Mar 112012
 

ಕೆಳಗಿನ ಚಿತ್ರಕ್ಕೆ ಹೊಂದುವಂತೆ ಸೂಕ್ತವಾದ ಪದ್ಯಗಳನ್ನು ರಚಿಸಿರಿ ::

ಅಲೆಯೊಡನೆ ಸರಸ

  44 Responses to “ಪದ್ಯಸಪ್ತಾಹ – ೧೧ – ಚಿತ್ರಕ್ಕೆ ಪದ್ಯ”

 1. ತಪ್ಪುಗಳಿರಬಹುದು, ಪ್ರಯತ್ನಗಳು :

  ಭಾಮಿನಿ
  ———

  ಧರಿಸೆ ಪದಕವನೀಜುಪಥದಲಿ
  ಸರಿಸೆ ಮೊದಲಿನ ದಾಖಲಾತಿಯ
  ವರಿಪುದಲೆಯನಿವಾರ್ಯವೆನಗಿನ್ನೇನು ವಿಧಿಯಿಲ್ಲ |
  ಬರಿಸೆ ಸಾಹಸ ಮತಿಯ ಜನರಲಿ
  ವರಸೆ ತೋರುವುದೊಂದೆ ಹಾದಿಯು
  ಸರಸಕಿಳಿದೆನು ಸುಜನರೆಲ್ಲರು ನೋಡಬಹುದಲ್ಲ ||

  ಭೋಗ
  ——-

  ಹಾದಿಯೆನ್ನದೀಜು ಮುಂದೆ
  ಆದಿಯಲೆಯ ಮುದ್ದಿ ಸುತ್ತ
  ಸಾಧಿಸಲ್ಕೆ ದಾಖಲಾತಿ ವೇಗದಿಂದಲಿ |
  ಬೀದಿ ಬೀದಿಯುದ್ದ ನಿಂತು
  ಯೋಧ ಬಂದನೆಂಬ ರೀತಿ
  ಕಾದು ಕುಂತು ಕಾಂಬರೆನ್ನ ಬೇಗದಿಂದಲಿ ||

  • ಪದ್ಯಗಳು ಸೊಗಸಾಗಿವೆ. ಕೇವಲ ಕುಂತು ಎಂಬ ಗ್ರಾಮ್ಯಶಬ್ದ ಮಾತ್ರ ಪದ್ಯಶಯ್ಯೆಯನ್ನು ತುಸು ಕೆಳಗೆಳದಿದೆ. ದಯಮಾಡಿ ಸವರಿಸಿರಿ

   • ಹಾದಿಯೆನ್ನದೀಜು ಮುಂದೆ
    ಆದಿಯಲೆಯ ಮುದ್ದಿ ಸುತ್ತ
    ಸಾಧಿಸಲ್ಕೆ ದಾಖಲಾತಿ ವೇಗದಿಂದಲಿ |
    ಬೀದಿ ಬೀದಿಯುದ್ದ ನಿಂತು
    ಯೋಧ ಬಂದನೆಂಬ ರೀತಿ
    ಕಾದು ಕುಳಿತು ಕಾಂಬರೆನ್ನ ಬೇಗದಿಂದಲಿ ||

   • ಸರಿಪಡಿಸಿದ್ದೇನೆ, ಧನ್ಯವಾದಗಳು.

 2. The reason for his desperation is that he is any moment susceptible to the volcano erupting in the submerged mountain yonder. Observe its peak. It has split and there is a semblance of fire between. She too will go up in vapours, but will return as rain. But he will go further to the nether.
  ವಿಯೋಗಿನೀ ವೃತ್ತ:
  ತಿಳಿತೈ ಎನಗಂ ಕಿಶೋರಿಯೊಳ್
  ಕೆಳೆ ದುಃಸಾಹಸವೇಕೆ ಗೈವೆಯೈ|
  ಖಳನಂತೆ ವಿಯೋಗ ಕಾರಣಂ
  ಬಳಿಯಲ್ಲೇ ಭುಗಿಲೆನ್ನಲಾ ನಗಂ||

  • ನಿಮ್ಮ ಮೊದಲ ವಿಯೋಗಿನಿಯ ಸೊಗಸು ಅವಿಯೋಗಿನಿಯೇ ಸರಿ! ಕೇವಲ ತಿಳಿತೈ ಎಂಬ ಪದ ಮಾತ್ರ ಅಸಾಧುರೂಪ. ಇದನ್ನು ತಿಳಿಯಲ್ಕೆನಗಂ……ಎಂದು ಸವರಿಸಿದರೆ ಸರಿಯಾದೀತು.

   • ಅಲ್ಲಿ ಬೇಕಾಗಿರುವುದು ’ತಿಳಿದುದೈ ನನಗಂ’ ಎಂದು. ಹೇಗೆ ಸವರಬಹುದು? ಇದು ಹೇಗಿದೆ?

    ಹಳಿಯೆನ್ ತಿಳಿದುಂ ಕಿಶೋರಿಯೊಳ್
    ಕೆಳೆ ದುಃಸಾಹಸ ಗೈದಕಾರಣಂ
    ಖಳನಂತೆ ವಿಯೋಗದಾಯಕಂ
    ಬಳಿಯಲ್ಲೇ ಭುಗಿಲೆನ್ನಲಾ ನಗಂ||

    ’ಖಳನಂತೆ’ & ’ಬಳಿಯಲ್ಲೇ’ – ಇವೆರಡೂ ತೀರ ಹೊಸಗನ್ನಡ!

 3. ಬಲರಾಮ ಸಮುದ್ರದಲ್ಲಿ ತನ್ನ ದೇಹವನ್ನು ಬಿಡಲು ಬಂದಿದ್ದಾನೆ. ಬಲರಾಮನನ್ನು ಅದರದಿಂದ ಬರಮಾಡಿಕೊಂಡರೂ ಕೃಷ್ಣ ನಿರ್ಯಾಣ ಸಮೀಪಿಸಿದೆಯೆಂಬ ದುಃಖ ಉಮ್ಮಳಿಸಿ ಅಲೆಯಾಗಿ ದ್ವಾರಕೆಯನ್ನು ಕಬಳಿಸಿದೆ. ಇದರ ಸುಳಿವು ಸೂರ್ಯನಿಗೂ ತಿಳಿದು ಆತನೂ ದುಃಖದಲ್ಲಿ ಮುಳುಗ ತೊಡಗಿದ್ದಾನೆ. ಕೃಷ್ಣನಿಲ್ಲದ ಕತ್ತಲು ಜಗತ್ತಿನಲ್ಲಿ ಹರಡತೊಡಗಿದೆ.

  ಸೇರಲು ಬಲರಾಮ ದುಃಖಕ್ಕೆ ಅಲೆಗಳು
  ಏರಿನುಂಗಿದವು ನಗರವ ನೇಸಱು
  ಜಾರಿದ ಮಂಕು ಕವಿದಂತೆ

  • ತ್ರಿಪದಿ ಸೊಗಸಾಗಿದೆ. ಆದ್ರೆ ಮೊದಲ ಸಾಲನಲ್ಲಿ ಮೂರನೆಯ ಗಣದ ಆದಿಯಲ್ಲಿ ಬರಬೇಕಿರುವ ಆದಿಪ್ರಾಸ ಮರೆಯಾಗಿದೆ. ಇದನ್ನು ದಯಮಾಡಿ ಸವರಿಸಿರಿ.

   • ತಿದ್ದಲು ಯತ್ನಿಸುವೆ. ಮೆಚ್ಚುಗೆಗೂ, ಪ್ರಾಸ ವಿಚಾರ ತಿಳಿಸಿಕೊಟ್ಟದ್ದಕ್ಕೂ ಧನ್ಯವಾದಗಳು

   • ಯಥಾಮತಿ ತಿದ್ದಿದ್ದೇನೆ.

    ಸೇರಲು ಬಲರಾಮ ಏರಿಮೇಲ್ಹಾಯ್ದಲೆ
    ಊರುಮುಳುಗಿತು ದುಃಖದಿ ನೇಸಱು
    ಜಾರಿದ ಮಂಕು ಕವಿದಂತೆ

  • ಜೀವೆಂ – ಎಲ್ಲರೂ ಸಾವು ಅಂದರೆ ಒಂದು ಭಯಂಕರ ಯಮನನ್ನೂ ಕೋಣನನ್ನೂ ತೋರಿಸಿ ಸುಮ್ಮನೇ ಹೆದರಿಸಿಬಿಟ್ಟಿದ್ದಾರೆ. ನಿರ್ಯಾಣದ ಪರಿ ಹೀಗೆಂದು ತಿಳಿದರೆ, ಅನೇಕರು ಭಯ ತೊರೆದು, ಸಾವನ್ನು ಎದುರು ನೋಡುವಂತಾಗಬಹುದು. 🙂
   ಒಟ್ಟಿನಲ್ಲಿ ಕಲ್ಪನೆಯಂತೂ ಸೊಗಸಾಗಿದೆ.

   • ಬಲರಾಮನಿಗೆ ಆ ರೂಪದಲ್ಲಿ ಕಾಣಿಸಿಕೊಂಡಿತು. ನಮಗೆ ಕೋಣವೇ ಕಾಣಬಹುದು, ಯಾರು ಬಲ್ಲರು. 🙂 Thanks!

 4. ಹೋಮರನೆ , ನೀನೆಷ್ಟು ನಿರ್ದಯನೊ ಕವಿವರ್ಯ
  ನೇಮದಿಂದಿರುವಳು ಪೆನೆಲೊಪೆಯಲ್ಲಿ
  ರಾಮನಿಗೆ ಮಿಗಿಲಾಗಿ ಕಷ್ಟವ ಕೊಡಬಹುದೇ
  ಭೂಮಿಯಲ್ಲಿದು ಸರಿಯೆ , ನೊಂದಿರುವೆ ನಾ

  ಇದು ಹೋಮರನ ‘ಒಡಿಸ್ಸೀ’ ಕಾವ್ಯದ ಹಿನ್ನೆಲೆಯಲ್ಲಿ ಬರೆದ ಪದ್ಯ. ಈ ಕಾವ್ಯದ ನಾಯಕ ಒಡಿಸ್ಸ್ಯುಯಸ್ ರಾಮನಿಗಿಂತ ಹೆಚ್ಚು ಕಷ್ಟಗಳನ್ನು ಅನುಭವಿಸಬೇಕಾಯಿತು ಎಂದು ನನ್ನ ಭಾವನೆ. ಈ ಚಿತ್ರದ ಸ್ತ್ರೀ ರೂಪದ ಅಲೆಯನ್ನು ಕ್ಯಾಲಿಪ್ಸೋಗೆ ಹೋಲಿಸಬಹುದು.

  ರಾಮಚಂದ್ರರೇ,
  ನಾನು ಯಾವ ‘ಯತಿ’ ಗಳ ಕಡೆಯೂ ಗಮನ ಕೊಡುವವಳಲ್ಲ ಅಲ್ಲವೇ?

  • ಗಾಯತ್ರಿ, ನಿಮ್ಮ ಪದ್ಯ ಮಂಥನಕ್ಕೆ (ನನ್ನ ಮಟ್ಟಿಗಂತೂ) ಹೊಸದೊಂದು ವಿಚಾರವನ್ನು ಹುಟ್ಟುಹಾಕಿದೆ. ಧನ್ಯವಾದಗಳು!

   ಪಂಚಮಾತ್ರಾ ಚೌಪದಿಯಲ್ಲಿಯ ಯತಿಸ್ಥಾನಗಳ ಬಗ್ಗೆ ತಿಳಿದವರು ಬೆಳಕು ಚೆಲ್ಲುವಿರೆ?

  • ಒಳ್ಲೆಯ ಕಲ್ಪನೆ…ಆದರೆ ಇಲ್ಲಿ ಯತಿಯ ತಪ್ಪಾಗಿಲ್ಲ, ಗತಿಯ ತಪ್ಪಾಗಿದೆ:-) ಅದೂ ತುಂಬ ಸ್ವಲ್ಪ ಮಾತ್ರ. ಎರಡೇ ಕಡೆಗಳಲ್ಲಿ ಒಂದೊಂದು ಮಾತ್ರೆಯಷ್ಟು ಕೊರತೆ ಬಂದಿದೆ. ಅದನ್ನು ಹೀಗೆ ಸವರಿಸಬಹುದು:
   …………………………………………….
   ನೇಮದಿಂದರುವಳಾ……………………….|
   ……………….ಕಷ್ಟವನು ಕೊಡಬಹುದೆ
   ……………………………………………||

   • ಧನ್ಯವಾದಗಳು ಗಣೇಶರೆ, ನೀವು ಹೇಳಿದಂತೆ ತಿದ್ದಿದ್ದೇನೆ:

    ಹೋಮರನೆ , ನೀನೆಷ್ಟು ನಿರ್ದಯನೊ ಕವಿವರ್ಯ
    ನೇಮದಿಂದಿರುವಳಾ ಪೆನೆಲೊಪೆಯು ತಾ
    ರಾಮನಿಗೆ ಮಿಗಿಲಾಗಿ ಕಷ್ಟವನು ಕೊಡಬಹುದೆ
    ಭೂಮಿಯಲ್ಲಿದು ಸರಿಯೆ , ನೊಂದಿರುವೆ ನಾ

 5. ಕರೆವsಳುs ಕೆಣಕುsತs ಗಂಡಸ್ತsನsವsನುs
  ಮೆರೆಯsಲುs ಪೌರುsಷs ಛಲದಿs
  ಮರೆಸುsತs ಮನಸಿsನ ಸ್ತಿsಮಿsತs ಕಳೆವsಳುs
  ಅರಿಯುsವs ಮುನ್ನsವೆs ಯುಸಿರs

  [ಛಂದಸ್ಸು – ಸಾಂಗತ್ಯ]

  • ರಾಮ್, ಅಂಶಚ್ಛಂದಸ್ಸುಗಳನ್ನು ನಿರ್ವಹಿಸುವಾಗ ತುಂಬ ಲಘುಬಹುಲವಾಗಿ ರಚಿಸಿದರೆ ಪ್ರತಿಯೊಂದು ವರ್ಣವನ್ನೂ ಕರ್ಷಿಸಬೇಕಾಗಿ ಬುರುವ ಕಾರಣ ಪದ್ಯದಲ್ಲಿ ಬಿಗಿ ತೀರಾ ತಪ್ಪುತ್ತದೆ; ಕೆಲಮಟ್ಟಿಗೆ ಅರ್ಥಕ್ಲೇಶವೂ ಬರುತ್ತದೆ. ಹೀಗಾಗಿ ವಿಷ್ಣುಗಣಕ್ಕೆ
   ನನನಾನಾ, ನಾನಾನಾ ಎಂಬಂಥ ಅಂಶಗಳನ್ನೇ ಬಳಸುವುದು ಕ್ಷೇಮಕರ.

   • ಹೌದು. ನಾನು ಧಾಟಿಯಲ್ಲಿ ಹಳೆಯ ಜಾನಪದ ಹಾಡುಗಳ ಎಳೆದು ಹಾಡುವ ರೀತಿಯಲ್ಲೇ ಗುನುಗಿಕೊಂಡು, ಅದೇ ಒಂದು ಹೆಚ್ಚಳಿಕೆಯಂತೆ ಮಾಡಿದ್ದೇನೆನಿಸುತ್ತದೆ 🙂
    ಮುಂದಿನ ಪ್ರಯತ್ನಗಳಲ್ಲಿ ಗಮನಿಸುವೆ. ಇದನ್ನೂ ಸರಿಪಡಿಸಲೆತ್ನಿಸುವೆ.

   • ಕರೆವಳೈ ಕೆಣಕುತ್ತ ಗಂಡಸ್ತನವನ್ನು
    ಮೆರೆದಾಡಲ್ ಪೌರುಷ ಚ್ಛಲದಿ |
    ಮರೆಸುತ್ತ ತಿಳಿವನ್ನು ಪ್ರಾಣವ ಸೆಳೆದಾಳು
    ಹರೆಯದ ಶೌರ್ಯವ ಬೆಳಗಿ ||

 6. ಮತ್ತೊಂದು ಪ್ರಯತ್ನ:

  ಜಯಿಸಿ ಮೃತ್ಯುವ ಮರಳಿ ಬರಲು ವಿ
  ಜಯವೆನುತ ಕಾದಿರಲವಳೇನು
  ವಯಸು ಮೀರಿದ ಸತಿಯೆ ? ಗೆಳತಿಯು , ವರಿಸಿದಳನ್ಯನ
  ಬಯಕೆ ಸಾಯಲು ವಿಧಿಯನೊಪ್ಪುತ
  ನಯದೆ ಹಾರೈಸಿ ಹಿಂದಿರುಗಿದನು
  ದಯವು ಉಳಿಯಿತು ನನ್ನ ಮನದಾ ವೀರನಾಯಕಗೆ

  ಈ ಪದ್ಯವು ಕಾಸ್ಟ್ ಅವೇ ಎನ್ನುವ ಚಿತ್ರದಿಂದ ಪ್ರೇರಿತವಾಗಿದೆ. ಈ ಚಿತ್ರದ ಕಥೆ, ನಟನೆ ಎಲ್ಲಾ ತುಂಬಾ ಚೆನ್ನಾಗಿದೆ.
  ಇದುವರೆಗೂ ನೋಡದೇ ಇರುವವರು ಖಂಡಿತಾ ನೋಡಿ.
  ಈ ಚಿತ್ರದಲ್ಲಿನ ಅಲೆಯನ್ನು ಮೃತ್ಯು ದೇವತೆಗೆ ಹೋಲಿಸಿದ್ದೇನೆ.
  http://en.wikipedia.org/wiki/Cast_Away

 7. ಇನ್ನೊಂದು ದೃಷ್ಟಿಕೋನ ::
  ಗಂಡಾಂತರಗಳನ್ನು ಕಂಡಾಗ ಭಯಗೊಂಡು
  ಹಿಂಡಿನ ಹಿತದಿ ಹಿಂದಾಗೆ – ನರಜನ್ಮ
  ಬೆಂಡು ಕಟ್ಟಿಗೆಯ ಸಮನಾತು ||

  ಮುಳುಗೀಯೆಯೆನ್ನುತ್ತ ಸೆಳೆದಾರು ನಿನ್ನೋರು
  ಅಳುಕದೆ ಮುಂದೆ ನೀಸಾಗು – ಗಂಡೇನೀ
  ನುಳಿದರೆ ಸುಖದಾ ವೈಭೋಗ ||

  [ಛಂದಸ್ಸು ::‌ ತ್ರಿಪದಿ]
  [ವಿಷ್ಣು ಗಣಕ್ಕೆ ಸರ್ವ ಲಘುವಿನ ಉಪಯೋಗ ಇಲ್ಲಾಗಿದೆ. ನಂತರ ಬಲಪಡಿಸಲೆತ್ನಿಸುವೆ]

 8. ಶರಧಿಗಳ ರೌದ್ರತೆರೆ ನಿನ್ನೊಡನೆ ಸೆಣೆಸುತಲಿ
  ಸೊರಗಿಹುದು ಲವಣದೊಲು ಬೆಮರಸೂಸಿ
  ತರವದೇ೦ ತಿಳಿನೀರ ಪದ್ಮದೈಸಿರಿ ನಿನಗೆ
  ಮೊರೆವದೇಳ್ ಕಾಡಲುಗಳ ದಾಟಿರ್ಪಗೆ

  ಮಿಹಿರ್ ಸೇನನ ಬಗ್ಗೆ (ಆತ English channel ದಾಟಿದವರಲ್ಲಿ ಮೊದಲ ಭಾರತೀಯ, ಪದ್ಮಭೂಷಣ ಪ್ರಶಸ್ತಿ ವಿಜೇತ ಕೂಡ)

  • ಶರಧಿಗಳ ರೌದ್ರತೆರೆ ನಿನ್ನೊಡನೆ ಸೆಣೆಸುತಲಿ
   ಸೊರಗಿಹುದು ಲವಣದೊಲು ಬೆಮರಸೂಸಿ
   ತರವದೇ೦ ತಿಳಿನೀರ ಪದ್ಮದೈಸಿರಿ ನಿನಗೆ
   ಮೊರೆವದೇಳ್ ಕಡಲುಗಳ ದಾಟಿರ್ಪಗೆ

 9. ರಾಮ್, ನಿಮ್ಮ ತ್ರಿಪದಿ-ಸಾಂಗತ್ಯಗಳೀಗ ಚೆನ್ನಾಗಿವೆ. ಸೋಮ, ನಿಮ್ಮ ಚೌಪದಿಯೂ ಚೆಲುವಾಗಿದೆ. ಗಾಯತ್ರಿ, ನಿಮ್ಮ ಕಲ್ಪನೆ ಕಮನೀಯ. ಆದರೆ ಕೆಲವೊಂದು ಛಂದೋದೋಷಗಳಾಗಿವೆ. ಅದನ್ನೆಲ್ಲ ನಮ್ಮ ಗೆಳೆಯರೇ ಪರಿಹರಿಸಿಯಾರು:-). ನಾನೂ cast away ಚಿತ್ರವನ್ನು ನೋಡಿದ್ದೇನೆ. ದಿಟ, ಅದು ತುಂಬ ಮನಮುಟ್ಟುವಂತಿದೆ.

  • ಗಣೇಶರೇ, ಧನ್ಯವಾದಗಳು. ಜೀವೆಂ ನಿಂದ ಜಗಣ ಮತ್ತು ೫ನೇ ಸಾಲಿನ ಹೆಚ್ಚಿನ ಮಾತ್ರೆಗಳ ಬಗ್ಗೆ ಗೊತ್ತಾಯಿತು. ತಿದ್ದಿದ್ದೇನೆ. ಸರಿಗಿದೆಯೇ ತಿಳಿಸಿರಿ.

   ಜಯಿಸಿ ಮೃತ್ಯುವ ಮರಳಿ ಬರಲು ವಿ
   ಜಯವೆನುತ ಕಾದಿರಲವಳಲ್ಲ
   ವಯಸು ಮೀರಿದ ಸತಿಯು , ಗೆಳತಿಯು – ವರಿಸಿದಳನ್ಯನ
   ಬಯಕೆ ಸಾಯಲು ವಿಧಿಯನೊಪ್ಪುತ
   ನಯದೆ ಹಾರೈಸಿ ಹಿಂದಿರುಗಿದ
   ದಯವು ಉಳಿಯಿತು ನನ್ನ ಮನದಾ ವೀರನಾಯಕಗೆ

   • ಕ್ಷಮಿಸಿ, ಮತ್ತೆ ಜಗಣ ಬಂದಿದೆ.

    • ಈಗ ಸರಿಯಾಗಿದೆಯೇ ತಿಳಿಸಿ:

     ಜಯಿಸಿ ಮೃತ್ಯುವ ಮರಳಿ ಬರಲು ವಿ
     ಜಯಿಗೆ ಕಾದಿರಲವಳು ಬಳಲಿದ
     ವಯಸು ಮೀರಿದ ಸತಿಯೆ ? ಗೆಳತಿ – ವರಿಸಿದಳನ್ಯನನು
     ಬಯಕೆ ಸಾಯಲು ವಿಧಿಯನೊಪ್ಪುತ
     ನಯದೆ ಹಾರೈಸಿ ಹಿಂದಿರುಗಿದ
     ದಯವು ಉಳಿಯಿತು ನನ್ನ ಮನದಾ ವೀರನಾಯಕಗೆ

     • ನಯದೆ | ಹಾರೈ | ಸಿ ಹಿಂ | ದಿರುಗಿದ

      “ಸಿಹಿಂ” ಎಂಬಲ್ಲಿ “ಲಗಂ” ಉಳಿದಿದೆ.

    • ರಾಮಚಂದ್ರರೇ, ಈಗ ಸರಿಯಾಗಿದೆಯೇ ತಿಳಿಸಿ:

     ಜಯಿಸಿ ಮೃತ್ಯುವ ಮರಳಿ ಬರಲು ವಿ
     ಜಯಿಗೆ ಕಾದಿರಲವಳು ಬಳಲಿದ
     ವಯಸು ಮೀರಿದ ಸತಿಯೆ ? ಗೆಳತಿ – ವರಿಸಿದಳನ್ಯನನು
     ಬಯಕೆ ಸಾಯಲು ವಿಧಿಯನೊಪ್ಪುತ
     ನಯದೆ ಹಾರೈಸಿ ನಡೆದಿರಲವ
     ದಯವು ಉಳಿಯಿತು ನನ್ನ ಮನದಾ ವೀರನಾಯಕಗೆ

     • ೬ನೇ ಸಾಲನ್ನೂ ತಿದ್ದಬೇಕು.

   • ಮತ್ತೂ ಹಲವು ತೊಡಕುಗಳುಳಿದಿವೆ….ನೇರವಾಗಿಯೇ ತಿಳಿಸುವೆ

 10. ಸಾಕು ಮಾಡಿದೆ ಭಾಮಿನೀ, ನೀ, ಮತ್ತೆ ಬರಲೇನೇ?

  ಜಯಿಸಿ ಮೃತ್ಯುವ ಮರಳಿ ಬರಲು ವಿ
  ಜಯಿಗೆ ಕಾದಿರಲವಳು ಬಳಲಿದ
  ವಯಸು ಮೀರಿದ ಸತಿಯೆ ? ಗೆಳತಿ – ವರಿಸಿದಳನ್ಯನನು
  ಬಯಕೆ ಸಾಯಲು ವಿಧಿಯನೊಪ್ಪುತ
  ನಯದೆ ಹಾರೈಸಿ ನಡೆದಿರಲವ
  ದಯೆಯುಳಿದು ಮನಕರಗಿತೆನಗಾ ವೀರನಾಯಕಗೆ

  ನಾನು ಷುರು ಮಾಡಿದ್ದು ಕಾಸ್ಟ್ ಅವೇ ಚಿತ್ರದ ನಾಯಕನ ಬಗ್ಗೆ ಒಂದು ಸಾನೆಟ್ ನಿಂದ, ಅದು ಹೇಗೆ ಭಾಮಿನಿಗೆ ಬಂದೆನೋ ತಿಳಿಯುತ್ತಿಲ್ಲ. ಅದೂ ಅಲ್ಲದೆ ಹದ ಆಗುವುದಕ್ಕೆ
  ಬಿಡದೆ ಪೋಸ್ಟ್ ಮಾಡಿದೆ. ಏನೋ ಒಂದು ಮುಗಿಸಿದ್ದಾಯಿತು. ತೊಂದರೆ ಕೊಟ್ಟಿದ್ದರೆ ಕ್ಷಮಿಸಿ.
  ಸಾನೆಟ್ ಈಗ ಮರೆತು ಹೋಗಿದೆ.

  • ಏನೋ ಒಂದು ಮುಗಿಸಿದ್ದಾಯಿತು – ಇನ್ನೂ ತಪ್ಪುಗಳಿರಬಹುದು.

  • ತಪ್ಪಿದ್ದರೇನಾಯ್ತು. ಒಂದಿಬ್ಬರನ್ನು ಬಿಟ್ಟರೆ ಉಳಿದವರೆಲ್ಲ ತಪ್ಪುಗಳನ್ನು ಮಾಡುತ್ತಲೇ ಇದ್ದೇವೆ. ಇದಕ್ಕೆ ಬೇಸರ ಮಾಡಿಕೊಳ್ಳಬೇಡಿ. ಸಾನೆಟ್ ಗೆ ಆದರೆ ಮತ್ತೆ ಜೀವ ಕೊಡಿ.

 11. ಬಳಿಗೆ ಸಾರುತ ಕರವ ಚಾಚುತ
  ತಿಳಿಯ ತಂಪಿನ ನೀರ ಹನಿಸುತ
  ಸೆಳೆವಳೆಲ್ಲರ ತನ್ನೆಡೆಗೆ ವಿಧವಿಧದ ಭಂಗಿಯಲಿ |
  ಸುಳಿದು ಕಾಡುತಲೆಲ್ಲರನು ತಾ
  ಬಲೆಯ ಬೀಸದೆ ಕೆಡವಿಕೊಳ್ಳುತ –
  ಲೆಳೆದುಕೊಂಬಳು ತೆಕ್ಕೆಯೊಳಗಡೆಗೀಕೆ ಕಾಮಿನಿಯೆ ?

  • ಕಾಂಚನ ಅವರ ಕವಿತೆ ತುಂಬ ಚೆಲುವಾಗಿದೆ. ಪದಪದ್ಧತಿ ಸೊಗಸಾಗಿದೆ.ಇಲ್ಲಿರುವ ಸಾವಯವೋಪಮಾಲಂಕಾರ ಕೂಡ ರಮಣೀಯವಾಗಿದೆ.
   ಕಡೆಯಲ್ಲಿ ಕಾಮಿನಿ ಎನ್ನುವುದಕ್ಕೆ ಬದಲಾಗಿ ಮೋಹಿನಿ ಎಂದಿದ್ದರೆ ಮತ್ತೂ ಚೆನ್ನವೇನೋ. ಏಕೆಂದರೆ ನಾವೆಲ್ಲ ಬಲ್ಲ ದೆವ್ವದ ಕಥೆಗಳ ಪ್ರಕಾರ ಮೋಹಿನಿ ಎನ್ನುವ ದೆವ್ವವು ಇಂಥ ವಶೀಕರಣವನ್ನು ಮಾಡುವ ಕುಪ್ರಸಿದ್ಧಪಿಶಾಚ.:-)

   • ಧನ್ಯವಾದಗಳು. ತಾವು ಸೂಚಿಸಿದ ಸೂಕ್ತವಾದ ಪದವನ್ನಿಲ್ಲಿ ಬಳಸಿದ್ದೇನೆ.
    ಬಳಿಗೆ ಸಾರುತ ಕರವ ಚಾಚುತ
    ತಿಳಿಯ ತಂಪಿನ ನೀರ ಹನಿಸುತ
    ಸೆಳೆವಳೆಲ್ಲರ ತನ್ನೆಡೆಗೆ ವಿಧವಿಧದ ಭಂಗಿಯಲಿ |
    ಸುಳಿದು ಕಾಡುತಲೆಲ್ಲರನು ತಾ
    ಬಲೆಯ ಬೀಸದೆ ಕೆಡವಿಕೊಳ್ಳುತ –
    ಲೆಳೆದುಕೊಂಬಳು ತೆಕ್ಕೆಯೊಳಗಡೆಗೀಕೆ ಮೋಹಿನಿಯೆ ?

 12. ಭಾಮಿನಿಯಲ್ಲಿ ಒಂದು ಪ್ರಯತ್ನ:

  ಈಸಲಳುಕುತ ತೀರದಲ್ಲಿರೆ,
  ಮಾಸಲೊಲ್ಲದ ಹುರುಪಿನಿಂ ಪ್ರತಿ-
  ಪ್ರಾಸಸದೃಶದಿ ಮೂಡದಿರುವುದೆ ಕ್ಲೇಶದಾವಳಿಯು?
  ವಾಸವಾಗಿಹ ಭಯವನಟ್ಟುತ
  ಧ್ಯಾಸದಿಂದಲಿ ಮನವ ಮೀಯಿಸೆ
  ರಾಸವಾಡಳೆ ಹಾಸಭಾವದಿ ವಿಜಯಲಕ್ಷ್ಮಿಯು?

  • ಮನ್ನಿಸಿ. ಕೊನೆಯ ಸಾಲನ್ನು “ರಾಸವಾಡಳೆ ಹಾಸಭಾವದಿ ಜಯಲಕ್ಷ್ಮಿಯವಳ್?” ಎಂದು ಓದಿಕೊಳ್ಳಬೇಕಾಗಿ ಪ್ರಾರ್ಥನೆ. 

  • ಶ್ರೀವತ್ಸ ಅವರಿಗೆ ಸ್ವಾಗತ. ಪದ್ಯಪಾನದಲ್ಲಿ ನಿಮ್ಮ ಮೊದಲ ಹೆಜ್ಜೆಯೇ ಬಲುಮೆಚ್ಚಿಗೆ ತರುವಂತಿದೆ. ಧನ್ಯವಾದ. ಪ್ರಕೃತದ ನಿಮ್ಮ ಭಾಮಿನೀಪದ್ಯದಲ್ಲಿ ಒಂದೆರಡು ಚಿಕ್ಕ ಲೋಪಗಳಿವೆ. ಅದನ್ನು ಸವರಿಸಿಕೊಂಡಲ್ಲಿ ಎಲ್ಲ ಮತ್ತೂ ಚೆಲುವಾದೀತು.
   “ಪ್ರತಿಪ್ರಾಸ” ಎಂಬಲ್ಲಿ ಪ್ರಾ ಎನ್ನುವುದು ಶಿಥಿಲದ್ವಿತ್ವವಾಗದು. ಕನ್ನಡ+ಸಂಸ್ಕೃತ ಶಬ್ದಗಳು ಪಕ್ಕ ಪಕ್ಕದಲ್ಲಿ ಬಂದು ಸಮಾಸವಾಗದಿದ್ದಾಗ ಮಾತ್ರ ಶಿಥಿಲದ್ವಿತ್ವದ ನಿಯಮ ಸಲ್ಲುತ್ತದೆ. ಆದರೆ ಎಲ್ಲ ಸಂಸ್ಕೃತಪದಗಳೇ ಇದ್ದಾಗ ಅಲ್ಲ. ಪ್ರತಿಪ್ರಾಸ ಪದದಲ್ಲಿ ಎರಡೂ ಸಂಸ್ಕೃತಶಬ್ದಗಳೇ. ಅದೇ “ಮಾಡದಿರುವುದೆ ಕ್ಲೇಶದಾವಳಿಯು”
   ಎನ್ನುವಲ್ಲಿ ಶಿಥಿಲದ್ವಿತ್ವವನ್ನು ಒಪ್ಪಬಹುದು. ಇದು ಸರಿಯಾಗಿದೆ.
   ಕೊನೆಯ ಸಾಲಿನಲ್ಲಿ ನಿಮ್ಮ ತಿದ್ದಾವಣೆಯೂ ತಪ್ಪಾಗಿದೆ. ಎರಡು ಕರಡುಗಳಲ್ಲಿಯೂ ಛಂದಸ್ಸು ಎಡವಿದೆ:-) ಅದನ್ನು ಹೀಗೆ ಸವರಿಸಬಹುದು:
   ರಾಸವಾಡಳೆ ಹಾಸಭಾವದೆ ವಿಜಯಲಕ್ಷ್ಮಿಯವಳ್!

   ಇರಲಿ, ನಿಮ್ಮ ಪದ್ಯಶೈಲಿ ಚೆಲುವಾಗಿದೆ, ಪದಶಯ್ಯೆ ಸೊಗಸಾಗಿದೆ. ಆದರೆ ಅರ್ಥಸ್ಪಷ್ಟತೆ ಮತ್ತು ಸ್ವಾರರಸ್ಯಕ್ಕೆ ಹೆಚ್ಚಿನ ಗಮನವಿಟ್ಟು ಬರೆದರೆ ಇನ್ನೂ ಒಳಿತು:-).ಧನ್ಯವಾದ

   • ನಿಮ್ಮ ಮಾರ್ಗದರ್ಶನ ಹಾಗೂ ನಲ್ನುಡಿಗಳಿಗಾಗಿ ಧನ್ಯವಾದಗಳು, ಗಣೇಶ್ ಸರ್. ನೀವು ಗಮನಿಸಿರುವ ಲೋಪಗಳು ಮುಂದಿನ ಪ್ರಯತ್ನಗಳಲ್ಲಿ ಮರುಕಳಿಸದಿರುವಂತೆ ಯತ್ನಿಸುತ್ತೇನೆ. ವಂದನೆಗಳು.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)