Apr 212012
 

ಬೇಲೂರಿನ ಈ ಶಿಲಾಬಾಲಿಕೆಯ ಬಗ್ಗೆ ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯ ರಚಿಸಿರಿ ::

ಬೇಲೂರಿನ ಶಿಲಾ ಬಾಲಿಕೆ

  43 Responses to “ಪದ್ಯಸಪ್ತಾಹ – ೧೭ – ಚಿತ್ರಕ್ಕೆ ಪದ್ಯ”

  1. ऊत्पतसि यन्न कीर
    त्वमिदानीमपि वधूकराम्भोजात् ।
    तन्मन्ये तव योग्यं
    तत्त्तनुरुचिपञ्जरे निबद्धस्य ॥

    • ಒಳ್ಳೆಯ ಪ್ರಾಬಂಧಿಕಶೋಭೆಯುಳ್ಳ ಆರ್ಯೆಯನ್ನು ಬಹೂಕರಿಸಿದ ಶಂಕರರಿಗೆ ಧನ್ಯವಾದ. ಅವರ ಪದ್ಯಕ್ಕೆ ಎಂದಿನಂತೆ ನನ್ನ ಕನ್ನಡೀಕರಣ:
      ಇಂದೂ ಪಾರದೆ ಪುರುಳಿಯೆ!
      ಸುಂದರಿಯಿವಳಗ್ರಹಸ್ತದೊಳೆ ಸಂದುದು ಬಲ್|
      ಚಂದಮಲಾ ನಿನಗಾಯ್ತೀ
      ಸೌಂದರ್ಯಮೆ ಪೊಳೆವ ಪಂಜರಂ ಪಿಂಜರಿತಂ||

      (ಪುರುಳಿ = ಗಿಳಿ, ಅಗ್ರಹಸ್ತ + ಮುಂಗೈ, ಪಿಂಜರಿತ = ಎಲ್ಲೆಡೆ ಹರಡಿದ)

  2. “That you, my dear parrot, do not fly away even now from the hand of this maiden does not surprise me. Aren’t you not caught in the cage of her beauty?”

  3. oops, should have been ‘Aren’t you cought’

  4. Sorry again should have been ‘Aren’t you caught’

  5. ಭಾಮಿನಿ :

    ಅಂದಗಾತಿಯ ಚಂದನೋಡಲು
    ಬಂದು ಕುಳಿತಿದೆ ಹಕ್ಕಿ ಮುದದೊಳು
    ಸುಂದರದ ಜಾಲರಿಯ ಕುಸುರಿಗಳೊಳಗೆ ಲತೆಗಳವು |
    ಚಂದಿರಾನನೆಯವಳ ಸಖ್ಯವ
    ನಿಂದು ಸಖಿಗಣ ಸೇವಿಸಲು ಅರ
    ವಿಂದ ಲೋಚನೆ ಬಳಿಕಿನಿಂದಳು ಸಿಂಹಕಟಿಯವಳು ||

    ಭೋಗ :
    [ಸುಂದರಿಯನ್ನು ಕಂಡ ಹಕ್ಕಿ ಸಂತಸದಲ್ಲಿ ಕೂಗುತ್ತಿರುವಾಗ ಮಂದಮಾರುತ ಅಂಬೆಗಾಲನಿಕ್ಕಿ ನಿಧಾನವಾಗಿ ಹರೆಯುತ್ತಾ ಇದ್ದ ಎಂಬ ಕಲ್ಪನೆ]

    ಕೈಯ್ಯಮೇಲೆ ಹಕ್ಕಿ ಕುಳಿತು
    ಮೈಯ್ಯಮಾಟ ನೋಡುತಿತ್ತು
    ಹುಯ್ಯಲೆಬ್ಬಿಸುತ್ತ ಕುಣಿದು ಬಹಳ ಹರುಷದಿ |
    ಸುಯ್ಯನೆಂದು ಸುಳಿದ ಮರುತ
    ಪೆಯ್ಯಗಾಲನಿಕ್ಕಿ ಹರಿದ
    ತೈಯ್ಯ ಥಕಿಟವೆನುತ ಮನದಿ ಭರತವರುಷದಿ ||

    • ಭಟ್ಟರೆ, ನಿಜಕ್ಕೂ ತುಂಬ ಸೊಗಸಾದ ಎರಡು ವಿಭಿನ್ನಷಟ್ಪದಿಗಳನ್ನೇ ಕೊಟ್ಟಿದ್ದೀರಿ. ಧನ್ಯವಾದಗಳು.

  6. ಶುಕ ಸಂದೇಶವದೇನೆ ಗುಟ್ಟನೊರೆಯಲ್ ಸಾಮೀಪ್ಯಸಂವಾದ? ಮಾ-
    ರ್ಮಿಕ ಸಂಕೇತವೆ? ಯಾಣ್ಮನಂಕುಣಿಸಿ ಕೈಯೊಳ್ವವಶ್ಯನಂಮಾಳ್ಪೆಯೇಂ?
    ಸ್ವಕಥಾವಾಚ್ಯ ಪದಂಗಳೆಲ್ಲ ಶುಕರೂಪಂಬೊತ್ತು ನಿಂದಿರ್ಪುದೇಂ?
    ಶುಕರೂಪಿಂದಿನಿಯಂ ಬರಲ್ಮುದದಿ ಸಂಭಾಷಿಪ್ಪೆಯೇಂ ಸಾಗುತುಂ

    • ಆಗಲೂ,ಈಗಲೂ ಮೌನವೇ ಉತ್ತರ. ತುಂಬ ಹಿಡಿಸಿತು, ಚಂದ್ರಮೌಳಿ.

      • ಪದಗಳ ಕರ್ಮೇಂದ್ರಿಯಗಳ್
        ಒದಗುತಲೆದೆಕದವತಟ್ಟೆ ಭಾವಜ್ಞಾನಂ
        ಪುದಿದಾಹಾಯೆನೆ ಧನ್ಯತೆ
        ಮುದಮೌನದಿ ವಂದಿಪೆನಿದೊ ಪದ್ಯದಿ ಜೀವೆಂ

    • ಸಂದೇಹಸಂದೋಹಸಮಗ್ರರೂಪದಿಂ
      ಸಂದಿರ್ದೊಡಂ ಪದ್ಯಮಿದೆಂತು ಚೋದ್ಯಮಯ್!
      ಸಂದೇಹಲೇಶಕ್ಕವಕಾಶಮಿಲ್ಲದೊಂ-
      ದಂದಂ ದಲೊಪ್ಪಲ್ ಸಲೆ ಚೆಂದಮಾದುದಯ್!!

  7. ಡಿ ವಿ ಜಿ ಯವರ ಏನೇ ಶುಕಭಾಷಿಣಿ ಯನ್ನು ನೆನಪಿಸಿಕೊಂಡು ಬರೆದದ್ದು:

    ಸುದ್ದಿಯದೇನೆನಲುಲಿಯಿತು
    ಕದ್ದು ತಿಳಿಯಿತೆನಗೆ ಮುದ್ದು ಮುಖದ ಚೆಲುವೆಯೇ
    ಸದ್ದಿರದೆ ನಡೆದು ಬರುತಿಹ
    ನಿದ್ದೆಗೆ ಜಾರದೆಲೆ ಕಾಯುವಳ್ ನೀನಾಗೈ

    ಇನ್ನೊಂದು ಪ್ರಯತ್ನ:

    ತನ್ನ ಗೆಳೆಯನೊಡಗೂಡಿದ
    ನಿನ್ನೆಯದತಿ ಮಧುರ ರಾತ್ರಿಯಾ ಶುಕ ಹೇಳಲ್
    ಕನ್ನೆಯು ವೇಗದೆ ಕರೆಯೈ
    ಚೆನ್ನಿಗನೆನಲೊದರಿ ಪುಕ್ಕವನದು ಜಿಗಿಯಿತೈ

    • Nice!! 🙂

    • ತುಂಬ ಚೆನ್ನಾದ ಕಂದಗಳೆರಡನ್ನು ನೀಡಿದ್ದೀರಿ. ಧನ್ಯವಾದಗಳು.
      ಕೆಲವೊಂದು ಸಣ್ಣ ಸವರಣೆಗಳು:
      ಮೊದಲ ಪದ್ಯದಲ್ಲಿ ಮುದ್ದುಮೊಗ ಎಂದು ತಿದ್ದಿದರೆ ಮತ್ತೂ ಚನ್ನ, ಅರಿಸಮಾಸವೂ ಅಳಿಯುತ್ತದೆ. ನೀನಾಗೌ ಎನ್ನುವುದು ಸ್ತ್ರೀಲಸ್ಗಕ್ಕೆ ಉಚಿತವಾದ ಬಳಕೆ. ಆದರೆ ಎರಡನೆಯ ಪದ್ಯದಲ್ಲಿ ಪ್ರಯೋಗ ಸರಿಯಿದೆ. ಅಲ್ಲಿ ಶುಕವುಲಿಯಲ್ ಎಂದು ಸವರಿಸಿದರೆ ಮತ್ತೂ ಚೆನ್ನಾಗಿ ಹಳಗನ್ನಡದ ಹದ ಕುದುರಿ ಕಿವಿಗೆ ಹಿತವಾಗುತ್ತದೆ.

  8. ಹಾರಿ ಪೋಗಲು ಬೇಡ ಶುಕ ಸಖನೆ ನೀನೀಗ
    ಸಾರಿ ಪೇಳಿಹೆ ಶಕುನವೆನ್ನಿಷ್ಟದ
    ಹೀರೆ ಮಧುವನು ದುಂಬಿ ತಂಪೆರೆವ ಗಾಳಿಯದು
    ಮೀರದೇ ಕಾಯ್ವಂತೆ ಹೂವಿನಾಸೆ

    • ಅಪ್ಪಟವಾದ ಕಾವ್ಯವನ್ನೇ ಕೊಟ್ಟಿದ್ದೀರಿ. ಧನ್ಯವಾದಗಳು. ತುಂಬ ಧ್ವನಿಪೂರ್ಣವಾದ ರಚನೆಯಿದು. ಅತಿಸಂಕೀರ್ಣವಾದ ಭಾವಸ್ವಾರಸ್ಯವಿರುವಂತೆ ಸರಳವಾದ ಭಾಷೆ-ಬಂಧಗಳಲ್ಲಿ ಒಳ್ಳೆಯ ವಿಕ್ರಮವನ್ನೇ ಸಾಧಿಸಿದ್ದೀರಿ. ನನಗೆ ಪದ್ಯಪಾನವು ಹೀಗೆ ರಸವತ್ಕಾವ್ಯನಿಧಾನವಾಗಿ ರೂಪುಗೊಳ್ಳಬೇಕೆಂಬ ಹಂಬಲವಿದೆ.

    • ಒಂದೊಂದು ಪದಕ್ಕೂ full mileage ಕೊಟ್ಟಿದ್ದೀರಿ. ತುಂಬ ಚೆನ್ನಾಗಿದೆ.

  9. ಪಾಡುವ ಹಕ್ಕಿಯೆ ಬಾರೆಲೆ ನೀನು
    ಬಾಡಿನ ದಾರಿಯ ಕಾದಿಹೆ ನಾನು

    😉

    • ಆಡುವ ಹಕ್ಕಿಯು ಹಾಡುವುದೇನು?
      ಬಾಡೂಟಕೆ ನಲ್ಲನು ಬಹನೇನು?:-)

      • ಗಿಳಿಯೂ ಕಲಿತೊಡೆ ಮಾಡದೆ ಗಾನಂ?
        ಬಾನಾಡಿಯು ತಾನಾಗದೆ ಬೋನಂ? 🙂

        • ಗಾಯಕಿಯೋರ್ವಳು ಸಾರಿದಳಿಂತು
          ಬಾಯಿ ಕುದುರಿದುದು ಪಿಕಗಳ ತಿಂದು

          • ಮಳೆಗಾಲದವರೆಗುಲಿಯುವೆ ಸರಮಂ
            ಚಳಿಗಾಲದಿ ನಾ ಸೇರುವೆ ಗೂಡಂ

  10. ಶುಕಭಾಷಿಣಿ ಚಿರಯೌವ್ವನೆ-
    ಯಕಳ೦ಕದ ಕಲೆಯಸೃಷ್ಟಿಯಲಿ ಶಿಲ್ಪಿಯುತಾ೦
    ಪ್ರಕಟನಿಹ೦ ಸ೦ತತವು೦
    ಜಕಣನ ಜಸದಾ ಪರ೦ಪರೆಯನ೦ ಸಾರಲ್

    • ಸ್ವಲ್ಪ ಭಾಷಾಸಂಸ್ಕರಣ ಅವಶ್ಯ. ಉಳಿದಂತೆ ಪದ್ಯವು ಅನವದ್ಯವೇ.

  11. ಉತ್ಪಲಮಾಲೆಯಲ್ಲಿ ಒಂದು ಪದ್ಯ:

    ಆಸ್ತಿಕನಾಸ್ತಿಕಾಗಮವಿಚಾರಣಕಾಸ್ಪದಮಪ್ಪ ಮಧ್ಯದಿಂ
    ಪ್ರಸ್ತುತೆಯಪ್ಪ ನೀಂ ಶುಕದೊಳಾತನ ತಾತನ ಸೂತ್ರವಾವುದಂ|
    ವಿಸ್ತರಿಸಿರ್ಪೆಯೌ? ಮದನಸೂತ್ರಕೆ ಭಾಷ್ಯವರೇಣ್ಯಮಪ್ಪವೊಲ್
    ಸ್ವಸ್ತಿಕಪಾದಸಂಸ್ಥಿತವಿಲಾಸಿನಿ! ಹಾಸಿನಿ! ನೀನೆ ಸಲ್ಲುತುಂ||

    ಕಂದದಲ್ಲಿ ಇನ್ನೊಂದು ಪ್ರಯತ್ನ:

    ಶಿಲೆಗಳ ಕಲೆಗಳ ಕತಮಂ
    ಕೆಲದೊಳ್ ಸಂದಿರ್ಪ ಕೀರಕುಲಿಯುವ ಭರದೊಳ್|
    ಶಿಲೆಯಾದೆಯೇಂ ಮುಗುದೆ! ಮೇಣ್
    ಕಲೆಗೊಲಿಯದ ಕಾದಲಂಗೆದುರ್ನೋಳ್ಪುದರಿಂ?

    • ತುಂಬ ಹಿಡಿಸಿದವು.

    • ಮದನಿಕೆಗಮಧ್ಯಾತ್ಮ ಬ್ರಹ್ಮಸೂತ್ರವ ತೊಡಿಸಿ
      ಮದನಸೂತ್ರವ ಕರಣಶಾಸ್ತ್ರದೊಡವೆಗಳ
      ಎದೆನೊಂದ ಮುಗುದೆ ಶಿಲೆಯಾದ ನವಭಾವ ಮಿಗೆ
      ಮುದವೀವ ಪದ್ಯವೆರಡುಂ ಸೊಗಸಿತೈ

  12. ಗಿಳಿ ನೀನೆಂಮಗೆ ತಂದೆಯೇಂ ವಿಷಯಮಂ ಕಾದಿರ್ಪೆನಾಂ ಕೌತುಕೀ
    ತಿಳಿಯಾಗಿರ್ಪುದೆ ನನ್ನ ನಲ್ಲನ ಮನಂ ಸೌಂದರ್ಯದಾಸ್ವಾದಕಂ ?
    ಸುಳಿದಾಡಿರ್ಪರೆ ಜಾರೆ ರಂಡೆ ಶನಿಗಳ್ ಬೀಸಿರ್ಪರೇಂ ಮಾಯೆಯಂ ?
    ಬಳಿನಾಪೋಗಲು ಪೇಳ್ವನೇಂ ಸವಿನುಡಿಂ ಮೇಣರ್ಪನೇಂ ಕ್ರೋಧಿತಂ ?

    ಗಂಡಾಗಿರ್ದೊಡೆ ದೇಹಕಾಮಸುಖಕೆಂ ನೀರಾಗುವರ್ ಚಂಚಲರ್
    ಭಂಡರ್ ದಕ್ಕಲು ಪೆಣ್ಗಳಂ ಬಿಡುವರೇಂ? ತೋಳ್ತಕ್ಕೆಯೊಳ್ ಸೇರ್ಪರೈ
    ಗಂಡನ್ ಯೆನ್ನವನೆಲ್ಲರಂತದಿರನೆಂ ಕಂಡಿರ್ದರೂ ಕಾತುರಂ
    ಹೆಂಡರ್ಗೆಂದಿಗುಮಿಂಥ ಸಂಶಯಗಳೇ ಕಾಡಿರ್ಪುವೇಂ ಪೇಳ್ ಶುಕಂ

    [ಶುಕದ ಉತ್ತರ ಮುಂದಿನ ಕಂತಿನಲ್ಲಿ]

    • ಮದಿಸಿದ ಆನೆ ಮತ್ತು ಚೆಲ್ಲಾಟವಾಡುವ ಹುಲಿಗಳನ್ನು ಬಳಸಿ ರಾಮ್ ಆರಂಭಿಸಿದ ಪದ್ಯಮಾಲೆ ಭಯಾನಕವಾಗಿದೆ:-) ಒಳ್ಳೆಯ “ಗಾಂವಟಿ” ಬೈಗಳೂ ಇವೆ!! ಇದೆಲ್ಲ ನನಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ ಸ್ವಲ್ಪ ವ್ಯಾಕರಣದ ಕಡೆ ಗಮನ ಹರಿಯಬೇಕು. ಗಿಳಿ-ಹುಲಿಗಲ ಮಧ್ಯೆ ಪಾಪ, ಅದಕ್ಕೆ ಕ್ಲೇಶ ಬಂದಂತಿದೆ:-)

    • ವ್ಯಾಕರಣದ ತೊಡಕುಗಳನ್ನು ಮುಖತಃ ತಿಳಿಯುವುದೇ ಸೂಕ್ತವೆನಿಸುತ್ತದೆ [ ನನಗಾಗೇ ಸರಿಯಾಗಿ ತಿಳಿಯಲಿಲ್ಲ 🙁 ]

      ಈಗ ಶುಕದ ಉತ್ತರ ::

      ಚೆಲುವೆ ನೀನಿಂದು ಸಂಶಯಗಳಿಂದಲೇಕೆ ಕೊರುಗುತಿರುವೆ
      ನಲವು ನಿನ್ನೊಡಲಲಿರುವುದೆಂದು ನಾ ಬಲ್ಲೆನೆಲ್ಲವೊರೆವೆ
      ಒಲವು ನಿನ್ನೊಳೇಮೆಂದದಿಟ್ಟಿರುವ ನಿನ್ನ ಗಂಡ ಚಿನ್ನ
      ತಲೆಯ ಕಾಡಿಪುದು ಬರಿದೆ ಉದ್ವೇಗ ಬೇಡ ನನ್ನ ರನ್ನ || ೧ ||

      ಬೇರೆ ಪೆಣ್ಗಳಂ‌ ನಿನ್ನ ನಲ್ಲನೆಂದೆಂದು ಕಾಡಲಿಲ್ಲ
      ಸೂರೆ ಮಾಡೆ ಮೋಹದಲಿ ಕೂಡಲವನೆಂದು ಬಯಸಲಿಲ್ಲ
      ಸೂರಿ ಮೂಡುವಾ, ಮುಳುಗೊ ದೇಶಗಳಲೆಲ್ಲ ತಿರುಗಿ ಬಂದೆ
      ಭೂರಿ ಸಂಪನ್ನ ಸಮದ ಗುಣವಿರುವರೆಲ್ಲುಮಿಲ್ಲವೆಂದೆ || ೨ ||

      ಒಮ್ಮೆ ನಿನ್ನ ಸೊಬಗನ್ನು ಕಂಡವನು ಮತ್ತೆ ಮರೆವನೇನು
      ಚಿಮ್ಮಿ ಸಗ್ಗದುತ್ತುಂಗದಾಗಸಕೆ ಕೆಳಗೆ ಜಾರ್ವನೇನು
      ತಮ್ಮಲಮೃತವದಿರಲು ಕೆಸರಿನಾ ನೀರ ಕುಡಿವರೇನು
      ನೆಮ್ಮದಿಯ ಬಿಟ್ಟು ಲಜ್ಜೆತೊರೆದು ದಾಸಿಯೆಡೆ ಪೋಪರೇನು || ೩ ||

      ದರ್ಪಣವನು ನೀನೀಕ್ಷಿಸಲ್ಕೆ ನೀ ನಿನಲೆ ಮೋಹಗೊಳ್ತೆ
      ಅರ್ಪಿಸುತ್ತ ನಿನ್ನೆಲ್ಲತನವ ನೀ ನಿನ್ನೆ ಕೊಲ್ವೆ ಯಲ್ತೆ
      ಸರ್ಪದಾ ನಲುಗು ನಿನ್ನ ಮೈಯೊಳಗದೆಂತು ನುಲುಗಿತೌ ತೊ –
      ಡರ್ಪೆ ನಿನ್ನ ಮೈಯನ್ನು ತೊಡವುಗಳು ಸಾಲಿನಲ್ಲಿ ನಿಂತೊ || ೪ || [ತೊಡರ್ಪು = ಆಲಿಂಗನ, ತೊಡವು = ಒಡವೆ]

      ಸರಿ ಸಮ ಪ್ರಮಾಣಗಳನೆಲ್ಲೆಡೆಗೆ ಹಂಚೆ ಸೊಬಗ ಸೂರೆ
      ಪರಿಯ ಸೂತ್ರಮಂ ರಚಿಸೆ ಸೋತ ಗಣಿತಜ್ಞರೆಲ್ಲ ಜಾರೆ
      ಕಿರಿಯ ಸೊಂಟ ಹಿರಿದಾದವಂಗಗಳನೆಂತು ಜೋಡಿಸಿರ್ಕೌ
      ಸರನೆ ಸರಿವ ನಿನ್ನಂಗವಸ್ತ್ರ ತಾಕಾರ್ಯಮೆಂತು ಮಾಳ್ಗೌ || ೫ ||

      ಹುಬ್ಬು ತೀಡಿ ತಾನೆಳೆಯುತೆಸೆವ ಕಣೆಯಂತ ಕಣ್ಣ ನೋಟ
      ಅಬ್ಬ ನೀಳನಾಸಿಕದ ಹರಿತ ತರಿದಿರಿಸೆ ಕಾಂಬರಾಟ
      ಹಬ್ಬವನವರತ ಮೊಗಕೆ ತೋರ ತುಟಿಯೆಂದು ಚುಂಬಿಸಲ್ಕೆ
      ಕಬ್ಬಿಗನಿಗದೊಂದೊಂದು ಅಂಗವೊಂದೊಂದು ಕಾವ್ಯಮಲ್ತೆ || ೬ ||

      • ಅಬ್ಭ ಯೇನಿದೈ ಶುಕದ ಮುಖದಿನೇಂ ಯುಕುತಿ ಪಡೆದ ನುಡಿಯೋ
        ಬೊಬ್ಬಿರಿದ ಭಾವ ಕಡಲಮೇಲಿನಿಂ ಹಬ್ಬಿದಲೆಯೆ ಗುಡಿಯೋ
        ಕಬ್ಬ ಕಬ್ಬಾಗಿ ಗೇಣು ಗೇಣಿಗಂ ತಬ್ಬುತೇರಿ ಸಿಹಿಯ
        ನಿಬ್ಬರಂ ರಾಮಚಂದ್ರಮಾನಸಂ ಪಡೆದು ಸೊಗಡ ಮಹಿಯ

        • ಮುನ್ನ ಗಾಂವಟಿಯ ಬೈಗಳೆಲ್ಲ ನೀನುಲಿಯಬೇಡವೆನಲು
          ತನ್ನ ಮನದಳಲನೆಂತು ತಾನುಡಿವೆನೆಂದು ಬಾಲೆ ನಗಲು
          ಇನ್ನು ನಾಲ್ಕಾರು ಪದ್ಯಗಳನು ತಾನೊರೆವೆನೆಂಬ ಶುಕವ
          ಕನ್ನೆ ರೂಪಕಿನ್ನೆಸಗುವಪಚಾರವೆಂಬ ಗಿಳಿಯ ಹಠವ

          ಹೇಗೊ ನಿಲ್ಲಿಸುತ, ಬಾಯಿ ಮುಚ್ಚಿಸುತ, ಬರೆದೆನಿಲ್ಲಿ ಗೆಳೆಯ
          ಹೀಗೆ ಮೆಚ್ಚುತಲೆ ನನ್ನ ಮನವನ್ನೆ ಶಂಕಿಸುವುದು ಸರಿಯ ?
          🙂

        • ರಾಮ್,

          ಶುಕ ಮತ್ತು ಅ೦ಗನೆಯ ಸ೦ವಾದ ಬಹಳ ಚೆನ್ನಾಗಿದೆ 🙂

  13. ಶುಕಭಾಷಿಣಿಯನ್ನು ನೋಡಿದ ಕೂಡಲೆ, ಡಿ ವಿ ಜಿ ಅವರ “ಏನೇ ಶುಕ ಭಾಷಿಣಿ” ಮನಸ್ಸಿಗೆ ಬಂದದ್ದು ಆಶ್ಚರ್ಯವೇನಿಲ್ಲ. ಶುಕಸಂದೇಶವನ್ನು ಕಳಿಸಿದಾಗಲೂ ಬಳಿ ಬಾರದ ಚೆನ್ನಿಗನ ಮೇಲೆ ಪ್ರೀತಿಯಿಂದ, ಮತ್ತೆ ತುಸು ಹುಸಿ ಕೋಪದಿಂದ ಎರಡು ಷಟ್ಪದಿಗಳು. ಗಣೇಶರು ಹಿಂದೆ ಹೇಳಿದಂತೆ ಸ್ವಲ್ಪವಾದರೂ ನಿಬಿಡ ಬಂಧವನ್ನು ತರಲು ಪ್ರಯತ್ನ ಮಾಡಿರುವೆ.

    ಪದ್ಯ ಶುಕ ಭಾಷಿಣಿಯ ಮೇಲಿರಬೇಕಿಂದಿದ್ದರೂ ನಾಯಕ ಚೆನ್ನಿಗನಾಗಿ ಹೋದದ್ದು ನನ್ನ ತಪ್ಪಲ್ಲ!

    ತುಸು ಪ್ರೇಮದಿಂದ:

    ಹೊಳೆವ ಕಂಗಳ ಚೆಲುವೆ ಬಣ್ಣದ
    ಗಿಳಿಯ ಕೈಯಲಿ ಹಿಡಿದ ಸೊಬಗಿಯಿ-
    ವಳನು ಮರೆತಿಹ ನೀನದೆಂತಹ ದೇವನಾಗುವೆಯೋ?
    ಎಳೆಯ ಮನಸಿಗೆ ಘಾಸಿ ಮಾಡಿ ಹ
    ದುಳವ ನೀಗಿಹೆಯಲ್ಲ! ಬೇಗನೆ
    ಕಳೆಯಲಿಕೆ ಬಾ ಮುಗುದೆ ಮನಸಿನ ದುಗುಡವೆಲ್ಲವನು!

    ತುಸು ಕೋಪದಿಂದ, ಮತ್ತೆ ಶುಕಭಾಷಿಣಿಗೆ some worldly-wise advice:

    ಹೊಳೆವ ಕಂಗಳ ಚೆಲುವೆ ಬಣ್ಣದ
    ಗಿಳಿಯ ಕೈಯಲಿ ಹಿಡಿದ ಸೊಬಗಿಯಿ-
    ವಳನು ಮರೆತವನಾವ ದೇವನದೆಂಥ ಚೆನ್ನಿಗನು?
    ಎಳೆಯ ಜೀವವ ನೋಯಿಸುತ್ತ ಹ
    -ದುಳವ ನೀಗಿಹನಲ್ತೆ! ಕೇಡಿ ದು
    -ರುಳನ ನೆನಹನು ತೊರೆದು ನೆಮ್ಮದಿ ಗಳಿಸು ನೀ ಹೆಣ್ಣೆ !

    -ಹಂಸಾನಂದಿ

    • ಶುಕಭಾಷಿಣಿಯೊಡವರಿದೀ
      ನಿಕಟಮನೋಹಾರಿಯಪ್ಪ ಹಂಸಾನಂದಿ-
      ಪ್ರಕಟಿತಪದ್ಯಂ ಹೃದ್ಯಂ
      ಸುಕುಮಾರತೆಯುಳಿಸಿಕೊಂಡರೂ ನಿಬಿಡಮಲಾ!!

  14. ಒಂದು ವೃತ್ತವನ್ನು ಬರೆಯುವ ಪ್ರಯತ್ನ ಇಲ್ಲಿದೆ. ತಪ್ಪುಗಳಿದ್ದರೆ ದಯವಿಟ್ಟು ತೋರಿಸಿಕೊಡಿ.

    ಮತ್ತಕೋಕಿಲವಲ್ಲವೈ ಸಖಿ ಚೆಂದ ಮಾತಿನ ಹಕ್ಕಿ ನಾ
    ಮತ್ತದೇನನು ಹೇಳಬೇಕಿದೆ ಚೆನ್ನಕೇಶವ ನಲ್ಲಗೆ?
    ಸುತ್ತಮುತ್ತಲು ಯಾರುಮಿಲ್ಲವು ಮೆಲ್ಲ ನೀ ನುಡಿ ಬೇಗನೆ
    ಉತ್ತರಿಲ್ಲದೆ ಸುಮ್ಮನಿದ್ದರದೇನ ಪೇಳಲಿ ಚೆನ್ನಗೆ?

  15. A very moot point.

    ಕೇಳ್ದಾಗಳ್ ಘನ ಮಶ್ಚಶಾಸ್ತ್ರಿಯನು ನಾಂ| ಪುಮ್ಮೀನ ಗುರ್ತೇನದೈ
    ಪೇಳ್ದಾತನ್ ಸುಲಭಂ ವಿವಿಕ್ತಗೊಳಿಸಲ್| ಪುಂಪೆಣ್ಗಳಂ ಮೀಂಗಳೊಳ್
    ಎಳ್ದಾಡುತ್ತೆ ತಿನಲ್ಕೆ ಗಂಡುಹುಳುವಂ| ಗಂಡೆಂಬರಾ ಮೀನನುಂ
    ನೋಳ್ದಾಗಳ್ ಕ್ರಿಮಿಲಿಂಗವನ್ ಗುರುತಿಸಲ್| ನಾನಲ್ಲ ಕೀಡಾವಿದಂ

    ಹೋಮೊ-ಸೇಪಿಯನರುಂ ಸರಿಪೇಳ್ವೆಂ
    ಆ ಮಹಾಶಿಲೆಯು ಪೆಣ್ಣದು ಸತ್ಯಂ
    ಭಾಮೆಕೈಯೊಳಿಹ ಕೀರದ ಲಿಂಗಂ
    ಪಾಮರಂ ತಿಳಿಯೆನಾ ಖಗಗಾಥಂ

    • ಕೀರದ ಲಿಂಗದ ಚಿಂತೆಯದೇನೈ
      ತೋರದಿರೇ ಅದು ಪಾಮರರೇನೈ
      ಮೀರಿದ ಜೂಮಲಿ ಚಿತ್ರವ ನೋಡೈ [ಜೂಮ್ = zoom]
      ಸಾರುವುದೆಲ್ಲೆಡೆ, ಕಂಡರೆ, ಬೇಡೈ
      🙂

  16. ಸಿ೦ಗನ ದರ್ಪದೊಳಿರ್ದವ-
    ನ೦ಗನೆ ಸೆಳೆದಳ್ ವಿಲಾಸಮ೦ ತೋರುತ ತಾ೦
    ಅ೦ಗೈ ಅರಗಿಣಿ ಪೋಲುತ
    ಸ೦ಗವನೀಕ್ಷಿಸಿದನೆ೦ದು ತೋರ್ಪುದೆ ಭಾವ೦?

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)