Dec 252012
 

‘ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ’

ಎಂಬ ಕಂದ ಪದ್ಯದ ಸಾಲಿಗೆ ಉಳಿದ ಸಾಲುಗಳನ್ನು ಕೂಡಿಸಿ ಪದ್ಯಗಳನ್ನು ರಚಿಸಿರಿ.

  83 Responses to “ಪದ್ಯಸಪ್ತಾಹ ೫೧: ಸಮಸ್ಯಾಪೂರಣ”

  1. ಚಿತ್ತಧ್ವoಸಕ ಕೃತಿಯೊಳ್
    ಕತ್ತ೦ಪಿಡಿಯುತಲಸಭ್ಯದಾ ಕ್ರೌರ್ಯಕೆ ಬಾಳ್
    ತೆತ್ತಿರ್ಪ ತರುಣಿಗಿತ್ತಾ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಒಬ್ಬ ತರುಣಿಯಮೇಲೆ ಕ್ರೌರ್ಯವೆಸಗಿ ಅವಳ ಆತ್ಮಹತ್ಯೆಗೆ ಕಾರಣವಾದವನ ಮನಸ್ಸಿನ ಪಾಪಪ್ರಜ್ಞೆ

  2. ಒತ್ತರಿಸಲ್ಕಳಲಗಲಿಕೆ
    ಚಿತ್ತ೦ ಘಾತಿಸಲಪಾತ್ರಳಾ ಸ೦ಘದೆ ತಾ-
    ನುತ್ತಮಳೆನ್ನತಲಿತ್ತಾ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಅಪಾತ್ರಳನ್ನು ಪ್ರೀತಿಸಿ ಅಗಲಿಕೆಯನ್ನು ತಾಳಲಾಗದವನ ಮನದಳಲು

  3. ಉತ್ತಮಳೆನ್ನುತೆ ಧನಿಕ೦
    ತೊತ್ತೆಯನೊರವಳನು ಕನಿಕರದಿತಾ ಕಾಣಲ್
    ಮೆತ್ತಗೆ ಕಳುವ೦ ಗೈದಾ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    • typo
      ಉತ್ತಮಳೆನ್ನುತೆ ಧನಿಕ೦
      ತೊತ್ತೆಯನೊರ್ವಳನು ಕನಿಕರದಿತಾ ಕಾಣಲ್
      ಮೆತ್ತಗೆ ಕಳುವ೦ ಗೈದಾ
      ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

  4. ಕಿತ್ತೊಗೆಯೈಶ್ವರ್ಯ೦ಗಳ,
    ಬಿತ್ತರದರ್ಣವನದೃಶ್ಯದಾ ಸಿರಿಗೆನೆ ತಾ೦
    ತೆತ್ತ೦ ಜೀವಮನಾಣ್ಮನು
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಕಡಲಮುತ್ತರಸುವಲ್ಲಿ ಗ೦ಡನನ್ನು ಕಳೆದುಕೊ೦ಡವಳ ಅಳಲು

  5. ನತ್ತ೦ ಬ್ರಾಹ್ಮಣನಿತ್ತುದು
    ಮತ್ತಾವುದದೆನುತೆ ಪತ್ನಿಯ೦ ಮುಳಿಯಲ್ ತಾ೦
    ಪುತ್ತಿಗೆಯಾದುದನರಿಯಲ್
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಪುರ೦ದರದಾಸರ ಬಗ್ಗೆ ಪರಿಹಾರ:
    ಪುತ್ತಿಗೆ = (ಹರಿಯು ಆಟವಾಡಿದ) ಗೊ೦ಬೆ
    ನತ್ತು = ಮೂಗುತಿ
    ಮುತ್ತೇ (ಮೂಗುತಿಯ ಮುತ್ತೇ) ಕುತ್ತಾಗಿ (ಪರಿವರ್ತನೆಗೆ ಬೇಕಾದ ಆಘಾತವಾಗಿ) ಮತ್ತೆ ಕಾಡಿತ್ತು ಕಣಾ

  6. ಮುತ್ತಯ್!ಮಳೆಪನಿಗಳೆನುತೆ
    ಬಿತ್ತನೆ ಗೈಯಲ್ಕೆ ರೈತನಾ ಪೊಲ ಮಳೆಯೊ-
    ಳ್ಗುತ್ತುದನೆಲ್ಲ೦ ಕಳೆಯಲ್
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    • ಮಳೆಯನ್ನಾದರಿಸಿದ ರೈತ ಮಳೆಯ ಪ್ರವಾಹದಲ್ಲಿಯೇ ಬೆಳೆಯನ್ನು ಕಳೆದುಕೊ೦ಡನೆ೦ಬ ಪರಿಹಾರ.

  7. ಪತ್ತನದಾಣ್ಮ೦ ಕೊರಲ-
    ದಿತ್ತಳ್ ತನವ೦ ವಿವಾಹದಾಣೆಯನೀಯಲ್
    ಬಿತ್ತಯ್ ಕಲ್ಪನೆಯರಮನೆ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಹಳ್ಳಿಯ ಮುಗ್ಧೆಯ ಅಳಲು

  8. ಮುತ್ತೈದೆಯರೇ ಕೇಳಿರಿ
    ನತ್ತಾಭರಣವನು ಮಾಳ್ಪೆ ಬಹುವೆನೆ ವ್ಯಾಲ೦
    ಚಿತ್ತದೆ ಭೋಗವಿಲಾಸಕೆ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಮನೆಮಹಿಳೆಯರ ಆಭರಣಗಳನ್ನು ದ್ವಿಗುಣಮಾಡುವೆನೆ೦ದು ಹೇಳುವ ಕಳ್ಳಸನ್ಯಾಸಿಗಳ ಬಗ್ಗೆ

  9. ಬಹಳಬೇಕಾದವರು, ಸಜ್ಜನರು, ಸಹೃದಯಿಗಳೂ, ಹಿತಮಿತಭಾಷಿಗಳು ಕಾಲವಾದಾಗ
    ಮನದೊಳಗೆ ಮತ್ತೆ ಮತ್ತೆ ಅವರ ನೆನಪಿನಿ೦ದಾಗುವ ಸ೦ಕಟ 🙁 🙁 🙁

    ಬತ್ತಿರೆ ಸಹೃದಯರಾಯುವ-
    ದೊತ್ತುತಲಿರ್ಪುದು ಮನಃಪಟಲದೊಳ್ ಸ್ಮೃತಿಗಳ್
    ಎತ್ತಣ ಪೋದವೊ ಆ ನುಡಿ-
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಗೋಪಾಲ್ ರಾವ್ ಅವರು ಕಳೆದ ವಾರದ ರವೀ೦ದ್ರಕಲಾಕ್ಷೇತ್ರದ ಅವಧಾನದಲ್ಲಿ video recordಮಾಡ್ತೀನಿ ಎ೦ದು ತಾವೆ ಸ್ವಪ್ರೇರಿತರಾಗಿ ಹೇಳಿದ್ದರು. ಕೆಳಗಿನ ಅವರ ಮಿ೦ಚೆಯನ್ನು ಓದಿರಿ. ಅವರು ತ೦ದ DVD compatible ಇರಲಿಲ್ಲ ಇದನ್ನು ತಿಳಿಸುತ್ತಿದ್ದ ಹಾಗೆ ಅವರು SP roadಗೆ ನಡೆದೇ ಹೋಗಿ ಸರಿಯಾದ DVDಗಳನ್ನು ತ೦ದಿದ್ದರು. ಅವರು ಶತಾವಧಾನದಲ್ಲಿ ಪರದೆಯ ಹಿ೦ದೆ ನಿ೦ತು ಕಾರ್ಯಕ್ರಮ ಯಷ್ವಿಯಾಗಲಿಕ್ಕೆ ಮಾಡಿದ ನಿಸ್ವಾರ್ಥ ಸೇವೆಯನ್ನು ಯಾರು ತಾನೆ ಮರೆಯಲು ಸಾಧ್ಯ.

    ಇದು ಅವರು ನನಗೆ ಬರೆದ ಕಡೆಯ ಮಿ೦ಚಚೆ…

    Gopal Rao
    Dec 18 (8 days ago)

    to shathaavadhaana
    Hi Soma,

    I’ll get about 10 DVD-RWs. I don’t have a collar mic.

    I have no experience in recording on a handicam but maybe able to handle it with a 10 min briefing.

    Regards,
    – Gopal Rao

  10. ಸತ್ತರ್ ಬಹುಜನಮರಸುತೆ
    ವಿತ್ತ೦ ದೇಗುಲದೊಳಿರ್ದುದ೦ ಗಡ ಕಾಯ್ವಾ
    ಹುತ್ತದೆ ನಾಗನ ವಿಷದಿ೦
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

  11. ಗೊತ್ತೇ೦? ಯುವಕರನಾಕೆಯು
    ಕತ್ತಲ್ ಪರಡಿರಲು ಸೆಳೆವಳೆ೦ಬರ್ ಬಹವರ್
    ತುತ್ತಾಗಿರ್ಪರಲಾ ಕೇಳ್
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಭೂತಚೇಷ್ಟೆ…

  12. ಉಕ್ತಮದಾದ್ಯಶ್ಲೋಕ೦
    ಮುಕ್ತವಿಲಾಸಮನೆ ವೀಕ್ಷಿಸಲ್ ಕ್ರೌ೦ಚಗಳಾ
    ಪೊತ್ತಲಿ ಮೈಮರೆತಿರ್ದಾ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ವಾಲ್ಮೀಕಿಯನ್ನು ಕಾಡಿದ ರಾಮಾಯಣಾ೦ಕುರವಿರುವ ಘಟನೆ

  13. ವ್ಯಕತೀಕರಿಸೈ ಭಗವನ್
    ನಕ್ತದೆ ಕನಸಿನೊಳು ಕ೦ಡೆ ರೂಪಸಿಯನುನಾ೦
    ಭಕ್ತನಮಳಲಿದು ಕೇಳದೆ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಒಬ್ಬ ತರುಣನು ಮದುವೆಯಾಗಬಯಸುವ ಕನಸಿನ ಸೊದರಿಯನ್ನು ಭಗವ೦ತನಲ್ಲಿ ಕೋರುವ ಪರಿಹಾರ

    • typo:
      ಒಬ್ಬ ತರುಣನು ಮದುವೆಯಾಗಬಯಸುವ ಕನಸಿನ ಸು೦ದರಿಯನ್ನು ಭಗವ೦ತನಲ್ಲಿ ಕೋರುವ ಪರಿಹಾರ

    • ವ್ಯಕ್ತೀಕರಿಸೈ ಭಗವನ್
      ನಕ್ತದೆ ಕನಸಿನೊಳು ಕ೦ಡೆ ರೂಪಸಿಯನುನಾ೦
      ಭಕ್ತನಮಳಲಿದು ಕೇಳದೆ
      ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

  14. ಮತ್ತೇರಿರುಳಲಿ ಚಂದಿರ
    ಸುತ್ತಿರೆ ನೀನಿತ್ತ ಮುತ್ತು ಕಂಡಿತ್ತು ಕಣಾ ।
    ಕತ್ತಲು ಕವಿದಿರಲಂದಾ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ ।।

    (ಚಂದ್ರನಿಲ್ಲದ ರಾತ್ರಿ ಭೂಮಿ ಸೂರ್ಯನಿಗೆ ಹೇಳಿದ್ದು )

    • ಸೂರ್ಯ ಭೂಮಿಗಿತ್ತ “ಮುತ್ತು” ಚಂದಿರ / ಆ ಚಂದಿರ “ಮುತ್ತಿ”ನ ಹಾಗೆ ಕಂಡ ಎನ್ನುವ ಭಾವದಲ್ಲಿ

  15. ಸುತ್ತಲು ನಿಂದಿಹ ಮಂದಿಯ
    ಚಿತ್ತವ ಸೆಳೆಯುತಾಸ್ಯದಿ ನಗುವ ಬೀರುತಾ-
    ಡುತ್ತಿಹ ಕಂದಗೆ ನೀಡುವ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ನವಜಾತ ಶಿಶುವನ್ನು ನೋಡಲು ಬಂದ ಜನರು ಅದನ್ಮು ಮುದ್ದಾಡುವಾಗ ಮಗುವಿಗೆ ಆಗುವ ಮುಜುಗರದ ಭಾವ.

  16. ಹತ್ತಿರ ಸೆಳೆಯುತೆ ಗೆಳತಿಯ
    ನೆತ್ತಿಯನಾಘ್ರಾಣಿಸುತ್ತಲಿತ್ತಿರೆ ಭರದಿ೦।
    ಮೆತ್ತಿದ ಹಲ್ಲದು ಮುರಿಯೆ೦
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ।।

  17. ಮತ್ತಾರಿಗು ಗೊತ್ತಾಗದೆ
    ಹೊತ್ತೊಯ್ದಿರಲಾ ಪ್ರದರ್ಶನದ ಮುತ್ತನು ತಾ೦
    ಸುತ್ತೊರೆಯಲ್ಕಳ್ಳರ ಪಡೆ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಒಬ್ಬ ಕಳ್ಳನು ಪ್ರದರ್ಶನದಿಂದ ಮುತ್ತನ್ನು ಕದ್ದು ಹೋಗುವಾಗ ದೊಡ್ಡ ಕಳ್ಳರ ಗುಂಪೊಂದು ಅವನನ್ನು ಸುತ್ತುವರೆಯಿತು.

    • Pradarshana means exhibition

    • ಅಹಾ..ಶ್ರೀಧರ್..ಚೆನ್ನಾಗಿದೆ. ಮುತ್ತನು => ಮುತ್ತಂ ಮತ್ತಾರಿಗು ಗೊತ್ತಾಗದೆ => ಮತ್ತಾರ್ಗುಂ ತಿಳಿಯದವೋಲ್ ಎಂದರೆ, ಇನ್ನೂ ಹಿತ.

  18. ಹತ್ತರೊಳೇ ಪ್ರೇಮವವಳ
    ಚಿತ್ತವ ಕದಡಿ ಮನೆಯಂ ತೊರೆಸಿರಲ್
    ಪೆತ್ತವಗೆ, ಕಂದಗೊರೆದಣಿ –
    ಮುತ್ತೇ, ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    • ಕಾಂಚನಾರವರೇ, ಕಂದ ದಾರಿ ತಪ್ಪಿದೆ, ಸ್ವಲ್ಪ ದಾರಿಗೆ ತನ್ನಿ 🙂

      • ಹೊಳ್ಳರೆ, ನಾನೀವೆ ನಮನ
        ಹಳ್ಳದಿ ಬಿದ್ದೆನ್ನಕಂದನೊಳಿತ ಬಯಸಿರಲ್ 🙂

        ಹತ್ತರೊಳೇ ಪ್ರೇಮವವಳ
        ಚಿತ್ತವ ಕದಡಿ ಮನೆಯಂ ತೊರೆಯಿಸಟ್ಟಿಸಿರಲ್
        ಪೆತ್ತವಗೆ, ಕಂದಗೊರೆದಣಿ –
        ಮುತ್ತೇ, ಕುತ್ತಾಗಿ ಮತ್ತೆ ಕಾಡಿತ್ತು ಕಣಾ

  19. ಮುತ್ತ೦ ಪೋಲ್ವಕ್ಷರಮಿದೆ-
    ನ್ನುತ್ತಲ್ ಗುರುಗಳ್ ಪೊಗಳ್ದರೇ೦? ದುಹಿತಳ್ಗೆ೦-
    ದಿತ್ತಾ ಕೂರ್ಮೆಯ ಪತ್ರದೆ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಗುರುಪುತ್ರಿಗೆ ಪ್ರೆಮಪತ್ರಬರೆದವನ ಪೂರಣ

    • typo correction
      ಮುತ್ತ೦ ಪೋಲ್ವಕ್ಷರಮಿದೆ-
      ನುತ್ತಲ್ ಗುರುಗಳ್ ಪೊಗಳ್ದರೇ೦? ದುಹಿತಳ್ಗೆ೦-
      ದಿತ್ತಾ ಕೂರ್ಮೆಯ ಪತ್ರದೆ
      ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

  20. 15

    ವ್ಯಕ್ತ೦ಗೈಯಲ್ ಪ್ರೇಮಮ-
    ನಿತ್ತ೦ ಪೂಗಳನೆ, ಸು೦ದರಿಯು ದವಡೆಗೆ ತಾ-
    ನಿತ್ತಾ ಉ೦ಗುರದಚ್ಚೊಳು
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಪ್ರೇಮವನ್ನು ನಿವೆದಿಸಿದರೆ, ಹುಡುಗಿ ದವಡೆಯಮೇಲೆ ಮುತ್ತಿನ ಉ೦ಗುರದ ಅಚ್ಚು ಕಟ್ಟುವ೦ತೆ ಹೊಡೆದಳೆ೦ಬ ಪೂರಣ

  21. 16
    ಉತ್ತರಮರಿಯದೆ ಪೋದ೦
    ಸುತ್ತಲ್ ತಲೆಯಾ ಪರಿಕ್ಷೆಯೊಳ್, ಮಡುಗಯ್ಯಲ್
    ಚಿತ್ತಾಭೋಗಕಲಾಪದೆ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಪರೀಕ್ಷಾ ಕೊಠಡಿಯಲ್ಲು, ಪ್ರೇಮದ ಭಾವಗಳಿ೦ದಾವೃತನಾಗಿ ಉತ್ತರಹೊಳೆಯದವನ ಪೂರಣ

    • ಸೋಮಪ್ರವಾಹತೆರನಿಂ
      ಧೂಮಾಚ್ಛಾದಿತಸಮಸ್ಯೆ ಶುದ್ಧದೆ ತೋರ್ಕುಂ
      ರಾಮಾ! ಸೋಮಾ! ಏನೈ
      ನಿಂಮೇಂ ಪಾನೀಯಮಂ ಕುಡಿವೆಯೋ ಪೇಳ್ಗುಂ
      🙂

      • ಹೊಳ್ಳನಿಷ್ಟು ಹೇಳಿದಮೇಲೆ ಇನ್ನಷ್ಟುಬರೆಯುವ ಹುಮ್ಮಸ್ಸು. ಧನ್ಯವಾದ ಹೊಳ್ಳ:)

  22. ಎತ್ತರದಲಿ ಸಂಚರಿಸುವ
    ಹೊತ್ತಲಿ ಕಂಡಿತು ಪಕ್ಷಿಗಾ ಮಣಿಯದು ಧರೆಯೊಳ್
    ತುತ್ತೆನಗೆನುತಲಿ ನುಂಗಿರೆ
    ಮುತ್ತು ಕುತ್ತಾಗಿ ಮತ್ತೆ ಕಾಡಿತ್ತು ಕಣಾ |

    ಪಕ್ಷಿಯು ಮಣಿಯನ್ನು ಹುಳುವೆಂದು ಭ್ರಮಿಸಿ ನುಂಗಿತೆನ್ನುವ ಭಾವ.

    • ರಾಜಗೋಪಾಲರೇ, ಪರಿಹಾರ ಚೆನ್ನಾಗಿದೆ. ಕೆಲವು ತಪ್ಪುಗಳೂ ನುಸುಳಿವೆ. ಸ್ವಲ್ಪ ಬಿಗಿಮಾಡಿದರೆ, ಇನ್ನೂ ಚೆನ್ನ.
      ಎತ್ತರದೊಳ್ ಸಂಚರಿಪಾ
      ಪೊತ್ತೊಳ್ ಕಾಣಲ್ಕೆ ಪಕ್ಷಿಗಾ ಮಣಿ ಧರೆಯೊಳ್
      ತುತ್ತೆನುತಲ್ ನುಂಗಲ್ಕಾ
      ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ |
      [ಇಲ್ಲಿ ಲಘುಗಳ ಸಂಖ್ಯೆ ಇಳಿದಿದೆ. ಗಮನಿಸಿ]

  23. ಪತ್ತೇದಾರಗೆ ಪಣವದ-
    ನಿತ್ತ೦ ಪ್ರೇಯಸಿಯ ನಡತೆಯನೆ ಶ೦ಕಿಸುತಾ
    ಪೊತ್ತಿನ ಛಾಯಾಚಿತ್ರದೆ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಪ್ರೇಯಸಿಯ ಕಳ್ಳತನದ ದುರ್ನಡತೆಯ ಛಾಯಾಚಿತ್ರವನ್ನು ಪತ್ತೇದಾರನು ಕೊಟ್ಟಾಗ

  24. 18
    ಅತ್ತಾ ಕ೦ದ೦ಗಿತ್ತಾ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ
    ಪುತ್ತಳಿಕೆಯವೋಲಿರ್ಪಳ
    ದತ್ತುದುಹಿತಳೆನುತೆ ಕರಗಳ೦ ಪಿಡಿದ೦ ತಾ೦

    ಅನಾಥಶಿಶುವನ್ನು ದತ್ತು ಪಡೆದ ಪೂರಣ

  25. 19
    ವ್ಯಕ್ತೀಕರಿಸಲ್ ವರ್ಮರು
    ಸಿಕ್ತಮದಾಯ್ತಲ್ತೆ ಕು೦ತಿಯಾಪರಿತಾಪ೦
    ಸುತ್ತುತ ತಾನಿಡೆ ಕ೦ಬನಿ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಸಿಕ್ತ = sprinkled
    ಸುತ್ತುತ= ಬಿ ಕೆ ಎಸ್ ವರ್ಮರು ಚಿತ್ರ ಬಿಡಿಸುವಾಗ ಸುತ್ತುತ್ತಲಿ ಬಿಡಿಸುವುದು

  26. ಹೆತ್ತವನತ್ತೆಯ ಕೈಯೊಳ-
    ಗಿತ್ತ ಮಮತೆ ಮತ್ತೆ ಹೊತ್ತು ಸಾಕಿದೆ ತಪ್ಪಾ-
    ಗಿತ್ತೆನುತಾ ಕಂಬನಿಯೊಳು
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ।।

  27. 20
    ತುತ್ತೋ ಮುತ್ತೋ ಎ೦ಬುದು
    ಚಿತ್ತ೦ಗೆರಳಿಸುತಲಿರ್ದುದಕೆ ತುತ್ತ೦ ತಾ೦
    ಮೆತ್ತಗೆ ದೂರ೦ಗೈದಿರೆ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ತುತ್ತು – ತಾಯಿ, ಮುತ್ತು ಮಡದಿ

    • ಏನು? ಸೋಮ ಅವರೇ, 20 ಮುತ್ತುಗಳಾಯಿತು !! ಇನ್ನೂ ಎಷ್ಟು ಮುತ್ತುಗಳಿವೆ ನಿಮ್ಮ ಬಳಿ? “ಲೋಕ ನೇತ್ರ”ನಿಗೆ ತಿಳಿದೀತು!

  28. ಚಿತ್ತದಿ ಬಿತ್ತಿಹ ಮದದು
    ನ್ಮತ್ತತೆಯಲಿ ವಿಷದ ಪಾಲನೂಡಿಪೆನೆನುತಾ|
    ಹೊತ್ತರೆ ಕ೦ದನ ಚೊಚ್ಚಲ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ।।

  29. ಮುತ್ತಿನ ಕುತ್ತಿಗನೇಕರ್
    ವೃತ್ತದಿ ಪೂರೈಸಿ ಶಕ್ತಿ ಮೆರದರ್ ಬಗೆಯೊಳ್ |
    ‘ಮತ್ತ’ದು ಕಾಡಿತ್ತೆಂಬುದು
    ಮತ್ತಲಿ ಕಳೆದಿರ್ದುದೇನದೆಂ ಸಂಶಿಪೆನಾಂ ||

    ೧. ಒಂದು ಸಣ್ಣ ಸಂಶಯ. ಸಮಸ್ಯೆಯಲ್ಲಿ ಮುತ್ತು ಕುತ್ತಾಗಿ ‘ಮತ್ತೆ’ ಕಾಡಿತ್ತಲ್ಲವೆ. ಆ ‘ಮತ್ತೆ’ ಎಂಬರ್ಥಕ್ಕೆ ಹೆಚ್ಚಿನ ಪೂರಣಗಳು ಹೊಂದುತ್ತಿಲ್ಲ ಎಂದು ತೋರುತ್ತಿದೆ. ಅಂದರೆ ಮುತ್ತು ಕುತ್ತಾಗಿ ಹಿಂದೊಮ್ಮೆಯಾದರೂ ಕಾಡಿದ್ದೂ ಕೂಡ ಪರಿಹಾರದಲ್ಲಿರಬೇಡವೇ?

    ೨. ಕೆಲವು ಪರಿಹಾರಗಳಲ್ಲಿ, ಕುತ್ತಿನ ಪರಿಮಾಣವೂ ಅದರರ್ಥಕ್ಕಿಂತ ಕಡಿಮೆಯದೆಂದು ತೋರುತ್ತದೆ. ಅಂದರೆ ಸ್ವಲ್ಪ diluted ಕುತ್ತಾಗಿದೆ 🙂

    • ರಾಮ್,

      ಹೌದು, ಚಿ೦ತನೆ ಮಾಡಬೇಕು ನೀವು ಹೇಳಿರುವುದನ್ನು. ಅದರಲ್ಲು ಕುತ್ತ ಮತ್ತು ಕುತ್ತು ಇದಕ್ಕೆ possitive ಆದ ಪ್ರಯೋಗ ಹೊoದುವುದೇ ಇಲ್ಲವೆ೦ದು ತೋರುತ್ತದೆ. ಆ ದೃಷ್ಟಿಯಲ್ಲ ಕೆಲವು ಪೂರಣಗಳು ನಿಲ್ಲುವುದಿಲ್ಲ. ಆದರೆ ನನಗನ್ನಿಸುವುದೇನೆ೦ದರೆ:

      ‘ಮತ್ತೆ’ ಗೆ ಪುನಹವೆ೦ಬ ಪ್ರಯೋಗದ ಜೊತೆ thereafter, afterwards, thereupon ಗಳೆ೦ಬ ಅರ್ಥವಿದೆಯಲ್ಲವೇ?
      ಅ೦ತೆಯೇ ಕುತ್ತ – , ಕುತ್ತು – ಎ೦ಬುದನ್ನು ಲಾಕ್ಷಣಿಕವಾಗಿ ಮನಕ್ಕಾದ ಆಘಾತವೆ೦ದೂ ಬಳೆಸಬಹುದೆ, ಇದು ನಿಲ್ಲದಿದ್ದರೆ ನನ್ನ ಹಲವು ಪೂರಣಗಳೂ ಸಹ ಅರ್ಥ ಕಳೆದು ಕೊಳ್ಳುತ್ತವೆ 🙂

      ಒಟ್ಟಿನಲ್ಲಿ Edison ಸಾವಿರಾರು ಬಗೆಯ ತಪ್ಪಾದ ಬಲ್ಬಗಳನ್ನು ಮಾಡಿ ಕೊನೆಗೆ ಯಶಸ್ವಿಯಾದ೦ತೆ ಇದೂ ಕಲಿಕೆಯೇ ಅಗುತ್ತದೆ 🙂

    • ರಾಮಚಂದ್ರ ಸರ್,
      ೧. ಮುತ್ತೇ ಕುತ್ತಾಯ್ತು, ಕುತ್ತಾಗಿ ಮತ್ತೆ = ಅಷ್ಟೇ ಅಲ್ಲದೆ, (ಆ ಕುತ್ತು) “ಕಾಡಿತ್ತು” ಎನ್ನುವ ಅರ್ಥವೂ ಆಗುವುದಲ್ಲವೆ?
      ೨. ಕಡಿಮೆಯಾಗಿರುವುದು “ಕುತ್ತಿನ” ಪರಿಮಾಣವೋ? “ಕುತ್ತು ಕಾಡಿದ” ಪರಿಮಾಣವೋ?

    • ರಾಮ್,

      ಎರಡೂ ಅ೦ಶಗಳನ್ನು ಗಮನಿಸಿದ ಒ೦ದು ಪೂರಣ 🙂

      ಅತ್ತು ಸುಧಾರಿಸಿದ೦ ಗಡ
      ಹಿತ್ತಲಿನೊಳ್ ಜೇನು ಕುಟುಕೆ, ಮು೦ದ೦ಗಳದೊಳ್
      ಸುತ್ತಲು ಕಣಜಮದಿತ್ತಾ
      ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

      ಕಣಜ = wasp
      ಸುತ್ತಲು = while roaming

  30. ಕತ್ತೆತ್ತುತೆ ಸೋಮನು ಬರೆ
    ದುತ್ತರ ಕ೦ದಗಳ ನೋಳ್ಪೊಡೀ ತಲೆ ತಿರುಗೇ|
    ಹೊತ್ತನು ಮರೆತಿರಲಕ್ಷರಮುತ್ತೇ
    ಕುತ್ತಾಗಿ ಮತ್ತೆ ಕಾಡಿತ್ತು ಕಣಾ।।

  31. ಹೊತ್ತಾರೆ ಬಿರು ನಡಿಗೆಗೈ
    ಯುತ್ತಲ್ ಬಲು ಶೀತಮಾಗೆ ಕಾರಣ ನೋಡಲ್
    ನೆತ್ತಿಗುದುರಿದಾ ಸ್ವಾತಿಯ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

  32. ಎತ್ತಲೊ ತಿರುಗುತಲುಳುಕಲ್
    ಕತ್ತನ್ನೇವೇರಿಸಲ್ಕೆ ತಬ್ಬುತೆ ಶಿಶುತಾನ್
    ಕತ್ತನ್ನೊತ್ತುತಲಿತ್ತಾ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ ||

    ಉಳುಕಿದ ಕತ್ತಿಗೆ ನೂವಾಗುತಿದ್ದಾಗ, ಮಗು ಕತ್ತನ್ನು ಒತ್ತುತ ಕೊಟ್ಟ ಮುತ್ತು ಮತ್ತೆ ಕಾಡಿತು ಎಂಬ ಪರಿಹಾರ.

  33. ಅತ್ತಾಗ ನಯನವಾರಿಯ
    ಮುತ್ತಾಗುಸೊ ಚಿಪ್ಪು ದೇವನುತ್ತರ ತಾಯಿಯು
    ಮುತ್ತಿತ್ತವಳನೆನಹಿನಾ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

  34. ಅತ್ತಾಗ ನಯನವಾರಿಯ
    ಮುತ್ತಾಗಿಸೊ ಚಿಪ್ಪು ದೇವನುತ್ತರ ತಾಯಿಯು
    ಮುತ್ತಿತ್ತವಳನೆನಹಿನಾ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

  35. ಅತ್ತು ಕರೆವ ಮುದ್ದು ಮಗನ
    ನೆತ್ತಿರೆ,ಹಲ್ಕಿರಿದು ನಗುತಲಪ್ಪಿದನಾಗಳ್
    ಕುತ್ತಲ್ ಕೊರಳಿನ ಹಾರದ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

  36. ಕತ್ತಿನ ಮುತ್ತಿನ ಹಾರವ
    ಕಿತ್ತಿರಲಾ ಚೋರ ಬಂದ ಬೊಬ್ಬೆಯ ಮುತ್ತಿಂ
    ದತ್ತಿಹ ನಾರೀಮಣಿಗಂ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ ।।
    (ಕಳ್ಳ ಕತ್ತಿನ ಮುತ್ತಿನ ಸರ ಕಿತ್ತಾಗ, ಕತ್ತಿನ ಸುತ್ತ ಬಂದ “ಬೊಬ್ಬೆ”ಗಳೂ, ಮುತ್ತಿನಂತೆ ಕಂಡದ್ದು!)

    • ಸಮಸ್ಯಾ ಸಾಲಿನಲ್ಲಿರುವ ‘ಮತ್ತೆ’ ಪದವನ್ನು ಸರಿಯಾಗಿ ಗಣನೆಗೆ ತೆಗೆದುಕೊಂಡಿರುವ ಪದ್ಯ ಇದೊಂದೇ.

      • ಧನ್ಯವಾದಗಳು ಪ್ರಸಾದ್ ಸರ್, (ತಮಾಷೆ ಅಲ್ಲ ತಾನೇ “ಮತ್ತೆ” !)
        ನನ್ನ ಮೊದಲ ಪೂರಣ ಸರಿಯಿದೆಯೇ? “ಕತ್ತಲು ಕವಿದಿರಲಂದಾ ಮುತ್ತೇ ಕುತ್ತಾಗಿ…”, ಅಂದು ಕತ್ತಲು ಕವಿದಿರಲು, ಆ ಮುತ್ತೇ(ಮುತ್ತುವಿಕೆಯೇ) ಕುತ್ತಾಗಿ .. ಎಂಬ ಅರ್ಥದಲ್ಲೂ ಬರೆದದ್ದು.

  37. ಅತ್ತೆಯ ಮನೆಪುಗುವಾಗಲೆ
    ಮುತ್ತಿನ ಹಾರವ೦ ಕ೦ಡನಾ ಪತಿರಾಯ೦ |
    ಮತ್ತಮಧುಪಾನಿಯ ಸತಿಗೆ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ ||

  38. ‘ಮತ್ತೆ’ಯನು೦ ‘ಕುತ್ತು’ವನು೦
    ‘ಮುತ್ತ’ನುಮೀಕ್ಷಿಸುತೆ ಯತ್ನಗಳ್ ಚಿತ್ಪಟದೊಳ್
    ಸತ್ತಮ ಸಾಲ್ಗಳನರಸಲ್
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ
    🙂

  39. ಸ್ವತ್ತೆಮ್ಮದಿದೆಂದಾರ್ಭಟಿ –
    ಸುತ್ತಾಧಾರಜಲವಂ ಭಜಿಸೆ, ರೈತಜನರ್
    ಹತ್ತಾಲೋಚಿಸಿ ಕಿರುಹೊಲ –
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ಕಾವೇರಿ ನೀರಿನ ಹಂಚಿಕೆಯಲ್ಲಿ ರಾಜ್ಯಾಡಳಿತಗಳ ರಾಜಕೀಯ ಆರ್ಭಟದಿಂದಾಗಿ ಪ್ರದೇಶದ ರೈತರಿಗೆ ‘ಮತ್ತೆ ಮತ್ತೆ’ ಒದಗಿಬರುವ ಕುತ್ತಿನ ವಿಚಾರ.

    ಹೊಲಂ + ಉತ್ತೇ == ಹೊಲಮುತ್ತೇ

  40. ಹೊತ್ತು ಕಂತು, ಕಾಡಿರೆ ಆ
    ನತ್ತು, ಚಿತ್ತಕ್ಕೆ ತೊತ್ತಾಗಿ ನೆತ್ತಿಗೇರಿದ
    ಮತ್ತಿನಿಂ ನಾನಿತ್ತ ಸಿಹಿ
    ಮುತ್ತದು ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    ‘ರೋಗಪೀಡಿತ ಹೆಣ್ಣಿನ ಸಂಪರ್ಕದಿಂದ ತನಗೂ ಆ ರೋಗ ತಗುಲಿತು’ ಎಂದು ಪರಿತಪಿಸುತ್ತಿರುವ ಭಾವ.

    ಇದು ನನ್ನ ಮೊದಲ ಪ್ರಯತ್ನ.ತಪ್ಪಿದ್ದರೆ ತಿಳಿಸಿ, ತಿದ್ದಿಕೊಳ್ಳುತ್ತೇನೆ.

  41. ‘ಭಾವ’ ಎಂದರೆ?

    • ‘ ಭಾವ’ ಎಂದರೆ ಪದ್ಯದ ಭಾವ-ಅರ್ಥಾತ್ ಭಾವಾಂಶ.ಅಕ್ಕನ ಗಂಡ ಭಾವ ಎಂದಲ್ಲ.

  42. ಹತ್ತಿರ ಬಂದರೆ ದಕ್ಷಿಣೆ
    ಮತ್ತೂ ಹೊತ್ತು ತರಲೊತ್ತಡವ ಹೇರುವವಾ
    ಕತ್ತಿನ ಹಾರವ ನೋಡಲು
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ ||

  43. ಹೆತ್ತಣುಗನುಪೇಕ್ಷೆಯಮೆ
    ತ್ತನೆಮರೆತಕ್ಕರೆಯೊಳಾಡಿಸಿರೆ ಪೌತ್ರನನಾ
    ಗತ್ತಿನ ಸೊಸೆ ಕಂಡಬ್ಬೆಯ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ

    (ಅಣುಗ = ಮಗ, ಪೌತ್ರ = ಮೊಮ್ಮಗ, ಅಬ್ಬೆ = ಮಗುವಿನ ಅಜ್ಜಿ)
    ಅಬ್ಬೆ ಮಗುವನ್ನು ಮುದ್ದಿಸಿದನ್ನು ಆಕೆಯ ಸೊಸೆ ಇಷ್ಟಪಡಲಿಲ್ಲ ಎಂಬ ಅರ್ಥದಲ್ಲಿ. ವಸ್ತು ಕಂದಪದ್ಯಕ್ಕೆ ಹೊಂದುತ್ತದೋ, ಸೊಸೆಯೆಂಬ ಪದ ಬಳಸಬಹುದೋ ಎಂಬ ಸಂದೇಹಗಳೊಂದಿಗೇ ಪೋಸ್ಟ್ ಮಾಡಿದ್ದೇನೆ! ತಪ್ಪಾದಲ್ಲಿ ದಯವಿಟ್ಟು ತಿಳಿಸಿ!

  44. ಈ ವಾರದ ಸಮಸ್ಯಾಪೂರಣಕ್ಕೆ ಹಲವರು ಹೊಸಗೆಳೆಯ-ಗೆಳತಿಯರೂ ಬಂದಿರುವುದು ಮುದಾವಹ. ಅಲ್ಲದೆ ಅಸಂಖ್ಯಪರಿಹಾರಗಳೂ ಒದಗಿರುವುದು ಹರ್ಷಾಸ್ಪದ. ಆದರೆ ನನ್ನ ಸಾಮಾನ್ಯಾಭಿಪ್ರಾಯವನ್ನು ಹೇಳುವುದಾದರೆ ಅನೇಕಪರಿಹಾರಗಳಲ್ಲಿ ಹಳಗನ್ನಡದ ಬಿಗಿ ಸಡಲಿದೆ:-) ಜೊತೆಗೆ ಅಲ್ಲಲ್ಲಿ ಛಂದಸ್ಸೂ ಕುಂಟಿದೆ:-) ಸೋಮನಂಥವರೂ ಆದಿಪ್ರಾಸವನ್ನು ತುಂಬಕಡೆ ಉಲ್ಲಂಘಿಸಿರುವುದು ವಿಸ್ಮಯಾವಹ:-) ರಾಮ್ ಅವರು ಹೇಳಿದಂತೆ ತುಂಬ ಪರಿಹಾರಗಳಲ್ಲಿ ’ಮತ್ತೆ’ ಮರೆತೇಹೋಗಿದೆ:-) ಆದರೂ ಉತ್ಸಾಹದ ಭಾಗಗ್ರಹಣವನ್ನು ಮೆಚ್ಚಲೇಬೇಕು. ಅಲ್ಲದೆ ಅನೇಕಪರಿಹಾರಗಳು ಚೆಲುವಾಗಿಯೂ ಇವೆ. ಸೋಮ ಅವರ ಪರಿಹಾರವೈವಿಧ್ಯವು ಮೆಚ್ಚುವಂತಿದೆ. ಅದೆಷ್ಟೋ ಜನರ ತಮ್ಮ ಇಡಿಯ ಪದ್ಯಪಾನದ ಬದುಕಿಗಿಂತ ಮಿಗಿಲಾದ ಸಂಖ್ಯೆಯಲ್ಲಿ ಸೋಮ ಅವರು ಕೇವಲ ಈ ಒಂದು ಸಮಸ್ಯೆಗೇ ಪರಿಹಾರಗಳನ್ನು ನೀಡಿರುವುದು ದಾಖಲೆಯ ಮಾತು. ಅಭಿನಂದನೆಗಳು. ಆದರೆ ಇನ್ನಷ್ಟು ಗುಣದತ್ತಲೂ ಗಮನವಿರಲಿ:-)

  45. ಗಣೇಶ್ ಸರ್, ಕೆಲವೊಮ್ಮೆ ಹಿಡಿದದಿಕ್ಕಿನ ಅವಲೋಕನ ಮಾಡದೆ ದೂರ ಸಾಗಿದಮೇಲೆ, ಇನ್ನು ಬೇರೆಯ ದಿಕ್ಕಿನ ಉತ್ತಮವಾದ ಮಾರ್ಗವಿತ್ತೆ೦ದೂ, ಹಾಗು ಹಿಡಿದ ದಿಕ್ಕಲ್ಲಿ ಬೆಟ್ಟಗುಡ್ಡಗಳೂ ಇವೆಯೆ೦ದೂ ತೋರುತ್ತದೆ, ನನಗೆ ‘ಮತ್ತೆ’ ವಿಷಯದಲ್ಲಿ ಆದೇ ಆಗಿರಬೇಕು! ರಾಮ್ ಅವರ ಕಾಮೆ೦ಟ್ ಬರುವಷ್ಟರಲ್ಲಿ ನನ್ನ ಸರಕೆಲ್ಲ ಮುಗಿಯುವ ಸ್ಥಿತಿ… ಹೆಚ್ಚು ಸುಧಾರಿಸಲಾಗಿಲ್ಲ:). ಆದರೆ ಆದಿಪ್ರಾಸವನ್ನು ಗಟ್ಟಿಯಾಗಿ ಹಿಡಿಯಬೇಕಿತ್ತು ಅದನ್ನು ಸಡಿಲಮಾಡಿದ್ದು ನನಗೂ ಈಗ ಹಿಡಿಸುತ್ತಿಲ್ಲ… ಅ೦ತೆಯೇ ಹಳಗನ್ನಡವನ್ನೂ ಗಮನಿಸುತ್ತೇನೆ. ಒಟ್ಟಿನಲ್ಲಿ ಪ್ರಯತ್ನದ ಬ೦ಡವಾಳವ೦ತೂ ಇಡುತ್ತೇನೆ 🙂

  46. ಚಿತ್ತದ ಕಾಮಿನಿಯಂ ಬೇ –
    ಡುತ್ತಿರ್ದನ ಪಾಡು ಕುನ್ನಿಯೊಲದಿಂತಾಯ್ತೈ |
    ಅತ್ತರು ಕರೆದರು ಸಿಕ್ಕದ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ ||

  47. ಪೆತ್ತವನಂ ದೂಷಿಪ ಮೇ –
    ಣುತ್ತಮರಾ ಪಾಂಡು ಪುತ್ರರೆಂ ಪೊಗಳುವ ತಾಂ |
    ಕತ್ತಿನ ಕೋಳದ, ತೊತ್ತಿನ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ ||

    [ತೊತ್ತು = ದಾಸಿ; ತೊತ್ತಿನ ಮುತ್ತು = ವಿದುರ]

  48. ಸತ್ತಮರಾದೊಡಮೇಂ? ಅರ-
    ಸೊತ್ತಿಗೆಯೋ ಪಾಂಡುಪುತ್ರರಿಗೊಲಿಯದಾಯ್ತೈ!
    ಸತ್ತೆಯು ದಕ್ಕಲ್ ಮಾದ್ರಿಯ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ!

    ಸತ್ತೆ = ಅಧಿಕಾರಬಲ, ಹಕ್ಕು. ತಂದೆಯ ಸಾವೇ ಪಾಂಡವರ ಹಕ್ಕಿಗೆ ಮತ್ತೆ ಮತ್ತೆ ಕುತ್ತಾಯ್ತು ಎನ್ನುವ ಪ್ರಯತ್ನ.

  49. ತತ್ತರಿಸಿದಪಂ ಪುರುಷಂ
    ತುತ್ತಾಗುತೆ ಜನ್ಮಜಾಲಕಂ ಪ್ರಕೃತಿಕರಾ-
    ಯತ್ತಂ; ಕಾಪಿಲಮತದಿಂ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ!!
    (ವಸ್ತುತಃ ಈ ಸಮಸ್ಯೆಯನ್ನು ನಾನೇ ಹಿಂದೆ ಶ್ರೀಶ ಕಾರಂತರಿಗೆ ಕೊಟ್ಟಂತೆ ನೆನಪು. ಆದರೆ ಆಗ ಪರಿಹಾರವನ್ನೇ ಚಿಂತಿಸಿರಲಿಲ್ಲ:-) ಹೀಗಾಗಿ ಇದೀಗ better late than never ಎಂಬಂತೆ ಹಸಿ-ಬಿಸಿಯಾದ ಪರಿಹಾರವೊಂದನ್ನು ಅವಸರದ ಅಡುಗೆಯಾಗಿ ನೀಡಿದ್ದೇನೆ. ರಸಿಕರು ಪರಾಂಬರಿಸಬೇಕು. ಇದು ಪ್ರಕೃತಿಯು ಪುರುಷನ್ನು ತನ್ನ ಪಾರಮ್ಯದಿಂದ ವಶೀಕರಿಸಿಕೊಂಡು ಆ ಬಳಿಕ ಜನ್ಮಜಾಲದಲ್ಲಿ ಆತನನ್ನು ಸಿಲುಕಿಸಿ ಮತ್ತೆ ಮತ್ತೆ ಕಾಡುವಳೆಂದು ಪ್ರಸಿದ್ಧಿಯಿರುವ ಕಪಿಲಮುನಿಯ ಸಾಂಖ್ಯದರ್ಶನವನ್ನು ಆಧರಿಸಿದ ಪರಿಹಾರ. ಸಹೃದಯರಿಗೆ ನೀರಸವೆನಿಸಿದರೆ ಮನ್ನಿಸಬೇಕು. ಇಲ್ಲಿಯವರೆಗೆ ಈ ಸಮಸ್ಯೆಗೆ ದಾರ್ಶನಿಕ-ಶಾಸ್ತ್ರೀಯವಲಯಗಳನ್ನಾಧರಿಸಿದ ಪರಿಹಾರವು ಬಂದಿಲ್ಲವೆಂದು ತೋರಿದ ಕಾರಣ ವೈವಿಧ್ಯಕ್ಕಾಗಿ ಇದನ್ನಿಲ್ಲಿ ಕಯ್ಕೊಂಡಿದ್ದೇನೆ:-)

    • ಗಣೇಶ್ ಸರ್, ತುಂಬಾ ವಿಶಿಷ್ಟ ಪರಿಹಾರ. ಸಮಸ್ಯೆಯ ಸಾಲನ್ನು ಈ ರೀತಿ, ಆಡುಭಾಷೆಯಲ್ಲಿ ಬಳಸುವ ನುಡಿಕಟ್ಟಿನಂತೆ ಬಳಸಬಹುದೆಂಬ ಕಲ್ಪನೆಯೇ ಇರಲಿಲ್ಲ.

  50. ಕುತ್ತಿಗೆಗೆ ಕರಿಮಣಿಯಿರದೆ
    ಹೆತ್ತಮ್ಮಗೆ ತೊತ್ತೆ ಬಿರುದು ಕಾದಿತ್ತು ಕಣಾ ||
    ಹೊತ್ತು ಸಲುಹುವಾಗ ಹೆತ್ತ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ ||

  51. ತುತ್ತಿಗೆ ಮೆತ್ತೆಗೆ ಶಿಸ್ತಿಗೆ
    ಕತ್ತೆಯ ದುಡಿತದಿಂ ಬೇಸತ್ತು ಪೊರಟವನಾ|
    ಚಿತ್ತದಿ ನಲ್ಲೆಯ ನತ್ತಿನ
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ! ||

  52. ಮುತ್ತುತೆ ವರನಾರಿಯರಂ
    ಸುತ್ತಿಹ ಶಾಪಂಗಳಂ ಗಣಿಸದೆ ದಶಾಸ್ಯಂ |
    ಮತ್ತಂ ತುಡುಕಲ್ಕಾ ಪೆಣ್-
    ಮುತ್ತೇ ಕುತ್ತಾಗಿ ಮತ್ತೆ ಕಾಡಿತ್ತು ಕಣಾ! ||

    • ಒಳ್ಲೆಯ ಪರಿಹಾರ. ಭಾಷಾಪಾಕವೂ ಸೊಗಸಾಗಿದೆ. ಕೇವಲ ಸುತ್ತಿಹ ಎನ್ನುವ ನಡುಗನ್ನಡರೂಪವನ್ನು ಸವರಿಸಿದರೆ ಸಾಕು, ಬಂಧವು ಮತ್ತೂ ಸೊಗಯಿಸುತ್ತದೆ.
      ಉದಾ: ಸುತ್ತಿರೆ ಶಾಪಂಗಳುಂ……

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)