Dec 312012
 

ಸ್ನೇಹಿತರೆ,

ಕಳೆದ ವರ್ಷವನ್ನು ಕಳುಹಿಸಿ ಕೊಟ್ಟು, ಹೊಸ ವರ್ಷವನ್ನು ಪದ್ಯಗಳಿಂದ ಸ್ವಾಗತಿಸೋಣವೇ?

ಹೊಸ ವರ್ಷದ ಬಗೆಗಿನ ನಿಮ್ಮ ಭಾವನೆಗಳಿಗೆ ಛಂದೋಬದ್ಧ ಪದ್ಯಗಳ ರೂಪ ನೀಡಿರಿ

  47 Responses to “ಪದ್ಯಸಪ್ತಾಹ ೫೨: ಹೊಸ ವರ್ಷದ ಸ್ವಾಗತ”

 1. ಅಗಲಿ ಮರಳುತ್ತದೇ ಮಾಗಿ ಪೊಸ ಚೇತನವ
  ಮಗುಳೆ ತಂದುದೆನುತ್ತೆ ಗಣಿಸೆ ನೀನು|
  ನಗುತೆ ನಿತ್ಯೋದಯದೆ ಕಾಣಲಾರೆಯ ಪೊಸದ
  ಬಗೆಯು ಕಾಣಿಸದೆ ಮೇಣನುಚಣದೊಳು||

  • ಪ್ರತಿವರ್ಷವೂ ಮರೆಯಾಗಿ ಮರಳಿಬರುವ ಅದೇ ಮಾಗಿಯು (ಸೌರ ಹೊಸವರ್ಷ) ಹೊಸ ಚೇತನವನ್ನು ತರುವುದು
   ಎಂದು ನೀನು ಎಣಿಸುವೆಯಾದರೆ, ಪ್ರತಿದಿನೋದಯದಲ್ಲಿ, ಏಕೆ, ಪ್ರತಿ
   ಕ್ಷಣದಲ್ಲೂ ಹೊಸತನ್ನು ಕಾಣಲಾರೆಯ?

   • ಅತ್ಯಂತಸುಂದರವೂ ಗಂಭೀರವೂ ಆದ ಅರ್ಥಗೌರವವುಳ್ಳ ಪದ್ಯ. ತುಂಬ ಧನ್ಯವಾದಗಳು

 2. ಮರಳಯ್ ಕಾಲನಮೇಯಚಕ್ರಕರಮೊಂದೆಂದಾಗುತುಂ ಬಾಗುತುಂ
  ಸರಳಾ! ಮಾನಿತನೇತ್ರ-ಧಾತೃ-ಗಗನಾಲೋಕಾಖ್ಯಸಂವತ್ಸರಾ!
  ನರಲೋಕಪ್ರಿಯನಾಗಲೆಂದು ನಲವಿಂ ಕಾಲಾನುಕೂಲಾರ್ಥದಿಂ
  ಪೊರಳಿತ್ತಲ್ ಸಖ! ವಹ್ನಿ-ಧಾತೃ-ಗಗನಾಲೋಕಾಖ್ಯಸಂವತ್ಸರಾ!

  (ನಮ್ಮಲ್ಲಿ ಅಂಕಿಗಳನ್ನು “ಅಂಕಾನಾಂ ವಾಮತೋ ಗತಿಃ” ಎಂಬಂತೆ ರೂಪಿಸುವುದು ಸುಪ್ರಸಿದ್ಧ. ಗಗನ-ಬ್ರಹ್ಮ(ಧಾತೃ)-ನೇತ್ರ(ಆಲೋಕ)-ವಹ್ನಿ ಮುಂತಾದ ಸಂಜ್ಞೆಗಳಿಂದ ಕ್ರಮವಾಗಿ ೦,೧,೨,೩ ಇತ್ಯಾದಿ ಸಂಖ್ಯೆಗಳನ್ನು ನಿರ್ದೇಶಿಸುವುದೂ ಸುವಿಶ್ರುತ. ಇವೆಲ್ಲ ವಿಶೇಷವಾಗಿ ಶಾಸನಕಾವ್ಯಗಳಲ್ಲಿ ದೃಷ್ಟಚರ. ಇದನ್ನು ಬಳಸಿಕೊಳ್ಳುವ ಮೂಲಕ ೨೦೧೨ ಮತ್ತು ೨೦೧೩ ಎಂಬ ಸಂವತ್ಸರಗಳನ್ನು ತಂದಿರುವುದಿಲ್ಲಿ ವಿವರಣೀಯ. ಉಳಿದಂತೆ ಪದ್ಯವು ಸರಳವೇ. ಅರ ಎಂದರೆ ಚಕ್ರಕ್ಕಿರುವ spokes ಎಂದು ಅರ್ಥ. ಪ್ರತಿಯೊಂದು ವರ್ಷವೂ ಕಾಲಚಕ್ರದ ಅರವೆಂಬ ಸುವಿದಿತಕಲ್ಪನೆಯಿಲ್ಲಿ ಅನುಸಂಧೇಯ)

  • ಅನುಕ್ರಮಣಿಕೆಯನ್ನು ತದ್ವತ್ ಗಣಿಸಿದರೆ, ಪ್ರಾಸಾನುಕೂಲಕ್ಕಾಗಿ ನೀವು 2102ನ್ನು (ಆಲೋಕ, ಧಾತ್ರ, ಗಗನ, ಆಲೋಕ) ಕಳುಹಿಸಿಕೊಟ್ಟು, 3102ನ್ನು (ವಹ್ನಿ, ಧಾತ್ರ, ಗಗನ, ಆಲೋಕ) ಸ್ವಾಗತಿಸಿರುವಿರಿ.

   ಗಗನ-ಬ್ರಹ್ಮರ ನೇತ್ರ-ವಹ್ನಿಗಳ ನೀಂ| ಪ್ರಾಸಾಸುಕೂಲಕ್ಕಮಂ
   ಹುಗಿಸಲ್ ಶಾಸನಕಾವ್ಯದೊಳ್ಗಯನವಂ| ಗೈದಿರ್ಪಿರಾಭಾಸವಂ
   ಪುಗಿಸೇಕೋತ್ತರ(02)ವರ್ಷಮಂ ಗತದಿನೊಳ್| ದ್ವಾವಿಂಶದಬ್ದಂ ಶತಂ (of 22nd century = 2102)
   ನೊಗವೆತ್ತಿರ್ಪಿರಿ ಮೂರುಸಾವಿರದ ಮೇಣ್| ಒಂದ್ನೂರ ಮೇಲೀರನುಂ (3102)

   • ಪ್ರಸಾದ್ ಸರ್,
    ಅದು “ಆಲೋಕ” (= 2) ಕೇಂದ್ರದ, 21ನೇ ಶತಮಾನದ ಕಾಲಚಕ್ರ . ಹೊರಗಿನಿಂದ ಅರ = ಸಂವತ್ಸರ ಹಾಗೇ ಕಾಣುವುದು. ಅಲ್ಲವೇ ಗಣೇಶ್ ಸರ್?!

   • ಸದಾ ಮತ್ತೊಬ್ಬರ ಹುಳುಕನ್ನು ಹುಡುಕುವಲ್ಲಿ ಹಿರಿದಾಗಿ ಹರ್ಷಗೊಳ್ಳುವ ಹಾದಿರಂಪರೇ! ನಾನು ಅಂಕಾನಾಂ ವಾಮತೋ ಗತಿಃ ಎಂದು ಮೊದಲೇ ಹೇಳಿ ಈ ಬಗೆಯ ಸಂಖ್ಯಾನಿರೂಪಣೆಗಿರುವ ಕ್ರಮವನ್ನು ಪ್ರಸ್ಫುಟವಾಗಿ ನಿರ್ದೇಶಿಸಿರುವುದನ್ನು ಮರೆತಿರಾ?
    ಬಿಡಿ, ಹತ್ತು, ನೂರು,ಸಾವಿರ ಎಂಬ ಬಗೆಯಲ್ಲಿ ಇವುಗಳನ್ನು ಓದಬೇಕು. ಹೀಗಾಗಿ ನೇತ್ರ -ಧಾತೃ-ಗಗನ-ಆಲೋಕ ಎಂಬುದು ೨೧೦೨ ಎಂದು ಎಡದಿಂದ ಬಲಕ್ಕ್ಕೆ ತೋರಿದರೂ ಅವನ್ನು ಬಿಡಿ, ಹತ್ತು ಇತ್ಯಾದಿಯಾಗಿ ಓದುವಾಗ ಬಲದಿಂದ ಎಡಕ್ಕೆ ಓದಬೇಕಾಗುತ್ತದೆ. ಆಗ ೨೦೧೨ ತಾನೆ ಬರುವುದು? ಇದೇ ನ್ಯಾಯವನ್ನು ೨೦೧೩ಕ್ಕೂ ಅನ್ವಯಿಸಿರಿ. ಆದರೆ ಈ ರಂಧ್ರಾನ್ವೇಷಣಕ್ಕಾದರೂ ಮುಂದಾಗಿ ಮತ್ತೇಭವನ್ನು ಪಳಗಿಸಿಕೊಳ್ಲುತ್ತಿದ್ದೀರೆಂಬುದು ಹರ್ಷಾಸ್ಪದ:-) ಅಂದ ಹಾಗೆ ನನಗೆ ಪ್ರಾಸಾನುಕೂಲಕ್ಕಾಗಿ ಹೀಗೆ ಮಾಡುವ ತೆವಲಾಗಿ ಈ ಆಭಾಸವಾಗಿರಬೇಕೆಂಬ”ಶರಲೇಖ”ನ ಸಾಹಸ ಮಾಡಿರುವ ’ವತ್ಸನ’ರೇ! ನೇತ್ರ, ಧಾತೃ ಮುಂತಾದ ಪದಗಳು ಪ್ರಾಸಸ್ಥಾನದಲ್ಲಿ ಎಲ್ಲಿವೆ? ಅಬ್ರಹ್ಮಣ್ಯಂ! ಅಬ್ರಹ್ಮಣ್ಯಂ!! ಹಾದಿರಂಪರಿಗೆ ಪದ್ಯಪಾನದ ಬಾಲಪಾಠವಾದ ಆದಿಪ್ರಾಸದ ಸಂಗತಿಯೂ ಮರೆಯಾಯಿತೇ?

    ಗಾಜಿನ ಮನೆಯೊಳ್ ಮಲೆತೆ-
    ನ್ರೇಜಿಂ ಗ್ರಾನೈಟುಮನೆಗೆ ಕಲ್ಲಂ ಬೀರ್ವಾ|
    ಕ್ರೇಜೇ?ಮೋಜೇ?ಕ್ಯಾ ಜೀ?
    ಖಾಜೀನ್ಯಾಯಕ್ಕೆ ನಾನಪೀಲ್ ಮಾಡುವುದೇ?

   • ೧) ‘ಅಂಕಾನಾಂ ವಾಮತೋ ಗತಿಃ’ ಎಂದು ನೀವು ಹೇಳಿರುವುದನ್ನು ಗಮನಿಸಿದ್ದೇನೆ. ಹಾಗಾಗಿಯೇ
    ‘ಅನುಕ್ರಮಣಿಕೆಯನ್ನು ತದ್ವತ್ ಗಣಿಸಿದರೆ’ ಎಂದು ‘ರೆ’ ಸಾಮ್ರಾಜ್ಯದ ಮಾತಾಡಿರುವುದು; ಅದನ್ನೇ ಮತ್ತೇಭದಲ್ಲಿ ಹೇಳುವ ಅವಕಾಶವೆಂದು ಹಿಡಿದುಕೊಂಡುದು. ರಂಧ್ರಾನ್ವೇಷಣ ಖಂಡಿತ ಅಲ್ಲ; ಸಾಧ್ಯವಲ್ಲ.
    ೨) ‘ಪ್ರಾಸಾನುಕೂಲಕ್ಕಾಗಿ ಹಾಗೆ ಮಾಡಿದಿರಿ’ ಎಂದದ್ದು ತಪ್ಪಾಯಿತು, ‘ಅಕ್ಷರಾನುಕೂಲಕ್ಕೆ’ ಎಂದು ಹೇಳಬೇಕಾಗಿತ್ತು ಎಂದು ಪೋಸ್ಟ್ ಮಾಡಿದ ತರುಣದಲ್ಲೇ ನನಗೆ ತಿಳಿಯಿತು.
    ೩) ‘ವತ್ನನ’ರೇ ಎಂದಿರುವುದು ವಸ್ತುತಃ ಏಕವಚನ. ನನಗೆಲ್ಲ ಅರ್ಥವಾಗುತ್ತೆ. ಅದು ‘ಮಗನೇ’ ಎಂದಲ್ಲವೆ?!
    ೪) ಇಷ್ಟೆಲ್ಲ ಸ್ವ-ವಕಾಲತ್ತು ಏಕೆ! ಆಂಗ್ಲಭಾಷೆಯ ವಿಷಯದಲ್ಲಿ ನನ್ನ ರಂಧ್ರಾನ್ವೇಷಣ ಸ್ವಲ್ಪ ಹೆಚ್ಚಾಯಿತೇನೋ ಎಂದು ನಾನು ನಿಮ್ಮಲ್ಲಿ ಒಮ್ಮೆ ತೋಡಿಕೊಂಡದ್ದಕ್ಕೆ, “ಏನಿಲ್ಲ, ಏನಿಲ್ಲ, ಅದು ಮಹಾಕವಿಯ (?) ಲಕ್ಷಣ” ಎಂದು ತಾವು ಅಪ್ಪಣೆ ಕೊಡಿಸಿ, ಒಬ್ಬ ಲಾಕ್ಷಣಿಕನ ಮಾತನ್ನು ಉದ್ಧರಿಸಿದ್ದಿರಿ! ಆಗ ಹಿಗ್ಗಬಾರದಾಗಿತ್ತು ನಾನು.
    ೫) ಕ್ಷಂತವ್ಯೋ ಮೇsಪರಾಧಾನ್ ಸರ್ವಾನ್.

    • cool!!! 🙂
     ವತ್ಸನ ಎಂಬ ಟಂಕನ ನನ್ನದಲ್ಲ. ಅದು ಕನ್ನಡದ ಹಾಸ್ಯಸಾಹಿತಿಗಳೊಬ್ಬರು ರೂಪಿಸಿದ್ದು. ಷೆರ್ಲಾಕ್ ಹೋಮ್ಸ್ ಮತ್ತು ವಾಟ್ಸನ್ ಅವರ ಹೆಸರುಗಳ ಕನ್ನಡೀಕರಣ (ನೋಡಿ: ಶರಲೇಖನ ಸಾಹಸಗಳು; ಅಂಕಿತ ಪ್ರಕಾಶನ). ಇದೆಲ್ಲ ಯಾವ ಅಪರಾಧವೂ ಅಲ್ಲ. ನಮ್ಮೀ ಪದ್ಯಪಾನದಲ್ಲಿ ಸಂಕೋಚವಿಲ್ಲದೆ ಸುಪರಿಚಿತರಾದ ಮಿತ್ರರು ಪರಸ್ಪರ ಚೆನ್ನಾಗಿ ಕಾಲೆಳೆಯದಿದ್ದಲ್ಲಿ “ಪಾನಗೋಷ್ಟಿ”ಗೆ ಪೂರ್ಣತೆ ಬರುವುದಾದರೂ ಹೇಗೆ? ವಿದ್ವಾಂಸನ ಪರ್ಯಾಯಪದಗಳಲ್ಲೊಂದು ದೋಷಜ್ಞ ಎಂದು ಮಾತ್ರ ನಾನು ಹಿಂದೆ ಹೇಳಿದ್ದೆ. ಅಪ್ಪಣೆ ಕೊಡಲು ನಾನು ಯಾವ ಮಹಾ ತೊಪ್ಪಲು?ಆದರೂ ’ರೆ’ಸಾಮ್ರಾಜ್ಯಕ್ಕೆ ಮತ್ತೇಭವನ್ನು ಕೈಗೂಡಿಸಿದ ನಿಮಗೆ ಧನ್ಯವಾದ ಹೇಳದಿದ್ದರೆ ಹೇಗೆ? ಪ್ರಣತೋsಸ್ಮಿ

     • ಕೇಳ್ದರ್ಗುಮೀ ರಂಪಮಂ
      ನೋಡ್ದರ್ಗುಮಮಲಿಂ ರಾಚಿದೊಲಾಮೋದಮೆನೆ |
      ಮಾಡ್ದರ್ಗಿನ್ನೇಸೊ ಕಂಪಿಂ
      ಬೀಳ್ದರ್ಗಿನ್ನೆಂತೊ ಪದ್ಯಪಾನವೀಥಿಯೊಳ್ ||

     • ಭಟ್ಟರೆ,
      ಗಡಂಗಿಗೆ ಬರುವ ಎಲ್ಲ ವಿಧದ ಪಾನಿಗಳನ್ನೂ ನೆನೆದಿದ್ದೀರಿ, ನೆನೆಸಿದ್ದೀರಿ. ಧನ್ಯವಾದ.

 3. ಪದಿಮೂರು೦ ಗಡ ಶುಭಮಿ
  ರ್ಪುದು ಕೇಳ್ಪಾಶ್ಚಾತ್ಯರಿ೦ಗಿದಶುಭ೦, ಅವರ್ಗ೦
  ಹೃದಯದೆ ಮೌಢ್ಯಮನಾರಿಸ-
  ಲಿದೆ ಸೂಕ್ತ೦ ವರ್ಷಮಲ್ತೆ ದುಡಿವ೦ ಭರದಿ೦

  • ಸೋಮ, ತುಂಬ ಸೊಗಸಾದ ಪದ್ಯ. ಭಾಷೆ-ಬಂಧಗಳೆರಡೂ ಹೃದ್ಯ. ಕೇವಲ ಕಡೆಯ ಸಾಲಿನಲ್ಲಿ ದುಡಿವಂ ಎಂಬುದನ್ನು ದುಡಿವೊಮ್ ಎಂದಾಗಿಸಿದರೆ ದುಡಿಯೋಣ ಎನ್ನುವ (ಪ್ರಾಯಶಃ ನಿಮಗೂ ಉದ್ದೇಶದಲ್ಲಿರುವ) ಅರ್ಥವು ಹೊಮ್ಮುತ್ತದೆ. ಇಲ್ಲವಾದರೆ ದುಡಿಯುತ್ತಾನೆ ಎನ್ನುವ ಅರ್ಥವು ಬಂದು ಪದ್ಯದ ತಾತ್ಪರ್ಯವು ಸುಕರವಾಗದು.

   • ಧನ್ಯವಾದ ಸರ್,

    ದುಡಿವೊಮ್ ಸರಿಪಡಿಸಿದ್ದೇನೆ:)

    ಪದಿಮೂರು೦ ಗಡ ಶುಭಮಿ
    ರ್ಪುದು ಕೇಳ್ಪಾಶ್ಚಾತ್ಯರಿ೦ಗಿದಶುಭ೦, ಅವರ್ಗ೦
    ಹೃದಯದೆ ಮೌಢ್ಯಮನಾರಿಸ-
    ಲಿದೆ ಸೂಕ್ತ೦ ವರ್ಷಮಲ್ತೆ ದುಡಿವೊಮ್ ಭರದಿ೦

 4. ಪೊಸತೆಲರು ಮಲರುಪೊಸತನುದಿನಂ ರವಿಬುವಿಯು
  ಪೊಸತನುಕ್ಷಣಮೆಲ್ಲ ಪೊಸತು ಪೊಸತೆ
  ಕುಸಿದಭೂತವು ಮುಂದಿನೊಸಗೆಯಭವಿಷ್ಯವೂ
  ಎಸೆವುದೆಂದೂವರ್ತಮಾನದಲ್ಲೆ
  ಬೆಸೆದಂಕೆಗಳ ರೂಪಗಳಮೂಲಶೂನ್ಯದಿಂ
  ಪೊಸತುಪಿಸುಗುಟ್ಟುವುದು ನಿರತಮಿಡಿದು
  ರಸಮಿದಂತರ್ಗಾಮಿ ಬಸಿದನುಭವಿಪ ಕಸುವ
  ಪೊಸತಾಗಿತಾಗಿಸಲಿ ಪದ್ಯಪಾನ

  ಕೆರಳಿ ಭಾವಸಮುದ್ರವದುಕ್ಕಿ ಪದ್ಯ
  ತರಲಿ ಮೋದವನೋದುಲುಮಾಗಿ ಹೃದ್ಯ
  ಅರಳಿ ನವಕವನವುಬರಲಿ ಸರ್ವವೇದ್ಯ
  ಸರಸತಿಯ ನೋಂಪಿಗಾಗಿ ಮಹಾನೈವೇದ್ಯ

  • ಮಾತ್ರಾಸೀಸಪದ್ಯವು ಸೊಗಸಾಗಿದೆ. ಆದರೆ ಎತ್ತುಗೀತಿಯಲ್ಲಿ ಅದೇಕೋ ಮಾತ್ರೆ-ಅಂಶಗಳೆರಡರ ಲೆಕ್ಕಕ್ಕೂ ಗತಿಯು ನಯವಾಗಿ ಹೊಮ್ಮುತ್ತಿಲ್ಲ. ದಯಮಾಡಿ ಗಮನಿಸಿರಿ.

   • ಟಂಕಿಸಿದಮೇಲೆ ನನಗೂ ಅರಿವಾಯಿತು. ಗಮನಿಕೆಗೆ ಧನ್ಯವಾದಗಳು. ಸರಿಪಡಿಸಿದ ಮಾತ್ರಾಲಯದ ಎತ್ತುಗೀತಿಯೊಡನೆ…

    ಪೊಸತೆಲರು ಮಲರುಪೊಸತನುದಿನಂ ರವಿಬುವಿಯು
    ಪೊಸತನುಕ್ಷಣಮೆಲ್ಲ ಪೊಸತು ಪೊಸತೆ
    ಕುಸಿದಭೂತವು ಮುಂದಿನೊಸಗೆಯಭವಿಷ್ಯವೂ
    ಎಸೆವುದೆಂದೂವರ್ತಮಾನದಲ್ಲೆ
    ಬೆಸೆದಂಕೆಗಳ ರೂಪಗಳಮೂಲಶೂನ್ಯದಿಂ
    ಪೊಸತುಪಿಸುಗುಟ್ಟುವುದು ನಿರತಮಿಡಿದು
    ರಸಮಿದಂತರ್ಗಾಮಿ ಬಸಿದನುಭವಿಪ ಕಸುವ
    ಪೊಸತಾಗಿತಾಗಿಸಲಿ ಪದ್ಯಪಾನ

    ಕೆರಳಿ ಭಾವನಾ ಸಾಗರವದುಕ್ಕಿ ಪದ್ಯ
    ತರಲಿ ಮೋದವನದೋದುಗರಿಗಾಗಿ ಹೃದ್ಯ
    ಅರಳಿ ನವಕವನಗಳುಬರಲಿ ಸರ್ವವೇದ್ಯ
    ಸರಸತಿಯನೋಂಪಿಗಾಗಲದುಪೂಜೆಪಾದ್ಯ

 5. ಹರುಷದಾ ಹೊನಲುಗಳ ಸೂಸುತ್ತೆ ಬಂದಿಹುದು
  ವರುಷದಾಂತ್ಯದಲೆನಗೆ ಶಿಶುವತೆರದಿ
  ಹುರುಪಿನಲಿ ಸಾಗುವೆನು ಸಂಸಾರ ಸಾಗರದಿ
  ಬರೆವೆನಂತೆಯೆ ಪದ್ಯ ಪಾನದೊಳಗೂ

  ಕಳೆದ ವರ್ಷ (ಡಿಸೆಂಬರ್ 27, 2012)ನನ್ನ ಹೆಂಡತಿ ಒಂದು ಹೆಣ್ಣು ಮಗುವನ್ನು ಹೆತ್ತಳು. ಹಾಗೇ ನಾನು ಕಳೆದ ತಿಂಗಳಿಂದ ಪದ್ಯಪಾನದಲ್ಲಿ ನನ್ನ ಮೊದಲ ಪದ್ಯವನ್ನು ಬರೆದೆ. ಸಂಸಾರದಲ್ಲಿ ಹುರುಪಿನಿಂದ ಸಾಗುವ ಹಾಗೆ ಮುಂದಿನ ವರ್ಷ ಪದ್ಯಪಾನದಲ್ಲೂ ಬರೆಯುತ್ತೇನೆ.

 6. ಮನವರಿತಿರಲದುಗಾದಿಯ ದಿನದಿಂ
  ದಿನವರಿಯಲು ಮೀನಾಮೇಷವದೇಂ
  ಜನವರಿಯಲಿ ಹೊಸವರುಷದ ಹರುಷವು
  ಜನುಮದ ದಿನ ವೀದಿನವಿಳೆ ನಿನಗೇಂ।।
  (ಮನ=ಚಂದ್ರನ ಅರಿವಿನ ಪ್ರಕಾರ (ಚಾಂದ್ರಮಾನ) ಉಗಾದಿಯ ದಿನ, ದಿನ=ಸೂರ್ಯನ ಅರಿವಿನ ಪ್ರಕಾರ (ಸೌರಮಾನ ) ಮೀನ-ಮೇಷ ಸಂಕ್ರಮಣ,
  ಜನ=ಮಾನವರ ಅರಿವಿನ ಪ್ರಕಾರ “ಜನವರಿ”ಯಿಂದ ಭೂಮಿಯಲ್ಲಿ “ಹೊಸವರ್ಷ”. ಇಂದು(೧-೧-೨೦೧೩) “ಭೂಮಿತಾಯಿ”ಯ “ಹುಟ್ಟಿದ ಹಬ್ಬ” ಎನ್ನುವ ಅರ್ಥದಲ್ಲಿ.
  ಒಟ್ಟಿನಲ್ಲಿ, ಈ ನಿರಂತರ ಪರಿಭ್ರಮಣದ ಆರಂಭದ ಲೆಕ್ಕಾಚಾರದ “ಮೀನಮೇಷ”!

 7. ಆಭಾಸವಿದ ನೋಡು, ‘ಸೌರ’ವರ್ಷಾರಂಭ
  ದಾ ಭಾಗ್ಯ ಬಂದುದೆಂದೆಂಬರೇಕೋ|
  ಈ ಭೂಮಿಯೊಳು ಮಾಗಿ ಜೃಂಬಿಸುತ್ತಿರಲಾಗ
  ಲಾ ಭಾಸ್ಕರಂ ಕಾಯ -ಹಾದಿರಂಪ||

 8. ಆಗುತಾ ವರುಷ ಪೂರ್ಣವಿರಾಮಾ
  ನಾಗುತೀ ಹರುಷ ವರ್ಷವಿಧಾನಾ |
  ಸ್ವಾಗತಂ ಸಮಯಕರ್ಮದ ಪಾಕ
  ಕ್ಕೀಗ ಸಿದ್ಧವಿದೊ ಲೋಕವೆ ನೋಡಾ ||

  ಇದು “ಸ್ವಾಗತಾ” ಎಂಬ ವೃತ್ತ. ರಗಣ, ನಗಣ, ಭಗಣ ಮತ್ತು ಎರಡು ಗುರ್ವಕ್ಷರಗಳು, ಇರಬೇಕು. ಪಾದಾಂತ್ಯ ಯತಿ.

  • ಭಟ್ಟರೇ! ಸೊಗಸಾಯಿತು. ಸ್ವಾಗತವು ಚೆಲುವಾಗಿದೆ. ಆದರೆ ಕನ್ನಡಕ್ಕೆ ಪಾದಾಂತಯತಿಯು ಕಡ್ಡಾಯವಲ್ಲ. ಖಂಡಪ್ರಾಸವನ್ನು ಸಲೀಲವಾಗಿ ತರಬಹುದು. ಅಂದಹಾಗೆ ಗುರುಸ್ಥಾನವನ್ನು ಉಳಿಸಿಕೊಳ್ಳಲು ಅನವಶ್ಯವಾಗಿ ಅಕ್ಷರಗಳನ್ನು ದೀರ್ಘವಾಗಿ ಎಳೆಯುವುದರ ಬದಲು ಮತ್ತೂ ಒಪ್ಪವಾದ ವಿಧಾನ್ವನ್ನು ಚಿಂತಿಸಿರಿ:-)
   ಉದಾ: ಆಗಿರಲ್ ವರುಷಪೂರ್ಣವಿರಾಮಂ……ಇತ್ಯಾದಿ

   • ಗೆಳೆಯ ಗಣೇಶರೇ, ಪ್ರತಿಕ್ರಿಯೆಗೆ ವಂದನೆಗಳು.
    “ಆಗುತಾ ವರುಷ” ಎಂಬಲ್ಲಿ “ಅದು” ಎಂಬರ್ಥದಲ್ಲಿ, ಕಳೆದುಹೋದ ವರ್ಷವೆಂಬರ್ಥದಲ್ಲಿ “ಆ” ಬಳಸಿದ್ದೇನೆ. ಮತ್ತು ಕನ್ನಡದಲ್ಲಿ ಸವರ್ಣದೀರ್ಘಸಂಧಿಯನ್ನು ಹೀಗೆ ಮಾಡಬಹುದೇ? ಗೊತ್ತಿಲ್ಲದೆ “ವಿರಾಮಾನಾಗುತ” ವಿರಾಮ+ಆನಾಗುತ ೆಂದು ಬಳಸಿದ್ದೇನೆ. ಕನ್ನಡದ ಪ್ರಸವಗಳು ಸುಂದರವಾಗಿರಬೇಕೆಂಬ ಕಾಳಜಿಯ ತಮ್ಮ ಸಲಹೆಗಳಿಗೆ ಸದಾ ಸ್ವಾಗತ.
    -ಪದ್ಯಪಾನಿ ವಿಘ್ನೇಶ್ವರ

   • ಸವರ್ಣದೀರ್ಘಸಂಧಿ ಕನ್ನಡದ್ದಲ್ಲ. ಮಾಡುವಂತಿಲ್ಲ. ಇಲ್ಲಿ ನೀವು ಮಾಡಿಯೂ ಇಲ್ಲ. ಇಲ್ಲಿ ನೀವು ಲೋಪಸಂಧಿ ಮಾಡಿದ್ದೀರಿ. ಸರಿಯಾಗಿದೆ. ಆದರೆ ‘ವಿರಾಮಾನಾಗುತ’ ಸರಿಯೆ? ತಪ್ಪೆ? ನನಗೆ ತಿಳಿಯದು; ‘ವಿರಾಮವಾನಾಗುತ’ ಎಂದರೆ ಕೇಳಲು ಹಿತವಾಗಿರುತ್ತದೆ ಎಂದಷ್ಟೇ ಹೇಳಬಲ್ಲೆ.

    • ಯುಕ್ತವಾಗಿದೆ.ಆದರೆ ವಿರಾಮನ್ ಆನ್ ಆಗುತ = ವಿರಾಮನಾನಾಗುತ ಎಂದಲ್ಲಿ ಮತ್ತೂ ಹಳಗನ್ನಡವಾಗುವುದು.

     • ಗಣೇಶರೇ, ಧನ್ಯವಾದಗಳು. ನಾನು ಮಾಡಿದ ಪ್ರಯೋಗ ತಪ್ಪೇ ಎಂದಾಯಿತು. ಸಂಸ್ಕೃತದ ಸವರ್ಣದೀರ್ಘದಂತೆ ಕನ್ನಡದಲ್ಲಿ ಸಂಧಿಯಾಗುವುದಿಲ್ಲ ಎಂದು ಗೊತ್ತಿರಲಿಲ್ಲ. ವಿರಾಮಾನಾಗುತ ಎಂದಿದ್ದುದನ್ನು ವಿರಾಮನ್+ಆನಾಗುತ ಎಂದು ಸವರಿದರೆ ಗಣಭಂಗವಾಗುತ್ತದೆ.ಸವರದಿದ್ದರೆ ಅರಿಸಂಧಿಯ ತಪ್ಪು ಉಳಿದುಬಿಡುತ್ತದೆ. ಅದಕ್ಕಾಗಿ ತಾವು ಸೂಚಿಸಿದ ಮೊದಲ ವಿಧಾನವನ್ನು
      ಅನುಸರಿಸಿ ಸರಿಪಡಿಸಿದ್ದೇನೆ.
      ಆಗಿರಲ್ ವರುಷಪೂರ್ಣವಿರಾಮಂ
      ಸಾಗುತೀ ಹರುಷವರ್ಷವಿಧಾನಂ |
      ಸ್ವಾಗತಂ ಸಮಯಕರ್ಮವಿಪಾಕ
      ಕ್ಕೀಗ ಸಿದ್ಧವಿದೊ ಲೋಕವೆ ನೋಡಾ ||

 9. ೨೦೧೩ ಎಲ್ಲರಿಗೂ ಸಂತಸ ನೆಮ್ಮದಿಗಳಿಂದ ಕೂಡಿರಲೆಂಬ ಹಾರೈಕೆಗಳೊಂದಿಗೆ ಎರಡು ಚೌಪದಿಗಳು:

  ಚಂದದಾ ಮುಂಬೆಳಗ ಚುಮ್ಮೆನುವ ಚಳಿಯಲ್ಲಿ
  ಚಂದಿರನು ಕಣ್ಣಿಂದ ಕಾಣದಾದ
  ಸುಂದರಾಕಾಶದಲಿ ಹಾಕುತ್ತ ರಂಗೋಲಿ
  ತಂದಿರಲು ನೇಸರನು ಮನಕೆ ಮೋದ

  ಹೊಸತೇನು ಬಂತಿಲ್ಲಿ ಹೂವಿಲ್ಲ ಚಿಗುರಿಲ್ಲ ?
  ತುಸು ಸೊಗಸು ಕಂಡಿಲ್ಲವೆಂದೆನ್ನಬೇಡ!
  ಮುಸುಕಿದಾಗಸದಲ್ಲಿ ರಂಗಿನೋಕುಳಿ ಚೆಲ್ಲಿ-
  ಯೆಸೆವ ಹೊಸ ಭಾಸ್ಕರನ ಸೊಬಗ ನೋಡಾ!

  -ಹಂಸಾನಂದಿ

  ಕೊ: ಕ್ರಿಸ್ತ ವರ್ಷಾರಂಭದಲ್ಲಿ ನಮ್ಮ ಯುಗಾದಿಯ ಚೈತ್ರದ ಚಿಗುರು, ಸೊಗಸು ಯಾವುದೂ ಕಾಣದು ಎಂದು ಹೇಳುವುದುಂಟು. ಅದು ನಿಜವೂ ಹೌದು. ಆದರೆ, ವರಕವಿ ಬೇಂದ್ರೆಯವರು ನುಡಿದಂತೆ, ನಿದ್ದೆಗೊಮ್ಮೆ ನಿತ್ಯಮರಣ ಎದ್ದಸಲ ನವೀನ ಜನನವೆಂಬಂತೆ ಸೂರ್ಯನ ಪ್ರತಿ ಹೊಸ ಹುಟ್ಟೂ ಒಂದೊಂದು ಹೊಸ ಜೀವನವೇ! ಅದಕ್ಕೆಂದೇ, ಈ ವರ್ಷಾರಂಭವನ್ನೂ ಸ್ವಾಗತಿಸುವುದರಲ್ಲಿ ತಪ್ಪೇನಿದೆ ಎನ್ನಿಸದಿರದು. ಈ ಪದ್ಯಗಳು ಈಚೆಗೆ ನೋಡಿದ ಒಂದು ಸೂರ್ಯೋದಯದಿಂದ ಪ್ರಭಾವಿತವಾದವು. ಚಿತ್ರವಿಲ್ಲದೇ ಈ ಪದ್ಯಗಳ ಭಾವವು ಸ್ಪಷ್ಟವೆನಿಸದೇ ಇದ್ದರಿಂದ,
  ನನ್ನ ಬ್ಲಾಗಿನ ಕೊಂಡಿಯನ್ನು ಹಾಕಿದ್ದೇನೆ- ಚಿಟಕಿಸಿ ನೋಡಬಹುದು(http://hamsanada.blogspot.com/2013/01/blog-post.html)

 10. ಚೆಲುಗನ್ನಡದೊಳ್ ಪದ್ಯಂ
  ಫಲಿಸಿರ್ಪುದು ನೂತ್ನವತ್ಸರದ ಪಾಂಗಿಂದಂ|
  ಸುಲಿಪಲ್ಲಿನ ಕಂದನವೊಲ್
  ಸಲೆ ಸೊಗಸಂ ಬೀರುತಿಲ್ಲಿ ಹಂಸಾನಂದೀ!!

 11. ನೂತನ ವತ್ಸರಾದಿಗೆ ಮನೋಹರ ಪದ್ಯಗಳಾಗಮಂ ಮುದಂ
  ಬಾತತ ಹೃದ್ಯಛಂದದೊಳು ಸಾಗಲಿ ಹಾಯೆನೆ ಸ್ವಾಗತಿಪ್ಪೆ ವಾಂ
  ಭೂತಳದೀ ನವಾಬ್ದದಲಿ ಸೌಖ್ಯ ಪ್ರಶಾಂತಿಯು ಸೇರಿ ತೋರಲೈ
  ನೀತಿಯ ನೀಗಿದಂಥ ಜನನಾಯಕ ನಾಟಕದಂಕೆ ಬೀಳಲೈ
  ಕೀರ್ತಿಯ ಬೆನ್ನನೇರಿ ಋತ ಸತ್ಯವ ಮುಚ್ಚುವ ಸ್ವಾರ್ಥನಿಲ್ಲಲೈ
  ಘಾತುಕ ಪೈತ್ಯದಿಂ ವನಿತೆ ರಕ್ಷಿತಳಾಗಲಿ ಮಾನದಿಂ ಸದಾ
  ಪಾತಕ ಕೃತ್ಯವಂ ಸಲಿಸೆ ಪುಂಸ್ತನ ನಾಶದ ಶಿಕ್ಷೆಬೀಳಲೈ
  ಭೀತರು ಧೈರ್ಯವಂ ಕಲಿತು ಸಾದ್ಯವ ಸಾಧಿಸಲೈ ಬರ್ದುಂಕಿನೊಳ್
  ಪ್ರೀತಿಯ ಸುತ್ತ ಮೂಡಿಪ ವಿಶಾಲತೆ ಬತ್ತದೆ ವೃತ್ತ ವರ್ಧಿಸಲ್
  ಶ್ವೇತಗುಣಕ್ಕೆ ಸಂದಿಹ ಜಯಂಬೆನೆ ಪೂತರ ರಕ್ಷೆಯಾಗಲಯ್
  ಮಾತಿನ ಮಂಟಪವ ಬಿಟ್ಟು ಕಾರ್ಯದ ಶೌರ್ಯದ ಧಾಟಿಮೂಡಲೈ
  ಸ್ಚಾತಿಶಯಂಗಳೇನಿಹವೊ ಶೋಧಿಸಿ ಸಾಧಿಸೆ ದೀಕ್ಷೆಯಾಗಲೈ
  ಶೀತಲ ವಾಯುವಂತೆಸೆಯೆ ಕನ್ನಡಮೆಲ್ಲಡೆ ಧನ್ಯಮಾಗಲಯ್
  ಮಾತೆ ಸಹೋದರೀ ಜನರ ಪ್ರೀತಿಯ ಶಕ್ತಿಯದಿಂಬುಗೊಳ್ಳಲಯ್
  ಶುಕ್ತಬಲಂ ಸ್ವಯಂಪ್ರಭೆಯ ತಾಳುತ ಭಾರತ ವೆದ್ದುನಿಲ್ಲಲೈ
  ಹೇತುವ ಕಾಣುತಲ್ ಜನತೆ ಕೂಡಲಿ ಸಾಧಿಸೆ ಸೂಕ್ತಮಾರ್ಗಮಂ

  • ಒಳ್ಳೆಯ ಮಾಲಿಕೆಯನ್ನೇ ರಚಿಸಿದ್ದೀರಿ. ಧನ್ಯವಾದ. ಆದರೆ ಮುದಂ+ಆತತ ಎಂಬುದು ಮುದಮಾತತ ಎಂದಲ್ಲದೆ ತೆಲುಗಿನಲ್ಲಿರುವಂತೆ ಮುದಂಬು+ಆತತ=ಮುದಂಬಾತತ ಎಂದಾಗದಷ್ಟೆ. ಮಾತಿನ ಮಂಟಪಂಬಿಸುಟು ಎಂಡು ಸವರಿಸಿದಾಗ ಛಂದಸ್ಸು ಸರಿಯಾಗುವುದು. ಬರೆಹದ ಓಘದಲ್ಲಿ ನಿಮಗೆ ಕಣ್ತಪ್ಪಿರಬೇಕು.ಶುಕ್ತಬಲಂ ಎಂದರೆ ಪ್ರಾಸ ಸಡಲುವುದು. ಖ್ಯಾತಬಲಂ ಎಂದಾದಲ್ಲಿ ಸರಿಯಾದೀತು.

   ಅಂದಹಾಗೆ ಎಲ್ಲ ಪದ್ಯಪಾನಿಗಳ ಗಮನಕ್ಕೆ:

   ತೆಲುಗಿನಲ್ಲಿ ಮಿಗಿಲಾಗಿ ಮಾಲಿಕೆಗಳ ರಚನೆ ವಾಡಿಕೆಯಲ್ಲಿದೆ. ಇದು ನಾಲ್ಕು ಸಾಲಿಗಿಂತ ಮಿಗಿಲಾಗಿ ಸಾಗುವ ಏಕರೂಪಪ್ರಾಸದ ರಚನೆ. ತೊರೆಯೋಟದ ಭಾವವಿಸ್ತರಣಕ್ಕಿದು ಒದಗುವುದು. ಪ್ರಾಯಶಃ ಆ ನುಡಿಯಲ್ಲಿ ಆಂಧ್ರಕವಿತಾಪಿತಾಮಹ ಅಲ್ಲಸಾನಿ ಪೆದ್ದನನೇ ಇದಕ್ಕೆ ಆದ್ಯನೆನ್ನಬೇಕು.

   • ವ್ಯವಧಾನಿಸಿ ಮಾಲಿಕೆಯಂ
    ಅವಧರಿಸುತ ಬಂಧಭಾವಛಂದದನಡೆಯನ್
    ಸವರಣೆ ಗೈಯಲು ಪೇಳ್ದಾ
    ವಿವರಂ ಸರ್ವತ್ರಸೂಕ್ತಮೊಪ್ಪುಗುಸ್ತುತ್ಯಂ

   • ಕನ್ನಡದಲ್ಲಿ ಹರಿದಾಸರ ಕೀರ್ತನೆಗಳಲ್ಲಿ ಉಗಾಭೋಗ ಎಂದು ಇದೆಯಲ್ಲ.. ಅದರಲ್ಲಿಯೂ ಪ್ರಾಸ ನಿಯಮಿತವಾಗಿರುತ್ತದೆ. ಅದಕ್ಕೂ ಇದಕ್ಕೂ ಏನಾದರೂ ಸಂಬಂಧ ಇದೆಯಾ ಹೇಗೆ??

 12. ದಿನದ ಚಿತ್ರರಚಿಪೆ ಸದಾ, ದಿನದಿನಕ್ಕೆ ಹಂಗಿಲ್ಲಾ
  ಮನಮನಕ್ಕೆ ಕೊಟ್ಟೆವಿವಿಧ ರೀತಿ ರಾಗದುಲಿವ ನೇ
  ದಿನದ ಕ್ಷಣದಲಿ, ಮನದಲಿ ತುಂಬಿಹೆ ನವೀನತೆಯ ಕಣ ವೇ
  ಅನುಪಿಸಿ ಕಳೆದ್ವರ್ಷವ ದೇವ ಸೃಜಿಪೆ ನವವರ್ಷವದೆಂತೋ.

 13. ರವಿಯನಾರಾಧಿಸುವರಂದಿನರಿವಂ ಬಳಸಿ
  ಭುವಿಕಾಲ ನಿರ್ಣಯವ ರಚಿಸೆ ನರನಿಂದು ।
  ನವವರುಷಕಿಂ ಮೊದಲೆ ಅಳಿವು ಶತಸಿದ್ಧೆನಲು
  ರವಿಯು ತಾ ಮರುಕಳಿಸಿ ಹರಸಿದನು ನಗುತ ॥

  • ಪದ್ಯಪಾನಕ್ಕೆ ಸ್ವಾಗತ 🙂
   ನಿಮ್ಮ ಈ ಪ್ರಯತ್ನ ಸುತರಾಂ ಸ್ತುತ್ಯ. ಆದರೆ ಭುವಿಕಾಲ ಎಂಬುದು ಅಸಾಧುರೂಪ. ಈ ಸಮಾಸವು ಭೂಕಾಲ ಎಂದಾಗಬೇಕು ಇಲ್ಲವೇ ಬುವಿಯ ಕಾಲ ಎನ್ನಬೇಕು, ಅಥವಾ ಬುವಿಗಾಲ ಎಂದಾದರೂ ಆಗಬೇಕು. ಶತಸಿದ್ಧೆನಲು ಕೂಡ ಅಸಾಧುರೂಪ. ಇಂಥವನ್ನು ಹಲವರು ಷಟ್ಪದೀಕವಿಗಳೂ ಯಕ್ಷಗಾನಕವಿಗಳೂ ಮಾಡಿದ್ದಾರೆ. ಆದರೆ ಅದು ಅಸಾಧು ಹಾಗೂ ಅಸುಂದರ. ಶತಸಿದ್ಧವೆನಲು ಎನ್ನುವುದೇ ಸಾಧುರೂಪ. ಹೀಗೆ ತಿದ್ದಿದಾಗ ಛಂದೋದೋಷವು ಬರುವುದು. ಆದುದರಿಂದ ಶತಸಿದ್ಧವಿರೆ ಎಂದು ಸವರಿಸಿಕೊಂಡಲ್ಲಿ ಎಲ್ಲ ಒಳಿತಾಗುವುದು.

   • ಧನ್ಯವಾದಗಳು ಸರ್, ಮುಂದಿನ ಪ್ರಯತ್ನಗಳಲ್ಲಿ ಆ ಕಡೆಗೆ ಮತ್ತಷ್ಟು ಗಮನ ಹರಿಸುತ್ತೇನೆ.

    ರವಿಯನಾರಾಧಿಸುವರಂದಿನರಿವಂ ಬಳಸಿ
    ಬುವಿಗಾಲ ನಿರ್ಣಯವ ರಚಿಸೆ ನರನಿಂದು ।
    ನವವರುಷಕಿಂ ಮೊದಲೆ ಅಳಿವು ಶತಸಿದ್ಧವೆನೆ
    ರವಿಯು ತಾ ಮರುಕಳಿಸಿ ಹರಸಿದನು ನಗುತ ॥

 14. ಟೀನೇಜಿಗೆ ಬಂದ್ಯಲ್ಲೇ
  ನೀನೇ ಹೇಳಮ್ಮ ನಾವು ಪಾರ್ಟಿಗಿದೀವಾ?
  ಎನೇ ಬಂದ್ರು ಹೆದರ್ಕೊಳ್
  ದೇನೇ ಮುಂದ್ ಹೋಗು, ನಿನ್ ಜೊತೆಗಿರಲಿ ಗುಡ್ ಲಕ್ !!!!

  ಈ ವರ್ಷವನ್ನು (೨೦೧೩) ಹದಿಮೂರು ವರ್ಷದ ಹುಡುಗಿಯೆಂದು ಭಾವಿಸಿ ಬರೆದಿರುವ ಕಂದ. ಹದಿಮೂರರಿಂದ ಹತ್ತೊಂಬತ್ತು – ಟೀನೇಜ್, ಪಾರ್ಟಿ – ಹುಟ್ಟುಹಬ್ಬದ ಪಾರ್ಟಿ, ಏನೇ ಬಂದ್ರು – ಎಂತಹ ಕಷ್ಟಗಳು ಬಂದರೂ ….

 15. ಏನೇ ಅನ್ನುವುದು ಎನೇ ಆಗಿತ್ತು.

  ಟೀನೇಜಿಗೆ ಬಂದ್ಯಲ್ಲೇ
  ನೀನೇ ಹೇಳಮ್ಮ ನಾವು ಪಾರ್ಟಿಗಿದೀವಾ?
  ಏನೇ ಬಂದ್ರು ಹೆದರ್ಕೊಳ್
  ದೇನೇ ಮುಂದ್ ಹೋಗು, ನಿನ್ ಜೊತೆಗಿರಲಿ ಗುಡ್ ಲಕ್ !!!!

  ಈ ವರ್ಷವನ್ನು (೨೦೧೩) ಹದಿಮೂರು ವರ್ಷದ ಹುಡುಗಿಯೆಂದು ಭಾವಿಸಿ ಬರೆದಿರುವ ಕಂದ. ಹದಿಮೂರರಿಂದ ಹತ್ತೊಂಬತ್ತು – ಟೀನೇಜ್, ಪಾರ್ಟಿ – ಹುಟ್ಟುಹಬ್ಬದ ಪಾರ್ಟಿ, ಏನೇ ಬಂದ್ರು – ಎಂತಹ ಕಷ್ಟಗಳು ಬಂದರೂ ….

  • ಸ್ಟ್ರಕ್ಚರಿದು ರಿಯಲ್ ಪರ್ಫೆಕ್ಟ್!
   ಲೆಕ್ಚರಿಗಾಸ್ಪದಮದಿರ್ಪುದೀ ಪದ್ಧತಿಯೊಳ್|
   ಫ್ರ್ಯಾಕ್ಚರಿಸಲ್ ಜಡಗತಿಯರ್-
   ವಾಕ್ಚರಣಂ ಹಾಸ್ಯಹವ್ಯದಿಂ ಸ್ತವನೀಯಂ||

  • ಟೀನೇಜನ್ಕಂಡವ್ರ
   ಲ್ವೇ ನೀವೇ ಯೋಳಭೌದು ಸರಿಯುತ್ತರವಾ|
   ಏನೇ ಯೋಳ್ದ್ರೂ ಕೇಳ್ತೀನ್
   ನಾನೇನೆದ್ರಾದೆ ಇಲ್ಲ ಯೋಳ್ನೋಡ್ತೀವ್ರಾ||

   ನನ್ನ ಪ್ರತಿಕ್ರಿಯೆ ಹಾಗಿರಲಿ, ನಿಮ್ಮ ಪದ್ಯವಂತೂ ಟ್ರೆಂಡ್‍ಸೆಟರ್.

   • ಪ್ರತಿಕ್ರಿಯೆಗಾಗಿ ಧನ್ಯವಾದಗಳು ಪ್ರಸಾದ್. ನನ್ನ ಪದ್ಯ ಟ್ರೆಂಡ್ ಸೆಟರ್ ಆಗುತ್ತಾ ಕಾದು ನೋಡೋಣ.

 16. ಪಿರಿಯಕ್ಕರ||
  ನೂತನಂ ವರ್ಷಮಾಗಮಿಸಿರ್ಪುದು ಪಾಶ್ಚಾತ್ಯರ್ಕಾಲಪದ್ಧತಿಯ ಹಾಗೆ
  ಪ್ರೀತಿ ಪೆರ್ಚಾಗಿ ಬಾಳ್ಕೆಯೊಳ್ ತುಂಬಿರಲಿ ಬೆಳಕೀವ ಪೊಸಪೊಸ ಪೊಂಗದಿರು|
  ಚೂತಪಾದಪಂಗಳು ಪೂವ ತಳೆದಿರ್ಕುಂ ಫಲಮೀಯಲ್ ನೋಂತಿರ್ಕುಮೆಂಬಂತೆ ಮೇಣ್
  ನೂತನತೆಯಂತು ಬರಲೆಮ್ಮ ಮನದೊಳು ನಲ್ಗಬ್ಬಂಗಳ ನಿತ್ಯ ಸೃಜಿಸಲ್ಕೆ ದಲ್||

  • ಒಳ್ಲೆಯ ಪಿರಿಯಕ್ಕರ. ಧನ್ಯವಾದ. ಆದರೆ ಎರಡನೆಯ ಪಾದದಲ್ಲೆ ಗಣಭಂಗವಾಗಿದೆ.
   ಪ್ರೀತಿ/ಪೆರ್ಚಾಗಿ/ಬಾಳ್ಕೆಯೊಳ್/ತುಂಬಿರ/ಲಿಬೆಳಕೀ/ವಪೊಸಪೊ/ಸಪೊಂಗದಿರು
   ಎಂಬ ಗಣವಿನ್ಯಾಸವು ಹೇಗೆ ಗತಿವಿರುದ್ಧವೆಂಬುದು ಸುವೇದ್ಯ. ಇದನ್ನು ತಿದ್ದಲು
   ಪ್ರೀತಿ……………..ತುಂಬಿರೆ (ತುಂಬಿರಲ್)………………………
   ಎಂದು ಸವರಿಸಿದರೆ ಸಾಕು. ತ್ರಿಮೂರ್ತಿಗಣಬಂಧಗಳನ್ನು (ಅಂಶಗಣಬಂಧವೆಂದೂ ಈಚೆಗೆ ಹೇಳುವರು) ರಚಿಸುವಾಗ ತುಂಬ ಎಚ್ಚರ ಬೇಕು. ಈ ಬಗೆಗೆ ನನ್ನ ಪಾಠಗಳನ್ನು ನೋಡಿರಿ. ನನನಾನಾ, ನಾನಾನಾ ಎಂಬ ಎರಡು ಶ್ರಾವಣರೂಪಗಳಲ್ಲದೆ ವಿಷ್ಣುಗಣಕ್ಕೆ ಪ್ರಕಾರಾಂತರವಿಲ್ಲ. ಇದನ್ನು ಚಾಕ್ಷುಷರೂಪಕ್ಕೆ ಅನ್ವಯಿಸಿದಾಗ UUUU, UU – -, UU -U, – U -, – – –
   – – U ಎಂಬೀ ಸಾಧ್ಯತೆಗಳಲ್ಲದೆ ಬೇರೆಯವು ಛಂದೋಗತಿಯ ದೃಷ್ಟಿಯಿಂದ ಒಗ್ಗವು. ನೀವು ಪ್ರಕೃತದಲ್ಲಿ ತುಂಬಿರಲಿ ಎಂದು ವಿಷ್ಣುಗಣವನ್ನು ಹಣೆದಿದ್ದೀರಿ. ಇದು ಆ ಗಣಲಕ್ಷಣಕ್ಕೆ ಸರ್ವಥಾ ಒಗ್ಗದು. ಏಕೆಂದರೆ ಇದು ರುದ್ರಗಣವೇ ಆಗುತ್ತದೆ!
   ಇದರ ಶ್ರಾವಣರೂಪವು ನಾನಾನಾನಾ ಎಂದಾಗುತ್ತದೆ. ಈ ಗಣವು ಪಿರಿಯಕ್ಕರದ ಕಡೆಯಲ್ಲಲ್ಲದೆ ಇಲ್ಲಿ ಬರಬಾರದು.

 17. ಗ.ಕೊ,
  ಮೊದಲ ಸಾಲು – ಹಾಗೆ ಬದಲು ವೊಲ್/ವೋಲ್,
  ಎರಡನೆಯ ಸಾಲು – ಪ್ರೀತಿ ಬದಲು ಕೂರ್ಮೆ ಬಳಸಿ ಪ್ರಾಸವನ್ನು ಹೊಂದಿಸಿ ಮತ್ತು
  ಕೊನೆಯ ಸಾಲು – ನೂತನತೆಯಂತು ಬದಲು ನೂತ್ನತೆಯನಂತು ಬಳಸಿದರೆ ಎಲ್ಲ ಹಳಗನ್ನಡವಾಗುತ್ತೆ.

 18. ಕೊಂಡೊಯ್ಯುತಲಿದೆ ಶಕ್ತಿಯ
  ಖಂಡೂರ್ವಿಯ ಕಾಲಯಂತ್ರದೊಡೆ ಸರಿವೆರೆತುಂ
  ಬಂಡಿಯ ಬಿಡದೇ ತನ್ನೊಡೆ
  ಕೊಂಡಿ ಜಡಿದು ಮುಂದೆ ಸಾಗುವುಗಿಯಂತ್ರದವೋಲ್

  ಪಯಣದನುಭವಗಳೆಲ್ಲಂ
  ಚಯನಗೊಳುತಿರಲರಿವಂ ಘನಗೊಳಿಸಲೆಮ್ಮಾ
  ನಯವಿನಯವುಕ್ಕಿಸುತೆ ಸುಹೃ
  ದಯ ವೈಶಾಲತೆಯೊಡಂ ಸವಿವ ವತ್ಸರಮಂ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)