Jun 032012
 

ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ

ಆಧಾರ : ತೆಲುಗಿನ ಬ್ಲಾಗ್ “ಶಂಕರಾಭರಣಂ”

 

ಲೇಸೈ  ಪದ್ಯಾಪೂರಣ’

ರಾಸಿಕ್ಯದ ರಾಜಧಾನಿ ರಸಪದಪಾನಂ

ಯೀಸುಲಭ ಸಮಸ್ಯೆಯನು ಸ

ಲೀಸಾಗಿಸಬಲ್ಲರಲ್ತೆ ಲೀಲೋತ್ಸಾಹರ್

  95 Responses to “ಪದ್ಯಸಪ್ತಾಹ – ೨೩– ಸಮಸ್ಯೆ”

 1. ಗ್ರೀಸಿನ ಯೋಧ೦ಗೊಲಿದ೦
  ಮೋಸ೦ಗೈಯುತಲಿ ತಕ್ಷಶಿಲೆಗ೦, ಜನರಾ
  ಬೇಸರದಿಪೇಳ್ದರ೦ಭಿಯ-
  ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ

 2. ಶಾಸಕ ಮಾತ್ರಂ ಮೆರೆವನ್
  ಮಾಸಂ ಮಾಸಂ ಜನಂಗಳ ಬೆಮರ ಪೀರ್ದುಂ| (Their whopping monthly spending!)
  ಲೇಸಂ ಗೈಯದ ರೀತಿಯ-
  ಶಾಸನಧಿಕ್ಕಾರವೇ ಪ್ರಶಸ್ತವದಲ್ತೈ||

 3. ಕೂಸೇ, ಪುಗುಮಲ್ತತ್ತೆ
  ನ್ನಾಸೇ, ಬೀಳ್ದೊಡೆಮಗಾರಿಹರೆನುವ ಪರಿಯು-
  ಲ್ಲಾಸಿಗೆ ಕೇಳ್ವುದೆ? ಕೂಸಿಗೆ
  ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ
  [ತಾಯಿಯ ಮಾತನ್ನು ಮೀರುವ ಕಂದಮ್ಮದ ಬಗೆಗೆ]

 4. ಚಾ ಸೊಪ್ಪಿಗುಪ್ಪಿಗಂಟಿದ
  ಕಾಸಿನ ತೆರಮಾಂಗ್ಲರಾಜ್ಯರವಿಕರಕಾಂತಿ
  ಹ್ರಾಸಂ ಗೆಯ್ದುದಲಾ; ಕರ
  ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ

  ೧೭೭೩ರ Boston Tea Party ಹಾಗೂ ೧೯೩೦ರ ಉಪ್ಪಿನ ಸತ್ಯಾಗ್ರಹ, ಇವೆರಡೂ ಆಯಾಕಾಲದ ಆಂಗ್ಲ ಸಾಮ್ರಾಜ್ಯವು ಒಡೆದು ಹೊಸ ನಾಡುಗಳ ಹುಟ್ಟಿಗೆ ದಾರಿ ಮಾಡಿದ ಘಟನೆಗಳು.

 5. ಕಾವಿಯ ಬೊಮ್ಮನ ಪೂರಣ
  ಮಾವಿರ್ಭವಿಸಿತ್ತೆ ನಾಲ್ಕು ಮೊಗನಗುವಿಂದಂ
  ಜೀವೆಂ ಪ್ರಸಾದು ಸೋಮಂ
  ರಾವೀಂದ್ರರ ಯತ್ನಸ್ತುತ್ಯ ರಂಜಿಪುದಲ್ತೇ

  • ಕಾವಿಯ ತೊಟ್ಟನೆ ಮೇಣ್ ರಾ
   ಜೀವದೊಳಿರ್ದಂ ಪರಾಗಮನೆ ಪೂಸಲ್ಕಾ
   ಭಾವವಡೆದನೇ? ನಿಮ್ಮಾ
   ಕಾವಿಯ ಬೊಮ್ಮನ ರಹಸ್ಯ ತಿಳಿಪಿಂ ಮೌಳೀ

   • ಆವಿಧದಿಂ ನಾರಯಣನೊ
    ”ಕಾವಿಯ’ ಕಾವ್ಯದ ಕುಪುತ್ರ ನಾರೀತಿಯೊಳೇ
    ಕಾವಿಯನೆ ಸೃಷ್ಟಿ, ಬೆಂಕಿಯೆ
    ವೈವಿಧ್ಯಂ ಸರಸ ಚೇಷ್ಟೆ ಜೀವೆಮ್ಮರಿವಂ

   • ಉತ್ಪಲಮಾಲೆ:
    ’ಕಾವಿಯ’ಮೆಂದು ಪೇಳಿದುದು ’ಕಾವ್ಯ’ವನಲ್ಲವೆ ಚಂದ್ರಮೌಳಿ ನೀವ್
    ತಾವೆಣಿಸೇನನೋ ತೊಡಿಸಿದರ್ ನಿಜ’ಜೀವೆ’ರಜಂಗೆ ಕಾವಿಯಂ {ಜೀವೆಂ ತಪ್ಪು. ಜೀವೆ(ಙ್ಕ) ಸರಿ.}
    ಕಾವಿಯನುಂ ಬರೇ ತೊಡಿಸಿ ತಾನ್ ಮಗುದೈಹಿಕಕಾತನಂ ಸು-ರಾ
    ಜೀವದ ಗಂಧ ಪೂಸಿಸಿ ಸೆಳೆರ್ದರೆ ವಾಸನೆಯಂಟಿಸಾವುದೋ

    • 3ನೆಯ ಪಾದದ ಮಧ್ಯದಲ್ಲಿರುವ ’ತಾನ್’ ಪದವನ್ನು ’ತಾವ್’ ಎಂದು ತಿದ್ದಬೇಕು

    • ಇನ್ನೊಂದು spello ಇತ್ತು. ತಿದ್ದಿದ್ದೇನೆ.
     ’ಕಾವಿಯ’ಮೆಂದು ಪೇಳಿದುದು ’ಕಾವ್ಯ’ವನಲ್ಲವೆ ಚಂದ್ರಮೌಳಿ ನೀವ್
     ತಾವೆಣಿಸೇನನೋ ತೊಡಿಸಿದರ್ ನಿಜ’ಜೀವೆ’ರಜಂಗೆ ಕಾವಿಯಂ {ಜೀವೆಂ ತಪ್ಪು. ಜೀವೆ(ಙ್ಕ) ಸರಿ.}
     ಕಾವಿಯನುಂ ಬರೇ ತೊಡಿಸಿ ತಾವ್ ಮಗುಳೈಹಿಕಕಾತನಂ ಸು-ರಾ
     ಜೀವದ ಗಂಧ ಪೂಸಿಸಿ ಸೆಳೆರ್ದರೆ ವಾಸನೆಯಂಟಿಸಾವುದೋ

     • ಉತ್ತರ ನಿಮ್ಮಪದ್ಯದೊಳೆ ಊಹಿಸೆ ಚೆಂದವು ಶ್ರೀಪ್ರಸಾದರೇ :)-

  • ಚ೦ದ್ರಮೌಳಿಯವರೇ ,

   ಧನ್ಯವಾದಗಳು ಸರ್

 6. ಸಾಸಿರ ಭಂಗಿಗಳಲಿ ಯೋ –
  ಗಾಸನವಂಗಾಂಗ ಕಾದಿರಲ್ ಜೀವನದೊಳ್ |
  ಮೋಸದಿ ಕೆಡಗುವದೀ ಶೀರ್ –
  ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ ||

  • ಹಾಸ್ಯದೊಳುಂಸತ್ಯನುಡಿದೆ ಲೇಸೈರಾಮಾ

  • ರಾಮ್, ಅದು ’ಶೀರ್-ಷಾಸನ’ವಾಗಬೇಕಲ್ಲವೆ?

   • ಆದರೆ ಗಳೆಯಾ ! ತಲೆಕೆಳ –
    ಗಾದೊಡೆ ಮಹವಪ್ಪುದಲ್ಪವೆಂದೊರೆದಿರ್ಪೇಂ

    ಹಾಗೂ ::
    ತಿಂಬುವುದಲ್ಪವು ಮಹಮಂ
    ಜಂಬವುಡುಗಿರೆ ತಲೆ ಕಾಲ ಕೆಳಗಾಗುತಲೇ

    • ಹೇ ಸಖ, ಮೀಸೆಯ ಮಾಸದಿ
     ಹೀ ಸಮಜಾಯಿಷಿಯದಲ್ತೆ ಶೀರ್ಷಾಸನ ತಾಂ!

  • chennagide raam 🙂

 7. ಸಾಸಿರೆಯಣ್ಣನು ದೇಶದೆ [ಸಾಸಿರೆಯಣ್ಣ = ಅಣ್ಣ ಸಾಸಿರೆ = ಅಣ್ಣ ಹಜಾರೆ]
  ಸೂಸಿದ ಸರ್ಕಾರದೆಲ್ಲ ದುಷ್ಟತನಗಳಂ
  ಮೋಸದ ಕುಟಿಲ ಭ್ರಷ್ಟರ
  ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ ||

 8. ಗದ್ಯವಿರದೆ ಪದ್ಯದೊಳೇ
  ಸದ್ಯದಿ ಸಾಗುತಿಹ ಗತಿ ಯವಧ್ಯಮಿರೆ ಸೊಗಂ

  • ಸದ್ಯಕೆ ತಿಳಿಸೈ ಸಖವರ
   ಪದ್ಯ’ದವಧ್ಯ’ಗತಿಯೆಂಬುದ’ದಖಂಡ’ತೆಯೇ?

   • ವೇದ್ಯವ ನಾಂತಿಳಿಸುವುದೇಂ?
    ಹೃದ್ಯಮದೊಂದೇಯಖಂಡವದ್ವೈತಮಲಾ.

 9. ಮೋಸದೆಯಾಟವ ಗೆದ್ದಿರ
  ಲಾಸುರಿ ಮದದಿಂದ ಕೊಬ್ಬುತೆಳೆದನಬಲೆಯಂ
  ಹೇಸಿಗೆಯೆಸಗಿದನಾ ದುಶ್ –
  ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ

  • ಉದ್ದೇಶಿತ ಪೂರಣಮಂ
   ಗೆದ್ದನ್ ಶ್ರೀರಾಮಚಂದ್ರ ಕೀಲಕಪದದಿಂ
   ಉದ್ದಾಮರುಳಿದವರು ನೀ-
   ವುದ್ದೀಪಿಸಿ ಧೀಯ, ನೀಡಿನವ್ಯೋತ್ತರಗಳ್

  • ಮೋಸದೊಳಾಟವ ಗೆದ್ದಿರ
   ಲಾಸುರ ಮದದಿಂದ ಸುಲಿದನಬಲೆಯವಸ್ತ್ರಂ
   ಈಸವರಣೆ ಮಾಡಬಹುದೆ
   ಪಾಸಾಗಿಹ ಪದ್ಯಮತ್ತು ಲೇಸಾಗುವುದೇ?

   • ಆ ಸುಲಿಗೆಯಪದಗಳೊಪ್ಪುವುವು ಪೂರಣಕೈ ::

    ಮೋಸದೆಯಾಟವ ಗೆದ್ದಿರ
    ಲಾಸುರ ಮದದಿಂದ ಸುಲಿದನಬಲೆಯವಸ್ತ್ರಂ
    ಹೇಸಿಗೆಯೆಸಗಿದನಾ ದುಶ್ –
    ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ

 10. ಅಮಮಾ! ಆಶುವಿಶೇಷಭಾಷಿಕತೆಯಿಂ ನಿಶ್ಶೇಷರಾಸಿಕ್ಯದಿಂ
  ಭ್ರಮದೀಶಾನ್ಯದಿಶಾಧಿನಾಯಕಜಟಾಜಾಟಿಲ್ಯಕೌಟಿಲ್ಯವಿ-
  ಕ್ರಮಕಾಮಿನ್ಯಮರಾಪಗಾರ್ಭಟಭಟಾಸ್ಫೋಟಾಟಧಾಟೀನಟೀ-
  ಕ್ಲಮಕಾರಿಸ್ಫುರಿದಂಬುಜೋದ್ಭವವಧೂವಾಹ್ಯಾಲಿಯೇಂ ಚೆಂದಮೋ!!

  ಹಾಸವಿನಿರ್ಜಿತಕುಕವಿವಿ-
  ಲಾಸರೆನಲ್ ನಮ್ಮ ಪದ್ಯಪಾನಿಗಳೀಗಳ್|
  ತ್ರಾಸಮದಿಲ್ಲದೆ ಸಮೆದ ಕ-
  ಲಾಸರ್ವಸ್ವಂ ಸದಾ ಪ್ರಶಸ್ತಮನಸ್ತಂ||

  ಈ ಸಮಸ್ಯಾಪೂರಣದಲ್ಲಿ ಅಹಮಹಮಿಕೆಯಿಂದ ಪಾಲ್ಗೊಂಡು ಸರಸರನೆ ಸರಸವಾಗಿ ಪದ್ಯಪ್ರಸೂನಗಳನ್ನು ಬಿರಿಯಿಸಿದ ಗೆಳೆಯರಿಗೆಲ್ಲ ಅಭಿನಂದನೆ, ಅಭಿನಂದನೆ.
  ಪ್ರಕೃತಸಮಸ್ಯೆಗೆ ನನ್ನದೂ ಒಂದು ಪರಿಹಾರ:

  ಆಸನಮೋಹಮಪಾಯಂ
  ದಾಸತೆಯಂ ನೀಳ್ವುದಲ್ತೆ ದೇವೇಶನಿಗಂ!!
  ತ್ರಾಸಾಧಿಕಮೆನಿಸಿರ್ಪಾ-
  ಶಾಸನಧಿಕ್ಕಾರಮೇ ಪ್ರಶಸ್ತಮದಲ್ತೇ||

  ( ಎಲ್ಲ ಮೋಹಗಳಿಗಿಂತ ಆಸನಮೋಹ ಅಪಾಯಕರ. ಇಂಥ ಆಸನಗಳ (ಅಧಿಕಾರಸ್ಥಾನಗಳ) ಪೈಕಿ ಆಶೆಯೆಂಬ ಆಸನದ ಅಪಾಯ ಮತ್ತೂ ಅತಿಶಯ. ಆದುದರಿಂದ ಆಶಾಸನವನ್ನು ಧಿಕ್ಕರಿಸುವುದೇ ಪ್ರಶಸ್ತವೆಂಬುದು ಈ ಸಮಸ್ಯಾಪರಿಹಾರದ ತಾತ್ಪರ್ಯ)

  • ಹೇಗೊಹಾಗಂತೆ ಸಾಗುತಿರ್ಪ ನುಡಿ ಪದ್ಯ ಮಿತ್ರರಾಟ
   ಬೇಗ ಶಿವ ಜಟೆಯಿನಿಳಿದ ಗಂಗೆಯಂತಾಯ್ತೆ ವಾಣಿಮಾಟ
   ಶ್ರೀಗಣೇಶರೀಯುಪಮೆ ಮತ್ತೇಭ ಮತ್ತನುಣಿಸುವೂಟ
   ’ರಾಗ ” ಪೂರಣಕೆ ಬಧಿರರೇನು ಕಿತ್ತಾಡೆ ಗಳಿಸೆ seatಅ

  • ಸೋಸಿ ತತ್ವಗಳ ಭಟ್ಟಿಯಿಳಿಸಿ ಪಡೆದಂಥ ಸರಳ ಸತ್ಯ
   ದಾಸರಾಸನಗಳಾಸೆ ತಿಮಿರಮಂ ಬೆಳಗಲೆಂಬೆ ನಿತ್ಯ

 11. ತಂದ್ರಿಯಿಲ್ಲದೆ ಸಮಸ್ತಮಿತ್ರರುಂ
  ಸಾಂದ್ರಮಾಗಿ ಕವನಿಪ್ಪವೊಲ್ ಪ್ರಶ-
  ಸ್ತಂ ದ್ರುತಪ್ಲುತಿಯಿನೊಪ್ಪಮಿತ್ತನೀ
  ಚಂದ್ರಮೌಳಿ ಗಡ ವಂದ್ಯನಾವಗಂ||

  • ಇದು ಪೊಗಳಿಕೆಯೆ ಮಾರ್ಮಿಕದ ಪರಿಯೊಳಿಂತೆನ್ನು
   ವುದು ‘ಚಂದ್ರಮೌಳಿ ಗಡವ’ ಗುರುವರ್ಯ?

   • ಹುಡುಕುತ ಹುಳುಕಂ ಹೆಕ್ಕುತ
    ಬಿಡಿಸುವ ಪೂರ್ವಜರ ವಾಸನಾಬಲ ಮಿಂದುಂ
    ಗಡುಸಾಗಿಪುದೇಂಗಡ ವಾ-
    ಕ್ಕಡಿಪಾಯವದಾಗಲಾತ್ಮದರ್ಶನಮೆಲ್ಲುಂ

    • Lo

     • ’ವಾಸನಾಬಲ ಮಿಂದುಂ ಗಡುಸಾಗಿಪುದೇಂ?’

      ಅದು ವಾಸನಾಬಲಮಿರಲಿರಲಿ ಸುವಾಸಿನಿಯು
      ಮಿದುವಾಗದೆ ಗಡುಸಪ್ಪುದೆ ಮಿಂದೊಡೆ?
      😉

     • ಬದುಕಿಡೀ ಹೆಕ್ಕುವೆನು ಹುಳುಕನ್ನು, ಸೈಯೆನಿಸು
      ವುದೆ ಗುರಿ ನವಾಂಕಿತಕೆ – ಹಾದಿರಂಪ|
      I just owned up this aMkitanAma – ಹಾದಿರಂಪ. ರಂಪ is the acronym of my name (ರಂಗನಾಥ್ ಪ್ರಸಾದ್).

     • ಶಾಲಿನಿ :
      ಹೃದ್ಯಂ ಹಾಸ್ಯಂ ತಾಗಲಲ್ಲಲ್ಲಿ ಹ್ಲಾದಂ
      ವಿದ್ಯಾಲಾಸ್ಯಂ ಸೂಕ್ಷ್ಮವಾಗಲ್ವಿಷಾದಂ
      ಸದ್ಯಂಮುಖ್ಯಂ ಮೆಚ್ಚಿದೆಂನಾ ಪ್ರಸಾದಂ
      ಪದ್ಯಕ್ಕಾಗೇ ನೆಚ್ಚು ಬೇರೇಕೆ ವಾದಂ

     • ಪ್ರಸಾದು ಚೆನ್ನಾಗಿದೆ ಅ೦ಕಿತನಾಮ 🙂

      ಹಾಸ್ಯಕ್ಕಾಗಿ 😉
      (ಅದ್ಯಾರೋ ಒಬ್ಬರು… ನಮ್ಮ ಆದಿಕವಿ ಪ೦ಪ… ನಮ್ಮ ಅ೦ತ್ಯಕವಿ !? ಎ೦ದು ಹೇಳಿದ್ದರ೦ತೆ…)

      ಪ೦ಪನಿರ್ಪನಾದಿಕವಿಯು
      …..ನ೦ತ್ಯ ಕವಿಯೆನ್ನುತ್ತ
      ‘ರ೦ಪ’ಮಾಡಬೇಡಿ ಇಹುದು ನನದದ೦ಕಿತ!

     • ಅಯ್ಯೋ… ಹಾಸ್ಯದ ಪದ್ಯವನ್ನು ಸವರಿಸಬೇಕಾಯಿತು,

      ಪ೦ಪನಾದಿಕವಿಯು ಗುರುವೆ
      …..ನ೦ತ್ಯನೆನುತ ‘ಹಾದಿ-
      ರ೦ಪ’ಮಾಡಬೇಡಿರಿಹುದು ನನದದ೦ಕಿತ!

     • ರಂಪಮಾಡದಿರೆಂದೊಡೇನಹುದು, ರಂಪವದು
      ಪೆಂಪಿನಿಂ ಕುಯ್ಯದಿಹುದೆ ಗರಗಸದೊಲ್|
      ಹಂಪ-ಕಂತಿಯರಾಟ-ಕೊಂಡಾಟ ಮುದವದೀ
      ರಂಪದಿನೆ, ನಾ ಹೊರವೆ – ಹಾದಿರಂಪ!

     • ಹೀಗೆ ನೀವೆನುತಲರಿದೆನ್
      ಹೀಗೇ ನೀವೆಂದರಿಯೆನ್
      ಸಾಗುತಿರಲಿ ಹಾದಿರಂಪ
      ಮಾಗಿಕೊಡಲಿ ಹದವ ತಣ್ಪ 🙂

     • ಸೋಮ,
      “ಹಾಸ್ಯದ ಪದ್ಯವನ್ನು ಸವರಿಸಬೇಕಾಯಿತು” ಎಂದಿರೆ?
      ಸವರಬೇಕಾಯ್ತೊ ಚಳಿಗದಿರನೆ
      ಸವರಿಸಲುಬೇಕಾಯ್ತೊ ನೀ ಪ
      ದ್ಯವನದಾರನೊ ಗೋಗರೆದು ಬೇಡುತಲಿ ಕಬ್ಬಿಗನೆ|
      ಭವವ ಸವೆಸಲು ನೀನೆ ಸವರುಗು
      ಕವನ ಚೊಕ್ಕವದಾಂತುದಾಗಳ್
      ತೆವಲು ತೀರಿಸಲೇಕೆ ಪೋಗುವೆ ವಾಮಮಾರ್ಗದೊಳು||

     • ನಾಮದಂಕಿತವು ನಿಮ್ಮದಾಗಿರಲು ಹಣೆಯು ನಿಮ್ಮದಲ್ತೆ
      ಸೋಮಶೇಖರಗೆ ಚಳಿಗದಿರನೆಂಬುದೇಕೆ ಎಂಬ ಚಿಂತೆ
      ನೇಮದಿಂಚರಿಪ ಕವಿಯ ಪದ್ಯಗಳನೆಲ್ಲ ಸವರುತಿಲ್ಲಿ
      ಸಾಮ ನೀತಿಯೇ ರಂಪಕಿಳಿದಿಹುದೆ ಹಾದಿಬೀದಿಯಲ್ಲಿ

     • ಪ್ರಸಾದು,

      ಪ೦ಪ ರ೦ಪದ ಪ್ರಾಸಕ್ಕಿನ್ನೋರ್ವರ೦ಕಿತವು
      ಸೊ೦ಪಾಗಿ ಪೊ೦ದಿರುವುದನು ನೆನೆಯುತಾ
      ಗಾ೦ಪಗುರುವಿ೦ಗದುದ್ದೇವಿಟ್ಟೊರೆದಿರುವೆ
      ಕ೦ಪನೊಪ್ಪಿಹೆ ನಿಮ್ಮಯ೦ಕಿತದಲಿ

     • ಸೋಮ,
      ‘ಗಾಂಪಗುರು….’ ಸಾಲಿನಲ್ಲಿ ‘ಶ’ ಅಕ್ಷರ ಬಿಟ್ಟುಹೋಗಿರುವುದು, ‘ಉದ್ದೇಶವಿಟ್ಟು’ ಬದಲು ‘ಗುದ್ದೇ ಬಿಟ್ರು’ ಎಂದು ಓದುವಂತಾಗುತ್ತದೆ!

     • ಪ್ರಸಾದು 😉

      ಶಕಾರಮಯವಲ್ತೆ ಜಗ-
      ದ್ವಿಕಾರ ಕಾರಣ ಬಿಡಲ್ಕವ೦ ಗುಣವಲ್ತೇ?
      ಬಕಾಶುರ೦ ಹಣುಮ೦ತ೦
      ಶಕಾಲದೊಳ್ ಬಡಿದವೋಲವ೦ ಬಡಿದಿರ್ಪೆ೦!

     • ಸೋಮ,
      ಬೆಸಪಾದಗಳ ಮೊದಲ ಗಣಗಳು ಜಗಣವಾದುವಲ್ಲ! ಇದು ನಿಮ್ಮ ಸ್ವಂತದ ಆವಿಷ್ಕಾರವಾದರೆ, ಅದಕ್ಕೆ ’ಕಂದ’ ಎನ್ನುವ ಬದಲು ನಿಮ್ಮ ಹೆಸರಿನ ವಿಲೋಮವನ್ನೇ ಅದಕ್ಕೆ ನಾಮಕರಣ ಮಾಡಬಹುದೇನೋ! (ಸರಿಸಾಲುಗಳ ಆದಿಗಣಗಳನ್ನು ಜಗಣವಾಗಿ ಉಳಿಸಿಕೊಂಡಿದ್ದೇನೆ)

      ಬೆಸಸಾಲ್ಗಳಾದಿಗಣಗಳ
      ನುಸಾಬರಿಯದೇಕೆನುತ್ತೆ ಜಗಣವನಿಕ್ಕೆ|
      ನೊಸಲಬರಹವು ’ರಖಶೇ
      ಮಸೋ’ವಿದರ ಛಂದವಾಂತುದೆ ಬದಲ್ ’ಕಂದಂ’||

     • ಪ್ರಸಾದು:),

      ಜಾಣ್ಮೆಯ ವಿಮರ್ಶೆಯೊಳಗು೦
      ಕಾಣ್ಮೆಯು ಪೋಯಿತೆ ‘ಶಕಾರ’ಕೊಪ್ಪುವ ಹಾಸ್ಯ೦?
      ತಾಳ್ಮೆಯನಿಡಲ್ಕೆ ಕಾ೦ಬುದು
      ನಲ್ಮೆಯು ಪದ್ಯದೊಳಿದನ್ನು ‘ಛೇದಿಸಿ ನೋಡಯ್!’ 😉

      ನಿಮ್ಮ ಪದ್ಯದಿ೦ದ ಪ್ರೇರಿತನಾಗಿ ಇನ್ನೊ೦ದು…

      ಸರಿಸಾಲಿನ೦ತ್ಯದೂಣಗ-
      ಣ ‘ರ೦ಪ’ಸೃಷ್ಟಿಯ ವಿಶೇಷವರಿಯದೆ ಪೋದೆ೦!!!
      ಪರಿಹಾರಕೆ೦ದು ‘ನಿಕ್ಕೆ’ಯ
      ಸರಿಪಡಿಸಬಹುದೆ ಬದಲ್ಕದಕೆಯಿಡೆ ‘ನಿಕ್ಕಲ್’? 🙂

     • Well! Well! I think it (ನಿಕ್ಕೆ) was a typo then. 😉

     • ಪ್ರಸಾದು 🙂

      ನನ್ನ ಕಡೆಯಿ೦ದಲೂ ಒಪ್ಪಿಕೊಳ್ಳುತ್ತೇನೆ, ಶಕಾರ ಬಿಟ್ಟದ್ದು typo

     • ಸೋಮ,
      ಇಲ್ಲಿ ಪ್ರಶ್ನೆ, (ಮೃಚ್ಛಕಟಿಕದ) ಶಕಾರ ಏನು typo ಮಾಡಿದ ಎಂಬುದಲ್ಲ. ನಿಮ್ಮ ಲೋಪವನ್ನು ಅವನ ಹೆಗಲಿಗೇರಿಸದಿರಿ.

      ಇಲ್ಲಿ ಪ್ರಶ್ನೆಯದಲ್ಲವು
      ಸೊಲ್ಲು ಶಕಾರನದನೇನ ಬಿಟ್ಟನೆನುತ್ತುಂ| (ಸೊಲ್ಲು = ಅಕ್ಷರ)
      ಖುಲ್ಲನಿದಕೃತ್ಯ ನಿನ್ನದೆ,
      ಹೊಲ್ಲ ನುಡಿಯ ನಿಲ್ಲಿಸಿನ್ನು ಹಲ್ಲ ಹಿಡಿಯುತುಂ|

     • ಪ್ರಸಾದು,

      ಚೆನ್ನಾಗಿದೆ ನಿಮ್ಮ ವಾದವು, ಹಾಸ್ಯವೆ೦ದರಿತು ಅದನ್ನು ಸವಿದಿದ್ದೇನೆ 🙂

      ಆದರೆ… ನೀವು ನಿಮ್ಮ ಪದ್ಯಗಳಿಗೆ ಹಾಸ್ಯದ ಸ್ಪರ್ಶ ಕೊಡಲು ಒ೦ದಷ್ಟು smiley ಬಳೆಸಬಹುದಿತ್ತು, ಅಲ್ಲವೇ? ಮರೆತಿರುವಿರೇ? ಅಥವಾ ನಾನೇನಾದರು ಅಪಾರ್ಥಮಾಡಿಕೊ0ಡಿದ್ದೇನೆಯೆ? ನನ್ನ ಕಡೆಯಿ೦ದ ಅಪಾರ್ಥವಿದ್ದಲ್ಲಿ ಕೆಳಗಿನ ಪದ್ಯಗಳನೋದಿರಿ 🙂

      ಸೂಸುತ ಕಠಿಣದ ಭಾವವ
      ನೀಸೂ ನಗೆಮೊಗವತೋರೆನೆನುತೊರೆಯುತ ನೀ೦
      ಹಾಸಿರಲು ಹಾದಿರ೦ಪದ
      ಶಾಸನ, ಧಿಕ್ಕಾರವೇ ಪ್ರಶಸ್ತವದಲ್ತೇ

      ನಗೆಮೊಗ: Smiley
      ಹಾದಿರ೦ಪರ ಶಾಸನ:
      ೧. ಚಳಿಗದಿರನೆ ಸವರಿಸಲುಬೇಕು
      ೨. ತೆವಲು ತೀರಿಸಲೇಕೆ ಪೋಗುವೆ ವಾಮಮಾರ್ಗದೊಳು
      ೩. ಖುಲ್ಲನಿದಕೃತ್ಯ ನಿನ್ನದೆ, ಹೊಲ್ಲ ನುಡಿಯ ನಿಲ್ಲಿಸಿನ್ನು ಹಲ್ಲ ಹಿಡಿಯುತುಂ

      ಬೆರಳಚ್ಚೊಳಿರ್ಪ ಲೋಪವ-
      ದುರುಲಾಗದೆನುತಲದನ್ನ ಹೊಲ್ಲಯಿಸಿದೆ ನಾ೦
      ಅರಿಯೆನು ಹೊಲ್ಲಹ, ಪದ್ಯವ
      ನೊರೆವೆ೦ ಹಾಸ್ಯದೊಳು ಸಜ್ಜನಿಕೆಯ೦ ಬಿಡೆ ನಾ೦

      ಉರುಲು:Noose

     • Soma,
      Pls presume smileys 😉 in all my entries. The very tenor of my posts glaringly declares the conspicuous presence of smileys 😉

      ಸಜ್ಜಿಗೆಯ ವೋಲೆನಗಹುದು
      ಸಜ್ಜನಿಕೆ ನಿಮದುಣಿಸುತ್ತಲಿರು ಸಖನೆಂದುಂ|
      ಲಜ್ಜೆಯಿರದೆ ತಿನುವೆನದಂ
      ಬೊಜ್ಜಿದ್ದೊಡಮಗಣಿಸೂಣವೊ ಗುಡವು ಪೆರ್ಚೋ|
      😉

     • Thanks prasAdu 🙂

      Sure Sir, oLLEdu please continue… I am enjoying it more now after your latest comment 🙂 🙂

      nimmava,
      Soma

     • You should have relished it at the first instance itself. Now, as Sri RG says, ಎರಡನೆಯ ಸುತ್ತಿನಲ್ಲಿ ಹಿಂಡಿದ ’ಸೋಮ’ದಲ್ಲಿ ಕಿಕ್ ಇರೋಲ್ಲ!

      ಆಗಲೆ ಸವಿದುಂ ನಗುತಲಿ
      ತೇಗಿರ್ದೊಡೆ ಮಿಗೆ ಸೊಗೈಸುತಿರ್ಗುಮೆ, ಪೋಗೈ|
      ನೀಗುವರೆ ರಾಜಯೋಗಂ
      ಬೀಗದು ತಗ್ಗವುದು ಮತ್ತೆ ಸೋಸಲ್ ’ಸೋಮಂ’||

      ’ಗ’ಕಾರವನ್ನು ಹೆಚ್ಚಾಗಿ ಬಳಸುವ ಕಸರತ್ತು. ಅಷ್ಟುಮಟ್ಟಿಗೆ ಕ್ವಾಲಿಟಿ ತಗ್ಗಿದೆ.

     • *ತಗ್ಗುವುದು

    • ಕನ್ನಡಕ್ಕಿಪ್ಪರೈ ಪಂಪ ರಂಪರ್;
     ಚೆನ್ನಮಂ ಕಬ್ಬಮಂ ನೋಡಿ ಮಾಡಿಂ
     ಬನ್ನಮುಂ ತಪ್ಪದೈ ಹಾದಿಬೀದಿಂ
     ಗೆನ್ನದೇ ತರ್ಪನೈ ರಂಪ ಪೆಂಪಿಂ

     ಪ್ರಸಾದು, ಕೀಟಲೆಗೆ ಹೇಳಿದೆ ಅಷ್ಟೆ. ನಿಮ್ಮ ತಿದ್ದಾವಣೆಗೆ ಎಂದೂ ಸ್ವಾಗತವಿದೆ.

     • Ram,
      ನಾನು ‘ಚಳಿಗದಿರ’ ಎಂಬ ಪದ ಬಳಸಿದುದು, ಸೋಮಶೇಖರರ ಹ್ರಸ್ವನಾಮವಾದ ‘ಸೋಮ’ ಎಂಬುದಕ್ಕೆ ಮಾತ್ರ, ಪೂರ್ಣಹೆಸರಿಗಲ್ಲ.
      ಸೋಮಶೇಖರನನೆಲ್ಲರ್ ಪ್ರೀತಿಲೆನ್ನುವರು
      ‘ಸೋಮ’ನೆಂದದರಿನಾನ್ ‘ಕದಿರ’ನೆಂದೆನ್|
      ಸೋಮಶೇಖರಗೆ ಚಳಿಗದಿರನೆಂದಿಲ್ಲವಾ
      ನ್ನೇಮ ಮಾಸದೆಲಿಹುದು –ಹಾದಿರಂಪ||

     • ಜೀವೆಂ, ನಿಮ್ಮ ಪದ್ಯ ಪೂರ್ತಿ ಅರ್ಥವಾಗಲಿಲ್ಲ. ಆದರೆ ಇಷ್ಟು ಮಾತ್ರ ಹೇಳಬಲ್ಲೆ, ಸ್ವಲ್ಪ ತಮಿಳಿನ ಛಾಯೆ ಇದೆ ಇಲ್ಲಿ. ‘ಇಬ್ಬರೈ’ ಪದವನ್ನು ತಮಿಳು ಉಚ್ಚಾರಣೆಯಲ್ಲಿ ಬರೆದಿರುವಿರಿ. ಇಡಿಯ ಸಾಲನ್ನು ತಮಿಳ್ಗನ್ನಡದಲ್ಲಿ ಬರೆದರೆ ಹೀಗಿರುತ್ತದೆ: ಗನ್ನಟಗ್ಗಿಪ್ಪರೈ ಬಂಬ-ರಂಬರ್!

     • ಪ್ರಸಾದು, ಇರುವ ಎಂಬರ್ಥದಲ್ಲಿ ‘ಇಪ್ಪ’ (ವ್ಯೋಮಕೇಶನಿಪ್ಪ ದೆಸೆಯ ಆ ಮಹಾಮಹಿಮೆಯುಳ್ಳ ಸಾಮಜ).

      ಕನ್ನಡಕ್ಕೆ ಕವಿ ಪಂಪನಿದ್ದಂತೆ, ವಿಮರ್ಶಕ ರಂಪನೂ ಇದ್ದಾನೆ. ಆತ ಶ್ರುತಿಕಷ್ಟವನ್ನು ತಿದ್ದುವಲ್ಲಿ ನಾವುಗಳು ಎಚ್ಚರವಹಿಸಬೇಕೆಂದು ತಾತ್ಪರ್ಯ 🙂

     • ಗೊ(ತ್ತಿ)ತ್ತು ಸsರ್. ನಾನು ಬೇಕೆಂದೇ pun ಮಾಡಿದ್ದೆ;)

 12. ಮೋಸದಿ ಹೊಸ ವಿಧಿಮಣಿಗಳ (ವಿಧಿ – ನಿಯಮ)
  ಕೋಸುತಲೆಣಿಸಿರಲನೀತಿ ಜಪಮಾಲೆಯನು | (ಕೋಸು – ಪೋಣಿಸು)
  ಕಾಸಿಗೆ ಬಣ್ಣಬದಲಿಪೀ
  ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ ||

  • ಲೇಸೈಪೂರಣ಼ ಶ್ರೀಶಾ
   ಕಾಸಿಗೆ ಬದಲಪ್ಪುದೇನು? ಕೋಟಿ ಹರಿದಿರಲ್ :)-

 13. ನೇಸರನದೋ ನಿಷೆಯ ನಶೆ
  ಯೊಳ್ ಸೆರೆವಟ್ಟುಗತಿಗೆಟ್ಟಿರೆ ಇದೋ ಉಷೆಯೊ-
  ತ್ತಾಸೆಯೊಳೈಗೊಂಡ ನಿಷಾ
  ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ
  [ಇಲ್ಲಿ ನಿಷೆಯು ತನ್ನಮಲಿನಿಂದ ಭಾಸ್ಕರನನ್ನು ಸೆಳೆದಿಟ್ಟು ಅವನಿಂದ ಬೇರಾಗದಂತೆ ವಚನವನ್ನೂ ಪಡೆದಿದ್ದಾಳೆ. ಈ ವಚನದಿಂದ ಬಂದಿಯಾದ ನೇಸರ ತೊಳಲುತ್ತಿದ್ದಾಗ, ಉಷೆಯೆಂಬ ಗೆಳತಿಯ ಸಹಾಯದಿಂದ ತನ್ನ ವಚನವನ್ನು ಮುರಿಯುತ್ತಾನೆ. ಇಲ್ಲಿ “ನಿಷಾಶಾಸನ ಧಿಕ್ಕಾರ”ವೇ ಸುಂದರವಾದ ಸೂರ್ಯೋದಯವಾಗಿ ಪರಿಣಮಿಸಿದೆ ಯೆಂದು ಹೇಳುವ ಪ್ರಯತ್ನ. ]

  • ಸೊಗಸೈ ರವೀಂದ್ರ ನಿಶೆಯುಷೆ
   ವಿಗಡೋಪಮೆ ಪೂರಣಕ್ಕೆ ವರ್ತಿಪಮುದವೈ
   ಹೊಗರಡಗುತ ನಡೆಸೊರಗಿದೆ
   ಮಿಗೆಪದಗಳ ಯೋಜನಾಕ್ರಮವ ಪವಣಿಸಿರೈ

   • ಮೌಳಿಯವರೆ, ಸಲಹೆಗೆ ಧನ್ಯವಾದಗಳು. ನಡೆಯ ಬಗೆಗೆ ವ್ಯಕ್ತವಾಗಿ ಹೇಳಿದ್ದಕ್ಕಿಂತಲೂ, ನಿಮ್ಮ ಪದ್ಯದ ಸುಂದರ ಗತಿಯೇ ಮಾರ್ಗದರ್ಶಿಸುತ್ತಿದೆ.

 14. ಮೀಸೆಯು ಚಿಗುರಲ್ ತರುಣ-
  ರ್ಗಾಸೆಯು ಮನದೊಳ್ ತಳಿರ್ದು ಚ೦ಚಲಪ್ರೇಮ೦
  ಸೂಸಲದವರ್ಗೆ ಪಿರಿಯರ
  ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ 😉

  • ಕಲ್ಪನೆ ಸಲೆ ಚೆಲ್ವಾದುದು
   ಶಿಲ್ಪನಮುಂ ತಕ್ಕುದಾಗಿ ತೋರ್ದಪುದಲ್ತೇ!
   ಬಲ್ಪಿಂ “ಚಂಚಲಪ್ರೇಮ”ದ
   ಜಲ್ಪಿತದೊಳ್ ಮಾತ್ರೆಯೊಂದು ತಗ್ಗಲ್ ಸಲ್ಗುಂ!!

   • 🙂 🙂

    ಗಣೇಶ್ ಸರ್,

    ಸವರಿಸಿದ್ದೇನೆ,

    ಮೀಸೆಯು ಚಿಗುರಲ್ ತರುಣ-
    ರ್ಗಾಸೆಯು ಮನದೊಳ್ ತಳಿರ್ದು, ಚ೦ಚಲದೊಲವು೦
    ಸೂಸಲದವರ್ಗೆ ಪಿರಿಯರ
    ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ

 15. ಸೋಮೇಶ್ವರವಚನ ಯುವಕ ಸ್ವೋಪಜ್ಞತೆಯೇಂ 🙂

 16. ಬೀಸರಮಾರ್ದುದೆ ನಿಮಗೇ
  ನೋಸರಿಸಿದಿರೇನ್ ದುರಾತ್ಮಮರ್ದನಭಾರಂ
  ಹಾ! ಸರಿ ಭಂಡರ್ಗುಂ ಗಡ
  ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ

  [ದ್ರೌಪದಿಯ ಮಾತು. ಇಲ್ಲಿ ಸ್ವಶಾಸನ ಎಂದು ಗ್ರಹಿಸಿ]

 17. ನಾಂ ಸಹಿಸೆನಲ್ತೆ ಹಸುಗರು
  ಗೂಸಂ ಕೊಲೆಗೈವಲೊಯ್ವ ನಿರ್ದಯದೃಶ್ಯಂ
  ಸೂಸಿದೊಲವಿಂದೆ ಕಟುಕರ
  ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ
  [ಚಂದ್ರಹಾಸನ ಘಟನೆ]

  • ಸೈ ಸೊಗಸೈ ಚಂದ್ರಹಾಸ ಕಥನಾಧಾರಂ

   • ಸಲೆಸೊಗಸಾಗಲು ಸಲುಗೆಯ ಸೂಚನೆ :

    ನಾಂ ಸಹಿಸೆನಲ್ತೆ ಹಸುಗರು………… ನಾಂ ಸಹಿಸೆಂ ಸುಂದರ ಪಸು
    ಗೂಸಂ ಕೊಲೆಗೈವಲೊಯ್ವ ನಿರ್ದಯದೃಶ್ಯಂ…… ಗೂಸಂ ಕೊಲಗೈಯಲೊಯ್ವ ಕ್ರೂರಾಕೃತ್ಯಂ

 18. ಪೂರಯ್ಸೆ ಸಮಸ್ಯೆಗಳಂ
  ಧಾರಾಕೃತಿಯಿಂದೆ ಕಾವದೇರಿರ್ಪುದಲಾ|
  ಚಾರುಕವಿತೆಯಾರಾಧಕ-
  ಧೀರರ್ಗಂ, ಪದ್ಯಪಾನಗೋಷ್ಠಿಯವರ್ಗಂ||

  ಪ್ರತ್ಯುತ್ತರಪದ್ಧತಿಯೊಳ್
  ಪ್ರತ್ಯುತ್ಪನ್ನಪ್ರಸನ್ನಚಾಟುತೆ ಘಾಟಿಂ|
  ಪ್ರತ್ಯಗ್ರನಿರಾಗ್ರಹರಸ-
  ಸತ್ಯತೆಯಿಂ ಬ್ರುತಲಿರ್ಪುದಕೆ ನಾಂ ಸೋಲ್ತೆಂ||

  ಎಲ್ಲ ವಿನೋದದ ವರಸೆಗ-
  ಳಲ್ಲಿ ಮನಕ್ಕೆನ್ನ ಮುದಮದಾದುದು ದಿಟದಿಂ|
  ಸೊಲ್ಲಿಸೆ “ಗಡ ವಂದ್ಯ…” ಎನುವ
  ಪಲ್ಲವಿಯಂ ನಾನದಂ;”ಗಡವ” ಕಂಡುದರಿಂ!!!

  ಪ್ರಸಾದು ಅವರ ಪರಿಶೀಲನತೀಕ್ಷ್ಣತೆ ತುಂಬ ಮುದತಂದಿದೆ….ಅಭಿನಂದನೆಗಳು.
  ಅಂತೆಯೇ ನಮ್ಮ ಗೆಳೆಯರು ಇಷ್ಟು ಉತ್ಸಾಹದಿಂದ ಲೀಲಾಜಾಲವಾಗಿ ಪಾಲ್ಗೊಳ್ಲು ತಿರುವುದಕ್ಕೆ ಕಾರಣರಾದ ಚಂದ್ರಮೌಳಿಯವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.

 19. ನೇಸರನಬೆಳಕು ಗಾಜಿನೊ-
  ಳಸೂಸದಂತಿದ್ದ ಮಸುಕ ಬಲವಂತದಿ ನೀ-
  ಗಿಸಿದರಕಟಕಟವೀಕರಿ
  ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ

  • ಸಂಹರಿಸಿ ಲಘುವ, ಗುರುವೇ
   ಸಿಂಹಾಸನಕರ್ಹ ಸಿದ್ಧ ನಾಲ್ಕೆಡೆಯೊಳುಮಂ
   ಸಿಂಹಗಜಪ್ರಾಸನಿಯಮ
   ವಂಹವಣಿಸಿ ಸುಚರಮೊದಲದಕ್ಕರಕೆಂದುಂ

   “ನೇಸರನಬೆಳಕು ಗಾಜಿಂ
   ಸೂಸದ ಮುಸಕನ್ನು ಸೂಕ್ತವೇನೆಳೆಯೆಲುನೀಂ
   ಘಾಸಿಯಿದೈ ತಾಳೆನು ಕರಿ”
   ಯೈಸೆವಲಂ ಪ್ರಾಸರಕ್ಷೆ, ಯತ್ನಿಸಿ ತಾವೇ 🙂

   • ಅನ್ಯನೆಂದೆಣಿಸದೆ ನನ್ನೆಡವುಗಳ ತಿದ್ದಿದಿರಿ
    ಧನ್ಯವಾದಗಳು ಗುರುವರ್ಯ

    ನೇಸರನಬೆಳಕು ಗಾಜಿಂ
    ಸೂಸದ ಮಸುಕನ್ನು ಸೂಕ್ತವೇನೆಳೆಯೆಲು ನೀಂ
    ಘಾಸಿಯಿದೈ ತಾಳೆನು ಕರಿ
    ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ

    • ಪದ್ಯಪಾನದಲಿ ನಡೆಯುತೆಡವುತ್ತ ಕಲಿವ ಮಿತ್ರರೆಲ್ಲ
     ಉದ್ಯಮಕ್ಕೆ ಗುರುಪೀಠವೇರಲಿಚ್ಛಿಪರದಾರುಮಿಲ್ಲ
     ಮದ್ಯದಮಲ ಗುರುವರ್ಯಪೆಸರನೆಸೆದತ್ತ ಮಿತ್ರರಾಗಿ
     ವಿದ್ಯಕಲಿವವರಸೊತ್ತು ನಿಮ್ಮಶ್ರಮಬಿತ್ತು ಬೆಳೆಯೆಮಾಗಿ

     • 🙂 ಒಪ್ಪಿದೆ.
      ಸಿಂಹಗಜಪ್ರಾಸನಿಯಮವಂ ತಿಳಿಸಿ
      ನುಂಗಿದ ಮಾತ್ರೆಯಂ ಉಗುಳಿಸಿ
      ನನ್ನ ಲಘುಯತ್ನವಂ ಗುರುವಾಗಿಸಿ
      ಕರೆದಿರೀಗ ಸ್ನೇಹಹಸ್ತವ ಚಾಚಿಸಿ

     • Sri Chandramowly,
      ಇಚ್ಛಿಪೆಂ ಗುರುಪೀಠವೇರಿಕೂಗಾಡಲಾ ನಿಚ್ಛಿಪೆಂ ನಾಂ ಗುಗ್ಗುರುವದಾಗಲು|
      ಇಚ್ಛೆಯುಂ ನನದಲ್ಲ ವೊಂದೊಂದು, ಬರಿದೆ ತಾ
      ನಿಚ್ಛೆಯೊಂದಿರೆ ಸಾಕೆ ಚಂದ್ರಮೌಳಿ||

     • ಅಂಕಿತವನ್ನೇ ಮರೆತೆ:
      ಇಚ್ಛಿಪೆಂ ಗುರುಪೀಠವೇರಿಕೂಗಾಡಲಾ ನಿಚ್ಛಿಪೆಂ ನಾಂ ಗುಗ್ಗುರುವದಾಗಲು|
      ಇಚ್ಛೆಯುಂ ನನದಲ್ಲ ವೊಂದೊಂದು, ಬರಿದೆ ತಾ
      ನಿಚ್ಛೆಯೊಂದಿರೆ ಸಾಕೆ -ಹಾದಿರಂಪ||

     • 1 spello corrected:
      ಇಚ್ಛಿಪೆಂ ಗುರುಪೀಠವೇರಿಕೂಗಾಡಲಾ ನಿಚ್ಛಿಪೆಂ ನಾಂ ಗುಗ್ಗುರುವದಾಗಲು|
      ಇಚ್ಛೆಯುಂ ನನದಲ್ಲವೊಂದೊಂದು, ಬರಿದೆ ತಾ
      ನಿಚ್ಛೆಯೊಂದಿರೆ ಸಾಕೆ -ಹಾದಿರಂಪ||

 20. ಸುಚರಾರವರೆ, ನನ್ನ ಸವರಣೆ:
  ನೇಸರಕಿರಣಂ ಕಾಚಿಂ
  ಸೂಸದ ಜವನಿಕೆಯವೋಲಿಹ ಮುಸುಗು ಖಂಡ್ಯಂ|
  ಘಾಸಿಗವಕಾಶವೀವೀ
  ಶಾಸನಧಿಕ್ಕಾರವೇ ಪ್ರಶಸ್ತವದಲ್ತೇ||

  • ಶ್ರೀ ರಾಗರವರೆ, ಕಾಚಿಂ = ಕಾಚಿನಿಂ ಅಲ್ಲವೆ? ಕಾಚು = ಕಾಚುಂ ಅಲ್ಲವೆ?

  • ಚೆನ್ನಾಗಿದೆ ನಿಮ್ಮ ಸವರಣೆ. ಜವನಿಕೆಯವೋಲಿಹ ಮುಸುಗು ಇಷ್ತವಾಯಿತು

   • ಕರಿಶಾಸನಮರಿಸಮಾಸಮಾದುದು ಸುಚರಾ
    ಸರಿಪಡಿಸಿತ್ತ ಪ್ರಸಾದಮೊಲವಿಂ ರಂಪಂ

    • ಜೀವೆಂ,

     ರಂಪದಿ ಕುಯ್ಯುತೆ ಸರಿಗೈವುದಿವನ
     ನೋಂಪಿಯೆನುತಲೆತ್ತಾಡಿದಿರೆ?
     ’ರಂಪಂ’ ಮಗು’ದೊಲವುಂ’ ಜೊತೆಯಿರವೆಂ
     ದುಂ; ’ಪ್ರೀತಿ’ಯ ನಂತರ ’ರಂಪಂ’||

     • ಪ್ರಸಾದು,

      ಎತ್ತಾಡಲಿಕ್ಕೇಂ ಹಸುಗೂಸೆ ರಂಪಂ?
      ಎತ್ತಾಡಲಿಕ್ಕೇಂ ಹಸುಗೂಸೆ? ರಂಪಂ!

      ಮತ್ತಂ

      ಪ್ರೀತಿಂಗೆ ರಂಪಂ ಜೊತೆಯಾಗಿ ಸಲ್ಗುಮೀ
      ರೀತಿಂ ಜಗತ್ಸೃಷ್ಟಿಯುಮೆಂದುಮಪ್ಪುದೈ

 21. ಕೊನೆಯ ಪಾದದಲ್ಲಿ ಆದಿಪ್ರಾಸ ಕೆಟ್ಟಿತ್ತು:

  ರಂಪದಿ ಕುಯ್ಯುತೆ ಸರಿಗೈವುದಿವನ
  ನೋಂಪಿಯೆನುತಲೆತ್ತಾಡಿದಿರೆ?
  ’ರಂಪಂ’ ಮಗು’ದೊಲವುಂ’ ಜೊತೆಯಿರವೆಂ
  ದುಂ; ’ಪೂಸಿ’ಯ ನಂತರ ’ರಂಪಂ’||

 22. ಚೆನ್ನೈನಿಂ ಬಂದಿಳಿಯಲ್
  ಮುನ್ನೀರೆನೆ ವಾದನಾದ ವಾಹಿನಿಯೆಲ್ಲಂ
  ನನ್ನೀ ಪೂರಣವಿಂತಿದೆ
  ಮನ್ನಿಸಲೆಲ್ಲಾವಿಚಾರ ಮಿತ್ರರನುಡಿಗಳ್

  ಲೇಸೀ ಸಮಸ್ಯೆ ಪೂರಣ
  ಗೈಸಿದಿರೈಮಿತ್ರರೆಲ್ಲ ಕೊಂಚಮೆ (?) ಜಲ್ಪಂ
  ಮೂಸೆಯ ಮುಚ್ಚದ ಪದ್ಯದ
  ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ

  ನಮನ ವೆಲ್ಲರ್ಗೆ ಪೂರಣಿಸಿ ಕವನವನಿತ್ತ
  ಗಮನವೆತ್ತಲೊ ಸರಿಸಿ ಮತ್ತೆಯೆಳೆತಂದಿತ್ತ
  ಭ್ರಮಣಲೀಲರ್ಗೆ, ನೈಷ್ಕರ್ಮ್ಯ ಮೌನಿಗಳಿಗುಂ
  ಸಮುದಪ್ರೋತ್ಸಾಹಿಗಿದೊ ನೆಲಕೆ ನೊಸಲು

 23. ನಮಿಸುವೆನು ನಿಮಗುಮವಧಾನಿಯಂದೆಂದಂತೆ
  ಲಮಿತದಲಿ ನಡೆಸಿದಿರಿ ಪೂರಣಮಿದಂ|
  ಭ್ರಮಣಲೀಲರನಾಗಿಸಿದಿರಿ ನೈಷ್ಕರ್ಮ್ಯರನು
  ನಮನಗೈವೆನು ನಿಮ್ಮ ಚರಣಗಳಲಿ||

 24. ಮೌಳಿಯವರೆ,
  ನಮಿಸುವೆನು ನಿಮಗುಮವಧಾನಿಯಂದೆಂದಂತೆ
  ಲಮಿತದಲಿ ನಡೆಸಿದಿರಿ ಪೂರಣಮಿದಂ|
  ಭ್ರಮಣಲೀಲರನಾಗಿಸಿದಿರಿ ನೈಷ್ಕರ್ಮ್ಯರನು
  ನಮನಗೈವೆನು ನಿಮ್ಮ ಚರಣಗಳಲಿ||

  • ಮೌಳಿಯವರೆ,
   ಮೊದಲ ಮತ್ತು ಕೊನೆಯ ಪಾದಗಳೆರಡರಲ್ಲೂ ನಾನು ‘ನಮನ’ಪೊಪ್ಪಿಸಿರುವುದರಿಂದ, ಅತಿವಿನಯಂ ಧೂರ್ತಲಕ್ಷಣಮ್ ಎಂದುಕೊಳ್ಳುವಿರೇನೋ. ಹಾಗಾಗಿ ಕೊನೆಯ ಪಾದದ ಇನ್ನೆರಡು ಮಾದರಿಗಳಿಲ್ಲಿವೆ:

   1) ಶಮಿತರುಚಿಯನಿಗೀಯುತಲತಿಕಾಂತಿ|| (ಶಮಿತರುಚಿಯವನು = dullard). How? See next point.
   2) ಬೆಮರಿಳಿಸಿದಿರೆನನಾಗಿಸತಿಕರ್ಮಿ|| (ಒಂದು ಪದ್ಯವನ್ನು ಬರೆದು ಸುಮ್ಮನಿದ್ದುಬಿಡುತ್ತಿದ್ದ ಮಿತಕರ್ಮಿಯಾದ ನನ್ನಿಂದ ಹಲವು ಪದ್ಯ ಬರೆಸಿ ಅತಿಕರ್ಮಿಯಾಗಿಸಿದಿರಿ. ಈ ಪಾದದಲ್ಲಿ ಎಲ್ಲಿಯೂ ಯತಿಸ್ಥಾನವಿಲ್ಲ. ಅದರಲ್ಲೂ ’ಗ’ಕಾರದ ನಂತರ!)

Leave a Reply to ಗಣೇಶ್ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)