Jun 262017
 

ಉತ್ಪಲಮಾಲೆ/ಚಂಪಕಮಾಲೆ ಛಂದಸ್ಸುಗಳ ಪಾದಾಂತ್ಯಕ್ಕೆ ಒಪ್ಪುವ ಈ ಕೆಳಗಿನ ಸಾಲನ್ನು ಅಳವಡಿಸಿ ಪದ್ಯಪೂರಣ ಮಾಡಿರಿ:

ಬೆಲ್ಲದ ಕಟ್ಟೆಗೆ ಬೇವ ಬೀಜಮೇ

  58 Responses to “ಪದ್ಯಸಪ್ತಾಹ ೨೬೧: ಪದ್ಯಪೂರಣ”

  1. ನಾಳಿಯೊಳಾವಗಂ ಜಟೆಯ ಭಾರಮನೆತ್ತಿದ ಯೋಗಿಗಂ ಲಸ
    ತ್ಕಾಳಮಹೇಶಗಂ ಕುಸುಮಕೋಮಲ ಭಕ್ತಿಯೊಳಿತ್ತನೈ ನಿಜಾ
    ಸ್ಯಾಳಿಯನಾದೊಡಂ ಬೆಳೆದುದೆಂತುಟು ಶೇಮುಷಿಯಾಳದೊಳ್ ವಲಂ
    ವ್ಯಾಳವಿಚಾರಮಾಯ್ತದುವೆ ಬೆಲ್ಲದ ಕಟ್ಟೆಗೆ ಬೇವ ಬೀಜಮೇ//

    ಬೆನ್ನಿನ ಮೇಲೆ ಯಾವಾಗಲೂ ಜಟೆಯಭಾರವನ್ನು ಹೊತ್ತ ಯೋಗಿರಾಜನಿಗೆ,ಕಾಲವರ್ಣದಿಂದೊಪ್ಪುವ ಶಿವನಿಗೆ ಹೂವಿನಷ್ಟು ಕೋಮಲವಾದ ಭಕ್ತಿಯಿಂದ ಮುಖಗಳ(ತಲೆಗಳ) ಸಾಲನ್ನರ್ಪಿಸಿ ಅರ್ಚಿಸಿದರೂ(ರಾವಣ) ಅವನ ಬುದ್ಧಿಯ ಆಳದಲ್ಲಿ ದುಷ್ಟವಿಚಾರಗಳು ಹೇಗೆ ಚರಿಸುತ್ತಿದ್ದವೋ?ಇದು ಬೆಲ್ಲದ ಕಟ್ಟೆಗೆ ಬೇವ ಬೀಜದಂತೆ ಆಯಿತು.
    (ಈ ಸಪ್ತಾಹದಲ್ಲೂ ರಾವಣನೇ ಬಂದುಬಿಟ್ಟ 🙁 )

    • Good imagination and diction. ಆಸ್ಯಾಳಿಯಿಂ ಎಂದರೆ ಮುಖಾಳಿಗಳನ್ನು ಬಳಸಿ (ತಾಂತ್ರಿಕನೊಬ್ಬನು ಮಾಡಿದ) ಎಂದಾಗುತ್ತದೆ; ಮುಖಾಳಿಯನ್ನು ’ಹೊಂದಿದವನು’ ಎಂಬುದು ವಿವರಣೆ ಓದುವವರೆಗೆ ತಿಳಿಯಲಿಲ್ಲ. (ಆಸ್ಯಾಳಿಯನಾದೊಡಂ ಆದೀತೆ? I am not sure)

      • ಧನ್ಯೋಸ್ಮಿ. ಅವನ ಮುಖಗಳೆಂದೇ ಪ್ರತೀತವಾಗುವಂತೆ ಸವರಿದ್ದೇನೆ. ಸರಿಹೋಗುವುದೇ? ಹೌದು,ಅಲ್ಲಿ ನತ್ವ ಬರುತ್ತದೆ. ತಿದ್ದಿದ್ದೇನೆ. _/\_

    • ಸುಮನಸ್- ಸಕಾರಾಂತ ಶಬ್ದ. ಹಾಗಾಗಿ ಸುಮನಃಕೋಮಲ ಆಗಬೇಕಾಗುತ್ತದೆ. ಅದರ ಬದಲು ಕುಸುಮಕೋಮಲ ಎಂದು ಮಾಡಬಹುದು. ಈದನೈ- ಅಷ್ಟು ಸರಿಯಾದ ಶಬ್ದವಲ್ಲ ಅನಿಸುತ್ತದೆ. ಇತ್ತನೈ ಎಂದು ಮಾಡಬಹುದು. ಖೂಳ ಎಂಬುದು ಕನ್ನಡ ಶಬ್ದವಲ್ಲವೇ! ಒಟ್ಟಂದದಲ್ಲಿ ಪದ್ಯದ ಭಾವ ಚೆನ್ನಾಗಿದೆ. ಇನ್ನೊಂದು ಗಮನಿಸಬೇಕಾದ ಅಂಶ- ಮೊದಲ ಸಾಲಿನಲ್ಲಿ ‘ಹಾವಿಗೆ” ಪಾಳೆಯವಾದವನಿಗೆ- ಎಂಬ ಎರಡೆರಡು ಚತುರ್ಥಿಗಳು ಸ್ವಲ್ಪ ಗೊಂದಲವನ್ನು ಉಂಟು ಮಾಡುತ್ತವೆ. ಅಲ್ಲದೇ ಶಿವನಿಗೆ ಎಂದು ಹೇಳುವಲ್ಲಿ ಅಷ್ಟು ದೀರ್ಘವಾಗಿ ಪ್ರಕಾರಾಂತರದಿಂದ ಹೇಳುವ ಅವಶ್ಯಕತೆ ಇದೆಯಾ! ರಾವಣನ ದುರ್ಗುಣಕ್ಕೆ ಅಥವಾ ಶಿವನ ಸಾತ್ತ್ವಿಕತೆಗೆ ಪೋಷಕವಾದ ವಾಕ್ಯಗಳು ಬಂದರೆ ಇನ್ನೂ ಚೆನ್ನ ಅಲ್ಲವೇ! ಇವೆಲ್ಲ ಕೇವಲ ದೋಷವನ್ನು ತೋರಿಸುವ ಮಾತುಗಳೆಂದು ಬೇಸರಿಸಿಕೊಳ್ಳದಿರಿ. ನಿಮ್ಮಿಂದ ಇನ್ನೂ ರಸ್ಯವಾದ ಪದ್ಯಗಳು ಹೊರಹೊಮ್ಮಲಿ ಎಂಬ ಆಶಯದೊಂದಿಗೆ ಹೇಳುತ್ತಿರುವುದಷ್ಟೆ

      • ಧನ್ಯವಾದಗಳು ಕೊಪ್ಪಲತೋಟರೇ. ತಿದ್ದುಪಡಿ ಮಾಡಿದ್ದೇನೆ. ಪದ್ಯ, ರಸ್ಯವಾಯಿತೋ ಇಲ್ಲವೋ ತಿಳಿಯೆ. ಇನ್ನು ಬೇಸರಿಸಿಕೊಳ್ಳುವ ವಿಚಾರ. ನೀವು ತಪ್ಪುಗಳನ್ನು ತಿಳಿಹೇಳದಿದ್ದರೇ ನನಗೆ ಬೇಸರವಾಗುವುದು 🙂

  2. Confectionary factory. Groundnut Chikki production underway:
    ಆದಿಯೊಳುಕ್ಕುತಿರ್ಪ ಕುದಿಬೆಲ್ಲಕೆ ಶೇಂಗವ ಕುಟ್ಟಿ ಸೇರಿಸಲ್
    ಕಾದಿರಲಾಗ ಪಾಕವದು ಸೇರಿಸೆ ಕೇಸರಿ-ಚಂದ್ರವಾಲಮಂ(ಏಲಕ್ಕಿ)|
    ಮೋದದ ಚಿಕ್ಕಿಗಟ್ಟಿಯದೊ! ಬೆಲ್ಲದ ಕಟ್ಟೆಗೆ(slab) ಬೇವ(ಬೇಯುವ) ಬೀಜಮೇಂ
    ಸ್ವಾದಮನೀವುದೋ ರಸನಕಾ ಪರಿ ತೋಷಮನಾವುದೀವುದೋ!!

    • ನನಗೆ coconut ಚಿಕ್ಕಿ ಗೊತ್ತು. ಇದ್ಯಾವುದಿದು cocoanutಚಿಕ್ಕಿ? ಅಂದಹಾಗೆ ನಿಮ್ಮ ಪದ್ಯವನ್ನೋದಿ ಚಿಕ್ಕಿಯನ್ನು ತಿನ್ನಬೇಕೆಂದು ಆಸೆಯಾದದ್ದು ಸುಳ್ಳಲ್ಲ 🙂

    • ಪಂಪನಿಳಿಂಪಕಂಪಕವಿಗುಂಫಿತ ಗುಣ್ಪಿನ ಪೆಂಪದಲ್ಲದೇ
      ರಂಪರ ಪದ್ಯಕಿಂತು ಪೆರತೊಂದಿದೆ ದಿಕ್ಕೆನುತೆಲ್ಲರೊಪ್ಪುವರ್
      ಸೊಂಪಿಗೆ ಸೇರಿ ಟೀಕುಗಳೆ ಚಿಕ್ಕಿಯ ಮಧ್ಯದೆ ಕಲ್ಗಳಂದದಿಂ-
      ದಿಂಪಿಗೆ ಮುಳ್ಗಳಾದುವಕಟಾ ಬರೆಯಿಂ ಸುಲಭಕ್ಕೆ ಕಾಣ್ಬವೊಲ್!
      (ನಿಮ್ಮ ಪದ್ಯದ ಮಧ್ಯದಲ್ಲಿ ನಿಮ್ಮದೇ ಟೀಕು ಟಿಪ್ಪಣಿಗಳೇ ಹೆಚ್ಚಾಗುತ್ತಿರುವುದು ಚಿಕ್ಕಿಯ ಮಧ್ಯೆ ಕಲ್ಲು ಸಿಕ್ಕಿದಂತಾಗುತ್ತಿದೆ. ಸುಲಭಕ್ಕೆ ಟಿಪ್ಪಣಿ ಇಲ್ಲದೇ ಅರ್ಥವಾಗುವಂತೆ ಬರೆಯಿರಿ)
      ಬೇವ ಎಂಬ ಶಬ್ದವನ್ನು ಚೆನ್ನಾಗಿ ಬಳಸಿಕೊಂಡಿದ್ದೀರಾ!

      • “ಚಿಕ್ಕಿಯ ಮಧ್ಯದೆ ಶೇಂಗದಂದದಿಂ” ಆಗಬೇಕಲ್ಲವೇ? 😉

      • ಇಲ್ಲ ಮಂಜ. ಕೊಪ್ಪಲತೋಟರು ಹೇಳಿರುವುದು ಸರಿಯಾಗಿದೆ. ಧನ್ಯವಾದ ಕೊಪ್ಪಲತೋಟರೆ.

  3. ಮರುಗುತುಮಿರ್ಪರೈ ಜಗದೆ “ಬೆಲ್ಲದ ಕಟ್ಟೆಗೆ ಬೇವಬೀಜಮೇ
    ನಿರುತಮದೆಂದು!ಬೊಮ್ಮನ ಕುಚೋದ್ಯದ ಪಾಂಗನಲಕ್ಷಿಸುತ್ತೆ ಹಾ!
    ಮುರರಿಪುವಂಶಕಂ ಕವಿದ ಕಳ್ತಲೆಯಂ ದಿಟಮೀಕ್ಷಿಸುತ್ತೆ ಮೇಣ್
    ವರರಘುರಾಮಜಾತಕುಲದೊಳ್ ಜನಿಸಿರ್ದಿರಲಗ್ನಿವರ್ಣನುಂ!!

    (ಕೃಷ್ಣನ ಕುಲದ ಅವನತಿ, ರಾಮನ ವಂಶದಲ್ಲಿಯೇ ಅಗ್ನಿವರ್ಣನನ್ನು, ಕಂಡರೂ, ಬ್ರಹ್ಮನ ಕೈವಾಡವನ್ನು ಗಣಿಸದೇ,ಜನ ಬೆಲ್ಲದ ಕಟ್ಟೆಗೆ ಬೇವಬೀಜಮೇ ಎಂದು ಮರುಗುತ್ತಾರೆ)

  4. ಮೊದಲೊಳ್ ಪೇಳಿರ್ಪರ್ “ಬೆ
    ಲ್ಲದ ಕಟ್ಟೆಗೆ ಬೇವ ಬೀಜಮೇ ಎಡಿಸನ್ನಂ”
    ಪದೆದಾ ವಿಜ್ಞಾನದೊಳಂ
    ಚದುರತೆಯಿನನೀಕಮೆನ್ನಿಸಿದದ ತಾಂ

    ಮೊದಲಲ್ಲಿ(ಶಾಲೆಯಿಂದ ಹೊರಹಾಕಲ್ಪಟ್ಟಾಗ) ಎಡಿಸನ್ನನು ಬೆಲ್ಲದ ಕಟ್ಟೆಗೆ(ಮಹಾತ್ವಾಕಾಂಕ್ಷಿ ತಾಯಿಗೆ) ಬೇವಬೀಜವೇ ಎಂದು ಆಡಿಕೊಂಡರು. ಆದರೆ ಆತ ವಿಜ್ಞಾನದಲ್ಲಿ ಆಸಕ್ತಿ ಹೊಂದಿ (ಸಂಶೋಧನೆಗಳನ್ನು ಮಾಡಿ) ಚತುರತೆಯಿಂದ ಆ ಮಾತನ್ನು ಸುಳ್ಳಾಗಿಸಿದ

  5. ಲೋಲದೆ ಮೆದ್ದರಾದುದೆ ವಿಪಾಕಮನೆಲ್ಲವ(Junk food) ನಿತ್ಯನಿತ್ಯಮುಂ
    ಜೋಲುತೆ ಬಾಡದೇಂ ವಪುವಪಥ್ಯದಧಿಷ್ಠದಿನಿಂದಲೆಂತುಟೋ| (ಅಧಿಷ್ಠ=influence)
    ನಾಲಗೆಯೆಂತೊ ಹಾತೊರೆಯೆ ಬೆಲ್ಲದ ಕಟ್ಟೆಗೆ, ಬೇವ ಬೀಜಮೇ
    ಮೂಲಿಕೆಯಂದದೆಂತೊ ಒದಗಿರ್ಪುದು ಜಾಠರರೋಗಕೆಂದಿಗುಂ||

    • ಚೆನ್ನಾಗಿದೆ. ಎಲ್ಲವ- ಎಲ್ಲಮಂ ಎಂದಾದರೆ ಚೆನ್ನ. “ಎಲ್ಲಮನಿಲ್ಲಿ ನಿತ್ಯಮುಂ” ಎಂದು ಬದಲಾಯಿಸಬಹುದು.

  6. ನೇಹದಿನಿರ್ಪರೈ ಎನಗಮೆಂತುಟೊ ಸಾಸಿರನಾಡ ನಾಡಿಗರ್
    ಬಾಹುಬಲೀಂದ್ರನುಂ ಬಸವನುಂ ಶರಣಪ್ಪನುಮಂತೆ ಲಕ್ಷ್ಮಣಂ|
    ವಾಹರೆ! ಗಂಡುಮೆಟ್ಟಿದ ಬಿಜಾಪುರವಾಸಿಗಳಲ್ತೆಲೆಲ್ಲರೂ
    ಊಹಿಸು ಗೋತ್ರನಾಮಗಳ: ಬೆಲ್ಲದ-ಕಟ್ಟೆಗೆ-ಬೇವ-ಬೀಜಮೇ||
    The names are: Bahubalindra Bellada, Basava Kattege, Sharanappa Beva and Lakshmana Bijame!

    • ಹಹ್ಹ! ನಿಮ್ಮ ಕಲ್ಪನೆಗೆ ನಮೋನಮಃ! ಬಾಹುಬಲೀಂದ್ರನುಂ ಎಂದು ಮಾಡಬಹುದು.

  7. ಎಲ್ಲಿದನೆಲ್ಲಿದಂ ಕುರುಕುಲಾನ್ವಯಪಾತಕಕೇತುವಾತನಂ
    ಕೊಲ್ಲದೆ ಪೋಗೆನಾಂ ಕುಲದ ಕೀರ್ತಿಕಳಂಕನಿವಂ ಮದಾಂಧನೇ-
    -ನಲ್ಲನೆ! ಚಂದ್ರವಂಶಕಿದೊ ಬೆಲ್ಲದ ಕಟ್ಟೆಗೆ ಬೇವ ಬೀಜಮೇ
    ಸಲ್ಲುವ ಪಾಂಗದಾಯ್ತೆನುತೆ ಗರ್ಜಿಸಿದಂ ರುಷೆಯಿಂ ವೃಕೋದರಂ||

    • ಪ್ರವಚನವೊಂದರಲ್ಲಿ ಶ್ರೀ ರಾ. ಗಣೇಶರು ಹೇಳಿದ ಮಾತನ್ನು ನೆನಪಿಸುತ್ತದೆ ನಿಮ್ಮ ಪದ್ಯ. “ಭೀಮ ಎನ್ನುವುದಕ್ಕೆ ನೂರು ಶಬ್ದಗಳಿರಬೇಕು. ’ಭೀಮ’ ಎಂದು ಒಂದೇಒಂದನ್ನು ಇಟ್ಟುಕೊಂಡು ಏನೂ ಪ್ರಯೋಜನವಿಲ್ಲ (ಕಾವ್ಯರಚನೆಗೆ). ತಿರಬೋಽಽಽಕಿಕೆಲಸ.”

  8. ಬಳಲುತಲಿರ್ದು ರೋಗರುಜಿನಂಗಳೊಡಂ ಬದುಕೊಳ್ ನರಂ ಸದಾ
    ತಳಮಳಿಸಿರ್ಪವಂ ಕಹಿಗೆ, ಸೇವಿಸಲೌಷಧ ಬಾಯಿಕಟ್ಟಿರಲ್
    ಬಳುವಳಿಯಂತಿದುಂ ಬಹುವಿಧಾಕೃತಿಯೊಳ್ ಗುಳಿಗಾವಿಧಾನಮಿಂ-
    ತಳವಡಿಸಲ್ಕುಪಾಯದೊಳು, ಬೆಲ್ಲದ ಕಟ್ಟೆಗೆ ಬೇವ ಬೀಜಮೇ ||

    ಗುಳಿಗೆ / ಕ್ಯಾಪ್ಸುಲ್ ಬಗೆಗಿನ ಪದ್ಯ !!

    • well perceived and interpreted

    • ಚೆನ್ನಾಗಿದೆ. ಔಷಧಂ/ಔಷಧಮಂ ಎಂದಾಗಬೇಕು. ಗುಳಿಕಾವಿಧಾನ ಎಂದು ಮಾಡಿದರೆ ಅರಿಸಮಾಸವಾಗುವುದಿಲ್ಲ.

      • ಧನ್ಯವಾದಗಳು ಕೊಪ್ಪಲತೋಟ.
        ತಿದ್ದಿದ ಪದ್ಯ
        ಬಳಲುತಲಿರ್ದು ರೋಗರುಜಿನಂಗಳೊಡಂ ಬದುಕೊಳ್ ನರಂ ಸದಾ
        ತಳಮಳಿಸಿರ್ಪವಂ ಕಹಿಗೆ, ಸೇವಿಸಲೌಷಧಮಂ ವಿರೋಧಿಸಲ್
        ಬಳುವಳಿಯಂತಿದುಂ ಬಹುವಿಧಾಕೃತಿಯೊಳ್ ಗುಳಿಕಾವಿಧಾನಮಿಂ-
        ತಳವಡಿಸಲ್ಕುಪಾಯದೊಳು, ಬೆಲ್ಲದ ಕಟ್ಟೆಗೆ ಬೇವ ಬೀಜಮೇ ||

  9. ಆಲೆಮನೆಯ ಸುತ್ತ ನೆರಳಿಗಾಗಿ ಮರಗಳನ್ನು ಬೆಳೆಸು ಎಂದು ಗೌಡನು ಆಳಿಗೆ ಹೇಳಿರಲು:
    ನೆಳಲಿಗೆ ವೃಕ್ಷಶೃಂಖಲೆಯ ನಾಟೆಲೊ ಆಲೆಯ ಸುತ್ತಲೆಂದಿರಲ್
    ಕುಳಿತೆಡೆ ಕೀರ್ಣಮಿರ್ಪ ಕಹಿಬೇವಿನಬೀಜಮನಾಯ್ದುಮಲ್ಲಿಯೆ|
    ಉಳುಮೆಯ ಗೈವ ಭೃತ್ಯನನೆ ನೋಡುತೆ ಕೋಪದೆ ಗೌಂಡನೆಂದನೈ
    “ಕೊಳಕನೆ! ಅನ್ಯಮೇನಿರದೆ, ಬೆಲ್ಲದ ಕಟ್ಟೆಗೆ ಬೇವ ಬೀಜಮೇ?|”

    • ಕಲ್ಪನೆ ಚೆನ್ನಾಗಿದೆ. ಇಹ- ಇತ್ಯಾದಿ ಪ್ರಯೋಗಗಳ ಬದಲಿಗೆ ಇರ್ಪ ಎಂದಾದರೆ ಹೆಚ್ಚು ಹದ. “ಆಯುತ್ತಲ್ಲಿಯೆ” ಎಂಬಲ್ಲಿ ಛಂದಸ್ಸು ತಪಫಿದೆ. ಅದೇನೆಂದು ಅರ್ಥವಾಗಲಿಲ್ಲ! ಆಯಿತಲ್ಲಿಯೆ ಎಂದಾಗಬೇಕೆ?

      • ಆಯ್ದುಕೊಳ್ಳುವುದು, ಅಲ್ಲಿ ಬಿದ್ದಿರುವ ಬೇವಿನಬೀಜಗಳನ್ನು ಆರಿಸಿಕೊಳ್ಳುವುದು. ಗ್ರಾಮ್ಯವಾಯಿತು. ಸವರಿದ್ದೇನೆ.

  10. India surrounded by enemies
    ಉರ್ವಿಯೆ ಶಂಸಗೈಯುತಿರೆ ಭಾರತರಾಷ್ಟ್ರಿಯವೇದರಾಶಿಯಂ(knowledge)
    ಹೋರ್ವರೆ ತುಂಬಿಹರ್ ನೆರೆಯೊಳಿಕ್ಕೆಲದಲ್ಲಿಯುದೀಚಿಯಲ್ಲಿಯುಂ|
    ಪೂರ್ವದೆ ಬಾಂಗ್ಲ-ಪಾಕಿತಲಮೀಯೆಡೆಯುತ್ತರದಿಂದೆ ಚೀನಮುಂ
    ಚರ್ವಿತಚರ್ವಿಪರ್ ರಣವ! ಬೆಲ್ಲದ ಕಟ್ಟೆಗೆ ಬೇವ ಬೀಜಮೇ!!

    • ಚೆನ್ನಾಗಿದೆ. ಭಾರತದ ಜ್ಞಾನರಾಶಿಯಂ – ಛನ್ದಸ್ಸು ತಪ್ಪುತ್ತದಲ್ಲ?

      • ಶಿಥಿಲದ್ವಿತ್ವ

        • ಬಹುಶಃ ಇಂತಹ ಶಬ್ದಗಳ(ಜ್ಞಾನ) ಹಿಂದೆ ಶೈಥಿಲ್ಯವನ್ನು ತರಲಾಗದೇನೋ?(I’m not sure) ಕೇಶದ್ವಯಮಾತ್ರಾವರ ಕೇಶವರಾಜರೊರೆಗುಂ 🙂

          • ಹ್ಹಹ್ಹ. ಸಮಾಸದ ಮಧ್ಯದಲ್ಲಿ ಶಿದ್ವಿಯನ್ನು ಬಳಸಿಲ್ಲ. ಹಾಗಾಗಿ ಸಾಧು ಎಂದುಕೊಂಡೆ.

          • 😀 😀 ಶಿಥಿಲದ್ವಿತ್ವ ಮಾಡಬಹುದಾದರೂ ಅಷ್ಟು ಚೆನ್ನಾಗಿರುವುದಿಲ್ಲ. ಅಜ್ಞಾನರಾಶಿಯೇನೋ ಎಂದೆ‌ನಿಸಿಬಿಡುತ್ತದೆ.

          • ಮಾತ್ರ ಒಂದು ಶಿಥಿಲದ್ವಿತ್ವವನ್ನು ಪ್ರಯೋಗಿಸಿದ್ದಕ್ಕೆ ನನ್ನ ಇಡಿಯ ಚರ್ಯೆಯನ್ನು ’ಅಜ್ಞಾನರಾಶಿ’ ಎನ್ನಬಹುದೆ?

          • ಅದು ಬೆಲ್ಲದ ಕಟ್ಟೆಗೆ ಬೇವ ಬೀಜಮೇ! 😉

  11. ಒಡಹುಟ್ಟಿದವರೋ? ಶತ್ರುಗಳೋ?
    ಸಾಗಿರೆ ಸರ್ವಸೌಖ್ಯದೆ ಗೃಹಸ್ತಿಯು ನೂರರ ಒಟ್ಟುಗೇಹದೊಳ್
    ಕಾಗೆಗಳಂದದೊಳ್ ಕದನಗೈಯುತಲಿಂದಿಗೆ ಬೇರೆಯಾಗಿಹರ್|
    ಭಾಗವ ಗೈಯೆ ಕಾದಿಹರು ಸುತ್ತಲು ಗೇಹವ-ಭೂಮಿಖಂಡಮಂ (A piece of land)
    ನೀಗುತೆ ನಲ್ಮೆಯಂ ಜನರು, ಬೆಲ್ಲದ ಕಟ್ಟೆಗೆ (ಅಮೃತವನ್ನು ಬೆಳೆವ ಭೂಮಿ) ಬೇವ ಬೀಜಮೇ (ಪಾಲುದಾರರು)!!

  12. Mysorepak…..
    ಸ್ವಾದವ ಬಲ್ಲೆಯೇಂ ಕಡಲೆಬೇಳೆಯ ತಿಕ್ತಮೆ(ಕಹಿ) ಆಳದಲ್ಲಿ ಕಾಣ್
    ಆದೊಡೆ ಬೇಯಿಸಲ್ ಮಿಗೆ ಗೊಟಾಯಿಸಿ ಸಕ್ಕರೆಪಾಕದೊಳ್(ಶರ್ಕರಪಾಕದೊಳ್)|
    ಕಾದುದನಾರಿಸುತ್ತಲಿ ಶರಾವದೆ(plate) ಮಾಡೆ ಮಸೂರಪಾಕನುಂ
    ಐದಕೆ ಕಮ್ಮಿ ತಿನ್ನುವೆನೆ! ಬೆಲ್ಲದ ಕಟ್ಟೆಗೆ ಬೇವ ಬೀಜಮೇ||

  13. ಯಾವುದೇ ಇನಿವಣ್ಣಿನ ವೃಕ್ಷವು ಬೆಲ್ಲದಕಟ್ಟೆಯೇ. ಆದರೆ ಅದರ ಬೀಜವು ಕಹಿಯೇ!
    ಮಾವದು ಬಾಳೆ-ಸೇಬದು ಪರಂಗಿ-ಅನಾನಸು ದಾಡಿಮೀಫಲಂ
    ಯಾವುದೆ ಹಣ್ಣ ನೀಂ ರುಚಿಯ ನೋಡೆಲೊ ನಾಲಗೆ ಲೊಟ್ಟೆಗೈವುದೈ|
    ಸೇವಿಸಿ ನೋಡು ನೀನದರ ಬೀಜವ ಹಿಂಡುವೆ ಆಸ್ಯವನ್ನು ನೀಂ
    ತೀವಿತುಮೆಂತುಮಾ ರುಚಿಯೊ! ಬೆಲ್ಲದ ಕಟ್ಟೆಗೆ ಬೇವ ಬೀಜಮೇ||

  14. ಸಂಕಟಮಿಲ್ಲದೇ ತಿಳಿವುದೇಂ ಸೊಗಮೆಂಬುದದೆಂತುಟಿರ್ಪುದೆಂ?
    ಶಂಕರನಾದನಲ್ತೆ ಶಶಿಭೂಷಣನಾವಿಷವನ್ನೆ ನುಂಗುತುಂ?
    ಅಂಕೆಯೊಳಿರ್ದೊಡಂ ಸಹಜಮಪ್ಪುದು ದುಃಖಸುಖಂಗಳೆಲ್ಲಮುಂ
    ಶಂಕೆಯಿದೇತಕೈ? ಸಲುಗೆ ಬೆಲ್ಲದ ಕಟ್ಟೆಗೆ ಬೇವ ಬೀಜಮೇ

    ಶಶಿಭೂಷಣನು ವಿಷವೆಂಬ ಬೇವ ಬೀಜವನ್ನು ನುಂಗಿದರೂ ಶಂಕರ(ಒಳ್ಳೆಯದನ್ನು ಮಾಡುವವ)ನಾಗಲಿಲ್ಲವೆ? ಜೀವನದಲ್ಲಿ ಸುಖದುಃಖಗಳೆರಡಕ್ಕೂ ಪಾಲುಂಟಾದ್ದರಿಂದ, ಜೀವನವೆಂಬ ಬೆಲ್ಲದ ಕಟ್ಟೆಗೆ ನೋವೆಂಬ ಬೇವ ಬೀಜ ಸಲ್ಲಲಿ

  15. ಉತ್ತಮಗೊಳ್ಳುತುಂ ಕೃಷಿಕರುಂ ಪಳತಂ ಕಡೆಗಾಣುತಿರ್ಪುದಾ-
    ಪತ್ತುಮಲಾ ಕುಲಾಂತರಿಯ ರೂಪಕೆ ರೋಸದೆ ಮಾರುಹೋಗುತುಂ
    ಬಿತ್ತನೆಗೈದದಂ ವಿಕೃತಿಯಂ ತಳಿಸಲ್ ಫಲಮಕ್ಕುದೇo ಗಡಾ
    ಎತ್ತಣ ಸಾರ್ಚು ಸಾಗುವಳಿ? ಬೆಲ್ಲದ ಕಟ್ಟೆಗೆ ಬೇವ ಬೀಜಮೇ ?!

    hybrid / BT ಬೀಜಗಳ ಬಿತ್ತನೆಯ ಬಗ್ಗೆ

    (ಬೆಲ್ಲದ ಕಟ್ಟೆ = ಫಲವತ್ತಾದ ನೆಲ – ಪ್ರಸಾದ್ ಸರ್ ರವರ ಸಮೀಕರಣದ ಅನುಸರಣೆಯ ಪೂರಣ !!)

    • ಕಾಪಿ ಮಾಡಿದ್ದಷ್ಟಕ್ಕೆ ನನಗೆ ಸಿಕ್ಕಷ್ಟೇ (ಕಮ್ಮಿ) ಅಂಕಗಳು. ಉಳಿದುದು ಚೆನ್ನು.

  16. ಲೋಕಹಿತಕ್ಕಮೆಂದೆನುತೆ ಜನ್ಮವನೆತ್ತಿಹ ಕೃಷ್ಣದೇವನಂ
    ನೈಕರು ಶತ್ರುಭಾವದೊಳು ಮುತ್ತಿರೆ – ಪೂತನಿ, ಧೇನುಕಾಸುರಂ|
    ಸಾಕೆ ಅಘಾಸುರಂ, ನಳಕುಮಾರನ್, ಅರಿಷ್ಟಪಿಶಾಚ, ಕಂಸನುಂ
    ಬಾಕಿಯುಮಿರ್ಪರಿನ್ನೆನಿತೊ! ಬೆಲ್ಲದ ಕಟ್ಟೆಗೆ ಬೇವ ಬೀಜಮೇ||
    (ಇದೇ ವರಸೆಯಲ್ಲಿ ಚಾಣಕ್ಯಾದಿ ಮಹನೀಯರ ವಿಷಯದಲ್ಲಿ ಹೇಳಬಹುದು)

  17. ಪುಟ್ಟುತೆ ಮೌಗ್ಧ್ಯದಿಂದಿರುತೆ ಕಂದನು ಸರ್ವರ ತೋಷಕಾರಕಂ
    ಲೊಟ್ಟೆಯೆ ವರ್ಧಿಸಲ್ ವಯಸುಮಭ್ಯಸಿಪಂ ಬಹುಚಿತ್ರರೀತಿಯಂ (ಬಹು fundaಮೆಂತನೋ!)!
    ಒಟ್ಟುವುದೆಂಥ ರೀತಿಯದೊ ಕೇಶವ (Haircut), ತೋಳಿಗಮೇನು ಹಚ್ಚೆಯೋ,
    ಬಟ್ಟೆಯ ಛಂದಮೇನೆನುವೆ(Design)! ಬೆಲ್ಲದ ಕಟ್ಟೆಗೆ ಬೇವ ಬೀಜಮೇ||

  18. ಅನಿಬರು ರಸ್ಯಪದ್ಯಗಳ ಪಾಡಿರೆ ಪ್ರಸ್ತುತವಾರಮೆಲ್ಲಮುಂ
    ಕೊನೆಕೊನೆಗೆನ್ನದೇನಿದುವೊ ಪೂರವು ಬಾಲಿಶಪದ್ಯಸಂಕರಂ|
    ಮುನಿಯದೆ ತಾಳ್ಮೆಯಿಂದಲಿರಿ, ಪೂರ್ಣವ ಗೈದಿಹೆ ಹತ್ತನಿನ್ನು ನಾಂ
    ಕೆನೆದೊಡೆ ಆಗುವೆಂ ರಸದ ಬೆಲ್ಲದ ಕಟ್ಟೆಗೆ ಬೇವ ಬೀಜಮೇ||

  19. ಚಿಕ್ಕಿ ಆಯಿತು, ಮೈಸೂರ್ ಪಾಕ್ ಆಯಿತು, ಇದೋ ಹಾಗಲಕಾಯಿ ಗೊಜ್ಜು !!

    ಹಾಗಲಗೊಜ್ಜನುಣ್ಣುವೆನುವಾಸೆಯಲಂತು ತಯಾರಿಸಲ್ಕದಂ
    ಗೂಗಲಿಸಲ್ ವಿಧಾನವನರಿಯಲ್, ಕಹಿಗಂ-ಸವಿಗಂ ಸಮಾನ ಸಂ-
    ಯೋಗವ ಕಂಡೊಡಂ, ನೆನೆದು ಹಾಗಲಕಾಯಿಗೆ ಬೇವ ಸಾಕ್ಷಿಯಂ,
    ಹಾಗೆಯೆ ಸೊಲ್ವಳ್ಔ ಮನದೆ, “ಬೆಲ್ಲದ ಕಟ್ಟೆಗೆ ಬೇವ ಬೀಜಮೇ” ?!

Leave a Reply to ಮಂಜ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)