದೊಳುಷಾ-
      ದೇವಿಯಿದ ಕ೦ಡಿರಿಸಿದಳೊ
      ಹಾವಿಲಿಗಳದೀ ವಿಚಿತ್ರಮ೦ ವಿಧಿಯರಿದ೦!!

      • ಆಧಾರ : ಒಂಟಿಕೊಪ್ಪಲ್ ಪಂಚಾಂಗ – ವಿವಾಹೋಪಯುಕ್ತ ದ್ವಾದಶ ಕೂಟಗಳು.

        • ಕೊಪ್ಪಲತೋಟರದೇನೋ ಕೈವಾಡಮಿರ್ಪುದಿದರೊಳ್!!

          • ಒಂಟಿ ಕೊಪ್ಪಲತೋಟಗೀಪರಿ
            ನಂಟ ಕಟ್ಟುದು ಲೇಸೆ(!) ಪೇಳ್ ದಿಟ
            ತಂಟೆಕೋರನೆ ನೀಲಕಂಠನೆ ಮೇಣಕಂಟಕನೇ !

    • ಇದು ಪಕ್ಷಪಾತಮಲ್ತೇ೦
      ಮದುಮಗಳ೦ ಹಾವಿಗ೦ ಮದುಮಗನನಿಲಿಗ೦
      ಸದರದೆ ಪೋಲಿಸುತೆ ಸ್ತ್ರೀ-
      ಪದಮ೦ ಪಿರಿದಾಗಿಸುತ್ತೆ ಬಲದೊಳ್ ವಿಷದೊಳ್!!!

      • ಸ್ತ್ರೀಪದಮಂ ಪಿರಿದಾಗಿಸುದುದು ವಿಷಮಲ್ತು! ಹಾವಿನಂತ ಜಡೆಯುಂ!! 🙂

        • ಆಹಾ, ಪುಸಿಯಪ್ಪ ಸಮರ್ಥನೆ ಗಡಾ! ಜಡೆಯಿರ್ಪುದೇನೀ ಕಾಲದ ವಧುಗಳ್ಗೆ? ಇರ್ಪುದೌ ಕೇಸರಿಯ ಕೇಸರ೦ಬೋಲ್ವೊ೦ತೆ 🙂

          • ಅಪ್ಪುದು 🙂 ಪುಸಿಯಾದ ನೀಳಜಡೆಯೇ ಇರ್ಪುದು ವಧುಗಳ್ಗೆ ಈ ಕಾಲದೊಳೇ ಬಲ್ಲಿರಾ?
            ಇಂತಿರಲ್ ಸಮರ್ಥನೆಯನೇ ಪುಸಿಯೆಂಬಿರೇಂ? 🙂

          • ಅಪ್ಪುದಿದನೊಪ್ಪಿದೆ ಕಣೌ
            ತೆಪ್ಪಗಿರುವುದಪ್ಪುದೌ ಜಡೆಮುಡಿಯ ಮಾತೊಳ್
            ಬೆಪ್ಪಾದ೦ ದುಶ್ಶಾಸನ-
            ನಪ್ಪಚ್ಚಿಯುಮಾದನಾ ಮುಡಿಗೆ ಕೈಯಿಕ್ಕಲ್ 🙂

        • “ನಾಗವೇಣಿ” ವಧುವಿಗೆ “ಮೂಗಿಲಿ” ವರ !!

          • ಮೂಗಿಲಿಯು ಕಡಿದುದೇನಾ ನಾಗವೇಣಿಯ ವೇಣಿವಾಲಮ೦?!!

        • ಪೆಣ್ಪಣಿಯ ಚಿಂತೆ ಬೇಡ ನೀಲಕಂಠ, ಪುಬ್ಬೆ ವರ ಇಲಿಯಾದರೂ, “ಸಿಂಹ” ರಾಶಿ !!

    • Good imagination. And good padyasaMbhAShaNe.

  32. ದೇವಂ ಕಾಯ್ಗುಂ ನಿಚ್ಚಂ
    ಜೀವಭಯದಿನೇಕೆ ಸಾಸಮಂ ತೊರೆದಿರ್ಪೆಂ ? |
    ಸಾವಿರೆ ಕಲಿಯಪ್ಪೆನೆನುತೆ
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ ||

    • ಇಲಿಯ೦ ಕಲಿಯ೦ ಮಾಳ್ಪೀ
      ಮೊಳೆಯಾರ ಶಕು೦ತಲಾರ್ಯೆಯ ಕುಶಲತೆಯಿದೆ೦-
      ತೊಲಿದಿರ್ಪುದೋ ಕವಿಕುಲ-
      ಕ್ಕಲಾ ಕಲಾವಿಲಸನ೦ ದಿಟದೊಳದ್ಭುತಮಯ್

      • ditto

      • ನೀಲಕಂಠರ್ಗೆ,

        ಮೆಚ್ಚುತುಮೆನ್ನಯ ಪೂರಣ-
        ವಚ್ಚರಿಯಿಂ,ಪದವ ಪೊಗಳೆ ನಮಿಪೆಂ ನಿಮಗಂ ,|
        ಸಚ್ಚರಿತಕವಿಮಹಾಶಯ-
        ರಿಚ್ಚಿಸುತೆ ಸೃಜಿಸಿರೆ ಕಂದಪದ್ಯಮನರಿವಿಂ ||

        ಪ್ರಸಾದರ್ಗೆ,

        ditto

        • ಹಹ್ಹಾ
          ಡಿಟ್ಟೋವನೆ ಪ್ರಸಾದರ್
          ಕೊಟ್ಟರ್ ಪಡೆದರ್ ಮರಳ್ಚಿ ಡಿಟ್ಟೋಮನೆ ತಾವ್
          ಕೊಟ್ಟಷ್ಟಲ್ತೇ೦ ಬರ್ಪುದು!
          ಲಟ್ಟಣಿಯ೦ ಕೊಟ್ಟೊಡೇ೦ ಕುಡಲ್ಪುದೆ ಬೆಟ್ಟ೦?!!

    • ಬೆಟ್ಟಕೆ ಬಟ್ಟೆಯ ನೂಲಂ
      ಕಟ್ಟುತುಮೆಳೆದಾಗಳೀರು ಸಾಧ್ಯತೆಗಳ್ ಕಾಣ್|
      ಬೆಟ್ಟಂ ಬಂದೊಡೆ, ಪೋಪೊಡೆ
      ಬಟ್ಟೆಯ ನೂಲೊಂದುಮಲ್ತೆ! ಪೋದೊಡೆ ಪೋಗುಂ|| 😀

  33. ಜೀವಿಸಿರಲ್ ತಾನೆಲರಿಂ
    ದಾವಿಷಮೆಲ್ಲಮನು ತೀವಿರಲ್ಕೌಷಧಕೆಂ
    ದೀ ವಿಜ್ಞಾನಿಯ ಮನೆಯೊಳ್
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ

  34. ಆವ ಜನುಮದ ದುರಿತಫಲ-
    ಮೋ ವಿಗತಂಗೊಂಡ ದಿಟ್ಟಿಯಿಂ ಬಾಳುತಿರಲ್ ,|
    ತಾವೆಂತೆಂಬುದನರಿಯದೆ
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾ ||

  35. ಆವರಿಸಲಬ್ಬೆಗೆ ನಿದಿರೆ,
    ಆವಪರಿವೆಯುಮಿರದೇ ಪುಟಿಪುಟಿಯುತೆ ,ಮೊದಲ್
    ಭಾವಿಸಿದ ಜಗಮನರಿಯದೆ,
    ಹಾವಿನಹೆಡೆಯಡಿಯೊಳಾಖು ನಲಿದುದು ನೋಡಾ!!

    (ಆಗತಾನೇ ಕಣ್ತೆರೆದ ಮರಿಯು,ಅರಿವಿಲ್ಲದೇ,ತಾಯಿಯು ನಿದ್ರಿಸಿದಾಗ, …)

    • ಖೊಟ್ಟಿತನವೇನಿದು ಕವಿಯ!
      ಪುಟ್ಟಿದ ಚಣಮೇ ಯಮಾಲಯಕ್ಕಿಲಿಯ೦ ನೀ-
      ವಟ್ಟುವುದೇ೦ ಸಲ್ವುದೊ, ನ-
      ಮ್ಮೊಟ್ಟಿಗಿನಿತು ಕಾಲಮು೦ ಬದುಕಲೀಯದಲೇ 🙁

  36. ತಾವರೆವಗೆ ಕಾಂತಿ ಪರಿದು
    ಆ ವರಯತಿ ರಾಮಕೃಷ್ಣ ದೇವಗೃಹದ ಮೇಲ್ I
    ಸೇವಾ ಲಾಂಛನ ಪೂವೊಳ್
    ಹಾವಿನ ಹೆಡೆಯಡಿಯೊಳಾಖು ನಲಿದುದು ನೋಡಾII

    ತಾವರೆವಗೆ=ಚಂದ್ರ
    ರಾತ್ರೆ ಚಂದಿರನ ಬೆಳಕಿನಲ್ಲಿ ಶ್ರೀ ರಾಮಕೃಷ್ಣ ಮಠದ (ಸಂಸ್ಥೆಯ ) ಮೇಲೆ ಕೆತ್ತಿರುವ ಲಾಂಛನದ ಹೆಡೆ ಎತ್ತಿದ ಹಾವಿನ ಕೆಳಗಿರುವ ತಾವರೆ ಹೂವಿನ ಮೇಲೆ ಇಲಿ ನಲಿದಾಡುತ್ತಿತ್ತು

    ( ಪರಿಚಯವಿಲ್ಲದವರಿಗಾಗಿ ….. ಸ್ವಾಮಿ ವಿವೇಕಾನಂದರಿಂದ ರಚಿಸಲ್ಪಟ್ಟ ಆ ಲಾಂಛನದಲ್ಲಿ ಹೆಡೆಯೆತ್ತಿದ ಹಾವು ,ಅದರ ಕೆಳಭಾಗ ಮೂಡುತ್ತಿರುವ ಸೂರ್ಯ,ಸರೋವರದ ನೀರಿನ ತರಂಗಗಳು ಮತ್ತು ಕಮಲದ ಹೂವಿರುವುದು. ಚಿತ್ರ & ಅರ್ಥಕ್ಕಾಗಿ The Emblem of Ramakrishna order ಎಂದು ಹುಡುಕಿದರೆ ಜಾಲತಾಣದಲ್ಲಿ ಸಿಗುವುದು )

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)