Apr 212012
 

ನಭ, ನಿಭ, ವಿಭ, ಶುಭ” ಪದಗಳನ್ನುಪಯೋಗಿಸಿ ವಿಯೋಗದ ಬಗ್ಗೆ ಪದ್ಯ ರಚಿಸಿರಿ.

ಛಂದಸ್ಸು ನಿಮ್ಮ ಆಯ್ಕೆ

  34 Responses to “ಪದ್ಯಸಪ್ತಾಹ – ೧೭ – ದತ್ತ ಪದಿ”

  1. ತನ್ನನ್ನು ವಂಚಿಸಿದ ಗಂಡನ ಬಗ್ಗೆ ಇನ್ನೂ ಮರುಕ, ಪ್ರೀತಿಯಿರುವ ಗರತಿಯ ಮಾತುಗಳು ಇವು

    ಸುಭಗೆಯನಭಾಗಿನಿಯ ತರು
    ಣಿಭಾಮಿನಿಯ ತೊರೆದು ಜಾರಿಣಿಯನೊಲಿದಿರ್ಪಾ
    ವಿಭವಮದು ನಿಲ್ಕೆಯೆಂದಾ
    ನು ಭಜಿಪೆ ಭವನೊಲ್ದು ಮಾಳ್ಕೆ ಶುಭಮಂ ನಿಮ್ಮಾ

    • ಪದ್ಯವೇನೋ ಚೆಲುವಾಯಿತು. ಆದರೆ ದತ್ತಪದಗಳು ಸ್ವಲ್ಪ”ಮತಾಂತರ’ಗೊಂಡವಲ್ಲ!!

  2. ಗಣಪತಿಯಿಂದ ಶಾಪ ಪಡೆಯುವ ಮುನ್ನ ಗ್ರಹಣ ಕಾಲದಲ್ಲಿ ಮಾತ್ರ ಚಂದ್ರ ಕಣ್ಮರೆಯಾಗುತ್ತಿದ್ದ. ಆಗ ಚಂದ್ರನ ಹೆಂಡತಿ ನಕ್ಷತ್ರಗಳೆಂಬ ದೀಪಗಳನ್ನು ಹೊತ್ತಿಸಿ ಗಂಡನಿಗಾಗಿ ಹುಡುಕುತ್ತಿದ್ದಳು

    ಸ್ವಭಾನುಗ್ರಸ್ತಂ ನಭದಿಂದೆ ಲುಪ್ತನಂ
    ವಿಭಾವರೀ ತಾರೆಗಳನ್ನೆ ಪರ್ಚಿಯಾ
    ಪ್ರಭಾವದಿಂ ಪೊಂದಿದ ಚಂದ್ರ ನೀಗಿದ
    ನ್ನಿಭಾನನಂ ಬಯ್ಯೆ ಸುಧಾಂಶುಭಾರ್ಯೆಯಂ

    ಸ್ವಭಾನು – ರಾಹು

    • ಕೊನೆಯ ಪಾದದಲ್ಲಿ ತಪ್ಪ್ದಿದೆ; ತಿದ್ದುತ್ತೇನೆ.

    • ತಿದ್ದಿದ್ದೇನೆ

      ಸ್ವಭಾನುಗ್ರಸ್ತಂ ನಭದಿಂದೆ ಲುಪ್ತನಂ
      ವಿಭಾವರೀ ತಾರೆಗಳನ್ನೆ ಪರ್ಚಿಯಾ
      ಪ್ರಭಾವದಿಂ ಪೊಂದಿದ ಚಂದ್ರ ಹಸ್ತಿಸ
      ನ್ನಿಭಾಸ್ಯನಿಂ ಬಿಟ್ಟ ಸುಧಾಂಶುಭಾರ್ಯೆಯಂ

    • ಕೆಲಮಟ್ಟಿಗೆ ಸವಾಲೇ ಆಗುವ ವಂಶಸ್ಥವೃತ್ತವನ್ನು ಬಳಸಿದುದಕ್ಕಾಗಿ ನಿಮಗೆ ಮೊದಲು ಧನ್ಯವಾದ. ಆದರೆ ಪದ್ಯದ ಛಂದಸ್ಸು ಹಾಗೂ ವ್ಯಾಕರಣ ಸ್ವಲ್ಪ ದಾರಿ ತಪ್ಪಿವೆ. ದಯಮಾಡಿ ಸವರಿಸಿಕೊಳ್ಳಿರಿ.

      • ನಿಮ್ಮಿಂದ ಮಾರ್ಗದರ್ಶನ ಪಡೆದು ತಿದ್ದಾವಣೆಗೆ ಯತ್ನಿಸುತ್ತೇನೆ. ಧನ್ಯೋಸ್ಮಿ

  3. [ರಾಮನ ಆಂತರ್ಯ ಅವನಿಗೆ ಮಾತ್ರ ಗೊತ್ತು, ಇಂದಿನ ರಾಜಕಾರಣಿಗಳಂತಲ್ಲದೇ ಪ್ರಜಾರಂಜಕನಾಗಿದ್ದ ರಾಮ ಅಗಸನ ಬಾಯಲ್ಲಿ ಕೇಳಿದ ಅಪವಾದವನ್ನು ಸಹಿಸದೇ ವೈದೇಹಿಯನ್ನು ಕಾಡಿಗೆ ಕಳುಹಿಸುವ ಸನ್ನಿವೇಶ ಇಡೀ ರಾಮಾಯಣ ಕಾವ್ಯದ, ಇಂದಿನ ವಿವಾದಗ್ರಸ್ತ ಪ್ರದೇಶ. ಅದನ್ನೇ ಪದ್ಯದೊಳಗೆ ಹೇಳುವ ಪ್ರಯತ್ನ :]

    ಸತಿವಿಯೋಗವ ದುಃಖದಿ ಸಹಿಸುತ
    ಪತಿತೆಯೆಂಬಪವಾದ ಕಳೆಯಲು
    ವಿತತ ತಂತಿಯ ವಿಭಜಿಸಿದ ಶುಭಘಳಿಗೆ ಕಾದನವ |
    ಸತತ ನಂಬಿದ ರಾಮಚಂದ್ರ ನಿ
    ಭೃತದೊಳಿಡದಲೆ ಜಾನಕಿಯನಡೆ
    ಸುತಲಿ ಕಾಡಿಗೆ ಮರೆತನಭದೆತ್ತರದ ರೋದನವ ||

    • ಒಂದು ಬಿನ್ನಹ: ಇದು ವಿವಾದಗ್ರಸ್ತ ಎಂದು ನಾನು ಹೇಳಿದ್ದು : ನನ್ನ ದೃಷ್ಟಿಯಲ್ಲಿ ಜಗತ್ತಿನಲ್ಲಿ ಇದುವರೆಗೆ ಶ್ರೀರಾಮಚಂದ್ರನಂತಹ ಇನ್ನೊಬ್ಬ ರಾಜನಾಗಲೀ ವ್ಯಕ್ತಿಯಾಗಲೀ ಇಲ್ಲ! ನಾನು ಪದವನ್ನು ಅಪದ್ಧವಾಗಿ ಬಳಸಲಿಲ್ಲ, ಬೇರೇ ಅರ್ಥದಲ್ಲಿ ಬಳಸಿದ್ದೇನೆ ಎಂಬುದನ್ನು ತಮ್ಮಲ್ಲಿ ನಿವೇದಿಸುತ್ತಿದ್ದೇನೆ.

      • ಶ್ರೀ ಭಟ್ಟರೇ,

        ಭಾ.ಷ.ಯ ಮೊದಲಸಾಲಿನಲ್ಲಿ ಒಂದು ಮಾತ್ರೆ ಹೆಚ್ಚಿದೆಯೇ? “ಸತಿವಿಯೋಗದ ದುಗುಡ ಸಹಿಸುತ” ಎಂದು ಮಾಡಿದಲ್ಲಿ ಸರಿಹೋದೀತು.

        • ಹೌದು, ಮೌಳಿಯವರೇ ತಮ್ಮ ಈ ಚಿಕಿತ್ಸೆಗೆ ಧನ್ಯವಾದ. ವಿಸರ್ಗ ಗುರುವಾಗಿ ಪರಿಗಣಿತವಾಗಿದೆ, ಬಾಯಲ್ಲೇ ಗುಣಿಸುವಾಗ ಅದು ಹಾಗನ್ನಿಸದಿದ್ದರಿಂದ ಕಣ್ತಪ್ಪಿಸಿಕೊಂಡು ಮುನ್ನುಗ್ಗಿಬಿಟ್ಟಿದೆ.

          ಸತಿವಿಯೋಗದ ದುಗುಡ ಸಹಿಸುತ
          ಪತಿತೆಯೆಂಬಪವಾದ ಕಳೆಯಲು
          ವಿತತ ತಂತಿಯ ವಿಭಜಿಸಿದ ಶುಭಘಳಿಗೆ ಕಾದನವ |
          ಸತತ ನಂಬಿದ ರಾಮಚಂದ್ರ ನಿ
          ಭೃತದೊಳಿಡದಲೆ ಜಾನಕಿಯನಡೆ
          ಸುತಲಿ ಕಾಡಿಗೆ ಮರೆತನಭದೆತ್ತರದ ರೋದನವ ||

  4. ತನ್ನ ಪ್ರೇಯಸಿಯನ್ನು ಕಾಣದೆ, ಆ ವಿಯೋಗದ ನೋವಿನಿಂದ ಚಡಪಡಿಸುವ ಪ್ರಿಯಕರನ ಭಾವವಿದು..

    “ಮಂದಾಕ್ರಾಂತಾ”ವೃತ್ತದಲ್ಲಿ ರಚಿಸಿದ್ದೇನೆ..

    ಹಾಹಾ ಕ್ಲೇಶಂ ಹೃದಯಕಡಲೋದ್ವೇಗದಿಂ ತಪ್ತವಾಗಲ್
    ಮೊಹೋತ್ತುಂಗಪ್ರಣಯವಿರಹಂ ಬಾಧಿಸಲ್ ನನ್ನನಿಂದು..
    ನಾ ಹೈಮಾಭೇಶರಹಿತನಭಸ್ಸನ್ನಿಭಂ ತಾಳೆ ತಾಪಂ,
    ಈ ಹೂಹಾಸಪ್ರಕಟಿತವಿಭಾಸ್ತೋಮದಿಂ ಶೌಭಗೈ ನೀ..||

    • ಪುರೋಹಿತರೆ, ‘ಹೈಮಾಭೇಶರಹಿತನಭಸ್ಸನ್ನಿಭಂ’ನ ಆಶಯ ತಿಳಿಯಲ್ಲಿಲ್ಲ, ಕೊಂಚ ಬಿಡಿಸುವಿರಾ?

      ಹಾಗೆಯೇ, ಹೃದಯಕಡಲೋದ್ವೇಗ – ಇಲ್ಲಿ ಸಂಧಿ, ಸಮಾಸಗಳೆರಡೂ ಸಾಧುವಾಗಲಾರವೇನೊ. ‘ಹೂಹಾಸ’ವೂ ಅರಿಸಮಾಸವಾಯಿತೇನೊ.

      • ‘ಹೂಹಾಸ’ ಎಂಬಲ್ಲಿಗೆ ನಿಲ್ಲಿಸಿದ್ದರೆ ಅರಿಸಮಾಸವಾಗುತ್ತಿತ್ತೇನೋ. ಆದರೆ ಅವರು ’ದಿಂ’ ಎಂಬಲ್ಲಿಗೆ ಕೊನೆಮುಟ್ಟಿಸಿದ್ದಾರಾಗಿ ಅರಿಸಮಾಸವಾಗದೇನೋ. ಸಮಾಸಸಮೇತ ಆಮದುಮಾಡಿಕೊಂಡು ಕೊನೆಯಲ್ಲಿ ಹೀಗೆ ಕನ್ನಡಕರಿಸಿದಾಗ, ಅದು .jpg/.pdf-ಓಪಾದಿಯಲ್ಲಿ ಘನಗೊಂಡು ಅಧಿಕೃತತೆ ಒದಗುತ್ತೇನೋ. ಅವಧಾನಿಗಳು ವಿಶದಕರಿಸಬೇಕು.

        • ಪ್ರಸಾದರೆ, ಅವಧಾನಿಗಳು ಏನೆನ್ನುತ್ತಾರೋ ಕಂಡಿತ ಕಾದುನೋಡೋಣ.

          ನನ್ನ ಅನಿಸಿಕೆ ಇದು: ಆ ಇಡಿಯ ಸಮಸ್ತ ಪದಕ್ಕೆ ಒಂದು ಹಂತದಲ್ಲಿ ಹೂಹಾಸ ಪೂರ್ವಪದವಾಗಿತ್ತಲ್ಲವೇ? ಏಕೆಂದರೆ ಬೆಳಕಿಗೆ (ವಿಭಾಸ್ತೋಮಕ್ಕೆ) ಹೂ ವಿಶೇಷಣವಾಗಲಾರದು, ಆದರೆ ನಗೆಯು ಬೆಳಕನ್ನು ತರುವುದು (ಕಾವ್ಯದಲ್ಲಂತೂ) ಮಾಮೂಲಿನ ಸಂಗತಿ. ಆ ಪೂರ್ವಪದ ಸಿದ್ಧಿಸಿದ್ದಾದರೂ ಸಮಾಸದಿಂದ ತಾನೇ? ಅದು ಅರಿಸಮಾಸವೆಂದು ನನ್ನ ಎಣಿಕೆ; ಅದು (ಯಾವಾಗಿನಂತೆ) ತಪ್ಪಿರಲಿಕ್ಕೂ ಸಾಕು.

      • “ಹೃದಯಕಡಲೋದ್ವೇಗ” ಎಂಬಲ್ಲಿ ಸಂಧಿಯಷ್ಟೇ..
        ಹೃದಯಕಡಲು+ಉದ್ವೇಗದಿಂ ತಪ್ತವಾಗಲ್.. ಎಂದು ಭಾವಿಸಿ ಬರೆದಿದ್ದು..!!

        ಹೈಮಾಭೇಶರಹಿತನಭಸ್ಸನ್ನಿಭಂ
        — ಹೈಮಾಭ= ಹಿಮದಂತೆ ಶೀತಲವಾದ ಕಿರಣಗಳು. ಅದರ ಈಶ-ಒಡೆಯ ಅಂದ್ರೆ ಹೈಮಾಭೇಶ = ಚಂದ್ರ..
        ಆ ಚಂದ್ರನಿಲ್ಲದ ಬಾನಿನಂತೆ ನಾನು.. ಎಂಬುದು ಪೂರ್ಣಪದಾರ್ಥ..

        • ಹೈಮಾ… ಬಿಡಿಸಿಹೇಳಿದ್ದಕ್ಕಾಗಿ ಧನ್ಯವಾದಗಳು. ಚಂದ್ರನ ಶೀತಲಕಿರಣಗಳಿಲ್ಲದೆ ಬಾನಿಗೆ ತಾಪವೇ ತಾನೆ.

          ಹೃದಯಕಡಲು ಅರಿಸಮಾಸವಾಯಿತಲ್ಲವೇ?

      • “ಹೂಹಾಸ….” ಈ ಶಬ್ದದಲ್ಲಿ, ಹೂ ಪದ ಕೇವಲ ಹಾಸಕ್ಕಷ್ಟೇ ಸೀಮಿತ..
        ಹೂವಿನಂತೆ ಮಧುರವಾದ ನಗು ಅನ್ನಲಷ್ಟೇ ಹೂ ಪದಪ್ರಯೋಗ…

        ನಾನು ಈ ಪದವನ್ನು ಪೋಣಿಸಿರುವ ಬಗೆ ಹೀಗಿದೆ..

        ಹೂವಿನಂತಹ ಹಾಸ-ಹೂಹಾಸ (ಉಪಮಾನಪೂರ್ವಪದ ಕರ್ಮಧಾರಯ ಸಮಾಸ..)
        ಹೂಹಾಸದಿಂದ ಪ್ರಕಟಿತ- ಹೂಹಾಸಪ್ರಕಟಿತ (ತೃತೀಯಾತತ್ಪುರುಷ)
        ಹೂಹಾಸಪ್ರಕಟಿತವಾದ ವಿಭಾ – ಹೂಹಾಸಪ್ರಕಟಿತವಿಭಾ (ವಿಶೇಷಣಪೂರ್ವಪದ ಕರ್ಮಧಾರಯ ಸಮಾಸ..)
        ಹೂಹಾಸಪ್ರಕಟಿತವಿಭೆಯ ಸ್ತೋಮ ( ಶಷ್ಠಿ ತತ್ಪುರುಷ )..

        (ಪ್ರಾಂಜಲವಾಗಿ ಹೇಳೋದಾದ್ರೆ ನನಗೆ, ನೀವು ಪ್ರಸ್ತಾಪಿಸಿದ “ಅರಿಸಮಾಸ”ದ ಬಗ್ಗೆ ಅರಿವಿಲ್ಲ..
        ದಯಮಾಡಿ ಅದನ್ನು ಈ ವಿದ್ಯಾರ್ಥಿಗೆ ತಿಳಿಸಬೇಕಾಗಿ ಪ್ರಾರ್ಥನೆ..
        ಅಲ್ಲದೆ, ನಾನು ಈಗ ಮಾಡಿರುವ ಸಮಾಸದಲ್ಲೆನಾದರೂ ದೋಷವಿದ್ದರೆ, ಅದನ್ನೂ ತಿಳಿಸಿ..)

        • ಅರಿಸಮಾಸದ ಬಗ್ಗೆ ಇಲ್ಲಿ ವಿವರವಿದೆ http://padyapaana.com/?page_id=689#ari

          ಜೊತೆಗೆ ‘ಪದ್ಯ ವಿದ್ಯೆ’ಯಡಿ ಇರುವ ವಿಡಿಯೋಗಳಲ್ಲಿಯೂ ಒಂದಷ್ಟು ವಿವರವಿದೆ.

          ಕನ್ನಡ ಸಂಸ್ಕೃತ ಪದಗಳನ್ನು ಸಮಾಸದಲ್ಲಿ ಒಟ್ಟುಗೂಡಿಸಬಾರದು ಎನ್ನುವುದೇ ಅರಿಸಮಾಸದ ನಿಯಮ. ‘ಹೂ ಹಾಸ’, ‘ಹೃದಯಕಡಲು’ ಎರಡರಲ್ಲೂ ಅದು ನಡೆದಿದೆ. ಸಮಾಸದ ಮಟ್ಟಿಗಾದರೂ ತದ್ಭವವನ್ನು ಕನ್ನಡಪದ ಪದವೆಂದೇ ಗ್ರಹಿಸುವುದು (ಅಂದರೆ ಸಮಾಸ ಸಲ್ಲುತ್ತದೆ).

          ನಾನೂ ನಿಮ್ಮಂತೆ ವಿದ್ಯಾರ್ಥಿ – ಈ ಅರಿಸಮಾಸವನ್ನು ಆಗಾಗ ಎಡವುತ್ತಿರುತ್ತೇನೆ.

          • ತುಂಬಾ ಧನ್ಯವಾದಗಳು ಅರಿಸಮಾಸದ ಬಗ್ಗೆ ತಿಳಿಸಿದ್ದಕ್ಕೆ..
            ನಿಜವಾಗಿಯೂ ಈ ನಿಯಮದ ಬಗ್ಗೆ ಗೊತ್ತಿರಲಿಲ್ಲ ನನಗೆ..
            ( “ಹಾಸ” ಪದವನ್ನೂ ಕನ್ನದಪದದಂತೆಯೇ ಭಾವಿಸಿ ಬರೆದಿದ್ದರಿಂದ, ಸಮಾಸ ಮಾಡಬಹುದೇನೋ ಎಂದು ತಿಳಿದಿದ್ದೆ..)
            ಇನ್ನು ಮುಂದೆ ಹಾಗಾಗದಂತೆ ಎಚ್ಚರವಹಿಸುವೆ..

    • ಎರಡನೆಯ ಪಾದವು ’ಮೋಹೋತ್ತುಂಗ….’ವೆ? ಇಲ್ಲದಿದ್ದರೆ ಛಂದಸ್ಸು ತಪ್ಪಾಗುತ್ತದೆ.

      • ಹೌದು ಅದು “ಮೋಹೊತ್ತುಂಗ”ವೇ..
        ಬರೆಯುವ ಓಘದಲ್ಲಿ ತಪ್ಪಾಗಿದೆ..

    • ನಿಮ್ಮ ಮಂದಾಕ್ರಾಂತಾವೃತ್ತದ ಆಯ್ಕೆಗೇ ನಿಮ್ಮನ್ನು ಅಭಿನಂದಿಸುತ್ತಿದ್ದೇನೆ. ಆದರೆ ಉಳಿದ ಗೆಳೆಯರು ಈಗಾಗಲೇ ತೋರಿಸಿದಂತೆ ಪದ್ಯದಲ್ಲಿರುವ ಅರಿಸಮಾಸ-ಸಂಧಿಗಳಿಗೂ ಇನ್ನಿತರವ್ಯಾಕರಣವಿರುದ್ಧಪದಗಳಿಗೂ ಸಂಬಂಧಿಸಿದಂತೆ ತಲೆದೋರಿರುವ ಲೋಪ-ದೋಷಗಳನ್ನು ಸವರಿಸಿಕೊಳ್ಳಬೇಕಾಗಿ ವಿನಂತಿ. ನನ್ನನ್ನು ಬೇಕಿದ್ದಲ್ಲಿ ದೂರವಾಣಿಯಲ್ಲಿ ಸಂಪರ್ಕಿಸಿರಿ.

      • ನನಗೆ “ಅರಿಸಮಾಸ”ದ ಬಗ್ಗೆ ಗೊತ್ತಿರದಿದ್ದ ಕಾರಣ, ದೋಷಗಳು ಸಂಭವಿಸಿದ್ದವು..
        ಈಗ ಪದ್ಯಪಾನಿಗಳ ಮಾರ್ಗದರ್ಶನದಿಂದ ನನ್ನ ಲೋಪಗಳನ್ನು ತಿದ್ದಿ ಮತ್ತೆ ಇಲ್ಲಿ ಪ್ರಕಟಿಸುತ್ತಿರುವೆ.. ಒಮ್ಮೆ ಪರೀಕ್ಷಿಸಬೇಕಾಗಿ ವಿನಂತಿ..

        ಹಾಹಾ ಕ್ಲೇಶಂ ಮನದ ಕಡಲೋದ್ವೇಗದಿಂ ತಪ್ತವಾಗಲ್
        ಮೋಹೋತ್ತುಂಗಪ್ರಣಯವಿರಹಂ ಬಾಧಿಸಲ್ ನನ್ನನಿಂದು..
        ನಾ ಹೈಮಾಭೇಶರಹಿತನಭಸ್ಸನ್ನಿಭಂ ತಾಳೆ ತಾಪಂ
        ಈ ಹೇಮಾಸ್ಯಸ್ಮಿತಕೃತವಿಭಾಸ್ತೋಮದಿಂ ಶೌಭವಂ ಗೈ.||

        [ ನಿಮ್ಮನ್ನು ಸಂಪರ್ಕಿಸಬೇಕಾದ ಸಂಖ್ಯೆ.??? ]

  5. ’ಮೇಘದೂತ’ವನ್ನಾಧರಿಸಿ ’ತರಳ’ ವೃತ್ತದಲ್ಲಿ:

    ಮನದ ವೇದನವೆಲ್ಲವಾ ನಭದೂತನೊಳ್ ಸಲೆ ಬಿಚ್ಚಿದಂ
    ಬಿನದಕಾಲದಿ ಪೊಂದಿದೀಗ ನಿಭಂಜವೈದಿದ ರಾಸವಂ
    ದಿನವಿದಿಂದಿನೊಳೆಲ್ಲಿ ಭರ್ತನು ಕಾಂಬ ಭೃತ್ಯವಿಭಕ್ತಕನ್
    ಘನತೆಯಿಂದಿನ ವಕ್ರಶೃಂಗರವೀಯದೈ ಶುಭಕಾವ್ಯಕಂ

    • ಮೂರನೆಯ ಪಾದದ ಆಶಯವೇನೆಂದರೆ, ಈ ಕಾಲದಲ್ಲಿ ತಪ್ಪಿತಸ್ಥರನ್ನು ಸೂಕ್ತವಾದ ಶಿಕ್ಷೆಗೆ ಗುರಿಪಡಿಸುವ ಅಂತಹ ಪಾಲಕ ಇಲ್ಲ ಎಂದು.

    • ನಭದೂತ ಎನ್ನುವುದು ಕಥಂಚಿತ್ ಸಾಧುವಾದೀತು. ಆದರೆ ನಭೋದೂತ ಎಂಬುದೇ ಹೆಚ್ಚು ಯುಕ್ತ. ಅಲ್ಲದೆ ಅಲ್ಲಲ್ಲಿ ಅರ್ಥಕ್ಲೇಶಗಳಿವೆ. ಹೇಗೂ ಇವೆಲ್ಲಕ್ಕೂ ಹುರುಳನ್ನು ಹಚ್ಚಿ ಅರಿಮೆಗೆ ಅಳವಡಿಸಬಹುದಾದರೂ ಆ ಕಷ್ಟವನ್ನು ಯಾವುದಾದರೂ ಚಿತ್ರಕವಿತೆಗೆ ಪಡಬಹುದಲ್ಲದೆ ಸರಸಕವಿತೆಗಲ್ಲ:-). ಆದುದರಿಂದ ದಯಮಾಡಿ ಇನ್ನಷ್ಟು ಸುಬೋಧವಾಗಿ ಕವನಿಸಿರಿ:-)

  6. ಕುಪಿತೆ ನಿನ್ನ ಕೆಂಪಲ್ಲ ಬೇಗೆ ನಭದುರಿವ ಚಂದ್ರನಿಂದ
    ತಪನ ಹೇಮಸನ್ನಿಭಳೆ ಸಹಿಸೆ ಮರೆಯೇಕೆ ಬಾಳಿನಿಂದ
    ಕೃಪೆಯದಲ್ತೆ ರಸವಿಭವ ನೆನಪಿನಲೆಬೀಸುತೇಳೆ ಘಳಿಗೆ
    ಜಪ ಸಹಸ್ರ ಶುಭವಾತರಂಗಹೊಯ್ದಾಡೆ ಚಿತ್ತದೊಳಗೆ

  7. ಶಕುಂತಲೆ

    ಓ! ನಭದುಳ್ಕಾಣಾ ಹರಿ
    ಣಾನನಮಂ ಮಗುವೆ ವಿಭವಮಂ ತೋರುತ್ತುಂ
    ಮಾನಿನಿ ಭರತನ ಪಿತನಂ
    ಮೌನದಿ ನೆನೆದಳ್ ಸುಧಾಂಶುಭವನಂ ಧವನಂ

    ದಟ್ಟಪದಿಗಳ ಕ್ರಮಪಲ್ಲಟವಾಗಿದೆ. ಅಡ್ಡಿಯಿಲ್ಲ ತಾನೇ?

    • ಟೈಪೋವನ್ನು ತಿದ್ದಿದ್ದೇನೆ:

      ಓ! ನಭದುಳ್ಕಾಣಾ ಹರಿ
      ಣಾನನಮಂ ಮಗುವೆ ವಿಭವಮಂ ತೋರುತ್ತುಂ
      ಮಾನಿನಿ ಭರತನ ಪಿತನಂ
      ಮೌನದೆ ನೆನೆದಳ್ ಸುಧಾಂಶುಭವನಂ ಧವನಂ

  8. ಮೇಘದೂತದ ಬಗ್ಗೆ

    ಶುಭವ೦ ನಲ್ಲೆಗೆ ಯಕ್ಷ-
    ನ್ನಿಭದೊಲ್ ತೋರಿದ ನಭಸ್ಯ ಮೇಘಕೆ ಪೇಳ್ದಾ
    ವಿಭುದರ್ ಪೆರ್ಚೆನೆ ಮೆಚ್ಚುವ
    ಪ್ರಭಾವಿ ಕಾವ್ಯದೆ ವಿಯೋಗ ಕಥನವು ಸೊಗಸೈ

    ಇಭ – ಆನೆ
    ನಭಸ್ಯ – ಆಷಾಡದ

    • ಪದ್ಯದ ಅಡಕ ಮತು ಬಂಧದ ಬಿಗಿ ಸೊಗಸಾಅಗಿದೆ. ಆದರೆ ಎರಡು ಸಣ್ಣ ವ್ಯಾಕರಣದ
      ತೊಡಕುಗಳನ್ನು ಸವರಿಸಬೇಕಿದೆ:
      “ಯಕ್ಷನ್ನಿಭ” ಎಂಬುದು ಅಸಾಧುರೂಪ. ಇದು ಆ ಪದಗಳ ಸಂಧಿಯ ಸರಿಯಾದ ಕ್ರಮವಲ್ಲ. ಯಕ್ಷಂ + ಇಭ = ಯಕ್ಷನಿಭ ಎಂದೇ ಆಗುತ್ತದೆ. ಇದು ನಿಮಗೆ ಸಂಸ್ಕೃತಸಂಧಿಯ ಭ್ರಮೆಯಿಂದ ಆದ ಪ್ರಮಾದ.
      ( ಅಲ್ಲಿ ತಸ್ಮಿನ್ + ಅಪಿ = ತಸ್ಮಿನ್ನಪಿ ಎಂದಾಗುತ್ತದೆ. ವದನ್ + ನಿತ್ಯಂ = ವದನ್ನಿತ್ಯಂ ಎಂದೂ ಆಗುತ್ತದೆ. ಆದರೆ ಕನ್ನಡದಲ್ಲಿ ಸ್ವರಸಂಧಿಯಲ್ಲಿ ದ್ವಿತ್ವ
      ಬಾರದು. ಉದಾ: ಎಂದನು + ಅಲ್ಲಿ = ಎಂದನಲ್ಲಿ ಎಂದೇ ಆಗುವುದಲ್ಲದೆ
      ಎಂದನ್ನಲ್ಲಿ ಎಂಬುದಾಗಲ್ಲ; ರಾಮನು + ಉಚಿತವಾಗಿ = “ರಾಮನುಚಿತವಾಗಿ” ಎಂದಲ್ಲದೆ “ರಾಮನ್ನುಚಿತವಾಗಿ”ಎಂದಲ್ಲ)
      ವಿಬುಧ ಎಂದರೆ ದೇವತೆ ಎಂದು ಅರ್ಥ. ಇದು ವಿಭುದ ಎಂದಲ್ಲ:-)

      • ಗಣೇಶ್ ಸರ್,

        ಸ್ವಲ್ಪ ಸವರಿಸಲು ಪ್ರಯತ್ನಿಸಿದ್ದೇನೆ

        ಶುಭವ೦ ಯಕ್ಷ೦ ಕಾ೦ತಳಿ-
        ಗಿಭದೊಲ್ ತೋರಿದ ನಭಸ್ಯ ಮೇಘಕೆ ಪೇಳ್ದಾ
        ವಿಭಕ್ತ ಪ್ರೇಮಿಯ ದುಃಖದ
        ಪ್ರಭಾವಿ ಕಾವ್ಯದೆ ವಿಯೋಗ ಕಥನವು ಸೊಗಸೈ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)