May 132012
 

ಮಾವು ಬೆಸಲೆಯಾದುದೀಗಳೀಂತುದು ಮಗಳೇ” – ಎಂಬ ಸಾಲನ್ನೊಳಗೊಂಡ ಕಂದ ಪದ್ಯವನ್ನು ರಚಿಸಿರಿ

ಅರ್ಥ – ಮಾವು (ಮರ ಅಥವಾ ಹಣ್ಣು) ಬಸುರಿಯಾಗಿ ಇದೀಗ ಹೆತ್ತಿದೆಯಮ್ಮಾ ಮಗಳೇ

  22 Responses to “ಪದ್ಯಸಪ್ತಾಹ – ೨೦ – ಸಮಸ್ಯೆ”

 1. ಹಾವಿನ ಕಲ್ನಿಲಿಸಿದ ಮುಂ
  ಜಾವಿನೊಳತ್ತಿಯನು ಸುತ್ತಿಯೆರಗಿದ ಪೀರಂ
  ತಾವುಜವ ಕಟ್ಟಿದತ್ತಣಿ
  ಮಾವು ಬೆಸಲೆಯಾದುದೀಗಳೀಂತುದು ಮಗಳೇ

  ಆವು – ಹಸು (ಆಕಳು ಬಹುವಚನ)

  • ಪರಿಹಾರಕ್ರಮ ಸೊಗಸಾಗಿದೆ. ಆದರೆ ಸಮಸ್ಯೆಯ ಕೀಲಕಕ್ಕೆ ಬರುವಾಗ ವ್ಯಾಕರಣ ತಪ್ಪಿದೆ. ಅತ್ತಣಿಂ+ಆವು = ಅತ್ತಣಿನಾವು ಎಂದಲ್ಲದೆ ಅತ್ತಣಿಮಾವು ಎಂದಾಗದು. ಏಕೆಂದರೆ ಅತ್ತಣಿನ್ ಎಂದೇ ಆ ಪದವಿರುವುದು. ಈ ಕಾರಣದಿಂದಲೇ ಪ್ರಸ್ತುತ ಸಮಸ್ಯೆಯ ಪರಿಹಾರವು ತುಂಬ ತೊಡಕಾಗುತ್ತದೆ. ವಸ್ತುತಃ ಇದನ್ನು ನನ್ನೊಂದು ಅವಧಾನದಲ್ಲಿ (ಮೈಸೂರಿನಲ್ಲಿರುವ) ಕನ್ನಡದ ಮಹಾವಿದ್ವಾಂಸರಾದ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿಗಳು ನೀಡಿದ್ದರು.

   • ತಿಳಿ ಹೇಳಿದ್ದಕ್ಕಾಗಿ ಧನ್ಯವಾದಗಳು. ಅತ್ತಣಿಮ್ ತೆಗೆದು ತಿದ್ದಲು ಯತ್ನಿಸುತ್ತೇನೆ.

    ನೀವು ಟಿವಿವಿಯವರಿಗಿತ್ತ ಪರಿಹಾರವನ್ನು ದಯಮಾಡಿ ಇಲ್ಲಿಯೂ ಹಾಕಬೇಕು.

    • ಅವಧಾನದಲ್ಲಿ ಗಣೇಶರ ಪರಿಹಾರ ಇಂತಿದೆ ::
     ಜೀವನದಾಧಾರಮಿದೌ
     ಪಾವನ ಸಂತಾನದಾನದ ನಿದಾನಮಿದೌ
     ತೀವಿರೆ ಪಾಲಿಂ ನೋಡ –
     ಮ್ಮಾವು ಬೆಸಲೆಯಾದುದೀಗಳೀಂತುದು ಮಗಳೇ!

     [ ಒಬ್ಬ ಗೌಳಿಗನು ತವರಿಗೆ ಬಂದ ತನ್ನ ಮಗಳಿಗೆ ಇತ್ತೀಚಿನ ವಿಷಯಗಳನ್ನು ಹೇಳುತ್ತಿದ್ದಾನೆ. ತಮ್ಮ ಬದುಕಿಗೆ ಆಧಾರವೂ ಒಳ್ಳೆಯ ತಳಿಯನ್ನೂ ಹೈನನ್ನೂ ಕೊಡುವಂಥದ್ದೂ ಆದ ಅಮ್ಮಾವು (ಕಾಡು ದನದ ಜಾತಿಯ ಆಕಳು) ಇದೀಗ ಹೊತ್ತು ಹೆತ್ತಿದೆಯೆಂದು ವಿಸ್ತರಿಸಿದ್ದಾನೆ. ಅಮ್ಮಾವು ಎಂಬುದು ಅಚ್ಚಗನ್ನಡದ – ಇದೀಗ ವಿರಳ ಪ್ರಚುರವಾದ ಪದ ]

  • ಜೀವೆಂ ಸರ್, ನೀವು (ನ್)ಅವ(ವಿ)ಧಾನಿಯವರ ಪರಿಹಾರದ ಹತ್ತಿರವೇ ಇದ್ದೀರಿ. ಸೂಪರ್!

   • ರವೀಂದ್ರ, ಒಮ್ಮೊಮ್ಮೆ ಮಾತ್ರ ಹಾಗಾಗುವುದುಂಟು. ಆದರೆ ವ್ಯಾಕರಣ ತಪ್ಪಿತು – ಬಾಯಿಗೆ ಬಂದದ್ದು ಕೈಗೆ ಬರಲಿಲ್ಲ 🙂

 2. ತಾವರೆಗಣ್ಣಿನ ಪೆಣ್ಣಿಗ-
  ದಾವೂರಿನ ಪಡ್ಡೆಪೋರಿಟ್ಟರು ಪೆಸರ೦
  ಗಾವಿಲಚರ್ಚೆಗೆ ವಸ್ತುವು
  “‘ಮಾವು’ ಬೆಸಲೆಯಾದುದೀಗಳೀಂತುದು… ಮಗಳೇ?!”

  • Typo correction:

   ತಾವರೆಗಣ್ಣಿನ ಪೆಣ್ಣಿಗ-
   ದಾವೂರಿನ ಪಡ್ಡೆಪು೦ಡರಿಟ್ಟರ್ ಪೆಸರ೦
   ಗಾವಿಲಚರ್ಚೆಗೆ ವಸ್ತುವು
   “‘ಮಾವು’ ಬೆಸಲೆಯಾದುದೀಗಳೀಂತುದು… ಮಗಳೇ?!”

 3. [ತಾಯಿ, ತನ್ನ ಚಿಕ್ಕ ಮಗಳನ್ನು ಹೊತ್ತು ವಾಕ್ ಹೋಗುತ್ತಾ, ಹೂವುದುರಿ ಮಿಡಿಕೂಡುತ್ತಿರುವ ಮಾವಿನ ಮರವನ್ನು ನೋಡಿ, ಹೀಗೆ ಚಿಂತಿಸ ಬಹುದೇ?]
  ಪೂವಕಳಚಿಟ್ಟುದೇಕಂ
  ನೋವೇನ್? ವೈರಾಗ್ಯಮೇನ್? ಛೆ! ಅಲ್ತು ಬಸಂತಂ
  ಸೇವಿಸಿಹಳ್ಗೆಂತು ಜಡಂ
  ಮಾವು ಬೆಸಲೆಯಾದುದೀಗಳೀಂತುದು ಮಗಳೇ
  [ವಸಂತನನ್ನು ಸೇವಿಸಿ ಬೆಸಲೆಯಾದಳೆಂದು ಪರಿಹರಿಸುವ ಯತ್ನ]

 4. ಆವ ನಿಯಮದಿಂ ಜಗದೊಳ್
  ಜೀವಸಮಸ್ತವಿಹುದೆಂದು ಕೇಳ್ದ ತುಡುಗಿಗಂ
  ಮಾವನು ಪೇಳ್ದನ್ ಚೀಪುತ
  ಮಾವು, “ಬೆಸಲೆಯಾದುದೀಗಳೀಂತುದು” ಮಗಳೇ
  🙂

  • ha ha 🙂

  • ಮತ್ತೊಮ್ಮೆ ನೋಡಲಾಗಿ, “ಬೆಸಲೆಯಾದುದೀಗಳೀಂತುದು” ಎಂಬಲ್ಲಿ “ಈಗಳ್” ಎಂದಿದ್ದುದರಿಂದ, ಎಣಿಸಿಕೊಂಡ ಅರ್ಥ ಸ್ಪಷ್ಟನೆ ಕಾಣುತ್ತಿಲ್ಲ. 🙁
   ಬೇರೊಂದು ಪ್ರಯತ್ನ ಮಾಡುತ್ತೇನೆ

 5. ಇನ್ನೊಂದು ಪ್ರಯತ್ನ ::

  ಲಾವಾ ರಸವದು ಹೊಮ್ಮಿರ
  ಲಾವ ಪರಿಯಿದೆಂಬ ಬಾಲೆಗರುಹಲ್ ತಿರೆಯಿಂ
  ದೀವುದೆವೆಲ್ಲ ಜನನವ –
  ಮ್ಮಾವು ಬೆಸಲೆಯಾದುದೀಗಳೀಂತುದು ಮಗಳೇ

  [ಅಮ್ಮಾ – ಅವು ಬೆಸಲೆಯಾದುದೀಗಳೀಂತುದು]

 6. ಈಂತುದು ಎಂದರೆ ಮುಗಿಯಿತು, ಆ ಹಸು/ಮಾನಿನಿ ಬಸುರಿಯೆಂದು ಸರ್ವಸಿದ್ಧ. ಒಟ್ಟಿಗೆ ಬಸುರಿಯಾದುದು ಮತ್ತು ಪ್ರಸವವಾದುದು, ಅರ್ಥಾತ್ ಗರ್ಭಾಧಾನವಾಗುತ್ತಿದ್ದಾಗಲೇ ಪ್ರಸವವಾಗಿಬಿಟ್ಟ ಒಂದೇ ಒಂದು ನಿದರ್ಶನವೆಂದರೆ, ಬಿ.ಜಿ.ಎಲ್. ಸ್ವಾಮಿಯವರ ಕಾಲೇಜುತರಂಗದಲ್ಲಿನ ರಾಜಾತಿ ಅಮ್ಮಾಳಳ ಮುಕ್ತ ಮಹಾವಿದ್ಯಾಲಯ. ವರಾತ ಮಾಡಿ, ತನ್ನ ಎಂ.ಎಲ್.ಎ. ಅಳಿಯನಿಂದ ಸರಕಾರೀ ಅನುದಾನ ಪಡೆದುಕೊಂಡು, ತನ್ನ ತವರೂರಿನಲ್ಲಿ ಆಲದಮರವೊಂದರ ಕೆಳಗಿನ ನೆಲವನ್ನು ಬಂಗಾರ-ಬೆಲೆಯ (ಬಿಲ್ ಪ್ರಕಾರ) ಸಗಣಿ-ಗಂಜಲಗಳಿಂದ ಸಾರಿಸಿ ನಿರ್ಮಿಸಿದ ಓಪನ್ ಕಾಲೇಜು ಅದು. ಅವಳೇ ಪ್ರಾಂಶುಪಾಲಳು; ಮೇನೆಗಾಡಿಯಲ್ಲಿ ಓಡಾಡುವಳು. ಇನ್ನೆಷ್ಟೋ ಕೋಲಾಹಲಗಳನ್ನು ಓದಿಯೇ ಆನಂದಿಸಬೇಕು.

  ತಂದೆಯೊಬ್ಬ ತನ್ನ ಮಗಳಿಗೆ ಈ ಪ್ರಸಂಗ ತಿಳಿಸಿದಂತೆ ಪರಿಹಾರ:
  ಗೋವಿನ ಗಂಜಲ-ಸಗಣಿಯ
  ಸಾವರಿಸಾಲದಡಿ ನಿರ್ಮಿಸಿದ ರಾಜಾತಿ ಮ
  ಹಾವಿದ್ಯಾಲಯವಿಂತುಂ
  ಆವು ಬೆಸಲೆಯಾದುದೀಗಳೀಂತುದು ಮಗಳೇ

  ದೋಷಗಳು:
  ಎರಡನೆಯ ಪಾದಕ್ಕೆ ಐಡಿಯ ಮುಗಿದಿಲ್ಲ.
  ಗಣ-ಪದ ಹೊಂದಾಣಿಕೆ ಸೊರಗಿದೆ.
  ಸಮಸ್ಯಾಪಾದಕ್ಕೆ smoothಆಗಿ ಸಾಗಿಲ್ಲ.
  ಪ್ರಾಸ್ತಾವಿಕ ವಿವರಣೆ ಇಲ್ಲದೆ ಪದ್ಯ ಅರ್ಥವಾಗುವುದೂ ಇಲ್ಲ.
  Sorry, no other idea strikes me.

  • ಇಂತಾಗಳಾತ್ಮಪರಿಲೋಕನಸದ್ವಿಮರ್ಶಂ
   ಸ್ವಾಂತಂ, ಸ್ವಕಾವ್ಯಗುಣದೋಷವಿವೇಕದೊಳ್ ದುರ್-
   ದಾಂತರ್ಗೆ ಕಜ್ಜಮೆನಿತಯ್ ಕುವಿಮರ್ಶಕರ್ಗೆ?
   ಭ್ರಾಂತಂ ಗಡಾಂ; ತೊಳಲಿದೆಂ ಪೊರೆಯಯ್ ಪ್ರಸಾದೂ!!!:-)

   (ನೀವಿಷ್ಟು ಸೊಗಸಾಗಿ ಸಮಗ್ರವಾಗಿ ಸ್ವರಚನೆಗಳ ನಿರ್ಮಮವಿಮರ್ಶನವನ್ನು ಮಾಡಿಕೊಂಡ ಬಳಿಕ professional ವಿಮರ್ಶಕರಿಗೆ ಕೆಲಸವೆಲ್ಲಿ? ಪಾಪ, ಭೈರಪ್ಪನವರು ಬರೆಯದಿದ್ದರೆ ಅದೆಷ್ಟೋ ಪತ್ರಿಕೆ-ಸಾಹಿತಿಗಳಿಗೆ ಕೆಲಸವೇ (ಹೊಟ್ಟೆಪಾಡು; ಅರ್ಥಾತ್ ಹೊಟ್ಟೆಕಿಚ್ಚಿನ ಪಾ(ಹಾ)ಡು) ಏನಾಗಬೇಕು?!?……ಆದರೂ ದ್ವಿತೀಯಪಾದಾಂತ್ಯದಲ್ಲಿ ನಿಯತವಾಗಿ ಬರಬೇಕಿರುವ ಗುರು ಬರದೆ ನನ್ನೊಳಗಿನ ವಿಮರ್ಶಕನು ಗುರ್ ಗುರ್ ಎನ್ನುತ್ತಿದ್ದಾನೆ:-)

   • ದ್ವಿತೀಯಪಾದಾಂತ್ಯದಲ್ಲಿ ಗುರು ಬಂದಿಲ್ಲ ಎಂದೇಕೆ ಹೇಳುವಿರಿ? ವಿಮರ್ಶನದ ನೆಪದಲ್ಲಿ ಅಲ್ಲಿ ನೀವೇ (ಗುರುವರ್ಯ) ಬಂದು ನಿಂದಿ(ನಿಂದೆ)ರಲ್ಲ! ಗುರುವು ಬಂದುದು ಮಾತ್ರವಲ್ಲ, ಗುರ್ ಗುರ್ ಎಂದೆಲ್ಲ ಹೇಳಿರುವಾಗ, ಯಃಕಶ್ಚಿತ್ ಒಂದು ಮಾತ್ರೆಯಿಲ್ಲ ಎಂದು ದೂರುವುದೆ!!

    • ಹೇಳಿಕೊಂಡುಬಿಡುತ್ತೇನೆ. ಈ ಹಿಂದೆಯೂ ಹೀಗೆ ಸ್ವವಿಮರ್ಶನ ಮಾಡಿಕೊಂಡು ಬರೆದುಕೊಂಡಿದ್ದೇನೆ. ಆಗೆಲ್ಲ ನಿಮ್ಮಿಂದ ಈ ಕೆಳಗಿನ ಪ್ರತಿಕ್ರಿಯೆ ಬರುತ್ತದೆ ಎಂಬ ಆತಂಕದಲ್ಲೇ ಇದ್ದೆ: “ಇಷ್ಟೆಲ್ಲ ಸ್ವವಿಮರ್ಶನ ಮಾಡಿಕೊಳ್ಳುವವನಿಗೆ, ಆ ದೋಷಗಳನ್ನು ನಿವಾರಿಸಿಕೊಂಡು ಸರಿಯಾಗಿ ಬರೆಯೋಕೆ ಏನು ಧಾಡಿ?”
     The blunder in the last gaNa of the 2nd paada is sheer negligence. Your ಗುರ್ ಗುರ್ is justified. I have rectified it:
     ಗೋವಿನ ಗಂಜಲ-ಸಗಣಿಯ
     ಸಾವರಿಸಾಲದಡಿ ನಿರ್ಮಿಸಿದ ರಾಜಾಳಾ
     ಮಾವಿದ್ಯಾಲಯಮಿಂತುಂ:
     ಆವು ಬೆಸಲೆಯಾದುದೀಗಳೀಂತುದು ಮಗಳೇ
     (ಮೂರನೆಯ ಪಾದವನ್ನು ’ಮಾವಿದ್ಯಾಲಯಲಕ್ಶ್ಯಂ’ ಎಂದು ಮಾಡಬಹುದೆ, ‘ಆವು ಬೆಸಲೆಯಾದುದೀಗಳೀಂತುದು’ ಎಂಬುದಕ್ಕೆ ದೃಷ್ಟಾಂತವೆಂಬರ್ಥದಲ್ಲಿ?)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)