Nov 242012
 

ಪದ್ಯಪಾನದಲ್ಲಿ ಪುಷ್ಪೋತ್ಸವ! ನಿಮಗಿಷ್ಟವಾದ ಹೂವಿನ ಬಗೆಗೆ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿ.

 

ಪದ್ಯನಿದರ್ಶನಂ – ೪:
ಪಂಪನ ಆದಿಪುರಾಣದಿಂದ (ಚಂಪಕಮಾಲೆ):
ಎಸೞ್ಗಳನೆಯ್ದೆ ಕಂಡರಿಸಿ ಮುತ್ತಿನೊಳಲ್ಲಿ ಸುವರ್ಣಚೂರ್ಣಮಂ
ಪಸರಿಸಿ ಕೇಸರಾಕೃತಿಯೊಳಲ್ಲಿಗೆ ಕರ್ಣಿಕೆಯಂದಮಾಗೆ ಕೀ
ಲಿಸಿ ಪೊಸತಪ್ಪ ಮಾಣಿಕದ ನುಣ್ಬರಲಂ ಮಧು ಮನ್ಮಥಂಗೆ ಬ
ಣ್ಣಿಸಿ ಸಮೆದಂತೆ ತೋಱುವುದು ಪೂಗಳೊಳೇಂ ಸುರಹೊನ್ನೆ ಚೆನ್ನಮೋ
[ಉಚ್ಛಾರದಲ್ಲಿ ೞ್ ಳ್ ಗೂ, ಱ್ ರ್ ಗೂ ಸಮೀಪ.]
ಎಯ್ದೆ = ಚೆನ್ನಾಗಿ, ವಿಶೇಷವಾಗಿ. ಕರ್ಣಿಕೆ = ಹೂವೊಂದರ ನಟ್ಟನಡುವಿನ ಭಾಗ. ನುಣ್ಬರಲಂ = ನುಣ್ + ಪರಲಂ, ಪರಲಂ = ನುಣ್ಣಗಿರುವ ಚೂರು
ಎಸೞ್ಗಳ = ಶಿಥಿಲದ್ವಿತ್ವವಿರುವುದರಿಂದ, ಇಲ್ಲಿ ಎಲ್ಲವೂ ಲಘುವೇ ಆಗಿರುತ್ತವೆ. ಚಿತ್ರ ಇಲ್ಲಿದೆ.

 

ಶತಾವಧಾನಸಂಭ್ರಮಂ:
ಇನ್ನುಂದು ವಾರದಲ್ಲಿ ಶತಾವಧಾನಾರಂಭ. ವಿವರಗಳು ಇಲ್ಲಿವೆ.

  58 Responses to “ವರ್ಣನೆ – ೪೮”

  1. ಒಳ್ಳೆಯ ವಿಷಯ ಹೊಳ್ಳರೆ! ಧನ್ಯವಾದಗಳು. ಆದರೆ ಕರ್ಣಿಕೆ ಎಂದರೆ ಹೂವೊಂದರ ನಟ್ಟನಡುವಿನ ಭಾಗ ಎಂದಲ್ಲವೇ ಪ್ರಸಿದ್ಧಿ! ಸದ್ಯದ ಸಂದರ್ಭವೂ ಅದಕ್ಕೆ ಯುಕ್ತವೆಂದು ತೋರುತ್ತದೆ. ಇದೀಗ ಹೂಗಳ ಬಗೆ ಪದ್ಯಗಳು:

    ಮೊದಲಿಗೆ ಪುಷ್ಪಿತಾಗ್ರವೆಂಬ ಅರ್ಧಸಮವೃತ್ತದಲ್ಲಿ:

    ಸುರಪತಿಯ ಧನುಸ್ಸು ಬಾನ್ಗೆ ಸಲ್ಗುಂ
    ದೊರೆಗುಮೆ ಭೂಮಿಗಮಂತೆ ವಾರ್ಷಿಕೈಕಂ|
    ಸರಿ; ಮನುಕುಲಕೀವೆನಾನಿದೋ ಎಂ-
    ದರಲ್ಗಳನಿತ್ತನೆ ಪದ್ಮಸಂಭವಂ ತಾಂ?

    ಬಳಿಕ ಮಾಲಿನಿಯಲ್ಲಿ:

    ಮಲರಿನೊಳುದಿಸಿರ್ಪೊಂದುಣ್ಮೆಯಿಂ ಸೃಷ್ಟಿಕರ್ಮಾ-
    ಖಿಲಬಲಮೊದವಿತ್ತಾ ಬೊಮ್ಮಗಂ; ಪಾಲಿಪೊಂದು-
    ಜ್ಜ್ವಲಮೆನಿಪ ವಿಲೋಕಂ ಬಂದುದಾ ಮಾಧವಂಗಂ
    ನಲಿನನಯನಲಕ್ಷ್ಮೀಲಾಸ್ಯದಿಂದೆಂದು ತೋರ್ಕುಂ ||

    ಮುಗಿತಾಯದಲ್ಲೊಂದು ಮಹಾಸ್ರಗ್ಧರೆ:

    ಮಲರಂಬಂ ಗೊಂಡೆ ಕಾವಂ ಮೆರೆದಪನದಟಿಂ ಮತ್ತಮಿನ್ನೆಂತೊ ಪೇಳಾ
    ಖಲನೊಳ್ ರುದ್ರಾಂಬಕಾಗ್ನಿಕ್ಷತಶಲಭನೊಳಾ ಮಿತ್ರವೈರಸ್ಯಮೈತ್ರೀ-
    ಬಲನೊಳ್ ಜಾಡ್ಯಾಂಕ-ರಕ್ತಾನನಸುರಥನೊಳಾ ಸರ್ವಲೋಕಪ್ರಹಾರ-
    ಚ್ಛಲಮಿರ್ದುಂ ಸರ್ವರೊಳ್ಪಂ ಪಡೆಯಲಳಮದೇಂ ವೆಗ್ಗಳಂ ಪೂಗಳಾ ಪೇಳ್ !!

    ಪದ್ಯಗಳು ಪೆಡಸೆನಿಸಿದರೆ ಮನ್ನಿಸಬೇಕು:-) ಹೂಗಳಿಗೆ ಸಂಬಂಧಿಸಿದ ವೃತ್ತಗಳಲ್ಲಿಯೇ ರಚಿಸಿದ್ದೇನೆ. ಚಂಪಕಮಾಲೆ, ಉತ್ಪಲಮಾಲೆ, ಮಲ್ಲಿಕಾಮಾಲೆ, ಮಾಲಭಾರಿಣಿ, ವಿದಳಿತಸರಸಿಜ, ವಸಂತತಿಲಕ, ವನಮಂಜರಿ, ಸ್ರಗ್ವಿಣಿ ಮುಂತಾದ ಇನ್ನೂ ಹತಾರು ಸುಮಸಂಬಧಿಯಾದ ವೃತ್ತಗಳಲ್ಲಿ ಅಥವಾ ಇನ್ನಿತರ ಬಂಧಗಳಲ್ಲಿ ಗೆಳೆಯರು ಮತ್ತೂ ಬರೆಯಲು ಇದು ಮುನ್ನುಡಿ ಮಾತ್ರ.

    • ಗಣೇಶರೆ,
      ’ಕರ್ಣಿಕೆಯಂದಮಾಗೆ’ ಯನ್ನು ’ಕರ್ಣಿಕೆಯಿಂದಮಾಗೆ ಕೀಲಿಸಿ’ ಎಂದು ಓದಿಕೊಂಡಿದ್ದರಿಂದ, ಅದನ್ನು ಸಮನ್ವಯಿಸುವ ಗೊಜಲಿನಲ್ಲಿ ಅರೆಮನಸ್ಸಿನಿಂದ ನಡುಬೆರಳು ಎಂದು ಬರೆದಿದ್ದೆ. (ನಡುಬೆರಳಿನಿಂದ ಜಾಗರೂಕತೆಯಿಂದ ಜೋಡಿಸಿ – ಎಂಬಂತೆ). ಈಗ ಸರಿಪಡಿಸಿದ್ದೇನೆ.

  2. Dear Holla, in the link to Sataavadhaana, I saw an error which can be rectified here:-) There it is said that puShpgucchabandha is an example of gaticitra but it it is a bandhacira in reality. Again there is a mistake in identifying sarvatObhadra as varNacitra, which is of course a gaticitra:-) Pl excuse me for finding fault with these:-)

    • Dear Sir, good part is that, this error is not present in the printed booklet. I will inform our friend Sandeep, who has put up this nice website to update it with the latest copy that we have.

  3. ಪುಷ್ಪಾರ್ಚನೆಗೆ ನನ್ನ ಪುಟ್ಟ ಕಾಣಿಕೆ

    ಸುಮಸುಮಮುಂ ಸುವರ್ಣಮನೆ ಸೂಸುವ ಚೆಲ್ವ ಸೊಂಪಿಗೆ
    ಅಮಮ ಮಹೀತಲಂ ಬೆರಗಿತಂತೆಯರಲ್ವ ಕಂಪಿಗೆ |
    ದುಮದುಮ ದುಂಬಿಗಳ್ ತೊಳಲ್ದು ತೂಳ್ದವು ಕೊಲ್ವ ಜೊಂಪಿಗೆ |
    ಘಮಘಮಗುಟ್ಟುತಂ ಮರದೆ ಕಂಡಿತು ಗೆಲ್ವ ಸಂಪಿಗೆ ||

    ತೊಳಲ್ದು- ಶಿಥಿಲ ದ್ವಿತ್ವ
    ತೂಳ್- ಹೆಮ್ಮೆಟ್ಟು, ನುಗ್ಗು ಎಂಬ ಎರಡರ್ಥಗಳೂ ಉಂಟು

    • ತುಂಬ ಸೊಗಸಾದ ಭಾಷೆ-ಬಂಧಗಳಲ್ಲಿ ರಚಿಸಿದ್ದೀರಿ. ಧನ್ಯವಾದಗಳು. ಈ ಛಂದಸ್ಸಿನ ಹೆಸರು ತಿಳಿಯುತ್ತಿಲ್ಲ. ದಯಮಾಡಿ ತಿಳಿಸಿರಿ. ಇದು ನಿಮ್ಮದೇ ಸೃಷ್ಟಿಯಾಗಿದ್ದಲ್ಲಿ ಮತ್ತೂ ಸೊಗಸು. ಲಘ್ವಂತವಾಗುವ ಪಾದಗಳುಳ್ಳ ವರ್ಣವೃತ್ತಗಳು ತುಂಬ ವಿರಳ.ಪ್ರಸಿದ್ಧವೃತ್ತಗಳ ಜಾಡನ್ನು ಹಿಡಿದು ಹೇಳುವುದಾದರೆ ಇದು ನರ್ಕುಟಕ ಅಥವಾ ಕೋಕಿಲಕವೃತ್ತ ಹಾಗೂ ಚಂಪಕಮಾಲೆಗಳ ನಡುವೆ ಬರುವಹಾಗಿದೆ.

    • ಗಣೇಶರೆ

      ಸರಸದಿ ಪದ್ಯಮನ್ನೊರೆದೆ ಚಂಪಪಮಾಲೆಯೆಂದೆಯಾನ್ |
      ಅರಿಯದೆ ಬಿಟ್ಟೆನೈ ಭಗಣಮಾದೊಡಮಾದ ಭಂಗಮೇನ್ |
      ಉರೆ ನಜಭಂ ದ್ವಿಜಂ ರ ಪದಿನೊಂದು ಯತಿತ್ವಮಾನೆ ತಾನ್ |
      ಸರಿಯಿದಕಿತ್ತೆನಾಖ್ಯ ನವಚಂಪಕಮೆಂದೆ ಕೇಳು ನೀನ್ ||

      ಕೊನೆಯಲ್ಲಿ ಲಘುವಿದ್ದರೂ ಅದು ಗುರುವಂತೆ ವರ್ತಿಸುವುದು. ಇದು ಡೀಫ಼ಾ಼ಳ್ಟ್ ಸ್ಥಿತಿ ಅಲ್ಲವೆ.

      • ಇಲ್ಲ, ಶ್ರೀಕಾಂತರೇ! ಅದು (ಲಘುವು ಪಾದಾಂತದಲ್ಲಿ ಗುರುವಿನ ಹಾಗೆ ಆಗುವುದು) ಕೇವಲ ಸಂಸ್ಕೃತದಲ್ಲಿ, ತತ್ರಾಪಿ ಎಂಟು-ಹನ್ನೆರಡು ಅಕ್ಷರಗಳ ಒಳಗೆ ಇರುವ ವೃತ್ತಗಳಿಗೆ ಮಾತ್ರ ಇರುವ ಸೌಲಭ್ಯ.
        ಆದರೆ ನಿಮ್ಮ ನಾಮಕರಣ (ಅರಿಸಮಾಸವಾಗಿಲ್ಲದಿದ್ದರೆ) ಸರಿ, ಸವಿ ಕೂಡ:-)

        • ವಿವರಿಸಿ ತಪ್ಪರಿಕೆ ತಿದ್ದಿದ್ದಕ್ಕೆ ಧನ್ಯವಾದಗಳು ಗಣೇಶರೆ. “ನವಚಂಪಕ”- ಅರಿಸಮಾಸದ ದೋಷವಿಲ್ಲಿಲ್ಲ. ಅಂದಹಾಗೆ ಈ ಅರಿಸಮಾಸಕ್ಕೂ ಕೆಲವು ಪ್ರಸಿದ್ಧ ಹಾಗೂ ಜನಪ್ರಿಯ ಅಪವಾದಗಳುಂಟಲ್ಲ- ಅಪನಂಬಿಕೆ, ದುರ್ನಾತ 🙂 ಪದ್ಯಪಾನದಲ್ಲಿ ಇವಿಲ್ಲ- ಪೂರ್ತಿ ಸುಗಂಧ ವಿಶ್ವಾಸಗಳೆ!

          • ಶ್ರೀಕಾ೦ತರೆ,

            ಪಕ್ಷಿನೋಟದಲ್ಲಿ ಅರಿಸಮಾಸದ ಅಪವಾದವೆ೦ಬುದಿರುವುದು ಕಾಣುತ್ತದೆ… ಆದರೆ ಇದು ಅಪವಾದವಷ್ಟೇ 🙂

          • ಕ್ಷಮಿಸಿರಿ; ನನಗೆ ಎಂಬಂತೆ ತೋರಿದ ಕಾರಣ ಅರಿಸಮಾಸವೇನೋ ಎಂದು ಭ್ರಮಿಸಿದೆ. ಇದೀಗ ಯುಕ್ತವಾಗಿದೆ. ದಿಟವೇ, ಅರಿಸಮಾಸಕ್ಕೆ ವಿನಾಯಿತಿಗಳಿವೆ. ಆದರೆ ಅದನ್ನು ವಿವೇಕಿಗಳೂ ತತ್ತ್ವ-ಪ್ರಯೋಗಗಳೆರಡರಲ್ಲಿ ಪರಿಣತರೂ ಆದ ವಿದ್ವಲ್ಲೇಖಕರು ನಿಯಮಿಸಿದರೆ ಒಳಿತು. ಇಲ್ಲವಾದರೆ ಭಾಷೆಯ ಸೌಂದರ್ಯವೂ ಸ್ವಂತಿಕೆಯೂ ಕೆಡುತ್ತದೆ. ನಾನಂತೂ ಮಾತು-ಕಥೆಗಳಲ್ಲಿ(ಕಥೆ-ಕಾದಂಬರಿ-ನಾಟಕಗಳಂಥ ಲೋಕಚಿತ್ರಕಸಾಹಿತ್ಯದಲ್ಲಿ) ಅಪನಂಬಿಕೆ, ದುರ್ನಾತದಂಥವನ್ನು ಒಪ್ಪಬಲ್ಲೆ. ವಾರ್ತೆ, ಶಾಸ್ತ್ರಗ್ರಂಥಾದಿಗಳಲ್ಲಲ್ಲ:-)

      • ಇಷ್ಟೊಂದೆಲ್ಲ ಜಿಜ್ಞಾಸೆಯೇ ಬೇಕಿರಲಿಲ್ಲ. ಮೂರ್ತಿಗಳು ಇದಕ್ಕೆ ಹೆಸರಿಟ್ಟಿರುವುದು ‘ಚಂಪಪಮಾಲೆ’ಯೆಂದು.
        Here is an extract:
        ಸರಸದಿ ಪದ್ಯಮನ್ನೊರೆದೆ ಚಂಪಪಮಾಲೆಯೆಂದೆಯಾನ್|

  4. ಒ೦ದುಷೆಯನು೦ ತಾಳೆ ನೀ೦ ಬರದೆ, ವಿಲಪಿಸುತೆ
    ನೊ೦ದಿರ್ಪೆಯಿ೦ದುನಾ೦ ತೋರೆ ದಯಮ೦
    ಸೌ೦ದರ್ಯದರಸಿ ನಗೆ ಬೆರಸುತರಳುವಮೊಗದೆ
    ಕೆ೦ದಾಸವಾಳ ನೀ೦ ಕಣ್ಣತಣಿಸೌ

    ಅ೦ಗಳದೊಳ್ ಒ೦ದುಷೆಯ ಸಮಯದೊಳು ಒ೦ದು೦ ದಾಸವಾಳಪೂವರಳದಿನೆ ಪೋಗಲ್…

  5. ಹಿತ್ತಲಂದಣದ ಬೆಳ್ಮಲ್ಲೇ
    ಕತ್ತಲಂಬರದೊಳಿತ್ತಲ್ಲೇ
    ಹೊತ್ತು ತಂದಿಹ ಸೊಂಪದುವನಾರೆಂದು ನಾಬಲ್ಲೆಂ।
    ಸುತ್ತಿ ನಾಮುಡಿಯೆ ತುರುಬಲ್ಲೇ
    ನೆತ್ತ ನೋದಿಡದೆ ನಗುವಲ್ಲೇ
    ಮತ್ತು ತಂದಿಹ ಕಂಪದುವದೇನೆಂದು ನಾಸೊಲ್ಲೆಂ ||

    • ಮತ್ತೆ ನೀವು ನಿಮ್ಮ ದಾರಿಗೇ ಬಂದಿದ್ದೀರಿ:-) ಈ ಪದ್ಯದ ಛಂದಸ್ಸಾವುದು?

      • ಗಣೇಶ್ ಸರ್,
        “ಭಾಮಿನಿ ಷಟ್ಪದಿ”ಯಲ್ಲಿ ಬರೆಯಲು ಪ್ರಯತ್ನಿಸಿದ್ದು. ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ,ತಿಳಿಸಿ. ತಿದ್ದಿ ಬರೆಯುವೆ.

        • ನೀವು ಬರೆದ ಪದ್ಯವು ಭಾಮಿನೀಷಟ್ಪದಿಯಲಿಲ್ಲ:-) ಈ ಹಿಂದೆ ನೀವು ಲಕ್ಷಣಶುದ್ಧವಾದ ಭಾಮಿನಿಯನ್ನು ಬರೆದವರೇ ಅಲ್ಲವೇ!!ಆದರೆ ನಿಮಗೆ ಮತ್ತೆ ಮತ್ತೆ ನಾನೂ ಇನ್ನಿತರಸದಸ್ಯರೂ ಹೇಳಿದ್ದೇವೆ; ದಯಮಾಡಿ ಛಂದಸ್ಸಿನ ಎಲ್ಲ ಪಾಠಗಳನ್ನೂ ಸರಿಯಾಗಿ ಕೇಳಿ ಮನನಮಾಡಿಕೊಳ್ಳಿರೆಂದು. ದಯವಿಟ್ಟು ಪೂರ್ವಪಾಠಗಳ ತಿಳಿವಿಲ್ಲದೆ ಪದ್ಯವನ್ನು ರಚಿಸಬೇಡಿರಿ. ಅಲ್ಲದೆ ಯಾವುದೇ ಪದ್ಯವನ್ನು ಬರೆದ ಬಳಿಕ ಮತ್ತೊಮ್ಮೆ ಮಗುದೊಮ್ಮೆ ಅದನ್ನು ಲಕ್ಷಣಶುದ್ಧವಾಗಿದೆಯೇ ಇಲ್ಲವೇ ಎಂದು ಪರಿಕಿಸಿರಿ.

    • ಉಷಾರವರೆ – ಲಗಂಗಳು ಬಂದಿವೆ.

    • ಹೌದು ಸರ್,
      ಮೊದಲು “ಬಿಳಿಮಲ್ಲೇ” ಎಂದೇ ಬರೆದದ್ದು. ನಂತರ “ಬೆಳ್ಮಲ್ಲೇ” ಎಂದರೆ ಹಳೆಗನ್ನಡ ಬಂತೆಂದು ಬದಲಿಸಿದ್ದು. “ಲಗಂ” ಗಮನಿಸಲಿಲ್ಲ, ಕ್ಷಮಿಸಿ.
      ಇನ್ನು ಮುಂದೆ ಎಚ್ಚರ ವಹಿಸುತ್ತೇನೆ.

      ಹಿತ್ತಲಂದಣದ ಬಿಳಿಮಲ್ಲೇ
      ಕತ್ತಲಂಬರದೆ ಬೆಳುದಲ್ಲೇ
      ಹೊತ್ತು ತಂದಿಹ ಸೊಂಪದುವನಾರೆಂದು ನಾಬಲ್ಲೆಂ।
      ಸುತ್ತಿ ನಾಮುಡಿಯೆ ತುರುಬಲ್ಲೇ
      ನೆತ್ತ ನೋಡಿದಡೆ ನಗುವಲ್ಲೇ
      ಮತ್ತು ತಂದಿಹ ಕಂಪದುವದೇನೆಂದು ನಾಸೊಲ್ಲೆಂ ।।

      (ಬೆಳುದಲ್ಲೇ = ಅಲ್ಲೇ ಬೆಳೆದದ್ದು ಎಂದಾಗುವುದಲ್ಲವೇ?)

      • ಉಷಾರವರೇ ನಿಮ್ಮ ಪ್ರಯತ್ನಶೀಲತೆ ಮೆಚ್ಚುವಂಥಾದ್ದು.

        ಗಣೇಶರು ಹೇಳಿದಂತೆ ಮತ್ತು ಮಿತ್ರ ರಾಮಚಂದ್ರ ಸೂಚಿಸಿರುವ ರೀತಿಯಿಂದ ನೀವು ಭಾಮಿನಿ ಪದ್ಯಲಕ್ಷಣವನ್ನು ಗಮನಿಸಿದಂತಿಲ್ಲ. ಮೂರು ನಾಲ್ಕು ಮಾತ್ರೆಗಳ ಲಯ ನಿಮ್ಮ ಪದ್ಯದಲ್ಲಿ ಬರಬೇಕು.
        ಹಿತ್ತ / ಲಂದಣ / ದ ಬಿಳಿಮಲ್ಲೇ ( ದಬಿಳಿ – ಮಾತ್ರೆಗಳ ಲೆಕ್ಕಾಚಾರ ಸರಿಯಿದ್ದರೂ ಅರ್ಥ ತೊಡಕು, ಮಲ್ಲೇ -, ಏ ಮಲ್ಲಿಗೆಯೇ ಎಂಬ ಸಂಬೋಧನೆಯ ಭಾವ ಪದ್ಯದಲ್ಲಿ ಮುಂದುವರೆದಿಲ್ಲ.)
        ಕತ್ತಲಂಬರದೆ ಬೆಳುದಲ್ಲೇ (ಬೆಳುದಲ್ಲೇ? ಬೆಳೆದುದಲ್ಲೇ ಎಂದರೆ ಕಡಿಮೆಯಾದ ಒಂದು ಲಘು ಸೇರಿಕೊಳ್ಳುತ್ತದೆ)
        ಹೊತ್ತು ತಂದಿಹ ಸೊಂಪದುವನಾರೆಂದು ನಾಬಲ್ಲೆಂ।
        ಸುತ್ತಿ ನಾಮುಡಿಯೆ ತುರುಬಲ್ಲೇ ( ಇಲ್ಲಿಯೂ ’ಯೆತುರು’ ’ಬಲ್ಲೇ” ಎಂದು ಒಡೆದುಕೊಳ್ಳುವ ಗಣಗಳ ಬದಲಾಗಿ, ಸುತ್ತಿ ಮುಡಿಯಲು ತುರುಬಿನಲ್ಲೇ ಎಂಬ ರೀತಿಯ ಪದಗಳಿಂದ ಲಯ ಅಬಾಧಿತ)
        ನೆತ್ತ / ನೋಡಿದ / ಡೆ ನಗು/ ವಲ್ಲೇ (ಇದೂ ಅಂತೆಯೆ, ಎತ್ತ ನೋಡಲು ನಗುವುದಲ್ಲೇ ..ಎಂದರೆ, ’ಡೆನಗು ’ ಎಂಬ ಮಾರ್ಗಭಂಗವನ್ನು ದಾಟಬಹುದು.
        ಮತ್ತು ತಂದಿಹ ಕಂಪದುವದೇನೆಂದು ನಾಸೊಲ್ಲೆಂ । (ಕಂಪದು+ಅದೇನೆಂದು – ಕಂಪದೇನೆಂದು, “ಕಂಪದುವದೇನೆಂದು” ಸಾಧುವಲ್ಲ. ಸೊಲ್ಲೆಂ ಪದ “ನಾನು ಹೇಳುವುದಿಲ್ಲ” ಎಂಬ ಭಾವವನ್ನು ತರಲು ಯತ್ನಿಸಿರುವಂತಿದೆ . ಸೊಲ್ ಎಂಬ ಪದಕ್ಕೆ ಮಾತು, ನುಡಿ ಎಂಬ ಅರ್ಥವಿದ್ದರೂ, ಪೇಳೆಂ = ಹೇಳೆನು ಎಂದಾಗ ಸೂಕ್ತವಾಗಬಹುದು. “ಮತ್ತು ತಂದಿಹ ಕಂಪದೇನದೊ ಪೇಳಲೆಂತಹುದೋ… ಮತ್ತು ತಂದಿಹ ಕಂಪದೇನದೊ ಸೊಲ್ಲಿಗಳವಲ್ಲಂ.. ಹೀಗೆ ಮಾಡಬಹುದು. ಮುಖ್ಯವಾಗಿ ಗಮನಿಸಬೇಕಾದದ್ದು ಇಷ್ಟು. ಭಾಮಿನಿಯಲ್ಲಿ ಪದಗಳು ಆದಷ್ಟೂ ಮೂರು ನಾಲ್ಕುಗಣಗಳಲ್ಲಿ ಸೆರೆಯಾಗಿ, ಓದಿಕೊಂಡಾಗ ಆ ತಕಿಟ ತಕದಿಮಿ ಎಂಬ ಲಯದ ಜಾಡು ತಿಳಿದುಬರುವಂತೆ ಪದಗಳೂ ಸಂಧಿಗಳೂ ಯೋಜಿತವಾಗಬೇಕೇ ಹೊರತು, ಸಾಲಿನಲ್ಲಿ ಹದಿನಾಲ್ಕು ಮಾತೆಗಳು ಬಂದರೆ ಸಾಲದು. ಛಂದೋಬದ್ಧಪದ್ಯ ಭಾವಶರೀರದ ತೊಡುಗೆ. ಅಳತೆಸರಿಯಿಲ್ಲದ ಬಟ್ಟೆತೊಟ್ಟ ಸುಂದರ ಶರೀರವಾಗದೆ,ಸೊಗಸಾದ ಸರಿಯಾದ ವಸ್ತ್ರವನ್ನು ಧರಿಸಿದ ರುಗ್ಣಶರೀರವಾಗದೆ ಅರ್ಥಸ್ವಾರಸ್ಯ ಸುಂದರಬಂಧದಲ್ಲಿ ಅಡಕವಾದಾಗ ಓದಲು ಖುಷಿಯಾದೀತು.

        ಹಿತ್ತಲೊಳು ಬೆಳೆದಿರ್ದರೇನದು
        ಮುತ್ತಿನೊಳು ಕೆತ್ತಿರುವ ಬಿಳುಪಿನ
        ಮತ್ತನೇರಿಪ ಗಂಧ ಬಂಧುರವಾದ ಮಲ್ಲಿಗೆಯ
        ಸುತ್ತಿ ಮುಡಿಯಲು ಪದ್ಯರೂಪದಿ
        ಯತ್ನಿಸುತ್ತಿಹ ಭಾಮಿನಿಯ ಕೃಷಿ
        ಹೊತ್ತಿಸಲಿ ಕವಿಕಿರಣ ಗತಿಯುಷೆ ಮೂಡೆ ಸೊಗಸಿಂದಂ

        ಪರಿಷ್ಕೃತಪದ್ಯವನ್ನು ನಿರೀಕ್ಷಿಸೋಣವೇ..

    • ಧನ್ಯವಾದಗಳು ಚಂದ್ರಮೌಳಿ ಸರ್,
      ನನಗೀಗ ನನ್ನ ತಪ್ಪಿನ ಅರಿವಾಗುತ್ತಿದೆ. ನನ್ನ ಪದ್ಯದಲ್ಲಿ ನಿಮಗೆಲ್ಲ ಬೇಸರ ತರಿಸಿದ “ಹೂವಿನರಳು” ಅರ್ಥವಾಗಿದೆ. ದಯವಿಟ್ಟು ಕ್ಷಮಿಸಿ.”ರೀತಿ”ಯೇ ಸರಿಯಿಲ್ಲದ ಉಡುಗೆಯನ್ನು ತೊಡಿಸುವ ನನ್ನ ಪದ್ಯರಚನೆಯ ಪ್ರಯತ್ನವನ್ನ ಸವಿವರವಾಗಿ ಮನದಟ್ಟು ಮಾಡಿಸಿದ ನಿಮಗೆ ನಾನು ಚಿರಋಣಿ . ನಿಮ್ಮ ಪದ್ಯ “ಮನದ ಒದ್ದೆ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಮಲ್ಲಿಗೆ ದಂಡೆಯನ್ನು ಮತ್ತೆ ಮುಡಿದ” ಸಂಭ್ರಮ ತಂದಿದೆ.ಪದ್ಯಪಾನದ ಈ “ಪುಷ್ಪೋತ್ಸವ”ಕ್ಕೆ ನನ್ನ “ಶಿಶುಗೀತೆ”ಯ ಈ ಒಂದು ಸಾಲು : “ಬರಿದೆ” ಬಾಳ್ವ ಮನುಜ ಕಂಡ “ಬಿರಿದು” ಬಾಳ್ವ ಬಗೆಯು.

      ಈಗ “ಚಂಪಕ ಮಾಲೆ”ಯಲ್ಲಿ “ಹೂವಿನಲರು”:
      ಚುಮಚುಮು ಮೊಬ್ಬುಮೊಬ್ಬಿನಲಿ ಮಂಗಳದಂಗಳದೇನಿದಿಬ್ಬನಿಂ
      ಚಿಮುಕಿಸೆ ನೀರ ನೀರಹನಿ ನೇಸರನೇನದನಮ್ಮನಂದದಿಂ
      ಸುಮನಸ ರಂಗು ರಂಗವಲಿ ಹಾಗವ ಹಾಕಿರೆ ಚಿತ್ರ ಚಂದದಿಂ
      ಚಮಕಿಸೆ ಹೊನ್ನ ಹಿನ್ನೆಲೆಯ ತಂದವ ತುಂಬಿರೆ ಗುಮ್ಮನಂದದಿಂ।

      (“ದಿನ ನಿತ್ಯದ ಬಣ್ಣ ಬಣ್ಣದ ಹೂಗಳ ಅರಳು”- ನಿತ್ಯ ಸೂರ್ಯ ಅಂಗಳಕ್ಕೆ ನೀರು ಚಿಮುಕಿಸಿ ಬಣ್ಣದ ಹೂವ ರಂಗೋಲಿ ಹಾಕುವ ಅಮ್ಮನಂತೆ.)

      • ಜಗಲಿಯ ದಾಟಿ ನಂತರದಿ ಹಾರು ನಭಕ್ಕೆನಲೇನಿದೊಮ್ಮೆಯೇ
        ಗಗನವ ದಾಟಿದೀಪರಿಯು ಭಾವಿಸಲಕ್ಕಜಮಲ್ತೆ :)- ಚಂಪಕಂ
        ಝಗಝಗಿಸುತ್ತಲಂಕರಣ ಗೊಂಡಿಹ ಶಬ್ದವಿಜೃಂಬಿಸಿರ್ಪುದಯ್
        ಸೊಗಸಿತುಸೋದರೀ,ನುಡಿಯಜಾಲಿಸಿತಿದ್ದಿರಿ ಇಬ್ಬನಿಂಗಳಂ’

        • ಸರ್, ಇದು ನಿಮ್ಮ ಅಕ್ಕರೆಯ ಪ್ರಭಾವ. ಆದರೆ, ನೀವು ತಿದ್ದಲು ಹೇಳಿರುವ ಅಕ್ಕರವಾವುದೆಂದು ಅಕ್ಕ ಕೇಳಿದರೆ ಮತ್ತೆ ನಿಮಗೆ ಅಕ್ಕಜವಾಗಬಹುದು!

          • ಒಹ್ , ಮೊದಲನೇ ಸಾಲು “…….ಮಂಗಳದಂಗಳದಿಬ್ಬನಿಂಗಳಂ” ಆಗಬೇಕಲ್ಲವೇ?

  6. ಎತ್ತ “ನೋಡಿದಡೆ” ನಗುವಲ್ಲೇ
    ಮುಂದೆ ಮಲ್ಲೆ ಮುಡಿದ ಹಿಗ್ಗಿನ ನಗು. ಹಿಂದೆ ತುರುಬ ಮಲ್ಲೆ ಮೊಗ್ಗಿನ ನಗು !!

  7. ಗೆಳೆಯ ರವೀಂದ್ರರ ಕೇಳ್ಮೆಯೇನು? ಇಷ್ಟ ಛಂದಸ್ಸಿನ ಉದಾರ ಸರಾಗ ರಾಗದಲ್ಲಿ ಹೂವನ್ನು ಕುರಿತು ಹಾಡಿಕೊಳ್ಳಿ ಎಂದು. ಆದರೆ, ರಾಗರು ಶತಾವಧಾನೋತ್ಸವಪ್ರಿಯಭೋಜನಭಾಜನರಾಗಿ ಕಷ್ಟಪಾಕವನ್ನುಕೊಟ್ಟು ಏಕರೂಪಾಶುವನ್ನು ಅಷ್ಟರಾಗಮಾಲಿಕೆಯಲ್ಲಿ ಹಾಡುವಂತೆ (ಏಂಟು ವಿವಿಧ ಛಂದದಲ್ಲಿ) ಸೂಚಿಸಿರುವುದು ಕ್ರೀಡೋತ್ಸಾಹವರ್ಧಕ. ಇಲ್ಲಿನ ಪದ್ಯಗಳು ರಾಗರು ಸೂಚಿಸಿರುವ ವೃತ್ತವೈವಿಧ್ಯವಿಧಿಯಲ್ಲೇ, ಪದ್ಯಗರ್ಭನಾಮರೂಪದಲ್ಲಿದೆ. ’ವಿದಳಿತಸರಸಿಜ ’ ಕ್ರಮ ಈ ದಳಿತಮತಿಗೆ ಅವಗತವಾಗದೆ, ’ ಕಮಲವಿಲಸಿತ ’ವಾಗಿದೆ. ಈ ಯತ್ನ ಕವಿತ್ವಪ್ರತಿಭಾಕ್ರೀಡೆಯಲ್ಲ. ಕೊಟ್ಟ ಬಟ್ಟೆಗಳಿಗೆ ತುಂಬಿರುವುದು ಹತ್ತಿಯೋ ಬೊಂಬೆಯದೇಹವೋ, ಕೂಟದಲ್ಲೊಂದು ಆಟವಷ್ಟೇ.

    ಅರಳಿದೆ ಚಂಪಕಂ, ಗಿಡದಿ ಕಾಣುವ ಸಂತಸ ಬಿಟ್ಟು, ಕೀಳ್ವರಂ
    ಕೊರಳಿಗೆ ದಾರವಂ ಬಿಗಿದ ಮಾಲೆಯ ಹಾಕಿಸಿಕೊಂಬಧೂರ್ತರಂ
    ಇರುಕಿಸಿ ಕಟ್ಟಿನಿಂ ಚಳಿಯ ಬಂಧನದೊಳ್ ಪರದೇಶಕೊಯ್ವರಂ
    ಕೊರೆದೆದೆಯಂ ವಿಘಾತಿಪೆಯ ಜೀವರ ಮನ್ಮಥ ಬಾಣವಾಗುತಂ

    ರಂಗಿನ ಚಿತ್ತ ವೃತ್ತಿಗಳೊ ಕೋಮಲದುತ್ಪಲ ಸತ್ಪ್ರಭಾವಮೋ
    ಪೊಂಗಿಹ ಚೆಲ್ವ ಬಿತ್ತಗಳೊ ದೇವತೆಗಳ್ಪಿಡಿದಿರ್ಪಶಾಂತಮೋ
    ಮಂಗಳ ಕಾರ್ಯವರ್ತಿಗಳೊ ಜೀವನಸಾರ್ಥಕದರ್ಥಟೀಕೆಯೋ
    ಕಂಗಳೊ ವಿಶ್ವರೂಪಕೆನಲೀ ಸುಮರಾಜಿಯ ಮೌನ ಬೋಧವೇಂ

    ಆಡಿ ತೂಗುತ ದುಂಬಿ ಯಾಟಕೆ ಜೇನ ಸೇರಿಸಿ ಹಿಗ್ಗುತಂ
    ಕೂಡಿ ಮಲ್ಲಿಗೆ ಮಾಲೆ ಯಾಗುತ ಚಿತ್ಪ್ರಭಾವವ ಬೀರುತಂ
    ನೀಡಿ ಸಾರ್ಥಕ ವನ್ನು ತಾಯಿಯ ಬಾಳ ಬೇರಿನ ಸತ್ವಕಂ
    ಬಾಡಿ ಬೀಳುವ ಬಾಳಿಗರ್ಥವ ತೋರಿ ನಿಂತೆಯ ಮಲ್ಲಿಕಾ

    ಮಧುರಸ್ಮಿತ ಮಾಲಭಾರಿಣಿಯೇ
    ಮಧುರಾಶಾಂಬುಧಿ ಮಾನಸಾಗ್ರಣೀ ನೀಂ
    ಸುಧೆಯೂರುವ ಸುಂದರಾಂಗಿಣಿಯೇ
    ವಿಧುರೂಪಾಂತರ ಗೊಂಡಪುಷ್ಪವೇಂ ನೀಂ?

    ಅಮಲೊಳು ನಗರದ ಘಮಲೊಳಗಿರ್ಪೈ
    ಸುಮಗಳ ವಿಷಯದ ಸೊಗಡಣಮಿಲ್ಲೈ
    ಕಮಲ ವಿಲಸಿತವ ಗಮನಿಸಿ ನೋಡಲ್
    ಅಮಲಿನ ಮನಸದು ನಿನಗಿರಬೇಕಯ್

    ನೀನಿಲ್ಲದೆಂತು ಕವಿಕಾವ್ಯ ವಸಂತಭಾವಂ
    ಬಾನಿಲ್ಲದಂಥ ಶಶಿದೇವ ನನಾಥ ಜೀವಂ
    ನಿನ್ನಾಳ್ಕೆಯಿಲ್ಲದಿಹ ದೈವದ ರೂಪಮುಂಟೇ
    ಧನ್ಯಳ್ ಸುಗಾತ್ರಿ ತಿರೆನಕ್ಕ ಸುಹಾಸರೂಪೀ

    ಯೋಚಿಸುತೇನನು ತನ್ನೊಳೆ ಹಿಗ್ಗುತ ರಾಗದಿ ನಕ್ಕಿದೆ ತಾವರೆ? ಮೈ
    ಚಾಚಿತೆ ದೈನ್ಯದ ಮೊಗ್ಗಿನ ಬಗ್ಗಿದ ಬಾಳನು ಗೆಲ್ದುದೆ ಕಾರಣವೇಂ?
    ಪಾಚಿಯೊಳದ್ಭುತ ಸೃಷ್ಟಿಗದೇಂ ವನಮಂಜರಿ ಮಾಡಿದೆ ಸಾಧನೆ? ಸಂ
    ಕೋಚದಿ ನಾಚದೆ ಬಾಯ್ದೆರೆದಾಡುವ ಗುಟ್ಟದಪೇಳ್ ಪರಿಪಾಲಿಪೆವಾಂ

    ಕೋಪದಿಂ ದಿರ್ಪಳೇಂ ಗೋಕುಲಾಧೀಶ ರಾ
    ಧಾಪರಿಷ್ವಂಗವನ್ನೊಲ್ಲೆನೆಂದೆಂದಳೇಂ
    ವ್ಯಾಪಿಸಿತ್ತಂಬುಜಂ ತಬ್ಬಿರಲ್ ಕಣ್ಣನುಂ
    ತಾಪದಿಂ ಮತ್ಸರಂ ಸ್ರಗ್ವಿಣೀ ಮುತ್ತಿಡಲ್

    • ಸಹಜಕವಿ! ಚಂದ್ರಮೌಳಿ! ಪ್ರ-
      ವಹಿಸಿರ್ಪೀ ಪದ್ಯಪುಷ್ಪಮಾಲಾಝರಿಯಿಂ|
      ವಿಹಿತಾನಂದಸಮುದ್ರ-
      ಕ್ಕಹಹಾ ನಾಂ ಸೇರ್ದೆನಲ್ತೆ ಮಧುಬಿಂದುವೊಲೇ||

      • ಮಧುಬಿಂದುವೊ ಸುರಸಿಂಧುವೊ
        ಬುಧರರಿವರು ತಥ್ಯಸತ್ಯ :)- ನುಡಿಗಿದೊನಮನಂ

  8. ಇನ್ನೊಂದು ಹೂವಕಾಣಿಕೆ

    ನಿದ್ದಿರೆಯೊಳ್ ಜಗಂ ಮುಳುಗೆ ನೀರೊಳು ನಿಂದಿಹ ನೀರೆಯಾರಿವಳ್ |
    ಕದ್ದಿರುಳಾಗೆ ಕಾದಲನ ಕಂಡೊಲವುಕ್ಕುತ ನಕ್ಕಲರ್ದವಳ್ |
    ಸುದ್ದಿಯು ಪೊೞ್ತೊಡಂ ಪರವಿ ಸುರ್ರನೆ ನಾಣ್ಚಿ ಸುರುಂಟಿಕೊಂಡವಳ್ |
    ಮುದ್ದಿನಮುದ್ದೆ ನೈದೆಲೆಯೆ ಮುಚ್ಚಿಡಲಕ್ಕುಮೆ ಇನ್ನಳಂದಮಂ! ||

  9. ಕಿಲಕಿಲ ನಗುತಿರ್ಪ ಸ್ವರ್ಗಜನ್ಯೇ
    ನೆಲವಿದ ಪಾವನಗೆಯ್ದ ಪುಷ್ಪಿತಾಗ್ರೇ
    ಕಲುಷರಹಿತಳಿರ್ಪೆಯೌ ಪ್ರಸನ್ನೇ
    ನಲಿವಿಗೆ ಕಾರಣ ಧನ್ಯಭಾವವೇನೇ?

    ಈಗ ೧೫ ದಿನದಿಂದ ನಮ್ಮ ಮನೆಯಲ್ಲಿ ಪಾರಿಜಾತ ಬಿಡುತ್ತಿದೆ.
    ಪಾರಿಜಾತ ಬೆಳಿಗ್ಗೆಯ ಹೊತ್ತಿಗೆ ನೆಲದ ಮೇಲೆ ಉದುರಿರುವುದನ್ನು ಗಮನದಲ್ಲಿಟ್ಟುಕೊಂಡು (ಪುಷ್ಪಿತಾಗ್ರದಲ್ಲಿ) ಬರೆದಿದ್ದೇನೆ.

    • ಗಾಯತ್ರಿಯವರೆ
      ಸೊಗಸಾಗಿದೆ ಈ ನಿಮ್ಮ ಅರ್ಧಸಮವೃತ್ತ. ನಿಮಗೆ ತಿಳಿದಿರಬಹುದು- ಪುಷ್ಪಿತಾಗ್ರಕ್ಕೆ ಎರಡು ರೂಪಗಳುಂಟು;- ಮೊದಲು ಮತ್ತು ಮೂರನೆಯ ಪಾದಗಳು ಒಂದೇ ರೀತಿ. ಎರಡು ಮತ್ತು ನಾಲ್ಕನೆಯ ಪಾದಗಳಲ್ಲಿ ಭೇದ. ಒಂದು ನೀವು ಬಳಸಿರುವ ಹಾಗೆ “ನ-ಜ-ಜ-ರ-ಗ”. ಇನ್ನೊಂದು “ನ-ಜ-ಲ-ರ-ಯ”.

      ಒಂದು ಸುಚನೆ- ಸ್ವರ್ಗಜನ್ಯೆ ಎಂದು ಹಾಕಿ ಸುಮ್ಮನೆ ಶಿಥಿಲದ್ವಿತ್ವದ ಬೆನ್ನೇಕೆ ಹತ್ತಬೇಕು? ಬದಲಾಗಿ ಸಗ್ಗಜನ್ಯೇ ಎಂದು ಹಾಕಬಹುದಲ್ಲ.

    • ಚೆನ್ನಾಗಿದೆ ಗಾಯತ್ರಿ.

      ಶ್ರೀಕಾಂತರೆ, ಸಗ್ಗಜನ್ಯೆ ಅರಿಸಮಾಸವಾಯಿತಲ್ಲವೇ?

      • ಶ್ರೀಕಾಂತ್ ಮತ್ತು ಜೀವೆಂ , ಧನ್ಯವಾದಗಳು.

        ಶ್ರೀಕಾಂತರೇ, ಪುಷ್ಪಿತಾಗ್ರದ ಒಂದು ರೂಪ ಮಾತ್ರ ನನಗೆ ಗೊತ್ತಿತ್ತು, ಅದೂ ಪದ್ಯಪಾನದಲ್ಲಿ ತಿಳಿಸಿರುವುದರಿಂದ. ಮತ್ತೊಂದು ರೂಪವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
        ನೀವು ಸಂಗೀತ ಪ್ರೇಮಿಗಳೂ ಆಗಿರುವುದರಿಂದ ನನ್ನ ಒಂದು ಪದ್ಯ ಇಲ್ಲಿದೆ
        http://padyapaana.com/?p=1153#comments
        ಅದನ್ನೂ ನೋಡಿ.

        • ಗಾಯತ್ರಿಯವರೆ- ಚೆನ್ನಾಗಿದೆ ರಾಗವಿರಾಜಿತ ಪದ್ಯ. ನನ್ನ ಪೂರ್ವಪರಿಚಯವಿದ್ದ ಹಾಗಿದೆಯಲ್ಲ ನಿಮಗೆ?

          • ಇಂಟರ್ನೆಟ್ ಪರಿಚಯವಷ್ಟೇ. ಹಾಗೆಯೇ ಯೂಟ್ಯೂಬ್ನಲ್ಲಿ ಟಿ ಎಸ್ ಸತ್ಯವತಿಯವರು ಹಾಡಿರುವುದು ನಿಮ್ಮ ಕೃತಿಯನ್ನು ತಾನೇ?

          • ಹೌದು 🙂

      • ಇದೇನು ಎಲ್ಲರೂ ಅರಿಸಮಾಸವನ್ನು ಹಿಡಿದು ಕೊಂಡಿರುವ ಹಾಗಿದೆಯಲ್ಲ 🙂 ಸಗ್ಗಜನ್ಯೇ ತದ್ಭವವಷ್ಟೆ. ಅದೇನೂ ಅಚ್ಚಗನ್ನಡ ಪದವನ್ನು ಸಂಸ್ಕೃತ ಪದಕ್ಕೆ ಸೇರಿಸಿ ಮಾಡಿದ ಸಮಾಸವಲ್ಲ. “ಸಿರಿಕಂಠ”, “ಸಿರಿಪತಿ”- ಇವೆಲ್ಲ್ಸ್ ಸಿಸಮಾಸವೇನು?

        • *ಇವೆಲ್ಲ ಅರಿಸಮಾಸವೇನು?

          • ಹಾಗಿದ್ದಲ್ಲಿ ನಾನು ಘಟಾನುಘಟಿಗಳ ಸಂಗದಲ್ಲಿದ್ದೇನೆ- ಬಾಧಕವಿಲ್ಲ ಬಿಡಿ 🙂 ಕುಮಾರವ್ಯಾಸನೆ “ವೇದಪುರುಷನ ಸುತನ—-” ಪದ್ಯದಲ್ಲಿ “ಅನಾದಿಮೂರುತಿ” ಎಂದು ಬಳಸಿದ್ದಾನಲ್ಲ. ಶಿಥಿಲದ್ವಿತ್ವಕ್ಕಿಂತ ಇದನ್ನು ನಾನೆಂದಾದರು ಆಯ್ದುಕೊಳ್ತೀನಿ.

        • ಷಡರಿಗಳ ಜೊತೆ ಇದೊಂದು ಸಪ್ತಮಾರಿ, ಯಾರನ್ನೂ – ಸಿರಿಕಂಠ ಸಿರಿಪತಿಯರನ್ನೂ – ಬಿಡದು 🙂 ಅರಿಸಮಾಸದ ಲೆಕ್ಕಕ್ಕೆ ತದ್ಭವಪದಗಳನ್ನು ದೇಸೀ ಗುಂಪಿಗೇ ಸೇರಿಸಬೇಕು ಅದಾಗಿ ಸಗ್ಗಜನ್ಯೆ ಅರಿಸಮಾಸವೆ.

          • ಹಾಗಿದ್ದಲ್ಲಿ ನಾನು ಘಟಾನುಘಟಿಗಳ ಸಂಗದಲ್ಲಿದ್ದೇನೆ- ಬಾಧಕವಿಲ್ಲ ಬಿಡಿ. ಕುಮಾರವ್ಯಾಸನೆ “ವೇದಪುರುಷನ ಸುತನ—-” ಪದ್ಯದಲ್ಲಿ “ಅನಾದಿಮೂರುತಿ” ಎಂದು ಬಳಸಿದ್ದಾನಲ್ಲ. ಶಿಥಿಲದ್ವಿತ್ವಕ್ಕಿಂತ ಇದನ್ನು ನಾನೆಂದಾದರು ಆಯ್ದುಕೊಳ್ತೀನಿ.

  10. ಬಗೆಬಗೆ ಮುತ್ತನು ಪಚ್ಚೆ ವಲ್ಲಿಗೇ |
    ಬಗೆಬಗೆದೆಚ್ಚಿದ ಭರ್ಗ! ವಲ್ಲಿಗೇ |
    ಸೊಗ! ಸೊಗಸೆನ್ನಲು ಸೋಲು ಸೊಲ್ಲಿಗೇ |
    ಮಗಮಗವೆನ್ನೆ ಸಮಂತು ಮಲ್ಲಿಗೇ ||

    ಮಾಲತಿ ವೃತ್ತದಲ್ಲಿ ಮಲ್ಲಿಗೆಯ ಮೇಲೆ. ಬ್ರಹ್ಮನೆ ಸೃಷ್ಟಿಯಾದ ಮಲ್ಲಿಗೆಗೆ ಅಚ್ಚರಿ ವ್ಯಕ್ತಪಡಿಸುತ್ತ ಅದನ್ನು ವರ್ಣಿಸಲಸದಳ ಎಂಬಂತೆ. ಮಲ್ಲಿಗೆ ಗಿಡದ ಹಸಿರೆಲೆಗಳನ್ನು ಪಚ್ಚೆಯೆಂದೂ (ಅದರಿಂದ ಮಾಡಿದ ಉತ್ತರೀಯ), ಮಲ್ಲಿಗೆಹೂವನು ಮುತ್ತೆಂದೂ ರೂಪಕಾಲಂಕಾರ ಬಳಸಿದ್ದೇನೆ.

    • ಏಬಗೆ- ಯಾವ ರೀತಿ?
      ಬಗೆದು- ಕಲ್ಪಿಸಿ/ ಭಾವಿಸಿ
      ಎಚ್ಚು- ಹಚ್ಚು/ಕೂರಿಸು
      ಭರ್ಗ- ಬ್ರಹ್ಮ
      ವಲ್ಲಿ- ಭೂಮಿ
      ಸಮಂತು- ಚೆನ್ನಾಗಿ

  11. ಶ್ರೀಕಾಂತ್ ಅವರಿಗೆ ಅರಿಸಮಾಸದ ಬಗೆಗೆ ತುಂಬ “ಅರಿತ್ವ”(ಶತ್ರುತ್ವ)ವಿದ್ದಂತಿದೆ:-)
    ಕುಮಾರವ್ಯಾಸನು ದಿಟವಾಗಿ ಮಹಾಕವಿ, ಆತನ ಬಗೆಗೆ ನನ್ನ ಮೆಚ್ಚುಗೆ-ಗೌರವ-ಅಭಿಮಾನಗಳು ಅಪಾರ. ಆದರೆ ಅವನನ್ನು ವ್ಯಾಕರಣಕ್ಕಾಗಿ ಎಂದೂ ಅವಲಂಬಿಸಬಾರದು. ಅವನಷ್ಟು ಪ್ರತಿಭೆಯಿರುವವರು ಮಾತ್ರ ಹಾಗೆ ಭಾಷೆಯನ್ನು ಮನಬಂದಂತೆ ಬಳಸಬಹುದು. ಇದು ನನ್ನ ಅಭಿಪ್ರಾಯ ಮಾತ್ರವಲ್ಲ, ಕುವೆಂಪು,ತೀನಂಶ್ರೀ,ಡಿವಿಜಿ,ಸೇಡಿಯಾಪು, ಗೋವಿಂದ ಪೈ, ರಂಗನಾಥಶರ್ಮಾ ಮುಂತಾದ ಅನೇಕಕವಿ-ವಿದ್ವಾಂಸರ ಅಭಿಪ್ರಾಯವೂ ಹೌದು. ಜಿವೆಂ ಅವರೆಂದಂತೆ ಸಗ್ಗಜನ್ಯೆ ಅರಿಸಮಾಸ. ಶಿಥಿಲದ್ವಿತವನ್ನು ಶಾಸ್ತ್ರ ಒಪ್ಪಿದೆ. ಹೀಗಾಗಿ ಅದನ್ನು ಕೆಲಮಟ್ಟಿಗೆ ಗ್ರಹಿಸಬಹುದು. ಅರಿಸಮಾಸವಾದರೂ ಶ್ರುತಿಕಟುವಲ್ಲದ ಎಡೆಗಳಲ್ಲಿ ಸಹ್ಯ. ಇಲ್ಲೆಲ್ಲ ಶಿಷ್ಟಸಂಮತಿಯೇ ಮುಖ್ಯ. ಶಿಷ್ಟರೆಂದರೆ ಭಾಷೆಯ ಒಳಹೊರಗನ್ನು ಬಲ್ಲ, ಬಾಧ್ಯತೆಯನ್ನೂ ಉಳ್ಳ ವಿದ್ವತ್ಕವಿಗಳು. ಅವರನ್ನು ನಾನು ನಚ್ಚುತ್ತೇನೆ:-)
    ಅಂದಹಾಗೆ ನೀವು ಪುಷ್ಪಿತಾಗ್ರದ ಬಗೆಗೆ ಹೇಳುವಾಗ ಅದು ಎರಡು ಬಗೆಯಲ್ಲಿರುವ ಛಂದಸ್ಸೆಂಬಂತೆ ತಿಳಿಸಿದುದನ್ನು ಗಾಯತ್ರಿಯವರು ಬೇರೊಂದು ತೆರನಾಗಿ ಅರ್ಥಮಾಡಿಕೊಂಡಂತಿದೆ. ಇನ್ನೂ ಹಲವರಿಗೆ ಪುಷ್ಪಿತಾಗ್ರಕ್ಕೆ ಇಬ್ಬಗೆಯ ಲಕ್ಷಣವಿರುವುದೆಂಬ ಭಾವವು ಬಂದಿರಬಹುದು. ಆದರೆ ನಿಮ್ಮ ಅಭಿಪ್ರಾಯವಿಂತಿಲ್ಲವೆಂದು ಭಾವಿಸುವೆ. ನೀವು ಅದು ಅರ್ಧಸಮವೃತ್ತವಾದ ಕಾರಣ ಅದರ ಸಮ-ವಿಷಮಪಾದಗಳಿಗೆ ಬೇರೆ ಬೇರೆಯಾಗಿ ಲಕ್ಷಣವನ್ನು ಹೇಳಬೇಕಾದೀತೆಂದು ಇಂಗಿತವನ್ನು ತಳೆದು
    ಬರೆದಿದ್ದೀರಿ. ಇದು ಸರಿ. ಆದರೆ ಇದರಿಂದ ಪುಷ್ಪಿತಾಗ್ರವೆಂಬ ವೃತ್ತವೇ ಇಬ್ಬಗೆಯಲ್ಲಿದೆಯೆಂಬ ನಿಗಮನ ಪ್ರಮಾದಕರ. ವಸ್ತುತಃ ಇದು ಒಂದೇ ವೃತ್ತ. ಆದರೆ ಅದರ ಲಕ್ಷಣವನ್ನು ಪೂರೈಸಲು ಸಮ-ವಿಷಮ(ಯುಕ್ ಮತ್ತು ಓಜ ಪಾದಗಳೆಂದು ಶಾಸ್ತ್ರದ ಪರಿಭಾಷೆ)ಪಾದಗಳೆರಡರ ವಿವರಗಳನ್ನೂ ಕೊಡಬೇಕು.
    ಇರಲಿ, ಯಾರಿಗೆ ಎಲ್ಲಿ ಭ್ರಮೆಯಾದೀತೋ ಎಂಬ ಕಕ್ಕುಲಾತಿಯಿಂದ ವಿಸ್ತರಿಸಿದ್ದೇನೆ. ಅನ್ಯಥಾ ಭಾವಿಸಿ ಬೇಸರಿಸದಿರಿ:-)

    • ಗಣೇಶರೆ
      ಅರಿಸಮಾಸದ ಬಗ್ಗೆ ಇವತ್ತು ಮತ್ತೆ ಓದಿಕೊಂಡೆ. ಶಾಸ್ತ್ರಕ್ಕೆ ನಾನು ಖಂಡಿತ ಮನ್ನಣೆ ಕೊಡುತ್ತೇನೆ. ಆದರೆ, ಹಿಂದಿನವರಾರೂ ಶಾಸ್ತ್ರ ಹಾಕಿದ ಗೀಟನ್ನು ದಾಟದಿದ್ದರೆ ಭಾಷೆ ಬೆಳೆಯುತ್ತಿತ್ತೆ? ಅದೂ ಹೋಗಲಿ, ಶಿಥಿಲದ್ವಿತ್ವದ ಬಗ್ಗೆ ನಾನಿನ್ನೊಂದು ಕಡೆ ಹೇಳಿದಂತೆ, ಸಂಸ್ಕೃತ ಪದಗಳಿಗೆ ಅನ್ವಯಿಸಿದ್ದನ್ನು ನಾನು ತಿಳಿದಿಲ್ಲ. ಇದನ್ನು ಸರ್ವೇಸಾಧಾರಣವಾಗಿ ಒಪ್ಪಿ/ಬಳಸಿ ಅರಿಸಮಾಸದ ಕಡೆಗೆ ಕೆಂಗಣ್ಣು ಮಾಡೊದು ನನಗೆ ಯಾಕೊ ಸರಿ ಅನ್ನಿಸಲಿಲ್ಲ ಅಷ್ಟೆ.

      ಪುಷ್ಪಿತಾಗ್ರ- ಎರಡು ಬೇರೆಯ ಲಕ್ಷಣಗಳಿದೆ ಅನ್ನೋ ಭಾವದಲ್ಲೆ ನಾನು ಬರೆದಿದ್ದು. ಇದಕ್ಕೆ ಈ ಲಿಂಕನ್ನು ನೋಡಿ. ಈ ಬರಹಗಳನ್ನು ನಾನು ತುಂಬ ಮೆಚ್ಚಿದ್ದೇನೆ

      http://groups.yahoo.com/group/Chandassu/message/4958

      • ಒಳ್ಳೆಯದು. ನಿಮ್ಮಭಿಪ್ರಾಯಕ್ಕೆ ನಾನು ತತ್ತ್ವತಃ ವಿರೋಧಿಯಲ್ಲ. ಆದರೆ ಪದ್ಯಪಾನದಂಥ ತಾಣದಲ್ಲಿ, ಮೊತ್ತ ಮೊದಲಿಗೆ ಶಾಸ್ತ್ರ-ಸೂತ್ರಗಳನ್ನು ಸರಿಯಾಗಿ ಅರಿತು ಬಳಸಿ ಪ್ರಬುದ್ಧವಾಗುವ ಮುನ್ನವೇ ಆವುಗಳನ್ನು ಮುರಿಯುವ ಸಾಹಸ ಆಯುಕ್ತವೆಂದು ನನ್ನ ನಿಲವು. ಇಲಲ್ವಾದರೆ ಛಂದಸ್ಸಾಗಲಿ, ಪ್ರಾಸವಾಗಲಿ ವ್ಯಾಕರಣವಾಗಲಿ ಯಾಕೆ ಬೇಕು? ವೈಯಕ್ತಿಕವಾಗಿ ನಾನು ಆದಿಪ್ರಾಸಕ್ಕೆ ಮಿಗಿಲು ಕಪ್ಪ ನೀಡಲಾರೆ. ಆದರೆ ಅವಧಾನಗಳಲ್ಲಿ, ಇಲ್ಲಿ ಹಾಗೂ ಇನ್ನೂ ಕೆಲವೆಡೆ ಅದನ್ನು ನಿಯತವಾಗಿ ಪಾಲಿಸುತ್ತೇನೆ. ಅರಿಸಮಾಸವಾಗಲಿ, ಶಿಥಿಲದ್ವಿತ್ವವಾಗಲಿ( ಮಹಾಕವಿಗಳು ಸಂಸ್ಕೃತ-ಕನ್ನಡ ಪದಗಳ ಮಧ್ಯೆ ಐಚ್ಛಿಕವಾಗಿ ಶಿಥಿಲದ್ವಿತ್ವವನ್ನು ಪಾಲಿಸಿರುವುದು ಸುವ್ಯಕ್ತ) ಹೀಗೆಯೇ ಸಾಪೇಕ್ಷ. ಆದರೆ ನನ್ನ ಮತಿಯಿಷ್ಟೆ; ಯಾವುದೂ ನಮ್ಮ ಅಶಕ್ತಿಯಿಂದ ಅಥವಾ ಅನಭ್ಯಾಸದಿಂದ ಬಂಡಾಯವೆಂಬಂತೆ ಸಿಡಿಯಬಾರದು. ನೀವಾಉ ತಿಳಿಸಿದ ಕೊಂಡಿಯನ್ನು (link) ಕಂಡೆ. ಅಲ್ಲಿ ಪುಷ್ಪಿತಾಗ್ರದ ಸಮ-ವಿಷಮಪಾದಗಳ ಲಕ್ಷಣವನ್ನಲ್ಲದೆ ಬೇರೊಂದು ಪುಷ್ಪಿತಾಗ್ರವನ್ನು ಕಾಣಲಾಗಲಿಲ್ಲ, ರೋಮನ್ ಅಕ್ಷರಗಳಲ್ಲಿ ತೆಲುಗಿನಂಥ ಭಾಷೆಯನ್ನೋದುವುದು ನನಗೆ ಬಲು ಹಿಂಸೆ:-). ನಿಮಗೇನಾದರೂ ಆ ಮತ್ತೊಂದು ವೃತ್ತವು ಕಂಡಿದ್ದಲ್ಲಿ ದಯವಿಟ್ಟು ಇಲ್ಲಿಯೇ ತಿಳಿಸಿರಿ. ಈ ವೃತ್ತವನ್ನು ಮೊದಲು ವೇದದ ಶ್ರೀಸೂಕ್ತದಿಂದ ಮೊದಲ್ಗೊಂಡು ವಾಲ್ಮೀಕಿ-ವ್ಯಾಸ-ಕಾಳಿದಾಸಾದ್ಯರೆಲ್ಲ ಬಳಸಿದ್ದಾರೆ. ಪಿಂಗಳಾದಿಗಳಲ್ಲಿ ಅನ್ಯಥಾ ಲಕ್ಷಣವಿಲ್ಲ ಹೀಗಾಗಿ ನನ್ನ ಕುತೂಹಲ.
        ಮತೊಂದು ಮಾತು; ಸಾಹಿತ್ಯವೊಂದು ಸಾಪೇಕ್ಷಶಾಸ್ತ್ರ/ಕಲೆ. ಅಷ್ಟೇಕ, ಈ ಜಗತ್ತೇ ಹೀಗೆ. ಆದುದರಿಂದ ಅಭಿಪ್ರಾಯಗಳು ಸಹೇತುಕವಾಗಿ ಮಾರ್ಪಡಬಹುದು. ಆದರೆ ಆಭಿಜಾತ್ಯವೆಂಬ ಗುಣಕ್ಕೆ ಧಕ್ಕೆಯಾಗದಂತೆ ಇದು ಸಾಧಿತವಾಗಬೇಕೆಂದು ನನ್ನ ಇಂಗಿತ. ಇದನ್ನು ಪದ್ಯಪಾನಿಗಳು ಅರಿಯಲೆಂದು ನನ್ನ ಕಳಕಳಿ.

      • ಗಣೇಶರೆ
        ಶಾಸ್ತ್ರದ ಬಗ್ಗೆ ಪದ್ಯಪಾನದಲ್ಲಿ ನಿಮ್ಮ ನಿಲುವನ್ನು ನಾನು ಒಪ್ಪುತ್ತೇನೆ. ಮುಂಚೆಯೆ ಹೇಳಿದಂತೆ ನಾನು ಶಾಸ್ತ್ರಕ್ಕೆ ತುಂಬ ಬೆಲೆಕೊಡುತ್ತೇನೆ. ಅನ್ಯಥಾ ಭಾಸವಾಗಿದ್ದರೆ ಕ್ಷಮಿಸಿ.

        ಪುಷ್ಪಿತಾಗ್ರದ ವಿಚಾರ. ಸುಮಾರು ಹುಡುಕಾಟದ ನಂತರ ಒಂದು ಕ್ಷನ ಯೋಚಿಸಿ ವಿಷ್ಲೇಶಿಸಿ ನೋಡಿದೆ.
        “ನ-ಜ-ಜ-ರ-ಗ” ಹಾಗು “ನ-ಜ-ಲ-ರ-ಯ”, ಇವೆರಡು ಒಂದೇ ಅಲ್ಲವೆ (ಯತಿಯ ವ್ಯತ್ಯಾಸ ಅಕಸ್ಮಾತ್ ಇದ್ದರೆ ಅದನ್ನು ಒತ್ತಟ್ಟಿಗೆ ಇಡೋಣ).

        ನ-ಜ-ಜ-ರ-ಗ
        ಲಲಲ-ಲಗಲ-ಲಗಲ-ಗಲಗ-ಗ

        ನ-ಜ-ಲ-ರ-ಯ
        ಲಲಲ-ಲಗಲ-ಲ-ಗಲಗ-ಲಗಗ

        ತೆಲುಗಿನಲ್ಲಿ ಯತಿ ಏಳನೆಯ ಅಕ್ಷರದ ಮುಂದೆ ಬರುವುದರಿಂದ ಎರಡನೆಯ ರೀತಿಯಲ್ಲಿ ಪುನರ್ವಿಭಜನೆ ಮಾಡಿಕೊಂಡಿದ್ದಾರೆ ಅಷ್ಟೆ.

      • ಶ್ರೀಕಾಂತರು ಸೂಚಿಸಿರುವ ಈ ಲಿಂಕಿನ ಲೇಖವನನ್ನು ಓದಿದೆ. ಅದೊಂದು ರಚ್ಚಬಂಡ ಎಂಬುವ ಚರ್ಚೆಯ ಬ್ಲಾಗ್

        http://groups.yahoo.com/group/Chandassu/message/4958

        ಈ ಲೇಖನದಲ್ಲೆಲ್ಲೂ ಪುಷ್ಪಿತಾಗ್ರಕ್ಕೆ ಎರಡುಲಕ್ಷಣ ಉಂಟೆಂದು ಆ ಬ್ಲಾಗಿನ ಲೇಕಖರಾದ ಜೆಜ್ಜೇಲಕೃಷ್ಣಮೋಹನರಾವ್ ಸೂಚಿಸಿಲ್ಲ.
        ಆ ತೆಲುಗು ಲೇಖನದಲ್ಲಿ ಅವರು ಮಾಲಭಾರಣಿ ಮತ್ತು ಪುಷ್ಪಿತಾಗ್ರ ಇವರಡನ್ನು ಹೋಲಿಸಿ ಹೀಗೆ ಹೇಳಿದ್ದಾರೆ. ಅದರ ಕನ್ನಡ ಅನುವಾದ ಹೀಗಿದೆ.

        ಮಾಲಭಾರಿಣಿ

        ಮೊದಲಪಾದ : ಸ ಸ ಜ ಗ ಗ ಇಲ್ಲವೇ ಸ ಲ ಲ ರ ಯ
        ಎರಡನೆಯಪಾದ : ಸ ಭ ರ ಯ

        ಪುಷ್ಪಿತಾಗ್ರಾ

        ಮೊದಲಪಾದ : ನ-ನ-ರ-ಯ
        ಎರಡನೆಯಪಾದ: ನ-ಜ-ಜ-ರ-ಗ ಇಲ್ಲವೆ ನ-ಜ-ಲ-ರ-ಯ

        ಪುಲಕಿತಮಯಿ ಪುಷ್ಪಿತಾಗ್ರೆಯಾದಳ್
        ಲಲಿತ ವನಂಗಳ ಲಾಸ್ಯವಾಡುತೀಗಳ್
        ಚೆಲುವಿನ ನವಶಿಲ್ಪವಾದಳಲ್ತೇ
        ಸುಲಲಿತ ಸುಂದರ ಶೋಭೆಗಿಲ್ಲಿ ಭಾಗ್ಯಂ..

        ಎಂದು ಹೇಳಿ, ತೆಲುಗಿನ ಕೆಲವು ಲಾಲಿಹಾಡುಗಳು ಅರ್ಧಮಾಲಭಾರಿಣಿ ಇನ್ನರ್ಧ ಪುಷ್ಪಿತಾಗ್ರದ ಬಂಧದಲ್ಲಿರುವುದನ್ನು ಗಮನಿಸಿ ಉದಾಹರಿಸುತ್ತಾರೆ. ಪುಷ್ಪಿತಾಗ್ರಕ್ಕೆ ಎರಡು ಲಕ್ಷಣಗಳನ್ನು ಹೇಳಿಲ್ಲ. ನನ್ನಲ್ಲಿ ಲಭ್ಯವಿರುವ ಕೆಲವು ತತ್ಸಂಬಂಧಿತ ಗ್ರಂಥಗಳನ್ನು ಈಗ ಗಮನಿಸಿನೋಡಿದರೂ, ಅವುಗಳಲ್ಲೆಲ್ಲಾ ಪುಷ್ಪಿತಾಗ್ರಕ್ಕೆ ಒಂದೇ ಲಕ್ಷಣ ಹೇಳಿದೆ. ಅದನ್ನನುಸರಿಸಿಯೇ ಪ್ರಸಿದ್ಧರ ರಚನೆಗಳಾಗಿವೆ.

        ಕ್ಷಣಮಪಿ ವಿರಹಃ ಪುರಾ ನಸೇಹೇ
        ನಯನ ನಿಮೀಲಿತ ಖಿನ್ನಯಾ ಯಯಾತೇ
        ಶ್ವಸಿತಿ ಕಥಮಸೌರಸಾಲಶಾಖಾಂ
        ಚಿರವಿರಹೇಣ ವಿಲೋಕ್ಯ ಪುಷ್ಪಿತಾಗ್ರಾಂ (ಜಯದೇವ)

        ಆದಿಶಂಕರರು ಪುಷ್ಪಿತಾಗ್ರವನ್ನು ತಮ್ಮ ಮಾಯಾಪಂಚಕ, ಶಿವಾನಂದಲಹರಿ, ತ್ರಿಪುರಸುಂದರೀಮಾನಸಪೂಜಾ ಸ್ತೋತ್ರಗಳಲ್ಲಿ ಪ್ರಯೋಗಿಸಿದ್ದಾರೆ. ಶಿವಾನಂದಲಯರಿಯ ಒಂದು ಉದಾಹರಣೆ

        ಬಹುವಿಧ ಪರಿತೋಷ ಬಾಷ್ಪಪೂರ-
        ಸ್ಪುಟಪುಲಕಾಂಕಿತ ಚಾರುಭೋಗಭೂಮಿಂ
        ಚಿರಪದ ಫಲಕಾಂಕ್ಷಿ ಸೇವ್ಯಮಾನಾಂ
        ಪರಮ ಸದಾಶಿವ ಭಾವನಂ ಪ್ರಪದ್ಯೇ

        ಮಾಹಿತಿಯಲ್ಲಿನ ಅಸ್ಪಷ್ಟತೆ, ಅಭ್ಯಾಸಿಗಳಿಗೆ ಪಥಭ್ರಮಣಕಾರಕವಾಗದಿರಲೆಂಬದಷ್ಟೆ ಈ ಸ್ಪಷ್ಟನೆಯ ಉದ್ದೇಶ.

  12. ತುಂಬುಗನ್ನಡ “ಶತಾವಧಾನ”ಕ್ಕೆ ತುಂಬು ಹೃದಯದ ಅಭಿನಂದನೆಗಳು, “ಪದ್ಯಪಾನ”ದ “ಪುಷ್ಪೋತ್ಸವ”ದಲ್ಲಿ ಅರಳಿದ ಈ “ಪುಷ್ಪಗುಚ್ಛ”ದೊಂದಿಗೆ

    ಹಿತ್ತಲಾ ಹಂದರದಿ ಬಿಳಿಮಲ್ಲೆ ಬಳಿಯಲ್ಲೆ
    ಮುತ್ತ ಸಿರಿ ಪಾರಿಜಾತ ಸುರಿದಿದೆಯ
    ಲ್ಲತ್ತಲಾ ಕೊಂಬೆಯಲಿ ದಾಸವಾಳದ ದೀಪ
    ವೆತ್ತರದಿ ಕೆಂಡ ಸಂಪಿಗೆಯ ಧೂಪಾ ।।

  13. ಅನಿಮಿಷರಾಪದಮಂತೆನೆ ತಕ್ಕುಂ
    ಇನಿಯಳ ನಲ್ಮೊಗಕೀಡೆನೆ ದಕ್ಕುಂ |
    ತನಿ ನಯನಕ್ಕಮೆ ತಾನೆಣೆಯಕ್ಕುಂ |
    ತನಗೆಣೆಯೆಲ್ಲಿದೆ ತಾಮರಸಕ್ಕಂ ||

    ತಾಮರಸ ವೃತ್ತದಲ್ಲಿ

  14. ಘಮಿಸುಗುಮೆಂದಲರ್ಗ್ಗಳನೆ ಕುಯ್ಯುತುಮೊಯ್ವಿರಿ ನೀಂ
    ದ್ರುಮಕುಲವೃದ್ಧಿಮಾರ್ಗಮನೆ ಕುಯ್ಯುತುಮೊಯ್ವಿರಿ ನೀಂ
    ಭ್ರಮರಸಮೂಹಕನ್ನಮನೆ ನೀಗುತಲೊಯ್ವಿರಿ ನೀಂ
    ನಮೆದೊಡಮೀಯಲೊಯ್ವಿರುಱದೊಯ್ವಿರಿ ಸುಯ್ದಿರಲಾಂ

    ನನಗೆ ಯಾವೊಂದು ಬಗೆಯ ಹೂವಿನ ಮೇಲೂ ವಿಶೇಷ ಅಕ್ಕರೆಯಿಲ್ಲ – ಎಲ್ಲ ಹೂಗಳೂ ಚೆನ್ನ. ಆ ಹೂವು ಗಿಡದಲ್ಲಿಯೇ ಇದ್ದರೆ ಇನ್ನೂ ಚೆನ್ನ – ಕಣ್ಣಿಗಿಂಪು ಮೂಗಿಗೆ ಕಂಪು.

  15. ಪುಷ್ಪಿತಾಗ್ರದಲ್ಲಿ

    ತೆನೆತೆನೆಕೊನೆದೆದ್ದು ಕೆಚ್ಚು ಮಿಂಚಲ್ |
    ಕೊನೆಕೊನೆಯೊಳ್ ನನೆಗೂರ್ತ ಚೆಲ್ವಗೊಂಚಲ್ |
    ತೊನೆತೊನೆದುದು ದುಂಬಿದುಂಬಿ ನೆಂಚಲ್ |
    ಮನೆಮನೆಗಂ ಪವಮಾನ ಕಂಪಪಂಚಲ್ ||

  16. ಅಂದು ಪೂಜೆಯಲಂತು ಬಗೆಬಗೆ
    ಗಂಧ ಬೀರುವ ಹೂವ ನಗೆನಗೆ
    ಸಂದ ಸಂಪಿಗೆ ಜಾಜಿ ಮಲ್ಲಿಗೆ ಪುಟ್ಟಿಯೊಳು ತುಂಬೇ।
    ಅಂದು ಸಂಜೆಯಲೆಂತು ಝಗೆಮಗೆ
    ತಂದ ಸುಂದರ ಭಾವ ಸರಿಸೊಗೆ
    ಕಂಡಿತಲ್ಲಿಯೆ ಕೊನೆಯಲಂಟಿದ ಪುಟ್ಟನೆಯ “ತುಂಬೇ”।।

    (“ಶತಾವಧಾನ”ದ ವೇದಿಕೆಯೇರಿದ ಧನ್ಯತೆಯಲ್ಲಿ )

  17. ಸಾಗುತಲಿರೆ ಪೂದೋಟದೊಳರುಣೋದಯ ಸಮಯಾI
    ಮೂಗರಳುತೆ ಕಣ್ಕಾಣುತೆ ಮನಪಾಡಿತು ಮುದದೀI
    ಈ ಪರಿಮಳವೀ ಬಣ್ಣವನೆರಚೀ ತನುಗಳಿಗೇI
    ಕಾರ್ನಿಶೆಯೊಳು ಪೂರಾಜಿಯ ಸಲೆಪೋಣಿಸಿದವನಾII

  18. ಚಂಪಕಮಾಲೆ||
    ಬಹುವಿಧ ದಾಸವಾಳದಲರೆಮ್ಮ ಸೆಳೆರ್ದಿರೆ ತೋಟದೊಳ್ ವಲಂ
    ವಿಹಿತದ ವರ್ಣವೆಲ್ಲವದೊ ಕಾಂಬೆವು ನೀಲಿಯ-ಕೆಂಪು-ಬೆಳ್ಳಿಯಾ|
    ದುಹದದೆ ಬಾಯಮುಕ್ಕಳಿಸೆ ವರ್ಣದ ನೀರಿದನಾಗಿಸಿರ್ದುದೋ?
    ಸಹನೆಯ ತೋಟಗಾರನೆಸಕಂಗಳೊ? ಶಾಸ್ತ್ರದೆ ಭೇದವಿಲ್ಲವೈ||

    • ದುಹದದೆ = ದೋಹದಕ್ರಿಯೆ (ಇಲ್ಲಿ ಗಂಡೂಷ)
      It is in the domain of the horticulturist that the varieties of hibiscus exist; it means nothing to a Botanist

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)