Jul 232012
“ಗುರುಪತ್ನಿಯ ಕೋರಿ ಧನ್ಯನಾದನು ಶಿಷ್ಯನ್”
ಎಂಬ ಸಾಲನ್ನುಪಯೋಗಿಸಿ ಕಂದ ಪದ್ಯದ ಉಳಿದ ಮೂರು ಸಾಲುಗಳನ್ನು ಪೊರೈಸಿರಿ.
ಸಮಸ್ಯೆಯ ಭಾವ – ತೆಲಗಿನ ಶಂಕರಾಭರಣ ಬ್ಲಾಗಿನ ಕೃಪೆ
“ಗುರುಪತ್ನಿಯ ಕೋರಿ ಧನ್ಯನಾದನು ಶಿಷ್ಯನ್”
ಎಂಬ ಸಾಲನ್ನುಪಯೋಗಿಸಿ ಕಂದ ಪದ್ಯದ ಉಳಿದ ಮೂರು ಸಾಲುಗಳನ್ನು ಪೊರೈಸಿರಿ.
ಸಮಸ್ಯೆಯ ಭಾವ – ತೆಲಗಿನ ಶಂಕರಾಭರಣ ಬ್ಲಾಗಿನ ಕೃಪೆ
ಮರುಕ೦ ಪುಟ್ಟುವೊಲಿಹ ತಾ೦
ತಿರುಗಲ್ ದೇಶವಮನಾಥ ವಿದ್ಯಾರ್ಜನೆಗ೦
ಶರಣಾಗತಿಯ೦ ಪೊರೆವಾ
ಗುರುಪತ್ನಿಯ ಕೋರಿ ಧನ್ಯನ್ ಆದನು ಶಿಷ್ಯನ್
ವರನಾ ಮೂರ್ಖತೆಯ೦ ತಾ೦
ಪರಿಪರಿ ವಿಧದೊಳ್ಗೆ ತಿದ್ದಲಾ ಸತಿ, ಪತಿಯು೦
ಸರಿಯೇ೦ ತಪ್ಪೇನೆ೦ಬುದ
ಗುರುಪತ್ನಿಯ ಕೋರಿ ಧನ್ಯನಾದನು ಶಿಷ್ಯನ್
ಗುರುಪತ್ನಿ – ಗುರುವೇ ಪತ್ನಿ
ಪ್ರೇಮಭಕ್ತಿಮಯಂ ವಾಕ್ಯಂ ಭ್ರಾಮಕಂ ಸೋಮಪೂರಣಂ
dhanyavAdagaLu Sir
ಇದನ್ನು ಇನ್ನೊಂದು ರೀತಿಯಲ್ಲಿಯೂ ಅರ್ಥಮಾಡಿಕೊಳ್ಳಬಹುದು: ಗುರುಪತ್ನಿ = overweight wife! ಹಾಗಾಗಿ ಅವಳ ಮಾತು intimidatingಆಗಿಯೂ, ನಿರ್ಣಾಯಕವಾಗಿಯೂ ಇರುತ್ತದೆ. ಇವನಿಗೆ ಅವಳನ್ನು ಕೋರಿ/ಬೇಡಿಕೊಂಡು ಅವಳ ಕೃಪಾಕಟಾಕ್ಷದಲ್ಲಿರದೆ ವಿಧಿಯಿಲ್ಲ.
🙂
ಗುರುವಿಂದಜ್ಞಾನ ಕಳೆದು
ಗುರುತರದಾಜ್ಞೆಯನು ಪಡೆದು ಪೊರಡುವ ಮುನ್ನಂ|
ಗುರುಪುತ್ರಿಯ ಗೆದ್ದ ಬಿಡದೆ
ಗುರುಪತ್ನಿಯ ಕೋರಿ, ಧನ್ಯನಾದನು ಶಿಷ್ಯನ್||
ಸೊಗಸಾದ ಪರಿಹಾರ. ಪದ್ಯಶಯ್ಯೆಯೂ ಚೆಲುವಾಗಿದೆ.
ಗುರುಪುತ್ರಿಯನ್ನವನ್ ಗೆ –
ಲ್ದರು ಮತ್ತಾ ತಾಯ ಕೋರ್ದನೇ ಆ ಭಂಡನ್ ?
🙂
ಅಯ್ಯಯ್ಯೋ! ಸಂಜೆಯೊಳಗೆ
ನೆಯ್ಯಲೆಳಸೆ ಮೂರು ಮಾರದಾಗುವುದಿಂತೇ!
*ಗುರುಪುತ್ರಿಯ ಪಡೆದ ಬಿಡದೆ
ಪ್ರಕೃತಸಮಸ್ಯೆಯನ್ನು ಹಲವು ಬಗೆಗಳಲ್ಲಿ ಬಿಡಿಸಬಹುದಷ್ಟೆ; ಇಲ್ಲಿ ಒಂದೆರಡು ಪ್ರಯತ್ನಗಳು:
ಚಿರಪರಿಚಿತಮಲ್ತೆಮಗಂ
ಪುರಾಣಕಥೆ ಚಂದ್ರ-ತಾರೆ-ಸುರದೇಶಿಕರಾ|
ಒರೆಯುವುದೇನಿನ್ನದರಿಂ
ಗುರುಪತ್ನಿಯನೆಳಸಿ ಧನ್ಯನಾದಂ ಶಿಷ್ಯಂ!!!
(ಕಾಕುವಿನ ಬಲದಿಂದ ಹೊಮ್ಮುವ ವ್ಯಂಗ್ಯವಿಲ್ಲಿ ಅಭಿಪ್ರೇತ)
ಪುರುಷೋತ್ತಮಮಾಸವ್ರತ-
ಧುರಂಧರಂ ವಿವಿಧದಾನದಕ್ಷಂ ರತ್ನಾ-
ಭರಣಪ್ರದಾನಕೆನುತುಂ
ಗುರುಪತ್ನಿಯನೆಳಸಿ ಧನ್ಯನಾದಂ ಶಿಷ್ಯಂ||
(ಅಧಿಕಮಾಸವ್ರತದಲ್ಲಿ ನಾನಾವಿಧದ ದಾನಗಳನ್ನೀಯುವಾಗ ಮಿಗಿಲಾದ ದಾನಗಳಿಗೆಂದು ಗುರುಪತ್ನಿಯನ್ನು ಆಯ್ದ ಶಿಷ್ಯನ ಭಕ್ತಿಯಿಲ್ಲಿ ವಿವಕ್ಷಿತ)
ಗುರುವಿಂ ದಕ್ಕಿದ ಶುಚಿರುಚಿ-
ಭರಕಾವ್ಯದ ಪಾಠಕೌಶಲಮನೇನೆಂಬೆಂ?
ಪರಿಮಳಿಸುತ್ತಿರೆ ಮನೆಯನ-
ಗುರು, ಪತ್ನಿಯನೆಳಸಿ ಧನ್ಯನಾದಂ ಶಿಷ್ಯಂ!
(ಶುಚಿ = ಶೃಂಗಾರ, ರುಚಿ = ರಸ, ಅಗುರು = ಪರಿಮಳಕಾರಕದ್ರವ್ಯ)
ಪೌರಾಣಿಕವದು- ಬೀಜಂ
ಪೂರಣ ಶಾಸ್ತ್ರೀಯ ದಾನ – ತರುವೋಲ್ ಬೆಳೆದುಂ
ಮೂರೆನೆಯದಲ್ತೆ – ಫಲಮದು
ಕೋರೈಸಿಹುದೈ ತ್ರಿನೇತ್ರ ರಾಗಚ್ಛವಿಯಿಂ
ಪ್ರಾಯಃ ಪ್ರತ್ಯಯಮಾಧತ್ತೇ ಸ್ವಗುಣೇಷೂತ್ತಮಾದರಃ (ಕಾಳಿದಾಸ)”
ಎಮ್ಮ ಗುಣಂಗಳೊಳೆಮಗಂ
ಸುಮ್ಮಾನಮೆನಿಪ್ಪುದಲ್ತೆ ಮೆಚ್ಚೆ ಬುಧರದಂ|
ಮರುಳನ್, ನಸುಕಿನ ನಿದ್ರೆಯೊ
ಳಿರುವಗೆ ಕನಸೊಳ್ಗನೇಕ ವಧುಗಳ ಸಾಲ್ಗಳ್ |
ಬಿರಿವೆದೆ, ತೆಳು ಸೊಂಟದೆಳೆ ಚಿ –
ಗುರು ಪತ್ನಿಯನೆಳಸಿ ಧನ್ಯನಾದಂ ಶಿಷ್ಯಂ ||
ರಾಮ್,
ಈ ಪದ್ಯ direct speechನಲ್ಲಿದ್ದಂತಿದೆ. ಅವನು ಯಾರದೋ ಶಿಷ್ಯನಾಗಿರದೆ, ನಿಮ್ಮ ಶಿಷ್ಯನೇ ಆಗಿದ್ದಾನೆ ಅಲ್ಲವೆ? ‘ಧನ್ಯನಾದಂ ಶಿಷ್ಯಂ’ ಎನ್ನುವುದು ‘ಧನ್ಯನೆನ್ನಯ ಶಿಷ್ಯಂ’ ಎಂದೇ ವೇದ್ಯವಾಗುತ್ತದೆ 😉
Splitting the keyword into a new one is amazingly good – the usual differentiator of Ram
ಪದ್ಯವಿದಿರಲೇನ್ ದಿಟದನ
ವದ್ಯಂ, ನಿಜಶಿಷ್ಯ ನಲ್ತೆ ರಸಿಕವರನ್ ತಾಂ|
ಮದ್ಯಪ-ಚಂಡಾಲ ಮಠಿಯ
ಸದ್ಯ ಪೊಗಳಲೇಕೆ ಚೋರಗುರುವೊಲ್ ರಾಮಾ!
ಪ್ರಸಾದು,
ಎಳೆಚಿಗುರು ಪತ್ನಿಯನೆ ತಾ
ನೆಳಸಿದ ಮರುಳನ್ನದೆಂತು ಮೆಚ್ಚದೆ ತಡೆವೆಂ ?
ಬಳುಕುವ ಕನ್ಯೆಯ ಸಂಗವ
ಬೆಳೆಸಿರೆ ಪಾಪ ಕನಸೊಳ್ಗದೇಕೆ ಕಳವಳಂ ?
ಕನಸೊಳ್ ಕಂಡುದ ಭಾಗ್ಯ
ವೆನಲಕ್ಕುಮೆ, ಸುಖವದೆಂದಿಗೂ ಶಾಶ್ವತವೇ?
ವಿನಿಪಾತವ ನೀ ಕಾಣೆ ಲ
ಲನೆಯ ಬದಲು, ದೀರ್ಘಜೀವಿ ನೀನೆಂಬರಲಾ!
(ವಿನಿಪಾತ = ಸಾವು)
ಕನ್ಯೆಯು ಕನಸೊಳ್ ದಕ್ಕಿರೆ
ಧನ್ಯತೆಯುಂ ಸ್ವಪ್ನ ಸೀಮಿತವದಾಗಿಹುದೈ
🙂
ಎನ್ನಾಕ್ಷೇಪಂ ಕನಸಿನ
ಬನ್ನಕೆ ತಾನಲ್ಲ,ವೆಚ್ಚರದ ಟಿಪ್ಪಣಿಗಂ||
ಸೊಂಟಂ ಬಳ್ಳಿಗೆ ಪೋಲ್ತಿರೆ
ನಂಟೊಪ್ಪುಗುಮಲ್ತೆ, ಚಿಗುರಿಗೆಂತುಪಮಿಪುದಯ್?
ಕಂಟಕಮೇಮ್ ಕವಿಸಮಯಂ?
ತಂಟೆಯನೆಸಗಿದೆನೆನುತ್ತೆ ಬೇಸರಿಸದಿರಿಮ್:-)||
ಸೊಂಟವೇ ಚಿಗುರಾದರೆ ಚಿಗುರಿಗೆ ಹೋಲಿಕೆಯಾಗುವ ಬೆರಳುಗಳಿಗೋ ತುಟಿಗೋ ಉಪಮೆಯಿಲ್ಲದೆ ಸಂಚಕಾರ ಬರದೇ?:-)
ಈ ಕವಿಸಮಯದ ಸಮಯಾಸಮಯವೆಂತೇ ಇರಲಿ, ಪರಿಹಾರದ ಕ್ರಮ ಮತ್ತು ಕೀಲಕಪದದ ಮುರಿತದಲ್ಲಿಯ ಚಮತ್ಕಾರ ಮಾತ್ರ ತುಂಬ ಸೊಗಸು. ಬೇಕಿದ್ದಲ್ಲಿ
“ಬಿರಿವೆದೆ, ಬಡನಡು, ತುಟಿಯ ಚಿ-
ಗುರು, ಪತ್ನಿ………” ಎಂದು ಸವರಿಸಿಕೊಳ್ಳಲೂ ಬಹುದು
ಗಣೇಶ್ –
ನಿಮ್ಮ ಸಲಹೆಗಳಿಗದೆಂದು ಬೇಸರವಿಲ್ಲೈ
ನನ್ನ ಮನದಲ್ಲಿದ್ದ ಉಪಮೆ :: “ಎಳೆ ಚಿಗುರಿನಂಥ ಪತ್ನಿ”. ಚಿಗುರಿನ ಉಪಮೆ ಬರಿ ತುಟಿಗೋ, ಬೆರಳಿಗೋ ಅಲ್ಲ; ಇಡಿಯ ಪತ್ನಿಗೆ 🙂
ಆದರೆ ಅದು ಸೂಕ್ತವಾದ ಅರ್ಥ ಸ್ಪಷ್ಟತೆಯೊಡನೆ ಹೊರಬಂದಿಲ್ಲವೆನಿಸುತ್ತದೆ 🙁
ಬಹಳ ಚೆನ್ನಾಗಿದೆ ಕಲ್ಪನೆ ರಾಮ್ 🙂
ಗುರುಕುಲದಧ್ಯಯನದೊಳಾ
ಪೊರೆದವಳ೦ ಮನವಹರ್ನಿಶ೦ ನೆನೆನೆನೆಯಲ್
ಮರುಜನ್ಮದೆ ತಾಯಾಗೆನೆ
ಗುರುಪತ್ನಿಯ ಕೋರಿ ಧನ್ಯನಾದನು ಶಿಷ್ಯನ್
One of the best pooranams. Congrats Soma.
ಒಡನೊಡನೆಯೆ ಚೆಲುವೆಸೆಯುವ
ನುಡಿಯೊಡತಿಯ ನೇವುರಂಗಳಂತೆವೊಲುಲಿವಾ|
ಕಡವರದಂತಪ್ಪ ಕವಿತೆ-
ಯೊಡಲಂ ಮೆಚ್ಚುತ್ತೆ ಪಡಿನುಡಿವ ನೀಂ ಧನ್ಯರ್!!
clap clap
ಅತ್ಯದ್ಭುತಮೀ ಪರಿಹೃತಿ-
ಕೃತ್ಯಂ ಸಮುದಾತ್ತಭಾವಭಾಸುರನೃತ್ಯಂ|
ಸತ್ಯಮಿದೋ ನುಡಿವೆಂ ಸಾಂ-
ಗತ್ಯಂಗೊಂಡಿರ್ಪಳಲ್ತೆ ಸರಸತಿ ನಿಮ್ಮೊಳ್||
ಗಣೇಶ್ ಸರ್, ಚ೦ದ್ರಮೌಳಿಯವರೇ, ಪ್ರಸಾದು
ನಿಮ್ಮೆಲ್ಲರ ಮೆಚ್ಚುಗೆ ನನಗೆ ಪದ್ಯ ಬರೆಯಲು ಬಹಳ ಧೈರ್ಯ ಕೊಡುತ್ತದೆ ಧನ್ಯವಾದಗಳು. ಗಣೇಶ್ ಸರ್ ಪದ್ಯಕ್ಕೆ ಧನ್ಯೋಸ್ಮಿ:-)
ತುಂಬ ಚೆನ್ನಾಗಿದೆ, ಸೋಮ.
ಹಾರಮಿದೌ ಸೋಮೌ ಪರಿ-
ಹಾರಕಿದೌ, ಸಾರಸಂಗತಂ ಗಡ ಪಾಕಾ-
ಹಾರಕಿದೌ, ಸಮವಿಭವವಿ-
ಹಾರಕಿದೌ, ರುಚಿರಪೂಜ್ಯನೀ ಒಳವಿಗಿದೌ
[ಒಳವು = ಅಂತರಂಗ]
ಜೀವೆ೦, ಹೊಳ್ಳ,
ಧನ್ಯವಾದಗಳು:)
Ravindra,
ಕವಿ ಸೋಮನಲ್ಲದೆ ಸ್ತ್ರೀ,
ರವಿ ನಿನ್ನಯ ನುತಿಗೆಪಾತ್ರಳಾಗಿಹಳಾವಳ್?
ಇವರೀರ್ವರಲ್ತೆ ’ಔ’ವೆ
ನ್ನುವ ಪುರುಷರು: ಶಕ್ತಿ-ಜಗ್ಗರು ವಿದೂಷಕರ್+ಐ||
‘ಔ’ ಸ್ತ್ರೀಲಿಂಗವಾಚಕ. ’ಐ’ ಪುಲ್ಲಿಂಗವಾಚಕ. ಔ ಎನ್ನುವ ಪುರುಷರಿಬ್ಬರೇ – ಶಕ್ತಿಕಪೂರ್ ಮತ್ತು ಜಗ್ಗೇಶ್.
Good observation- captured comically well
Fantastic chaaTupadyaM!!
Prasadu! hail and hail !!!
ಉತ್ತರಪಾದ:
ಇವರೀರ್ವರೆ ಗಂಡುಗಳೊಳಿ
ರುವರ್’ಔ’ನ್ನತ್ಯರ್ ಕಪೂರಶಕ್ತಿಯು-ಜಗ್ಗೇಶ್||
🙂 haha
ವರನು ವಧುವಂ ಪೊತ್ತುವರ ನವ ವಧುವಂ ಪೊತ್ತುದೆ
ಗಿರಿಯೇರಿ ಗುಡಿಯೆಡೆಗೋಡುವೀ ಪರಿಪಾಠಂ |
ಹರಕೆಯ ಹೊರೆಗೆ ಬೆದರ್ದು ಹ –
ಗುರು ಪತ್ನಿಯನೆಳಸಿ ಧನ್ಯನಾದಂ ಶಿಷ್ಯಂ ||
[ ಪತ್ನಿಯನ್ನು ಹೊತ್ತು ಬೆಟ್ಟವೇರುವ ಹರಕೆ (ref: ಮುಂಗಾರು ಮಳೆ) ಹೊತ್ತಿದ್ದ ಶಿಷ್ಯ, ಹಗುರು (light) ಪತ್ನಿಗಾಗಿ ಕೋರಿದ 🙂 ]
ಭಾರ್ಯಾ – ಭರ್ತೃ ಎನ್ನುವುದು ಇದಕ್ಕೇಯೆ 🙂
ಮೊನ್ನಿನ ಎಲ್ಲೋರ ಯಾತ್ರೆಗೆ ತಮ್ಮ ಪತ್ನಿಯನ್ನು ಕರೆದುಕೊಂಡುಬರದೆ, ರಾಮ್ ಈ ಮಾತು ಆಡಬಾರದಾಗಿತ್ತು!
ಪ್ರಸಾದು,
ಅತಿ ಮನೋಹರ ಯಾತ್ರೆಯೊಳು ನೀವ್
ಸತಿಯಗೂಡಿಯೆ ಬಂದಿರೈ ದಿಟ –
ವತುಲ ನೆನಪನೆ ಪೊತ್ತು ಮೇಣ್ ಗಿರಿಯೇರುತೆನ್ನವೊಲು
[ ಪತ್ನಿಯೊಡನೆ ಬಂದರೂ, ನನ್ನಂತೆಯೇ ಬರಿಯ ಪತ್ನಿಯ ಅತುಲವಾದ ನೆನಪನ್ನು ಹೊತ್ತು, ಕೋಟೆ ಕೊತ್ತಲಗಳೆಡೆಗೆ ಒಂಟಿಯಾಗಿ ಏರಿದ್ದೀರಿ. ಇದು ಶ್ಲಾಘನೀಯವೇ ಹೌದು ]
🙂
ಎಲ್ಲೆಡೆಗೆ ‘ನಾ ಬತ್ತೆ, ನಾ ಬತ್ತೆ’ ಎಂಬುವವ
ಳಲ್ಲಿ ನನ್ನೊಬ್ಬನನ್ನೇ ಮಲೆಯನು|
ಹಲ್ಲಿಯಂದದೆ ಹತ್ತಿ ಹಾಳಾಗಿಹೋಗೆನ್ನೆ
ಗಲ್ಲು ತಪ್ಪಿದನಿತೇ ಖುಷಿಯದಾಯ್ತೈ||
ಪ್ರಸಾದು,
ಅತ್ತೆಯಾ ಮಗಳನ್ನು ಪದ್ಯಪಾನಿಗಳೆದುರು
ಎತ್ತಾಡಿಕೊಂಡಿರೇ! ಧೈರ್ಯ ನಿಮದು.
ಕುತ್ತಿಗೆಯು ಬಿಡುವಾಗಿ ಬೆಟ್ಟ ಹತ್ತಿದಿರಂದು
ಕುತ್ತು ಬಂದಿದೆ ರಾತ್ರಿಯೂಟಕಿಂದು
ಜೀವೆಂ,
ಉಪವಾಸ ವನವಾಸವೇನಲ್ಲವಪರೂಪ
ಕಪಟವಾಡದಿರಿ ಸಂಸಾರಿಗರು ನೀವ್!
ದುಪಟವಾಗಿರಲೆನ್ನ ಕಟಿಭಾಗ, ವರವಲ್ತೆ
ಲುಪವಾಸವಿರುವುದಾಗೀಗಲೊಮ್ಮೆ||
Honed:
ಉಪವಾಸ ವನವಾಸವೇನಲ್ಲವಪರೂಪ
ಕಪಟವಾಡದಿರಿ ಸಂಸಾರಿ ನೀವೂ!
ದುಪಟವಾಗಿರಲೆನ್ನ ಕಟಿಭಾಗ, ಲೇಸಲ್ತೆ
ಲುಪವಾಸವಿರುವುದಾಗೀಗಳೊಮ್ಮೆ||
ವರನು ವಧುವಂ ಪೊತ್ತು…The line needs a laghu
ಮೊದಲ ಸಾಲಿನಲ್ಲಿ ಛಂದಸ್ಸು ಎಡವಿದೆ; ಹಗುರುಪತ್ನಿ ಎನ್ನುವುದು ಅರಿಸಮಾಸ!:-)
ವೈನೋದಿಕಪರಿಹಾರವಾಗಿ ಚೆಲುವೆನಿಸಿದೆ.
ಛಂದದೆಡವಿಗೆ ಮನ್ನಿಸೆನ್ನುತ
ಮುಂದೆ ಹಳಿಯುತಲರಿಸಮಾಸವ
ತಂದಿರುವೆ ನಾ ಧನ್ಯವಾದವನೆಲ್ಲ ನುಡಿಗಳಿಗೆ
ಚೆಂದದಾ ಪರಿಹಾರವೀಯುತ
ಬಂಧುರದ ಭಾವಗಳ ನೇಯುತ
ಗಂಧ, ಚಂದನಗಳನೆ ಪೂಸಿದ ಧೀರರಿಗೆ ಮಣಿವೆ
ಪ್ರಯತ್ನ :
ವರಕವಿ ಪೂರ್ವದಿ ತವರಲಿ
ಮರುಗುತ ರಿಕ್ತತೆಗೆ ಗಮ್ಯವ ನೆನೆದು ಸೋತನ್
ಬರಿಗೈ ಗುರುಮನೆಗೊಯ್ಯುತ
ಗುರುಪತ್ನಿಯ ಕೋರಿ ಧನ್ಯನಾದನು ಶಿಷ್ಯನ್
ಕಲ್ಪನೆ ಹೊಸತಾಗಿರುವಂತೆ ತೋರುತ್ತಿದೆ. ಆದರೆ ಅರ್ಥಸ್ಪಷ್ಟತೆಯಾಗುತ್ತಿಲ್ಲ. ದಯಮಾಡಿ ವಿಶದೀಕರಿಸಿ ಬರೆಯಿರಿ ಭಟ್ಟರೇ!
೨ನೇ ಹಂತ :
ಸಂದುದು ಬಾಲ್ಯವು ಕಷ್ಟದಿ
ಮಂದಸ್ವರದಿಂ ಕಾಣ್ಕೆಗಸಹಾಯ ನಾಗಿಹೆ
ನೆಂದೆನುತ ಪ್ರಾರ್ಥಿಸಿ ನಮಿಸಿ
ಗುರುಪತ್ನಿಯ ಕೋರಿ ಧನ್ಯನಾದನು ಶಿಷ್ಯನ್
Dear Bhat : Lines two and three need prosodic review
ಬಿರುಸಾಗಲವರ ಬಂಧಂ
ಮೊರೆಯಿಡೆ ಪಿರಿಯಂಗೆ ಪತಿಯು ಸಂಕಟದೊಳ್ಗಂ |
ಪರಿಹರಿಸಿದನೈ ಕಲಹವ
ಗುರು, ಪತ್ನಿಯನೆಳಸಿ ಧನ್ಯನಾದಂ ಶಿಷ್ಯಂ ||
ತುಂಬ ಚೆಲುವಾದ ಕಲ್ಪನೆ.
ಗುರುಕಾಣಿಕೆ ಯೆಂದಾತಂ
ಅರಿದಾದುದನೆಸಗಿ ಯೊಪ್ಪಿಸಲ್ ತಿರುವಡಿಯೊಳ್
ವರ ಬೇಡಿತ್ತೆನೆನಲ್ಕಾ
ಗುರು, ಪತ್ನಿಯ ಕೋರಿ ಧನ್ಯನಾದನು ಶಿಷ್ಯನ್
ಪತ್ನಿ ಅರ್ಥಾತ್ ಮದುವೆಗೆ ಅಪ್ಪಣೆ
ಸೊಗಸಾದ ಕಲ್ಪನೆ. ಆದರೆ ಎರಡನೆಯ ಪಾದದ ಮೊದಲಿಗೆ ವಿಸಂಧಿದೋಷ ಬಂದಿದೆ. ತಿರುವಡಿ ಎಂಬ ಪದಪ್ರಯೋಗವು ತಮಿಳನ್ನು ಅನುಕರಿಸಿದರೂ ಸಂದರ್ಭಕ್ಕೆ ತಕ್ಕಂತಿದ್ದು ಸೊಗಸಾಗಿದೆ:-) ಮೂರನೆಯ ಪಾದದ ವ್ಯಾಕರಣವೂ ಶೋಧನೀಯ.
ಧನ್ಯೋಸ್ಮಿ. ಸವರಿದ್ದೇನೆ; ದಾರಿಯಲ್ಲಿ ಅರ್ಥವೂ ಕೊಂಚ ಮಾರ್ಪಟ್ಟಿದೆ
ಗುರುಕಾಣಿಕೆಯೆಂದಾತಂ
ಗರಿದಪ್ಪುದನೆಸಗಿ ಯೊಪ್ಪಿಸಲ್ ತಿರುವಡಿಯೊಳ್
ವರಮಿತ್ತೆ ಬೇಡೆನಲ್ಕಾ
ಗುರು, ಪತ್ನಿಯ ಕೋರಿ ಧನ್ಯನಾದನು ಶಿಷ್ಯನ್
ವಾಲ್ಮೀಕಿಯ ಬಗ್ಗೆ
ಬೆರಗ೦ ಪೊ೦ದಿದ ಹರಿಜಪ-
ನಿರತ೦ ಗಯ್ವನ ವಿಚಿತ್ರ ತರ್ಕದೆ, ಪಾಪ೦
ಪೊರುವಿರೆ ಭೋಕ್ತೃಗಳೆನುತಲಿ
ಗುರು, ಪತ್ನಿಯ ಕೋರಿ ಧನ್ಯನಾದo ಶಿಷ್ಯನ್
ಭೋಕ್ತೃಗಳೆನುತಲಿ = ಭೋಕ್ತೃಗಳೆ ಎನುತಲಿ
ಗುರು – ತ೦ದೆ
ಮರಣಿಸಿದ ಮಾತೆಯ ನೆನಪು
ಚಿರವಾಗಿರೆ ಮಾತೃಪೂಜೆ ನಿರತವು ಸಾಗಲ್
ವರುಷದ ನೋಂಪಿಯ ಮೊದಲಿಗೆ
ಗುರುಪತ್ನಿಯನೆಳಸಿ ಧನ್ಯನಾದನು ಶಿಷ್ಯನ್
ಗುರು ದಕ್ಷಿಣೆ ತಾನೊಲ್ಲೆನೆ
ಪರಿಹಾರವೆ ಕಾಣದಾಗೆ ಋಣಮೋಚನಕಂ
ಚರಣಾಶ್ರಿತನಾಗಿ, ಕೃಪೆಗೆ
ಗುರುಪತ್ನಿಯನೆಳಸಿ, ಧನ್ಯನಾದನು ಶಿಷ್ಯನ್
ಗುರು-ತಂದೆಯು ; ಶಿಷ್ಯನೆ ಮಗ
ನರೆವರ್ಷದ ಕಂದ ನಳುತ ಪಸಿವದು ಪೆರ್ಚಲ್
ತ್ವರೆಯಿಂ ಪಾಲನ್ನೂಡಿಸೆ
ಗುರುಪತ್ನಿಯನೆಳಸಿ, ಧನ್ಯನಾದನು ಶಿಷ್ಯನ್
Chandramouli sir, tumba chennagide nimma puuraNagaLu:)
ಗುರು ಸ೦ಸಾರದಿ ಮೂಡಿಹ
ಬಿರುಕ೦ ಕ೦ಡು ಗುರುದೋಷಮ೦ ಸೂಚಿಸಿರಲ್ |
ಕಿರಿಯನ ದೆಸೆಯಿ೦ ಕ್ಷಮೆಯ೦
ಗುರು, ಪತ್ನಿಯ ಕೋರಿ ಧನ್ಯನಾದನ್ ಶಿಷ್ಯನ್ ||
(ಕೊನೆಯೆರಡು ಸಾಲಿನ ಅನ್ವಯ – ಕಿರಿಯನ ದೆಸೆಯಿ೦ ಗುರು, ಪತ್ನಿಯ ಕ್ಷಮೆಯ೦ ಕೋರಿ, ಶಿಷ್ಯನ್ ಧನ್ಯನಾದನ್)
ಪರಿಹಾರಕ್ರಮಕೋಟಿ ಬಂದ ಬಳಿಕಂ ಮತ್ತೊಂದು ನೂತ್ನಕ್ರಮಂ
ಸ್ಫುರಿಸುತ್ತಾ ಸ್ಫುರಣಂ ರಸಾರ್ದ್ರಗತಿಯಿಂ ಪದ್ಯಾತ್ಮಮಂ ತಾಳಿ ಬಂ-
ದುರುಸಂತೋಷಮನೀವ ಸಾಧ್ಯತೆಯೆ ದಲ್ ಶ್ರೀಶಾ! ಭವತ್ಪ್ರಾತಿಭಾ-
ಕರಣಂ ನಾನಿದನಲ್ತೆ ಮೆಚ್ಚಿದಪೆನೀ ಜಾಣಿರ್ಕೆ ನಿನ್ನೊಳ್ ಸದಾ||
ಮತ್ತ ಭಾ!
Shreesha, good parihaara 🙂
ರಂಧ್ರಾನ್ವೇಷಣ:
’ಕೋರಿ’ ಎಂಬುದನ್ನು ’ಕೋರೆ’ ಎಂದು ಮಾಡಿದಾಗ ಬರುವ ಅರ್ಥಸ್ಪಷ್ಟತೆಯನ್ನು, ’ಕೋರಿ’ಯನ್ನು ಉಳಿಸಿಕೊಂಡು ಹೀಗೆ ಮಾಡಬಹುದೆ:
ಗುರು-ಸ೦ಸಾರದಿ ಮೂಡಿಹ
ಬಿರುಕ೦ ಕ೦ಡು ಮಠಿ ದೋಷವಂ ಸೂಚಿಸಿರಲ್|
ಸರಿಗೊಳೆ ಗೇಹ ಕ್ಷಮೆಯಂ
ಗುರು ಪತ್ನಿಯ ಕೋರಿ, ಧನ್ಯನಾದನ್ ಶಿಷ್ಯನ್||
ಧನ್ಯವಾದಗಳು ಗಣೇಶ್ ಸರ್ ಮತ್ತು ಸೋಮಣ್ಣ.
ಪ್ರಸಾದು,
ನೀವು ಹೇಳಿರುವುದು ಸೂಕ್ತವಾಗಿದೆ…ಕಾರ್ಯ-ಕಾರಣ ಭಾವ ಬ೦ದರೆ ’ಕೋರೆ’ ಎ೦ಬುದರಿ೦ದ ಅರ್ಥಸ್ಪಷ್ಟತೆ ಹೆಚ್ಚು…
’ತ್ವಾ೦ತ’ ಅವ್ಯಯದ೦ತೆ sequence of events ಹೇಳಿದಾಗ(ಕಾರ್ಯ ಕಾರಣ ಭಾವ ಸ್ಫುಟವಾಗದೇ) ಅರ್ಥಸ್ಪಷ್ಟತೆ ಕಡಿಮೆಯಾದರೂ ಇಲ್ಲಿರುವ ರೂಪವನ್ನೇ ಉಳಿಸಿಕೊಳ್ಳಬಹುದು…