Sep 112012
 

ಬಜಾಜ್(Bajaj), ಯಮಹ(Yamaha), ಕವಸಾಕಿ(kawasaki), ಕೈನೆಟಿಕ್(kinetik)

ಈ ನಾಲ್ಕುಪದಗಳನ್ನು ಬಳಸಿ, ನಿಮ್ಮಾಯ್ಕೆಯ ಛ೦ದಸ್ಸಿನಲ್ಲಿ(ಆದಷ್ಟು ಮಟ್ಟಿಗೆ ವರ್ಣವೃತ್ತಗಳನ್ನು ಬಳಸಿ), ಒಬ್ಬಳುಸು೦ದರಿ ಮತ್ತೊಬ್ಬಳ ಗುಣಗಾನವನ್ನು ಮಾಡುವ ವಿಷಯವನ್ನಿಟ್ಟುಕೊ೦ಡು ಪದ್ಯ ರಚಿಸಿ.

  19 Responses to “ಪದ್ಯ ಸಪ್ತಾಹ – ೩೭ –ದತ್ತಪದಿ.”

  1. ಡ೦ಬಜಾಜಕರನೀಪರಿ ಮಾಳ್ಪಳ್
    ತು೦ಬುಯವ್ವನದ ಕಾಯಮಹ೦ಕಾ-
    ರ೦ ಬಲಾಹಕವ ಸಾಕಿಹಳಲ್ತೇ
    ಇ೦ಬುಗೈ(ಕೈ) ನೆಟಿಕೆಯಿ೦ದಲವಳ್ಗೇ

    ಡ೦ಬಜೆ = ಜ೦ಬದ ಪುತ್ರಿ (ಜ೦ಬವೇ ಇವಳ ತಾಯಿ)
    ಆಜಕ = ಕುರಿಮ೦ದೆ
    ಬಲಾಹಕ = ಮೋಡ (ಅಹ೦ಕಾರದ ಮೋಡ)
    ಇ೦ಬುಗೈ = ಮಾತನಾಡಿಸು

  2. ತುರುಬಿನತುಂಬ ಜಾಜಿ ನಗುತೇನನುಪೇಳಿದೆ ಮೌನದಿಂ ಸಖೀ?
    ಹರೆಯ ಮಹಾಪಟಿಂಗತನ ತೋರ್ಪುದು ಸೈರಿಸು ಬೇಡವೆಂದುದೈ !
    ಮರುಕವಸಾಕಿ ಕಣ್ಣುಗಳದೆಲ್ಲೆಡೆ ಸುತ್ತುತ ಲೇನನೋಳ್ಪುದೈ?
    ಕರುಬಿನ ನಿನ್ನ ಕೈನಟಿಕೆ ಸಾರಿದ ಭಾಷೆಯ ರೂಪ ಕಂಡಿತೈ!!

  3. ಮುಡಿತುಂಬ ಜಾಜಿಹೂ ನರೆಯ ಮರೆಸುವುದಂತೆ
    ಯೊಡಲ ವೈಪುಲ್ಯಮಹ! ಪಟ್ಟಸೀರೆ
    ಬೆಡಗನೇಂ ಬಣ್ಣಿಸಲಿ ಮೋಹಕವ ಸಾಕಿದೋ
    ತೊಡೆವೆ ದೃಷ್ಟಿಯ ಕೈನೆಟಿಕೆಯ ಮುರಿದು

    ಶ್ರೀಶ ಕೇಳಿದ ವರ್ಣವೃತ್ತವಿನ್ನೂ ಬೆಂದಿಲ್ಲವಾಗಿ, ಉಪಾಹಾರಾರ್ಥವಾಗಿ ಈ ಮಾತ್ರಾವೃತ್ತ.

  4. ತುಂಬಾ ಸೊಗಸಾಗಿದೆ. ನಿಮ್ಮ ನಾಲ್ಕನೇ ಸಾಲು ನಿಮ್ಮ ಪದ್ಯಕ್ಕೇ !

  5. ಅಂಬಜಾ ಜಯಮಹಲ ಕಿಟಕಿ ಪಕ್ಕದಿ ನಿಂದು
    ತುಂಬ ಬಿಂಕವ ಸಾಕಿದೊಡತಿಯೆಡೆ ತೋರಿ |
    ನಂಬಲಳವಲ್ಲ ಕೈ ನೆಟಿಕೆ ಪಟಕೆನಿಸುತಲಿ
    ಹಂಬಲಿಸಿ ಸುಖನಿದ್ದೆ ರಾಣಿಮಂಚದಲಿ ||

  6. ಏನು? ಮುಡಿಯಲಿ ತುಂಬ ಜಾಜಿಯ ಹೂವ ಮುಡಿದಿಹೆ ಚೆಂದದಿ
    ಏನೊ ಕಾರ್ಯ ಮಹದಾನಂದದಿ ಮಾಡಹೊರಟಿಹೆ ಬಲ್ಲೆನು
    ನೀನು ನೋಟದಲೇನೆ ಕೊಲುವುದು ಮಿಕವ ಸಾಕಿನ್ನೆನ್ನುತ
    ಕೈನೆ ಟಿಕಲಿಯ ನೊಸಲಿಗಿಡುತಲಿ ಒಡತಿಗೊರೆದಳು ಚೆನ್ನುಡಿ

    (ಸ್ವಲ್ಪ ಇದಕ್ಕೆ ಹಿನ್ನುಡಿಯೂ ಬೇಕಾಗಬಹುದು. ಇಲ್ಲಿ ನಡೆಯುವ ಮಾತುಕತೆ ಒಬ್ಬ ಒಡತಿ ಮತ್ತೆ ಅವಳ ಸೇವಕಿಯ ನಡುವೆ. ಇಬ್ಬರೂ ಸುಂದರಿಯರೇ ಅಂತ ಹೇಳಲೇಬೇಕಿಲ್ಲ ಮತ್ತೆ॒ :-). ಹರೆಯದ ಒಡತಿಯನ್ನು ಚಿಕ್ಕಂದಿನಿಂದಲೇ ನೋಡಿ ಆಡಿಸಿ ಬಲ್ಲ ಆಪ್ತ ಸೇವಕಿ, ಪ್ರಾಯಕ್ಕೆ ಬಂದ ಹುಡುಗಿಗೆ ಇಂತಹ ಸಲಹೆ ಕೊಟ್ಟರೆ ಅಚ್ಚರಿಯೇನಿದೆ?)

    ಕೈನೆ= ಸೇವಕಿ; ಟಿಕಲಿ= ಹಣೆಬೊಟ್ಟು (ಹಿಂದೀ ಪದವಾದರೂ ಈಚೀಗೆಗೆ ಹೆಂಗೆಳೆಯರು ಬಹಳ ಬಳಸುವ ಪದವಿದು)

    ಎಲ್ಲ ಪದಗಳನ್ನೂ ಬಳಸಲಾಯಿತು ಅನ್ನುವ ಸಂತೋಷದಲ್ಲಿ ರಸಕ್ಕೆ ಸ್ವಲ್ಪ ಕೊರತೆ ಇದೆ ಎನಿಸಿದರೂ, ಛಂದಸ್ಸು ಪೂರ್ತಿ ಸರಿಯಿಲ್ಲವೇನೋ ಎಂಬ ಶಂಕೆಯಿದ್ದರೂ, ಲಗಂ ದೋಷಗಳಿವೆ ಎಂದು ಕಂಡರೂ ಹಾಕಿಬಿಟ್ಟಿದ್ದೇನೆ. ಪದ್ಯಪಾನಿಗಳು ಹೊಟ್ಟೆಗೆ ಹಾಕಿಕೊಳ್ಳಬೇಕು 🙂

    • ಅಲ್ಲದೆ, ನೋಟದಲ್ಲೇ ಕೊಲ್ಲಲ್ಪಡುವ “ಮಿಕ” ಯಾರಂತ ಬಿಡಿಸಿ ಹೇಳಬೇಕಿಲ್ಲವೇನೋ..

    • ಅದು ಪದ್ಯಪಾನಿಗಳ ಹೊಟ್ಟೆ ಸೇರುವ ಮುನ್ನ ಅವರ ಬಾಯಿಗೆ ಬೀಳುತ್ತಲ್ಲ! ಅದನ್ನು ಯೋಚನೆ ಮಾಡಲೇ ಇಲ್ಲವಲ್ಲ ನೀವು.
      ಅಂದಹಾಗೆ, ನಮಗೆ common ಸ್ನೇಹಿತರೊಬ್ಬರಿದ್ದಾರೆ – ಕಾಶಿಯ ಕಿಶೋರ್ ಪಟವರ್ಧನ್.

  7. “ಕೇಳೆ ಸಖಿ”
    ಕಡೆದ ಬಿಂಬ ಜಾಜುವಂದ
    ಪಡೆದ ಹೃದಯ ಮಹತೆ ಬಂಧ |
    ಬಿಡದೆ ನಿನ್ನ ಕಾವ ಸಾಕಿಗೆ
    ಪಿಡಿದುಕೈ ನಟಿ ಕಾರಣ ಕೇಳೆ ||
    (ಜಾಜು = ಜಾದು, ಸಾಕಿ – ಸಾಕ್ಷಿ )

  8. ಬಲುಮಟ್ಟಿಗೆ ಎಲ್ಲರೂ ಚೆನ್ನಗಿ ದತ್ತಪದಿಯನ್ನು ಪರಿಹರಿಸಿದ್ದಾರೆ; ತುಂಬ ಧನ್ಯವಾದಗಳು.
    ವಿಶೇಷತಃ ಒಳ್ಳೆಯ ಕಾವ್ಯವನ್ನು ಹಲವರು ಸಮರ್ಥವಾಗಿ ನೀಡಿದ್ದಾರೆ. ಸೋಮ ಅವರ ಕಿರಿಯ ಗಾತ್ರದ ಸ್ವಾಗತವೃತ್ತದದಲ್ಲಿ ದತ್ತಪದಿಯನ್ನು ಪೂರಯ್ಸುವ ಸಾಹಸವಾಗಲಿ, ಮೌಳಿಯವರು ವಿವರವಾಗಿ ಚಂಪಕಮಾಲೆಯಲ್ಲಿ ವರ್ಣಿಸಿದ ಹದವಾಗಲಿ, ಜೀವೆಂ ಅವರ ಚೊಕ್ಕ ಚೌಪದಿಯ ಅಪ್ಪಟಕಾವ್ಯವಾಗಲಿ, ಹಂಸಾನಂದಿಯವರ ಮಾತ್ರಾಮಲ್ಲಿಕಾಮಾಲೆಯಾಗಲಿ ಚೆಲುವಾಗಿವೆಯೆಂದರೆ ಸಾಕಾಗದು. ಭಟ್ಟರಲ್ಲಿ ಒಂದೆರಡು ಸವರಣೆ ಬೇಕಾದೀತು. ಉಷಾ ಅವರ ಪದ್ಯದ ಉತ್ತರಾರ್ಧಕ್ಕೆ ತಿದ್ದುಪಡಿ ತುರ್ತಾಗಿದೆ:-). ನಿರಪವಾದವಾಗಿ ಎಲ್ಲರೂ ಕೈನೆಟಿಕ್ ಪದಕ್ಕಾಗಿ ಕೈ-ನೆಟಿಕೆಯನ್ನೇ ಮುರಿದಿದ್ದಾರೆ. ನಾನಾದರೂ ಹಿಂದೆ ಹೀಗೆಯೇ ಪರಿಹರಿಸಿದ್ದೆ:-) ಬಜಾಜಿಗೆ ಜಾಜಿಹೂವು ಹೆಚ್ಚಿನವರಲ್ಲಿ ಒದಗಿಬಂದು ಪರಿಮಳಿಸಿದೆ. ಇವು ಬಲುಮಟ್ತಿಗೆ ಭಾಷೆಯ ಮಿತಿಯಲ್ಲದೆ ಕವಿಗಳ ಕಲ್ಪನೆಯ ಮಿತಿಯಲ್ಲ.

    ಸಾಂದರ್ಭಿಕವಾಗಿ ಹೇಳುವುದಾದರೆ ಎಂಥವರಿಗಾಗಲಿ ಸಮಸ್ಯಾಪೂರಣದಲ್ಲಿ ಅಭಿನವಾಭಿರಾಮಕಲ್ಪನೆಗಳಿಗಿರುವಷ್ಟು ಆಸ್ಪದ ದತ್ತಪದಿಯಲ್ಲಿಲ್ಲವೆಂಬುದೇ ಪರಮಾರ್ಥ.
    ಹೀಗಾಗಿಯೇ ಇದು ಅದೊಂದುಬಗೆಯಲ್ಲಿ ಕಷ್ಟ. ಹೆಚ್ಚಿನಕಲ್ಪನೆಗೆ ಅವಕಾಶವಿಲ್ಲದಿದ್ದಾಗ ಅಪ್ಪಟ ಕವಿಗೆ ಕಸಿವಿಸಿಯಾಗದಿದ್ದೀತೇ? ಅಲ್ಲದೆ ಇದು ಪ್ರತಿಭೆಗಿಂತ ಪಾಂಡಿತ್ಯವನ್ನೂ, ತನ್ಮೂಲಕ ನಿರ್ಬಂಧದ ನಿಷ್ಠುರತೆಯನ್ನೂ ಮಿಗಿಲಾಗಿ ನಿರೀಕ್ಷಿಸುತ್ತದೆ. ಆದರೆ ಪರಿಪೂರ್ಣಕವಿಯಾಗಲು ಎಲ್ಲ ಪಟ್ಟುಗಳೂ ಅವಶ್ಯ. ವ್ಯುತ್ಪತ್ತಿಯು ಗಟ್ಟಿಯಾಗಲು, ನಿರ್ಬಂಧದ ನಿಗಳದಲ್ಲಿಯೂ ನೆಮ್ಮದಿಯ ನೆಲೆಯನ್ನು ಹುಡುಕಿಕೊಳ್ಳಲು ಇಂಥ ವ್ಯವಸಾಯ ಅಪೇಕ್ಷಣೀಯ.
    ಮುಖ್ಯವಾಗಿ ದತ್ತಪದಿಯಲ್ಲಿ ಪೃಚ್ಛಕನು ಸವಾಲಾಗಿ ಒಡ್ಡಿರುವ ಪದಗಳ ಮೂಲಕ ವಾಕ್ಯರಚನೆಯು ನಿಯಂತ್ರಿತವಾಗುವ ಕಾರಣ ಇಲ್ಲಿ ಸಾಧ್ಯತೆಗಳ ಮಿತಿ ಸಹಜ, ಸ್ಪಷ್ಟ. ಸಮಸ್ಯಾಪೂರಣದಲ್ಲಾದರೋ ಪೃಚ್ಛಕನು ನೀಡುವ ಸಮಸ್ಯಾವಾಕ್ಯದ ಮೂಲಕ ಇಡಿಯ ಪದ್ಯದ ಗೊತ್ತು-ಗುರಿಗಳು ನಿಯಂತ್ರಿತವಾಗುವ ಕಾರಣ ಅಮಿತಸಾಧ್ಯತೆಗೆ ಅವಕಾಶವಿದೆ.
    ಇದನ್ನು ನಾವು ಈ ಮುನ್ನ ಕಂಡಿದ್ದ ಅರ್ಥಚ್ಛಲ ಮತ್ತು ಶಬ್ದಚ್ಛಲಗಳೆಂಬ ಎರಡು ಪ್ರಕಾರದ ಸಮಸ್ಯಾಪೂರಣಗಳೊಡನೆ ಹೋಲಿಸಿನೋಡಿದಾಗಲೂ ಮತ್ತಷ್ಟು ಚೆನ್ನಾಗಿ ಮನದಟ್ಟುಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಅವಧಾನದ ನಿಷೇಧಾಕ್ಷರ, ಚಿತ್ರಕವಿತೆ, ಸಮಸ್ಯಾಪೂರಣ, ನ್ಯಸ್ತಾಕ್ಷರ, ದತ್ತಪದಿ, ಆಶುಕವಿತೆ ಮುಂತಾದುವೆಲ್ಲ ತಮ್ಮವೇ ಆದ
    ರೀತಿಯಿಂದ ಕಾವ್ಯರಚನೆಯ ಮೂಲಸಾಮಗ್ರಿಗಳಾದ ಕಲ್ಪನೆ-ಭಾಷಾಪಾಟವ-ಛಂದಸ್ಸು-ಅಲಂಕಾರ-ಸದ್ಯಃಸ್ಫೂರ್ತಿ-ವಿವಿಧವಿಚಾರಗಳಲ್ಲಿ ವ್ಯುತ್ಪತ್ತಿ ಮುಂತಾದುವನ್ನು ಬೇರೆ ಬೇರೆ ಹದಗಳಲ್ಲಿ ಕೆರಳಿಸುವುದು ಗಮನಾರ್ಹ.

    • ತಿದ್ದುಪದಿ :
      ಕಡೆದ ಬಿಂಬ ಜಾಜುವಂದ
      ಪಡೆದ ಹೃದಯ ಮಹತೆ ಬಂಧ |
      ಪಿಡಿದುಕೈ ನಟಿ ಕೇಳದನು
      ಬಿಡದೆಮ್ಮ ಕಾವ ಸಾಕಿಯನು ||

      (ನನ್ನ ಪೋದತ್ತ ಪದಿಗೆ ಕ್ಷಮೆಯಿರಲಿ.)

      • ಉಷಾರವರೆ,

        ಪೂರ್ವಾರ್ಧದಲ್ಲಿ ಮೂರು ಮಾತ್ರೆಗಳ ನಡೆಯಿದೆ ಆದರೆ ಉತ್ತರಾರ್ಧದಲ್ಲಿ ಲೆಕ್ಕಾಚಾರ ಎಡವಿದೆ; “ಕೈ ನಟಿ” “ಬಿಡದೆಮ್” “ಮ ಕಾವ” ಇಲ್ಲಿ ನಾಲ್ಕು ಮಾತ್ರೆಗಳೂ, “ಕೇಳದನು” “ಸಾಕಿಯನು” ಇಲ್ಲಿ ಐದು ಮಾತ್ರೆಗಳೂ ಇವೆ. ಇವನ್ನೂ ಮೂರು ಮಾತ್ರೆಗಳಿಗೆ ಹೊಂದಿಸಿದಲ್ಲಿ (ಅಥವಾ ಪದ್ಯವನ್ನು ಐದು ಮಾತ್ರೆಗಳ ನಡೆಗೆಗೆ ಹಿಗ್ಗಿಸಿದಲ್ಲಿ) ರಿಪೇರಿಯಾದೀತು.

        – ವೆಂ.

        • ಗಳಿಗೆ ಗುಳಿಗೆಯ ಲೆಕ್ಕ
          ಗತಿಯು ತಪ್ಪುವ ತವಕ |
          ಅಳಿಗೆ ಉಳಿಗೆಯ ಲೆಕ್ಕ
          ಮಿತಿಯ ಒಪ್ಪುವ ತನಕ ||

    • ಶ್ರೀರಾಗಂಗಾಶುತೋಷಂಗೆರೆಯಗೆರಗುವೆಂ ಧನ್ಯನಾಂ ಮೆಚ್ಚುವಾತಿಂ

  9. ಪೊದೆಯ ಮಲ್ಲಿಗೆಯು ಹಂಬಿನ ಜಾಜಿಗೆ ಹೇಳಿದ್ದು – ನೀನು ಪುಣ್ಯವಂತೆ. ನಾವಿಬ್ಬರೂ ಒಂದೇ ಜಾತಿಗೆ ಸೇರಿದವರಾದರೂ, ನಿನಗೆ ದೃಷ್ಟಿಬೊಟ್ಟು ಇರುವುದರಿಂದ ನೀನು ಗರ್ವ ಮೆರೆಯಬಹುದು. ಹಾಗಾಗಿ ನಾನು ಮರೆಯಲ್ಲಿ ಉಳಿದುಬಿಡುತ್ತೇನೆ.

    ಹಂಬ ಜಾಜಿಯ(ನು) ಪೊದೆಯ ಮಲ್ಲಿಗೆ
    ತುಂಬ ಜಾಣಳೆನುತ್ತೆ ಪೊಗಳಿತು
    ಹುಂಬ ದೃಷ್ಟಿಯು ಸುಡದು ನಿನ್ನಯ ಮಾಹನೀಯವದು|
    ಜೃಂಬಿಸುಗೆಯಾ ಬೊಟ್ಟ ಪೊಂದಿ ಕ
    ರುಂಬಿ ಕೈ ನೆಟಿಕಿಪರ ನೋಡುತೆ
    ನೀಂ ಬಡದಿಹೆಯ ಪೇಳು ಬಿಂಕವ, ಸಾಕಿದೆನಗೆ ಮರೆ||

  10. (ನನ್ನ “ದತ್ತಪದಿ”ಯ ಲೆಕ್ಕಾಚಾರ)
    ಲಗುವೊಂದು ಗುರುವೆರಡು
    ಒಟ್ಟುಹನ್ನೆರಡು |
    ಲಗುವೆರಡು ಗುರುವೊಂದು
    ಒತ್ತಹಿಂದೆರಡು !
    ಲಗುವಾದ ಕಡುಬೆರಡು
    ಹಬ್ಬಮುಂದೆರಡು |

    “ಪದ್ಯಪಾನಿ”ಗಳಿಗೆಲ್ಲ “ಗೌರಿ-ಗಣೇಶ” ಹಬ್ಬದ ಶುಭಾಶಯಗಳು.

  11. A Different Model of Kinetic. 🙂 in Champaka maala.

    ಮೊಗಸಿರಿಕ೦ಗಳೋ ಜಗವ ತನ್ನಪರಾಗದಿ ಕೊಲ್ಬ ಜಾಜಿಹೂ
    ನಗೆಯ ಮಹಾಬ್ದಿಪೂರ ಹರಿವ೦ತ ಸುಧಾಮಯದ೦ತಸಾಲ್ಗಳು೦
    ಸುಗುಡಸುರಾಳಿಕಾಮಿಸುವಬಿ೦ಕವ ಸಾಕಿದ ಕಾಯಕಾ೦ತಿಯೀ
    ಸುಗೆಡೆಯಕೈನೆ ಟಿಕ್ಕೆಯವು ನಿನ್ನಯ ಕೀರುತಿಗೆ೦ದಳ೦ಧಗೇ ||

    ಸುಗೆಡೆಯ ಕೈನೆ – ಸ್ನೇಹಯುತವಾದ ಹೆಣ್ಣು, ಟಿಕ್ಕೆಯ – ಬಾವುಟ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)