Aug 102020
 

ಸಂಜೀವರ ಪದ್ಯ:
ಅಳೆಯುವೇನೆನ್ನ ನೀನೀಯಳತೆಗೋಲಿನೊಳೆ?
ಕಳೆ! ನಿನ್ನ ತಿಳಿವಾದರೋ ಪಳತು ಕಾಣಾ
ತುಳಿದಿಳೆಯನಳೆದಿಹನು ಜಗವನಾಳುವವ ನಿ
ನ್ನಳೆಯೇನು? ತಾಳು ತಾಳೆಂದೆಂದಿಗುಂ
———
ರಾಮಚಂದ್ರರ ಪದ್ಯ:
ಮುದದೆ ಸದನವ ಕಟ್ಟೆ ಮಕ್ಕಳೆತ್ತಲೊ ಪೋಗ-
ಲುದಕವಿಲ್ಲದ ಭವ್ಯ ಬಾವಿಯಂತೆ|
ನದಿಗೆ ಸೇತುವೆ ಕಟ್ಟೆ ತಾನೆತ್ತೊ ಪರಿದಪುದು
ಮದುವೆ ಪಳತಾಗಿರ್ದ ಕೂರ್ಮೆಯಂತೆ||
———
ಸೋಮಶೇಖರರ ಪದ್ಯಗಳು:
ಲಕ್ಷಾಂತರದ ಪಣದ ಜನ್ನದಿಂ ಜನಿಸಿತುಂ
ದಕ್ಷೆತೆಯನೆಸಗಿ ನಿಂತಯ್, ಮನುಜರೋಳ್|
ದೀಕ್ಷೆಯಿರ್ಪೊಡಮೀಕ್ಷೆ ಮಿತಿಯರಿವನರುಪಿ ನೀಂ
ಸಾಕ್ಷಿಯಾದಪೆಯಲ್ತೆ ಚಿರಕಾಲಕಂ||

ಚಾಚಿರಲ್ ಬಾಹುವಿಂ ಪಿಡಿದೆಯೇನಿರ್ದಡಂ
ತೋಚಿಕೆಯನನುಸರಿಸುತುಂ ಬಳೆದಯಯ್|
ಔಚಿತ್ಯಮುಳಿದಿರ್ಪ ವಾಗ್ವಿಲಾಸದ ತೆರದಿ
ಪೇಚಿಗಂ ಮಾದರಿಯವೊಲ್ ನಿಂದೆಯೇಂ??

ಆತುರದೆ ವಿಧ್ವಂಸನಂಗೆಯ್ವುದೊಂದು ಬಗೆ
ಪಾತಾಲನೊಳ್ ನೂಂಕುವೊಂದು ಬಗೆಯಯ್|
ಘಾತಿಸಲ್ ನದಿಗಿರ್ಪ ನೇರ್ಪ ಬಗೆ ದಾಂಟಿಪಂ-
ಗಾತುಕೊಳ್ಳದ ದಿವ್ಯನಿರ್ಲಕ್ಷ್ಯಮೇ??

ಪಿಂತೆಂದೊ ದರ್ಪದಿಂ ನಿರ್ಮಿಸಲ್ ಮೂರ್ತಿಯಂ
ಸ್ವಂತಿಕೆಯನುಳಿದ ಧೂರ್ತನವೆಸರಿನೊಳ್|
ನಿಂತು ನೋಳ್ಪುದೆ ಲೋಗಮಂಟಿರದ ನೆನಹುಗಳ
ಕಂತೆಯಂ ತನ್ನಾರ್ದ್ರಭಾವದಿಂದಂ||

ನದಿಯುಂ ಸೇತುವೆಯುಂ ಗಡ
ಮುದದಿಂ ಗೈವುದು ಪರೋಪಕಾರಮನೆಸಗಲ್|
ಹೃದಯದೆ ಮಚ್ಚರಮೀರ್ವರೊ-
ಳುದಯಂಗೈಯ್ಯುತೆ ವಿರೋಧಿಸಲ್ ಗತಿಯೆಂತಯ್||
——–

  One Response to “ಸೇತುವೆಯ ನಿರ್ಮಾಣದನಂತರ ನದಿಯು ತನ್ನ ಪಾತ್ರವನ್ನು ಬದಲಿಸಿತು”

  1. ಹದ್ದಿನೊಳಿರೆನೆ ಹಿರಿಯರಂತಿರುವೆ ನದಿಯೆ ನೀಂ
    ಇದ್ದು ನಿನಗುಂಟು ವಾಡಿಕೆಯು ನಿಚ್ಚಂ|
    ಉದ್ದಾಮರಾದೊಡೇಂ ಮಕ್ಕಳಂತುಟೆ ವಿಧಿಸೆ
    ಕದ್ದತ್ತ ಪೋದೆಯೇಂ ಚೋದ್ಯದಿಂ ನೀಂ!!
    ——–
    ನೆನ್ನೆವರೆಗೆನ್ನ ಪ್ರೋಕ್ಷಿಸಿಕೊಂಬೆ ಹನಿಯೆರಡ
    ಚೆನ್ನಿಂದೆ ಸಾಗಿರಲು ದೋಣಿಯೊಳು ನೀಂ|
    ಇನ್ನೆಗಂ ಸಿರಿವಂತ ಕಟ್ಟೆ ನೀಂ ಸೇತುವೆಯ
    ಮನ್ನಿಪೆನೆ ಮುಟ್ಟದೆಲೆ ನಡೆಯಲೆನ್ನಂ||
    ———
    ಪ್ರಿಯಕರನ ಸೇರುವುದು ತಡವಾಗಲುತ್ಕಂಠ-
    ಮಯವಾಗುವಳು ನದಿಯು ವಿರಹದಿಂದಂ|
    ಪಯಣದೊಳ ವೇಗವದು ಕಾಣೆ ನಾನಿನ್ನೆನಿತು
    ಲಯವಪ್ಪುದಾ ಸೇತುವೆಯನು ಹಾಯಲ್||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)