Sep 292011
 

ಅನುರೂಪದಾ ಪಂಚಮಾತ್ರೆಗಳ ಚೌಪದಿಯ –
ಲನುಭಾವದಿಂದೀ ಸಮಸ್ಯೆ ಬಿಡಿಸಿ |
ತನುವಿಶೇಷದೊಳಿರುವುದಶ್ಲೀಲತೆಯೆ ಭಾಸ

“ಸ್ತನ ದೊಡ್ಡತನದಲ್ಲಿ ಶೋಭಿಸಿಹುದು” ||

ಇದು ಸದ್ಯದಲ್ಲಿ ನಡೆದ ಅಷ್ಟಾವಧಾನದಲ್ಲಿ ಕೊಟ್ಟ ಸಮ್ಮಸ್ಯೆ.. ಅಶ್ಲೀಲದಂತೆ ತೋರುವ ಮೇಲಿನ ಸಾಲಿನ (ಕೊನೆಯ ಸಾಲು) ಹಿಂದಿನ ೩ ಸಾಲುಗಳನ್ನು ಪೂರೈಸಿರಿ.

ಪದ್ಯ ಓದುವ ಧಾಟಿ

  48 Responses to “ಪಂಚಮಾತ್ರಾ ಚೌಪದಿಯ ಸಮಸ್ಯೆ – ಸ್ತನ ದೊಡ್ಡತನದಲ್ಲಿ ಶೋಭಿಸಿಹುದು”

  1. ನ್ಯಸ್ತಮುದ್ರಿಕೆ, ಹಿಡಿದ ಮೀನಿಂದ ಹೊರಬೀಳೆ
    ವ್ಯಸ್ತಮನನಾದರೂ ಧರ್ಮಬಿಡದು
    ಹಸ್ತಾಭರಣ ಸಮರ್ಪಣ ಕಾರ್ಯ ಮೌಲ್ಯ, ಬೆ-
    ಸ್ತನದೊಡ್ದತನದಲ್ಲಿ ಶೋಭಿಸಿಹುದು

    ಬೆಸ್ತ, ತಾನುಹಿಡಿದ ಮೀನನ್ನು ಪಾಕಮಾಡಲು ಕತ್ತರಿಸಿದಾಗ, ಶಕುಂತಲೆಯ ಬೆರಳಿಂದ ನೀರಿಗೆಜಾರಿ, ಮತ್ಸ್ಯಗರ್ಭವನ್ನು ಸೇರಿದ್ದ ಆ ಉಂಗುರ ಹೊರಬಿತ್ತು. ಒಂದು ಕ್ಷಣ ಅವನ ಮನಸ್ಸು ಅತ್ತಿತ್ತ ಓಲಾಡಿದರೂ, ಕಾರ್ಯಕಾರಣಗಳ ಪರಿಣಾಮವನ್ನರಿತು, ರಾಜನಿಗೇ ಅದನ್ನು ಸಮರ್ಪಿಸಲು ನಿರ್ಧರಿಸಿದ. ಸಾಮಾನ್ಯಪ್ರಜೆಯಾಗಿಯೂ ಧರ್ಮವನ್ನು ಬಿಡದ ಬೆ-ಸ್ತನ ದೊಡ್ದತನ ಮೇಲ್ತನವೇ !ಬೆಸ್ತನ ದೊಡ್ಡತನದಲ್ಲಿ ಶೋಭಿಸುತ್ತಿರುವುದೇನು? ಉಂಗುರವನ್ನು ರಾಜನಿಗೆ ಸಮರ್ಪಿಸಿದ ಮೌಲ್ಯ!

    • ಮೌಳಿಯವರೆ, ತುಂಬಾ ಚೆನ್ನಾಗಿರುವ ಸಂದರ್ಭವನ್ನು ಹಿಡಿದಿದ್ದೀರಿ

    • ಮೌಳಿಯವರೆ :: ಎಂದಿನಂತೆ ನಿಮ್ಮ ಪರಿಹಾರ ಬಹಳ ಚೆನ್ನಾಗಿದೆ. ಇದೇ ಜಾಡಿನಲ್ಲಿ, ಒಂದು ಪರಿಹಾರವನ್ನು ‘ಪ್ಲಾನ್ ಬಿ’ ಎಂದು ಅವಧಾನಕ್ಕೆ ಇಟ್ಟುಕೊಂಡಿದ್ದೆ. ಈಗ ಅದನ್ನು ಇಲ್ಲಿ ಬರೆಯಬಹುದು ಅನಿಸುತ್ತದೆ ::

      ಅನುಮಾನದಿಂದಾ ಶಕುಂತಲೆಯನಟ್ಟಿದನು
      ತನುರಾಗದಾ ಸಂಗಮವನು ಮರೆತು |
      ನೆನಪು ತರಲುಂಗುರವು ಮಂಗಳದ ಮಿಲನ ಬೆ –
      ಸ್ತನ ದೊಡ್ಡತನದಲ್ಲಿ ಶೋಭಿಸಿಹುದು ||

      • ರಾಮಚಂದ್ರರ ಈ ಪೂರಣವೂ ಸುಂದರ.

        • ಘನತೆ ಭವ್ಯತೆ ಧೈರ್ಯ ರೌದ್ರ ಶಾಂತಸ್ಥಿರತೆ
          ಘನಗೊಂಡು ಮೂಡಿತೋ ಉತ್ತರದೊಳು
          ಘನಸತ್ವಹಾಲೂಡೆ ಹಿಮಶೈಲ ಮೂಡೆ ಭೂ
          ಸ್ತನ ದೊಡ್ಡತನದಲ್ಲಿ ಶೋಭಿಸಿಹುದು

          ಎತ್ತರ-ವಿಸ್ತಾರ, ನಿಲುವು-ಚೆಲುವುಗಳಲ್ಲಿ ತನಗೆ ತಾನೇ ಸಾಟಿಯಾದ ಹಿಮಾಲಯ, ರುದ್ರ-ರಮ್ಯವೂ, ಘೋರ-ಶಾಂತವೂ ಹೌದು. ಇವೆಲ್ಲಾಗುಣಗಳು ಒಟ್ಟಾಗಿ ಎರಕಹೊಯ್ದಂತೆ ನಮ್ಮ ಉತ್ತರಭಾಗದಲ್ಲಿ ಮೂಡಿಬಂದು, ನಮ್ಮ ಉತ್ತರಭಾಗ, ಅಂದರೆ ಶಿರದಲ್ಲಿನ ಸಮಸ್ಯೆಗಳಿಗೆ ಉತ್ತರಕೊಡಲು ಹಿಮನಗಾಧಿಪತಿ ಸತ್ವಗುಣದ ಹಾಲನ್ನು ಕುಡಿಸಲು ಹೊಮ್ಮಿದ ಭೂಮಾತೆಯ ಘನಸ್ತನತೋರಣ ವೆನ್ನುವುದು ಕವಿಲೋಕವಿದಿತವರ್ಣನೆ.

          • ಮೌಳಿಯವರೆ :: ಸೊಗಸಾದ ಕಲ್ಪನೆ. ಬಹಳ ಇಷ್ಟವಾಯಿತು. ಅಶ್ಲೀಲದ ಸಾಲು ಬಹಳ ಎತ್ತರಕ್ಕೇರಿದೆ

          • ನೆನೆಯೆಲು ಸಮಸ್ಯೆಯನು ಸ್ನೇಹಿತರ ಪೂರಣವ
            ತನಿಯಾಗಿ ತೋರಿ ಭಾವಗಳು ಕುಣಿಯೆ
            ವಿನಿಮಯಾಭಿಪ್ರಾಯಗಳು ರಾಮಚಂದ್ರ ನೇ-
            ಸ್ತನ ದೊಡ್ಡತನದಲ್ಲಿ ಶೋಭಿಸಿಹುದು

          • ಮೌಳಿಯವರೆ, ಹಿಮಾಲಯವನ್ನು ಭೂಸ್ತನವಾಗಿ ಕಲ್ಪಿಸಿಕೊಂಡಿರುವುದು ತುಂಬಾ ಚೆನ್ನಾಗಿದೆ, ಪದಲಾಲಿತ್ಯವೂ ಬಹುಸುಂದರ.

          • ಶ್ರೀ ರವೀಂದ್ರರೇ, Thanks. ಪರ್ವತಗಳು ಭೂಸ್ತನವೆಂಬುದು ಸುಪ್ರಸಿದ್ದ ಉಪಮೆಯೇ (ಪರ್ವತಸ್ತನಮಂಡಲೇ ಇತ್ಯಾದಿ…). ಆ ಶ್ವೇತಪರ್ವತ ಸತ್ವಗುಣವನ್ನು ಹಾಲೂಡಿಸಲು ಮೂಡಿತೋ ಎಂಬುದು, ಹಿಮಾಲಯ ದರ್ಶನದಿಂದ ಹೊಳೆದ ಕಲ್ಪನೆ. ಶ್ರೀ ರಾಮಚಂದ್ರರಿಗೆ ಉತ್ತರಿಸಿದ ಪದ್ಯದಲ್ಲಿ, ನೇಸ್ತನ ಎಂದರೆ, ಗೆಳೆತನ ಎಂಬ ಅರ್ಥದಲ್ಲಿ ಬಳಸಿದೆ. ನ್ಯಾಸ್ತ (ಗ್ರಾಮೀಣ ಕನ್ನಡ), ನೇಸ್ತಂ (ತೆಲುಗು) ಈ ಪದಗಳಿಗೆ ಸ್ನೇಹ ಎಂಬ ಅರ್ಥವಿದೆ. ಮತ್ತೊಂದು ಪೂರಣದ ಸಾಧ್ಯತೆಯನ್ನು ಗಮನಿಸಿ, ’ನೇ-ಸ್ತನ ’ ಬಳಸಿದ್ದೇನೆ. ಅವಧಾನಿಗಳು ’ಹಾ-ಸ್ತನ’ ಬಳಸಿದ ಸ್ಫೂರ್ತಿಯಿಂದ.

    • ನ್ಯಸ್ತಮುದ್ರಿಕೆ, ಹಿಡಿದ ಮೀನಿಂದ ಹೊರಬೀಳೆ
      ವ್ಯಸ್ತಮನನಾದರೂ ಧರ್ಮಬಿಡದು
      ಹಸ್ತಾಭರಣ ಸಮರ್ಪಣ ಕಾರ್ಯ ಮೌಲ್ಯವದು
      ಬೆಸ್ತನ ಹಿರಿತನದಲಿ ಶೋಭಿಸಿಹುದು

      ಕೊನೆಯಸಾಲಿನ ಪ್ರಾಸರಕ್ಷಣೆಗಾಗಿ ಮಾರ್ಪಾಡು.

    • ಬೆ –
      ಸ್ತನ ದೊಡ್ಡತನದಲ್ಲಿ ಶೋಭಿಸಿಹುದು

      ಸೊಗಸಾದ ಪೂರಣ

  2. ಹೊಸ ಸಮಸ್ಯೆಗೆ ಸ್ವಾಗತ.
    ಇದುವರೆಗಿನ ಪರಿಹಾರಗಳೆಲ್ಲ ಚೆನ್ನಾಗಿವೆ.

    • ಈ ಸಮಸ್ಯೆಯ comment ಗಳು ಸ್ವಲ್ಪ ಅಸ್ಥವ್ಯಸ್ಥವಾಗಿವೆ. ಮೇಲಿಂದ ಕೆಳವರೆಗೆ ನೋಡಿದರೆ ಮಾತ್ರ ಎಲ್ಲಾ ಕಾಣಬಹುದು

  3. ಹೊಸ ಸಮಸ್ಯೆಗೆ ಸ್ವಾಗತ
    ಈವರೆಗಿನ ಪರಿಹಾರಗಳೆಲ್ಲ ಸೊಗಸಾಗಿವೆ

  4. ಸ್ತನವೆರಡರಲಿ ಹಾಲ ಚಿಮ್ಮಿಸುತ ಪೋಷಿಸಲು
    ಜನನಿಧರಣಿಯಲಿ ಮಕ್ಕಳೊಂದೆರಡೆ?
    ದಣಿದಿಹರ ತಣಿಸೆ ಜಲಸುಧೆಯನೇ ಹರಿಸಿ ಭೂ
    ಸ್ತನ ದೊಡ್ಡತನದಲ್ಲಿ ಶೋಭಿಸಿಹುದು

  5. ನಿಸದವಾದೊಡೆ ತಿಳಿಸಿ/ತಿದ್ದಿ..

    ಕಂಸನಾದೆಶದಿ ಕೃಷ್ಣನನು ಹರಸುತ
    ಮಥುರೆಗೆ ಬಂದಳು ವಿಷಕನ್ಯೆ,
    ಮೊಲೆಹಾಲನೂಡಿ ಮೋಕ್ಷ ಪಡೆದ ಪೂತನಿಯ
    ಸ್ತನ ದೊಡ್ಡತನದಲ್ಲಿ ಶೋಭಿಸಿಹುದು||

    • Few Typo Errors corrected…

      ಕಂಸನಾದೇಶದಿ ಕೃಷ್ಣನನು ಅರಸುತ
      ಮಥುರೆಯೆಡೆಗೆ ಬಂದಳು ವಿಷಕನ್ಯೆ,
      ಮೊಲೆಹಾಲನೂಡಿ ಮೋಕ್ಷ ಪಡೆದ ಪೂತನಿಯ
      ಸ್ತನ ದೊಡ್ಡತನದಲ್ಲಿ ಶೋಭಿಸಿಹುದು||

      • ಘನೆತೆಗುಣಕಿರದೆ ಸುಸ್ತನಿಯಾದರೇನು ವ-
        ರ್ತನೆಮುಖ್ಯವಲ್ಲವೇಂ, ಸ್ತನವದಲ್ತು
        ತನ ವಿಷವ ನುಣಿಸಲಸುವೀಂಟೆ ಕೃಷ್ಣನು ಹಿಡಿದ
        ಸ್ತನ ……………….

      • ನವೀನ – ಛಂದಸ್ಸಿನಲ್ಲಿ ತೊಡಕಿದೆ. ಪದ್ಯ ರಚನೆಯಲ್ಲಿ ಸಾಮನ್ಯವಾಗಿ ಕೆಳಗಿನ ನೀತಿಗಳನ್ನು ಪಾಲಿಸುವ ಪ್ರಯತ್ನ ಮಾಡುತ್ತೇವೆ ::
        ೧. ಮಾತ್ರಾಗಣಗಳು ಛಂದಸ್ಸಿನ ಪ್ರಕಾರ ಇರುವುದು
        ೨. ಜಗಣಗಳನ್ನು ತರದಿರುವುದು
        ೩. ಆದಷ್ಟೂ ಸಂಧಿಗಳನ್ನು ಮಾಡುವುದು
        ೪. ಆದರೆ ಆದಿಪ್ರಾಸ ಹೊಂದಿಸುವುದು
        ಇವುಗಳ ಬಗ್ಗೆ ಸರಳ ವಿವರಣೆಯ ಬರಹಗಳು ಶೀಘ್ರದಲ್ಲಿ ಪದ್ಯಪಾನದಲ್ಲಿ ಪ್ರಕಟಗೊಳ್ಳಲಿವೆ.
        ಈ ಸಲಹೆಯಿಂದ ಬೇಜಾರಾದರೆ ಕ್ಷಮೆ ಇರಲಿ. 🙂

        • ರಾಮಚಂದ್ರರವರೆ,

          ನಿಮ್ಮ ಸಲಹೆಗಳನ್ನು ನಾನು ವಿನಮ್ರದಿಂದ ಸ್ವೀಕರಿಸುತ್ತೇನೆ.,ಇದು ನನ್ನ ಗಮನಕ್ಕೂ ಬಂದಿತಾದರು ಪದ್ಯ ಉದಯಿಸಿದ ಸಂತುಷ್ಟಿಯಲ್ಲಿ ಅದನ್ನು ಬದಿಗೊತ್ತಿ ಬರೆದೆ.
          ಸಾಮಾನ್ಯ ಕನ್ನಡದಲ್ಲಷ್ಟೇ ಅಲ್ಪ ಪ್ರಭುತ್ವವಿರುವ ನನಗೆ, ನಿಮ್ಮೆಲ್ಲರ ಸಹಾಯದಿಂದ ನಿಯಮದಂತೆ ಪದ್ಯ ರಚನೆಯನ್ನು ಕಲಿತು ಇಲ್ಲಿ ಮಂಡಿಸಲು ಉತ್ಸುಕನಾಗಿದ್ದೇನೆ.
          ಅಂತೆಯೇ ಮತ್ತೊಂದು ಪದ್ಯ ನನ್ನಲ್ಲಿ ಉದಯಿಸಿದ್ದು ಇದು ಸಹ ನಿಯಮಗೋಳಪಡುವುದಿಲ್ಲ ಎಂಬುದರಿತು, ಅದನ್ನು ಇಲ್ಲಿ ಬರೆಯದೆ ಕೈಬಿಟ್ಟಿದ್ದೇನೆ..

          ನಿಮ್ಮವ,
          ನವೀನ

          • ನವೀನರೇ, ಅಡ್ಡಿಯಿಲ್ಲ. ತುಸುವೇ ಲಯಜ್ಞಾನವು ಬೆಳೆದರೆ ಛಂದಸ್ಸು ತಾನೇತಾನಾಗಿ ಕೈವಶವಾಗುತ್ತದೆ. ಕೃಷ್ಣನಿಗೆ ವಿಷವೂಡಿದವಳೂ ಮೋಕ್ಷಪಡೆವಳೆಂಬ ನಿಮ್ಮ ಕಲ್ಪನೆ ಸೊಗಸಾಗಿದೆ.

            ನಿಮ್ಮ ಅದೇ ಚೌಪದಿಯನ್ನು ತುಸುವೇ ತಿದ್ದಿ ಬರೆದರೆ ಛಂದೋಬದ್ಧವಾಗುತ್ತದೆ, ಅದು ಹೀಗೆ:

            ಕಂಸನಾದೇಶದಲಿ ಕೃಷ್ಣನನ್ನರಸುತ್ತ
            ಮಥುರೆಯೆಡೆ ಬಂದಳಾ ವಿಷದ ಕನ್ಯೆ
            ಮೊಲೆಹಾಲನೂಡಿ ಮೋಕ್ಷವ ಪಡೆದ ಪೂತನೀ
            ಸ್ತನ ದೊಡ್ಡತನದಲ್ಲಿ ಶೋಭಿಸಿಹುದು||

          • ಪ್ರಿಯ ನವೀನ – ನನ್ನ ಅಭಿಪ್ರಾಯ ಬರೆಯಬೇಡಿರೆಂದಲ್ಲ. ದೃಷ್ಟಿಸಿದ ವಿಷಯಗಳನ್ನಳವಡಿಸಿಕೊಳ್ಳಿರಿ ಎಂದು 🙂
            ಛಂದೋಬದ್ಧವಾಗಿ ಬರೆಯುವುದನ್ನು ಹೇಳಿಕೊಡಲು ಗಣೇಶರು ಇರುವುದರಿಂದ ತೊಂದರೆಯಿಲ್ಲ.
            ನೀವು ಅನೇಕ ಸುಂದರ ಕವಿತೆಗಳನ್ನು ಬರೆದು ಸಹೃದಯರೆಲ್ಲರಿಗೂ ಊಣಿಸುವಿರೆಂಬ ವಿಶ್ವಾಸ ಮನಗೆಲ್ಲರಿಗೂ‌ ಇದೆ.

          • ರಾಮಚಂದ್ರರೆ,

            ಗಣೇಶ್ ಮತ್ತು ನಿಮ್ಮಂತರೆಲ್ಲರ ಸಹಾಯದಿಂದ ನಾನಿನ್ನು ಉತ್ತಮಗೊಂಡರೆ ಅದು ನನ್ನ ಭಾಗ್ಯ.
            ನಿಮ್ಮ ಸಹಕಾರಕ್ಕೆ ಧನ್ಯವಾದಗಳು.

  6. ತನಿಯಾಗಿ ಬರೆ ತಾಯಿಯೊಡಲ ರಕ್ಷಣೆ ತೊರೆದು
    ತನು ಕಾಯ್ದುಕೊಳಲು ಗುಣಧರ್ಮವಿರದೆ ?
    ಮನದಲತಿ ಮುಗ್ಧತೆಯ ಶಿಶುವ ಕಣ್ಣಿಗೆ ತಾಯ
    ಸ್ತನ ದೊಡ್ಡತನದಲ್ಲಿ ಶೋಭಿಸಿಹುದು ||

    ತನಿ – ಪ್ರತ್ಯೇಕ,ಒಂಟಿ, ಹೊಸತು ಎಂಬ ಎಲ್ಲ ಅರ್ಥಗಳೂ ಹೊಸದಾಗಿ ಹುಟ್ಟಿರುವ ಶಿಶುವಿಗೆ ಹೊಂದುತ್ತದೆ.
    ಗುಣಧರ್ಮ – Instinct ಎಂಬರ್ಥದಲ್ಲಿ ಉಪಯೋಗಿಸಿದ್ದೇನೆ.

  7. ಇನವಂಶಿ, ಪಾದುಕೆಯ ಬಗಲಲ್ಲಿ ಕೂತಿರ್ದು
    ವನವಾಸಿ ಜೀವನವ ನಡೆಸುತ್ತಿರೆ
    ಜನಮನದಲನುಜತ್ವ ಗುಣಮಣಿಯು ಪದನ್ಯ
    ಸ್ತನ ದೊಡ್ಡತನದಲ್ಲಿ ಶೋಭಿಸಿಹುದು

    [ಭರತನ ಕುರಿತಾಗಿ ಪದ = ಹುದ್ದೆ ಎಂಬ ಅರ್ಥವಿದೆ. ಇನ್ನೂ ಸಾಕಷ್ಟು ಅರ್ಥಗಳಿವೆ.]

  8. ಮನುಜ ಸಂಕಟಹರಣಕೆಂದು ದಾರಿಯ ತೋರ –
    ಲನುಮಾನದಿಂ ಶಿಲುಬೆಗೇರಿಸಿದರೆs |
    ಜನರ ಪಾಪಂಗಳನು ತಾನುಂಡ ಋಣ ಕ್ರಿ –
    ಸ್ತನ ದೊಡ್ಡತನದಲ್ಲಿ ಶೋಭಿಸಿಹುದು ||

    • ರಾಮಚಂದ್ರರೇ,

      ಕ್ರಿ –
      ಸ್ತನ ದೊಡ್ಡತನದಲ್ಲಿ ಶೋಭಿಸಿಹುದು

      ವಾಹ್, ಇದು ಅನಿರೀಕ್ಷಿತ ಪೂರಣ. ಸೊಗಸಾಗಿದೆ.

      ಮೂರನೆಯ ಸಾಲಿನಲ್ಲಿ ಕೊನೆಯ ಗಣ ಕುಂಟಿದಂತೆ ತುಸು ಭಾಸವಾಗುತ್ತದೆ. ಮಾತ್ರೆಗಳ ಲೆಕ್ಕದಲ್ಲಿ “ಋಣ ಕ್ರಿ” ಇದು ಐದು ಮಾತ್ರೆಯೆಂದೇ ಲೆಕ್ಕಕ್ಕೆ ಸಿಕ್ಕಿದರೂ ಹೇಳುವಾಗ ಮಾತ್ರ ಈ ನಿರ್ದಿಷ್ಟ ಪದಗಳು ನಾಲ್ಕು ಮಾತ್ರೆಯಂತೆಯೇ ನುಡಿಯುತ್ತವೆ, ಏಕೆಂದರೆ “ಋಣ ಕ್ರಿಸ್ತನ” ಎಂಬಲ್ಲಿ ಣ ಅಕ್ಷರಕ್ಕೆ ಎರಡು ಮಾತ್ರೆಯ ನಿಲುಗಡೆಯಿಲ್ಲ. “ತಾನುಂಡ ಋಣವೆ ಕ್ರಿ” ಎಂದು ಮಾಡಿದರೆ ಚೌಪದಿಯ ಲಯ ದಕ್ಕುತ್ತದೆ, ಆದರೆ ಲೆಕ್ಕದಲ್ಲಿ ಒಂದುಮಾತ್ರೆ ಹೆಚ್ಚಾಗುತ್ತದೆ. ಇದಕ್ಕೆ ಪರಿಹಾರ?

      • ಮಂಜುನಾಥರೇ – ನನ್ನ ಲೆಕ್ಕಾಚಾರ ಹೀಗಿತ್ತು ::‌ ‘ಋ + ಣಕ್ + ರಿಸ್’ ಇಂದ ೫ ಮಾತ್ರೆಗಳಗುತ್ತವೆ ಎಂದು. ಕ್ರಿ ಎಂಬುದು ಶಿಥಿಲ ದ್ವಿತ್ವ ವೆಂದು ತೆಗೆದುಕೊಂಡರೆ, ಆಗ ೪ ಮಾತ್ರೆಗಳಷ್ಟೇ ಇರುತ್ತವೆ. ನಿಮ್ಮ ಪ್ರಶ್ನೆಗೆ ಸಾರ್ಥಕ ಉತ್ತರವನ್ನು ಗಣೇಶರೇ ಕೊಡಬೇಕು

        • ಪ್ರಿಯ ರಾಮಚಂದ್ರ ಹಾಗು ಮಂಜುನಾಥರೆ,

          ನಿಜ. ಮೂರನೆಯಸಾಲು, “ಜನರ ಪಾಪಂಗಳನು ತಾನುಂಡ ಋಣವೆ ಕ್ರಿ” ಎಂದು ಮಾಡಿದರೆ ಸರಿಯಾಗುತ್ತದೆ. ’ಕ್ರಿಸ್ತ’ ಶಬ್ದದಲ್ಲಿ ಕ್ರಿಸ್ – ತ ಎನ್ನುವಾಗ ಕ್ರಿ ಜೊತೆಗೆ ಸ್ ಸೇರಿ, ಕ್ರಿಸ್ – ಗುರುವೇ ಆಗುವುದರಿಂದ ಶಿಥಿಲದ್ವಿತ್ವನಿಯಮ ಇಲ್ಲಿ ಅನ್ವಯಿಸುವುದಿಲ್ಲ. ‘ಋ + ಣಕ್ + ರಿಸ್’ ಎಂದು ವಿಭಾಗಿಸಿದರೂ, ಣಕ್ ಗುರುವಾಗದು. ಋ + ಣಕ್ + ರಿಸ್ = ಋಣಕ್ರಿಸ್ ಎಂದು ಉಚ್ಛರಿಸಿನೋಡಿದರೆ, ’ತನನಾ” ಅಥವಾ ’ತಕಧೀಂ’ ಆಗಿ, ೧೧- ಅಥವಾ ಲಲಗು = ೪ ಮಾತ್ರಾಕಾಲವಾಗುತ್ತದೆ.

          ಅನಪೇಕ್ಷಿತ ಅಭಿಪ್ರಾಯಕ್ಕೆ ಕ್ಷಮೆಯಿರಲಿ.

          • ಈ‌ ರೀತಿಯ ಜೋಡಣೆಗಳಿದ್ದಾಗ ಣಕ್ ಎಂಬುದು ಏಕೆ ಗುರುವಾಗುವುದಿಲ್ಲ ಎಂದು ಸರಿಯಾಗಿ ಅರ್ಥವಾಗಲಿಲ್ಲ. ಇದರಲ್ಲಿ ತಿಳಿಯಿತಾದರೂ ಬೇರೆ ಹೊಸ ಜೋಡಣೆಗಳಲ್ಲಿ ಹೇಗೆ ಗುರುತಿಸುವುದು?

          • ಮೌಳಿಯವರೇ ವಿವರಣೆಗೆ ನನ್ನಿ.

            ರಾಮಚಂದ್ರರೇ, ಅಂತಿಮವಾಗಿ ಅದನ್ನು ಉಚ್ಛರಿಸುವಾಗ ಹೊರಡುವ ಲಯವೇ ಲಕ್ಷ್ಯ. ಅದರಿಂದ ಸುಲಭವಾಗಿ ಗುರ್ತಿಸಬಹುದು

          • ’ಋಣಗ್ರಸ್” ಎಂದು ಓದುವಹಾಗೆ ’ಋಣಕ್ರಿಸ್” ಎಂದು ಹೇಳಿದರೆ, ಣಗ್, ಣಕ್ ಗುರುವಾಗುತ್ತದೆ. ಕ್ರಿಸ್ತ ನಾಮಪದವನ್ನು ಋಣಗ್ರಸ್ತದಲ್ಲಿನಂತೆ ಋಣಕ್ ರಿಸ್ತ ಎಂದು ನಾವು ಪರಿಭಾವಿಸುವುದಿಲ್ಲ. ” ಜನರ ಪಾಪಂಗಳನು ತಾನುಂಡ ಋಣ (ಅಥವಾ ಋಣವು)” ಅಲ್ಲಿಗೆ ಅರ್ಥಧಾರಣದ ಒಂದುಭಾಗಮುಗಿದು. ಕ್ರಿಸ್ತನ…ಉತ್ತರಾರ್ಧ ಒದಗುತ್ತದೆ. ಅಲ್ಲಿ ಋಣಕ್ರಿಸ್… ಎಂದು ಓದುವ ಪ್ರಮೇಯ ಬರುವುದಿಲ್ಲ. ಆಕಾರಣಕ್ಕಾಗಿ ಣಕ್ ಎಂಬ ಧ್ವನಿ ಇಲ್ಲಿ ಹುಟ್ಟದೆ, ಪ್ರಸ್ತಾರ ಹಾಕಿದಾರ ಋ+ಣ+ಕ್ರಿಸ್ ಲಘು+ಲಘು+ಗುರು ಆಗಿ ೪ ಅಕ್ಷರವಾಗುತ್ತದೆ.

          • “ಕ್ರಿಸ್ತನ ಋಣ” – ತು೦ಬಾ ಕಾಡುತ್ತಿರುವ೦ತಿದೆ 🙂 . ಚರ್ಚೆ ತು೦ಬಾ ಸ್ವಾರಸ್ಯಕರವಾಗಿದೆ. ವಸ್ತುತ: ಇಲ್ಲಿ ಶಿಠಿಲ ದ್ವಿತ್ತ್ವದ ಪ್ರಸಕ್ತಿ ಬೇಕಿಲ್ಲ. ಅದೇನಿದ್ದರೂ ಅನುಕೂಲಸಿ೦ಧುವಾಗಿ(ಅನಿವಾರ್ಯವಾಗಿ ಗುರುವೊ೦ದು ಲಘುವಾಗಲೇ ಬೇಕಿದ್ದಾಗ, ಸದ್ಯದ ಸ೦ದರ್ಭದ೦ತೆ ಸ೦ಸ್ಕೃತ ಪದಗಳೆರಡರ ನಡುವೆ ಎಳೆದುತರುವುದಾಗುತ್ತದೆ) ತೋರಿಕೊಳ್ಳಬಹುದು. ವಸ್ತುತ: ಶಿಥಿಲದ್ವಿತ್ತ್ವವು ಅಚ್ಚಗನ್ನಡ ಹಾಗೂ ಸ೦ಸ್ಕೃತ-ಕನ್ನಡ ಪದಗಳೆರಡರ ನಡುವೆ ಕೆಲವೊ೦ದು ವಿಶಿಷ್ಟ ಸ೦ದರ್ಭಗಳಲ್ಲಿ ತೋರಿಕೊಳ್ಳುತ್ತದೆ. ಸದ್ಯದಲ್ಲಿ ಅ೦ತಹ ಪರಿಸ್ಥಿತಿ ಇಲ್ಲ. ಆದರೆ ಈ ಚರ್ಚೆಯ ಪಾಲುದಾರರೆಲ್ಲ ಸರಿಯಾಗಿಯೇ ಗುರುತಿಸಿದ೦ತೆ ಏನೋ ಒ೦ದು ರೀತಿಯಾದ ಛ೦ದೋಗತಿ ಕ್ಲೇಶವಿದೆ. ಇದಕ್ಕೆ ಕಾರಣ ಗಣವಿನ್ಯಾಸದ ಏರು ಪೇರೇ ಹೊರತು ಬೇರೊ೦ದಲ್ಲ. ಯಾವುದೇ ಮಾತ್ರಾ ಛ೦ದಸ್ಸಿನಲ್ಲಿ(ಕ೦ದವೊ೦ದನ್ನುಳಿದು) ಲಘ್ವಾದಿಗಣಗಳು(ಲಗ೦, ಲಗ೦ಗ೦,ಲಗ೦ಲ) ಬರುವ೦ತಿಲ್ಲ. ಪ್ರಸ್ತುತ ಪ೦ಚಮಾತ್ರಾಗಣಬದ್ಧವಾದ ಚೌಪದಿಯಲ್ಲಿ “ಋಣಕ್ರಿಸ್ತ” ಎ೦ಬ ಪದದ ಮೊದಲ ೫ ಮಾತ್ರೆಗಳ ಘಟಕವು ಲಗ೦ಗ೦ ಎ೦ಬ “ಯ”ಗಣ ವಿನ್ಯಾಸವನ್ನು ಹೊ೦ದಿರುವ ಕಾರಣ ಗಣಸಮತ್ವದಲ್ಲಿ ಭ೦ಗಬ೦ದಿದೆ. ಹೀಗಾಗಿಯೇ ಲಘ್ವಾದಿಗಣದ ಮುಖ್ಯಲಕ್ಷಣವಾದ ಪ್ಲುತಿ ಅಥವಾ ನೆಗೆತವು ಎದ್ದುತೋರುತ್ತದೆ ಮತ್ತು ವಿಸ೦ವಾದಿಯಾದ ಗತಿಯನ್ನು ಉ೦ಟುಮಾಡುತ್ತದೆ. ಇದು ಅನುಭವವೇದ್ಯ.
            ಹಾಗೆಯೇ, ರವೀ೦ದ್ರ ಕೇಳಿದ ಚೌಪದಿಯ ಬೇರೆಬೇರೆ ಬಗೆಗಳನ್ನು ಸದ್ಯದಲ್ಲೇ ತಿಳಿಸುತ್ತೇನೆ. ಕ೦ಪ್ಯೂಟರಿನ ಸಮಸ್ಯೆ ಇದ್ದದ್ದರಿ೦ದ, ಎರಡು ಬಾರಿ ಬರೆದಿದ್ದು ಅಳಸಿಹೋಗಿ ಪೋಸ್ಟ್ ಮಾಡಲಾಗಿಲ್ಲ.

  9. ಪರಿಹಾರಗಳು ತುಂಬಾ ಚೆನ್ನಾಗಿವೆ. ಹೊಸಗೆಳೆಯ ನವೀನರ ಕಲ್ಪನ ಸೊಗಸಾಗಿದೆ. ಆದರೆ ರಾಮಚಂದ್ರ ಹೇಳಿದಂತೆ ಛಂದಸ್ಸಿನ, ಪ್ರಾಸದ ಹಾಗೂ ವ್ಯಾಕರಣದಂಥ ತಾಂತ್ರಿಕಸಂಗತಿಗಳ ಬಗೆಗೆ ಸ್ವಲ್ಪ ಗಮನ ನೀಡಬೇಕು. ಇದಕ್ಕೆಲ್ಲ ಖಂಡಿತವಾಗಿ ಬೇಗದಲ್ಲೇ ವ್ಯವಸ್ಥೆ ಮಾಡೋಣ. ಮಖ್ಯವಾಗಿ ನಮ್ಮ ನುಡಿಯ ಅಭಿಜಾತಕಾವ್ಯದ ಆಕೃತಿ-ಆಶಯಗಳನ್ನು
    ಸ್ವಂತಿಕೆಯ ಸತ್ತ್ವದಿಂದ ಅಭಿವ್ಯಕ್ತಿಸುವುದೇ ಇಲ್ಲಿಯ ಎಲ್ಲ ಗೆಳೆಯರ ಹಂಬಲ. ಇದಕ್ಕೆ ಸರ್ವರ ಸಹಕಾರವಿದೆಯಂದು ನನ್ನ ನಂಬಿಕೆ.
    ನವೀನರ ಕಲ್ಪನೆಯೇ ಮುಂದಿನ ಹಲವು ಪರಿಹಾರಗಳಿಗೆ ಸ್ಫೂರ್ತಿ ನೀಡಿರಬಹುದೆನ್ನಿಸುತ್ತದೆ. ಸಮಸ್ಯೆಯ ಸ್ವಾರಸ್ಯವೇ ಇಂಥ ಕವಲೊಡೆಯುವ ಕಲ್ಪನಶಿಲ್ಪದಲ್ಲಿದೆಯೆಂದರೆ ತಪ್ಪಾಗದು. ಪೂತನಿಯ ಸ್ತನ, ತಾಯಿಯ ಸ್ತನ, ಭೂದೇವಿಯ ಸ್ತನ…
    ಹೀಗೆ ಕಲ್ಪನೆಯ ಹಕ್ಕಿ ಗರಿಗೆದರಿ ಹಾರಲು ಅನಂತ ಅವಕಾಶಗಳುಂಟು. ವಿಶೇಷತಃ ಚಂದ್ರಮೌಳಿ ಹಾಗೂ ರವೀಂದ್ರರ ಪರಿಹಾರಗಳ ಶಬ್ದಾರ್ಥಸೌಂದರ್ಯ ಸ್ಮರಣೀಯ. ರಾಮಚಂದ್ರರ ಸಕ್ರಿಯಭಾಗಗ್ರಹಣ ಮಿಗಲಾಗಿ ಒಳಿತಾಗಿದೆ.
    ವಿ.ಸೂ. ರವೀಂದ್ರರ ಮೊದಲ ಸಮಸ್ಯಾಪೂರಣಪದ್ಯದ ಮೊದಲ ಸಾಲಲ್ಲಿ ಛಂದೋಭಂಗವಾಗಿದೆ. ಗಮನಿಸಿಕೊಳ್ಳಿ. ಅದು ತುಂಬ ಅಲ್ಪಪ್ರಮಾಣದ್ದು.

  10. ಗೆಳೆಯರೇ, ಬಹುಶಃ ನನ್ನದು ಈ ವಿಷಯಕ್ಕೆ ತಡವಾದ ಪ್ರವೇಶವೇನೋ; ಆದರೂ ಈ ನಾಲ್ಕು ಸಮಸ್ಯಾಪೂರಣಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ:

    ಮನೆಗಲ್ಲದೆಯೆ ನೆಂಟ ಮಠಕೆ ಬರುವನೆ ಪೇಳು
    ಒಣಮರಕೆ ಬಹುದೆ ಕೋಗಿಲೆಯು ಗಿಳಿವಿಂಡು
    ಮನದಣಿಯೆ ಉಣಬಡಿಪ ಸಿರಿವನೆಯು ಮನೆತನ
    ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

    ಇನಸುತಗೆ ತಿಳಿದೊಡೇಂ ತನ್ನ ಹುಟ್ಟಿನ ಹಿರಿಮೆ
    ಅನುಮಾನವಿನಿತಿಲ್ಲ ಜೀಯನೊಲವಿನೊಳು
    ಧನವದುವೆ ಕೌರವನ ಮಾನಧನ ನಂಬಿಕ
    ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

    ವನಕೆ ಹೆಮ್ಮರ ಸೊಗಸು ಗಿರಿಗಾ ಶಿಖರ ಸೊಗಸು
    ಮನೆಗೆ ಹಿರಿಗಂಬದಾಲಂಬ ಸೊಗಸು
    ಇನಿವೆಣ್ಣಿನೊಡಲಿಗಾಲಂಬವೆನೆ ಚೆಲುವಿನಾ
    ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

    ಜನಕಗಲ್ಲದೆ ಶುನಕಕಹುದೆ ರಾಮನ ನಂಟು
    ಘನಶೈಲಿ ಶೂಲಿ ಹುಲು ಮೊರಡಿ ಬಯಸುವನೇ
    ವನಮಾಲಿಯಲ್ತೆ ಸಾಗರನಳಿಯ?ಹಿರಿನಂಟ
    ತನ ದೊಡ್ಡತನದಲ್ಲಿ ಶೋಭಿಸಿಹುದು

    ಕೊನೆಯ ಚೌಪದಿ “ಸ್ತನ ದೊಡ್ಡತನದಲ್ಲಿ ಶೋಭಿಸಿಹುದು” ಎಂದು ಬಳಸಿದರೆ ಮೂರನೆಯ ಸಾಲಿನ ಛಂದಸ್ಸು ಕೆಡುತ್ತದೆಯಾದ್ದರಿಂದ ಅದು ಸಮಸ್ಯೆಯನ್ನು ಯಥಾವತ್ತಾಗಿ ಪೂರೈಸುವುದಿಲ್ಲ, ಆದರೂ ಉಳಿದ ಸಾಲುಗಳು ಬಂದುವಲ್ಲ ಎಂದು ಪೋಸ್ಟಿಸಿದೆ ಅಷ್ಟೇ.

    • ಕೊಳ್ಳೆಗಾಲರೆ, ಚೆನ್ನಾಗಿದೆ.

      ತಡವಾದರೇನಂತೆ, ರಸಪಾಕ ಕಡಿಮೆಯೇನ್?
      ಬಿಡೆಯಿಲ್ಲವೆಮಗಿಂದು ಸವಿಯಲಿಕ್ಕೆ. 🙂

    • ವನಮಾಲಿಯಲ್ತೆ ಸಾಗರನಳಿಯ? ಹಿರಿನಂಟ
      ತನ ದೊಡ್ಡತನದಲ್ಲಿ ಶೋಭಿಸಿಹುದು

      ನಂಟಸ್ = ೪ ಮಾತ್ರೆ. ಇದರ ಮುಂದೆ ಲಘುವೇ ಬರಬೇಕು. ಆಗ ಆ ಗಣ ’ಲಗಂ’ ಆಗುತ್ತದೆ. ವಿಧಿ ಇಲ್ಲ. ಬೇವಿನೆಣ್ಣೆ ಬಳಸಲೇಬೇಕು. ’ಸ್ತನ’ದ ನಂಟು ತಪ್ಪಿಸಲೇಬೇಕು! ತನ್ನ’ತನ’ ಮೆರೆಸಲೇಬೇಕು.

  11. ಬನದಿಜೊತೆ ಮೇವು೦ಡ ಗೆಳತಿ ಮಡಿದಿರಲವಳ
    ತನಯೆಗಿದೊ ಮೀಸಲಿಸಿತೆರಡು ಮೊಲೆಯಾ
    ತನಿಹಾಲ ಕೊಡುತ ತಬ್ಬಲಿತನವನಳಿಸಿದಾ
    ಸ್ತನದೊಡ್ಡ ತನದಲ್ಲಿ ಶೋಭಿಸಿಹುದು

    • ಕಾರಂತರೇ ಸೊಗಸಾಗಿ ಮೂಡಿದೆ. “ತನಿ ಹಾಲ” ಸೇರಿಸಿ “ತನಿವಾಲ” ಮಾಡಿದರೆ ಮತ್ತೂ ಸಹಜವಾಗಿರುತ್ತದೆ.

  12. ಪರಲಿಂಗಿಗಳು ದಂಪತಿಗಳಾಗೆ ವಿಸ್ಮಯವೆ?
    ಸಹಲಿಂಗಿಗಳು ಸೇರಲದು ವಿನೂತ್ನ|
    ವಿದರಾದಿಮಪ್ರತೀಕವೆನಿಸಿರ್ಪುದದು ಶಾ
    ಸ್ತನ ದೊಡ್ಡತನದಲ್ಲಿ ಶೋಭಿಸಿಹುದು||

  13. ಮನಕರಗುವಳಳೊಳಿಹ ಮೂರು ಮಕ್ಕಳ ವಿಧವೆ-
    ಯನುಕಾಡಿದಧಿಕಾರಿಗಳನು ತಿದ್ದಿ
    ಅನುಗೊಳಿಸೆ ವೃತ್ತಿವೆತನ ಪತಿಯನಿಂ ಗುಮಾ-
    ಸ್ತನ ದೊಡ್ಡತನದಲ್ಲಿ ಶೋಭಿಸಿಹುದು

  14. ಛಂದಸ್ಸಿನ ಕುರಿತಾಗಿ ಹಾಗೂ ಸೂಕ್ತ ಪದಗಳ ಆಯ್ಕೆಯ ಜ್ಞಾನ ಕಡಿಮೆಯಾದರೂ ಇಲ್ಲಿ ಬರೆದರೆ ತಿದ್ದುವಿರೆಂಬ ನಂಬಿಕೆಯಿಂದ ಹಾಗೂ ರಸವತ್ತಾದ ಸಮಸ್ಯೆಗೆ ಒಂದುತ್ತರ ನೀಡುವ ಉದ್ದೇಶದಿಂದ ಬರೆದ ಸಾಲುಗಳು.

    ನೋಟದಲೆ ಲೋಕಗಳ ಸುಡುವನಾದರೂ
    ಲೋಕಗಳ ಸುಡುವ ಹಾಲಾಹಲವುದಿಸೆ
    ಒಡನೆ ಸೇವಿಪ ಕರುಣಾಗುಣವು ಶೂಲಹ-
    ಸ್ತನ ದೊಡ್ಡತನದಲ್ಲಿ ಶೋಭಿಸಿಹುದು

  15. ಶ್ರೀವತ್ಸರೆ – ಪದ್ಯಪಾನಕ್ಕೆ ಸ್ವಾಗತ. ನಿಮ್ಮ ಪದ್ಯದ ಅರ್ಥ ಬಹಳ ಸೊಗಸಾಗಿದೆ. ಪದಗಳ ಆಯ್ಕೆಯಲ್ಲಿಯೂ ಕೊರತೆಯಿಲ್ಲ. ಆದರೆ ಛಂದಸ್ಸು, ಆದಿಪ್ರಾಸದ ತೊಡಕುಗಳಿವೆ.
    ಈ ಸಮಸ್ಯೆಯ ಪದ್ಯ ಪಂಚಮಾತ್ರಾ ಚೌಪದಿಯ ಛಂದಸ್ಸಿನಲ್ಲಿರಬೇಕು. ನಿಮ್ಮ ಪದ್ಯದಲ್ಲಿ ಗಣ್-ಮಾತ್ರೆಗಳ ವ್ಯತ್ಯಾಸವಿದೆ. ಈ‌ಛಂದಸ್ಸಿನಲ್ಲಿ ಮಾತ್ರಾಗಣ ವಿಭಾಗ ಈ ರೀತಿ ಬರಬೇಕು
    ೫ + ೫ + ೫ + ೫
    ೫ + ೫ + ೫ + ಗು
    ೫ + ೫ + ೫ + ೫
    ೫ + ೫ + ೫ + ಗು
    ಹೆಚ್ಚಿನ ಮಾಹಿತಿಗಾಗಿ ಈ ಪಾಠಗಳನ್ನು ನೋಡಿರಿ ::‌
    ಲಘು, ಗುರು, ಗಣಗಳ ವಿಚಾರ :: http://padಅyapaana.com/?page_id=609
    ಲಯಾನ್ವಿತ ಛಂದಸ್ಸುಗಳು :: http://padyapaana.com/?page_id=620
    ಮಾತ್ರಾಗತಿಳು :: http://padyapaana.com/?page_id=631

    ಈ ಸಮಸ್ಯೆಯ ವಿವರಣೆಯಲ್ಲಿ ಕೊಟ್ಟಿರುವ ಪದ್ಯಾವೂ ಇಡೆ ಛಂದದಲ್ಲಿದ್ದು, ಅದನ್ನು ಓದುವ ಧಾಟಿ ಇಲ್ಲಿದೆ :: http://padyapaana.com/wp-content/uploads/2011/09/samasye1.mp3
    ಓದುವ ಧಾಟಿ ಅಭ್ಯಾಸವಾದರೆ, ಪದ್ಯ ರಚನೆ ಸುಲಭವೆಂದು ಅನೇಕರ ಅನುಭವ.

    ಇವೆಲ್ಲ ಗಮನಿಸಿ, ನಿಮ್ಮ ಪದ್ಯವನ್ನು ಅನವದ್ಯವನ್ನಾಗಿಸಲು ಪ್ರಯತ್ನ ಪಡುತ್ತೀರೆಂದು ನಂಬುತ್ತೇನೆ

  16. ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ. ಹೈಸ್ಕೂಲಿನಲ್ಲಿ ಕಲಿತ ಈ ವಿಷಯಗಳು ಈಗ ಸಾಕಷ್ಟು ಮರೆತುಹೋಗಿವೆ. ನಿಮ್ಮ ಸಲಹೆ ಹಾಗು ಮಾರ್ಗದರ್ಶನಕ್ಕೆ ಧನ್ಯವಾದಗಳು. (ನೀವು ಬಳಸಿದ ಅನವದ್ಯ ಎಂಬ ಪದವು ಕೂಡ ಸಾಕಷ್ಟು ಖುಷಿ ಕೊಡುವುದರ ಜೊತೆಗೆ ನಾನೆಷ್ಟು ಕಲಿಯಬೇಕು ಎಂಬ ಅರಿವಾಯಿತು)

  17. ತನುಮನದ ದಣಿವೆಲ್ಲ ತೀರಿಸುವ ಹಸಿರಸಿರು
    ಧನಿದಿಂದಲೆಣಿಸಬಹುದೇನು ಚೆಲುವಂ
    ಇನಿತೆಲ್ಲ ಸುಖವಿರ್ಪ ಭೂದೇವಿಯ ಶಿಖರ
    -ಸ್ತನದೊಡ್ಡ ತನದಲ್ಲಿ ಶೋಭಿಸಿಹುದು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)