1) ಶ್ರೀ ರಾ. ಗಣೇಶರ ಪರಿಹಾರ:
ಪದಪಿಂ ಪಾರ್ವತಿಯಂದು ಚಂದದ ತಪಸ್ಸಂ ಗೆಯ್ದು ಸರ್ವೇಶನಂ
ಸದಯಾನಂದನಚೈತ್ರನಂ ಮದುವೆಯಾಗಲ್ಕೆಂದು ನೋನಲ್ ಸ್ವಯಂ|
ಚಿದಚಿದ್ರೂಪಧರಂ ಸಮೀಪಿಸಿ ಕರಂಗೊಳ್ವಾಗಳೆಂಬರ್ ಬುಧರ್
ನದಿಯಂ ಕಂಡೊಡನೋಡಿಬಂದುದೊಲವಿಂದಂ ಸೇರ್ದುದಯ್ ಸಾಗರಂ||
2) ಶಶಿಕಿರಣ್ ರವರ ಪರಿಹಾರ:
ಕಲ್ಯಸ್ಫಾಯದತೀವ್ರರಾಗವಿಗಲದ್ವೈಶದ್ಯಕಲ್ಪಾಂ ಕವಿ-
ಸ್ಫೂರ್ತಿಸ್ಫೂರ್ಜಿತವಕ್ರವಾಗನುಕೃತಿಂ ತಾಂ ಕೃತ್ರಿಮತ್ವಾತಿಗಾಮ್|
ಸ್ಮೃತ್ವಾ ಸ್ಮೇರತತಿಂ ಪಿತಾ ಪ್ರಿಯಶಿಶೋರ್ಲೀನಕ್ಲಮಃ ಸ್ಯಾತ್ತಥಾ
ಸಿಂಧುಂ ಸತ್ವರಮೀಕ್ಷ್ಯ ತತ್ತನುತನೌ ಸಂಲೀಯತೇ ಸಾಗರಃ||
(ಮುಂಜಾನೆ ಎಲ್ಲೆಡೆ ಹರಡಿರುವ ನವುರಾದ ಕೆಂಪಿನಲ್ಲಿಯ ವಿಶದತೆಯಂತಿರುವ, ಕವಿಯ ಸ್ಫೂರ್ತಿಯಿಂದ ಮಿಂಚಿದ ವಕ್ರತೆಯನ್ನು ಹೋಲುವ, ಕೃತ್ರಿಮತೆಯ ಲೇಶವೂ ಇಲ್ಲದ ಮಗುವಿನ ನಗುವನ್ನು ನೆನೆದು ಹೇಗೆ ತಂದೆ ತನ್ನ ಶ್ರಮವನ್ವು ಕರಗಿಸಿಕೊಳ್ಳುವನೋ ಹಾಗೆ–ನದಿಯನ್ನು ಕಂಡ ಸಮುದ್ರ ಅದರಲ್ಲಿ ಲೀನವಾಗುತ್ತದೆ.
3) ಕಾಂಚನಾರವರ ಪರಿಹಾರ-೧:
ಎದುರೊಳ್ ಬಂದರನೀಕ್ಷಿಸುತ್ತುಮವಳೇ ಬಂದಿರ್ಪಳೆಂದಭ್ದಿಯಾ,
ಪದಪಿಂದೋಡುತೆ ಬಂದೊಡೇನು! ಸತತಂ ನೈರಾಶ್ಯದಿಂ ಸಾಗಿರಲ್,|
ಮುದಮಂ ನೀಡುತುಮಂತು ಬೆಟ್ಟಮಿಳಿಯಲ್, ವೀಚೀಕರಂ ಬೀಸುತುಂ,
ನದಿಯಂ ಕಂಡೊಡನೋಡಿ ಬಂದುದೊಲವಿಂದಂ ಸೇರ್ದುದಯ್ ಸಾಗರಂ||
ಅವಳೇ (ನದಿ) ಬಂದಿರಬಹುದೆಂದು ತಿಳಿದು, ಎದುರು ಬಂದವರನ್ನು ನೋಡುತ್ತಲೋಡೋಡಿ ಬಂದು ನಿರಾಶನಾಗಿ ಪಿಂದಿರುಗುತ್ತುಮಿರಲಾಗಿ, ಕಡೆಗೂ ಬೆಟ್ಟದಿಂದಿಳಿದವಳನ್ನು ವೀಚೀಕರದಿಂದ ಸ್ವಾಗತಿಸಿತು
4) ಕಾಂಚನಾರವರ ಪರಿಹಾರ-೨:
ಹೃದಯೋತ್ಕರ್ಷಣದಿಂದೆ ಕೃಷ್ಣನ ತೆರಂ ತಾನಾಗವೇಳ್ಕೆನ್ನುತುಂ,
ಮುದದಿಂ ಪೊತ್ತಿರೆ ಜಂತುವಂ ಪವಳಮಂ ರತ್ನಂಗಳಂ ಗರ್ಭದೊಳ್,
ಪದಪಿಂ ತನ್ನೆಡೆಗೈದಳಂ ತ್ಯಜಿಪುದೇಂ!ಪೆಣ್ಣೆಂದು ದಾಕ್ಷಿಣ್ಯದಿಂ!
ನದಿಯಂ ಕಂಡೊಡನೋಡಿ ಬಂದುದೊಲವಿಂದಂ ಸೇರ್ದುದಯ್ ಸಾಗರಂ
5) ಕಾಂಚನಾರವರ ಪರಿಹಾರ-೩:
ಇದು ಕಾಂತಾರದ ಪಣ್ಣನರ್ತಿಯೊಳೆ ತಾಂ ತಿಂಬೊಂದು ಚಾಪಲ್ಯಮೋ!
ಮುದದಿಂ ವಾರಿಯಪೂರ್ವಮಾಧುರಿಯನೇ ಪೀರಲ್ಕೆ ಸನ್ನಾಹಮೋ!
ಪುದುವಾಳ್ದರ್ಕಳ ವಾರ್ತೆಯಂ ಜಗದೊಳಿಂದಾಲಿಪ್ಪ ಸದ್ಭಾವಮೋ!
ನದಿಯಂ ಕಂಡೊಡನೋಡಿ ಬಂದುದೊಲವಿಂದಂ ಸೇರ್ದುದಯ್ ಸಾಗರಂ
(ನದಿಯು ಹೊತ್ತು ತರುವ ಹಣ್ಣುಗಳನ್ನು ತಿನ್ನುವಾಸೆಯೋ!, ನದಿಯ ನೀರಿನ ಸಿಹಿಯನ್ನು ಹೀರುವ ಆಸೆಯೋ! ನದಿಯ ಇಕ್ಕೆಲದಲ್ಲಿದ್ದ ಕೂಡಿಬಾಳುವವರ ಕ್ಷೇಮಸಮಾಚಾರವನ್ನು(ವಾರ್ತೆ) ಅರಿವ ಒಳ್ಳೆಯತನವೋ!… ನದಿಯನ್ನು ಕಂಡು, ಅಚಲವಾದ ಸಾಗರ….)
6) ಗಣೇಶಭಟ್ಟ ಕೊಪ್ಪಲತೋಟರ ಪರಿಹಾರ:
ಅದು ದಲ್ ವಿಷ್ಣುಪದೋತ್ಥಮಾಗಿ ಕವಿಯಾ ಸದ್ಭಾಜನಕ್ಕೈದು ಮ-
ತ್ತಿದೊ ಹೈಮಾಚಲಗಾಮಿಯಾಯ್ತು ಜವದಿಂ ವಿಶ್ವೇಶಮಸ್ತಸ್ಥಿತಂ|
ಪದಪಿಂದೆಯ್ದಿರೆ ವೀಚಿಹಸ್ತಗಳೊಳಂ ತಾಂ ಸ್ವಾಗತಂ ಗೆಯ್ಯುತುಂ
ನದಿಯಂ ಕಂಡೊಡನೋಡಿ ಬಂದುದೊಲವಿಂದಂ ಸೇರ್ದುದಯ್ ಸಾಗರಂ||
(ಅದು ವಿಷ್ಣುವಿನ ಕಾಲಿನಿಂದ ಹುಟ್ಟಿದ್ದು, ಅಲ್ಲಿಂದ ಬ್ರಹ್ಮನ ಭಾಜನಕ್ಕೆ ಬಂದು, ಶಿವನ ತಲೆಯಲ್ಲಿ ನಿಂತು ಹಿಮಾಲಯದಲ್ಲಿ ಹರಿದು ಬಂದುದು, ಎಂದು ಅದನ್ನು ತನ್ನ ತರಂಗಗಳೆಂಬ ಕೈಗಳಿಂದ ಸ್ವಾಗತಿಸುತ್ತಾ ಸಾಗರವೇ ನದಿಯನ್ನು ಸೇರಿತು)
7) ಉಷಾರವರ ಪರಿಹಾರ:
ಮೃದುಲಂ ಮೋಹಕಮಾದಮುದ್ದುಗರುವುಂ ಚೈತನ್ಯಮಂ ಪೊಂದುತುಂ
ಪದಮಂಮೆಟ್ಟದೆಮೆಟ್ಟುತುಂ ಜಿಗಿಜಿಗಿಲ್ದುಂತಾನದಂಬಾಯೆನಲ್ |
ಮುದದಿಂ ಧಾವಿಸಿ ಗೋವೊಡಂ ಮೊಲೆಗೊಡಲ್ ಸಾಮಾನ್ಯಮೇನಂತುಟೇ
ನದಿಯಂ ಕಂಡೊಡನೋಡಿ ಬಂದುದೊಲವಿಂದಂ ಸೇರ್ದುದಯ್ ಸಾಗರಂ ||
ನದಿಯು ಸಾಗರದಿಂದ ಹುಟ್ಟುವ “ಮರಿ”ಯೇ ಅಲ್ಲವೇ?!!
“ಹೆದರುತ್ತೇತೆಕೊ ಮ್ಲಾನಮಾಗಿರುವೆಯೌ? ವಾರೀಶನಂ ಸಾರ್ದಪೆಂ
ಮುದದಿಂದೆನ್ನನು ಸೇರಿ ಸಾರು ತೊರೆ(stream) ನೀಂ,” ಎಂದೆನ್ನಲಾಗಾ ಮಹಾ-|
ನದಿಯಂ ಕಂಡೊಡನೋಡಿಬಂದುದೊಲವಿಂದಂ ಸೇರ್ದುದಯ್. ಸಾಗರಂ,
ಸದನಕ್ಕೈದಿರೆ ಕಾಂತೆಯರ್, ಬಿನದದಿಂ ಕೊಂಡೊಯ್ದನಾಂತರ್ಯಕಂ||