ಶ್ರೀಧರ ಸಾಲಿಗ್ರಾಮರ ಪರಿಹಾರಗಳು:
ಕಂದರಮಂ ಬಳಸುತ್ತುಂ
ಮುಂದಕ್ಕಂ ನದಿಗಳೊಟ್ಟುಗೂಡುತೆ ಸಾಗಲ್|
ಸಂದೆಗಮಿರದಾಗಿದೊ ಕಾ-
ಣೊಂದಕೆ ಮತ್ತೊಂದ ಕೂಡಲೊಂದೆಯೆ ಮೊತ್ತಂ||
ಪೊಂದಿಸುತುಂ ದಿಟ್ಟಿಯನೊ-
ಪ್ಪಂದಂಗೊಂಡೆರಡು ಕಂಗಳೀಕ್ಷಿಪುದೆಂದುಂ|
ಮುಂದಿರ್ಪುದನೈಕ್ಯತೆಯಿಂ-
ದೊಂದಕೆ ಮತ್ತೊಂದ ಕೂಡಲೊಂದೆಯೆ ಮೊತ್ತಂ||
ಸಂದಿರೆ ಗಾಯಕರ ಜುಗ-
ಲ್ಬಂದಿಯೊಳರಿತೊರ್ವರೊರ್ವರೊಳ್ ಶ್ರುತಿ ಸೇರಲ್|
ಸಂದೆಗಮಿರದೊಕ್ಕೊರಲಂ-
ತೊಂದಕೆ ಮತ್ತೊಂದ ಕೂಡಲೊಂದೆಯೆ ಮೊತ್ತಂ||
——–
ನೀಲಕಂಠ ಕುಲಕರ್ಣಿಯವರ ಪರಿಹಾರ:
ಕುಂದದ ಗಣಿತಂ ಬಹಳಾ-
ನಂದಮನೀಯ್ಗುಂ ಬಹುತ್ವಮಂ ತೋರದೆಯೇ|
ಗೊಂದಲಮೆನಿಸದು ಸಂಖ್ಯೆಯ-
ನೊಂದಕೆ ಮತ್ತೊಂದು ಸೇರಲೊಂದೇ ಮೊತ್ತಂ||
(ಬಹುತ್ವವನ್ನು ತೋರದೇ ಒಂದು ಕೂಡಿಕೆಗೆ ಒಂದೇ ಮೊತ್ತವನ್ನು ಕೊಡುತ್ತದೆ ಗಣಿತ. ಬೇರೆ ಬೇರೆ ಮೊತ್ತವಲ್ಲ)
——-
ಕಾಂಚನಾರವರ ಪರಿಹಾರ:
ಪೊಂದಿಸಿಕೊಳ್ಳುತೆ ಪಕ್ಷಗ-
ಳೊಂದಕೆ ಮತ್ತೊಂದು ಸೇರಲೊಂದೇ ಮೊತ್ತಂ-|
ಪಂದಿಕುರಿನಾಯ್ನರಿಗಳಾ!
ಬಂದೊಡನೊಂದೆಡೆ, ಸಮಾನರೀ ಘಟಬಂಧಂ!!
——–
ಉಷಾರವರ ಪರಿಹಾರಗಳು:
ಛಂದೋಬದ್ಧಂ ವೃತ್ತಂ,
ಸಂದ ಪ್ರಸ್ತಾರದೊಳ್ ಗುರುಲಘುಗಣನಕಂ|
ಮುಂದಾಗಲ್ ಪ್ರತಿಪಾದದೊ-
ಳೊಂದಕೆ ಮತ್ತೊಂದು ಸೇರಲೊಂದೇ ಮೊತ್ತಂ||
(ವೃತ್ತದ ಪ್ರತಿಪಾದದಲ್ಲೂ ಮಾತ್ರೆಗಳ ಮೊತ್ತ ಒಂದೇ)
——-
ಸೋಮಶೇಖರ ಶರ್ಮರ ಪರಿಹಾರ:
ಈಗಾಗಲೇ ಒಂದು ಕೊಲೆಗೆ ಖಳನಾಯಕನಿಗೆ ನೇಣು ಶಿಕ್ಷೆಯಾಗಿದ್ದಾಗ…
ಬಂದೆಯ ಕುನ್ನಿಯೆ ಸದೆಯುವೆ-
ನೆಂದಂ ಖಳನಾಯಕಂ ರಿಪುವನೊದೆಯುತ್ತುಂ|
ಸಂದಿದೆ ನೇಣೆನಗಿನ್ನೇ-
ನೊಂದಕೆ ಮತ್ತೊಂದು ಕೂಡಲೊಂದೇ ಮೊತ್ತಂ||
——
ಸುಧೀರ ಕೇಸರಿಯವರ ಪರಿಹಾರ:
अनुयुक्त also means asked,
भवति is also ಸಂಭೋಧನೆ to a lady,
आचार्या is a lady teacher
आचार्ययानुयुक्तो ह्येकं चैकेनुयुक्तम्-अथ किं भवति?
शिष्यो ब्रूते “त्रि भवत्यैकं चैकेनुयुक्तम्-एकं, भवति!”
1+(1+1)
ನಂದಿಯೆ ಚಕಿತಂಗೊಂಬೊಲು
ಒಂದಕೆ ಮತ್ತೊಂದು ಸೇರಲೊಂದೇ ಮೊತ್ತಂ|
ಚೆಂದದೆ ಭಾರ್ಯೆಯ ತನ್ನೊಳ್
ಪೊಂದುತೆ ಲೋಗರ್ಗೆ ರುದ್ರನಕ್ಕಜನಪ್ಪಂ||