Jul 262020
ಶ್ರೀ ರಾ. ಗಣೇಶರ ಪದ್ಯ:
ಸೀಸ:
ಪುಣ್ಯಕೋಟಿಯ ಕಥೆಯನೊಂದು ಮುದಿದನವಲ್ಲಿ ಕರುಗಳ್ಗೆ ಕೂರ್ಮೆಯಿಂದೊರೆಯುತಿರಲು
ನೊಗದ ಭಾರಕೆ ನೊಂದ ಗೋಣುಗಳ ಕಥೆಯನ್ನು ಮತ್ತೊಂದೆಡೆಯೊಳೆತ್ತು ಕಥಿಸುತಿರಲು|
ಕರೆಯ ಬಂದಾಕೆಯಂ ಲೀಲೆಯಿಂ ಝಾಡಿಸಿದ ಮೋಜನಾ ತೊಂಡುದನಮೊರೆಯುತಿರಲು
ಹುಲ್ಲುಹುರುಳಿಗಳಲ್ಲಿ ಹುರುಳುತಿರುಳುಗಳಿಲ್ಲವೆಂದು ಘೂಂಕರಿಸುತಿರೆ ಗೂಳಿಯತ್ತಲ್||
ತೇಟಗೀತಿ:
ಕೊಟ್ಟಿಗೆಯ ನಡುವೆ ಗುಂಗಾಡು ಗುನುಗಿನಲ್ಲಿ
ಸದ್ದು ಸದ್ದೆಂದು ಬಾಲಮಂ ಬೀಸಿ ಬೀಸಿ|
ಪಶುಸಮೂಹಮದು ಸಂಭಾಷಣೆಗಳ ನಡುವೆ
ಮೆಲುಕುಹಾಕುತ್ತುಮಿರ್ಪುದೈ ಹಿಂಡಿತುಂಡಂ||
ಒಂಟಿ ದನಿ
ಒಂಟಿದನಿಯೆನ್ನದಾರುಂ ಕೇಳರೆನ್ನದಿರು
ತಂಟೆಯಹುದೈ ನೋಡುನಿನ್ನುಕ್ತಿಯು|
ಒಂಟಿಯಿದ್ದೇಂ ಪಾಡೆ ಪಂಚಮದಿ ಪರಪುಟ್ಟ-
ವೀಂಟಿರರೆ ಕರ್ಣದಿಂ ಕೇಳ್ದರೆಲ್ಲರ್||
ಸಾರ್ವಜನಿಕ ಮೂರ್ತಿ – ಕಲ್ಪನೆ ಪ್ರೊ|| ಅ. ರ. ಮಿತ್ರರದ್ದು. ಕಲ್ಲಾಗಿದ್ದ ಅಹಲ್ಯೆಯು ತನ್ನ ಶಾಪವಿಮೋಚನೆಯಾದಮೇಲೆ ಒಂದು ಕೋಲನ್ನು ಹಿಡಿದು ವನದ ನಾಯಿಗಳಿಗೆಲ್ಲ ಹೊಡೆಯಹೋದಳು.
ಮನೆಯ ರಕ್ಷೆಯು ನಿರಾಳವನೀವುದೆಲ್ಲರ್ಗೆ
ವನದೊಳಗಮೆಂತೊ ಸಂಕಷ್ಟಗಳ್ ಕೇಳ್|
ಎನಿತೊ ಬಯಲೊಳಗಹಲ್ಯೆಯು ನಿಲ್ಲುವಂತಾಗೆ
ಶುನಕಗಳಿಗಾಸರೆಯ ಕಂಭವಾದಳ್!!
Partly modified above verse to warn public-life aspirants
ಮಿನುಗಲಿಚ್ಛಿಸುವೆಯೇಂ ರಾಜಕೀಯದೊಳು ಕೇಳ್
ಅನಿಬರ್ಗೆ ನೀನಾಗದಿರು ನಿಕೃಷ್ಟಂ|
ಎನಿತೊ ಬಯಲೊಳಗಹಲ್ಯೆಯು ನಿಲ್ಲುವಂತಾಗೆ
ಶುನಕಗಳಿಗಾಸರೆಯ ಕಂಭವಾದಳ್!!