May 062012
 

ಈ ಚಿತ್ರಕ್ಕೆ  ಸೂಕ್ತ ಪದ್ಯವನ್ನು, ನಿಮಗಿಷ್ಟವಾದ ಛಂದಸ್ಸಿನಲ್ಲಿ, ರಚಿಸಿರಿ ::

ವಿಪರೀತ

  29 Responses to “ಪದ್ಯಸಪ್ತಾಹ – ೧೯ – ಚಿತ್ರಕ್ಕೆ ಪದ್ಯ”

  1. ಎಲ್ಲರೊಳಗೊಂದಾಗಿ ನಡೆದೆ ನಾ ಇಷ್ಟುದಿನ
    ಇನ್ನಾದರೂ ನೋಡಲೇ ಎನಗಿಷ್ಟವಾದದ್ದನ್ನ ?!!
    ಅವರಿವರಿಗಿಷ್ಟವಾದುದು ನನಗೇಕೆ ಇಷ್ಟವಾದೀತು?
    ಅರಿಯಲಿಲ್ಲ ಇದ ನಾನು, ನೋಡುತಲಿದ್ದೆ ಎಲ್ಲರೊಳಗೊಂದಾಗಿ.

    ಹೇಗೆ ಬಯಸಿದೆ ನಾ, ತಿಳಿವುವರು ಅನ್ಯರು ನನ್ನ ಇಸ್ಟಾರ್ಥವನ್ನು!!
    ಅರಿಯಬೇಕಿತ್ತು ನಾ, ಎನ್ನ ಮನದಾಳವನ್ನು,
    ಅರಿತು ಆಲಿಸಬೇಕಿತ್ತು ಮನವಾಡಿದ ಪಿಸುಮಾತನ್ನು
    ಆ ಕರೆಗೆ ಕಿವಿಕೊಟ್ಟು ಮುನ್ನೆಡೆದಿದ್ದರೆ ನಾನು,
    ನೋಡುತಲಿದ್ದೆನೇನೋ ಎನಗಿಷ್ಟವಾದದ್ದನ್ನು

    ಅನ್ಯರಾರು ತಡೆಯಲಿಲ್ಲ ನನ್ನ, ಕೊರತೆಯೊಂದೇ..
    ಅರಿಯಲಿಲ್ಲ ನನ್ನ ನಾ.
    ಅನ್ಯರ ಸಂಗ ಬೇಕೆನೆಗೆ ಸದಾ, ವಡನಾಟದಿ ಸಾಗಿದೆ ಜೀವನ.
    ಆಲಿಸಬೇಕಿತ್ತು ಮನದ ಪಿಸುಮಾತ, ಅರಿತು ಸವಿಯಬೇಕಿತ್ತು ಆ ನೋಟದ ಪರಿಯ

    ಇನ್ನಾದರೂ ಆಲಿಸುವೆನೇ? ಆಲಕ್ಷಿಸುವೇನೆ? ತಿಳಿಯದೆನೆಗೆ!!
    ಸದಾ ಮನವ ಕಾಡುವುದೊಂದೆ
    ಇನ್ನಾದರೂ ನೋಡಲೇ ಎನಗಿಷ್ಟವಾದದ್ದನ್ನ ?!!

    • ಪ್ರಿಯರೇ, ಇದು ಛಂದೋಬದ್ಧಪದ್ಯಗಳಿಗಷ್ಟೇ ಮೀಸಲಾದ ಅಂತರ್ಜಾಲ. ಇಲ್ಲಿ ಸಾಂಪ್ರದಾಯಿಕಚ್ಛಂದಸ್ಸುಗಳ ಕಲಿಕೆ, ಅಭ್ಯಾಸ ಮತ್ತು ಬಳಕೆಗಳಿಗೇ ಆದ್ಯತೆ. ಹೀಗಾಗಿ ದಯಮಾಡಿ ನಿಮ್ಮ ರಚನೆಯನ್ನು ಛಂದೋಬದ್ಧವಾಗಿಸಿ ಮತ್ತೆ ಕಳುಹಿರಿ. ನೆರವು ಬೇಕಿದ್ದಲ್ಲಿ ನಮ್ಮ ಪಾಠಗಲನ್ನು ಗಮನಿಸಿರಿ.

    • ರಾಕೇಶರೆ, ನೀವು ನಿಮ್ಮ ರಚನೆಯಲ್ಲಿ ಹೇಳಬೇಕೆಂದಿರುವುದನ್ನು ಸ್ವಲ್ಪ ಮಟ್ಟಿಗಾದರೂ ನನ್ನ ಪದ್ಯದಲ್ಲಿ ತಂದಿದ್ದೇನೆ.

  2. ಕಂಡೆನಾ ವಿಪರೀತ ಪದ್ಯವ
    ಮಂಡಲಕೆ ಇದು ಹೊಸದು ಕಷ್ಟವು ! 🙂
    ಭಂಡಧೈರ್ಯಕೆ ಹೇಳಲೇನುತ್ತರವಲೀಗೆನುತ |
    ಗುಂಡಗಿನ ಹಕ್ಕಿಗಳು ಕೂತವು
    ತುಂಡುಮರದಾಸರೆಯಲೊಟ್ಟಿಗೆ
    ದಂಡುಹೆದರಿದೆ ಜೀವಭಯದೀ ನೀರನಡುವೆನುತ ||

    • ಭಟ್ಟರೇ! ದುಷ್ಕರಪ್ರಾಸದ ಕಾರಣ ಪದ್ಯದ ರಸ ಸೊರಗಿದಂತಿದೆ. ಮತ್ತೊಂದು ಬಗೆಯಲ್ಲಿ ಪ್ರಯತ್ನಿಸಬಹುದಲ್ಲ?

      • ಧನ್ಯವಾದ, ಒಂದು ಪ್ರಯತ್ನ:

        ಜೋಲೀ ಹೊಡೆಯುತ ನಾವು ಜೀವದಭಯದಿಂದ
        ಸಾಲಾಗಿ ಕುಳಿತು ಚಿಂತಿಸುತ
        ಕಾಲ ಬರಲೆಮಗೆಂದು ಪೇಲವ ಮುಖಹೊತ್ತು
        ಪಾಲಿsಸೆಮ್ಮನು ದೇವನೆನುತ

  3. ಚಳಿಯಿ೦ ನಡುಗಲ್ ಹಕ್ಕಿಗ-
    ಳೆಳೆಬಿಸಿಲೊಳು ಮೈಯಕಾಸಿ ಕೊಳುತಲಿ ಕೂರಲ್
    ಸೆಳೆಯಲ್ ನೋಳ್ಪರ ಗಮನ೦
    ಹೊಳಪ೦ ಧಿಕ್ಕರಿಸಿ ಬೆನ್ನ ತೋರಿತೆ ವಿಹಗ೦

    • ಸೋಮ, ಶೈಲಿ ಚೆನ್ನಾಗಿದೆ. ಆದರೆ ಮತ್ತೂ ರಸವತ್ತಾದ ಪದ್ಯವು ಸಾಧ್ಯವೇನೋ! ಯತ್ನಿಸಿ ನೋಡಿ.

    • ಗಣೇಶ್ ಸರ್,
      ಇನ್ನೊ೦ದು ಪ್ರಯತ್ನ:)

      ಗಣದೊಳ್ಗೊರ್ವನ ನಡೆ ಪರಿ-
      ಗಣಿಸಲ್ ಸಾಜವತಿರೇಕ ತೋರ್ದಪ ಭಾವ೦
      ಚಣತಾ೦ ಸಮಗ್ರತೆಯೊಳ೦
      ಗುಣಬಾಹುಳ್ಯವನು ನೋಡಲೆತ್ನಿಪುದೊಳಿತಯ್

  4. [ವಿಪರೀತಗುಣ ಸಾಧಕರಿಗೆ ಅವಶ್ಯಕವಾದ ಗುಣ. ಮೋಹದ ಸಹಜಮಾರ್ಗಕ್ಕೆ ಬುದ್ಧ ವಿಪರೀತನಾದರೆ, ಗೆಲಿಲಿಯೋ, ಸಾಮಾನ್ಯಜ್ಞಾನದ ಮಾರ್ಗಕ್ಕೆ ವಿಪರೀತನಾಗಿದ್ದ.]

    ಸರಾಗಸುಖಮಾರ್ಗಮಂ ತೊರೆದ ಬುದ್ದನೇನ್ ಭಾವದೊಳ್
    ದುರಾಗ್ರಹಕುಮಂಜದಾ ಗೆಲಿಲಿಯೇನ್? ಗಡಂ ಗುಂಪಿನೊಳ್
    ತಿರುಂಗಿ ವಿಪರೀತದಿಂ ತೆರೆಯ ನೋಡುತಂ ನಿನ್ನೊಳಂ-
    ತರಂಗದೊಳದೇನನಂ ಮಥಿಸುತಿರ್ಪೆಯೋ ಪೇಳ್ವೆಯೇನ್?
    [ಛಂದಸ್ಸು – ಪೃಥ್ವೀ – ನನಾನನನನಾನನಾ|ನನನನಾನನಾನಾನನಾ]

    • ವಿಚಿತ್ರಮಧುರೋಜ್ಜ್ವಲಶ್ರುತಿಹಿತೋರುಗತ್ಯುತ್ಕಟಂ
      ವಚೋವಿಭವಶೋಭನಕ್ಕತಿಮನೋಜ್ಞಮೆಂದಪ್ಪುದಂ|
      ಸ್ವಚಾತುರಿಯೊಳಿಂತು ರೂಪಿಸಿದ ಹೊಳ್ಳರೇ! ನಿಮ್ಮೊಳಾಂ
      ರುಚಿಪ್ರಚುರಸಾಹಿತೀಸುಗತಸೌಖ್ಯಮಂ ಕಂಡೆನಯ್||

  5. ಎಲ್ಲರೊಳಗೊಂದಾಗು ವೆಂದಿರಲು ಡೀವೀಜಿ
    ಸೊಲ್ಲನಾಚರಿಸುವುದೊ ಮೀರುವುದೊ ಕೇಳ್
    ಬೆಲ್ಲವಿರೆ ಮಾತಿನೊಳ್ ಕಲ್ಲಾಗು ಮನದೊಳಗೆ
    ನಿಲ್ಲಿಸಲು ನಿನ್ನರಿವ ಬಾಳಿನೊಳ್ ನೀನ್

  6. [ಇಲ್ಲಿರುವ ವೈಪರೀತ್ಯವನ್ನು ಮರೆತರೆ, ಈ ದೃಶ್ಯದ ಸೊಗಸೇ ಸೊಗಸು….]

    ಜಗ್ಗನೆ ಬಾನಿನಂಗಳವ ಬೆಳ್ಪಿಸ ಬಂದಿಹ ಚಂದ್ರವಂಶಿಯೇ-
    ನಗ್ಗಣಿಯಿಂದಸೂರಿಯಗೆ ತರ್ಪಣವೀಯುವ ವಿಪ್ರಪಂಕ್ತಿಯೇನ್
    ಸಗ್ಗದ ಏಕತಾನತೆಯ ನೀಗಲು ಬಂದಿಹ ಪಕ್ಷಿಯಕ್ಷಿಯೇ-
    ನಗ್ಗಳಸಾಲ ನೋಡುತಿರೆ ಸಂತಸವಾಗದೆ ಪದ್ಯಪಾನಿಗುಂ.
    [ಅಗ್ಗಣಿ = ಶುದ್ಧೋದಕ, ಅಗ್ಗಳ = ಹಿರಿಮೆ, ಶ್ರೇಷ್ಠ, ಛಂದಸ್ಸು ಉತ್ಪಲಮಾಲೆ]

    • ಶೈಲಿಯಲ್ಲಿ ಮತ್ತೂ ಹಳಗನ್ನಡವು ಮೈಗೂಡಬೇಕು:-)

  7. ಇನ್ನೊಂದು ಪ್ರಯತ್ನ:

    ಮುಂದಿನದ ಯೋಚಿಸದೆ ಸುಮ್ಮನಿರೆ ತಾಂತ್ರಿಕರು
    ಬಂದನೆಯ್ ಹೊಸರೀತಿ ಚಿಂತಿಸುವವನ್
    ತಂದನೆಯ್ ಸ್ಟೀವ್ ಜಾಬ್ಸ್ ಜೀಯುಅಯ್ ಗಣಕಕ್ಕೆ
    ಕಂದರೂ ಮೆಚ್ಚಲಾವಿಷ್ಕಾರವನ್

    ಸ್ಟೀವ್ ಜಾಬ್ಸ್ – ಇಲ್ಲಿ ೪ ಅಥವಾ ೫ ಮಾತ್ರೆಗಳೊ ಗೊತ್ತಾಗುತ್ತಿಲ್ಲ.
    ಜೀಯುಅಯ್ – GUI , graphical user interface

    • 4. ಇಲ್ಲಿರುವುದು ಈ ಮತ್ತು ಆ ಎಂಬ 2 ಗುರುಗಳು ಅಷ್ಟೇ

  8. ಸಾಗಿ ಬಂದ ಹಾದಿಯ ನೆನೆ ನೀಗ ಬೇಡ ನೋಟವಂ
    ಭಾಗ್ಯಚಕ್ರವುರುಳಿ ಮರಳಬೇಕು ಮತ್ತೆ ಗೂಡಿಗಂ
    ಆಗಿಹೋದುದೆಂದು ವಿಮುಖನಾಗದಿರು ಚರಿತ್ರೆಗಂ
    ಈಗನವರಿಗೆಂದೆ ಇರುವುದೆಲ್ಲ ಗತದ ಪಾಠವುಂ

    • ಭಾಗ್ಯಚಕ್ರವನ್ನು ವರ್ಣವೃತ್ತದತ್ತ ತಿರುಗಿಸುವ ಯತ್ನ:

      ಸಾಗಿ ಬಂದ ಹಾದಿಯ ನೆನೆ ನೀಗ ಬೇಡ ನೋಟವಂ
      ಭಾಗ್ಯಚಕ್ರ ಸುತ್ತಿ ಮರಳಿಸುತ್ತೆ ಮತ್ತೆ ಗೂಡಿಗಂ
      ಆಗಿಹೋದುದೆಂದು ವಿಮುಖನಾಗದಿರು ಚರಿತ್ರೆಗಂ
      ಈಗನವರಿಗೆಂದೆ ಇರುವುದೆಲ್ಲ ಗತದ ಪಾಠವುಂ

  9. ಸಲ್ಲದೀ ನಡವಳಿಕೆ ನೇಹಿಗ!
    ಇಲ್ಲದಿಹ ಬೇಸರದ ಸೋಗಿನ
    ಲೊಲ್ಲೆ ಗೆಳೆಯರ ಕೂಟವೆನ್ನುತ ತಿರುಗಿ ಕುಳಿತಿಹೆಯಾ?
    ಮೆಲ್ಲ ಯೋಚಿಸು ಮತ್ತೆ ಜೀವನ
    ದಲ್ಲಿ ಒಂಟಿಯ ದಾರಿ ಸೊಗಸಿರ
    ದೆಲ್ಲರೊಳಗೊಂದಾಗಬೇಕೆಂಬನುಡಿ ಮರೆತಿಹೆಯಾ?

    • ಕಡೆಯ ಸಾಲನ್ನು ಹೀಗೆ ಬದಲಾಯಿಸಿದರೆ ಲಗಂ ದೋಷಗಳು ಮರೆಯಾಗುತ್ತವೆ ಎನಿಸುತ್ತದೆ:

      ಎಲ್ಲ|ರೊಳಗೊಂ|ದಾದ|ರೊಳಿತೆನು|ವುದನು| ಮರೆತಿಹೆಯಾ?

    • ಜೀವೋನ್ಮುಖಂ ಗಡಂ ಸಂ-
      ಜೀವೋತ್ಕರಮಲ್ತೆ ಗೆಳೆಯ ನಿಮ್ಮೀ ಪದ್ಯಂ
      ಭಾವನೆಯೊಳ್ ತಪ್ತಂ ಸಂ
      ಭಾವನೆಯೊಳ್ ಯುಕ್ತಮಿರ್ದು ಮನಮುಟ್ಟಿತಲಾ

      “ದೆಲ್ಲರೊಳಗೊಂದಾಗಬೇಕೆಂಬುದನು ಮರೆತಿಹೆಯಾ?”
      ಮಾಡಿದರೆ, ಲಘುಗಳನ್ನು ಇಳಿಸಿದ ಹಾಗಾಗುತ್ತದೆ. ಹೀಗೂ ಮಾಡಬಹುದು:
      ದೆಲ್ಲರೆಲ್ಲರ ಕೂಡೆ ಸಾಗುವ ಸೊಲ್ಲ ಮರೆತಿಹೆಯಾ

      • ಹೀಗೂ:
        ಎಲ್ಲರೊಳಗೊಂದಿರ್ಪುದೊಳ್ಳಿತು ನೆನೆಯು ನೀ ದಿವಿಜಂ (ಒಳಿತು ಎಂಬುದನ್ನು ಒಳ್ಳಿತು ಎನ್ನುವುದು typical of mAsti)

  10. ಈ ಮೇಲಿನ ಸಲಹೆಗೆ ಬೇರೆಡೆಗೆ ತಲೆ ಮಾಡಿ ನಿಂತಿರುವ ಹಕ್ಕಿಯ ಉತ್ತರ ಹೀಗಿರಬಹುದೇ?

    ಹತ್ತರೊಂದಿಗೆ ಆಗಲಾರೆನು
    ಮತ್ತೆ ಹನ್ನೊಂದನೆಯ ಹಕ್ಕಿಯು
    ಎತ್ತ ಹೋದರು ದಾರಿ ಹುಡುಕುವ ಧೈರ್ಯ ಜೊತೆಗಿರಲು
    ಸುತ್ತು ದಾರಿಯು ಬೇಡ ಜಗದವ
    ರೆತ್ತ ನಡೆಯಲಿ ಗುರಿಯ ತಿಳಿದಿಹೆ
    ನತ್ತಲೇ ನಡೆವಂಥ ಮುಡಿವನು ನಾನು ತಾಳಿಹೆನು!

  11. ಮುಂದೆ ತೇಲಿಪ ಬಾಳ ಪಯಣದೊ
    ಳೆಂದು ಮುನ್ನೋಟವದು ಸಾಧುವ –
    ದೆಂದು ಮುನ್ನೆಡೆವಾಗ ಹಿಂಗಡೆ ನೋಟವೊಂದಿರಲಿ |
    ಇಂದು ವಾಹನದೊಳಗು ಗಾಜದು
    ಮುಂದೆ ಬಹು ವಿಸ್ತಾರವಿದ್ದರು
    ಬಂದ ದಾರಿಯ ತೋರಲಿಹುದೊಂದಾರೆ ನೋಟಕವು ||
    [ ನೋಟಕ = rear-view mirror ]

  12. ಆಲಂಬನವಿದು ಸೃಷ್ಟಿಯ ಮಂತ್ರಂ
    ಬಾಳಂಬೆಸೆಯುಲು ಕರ್ತನ ತಂತ್ರಂ
    ಕೋಲಾರಿಸಿತೀ ಪಯಣದ ದಣಿವಂ
    ಸಲ್ಲುವುದಾತ್ಮಕು ದೇಹದ ನೆರವುs

  13. ಬಿಳಿಯ ಬಣ್ಣದ ಕೆಂಪು ಕೊಕ್ಕಿನ
    ನೀಳ ಕಾಲಿನ ಕುಸುರಿ ಗಣ್ಣಿನ
    ಇಳೆಯ ಸುಂದರ ಸೃಷ್ಟಿ ಸೊಬಗಿನ
    ವರುಣ ಮಿತ್ರರ ಹೊಟ್ಟೆ ಪಾಡಿನ
    ಸರಳ ಸಾಲಿನ ಸಭೆಯು ನಡೆದಿದೆ
    ನಿದ್ದೆ ಮಾಡದೆ ಸದ್ದು ಇಲ್ಲದೆ
    ಸುದ್ದಿಯಾಗದ ನಿತ್ಯ ಜೀವನ
    ತಂತ್ರ ಹೆಣೆಯುವ ಮಂತ್ರ ಸಭೆಯಲಿ
    ಎದ್ದು ಹಾರದೆ ಭಿನ್ನಮತದಲಿ
    ತಿರುಗಿ ಬಿದ್ದಿದೆ ಸಭೆಯ ಮಧ್ಯದಿ
    ಬಾಲಸೂರ್ಯನ ಹೊಳೆವ ಕಿರಣದ
    ಸ್ಫೂರ್ತಿ ಸ್ನಾನದಿ ಶಕ್ತಿ ಪಡೆಯುತ
    ಬೇಟೆಯಾಡುವ ನವ್ಯ ಸೂತ್ರದ
    ಪವನ ಮಾನದಿ ಲೆಕ್ಕ ಹಾಕುತ
    ಮನನ ಮಾಡಿವೆ ಮತ್ಸ್ಯ ಹನನಕೆ.

  14. ಮಂಕುತಿಮ್ಮನ ಕಗ್ಗದ 20-19-20-17 ಮಾದರಿ:
    ಹನ್ನೆರಡನೆಯ ಬುದ್ಧಿವಂತನಂದದೊಳಿದುಂ
    ತನ್ನೆಡಬಲದ ಮಧ್ಯಮಣಿಯೆಂದೆಣಿಸಿಹುದೆ?
    ಕುನ್ನಿಮಾನವನಂದದಲ್ಲವವಿವೇಕಿಯಿದು
    ತನ್ನ ಗಮ್ಯಕೆ ರಿವರ್ಸ್ ಪಾರ್ಕಿಂಗಿದೈ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)