Nov 062011
 

ಈ ಚಿತ್ರದ ಕುರಿತು ನಿಮ್ಮ ಭಾವನೆಗಳನ್ನು ಪದ್ಯಗಳಲ್ಲಿ ಬರೆಯಿರಿ

  54 Responses to “ಚಿತ್ರಕ್ಕೆ ಪದ್ಯ”

  1. ಕಂದಾ! ಪಣ್ಗಯ್ಯಿಂ ಕಳೆ-
    ಗುಂದಿದ ನಿನ್ನಬ್ಬೆಗಣ್ಣನೊರಸಿರ್ದಪೆಯೇಂ?
    ಕಂದದ ಪಾದಮದೊಂದೇ
    ಕಂದಿದ ಕನ್ನಡದ ತಾಯಕ್ೊರೆಯಂ ಕಳೆಗುಂ!

    • ಬಹಳ ಸೊಗಸಾಗಿದೆ. ಚಿತ್ರವನ್ನು ಹಾಕಿದ್ದು ಮೊದಲ ಪದ್ಯದಲ್ಲೆ ಸಾರ್ಥಕವಾಯಿತು

  2. ಕಡೆಯ ಸಾಲಿನಲ್ಲಿ “ಕುಂದಿದ ಕನ್ನಡದತಾಯ ಕೊರೆಯಂ ಕಳೆಗುಂ” ಎಂದಿರಬೇಕಿತ್ತು.

  3. ದೇವಮಾತೆಯಿವಳಹಳಲ್ಲವೆ
    ದೇವತೆ ಸ್ವಾಂತದೊಳು ಕರದೊಳ್
    ನೇವರಿಸುತೆದೆಗವಚಿಕೊಂಡಿಹಳಲ್ತೆಲನುನಯದಿಂ|
    ತೀವಿದ ಪ್ರಭೆಯ ಜಗಪಾಲಕ
    ಸಾವಿರಕ್ಕೊಬ್ಬನಹ ಕುವರನ
    ಗಾವಿಲೋಪಾದಿ ಹತಳಹಳವನ ಭವಿತವ ನೆನೆದು||

  4. ದೇವಮಾತೆಯಿವಳಹಳಲ್ಲವೆ
    ದೇವತೆ ಸ್ವಾಂತದೊಳು ಕರದೊಳ್
    ನೇವರಿಸುತೆದೆಗವಚಿಕೊಂಡಿಹಳಲ್ತೆ ಸಾಜದಿನೆ|
    ತೀವಿದ ಪ್ರಭೆಯ ಜಗಪಾಲಕ
    ಸಾವಿರಕ್ಕೊಬ್ಬನಹ ಕುವರನ
    ಗಾವಿಲೋಪಾದಿ ಹತಳಹಳವನ ಭವಿತವ ನೆನೆದು||

  5. ಕವಿತಾ ಪುತ್ರಂ ಕಂದಂ
    ನವರಸಫಲಮಂ ಗಡ ಪಿಡಿದಿರ್ದುಂ ಕರದೊಳ್
    ಕವಿತಾ ಪತಿ ಗದ್ಯಂ ಪೋ
    ಗೆ ವಿಪನ್ನಳ ಬಿಟ್ಟು, ಸಂತಯಿಸಿದಂ ಪದದೊಳ್||

    • ಬಹಳ ಚೆನ್ನಾಗಿದೆ. ಗದ್ಯ ಪತಿ ಬಿಟ್ಟ ಕವಿತಾ ತಾಯನ್ನು ಕಂದ ಸಂತೈಸಿದ ಕಲ್ಪನೆ ಉತ್ತಮವಾಗಿದೆ.

      • ಧನ್ಯವಾದಗಳು

        • ಕೊಪ್ಪಲ ತೋಟದ ಗಣೇಶರೆ, ನಿಮಗೆ ನಲ್ಬರವು. ಪದ್ಯಪಾನದಲ್ಲಿ ನಿಮ್ಮ ಮೊದಲ ಕಂಆವನ್ನು ಕಂಡಾಗಲೇ ಇದಾವುದೋ ಪಳಗಿದ ಕೈ ಎಂದುಕೊಂಡು ಹರ್ಷಿಸಿದೆ. ಅಭಿನಂದನೆಗಳು ತಡವಾಗಿವೆ, ಮನ್ನಿಸಿರಿ.

          ಆನೊರ್ವನೇ ಗಣೇಶಂ
          ತಾನಿರ್ಪೆಂ ಪದ್ಯಪಾನಜಾಲದೊಳೆಂದಾಂ
          ಧ್ಯಾನಿಸುತಿರ್ದೆನಿದೇನಯ್
          ಮಾನಿತನಿನ್ನೊರ್ವನಿಲ್ಲಿ ಕೊಪ್ಪಲತೋಟಂ!!

          ಆದರೆ ರಾಮ್ ಹೇಳಿದಂತೆ ತುಂಬ ಚೆಲುವಾದ ಹಾಗೂ ಹಳಗನ್ನಡದ ಹಸನಾದ ಹೊಗರಿರುವ ಈ ಪದ್ಯದಲ್ಲಿ ಒಂದೇ ಲೋಪವಿದೆ. ಅದು ಬಹುಶಃ ಕಣ್ತಪ್ಪಿನಿಂದಾದ ಪ್ರಮಾದವಿರಬಹುದು. ಎರಡನೆಯ ಪಾದದಲ್ಲಿ ಸರ್ವಲಘು ಗಣಗಳು ಬಂದಾಗ ಮೊದಲ ಲಘುವಿನ ಬಳಿಕ ಯತಿಯು ಬರಲೇಬೇಕು. ಪ್ರಕೃತದಲ್ಲಿದು ಪಾಲಿತವಾಗಿಲ್ಲ. ನಿಮಗಿದನ್ನು ಸವರಿಸಿ ಪದ್ಯವನ್ನು ಅನವದ್ಯವನ್ನಾಗಿಸುವುದು ದೊಡ್ಡ ಸಂಗತಿಯೇನಲ್ಲ.

          • ಧನ್ಯವಾದಗಳು ಗಣೇಶ್ ಸರ್,,,,
            ಕವಿತಾ ಪುತ್ರಂ ಕಂದಂ
            ನವರಸ ಫಲಮಂ ಸ್ವಹಸ್ತದೊಳ್ ಪಿಡಿದಿರ್ದುಂ
            ಕವಿತಾಪತಿ ಗದ್ಯಂ ಪೋ
            ಗೆ ವಿಪನ್ನಳ ಬಿಟ್ಟು,ಸಂತಯಿಸಿದಂ ಪದದೊಳ್
            “ಈ ರೀತಿ ಬದಲಾಯಿಸಿದೆ.. ಸರ್ವಲಘುಗಳ ಸಹವಾಸಕ್ಕಿಂತ “ಜಗಣ”ದವರ ಸಹವಾಸವೇ ಒಳ್ಳಿತು ಎಂದೆನಿಸಿತು!!!”

          • ಜಗಣ(ಗಣೇಶ)ದವರ ಸಹವಾಸ ಎಂದೂ ಒಳ್ಳಿತೇ.

          • ಜಗಣರ್ ಗಣನಾಥರಾದಿ ವಂದಿತರಲ್ತೇ 🙂

            ಸಮದೊಳ್ ಜಗಣಂ ಬರ್ಕೆ ವಿ
            ಷಮದೊಳ್ ಬರದಿರ್ಕೆ ಮತ್ತಮಾರನೆವನೆಯೊಳ್
            ಸಮುಚಿತದೊಳ್ ನೆಲೆಗೊಳ್ಗಾ
            ಸಮವಿಷಮವಿಷಯವಿಶೇಷ ಗಣಿತಂ ಜಗಣಂ

            ಸುಗುಣಂ ವಿಗುಣಂವೆರಸಾ
            ಜಗಣಂ ಗಣನಾಥನಲ್ತೆ ಮತ್ತಾ ಕ್ರಮದೊಳ್?
            ಸೊಗದೊಳ್ ವಂದಿಪೆನದರಿಂ
            ಜಗಣಮೆನಿಪ್ಪಾ ಗಣೇಶಗಂ ಮೊದಮೊದಲೊಳ್

  6. ಫಲಮಂ ಕಂದಂಗೆ ನೀಡು-
    ತೊಲುಮೆಯನಿಂ ನೋಡೆ, ತಾಯ ಹೂಮೊಗದೊಳ್ ಕಂ-
    ಗಳೊತಿಹ ದುಗುಡವ ತಾಕಾ-
    ಣಲ್, ಸಂತೈಸೆನೆ ಕಪೊಲಮಂ ಪಿಡಿದಿಹನೇs?

    • ಸೋಮ ಅವರೆ, ನಿಮ್ಮ ಪದ್ಯದಲ್ಲಿ ಹಲಕೆಲವು ವ್ಯಾಕರಣದೋಷಗಳಿವೆ. ನೇರವಾಗಿಯೇ ಕಂದಾಗ ಎಲ್ಲವನ್ನೂ ತಿಳಿಸುವೆ. ಅಥವಾ ದೂರವಾಣಿಸಿರಿ

  7. ಅಮ್ಮ :
    ನಿನಗೊಲುಮೆಯಿರೆ ಭಾಷೆ
    ನಿನಗೊಲುಮೆಯಿರೆ ಭಾವ
    ನಿನ್ನೊಲುಮೆಯಿ೦ದೆ ಬೆಳೆವೆನೈ ನಾ ಕೇಳ್
    ನಿನಗೊಲುಮೆಯಿರೆ ಸತ್ಯ
    ನಿನಗೊಲುಮೆಯಿರೆ ನಿತ್ಯ
    ನಿನ್ನೊಲುಮೆಯ ಪ್ರಶ್ನೆಯದೇನುಸಿರೈ

    ಕ೦ದ:

    ಲಾಲಿಯ ಹಾಡನು
    ಆಲಿಸಿ ಮಲಗಿದೆ
    ಪಾಲಿಸೆ ನೀನಿಹೆ ಎ೦ದೆನುತಾ
    ಬೇಲಿಯ ಮೇಯುತ
    ಖೂಳನು ಬರುತಿರೆ
    ಹೇಳದೆ ಕಾಡುವುದಿದು ಸರಿಯೇ

    ಅಮ್ಮ:

    ಬೆಳೆದು ಬ೦ದಿಹೆ ನನ್ನ ನೆನೆಯುತ
    ಒಲಿದು ಬ೦ದಿಕೆ ನನ್ನ ಮೆರೆಸುತ
    ಕುಣಿದು ತೋರಿದ ಒಲವು ಕೇವಲ ಮಾಸ ಮಾತ್ರವೇ ನೀ
    ನಿಳಿದು ಹೋದೆಯೊ ನನ್ನ ಮರೆಯುತ
    ಕಳೆದು ಹೋದೆಯೊ ನನ್ನ ತೊರೆಯುತ
    ಸೆಳೆದು ಬಿಟ್ಟಿತೆ ಆ೦ಗ್ಲ ಭಾಷೆಯು? ಎನ್ನೆದೆಗೊದ್ದೆಯೋ

    ಕ೦ದ ನ ಉತ್ತರ ಇನ್ನೂ ಇದೆ………
    ಹರೀಶ್ ಅತ್ರೇಯ

    • ಪ್ರಿಯ ಹರೀಶ,
      ಮೊದಲನೆಯ ಪದ್ಯ ಕುಸುಮ ಷಟ್ಪದಿ ಛಂದದಲ್ಲಿದೆಯಲವೇ?
      ೫ + ೫
      ೫ + ೫
      ೫ + ೫ + ೫ + ಗು
      ಈ ಪದ್ಯದಲ್ಲಿ ಮೂರನೆ ಹಾಗು ಆರನೆ ಸಾಲುಗಳಲ್ಲಿ “ಲಗಂ” ಬಂದಿದೆ. ಆಂದರೆ ಮಾತ್ರೆಯ ಶುರುವಿನಲ್ಲಿ u_ ಬಂದಿದೆ. ಇದರಿಂದ ಶೃತಿ ಕಟುತ್ವ ಬರುವುದು. ಇದು ಛಂದಸ್ಸಿನ ದೋಷವಾಗಿದೆ

      ಮೂರನೆಯ ಪದ್ಯದಲ್ಲಿ “ಬಂದಿಕೆ” ಎಂಬುದು “ಬಂದಿಹೆ” ಅಗಬೇಕೆನಿಸುತ್ತದೆ.
      ಈ ಭಾಮಿನಿ ಷಟ್ಪದಿಯ ಮೂರನೆ ಸಾಲಿನಲ್ಲಿ “ಮಾಸ ಮಾತ್ರವೇ” ಎಂಬಲ್ಲಿ, ‘ಮಾತ್ರವೇ’ ಎಂಬುದು ೫ ಮಾತ್ರೆಗಳಾಗಿ ಛಂದ ಕೆಡಿಸುತ್ತದೆ. ಇದನ್ನು “ಮಾತ್ರವೆ” ಎಂದುಮಾಡಬಹುದು.
      ಕೊನೆಯ ಸಾಲಿನಲ್ಲಿ “ಭಾಷೆಯು ಎನ್ನೆದೆ” ಎಂಬುದನ್ನು ಕೂಡಿಸಿ ಸಂಧಿ ದೋಶ ತಪ್ಪಿಸಬಹುದು. ಇಲ್ಲಿ ಮತ್ತೆ “ದೆಗೊದ್ದೆ” ಎಂಬಲ್ಲಿ “ಲಗಂ” / ಜಗಣ ಬಂದಿದೆ.

      ನಿಮ್ಮ ಮುಂದಿನ ಪದ್ಯಗಳಿಗಾಗಿ ಕಾಯುತ್ತಿರುವೆ

      • ಕ೦ದ
        ಹರಿದು ಬ೦ದ ಭಾಷೆ ಎ೦ದು
        ಸರಿದು ನಿ೦ತು ದಾರಿ ಕೊಟ್ಟೆ
        ಮರಳಿ ಹೋಗಲಾರದ೦ತೆ ಕೂತು ಬಿಟ್ಟಿದೆ
        ಕೆರಳಿ ನಿಲ್ಲಲಾರೆ ನಾನು
        ಮರೆತು ಹೋಗಲಾರೆ ನಿನ್ನ
        ಕರವ ಮುಗಿದು ಕೇಳುತಿರುವೆ ನಿನ್ನ ಆಜ್ಞೆ ಏನಿದೆ?

        ಅಮ್ಮನ ಉತ್ತರ ನಾಳೆಗೆ…. ಕ್ಷಮಿಸಿ ಅಲ್ಪ ಸಮಯುದಲ್ಲಿ ಬರೆಯಲು ಸಾಧ್ಯವಾಗಲಿಲ್ಲ. ಆಕೆಯ ಉತ್ತರವನ್ನು ಪೂರ್ಣಗೊಳಿಸುವಿರಾ?
        ಹರಿ

        • ಪದ್ಯದ ಐದು ಪಾದಗಳು ಅನವದ್ಯವಾಗಿವೆ. ಆದರೆ ಆರನೆಯ ಸಾಲಿನಲ್ಲಿ ಮಾತ್ರೆಗಳು ಹೆಚ್ಚಾಗಿವೆ. dosage ಹೆಚ್ಚಾದರೆ side-effects ಕೂಡ ಮಿಗಿಲಲ್ಲವೆ! ಹೀಗಾಗಿ ಇಲ್ಲಿಯ ಮಾತ್ರೆಗಳನ್ನು ಕಡಿಮೆ ಮಾಡಬೇಕು. ದಯವಿಟ್ಟು ಯತ್ನಿಸಿರಿ.

        • ಆಹ, ಹರೀಶರೇ ಸೊಗಸಾಗಿದೆ, ಮುಂದಿನ ಪದ್ಯ ಹೇಳಿ

      • ರಾಮ್,
        ಅಲ್ಲದೆ, ಹರೀಶ್ ರವರ ’ಅಮ್ಮ’ ಪದ್ಯದ ೩ನೆಯ ಹಾಗೂ ೬ನೆಯ ಸಾಲುಗಳ ಮೊದಲನೆಯ ಅಕ್ಷರ ಗುರು ಆಗಿಬಿಟ್ಟಿದೆ. ಉಳಿದ ಸಾಲುಗಳ ಮೊದಲಕ್ಷರಗಳು ಲಘು ಆಗಿರುವುದರಿಂದ, ಇದು ತಪ್ಪಲ್ಲವೆ?

        • ಹೌದು, ಸಿಂಹಪ್ರಾಸವು ಮಾರ್ಪಟ್ಟು ಹಯಪ್ರಾಸವಾದಂತಿದೆ. ಆದರೆ ನನ್ನ ಮಟ್ಟಿಗೆ ಪ್ರಾಸಕ್ಕಿಂತ ಯತಿ ಹಾಗೂ ಛಂದೋಗತಿ ಬಹಳ ಮುಖ್ಯ. ಏನೇ ಆಗಲಿ, ಸಾಂಪ್ರದಾಯಿಕಪದ್ಯರಚನೆಯಲ್ಲಿ ಪ್ರಾಸಕ್ಕೆ ಕಪ್ಪ ತೆರಲೇ ಬೇಕು.

  8. ಷರೀಶ್ ಆತ್ರೇಯರ ಪದ್ಯಗಳು ಚೆನ್ನಾಗುತ್ತಿವೆ. ಅವರ ಕೈ ಪಳಗುತ್ತಿದೆ. ಆದರೆ ಛಂದಸ್ಸಿನಲ್ಲಿ ಕೆಲವೊಂದು ಸಣ್ಣ ಪುಟ್ಟ ದೋಷಗಳಿವೆ. ಅವನ್ನು ಇನ್ನುಳಿದ ಗೆಳೆಯರು ಸರಿಪಡಿಸಬಲ್ಲಿರಾ?

  9. ಅನೇಕ ಗಂಬೀರ ಉತ್ತಮ ಪರಿಹಾರಗಳ ನಡುವೆ, ಇಲ್ಲೊಂದು ಸಣ್ಣ ವಿನೋದದ ಪದ್ಯ ::

    ದುಗುಡಂ ನಿನಗಿರ್ದೊಡೆಯುಂ
    ಮಗುನಾನೆಂಬುದನು ನೀಂ ಮರೆಯಬೇಡೈ ತಾಯ್ |
    ಬಗೆಬಗೆ ಶಾಲ್ಪದರಗಳಂ
    ಮಿಗೆ ಪೊದ್ದುಮೆನಗೆ ಚಳಿಂಗೆ ಚಡ್ಡಿಯ ತೊಡಿಸೈ ||

    • ರಾಮಚಂದ್ರರ ವಿನೋದಸ್ವಭಾವಕ್ಕೆ ತಕ್ಕಂತೆ ಪರಿಹಸರದಲ್ಲಿ ಒಳ್ಳೆಯ ಕಿಡಿಗೇಡಿತನವಿದೆ:-)
      ಆದರೆ ಕೆಲವೊಂದು ಸವರಣೆಗಳನ್ನು ಮಾಡಬಹುದು:
      ………ಮಗುವಾನೆಂಬದನೆ ತಾಯೆ! ನೀಂ ಮರೆಯದಿರೌ|
      ಬಗೆಬಗೆಯ ಶಾಲ್ಗಳಂ ಬೆ-
      ಚ್ಚಗೆ ತಳೆದೌ, ಎನ್ನ ಚಳಿಗೆ ಚಡ್ಡಿಯ ತೊಡಿಸೌ||

    • Ram,
      very good sense of humor in the poem 🙂

    • ಗಣೇಶರ ಸವರಣೆಯಿಂದ ಹಾಸ್ಯ ಇನ್ನೂ ಚೆನ್ನಾಗಿ ತೋರ್ಪಡುತ್ತಲಿದೆ. ಧನ್ಯವಾದಗಳು.
      ಮಾರ್ಪಟ್ಟ ಪದ್ಯ ಇಂತಿದೆ ::
      ದುಗುಡಂ ನಿನಗಿರ್ದೊಡೆಯುಂ
      ಮಗುವಾನೆಂಬುದನೆ ತಾಯೆ! ನೀಂ ಮರೆಯದಿರೌ |
      ಬಗೆಬಗೆಯ ಶಾಲ್ಗಳಂ ಬೆ-
      ಚ್ಚಗೆ ತಳೆದೌ, ಎನ್ನ ಚಳಿಗೆ ಚಡ್ಡಿಯ ತೊಡಿಸೌ||

      • ಹಹ… ಒಬ್ಬೊಬ್ಬರಿಗೆ ಒಂದೊಂದು ಚಿಂತೆ, ಚೆನ್ನಾಗಿದೆ

      • ರಾಮಚ೦ದ್ರರೇ,
        “ಚಳಿಗೆ ಚಡ್ಡಿ” ಎ೦ಬುದು, ನಿ(ನ)ಮ್ಮ ಇಷ್ಟಕವಿ ನಾರಣಪ್ಪನ “ಗಾಳಿಗುಬ್ಬಸವಾಯ್ತು” ಎ೦ಬುದನ್ನು ಜ್ಞಾಪಿಸುತ್ತಿದೆ…
        ನೀವು ಬರೆದಿರುವುದು…”ನನಗಾಗುತ್ತಿರುವ ಚಳಿಗೆ(ಚಳಿಯನ್ನು ನಿವಾರಿಸಲು) ಮೊದಲು ಚಡ್ಡಿ ತೊಡಿಸು” ಎ೦ಬರ್ಥದಲ್ಲಿ ಎ೦ದು ಭಾವಿಸುತ್ತೇನೆ…..ಅದನ್ನು ನಾರಣಪ್ಪನ ಅತಿಶಯೋಕ್ತಯ ರೀತಿ ಅರ್ಥೈಸಿದರೆ ಮತ್ತೂ ಮಜಾ ಬರುತ್ತದೆ ಏನ೦ತೀರಿ ???….

        • ಶ್ರೀಶ,
          ನನಗೆ ಚಳಿಯಾಗುತ್ತಿದೆ – ಚಡ್ಡಿಯನ್ನಾದರೂ ತೊಡಿಸು ಎಂಬುದೆ ನನ್ನ ಮನದಲ್ಲಿದ್ದ ಅರ್ಥ. ಅಷ್ಟನ್ನೂ ಹೇಳಲು ಮಾತ್ರೆಗಳು ಕಡಿಮೆಯಾದವು 🙂
          “ಗಾಳಿಗುಬ್ಬಸ” ದಂತೆಯೂ ಬಹಳ ಸೊಗಸಾಗಿರುತ್ತದೆ. ದೇವತೆಗಳಿಗೆ ಹವಿಸ್ಸನ್ನು ಕೊಟ್ಟಂತೆ, ಚಳಿಗೆ ಒಂದು ಚಡ್ಡಿಯನ್ನು ಉಡುಗೊರೆಯಾಗಿ ಕೊಟ್ಟರೆ, ನನ್ನ ಮೇಲಿನ ಅದರ ಪ್ರತಾಪ ಕಮ್ಮಿಯಾಗಬಹುದೆಂದು ಅರ್ಥೈಸಬಹುದು 🙂

  10. ಒಂದು ಸಣ್ಣ ಪ್ರಯತ್ನ..ಸ್ನೇಹಿತರು ಪರಾಮರ್ಶಿಸಬೇಕು…..

    ನೀನಿತ್ತ ಅನ್ನವುಣುವೆನಮ್ಮ ಗೊಣಗಿಡದೆ
    ನೀನೆತ್ತ ಕರೆದರೂ ಬರುವೆನಮ್ಮ ಅಳದೆ
    ನೀನಿತ್ತ ಬಟ್ಟೆಯುಡುವೆನಮ್ಮ ಬೇಡವೆನದೆ
    ನೀನೆತ್ತ ತಾಯೆನೆಗೆ ಕರವಿಡಿದೆನ್ನಪೊರೆ.

    • ಪ್ರಿಯ ನವೀನ್ ಅವರೆ,
      ನಿಮ್ಮ ರಚನೆಯ ಭಾವ ಹಾರ್ವಾಗಿದೆ. ಭಾಷೆಯೂ ಹದವಾಗಿದೆ. ಆದರೆ ಬಂದಿರುವ ತೊಡಕು ಛಂದಸ್ಸಿನದಷ್ಟೇ!
      ದಯಮಾಡಿ ನಮ್ಮ ಛಂದಸ್ಸುಗಳ ಮೊದಲ ಪಾಠಗಳನ್ನು ಗಮನಿಸಿರಿ. ಬೇಗದಲ್ಲಿಯೇ ನಿಮಗೆ ಛಂದಃಪಾಕವೊದಗುವುದರಲ್ಲಿ ಸಂದೇಹವಿಲ್ಲ. ಈ ರಚನೆಯಲ್ಲಿಯೇ ಬಲುಮಟ್ಟಿಗೆ ಐದು ಮಾತ್ರೆಗಳ ಗತಿಯಿದೆ. ಅಲ್ಪಸ್ವಲ್ಪ ಸವರಿಸಿದರೆ ಸರಿಯಾದೀತು. ಇಲ್ಲಿಯ ಗೆಳೆಯರ ರಚನೆಗಳನ್ನೇ ಗಮನಿಸಿದ್ರೂ ಸಾಕು, ನಿಮಗೆ ಹಾದಿ ಸುಗಮವಾದೀತು. ಗೆಲವಿನಿಂದ ಯತ್ನಿಸಿರಿ. ಇದಕ್ಕೆ ಕೆಲಮಟ್ಟಿಗೆ donkey’s labor ಬೇಕು. ಆ ಬಳಿಕ ನಿಮಗೆ ಉಚ್ಚೈಶ್ಶ್ರವಸ್ಸಿನ ಅನುಕೂಲವೊದಗುತ್ತದೆ:-)

      • ಧನ್ಯವಾದಗಳು ಗಣೇಶವರೆ, ಛಂದಸ್ಸನ್ನು ನಾನಿನ್ನೂ ಅರಗಿಸಿಕೊಳ್ಳಬೇಕಿದೆ.

  11. ಕೆಲಕಾಲ ಇತ್ತ ತಲೆಹಾಕಿರಲಿಲ್ಲ. ನನ್ನದು ತಡವಾದ ಎಂಟ್ರಿ:

    ಎನಿತು ಸೊಗಸು ಎನಿತು ಮುದ್ದು ಅಮ್ಮ ನಿನ್ನ ಮೊಗವದು
    ಎನಿತು ನುಣುಪು ಎನಿತು ತಣುಪು ಗಲ್ಲವೇನು ಹಿತವಿದು
    ಹೊಟ್ಟೆ ಹಸಿಯುತಿರಲು ಬರಿಯ ಸೇಬ ಕೈಗೆ ಕೊಡುವರೆ
    ಪುಟ್ಟಮಗುವು ನಾನು ಇದನು ಅಗಿದು ತಿನ್ನಬಲ್ಲೆನೇ?
    ಸುಮ್ಮನೆನ್ನ ನೋಡುತಿರಲು ಅಮ್ಮ ಏನು ಬಂದಿತೇ?
    ಗುಮ್ಮ ಬರುವ ಮೊದಲು ಹಾಲ ಕುಡಿಸು, ಕುಡಿದು ಮಲಗುವೆ

    • ಮ೦ಜುನಾಥರೇ…..
      ಸೇಬಿಗೂ ಸಾರ್ಥಕತೆ ಬ೦ತು….ತು೦ಬಾ ಔಚಿತ್ಯವಾಗಿದೆ

    • ಮಂಜುನಾಥರಿಂದ ಪದ್ಯಲಾಲನೆಯನು ಹೊಂದದೆ
      ಕಂಜಮುಕುಲಕೋಮಲಾಂಗಮೀ ಶಿಶುವಿಗೆ ಸಲ್ವುದೇ
      ಹರ್ಷವೆಂದು ಚಿಂತಿಸುತ್ತಲಿದ್ದೆನಿಂದು ಬಂದುದೇ
      ವರ್ಷಿಸುತ್ತಲುತ್ಸವದ ವಿಲಾಸಗತಿಯೊಳೀ ಪದ!!
      (ಪದವೆಂದರೆ ತಾಳಬದ್ಧವಾದ ಗೇಯರಚನೆ)

  12. ಎಳೆಯಲು ಹೋದರೆ ಪಪ್ಪನ ಗಲ್ಲವ
    ಬೆಳದಿಹ ಗಡ್ಡವು ಚುಚ್ಚುವುದು |
    ಹೊಳೆಯುವ ಕೆನ್ನೆಯೆ ಹೇಗೆಸಿಗುವಿಯೈ
    ಬಳಲಿಹೆ ಹಿಡಯುತ ನಿನ್ನನ್ನು||

  13. ಹರಿಯಲ್ ಪೊಕ್ಕಳ ಬಳ್ಳಿಯು
    ಕರಗುವುದೇಂ ಜನನಿ ಕಂದನ ನಿಜದ ಬಂಧಂ ?
    ಕರವಂ ಚಾಚಳೆ ಒಲುಮೆಯ
    ಮರಳಿಹ ಕಂದಗಳ ಕಂಡು ಕನ್ನಡದೀತಾಯ್ ?

  14. ಕಾಂಚನ ಅವರೆ,
    ನಿಮ್ಮ ಕಲ್ಪನೆ ತುಂಬ ಸೊಗಸು. ಕೇವಲ ತಾಯಿಗಷ್ಟೇ ಬರಬಹುದಾದದ್ದು.
    ಸ್ವಲ್ಪ ಹಳಗನ್ನಡದ ಹದವೂ ಸೇರಿದರೆ ಮತ್ತೂ ಚೆಲುವಾದೀತು. ಆದಿಶೆಯಲ್ಲಿ ಯತ್ನಿಸಿರಿ. ಅದೇನೂ ಅಂಥ ಕಷ್ಟವಲ್ಲ:-)

  15. ಕರದೊಳೆಳೆಗಂದನಂಪಿಡಿ-
    ದಿರಲಾ ಶಿಶುವಿಂಗೆಹಸ್ತದೊಲಿರಿಸಿ ಫಲಮಂ
    ಗುರುತಿಸಿಹನೇಂ? ಪ್ರಕೃತಿಯೊಳ್
    ಹರಿವಾ ಸೃಷ್ಟಿಯವಿಧಾನಮಂ ಸಂತತಿಯೊಳ್

    ಮಂಜುನಾಥರು ಹೇಳುವ ಹಾಗೆ ಸೇಬು ಎಳೆ ಕಂದನಿಗೆ ಆಹಾರವಾಗದು, ಹಾಗಿದ್ದರೆ ಚಿತ್ರಕಾರನ ಉದ್ದೇಶ ಏನಿರಬಹುದು ಎಂದು ಯೋಚಿಸಿದಾಗ ಈ ಅಭಿಪ್ರಾಯ ಬಂತು. ಮಗುವು ಸಹ ಮುಂದೊಂದು ಕಾಲದಲ್ಲಿ ಇನ್ನೊಂದು ಜೀವಕ್ಕೆ ಆಶ್ರಯ ಕೊಡುತ್ತದೆ ಅನ್ನುವುದನ್ನ ಮಗುವಿನ ಕೈಯೊಳಗೆ ಸೇಬಿನ್ನು ಚಿತ್ರಿಸಿ ಗುರುತಿಸಿರಬಹುದೇ?

  16. ಮುನ್ನವೇ ತೋರಿಪುದೆ ಭವಿತವ –
    ದಿನ್ನು ಜನರಾ ಪಾಪಗಳ ನೋ –
    ವನ್ನು ಫಲರೂಪದಲೆ ತಿಂಬುವ ಮಗನ ಸಂಕಟವು ?
    ಕನ್ನೆತನದಾ ಮುಗ್ಧ ಮನದ ಮ –
    ಡೋನ್ನಳಾ ದುಃಖವನು ನೀಗಲು
    ಕೆನ್ನೆ ಸವರುವ ಕಂದ ಕ್ರಿಸ್ತನ ಚಿತ್ರವಿದು ರಮ್ಯ ||

    • ನೊಂದವರ ಕಂಬನಿಯೊರಸುವ ಪ್ರವಾದಿಯ ಭವಿತವ್ಯ ಎಳೆತನದಲ್ಲೇ ಸೂಚಿತವಾಗಿದೆಯೆಂಬ ಕಲ್ಪನೆ ಸೊಗಸಾಗಿದೆ

    • ರಾಮ್,
      ನನಗೆ ಈ ವಿಷಯ ತಿಳಿದಿರಲಿಲ್ಲ, ನಿಮ್ಮ ಪದ್ಯವು ಮೂಲವಸ್ತುವನ್ನು ಚೆನ್ನಾಗಿ ಗ್ರಹಿಸಿದೆ

    • ಈ ಚಿತ್ರದ ತೆರದಲ್ಲಿ “Madonna and Child” ಎಂಬ ಅನೇಕ ಚಿತ್ರ ಮತ್ತು ಶಿಲ್ಪಗಳಿವೆ. ಇದು Virgin Mary and Jesus Christ ರ ಚಿತ್ರ. ಮಗನ ಭವಿಷ್ಯದ ನೇವುಗಳನ್ನು ಕಂಡು ತಾಯಿ ದುಃಖಿತಳದದ್ದು ಮತ್ತು ಕಂದ ಸಮಾಧಾನ ಮಾಡಿದ್ದು ಕಲ್ಪನೆ.

  17. ವ್ಯಸನದೊಳ್ ಕಣ್ಣೆರಡು ಹಸಿಯಾಗೆ ತಾಯಿ ನಿ-
    ಟ್ಟುಸಿರಿಟ್ಟು ಬಡತನದೆ ಮಗುವಾಟಕೆ
    ಪಸಿವನ್ನು ತಡೆಯುತಲಿವುರಿವ ಜಟರಾಗ್ನಿ ಲೆ-
    ಕ್ಕಿಸದೆ ಶಿಶುವಿಗೆ ಫಲವ ಕೈಗಿತ್ತಳೇ?

  18. ಪ್ರಕೃತಿಮಾತೆಯು ನಮಗೆ ಮಾಡುತ್ತಿರುವ ಸೇವೆ ಮತ್ತು ಅವಳ ಮಕ್ಕಳಾದ ನಮ್ಮ ಭಾಧ್ಯತೆಯನ್ನು ಚಿತ್ರಕ್ಕೆ ಅಳವಡಿಸುವ ಪ್ರಯತ್ನ:

    ದಿನದಿನವು ಫಲವಿಡುತ ಶಿಶುಗಳೇಳಿಗೆಗೆಂದು
    ತನುಸಿರಿಯಕುಸಿತದಲಿ ಮುಖಗುಂದಿರೆ
    ಮನುಜನಂ ಪ್ರಕೃತಿಮಾತೆಯಫಲಗಳಲಿಯೊಬ್ಬ-
    ನೆನುವುದಂ ತಿಳಿದವಳ ಪೊರೆಯೆ ಚೆಂದ

  19. Typo correction

    ದಿನದಿನವು ಫಲವಿಡುತ ಶಿಶುಗಳೇಳಿಗೆಗೆಂದು
    ತನುಸಿರಿಯಕುಸಿತದಲಿ ಮುಖಗುಂದಿರೆ
    ಮನುಜನುಂ ಪ್ರಕೃತಿಮಾತೆಯಫಲಗಳಲಿಯೊಬ್ಬ-
    ನೆನುವುದಂ ತಿಳಿದವಳ ಪೊರೆಯೆ ಚೆಂದ

  20. ೧.
    ನವಮಾಸ ಪೋಷಿಸಿದ
    ನವಜೀವ ಕರುಣಿಸಿದ
    ನವಜಗವ ತೋರಿದೀ
    ನವದೇವತೆಯೇ ತಾಯ್ ||

    ೨.
    ಸುಲಭೋಪಾಯವನರಿತುಂ
    ಬಳಸಿರ್ಪೆನಾನತಿಮಧುರ ಪಣ್ತೆರಗೈಯ್ಯಲ್ |
    ಫಲಮಂ ನೀ ಕೈಗಿಟ್ಟುಂ
    ಬಲು ಚತುರತೆಯಿಂದಪೋಪ ಬಯಕೆಯ ತಿಳಿದುಂ ||

    [“ನನ್ನ ಕೈಯ್ಯಲ್ಲಿ ಹಣ್ಣು ನೀಡಿ ನೀ ಹೋಗಬಹುದೆಂದು ತಿಳಿದು, ಎಡಗೈಯ್ಯಲ್ಲಿ ಮಧುರವಾದ ಹಣ್ಣನ್ನು (ತಾಯ ಮುಖವನ್ನು) ಹಿಡಿದಿರುವೆ” – ಎಂದು ಕಂದ ಹೇಳಿದಂತೆ]

    ೩.
    ಕನ್ನಡ ತಾಯ್ಮಡಿಲೊಳಗಂ
    ಮನ್ನಣೆಯಿಂ ಮೆರೆವ ಕಂದರುಗಳಾ ತೆರದೀ
    ನಿನ್ನಾನಂದ ಮಿಗಿಲಿಸಲ್
    ರನ್ನಂ ಅವತರಿಸಲಂಕರಿಸಿ ಶೋಭಿಸಿಹನ್ ||

  21. ತಡವಾಯ್ತಿದನೋಡಲ್ ನಾಂ | ಬಿಡುವಾಗಿರದಿರ್ದರಿಂ
    ಕಡುಚೆಂದಂ ಕಲ್ಪನೆಗಳ್ | ಮಡುಗಟ್ಟಿವೆ ಚಿತ್ರದಿಂ

    ಭರತನುದಯದಿ ಶಕುಂತಲೆ ದುಗುಡ ಕಳೆಯಳೇಂ
    ಮುರಳೀಧರಂ ತಾಯ ಸೆರೆಯ ತೊಡೆದು
    ತರು ಪಣ್ಣ ತಳೆಯೆ ಧನ್ಯತೆಯುಭಯರಿಂಗೆ, ’ತಾಯ್
    ಮರೆ ನೋವನ್’ ಎನುವ, ಮಗು ಮೊಗವಪಿಡಿದು

  22. ಕಾಂಚನ ಅವರ ಕಲ್ಪನೆ ಸೊಗಸಾಗಿದೆ. ಆದರೆ ಮೊದಲ ಕಂದದ ಎರಡನೆಯ ಪಾದದಲ್ಲಿ ಸ್ವಲ್ಪ ಛಂದೋದೋಷವಾಗಿದೆ, ಎರಡನೆಯ ಕಂದದಲ್ಲಿ ಕೆಲಮಟ್ಟಿಗೆ ಹಳಗನ್ನಡದ ಹದ ತಪ್ಪಿದೆ. ಈ ಸಮಸ್ಯೆ ಅನೇಕರದು. ಸ್ವಲ್ಪ ಎಲ್ಲರೂ ಕನ್ನಡಕೈಪಿಡಿ ಹಾಗೂ ಪ್ರಾಚೀನಕಾವ್ಯಗಳನ್ನು ತಿರುವಿಹಾಕಿರಿ:-)
    ಸೋಮ ಅವರ ಪದ್ಯಗಳಲ್ಲಿ ನುಡಿಯ ಹದ ಹಾಗೂ ಬಂಧದ ಹದ ಸೊಗಸಾಗಿ ಪಳಗುತ್ತಿವೆ.
    ಚಂದ್ರಮೌಳಿಯವರ ಪದ್ಯದ ಬಂಧ ಮತ್ತು ಭಾಷೆಗಳು ಚೆನ್ನಾಗಿವೆ. ಕಲ್ಪನೆಯೂ ಚೆಲುವಾಗಿದೆ.
    ಶ್ರೀಶರ ಪದ್ಯದಲ್ಲಿ ಕಲ್ಪನೆ ಮತ್ತು ಸರಳತೆ ಒಪ್ಪುವಂತಿವೆ.

  23. ಸಮಸ್ಯಾಸಾಲನ್ನು ಕೊಡದೆ, ಚಿತ್ರ ಕೊಟ್ಟುದರಿಂದ, ಹಲವು ವಿಧದ ಛಂದೋಪ್ರಕಾರಗಳಿಗೆ ಅವಕಾಶವಾದಂತಾಯಿತು.

    • Thanks for the beautiful observation.
      Many use the word chaMdOprakAra. But it should be chaMdaHprakAra as the rules of saMdhi dictate so.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)