May 062012
 

“ಸಿತಾರ್”, “ತಬಲಾ”, “ಸಂತೂರ್”, “ಬೀನ್” ಪದಗಳನ್ನು ಬಳಸಿ ಕರ್ಣಾಟಕ ಸಂಗೀತದ ವರ್ಣನೆಯ ಪದ್ಯಗಳನ್ನು ರಚಿಸಿರಿ. ಛಂದಸ್ಸು ನಿಮ್ಮ ಆಯ್ಕೆ.

  34 Responses to “ಪದ್ಯಸಪ್ತಾಹ – ೧೯ – ದತ್ತ ಪದಿ”

 1. ಮಾತಿಗದು ಮೀರಿರಲು ಧನ್ಯಾಸಿ ತಾರದಲಿ
  ಚಿತ್ತಹಿತ ಬಲಹಂಸ ಗುನುಗುತಿರೆ ನಾನ್
  ಸೋತಿಹೆನು ಆರಭೀ ನಾಟಿಗಳ ಕರ್ಣಾಟ
  ಗೀತದ ರಸಂ ತೂರೆ ಕಿವಿಯೊಳಗೆ ತಾವ್

  ಏನೂ ಅರ್ಥಸ್ವಾರಸ್ಯವಿಲ್ಲದ ಪದ್ಯ. ನಾಲ್ಕು ಅಪ್ಪಟ ಕರ್ಣಾಟಕ ಸಂಗೀತದ ರಾಗಗಳನ್ನು (ಧನ್ಯಾಸಿ,ಬಲಹಂಸ, ಆರಭೀ, ನಾಟಿ – ಕೊನೆಯವೆರಡು ಘನರಾಗಗಳು) ಬಳಸಿದ್ದೇನೆ.

  ಚಿತ್ತಹಿತ, ಗೀತದ ರಸಂ – ಪ್ರಯೋಗಗಳು ಸರಿಯಿಲ್ಲದಿರಬಹುದು.

  ಧನ್ಯಾಸಿ ತಾರಸ್ಥಾಯಿಯಲ್ಲಿ ಅಷ್ಟೇನು ಹಿತವಿಲ್ಲವೆಂದು ನನ್ನ ಭಾವನೆ. ಆದರೂ ಇಲ್ಲಿ ಮಾತಿಗೆ ಮೀರಿದ ಸಂತೋಷವನ್ನು ಕೊಡುತ್ತದೆಂಬುದಾಗಿ ಬರೆದಿದ್ದೇನೆ.

  • ಮಾತಿಗದು ಮೀರಿರಲು ಧನ್ಯಾಸಿ ತಾರದಲಿ
   ಚಿತ್ತಹಿತ ಬಲಹಂಸ ಗುನುಗುತಿರೆ ನಾನ್
   ಸೋತಿಹೆನು ಆರಭೀ ನಾಟಿಗಳ ಕರ್ಣಾಟ
   ಗೀತದ ರಸಂ ತೂರೆ ಕಿವಿಯೊಳಗೆ ತಾನ್

   • ಗಾಯತ್ರಿ! ನೀವಾಗಿಯೇ ನೀವು ಅದೇಕೆ ಇಲ್ಲದ ತಪ್ಪಿಗೆ ಮುಜುಗರಗೊಳ್ಳುತ್ತ ವಿವರಣೆಗೆ ಮುಂದಾಗುತ್ತೀರಿ? ಪ್ರಕೃತ ಪದ್ಯದಲ್ಲಿ ಎರಡನೆಯ ಸಾಲಿನ ಪ್ರಾಸವೊಂದರ ವಿನಾ ಯಾವುದೇ ತಾಂತ್ರಿಕಲೋಪಗಳಿಲ್ಲ. ಮಾತ್ರವಲ್ಲ, ಪದ್ಯ ತುಂಬ ಸೊಗಸಾಗಿದೆ. ಚೌಪದಿಯ ಅಷ್ಟು ಚಿಕ್ಕ ಒಡಲಿನೊಳಗೆ ಇದಕ್ಕಿಂತ ಚೆನ್ನಾಗಿ ಈ ದತ್ತಪದಿಯನ್ನು ಪರಿಹರಿಸುವುದು ನನಗಂತೂ ಕಷ್ಟ. ಅಲ್ಲದೆ ನೀವು ತುಂಬ ಔಚಿತ್ಯಪೂರ್ಣವಾಗಿ ಅಪ್ಪಟ ಕರ್ಣಾಟಕಸಂಗೀತದ ನಾಲ್ಕು ರಾಗಗಳ ಹೆಸರುಗಳನ್ನೂ ಬಳಸಿ ಮತ್ತೂ ಒಂದು ದತ್ತಪದಿಯ ಸಾಧನೆ ಮಾಡಿದ್ದೀರಿ. ಚಿತ್ತಹಿತ, ಗೀತರಸ ಮುಂತಾದ ಪದಗಳ ಬಳಕೆ ಮತ್ತೂ ಸೊಗಸಾಗಿವೆ, ಉಚಿತವಾಗಿವೆ. ಧನ್ಯಾಸಿ ತಾರಸಂಚಾರದಲ್ಲಿಯೂ ಚೆನ್ನವೆಂದು ನನ್ನ ಭಾನೆ. ಹೀಗಾಗಿ ಅಲ್ಲಿಯೂ ನೀವು ಈ ಪದ್ಯದ ಮಟ್ಟಿಗೆ ಸರಿ:-). ಒಟ್ಟಿನಲ್ಲಿ ಒಳ್ಳೆಯ ಪದ್ಯವನ್ನು ಬಹೂಕರಿಸಿದ್ದೀರಿ. ಸಾಮಾನ್ಯವಾಗಿ ಪದ್ಯಪಾನದಲ್ಲಿ ದತ್ತಪದಿಗಳಿಗೆ ಅಷ್ಟಾಗಿ ಉತ್ಸಾಹದ ಪರಿಹಾರಗಳು ಬರುತ್ತಿಲ್ಲ. ಆದರೆ ನೀವು ಎಲ್ಲರಿಗಿಂತ ಮುನ್ನ ಚೆಲುವಾದ ಹಾಗೂ ಸರಳ-ಸಹಜವಾದ ವ್ಯುತ್ಪಾದಕವೂ ಆಗಿರುವ ಪದ್ಯವನ್ನು ನೀಡಿದ್ದೀರಿ. ಹಾರ್ದಿಕಧನ್ಯವಾದಗಳು.

    • ಧನ್ಯವಾದಗಳು.
     ಚಿತ್ತಹಿತದ ಬದಲಿಗೆ ಚೇತೊಹಿತ ಅಥವ ಚೇತಹಿತ ಸರಿಹೋಗುತ್ತದೆಯೆ?
     ಇದಕ್ಕಿಂತ ಚೆನ್ನಾಗಿ ಈ ದತ್ತಪದಿಯನ್ನು ಪರಿಹರಿಸುವುದು ನನಗಂತೂ ಕಷ್ಟ. – ಇದನ್ನು ಯಾರಾದರೂ ಒಪ್ಪುವುದಕ್ಕಾಗುತ್ತದೆಯೇ?
     ನನ್ನ ಎಲ್ಲಾ ರಚನೆಗಳಿಗೆ ನೀವೇ ಸ್ಫೂರ್ತಿ. ಇದನ್ನು ಯಾವ ಸಂಕೋಚವೂ ಇಲ್ಲದೆ ಹೇಳುತ್ತೇನೆ.
     ಮತ್ತೊಮ್ಮೆ ಧನ್ಯವಾದಗಳು.

     • ಇಲ್ಲ, ಗಾಯತ್ರಿಯವರೇ! ನಾನು ಪ್ರಾಮಾಣಿಕವಾಗಿ ಹೇಳಿದ್ದು. ಗುಣಕ್ಕೆ ಮತ್ಸರವೇ? ಚಿತ್ತಹಿತವನ್ನು “ಚೇತನವು” ಎಂದು ಬದಲಿಸಿದರೆ ಸಾಕು, ಎಲ್ಲ ಸರಿಯಾಗುವುದು.

     • ಚೇತನವು ಬಂದರೆ ತಬಲಕ್ಕೇನು ಮಾಡುವುದು?

    • ಷೌದಲ್ಲ!! ತಪ್ಪಾಯಿತು, ಕ್ಷಮಿಸಿರಿ.
     ಚಿತ್ತಹಿತವನ್ನು ಪ್ರೀತಿಹಿತ ಎಂದಾಗಿಸಿರೆ ಎಲ್ಲವೂ ಸರಿಯಾದೀತಲ್ಲವೆ!

     • ಕ್ಷಮಿಸಿ ಎಂದೆಲ್ಲಾ ಹೇಳಿದರೆ ಬಹಳ ಬೇಸರವಾಗುತ್ತದೆ.
      ಫಿನಿಷಿನ್ಗ್ ಟಚ್ ನಿಮ್ಮಿಂದಲೇ ಆಗಬೇಕು. ಅದಂತೂ ಸತ್ಯ. ಧನ್ಯವಾದಗಳು.

      ಮಾತಿಗದು ಮೀರಿರಲು ಧನ್ಯಾಸಿ ತಾರದಲಿ
      ಪ್ರೀತಿಹಿತ ಬಲಹಂಸ ಗುನುಗುತಿರೆ ನಾನ್
      ಸೋತಿಹೆನು ಆರಭೀ ನಾಟಿಗಳ ಕರ್ಣಾಟ
      ಗೀತದ ರಸಂ ತೂರೆ ಕಿವಿಯೊಳಗೆ ತಾನ್

  • ಗಾಯತ್ರಿ ಅವರೆ, ಪೂರಣ ಬಹಳ ಚೆನ್ನಾಗಿದೆ. ಕರ್ನಾಟಕ ಸಂಗೀತದಲ್ಲಿ (ಮಾತ್ರ) ಕಂಡುಬರುವಂತಹ ನಾಟೀ, ಆರಭೀ, ಬಲಹಂಸ, ಧನ್ಯಾಸಿ ರಾಗಗಳ ಹೆಸರನ್ನು ಬಳಸಿದ್ದು ಅದ್ಭುತವಾಗಿದೆ!

   • ಧನ್ಯವಾದಗಳು ಹಂಸಾನಂದಿಯವರೆ.

  • tumba chennagide padya:)

 2. ಗುದುಕುತ್ತಬಲ ಮುಂದೆ ಮಬ್ಬೀನ ಕಾಲುವೆ
  ಪದಜೋಡಿಸಿ ತಾರ ತಾರ
  ಹದರಾಗ ತಾಳದೋಳ್ ಕರ್ಣಾಟವಾಡಲು
  ಬದಿಗಲ್ಲಿ ಮೀಟಿ ಸಂತೂರ

  • ಭಟ್ಟರೇ! ಎರಡನೆಯ ಪಾದದಲ್ಲಿ ಸಂಗತ್ಯದ ಗತಿ ಸ್ವಲ್ಪ ಎಡವಿದೆ. ಹಾಗೂ ಮಬ್ಬಿನ ಎಂಬುದನ್ನು ಮಬ್ಬೀನ ಎಂದು ದತ್ತಪದಕ್ಕಾಗಿ ಎಳೆದಿದ್ದೀರಿ.:-) ಉಳಿದಂತೆ ಪದ್ಯ ಸೊಗಸಾಗಿದೆ.ಚಿಕ್ಕ ಛಂದಸ್ಸಿನಲ್ಲಿ ಇದು ಹಿರಿಯ ಸಾಧನೆ. ಅರ್ಥವು ಮತ್ತೂ ಸ್ಫುಟವಾಗಬಹುದಿತ್ತು.

   • ಕಂಡು ಅಪರೂಪದಾ ಹಕ್ಕಿಯ
    ಉಂಡ ’ಅನ್ನವು’ ಜೀರ್ಣವಾಗದೆ
    ಮಂಡೆಬಿಸಿಯಲೆ ಕಾಲಸವೆಸುತ ಬರೆದೆನೀಪದ್ಯ |
    ಚಂಡಿನಾಟವ ಆಡುವೆಲ್ಲರು
    ಭಂಡಧೈರ್ಯದಿ ಸಾಗಿಬಂದರೆ
    ಮೊಂಡುಜನರನು ಹೇಗೆ ಸವರಿಪುದೆನಿಸುತಲಿ ಸದ್ಯ || 🙂

    ತಿದ್ದಿಕೊಳ್ಳುತ್ತೇನೆ ಸ್ವಾಮೀ, ಧನ್ಯವಾದಗಳು.

    • ಭಾಮಿನಿಯು ನಿಮಗೆ ತುಂಬ ಒಲಿದ ಛಂದಸ್ಸು. ಆದರೂ ಅದೇಕೆ ಇದೀಗ ಅವಳೂ ಮುನಿದಂತಿದೆ? ಮೊದಲ ಹೆಜ್ಜೆಯಲ್ಲಿ ಎಡವಿದಹಾಗಿದೆ. ಪಾಪ, ಒಲ್ಮೆಯ ಹೆಣ್ಣನ್ನು ಕೈಹಿಡಿದು ಹೂವಿನ ಹಾದಿಯಲ್ಲಿ ಹಂಸಿಯ ಹಾಗೆ ನಡಸಿ ಸ್ವಾಮಿ!!

 3. ಹೀಗೊಂದು ಪ್ರಯತ್ನ – ಛಂದಸ್ಸು ಶಿಥಿಲವಾಗಿದೆ (ಅಥವಾ ಇಲ್ಲವೇ ಇಲ್ಲ!) ಅನ್ನುವ ಭಯವಿದ್ದರೂ ಹಾಕುತ್ತಿರುವೆ.ಎಂದಿನಂತೆ ತಿದ್ದಬೇಕೆಂದು ಕೋರಿಕೆ.

  ಮಲ್ಲೀಗೆ ಹಂಬೀನ ಕಂಪ ಹೊಮ್ಮಿಪ ರಾಗ
  ಚೆಲ್ಲೀ ಸೂಸಿ ತಾರೆ ಮಿಂಚನು ಮರೆಸುವ ಲಯವು
  ಎಲ್ಲೀ ಕೇಳಿದರತ್ತ ಬಲ್ಲವರ ಸಂಗೀತ-
  ವಲ್ಲೇ ಉಣಿಸಂ ತೂರುತ ಕೇಳುವನೆ ಸಲೆ ರಸಿಕ!

  ಕರ್ನಾಟಕ ಸಂಗೀತದ್ದೇ ಅನ್ನುವಂತೆ ಕಾಣದಿದ್ದರೂ, ಸಂಗೀತವನ್ನು ಕೇಳುತ್ತಾ ಊಟವನ್ನೂ ತೂರಿಬಿಟ್ಟ ಕಡುರಸಿಕನೊಬ್ಬನ (ಜೊತೆಯಲ್ಲಿ ರಾಗಲಯಗಳ) ವರ್ಣನೆ.

  • ನೀವೇ ಹೇಳಿದಂತೆ ಛಂದಸ್ಸು ಸೊರಗಿದೆ:-) ಅಲ್ಲದೆ ಕರ್ಷಣವನ್ನು ನಾವು ಪದ್ಯದ ಶ್ರಾವಣರೂಪದಲ್ಲಿ ಮಾತ್ರ ಮಾಡುವುದಲ್ಲದೆ ಚಾಕ್ಷುಷರೂಪದಲ್ಲಲ್ಲ. ಹೀಗಾಗಿ “ಹಂಬೀನ” ಎಂಬಂಥ ರೂಪಗಳು ಸ್ವಾಗತಾರ್ಹವಾಗವು:-) ನೀವು ಸಮರ್ಥರಾದ ಕಾರಣ ಮರಳಿ ಯತ್ನಿಸಬಹುದಲ್ಲವೇ!

 4. ಸವಿಯಲಿನಿದುನಾದಂ ದೇಶಕಾರ್ಣಾಟಭೇದಂ
  ಕಿವಿಗದುಕಿರಿದಲ್ತೇ? ವೀಣೆಯದ್ದೋ ಸಿತಾರೋ
  ತವಿಲಿನದನಿಯೋ ಬೀನ್ ಕ್ವಾಣ ಸಂತೂರತಂತ್ರೀ
  ರವಮದು ತಬಲಾದೋ ಆತ್ಮಕಾನಂದವೊಂದೇ

  • ಪ್ರಶಸ್ತವಾದ ವರ್ಣವೃತ್ತವೊಂದರಲ್ಲಿಯೇ ಪ್ರಯತ್ನಿಸಿದ್ದೀರಿ; ಧನ್ಯವಾದಗಳು. ಆದರೆ ದತ್ತಪದಗಳನ್ನು ಅವುಗಳ ಮೂಲಾರ್ಥವು ತೋರದಂತೆ ಒಡೆದು, ಬಿಡಿಸಿ ಬಳಸಿದರೆ ಮತ್ತೂ ಸೊಗಸಾದೀತು. ಅಡ್ಡಿಯಿಲ್ಲ, ಪದ್ಯದ ಅರ್ಥದಲ್ಲಿ ಉದಾತ್ತತೆಯಿದೆ.

   • ಧನ್ಯೋಸ್ಮಿ. ನಾನು ಸಂಗೀತವನ್ನು ಕೇಳಿ ಬಲ್ಲೆ ಅಷ್ಟೆ; ಕರ್ನಾಟಕ ಸಂಗೀತವನ್ನು ವರ್ಣಿಸುವುದು ನನಗೆ ಸಾಹಸವೇ ಆದೀತು 🙂

 5. ಶಾರೀರ ಸರಿಗೊಳಿಸಿ ತಾ ರಭಸದೊಳ್ ಪಾಡೆ (starting varna rendition)
  ತೋರುತ ಬಲಾಢ್ಯನೆನೆ ತೊಡೆಗಳನು ತಟ್ಟಿ
  ಘೋರದುಚ್ಛಾರಗಳ್ ತಾ೦ ರಸ೦ ತೂರುತಿರೆ
  ಮೀರುತಿದೆ ಸಹನೆಯುಬ್ಬೀನರವು ಶಿರದೆ

  ಸಮ ಪಾದಗಳಲ್ಲಿ ‘೫ ೫ ೫ ೩’ ಬಳಸಿದ್ದೇನೆ, ಪ೦ಚಮಾತ್ರಾ ಚೌಪದಿಯಲ್ಲಿ

  ಕೆಲವರ ಕರ್ನಾಟಕ ಶಾಸ್ತ್ರೀಯ ಸ೦ಗೀತ ಹೀಗೆಯೇ ಶಿರ ಶೂಲೆ ಕೊಡುತ್ತದೆ ಎ೦ಬುದು ಉತ್ಪ್ರೇಕ್ಷೆ ಏನಲ್ಲ! 😉

 6. ಮರಳಿ ಮತ್ತೊಂದು ಪ್ರಯತ್ನ.

  ಸ್ವಲ್ಪ ಅಸಂಬದ್ಧವೇ ಎನಿಸಬಹುದಾದರೂ ಸ್ವಲ್ಪ ಹಿನ್ನಲೆ ಹೇಳಿದರೆ ಒಳ್ಳೆಯದೇನೋ. ಅನೇಕ ಸಂಗೀತಗಾರರು ಹಿಂದಿನ ತಲೆಮಾರಿನ ಎಷ್ಟೋ ಪ್ರಸಿದ್ಧ ಸಂಗೀತಗಾರರು ಹಾಡುವಾಗ ಸಾಹಿತ್ಯಕ್ಕೆ ಹೆಚ್ಚು ಗಮನವೀಯುತ್ತಿರಲಿಲ್ಲ. ಬೇರೆ ಭಾಷೆಯ ಹಾಡನ್ನು ಹಾಡುವಾಗಲಂತೂ ದೇವರೇ ಗತಿ. ಈಗಲೂ ಈ ತೊಂದರೆ ಆಗಾಗ ಕಾಣುವುದುಂಟು. ಅದಿರಲಿ. ಈ ವಿಷಯ ಪ್ರಸ್ತಾಪಿಸಿದಾಗ ಒಬ್ಬ ದೊಡ್ಡ ಸಂಗೀತ ವಿದ್ವಾಂಸರು (ಹೆಸರು ಮರೆತಿದ್ದೇನೆ), ಸಾಹಿತ್ಯದಿಂದ ಏನಾಗಬೇಕು, ಸಂಗೀತವಿದ್ದರೆ ಸಾಲದೇ ಅಂತ ಸವಾಲು ಹಾಕಿ “ಕತ್ರಿಕಾಯ್ ವೇಂಗಾಯಮ್ ಪೋಟ್ಟ ಸಾಂಬಾರ್.. ” (ಬದನೇಕಾಯಿ ಈರುಳ್ಳಿ ಹಾಕಿದ ಸಾಂಬಾರು ..) ಅಂತಲೋ ಏನೋ ಒಂದು ಅಸಂಬದ್ಧ ಪಲ್ಲವಿ ಸಾಲನ್ನು ಹಾಡಿ, ತ್ರಿಕಾಲ ಅನುಲೋಮ ಎಲ್ಲ ಮಾಡಿ ತೋರಿಸಿದ್ದರಂತೆ!

  ಇಲ್ಲಿ ಪೂರಣವು ಎರಡು ಪಂಚಮಾತ್ರಾ ಚೌಪದಿಗಳಲ್ಲಿ ಹಂಚಿದೆ. ಹಾಸ್ಯಕವಿತೆ ಎಂದುಕೊಂಡು ಓದಿ 🙂

  “ಬಾ ಸುಬ್ಬೀ, ನಡುಮನೆಗೆ ಸರಸರನೆ ನೀನಡೆದು
  ಬೇಸರಿಸದೆಲೆ ನಗುತ ಬಲವಾಗಿ ಶ್ರುತಿಹಿಡಿ;
  ಆಸರೆಯ ಷಡ್ಜದಲಿ ದನಿ ನಿಲಲಿ” ಯೆಂದಿರಲು
  ಕಾಸಗಲ ಕುಂಕುಮದ ತಾಯಿ ಚೆಲುವಾಂಬಾ

  ಬಾಲೆ ಕಿರು ಬಾಯಗಲಿಸಿ ತಾರ ಸ್ವರಕೇರಿ
  ಶಾಲ ತುದಿಬೆರಳಲ್ಲಿ ಸುತ್ತಿ ಹಾಡಿಹಳು
  “ಪಾಲಿರುಂದ ಪಾಸಂ ತೂರ ಪರುಪು ರಸಂ”
  ಕಾಲು ಬಾಲವಿರದೀ ಸಾಲಿಗೆ ನೆರವಲು|

  • ಎರಡನೇ ಪದ್ಯವನ್ನು ಹೀಗೆ ಓದಿಕೊಳ್ಳಿ – ಕಾಪೀ ಪೇಸ್ಟ್ ಎರರ್ ಆಗಿತ್ತು! (ಲಗಂ ದೋಷಗಳನ್ನು ಮನ್ನಿಸಿ)

   ಬಾಲೆ ಕಿರು ಬಾಯಗಲಿಸಿ ತಾರಷಡ್ಜಕ್ಕೇರಿ
   ಶಾಲ ತುದಿಬೆರಳಲ್ಲಿ ಸುತ್ತಿ ಹಾಡಿಹಳು
   “ಪಾಲಿರುಂದ ಪಾಸಂ ತೂರ ಪರುಪು ರಸಂ”
   ಕಾಲು ಬಾಲವಿರದೀ ಸಾಲಿಗೆ ನೆರವಲು|

 7. ಪದ್ಯಪಾನಿ ಗೆಳೆಯ ಜೀವೆಂ ನಾನು ಕಷ್ಟಪಟ್ಟು ಎರಡು ಚೌಪದಿಗಳಲ್ಲಿ (ತಪ್ಪುತಪ್ಪಾಗಿ) ಬಿಡಿಸಿದ ಪೂರಣವನ್ನು ಚಿಕ್ಕದಾಗಿ ಚೊಕ್ಕದಾಗಿ ಮುದ್ದಾದ ಕಂದವೊಂದರಲ್ಲಿ ಬಿಡಿಸಿ ಹೀಗೆ ಬರೆದು ಕಳಿಸಿದ್ದಾರೆ.

  (ನಾನು ಇಲ್ಲಿ ಇದನ್ನು ಹಾಕುತ್ತಿದ್ದರೂ, ತಮಿಳು ಪದವೊಂದೆರಡನ್ನು ಅವರಿಗೆ ಬಿಡಿಸಿ ಹೇಳಿದ್ದಕ್ಕಿಂತ ಹೆಚ್ಚಿನ ಪಾಲು ನನ್ನದೇನೂ ಇಲ್ಲ!)

  ಸುಬ್ಬೀ ನಡೆದಳ್; ತಲೆಯಂ
  ರುಬ್ಬುತ ಬಲವಾಗಿ ಷಡ್ಜದೆ ನಿಲಿಸಿ ತಾರ
  ಕ್ಕೆಬ್ಬಿಸಿ ಪಾಲ್ಕೂಡಮಿರುಂ
  ದಪ್ಪಾಸಂ ತೂರ ಪರುಪು ರಸಮೆಂದುಲಿದಳ್

  • ಹಂಸಾನಂದಿಯವರು ಅವರಿಗೆ ಸಹಜವಾದ ನಮ್ರತೆಯನ್ನು ಮೆರೆದಿದ್ದಾರೆ, ಆದರೆ ಇದೊಂದು ‘ಜಂಟಿ ಕಾರ್ಯಾಚರಣೆ’ ಎನ್ನುವುದಂತೂ ನಿಜ. ತಮಿಳಿನ ಮಟ್ಟಿಗೆ ‘ಪಬಯೋರಭೇದಃ’ ಆದ್ದರಿಂದ ಪ್ರಾಸಕ್ಕೆ ಹ್ರಾಸವಿಲ್ಲವೆಂದು ನನ್ನ ಎಣಿಕೆ. ಏನೇ ಇರಲಿ, ಚೌಪದಿಯ ಆಕಾಂಕ್ಷೆಯನ್ನು – ನೆರವಲಿಗೆ ಅಭಾಸಕರವಾದ ಸಾಲನ್ನು ಅರಿಸಿಕೊಂಡಿದ್ದನ್ನು – ಕಂದದಲ್ಲಿ ತರಲಾಗಲಿಲ್ಲ, ಅದಕ್ಕೆ ನಾನೊಬ್ಬನೆ ಹೊಣೆ; ಹಾಗೆಯೇ ಪದ್ಯದಲ್ಲಿ ಇರಬಹುದಾದ ಇನ್ನಿತರ ತಪ್ಪುಗಳಿಗೂ.

 8. “ಪಿಟೀಲಿನಲ್ಲಿ ಬ್ರೋಚೇವಾರೆವರುರಾ ಕೊಯ್ದರೆ, ಅದು ಕರ್ಣಾಟಕ ಸಂಗೀತವಾಯಿತೇ ಹೊರತು, ಸಂಗೀತವಾಗಲಿಲ್ಲ. ಪಿಟೀಲಿನ ಎಲ್ಲ ಸಾಧ್ಯತೆಗಳನ್ನು ಹೊರಡಿಸಿದವನು ಯೆಹೂದಿ ಮೆನೂಹಿನ್ ಒಬ್ಬನೇ.” – ಬಿ.ಜಿ.ಎಲ್.ಸ್ವಾಮಿ
  ಶಿಖರಿಣೀ ವೃತ್ತ
  ಸಿತಾರೊಳ್ ಬ್ರೋಚೇವಾರೆವರೆನುತೆ ಮೀಂಟಲ್ ಬಲುಮೆಯೇನ್
  ಮಿತಾನಂದಂ ಮಾತ್ರಂ ಬಡಿಸುತ ಬಲಾಕಸ್ವನದೊಳಂ
  ಮಿತಂ ಸಾಹಿತ್ಯಕ್ಕೆಂಬ ಕುಚಿತದಿಸಂ(ism) ತೂರನಲಕಂ
  ವಿತಾನದ್ದೆಂಬೀ ನಾಭಿಗೆಡಿಸುತೆ ಗೈ ಮುಕ್ತದ ರವಂ

  • ಕಠಿನವಾದ ಶಿಖರಿಣಿಯಲ್ಲಿ ಈಇ ಪದ್ಯವನ್ನು ರಚಿಸಿರುವುದೇ ಒಂದು ಸಾಧನೆ. ಆದರೆ ಭಾಷೆಯಲ್ಲಿ ಮತ್ತೂ ಪರಿಷ್ಕಾರ ಬೇಕಿತ್ತು. ಜೊತೆಗೆ ಕನ್ನಡಕ್ಕೆ ಯತಿಯಿಲ್ಲವೆಂಬುದು ಶಾಸ್ತ್ರದ ಮಾತಾದರೂ ಅನುಭವದ ವಿವೇಕವಲ್ಲ. ಹೀಗಾಗಿ ಇಲ್ಲಿ ಹಲವೆಡೆ ಯತಿವಿಲಂಘನ( ತತ್ತ್ವತಃ ಇದು ಯತಿಭಂಗವೇ:-)ವಾಗಿದ್ದು ಇದು ಶ್ರುತಿಕಟುವೂ ರಸಭಂಜಕವೂ ಎನಿಸಿದೆ. ಅಲ್ಲದಎ ಕಡೆಯ ಪಾದದಲ್ಲಿ ಅರ್ಥಸ್ಪಷ್ಟತೆಯೂ ಇಲ್ಲ.

   • ಸ್ಪಷ್ಟೀಕರಣಕ್ಕಾಗಿ ಕೃತಜ್ಞ. ತಿದ್ದುತ್ತೇನೆ. ಕೊನೆಯ ಪಾದದ ಅರ್ಥವೆಂದರೆ, “ಸಾಹಿತ್ಯಕ್ಕೆ ನಿಷ್ಠೆ ಎಂಬ ವಿತಾನದ ಗಾಣಸುತ್ತುವಿಕೆಯಿಂದ (ನಾಭಿ) ಹೊರಬಂದು ಮುಕ್ತವಾಗಿ ನುಡಿ ವಾದ್ಯವೆ.”

    • ಬದುಕಿದೆನೊ ಬದುಕಿದೆನೊ ಯತಿರಿಕ್ತಕನ್ನಡೆಂ
     ಬುದರ ಪೂರ್ಣಾರ್ಥವಿಂದೆನಗಾಯಿತು|
     ಕುದುರಿಸಲು ಪದ್ಯರಚನೆಯ ಲೇಸು ಪಾಲಿಸುವು
     ದದನೆಂದು ತಿಳಿದು ಕುಸಿದು ಕುಸಿದಿಹೆನು!!

 9. ಯತಿಸ್ಥಾನಗಳನ್ನಷ್ಟೇ ಗಮನಿಸಿಕೊಂಡಿದ್ದೇನೆ. ನನಗೇ ಪೂರ್ತಿ ಸಮಾಧಾನವಿಲ್ಲ.
  ’ವರಜಿತಬಲಾ ಪ್ರಾಪ್ತವರದಿಂ’ ಒಂದೇ ಪದವಾಗಬೇಕು ಅಲ್ಲವೆ? ಆಗ ಯತಿಸ್ಥಾನಕ್ಕೆ ಚ್ಯುತಿ!
  ’ಡೊಂಬೀ’ ಪದ ಸಂಸ್ಕೃತದ್ದು. ಇದರ ಪ್ರಯುಕ್ತಿ ಇಲ್ಲಿ ಸಾಧುವೆ?
  ನನ್ನ ಕಲಿಕೆಗಾಗಿ ಇತರ ದೋಷಗಳನ್ನು ಪಟ್ಟಿಮಾಡಬೇಕೆಂದು ಕೋರಿಕೆ.

  ಸಿತಾರೊಳ್ ಬ್ರೋಚೇವಾರ್ ತೆರನ ಕೃತಿಯಂ ಮೀಂಟಿದೊಡದೇಂ
  ಮಿತಾರ್ಥಂ ವರ್ಜ್ಯಂ ಗೈ ವರಜಿತಬಲಾ ಪ್ರಾಪ್ತವರದಿಂ (ಅಜಿತಬಲಾ = ದೇವತೆ)
  ಮಿತಂ ತಾಂ ಗೀತಕ್ಕೇ? ಕುಚಿತದಿದಿಸಂ(ism) ತೂರನಲಕಂ
  ವಿತಾನಂ ಈ ಡೊಂಬೀ ನಿರಸಪಥದಿಂ ಮುಕ್ತಿ ಪಡೆಯೈ

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)