Feb 022013
 

ಎಲ್ಲ ಪದ್ಯಪಾನಿಗಳಿಗೆ ನಮಸ್ಕಾರ. ಈ ವೇದಿಕೆಯಲ್ಲಿ ಹಲವು ಹತ್ತು ಬಾರಿ ಅರಿಸಮಾಸ, ಶಿಥಿಲದ್ವಿತ್ವ, ಹಳಗನ್ನಡ/ನಡುಗನ್ನಡವ್ಯಾಕರಣಶುದ್ಧತೆ ಇತ್ಯಾದಿ ವಿಚಾರಗಳು ಚರ್ಚೆಗೆ ಬರುತ್ತಿವೆ ಮತ್ತು ಎಲ್ಲವೂ ತುಂಬ ಆರೋಗ್ಯಕರವಾದ ನಿರಭಿನಿವಿಷ್ಟವೂ ಆದ ಅಧ್ಯಯನ ಮತ್ತು ಜಿಜ್ಞಾಸೆಗಳಿಂದ ಕೂಡಿದ್ದು, ಪರಸ್ಪರ ಕೊಡುಕೊಳ್ಳುವಿಕೆಯ ಮೈತ್ರೀಭಾವದಿಂದಲೇ ಸಾಗಿವೆ. ಈ ಸೌಖ್ಯ-ಸಂತೋಷಗಳಿಗಾಗಿ ಎಲ್ಲ ಗೆಳೆಯರಿಗೂ ಧನ್ಯವಾದ. ಆದರೆ ಕೆಲವೊಮ್ಮೆ ಹಳೆಯ ಚರ್ಚೆಗಳೇ ಮರುಕಳಿಸುವಾಗ ಒಂದುಮಟ್ಟದ ಸ್ಪಷ್ಟೀಕರಣವನ್ನು ನೀಡುವುದು ಹಾಗೂ ಪದ್ಯಪಾನದ ಸಾಮಾನ್ಯರೀತಿಯ ನಿಲವನ್ನು ನಿವೇದಿಸುವುದು ಯುಕ್ತವೆಂದು ತೋರಿ ಈ ವಿವರಣೆ:

ಎಲ್ಲರೂ ಬಲ್ಲಂತೆ ಪದ್ಯಪಾನವು ಅಭಿಜಾತಪದ್ಯರಚನೆಯನ್ನೂ ಅದರ ಆಸ್ವಾದ, ಪ್ರಸಾರ ಮತ್ತು ಸಂವಿಭಾಗವನ್ನೂ(ಹಂಚಿಕೊಳ್ಳುವಿಕೆ) ಆಸಕ್ತರ ಮನದಲ್ಲಿ ನೆಲೆಯಾಗಿಸಲು ಹುಟ್ಟಿದ ಅನೌಪಚಾರಿಕ ಸ್ನೇಹಕೂಟ. ಇಂಥ ಪದ್ಯರಚನೆಯು ಸಾವಿರ ವರ್ಷಗಳಿಗೂ ಮಿಕ್ಕ ಕನ್ನಡಸಾಹಿತ್ಯಪರಂಪರೆಯನ್ನು ಅವಲಂಬಿಸಿದೆ. ಇಲ್ಲಿ ಹಳಗನ್ನಡ, ನಡುಗನ್ನಡಗಳೆರಡೂ ಉಂಟು.ಹೊಸಗನ್ನಡವಂತೂ ನಮ್ಮ ಕಾಲದ್ದೇ ಆಗಿ ಇದ್ದೇ ಇದೆ. ಈ ವೇದಿಕೆಯಲ್ಲಿ ಸೇರುವ ನಮ್ಮೆಲ್ಲರ ಉದ್ದೇಶವೂ ನಮ್ಮ ನಮ್ಮ ಭಾಷೆ-ಛಂದಸ್ಸು-ಶೈಲಿ-ವ್ಯಾಕರಣ-ಅಲಂಕಾರಗಳ ಅರಿವು-ಅನ್ವಯಗಳನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುವುದರಲ್ಲಿದೆ. ಹೀಗಾಗಿ ನಾವಿಲ್ಲಿ ಸಾಮಾನ್ಯವಾಗಿ  ಪಾಲಿಸುವ ನಿಯಮಗಳೆಂದರೆ ವೃತ್ತ-ಕಂದಗಳನ್ನು ’ಕೂಡಿದಮಟ್ಟಿಗೂ’ ಹಳಗನ್ನಡದಲ್ಲಿಯೂ ಷಟ್ಪದಿ-ಚೌಪದಿ-ಸಾಂಗತ್ಯ-ತ್ರಿಪದಿ-ಸೀಸ-ರಗಳೆ ಮುಂತಾದುವನ್ನು ನಡುಗನ್ನಡದಲ್ಲಿಯೂ ರಚಿಸಬೇಕು; ಲಕ್ಷಣಕ್ಕಿಂತ ಲಕ್ಷ್ಯಕ್ಕೆ (ಕೇವಲ ವ್ಯಾಕರಣದ ನಿಯಮಗಳಿಗಿಂತ ಮಹಾಕವಿಗಳ ಪ್ರಯೋಗಕ್ಕೆ) ಹೆಚ್ಚಿನ ಬೆಲೆಯನ್ನು ನೀಡಬೇಕು; ಹಾಗೂ ಔಚಿತ್ಯವನ್ನು ಗಮನದಲ್ಲಿರಿಕೊಂಡು ಪ್ರಾಯಿಕವಾಗಿ ಶಿಷ್ಟರೂಪಗಳನ್ನೇ ಆದರಿಸಬೇಕೆಂಬುದಾಗಿದೆ.  ಹಾಗೆಂದ ಮಾತ್ರಕ್ಕೆ ಜಾನಪದಪ್ರಯೋಗಗಳಿಗೆ ನಿಷೇಧವೇನಿಲ್ಲ. ಆದರೆ ಅವೆಲ್ಲ ಸಂದರ್ಭೋಚಿತವಾಗಿ ಬರಬೇಕು.ವಿಶೇಷತಃ ಅವುಗಳಿಗೆ ಸಹಜವೂ ಸುಂದರವೂ ಆದ ಛಂದಸ್ಸುಗಳೆನಿಸಿದ ಸಾಂಗತ್ಯ, ತ್ರಿಪದಿ, ಏಳೆ ಮುಂತಾದುವುಗಳಲ್ಲಿ. ಒಟ್ಟಿನಲ್ಲಿ ಛಂದಸ್ಸು ಪ್ರಾಯಿಕವಾಗಿ ನಮ್ಮ ಪದ್ಯಪಾನದ ಪದ್ಯಗಳ ಭಾಷೆಯನ್ನು ನಿರ್ದೇಶಿಸುತ್ತದೆಂದರೆ ಯುಕ್ತವಾದೀತು. ಈ ನಿಲವನ್ನು ವಿದ್ವಾಂಸರಾದ ಡಾ|| ಟಿ.ವಿ. ವೇಂಕಟಾಚಲಶಾಸ್ತ್ರಿಗಳು ಒಮ್ಮೆ ನನಗೆ ಮನವರಿಕೆಮಾಡಿದ್ದರು. ಇದು ಪ್ರಸಿದ್ಧಪೂರ್ವಸೂರಿಗಳಾದ ಡಿವಿಜಿ,ಗೋವಿಂದಪೈ, ಬೀಯಂಶ್ರೀ, ಬೇಂದ್ರೆ, ಕುವೆಂಪು, ಪುತಿನ, ತೀನಂಶ್ರೀ, ಕೆ.ಕೃಷ್ಣಮೂರ್ತಿ ಮುಂತಾದವರಿಗೂ ಒಪ್ಪಿಗೆಯಾದ ಮಾರ್ಗ.

ಈ ಸಂದರ್ಭದಲ್ಲಿ ಮಹಾಕವಿಗಳನ್ನು ಮಾತ್ರ ನಚ್ಚಬೇಕೆಂಬುದು ಹೌದಾದರೂ “ಮಹಾಕವಿಪ್ರಯೋಗ’ವೆಂದು ಹೆಸರಾಗಿರುವ ಹಲಕೆಲವು ಎದ್ದುತೋರುವ ವ್ಯಾಕರಣವಿರುದ್ಧರೂಪಗಳನ್ನು ಬಲುಮಟ್ಟಿಗೆ ಮುಟ್ಟದಿರುವುದು ಯುಕ್ತ. ಜೊತೆಗೆ ಕುಮಾರವ್ಯಾಸನಂಥ ವರಕವಿಯನ್ನು – ಭಾಷೆಯ ಮಟ್ಟಿಗೆ – ಕಣ್ಣು ಮುಚ್ಚಿಕೊಂಡು ಕುರುಡಾಗಿ ಅನುಸರಿಸದಿರುವುದು ಹಾಗೂ ಹರಿದಾಸರ ಮತ್ತು ಜಾನಪದಕವಿಗಳ ಪ್ರಯೋಗಗಳನ್ನು ಮನಸ್ವೀ ಬಳಸದಿರುವುದು ಯೋಗ್ಯ. ಏಕೆಂದರೆ ನಾವೆಲ್ಲ ಅಭ್ಯಾಸಿಗಳು; ಭಾಷೆ-ಛಂದಸ್ಸು-ಅಲಂಕಾರಗಳಂಥ ಸಾಹಿತ್ಯವಿದ್ಯೆಯ ’ರೂಪ’ವನ್ನು ಚೆನ್ನಾಗಿ ಅರಿತು ಆ ಬಳಿಕ (ಅಥವಾ ಜೊತೆಜೊತೆಗೇ ಎಂದರೆ ಮತ್ತೂ ಸರಿಯಾದೀತು:-) ಅದರ ’ಸ್ವರೂಪ’ವೆನಿಸಿದ ರಸ-ಧ್ವನಿಗಳನ್ನು ಎಟುಕಿಸಿಕೊಳ್ಳುವುದು ಯುಕ್ತ. ಇದಕ್ಕೆ ಕಾರಣವಿಷ್ಟೆ; ಅಪ್ಪಟ ಪ್ರತಿಭೆಗೆ ಯಾವುದೇ ನಿಯಮದ ಸಂಕೋಲೆಯಿಲ್ಲ ಅದರೆ ಇವುಗಳ ಹೂಮಾಲೆಗಳ ಅಲಂಕಾರವಿರುತ್ತದೆ; ಅರ್ಥಾತ್ ಯಾವ ನಿಯಮಗಳು ಆರಂಭಿಕರಿಗೆ ಕಟ್ಟುಗಳೋ ಅವೇ ಪಾರಂಗತರಿಗೆ ಆಕಲ್ಪಗಳು (ಒಡವೆಗಳು). ಹೀಗೆ  ಒಳ್ಳೆಯ ವ್ಯುತ್ಪತ್ತಿಪ್ರಾಪಕವಾದ ನಿಯಮಗಳೇ ಇಲ್ಲದೆ, ಕೇವಲ ತಮತಮಗಿದೆಯೆಂದು ತೋರುವ  ಪ್ರತಿಭಾಬಲದಿಂದಲೇ ಕವನಿಸುವವರಿಗಾಗಿ ಪದ್ಯಪಾನವು ಯಾವುದೇ ಬಗೆಯಲ್ಲಿ ಆಕರ್ಷಕವೇದಿಕೆಯಲ್ಲವೆಂಬುದು ಸ್ವಯಂವೇದ್ಯ:-) ಹಾಗೆಂದು ಇಲ್ಲಿಯ ಕವಿತೆ ಕೇವಲ ನಿಯಮಯಮನಿಗಳನಿಗಡಿತವೆಂದೂ ಚಂಡಿಸಬೇಕಿಲ್ಲ. ಅತಿವಾದಗಳೆರಡನ್ನೂ ಬರಿಯ ಜಾಣ್ಮೆಯಿಂದಲ್ಲದೆ ಕಾಣ್ಮೆಯಿಂದ ಪರಿಹರಿಸಿಕೊಂಡು ಸಾಗುವ ಹಂಬಲ ನಮಗೆ. ಏಕೆಂದರೆ ಕನ್ನಡವು ಯಾವುದೇ ಜೀವದ್ಭಾಷೆಯ ಹಾಗೆ ಜಡವಲ್ಲ, ಹಾಗೆಂದು ವಿಶೃಂಖಲವೂ ಅಲ್ಲ. ಇದೊಂದು ಚಲನಶೀಲವಾದರೂ ಸ್ಥಿರತೆಯುಳ್ಳ  ಸತ್ತ್ವ (Dynamic equilibrium). ಇಲ್ಲಿ ನಮ್ಮ ಕಾವ್ಯವಾಣಿಯ ಔಚಿತ್ಯಪೂರ್ಣವಾದ ಆಭಿಜಾತ್ಯಕ್ಕೆ ಕುಂದಾಗದಂತೆ ಎಲ್ಲರೊಡನೆ ಒಂದಾಗುವ ಹವಣು ನಮ್ಮದಾಗಬೇಕಿದೆ. ಇದಕ್ಕೆ ಎಲ್ಲ ಪದ್ಯಪಾನಿಗಳ ಸಹಕಾರ ಬೇಕು.

  6 Responses to “ಪದ್ಯಪಾನಿಗಳಿಗೆ ರಾ. ಗಣೇಶರಿಂದ ಒಂದು ಸಂದೇಶ”

  1. ತಿಳುವಳಿಕೆ ನೀಡಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ. ಜೈಮಿನಿಯನ್ನು ಓದುತ್ತಿದ್ದೇನೆ. ಕಾಲಿಕಭಾಷೆಯನ್ನು ಮೈಗೂಡಿಸಿಕೊಳ್ಳಲು ಸ್ವಲ್ಪ ಸಮಯ ಬೇಡುತ್ತೇನೆ.

  2. ಸಂದೇಶಕ್ಕೆ ಕೃತಜ್ಞತೆಗಳು. ಕನ್ನಡದಲ್ಲಿ ಕವನಿಸಲು ಕಾತರಾದವರಿಗೆ ತಮ್ಮೀ ಸಲಹೆಗಳು ಹೃದ್ಯವಾಗಿವೆ. ಮುಂದೆ ಈ ತಾಣ ಕನ್ನಡ ಕವಿತಾಚಾರಣಕ್ಕೆ ಮಾರ್ಗದರ್ಶಿಯಾಗಿ, ಸಹೃದಯರಿಗೆ ಆಪ್ಯಾಯಮಾನವಾಗಲಿ ಎಂದು ಆಶಿಸುತ್ತೇನೆ.

  3. ಪದ್ಯಪಾನದ ನಿಲುವು-ಆಶಯಗಳನ್ನು ಮತ್ತೊಮ್ಮೆ ಸ್ಫುಟಗೊಳಿಸುವ ತಮ್ಮ ಸಂದೇಶಕ್ಕಾಗಿ ಧನ್ಯವಾದ. ಪದ್ಯವಿದ್ಯೆಯ ’ರೂಪ’ವನ್ನು ಅರಿಯುವಲ್ಲಿ ಪದ್ಯಪಾನದ ವೇದಿಕೆ ಅಳವಡಿಸಿಕೊಂಡಿರುವ ನಿಯಮಗಳು ಸ್ತುತ್ಯವೇ. ಅವುಗಳನ್ನು ಕೂಡಿದಮಟ್ಟಿಗೂ ಪಾಲಿಸಬೇಕೆಂಬುದೇ ನಮ್ಮಲ್ಲಿ ಬಹುತೇಕರ ಪ್ರಯತ್ನವೂ ಕೂಡ. ಆದರೂ ಇನ್ನೂ ಕಲಿಕೆಯ ವಿವಿಧ ಹಂತಗಳಲ್ಲಿರುವ ನಮ್ಮ ಅಧ್ಯಯನವಿಸ್ತಾರ ಇನ್ನೂ ಕಿರಿದೇ ಆಗಿರುವುದರಿಂದಲೂ ಮತ್ತು ಪ್ರಾಯೋಗಿಕ ಸಂದಿಗ್ಧತೆಯು ಶಿಥಿಲದ್ವಿತ್ವ, ವಿಸಂಧಿ, ಅರಿಸಮಾಸ ಮುಂತಾದ ವಿಷಯಗಳಿಗೆ ಸ್ವಭಾವಸಹಜವೇ ಆಗಿರುವುದರಿಂದಲೂ, ನಿರ್ದಿಷ್ಟ ಸಂದರ್ಭಗಳಲ್ಲಿ ಈ ಚರ್ಚೆಗಳು ಪದೇ ಪದೇ ಮರುಕಳಿಸುವುದು ಅಭ್ಯಾಸಿಗಳಿಗೆ ಸಹಜ. ಇಲ್ಲೆಲ್ಲಾ ಸಾಧು-ಅಸಾಧು ಜಿಜ್ಞಾಸೆಗಳ ಜೊತೆಗೆ ಈ ರೀತಿಯ ಪೂರ್ವಕವಿಪ್ರಯೋಗಗಳು ಉಂಟೋ, ಇದ್ದರೂ ಅದು ಕೇವಲ ಅಪವಾದಗಳೋ ಎಂಬ ಪ್ರಶ್ನೆಯೂ ಅಭ್ಯಾಸಿಗಳನ್ನು ಕಾಡುತ್ತದೆ. ಇಂಥ ’ಅಪ’ಪ್ರಯೋಗಗಳಲ್ಲೆಲ್ಲಾ ಪ್ರತಿಭಾಪ್ರದರ್ಶನಕ್ಕಿಂತ ಅಭ್ಯಾಸಿಯ ವಿಷಯಸಂದಿಗ್ಧತೆಯೂ, ಅದರ ಮೇಲಿನ ಚರ್ಚೆಯಲ್ಲಿ ಖಂಡನ-ಮಂಡನಗಳಿಗಿಂತಾ ವಿಷಯಸ್ಫುಟವಾಗಲೆಂಬ ಹಂಬಲವೂ ಹೆಚ್ಚಾಗಿ ಕೆಲಸಮಾಡುವುವೆಂದು ನನ್ನ ಅನಿಸಿಕೆ. ಇಂಥಾ ನಿರ್ದಿಷ್ಟ ಪ್ರಶ್ನೆಗಳು ಎದ್ದಾಗಲೆಲ್ಲಾ ತಮ್ಮ ಬಹುಶ್ರುತ ವಿದ್ವದ್ದೀಪದ ನಿಷ್ಕೃಷ್ಟ ಮಾರ್ಗದರ್ಶನ ಅನಿವಾರ್ಯವೇ ಆಗಿದೆ; ಅದನ್ನು ತಾವು ಅತ್ಯುತ್ಸಾಹದಿಂದ ಮಾಡುತ್ತಿದ್ದೀರೆಂಬುದು ನಮ್ಮ ಹಿಗ್ಗು ಕೂಡ. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಇಂಥ ಬಹಳಷ್ಟು ಚರ್ಚೆಗಳು ತಮ್ಮ ಗಮನಸೆಳೆಯುವುದಕ್ಕಾಗಿಯೇ ಇರುತ್ತವೆ 🙂

    ಉದಾಹರಣೆಗೆ http://padyapaana.com/?p=1422#comment-7534 ಇಲ್ಲಿ ಸಮೀಪಪ್ರಾಸ, ವಿಸಂಧಿ, ಅರಿಸಮಾಸಗಳ ಬಗೆಗೆ ನನ್ನ ಹಾಗೂ ಶ್ರೀಕಾಂತಮೂರ್ತಿಗಳ ನಡುವೆ ಚರ್ಚೆಯೊಂದು ನಡೆದು, ಕೆಲವು ನಿರ್ದಿಷ್ಟ ಅಂಶಗಳ ಮೇಲೆ ತಮ್ಮ ಮಾರ್ಗದರ್ಶನರೂಪದ ಅಭಿಪ್ರಾಯಕ್ಕಾಗಿ ಕಾದಿದೆ. ಅದು ತಮ್ಮ ಗಮನಕ್ಕೆ ಬಂದಿರಲು ಶಕ್ಯ. ಇಲ್ಲದಿದ್ದರೆ ದಯವಿಟ್ಟು ಒಮ್ಮೆ ನೋಡಿ ತಿಳಿಸಿಕೊಡಬೇಕೆಂದು ಪ್ರಾರ್ಥನೆ.

    • ಅದಂ ಕಂಡೇ ನನ್ನೀ ವಚನರಚನಂ ಸಂದುದೆನುವೆಂ
      ವಿದರ್ ನಿಮ್ಮನ್ನರ್ ಕಾಂಬುದು ಸುಲಭದಿಂದೆನ್ನ ಮತಿಯಂ|
      ಸದಾ ಕಾವ್ಯಾಸಕ್ತರ್ ನಿಜರುಚಿಯ ವಾಗ್ರೀತಿಗೊಲಿಯು-
      ತ್ತುದಾರರ್ ಸಲ್ಗೆಂಬೆಂ ಗಮಕಿಸುತೆ ಮೇಲ್ಕಂಡ ತಿಳಿವಂ||

  4. ಇಂತಹ ಸಲಹೆ ಸೂಚನೆಗಳು ನನ್ನಂತಹ ವಿದ್ಯಾರ್ಥಿಗೆ ಅತ್ಯಗತ್ಯ.ಗಣೇಶರಿಗೆ ಧನ್ಯವಾದಗಳು.

  5. ಗಣೇಶ್ ಸರ್,

    ನೀವು ಹೇಳುವುದೆಲ್ಲವನ್ನು ಒಪ್ಪುತ್ತೇವೆ, ಅದರಲ್ಲು “ಮಹಾಕವಿಪ್ರಯೋಗವೆಂದು ಹೆಸರಾಗಿರುವ ಹಲಕೆಲವು ಎದ್ದುತೋರುವ ವ್ಯಾಕರಣವಿರುದ್ಧರೂಪಗಳನ್ನು ಬಲುಮಟ್ಟಿಗೆ ಮುಟ್ಟದಿರುವುದು ಯುಕ್ತ”, ಈ ಸಲಹೆಯು ನಮಗೆ ಉತ್ತಮ ಮಾರ್ಗದರ್ಶಿ. ನೂರಾರು/ಸಾವಿರಾರು ಅತ್ಯದ್ಭುತ ಪದ್ಯಬರೆದ ಮಹಾಕವಿಗಳ ಒ೦ದೆರಡು ತಪ್ಪು ಪ್ರಯೋಗಗಳನ್ನು ನಾವು ಬರೆದಿರುವ ಓ೦ದೇ ಒ೦ದು ಪದ್ಯದಲ್ಲಿ ಬಳಸಿ ಅದನ್ನು ಮಹಾಕವಿಗೆ ಆರೋಪಿಸುವುದು ಸರ್ವಥಾ ಸಾಧುವಲ್ಲವೆ೦ದು ನನ್ನ ಅಭಿಪ್ರಾಯವೂ ಕೂಡ. ಈ ವಿಷಯದಲ್ಲಿ ಅಭ್ಯಾಸ ಮಾಡುವವರು ಎಡವುವ ಸಾಧ್ಯತೆ ಹೆಚ್ಚು. ಇ೦ತಹ ಬಳಕೆಗಳನ್ನು ಅಲ್ಲೆ ತಿದ್ದುವುದರಿ೦ದ ಪದ್ಯಬರೆದವರಿಗೂ
    ಇತರರಿಗೂ ಕಲಿಕೆಯಾಗುತ್ತದೆ.

    ಧನ್ಯವಾದಗಳು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)