Jul 012012
 

ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ” ಎಂಬುದು ಕಂದ ಪದ್ಯದ ಕೊನೆಯ (ಅಥವಾ ಎರಡನೆ) ಸಾಲು.

ಪದ್ಯದ ಉಳಿದ ಸಾಲುಗಳನ್ನು ಪೂರಣಿಸಿ, ಈ ಸಾಲಿನ ಅನರ್ಥ ತೊಡೆಯಿರಿ.

  101 Responses to “ಪದ್ಯಸಪ್ತಾಹ – ೨೭ – ಸಮಸ್ಯೆ”

 1. ಚಂದದಿ ಮಾಡಿದ ಲಡ್ಡುವ
  ತಂದೆಯನೇಕೊಂದು ತಿಂಬ? ಸುತನತಿ ರಮ್ಯಂ,|
  ಕಂದುಕಗಾತ್ರಂ, ಸ್ವಾದುಂ
  ಮುಂದಿರಿಸುತ್ತಿರಲು ನಳನು, ಪಿತನೇಳ್ ತಿಂದಂ||

  ನಳ ಮಾಡಿದ ಲಾಡುವನ್ನು, ಅವನ ತಂದೆ ಒಂದಲ್ಲ ಏಳು ತಿಂದ.

  • ತುಂಬ ಸೊಗಸಾದ ಪರಿಹಾರ. ಸಮಸ್ಯಾಪಾದವನ್ನು ಒಡೆದುಕೊಂಡ ಬಗೆಯೂ ಅದನ್ನು ಎರಡನೆಯ ಸಾಲಿಗಿರಿಸಿಕೊಂಡು ನಳನ ಪ್ರಸ್ತಾವದ ಮೂಲಕ ಪರಿಹಾರಕ್ಕೆ ಮತ್ತೂ ಔಚಿತ್ಯವನ್ನು ತಂದ ಬಗೆಯೂ ಬಲ್ಸೊಗಸು.

   ಸ್ವಾದು ಶಬ್ದದ ದ್ವಿತೀಯವಿಭಕ್ತಿಯು ಸ್ವಾದುವಂ/ಮಂ ಎಂದಾಗುವುದಲ್ಲದೆ ಸ್ವಾದುಂ ಎಂದಲ್ಲ. ಇದು ಉಕಾರಾಂತವಲ್ಲವೇ!
   ನಮ್ಮ ಗೆಳೆಯರನೇಕರು ಅಕಾರಾಂತೇತರಪದಗಳನ್ನು ಹೀಗೆ ದ್ವಿತೀಯೆಯಲ್ಲಿ ಬಳಸುವಾಗ (ಅಥವಾ ಮತ್ತಿತರ ವಿಭಕ್ತಿಗಳಲ್ಲಿಯೂ) ಅಕಾರಾಂತದ ಹಾಗೆ ಭ್ರಮಿಸಿ ತಪ್ಪುಮಾಡುವುದನ್ನು ಹಲವು ಬಾರಿ ಗಮನಿಸಿದ್ದೇನೆ, ಎಚ್ಚರಿಸಿಯೂ ಇದ್ದೇನೆ:-)

  • chennagide parihAra:)

  • ತಿಂಬ ಎಂಬಲ್ಲಿ ಪ್ರಶ್ನಾರ್ಥಕ ಚಿನ್ಹೆ ಹಾಕಿದ ಪೂರಣ ಚೆನ್ನಾಗಿದೆ. ಆದರೆ, ತಂದೆಯನೇಕೊಂದು ಎಂಬುದು ಹೇಗೆ ಒಡೆಯುತ್ತದೆ ಎನ್ನುವ ಬಗ್ಗೆ ಸಂಶಯವಿದೆ.

   ಪರಿಹಾರ “ತಂದೆಯನ್ + ಏಕೊಂದು ತಿಂಬ?” ಎಂದೇ?

   • ಹೌದು. ಅಥವಾ, ತಂದೆಯನು (= ತಂದೆಯು) + ಏಕೆ ಒಂದು. ಲೋಪಸಂಧಿ

 2. ಕಂದಗದನ್ನಪ್ರಾಶನ
  ವೆಂದರೆ ಮಾಂಸರಸವಲ್ಲವೆ ವ್ಯಾಧರೊಳಂ|
  ಎಂದನು ಜಿಂಕೆಯ ತಿನ್ನಿಸಿ
  ತಂದೆಯನೇ ಕೊಂದು, “ತಿಂಬ ಸುತನತಿ ರಮ್ಯಂ”||

  ಎರಡೂ ಪದ್ಯಗಳಲ್ಲಿ, ತಂದೆಯನೇ = ತಂದೆಯೇ

  • “ತಂದೆಯನೇ = ತಂದೆಯೇ” :: ಈ‌ ಪ್ರಯೋಗ ಸರಿಯೆ? ಸರಿಯಾದಲ್ಲಿ ತಾಯಿಯನೇ = ತಾಯಿಯೇ, ಗುರುವನ್ನೇ = ಗುರುವೇ, ಮರವನ್ನೇ = ಮರವೇ ಎಂದೆಲ್ಲ ಆಗುತ್ತದೆಯೆ?

   • ತಾಯಿಯನೇ = ತಾಯಿಯನ್ನೇ.
    ತಾಯಿಯಳೇ = ತಾಯಿಯೇ
    ಗುರುವನ್ನೇ/ಮರವನ್ನೇ – ಒತ್ತಕ್ಷರ ಬಂದರೆ ಅದು ಗುರುವೇ/ಮರವೇ ಆಗೊಲ್ಲ.
    ಗುರುವನೇ = both ಗುರುವನ್ನೇ and ಗುರುವೇ like ತಂದೆಯನೇ.
    ಮರವನ್ನೇ = Only ಮರವನೇ. Not ಮರವೇ. ನಪುಂಸಕಕ್ಕೆ ಎರಡು ರೂಪವಿಲ್ಲವೇನೋ!

    • ಮನ್ನಿಸಬೇಕು, ನಾನು ನನ್ನ ಮೆಚ್ಚುಗೆಯನ್ನು ತಿಳಿಸುವಾಗ ’ತಂದೆಯನೇ…” ಎಂಬಲ್ಲಿ ಬರುವ ತೊದಕನ್ನು ಪ್ರಕೃತ ಪರಿಹಾರದಲ್ಲಿ ಗಮನಿಸಿರಲಿಲ್ಲ.ರಾಮಚಂದ್ರರ ನಿಲವು ಸರ್ವಥಾ ಸರಿಯಾಗಿದೆ. ಇಲ್ಲಿ ಪ್ರಸಾದು ಅವರ ಉದ್ದೇಶಿತ ಅರ್ಥವು ನಿಲ್ಲಬೇಕೆಂದರೆ ಅದನ್ನು ವಿಭಕ್ತಿಪಲ್ಲಟವೆಂದು ಗ್ರಹಿಸಬೇಕು. ಆದರೆ ಇಂತಹ ಸ್ವಾತಂತ್ರ್ಯವು ಗಟ್ಟಿಯಾದ ಭಾಷಾಪಾಟವದ ದೃಷ್ಟಿಯಿಂದ ಒಳಿತಲ್ಲ.

     • ಗಮನಿಸಿಕೊಂಡಿದ್ದೇನೆ. ವಿಭಕ್ತಿಪಲ್ಲಟವೆಂದರೇನೆಂದು ಖುದ್ದು ಕೇಳಿ ತಿಳಿದುಕೊಳ್ಳುತ್ತೇನೆ

     • ಶ್ರೀ ರಾಮ/ ಶ್ರೀ ರಾಗ, Regarding ‘ತಂದೆಯನೇ’

      ಆಚಾರ್ಯರೇ ಸರಿಯದೆಂದಿರೆ ನಂತರಂ ನೀಂ

      ಕೋಚಾದುದೋ ಪದವದೆನ್ನುತೆ ಪೇಳಲೇಕೈ

      ವಾಚಾಮಗೋಚರದಿನೆಲ್ಲರು ನಿಂದಿಸಲ್ಕಂ

      ಪ್ರಾಚಾರ್ಯರೇ ಮಗುದದೇಕನುಮೋದಿಸಿರ್ಪರ್?

     • ಪ್ರಸಾದು,

      ವಿಭಕ್ತಿ ಪಲ್ಲಟದ ಬಗ್ಗೆ ಪದ್ಯಪಾನದ “FAQ – ಪ್ರಶ್ನೋತ್ತರ” ಪುಟದಲ್ಲಿ ವಿವರಣೆಯಿದೆ. ಅದನ್ನು ಇಲ್ಲಿಯೇ ಅಂಟಿಸಿದ್ದೇನೆ :

      ಕನ್ನಡದಲ್ಲಿ ವಿಭಕ್ತಿಪಲ್ಲಟ:
      ಪ್ರಥಮ ವಿಭಕ್ತಿಯ ರೂಪವನ್ನು, ಸಂದರ್ಭಕ್ಕೆ ತಕ್ಕಂತೆ ಪ್ರಥಮ ಮತ್ತು ದ್ವಿತೀಯ ವಿಭಕ್ತಿ ರೂಪದಲ್ಲಿ ವ್ಯಾಖ್ಯಾನಿಸಬಹುದು.

      “ಕನ್ನಡದಲ್ಲಿ ವಿಭಕ್ತಿಪಲ್ಲಟದ ಸೌಕರ್ಯವಿದೆ. ಆದರೆ ಅದು ಅನ್ವಯಕ್ಲೇಶದೊಡನೆ ತಳುಕುಹಾಕಿಕೊಂಡಾಗ ಕಷ್ಟವಾಗುತ್ತದೆ”
      http://padyapaana.com/?p=432#comment-1852

      “ಕನ್ನಡಕ್ಕೆ ವಿಭಕಿಪಲ್ಲಟವೆಂಬ ಅನುಕೂಲತೆಯಿದೆ. ಕೆಲಮಟ್ಟಿಗಿದು ಸಂಸ್ಕೃತಕ್ಕೂ ಇದೆ. ಆದರೆ ಎಲ್ಲ ಹದದೊಳಗಿರಬೇಕು, ರಿಯಾಯಿತಿಯು ಅತಿಯಾಗಬಾರದು. ಹಾಲಿಗೆ ಎಷ್ಟು ನೀರು ಹಾಕಬಹುದು? (ಗಮನಿಸಿರಿ; ಇಲ್ಲಿಯೇ ವಿಭಕ್ತಿಪಲ್ಲಟವಿದೆ!)”
      http://padyapaana.com/?p=368#comment-1821

     • ನಿಂದಿಸಲ್ಕೆ ನನ್ನನ್, ಅನುಮೋದಿಸಿರ್ಪರ್ ನಿನ್ನನ್!

     • ಮೊದಲು ಅವರು ನನ್ನ ಬೆನ್ನುಚಪ್ಪರಿದರು. ಎಂದರೆ ಅರ್ಥಕ್ಲೇಶವಿಲ್ಲ ಎಂದರ್ಥ. ನಂತರ ಚುಚ್ಚಿಕೊಟ್ಟವರು ನೀವು!

     • ಮನ್ನಿಸೈ ದೊರೆಯೆನ್ನ ತಪ್ಪನು
      ಬೆನ್ನ ಚಪ್ಪರಿಕೆಯನು ತಿರುಗಿಸಿ
      ಚೆನ್ನದಲೆ ಚುಚ್ಚಿಸುವುದೆನ್ನಯವಿಂಗಿತವದಲ್ಲ |
      ಮುನ್ನ ಕಾಣದ ಪದದ ಬಳಕೆಯ –
      ನಿನ್ನು ತೋರದದೃಶ್ಯದರ್ಥಗ –
      ಳನ್ನು ತಿಳಿಯುವ ಸದ್ಬಯಕೆಯನೆ ಸತ್ಪ್ರಯತ್ನವ ನಿಂದಿಪುದು ಸರಿಯೆ?
      🙂

     • ಮನ್ನಣೆ ಬೆಣ್ಣೆಯಪಥ್ಯಂ
      ತಿನ್ನಲದಾರ್ ಬಯಸುವರೈ ತಿದ್ದುವಬೇವಂ
      ತನ್ನಂ ತಿದ್ದಲು ತೋರ್ಪರ
      ಸನ್ನುತಿ ಲೇಸಲ್ತೆಯನ್ಯರಿಗದಾದರ್ಶಂ

     • ಸರಿಯೆ ಸಮರಸ ಭಾವ, ಪದ್ಯದೊ
      ಳರಿಸಮಾಸವು ’ಸದ್ಬಯಕೆ’ಯದ
      ಸರಿಪಡಿಸಿ ರಾಮ್ ’ಸತ್ಪ್ರಯತ್ನವ’ದೆನಲು ನಿರ್ದೋಷಂ

     • ತ್ವರೆಯಲೇ ಸರಿಗೊಳಿಸಿ ಬಂದೆನು
      ಸರಸದಲೆ ತೋರಿರ್ದ ತೊಡಕ –
      ನ್ನರುಹಲೆನ್ನ ಕೃತಜ್ಞತೆಗಳನು ಮೌಳಿ ಮಾನಸಕೆ |
      “ಅರಿಸಮಾಸ”ದ ಹರಿತ ಮೊನೆಯೆ –
      ನ್ನಿರಿಯುತಿರ್ಪುದು ಪೂರ್ವದಿಂದೀ,
      ಅರಿಗಳೊಳ್ ತುಸು ನೇಹ ಬೆಳೆಮೆಗೆ ಮಾರ್ಗವೆಂತಿಪುದೊ?

     • ಪದ್ಯಪಾನಕೆ ಬ೦ದು ನೋಳ್ಪುದು
      ಸದ್ಯವಾದರು ದಿಟದಲೊರೆವೆನು
      ಮದ್ಯ ಕುಡಿದ೦ತಪ್ಪುದೆನಗೀ ಛ೦ದದಮಲಿನಲಿ
      ಗದ್ಯ ನೇಪಥ್ಯದಲಿರಲು ಸಾ
      ನ್ನಿಧ್ಯದಲಿ ಸ೦ತಸವು ಪೆರ್ಚಿದೆ
      ಪದ್ಯದಲಿ ಮಾತಾಡುತಿರ್ಪೊಡೆ ನೇಹದುಕುತಿಯೊಳು

    • ಗೆಳೆತನದ ಮೆಲ್ಲುಲಿಯ ಸಂಡಿಗೆ
     ಮೊಳಕೆಕಾಳ ಕುಚೋದ್ಯ ಕಲಿಕೆಯ
     ಬೆಳಕಿನಕ್ಕಿಯ ಹಪ್ಪಳವದಿಲ್ಲಿಹುದು ಕುರುಕಲ್ಕೆ
     ತಳೆಯೆ ನವಮಿತ್ರಾಗಮನವನು
     ಬೆಳೆವುದೈಪದಪಾನಸಂಭ್ರಮ
     ಮುಳಿಯ ರಘು ಸ್ಪಂದನಕೆ ನಮನ ಸುಖಾಗಮನ ಪಡೆಗೆ

 3. ಸಂದಿಹು ’ದಗ್ನೇರಾಪಃ’
  ಮೆಂದಾದಿಮನುಡಿ, ತದಗ್ನಿ ಪಿತನಾಗಲ್, ನೀರ್
  ಕೊಂದಾರಿಪುದೈ ಬೆಂಕಿಯ
  ತಂದೆಯನೇ ಕೊಂದು ತಿಂಬಸುತನತಿರಮ್ಯಂ

  ಆಕಾಶಾದ್ವಾಯುಃ, ವಾಯೋರಗ್ನಿಃ, ಅಗ್ನೇರಾಪಃ, ಆಪಃ ಪೃಥಿವೀ… ಎಂಬ ಉಪನಿಷದ್ವಾಕ್ಯದಂತೆ, ನೀರಿನ ತಂದೆ ಬೆಂಕಿ. ತಂದೆಯನ್ನು ಕೊಂದು ತಿನ್ನುವ ರಮ್ಯತೆಯೇ ಬೆಂಕಿಯನ್ನಾರಿಸುವಕ್ರಿಯೆ. ಹಲವಾರು ವರ್ಷಗಳಹಿಂದೆ ಶ್ರೀರಂಗನಾಥಶರ್ಮರು, ಬಹುಶಃ ಈ ಅರ್ಥವನ್ನು ಒಳಗೊಂಡ ಸಮಸ್ಯೆಯನ್ನು ಶ್ರೀಗಣೇಶರಿಗೆ ನೀಡಿದ್ದರೆನಿಸುತ್ತದೆ. ಗಣೇಶರು ಅದನ್ನು ಬ್ರಹ್ಮಶಿರಃಚ್ಛೇದಮಾಡಿದ ಶಿವ ಪಿತೃಘಾತುಕನೆಂಬ ಅರ್ಥದಲ್ಲಿ ಪರಿಹಾರನೀಡಿದಂತೆ ನೆನಪು.

  • ಚಂದ್ರಮೌಳಿಯವರೆ,
   ಅಪಾಮಾಯತನಂ ವಿದಿತ್ವಾ, ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಅಭವ:.
   ಪುರಾಣಗಳು ಹಾಗೂ ತತ್ಪೂರ್ವದ ಕಾವ್ಯಾದಿಗಳ ಕುರಿತ ನನ್ನ ಅಜ್ಞಾನವನ್ನು ಎತ್ತಿ ತೋರಿಸಿದಿರಿ. ಅವುಗಳನ್ನು ಹೀಗೆ ಬಳಸುವುದನ್ನು ಕಲಿಯಬೇಕು!

  • ಬಹಳ ಸುಂದರ ಪರಿಹಾರ.

   ನನಗೆ ತಿಳಿದಿರುವ ಗಣೇಶರ ಪರಿಹಾರದಲ್ಲಿ, ಮನಸ್ಸಿನಿಂದ ಹುಟ್ಟಿದ ಮನ್ಮಥನು, ತಂದೆಯಾದ ಮನಸನ್ನೇ ಕೊಂದು ತಿನ್ನುವನು.

  • ನಿಮ್ಮ ಪರಿಹಾರವು ನಿಜಕ್ಕೂ ಚೆನ್ನಾಗಿದೆ. ನೀವಿಲ್ಲಿ ಉಲ್ಲೇಖಿಸಿದ ಸಮಸ್ಯೆಯು ಶ್ರೀ. ಸದಾನಂದಶಾಸ್ತ್ರಿಗಳವರ ಅವಧಾನವೊಂದರಲ್ಲಿ ಶ್ರೀ ರಂಗನಾಥಶರ್ಮರು ನೀಡಿದ್ದು.. ಅದಿಂತಿದೆ: ಪಿತನಂ ಮಾತೆಯನಂ ವಿಘಾತಿಪರಿನಾಂ ಸಂನ್ಯಾಸಿ ಸಂತೋಷಿಯಯ್

 4. ತಂದಳೊ ದತ್ತಕೆ ಹಲವಾರ್
  ಚಂದದ ಕಂದಗಳನೇಂಜಲೀನಾ ಜೋಲೀ|
  ಎಂದಳದಾರನೆ ದತ್ತದೆ
  ತಂದೆಯನೇಕೊಂದು ’ತಿಂಬ’ಸುತನತಿ ರಮ್ಯಂ

  ತಂದೆ+ಅನೇಕ=ತಂದೆಯನೇಕ, (ಅವುಗಳ ಪೈಕಿ ಈ) ಒಂದು ’ತಿಂಬ’ (’ಹಿಂಬ’ ಎಂದೂ ಕರೆಯಲ್ಪಡುವ ಬುಡಕಟ್ಟಿನ) ಸುತನು ಅತಿ ರಮ್ಯಂ

 5. ಪ್ರಸಾದು ಮತ್ತು ಚ೦ದ್ರಮೌಳಿಯವರ ಪೂರಣಗಳು ಬಹಳ ಹಿಡಿಸಿದವು. ನನ್ನದೊ೦ದು ಲಘುವಾದ ಪ್ರಯತ್ನ:

  ಬೃ೦ದಳ ತ೦ದೆಯು ತಾಯಿಗೆ ಹೀಗೆ೦ದರು:

  ಬೃ೦ದಳನುನೋಡೆ ಸುತಗ೦
  ಬ೦ದಿರ್ಪ ಪಿರಿಯ ಬಕಾಸುರನವೋಲ್ ತಿನ್ನಲ್
  ಸ೦ದೇಹದಿ೦ದ ನೋಡುವೆ
  ತಂದೆಯನೇಕೊಂದು ತಿಂಬ ಸುತನತಿ ರಮ್ಯಂ

  ತಂದೆಯನೇಕೊಂದು = ತ೦ದೆಯಾನೇಕೆ ಒ೦ದು

 6. ತಂದೆಯು ಬುಧಂಗೆ ಚಂದ್ರನು
  ಬೆಂದಿರಲಾತನು ಪುರಾಣಪಿತೃವಿನ ನೆರಳಿಂ|
  ನೊಂದು ಗ್ರಹಣವ ಗೈಯಲು
  ತಂದೆಯನೇಕೊಂದು ತಿಂಬ ಸುತನತಿ ರಮ್ಯಂ||

  ಸ್ಫೂರ್ತಿ: ಬಿ.ಜಿ.ಎಲ್. ಸ್ವಾಮಿಯವರ ಕಾಲೇಜು ರಂಗ ಕೃತಿಯ ’ಬುಧನ ದರ್ಬಾರು’ ಅಧ್ಯಾಯ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ, ಬುಧವಾರದ ಮೀಟಿಂಗುಗಳಲ್ಲಿ, ಸಭಾಧ್ಯಕ್ಷ ವಿಕಾರವಾಗಿ ಕಿರುಚಾಡುತ್ತಿದ್ದ. ಏಕೆಂದರೆ, ಅವನಿಗೆ ಬುಧನ ಪುರಾಣಪಿತೃವಿನ (ಚಂದ್ರ > lunar > lunatic) ಛಾಯೆ ಬಡಿಯುತ್ತಿತ್ತು!

 7. ತಂದೆಯ ನೆನಪಿನ ಭಾವವೆ
  ಬಂಧುರ ವಾಗಿಂದು ತನ್ನೊಳಾವಾಹಿಸಿದನ್ |
  ಮುಂದೀ ಬಲಿಯಂ, ಕಲ್ಪಿಸಿ
  ತಂದೆಯನೇ, ಕೊಂದು ತಿಂಬ ಸುತನತಿ ರಮ್ಯಂ ||

  [ಶ್ರಾದ್ಧದಲ್ಲಿ, ತಂದೆಯ ನೆನಪನ್ನು ತನ್ನೊಳಾವಾಹಿಸಿ, ತನ್ನೊಳು ಆತನನ್ನೇ ಕಲ್ಪಿಸಿ, ಆತನಿಗೆ ಪ್ರಿಯವಾದ ಬಲಿಯನ್ನು ಕೊಂದು ತಿಂದ ಸುತನ್ ಅತಿ ರಮ್ಯಂ – ರಮ್ಯವಾದದ್ದು ಅವನ ತಿನ್ನುವಿಕೆಯಲ್ಲ – ತಂದೆಯನ್ನು ಆವಾಹಿಸಿಕೊಂಡ ಪರಿ 🙂 ]

  • ’ಅನ್ನಂ ಅನ್ನಾದ” ಮೆನುವ
   ತನ್ನಂ ತಾನೇ ತಿನೊವೊಲು ಪಿಂಡೋಪಮೆಯೈ
   ಚೆನ್ನಿಹ ಪೂರಣ ಶ್ರಾದ್ಧಂ 🙂
   ತಿನ್ನಲುಹಿತ ನವ್ಯಪಾಕ ಶೇಷಾನ್ನಮಿದೈ

   • ಕಂದದ ಮಿತಿಯೊಳನರ್ಥಂ
    ಸಂದುದೆ? ತಿಂದವನು ತಂದೆ ಬಲಿಯವನಲ್ಲೈ
    🙂

 8. ಇಂದಿರೆಯನೌಂಕುತಲಿರುಳ್
  ಬಂದಿವಿಡಲ್ ಬೆಸಲೆಯಾಗುತೀಂತಳ್ ರವಿಯಂ
  ಕೆಂದಳಮಂ ಚಾಚಿ ದುರುಳ
  ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ
  [ಕೆಂದಳ = ಕೆಂಪಾದ ಕೈ, ಸೂರ್ಯೋದಯ – ಸ್ವಲ್ಪ ಎಳೆದು ಮಾಡಿದ ಪರಿಹಾರ… :)]

 9. ಮುಂದೆ ಕರಗಳಂ ಚೆಲ್ಲುತ
  ಮಂದಿಯನೆಚ್ಚರಿಸೆ ಪುಟ್ಟುವನವಂ ನಿತ್ಯಂ
  ಚೆಂದಳಗಳೊಳಂಜಿಕೆಯಾ
  ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

  [ ಅಂಜಿಕೆಯ ಜನಕ = ಕತ್ತಲೆ; ಚೆಂದಳ – ಕೆಂಪಾಗಿರುವ ಅಂಗೈ ]

  • ಕಾಂಚನಾರವರೆ,
   ಇಲ್ಲಿ ಮೂವರು ವ್ಯಕ್ತಿಗಳಿದ್ದಾರೆ. ಸೂರ್ಯ, ಅಂಜಿಕೆ ಮತ್ತು ಕತ್ತಲೆ. ಇವರುಗಳ ಪೈಕಿ ರಕ್ತಸಂಬಂಧವಿರುವವರು ಅಂಜಿಕೆ ಮತ್ತು ಕತ್ತಲೆ; ಮಗ-ತಂದೆ. ಈ ಸುತ (ಅಂಜಿಕೆ) ರಮ್ಯನಿರಲು ಸಾಧ್ಯವಿಲ್ಲ. ಇನ್ನು, ಸೂರ್ಯ ನುಂಗುವುದು ತನ್ನ ತಂದೆಯನ್ನಲ್ಲ. ಹಾಗಾದರೆ ಯಾರು ರಮ್ಯ? ಸೂರ್ಯನಾದರೆ, ಅವನು ಯಾರ ಸುತ? ಅಂಜಿಕೆ ಹಾಗೂ ಸೂರ್ಯರು ಸಹೋದರೆ?

   • ‍*ಸಹೋದರರೆ?

   • ಪ್ರಸಾದರೆ – ಕತ್ತಲೆಯು ಅಂಜಿಕೆಯನ್ನು ಹುಟ್ಟಿಸುವುದರಿಂದ ಅಂಜಿಕೆಯ ತಂದೆಯೆಂದು ಕತ್ತಲೆಯನ್ನು ಪರಿಗಣಿಸಿದ್ದೇನೆ.
    ಸುತ ಎಂದರೆ ಮಗು ಅಥವಾ ಶಿಶು – ಹುಟ್ಟುತ್ತಿರುವ ಸೂರ್ಯ. ಸೂರ್ಯ ನುಂಗುವುದು ಅಂಜಿಕೆಯ ತಂದೆಯನ್ನು. ಈಗಷ್ಟೇ ಹುಟ್ಟಿದ್ದರಿಂದ ಆತ ಸುತ.

   • ಪ್ರಸಾದು,

    ಕತ್ತಲೆಯಂಜಿಕೆಗಿರ್ಪುದ –
    ಣೆತ್ತಣದೋ ರಕ್ತ ಬಂಧ ತುಸು ವಿಸ್ತರಿಸೈ ||

    ಕತ್ತಲೆ ಮತ್ತು ಅಂಜಿಕೆಗೆ ರಕ್ತ ಸಂಬಂಧವಿದೆಯೆಂದು ಹೇಳಿದ್ದೀರಷ್ಟೆ. ಅದು ಯಾವ ಬಣ್ಣದ ರಕ್ತ ಅಂಬುದನ್ನು ದಯವಿಟ್ಟು ವಿಸ್ತರಿಸಬೇಕೆಂದು ಕೋರಿಕೆ 🙂

    • ಕತ್ತಲೆಯೆಂಬಜ್ಞಾನವ
     ನತ್ತಲೆ ದೂಡುತ್ತಲುದಿಪ ರವಿಯೇಬಾಲಂ
     ಉತ್ತಮಪೂರಣ ಕಾಂಚನ
     ರಿತ್ತಿಹರಿಲ್ಲೆಲ್ಲಿಯರ್ಥಜಟಿಲತೆ? ಕಾಣೆಂ:-)

     • ಸರಿಯೇ. ರವಿ ಬಾಲಂ, ಶಿಶು-
      ವರ, ಮಗು. ಮಾತ್ರ ‘ಸುತ’ನಲ್ಲವೆಂದೆನ್ನ ಮತಂ|
      ಬಿರುಗನ್ನಡದಿಂತೆನುಗುಂ:
      ಪರಪಿತನನು ಕೊಂದು ತಿಂಬ ’ಮಗ’! ಬಲೆ ರಮ್ಯಂ||

      ಬಿರುಗನ್ನಡ = ಬಿರುಸಾದ/ ಗ್ರಾಮ್ಯ
      (ಇಲ್ಲಿ ’ಮಗ’ ಎಂದರೆ ’ಸುತ’ ಎಂದಲ್ಲ. ಬೈಗುಳದ ’ಕಳ್ನನ್ಮಗ’)

     • ಪ್ರಸಾದು – ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲಿ ಹೀಗಿದೆ ::
      ಸುತ (ನಾ). ೧. ಮಗು ; ಶಿಶು. ೨. ಮಗ ; ಪುತ್ರ.

     • ~ಶಂ~

  • ಬಲುದಿನಗಳ ಬಳಿಕ ಪದ್ಯಪಾನಕ್ಕೆ ಮತ್ತೆ ಪದವಿಟ್ಟ ಕಾಂಚನ ಅವರಿಗೆ ಸ್ವಾಗತ:-)
   ಪದ್ಯ ಚೆನ್ನಾಗಿದೆ.

   • ಮೆಚ್ಚುಗೆ ತೋರಿದ ನಿಮಗೂ, ಮೌಳಿಯವರಿಗೂ ಧನ್ಯವಾದಗಳು

    • ಇಲ್ಲಿ ನನ್ನ ಹೆಸರು conspicuouಸ್ಸಾಗಿ ಇದೆ 😉

     • ಅರ್ಥವಾಗಿಹುದೆನಗಿದೀಗ –
      ನ್ಯರ್ಥ ಬಗೆಯಲ್ ಪ್ರಥಮರೆಂದುಂ
      ಸಾರ್ಥವಾಗದು ಪದ್ಯ ಸರಣಿಯು ನಿಮ್ಮ ನೆನೆಯದಿರೆ ||
      ಭರ್ತಿ ಪದಗಳಿಗಾಸ್ಪದವನೀಡುವರದಿಲ್ಲದಿರೆ ||
      🙂

     • Lo

 10. ಅ೦ದ೦, ಬೀಭತ್ಸತೆಯನು-
  ಮೊ೦ದೇ ಪಟದೊಳ್ಗೆ ಚಿತ್ರಿಸಲ್, ನರಸಿ೦ಹ೦
  ಕ೦ದಮಿಹ ಪ್ರಹ್ಲಾದನ
  ತಂದೆಯನೇ ಕೊಂದು ತಿಂಬ, ಸುತನತಿ ರಮ್ಯಂ

 11. ಕಾಂಚನ ಹಾಗೂ ಸೋಮ ಅವರ ಪೂರಣಗಳು ಹೊಸಭಾವದಿಂದ ಪ್ರಶಸ್ತವಾಗಿವೆ. ಪದ-ಅರ್ಥಗಳ ಗೊಂದಲವಿಲ್ಲದೆ, ಪೂರಣದ ಅರ್ಥೈಕೆ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಕ್ಲಿಷ್ಟವಾಗದೆ, ಸುಲಭದಲ್ಲೇ ನವೀನ ವಿಧಾನವನ್ನು ಮಿಂಚಿ ತೋರಿಸುವ ಪೂರಣಗಳು ಇಷ್ಟವಾಗುತ್ತವೆ.
  ಕಂದಮಿಹ.. ಕಂದನಹ / ಕಂದನಿಹ, ಅಂದಂ… ಅಂದವ ?? ಈಪದಗಳನ್ನು ಸವರಿಸಲು ಸೋಮರೇ ಸಮರ್ಥರು.

  • ಚ೦ದ್ರಮೌಳಿಯವರೇ :),

   ಹೌದು ಸರ್, ಅರ್ಥ ಸ್ಪಷ್ಠೆ ಇಲ್ಲ ಪದ್ಯದಲ್ಲಿ. ಒ೦ದಷ್ಟು ಸವರಿಸಿದ್ದೇನೆ…

   ಅ೦ದವ, ಬೀಭತ್ಸತೆಯನು-
   ಮೊ೦ದೆಡೆ ತ೦ದಿರ್ಪ ಚಿತ್ರದೊಳ್, ನರಸಿ೦ಹ೦
   ಕ೦ದನಿಹ ಪ್ರಹ್ಲಾದನ
   ತಂದೆಯನೇ ಕೊಂದು ತಿಂಬ, ಸುತನತಿ ರಮ್ಯಂ

   • ಕಲ್ಪನೆ ಸೊಗಸಾಗಿದೆ. ಮೌಳಿಯವರೆಂದಂತೆ ಮತ್ತೂ ಸವರಣೆಯಾದರೆ ಚೆನ್ನ:-)

 12. ವ್ಯಾಸಪೌರ್ಣಮಿಯಂದು ಗುರುನಮನ

  ವ್ಯಾಸರಾರಾಧನಂ ಗೈವರಾಷಾಢದೊಳ್
  ನೇಸರಂ ಪೋಲ್ದಾಗಲಾ ಚಂದಿರಂ|
  ವಾಸರಾಂತರದೆ ಕಾಣೆ ವ್ಯಾಸರೂಪರನು
  ಲೇಸೆಮ್ಮ ಪುಣ್ಯ ತಾನಿತರರಿಂಗಿಂ||

 13. 3ನೆಯ ಪಾದ ಸವರಿದ್ದೇನೆ

  ವ್ಯಾಸರಾರಾಧನಂ ಗೈವರಾಷಾಢದೊಳ್
  ನೇಸರಂ ಪೋಲ್ದಾಗಲಾ ಚಂದಿರಂ|
  ವಾಸರಾಂತರದೊಳೆ ವ್ಯಾಸರೂಪರ ಕಾಂಬ
  ಲೇಸೆಮ್ಮ ಪುಣ್ಯ ತಾನನಿಬರಿಂಗಿಂ||

  • ೨ನೆಯ ಪಾದ ತಪ್ಪಾಗಿದೆಯೇನೋ?
   ನೇಸರನ ಪೋಲ್ದಾಗಲಾ ಚಂದಿರಂ|

 14. ಓ..ಸೋಮರು ಬರೆದ ರೀತಿಯಲ್ಲೇ ಯೋಜಿಸುತ್ತಿದ್ದೆ.

  ಸ೦ದಿರೆ ದುಷ್ಟನ ಹತಿ ಭೂ
  ಮ೦ದಿರವನು ಸತತ ಕಾವ ಜಗದಾ೦ಬಿಕೆಗೆ
  ವ೦ದಿಪ ಶಿಶು ಪ್ರಹ್ಲಾದನ
  ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

  • Raghu, Very beautiful. Fantastic flow. 2nd line can u change to jagadAMbikegeM ..because in Kanda, 2nd and 4th lines must end with a GURU.

   • ಧನ್ಯವಾದ ರವೀ೦ದ್ರರೆ,
    ಸರಿಪಡಿಸಿದೆ.
    ಸ೦ದಿರೆ ದುಷ್ಟನ ಹತಿ ಭೂ
    ಮ೦ದಿರವನು ಸತತ ಕಾವ ಜಗದಾ೦ಬಿಕೆಗೆ೦
    ವ೦ದಿಪ ಶಿಶು ಪ್ರಹ್ಲಾದನ
    ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

 15. ಮುಂದೆ ನಡೆದ ಯಾಗಾಶ್ವದ
  ಹಿಂದೆ ನೆರೆದ ದಂಡಿನಗ್ರನಂ ಕಾಳಗದೊಳ್
  ಕಂದಿಸಿದ ಬಭ್ರುವಾಹನ
  ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

  ಕ್ಷತ್ರಿಯರಿಗೆ ಮಾನಭಂಗ ಪರಾಜಯಗಳು ಮರಣಸಮಾನವಲ್ಲವೇ? ಕಂದಿಸು – ಬಣ್ಣಗೆಡುವಂತೆ ಮಾಡು, ಸಾಧು ತಾನೆ?

  • ಎಲ್ಲವು ಸರಿಯೊಂದನುಳಿದು
   ಕೊಲ್ಲದೆ ಮರಣವನು ಮೀರಿದ ಸ್ಥಿತಿ ತಂದುಂ|
   ನಿಲ್ಲದೆಲಲ್ಲಿಗದೇತಕೊ
   ಕಲ್ಲೆದೆ ಮಾಡುತೆ ಘಟೋತ್ಕಚ ಪಿತನ ತಿಂದನ್!!

   • Sorry. ಬಭ್ರುವಾಹನನ್ನು ಘಟೋತ್ಕಚನ ಮಾಡಿದೆ. My point is valid nevertheless. Here is the correction:
    ಕಲ್ಲೆದೆಯಿಂ ಬಭ್ರುವಾಹನ ಪಿತನ ತಿಂದನ್!!

   • ಪ್ರಸಾದು,

    ಜಗದೊಳಗಜೇಯನೆಂದನ
    ಮಗ ತಂದೆಯ ಕೀರ್ತಿಕಾಯಮಂ ಸದೆಬಡಿಯಲ್
    ಬಗೆವೊಡೆ ತಿಂದಂತಲ್ಲವೆ?
    ಮಿಗದಿರಲಾ ಪೂರ್ವಕೀರ್ತಿ ಅಜೇಯನೆಂಬಾ?

  • ಉಪೇಂದ್ರ ಉವಾಚ: ರೀ, ರೀ, ರೀ…. ಕೊಂದ ಓಕೆ. ತಿಂದ ಯಾಕೆ?

 16. ಅಬ್ಬ…! ಬಲು ಕಠಿಣವೆಂದು ಅನಿಸಿದ ಸಮಸ್ಯಗೆ ಬಂದ ಇಷ್ಟೊಂದು ಪೂರಣಗಳನ್ನು ಓದಿ ಚಕಿತನಾಗಿದ್ದೇನೆ.ಪದ್ಯಪಾನಿಗಳಿಗೆ ತಲೆವಾಗಿ ವಂದಿಸಿದ್ದೇನೆ.

  • ತೆಕ್ಕುಂಜ ಕೇಳಿರಿ, ಕ್ಲಿ
   ಷ್ಟಕ್ಕಂಜುತೆ ಯತ್ನ ಗೈಯದಿರೆವಾವು ಗಡಾ|
   ಈ ಗಂಜಿಕೆಯೊಳು ನಲ್ಬರ
   ವೀ ಗುಂಜನದೊಳಿದೆ ಸಾಧು ಬೆಲ್ಲಂ-ಹೊಲ್ಲಂ||

   ಗಂಜಿಕೆ = ಗಡಂಗು
   (Different AdiprAsa)

  • ದಿಟಮಯ್ ಕಠಿನಂ ಸದ್ಯದ
   ಘಟನೆ ಗಡಾ ಕಂದಪದ್ಯದೊಳ್ ಪರಿಹಾರಂ|
   ಪಟುಗಳಿವರ್ ನಮ್ಮಯ ಬಲ್
   ಭಟರೀ ಸತ್ಪದ್ಯಪಾನಿಗಳ್ ಗೆಲ್ದಪರಯ್||

 17. ಹಿಂಜುತಲೇನೋ ಬರೆಯುಲು
  ಸಂಜೆಯೆ ಹೊಸಭಾವಗಳಿಗೆ? ಪೂರಣ? ಮರೆತೆನ್
  ಮಂಜಿನೊಳಡಗಿತೆ ಮತಿ? ತೆ-
  ಕ್ಕುಂಜರರೆಚ್ಚರಿಸಲಿದಿಗೊ ಪೂರಣವೆರಡೈ

  “ಕೊಂದು ತಿನುವುದೇ ಪ್ರಕೃತಿ
  ಕೊಂದಾಗಲೆ ಭತ್ತವಕ್ಕಿಯಳಿಯಲದನ್ನಂ”
  ಎಂದಿರೆ ಪಿತ, ನನುಸರಿಸುತ
  ತಂದೆಯನೇ, ಕೊಂದುತಿಂಬ ಸುತನತಿರಮ್ಯಂ

  ಹಂದಿಯ ಹೊಡಿ, ತಿನ್ನೆನೆ, ಸುತ
  ಕೊಂದನದಾಗಲೆ ಪೊರಳ್ದು ಮಿಗ ಸಾಯಲ್ಮೇ
  ಣಂದನುಸರಿಸಿದ ಪಾಠದಿ
  ತಂದೆಯನೇ, ಕೊಂದುತಿಂಬ ಸುತನತಿರಮ್ಯಂ

  • ಅವ್ಯಾಹತಕವಿತಾಹಿತ-
   ಹವ್ಯಾಶನರಲ್ತೆ ನೀಂ ಸಮಾಹಿತಭವ್ಯರ್|
   ಕವ್ಯಾಶ್ರಯಮೀ ಭವದೀ-
   ಯಾವ್ಯಯದಿವ್ಯಪ್ರಸನ್ನಪರಿಹಾರಪಥಂ||

   • ಹವ್ಯಾರ್ಪಣ ಸಾರ್ಥಕತೆಯೆ
    ದಿವ್ಯಾನುಭವ, ರಸ ಸವ್ಯಸಾಚಿಗೆ ಸೇರಲ್
    ಶ್ರವ್ಯಮದಾಂತರ್ಯಕೆ ಕ-
    ರ್ತವ್ಯಬಹಿರ್ನಮನ ಭೋಕ್ತನಷ್ಟಾರ್ಚಿಯಲಾ !

 18. ಬಂದುದದೊಮ್ಮೆಲೆ ಹೊಸ ಹುರು –
  ಪಿಂದೆನಗೈತಂದುದೊಂದು ನವ ಪರಿಹಾರಂ ::

  ಕಂದನ ಜೊತೆಗಾಡುವದಾ
  ನಂದದೊಳಪ್ಪ ಮಗ ಹೋರೆ ಗೆಲ್ವಗೆ ಲಾಡುಂ |
  ಚೆಂದದಿ ಕುತ್ತಿಗೆಯೇರುತ
  ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ ||

  • ”ಲಾಡುಂ’ ಪದಮೆಂತಪ್ಪುದು
   ಕಾಡದೆ ವ್ಯಾಕೃತಿಯನಿಲ್ಲಿ ಲಾಡು ಗಡದುವೇ|
   ಕೂಡದಲಾ ಸರಳಾರ್ಥಮು-
   ಆಡದಲಾ ಜಾಣ್ಮೆಸೋಗೆ ಕವಿತಾವನಿಯೊಳ್||

   • ಹಿಂದಿನ ಪದ್ಯದ ತೊಡಕ
    ನ್ನಿಂದು ಕಳೆದು ಸರಳವಾಗೊರೆಯಲೀ ಯತ್ನಂ ::

    ಕಂದಂ ಶಿಶುಭಾಹುಗಳಿಂ
    ತಂದೆಯೊಡೆ ಕಪಟದಿ ಹೋರಿ ಗೆಲ್ವಂ ತಿನಿಸಂ |
    ಚೆಂದದ ಕೂಟಗಳಾಟದೆ
    ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ ||

    • ಲಾಡೂ ಯೆನ್ನುತ ಮುಗಿಸಲ್
     ಪಾಡೇಂಕೆಡದಲ್ತೆ ಸರಸಕಂದದ ಬಂಧಂ !!
     ಮಾಡಿದ ಹಿಂದನಪದ್ಯವೆ
     ನೋಡಲ್ ಸೊಗಮಿರ್ಕೆ, ರಚನೆಯೆರಡಾಗಲದೇನ್ 🙂

 19. ಇಂದಿನಿರವದೇನಾನೆ-
  ಲ್ಲಿಂದಲ್ಬಂದೆನೆನಗೆಂತುಪರಿಗುರಿಯೆಂಬೀ
  ಸಂದೆಯದಸಾಲ್ಸುರುಳಿಯಿಂ
  ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ
  [ತಂದೆಯನ್ನು ಪರಿಪ್ರಶ್ಣೆಗಳಿಂದ ಕಾಡಿ ’ಸಾಯಿಸುವ’ ಮಗ]

  • ಹೊಳ್ಳರ ಪರಿಹಾರಂಗಳ್
   ಕಳ್ಳನ ಕಯ್ಗಿತ್ತೊಡಂ ಬೆಲೆಯೆನಿಪ ಪೊನ್ನಂ|
   ಹೊಳ್ಳಿಲ್ಲದೆ ನೆನಪಿಸುಗುಂ
   ಕೊಳ್ಳಿಂ ನೀಮೆನ್ನ ಮೆಚ್ಚುಗಾಣ್ಕೆಯೆನಲಿದಂ||

   • ಪದ್ಯಾಕಾಶದಿ ಬೆಳಗುವ
    ಖದ್ಯೋತರ್ತಾವಿದೀಗಲಿತ್ತಪದಕದಿಂ [ಖದ್ಯೋತ = ಸೂರ್ಯ]
    ಪದ್ಯಾರಣ್ಯದಿ ಮಿಂಚುವ
    ಖದ್ಯೋತನ್ನಲಿವೆನೈಸೆ ರಾಮನಳಿಲಿನೋಲ್ [ಖದ್ಯೋತ = ಮಿಂಚುಹುಳ]

    • ಸರಿಯಯ್ಯಳಿಲಿನ ಪೋಲಿಕೆ-
     ಯುರವೀ೦ದ್ರಗೆ ತಾ೦ ಬೆಡ೦ಗಿನೊಳು ರಚಿಸಲ್ಕೇ
     ಹರಸಾಹಸದಿ೦ದೋದುವ
     ಕರಗಿಸೆ ಮುದ್ದಣ್ಣನ೦ ಕುವೆ೦ಪು ರಚನೆಗಳ್

     ಕರಗಿಸೆ = ಜೀರ್ಣಿಸೆ, ಅರ್ಥಮಾಡಿಕೊಳ್ಳುವಲ್ಲಿ

     ಹೊಳ್ಳ,
     ‘ಬೆಡ೦ಗಿನೊಳು ರಚಿಸಲ್ಕೇ’ ಎ೦ದಿದ್ದೇನೆ, ನನಗೆ ಗೊತ್ತು ನಿನ್ನ ಅಧ್ಯನದ ಗುರಿ ಪದ್ಯ ರಚನೆಯೊ೦ದೇ ಅಲ್ಲ ಕಾವ್ಯಾಸ್ವಾದ ಎ೦ದು
     ‘ಹರಸಾಹಸ’ ಎ೦ದಿರುವುದು, ಕೆಲಸದ ನಡುವೆ ಸಮಯ ಮಾಡಿಕೊ೦ಡು ನೀನು, ಎಷ್ಟೋದೂರ ಹೋಗಿ ಸ೦ತತವಾಗಿ ಅಭ್ಯಾಸ ಮಾಡುತ್ತಿರುವುದರಿ೦ದ

 20. ಸುಂದರ ಬಾನಂಗಳದೊಳ್
  ಮಂದದಿ ಚಲಿಸಿರ್ಪಮೇಘಸಂಕುಲದಿಂ ಬೇರ್
  ವಂದು ತೆರೆವಾಯಿಯಿಂದಲ್
  ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ
  [ಆಕಾಶದಲ್ಲಿ ಮೋಡಗಳ ಚಿತ್ತಾರ.]

  • ಪರಿಹಾರಂಗಳ್ ಚೆಲ್ವೆನಿ-
   ಸಿರೆ ನಿಮ್ಮಯ ಕಲ್ಪನಾನುಶೀಲಿತಕವನಂ|
   ಸರಸತಿಗೇ ಸಖಿಯಾಯ್ತಯ್
   ತೊರೆವುದರಿಸಮಾಸಮಂ ಮೊದಲನೆಯ ಪದದೊಳ್:-)

  • ಸುಂದರ ಬಾನ್ಮಂಡಲದೊಳ್
   ಮಂದದಿ ಚಲಿಸಿರ್ಪಮೇಘಸಂಕುಲದಿಂ ಬೇರ್
   ವಂದು ತೆರೆವಾಯಿಯಿಂದಲ್
   ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ
   [ಅರಿಸಮಾಸವನ್ನು ತಿದ್ದಿದ ಬಳಿಕ]

   • ಬಾನಂಗಳಸರಿ, ಮಂಡಲ
    ತಾನಾಗುವುದರಿಸಮಾಸ ಸುಂದರಬಾನೇ
    ತಾನ್ಸೂಚಿಸಿದರು ರಾ.ಗರು
    ಊನಪದವದೇಸವರಿಸ’ಲಂದದಬಾನೈ’

   • ಮೌಳಿಯವರೇ, ಧನ್ಯವಾದ. ’ಬಾನಂಗಳ’ವನ್ನು ಉಳಿಸಿಕೊಂಡುದರಿಂದ ಖುಶಿಯಾಗಿದೆ
    ಅಂದದ ಬಾನಂಗಳದೊಳ್
    ಮಂದದಿ ಚಲಿಸಿರ್ಪಮೇಘಸಂಕುಲದಿಂ ಬೇರ್
    ವಂದು ತೆರೆವಾಯಿಯಿಂದಲ್
    ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

 21. ಸು೦ದರದೀ ಬೆಳದಿ೦ಗಳೊ-
  ಳ೦ದದ ಮನದನ್ನೆತಾ೦ ಸರಸದಿ೦ ಸೆಳೆಯಲ್
  ಕ೦ದರ್ಪ೦ ಸುಮಬಾಣದೆ
  ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

  ಮನಸಿಜನ ಹಲ್ಲೆ ಮನಸ್ಸಿನ ಮೇಲಲ್ಲವೇ 😉

 22. ಪುನರುಕ್ತಮಾದರುಂ ಭಾ
  ವನೆ ರಾಮ್ ಎಂದಂತೆ, ರಾ.ಗ.ಪೂರಣ ಸೂಚ್ಯಂ
  ಸುನಯದಿ ಕಾಂತ ಪದಂಗಳ
  ದನುವಾದಿಪ ಸೊಗಸು ಸೋಮ ಪೂರಣ ಹೃದ್ಯಂ

 23. ಚ೦ದ್ರಮೌಳಿಯವರೆ,

  ಈ ಪೂರಣದ ಪ್ರಸ್ತಾಪವಿದ್ಧದ್ದನ್ನು ಗಮನಿಸಲಿಲ್ಲ, ಪುನರುಕ್ತಿಗೆ ಪ್ರಾಯಶ್ಚಿತ್ತ ಎ೦ದು ಇನ್ನೊ೦ದು:)

  ಪೊ೦ದಿಸೆ ಪಾಕದನುಭವಗ-
  ಳೊ೦ದೆಡೆ ತಿಳಿಮನದೊಳಾರ್ಷದರ್ಶನ, ಭಕ್ತರ್
  ಮು೦ದೆಳೆದಾಡೆ ಮತಾ೦ದ್ಯದೆ
  ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

  (ವಿಡ೦ಬನೆಯ ಪದ್ಯ)

  • ಪುನರುಕ್ತಿನಿಮ್ಮದಲ್ಲೈ
   ಸ್ವನವೀನಕವನವರಡಿರೆ ಲಾಭವದಲ್ತೇ

 24. Typo
  ಪೊ೦ದಿಸೆ ಪಾಕದನುಭವಗ-
  ಳೊ೦ದೆಡೆ ತಿಳಿಮನದೊಳಾರ್ಷದರ್ಶನ, ಭಕ್ತರ್
  ಮು೦ದೆಳೆದಾಡೆ ಮತಾ೦ಧದೆ
  ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

 25. ಮುಂದೆನಿ ಮುಕ್ಕಳಿಸಿದೆ ಬೈಗ
  ತಂದೆಯ ಮೀರಿಸೆ ಗುಣದಲಿ ಸುತನತಿ ದಿವ್ಯಂ
  ಕಂದನವ ತಿಂಗಳಸುರಿಯೆ
  ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

  • ಕಲ್ಪನೆ ಚಿನ್ನಿದೆಯಾದರು
   ಮಲ್ಪತಮಂ ದೋಷಮೊದಲ,ಮೂರನೆಸಾಲೊಳ್
   ಸ್ವಲ್ಪಸವರಿಸಿರಿ ವೀಣಾ
   ಶಿಲ್ಪವದೊಪ್ಪಲ್ ಪಸಂದು ನಿಮ್ಮಯ ಕಂದಂ

  • corrected
   ಮುಂದೆನಿ ಮುಕ್ಕಳಿಸಿ ಬೈಗ
   ತಂದೆಯ ಮೀರಿಸೆ ಗುಣದಲಿ ಸುತನತಿ ದಿವ್ಯಂ
   ಕಂದನವ ತಿಂಗಳಸುರಿಯೆ
   ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

   • ಛಂದಸ್ಸು ಚಂದವೀಗಳೆ
    ಮುಂದೆ -ನಿ, ಯೆನೆ ’ನೀ’ ಯೆಂಬುವ ಅರ್ಥವದಿಲ್ಲೈ
    ಸಂದ ’ಸಿ ಬೈಗ’ವು ಜಗಣಂ
    ಹೊಂದಿಸಿ ತಿದ್ದುತ್ತ ಬರೆಯೆ ನೀವೆ ಸಮರ್ಥರ್

   • ಮುಂದೆಯೆ ನೀತಿಂದೆ ಬೆಳಕ
    ತಂದೆಯ ಮೀರಿಸೆ ಗುಣದಲಿ ಸುತನತಿ ದಿವ್ಯಂ
    ಕಂದನವ ತಿಂಗಳಸುರಿಯೆ
    ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

 26. ತಂದೆರಡು ಧನಕಣ ರಭಸ
  ದಿಂದಪ್ಪಳಿಸೆ ಹೊರಹೊಮ್ಮಿತೈ ದಿವಿಜಕಣಂ
  ಚಂದದ ಚಿತ್ತಾರವದೋ
  ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

  ಪ್ರೋಟಾನುಗಳ ಮಿಲನದಿಂದ ಹುಟ್ಟಿದ ಹಿಗ್ಗಿನ ಬೋಸಾನ ಮತ್ತು ಹುಟ್ಟಿನಲ್ಲಿ ಅದು ಮೂಡಿಸಿದ ಚಿತ್ತಾರದ ಬಗ್ಗೆ.
  ಪದ್ಯದ ಬಗ್ಗೆ ನನಗಿನ್ನೂ ತೃಪ್ತಿಯಿಲ್ಲ. ವಾಡಿಕೆ ತಪ್ಪಬಾರದೆಂದು ಹಾಕುತ್ತಿದ್ದೇನೆ.

 27. ಸಂದಿಪದನೇಕ ಸೂತ್ರದೊ
  ಳೆಂದಿಗುಮೀಪರಿಯ ಪೂರಣಗಳಂ ಕಾಣೆನ್ |
  ಕಂದದೊಳದೆಷ್ಟೊ ಕಂದರ್
  ತಂದೆಯರಂ ಕೊಂದು ತಿಂದು ಮೆರೆದಿಹರೀಗಳ್ ||
  🙂

  • ತಂದೆಯರಂ ಕೊಂದು ತಿಂದು ಮೆರದಿಹರೀಗಳ್ (ರಾಮ್: ನಾಲ್ಕನೇ ಸಾಲು)

   • ಧನ್ಯವಾದಗಳು. “ತಿಂದು” ಹೋಗಿತ್ತು 🙂 ಅಲ್ಲೇ ಸರಿ ಮಾಡಿದ್ದೇನೆ.

 28. ರಾಮ್, (ಗೋವಿನ ಹಾಡಿನ ಧಾಟಿ)

  ಗುಟ್ಟು ತಿಳಿಯದು ನನಗದೆಂಬೆಯ
  ಕಟ್ಟಿ ಗಂಟನು ದರ್ಭೆ ಯಳ್ಳ
  ನ್ನಿಟ್ಟು ಶ್ರಾದ್ಧವ ಮಾಡಿ ತಣಿಯಲು
  ಭಟ್ಟ ಹೊಂಚನು ಹಾಕಿಹೆ|

  • 3rd line honed: (ಮಾಡು ~ ಮಾಡಿಸು)

   ಗುಟ್ಟು ತಿಳಿಯದು ನನಗದೆಂಬೆಯ
   ಕಟ್ಟಿ ಗಂಟನು ದರ್ಭೆ ಯಳ್ಳ
   ನ್ನಿಟ್ಟು ತಿಥಿಯನು ಮಾಡಿಸಲು ನೀ
   ಭಟ್ಟ ಹೊಂಚನು ಹಾಕಿಹೆ|

  • ಭಟ್ಟತನದಲ್ಲಿಲ್ಲ ಗಂಟದು
   ಕಟ್ಟುವದು ಬರಿಯಂಗ ವಸ್ತ್ರದಿ ,
   ಚಟ್ಟವೇರಿದ ಜವನ ಕೊಯ್ಲಿನ ,
   ಋಣಕಳೆವ ತೃಣ ದಾನಮೈ ||

 29. v. good

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)