Mar 112012
 

“ಶಕುನಿ”, “ಕರ್ಣ”, “ಸುಯೋಧನ”, “ದುಶ್ಯಾಸನ” – ಈ ಶಬ್ದಗಳನ್ನುಪಯೋಗಿಸಿ, ರಾಮಯಣದ ಮೂಲವಾದ ಕ್ರೌಂಚ ಪ್ರಸಂಗಕ್ಕೆ ಹೊಂದುವಂತೆ ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯಗಳನ್ನು ರಚಿಸಿರಿ.

 

  45 Responses to “ಪದ್ಯಸಪ್ತಾಹ – ೧೧ – ದತ್ತಪದಿ”

  1. ಹತ್ಯೆಗೈಯಲು ಬೇಡ ಶಕುನಿಗಳಲೊಂದನಂ
    ಮೃತ್ಯು ರೋಧನವು ಕರ್ಣಕೆ ಬೀಳಲು
    ಕೃತ್ಯೆ ತಾ೦ ಸೆಳೆವಾ ಸುಯೋಧನನ ಮಡದಿಯಂ,
    ಸ್ಥುತ್ಯಳ೦ ದುಶ್ಶಾಸನ ಮೊಳೆಯಿತೈ

    ಶಕುನಿ: ಹಕ್ಕಿ
    ಸುಯೋಧನ: ರಾಮ
    ದುಶ್ಶಾಸನ: ರಾವಣ

    • ಹತ್ಯೆಗೈಯಲು ಬೇಡ ಶಕುನಿಗಳಲೊಂದನಂ
      ಮೃತ್ಯು ರೋಧನವು ಕರ್ಣಕೆ ಬೀಳಲು
      ಕೃತ್ಯೆ ತಾ೦ ಸೆಳೆವಾ ಸುಯೋಧನನ ಮಡದಿಯಂ,
      ಸ್ಥುತ್ಯಳ೦ ದುಶ್ಶಾಸನನ ಮೊಳೆಯಿತೈ

      • ಆಹಾ! ಸೋಮನ ಪದ್ಯಸ-
        ಮೀಹಾವೇಗಂ ಗಡೆಂತು ಮನದಿಂ ಮಿಗಿಲಯ್!!
        ಮೋಹಕದತ್ತಪದೀವಧು-
        ವೋಹೋ! ವರಿಸಿರ್ಪಳಲ್ತೆ ಜಯಮಾಲೆಯೊಡಂ!!!

        ಒಂದೆರಡು ಅಕ್ಕರಿಕೆಯ ತಪ್ಪುಗಳು (spelling mistakes):
        ರೋದನ, ಸ್ತುತ್ಯ.
        ನಿಮ್ಮ ಪದ್ಯದ ಕಡೆಯ ಸಾಲು ನನಗೆ ಅರ್ಥವಾಗಲಿಲ್ಲ!

        • ಧನ್ಯವಾದಗಳು ಸರ್,
          spelling mistake mattu ಅರ್ಥವನ್ನು ಸ್ವಲ್ಪ ಸರಿಪಡಿಸಿದ್ದೇನೆ

          ಹತ್ಯೆಗೈಯಲು ಬೇಡ ಶಕುನಿಗಳಲೊಂದನಂ
          ಮೃತ್ಯು ರೋದನವು ಕರ್ಣಕೆ ಬೀಳಲು
          ಪ್ರತ್ಯರ್ಥಿದುಶ್ಶಾಸನನು ಸುಯೋಧನಗೆಸೆದ
          ಕೃತ್ಯವಾ ಮುನಿದೃಷ್ಟಿಯೊಳ್ ಮೊಳೆಯಿತೈ

          ಇಲ್ಲಿ ಎಸೆದ ಎ೦ದು ಪ್ರಯೋಗ ಮಾಡಬಹುದೆ? ಎಸಗಿದ ಎ೦ದು ಮಾಡೋಣವೆ೦ದರೆ, ಒ೦ದಕ್ಷರ ಹೆಚ್ಚುತ್ತಿದೆ:(

          • ಇದೀಗ ಪದ್ಯ ಮತ್ತೂ ಚೆನ್ನಾಗಿದೆ. ಆದರೆ ಎಂದೂ ಎಸಗಿದ ಎಸೆದ ಎಂದಾಗದು:-) ಇದನ್ನು ವ್ಯಾಕರಣವೊಪ್ಪದು. ಸುಯೋಧನ ಮತ್ತು ದುಶ್ಶಾಸನ ಪದಗಳು ರಾಮ-ರಾವಣರಿಗೆ ವಿಶೇಷಣಗಳಲ್ಲದೆ ಅಂಕಿತನಾಮಗಳಲ್ಲ. ಹೀಗಾಗಿ ಅವು ನಾಮಪದಗಳ ಜೊತೆಗೇ ಬಂದಲ್ಲಿ ಅರ್ಥಸ್ಪಷ್ಟತೆ ದಕ್ಕುತ್ತದೆ. ಇಷ್ಟೆಲ್ಲ ಮಾಡಲು ಈ ಛಂದಸ್ಸು ಸಾಲದು, ಇಕ್ಕಟ್ಟು:-) ಮತ್ತೆ ಯತ್ನಿಸಿರಿ:-)

          • ಗಣೇಶ್ ಸರ್,
            ಇನ್ನೊ೦ದು ಬಾರಿ ಪ್ರಯತ್ನ ಮಾಡಿದ್ದೇನೆ ಪರಿಶೀಲಿಸಿ:)

            ದಿನಪಾ೦ಶರ್ಗಳ ಚಾರುವೃತ್ತಕಥನ೦ ಕರ್ಣಾ೦ಮೃತ೦ ತಾ೦ ಸುಯೋ-
            ಧನ
            ರಾಮಾವೃತನಾಗಲಾ ಶಕುನಿಯೊಲ್ ಸ೦ಗಾತಿ ಶೋಕಾವಹ೦
            ಘನದುಶ್ಶಾಸನ ರಾವಣಾ೦ತ್ಯ ಪೊಳೆಯಲ್ ರಾಮಾಯಣಾಖ್ಯಾ೦ಕುರ೦
            ಮುನಿವರ್ಯ೦ ಕಡುಗೋಪದಿ೦ದ ಶಪಿಸಲ್ ಶ್ಲೋಕೋದ್ಭವ೦ ಪೊ೦ದಿತೈ

          • ಅನ್ವಯಕ್ಲೇಶ ವಿಸ೦ಧಿ ದೋಷಗಳಿವೆಯೆನೋ ತಿಳಿಸಿಕೊಡಬೇಕು

  2. ಜಕ್ಕವಕ್ಕಿಯ ಜೋಡಿಯಂತಿರೆ
    ಮಿಕ್ಕದಟಿನಸುಯೋಧನನತರಿ
    ದಿಕ್ಕಿ ಮೋಸದಿನುತ್ತರೆಯನೊಬ್ಬಂಟಿ ಮಾಡುತಲಿ
    ಉಕ್ಕೆ ಶೋಕವು ಶಕುನಿ ಕರ್ಣರ
    ಪಕ್ಕದಾದುಶ್ಶಾಸನನ ಸರಿ
    ತಕ್ಕ ಪರಿಯಲಿ ಶಪಿಸಿ ಪಾಡುವ ಕವಿಯ ನಾಕಾಣೆ

    • ಸಣ್ಣ ಸವರಣೆಯೊಂದಿಗೆ

      ಜಕ್ಕವಕ್ಕಿಯ ಜೋಡಿಯಂತಿರೆ
      ಮಿಕ್ಕದಟಿನಸುಯೋಧನನತರಿ
      ದಿಕ್ಕಿ ಮೋಸದಿನುತ್ತರೆಯನೊಬ್ಬಂಟಿ ಮಾಡಿರಲು
      ಉಕ್ಕೆ ಶೋಕವು ಶಕುನಿ ಕರ್ಣರ
      ಪಕ್ಕದಾದುಶ್ಶಾಸನನ ಸರಿ
      ತಕ್ಕ ಪರಿಯಲಿ ಶಪಿಸಿ ಪಾಡುವ ಕವಿಯ ನಾಕಾಣೆ

      • ನಿಮ್ಮ ರಚನೆ ಅರ್ಥವಾಗಲಿಲ್ಲ:-) ಅಲ್ಲದೆ ಈ ದತ್ತಪದಿಯ ವಸ್ತುವಾದ ಕ್ರೌಂಚಪ್ರಸಂಗವಿಲ್ಲಿ ಬಂದಂತಿಲ್ಲ.

        • ಅಭಿಮನ್ಯುವಿನ ವಧೆಯನ್ನು ಕ್ರೌಂಚವಧೆಗ ಹೋಲಿಸಿದ್ದೇನೆ: ಇಲ್ಲಿ ಈಗಷ್ಟೇ ಸಂಸಾರಕ್ಕೆ ಕಾಲಿಟ್ಟಿರುವ, ಚಕ್ರವಾಕಮಿಥುನಕ್ಕೆ ಹೋಲಿಸಬಹುದಾದಂತಹ, ಅಭಿಮನ್ಯು-ಉತ್ತರೆಯರು, ಅಲ್ಲಿ ಕ್ರೌಂಚ ಮಿಥುನ, ಒಟ್ಟಿನಲ್ಲಿ a couple very much in love. ಅತ್ತ ಬೇಡರವನು, ಇತ್ತ ಹುಡುಗನನ್ನು ಸುತ್ತುಗಟ್ಟಿ ಕೊಂದವರೂ, ಜೊತೆಗೆ ಈ ಯುದ್ಧಕ್ಕೆ ಕಾರಣರಾದವರು. ಇಲ್ಲಿಯೂ ವಿರಹವೂ ತಜ್ಜನಿತ ಶೋಕವೂ. ವ್ಯತ್ಯಾಸ ಇಷ್ಟೇ – ಅಲ್ಲಿ ಶೋಕದಿಂದ ಶ್ಲೋಕವನ್ನು ಪಡೆದು ರಾಮಾಯಣವನ್ನು ಹಾಡಿದ ವಾಲ್ಮೀಕಿ ಇದ್ದ, ಇಲ್ಲಿಲ್ಲ.

          ಉತ್ತರೆಯು ಬದುಕುಳಿದು ಚಕ್ರವಾಕದ ಉಪಮೆಯನ್ನು ಸುಳ್ಳು ಮಾಡಿದ್ದರೆ ಅದು ಪರೀಕ್ಷಿತ್ ಹಾಗೂ ಕೃಷ್ಣರ ಪ್ರಭಾವದಿಂದಲೆ ಹೊರತಾಗಿ ತಾನಾಗಿ ಅಲ್ಲ!

          (ಇಷ್ಟೆಲ್ಲ ವಿವರಣೆ ಕೊಡಬೇಕಾಗಿ ಬಂದರೆ ಪದ್ಯ ಸೋತಂತೆಯೇ ಅಲ್ಲವೆ? 🙂

        • ಸಾಲದ್ದಕ್ಕೆ ವಿಭಕ್ತಿಪ್ರತ್ಯಯಗಳನ್ನೂ ಅಲ್ಲಲ್ಲಿ ನುಂಗಿದ್ದೇನೆ! ನಾನು ಮಾಡಿದ್ದು Act in haste, repent at leisure ಎಂದಂತಾಯಿತು.

      • ವೆಂಕಟೇಶ,
        ನಿನ್ನ ಪದ್ಯ ಚೆನ್ನಾಗಿದೆ. ನಿನ್ನ ಅಮ್ಮ ನಮ್ಮ ಮನೆಗೆ ಬಂದು ಭಾರತ ಹೇಳಿಸಿಕೊಳ್ಳುತ್ತಿದ್ದ ದಿನಗಳು ನೆನಪಿಗೆ ಬಂದವು.

  3. ಪರಿವರ್ಧಿನೀ ಷಟ್ಪದಿಯಲ್ಲಿ ಒಂದು ಪ್ರಯತ್ನ :

    ಮನವಂ ಹಿಂಡುವ ಶಕುನಿಯ ಅಳುವದು
    ಕಾನನವ ಭೇದಿಸೀಕರ್ಣ ಸೇರಿ
    ಕನಲಿಸಿತು ಸುಯೋಧನನೇ ಶ್ರೀರಾಮ ಕೇಳೆನುತಲೀ |
    ಹನನವು ತರವೇ ತೊರೆಯುತ ದುಶ್ಯಾ-
    ಸನವನು ರಾಜ್ಯದಿ ಘನತರದ ಕಾರ್ಯ
    ವನು ನಡೆಸುವೋಲ್ ತೆರಳಿನ್ನು ಮುಂದಕ್ಕೆ ಸಾಗೆನುತಲೀ ||

    • ಭಟ್ಟರೇ! ಕೆಲವೆಡೆ ಛಂದಸ್ಸು, ಮತ್ತೊಂದೆಡೆ ಪ್ರಾಸ ಮತ್ತುಳಿದಂತೆ ಅರ್ಥದ ತಿಳಿತನಗಳೆಲ್ಲ ಇಲ್ಲಿ ಜಖಂ ಆಗಿವೆಯಲ್ಲಾ!! ತುಸು ಸವರಿಸಿರಿ. ಆಗ ದಿಟವಾಗಿ ನಿಮ್ಮ ಕವಿತೆ ಪರಿವರ್ಧಿನಿಯಾಗುತ್ತದೆ 🙂

  4. ಕಾಮಪರವಶಕು ನಿಜಧರ್ಮಭಾಗವದುಂಟು
    ಪ್ರೇಮದಾರ್ತಧ್ವನಿಗೆ ಕರ್ಣಬಧಿರತೆಯೇ
    ತಾಮಸದುಣಿಸು ಯೋಧನೊ ವ್ಯಾಧನೋ ಬಿಡದು
    ನೇಮವೀಶಾಪ ದುಶ್ಶಾಸನ-ನಿಷಾದ

    • ಅದ್ಬುತವಾಗಿದೆ! ಚಂದ್ರಮೌಳಿ,

      ಮರಳು ಪೇರಿಸುವವನಿಗೆ ಹಿಮಾಲಯದ ದರ್ಶನವಾಯಿತು. ಧನ್ಯೋಸ್ಮಿ

  5. ಜಿ.ವೆಂ : ಮೆಚ್ಚುಗೆಗೆ ನಮನ. ಅಂಥ ವಿಶೇಷವೇನಿಲ್ಲ. ಪದವನ್ನೊಡೆದು ವ್ಯಕ್ತಿನಾಮಸೂಚಿಯನ್ನು ತೆಗೆದು, ಸೂಚಿಸಿದ ಸಂದರ್ಭಕ್ಕೆ ಹೊಂದಿಸುವ ಈ ಕ್ಷಣದ ಯತ್ನವಷ್ಟೆ. ಇನ್ನೂ ಕೊಂಚ ಯೋಚಿಸದರೆ ಮತ್ತೂ ಒಳ್ಳೆಯ ಪದ್ಯವನ್ನು ಮತ್ತೇಭದಲ್ಲೋ ಸ್ರಗ್ಧರೆಯಲ್ಲೋ, ಹಲವುವಿಧವಾಗಿ ಬರೆಯಬಹುದು. ನಮ್ಮ ಇಲ್ಲಿನ ಅನೇಕ ಸ್ನೇಹಿತರು ಅದಕ್ಕೆ ಸಮರ್ಥರು ಮತ್ತು ಅಧಿಕ ಶಕ್ತರು.

    • > ಪದವನ್ನೊಡೆದು ವ್ಯಕ್ತಿನಾಮಸೂಚಿಯನ್ನು ತೆಗೆದು, … ಹಲವುವಿಧವಾಗಿ ಬರೆಯಬಹುದು.

      ನೀವು ಸಲೀಸಾಗಿ ಹೇಳಿಬಿಡುತ್ತೀರಿ ಆದರೆ ನಾನು ಎರಡು ದಿನಗಳಿಂದ ಸುಯೋಧನನಿಗಾಗಿ ಕಾಯುತ್ತಿದ್ದೇನೆ – ಇನ್ನೂ ಬಂದಿಲ್ಲ.

  6. ಮೊದಲ ಪ್ರಯತ್ನ; ಬಾಲಿಶವಾಗಿದ್ದರೆ ಕ್ಷಮೆಯಿರಲಿ! 🙁

    ಕಾಡಿನೊಳಗಿನ ಮರದ ಗೆಲ್ಲಿನ
    ಗೂಡಿನೊಳಗೆಳೆ ಶಕುನಿಹಕ್ಕಿಗ-
    ಳಾಡಿ ಚಿಲಿಪಿಲಿ ಸದ್ದು ಮಾಡುತ ಕರ್ಣದಾನಂದ |
    ಬೇಡನೊಬ್ಬ ಸು-ಯೋಧನಂದದಿ
    ಹೂಡಿದನು ಶರವನ್ನೆ ಹಕ್ಕಿಗೆ
    ಕಂಡು ಋಷಿಗಳು ಶಾಪನೀಡಿದರು ದುಃ-ಶಾಸನಗೆ ||

    ಅಡಿಟಿಪ್ಪಣಿ:
    – ಶಕುನದ ಹಕ್ಕಿಗಳು – ಶಕುನಿಗಳು!
    – ಕರ್ಣಕೆ ಆನಂದ (ಅರಿ?)
    – ಯೋಧನ ರೀತಿಯಲ್ಲಿ
    – ದುಃ ಶಾಸನ – ಕೆಟ್ಟ ಶಾಸನ

  7. ಒಪ್ಪಣ್ಣ ಅವರೇ,

    ಮೊದಲ ಭಾಮಿನಿ ಪದ್ಯದೊಳ್ಗು೦
    ಹದವು, ಬ೦ಧವದಿರ್ಪುದೈ ಮೇಣ್
    ಪದಗಳನುದತ್ತಪದಿ ನಿಯಮಕೆ ತ೦ದಿಹುದು ಸೊಗಸೈ

    ಪದ್ಯಪಾನಕ್ಕೆ ಸ್ವಾಗತ:)
    ಭಾಮಿನಿಯಲ್ಲಿ ಬರೆಯುವ ಮೊದಲನೆಪ್ರಯತ್ನವಾಗಿದ್ದರೆ, ದತ್ತಪದಿಯನ್ನೂ ಅದಕ್ಕೆ ಅಳವಡಿಸುವುದು ಬಹಳ ಕಷ್ಥವಾಗುತ್ತದೆ. ನಿಮ್ಮ ಪ್ರಯತ್ನ ಬಹಳ ಚೆನ್ನಾಗಿದೆ. ಓದೆರಡು ಅ೦ಶಗಳನ್ನು ಸವರಿಸಿದರೆ ಪದ್ಯ ಮತ್ತು ಸೊಗಸಾಗುವುದು:

    “ಕಂಡು ಋಷಿಗಳು ಶಾಪನೀಡಿದರು ದುಃ-ಶಾಸನಗೆ” ಎ೦ಬಲ್ಲಿ ಜಗಣ ಬ೦ದಿದೆ ‘ರುದುಃಶಾ’. ಇದನ್ನು ಸವರಿಸಬಹುದು
    ಉದಾ: ಕ೦ಡಋಷಿಗಳ್ ಶಾಪಮ೦ ದುಃಶಾಸನ೦ಗಿತ್ತರ್
    ಮೇಲಿನ ಉದಾಹರಣೆಯ೦ತೆ ಪದ್ಯದ ಹೊಸಗನ್ನಡಶೈಲಿಯುಳಿಸಿಕೊ೦ಡು ಪೂರಣ ಮಾಡಬಹುದು, ಪ್ರಯತ್ನಿಸಿರಿ

    • “ಸೋಮ”ರವರಿಗೆ ಧನ್ಯವಾದಳು.
      ಭಾಮಿನಿ ಅಲ್ಪಸ್ವಲ್ಪ ಗೊತ್ತಿದ್ದರೂ, ದತ್ತಪದಿ ಮೊದಲ ಪ್ರಯತ್ನ. 🙂
      ನಿಮ್ಮ ಸಲಹೆಯನ್ನು ಗಮನಿಸಿದೆ. ವಂದನೆಗಳು.

      – ಕಂಡ ಋಷಿ ದುಃಶಾಸನವನಿಗೆ ಶಾಪನೀಡಿದರು |

      • ಸರಿಯಿದೆ 🙂
        ಮು೦ದೆಯೂ ಹೀಗೆ ಪದ್ಯಪಾನದಲ್ಲಿ ಭಾಗವಹಿಸುವಿರೆ೦ದು ಆಶಿಸುತ್ತೇನೆ

  8. ಪರವಾಗಿಲ್ಲ, ಈಗ ದತ್ತಪದಿಗಳಿಗೂ ಹೆಚ್ಚಿನ ಪ್ರತಿಕ್ರಿಯೆಗಳು ಬರುತ್ತಿವೆ:-)
    ಚಂದ್ರಮೌಳಿಯವರ ದತ್ತಪದಪರಿಹಾರವು ಪ್ರಾಶ್ನಿಕರ ನಿರೀಕ್ಷೆಯನ್ನೂ ಮೀರಿದ ಅಮೋಘಯತ್ನ. ನಮ್ಮ ಹೊಸಗೆಳೆಯರಾದ ಒಪ್ಪಣ್ಣನವರ ಪದ್ಯವೂ ಅದಕ್ಕೆ ಗೆಳೆಯ ಸೋಮ ಸೂಚಿಸಿದ ಸವರಣೆಗಳೂ ಸೊಗಸಾಗಿವೆ.

  9. ಪ್ರಿಯ ಸೋಮ, ನಿಮ್ಮ ನಿರಂತರವ್ಯವಸಾಯಶೀಲತೆ ನಿಜಕ್ಕೂ ಮುದಾವಹ. ಎಶ್ಃಟು ಬೇಗ ಹೊಸ ಪರಿಹಾರವನ್ನು ನೀಡಿದ್ದೀರಿ! ಜಯ ವಿಜಯೀಭವ!! ಈ ಪದ್ಯದಲ್ಲಿ ವಿಸಂಧಿದೋಷಾದಿಗಳೇನಿಲ್ಲ:-). ಕೆಲವೊಂದು ತೀರ ಸಣ್ಣ-ಪುಟ್ಟ ಲೋಪಗಳಿವೆ ಅಷ್ಟೇ. ಇವಾದರೂ ಹಳಗನ್ನಡವನ್ನು ಮತ್ತಷ್ಟು ಸಮರ್ಥವಾಗಿ, ಸುಭಗವಾಗಿ ಬಳಸುವುದರಬಗೆಗಲ್ಲದೆ
    ಮತ್ತೇನಲ್ಲ. ಈ ಮೂಲಕ ಎಲ್ಲರಿಗೂ ನನ್ನ ನಿವೇದನೆ ಇಷ್ಟೇ: ತೀ.ನಂ.ಶ್ರೀ. ಅವರು ಮಾಡಿದ ರನ್ನನ ಗದಾಯುದ್ಧದ ಸಂಗ್ರಹವನ್ನಾಗಲಿ, ಎಸ್.ಜಿ. ನರಸಿಂಹಾಚಾರ್ಯರ ದಿಲೀಪಚರಿತ್ರೆ, ಅಜನೃಪಚರಿತ್ರೆಗಳಗನ್ನಾಗಲಿ, ಮುದ್ದಣನ ರಾಮಾಶ್ವಮೇಧಕ್ಕೆ ತೆಕ್ಕುಂಜ ಗೋಪಾಲಕೃಷ್ಣಭಟ್ಟರು ಮಾಡಿರುವ ವ್ಯಾಖ್ಯಾನವನ್ನಾಗಲಿ, ಲಕ್ಷ್ಮೀಶನ ಜೈಮಿನಿಭಾರತವನ್ನಾಗಲಿ, ಕುವೆಂಪು ಅವರ ರಾಮಾಯಣದರ್ಶನವನ್ನಾಗಲಿ ಅಥವಾ ಇವೆಲ್ಲವನ್ನಾಗಲಿ ಸ್ವಲ್ಪ ಹಠವಿಟ್ಟು ಓದಿರಿ:-)…ಆಗ ಹಳ-ನಡುಗನ್ನಡಗಳ ಹದ ತಾನಾಗಿ ತಿಳಿಯುತ್ತದೆ.

    • ಬಹಳ ಧನ್ಯವಾದಗಳು ಸರ್:)
      ನಿಮ್ಮ ಮಾರ್ಗದರ್ಶನವೇ ನಮಗೆ ದಾರಿದೀಪ

      ಗಧಾಯುದ್ಧ ಸ೦ಗ್ರಹ ಓದುತ್ತಿದ್ದೇನೆ, ನೀವೆ ಹೇಳಿದಹಾಗೆ ” ಹಠವಿಟ್ಟು” ಓದಬೇಕು:)

  10. ಮಲ್ಲಿಕಾಮಾಲೆಯಲ್ಲಿ ರಚಿಸುವುದು ಎಂದು ಮೊದಲೇ ನಿರ್ಧರಿಸಿಬಿಟ್ಟೆ. ’ದುಃಶಾಸನ’ ಎಂಬಲ್ಲಿ ಎರಡು contiguous ಗುರುಗಳಿವೆ, ಕೊನೆಯ ಪಾದದಲ್ಲಿ! ವಿಧಿ ಇಲ್ಲದೆ ಅದನ್ನು ದುಃಶಸನ ಎಂದು ಮಾಡಿಕೊಂಡಿದ್ದೇನೆ. ಸಾಧುವೆ?

    ಎಲ್ಲ ಕಾಲಕು ದೇಶಕು| ನಿಲಲಾನು ನೀಡುವ ಶಾಪವೈ
    ಸೊಲ್ಲಿದೆಲ್ಲರ ಕರ್ಣದೊಳ್| ನೆಲೆನಿಂತಕೃತ್ಯವು ನಿಲ್ಲಲೈ
    ಇಲ್ಲೆ ನೀಗೆಲೊ ಈಗಲೇ| ಅಸು ಯೋಧ ನಾ ಬಲು ನೊಂದೆನೈ|
    ಭಿಲ್ಲ ದುಃಶಸನಲ್ತೆ ನೀ| ಜನವಿನ್ನು ಶಾಂತಿಲೆ ಬಾಳುವರ್

    ಬೇರೆ ವೃತ್ತದಲ್ಲಿ ಯತ್ನಿಸುವೆ.

    • ಇದೊಂದು ಒಳ್ಳೆಯ ಪಾಠ. ದತ್ತಪದಿಯನ್ನು ರಚಿಸುವಾಗ ದತ್ತವಾದ ಪದಗಳೆಲ್ಲ ನಾವು ಆಯ್ದುಕೊಂಡ ಅಥವಾ ಪೃಚ್ಛಕರು ಕೊಟ್ಟ ವೃತ್ತದಲ್ಲಿ ಯಾವುದೇ ಕೈಕಾಲು ಮುರಿತವಿಲ್ಲದೆ ಅಡಗಬಲ್ಲವೇ ಎಂಬುದನ್ನು ಗಮನಿಸಿಕೊಳ್ಳಬೇಕು.
      ಪ್ರಸಾದು! ದಯಮಾಡಿ ನೀವು ನಿಮ್ಮ ಆಂಗ್ಲಭಾಷಾಸೌಷ್ಠವಕ್ಕೆ ನೀಡುವ ಪ್ರಾಮುಖ್ಯವನ್ನೇ ಕನ್ನಡಕ್ಕೂ ಕೊಡಿ ಸ್ವಾಮೀ!!!:-)

  11. ನನ್ನದು ಸುಯೋಧನನಿಲ್ಲದ ರಾಮಾಯಣ. ಅಟೆಂಪ್ಟಿಗಾದರೂ ಮಾರ್ಕ್ಸುಂಟೊ?

    ಇನಿಯಂಬಿದ್ದಿರಲಾಕಿರಾತನೆಸೆದಾಕೂರಂಬಿನಾಘಾತಕಂ
    ಧ್ವನಿಸಲ್ಕರ್ಣವಿಭೇದಕಂಗುರುರವಂಕ್ರೌಂಚಾಂಗನಾಕ್ರಂದನಂ
    ಮುನಿಸಿಂಶೋಕದಿನಾಗಳಾದಿಕವಿಯುಂಕೈಕೊಂಡನುದ್ಗಾರಮಂ –
    ಘನಸ್ವರ್ಗಾಂತಕೆಪೋಪನೀಶಕುನಿಯಂಕೊಂದಾವದುಶ್ಶಾಸನಂ!

    ‘ದುಶ್ಶಾಸನ’ನನ್ನು ಕಟ್ಟಳೆಯನ್ನು ಮೀರಿದವನೆಂದು – ಚಂದ್ರಮೌಳಿಯವರೂ, ಪ್ರಸಾದರೂ, ಒಪ್ಪಣ್ಣನವರ ಜಾಡಿನಲ್ಲಿ ನಾನೂ ಅರ್ಥೈಸಿದ್ದೇನೆ.

    • (ಹಾ ವಿಧಿಯೇ, ಗದ್ಯವನ್ನೂ ಸವರಿಸಬೇಕಾಗಿ ಬಂತೇ …)

      … ಚಂದ್ರಮೌಳಿಯವರ, ಪ್ರಸಾದರ, ಒಪ್ಪಣ್ಣನವರ ಜಾಡಿನಲ್ಲಿ ನಾನೂ ಅರ್ಥೈಸಿದ್ದೇನೆ

      • ಸಣ್ಣ ಮಾರ್ಪಾಡಿನೊಂದಿಗೆ:

        ಇನಿಯಂಬಿದ್ದಿರಲಾಕಿರಾತನೆಸೆದಾಕೂರಂಬಿನಾಘಾತಕಂ
        ಧ್ವನಿಸಲ್ಕರ್ಣವಿಭೇದಕಂಗುರುರವಂಕ್ರೌಂಚಾಂಗನಾಕ್ರಂದನಂ
        ಮುನಿಸಿಂಶೋಕದಿನಾಗಳಾದಿಕವಿಯುಂಕೈಕೊಂಡನುದ್ಗಾರಮಂ –
        ಘನನಾಕಾಂತಕೆಪೋಪನೀಶಕುನಿಯಂಕೊಂದಾವದುಶ್ಶಾಸನಂ!

  12. ಈ ಬಾರಿ ಸುಯೋಧನನ ಸಾಂಗತ್ಯ – ಒಂದು ಕೈ ಹೆಚ್ಚಾಗಿಯೇ! – ಇದೆ. ಜೊತೆಗೆ ಕರ್ಣ ಕರಣ-ವಾಗಬೇಕಾಯಿತು

    ಸರಸಕೇಳಿಯೊಳಿದ್ದ ಶಕುನಿದ್ವಯದಮೇಲೆ ಸರಳಂಬನೆಚ್ಚದ್ದು ತರವೆ
    ಮೆರೆವಸುಯೋಧನ ನೆಣಿಸದಕಾರ್ಯದ ಪರಿಯನ್ನು ನೀನೆಸಗಿರುವೆ

    ಕರೆಯುತ್ತ ಚೀರುತ್ತ ಚಡಪಡಿಸಲುಹಕ್ಕಿ ಕರಗದೆ ನಿನ್ನಂತಃಕರಣ
    ಪೊರೆಯದು ಕುಲಧರ್ಮ ಪೊಲ್ಲದುಶ್ಶಾಸನ ನರಳುನೀ ಬರೆವರಂ ಮರಣ

    • ಜೀವೆಂ,
      ನಿಮ್ಮ ವೃತ್ತ-ಸಾಂಗತ್ಯಗಳೆರಡೂ ಸೊಗಸಾಗಿವೆ. ವಿಶೇಷತಃ ಭಾಷೆಯ ದೃಷ್ಟಿಯಿಂದಲಂತೂ ನಿಮ್ಮ ಪದ್ಯಗಳು ಗಮನಾರ್ಹ. ಇದು ಉಳಿದವರಿಗೂ ಮಾದರಿಯಾಗಲಿ.
      ದತ್ತಪದಗಳನ್ನು ಗರ್ಭೀಕರಿಸುವಲ್ಲಿ ಗೆಳೆಯ ಚಂದ್ರಮೌಳಿಯವರು ನೀಡಿರುವ ಸೂಚನೆಗಳು ಸರ್ವರಿಗೂ ಮಾನ್ಯವಾಗಲಿ. ಮುಖ್ಯವಾಗಿ ದತ್ತಪದಗಳನ್ನು ಪ್ರಸ್ತುತಸಂದರ್ಭಕ್ಕೆ ಹದವಾಗಿಸಿಕೊಳ್ಳುವುದಕ್ಕೇ ಪದ್ಯದ ಬಹುಭಾಗ ವೆಚ್ಚವಾದರೆ ಉದ್ದಿಷ್ಟಭಾವವಿವರಗಳನ್ನು ತರಲಾಗುವುದೇ ಇಲ್ಲ. ಆದುದರಿಂದ ದತ್ತಪದಗಳ ಒಳಗೇ ಇರಬಹುದಾದ ನಾನಾರ್ಥ, ಪದಚ್ಛೇದಸಾಧ್ಯತೆ,ಕಾಕುವೈವಿಧ್ಯ ಮುಂತಾದುವನ್ನೆಲ್ಲ ಗಮನಿಸಿಕೊಳ್ಳಬೇಕು. ದತ್ತಪದಗಳನ್ನು ಕೂಡಿದಮಟ್ಟಿಗೂ ಅವುಗಳನ್ನಿತ್ತ ಕ್ರಮದಲ್ಲಿಯೇ ತರುವುದು ಅಪೇಕ್ಷಣೀಯ. ದೊಡ್ಡ ಛಂದಸ್ಸುಗಳಲ್ಲಿ ದತ್ತಪದಿ ಸುಲಭ, ಮಾತ್ರಾಛಂದಸ್ಸುಗಳಲ್ಲಿದು ಮತ್ತೂ ಸುಲಭ. ಚಿಕ್ಕ ವರ್ಣವೃತ್ತಗಳಲ್ಲಿ ವಿಪರೀತ(ಪ್ರಕೃತಸಂದರ್ಭಕ್ಕೆ ಅನುಕೂಲವಲ್ಲದ)ದತ್ತಪದಗಳನ್ನು
      ರಸಮಯವಾಗಿ ನಿರ್ವಾಹ ಮಾಡುವುದೇ ಪರಮಾದರ್ಶ:-).ನಮ್ಮ ಗೆಳೆಯರೆಲ್ಲ ಈ ಸಾಹಸದಲ್ಲಿ ಸಂತೋಷಗೊಳ್ಳಲಿ.

  13. ಗೆಳೆಯ ಬೆ.ವೆಂ. ಅವರು ನನ್ನನ್ನು ಕ್ರೌಂಚಪದವೃತ್ತದಲ್ಲಿ ಈ ದತ್ತಪದಿಯನ್ನು ಪೂರೈಸಬೇಕೆಂದು ಪ್ರತ್ಯೇಕವಾಗಿಕೋರಿದ್ದರು. ಆದರೆ ಆ ವೃತ್ತದಲ್ಲಿ ಸುಯೋಧನ ಪದಕ್ಕೆ ತಕ್ಕ ಗುರು-ಲಘುವಿನ್ಯಾಸವಿರದ ಕಾರಣ ಎಲ್ಲರಿಗೂ ಪಳಗಿರುವ ಮತ್ತೇಭವಿಕ್ರೀಡಿತದಲ್ಲಿ ರಚಿಸಿದ್ದೇನೆ. ಈ late entry ಯನ್ನು ಪದ್ಯಪಾನಿಗಳು ಗಮನಿಸಬೇಕಾಗಿ ವಿನಂತಿ:-)

    ಕನಲ್ದಾ ಪೂರ್ವಕಿರಾತನಿಂದಿನ ಕಿರಾತಂ ಕರ್ಣವಿದ್ರಾವಕ-
    ಧ್ವನಿ ಗೆಯ್ವಂದದೆ ಪೊಯ್ದನಾ ಶಕುನಿಯಂ ದಾಂಪತ್ಯಕಾವ್ಯಕ್ರಿಯಾ-
    ಯನಮಂ; ಪಾಪಿಯೆನುತ್ತೆ ನಿಂದಿಸಿರಲಾ ದುಶ್ಶಾಸನಂ ಗೆಯ್ದುದೀ
    ಮುನಿಯಂ ಜೀವ್ಯಸುಯೋಧನಂ ಸುಕವಿತಾsಪೂರ್ವಾರ್ಥನಂ ನಾಳಿನಾ!!

    (ಕನಲ್ದಾ ಎನ್ನುವಲ್ಲಿ ಶಿಥಿಲದ್ವಿತ್ವವಿರುವ ಕಾರಣ ಛಂದೋದೋಷವಿಲ್ಲ. ಜೀವಿ+ಅಸು+ಯೋಧನಂ ). ಇದರ ಸರಳ ತಾತ್ಪರ್ಯವನ್ನೂ ಹೇಳುವೆ. ಏಕೆಂದರೆ ಇಲ್ಲಿಯ ವಾಕ್ಯಗಳು ತೀರ ಚಿಕ್ಕವು, ಸಾಕಾಂಕ್ಷ್ಯ:

    ಪ್ರಣಯಕವಿತೆಯನ್ನು ರಚಿಸುತ್ತಿದ್ದ ಹಕ್ಕಿಯೊಂದನ್ನು ಇಂದಿನ ಬೇಡನೊಬ್ಬ ಕೊಂದನೆಂಬ ಕೋಪದಿಂದ ಹಿಂದಿನ ಬೇಡನು ಆತನನ್ನು ಪಾಪಿಯೆಂದು ಜರೆದಾಗ ಆ ಶಾಪವಾಕ್ಯವೇ ಇಂದಿನ ಈ ಜೀವಿಕುಲರಕ್ಷಣಯೋಧನಾದ ಮುನಿಯನ್ನು ನಾಳಿನ ಅದಿಕವಿಯನ್ನಾಗಿಸಿತು.

    • ಅಸಂಬದ್ಧವನ್ನು ಕೇಳಿದರೂ ಸ್ವಲ್ಪವೂ ಬೇಸರಿಸದೆ ಕೂಡಲೆ ಬರೆದುಕೊಟ್ಟ ‘ರಾಗ’ರಿಗೆ ಮತ್ತೆ ಮತ್ತೆ ನಮನಗಳು!

    • ಕ್ಷಮಿಸಿರಿ; ಜೀವೆಂ ಅದು ಹೇಗೆಯೋ (due to wrong registration in the mind!) ಬೆವೆಂ ಆಗಿಬಿಟ್ಟಿದ್ದಾರೆ:-)

    • ಹಕ್ಕಿ ಮತ್ತು ಮುನಿಯನ್ನು ಕವಿಗಳು,
      ಹಕ್ಕಿಯ ಪ್ರೇಮ ಕಾವ್ಯ, ಮುನಿಯು ಮು೦ದೆ ರಚಿಸುವ ಆದಿಕಾವ್ಯ,
      ಬೇಡನ ಮತ್ತು ಮುನಿಯ ಹಿ೦ದೆ ಬೇಡನಾಗಿದ್ದುದು
      ಇವೆಲ್ಲರ ಸಾಮೀಕರಣ ಅತ್ಯದ್ಭುತವಾಗಿದೆ 🙂

  14. beLLAve veMkaTanAraNappanavarU (be.veM) prAtaHsmaraNeeyaru. BGL Swamy-yavara gurugaLu.

    • ಬೆ. ವೆಂ. ಬಸವನಗುಡಿಯಲ್ಲಿ ವಾಸವಾಗಿದ್ದರು. That is as close as I can come to him; literally and figuratively.

  15. ಪದ್ಯಪಾನಿಗಳೇ,

    ಅಂತೂ ಮುಂದಿನ ಸಮಸ್ಯೆ ಹಾಕುವ ಮೊದಲೇ ಈ ಉತ್ತರವನ್ನು ಬರೆಯುತ್ತಿದ್ದೇನೆ ಎಂಬುದೊಂದೇ ಹೆಚ್ಚಾಯ. ಈಗಾಗಲೇ ಇದೇ ರೀತಿಯ ಪದ್ಯಗಳೂ ಬಂದಿರಬಹುದು. ಆದರೂ, ಇರಲಿ ಅಂತ ಹಾಕಿದ್ದೇನೆ. ಅಲ್ಲದೆ, ಆದಷ್ಟೂ ಬೇರೆಯವರ ಯೋಚನೆಗಳು ನನ್ನ ಯೋಚನೆಯ ಧಾಟಿಯನ್ನು ಪರಿವರ್ತಿಸದಿರಲಿ ಅಂತ ಹೆಚ್ಚಿನ ಉತ್ತರಗಳನ್ನು ಓದಿಲ್ಲ. ಈಗ ನಾನು ಹಾಕಿದ್ದರಿಂದ ಮೇಲಿನ ಎಲ್ಲ ಉತ್ತರಗಳನ್ನೂ ಓದಿ ಆನಂದಿಸಬಹುದು.

    ನನ್ನ ಉತ್ತರ ಭಾಮಿನಿ ಷಟ್ಪದಿಯಲ್ಲಿ. ಕ್ರೌಂಚ ಪಕ್ಷಿಯೂ ಶಕುನದ ಹಕ್ಕಿಯೂ ಒಂದೇ ಅಲ್ಲವೇ ಅನ್ನುವುದೇನೂ ನನಗೆ ಗೊತ್ತಿಲ್ಲ. “ಶಕುನಿ” ಯನ್ನು ಹಕ್ಕಿಯಾಗೂ, “ಸುಯೋಧನ” ನನ್ನು warrior ಎಂದೂ, ದುಶ್ಯಾಸನ ನನ್ನು “ಅಂಕೆಗೆ ಸಿಕ್ಕದವನು ಎಂದೂ ಬಳಸಿದ್ದೇನೆ.

    ಬೇಡನೋರ್ವನು ಮರದ ಮೇಗಡೆ
    ಜೋಡಿ ಶಕುನಿಯ ಕಂಡು ಒಮ್ಮೆಲೆ
    ಹೂಡಿ ಶರವ ಸುಯೋಧನಂತವ ಹೆದೆಯ ಸೆಳೆದಿರಲು |
    ಕೇಡಿಗನೆ! ದುಶ್ಯಾಸನನೆ! ನಿನ-
    ಗೇಡು ಸಾಸಿರದಲೂ ಏಳಿಗೆ
    ಬೇಡವೆನುತಲಿ ಕರ್ಣಭೇದಿಪಶಾಪ ಮುನಿಯಿತ್ತ ||

    ಕೊಸರು: ಏಡು ಅನ್ನುವ ಪದಕ್ಕೆ ಬರಹ ನಿಘಂಟು ಸಮಯ, ಕಾಲ ಎಂಬ ಅರ್ಥ ಕೊಡುತ್ತದೆ. ಮಾನಿಷಾದ ಶ್ಲೋಕದ “ಶಾಶ್ವತೀ ಸಮಾಃ” ಗೆ ಇದು ಸಮಾಂತರವಾಗಿದೆಯೆನ್ನಿಸಿ ಅದನ್ನು ಬಳಸಿದ್ದೇನೆ. ಇದರಲ್ಲಿ ತಪ್ಪೇನಾದರೂ ಇದ್ದರೆ ದಯವಿಟ್ಟು ತೋರಿಸಿಕೊಡಬೇಕಾಗಿ ಕೋರುವೆ.

    -ಹಂಸಾನಂದಿ

    • ಹಂಸಾನಂದಿಯವರೆ – ಬಹಳ ಸಲೀಸಾಗಿ ಬಗೆಹರಿಸಿದ್ದೀರ. ಬಹಳ ಚೆನ್ನಾಗಿದೆ.
      ಒಂದು ಸಣ್ಣ ದೋಷವನ್ನು ನಿಮ್ಮ ಗಮನಕ್ಕೆ ತರಬೇಕೆನಿಸಿತು. ೫ನೆ ಸಾಲಿನಲ್ಲಿ “ದಲೂ” ಎಂಬಲ್ಲಿ ಲಗಂ ಬಂದಿದೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)