Nov 252011
 

ಕನ್ನಡ ಕಾವ್ಯದ ಮುಖ್ಯ ಪ್ರಕಾರಗಳಲ್ಲೊಂದಾದ ವಚನಗಳ ಶೈಲಿಯಲ್ಲಿ ಈ ಎರಡು ಬರಹ.

ಹಿನ್ನೆಲೆ:  ಇತ್ತೀಚಿಗೆ ಕೇಳಿಬರುತ್ತಿರುವ “ಕನ್ನಡ ಶುದ್ಧೀಕರಣ”ದ ಕೂಗು, ಅದರ ಹಿಂದಿರುವ ಭಾಷೇತರ ದುರುದ್ದೇಶಗಳಿಂದ ನುಡಿಯ ನಿಜದ ಸೊಗಸು ಕೆಡುವುದೆಂಬ ಕಳಕಳಿ.

(೧)
ಕಾಗೆ ಕರುಬಿ ಮಾವಿನ ಚಿಗುರುಂಡೊಡೆ
ಬಾಯಿ ಕಹಿಗೊಂಡಿತ್ತಲ್ಲದೆ
ಕೋಗಿಲೆಯ ಸೊಲ್ಲು ದೊರಕೊಂಡಿತೇ
ಕಾಡ ಮಂಗ ಸಿರಿಗಂಧದ ಮರಕೆ ಜೋತೊಡದರ ನಡೆ ಸಿರಿಗೊಂಡಿತೇ?
ಭಾವದ ಮಿಂಚೊಡೆದ ಬೆಡಗಿಂಗೆ ಮೈಯಿಕ್ಕದೆ ಮನವೀಯದೆ
ಬರಿದೇ ನುಡಿನುಡಿಯೆಂದುರೆ ಬೊಬ್ಬೆ ಹೊಯ್ದೊಡೆ
ಆ ಬೊಬ್ಬೆ ನುಡಿಯೇ? ಹೊಯ್ದವ ನುಡಿಗನೇ? ನುಡಿ ಕನ್ನುಡಿಯೇ?
ನುಡಿಯೊಳನುಡಿತವ ಕೇಳದೆ ಮಿಡಿತವನರಿಯದೆ
ನಾನೀನೆಂದು ಗಳಹುವ ಬಾಯಿಬಡುಕರನೇನೆಂಬೆನಯ್ಯಾ
ದಮ್ಮಪುರದ ಮಂಜಯ್ಯಾ ನಿಮ್ಮ ನುಡಿಯೆಮಗೆ ಶರಣು.

(೨)
ಈ ನುಡಿ ಕನ್ನುಡಿಯೆಂಬರು
ಮತ್ತಾನುಡಿ ಪರನುಡಿಯೆಂಬರು,
ತೊದಲುವ ಕಂದನ ನುಡಿಯಾವುದಯ್ಯಾ
ಬಿರಿವೂವಿನ, ಚೆಲುನಗುವಿನ, ಎದೆಯೊಲವಿನ ನುಡಿಯಾವುದಯ್ಯಾ
ನುಡಿವುಟ್ಟುವ, ಹೊಮ್ಮುವ, ನೆಗೆಯುವ, ಚಿಮ್ಮುವ ಜೀವದ ನಡೆಯರಿಯದೆ,
ಪೆಣಕೆ ದಾರವನಿಕ್ಕಿ ಜಾತಿಯ ಹೊಲಸುಂಬರಯ್ಯಾ
ಅಯ್ಯಾ ನಿಮ್ಮ ಕರುಣೆಯದಾವ ನುಡಿ
ಕಡುಮೌನವದಾವ ನುಡಿ ಪೇಳಾ ದಮ್ಮಪುರದ ಮಂಜಯ್ಯಾ

  11 Responses to “ವಚನಗಳು – ಒಂದು ಪ್ರಯತ್ನ”

  1. ಮನ್ಜುನಾಥರೆ,
    ವಚನಗಳಲ್ಲಿ “ಕಡುಮೌನವದಾವ ನುಡಿ” ಎಂಬುದು ಬಹಳ ಚೆನ್ನಾಗಿದೆ.
    ನುಡಿಯ ವಿಷಯದಲ್ಲಿ ದುರಭಿಮಾನಿಗಳನ್ನು ಅವರ ವಾದವನ್ನು ಕಂಡಾಗ ಪ್ರಸಿಧ್ಧವಾದ ಸಾಲು ‘ಮನದ ಭಾವ ಹೊಮ್ಮುವುದಕೆ ಭಾಷೆ ವರಟು ಯಾನ’ ಎಂಬುದು ನೆನೆಪು ಬರುತ್ತದೆ. ಕಡೆಯ ಪಕ್ಷ ತಮ್ಮ ಭಾಷೆಯಬಗ್ಗೆ ತಮಗೇಕೆ ಅಭಿಮಾನವಿರಬೇಕೆಂದನ್ನು ಗ್ರಹಿಸುವುದಕ್ಕೆ ಆ ಭಾಷೆಯ ಸಾಹಿತ್ಯವನ್ನು ಓದಿ ಮತ್ತು ಕ್ರಮಭಾದ್ಧವಾಗಿ ಉತ್ತಮ ಸಾಹಿತ್ಯವನ್ನು ರಚಿಸುವುದರ ಕಡೆಗೆ ಹೆಜ್ಜೆ ಹಾಕಿದರೆ ಒಳಿತು, ಇದು ಇಲ್ಲದ ಅಭಿಮಾನದ ಬುನಾದಿಯೇ ತಿಳಿಯುವುದಿಲ್ಲ!

  2. ಮಂಜುನಾಥರೆ,
    ಎಂದಿನಂತೆ, ನಿಮ್ಮ ಕಲ್ಪನೆಗಳು ಉಪಮೆಗಳು ತುಂಬಾ ಚೆನ್ನಾಗಿವೆ. ಇದಕ್ಕೆ ಛಂದಸ್ಸಿನ ಹೊದಿಕೆಯೊಂದಿದ್ದರೆ, ಇನ್ನಷ್ಟು ಚೆನ್ನಗಾಗುತಿತ್ತಾ ಏನೋ ಎಂಬಾಸೆ.

    • ರವೀಂದ್ರರೇ ಧನ್ಯವಾದ. ನಿಮ್ಮ ಅನಿಸಿಕೆ ಸರಿ, ಆದರೆ ಈ ಬರಹದ ಪ್ರಕಾರವೇ ವಚನ ಪ್ರಕಾರ. ಇದಕ್ಕೆ ಛಂದಸ್ಸಿನ ಕಟ್ಟಿಲ್ಲ, ಭಾವದ ಉಜ್ವಲತೆಯೇ ಪ್ರಧಾನ. ಅದು ತುಸುವಾದರೂ ಬಂದಿದ್ದರೆ ನಾನು ಧನ್ಯ.

  3. ಮಂಜುನಾಥರು ಕಳಪೆಯ ಕೆಲಸದವರಲ್ಲ. ಹೀಗಾಗಿ ಅವರು ವಚನರಚನೆಯಲ್ಲಿಯೂ ರಸಮಯವಾಗಿದ್ದಾರೆ. ಆದರೆ ಹೊಳ್ಳರ ಕಳಕಳಿ ಯುಕ್ತವೇ. ಏಕೆಂದರೆ ವಚನದ ಅನಿಯತಬಂಧವು ಅತಿಸುಲಭವೆಂದು ಭಾವಿಸಿ ಈಗಷ್ಟೇ ಛಂದಸ್ಸಿನ ವಲಕ್ಕೆ ಬರುತ್ತಿರುವ ಗೆಳೆಯರೆಲ್ಲ ಪಕ್ಷಾಂತರ ಮಾಡಿದರೆ ಗತಿಯೆನೆಂದು ನನ್ನ ಭೀತಿ:-).

    ವಸ್ತುತಃ ಗದ್ಯವಾಗಲಿ ಪದ್ಯವಾಗಲಿ ಅದು ರಸಮಯವಾಗಿದ್ದಾಗ, ವಕ್ರೋಕ್ತಿಮಯವಾಗಿದ್ದಾಗ ಕಾವ್ಯವೇ. ಒಳ್ಳೆಯ ಕಾವ್ಯವನ್ನು ಗದ್ಯದಲ್ಲಾಗಲಿ, ಪದ್ಯದಲ್ಲಾಗಲಿ ಬರೆಯುವುದು ಕಷ್ಟದ ಕೆಲಸ. ಆದರೆ ಸದ್ಯದ ಪದ್ಯಪಾನದ ಚೌಕಟ್ಟಿಗೆ ಪದ್ಯವನ್ನಷ್ಟೇ ಗಮನಿಸಲಾಗಿದೆ. ವಚನವು ವಸ್ತುತಃ ಬರಿಯ ಗದ್ಯವೂ ಅಲ್ಲ. ಅದು ಒಂದು ರೀತಿಯಲ್ಲಿ ಪದ್ಯಗಂಧಿಯಾದ ಬರೆಹ. ಹೀಗಾಗಿಯೆ ಪ್ರೊ. ಅ.ರಾ. ಮಿತ್ರ ಅವರು ತಮ್ಮ ಛಂದೋಮಿತ್ರದಲ್ಲಿ ವಚನವನ್ನು ಕೂಡ ಒಂದು ಮಾದರಿಯಾಗಿ ಗಣಿಸಿದ್ದಾರೆ. ಇದರ ಸಾಧುತ್ವ-ಅಸಾಧುತ್ವಗಳನ್ನು ಪ್ರತ್ಯೇಕವಾಗಿ ಚರ್ಚಿಸಬಹುದು:-) ಆದರೆ ಪದ್ಯಪಾನಕ್ಕೆ ವಚನವನ್ನಾಗಲಿ ನವೀನಚ್ಛಂದಸ್ಸುಗಳ ಬಂಧಗಳನ್ನಾಗಲಿ ದೂರದ ಬಂಧುಗಳಾಗಿ ಗಣಿಸಿ ಯಾವುದಾದರೊಂದು ವಿರಳಸಂದರ್ಭಗಳಲ್ಲಿ (ಮದುವೆ-ಮುಂಜಿಗಳ ಹಾಗೆ!) ಬರಮಾಡಿಕೊಳ್ಳೋಣ. ಸದ್ಯದ ವಚನಗಳ ಭಾಷೆ-ಭಾವಗಳು ತುಂಬ ಚೆನ್ನಾಗಿವೆಯೆಂದು ಸ್ವಾಗತಿಸೋಣ.

    • ಗಣೇಶರೇ, ಆರಂಭದಲ್ಲೇ “ಪದ್ಯಪಾನ”ದ ಎಲ್ಲೆ-ಗಡಿಗಳನ್ನು ಗುರುತಿಸಿಟ್ಟಿದ್ದಕ್ಕೆ ಧನ್ಯವಾದ. ಮೊದಲನೆಯದಾಗಿ ಇದು ಬೇರೊಂದು ಸಂದರ್ಭದಲ್ಲಿ ಬಂದ ಕವನ, ಆದ್ದರಿಂದ ಆ ಸಂದರ್ಭಕ್ಕೆ ತಕ್ಕಂಥ ರೂಪವನ್ನು ಧರಿಸಿದೆ. ಮತ್ತೆ ಈ ತಾಣದಲ್ಲಿ ನಾವು ಬರೀ ಛಂದೋಬದ್ಧ ರಚನೆಗಳನ್ನೇ ನೋಡುತ್ತಿದ್ದರೂ “ಪದ್ಯ-ಪಾನ”ದ ಆಶಯದಲ್ಲಿ ಅಂಥಾ ನಿರ್ದಿಷ್ಟತೆಯೇನೂ ಕಾಣದಿದ್ದುದರಿಂದ ಈ ವಚನಗಳನ್ನಿಲ್ಲಿ ಹಂಚಿಕೊಳ್ಳುವ ಕುತೂಹಲಕ್ಕಾಗಿ ಹಾಕಿದೆ. ಕಾವ್ಯವಿರುವುದು ದ್ರವ್ಯದಲ್ಲಿ, ರೂಪದಲ್ಲಲ್ಲ ಎಂಬುದು ನನ್ನ ನಿಲುವು (ಅದನ್ನು ತಾವೇ ಮೇಲೆ ಹೇಳಿದಿರಿ). ಅದನ್ನು ಮತ್ತೆ ಮತ್ತೆ ಧೃಡಪಡಿಸಿಕೊಳ್ಳುವುದಕ್ಕಾಗಿ ಅದನ್ನು ವಿವಿಧ ರೂಪದಲ್ಲಿ ಕಂಡರಿಸಲು ಯತ್ನಿಸುತ್ತಿರುತ್ತೇನೆ. ಈ ವಚನಗಳು ಅಂಥಾ ಒಂದು ಪ್ರಯತ್ನ.

      ವಚನದ ಅನಿಯತಬಂಧವು ಅತಿಸುಲಭವೆಂದು ಭಾವಿಸಿ ಈಗಷ್ಟೇ ಛಂದಸ್ಸಿನ ವಲಕ್ಕೆ ಬರುತ್ತಿರುವ ಗೆಳೆಯರೆಲ್ಲ ಪಕ್ಷಾಂತರ ಮಾಡಿದರೆ ಗತಿಯೇನೆಂಬ ನಿಮ್ಮ ಕಳಕಳಿ ಪದ್ಯಪಾನದ ಸಂದರ್ಭದಲ್ಲಿ ಸಾಧುವೇ. ಇಲ್ಲಿ ವಿವಿಧ ವಿಷಯಗಳ ಬಗ್ಗೆ ಗೆಳೆಯರು ಎಷ್ಟು ಸೊಗಸಾಗಿ ವಿವಿಧ ಛಂದಸ್ಸುಗಳಲ್ಲಿ ರಚಿಸುತ್ತಿದ್ದಾರೆ, ಅದು ದಾರಿ ತಪ್ಪಬಾರದು, ನಿಜ.

      ನೀವು ಹೇಳಿದಂತೆ ಇಂಥ ಹೊಸ ಪ್ರಯತ್ನಗಳನ್ನು ಆಗೀಗ, ವಿಶೇಷ ಸಂದರ್ಭಗಳಲ್ಲಿ ಸ್ವಾಗತಿಸೋಣ.

      • ಹೃದಯದಿಂಗಿತವನ್ನರಿಯುತ್ತುಮಾ
        ಹದವನೆಂದಿಗಮೊಲ್ಮೆಯ ಭಾವದಿಂ-
        ದೊದವಿಸಿರ್ಪ ಭವದ್ರಸಮೈತ್ರಿಯೇ
        ಹದುಳವಂ ಮನಕೀವುದು ಸರ್ವದಾ||

        ಪದ್ಯಪಾನಗೃಹಕನ್ನಪಾನಮಂ
        ಹೃದ್ಯಮಾಗಿ ತರುತಿರ್ಪ ಮಿತ್ರರೇ|
        ಪದ್ಯಪಾನಕುಪವಾಸಮೊಡ್ದಲೇಂ
        ಚೋದ್ಯಮೆನ್ನುತಿರೆ ಚಿತ್ತಮೆನ್ನದೀ|
        ಖಿದ್ಯಮಾನಗತಿಯಂ ನಿವಾರಿಸಿರ್-
        ಪಾದ್ಯಮಪ್ಪ ಭವದೀಯವರ್ತನಂ|
        ವಿದ್ಯೆಗಾದುದುದು ವಿನಮ್ರಭಾವಸಂ-
        ವೇದ್ಯಸೌಖ್ಯಮೆನುತಾನೆ ಹರ್ಷಿಪೆಂ||

  4. ಮಂಜುನಾಥರೆ – ನಿಮ್ಮ ವಚನಗಳಲ್ಲಿ ಭಾವ ಉಜ್ಜ್ವಲವಾಗಿಯೆ ಇದೆ. ರಾಜ್ಯೊತ್ಸವದ ತಿಂಗಳಿನಲ್ಲಿ ಬಹಳ ಔಚಿತ್ಯಪೂರ್ಣವೂ ಆಗಿದೆ.

  5. ಮಂಜುನಾಥರ ಪ್ರಯತ್ನ ಬಹಳ ಸಮಯೋಚಿತವಾಗಿದೆ, (ನಿಮ್ಮ ಅಂಕಿತ ನಾಮ “ಮಂಜಯ್ಯ” ಸಹ).

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)