Sep 032012
 

ಅವಧಾನ ಕಲೆಯ ಬಗೆಗಿನ ನಿಮ್ಮ ಅನಿಸಿಕೆಗಳನ್ನು ಪದ್ಯ ರೂಪದಲ್ಲಿ ವಿವರಿಸಿರಿ. ಛಂದಸ್ಸಿನ ಆಯ್ಕೆ ನಿಮ್ಮದೇ.

ಎಲ್ಲರೂ ಅವಧಾನ ಕಲಾಪ್ರದರ್ಶನವನ್ನು ನೋಡಿರಬಹುದು. ಇಲ್ಲವಾದಲ್ಲಿ, ಮಾಹಿತಿಗಾಗಿ, ಇಲ್ಲಿ ನೀಡಿರುವ ವಿಡಿಯೋಗಳನ್ನು ನೋಡಿರಿ.

https://www.youtube.com/watch?v=xVL_IAvuEkg
https://www.youtube.com/watch?v=K6zqXpHS8j0

ಇಲ್ಲಿಯೂ ಕೂಡ ಪದ್ಯ ರಚನೆಗೆ ಕೆಲ ಸಾಮಗ್ರಿಯನ್ನು ನೀಡಲಾಗಿದೆ ::

ಅವಧಾನ ಕಲೆ ::

ಚಿತ್ತೈಕಾಗ್ರ್ಯಮವಧಾನಂಎಂದು ವಾಮನನು ಹೇಳಿರುವಂತೆ ಮನಸ್ಸಿನ ಏಕಾಗ್ರತೆಯೇ ಅವಧಾನ.ಸ್ಮರಣೆ, ಸದ್ಯಸ್ಸ್ಫೂರ್ತಿ, ಬುದ್ಧಿ ಮತ್ತು ಕವಿತ್ವಶಕ್ತಿಗಳಿಂದ ನಡೆಸುವ ಒಂದು ವಿದ್ವತ್ಕಲೆಯೇ ಅವಧಾನ. ಅವಧಾನಿಯು ಪೃಚ್ಛಕಪಂಡಿತರು ಒಡ್ಡುವ ಸಮಸ್ಯೆಗಳಿಗೆ ಯಥೋಚಿತವಾಗಿ, ಆಶುವಾಗಿ, ಯಾವುದೇ ಲೇಖನಸಾಮಗ್ರಿಯಿಲ್ಲದೆ, ಛಂದೋಬದ್ಧಪದ್ಯಗಳ ರೂಪದಲ್ಲಿ ಪರಿಹಾರ ನೀಡುವುದು ಈ ಕಲೆಯ ವಿಶೇಷ. ಧಾರಣ ಹಾಗು ಪೂರಣ ಅವಧಾನದ ಮೂಲಧಾತುಗಳು. ಸಮಸ್ಯೆಗಳನ್ನು ನಾಲ್ಕು ಸುತ್ತುಗಳಲ್ಲಿ ಸ್ವಾರಸ್ಯಕಾರಿಯಾಗಿ ಪರಿಹರಿಸುವುದು ಪೂರಣವಾದರೆ, ಸಮಸ್ಯೆ ಮತ್ತು ಹಿಂದಿನ ಸುತ್ತುಗಳಲ್ಲಿ ನೀಡಿರುವ ಪರಿಹಾರಪಾದಗಳನ್ನು ನೆನಪಿನಲ್ಲಿಟ್ಟು, ಮುಂದುವರಿಸುವುದು ಧಾರಣೆ. ಅವಧಾನಗಳಲ್ಲಿ ಅನೇಕ ವಿಧಗಳಿದ್ದರೂ, ಅಷ್ಟಾವಧಾನ ಮತ್ತು ಶತಾವಧಾನಗಳು ಪ್ರಚುರವಾಗಿವೆ. ಅಷ್ಟಾವಧಾನದಲ್ಲಿ, ಎಂಟು ವಿಧವಾದ ಸಮಸ್ಯೆಗಳನ್ನೂ, ಶತಾವಧಾನದಲ್ಲಿ ೧೦೦ನ್ನೂ ಏಕಕಾಲದಲ್ಲಿ ಪರಿಹರಿಸುವುದಾಗುತ್ತದೆ. ಕೊನೆಯಲ್ಲಿ, ಪೃಚ್ಛಕರ ಪರಿಹಾರಗಳೊಡನೆ ಅವಧಾನವು ಪೂರ್ಣವಾಗುತ್ತದೆ.

ಅವಧಾನದ ಬೆಳವಣಿಗೆ ::

ಹೇಗೆ ರಸಮಯವಾದ ಕವಿತೆಯು ಜನರನ್ನು ಆರ್ದ್ರಗೊಳಿಸಬಹುದೋ ಹಾಗೆಯೇ ಚಮತ್ಕಾರಿಯಾದ ಕವಿತೆಗಳು ಜನರನ್ನು ನಿಬ್ಬೆರಗಾಗಿಸುತ್ತದೆ. ಕವಿಗಳ ತ೦ತ್ರಗಾರಿಕೆಯನ್ನೂ, ಕವಿತೆಯ ವಿಲಕ್ಷಣವನ್ನೂ ಸಹೃದಯರು ಅನುಭವಿಸುತ್ತಾರೆ. ಸ್ವಯ೦ ಕವಿ, ಪ೦ಡಿತರಾಗಿದ್ದ ರಾಜರುಗಳ ಆಸ್ಥಾನಗಳಲ್ಲಿ ಇ೦ತಹಚಮತ್ಕಾರ ಕವಿತೆಗಳಿಗೆ ಮನ್ನಣೆ ದೊರಕಿ, ಚಿತ್ರಕವಿತ್ವದ ಹಲವು ರೂಪಗಳಿಗೆ ಜನ್ಮನೀಡಿ, ಅವು ಬೆಳೆದದ್ದರಲ್ಲೇ ಅವಧಾನದ ಹುಟ್ಟು ಮತ್ತು ಬೆಳವಣಿಗೆಗಳನ್ನು ನೋಡಬಹುದು. ಅವಧಾನದ ಮೂಲವನ್ನು ನಾವು ವಾತ್ಸಾಯನ ಕಾಮಸೂತ್ರದಲ್ಲೇ ಕಾಣಬಹುದು.

ಸ೦ಸ್ಕೃತದಲ್ಲಿ ಅವಧಾನದ ಉದಯವು ಏಳನೆಯ ಶತಮಾನದಿ೦ದಲೇ ಆಗಿತ್ತಾದರೂ, ಶಾಸನಾದಿಗಳ ಆಧಾರದಮೇಲೆ, ಅದು ಒ೦ದು ಸ್ಪಷ್ಟರೂಪವನ್ನು ಪಡೆದದ್ದು ಹನ್ನೊ೦ದನೇ ಶತಮಾನವೆ೦ದು ಊಹಿಸಬಹುದು. ಇನ್ನು ಕನ್ನಡದಲ್ಲಿ, ೧೧ನೆಯ ಶತಮಾನದ ಕ೦ತಿಯೆ೦ಬ ಕವಯತ್ರಿಯ ಆಶುಕವಿತೆಗಳೇ ಹೆಚ್ಚು ಪ್ರಾಚೀನವಾದದ್ದು. ಕ೦ತಿಹ೦ಪರದ್ದೆ೦ದು ಉಳಿದು ಬ೦ದಿರುವ ಸಮಸ್ಯಾಪೂರಣ, ದತ್ತಪದಿ, ನಿರೋಷ್ಠ್ಯ,  ಪ್ರಹೇಲಿಕೆ, ಆಶುಕವಿತೆಗಳನ್ನು ಗಮನಿಸಿದರೆ, ಕ೦ತಿಯೇ ಕನ್ನಡ ಅವಧಾನಪರ೦ಪರೆಯಲ್ಲಿ ಆದ್ಯಳೆ೦ದೆನಿಸಿಕೊಳ್ಳುತ್ತಾಳೆ. ಆದರೆ ಭಾರತೀಯ ಭಾಷೆಗಳೆಲ್ಲಕ್ಕೂ ಒಪ್ಪುವಂತಹ ಅಷ್ಟಾವಧಾನದ ಸಮಗ್ರಲಕ್ಷಣವನ್ನು ಕೊಟ್ಟ ಮೊದಲ ವಿದ್ವತ್ಕವಿಯೆ೦ದರೆ ಕನ್ನಡದ ಕವಿಕಾಮ(ಕ್ರಿ. . ೧೨೦೦). ಈತನ ವಿವರಣೆಯಿ೦ದ ಇ೦ದಿನ ಅವಧಾನಸ್ವರೂಪವು ಹೇಗೆ ೮೦೦೯೦೦ ವರ್ಷಗಳ ಕೆಳಗೇ ನಿರೂಪಿಸಲ್ಪಟ್ಟಿತ್ತೆ೦ಬುದು ತಿಳಿಯುತ್ತದೆ.

  52 Responses to “ಪದ್ಯಸಪ್ತಾಹ – ೩೬ – ಅವಧಾನ ಕಲೆಯ ವರ್ಣನೆ”

  1. (“ಅವಧಾನ”ವೆಂದರೆ ನೆನಪಾಗುವುದು ಆರ್. ಗಣೇಶ್ ಅವರು ನಡೆಸುವ “ಅಷ್ಟಾವಧಾನ”. ವಿವಿಧ ಬಗೆಯ ಕಾವ್ಯದ ಹುಟ್ಟಿನಿಂದ ಆರಂಭವಾಗುವ ಅವಧಾನ, ಪ್ರತಿ ಸುತ್ತಿನಲ್ಲೂ ಸ್ವಾರಸ್ಯಕರವಾಗಿ, ಕುತೂಹಲಕವಾಗಿ ಬೆಳೆಯುತ್ತಾ ಪರಿಪೂರ್ಣಗೊಳ್ಳುವ ಅದರ ಪರಿ, ನನಗೆ ಈ “ಬದುಕಿ”ನಂತೇ ತೋರುತ್ತದೆ. ಬದುಕಿನ ಸೂತ್ರಧಾರ “ಭಾಗವಂತ”ನೇ “ಅವಧಾನಿ”ಯಂತೆ ಕಂಡರೂ, ಕೆಲವೊಮ್ಮೆ ಬದುಕಿನ ವಿವಿಧ ಅನಿವಾರ್ಯಗಳೊಂದಿಗೆ ಬಾಳುವ “ಮನುಜ”ನೂ “ಅವಧಾನಿ”ಯಂತೆ ಕಾಣುವುದುಂಟು. ಈ ದ್ವಂದ್ವದೊಂದಿಗಿನ ಪ್ರಶ್ನೆಗೆ ಉತ್ತರವಾಗಿ ಬಂದ ಪದರೂಪದ ಈ ಕವನ, ನಾ ಕಂಡ ನಿಜ ಅವಧಾನಿಗೇ ಅರ್ಪಣೆ. “ಪದ್ಯಪಾನ”ಕ್ಕೆ ಮೊದಲು ಬರೆದದ್ದು, ಛಂದೋಬದ್ಧವಿಲ್ಲವಾದ್ದರಿಂದ ಕ್ಷಮೆ ಇರಲಿ. “ಪದ್ಯವಿದ್ಯೆ”ಯ ಪರೀಕ್ಷೆಯಲ್ಲಿ ತಿದ್ದಿಕೊಳ್ಳುವೆ. )
    “ಬಾಳ ಅಷ್ಟಾವಧಾನ”
    ಈ ಬದುಕು ಎನಗೆ ನೀನಿತ್ತ ವ್ಯವಧಾನ
    ಅರರೆ ನೋಡದುವೆ ನಿಜದ ಅವಧಾನ
    ಅದುವೆ ನೀ ನಡೆಸೊ ಅಷ್ಟಾವಧಾನ
    ಅದುವೆ ನಾ ಬಯಸೊ ಇಷ್ಟಾವಧಾನ
    ಅವಧಾನಿ ನೀನಾ? ನಾನಾ?

    ಬಾಳ ಗೀತೆಯ ಸಾಲು, ನಿನ್ನದೇ ಮೊದಲ ನುಡಿ
    ಬಳಿಕ ಸಾಗಿದೆ ತಾಳು, ಅಡೆತಡೆಯ ಪರ್ಯಾಯ
    ನನ್ನ ಬಾಲ್ಯದ ತೊದಲೋ? ಯವ್ವನದ ಅಮಲೋ?
    ನೀನಿಟ್ಟ ಕಟ್ಟುಪಾಡ ವಿಧಿಯೋ? “ನಿಷೇಧಾಕ್ಷರಿ”
    ಮುಗಿವ ಅಕ್ಷರ ಬಂಧ, ಎಂಥ ಸಂಬಂಧ!
    ಅವಧಾನಿ ನೀನಾ? ನಾನಾ?

    ಬಾಳ ತೊಡಕಿನ ಒಗಟು, ನಿನ್ನದೇ ಸಾಲು
    ನನ್ನ ದುಡುಕಿನ ಒರಟು, ನನ್ನದೇ ಪಾಲು
    ಪ್ರಶ್ನೆಗುತ್ತರವೋ? ಉತ್ತರದ ಪ್ರಶ್ನೆಯೋ?
    ನಿನ್ನಪೂರ್ವದ ಪೂರ್ಣವೋ? “ಸಮಸ್ಯಾ ಪೂರ್ಣ”
    ಒಗಟಿಗೊಗಟಿನ ಒತ್ತು, ಆದ ಪದದ ಒಟ್ಟು
    ಅವಧಾನಿ ನೀನಾ? ನಾನಾ?

    ಬಾಳ ಹಾಡಿನ ನುಡಿಯು, ನೀ ನಿತ್ತ ದತ್ತಪದಿ
    ನನ್ನ ಪಾಡಿನ ನಡೆಯು, ನನ್ನ ಸುತ್ತ ಪರಿಧಿ
    ಕಾಮಕೆ ಅರ್ಥವೋ? ಕಾರಣ ಮೋಕ್ಷವೋ?
    ಕಾರ್ಯ ಕಾರಕ ಧರ್ಮವೋ? “ದತ್ತಪದಿ”
    ಬದುಕಿಗೆ ನೀನಿಟ್ಟ ಚೌಕಟ್ಟು, ನಿನ್ನ ಚೌಪದಿ
    ಅವಧಾನಿ ನೀನಾ? ನಾನಾ?

    ಬಾಳ ಚಿತ್ರ ಕವಿತೆ, ನಿನ್ನೆದೆಯ ಕನಸೊ
    ನನ್ನ ಚಿತ್ತ ಕವಿತೆ, ನನ್ನುಸಿರ ಬೆರಸೊ
    ಎರಡು ಸಾಲಿನ ಅಂಟು, ಏಕ ನಾದದ ನಂಟು
    ತುದಿ ಎರಡರಾ ಗಂಟು “ಚಿತ್ರ ಕವಿತೆ”
    ಹೊಸೆದ ಮಲ್ಲಿಗೆ ದಂಡೆ, ಬೆಸೆದ ಕಂಪನು ಕಂಡೆ
    ಅವಧಾನಿ ನೀನಾ? ನಾನಾ?

    ಬಾಳ ಎಚ್ಚರ ವಾಣಿ, ನಿನ್ನ ಕರುಳ ಕೂಗು
    ನನ್ನ ಜಾಗಟೆ ಸದ್ದು, ನನ್ನ ಕೊರಳ ದನಿಯು
    ಶಬ್ದ ಮೌನದ ತುಲನ, ಮೂಲೆ ಮಟ್ಟದ ಗಣನ
    ನಿನ್ನ ನೆನಪಿನ ಕಲನ “ಘಂಟಾ ಗಣನ / ಸಂಖ್ಯಾ ಬಂಧ”
    ಕೂಡಿ ಕಳೆಯುವ ಲೆಕ್ಕ, ಲೆಕ್ಕವಲ್ಲದ ಲೆಕ್ಕ
    ಅವಧಾನಿ ನೀನಾ? ನಾನಾ?

    ಬಾಳ ರಾಗದ ಲಯವು, ನೀ ನಿಜ ಪ್ರಾಸಂಗಿ
    ನನ್ನ ಭಾವದ ಸ್ಥಿತಿಯು, ನಾ ಅಧಿಕಪ್ರಸಂಗಿ
    ಕಾಡ ಹರಟೆಯು, ಹಾಸ ಹಾಸ್ಯವು
    ಜೀವ ಸ್ವರದ ಹರಕೆಯು “ಅಪ್ರಸ್ತುತ ಪ್ರಸಂಗ”
    ಏನು ಏನು, ಹಾಲು ಜೇನು, ಸರಿ ಸವಿ ಸಮರಸವು
    ಅವಧಾನಿ ನೀನಾ? ನಾನಾ?

    ಬಾಳ ಭರದ ಗೀತೆ, ನಿನ್ನಾಶುಕವಿತೆ
    ಬಂದ ಬಾರದ ಕವಿತೆ, ನನ್ನ ಶಿಶು ಗೀತೆ
    ನನ್ನ ಹೃದಯದ ಪ್ರೀತಿ, ನಿನ್ನಾತ್ಮ ರೀತಿ
    ನೀ ತುಂಬಿ ತಂದಿರುವ ಗೀತಿ-ನೀತಿ “ಆಶುಕವಿತೆ”
    ನನ್ನಾಶೆ ಕವಿತೆ ಇಡಿ, ನಿನ್ನಾಶು ಕವಿತೆ ನುಡಿ
    ಅವಧಾನಿ ನೀನಾ? ನಾನಾ?

    ಬಾಳ ಗಮಕದ ಪಲುಕು, ನಿನ್ನ ಸಂಕೀರ್ತನೆಯು
    ನನ್ನ ಗಮನದ ಕುಲುಕು, ನನ್ನ ಸಂಕೀರ್ಣತೆಯು
    ನಿನ್ನ ನಾಮದ ಫಲವು, ನಿನಗೆ ನಾಮಗಳು ಹಲವು
    ಹೇಗೆ ಮುಟ್ಟಿತು ನಿನಗೆ ನನ್ನ ಉಲಿವು? “ಗಮಕವಾಚನ”
    ನಿನ್ನ ವಚನವೆ ವೇದ, ನನ್ನ ವಾಚನ ವೇದ್ಯ, ನಿನಗೆ ನೈವೇದ್ಯ
    ಅವಧಾನಿ ನೀನಾ? ನಾನಾ?

    ನನ್ನೀ ಅಷ್ಟ ಪದಿ, ನನ್ನ ಅವಗಾನ
    ನಿನ್ನೀ ಇಷ್ಟ ಪರಿ, ನನ್ನ ನವಗಾನ ||

    • ಕ್ಷಮಿಸಿ / ಗಮನಿಸಿ :
      ಪ್ರತಿ ಪದ್ಯದ 4ನೇ ಸಾಲಿಗೆ, ಆ “ಸುತ್ತಿನ ಹೆಸರು” ಅಂಟಿಕೊಂಡಿದೆ. (ಅದು ಪದ್ಯಕ್ಕೆ ಸೇರಿದ್ದಲ್ಲ)

    • ತಮ್ಮ ವಿಸ್ತೃತಕವಿತಾಯತ್ನ ಸುತರಾಂ ಸ್ತುತ್ಯ. ಅಲ್ಲದೆ ನೀವು ಅವಧಾನದ ಬಗೆಗಿರಿಸಿಕೊಂಡ ಅಭಿಮಾನ-ಆರಾಧನೆಗಳಿಗೆ ತುಂಬ ಧನ್ಯವಾದ. ಆದರೆ ಮತ್ತೆ ಮತ್ತೆ ನಾವು ಹೇಳುವುದೆಂದರೆ ನೀವು ಯಾವುದನ್ನೇ ಆಗಲಿ ಛಂದೋಬದ್ಧವಾಗಿ, ಪ್ರಾಸಪ್ಲಾವಿತವಾಗಿ ಬರೆಯಿರಿ. ದಯಮಾಡಿ ಮತ್ತೆ ಮತ್ತೆ ಪಾಠಗಳನ್ನು ಪಠಿಸಿರಿ. ಇಲ್ಲವಾದರೆ ಈ ಜಾಲಸ್ಥಾನದ ಉದ್ದೇಶವೇ ಅಳಿದೀತು.

      • ಗಣೇಶ್ ಸರ್,
        ನಿಮ್ಮ ಧನ್ಯವಾದ ಪಡೆದು ನಾನು “ಧನ್ಯೆ”.
        “ಭಾಷೆಗೆ ಭಾವ ಬೆಸೆಯುವ” ಕಲೆ ಪದ್ಯರಚನೆ, ಎಂದು ತಿಳಿದದ್ದು. “ಭಾವಕ್ಕೆ ಭಾಷೆ ಹೊಸೆಯುವ” ಪದ್ಯ ರಚನೆಯ ಕಲೆ ಕಲಿಸುತ್ತಿರುವ “ಪದ್ಯ ವಿದ್ಯೆ”ಗೆ, “ಪದ್ಯ ಪಾನ” ತಾಣಕ್ಕೆ ನಾನು ಋಣಿ.ಉದ್ಯೋಗದ ಒತ್ತಡದ ಮಧ್ಯೆ (ನಿತ್ಯ ರೈಲು ಪ್ರಯಾಣದ ಜೊತೆ ಜೊತೆಗೆ) ನನ್ನ ಪದ್ಯವಿದ್ಯಾ ಯಾನ ಸಾಗಿದೆ. ಪದ್ಯಕ್ಕೆ ಆದಿ ಪ್ರಾಸ/ ಆದಿ ಪ್ರಾಸಕ್ಕೆ ಹಳೆಗನ್ನಡದ ಅವಶ್ಯಕತೆ/ಅನಿವಾರ್ಯತೆ, ನನ್ನ ಭಾಷಾ ಜ್ಞಾನದ ಮಿತಿ, ಅಧ್ಯಯನ ಕೊರತೆ/ಅವಶ್ಯಕತೆಯ ಅರಿವಾಗಿದೆ. ಬತ್ತದ ಸ್ಫೂರ್ತಿಯಂತು ಇದೆ.
        ಈ ಪದ್ಯಪಾನಾವಧಾನದ “ಅಪ್ರಸ್ತುತ ಪ್ರಸಂಗ”ದ ಪ್ರುಚ್ಛಕಳಾಗಿ ಮುಂದುವರಿಯಲು ಅನುಮತಿ ಕೋರುವೆ.

  2. ಅವಧಾನಿ ಮಾಂತ್ರಿಕನೆ ದಲ್
    ಸವಡಂ ತೋರ್ವಂ ಸಮಸ್ಯೆಯೀ ಕಳಿವೂವೊಳ್
    ಪವಡಿಪನೈಸೆ ಪದುಳದಿಂ
    ಜವದಾಡೆಯಲಗಿನಾ ನಿಷೇಧಾಕ್ಷರಿಯೊಳ್

    ಭುವನಂ ತೋರ್ವಂ ದತ್ತಪ-
    ದಿವಿಧಿಯೊಳಾಟಿಸಿದುದಂ ತರುವನಾಶುವಿನೊಳ್
    ನವಿರೇಳಿಸುವಂ ಜನರೊಳ್
    ಕವಿತಾದಂಡವಿನಿಯೋಗವಿದ್ಯಾಕ್ರಮದೊಳ್

    • ರಂಜಿಸೆ ಪಳಗನ್ನಡದಿಂ-
      ದಂಜಿಕೆನೀಗಿರ್ಪ ನಿಮ್ಮ ಪ್ರೌಢಕವಿತ್ವಂ|
      ಗಂಜಿಯನೆಳಸಿದಗಂ ಕಾ-
      ರಂಜಿಯವೊಲ್ ಪರಿವ ಸೊದೆಯನಿತ್ತವೊಲಕ್ಕುಂ||

      • ಗಣೇಶರೆ, ಧನ್ಯವಾದಗಳು. ಹಳಗನ್ನಡದ ಬಳಕೆಯ ಪ್ರಯತ್ನ ಮಾಡಿದಂತೆಯೇ ಕಂದ ತುಂಬಾ ಸ್ವಾಭಾವಿಕವೆಂದೆನಿಸುತ್ತದೆ. ಒಂದೊಮ್ಮೆ ಕಬ್ಬಿಣದ ಕಡಲೆಯಾಗಿದ್ದ ಕಂದ, ಈಗ ಕಬ್ಬದ ಹದಕ್ಕೆ ಸಿಗುತ್ತಿದೆ, ಇನ್ನು ಕಬ್ಬಿನ ಜಲ್ಲೆಯಾಗುವುದಕ್ಕೆ ’ಕಾಯ’ಬೇಕಷ್ಟೆ. 🙂

  3. ಕೋರಲ್ ಪೃಚ್ಛಕಗಣ ಪರಿ-
    ಹಾರ೦ ಪಿಡಿಯದೆಲೆ ಪುಸ್ತಕ೦ ಲೇಖನಿಯ೦
    ಸಾರಸ್ವತದಾಟದೊಳ೦
    ಪೂರಯ್ಸುವರಯ್ ಸಮಸ್ಯೆಗಳಮವಧಾನೀ

    ಚಿತ್ತೈಕಾಗ್ರತೆಯ೦ ತೋ-
    ರ್ದುತ್ತಮಪರಿಹೃತಗಳಿ೦ದ ರ೦ಜಿಸೆ ಸಭೆಯ೦
    ವ್ಯಕ್ತ೦ಗೈವುದು ನಾಲ್ಕರ
    ಸುತ್ತೊಳ್ ಪೃಚ್ಛಕವಿಭಾಗಗಳ ಪೂರಣಗಳ್

    ಬಿಡಿಯಕ್ಷರಗಳ್ ಜೋಡಿಸೆ
    ತಡೆಯ೦ ಪ್ರತಿಯಕ್ಷರಕ್ಕದೊಡ್ಡಲ್ ವರ್ಣ೦
    ಬಿಡುವೆನೆ ಪೃಚ್ಛಕ ಸೂಚಿಸೆ
    ತೊಡಕ೦ ನೂ೦ಕುತ ನಿಷೇಧಮ೦ ತಾ೦ ಗೆಲ್ವನ್

    ಅನರ್ಥಮಿತ್ಯಾಶ್ಲೀಲಮು-
    ಮನು ಪೃಚ್ಛಕತಾ೦ ಸಮಸ್ಯೆಯೊಳ್ಗಳವಡಿಸಲ್
    ವಿನಿಯೋಗಿಸಿ ತೊಡಕಿನ ಸಾ-
    ಲನುಮರ್ಥೈಸುತಲಿ ಪದ್ಯರಚನೆ ವಿಶಿಷ್ಟ೦

    ಹದಗೆಡಿಸುವ ಪದಗಳೊಳು೦
    ಮುದಮ೦ ಮೂಡಿಸುತಲುತ್ತಮ೦ ರಚನೆಯನ೦
    ಪದಗಳ್ ನಾಲ್ಕ೦ ಬಳಸುತ-
    ಲದರಿ೦ ಪೂರಣಮನಿತ್ತವಿಷಯದೊಳೀವ೦

    ಅವಧಾನಿಯೊಳೇಕಾಗ್ರತೆ
    ಸವೆಸಲ್ಕಪ್ರಸ್ತುತಪ್ರಸ೦ಗವದಲ್ಮೇಣ್
    ಸವಿಯು೦ ಲಘುವುಮುಮೆನಿಪಾ
    ಛವಿಮದ್ಸ೦ಭಾಷಣ೦ಗಳಿ೦ ಮೆರೆಗಕ್ಕು೦

    ಮಾಯಾಚೌಕವ ಪೂರ್ಣಿಸ-
    ಲಾಯಾ ಸ್ಥಾನವನುಕೇಳೆ ಸ೦ಖ್ಯಾಬ೦ಧ೦
    ಭೋಯೆನುತವಧಾನಿಯ ಸೆಳೆ-
    ದಾಯತದೊಳ್ ಪೂರಣವನು ತೋರಿಪುದಲ್ತೇ

    contd…

  4. ಸಹಜಮನೋಜ್ಞಮಪ್ಪ ಗತಿಯಿಂ ಮತಿಯಿಂ ಯುತಿಯಿಂ ಸದಾ ಸುಖಾ-
    ವಹಮೆನಿಸಿರ್ಪ ರೀತಿಯೊಳಹಾ! ಪುಳಕಾವಹಕಾವ್ಯಪಾಕದಿಂ|
    ವಿಹಿತವಿಚಾರಪೂರಪರಿಣಾಮಧುರೀಣತೆಯಿಂ ವಧಾನಮಂ
    ವಹಿಲದೆ ವರ್ಣಿಸಿರ್ಪುದಿದು ಸಲ್ವುದು ಚೆಲ್ವೆನೆ ಸೋಮಶೇಖರಾ!!

    ನಾಲ್ಕನೆಯ ಪದ್ಯದ ಮೊದಲಿಗೆ ಛಂದೋದೋಷವಾಗಿದೆ. ಸವರಿಸಬೇಕು. ಹಲವೆಡೆ ಭಾಷಾಪರಿಷ್ಕಾರ ಬೇಕಿದೆ. ಇದನ್ನು ನಾಳೆ ನೇರವಾಗಿಯೇ ಮುಖತಃ ಮೃಚ್ಛಕಟಿಕಾಧ್ಯಯನಗೋಷ್ಠಿಯಲ್ಲಿ ತಿಳಿಸುವೆ. ಉಳಿದಂತೆ ಪದ್ಯಗಳ ಶೈಲಿ, ಹದ, ಧಾರೆ ಮತ್ತು ಅಡಕಗಳು ಸಹಜ-ಸುಂದರವಾಗಿವೆ.

  5. ಅವಧಾನಕಲೆಯಬಗೆಗೆ ಅನಿಸಿಕೆಗಳನ್ನು ಕೇಳಿದರೆ ಎಲ್ಲರೂ ಅವಧಾನದ ವಿವರಗಳನ್ನೇ ವರ್ಣಿಸುತ್ತಿದ್ದಾರಲ್ಲ!!:-)….ಇಲ್ಲಿಯ ಕವಿಗಳಿಗೆ ಅವಧಾನವು ಹೇಗೆ ಕಂಡಿತೆಂಬುದನ್ನು ದಯಮಾಡಿ ಗಮನಿಸಿದರೆ ಒಳಿತು. ಇಲ್ಲವಾದರೆ ಎಲ್ಲರ ರಚನೆಗಳೂ ಅವಧಾನದ ವಿವರಣೆಯನ್ನು ನೀಡುವ ಗದ್ಯಮಯವಾದ ಪತ್ರಿಕಾಪ್ರಕಟನೆಗಳ ಪದ್ಯಾನುವಾದಗಳಾಗುತ್ತವೆಯೇ ಹೊರತು “ಕಾವ್ಯ”ವಾಗವು, ನಮ್ಮ ನಮ್ಮ ಅನುಭವದ ಆರ್ದ್ರಾಭಿವ್ಯಕ್ತಿಗಳೂ ಆಗವು….ಯಾರೂ ಅನ್ಯಥಾ ತಿಳಿಯದಿದ್ದರೆ ನಾನು ಅವಧಾನಕಲೆಯ ಬಗೆಗೆ ಅವಧಾನಸಭೆಗಳಲ್ಲಿ ಹೇಳಿದ ಒಂದೆರಡು ಪದ್ಯಗಳನ್ನಿಲ್ಲಿ ಪ್ರಸ್ತಾವಿಸಬಯಸುವೆ:

    ಸುರವೃಂದಕ್ಕಿದು ಚೆಲ್ವಿನಾಲಿಕೆಯ ಬಲ್ಜನ್ನಂ ಗಡೆಂಬರ್ ಬುಧರ್
    ಮೆರೆಗುಂ ಸತ್ಕವಿಮೋದಕೆಂದೆ ನುಡಿವೆಣ್ ಮೆಯ್ಯಾಗೆ ಮೂರೆಂಬಿನಿಂ|
    ನೆರೆ ನಾನಾರಸಮಾಂತ ಕಾವ್ಯಕಲನಂ ತ್ರೈಗುಣ್ಯದಿಂ ತೋರ್ಕುಮೀ
    ತೆರದಿಂದೊಂದವಧಾನಮಲ್ತೆ ರಸಿಕರ್ಗೆಲ್ಲರ್ಗಮಾರಾಧನಂ||

    (ಇದು ಕಾಳಿದಾಸನ ಮಾಲವಿಕಾಗ್ನಿಮಿತ್ರ ರೂಪಕದ “ದೇವಾನಾಂ…..” ಇತ್ಯಾದಿ ನಾಟ್ಯಕಲಾಸ್ತುತಿಪದ್ಯದ ಮಾದರಿಯನ್ನು ಆಧರಿಸಿದ ರಚನೆ.)
    ವಿವರಣೆ:
    ಚೆಲ್ವಿನ + ಆಲಿಕೆಯ (ಕೇಳಿಸಿಕೊಳ್ಳುವ) ಬಲ್ (ದೊಡ್ಡ) + ಜನ್ನಂ (ಯಜ್ಞ); ನುಡಿವೆಣ್ = ಸರಸ್ವತಿ, ಮೆಯ್ಯಾಗೆ ಮೂರೆಂಬಿನಂ (ಅವಧಾನವಾಗ್ದೇವತೆಯು ಧಾರೆ, ಧಾರಣ ಮತ್ತು ಧೈರ್ಯಗಳೆಂಬ ಅವಧಾನಕ್ಕೆ ಬೇಕಾದ ಮೂರು ಅರ್ಹತೆಗಳಿಂದ ರೂಪುಗೊಂಡವಳು) ತ್ರೈಗುಣ್ಯ (ಓಜಸ್ಸು, ಪ್ರಸಾದ ಮತ್ತು ಮಾಧುರ್ಯಗಳೆಂಬ ಮೂರು ಕಾವ್ಯಗುಣಗಳು)

    ಗ್ರಾಮೀಣರ ನುಡಿಯಲ್ಲಿ ಅವಧಾನದ ಬಣ್ಣನೆ:

    ಇದ್ದೆ-ಗ್ಯಾನಗಳೆಲ್ಲ ಮಸ್ತುಗಿರಬೇಕಂಗೇನೆ ಯೋಳ್ತಿದ್ದ ಮಾ-
    ತುದ್ದುದ್ದುದ್ ಪದ, ಆಡು, ಗಂಟೆ….. ವಸಿ ಕೂಡಾ ಬಿಡ್ದೆ ಮನ್ಸ್ನಾಗೆ ಮೆ-
    ತ್ಗೆದ್ದೋಗ್ದಂಗೆ ಉಸಾರಿಯಲ್ಲಿ ಬಲವಾಗ್ ಗೆಪ್ತೀಗ್ ಮಡೀಕ್ಕಂಡು ಮ-
    ತ್ಬುದ್ದೀಗ್ ಬೋ ಕುಸಿಯಾಗಿ ನೆಡ್ಸಿ ಕೊಡಬೇಕಸ್ಟಾವ್ದನಾವನ್ ಕಣೌ!!

    (ತೀರ ಸುಲಭದಂತೆ ತೋರುವ ಈ ಪರಿಯ ರಚನೆ ನಿಜಕ್ಕೂ ಬಹಳ ಕಷ್ಟವೆಂದು ನನ್ನ ಅನಿಸಿಕೆ)

    ಆಂಧ್ರದ ಮಹಾವಧಾನಿಗಳಾದ ತಿರುಪತಿ-ವೇಂಕಟಕವಿಗಳು ಅವಧಾನದಲ್ಲಿ ಅಂಥ ಕಾವ್ಯಕ್ಕೆ ಆಸ್ಪದವಿಲ್ಲವೆಂದೂ ಆದರೆ ತಾವು ಮಿಕ್ಕ ಗೃಹಕವಿಗಳಿಗಿಂತ ಮಿಗಿಲಾಗಿ ಅವಧಾನದಲ್ಲಿ ಕವನಿಸಬಲ್ಲೆವೆಂದೂ ಹೇಳಿಕೊಂಡ ಪದ್ಯಗಳ ನನ್ನದೇ ಅನುವಾದವಿಂತಿದೆ:

    ದೊಂಬರಕನ್ನೆಯೆಂತು ಚದುರಿಂ ಗಡೆಯೇರಿ ಚಮತ್ಕ್ರಿಯಾಚಯಾ-
    ಡಂಬರೆಯಪ್ಪಳಂತು ಬರಿದೇ ಕಸರತ್ತು; ವಧಾನಚರ್ಯೆಯಿಂ
    ಸಂಬರಗೊಳುದೇಂ?.. ತೆಗೆ! ಇದಲ್ತು ವಿಶೇಷಮಶೇಷಮಿನ್ನು ಹೃ-
    ಲ್ಲಂಬಿತಮಪ್ಪ ಕಾವ್ಯರಸಧಾರೆಯನೆಮ್ಮದನೀಂಟೆಲೈ ನೃಪಾ!!

    ಇತರಕವೀಶ್ವರರ್ ಶ್ರಮಿಸಿ ಚಿಂತಿಸಿ ರೂಪಿಪ ಪದ್ಯವೃಂದದೊಳ್
    ಶತಕದೊಳೆಷ್ಟು ಚಿತ್ತರುಚಿಗೊಪ್ಪಿಗೆಯಪ್ಪುವೊ ಕಾಣೆವಾದೊಡೆ-
    ಮ್ಮತುಲತರಾಶುಧಾರೆಯೊಳೊಡರ್ಚಿದ ಪದ್ಯಚಯಂಗಳೊಳ್ ಸದಾ
    ಶತಕೆ ಶತಂ ರಸಾವಹಮೆನಿಪ್ಪುವು; ಶಂಕೆ ತೊಡಂಕದೆಲ್ಲಿಯುಂ||

    (ಒಡರ್ಚು = ಮಾಡು)

    • ಗಣೇಶ್ ಸರ್,

      ಬಹಳ ಚೆನ್ನಾಗಿದೆ 🙂

      ಲಲಿತಾಕರ್ಷಕಮಾಶುಪದ್ಯರಚನಾಚಾತುರ್ಯಮ೦ ಕಾಣುತಾ
      ಬಲುಕ್ಲಿಷ್ಟ೦ ನುಡಿವೆಣ್ಣನರ್ತನಮಿದಯ್ ಸಾರಸ್ವತೋತ್ತು೦ಗಮಯ್
      ಕಲೆಯೊಳ್ಗದ್ಭುತಮಯ್ ರಸೋದಧಿಯೆನುತ್ತಷ್ಟಾವಧಾನಪ್ರಭಾ
      ಫಲಮ೦ ಕೇಳ್ ತ್ರಿದಶರ್ ತ್ರಿಧಾದೆಸೆಯನ೦ ತಾ೦ ಬ್ರಹ್ಮನ೦ ಬೇಡಿಪರ್

      ದೇವತೆಯರು ಕೂಡಾ ಅಷ್ಟಾವಧಾನದ ತ್ರಿಧಾದೆಸೆ ಬ್ರಹ್ಮನಲ್ಲಿ ಬೇಡುವರೆ೦ಬುದನ್ನು ಹೇಳಲೆತ್ನಿಸಿದ್ದೇನೆ
      ತ್ರಿ’ಧಾ’ದೆಸೆ = ಧಾರೆ, ಧಾರಣ ಮತ್ತು ಧೈರ್ಯ

      • ಸೋಮ! ತಾಮರಸಪೀಠವಧೂಟೀ-
        ಪ್ರೇಮ! ಕಲ್ಪನೆಯಿದದ್ಭುತಮಲ್ತೇ!
        ಈ ಮನೋಜ್ಞಕವಿತಾಕೃತಿಯಿಂದಂ
        ಶ್ರೀಮದೂರ್ಜಿತತೆ ಬಂದುದಿದೀಗಳ್!!!

  6. ಸಧ್ಯಕ್ಕೆ ಅವಧಾನಿಯ ಬಗ್ಗೆ ಬರೆದಿದ್ದೇನೆ. ಅವಧಾನ ಕಲೆಯ ಬಗ್ಗೆ ಬರೆಯಬೇಕೆಂಬ
    ಆಸೆಯಿದೆ. ಪ್ರಯತ್ನ ಪಡುತ್ತೇನೆ.

    ಅಷ್ಟದಿಶೆಯ ನಡುವಿನ ರವಿ
    ಸೃಷ್ಟಿಸಿರಲು ನವ ನವೀನ ಕಾವ್ಯವ , ಸೊಬಗೇನ್
    ಕಷ್ಟ ಪಡದೆ ನಲಿವ ಹರಡೆ
    ನಿಷ್ಟನಿವ ಸರಸತಿ ಮಾತೆಗೆ ರಸಾನಂದಕೈ

    • ಕಂದದ ಕುಂದದ ವೊಲ್ ಪ್ರ-
      ಸ್ಪಂದಿತಮೀಪದ್ಯಮೊಪ್ಪುಗುಂ ಪಳವಾತಿಂ|
      ಚಂದಂ ಮಿಗಿಲೆನಿಸುಗುಮು-
      ಕ್ಕಂದಮೆನಲ್ ತಿದ್ದಿಕೂಳ್ವುದಂತಿಮಪದಮಂ||

      • ನಿಮ್ಮ ಪ್ರಶಂಸೆಗೆ ಧನ್ಯವಾದಗಳು. ಕೊನೆಯ ಪದವನ್ನು ಹೀಗೆ ಮಾಡಬಹುದಲ್ಲವೇ? – ರಸಗವಳಕೈ, ರಸಜನನಕೈ

        ತಿದ್ದಿದ ಪದ್ಯ:

        ಅಷ್ಟದಿಶೆಯ ನಡುವಿನ ರವಿ
        ಸೃಷ್ಟಿಸಿರಲು ನವ ನವೀನ ಕಾವ್ಯವ , ಸೊಬಗೇನ್
        ಕಷ್ಟ ಪಡದೆ ನಲಿವ ಹರಡೆ
        ನಿಷ್ಟನಿವ ಸರಸತಿ ಮಾತೆಗೆ ರಸಜನನಕೈ

  7. ನೆರದಷ್ಟಾಧಿಕಪೃಚ್ಛಕರ್ ಝಳಪಿಸುತ್ತಿರ್ಪರ್ ನಿಷೇಧಾಂಕುಶಂ
    ಪಿರಿದೊಂದಾನೆಯ ಬಗ್ಗಿಸಲ್ ಪಿಡಿದಪರ್ ಪಾಶಂ ಸಮಸ್ಯಾತ್ಮಕಂ
    ಪರಿಸುತ್ತಂ ನೆಲದೊಳ್ ಸ್ವಧೀಘನರಸಪ್ರಾಪ್ತಾಮೃತಂ ದಾನದೊಲ್
    ಮೆರೆಸುತ್ತಿರ್ಪವಧಾನಸಾಹಸಮೆನಲ್ ಮತ್ತೇಭವಿಕ್ರೀಡಿತಂ

    • ಮತ್ತೇಭವಿಕ್ರೀಡಿತಮುತ್ತಮಾರ್ಥಂ
      ಹೃತ್ತೋಷಕಂ ಸಂದುದು ನಿಮ್ಮದಿಲ್ಲಿ|
      ಮತ್ತಷ್ಟು ಬಿಕ್ಕಟ್ಟು ಬರಲ್ಕೆ ಪದ್ಯ-
      ಕ್ಕುತ್ತಾನಶೋಭೆ ಸ್ಫುಟಮಕ್ಕುಮಲ್ತೇ||

      • ವಚನಭ್ರಷ್ಟತೆಯಿಂ ವಿಭಕ್ತಿತ್ರುಟಿಯಿಂ ಭಾಷಾತಿಶೈಥಿಲ್ಯದಿಂ
        ರಚಿಸಿರ್ಪೀಯವಧಾನವರ್ಣನಚತುಷ್ಪಾದಂಗಳೈಬಾದುವೇ!

        ನಿಮ್ಮ ಮೆಚ್ಚು ನುಡಿಯಿಂ ಧನ್ಯೋಸ್ಮಿ. ಪದ್ಯವನ್ನು ತಿದ್ದಲು ಯತ್ನಿಸುತ್ತೇನೆ.

  8. ಚಿತ್ತೈಕಾಗ್ರ್ಯಂ ಅವಧಾನಮ್ > ಚಿತ್ತ ಏಕ ಅಗ್ರ್ಯಂ > ಮನಸ್ಸೊಂದನ್ನು ಮಾತ್ರ ಮುಂದೆ ಮಾಡಿ ಕೂತರೆ, ದೇಹದ ಗತಿ? ಇತ್ತೀಚೆಗೆ ಗಣೇಶರಿಗೆ ಆದ ಬೆನ್ನುನೋವನ್ನು ವಿನೋದವಾಡಿದ್ದೇನೆ. ಕ್ಷಮೆ ಇರಲಿ.
    ವಾಸ್ತವವಾಗಿ ಇದು ಅವರಿಗೆ ಅನ್ವಯವಾಗದು. ಏಕೆಂದರೆ ಅವರು ಯೋಗಾಸನಾದಿಗಳನ್ನು ಮಾಡಿ ದೇಹದಾರ್ಢ್ಯವನ್ನು ಕಾಯ್ದುಕೊಂಡವರೇ. ಅದನ್ನು ಬಿಟ್ಟಿದ್ದೇ ಬೆನ್ನುನೋವಿಗೆ ಕಾರಣ ಎಂದು ಅವರೇ ಹೇಳಿದ್ದಾರೆ.

    ಆರಂಬ = agriculture
    ಪುತ್ತೂರು > bone setter

    ಆಟವೆಲದಿ:
    ಉತ್ತು ಬಿತ್ತು ಕುಯ್ವಾರಂಬವ ತೊರೆಯಲು
    ಕುತ್ತೊದಗದೆ ಕತ್ತು ಬೆನ್ನು ನೊಂದು|
    ಚಿತ್ತ ಮಾತ್ರ ಮುಂದೆ ಮಾಡಿಕೊಂಡಿರ್ದೊಡೆ
    ಪುತ್ತೂರೆ ಗತಿ ಕಸರತ್ತಿಲ್ಲ ಮೈಗೆ||

    • ಆಟವೆಲದಿಯಲ್ಲಿ ಚೆನ್ನಾದುದೀ ಪದ್ಯ
      ಪಾಟವಕ್ಕೆ ಕೊರತೆಯಿಲ್ಲವಧಿಕ|
      ದಾಟಿಬಿಟ್ಟಿರಯ್ಯೊ ಅಲ್ಲಲ್ಲಿ ಛಂದದೀ
      ಧಾಟಿಯಂ; ವಿವರಿಪೆನದನು ಬಳಿಕ||

    • ತಿದ್ದಿದ ಪದ್ಯ:
      ಉತ್ತು ಬಿತ್ತು ಕುಯ್ವ ವೆವಸಾಯ ತೊರೆದೊಡೆ
      ಕುತ್ತೊದಗದೆ ಕತ್ತು ಬೆನ್ನು ನೊಂದು|
      ಚಿತ್ತ ಮಾತ್ರ ಮುಂದೆ ಮಾಡಿಕೊಂಡಿದ್ದಕ್ಕೆ
      ಬಿತ್ತು ಹಿಂದೆ ಹೊರುವ ಬೆನ್ನ ಮೂಳೆ||

      • ಹಸಾದ ವೆನ್ನುತ ಕಲಿಕೆಯ ಮುಗಿಸದೆ
        ನಿಷಾದನಂದದೆ ಗುರಿಯನು ಮರೆಯದೆ
        ಪ್ರಮೋದ ದಿಂದಲೆ ಹುಡುಕುತ ತಿದ್ದುತ
        ವಿಷಾದವಿಲ್ಲದೆ ಹೊಸತನು ಕಲಿಯುವ
        ಪ್ರಸಾದು ಸಾಧನೆ ಸಾಧು ಸಾಧು ಭಳಿ !

      • ಛಾತ್ರರು ಛಂದಸ್ಸು ಕಲಿಯಲಿ, ಸ್ವಲ್ಪ ಹೊಗಳಿಬಿಡೋಣ ಎಂಬ ಕಕ್ಕುಲಾತಿ ಗಣೇಶರಿಗಿದೆ. ಮೆಚ್ಚಿ ಹೊಗಳುತ್ತಿದ್ದಾರೋ, ಹೆಚ್ಚಲಿ ಎಂದು ಹೊಗಳುತ್ತಿದ್ದಾರೋ ಎಂದು ಒರೆ ಇಟ್ಟು ನೋಡಬೇಕು. ನಿಮಗೆ ಇದ್ಯಾವ ಉಸಾಬರಿಯೂ ಇಲ್ಲವಾದ್ದರಿಂದ, ನಿಮ್ಮ ಹೊಗಳಿಕೆ ಮುದಾವಹ.

        • ತೆರದ ಮನದ ಮಾತಿಗೇಕೆ
          ಅನುಮಾನವು ಹೋಲಿಕೆ
          ಮರೆತು ಹಾಕಿದಂತೆ ಖೀರಿ-
          ಗೊಗ್ಗರಣೆಯ ಹೇರಿಕೆ 🙂

        • ಗಣಪತಿಯ ಗುಟ್ಟನೀ ಪರಿ,
          ಗೆಣೆಯಾ!, ರಟ್ಟೈಸಿ ರಂಪ ಮಾಳ್ಪುದು ತರವೇಂ? 😉

  9. ಅಷ್ಟಾವಧಾನಿ

    ರಾಕ್ಷಸೀಸಮ ನಿಷೇಧಾಕ್ಷರಿಯದೊಂದುಕಡೆ ಆಸ್ಯೆಕಾಣದ ವಶ್ಯೆ ಈ ಸಮಸ್ಯೆ
    ಒತ್ತಡದಿ ಬತ್ತಿಸುವ ದತ್ತಪದಿಯೊಂದುಕಡೆ ಅರ್ಥವೆ’ಲ್ಲವಿತೆ’ನುವ ಚಿತ್ರಕವಿತೆ
    ಅಪ್ರಸ್ತುತಪ್ರಸಂಗಾಖ್ಯಾನವೊಂದುಕಡೆ ಪಟ್ಟುಗಳ ಗುಟ್ಟುಗಳ ಪದ್ಯಪಠನ
    ಸಿಕ್ಕಂತೆ ಸಿಗದಂತೆ ಸಿಕ್ಕಾದ ಲೆಕ್ಕಗಳು ಪಾಶಹಾಕೆಬ್ಬಿಸುವ ಆಶುಕವಿತೆ

    ಅಷ್ಟ ಭಾರ್ಯೆಯ ರೊಳು “ಕೃಷ್ಣ” ನಂತೆ ನೀನು
    ಅಷ್ಟಕಷ್ಟವ ಪಡುತಲಿ ಜಯವ ಗಳಿಪೆ
    ರಮ್ಯ ಸಾಹಿತ್ಯ ನವರಸ ರಾಜಧಾನಿ
    ಆಶು ಕವಿತಾ ಪ್ರಧಾನಿ ! ಅಷ್ಟಾವಧಾನಿ !!

    ಇದಕ್ಕೆ ಸ್ಪೂರ್ತಿ ಡಾ. ಜಂಧ್ಯಾಲ ಪಾಪಯ್ಯಶಾಸ್ತ್ರಿಯವರ ಕವಿತೆ. ಅಲ್ಲಿ ಆಂಧ್ರದ ಅವಧಾನ ಪದ್ಧತಿಯ ವ್ಯಸ್ತಾಕ್ಷರಿ, ಪುಷ್ಪಗಣನ ಸೇರಿದವರ್ಣನೆಯುಂಟು. ನಮಗೆ ಪರಿಚಿತವಾದ ಅವಧಾನಪದ್ದತಿಯನ್ನು ಗಮನದಲ್ಲಿರಿಸಿ ಮೇಲಿನ ಸೀಸಪದ್ಯ ರಚಿತವಾಗಿದೆ. ಮೂಲದ ಶಬ್ದಸ್ವಾರಸ್ಯರಕ್ಷಣೆಗಾಗಿ, ತೆಲುಗಿನ ಸೀಸಪದ್ಯಗಳಲ್ಲಿರದ ಪ್ರಾಸವನ್ನು ಇಲ್ಲಿಯೂ ಕಾಣಿಸಿಲ್ಲ. ಅಂತರ್ಗತವಾದ ಪ್ರಾಸರಮ್ಯತೆ ರಸಹೃದಯಿಗಳ ಗಮನಕ್ಕೆ ಬಾರದಿರದು. ಶ್ರೀ ಗಣೇಶರ ಒಂದು ಅವಧಾನ ಸಂದರ್ಭದಲ್ಲಿ ಈ ಪದ್ಯವನ್ನು ರಚಿಸಿ ಪಠಿಸಿದ ಸವಿನೆನಪನ್ನಷ್ಟೆ ಇಲ್ಲಿ ನಿವೇದಿಸಿದೆ.

    • ಸೀಸಪದ್ಯವಿಲ್ಲಿ ಬಂದದ್ದು ಚೆಲ್ವಾಯ್ತು
      ಮಾಸದಂಥ ಸೊಗಸು ಸಲ್ವುದದಕೆ|
      ಲೇಸೆನಲ್ಕೆ ನಾನು ಪ್ರಾಸಂಗಿಕಾಸ್ಥೆಯಿಂ
      ದಾಸೆಗೊಂಡು ಪೇಳ್ದೆನಿಂತೆ ಮುನ್ನಂ||

    • “ನವರಸ ರಾಜಧಾನಿ ಆಶು ಕವಿತಾ ಪ್ರಧಾನಿ ! ಅಷ್ಟಾವಧಾನಿ” – sir, its really a wonderful phrase. Thank You.

  10. ಕುವೆ೦ಪುರವರ ರಾಮಾಯಣದರ್ಶನದಲ್ಲಿನ ಅನೇಕ ವಿಸ್ಮಯಕಾರಿ-ಮಹೋಪಮೆಗಳಿ೦ದ(Homeric similes’/Epic Similes’) ಪ್ರೇರಿತನಾಗಿ:

      ಪೊಯ್ಯಲೆಲರಾಲೋಚಿಸಲ್, ಜಲ೦ ತಣ್ಗಲ್ಲೊ-
      ಳಡಗಿರಲ್, ನೀಲಶಯನದಿ ಮಲಗಿರಲ್ ನಭ೦;
      ತಿರೆವುಣ್ದಲಸುಗೆಯಿ೦, ತಿರವಿರ್ಪ ಕಾಲದೀ
      ಜಡಲೋಕ ದೊಳಗಿ೦ದೆ ಸುಮುಹೂರ್ತದೊಳ್ ಪಾದ-
      ರಸದವೋಲಿರ್ದ ಬಿತ್ತ೦ಬಿತ್ತು ಸಾರಸ್ವ-
      ತರಸಗರ್ಭದಿಳೆಗ೦. ಪಲವುನುಡಿ ನೀರ್ಕುಡಿದು
      ಮೊಳಕೆಗಣ್ ತೆರೆದಿರಲ್ ಪುಳಕದಿ೦ ಕುಣಿದಿತ್ತು
      ತಾನುಕ್ತಿ ವೈಚಿತ್ರಮ೦ಕ೦ಡು. ಬುಧಜನರ
      ಶಾಸ್ತ್ರಸಾರದಸಸಿಗೆ, ಮು೦ಗಬ್ಬಿಗರ ಬಯಕೆ-
      ಯೆರೆದಿತ್ತು ಕೃತಿಗೊಬ್ಬರರಸಮ೦ ; ಸಿ೦ಪಡಿಸು-
      ತೌಚಿತ್ಯದೌಷಧಿಯ ತೊಡೆದನೌಚಿತ್ಯದಿಹ
      ಪುಳಗಳ೦ . ಪೊಸವೆಲರ್ ಪರಿದಿತ್ತು, ಬರಿಸಪಲ-
      ವಾಗಿತ್ತು ಮಣ್ಣಘಮ ಪೀರಿತ್ತು, ತಾಬೇರ-
      ನೂರಿತ್ತು, ಬಿತ್ತವದು ಬೆಳೆದಿತ್ತು, ತಳೆದಿತ್ತು,
      ಸೀಗೋಲ ರೂಪಮ೦. ಬರಿದ೦ಡವಲ್ಕಣಾ,
      ಕೋದ೦ಡಸಮಮಿದೈ, ಕಬ್ಬಲ್ಲ ಕಬ್ಬಿಗರ
      ಗಬ್ಬಪಸುವಿದಹುದೈ.
      ರಸಿಕಮಾಸದೊಳ೦ದು
      ಪದಿನೆರಡು ಮೂಡಿತ್ತು ರಸದಾತುರರ್ಗಾಯ್ತು
      ಸಗ್ಗಸೊಗಪಬ್ಬವು೦. ಕೇಳ್ಜನರು ಸಿಕ್ಕಿಸಿರ-
      ಲವಧಾನಯ೦ತ್ರದಿಕ್ಕಟ್ಟಿನಲಿ, ಕೋಲ್ನುರಿದು,
      ಪರಿದಿತ್ತು ರಸವೊನಲು ನವಮಾರ್ಗದಿಭರದಿ೦.
      ಬಗೆಬಗೆಯ ಬೊಗಸೆಯಲ್ ಮೊಗೆದಿರಲ್ ರಸಿಕಾಳಿ
      ಬಗೆತಣಿಯುವನ್ನೆಗ೦ ಮುಳುಗುತ೦, ತೇಲುತ೦,
      ಹೀರುತ೦, ಚೀರುತ೦. ಅಕ್ಕಜವನೀಕ್ಷಿಸುತ-
      ಲದ್ಭುತವನನುಭವಿಸಿ, ಪಿಡಿದುಸಿರಲುದ್ಗರಿಸೆ:
      “ಅವಧಾನಿ! ಅವಧಾನಿ! ಅವಧಾನಿ!”ಯಿವನೆ೦ದು;
      “ಅವಧಾನ! ಅವಧಾನ! ಅವಧಾನ!” ವಿದೆಯೆ೦ದು .

      ಕೆಲವು ಪದಗಳಿಗರ್ಥ:

      (ಎಲರ್ – ಗಾಳಿ, ತಣ್ಗಲ್ – ಮ೦ಜುಗಡ್ಡೆ, ಅಲಸುಗೆ – ಆಲಸ್ಯ, ತಿರ – ಸ್ಥಿರ, ಬಿತ್ತ – ಬೀಜ, ಇಳೆ – ಭೂಮಿ, ನುಡಿ – ಭಾಷೆ, ಬುಧಜನರ್ – ಪ೦ಡಿತರ್, ಮು೦ಗಬ್ಬಿಗರ್ => ಮುನ್ನ + ಕಬ್ಬಿಗರ್ – ಪೂರ್ವ ಕವಿಗಳ್, ಆಳಿ – ಸಮೂಹ, ಬರಿಸ – ಮಳೆ, ಸೀಗೋಲು – ಕಬ್ಬು(ಇ೦ಗೋಲ), ಪಸು – ಹಸು, ಪದಿನೆರಡು – ದ್ವಾದಶಿ, ಸೊಗ – ಸುಖ, ಕೇಳ್ಜನರು – ಪೃಚ್ಛಕರು, ಬಗೆ – ಮನಸ್ಸು, ಅನ್ನೆಗ೦ – ಅಲ್ಲಿಯವರೆಗೆ, ಅಕ್ಕಜ – ಆಶ್ಚರ್ಯ )

    • ಭಾಪುರೇ ಮುಜ ಭಾಪು ಕನ್ನಡ
      ದೀಪರಿಯ ಪಳೆನುಡಿಯು ಧಾವಿಸೆ
      ಭೂಪ ಸಿರಿಕಾರಂತ ಯತ್ನ ಘನಾನುಭವಮಲ್ತೇ
      ಜ್ಞಾಪಕದ ಕದ ತೆರೆಯುತೀಗಣ
      ತಾಪವದು ಹೊರದೊಲಗೆ ಮನ ಸುರ
      ಚಾಪಮಂತಳೆದೆಸೆಯೆ,ನಿಬ್ಬೆರಗಾದೆ ಹುಬ್ಬೇರಿಂ !!

      • ಚ೦ದ್ರಮೌಳಿಯವರೇ,
        ಈ ನಿಮ್ಮ ಪದ್ಯವನ್ನು ನನ್ನ CV ಯ Testimonial section ನಲ್ಲಿ ಹಾಕಿಕೊಳ್ಳುತ್ತೇನೆ :-).
        ಕೃತಜ್ಞತೆಗಳು.

    • ಶ್ರೀಶ,

      ಅದ್ಭುತ ಕಣಯ್ಯ, ನನ್ನ೦ತಹ ಕಲಿಯುವವನಿಗೆ, ಇಲ್ಲಿ ಬರೆದಿರುವ ವಿರಳ ಪ್ರಯೋಗಗಳನ್ನು ಪಟ್ಟಿಮಾಡಿ ಮಾಡಿಕೊ೦ಡು ಹಲವಾರುಪದ್ಯಗಲ್ಲಿ ಅಳವಡಿಸುವಷ್ಟನ್ನು ಒ೦ದೇ ಪೊಸ್ಟ್ ನಲ್ಲಿ ಅಡಕಮಾಡಿಕೊಟ್ಟದ್ದಕ್ಕಾಗಿ ಧನ್ಯವಾದಗಳು 🙂

      ಭಾವ ಭಾಷೆ ಎರಡೂ ಬಹಳ ಚೆನ್ನಾಗಿದೆ

    • ಇದು ಕಣಾ! ಕಾವ್ಯರಸಚಿತ್ತಪೋದ್ರೇಕಮಿ-
      ನ್ನಿದು ಕಣಾ! ಮಲೆಮುಡಿಯಿನೊಯ್ಯನೊಯ್ಯನೆ ತುಯ್ದು
      ಪದವಿಟ್ಟು ಕುಣಿಕುಣಿವ ಕಾನಿನಬ್ಬಿಯ ಪರಿವ
      ಮುದಮೆ ಮೇಣ್ ರುಂದ್ರವಿಸ್ತಾರದಿಂ ತಾರದಿಂ-
      ದೊದವಿದೋಲಂತೆ ಬಿಚ್ಚಳಿಸಿ ಬೆರಲ್ಗರ್ಚುವೋಲ್
      ಪುದಿದ ಪದ್ಯಪ್ರಪಂಚವಿಭೂತಿಗಳ್ ಸಮೆದ
      ಸೊದೆಯಲಾ!!
      ಅಂತಿರ್ಕೆ, ಮತ್ತೇತಕಯ್ ಮಹಾ
      ಛಂದದೋಂಕಾರಝಂಕಾರಮವ್ವಳಿಪಂತೆ
      ಬಂದುಗೆಯ ಮಲರಂತೆವೋಲ್ ಮಾತ್ರೆಗಳ ಲೆಕ್ಕ-
      ಮಂದಗುಂದದ ತೆರಂ ನಿರ್ನೆರಂ ಬರ್ಪವೋಲ್
      ಸ್ಪಂದಿಸಲ್ ನೋಂತೆಯಿಲ್ಲಂ ಶ್ರೀಶ! ನೀನಿಲ್ಲಿ?
      ಸಂದೆಗಮದೇತಕಯ್? ಬಲ್ಪಿಂದೆ ರೂಪಿಸಯ್!
      ಓ! ಮಿತ್ರ! ಓ! ಪಾತ್ರ! ಓ! ಚಾರುಗಾತ್ರ!!!

      • ಏನೆ೦ದೊರೆಯಲಿ ನಲುಮೆಯೀ ಸಾಲ್ಗಳಿಗೆ. ಪಾರಿತೋಷವೆ ನಾಚೆ ತಾ ನೆದುರು ನಿಲಲ್.
        ಸಮನಿಸಿರುವೆ ಸಾಲ್ಗಿಪ್ಪತ್ತು ಮಾತ್ರೆಯ೦. ಪಿಡಿದು ನಡೆಸುವುದೆನ್ನ ಎಡವಿದೊಡೆ, ನೀವ್.

  11. ಅವಧಾನಕ್ಕಾಗಿ ಮೊದಲ ಬಾರಿಗೆ ಬಂದು ಕುಳಿತಿದ್ದಾನೆ.

    ಅರಿಯನ್ ಭಾಷಾಪರಿಯಂ
    ಮರೆವನ್ ಸುತ್ತೋಟದೊಳ್ ಬಳೆದ ಪರಿಹಾರಂ
    ತೊರೆಯನವನಾದೊಡಂ ಗಡ!
    ಪಿರಿಗೈಯೊಂದೆನ್ನ ಪಿಡಿದುದೆಂಬುದನರಿವಂ

    ಅತ್ತ ಅವಧಾನವಾಗುತ್ತಿದ್ದರೆ, ಆ ಪ್ರೇಕ್ಷಕನಿಗೆ ಏನೆನಿಸುತ್ತಿದೆ?

    ಪಳನುಡಿಯಂ ಕೇಳ್ದೊಡೆ ಈ
    ಒಳನುಡಿ ನಲಿದಪುದು ನೆಗಹಿದಾ ಕಂದನವೋಲ್
    ಕಳೆದಿರ್ದ ಮೋಡಮಕ್ಕನೆ
    ಸುಳಿದಾಡಿದೊಡಂ ನಿಮಿರ್ದ ನವಿಲು ನಲಿವವೋಲ್

    ಒಂದು ಸಂದರ್ಭ, ಅವಧಾನಿ ಪರಿಹಾರಕ್ಕಾಗಿ ನಿಮಗ್ನನಾಗಿ ಚಿಂತಿಸುತ್ತಿದ್ದಾನೆ. ಆಗ ಅಪ್ರಸ್ತುತ ಪ್ರಸಂಗಿ ಒಂದು ತಲೆಹರಟೆ ತಗಾದೆ ತಂದಿದ್ದಾನೆ. ಅದಕ್ಕೆ ನಮ್ಮ ಕೇಳುಗನ ಪ್ರತಿಕ್ರಿಯೆ:

    ಅಚ್ಚಾ! ಓ ಪುಚ್ಚ! ಕರುಣೆ-
    ಯೊಚ್ಚತಮಿಲ್ಲದಿಹೆಯೈ ಕಿರಿನುಡಿಯ ಕಿರುಬೈ
    ಸ್ವಚ್ಛಸರೋವರದಿ ಧಡಲ್
    ಕೊಚ್ಚೆಯ ಸಿಡಿಸುವುದದೆಂತು ಪರಿಯೈ ಸರಿಯೈ!

    ಇನ್ನು ಅವಧಾನ ಮುಗಿಸಿ ಹೊರಬಂದಿದ್ದಾನೆ. ಗೆಳೆಯ ಹೇಗಿದೆ ಎಂಬುದಾಗಿ ಕೇಳಿದ್ದಾನೆ: ಅದಕ್ಕೆ ಉತ್ತರಿಸುತ್ತಿದ್ದಾನೆ.

    ಉದಯರವಿಯಂ ಕಂಡವೋಲಾಯ್ತು ಓ ಗೆಳೆಯ
    ಹೃದಯವೀಣೆಯ ತಂತಿ ಮಿಡಿದಂತಲಾಯ್ತು
    ಸುದಿನಮೊಪ್ಪಿತು ಇಂದು ನಿಧಿಯ ಹೊಳಪನು ಕಂಡು
    ಕದಿಯಲಾರದ ಕಾಂತಿ ಇಂದೆನ್ನದಾಯ್ತು.

    • ಹೊಳ್ಳರೇ, ವಿಶೇಷವಾದ ಪ್ರಸ೦ಗ/ವಿಷಯಗಳು ಮತ್ತು ಎ೦ದಿನ೦ತೆ ಹಳೆಗನ್ನಡ ಹದದೂಟ. ಧನ್ಯವಾದ.

    • ಹೊಳ್ಳ,

      ಪ್ರೇಕ್ಷಕನ ದೃಷ್ಟಿಕೋನ ಬಹಳಚೆನ್ನಾಗಿ ಮೂಡಿದೆ, ಅದರಲ್ಲೂ ಅವಧಾನದ ಅಪ್ರಸ್ತುತದ ಬಗ್ಗೆ ನನಗೂ ಅದೇ ಅಭಿಪ್ರಾಯ ಮೊದಮೊದಲು ಇತ್ತು ಕೆಲವು ಅಪ್ರಸತುತ ಪ್ರಸ೦ಗಿಗಳಿಗೆ, ಒ೦ದ್ನಾಕೇಟು ಹಾಕಿದ್ರು ತಪ್ಪಿಲ್ಲ ಎ೦ದೆಲ್ಲ ಅನ್ನಿಸಿತ್ತು 🙂 ಆಮೇಲೆ ಅವಧಾನಿ ಇವನ್ನೆಲ್ಲಾ ಲೀಲಾಜಾಲವಗಿ ನಿಭಾಯಿಸುವುದನ್ನು ನೋಡಿ ಹೆಮ್ಮೆಯೆನಿಸಿತು… ಹೆಮ್ಮೆಯೆನಿಸುತ್ತಲಿದೆ…

    • ಎಂದಿನಂತೆ ಸೊಗಸಾಯ್ತು ಹೊಳ್ಳರೇ!
      ಚಂದಚಂದದ ಕವಿತ್ವವುಳ್ಳರೇ!!
      ಮಂದಿಗೆಲ್ಲಕೆ ಭವದ್ಭಣಿತ್ಯುಪ-
      ಸ್ಪಂದಮಕ್ಕೆ ನಿಜರೂಪ್ಪದರ್ಶಕಂ||

  12. ಪ್ರಿಯ ಮಿತ್ರರೇ

    “ ಅವಧಾನಾದರ್ಶಂ “

    ಪದ್ಯದಿಂದ ಗದ್ಯಕ್ಕೆ ಸಕಾರಣವಾಗಿ ಬದಲಿಸಿರುವ ಈ ಬರಹಕ್ಕೆ ಕ್ಷಮೆಯಿರಲಿ. ಕಾರಣ, ವಿಷಯದ ಮಹಿಮೆ. ನಾನು ನೋಡಿದ ಮೊದಲ ಅವಧಾನ ೧೯೭೦-೭೫ರ ಆಸುಪಾಸಿನಲ್ಲಿ. ಸಿ.ವಿ.ಸುಬ್ಬನ್ನ ಅವರ ಅಷ್ಟಾವಧಾನವೆಂದು ತೋರುತ್ತದೆ. ಅವರ ಅವಧಾನವಿದ್ಯ ಎಂಬಗ್ರಂಥವನ್ನು ೧೯೮೦ರ ಸುಮಾರಿಗೆ ಸ್ನೇಹಿತರೊಬ್ಬರಿಂದ ತರಿಸಿಕೊಂಡು ಒದಿದೆ. ಆನಂತರದ ದಿನಗಳಲ್ಲಿ ಅವಧಾನದ ಸನ್ನಿಧಾನ ಸದಾ ಪ್ರಧಾನವಾಗಿ ಶ್ರೀಗಣೇಶರ ಮಾತು-ಧಾತುಗಳ ಸೌರಭ ನಮ್ಮ ನಾಡು ಕಾಣುತ್ತಾಬಂದಿರುವುದು ನಮ್ಮ ಅನುಭವದ ರಮ್ಯಭಾಗ.

    ಮೊದಲಿಗೆ, ಅವಧಾನ ಎಂಬ ಪ್ರಕ್ರಿಯೆ ನನಗೆ ಪರಿಚಯ ವಾಗಿದ್ದು ಒಂದು ಪುಟ್ಟಪುಸ್ತಕದಿಂದ. ಅದು ನನ್ನಕೈಗೆ ಬಂದಾಗ ನಾನು ಮಾಧ್ಯಮಿಕಶಾಲಾವಿದ್ಯಾರ್ಥಿ. ಆ ಕಿರುಹೊತ್ತಗೆ : “ ಅವಧಾನಾದರ್ಶಂ” (ಚಿದಂಬರೀಯಂ). ಮೂಲ ಸಂಸ್ಕೃತ ಕೃತಿಯ ಲೇಖಕರು ಶತಾವಧಾನಿ ಕಾವ್ಯಕಲಾನಿಧಿ ಚಿದಂಬರಶಾಸ್ತ್ರಿಗಳು. ಅವರ ಸಾಕ್ಷಾತ್ ಶಿಷ್ಯರು, ’ ಕರ್ಣಾಟಕ ಅಷ್ಟಾವಧಾನಿ’ ಕೀ.ಶೇ ಬ್ರ||ಶ್ರೀ|| ಬೆಳ್ಳಾವೆ ನರಹರಿಶಾಸ್ತ್ರಿಗಳು ಆ ಹೊತ್ತಗೆಯನ್ನು ಕನ್ನಡಕ್ಕೆ ಅನುವಾದಿಸಿ ೧೯೨೩ರಲ್ಲಿ ಕೋಲಾರದಿಂದ ಪ್ರಕಟಿಸಿದರು. ಹತ್ತು ಪುಟಗಳ ಪುಟ್ಟ ಪುಸ್ತಕ ಇದು. ಎಂಟೊಂಬತ್ತು ಶ್ಲೋಕಗಳ ಕೃತಿ! ಅವಧಾನವೆಂದರೇನು,ಚಿತ್ತಸ್ಥೈರ್ಯದ ಪ್ರಾಮುಖ್ಯತೆ, ಆ ಕಲೆಗೆ ಬೇಕಾದ ಉತ್ಸಾಹ, ಮಧುರವಾಗ್ಝರಿ, ಸರಸಕವಿತ್ವ, ಊಹನಾಶಕ್ತಿ,ಮೇಧಾಶಕ್ತಿ, ಸಾಧನೆಯರೀತಿ ಹೇಗೆ ಎಂಬ ಅವಧಾನದ ವಿವಿಧ ಅಂಗಗಳ ಉಲ್ಲೇಖ ಇಲ್ಲಿದೆ. ಮೂಲ ಸಂಸ್ಕೃತ ಶ್ಲೋಕಗಳಿಗೆ ಪ್ರತಿಪದಾರ್ಥವನ್ನು ಒದಗಿಸಿರುವ ಶಾಸ್ತ್ರಿಗಳು, ಕನ್ನಡ ಪದ್ಯಗಳಲ್ಲಿ ತತ್ವಪ್ರಕಾಶಿನೀವ್ಯಾಖ್ಯೆಯನ್ನೂ ರಚಿಸಿದ್ದಾರೆ. ದತ್ತಾಕ್ಷರ, ವ್ಯಸ್ತಾಕ್ಷರ, ನಿಷಿದ್ಧಾಕ್ಷರ, ವಿವರ್ಗಾಕ್ಷರ, ಸಮಸ್ಯೆ, ಪೃಷ್ಟಕಲ್ಪನ (ಆಶು),ಏಕಸಂಧಾಗ್ರಹ, ಶತಾವಧಾನ ಇವುಗಳ ಸೂಕ್ಷ್ಮೋಲ್ಲೇಖ ಪರಿಚಯ ಇಲ್ಲುಂಟು. ಇಂದು ನಮಗಿದು ಬಹು ಪ್ರಾಥಮಿಕವಾಗಿ ಕಂಡರೂ ೯೯ ವರ್ಷಗಳ ಹಿಂದೆ ನಮ್ಮಕನ್ನಡಜನಕ್ಕೆ ಅವಧಾನದ ಪರಿಚಯಮಾಡಿಸಿದ ಮಹನೀಯರು ಬೆಳ್ಳಾವೆ. ಅವರ ಕೆಲವು ನಾಟಕ,ಕಾವ್ಯ, ಕಥೆಗಳನ್ನು ಚಿಕ್ಕಂದಿನಲ್ಲಿ ಓದಿ ಆನಂದಿಸಿದ್ದೇನೆ. ಈ ಪುಸ್ತಕವನ್ನು ಕುರಿತು ಎಲ್ಲೂ ಒದಿದ ನೆನಪಿಲ್ಲ. ಅವಧಾನವನ್ನು ಕುರಿತ ಮುದ್ರಿತ ಪುಸ್ತಕ ಕನ್ನಡದಲ್ಲಿ ಇದು ಮೊದಲನೆಯದೇ ಇರಬಹುದು. ಈ ಪುಸ್ತಕ ನಮ್ಮ ತಾತನವರಾದ, ದಿ||ವೇ||ಬ್ರ||ಶ್ರೀ|| ಡಿ.ಎಸ್.ನರಸಿಂಹಶಾಸ್ತ್ರಿಗಳ ಸಂಪಾದ್ಯ. ಅವರ ಪುಣ್ಯಚೇತನಕ್ಕೆ ವಂದಿಸುತ್ತಾ, ಇದೋ “ಅವಧಾನಾದರ್ಶಂ” ನ ಛಾಯಾಪ್ರತಿ ನಿಮಗಾಗಿ ಪದ್ಯಪಾನದ ಈ ಭಾಗಕ್ಕೆ ಸಮರ್ಪಿತ.

    ವಂದನೆಗಳು

    http://www.scribd.com/doc/105466937

    • ಮೆರಗ೦ ಕಲೆಕಾ೦ಬುದಲಾ
      ಪೊರೆವಾ ಸಹೃದಯರ್ಗಳಿ೦ದ, ದಶಕಗಳರಿವ೦
      ಸ್ಮರಿಸುತೆ ವಿದ್ವತ್ಕಲೆಯಾ
      ವಿರಳದ ಕೃತಿದರ್ಶನಕ್ಕೆ ವಿನಯದೆ ನಮಿಪೆ೦

      ಚ೦ದ್ರಮೌಳಿ ಸರ್ ಧನ್ಯವಾದಗಳು

    • ಧನ್ಯವಾದ ಮೌಳಿಯವರೇ! ಬ್ರಹ್ಮಶ್ರೀ.ಪಿಸುಪಾಟಿಯವರ ಅವಧಾನಪದ್ಯಗಳು ಮತ್ತು ವ್ಯಕ್ತಿತ್ವವನ್ನು ಕುರಿತು ಅವರ ಸೋದರಳಿಯ ಪೋತಕುಚ್ಚಿ ಸುಬ್ರಹ್ಮಣ್ಯಶಾಸ್ತ್ರಿಗಳು ಒಂದು ಪುಸ್ತಕವನ್ನೇ ಪ್ರಕಟಿಸಿದ್ದಾರೆ. ಅಲ್ಲಿ ಅವರು ನಮ್ಮ ನಾಡಿಗೆ ಬಂದ ಹಾಗೂ ವಿವಿಧತ್ರ ಅವಧಾನಿಸಿದ ವಿವರಗಳಿವೆ. ಬೆಳ್ಳಾವೆಯವರ ಮೂವತ್ಮೂರು ಉಪಲಬ್ಧಾವಧಾನಗಳ ಪದ್ಯಗಳ ಹಸ್ತಪ್ರತಿಯಿಂದ ಪರಿಷ್ಕೃತಾವೃತ್ತಿಯ ಸಂಪಾದನಕ್ಕೆ ತುಂಬ ಮುನ್ನವೇ ಕೈಹಾಕಿದೆ. ಆ ಕೆಲಸ ಇನ್ನೂ ಬಾಕಿಯಿದೆ. ಆದರೂ ಅದನ್ನು ಮುಗಿಸಿಯೇ ತೀರಬೇಕೆಂಬ ಸಂಕಲ್ಪವುಂಟು:-)…ಬೆಳ್ಳಾವೆಯವರ ಅವಧಾನದ ಡೈರಿಯಲ್ಲಿ ಹಲವು ಆ ಕಾಲದ ವಿದ್ವದ್ವಲಯದ ವಿವರಗಳು ಕಾಣಸಿಗುತ್ತವೆ.

      • ನಮಃ: ಬೆಳ್ಳಾವೆಯವರ ಅವಧಾನಪದ್ಯಮಾಲೆ ಮತ್ತು ಅಂದಿನ ಅವಧಾನವಿದ್ಯಾನಿಧಿಗಳ ವಿವರಗಳು ಶೀಘ್ಹ್ರದಲ್ಲೇ ಬೆಳಕುಕಾಣಲಿ ಎಂದುಹಾರೈಸುವೆ. ಪಿಸುಪಾಟಿಯವರ ಪುಸ್ತಕವನ್ನು ನಾನು ನೋಡಿಲ್ಲ. ಲಭ್ಯವಾಗುವ ಸ್ಥಳವಿವರ ತಿಳಿಸಿದಲ್ಲಿ ಉಪಕೃತ.

  13. ಶೆಟ್ಟಿಯಂಗಡಿಯಿಟ್ಟ ಸಾವ್ರಾರು ಸಾಮಾನು !
    ಸಟ್ಟನೆ ಕೊಟ್ಟನವ ಭಟ್ಟ ಕೇಳಿದನ
    ಮಟ್ಟಸದ ಮಾತುಂಟು ಹಾಡುಂಟು ಕಥೆಯುಂಟು
    ಗಟ್ಟಿಗನು ಅವಧಾನಿ | ಜಗದಮಿತ್ರ

    • ಅವಧಾನಿಗಳ ಮೇಲಿನ ವ್ಯಾಮೋಹ ಬಿಡಿಸಲಾರದ್ದು, ತಡವಾಗಿ ಬಂದರೂ, ಆ ಅವಸರದಲ್ಲಿ ಪ್ರಕಟಿಸಿದ್ದಕ್ಕೆ ಮೀಟರು ಜಾರಿತ್ತು! ಗುರು ಗಣೇಶರ ಕಾರುಣ್ಯದಿಂದ ಅದನ್ನು ಲಕ್ಷ್ಯಕ್ಕೆ ತೆಗೆದುಕೊಂಡು ಸರಿಪಡಿಸಿದ್ದೇನೆ:

      ಶೆಟ್ಟಿಯಂಗಡಿಯಿಟ್ಟ ಸಾವ್ರಾರು ಸಾಮಾನು !
      ಸಟ್ಟನೆಯೆ ಕೊಟ್ಟನವ ಭಟ್ಟ ಕೇಳಿದನ
      ಮಟ್ಟಸದ ಮಾತುಂಟು ಹಾಡುಂಟು ಕಥೆಯುಂಟು
      ಗಟ್ಟಿಗನು ಅವಧಾನಿ | ಜಗದಮಿತ್ರ

  14. ನಿನ್ನಾದಿಪ್ರಾಸಕೆ ನಿಷೇಧಾಕ್ಷರದ ತಡೆ
    ನಿನ್ನ ಕಂದನಿಗಿಲ್ಲ ಪೋದತ್ತಪದಿಯ ನಡೆ
    ನಿನ್ನ ಚಿತ್ರಕವಿತೆಯದು ಸಮಸ್ಯಾ ಪೂರಣ
    ಚನ್ನಪೂರ್ವವಿಧಿಯದುನಿನಗವಧಾನ ಕಾಣ ||

    ನಿನ್ನ ಭಾವಕೆ ಬೆಸೆವ ತನ್ನಾಶುಕವಿತೆಯನೆ
    ನಿನ್ನಪ್ರಸ್ತುತೆ ಸಹಿಸಿ ಹೊಸೆವತಾ ಹಾಸ್ಯವನೆ
    ನಿನ್ನ ಗಮನದ ಗಮಕ ತಿಳಿದನವ ನಿಜಧ್ಯಾನಿ
    ತನ್ನದೆಲ್ಲವನಿತ್ತು ನಲಿವತಾನವ”ದಾನಿ” ||

    ಆ ನಿಜ “ದಾನಿ”ಗೆ ವಂದನೆ.
    (ಮತ್ತೊಂದು ರಗಳೆ – ಎನಿಸಿದರೆ ಕ್ಷಮಿಸಿ)

    • ಪದ್ಯ ಸೊಗಸಾಗಿದೆ. ಎಲ್ಲೋ ಸ್ವಲ್ಪ ಛಂದಸ್ಸು ಸಡಲಿದೆ:-)…ಅದನ್ನೂ ಬೇಗ ಸವರಿಸಿಕೊಳ್ಲಿರಿ…ಧನ್ಯವಾದ

      • ಗಣೇಶ್ ಸರ್,
        ನಿಮ್ಮ ಆಶಯ ಮನ ಮುಟ್ಟಿದೆ. ನನ್ನ ಮಿತಿಯ ಅರಿವಾಗಿದೆ. ಏನೋ ಸರಿಯಿಲ್ಲವೆಂಬ ಕೊರಗು ನನ್ನನ್ನೂ ಕಾಡುತ್ತಿರುವುದು ನಿಜ. ತಿಳಿಯದ/ತಿಳಿಯುವ ಕಾತುರವಿದೆ. ಆದರೆ ಕ್ರಮಬದ್ಧ ಅಭ್ಯಾಸ ಸಾಗುತ್ತಿಲ್ಲವೆಂಬ ಬೇಸರವಿದೆ.ಖಂಡಿತ ತಿದ್ದಿಕೊಳ್ಳುವ ಪ್ರಯತ್ನದ ಭರವಸೆ ನೀಡುವೆ. ಹೊಸಗನ್ನಡಕ್ಕೆ ಹೊಂದುವ ಸುಲಭ ಪದ್ಯ ಪ್ರಾಕಾರಗಳ ನಿಯಮಗಳ ಬಗ್ಗೆ ಮತ್ತು ಆ ಪ್ರಕಾರದ ಕೃತಿಗಳಬಗ್ಗೆ ದಯವಿಟ್ಟು ತಿಳಿಸಿಕೊಡಿ. ಧನ್ಯವಾದಗಳು.

        • ಪೊಸತಾದೊಡೇಂ ನುಡಿಯು ಪಳತು ಬಂಧಂಗಳೊಳ್
          ಪೊಸೆಯಲಕ್ಕುಂ ಭಾವಭಾಷೆಗಳನಂ
          ಕಸುವಾಂತ ಪೊಸಮರದ ಕಂಬಮಿಲ್ಲದೆ ಮುನ್ನ
          ನುಸಿ ಪತ್ತಿ ಕುಸಿವುದೌ ಕಾವ್ಯಸೌಧಂ

          • ಜೀವೆಂ ಸರ್,
            ನಿಮ್ಮ “ಹರಕೆ” ನನ್ನ ಹುರುಪು ಹೆಚ್ಚಿಸಿದೆ. ಧನ್ಯವಾದಗಳು.
            “ದತ್ತಪದಿ”ಯಲ್ಲಿ, ನಿಮಗೆ ಸಂದ “ಕೈನೆಟಿಕ್” ಕೊಡುಗೆ ಕಾಕತಾಳೀಯವಾಗಿ ಎಲ್ಲರಿಗೂ ಸಂದಿದೆ ನೋಡಿ!!

          • ಉಷಾ ಮೇಡಂ,

            ಪದ್ಯಪಾನ ತಾಣದೊಳನ
            ವದ್ಯ ಪದ್ಯಕೆಲ್ಲ ಸಲ್ವು
            ದದ್ಯತನ ಸಮಸ್ಯೆಗಷ್ಟೆಯಲ್ಲ ನೆಟಿಕೆಯು
            ಸದ್ಯದಲ್ಲೆ ನಿಮ್ಮ ಕವನ
            ವಿದ್ಯೆಯನ್ನು ಬೆಳಸಿಕೊಂಡು
            ಹೃದ್ಯವಾದ ಕಾವ್ಯಧಾರೆಯಿತ್ತ ಹರಿಸಿರಿ

          • ನಿಮ್ಮ ತುಂಬು ಹೃದಯದ ಹಾರೈಕೆ ನನ್ನಲ್ಲಿ ಹೊಸ ಹುರುಪು ತುಂಬಿದೆ. ಭರವಸೆಯ ಪ್ರಯತ್ನ ಸಾಗಿದೆ ನಿಮ್ಮ “ನಿ(ಧಿ)ಗಂಟಿ”ನೊಂದಿಗೆ.

Leave a Reply to ಗಾಯತ್ರಿ ಇಂದಾವರ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)