Nov 172012
 

ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ

ಈ ಸಮಸ್ಯೆಯನ್ನು ಮತ್ತೇಭವಿಕ್ರೀಡಿತದಲ್ಲಿ ಪರಿಹರಿಸಿ. ಈ ಛಂದಸ್ಸಿನ ಗತಿ ಹೀಗಿದೆ:
ನನನಾನಾನನನಾನನಾನನನನಾ|ನಾನಾನನಾನಾನನಾ
ಗತಿಗಾಂಭೀರ್ಯದತುಂಬುಚೆಲ್ವುಮೆರೆಯಲ್ಮತ್ತೇಭವಿಕ್ರೀಡಿತಂ

 

ಪದ್ಯನಿದರ್ಶನಂ ೩:
ರನ್ನನ ಗದಾಯುದ್ಧದಿಂದ:[ಮತ್ತೇಭವಿಕ್ರೀಡಿತ]
ಎನಿತುಂ ದ್ರೌಪದಿ ಮುಕ್ತಕೇಶಿ ನಮೆವಳ್ ತದ್ದುಃಖಮಂ ಕಂಡು ಕಂ-
ಡೆನಿತುಂ ಸೈರಿಪೆವಾನುಮೆನ್ನನುಜರುಂ ಪಾಂಚಾಲಿಯಂ ನೋಡಿ ನೀಂ
ಮನದೊಳ್ ನೋವುದುಮಿಲ್ಲ ನಿಷ್ಕರುಣಿಯಯ್ ನೀನಿಂತಿರಾನನ್ನೆಗಂ
ಮುನಿಸಂ ತೀರ್ಚಿ ನರೇಂದ್ರವೈರಿತರುವಂ ನಿರ್ಮೂಲನಂ ಮಾಡುವೆಂ
[ಸೈರಿಪೆವಾನುಮೆನ್ನನುಜರುಂ = ಸೈರಿಪೆವ್ ಆನುಮ್ ಎನ್ನನುಜರುಂ, ನೀನಿಂತಿರಾನನ್ನೆಗಂ = ನೀನಿಂತಿರೆ ಆನ್ ಅನ್ನೆಗಂ]

 

ಹಳಗನ್ನಡ ವಿಭಕ್ತಿಪ್ರತ್ಯಯಗಳು ೧:
ರಾಮನು = ರಾಮಂ, ರಾಮನೂ = ರಾಮನುಂ, ರಾಮನನ್ನು = ರಾಮನಂ ರಾಮನಿಂದ = ರಾಮನಿಂ, ರಾಮನಿಂದಂ, ರಾಮನಿಂದಲ್ ರಾಮನಿಗೆ = ರಾಮಗಂ, ರಾಮಕ್ಕಂ, ರಾಮನ = ರಾಮನ, ರಾಮನಲ್ಲಿ = ರಾಮನೊಳ್. ಓ ರಾಮ = ರಾಮನೆ!, ರಾಮನೇ!, ರಾಮ!, ರಾಮಾ!.

  55 Responses to “ಪದ್ಯಸಪ್ತಾಹ – ೪೭; ಸಮಸ್ಯಾಪೂರ್ಣ”

  1. ಇನಿಯ೦ ಪ್ರೇಯಸಿಗ೦ ವಿವಾಹಕೆನೆ ತಾ೦ ಬೇಡಿರ್ದನಾ ಭೇಟಿಯೊಳ್
    ಮನದೊಳ್ ನೀ೦ ಪತಿಯೆ೦ದೆನಲ್ಕೆ ತುರುಬಿ೦ ಪೂವೊ೦ದನ೦ ಕೇಳ್ದನಯ್
    ಮುನಿಸ೦ ತಾ೦ ಪುಸಿಯಿ೦ದೆ ತೋರ್ದಪಳಿದೋ ಕೊಳ್ಳೈ ಎನಲ್ ಚೆಲ್ವಿನಾ
    ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ

    ಓರ್ವ ಪ್ರೇಮಿಯ ಸವಿಗನಸು 🙂

    • ತುರುಬಿ೦ ಸರಿಯೋ ತುರುಬಿನಿ೦ ಸರಿಯೋ?

      • ”ತುರುಬಿಂ’ ಎಂಬುದೆ ಸಾಧುರೂಪಮರಿಯಲ್ ಸೋಮಾ! ಭವತ್ಪದ್ಯಮುಂ
        ಸರಿ, ಸಾರಸ್ಯಸಮಾಹಿತಂ ಪರಿಹೃತಿಪ್ರತ್ಯಗ್ರತಾಭಾವಮುಂ|
        ಸರಿ, ಮೇಲಾದುದೆನುತ್ತೆ ಭಾವಿಸಿದಪೆಂ; ಮತ್ತೇಭವಿಕ್ರೀಡಿತಂ
        ಮೆರೆದೊಂದಗ್ಗಳೆಗೆಂತು ಸಾಧುಭಣಿತಂ ನಾಂ ತೀರ್ರ್ಚುವೆಂ ಮಿತ್ರನೇ?

  2. ನೆನೆಯುತ್ತಾವಗಮೆಲ್ಲನೋವ ನಿಜದೊಳ್ ತಾನೇನನುಂ ಗೈಯದೇ
    ಅನಿಶಂ ಕಾರ್ಯವ ದೀರ್ಘಸೂತ್ರ ಕ್ರಮದಿಂ ಮುಂದಿಕ್ಕಿ ಮೈಚಾಚಲೇಂ
    ಕೊನೆಯೇನಪ್ಪುದೆ ಕೊಂಡುದೆಲ್ಲ ಋಣಮಂ ಸಂದಾಯಿಸಲ್ ಪೂರ್ಣದಿಂ
    ಕನಸೊಳ್? ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ

    • ಮಹಿತೋದಾರವಿಧಾನದಿಂದೆ ಪರಿಹಾರಂ ಸಂದುದಯ್ ಮೌಳಿ! ನಿ-
      ಮ್ಮ ಹಿಮಾಂಶುದ್ಯುತಿಪೇಶಲಂ ಕವಿತೆ ಮತ್ತಾಗಳ್ ಪಳಂಗನ್ನಡಂ
      ವಹಿಲಂಗೊಂಡವೊಲಾಗಳರ್ಕನ ಮಹಾತೈಕ್ಷ್ಣ್ಯಂ ಸಮುನ್ಮೇಷಿಕುಂ
      ಸ್ಪೃಹಣೀಯಂ ನವಕಲ್ಪನಂ ಪರಿಹೃತಿಪ್ರಾವೀಣ್ಯಗಣ್ಯಂ ಗಡಂ

      • ನಿಲ್ಲಲ್ ನೇಣಮದಿಲ್ಲದಿರ್ದಪಳೆವಾತಂ ಮತ್ತೆ ನೀರೂಡಿಸು-
        ತ್ತೆಲ್ಲಾಸಕ್ತರ ಶಕ್ತಿಬೇರ ಪೊರೆಯುತ್ತುತ್ಸಾಹಮಂ ಪೆರ್ಚಿದಾ
        ಎಲ್ಲಂ ನಿಮ್ಮಯ ಮೂಲಕಾಣ್ಕೆ ಯೊಗೆಸಲ್ ಕಲ್ಲೊಳ್ ಮೃದುತ್ವಂ ಸುಮಂ
        ಸಲ್ಲಾಪಂಬಿದು ಸಂದುದಕ್ಷರದೊಳಾಂ ಆಲಿಂಗಿಸಲ್ ವಂದಿಸಲ್

        ಮೂಲಕಾಣ್ಕೆ = ಮೂಲ ದೃಷ್ಟಿ, ದೃಕ್ಪಥ, ಕಾಣಿಕೆ

    • ಮೌಳಿಯವರೆ- ಚತುರ ಪರಿಹಾರ ನಿಮ್ಮದು. ಎರಡನೆಯ ಪಾದದಲ್ಲಿ “ಕ್ರಮ” ಪದದಿಂದ ಚಂದೋಭಂಗವಾಗುತ್ತಲ್ಲ. ಹಿಂದಿನ ಅಕ್ಷರ ದೀರ್ಘವಾಗಿ ಪರಿಣಮಿಸುವುದರಿಂದ.

      • ಶ್ರೀಕಾಂತರ ನುಡಿಗಳಿಗೆ ನಮನ. ಛಂದೋಲಯಭಂಗವಾಗದಂತೆ ಕೆಲವು ಪದಗಳನ್ನು ಬಳಸಬೇಕಾದಾಗ ಹಿಂದಿನಪದಾಂತ್ಯಾಕ್ಷರದಿಂದ ಮುಂದಿನ ಪದಾರಂಭದ ದ್ವಿತ್ವ ಶಿಥಿಲವಾಗುವುದುಂಟು. ಈ ಅನುಕೂಲ ಸಿದ್ಧಾಂತವೇ ಶಿಥಿಲದ್ವಿತ್ವನಿಯಮ. ಪ್ರಸ್ತುತ ಪ್ರಯೋಗ ಶಿಥಿಲದ್ವಿತ್ವವಾಗದು ಎಂದೂ ಸಾಧಿಸಬಹುದು. ಪದ್ಯರಚನಾಕಾರ ಕೆಲವುವೇಳೆ ನಿಯಮಗಳನ್ನು ಅರಿತೇ ಸ್ವತಂತ್ರವಹಿಸುವುದುಂಟು. “ದೀರ್ಘಸೂತ್ರ ನೆಪದಿಂ”,”ದೀರ್ಘಸೂತ್ರತೆಯಿನಿಂ”, ದೀರ್ಘಸೂತ್ರ ಕತದಿಂ” ಎಂದು ಮಾಡಬಹುದಾದರೂ ಅಲ್ಲಿ ಅರ್ಥಸೌಲಭ್ಯಕ್ಕಾಗಿ “ಕ್ರಮ” ತರಲಾಗಿದೆ. ಅರ್ಥ ಮತ್ತು ನಿಯಮ ಎರಡನ್ನೂ ಪಾಲಿಸಬೇಕು. ಒಂದುವೇಳೆ ಆಯ್ಖೆಯ ಸಂಕಷ್ಟಬಂದಾಗ ಅರ್ಥವೇ ದೊಡ್ಡಣ್ಣ ಎನ್ನುವುದು ನನ್ನ ನಂಬಿಕೆ ! ನಿಮ್ಮ ಗಮನಿಕೆ ಸಾಧುವೇ.

        • Poetic licence ಕವಿಗಳಿಗೆ ಜನ್ಮಸಿದ್ಧ ಹಕ್ಕು ಸರಿ. ಶಿಥಿಲದ್ವಿತ್ವ ನನಗೆ ತಿಳಿದಂತೆ ಹಳೆಗನ್ನಡ ಕೆಲವು ಪದಗಳಲ್ಲಿ ಉಂಟು (ಎರ್ದೆ, ಬರ್ದುಕು, ತಳಿರ್ಗಳ್ ಇತ್ಯಾದಿ). ಸಂಸ್ಕೃತ ತತ್ಸಮಗಳಿಗಿಲ್ಲ. ನನ್ನ ತಿಳುವಳಿಕೆ ತಪ್ಪಿರಬಹುದು. “ಕ್ರಮ”ಕ್ಕೆ ಬದಲು ಬಗೆ/ಪರಿ/ನಿರಿ ಬಳಸಬಹುದೆ?

          • ಒಳ್ಳೆಯ ಸಲಹೆ. ಆಗ ’ಸೂತ್ರದ ಬಗೆ/ಪರಿ ಎನ್ನಬೇಕು. ’ದ’ ಅಧಿಕಾಕ್ಷರ. ಹೇಗೋ ಸರಿ ಮಾಡಬಹುದು. ಅದನ್ನು ಸವರಣಿಸಲು ತ್ರಾಸವೇನಿಲ್ಲ. ಪದ್ಯಒಂದೇ ಲಹರಿಯಲ್ಲಿ ಬಂದಾಗ, ಕ್ರಮವೇ ಇರಲಿ ಎಂಬ ಅರಿವಿನಿಂದ ಹಾಕಿದ್ದು. ಶಿಥಿಲದ್ವಿತ್ವದ ಬಗ್ಗೆ ನೀವುಹೇಳಿರುವುದು ಸರಿ. ಅದರ ಅನುಕೂಲತೆಯ ವಿಸ್ತರಣೆಯೇ ನೀವುಹೇಳಿದ ಕವಿಯ ನಿರಾತಂಕಮಾರ್ಗ. ವಿವರಣೆ ಇಲ್ಲಿಗೆ ಸಾಕುಮಾಡುತ್ತೇನೆ.

        • ಸೂತ್ರದ “ದ”ಕಾರ ಬಿಟ್ಟರೂ ಚಿಂತೆಯಿಲ್ಲ. ಸೂತ್ರಬಗೆಯಿಂ/ ಸೂತ್ರತೆರದಿಂ ಸರಿ ಹೋದೀತು. ದಕಾರ ಬಳಸಲೇ ಬೇಕೆಂದರೆ “ಸೂತ್ರದನುವಿಂ” “ಸೂತ್ರದಣಿಯಿಂ” ಎಂದು ಬೇಕಾದರೆ ಹಾಕಬಹುದು.

          • ಸೂತ್ರಬಗೆಯಿಂ/ ಸೂತ್ರತೆರದಿಂ ಎರಡರಲ್ಲೂ ವಿಭಕ್ತಿಚ್ಯುತವಾಗಿ ವ್ಯಾಕರಣದೋಷವಿದೆ. “ಸೂತ್ರದನುವಿಂ” ಸರಿಯಾಗಿದೆ.

          • ವಿಭಕ್ತಿಚ್ಯುತಿ ಒಂದು ವ್ಯಾಕರಣ ದೋಷವೆ? ಹೀಗೆನ್ನಲು ಏನು ಆಧಾರ? ಅರ್ಥಚ್ಯುತಿ ಅಥವಾ ಅರ್ಥದ ಗೊಂದಲ ಬಂದರೆ ದೋಷವಾದೀತು. ವಿಭಕ್ತಿಪ್ರತ್ಯಯಗಳನ್ನು ಬಿಟ್ಟ ಪ್ರಯೋಗಗಳು ಎಣಿಕೆಯಿಲ್ಲದಷ್ಟು ಹಳೆಗನ್ನಡದಲ್ಲಿ ಸಿಕ್ಕೀತು. ಹಲ್ಮಿಡಿ ಶಾಸನದಲ್ಲೆ ಇದಕ್ಕೊಂದು ನಿದರ್ಶನ ಉಂಟಲ್ಲ. ಸೂತ್ರಬಗೆ ಎಂಬಲ್ಲಿ ಸೂತ್ರ(ದ)ಬಗೆ ಎನ್ನುವುದು ಸೂಚಿತವಲ್ಲವೆ? ಈತೆರನ ಸೂಚಿತಪ್ರಯೋಗಗಳು ತಮಿಳಿನಲ್ಲಿ ಶಾಸ್ತ್ರೋಕ್ತವಾದ ಸ್ಥಾನ ಪಡೆದಿವೆ. ಅದಕ್ಕೆ “ವೇಟ್ರುಮೈತ್ತೊಗೈ” ಎಂದು ಹೆಸರು. ವೇಟ್ರುಮೈ ಎಂದರೆ ವಿಭಕ್ತಿ. ತೊಗೈ ಎಂದರೆ ಮುಚ್ಚುವಿಕೆ, ಮರೆಯಲ್ಲಿ ಬರುವುದು.

          • ಶ್ರೀಕಾಂತರೇ.. ನಿಮ್ಮ ಅಭಿಪ್ರಾಯಗಳು ಆಸಕ್ತಿಕರವಾಗಿವೆ. ಹೆಚ್ಚು ವಿವರಣೆ ಬಯಸುತ್ತವೆ. ದೀರ್ಘಸೂತ್ರದ, ದೀರ್ಘಸೂತ್ರದಲ್ಲಿ, ದೀರ್ಘಸೂತ್ರದಂತೆ, ದೀರ್ಘಸೂತ್ರದಿಂದ ಮುಂತಾದ ಪದಗಳ ಸೃಷ್ಟಿ ವಿಭಕ್ತಿಪ್ರತ್ಯಯವಿಲ್ಲದೆ ಸಾಧ್ಯವಿಲ್ಲ. ಇದಕ್ಕೆ ಆಧಾರ ವ್ಯಾಕರಣಶಾಸ್ತ್ರವೇ. ಬಗೆ ಎನ್ನುವುದು ಕನ್ನಡಪದ. ಸಂಸ್ಕೃತಪದವಾದ ಸೂತ್ರಕ್ಕೆ ಬಗೆ ಸೇರಿಸಿ ಸೂತ್ರಬಗೆ ಮಾಡಿದಲ್ಲಿ ಅರಿಸಮಾಸವಾಗಿ ಅದೂ ದೋಷವೇ. ಹೀಗೆ ವಿವರ ಪ್ರತಿವಾಕ್ಯಗಳನ್ನು ಅಭಿಪ್ರಾಯಗಳನ್ನೂ ಚರ್ಚಿಸಲು ಪದ್ಯಪಾನದಲ್ಲಿ ಕೊಂಚಮಟ್ಟಿಗೆ ಸಾಧ್ಯವಾದರೂ, ಈ ವಿಚಾರದಲ್ಲಿ ಆ ಹಂತ ದಾಟಿದ್ದಾಗಿದೆ. ಆ ಕಾರಣದಿಂದ ನಾವು ದೂರವಾಣಿಯಮೂಲಕ ಅಥವಾ ಭೇಟಿಯಾಗಿ ಪರಸ್ಪರಾಭಿಪ್ರಾಯಗಳನ್ನು ಉದ್ದೇಶಗಳನ್ನು ಅರ್ಥಮಾಡಿಕೊಂಡು ಚರ್ಚಿಸುವುದು ಸೂಕ್ತ. ವಂದನೆಗಳು: ನನ್ನ ದೂರವಾಣಿ: ೨೫೪೫೧೬೧೪

  3. ಇನಿಯಯ್ ಸ್ವಪ್ನದಿ ಪೋಗಬೇಡೆನುತಲಾನ್ ಕೈಯೀಳ್ದು ಮುತ್ತಿತ್ತರುಂ |
    ಇನಿಸುಂ ಕೇಳದೆ ಪೋದಯಯ್ ಎಳೆದುಕೈಯೇನೆಂದು ನಾನತ್ತರುಂ |
    ಕನಸೊಳ್ಕೂಡ ಇದಿರ್ಕೊಡಯ್ ಕನಲುತೆಂದಳ್ ಕಾಂತೆ ಕಾಂತಂ ಕ್ಷಣಂ |
    ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ ||

    ಈಳ್ದು- ಎಳೆದು
    ಇದಿರ್ ಕೊಡು- ಉತ್ತರಕೊಡು, ಪ್ರತಿಕ್ರಿಯಿಸು, ಹಿಂದಿರುಗಿಸು
    ಕ್ಷಣಂ- ತತ್ಕ್ಷಣ

    • ಒಳ್ಳೆಯ ಪರಿಹಾರ. ಶೈಲಿಯೂ ಸೊಗಸಾಗಿದೆ. ಆದರೆ “ಇತ್ತರುಂ” “ಅತ್ತರುಂ” ಇತ್ಯಾದಿ ರೂಪಗಳಿಗೆ ಬದಲಾಗಿ ಇತ್ತೊಡಂ, ಅತ್ತೊಡಂ ಎಂದು ಬಳಸುವುದು ಹಳಗನ್ನಡದ ದೃಷ್ಟಿಯಿಂದ ಚೆನ್ನ. ನನಗೆ ’ಇನಿಯಯ್”ಎಂಬ ಪದದ ಸಾಧುತ್ವ ಮತ್ತು ಆಶಯ ಅರಿವಾಗಲಿಲ್ಲ. ದಯವಿಟ್ಟು ತಿಳಿಸುವಿರಾ?

    • ಇನಿಯಯ್- ಇನಿಯನೇ (ಮುಂದಿರುವ ಇನಿಯನನ್ನು ಸಂಬೋಧಿಸಿ)

      ಇತ್ತೊಡಂ, ಅತ್ತೊಡಂ- ಇದರ ಅರ್ಥವ್ಯಾಪ್ತಿ ಕೆಲವೆಡೆ ನನಗೆ ಸಲ್ಪ ತೊಡಕನಿಸುತ್ತೆ. ಅತ್ತರುಂ, ಇತ್ತರುಂ- ಅತ್ತರೂ, ಇತ್ತರೂ ಎಂಬರ್ಥದಲ್ಲಿ ಬಳಸಿದೆ. ಅತ್ತೊಡಂ, ಇತ್ತೊಡಂ ಅದೇ ಅರ್ಥ ಕೊಡುವುದೆ?

      • “ಇನಿಯಯ್” ಎಂಬುದು ಇನಿಯ(ಪ್ರಿಯತಮ) ಶಬ್ದದ ಸಂಬೋಧನಪ್ರಥಮವಿಭಕ್ತಿಯ ಶುದ್ಧರೂಪವೇ? ಅದು ಇನಿಯ ಅಥವಾ ಇನಿಯನೆ, ಅಥವಾ ಇನಿಯಾ! ಇಲ್ಲವೇ ಇನಿಯನೇ! ಎಂದಾಗಬೇಕಲ್ಲವೇ? ನಿಮ್ಮ ಪ್ರಯೋಗಕ್ಕೆ ಹಳಗನ್ನಡದ ವ್ಯಾಕರಣಶಾಸ್ತ್ರದ ಪ್ರಮಾಣಗಳುಂಟೇ? ಇದ್ದಲ್ಲಿ ದಯಮಾಡಿ ತಿಳಿಸಿರಿ. ನಾನು ಈ ಪದಕ್ಕೆ ಇಂಥ ರೂಪವನ್ನು ಶಾಸ್ತ್ರ್ರ-ಕಾವ್ಯಗಳಲ್ಲಿ ನೋಡಿಲ್ಲ.
        ಇತ್ತೊಡಂ ಮತ್ತು ಅತ್ತೊಡಂ ಎಂಬ ಎರಡು ಪದಗಳಿಗೂ ಅರ್ಥಶುದ್ಧಿ ಹಾಗೂ ಶಬ್ದಶುದ್ಧಿಗಳಿವೆ. ಅವುಗಳ ಬಳಕೆಯಿಂದ ಪದ್ಯದ ಅರ್ಥಕ್ಕೇನೂ ಚ್ಯುತಿಯಿಲ್ಲ. ಜೊತೆಗೆ ಹಳಗನ್ನಡದ ಭಾಷಾಸೌಷ್ಠವವೂ ಹೆಚ್ಚುತ್ತದೆ:-)

        • ಪ್ರಿಯ ಶ್ರೀಕಾಂತ್ ಅವರೇ! ತಾವು ನನಗೆ ಮಿಂಚೆಯಲ್ಲಿ ತಿಳಿಸಿದ ಸಂಗತಿಯನ್ನು ಮತ್ತೆ ವ್ಯಾಕರಣಗ್ರಂಥ ಗಲನ್ನು ಜಾಲಿಸಿ ಪರ್ಯಾಲೋಚಿಸಿದೆನಾದರೂ ನನ್ನ ನಿಲವು ಸಾಧುವಾಗಿಯೇ ಉಳಿದಿದೆ. ಇದೀಗ ಹಳಗನ್ನಡವ್ಯಾಕರಣದಲ್ಲಿ ಮಹಾವಿದ್ವಾಂಸರಾದ ಡಾ|| ಟಿ.ವಿ.ವೇಂಕಟಾಚಲಶಾಸ್ರ್ರಿಗಳನ್ನೂ ಈ ಬಗೆಗೆ ಪ್ರಶ್ನಿಸಿದೆ. ಅವರಾದರೂ ಇನಿಯಯ್ ಎಂಬುದು ಯಾವುದೇ ರೀತಿಯಲ್ಲಿ ಸಂಬೋಧನೆಯಾಗದೆಂದರು. ಅದೇನಿದ್ದರೂ ’ಸವಿಯಾಗಿದ್ದೀಯ” ಎಂಬ ಅರ್ಥವನ್ನಷ್ಟೇ
          ನೀಡಬಲ್ಲುದು. ಮತ್ತೊಂದು ಮಾತು; ಹಳಗನ್ನಡಕ್ಕೆ ತಮಿಳಿನ ಬಾಂಧವ್ಯವುಂಟಾದರೂ ಶಬ್ದರೂಪಗಳಲ್ಲಿ ಎಲ್ಲೆಡೆ ಸಾಮಾನಾಧಿಕರಣ್ಯವಿಲ್ಲ. ಆದುದರಿಂದ ಅದನ್ನೇ ಹಿರಿದಾಗಿ ನೆಮ್ಮಲಾಗದು. ಇದು ಪ್ರಮಾದವೂ ಆದೀತು. ಇರಲಿ, ತಮ್ಮ ಭಾಷಾಗತಿ, ಪದ್ಯಗತಿ, ಛಂದೋಗತಿ ಮತ್ತು ಶಾಸ್ತ್ರಕುತೂಹಲಗಳೆಲ್ಲ ತಮ್ಮ ಪದ್ಯಪಾನಪ್ರಿಯತೆಗೆ ಪರಿಮಳ ತೀಡಿವೆಯೆಂದರೆ ಅತಿಶಯವಲ್ಲ. ಇದೆಲ್ಲ ಗಂಧದವರ ಜೊತೆಗೆ ಗುದ್ದಾಡಿದಂತೆ ಉಭಯಥಾ ಲಾಭಕರ:-)

      • ಈ ತೊಡಕನ್ನು ಬಗೆಹರಿಸಲು ತಾವು ಮಾಡಿದ ಶತಪ್ರಯತ್ನಕ್ಕೆ ನಾನು ಆಭಾರಿ ಗಣೇಶರೆ. ನಾನು ಮಾರ್ಪಡಿಸಿದ ಪದ್ಯ ಕೆಳಗೆ ಕೊಟ್ಟಿದ್ದೀನಿ.

        ಇನಿಯಯಾ! ಸ್ವಪ್ನದಿ ಪೋಗಬೇಡೆನುತಲಾನ್ ಕೈಯೀಳ್ದು ಮುತ್ತಿತ್ತೊಡಂ |
        ಇನಿಸುಂ ಕೇಳದೆ ಪೋದಯಯ್ ಎಳೆದುಕೈಯೇನೆಂದು ನಾನತ್ತೊಡಂ |
        “ಕನಸೊಳ್ಕೂಡ ಇದಿರ್ಕೊಡಯ್” ಕನಲುತೆಂದಳ್ ಕಾಂತೆ ಕಾಂತಂ ಕ್ಷಣಂ |
        ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ ||

  4. ಎನಲೇಂ ಈ ಕಳಿಜಂಬಕೋಳಿಪೊಗರಂ ಜರ್ಬೇರ್ದನಾ ಮಾತನುಂ
    ಧನಮೋ! ಹ್ಹಾ! ಸಿರಿವಂತಪೆಣ್ಣ ಬಗೆಗಂ ಮಂಕೆರ್ಚಿ ಬಂದಾದೊಡಂ
    ಜನರೇನಾನುಮವಂಗದೃಷ್ಟಮೆನೆ ಕೇಳ್ ಮಾರುತ್ತರಂ! “ದೈವಮೇ
    ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ”
    [ಇದು ಕೇವಲ ಅದೃಷ್ಟಬಲದಿಂದ ಧನಿಕನಾದ ಅಹಂಕಾರಿಯ ಕೊಬ್ಬೇರಿದ ಮಾತು]

    • ಪರಿಹಾರಂ ಸೊಗಸಾಯ್ತು ಹೊಳ್ಳ! ಮುಗುಳಾ ವ್ಯಾಖ್ಯಾನಮೆಲ್ಲಂ ಬಹಿ-
      ರ್ಭರಮಾಗಲ್ ಸರಿಯಾಗದಲ್ತೆ ಕವಿತಾಕುಕ್ಷ್ಯಂತದೊಳ್ ಸರ್ವಮುಂ|
      ಬರವೇಳ್ಕುಂ ’ಕಳಿಜಂಬಗೋಳಿ” ಯೆನುತುಂ ಸಂಧ್ಯಕ್ಷರಂ ಸಂದಿರಲ್
      ಸರಿಯಕ್ಕುಂ ಮಿಗಿಲಾಗಿ; ಶೈಲಿಯ ಸೊಗಂ ಸೈ ಸೈಯೆನಲ್ ತಕ್ಕುದಯ್!!

    • ಹಮ್..ಸರಿ ಸರ್. ಅರ್ಥವಾಯ್ತು.

      ಎನಲೇಮೀ ಕಳಿಜಂಬಗೋಳಿಪೊಗರಂ ಜರ್ಬೇರ್ದನಾ ಮಾತನುಂ
      ಧನಮೋ! ಹ್ಹಾ! ಸಿರಿವಂತಪೆಣ್ಣ ಬಗೆಗಂ ಮಂಕೆರ್ಚಿ ಬಂದಾದೊಡಂ
      ಜನರೇನಾನುಮವಂಗದೃಷ್ಟಮೆನೆ ಕೇಳ್ ಮಾರುತ್ತರಂ! “ದೈವಮೇ
      ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ”

  5. ಅನಿತುಂ ಪೂರಣಯತ್ನಮಾಗೆ ವಿಫಲಂ ದುಮ್ಮಾನದಿಂ ನಿದ್ರಿಸಲ್
    ಕನದೊಳ್ ಬಂದೆನಗೊಂದುಪಾಯಮೊರೆದಂ ಸನ್ಮಿತ್ರಮೋರ್ವಂ ಗಡಾ |
    ಋಣಮಂ ತೀರ್ಚಿಪುದೆಂತೆನಲ್ಕೆ ನಗುತಂ ಪದ್ಯಂ ಕುರುಷ್ವೆಂದನುಂ
    ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಮ್ ||

    • bahaLa chennagide raamakrishnare 🙂

    • ರಾಮಕೃಷ್ಣರೇ,
      ಕನಸೊಳ್ ಕಂಡಿಹ ಸಾಲನುಂ ನನಸಿನೊಳ್ ತೋರ್ಚಿರ್ಪುದೇ ಸಮ್ಮತಮ್ 🙂

      • ಸಾಲನಂ -ಸಾಲಮಂ ಸ್ವಾರಸ್ಯಕಾರಕ ಪೂರಣ. ಇಲ್ಲಿ ನೆನಪಿಗೆಬರುವ ಒಂದಂಶ.ಕೊಟ್ಟಿರುವ ಸಮಸ್ಯಾಕ್ಷರಗಳನ್ನು ಬದಲಾಯಿಸಿ ಪೂರಣಮಾಡುವ ಸ್ವಾತಂತ್ರ್ಯ ಅವಧಾನಿಗಿಲ್ಲ ಎಂಬುದು ಅವಧಾನಸಂಪ್ರದಾಯದ ಒಂದು ನಿಯಮ. ದತ್ತಸಮಸ್ಯೆಯಲ್ಲಿ ಛಂದೋವ್ಯಾಕರಣಾದಿ ದೋಷಗಳಿದ್ದರೆ ಮೊದಲಿಗೇ ಅದನ್ನು ಚರ್ಚಿಸಿ ನಿಷ್ಕರ್ಷೆಮಾಡಿಕೊಳ್ಳುತ್ತಾರೆ. ಸಮರ್ಥ ಪೂರಣಗಳು ಬಂದನಂತರ, ಸಮಸ್ಯೆಯನ್ನು ಕೊಟ್ಟ ಪದ್ಯಪಾನ ಪೃಚ್ಛಕ ತನ್ನ ಪೂರಣವನ್ನು ಕೊಟ್ಟು, ಇತರರ ಪೂರಣಗಳನ್ನು ವಿಮರ್ಶಿಸಿ, ವಿಶೇಷಗಳನ್ನು ಬಿಂಬಿಸಿ, ಸಮಾರೋಪಮಾಡಿ ಮುಂದಿನವಾರದ ಮತ್ತೊಂದು ಅಂಶಕ್ಕೆ ಹೋಗಬಹುದು.

      • ಧನ್ಯವಾದಗಳು ಸರ್ 🙂 ದೋಷಗಳಿದ್ದರೆ ತಿಳಿಸಿ. ತಿದ್ದಿಕೊಳ್ಳುವೆ.

    • ಆದರಣೀಯ ಪದ್ಯಪಾನಿಗಳೇ,

      ಅಜಶಾವಂ ಗಜಯೂಥ ಪೊಕ್ಕ ತೆರದೊಳ್ ಪ್ರತ್ಯಗ್ರತಾಹೀನನುಂ
      ಮಜಬೂತಾಗಿಹ ಪದ್ಯಪಾನಿಗಣಮಂ ಪೊಕ್ಕಿರ್ಪೆ ಚಾಪಲ್ಯದಿಂ |
      ನಿಜಗಾಣೇಶಕುಟುಂಬದೊಳ್ ಕಿರಿಯವಂ ತಿಳ್ದೆನ್ನ ದೋಷಂಗಳಂ
      ಸುಜನರ್ ತಾವ್ ಗುಣದೋಷವೇದಿಹೃದಯರ್ ಪೇಳಲ್ಕೆ ನಾಂ ಧನ್ಯನುಂ ||

      ಗಾಣೇಶ – ಗಣೇಶಸಂಬಂಧಿ ಎಂಬರ್ಥದಲ್ಲಿ.
      ಕಿರಿಯವಂ ತಿಳ್ದು, ಎನ್ನ ದೋಷಂಗಳಂ ಎಂದು ಅನ್ವಯ.
      ’ಗಜಯೂಥ’ಶಬ್ದದಲ್ಲಿ ವಿಭಕ್ತಿಯ ಭಕ್ತಿ ವಿಗತವಾದುದಕ್ಕೆ ಕ್ಷಮಿಸಿ. ದಾರಿಗಾಣದೆ ಹಾಲಿಗೆ ನೀರು ( ನೀರನ್ನು ) ಸೇರಿಸಬೇಕಾಯ್ತು 🙁

      • ಮೆಚ್ಚಾದತ್ತಲ! ರಾಮಕೃಷ್ಣಸುಕವೀ! ನಿಮ್ಮೊಂದು ವಿಕ್ರೀಡಿತಂ!!:-)
        ಸ್ವಲ್ಪ ವ್ಯಾಕರಣವನ್ನು ಗಮನಿಸಿಕೊಳ್ಳಿರಿ:-) ನಿಮಗಿದು ಅರಿದೇನಲ್ಲ!!

        • ಧನ್ಯವಾದಗಳು ಸರ್. ನಾನು ಸಂಸ್ಕೃತವಿದ್ಯಾರ್ಥಿ. ಹಳಗನ್ನಡದ ಸಾಹಿತ್ಯ-ವ್ಯಾಕರಣಗಳ ಅಧ್ಯಯನದಲ್ಲಿ ಇತ್ತೀಚೆಗಷ್ಟೇ ಉಪಕ್ರಮಿಸಿರುವುದರಿಂದ ಇರುವ ದೋಷ ಮತ್ತದರ ಪರಿಹಾರ ತಿಳಿಯುವುದಿಲ್ಲ. ಇಲ್ಲಿ ನಿಮ್ಮ ಹಾಗೂ ಇತರ ಪದ್ಯಪಾನಿಗಳ ಸಹಾಯ ಸಿಗಬಹುದೆಂದು ಬಂದೆ 🙂 ನಿಮ್ಮ ಸೂಚನೆಯಂತೆ ಯತ್ನಿಸುವೆ. ನೀವೂ ದಾರಿದೋರಿದರೆ ಹೆಚ್ಚಿನ ಆಸಕ್ತಿ-ಪಕ್ವತೆಗಳು ಬರಬಹುದೆಂದು ನಂಬಿದ್ದೇನೆ…:-)

  6. ವನಿತಕ್ಕಂ ಗೆಳೆಗಾರ್ತಿ ತಾಂ ಮರವೆಯಿಂದಿತ್ತಿದ್ದ ಮುತ್ತಾದಡೇ
    ನನಸೊಳ್ ಕೊಂಡಿಹ ಸಾಲಮಂ ಮನಸಿನೊಳ್ ತೀರ್ಚಿರ್ಪುದೇಂ ಸಮ್ಮತಂ।
    ವನಿತಕ್ಕಂ ಪತಿರಾಯ ತಾಂ ಮಮತೆಯಿಂದಿತ್ತಿದ್ದ ಮುತ್ತಾದಡೇ
    ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ।

    • ಅಹಹಾ! ಸೋದರಿ!! ಜಾಣಿದಲ್ತೆ ಬರೆಯಲ್ ಮತ್ತೇಭವಿಕ್ರೀಡಿತಂ!!!

      • “ವನಿತಕ್ಕ”ನನ್ನು ಮೆಚ್ಚಿದಕ್ಕೆ “ನಾನಾನನಾನಾನನಾ”!

      • ಗಣೇಶ್ ಸರ್,
        ಧನ್ಯವಾದಗಳು. “ವೃತ್ತ”ದಲ್ಲಿ ಪದ್ಯ ರಚನೆ ಕುತೂಹಲ ಮೂಡಿಸಿದೆ. ವರ್ಣವೃತ್ತಗಳ ಮಾತ್ರಾವಿನ್ಯಾಸ “ಪದ್ಯ ವಿದ್ಯೆ”ಯಿಂದ ತಿಳಿದಿದೆ. ಧಾಟಿ ಸ್ಪಷ್ಟವಾಗಬೇಕಿದೆ .
        ಅವುಗಳ ಗಣ ವಿಂಗಡಣೆಯಬಗ್ಗೆ ತಿಳಿಸಿಕೊಡಿ.(ಉದಾ: ದೋಧಕ : ನಾನನ,ನಾನನ,ನಾನನ,ನಾನಾ) ಈ ರೀತಿ ಎಲ್ಲ ವೃತ್ತಗಳ ಧಾಟಿಯನ್ನು ಸುಲಭವಾಗಿ ನೆನೆಪಿನಲ್ಲಿಟ್ಟುಕೊಳ್ಳುವ ಸೂತ್ರ ತಿಳಿಸಿ.(“ಪದ್ಯ ವಿದ್ಯೆ”ಯಲ್ಲಿ ಉದಾಹರಣೆ ಪೂರ್ಣ ಕಾಣಿಸುತ್ತಿಲ್ಲ)

        • ಈ ಬಗೆಗೆ ನಾನೇ ಅನ್ಯತ್ರ ಹೇಳಿರುವ ವೃತ್ತಗತಿವಿವೇಕವನ್ನು ಕುರಿತ ಶ್ರವ್ಯಮಾಹಿತಿಯನ್ನು ದಯಮಾಡಿ ಕೇಳಿರಿ. ಇದಕ್ಕಾಗಿ ಶ್ರೀಶ ಅಥವಾ ಶ್ರೀವತ್ಸ ಇಲ್ಲವೇ ಪ್ರಸಾದ್/ಬಾಪಟ್ ಸಹಾಯ ಮಾಡಬಲ್ಲರು.

  7. ತಡವಾಗಿ ನಾನು ಸಂತೆಯ ಹೊತ್ತಿಗೆ ಕೇವಲ ಎರಡೂವರೆ ಮೊಳ ನೇಯ್ದಿದ್ದೇನೆ. ಅದೂ ಹೊಳ್ಳರ ಪ್ರೀತಿಯ ಆಗ್ರಹದಿಂದ:-). ಯಾವುದೇ ನವದಂಪತಿಗಳಿಗಿದು ಒಸಗೆಯಾಗಲಿ:-)

    ಮನಸಾ ಪ್ರೀತಿಸಿ ಮೋದದಿಂ ಮದುವೆಯಾಗಿರ್ಪೊಂದು ನಲ್ಜೋಡಿ ಚುಂ-
    ಬನಮೇ ನಲ್ಮೆಯ ರೊಕ್ಕಮೆಂದು ಬಗೆವುತ್ತಿನ್ನೇಗಳುಂ ಜಾಣ್ಮೆಯಿಂ|
    ಬಿನದಂಗೊಂಡಿರಲೊರ್ಮೆ ಕಾದಲನವಂ ಕೂರ್ತಾಕೆಯೊಳ್ ಪೇಳ್ದಪಂ
    “ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀಚಿರ್ಪುದೇ ಸಂಮತಂ!!” 🙂

    • ಅಹಹಾ.. ಗಣೇಶರೇ, ತುಂಬಾ ಸೊಗಸಾಗಿದೆ. ಶೃಂಗಾರರಸಬಂಗಾರವನ್ನೇ ಹರಿಸಿಬಿಟ್ಟಿರಿ. ನಿಮ್ಮ ಎರಡೂವರೆ ಮೊಳದ ಪರಿಮಳಕ್ಕೆ ಇಡೀ ಸಂತೆಯೇ ತಿರುಗಿನೋಡುತ್ತಿದೆ. 🙂 ರಾಮಪಾದವಿದ್ದರೆ, ಕಲ್ಲಿಗೂ ಸುಶೀಲೆಯಾಗುವ ಭಾಗ್ಯವೇ… ಕಠಿಣವಾದ ಸಮಸ್ಯೆಗೆ ತುಂಬಾ ಸುಂದರವಾದ ತಿರುವನ್ನು ಕೊಟ್ಟಿದ್ದೀರಿ.

  8. ಅನುಮಾನಂಗಳೆ ಬಾರದಂತೆ ನಯದೊಳ್ ಶ್ರೀಮಂತರಂಗೈಯ್ವ ಕಲ್ –
    ಪನೆಗಳ್ಕಟ್ಟುವ ವಂಚಕರ್ಗಳೆನಿತೋ ಮೆಟ್ಟಿರ್ಪರೀಭೂಮಿಯಂ |
    ಮನೆಕಟ್ಟಲ್ಕೆನೆ ಕೊಂಡ ಸೈಟೆ ಕಳೆಯಲ್ ತಾನೇನು ಮಾಡಲ್ದಪನ್ ಮಾಳ್ಪಂ ಗಡಂ ?
    “ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಂಮತಂ ??” ||
    [ಅನೇಕ ಬಗೆಯ ವಂಚನೆಗಳಿಗೆ ಇದನ್ನು ಹೊಂದಿಸಬಹುದು]

    • ರಮಣೀಯಂ ಭವದೀಯಚಾಟುಚರಿತಕ್ಕತ್ಯಂತಯುಕ್ತಂ ನವೀ-
      ನಮಣೀಯಂ ಕೊರೆಯೊಂದದಲ್ಲದಪರಂ ಮೇಣ್ ತೋರದೀ ಪದ್ಯದೊಳ್ |
      ಕ್ರಮಣೀಯಂ ಗಡ ಮಾಳ್ಪನೆಂಬುದುಚಿತಂ “ಮಾಡಲ್ದಪಂ”ಸಲ್ಲದಯ್ !
      ಭ್ರಮಣೀಯಂ ಪದರೂಪಮಾವಗಮದರ್ಕೆಲ್ಲಿರ್ಪುದೋ ನಿಷ್ಕೃತಿ?

      ರಾಮ್, ಈ ಹೃದ್ಯಕಲ್ಪನೆ ನಿತರಾಂ ಪ್ರಶಂಸನೀಯ. ಕೇವಲ ಮಾಡಲ್ದಪಂ ಎಂಬ ಒಂದು ಪದವನ್ನು ಮಾತ್ರ ತಿದ್ದಬೇಕು:-). ಮಾಳ್ಪಂ ನರಂ/ಗಡಂ/ವಲಂ ಇತ್ಯಾದಿಯಾಗಿ ಪಾದಪೂರಣ ಸಾಧ್ಯ.

      • ಪ್ರಶಂಸನೆಗಾಗಿ ಧನ್ಯವಾದಗಳು ::
        ಸರಿಮಾಡಿರ್ಪೆನು ಪಾದಮಂ ತವವಚೋ ಸೂಚ್ಯಾರ್ಥದಂತಂ ಗಡಂ 🙂
        [ಗಡಂ, ದಪಂ, ವಲಂ ಗಳ ಸೂಕ್ಷ್ಮಗಳನ್ನು ಇನ್ನೂ ತಿಳಿಯಬೇಕಾಗಿದೆ. ಈ ಉತ್ತರದಲ್ಲಿಯೂ ತಪ್ಪಿದ್ದರೆ ಆಶ್ಚರ್ಯವಿಲ್ಲ]

  9. ತನುಜಂ ಯುದ್ಧದೆ ಮೋಸದಿಂದೆ ಮಡಿಯಲ್ ಕ್ರೋಧಾಗ್ನಿಯೊಳ್ ಬೇಯುತರ್ –
    ಜುನ ತಾ “ಕೊಲ್ವೆನು ಸೈಂಧವನ್ನ್ ದಿನದೊಳ್ ಮೇಣಗ್ನಿಗಾಹಾರವಾಂ”
    ಎನಲಾ ಭ್ರಾಂತಿಯ ಭಾಷೆ ಸಲ್ಲದೆನೆ, ತಾಂ ಧರ್ಮಜ್ಞನಿಂಪೇಳ್ದನೈ
    “ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಂಮತಂ” ||

  10. ಹೊಳ್ಳರೇ! ಈ ಸಂಚಿಕೆಯಲ್ಲಿ ನಿಮ್ಮ ಆರಂಭದ ಹಳಗನ್ನಡವಿಭಕ್ತಿಗಳನ್ನು ಕುರಿತ ವಿವರಗಳಲ್ಲಿ ಒಂದು ತಪ್ಪಾಗಿದೆ. ಸಂಬೋಧನೆಗೆ ಅಲ್ಲಿ ರಾಮ ಎಂಬ ಹೊಸಗನ್ನಡಕ್ಕೆ ಸಂವಾದಿಯಾಗಿ ರಾಮೈ ಎಂದು ಕಾಣಿಸಿದ್ದೀರಿ. ಇದು ಕೇವಲ ಕ್ರಿಯಾಪದಕ್ಕೆ ಅನ್ವಯಿಸುತ್ತದೆ( ಮಾಡಯ್, ತೋರಯ್, ನೀಡಯ್ ಇತ್ಯಾದಿ. ಇದಾದರೂ ಪುಂಲಿಂಗಕ್ಕೆ ಮಾತ್ರ. ಸ್ತ್ರೀಲಿಂಗದಲ್ಲಿ ಮಾಡೌ, ನೀಡೌ, ತೋರೌ ಇತ್ಯಾದಿ). ಆದರೆ ಕೇವಲ ನಾಮಪದಕ್ಕೆ ಬಂದಾಗ ಅದು ರಾಮನೆ!, ರಾಮನೇ!, ರಾಮ!, ರಾಮಾ! ಎಂಬೀ ರೂಪಗಳನ್ನೇ ಪಡೆಯುತ್ತದೆ. ಈ ಬಗೆಗೆ ಶ್ರೀಕಾಂತ್ ಅವರು ನನ್ನ ಗಮನವನ್ನು ಸೆಳೆದುದಕ್ಕಾಗಿ ಅವರಿಗೆ ಧನ್ಯವಾದಗಳು.

  11. ಹೀಗೊಬ್ಬನ ಅಳಲು:
    ಕನಸೆಲ್ಲಂ ನನಸಾಗುತಿರ್ದೊಡದನುಂ| ಸೌಭಾಗ್ಯ ತಾನೆನ್ನದಿರ್
    ಕನಸೊಳ್ ಕಂಡವಳಂತೆಯಿರ್ಪವಳನುಂ| ನಾ ಪೊಂದಿ ಪಾಡಾದೆ ಕೇಳ್
    ಧನಮೆಲ್ಲಂ ಹರಿಯೆ ಪ್ರಸಾಧನವನುಂ| ಕೊಳ್ಳಲ್ಕೆ ವಾರಾಂತರಂ
    ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ

  12. ಧನಮಂ ಕೈಗಡವೆಂದು ಕೊಂಡ ಸಖನಿಂ, ನಷ್ಟಂಯೆದುರ್ ಬಂದಿರಲ್
    ಮನವಾಘಾತಗೊಳಲ್ಕವಂ ಅನಿತರೊಳ್ ವಿಭ್ರಾಂತನಾದನ್ ಗಡಾ |
    ಪಣವಂ ನೀಡುತ ಪೆರ್ಮೆಯಿಂದ ನುಡಿದನ್ ವಿಶ್ವಾಸದಿಂದಿತ್ತಗಂ
    “ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ” ||

  13. ಸಮಸ್ಯಾಪೂರ್ತಿಯಲ್ಲಿ ಇದು ನನ್ನ ಮೊದಲ ಪ್ರಯತ್ನ.. ಹಳೆಗನ್ನಡ ಅಷ್ಟಾಗಿ ತಿಳಿದಿಲ್ಲ. ತಪ್ಪಿದ್ದರೆ ತಿದ್ದಿ ತಿಳಿಸಿ.

    ಧನದಾ ಬಡ್ಡಿಯ ಲೆಕ್ಕಮಂ ಎಣಿಸಿ ನಾಂ ಸೋತಿರ್ಪೆ ಈ ಲೋಕದೊಳ್
    ಇನಿಯೇ ನಿನ್ನಯ ಚುಂಬನಾಮೃತವನಂ ಹೀರಿರ್ಪೆ ನಾ ಸ್ವಪ್ನದೊಳ್ |
    ಎನಿತೋ ಕೈಪಿಡಿ ಎನ್ನನುಂ ಪಡೆವೆ ನಾನ್ ಅಲ್ಪಂ ಸಮಾಧಾನಮಂ
    ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ ||

  14. ನಲವಿಂಕೋರುವೆನಾಗತಂ ಮಧುರಪಾನಕ್ಕೆಂ ಹರೀಶಾಖ್ಯರೇ
    ಕೆಲದೋಷಂಗಳ ಸಂಧಿಮಾಡಿ ಕಳೆಯಲ್ ಚಿತ್ತಾರ ಚೆಂದಂ ಗಡಾ

    ಪದ್ಯಪಾನಕ್ಕೆ ಸ್ವಾಗತ – ಕೆಲವೆಡೆ ವಿಸಂಧಿ ದೋಷಗಳಿವೆ (ಸಂಧಿ ಮಾಡುವಲ್ಲಿ ಮಾಡದಿರುವುದು). ಸರಿಮಾಡಿದರೆ – ಚೆನ್ನಾಗುವುದು.

    • ನಮಸ್ಕಾರ ರಾಮಚಂದ್ರ ಅವರೇ.
      ನಾನ್ ಅಲ್ಪಂ ಒಂದು ವಿಸಂಧಿ ಇರಬಹುದೆಂದು ನನ್ನ ಊಹೆ. ಮತ್ತಿನ್ನೆಲ್ಲಿ ತಪ್ಪಿದೆ ಎಂದು ಹೇಳಿದರೆ ತಿದ್ದಿಕೊಳ್ಳಲು ಅನುಕೂಲವಾಗುವುದು.

      • ಲೆಕ್ಕಮಂ ಎಣಿಸಿ (ಲೆಕ್ಕಮಂ ಗುಣಿಸಿ ಎಂದರೂ ಹೊಂದಾಣಿಕೆಯಾಗಬಹುದು)
        ಸೋತಿರ್ಪೆ ಈ ಲೋಕದೊಳ್ (ವಿಸಂಧಿ ಎಂದಲ್ಲ – ಹಾಗೇ ಕಾಣುವಂಥದ್ದು) (ಸೋತಿರ್ಪೆನೀ ಲೋಕದೊಳ್)
        ಲೋಕದೊಳ್ ಇನಿಯೇ (ಸಾಲು ದಾಟುವಾಗಲೂ ವಾಕ್ಯದ ಮುಂದುವರಿಕೆಯಿದ್ದಲ್ಲಿ ಸಂಧಿ ಮಾಡಬೇಕು) (ಲೋಕದೊಳ್ಗಿನಿಯೇ)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)