Jan 202013
ಮತ್ತೇಭ ವಿಕ್ರೀಡಿತ ಛಂದಸ್ಸಿನ ಈ ಸಮಸ್ಯಾಪಾದವನ್ನು ಪದ್ಯದ ಉಳಿದ ಪಾದಗಳನ್ನು ಪೂರೈಸಿ ಪರಿಹರಿಸಿರಿ ::
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಮತ್ತೇಭ ವಿಕ್ರೀಡಿತ ಛಂದಸ್ಸಿನ ಈ ಸಮಸ್ಯಾಪಾದವನ್ನು ಪದ್ಯದ ಉಳಿದ ಪಾದಗಳನ್ನು ಪೂರೈಸಿ ಪರಿಹರಿಸಿರಿ ::
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ವ್ರತಮ೦ ಶಾಸ್ತ್ರದೆ ಮಾಳ್ಪೆನೆ೦ದಧಿಕಮಾಸ೦ ಬರ್ಪುದ೦ ನೋಡೆ ತಾ೦
ಮತಿಯೊಳ್ ಹರ್ಷಮನಾ೦ತಳಲ್ತೆ ಭರದಿ೦ ಸ೦ಕಲ್ಪಮ೦ ಗಯ್ದು ಮೇಣ್
ಚ್ಯುತಮಾಗಲ್ ಬಿಡೆನೊoದುಮಾಚರಿಪೆನೆ೦ದಾ ಮಾತೆ ಪೇಳಲ್ಕೆ ದ೦-
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ನಮ್ಮ ರಮಾಮಣಿಯವರ ಅಧಿಕಮಾಸದ ದ೦ಪತಿಪೂಜೆ ನೆನೆಸಿಕೊ೦ಡರೆ ಈಗಲೂ ಇ೦ತಹ ವ್ರತ ನಿಷ್ಥರು ಇದ್ದಾರೆಯೆ ಎ೦ದು ಮೂಗಿನ ಮೇಲೆ ಬೆರಳಿಡುತ್ತೇವಲ್ಲವೆ?
ಒ೦ದಲ್ಲಾ ಎರೆಡಲ್ಲ 33 ದ೦ಪತಿಗಳ ಪೂಜೆ, ದಾನ ಇತ್ಯಾದಿ, ಎ೦ತಹ ಉತ್ಕೃಷ್ಟ ಏರ್ಪಾಡದು… ಎ೦ತಹಾ ಶ್ರದ್ಧೆ… ರಮಾಮಣಿಯವರಿಗೆ ನನ್ನ ನಮನಗಳು ಮತ್ತೊಮ್ಮೆ ಸಲ್ಲುತ್ತವೆ. ಪದ್ಯದಲ್ಲಿ ಸೀತೆ ಎ೦ಬುದು ರಮಾಮಣಿಯವರ೦ತಹ ಮನಸ್ಸಿನ ಒಬ್ಬಾಕೆಯ ಹೆಸರು ಎ೦ದು ತಿಳಿಯಿರಿ.
ಇದರ ಅರಿವು ಎಲ್ಲ ಪದ್ಯಪಾನಿಗಳಿಗೆ ಇರಲಿಕ್ಕಿಲ್ಲ, ತಾವು ಅಧಿಕಮಾಸದ ಪೂಜೆಗಳ ಬಗ್ಗೆ ತಿಳಿದಿದ್ದರೆ ಊಹಿಸಿಕೊಳ್ಳಬಹುದು. ಹಲವರು ಪದ್ಯಪಾನ ಸದಸ್ಯರಿಗೆ ಈ ಪೂರಣದ ಹೃದಯಾಳ ತಿಳಿಯಬಹುದೆ೦ದುಕೊ೦ಡಿದ್ದೇನೆ.
ಒಳ್ಳೆಯ ಪರಿಹಾರ ಸೋಮಣ್ಣಾ!!:-) ಆದರೆ ಮಾಳ್ದೆ ಎಂಬ ಅಸಾಧುರೂಪಕ್ಕಿಂತ ಗಯ್ದೆ ಎಂಬ ಪ್ರಯೋಗವೆ ಸಾಧು. ಹಿಂದೊಮ್ಮೆ ಅವಧಾನವೊಂದರಲ್ಲಿ ಈ ಸಮಸ್ಯೆಗೆ ನಾನು ದಂಪತಿ ಎಂದೇ ಕೀಲಕಪದವನ್ನಿಟ್ಟು ಪರಿಹಾರವನ್ನೆಸಗಿದ್ದೆ:-)
ಧನ್ಯವಾದಗಳು ಸರ್, ಈ ಪರಿಹಾರವು ನೀವು ಮಾಡಿದ ಕೀಲಕದ ಅನುಸರಣೆಯೇ ಆಗಿದೆ :). ಮಾಳ್ಪೆ -> ಮಾಡುವೆ ಎ೦ದು ಬಳೆಸಿದ್ದೇನೆ, ಮಾಳ್ದೆ ಎ೦ದು ಬಳೆಸಿಲ್ಲ (ಒತ್ತಕ್ಷರದಲ್ಲಿ ‘ವ’ ಕಾರ ಬಳೆಸಿದ್ದೇನೆ ‘ದ’ ಕಾರವಲ್ಲ). ಗಯ್ದೆ ಎ೦ದರೆ ಮಾಡಿದೆ ಎ೦ದಾಗುತ್ತದೆಯಲ್ಲವೆ ಹಾಗಾಗಿ ಗಯ್ವೆ ಎ೦ದು ಬದಲಿಸಬಹುದು. ಗಯ್ದು ಎ೦ದು ೨ ಸಾಲಿನಲ್ಲಿ ಬಳಸಿದ್ದುದರಿ೦ದ ಮಾಳ್ಪೆ ಎ೦ದು ಬಳಸಬಹುದೇನೊ ಎ೦ದು ಕೊ೦ಡೆ. ದಯವಿಟ್ಟು ಇದರಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
ಮಾಳ್ಪೆಂ …ಗೆಯ್ವೆಂ ಎಂದು ಬಿಂದುಪೂರ್ವಕವಾಗಿ ಪ್ರಯೋಗಿಸುವುದು ಹಳಗನ್ನಡದ ಅಪ್ಪಟತನಕ್ಕೆ ಯುಕ್ತ:-)
ಸ್ಮೃತಿಯೊಳ್ ತು೦ಬಿರಲಾ ಮುಖಾ೦ಬುಜವೆ ತಾ೦ ಸ್ವಪ್ನಸ್ಥಿತ೦ ನಿತ್ಯವು೦
ಗತಿಯೇಮನ್ಯನು ಶರ್ವನಿತ್ತ ಧನುವೊಳ್ ಝೇ೦ಕಾರಮ೦ ಗಯ್ಯೆ, ಹಾ
ಶತಮಲ್ತೇ ಹತಭಾಗ್ಯರಿ೦ದೆ ದುಗುಡ೦ ತಾನಾ೦ಪೆನೆ೦ಬಾ ಮಹೀ-
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಮುಖಾಬ್ಜಮೆ ಸುಖಸ್ವಪ್ನಸ್ಥಿತಂ………….
ಗತಿಯೇನನ್ಯನುಮೇಶನಿತ್ತ……
ಎಂದು ಸವರಿಸಿದರೆ ಮತ್ತೂ ಒಳಿತು.
ಉಳಿದಂತೆ ಪದ್ಯವು ಅನವದ್ಯ; ಕಲ್ಪನೆಯು ಹೃದ್ಯ
ಗಣೇಶ್ ಸರ್,
ಸವರಿಸಿದ್ದೇನೆ, ಧನ್ಯವಾದಗಳು 🙂
ಸ್ಮೃತಿಯೊಳ್ ತು೦ಬಿರಲಾ ಮುಖಾಬ್ಜಮೆ ಸುಖಸ್ವಪ್ನಸ್ಥಿತಂ ನಿತ್ಯವು೦
ಗತಿಯೇನನ್ಯನುಮೇಶನಿತ್ತ ಧನುವೊಳ್ ಝೇ೦ಕಾರಮ೦ ಗಯ್ಯೆ, ಹಾ
ಶತಮಲ್ತೇ ಹತಭಾಗ್ಯರಿ೦ದೆ ದುಗುಡ೦ ತಾನಾ೦ಪೆನೆ೦ಬಾ ಮಹೀ-
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಅತಿವಾತ್ಸಲ್ಯದಿನಪ್ಪ ತನ್ನಣುಗಿಗೀಡಪ್ಪಂತ ನಲ್ಲನ್ ಸಿಗಲ್
ದ್ಯುತಿ ಪೆರ್ಚಿರ್ಪ ಸೊಯಂಬರಂ ನಡೆಸಿದನ್. ಭಾವೀವರರ್ ಪೆಂಪುಗಲ್
ಧೃತಿಯಿಂ ತಮ್ಮಯ ಮೀಸೆಯಂ ತಿರುವುತಂ ಕಣ್ಸನ್ನೆಯಂ ಗೈದ ಭೂ-
ಪತಿಗಳ್ ಸೀತೆಗದೆಷ್ಟು ಮಂದಿ? ಗಣಿಸಲ್ಕೇನೊವರೇಯೀರ್ವರೆ?
ಪೆಂಪುಗಲ್- ಪೆಂಪು ಸೂಸಲು
ಅತಿಸುಂದರಪರಿಹಾರಂ
ಚತುರಾ! ಭಾಷಾಪ್ರಯೋಗಪರಿಣತಿಯುಮಹೋ!
ಹಿತಮಾದುದು ಭಾವಿಕಮೆಂ-
ಬತೀವಕಾವ್ಯಾರ್ಥತತ್ತ್ವಮುಂ ಸಂದಿರ್ಕುಂ||
Thanks Ragare
ಕತೆಯಲ್ತುಂ ನಿಜದರ್ಶನಂ ಜನರಿಗಂ ವಾಲ್ಮೀಕಿ ರಾಮಾಯಣಂ
ನುತಿಯಂ ಗೈಯುತ ಪೂಜಿಪರ್ ಭಕುತಿಯೊಳ್ ಶ್ರೀರಾಮನಂ ಸೀತೆಯಂ
ಚ್ಯುತಿಯಂ ತಾರದೆಯೊಪ್ಪಿರಲ್ ಪ್ರಜೆಗಳೀ ಆದರ್ಶರಂ ದೇಶದೊಳ್,
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
[ಪತಿ = ಸಮಾನ, ಪ್ರತಿ]
ಸೀತೆಯ ಆದರ್ಶವನ್ನು ಪಾಲಿಸುತ್ತಾ ಈ ದೇಶದಲ್ಲಿ ಬಾಳುವವರನ್ನು ಗಣಿಸಲಾಗದು ಎಂಬ ಭಾವ
ಒಳ್ಲೆಯ ಕಲ್ಪನೆ, ಒಳ್ಲೆಯ ಭಾಷೆ. ಗೈಯುತೆ ಎಂದು ಸವರಿಸಿದರೆ ಮತ್ತೂ ಉತ್ತಮ:-)
Thank you, Sir.
ಗತಿಯೇಂ ಬಂದುದೊ ಲಂಕೆಗೆಂದು ದನುಜರ್ ಮಾತಡುತಲ್ಮರ್ಕಟಾ
ಕೃತಿ ಕಷ್ಟಂ ಬಡಿದಿತ್ತದಾಗೆ ಮಗುಳೀ ಸಾಹಸ್ರಗೊಂಡಂತೆ ಮಾ-
ರುತಿಯಂ ಪೋಲ್ವ ಸುವಿಗ್ರಹರ್ ಪ್ರಣತಿಯಿಂ ಸದ್ಭಕ್ತರೋಲ್ವಾನರೀ
ಪತಿಗಳ್ ಸೀತೆಗದೆಷ್ಟು ಮಂದಿ ಗುಣಿಸಲ್ಕೇನೋರ್ವನೇ? ಇರ್ವರೇ?
ಮತ್ತೊಂದು ಪೂರಣ ಹೀಗೆ-
ಕತೆಯಂ ಪೇಳುತಲಿರ್ದಳಬ್ಬೆ ಸುತೆಗಂ ಮೊಮ್ಮಕ್ಕಳಾ ಸಂತೆಗಿಂ
ಗಿತದೋಲ್ಭಾರತಮಂ ವುಸಿರ್ದು ರಾಮಾಯಣಾಖ್ಯಾನಸಂ-
ಗತಿಯಂ ಕೇಳ್ದರೆನಿದ್ರೆಯಿಂ ತರಳ ತಾಂ ಕೇಳ್ಪಂತೆ ಕೇಳ್ದಂ ವಲಂ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ ತಾನೊರ್ವನೇ? ಇರ್ವರೇ? ||
ಮಗದೊಂದು ಪೂರಣವಿಕೊ-
ಕೃತಿಗಳ್ ಸಂಸ್ಕೃತಿಸಚ್ಚರಿತ್ರಮತಿಗಳ್ ಪಾವಿತ್ರ್ಯರತ್ನಂಗಳಾ
ಕೃತಿಗಳ್ ಭಾರತದೇಶದಾ ಮಹತಿಗಳ್ ಕಾವ್ಯಂಗಳೊಳ್ ರಾಜಿಪಾ-
ವೃತಿಗಳ್ ದುರ್ಮತಿದುರ್ನಯಂಗಳಿಗೆನಲ್ ಸನ್ಮಾರ್ಗಭೂಯಿಷ್ಠಭೂ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ ತಾನೋರ್ವನೇ? ಇರ್ವರೇ? ||
ಒಳ್ಳೆಯ ಪೂರಣಗಳು. ಒಳ್ಳೆಯ ಭಾಷೆ ಕೂಡ. ಕೇವಲ ಎರಡನೆಯ ಪದ್ಯದಲ್ಲಿ ತುಸು ಸವರಣೆಗಳು ಬೇಕು. ದೂರವಾಣಿಸಿದರೆ ಹೇಳಬಲ್ಲೆ. ವೋಲ್ ಬಳಸುವಾಗ ಮಾಡುವೋಲ್, ಇಂಗಿತದೋಲ್ ಇತ್ಯಾದಿಯಾಗಿ ಮಾಡುವಂತಿಲ್ಲ. ಅದು ಹಳಗನ್ನಡದಲ್ಲಿ ಮಾಡುವವೊಲ್(ವೋಲ್) ಇಂಗಿತದ ವೊಲ್ (ವೋಲ್) ಇತ್ಯಾದಿಯಾಗುತ್ತದೆ.
ಧನ್ಯವಾದಗಳು,
“ವೋಲ್” ಅನ್ನು “ಓಲ್” ಎಂದು ತಪ್ಪಾಗಿ ತಿಳಿದಿದ್ದೆ. ತಪ್ಪು ತಿದ್ದಿದ್ದಕ್ಕೆ ಕೃತಜ್ಞತೆಗಳು. ವೋಲ್=ಅಂತೆ ಎಂದಲ್ಲವೇ? ಕೆಲವೊಂದೆಡೆ “ವೋಲಂತೆ” ಎಂದು ಓದಿದ ನೆನಪು. ಹಾಗೆ ಪ್ರಯೋಗಿಸುವುದು ದ್ವಿರುಕ್ತಿಯಾಗುವುದಿಲ್ಲವೇ?
ಅಂತೆವೋಲ್ , ಅಂತೆವೊಲ್ ಎಂಬ ರೂಪಗಳು ಹಳಗನ್ನಡದಲ್ಲಿ ಪ್ರಸಿದ್ಧ. ಆದರೆ ವೋಲಂತೆ ಕುವೆಂಪು ಮಾತ್ರ ಬಳಸಿದ ’ಮಹಾಕವಿಪ್ರಯೋಗ”. ಬಳಕೆಗೆ ಬಂಮ್ದರೆ ತಪ್ಪೇನಿಲ್ಲ:-)
ಗತಿಯೇಂ ಬಂದುದೊ ಲಂಕೆಗೆಂದು ದನುಜರ್ ಮಾತಾಡಿದರ್ ಮರ್ಕಟಾ
ಕೃತಿ ಕಷ್ಟಂ ಬಡಿದಿತ್ತದಾಗೆ ಮುಗುಳೀ ಸಾಹಸ್ರಗೊಂಡಂತೆ ಮಾ-
ರುತಿಯಂ ಪೋಲ್ವ ಸುವಿಗ್ರಹರ್ ಪ್ರಣತಿಯಿಂ ಸದ್ಭಕ್ತರೋಲ್ ವಾನರೀ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೋರ್ವರೇ ಇರ್ವರೇ? ||
ಮತ್ತೊಂದು ಪೂರಣ-
ಕತೆಯಂ ಪೇಳುತಲಿರ್ದಳಬ್ಬೆ ಸುತೆಗಂ ಮೊಮ್ಮಕ್ಕಳಾ ಸಂತೆಗಿಂ
ಗಿತದೋಲ್ ಭಾರತಮಂ ಕಣಾ ಸೊಗಸಿನೊಳ್ ರಾಮಾಯಣಾಖ್ಯಾನಸಂ
ಗತಿಯಂ ಕೇಳ್ದರೆನಿದ್ರೆಯೊಳ್ ತರಳ ತಾಂ ಕೇಳ್ಪಂತೆ ಕೇಳ್ದಂ ವಲಂ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ ತಾನೊರ್ವರೇ ಇರ್ವರೇ? ||
ಮಗದೊಂದು ಪೂರಣವಿದೊ ಕೋ-
ಕೃತಿಗಳ್ ಸಂಸ್ಕೃತಿಸಚ್ಚರಿತ್ರಮತಿಗಳ್ ಪಾವಿತ್ರ್ಯರತ್ನಂಗಳಾ
ಧೃತಿಗಳ್ ಭಾರತದೇಶದಾ ಮಹತಿಗಳ್ ಕಾವಂಗಳೊಳ್ ರಾಜಿಪಾ
ವೃತಿಗಳ್ ದುರ್ಮತಿದುರ್ನಯಂಗಳಿಗೆನಲ್ ಸನ್ಮಾರ್ಗಭೂಯಿಷ್ಠಭೂ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ ತಾನೊರ್ವರೇ ಇರ್ವರೇ? ||
ಪತಿತಂ ಶಿಕ್ಷಣನೀತಿಯಿಂದು ಜನರಿಂಗಂಕಾಪ್ತಿಯೇ ಮುಖ್ಯವಯ್
ಮತಿಹೀನರ್ಗೆ ಕುಬೋಧಕರ್ಗೆ ನಿಜದೊಳ್ ಸಂಖ್ಯಾಬಲಂ ಕಾಂಕ್ಷಿತಮ್ |
ಸ್ಥಿತಿಯಿಂತಿರ್ದೊಡದೇಂ ಪರೀಕ್ಷೆ ? ಅಣಕಂ ! ಕೇಳ್ ಪ್ರಶ್ನದೃಷ್ಟಾಂತಮಂ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ ? ಇರ್ವರೇ ? ||
🙂 sogasAda hAsyada pUraNa
ಧನ್ಯವಾದಗಳು 🙂
ಅತ್ಯದ್ಭುತಂ ರಸಮಯಂ ಭವದೀಯಪದ್ಯಂ
ಸ್ತುತ್ಯಂ ಮುದಾವಹಮಹೋ ಪರಿಹಾರ್ಮಾರ್ಗಂ!!!
ಧನ್ಯವಾದಗಳು ಸರ್ 🙂 ಹಳಗನ್ನಡದ ಪದಗಳನ್ನು ಬಳಸಲು ಯತ್ನಿಸುತ್ತಿದ್ದೇನೆ. ಇನ್ನೂ ಮುಂದುವರಿಸುವೆ.
ಇನ್ನ್ದೊಂದು ಪೂರಣ
ಅತಿಯಾದಟ್ಟುಳಿಯಂಬಡುತ್ತಸೊಗದೊಳ್ ಹಾ ಭಾಗ್ಯಮೆನ್ನುತ್ತ ದು-
ರ್ಗತಿಯಂ ಸೈರಿಸೆನಿನ್ನು ನಾನೆನುತ ತನ್ನೀಳ್ಗೂಂದಲಿಂ ಕಳ್ತು ಸು-
ತ್ತುತ ನಿಂದಿರ್ದಳಿಗಾದ ಬೇಗುದಿಗೆ ಕಣ್ಣೀರಿಕ್ಕುವರ್ ಲೋಕದೊಳ್
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ ಯೀರ್ವರೆ?
ಅಟ್ಟುಳಿ-ಹಿಂಸೆ
ಅಸೊಗ- ಅಶೋಕವನ/ ಅಸುಖವೂ ಹೌದು
ಪತಿಗಳ್- ಪತಿಗೆ+ಅಳ್= ಪತಿಗಾಗಿ ಅಳುವ
ಒಳ್ಳೆಯ ಪರಿಹಾರ ಹಾಗೂ ಭಾಷಾಪ್ರಯೋಗವೂ ಸ್ಮರಣೀಯ. ಆದರೆ ಎನ್ನುತ್ತ, ಎನುತ, ಸುತ್ತುತ ಇತ್ಯಾದಿ ಗಳನ್ನು ಎನ್ನುತ್ತೆ, ಎನುತ್ತೆ, ಸುತ್ತುತೆ ಇತ್ಯಾದಿಯಾಗಿ ಮತ್ತೂ ಹಳಗನ್ನಡೀಕರಿಸಬಹುದು
ತಮ್ಮ ಸೂಚನೆಗಳನ್ನು ಗಮನಿಸಿ ಪದ್ಯವನ್ನು ನಸು ಬದಲಿಸಿದ್ದೇನೆ ಗಣೇಶರೆ
ಅತಿಯಾದಟ್ಟುಳಿಯಂಬಡುತ್ತಸೊಗದೊಳ್ ಹಾ ಭಾಗ್ಯಮೆಂದೆಣ್ಣಿ ದು-
ರ್ಗತಿಯಂ ಸೈರಿಸೆನಿನ್ನು ನಾನೆನುತೆ ತನ್ನೀಳ್ಗೂಂದಲಿಂ ಕಳ್ತು ಸು-
ತ್ತುತೆ ನಿಂದಿರ್ದಳಿಗಾದ ಬೇಗುದಿಗೆ ಕಣ್ಣೀರಿಕ್ಕುವರ್ ಲೋಕದೊಳ್
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ ಯೀರ್ವರೆ?
ಮತಿಗೆಟ್ಟಂಧತೆ ಕಾಮವಾಗಿ ಕವಿಯಲ್ಮೌಲ್ಯಂಗಳಂ ವರ್ಜಿಸು
ತ್ತತಿ ವಕ್ರೋದ್ದತಿಯಿಂದ ಶೋಷ ಣೆಯುಗಂಗಳ್ದಾಂಟಿ ಬಂದಿರ್ಪ ಸಂ-
ತತಿ ದ್ಯೌರ್ಜನ್ಯದ ರಾವಣಾಂಶ ಖಳರೊಳ್ಮೈವೆತ್ತಿರಲ್, ದುಷ್ಟಸಂ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
’ಅಬಲ-ಪ್ರಬಲ’ರ ಸಂಘರ್ಷ ಪ್ರಕೃತಿಯ ಒಂದು ಕರಾಳರೂಪ. ಆ ದಾರುಣವೈವಿಧ್ಯದಲ್ಲಿ ಪ್ರಮುಖವಾಗಿ ಅಬಲೆಯರಮೇಲೆಸಗುವ ದೌರ್ಜನ್ಯ.ಯುಗಯುಗಗಳು ಕಳೆದರೂ ಮರುಕಳಿಸುತ್ತಿದೆ. ತ್ರೇತಾಯುಗದ ಭೂಜಾತೆಗೆ ರಕ್ಕಸಾಧಮರ ಹಿಂಸೆಗಳು ಒಂದೆರಡೇ. ಆ ರಾವಣಾಂಶದ ದುಷ್ಟಸಂಪತಿಯ ಸಂತತಿ ಕಾಕಾಸುರನೋ, ವಿರಾಧನೋ, ಲಂಕೆಯ ರಾಕ್ಷಸರೋ ಸೀತೆಗದೆಷ್ಟುಮಂದಿಯ ಉಪಟಳ? ಆ ದುಷ್ಟಸಂಪತ್ತು ಇಂದಿನ ಸೀತೆಯರನ್ನೂ ತಾಕದೆ ಬಿಟ್ಟಿಲ್ಲ! (ದುಷ್ಟಸಂಪತಿ = ದುಷ್ಟತನವೇ ಸಂಪತ್ತಾಗುಳ್ಳವರು)
ಚಂದ್ರಮೌಳಿಗಳೆ
ವಸ್ತುವಿಷಯ ತುಂಬ ಚೆನ್ನಾಗಿದೆ. “ಸಂಪತಿ”- ಈ ಪ್ರಯೋಗದ ಬಗ್ಗೆ ನನಗೆ ಅನುಮಾನ. ಸಂಪದಿ ಎಂದು ಬರಬೇಕಲ್ಲವೆ?
ಪ್ರಿಯ ಶ್ರೀಕಾಂತರೇ,
ದುಷ್ಟಸಂಪತಿ – ಸಮಸ್ಸೆಯನ್ನು ಹೊಸರೀತಿಯಲ್ಲಿ ಪೂರಣಗೊಳಿಸಲು ಸೃಷ್ತಿಸಿದ ಒಂದು ಪ್ರಯೋಗ. ಅರ್ಥಸಂಹವನಪ್ರಧಾನ್ಯತೆಯನ್ನುಗಣಿಸಿ ಒಂದೊಂದು ಸಲ ಇಂಥ ಸಾಹಸಕ್ಕೆ ನಿರೀಕ್ಷ್ಬಿತಪ್ರಶ್ನೆಗಳನ್ನೂ ಪರಿಗಣಿಸಿ ದುಡುಕಬೇಕಾಗುತ್ತದೆ.
ನವಭಾವಾವಿಷ್ಕರಣಕ್ಕೆ ಸದಾ ದುಷ್ಕರದ ದಾರಿಯೇ. ಸಂಪದಿ ಎಂತರೆ ಪ್ರಾಸಭಾಂಗ. ಸಂಪತಿ ಎಂಬ ಪ್ರಯೋಗ ನಮಗೆ ವಿರಳವಾಗಿ ಕಾಣಸಿಗುತ್ತದೆ. ಸಂಪದ, ಸಂಪತಿ, ಏಕಾರ್ಥಧಾರಿಗಳೇ.
ಸ್ಪಂದನೆಗೆ ವಂದನೆ
ಸಂಪತಿ ಎಂಬುದಾಗದು ಪದಾಗಮಶಾಸ್ತ್ರಕೆ ಸಲ್ವ ಮಾತು ದಲ್:-)
ಗತಿಯಂತಾದೊಡೆ ಸೀತೆಗಂದಿಗಕಟಾ| ಪೆಂಗೂಸ ಪಾಡಿಂದದೇಂ (ಇಂದು – ದೆಹಲಿ ಪ್ರಕರಣ)
ದಿತಿಪುತ್ರರ್ ಜನರೆಲ್ಲರಾಲಿಪರೆ ತಾವ್| ಚೀರಾಟವಂ ತ್ರಸ್ತಳಾ
ಸತಿಯಾಕ್ರಂದವ ಕೇಳ್ದು ಘರ್ಜಿಸಿದರೇಂ| ಆಕಾಶದೊಳ್ಗಾ ತಡಿ
ತ್ಪತಿಗಳ್? ಸೀತೆಗದೆಷ್ಟು ಮಂದಿ ಗಣಿಸಲ್? ತಾವೊರ್ವರೇ? ಇರ್ವರೇ?
ಪ್ರಿಹಾರದಲ್ಲಿ ನಾವೀನ್ಯವಿದೆ. ಆದರೆ ಪೂರ್ಣವಾಗಿ ಅರ್ಥವಾಗುತ್ತಿಲ್ಲ. ಕೀಲಕಪದ ಸೊಗಸಾಗಿದೆ.ಪೆಣ್ಗೂಸು ಎಂದರೆ ಮತ್ತೂ ಸರಿಯಾದೀತು.
ದೆಹಲಿಯ ಪ್ರಸಂಗದಲ್ಲಿ ಆ ಹೆಣ್ಣಿನ ಅರ್ತಿಯನ್ನು ಕೇಳಿದವರಾರು? ಜನರೆಲ್ಲ ದಾನವರು (ದಿತಿಪುತ್ರರ್), ಅವಳ ಚೀರಾಟವನ್ನು ಕೇಳರು. ಸೀತೆಯು ರಾವಣನಿಂದ ಅಪಹೃತಳಾದಾಗ ಗಗನಮಾರ್ಗದಲ್ಲಿನ ಸಾಕ್ಷಿಯಿದ್ದ ಮೋಡಗಳು ಘರ್ಜಿಸಿದವೆ?
ಕಲ್ಪನೆ ಚೆನ್ನಾಗಿದೆ. ಆದರೆ ಒಳ್ಗೆ ಎಂಬ ಪ್ರಯೋಗವು ಅಷ್ಟು”ಒಳ್ಳೆ’’ಯದಲ್ಲ:-) ಹಾಗೆಯೇ ಆಕ್ರಂದವ ಎಂಬುದನ್ನು
ಸತಿಯಾವೇದನೆ ಕೇಳಿ….. ಎಂದು ಸವರಿಸಿದಲ್ಲಿ ಮತ್ತೂ ಒಳಿತು.
ಕೃತಜ್ಞತೆಗಳು
*ಚೀರಾಟಮಂ
ಮತ್ತೊಂದು ಪೂರ್ತಿ
ಚ್ಯುತಿಯೊಂದಿಲ್ಲದೆ ಬಾಳ್ದೊಡೇಂ ಪತಿಗೆ ತಕ್ಕಂತಿರ್ದೊಡೇಂ ಮತ್ತಮಂ-
ಚತಿಯಿಂ ಮಿಂದೊಡಮೇನ್ ವಿವಸ್ವತನವೋಲ್ ತಾನಿರ್ದೊಡೇಂ ಧೂರ್ತರೊಳ್
ಮತಿಹೀನರ್ ಪಲರಿರ್ಪರೀ ಪೊಡವಿಯೊಳ್ ಬಾಯ್ವಂದವೋಲ್ ಬೊಂಕುವರ್
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇಯೀರ್ವರೇ?
ಅಂಚಿತಿ- ಬೆಂಕಿ
ವಿವಸ್ವತ- ಬೆಂಕಿ
ಬಲುಚೆಲುವಾದ ಪರಿಹಾರ. ಒಳ್ಳೆಯ ಪ್ರೌಢಪದಪ್ರಯೋಗವೂ ಸೇರಿದೆ. ಶೈಲಿಯೂ ಸೊಗಸಾಗಿದೆ.ಇಲ್ಲಿಯ ನುಡಿಗಟ್ಟಿನ ಹದವೂ ಪರಿಣಾಮರಮಣೀಯ. ಇಂಥ ಪಳಗಿದ ಕೈಯಡುಗೆಯಂಥ ಪದ್ಯಗಳನ್ನು ಕಂಡಾಗ ನಿಜಕ್ಕೂ ಪರಮಾನಂದವಾಗುತ್ತದೆ 🙂
ಚೆನ್ನಮೆನುತೆ ನೀಮೆಮ್ಮಯ
ಬೆನ್ನಂ ತಟ್ಟಿದೊಡೆ ಪಿರ್ಗು ಪೆರ್ಚುಗುಮೆಮ್ಮೊಳ್
ಮೂರ್ತಿಗಳೇ,
ಇದೇ ವಿಷಯವನ್ನಿಟ್ಟುಕೊಂಡು ಬರೆಯುವವನಿದ್ದೆ, ‘ಪೋಲಂಕಿ’ ಪದ ಬಳಸಿ. ನನ್ನ ಕೀಲಕ ಬೇರೆ. ಹಾಗಾಗಿ ಬರೆಯುವೆ, ಇಂದು ಸಂಜೆ.
ಅತಿ ಬಾಹುಳ್ಯದ ದರ್ಪಣಂಗಳೆನಿತೋ ಸಂದಿರ್ಪ ಮಾಯಾಗೃಹಂ
ಮತಿ ಚೋದಿಪ್ಪುದು ರೂಪಮೇಕಮದರೊಳ್ ತಾ ಸಾಸಿರಂ ತೋರಿರಲ್
ಚತುರಳ್ ಭಾಮಿನಿ ರಾಮನಂ ನಡುವಿನೊಳ್ ಸಂಸ್ಥಾಪಿಸುತ್ತೆಂದಳಯ್
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
Enter the dragon ನ Hall of Mirrors ನಿಂದ ಪ್ರೇರಿತವಾದ ಪೂರಣ
ತುಂಬ ತುಂಬ ಸೊಗಸಾದ ನವೀನಮನೋಜ್ಞಸಮಸ್ಯಾಪೂರಣ. ಧನ್ಯವಾದಗಳು. ಆದರೆ ಸಂದಿರ್ಪ, ಚೋದಿಪ್ಪುದು , ನಡುವಿನೊಳ್ ಸಂಸ್ಥಾಪಿಸುತ್ತೆಂದಳಯ್ ಎಂದು ಸವರಿಸಿಕೊಂಡರೆ ಶಬ್ದಶುದ್ಧಿ ಉಂಟಾಗುವುದು.
ಅಲ್ಲಿಯೇ ಬದಲಾಯಿಸಿದ್ದೇನೆ. ಧನ್ಯವಾದಗಳು.
ಶರಪಂಜರ ಚಿತ್ರದ ಗೀತೆಯಿಂದ ಪ್ರೇರಿತ:
ಸತಿಧರ್ಮಂ ಮುಳುವಾಯ್ತೆ ಸೀತೆಗಕಟಾ| ಕಾಡಿಂಗೆ ತಾ ಪೋದಳೇ
ಮತಿಗೆಟ್ಟಿರ್ದಗಸಂ ಕುವಾರ್ತೆ ಬೊಗಳಲ್| ತಾನಾದಳೇ ದೂಷಿತಳ್
ಪತಿಯಿದ್ದೇಂ ಚಿರದುಃಖಮೇ ವಿರಹಮೇ| ಕ್ರೂರರ್ಗಳೆಂತೋ ದಶಾ
ಪತಿಗಳ್ ಸೀತೆಗೆಷ್ಟು ಮಂದಿ ಗಣಿಸಲ್ ತಾವೊರ್ವರೇ ಇರ್ವರೇ
ದಶಾಪತಿಗಳ್ = ಜನ್ಮಗ್ರಹಗಳು (ಕುಂಡಲಿಯವು)
ಪ್ರಸಾದು! ಧನ್ಯವಾದ…ಬಲುಸೊಗಸಾದ ಪರಿಹಾರ!!
ಕತೆ ಕೇಳಿರ್ದವರೆಲ್ಲ ಬಲ್ಲರವಳಂ ಕಲ್ಯಾಣದಾನಂತರಂ
ಹಿತ ಶೈಶವ್ಯದ, ಬಾಲ್ಯದಾ ಸ್ಮೃತಿಗಳಂ, ಸ್ವಾರಸ್ಯಮಂ, ಪೇಳ್ವೆನಾಂ
ಜೊತೆಗಾರರ್ಗಳು ಕಾಡೆ, ಸಾಯಬಡಿವಳ್ ತಾ ಮೋದದಿಂದಾ ಕಿತಾ –
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
hahaha 😀 Super Ram 🙂
ಹಳಗನ್ನಡದ ಬಳಕೆ ಬಹಳವಾಗಿ ಗೊತ್ತಿರದ ನರಮನುಷ್ಯನಿಂದ ಒಂದು ಪ್ರಯತ್ನ, ದಯಮಾಡಿ ತಿದ್ದುವುದು :
ಸುತನೋರ್ವನ್ ಪಿಡಿದಿದ್ದನೇಕ ರಾಮಪಟವಂ ತಿರುವುತ್ತ ತಾಂ ನೋಡುತಂ
ಕಥೆನೂರೊಳ್ ಪೆಸರೋದುತಂ ಬೆರಗಿನೋಳ್ ಸಂದೇಹಮಂ ತಾಳುತಂ
ಪಿತನಾಗಲ್ ಬರಲಲ್ಗೆ ತೋರಿ ವ್ಯಥೆಯಂ ಪೇಳುತ್ತ ಕೇಳಿರ್ದನು
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಮೊದಲಸಾಲಿನಲ್ಲಿ ಛಂದಸ್ಸು ಎಡವಿದೆ. ಭಟ್ಟರೇ! ಸ್ವಲ್ಪ ತಿದ್ದಿಕೊಳ್ಳಿರಿ
ಧನ್ಯವಾದ, ಮೊದಲ ಪದದ ಮಹಾಪ್ರಾಣ ಇಳಿಸಿ ಹೀಗೆ ತಿದ್ದಿದ್ದೇನೆ, ಕೃಪಯಾ ಮರುಪರಿಶೀಲನ …..
ಸುತನೊರ್ವನ್ ಪಿಡಿದಿದ್ದನೇಕ ರಾಮಪಟವಂ ತಿರುವುತ್ತ ತಾಂ ನೋಡುತಂ
ಕಥೆನೂರೊಳ್ ಪೆಸರೋದುತಂ ಬೆರಗಿನೋಳ್ ಸಂದೇಹಮಂ ತಾಳುತಂ
ಪಿತನಾಗಲ್ ಬರಲಲ್ಗೆ ತೋರಿ ವ್ಯಥೆಯಂ ಪೇಳುತ್ತ ಕೇಳಿರ್ದನು
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಭಟ್ಟರೆ – ಮೊದಲ ಪಾದದಲ್ಲಿ ಅಕ್ಷರವಿನ್ಯಾಸದಲ್ಲಿ ತೊಂದರೆ ಇದೆ. ಹಾಗೂ ಒಟ್ಟು ಅಕ್ಷರಗಳೂ ಹೆಚ್ಚಿವೆ.
ಮತ್ತೇಭ ವಿಕ್ರೀಡಿತದ ಸಹಿ ಇಂತಿದೆ ::
ನನನಾನಾನನನಾನನಾನನನನಾ | ನಾನಾನನಾನಾನನಾ
ಸುತನೋರ್ವನ್ ಪಿಡಿದಷ್ಟು ರಾಮ ಪಟವಂ ಆನಂದದಿಂ ನೋಡುತಂ
ಕಥೆನೂರೊಳ್ ಪೆಸರೋದುತಂ ಬೆರಗಿನೋಳ್ ಸಂದೇಹಮಂ ತಾಳುತಂ
ಪಿತನಾಗಲ್ ಬರಲಲ್ಗೆ ತೋರಿ ವ್ಯಥೆಯಂ ಪೇಳುತ್ತ ಕೇಳಿರ್ದನು
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಮಿತಿಯಂ ಮೀರಿಪ ಕೋಪಮಂ ನಟಿಸುವನ್ ಸಂಗಾತಿ ಖದ್ಯೋತನುಂ
ಹಿತಮಂ, ಕೂರ್ಮೆಯ ತೋರ್ದು ಮುಂಬರುವನೈ ಕಾರ್ಗತ್ತಲೊಳ್ ಚಂದ್ರಮಂ
ಸತಿಗೆಂದೇ ಪೊಸ ಪಚ್ಚೆಪತ್ತಲಮನುಂ ತಾನೀವನಾ ಮೇಘನುಂ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
[ಸೀತೆ = ಭೂಮಿ]
ಆಹ!! ಎಂಥ ಸೊಗಸಾದ ಪರಿಹಾರ! ಎಷ್ಟು ಒಳ್ಲೆಯ ಕಲ್ಪನೆ!!!
Dhanyavadagalu!
ಗತಿ ಮೇಲಾರ್ದುದದಲ್ತೆ ಬಿಲ್ಲು ಮುರಿಯಲ್, ಸಂತೋಷದಿಂ ವೇಗದಾ –
ಗತಿಯಿಂ ನಾಟ್ಯಮನಾಡಿದಳ್ ತಿರುಗುತತ್ಯುಲ್ಲಾಸದಿಂ ಪಾಡುತಾ
ಮಿತಿ ಮೀರಿರ್ಪುದಿದೆಂಬ ಬೋಧೆಯೊರೆವಾ ಪುಕ್ಕಟ್ಟೆಧೀರರ್, ಬೃಹ –
ಸ್ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಅಮಮಾ! ರಾಮನ ಪದ್ಯಪೂರಣವಿಧಾನಂ ವಿಸ್ಮಯಕ್ಕಾಸ್ಪದಂ
ಕಮನೀಯಂ ಕವಿತಾವಿಲಾಸವಲನಂ ಕಾಲ್ಪನ್ಯಕೈವಲ್ಯಮಯ್!!
😀 😀 😀
ಸ್ತುತಿಸಲ್ ನಿತ್ಯವುಭಕ್ತಿಯಿಂದೆ ಗುರುಗಳ್ ರಾಮಾಯಣಂತಾಂ ಸದಾ
ಕತೆಗಳ್ ಪೇಳುತಮಕ್ಕಳಿಂಗದಿರುಳಲ್ ಸಂತೋಷದಿಂಪಾಡುತಾ
ಮತಿಯೊಳ್ ಸಂದಿಪುದೀಸಮಸ್ಯೆಯನೆ ತಾಂ ಕೇಳಲ್ಕೆ ಶಿಶ್ಯೋತ್ತಮಾ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಮತ್ತೇಭ ವಿಕ್ರೀಡಿತದಲ್ಲಿ ಮೊದಲ ಪ್ರಯತ್ನ, ದಯವಿಟ್ಟು ಸವರಿಸಿ
ಸ್ತುತಮೀ ಯತ್ನಮತೀವರಮ್ಯಮರಿಯಲ್ ಪ್ರಾಥಮ್ಯಮೆಂದೀ ಪಥಾ-
ಪ್ತತೆಯಿಂ ಮುಂದೆ ನಿರಂತರಾಯವಿಧಿಯಿಂ ಸಂವರ್ಧಿಸಯ್ ಶ್ರೀಧರಾ!!!
ಧನ್ಯವಾದಗಳು ಸಾರ್, ಎಲ್ಲಿ ತಪ್ಪಿರುತ್ತದೆಯೋ ಎಂದು ಸ್ವಲ್ಪ ಅಳುಕಿತ್ತು… 🙂
‘ಗೋಷ್ಠೀಪತಿ’ (ರಾಮಾಯಣದ ವಿಕೃತವ್ಯಾಖ್ಯೆ ಮಾಡುವ ಸಿಂಪೋಸಿಯಂಗಳ ಅಧ್ಯಕ್ಷರು) ಎಂಬ ಕೀಲಕವನ್ನು ಪೂರ್ವನಿಶ್ಚಯ ಮಾಡಿಕೊಂಡುಬಿಟ್ಟೆ. ಮತ್ತೇಭ ಸಲ್ಲದು. ಕೊನೆಯಲ್ಲಿ ಎರಡು ಗುರು ಇರುವ ಮಾಲಿನಿಯಲ್ಲಿ ಪದ್ಯರಚಿಸಿದ್ದೇನೆ. ಇದಕ್ಕಾಗಿ ಸಮಸ್ಯಾಪಾದವನ್ನು ಮಾರ್ಪಡಿಸಿಕೊಂಡಿದ್ದೇನೆ, ರಾಮಚಂದ್ರರ ಕ್ಷಮೆ ಕೋರಿ.
ಮಾಲಿನಿ||
ಕಿತವಮತದವರ್ಗಳ್| ಕೂಟಕೂಡುತ್ತಲೆಂದೂ
ಚ್ಯುತಿಯ ಬಗೆವರಯ್ಯೋ| ಸೀತೆಯಾಖ್ಯಾನಕೆಂತೋ
ಗತಿ ಬೆಳಗೆರೆ ತೋರ್ದರ್| ರಾಮನಾಮಾಖ್ಯ ಗೋಷ್ಠೀ-
ಪತಿಗಳೆನಿತೊ ನೋಡಲ್| ಸೀತೆಗೋರ್ವಾತನೇನೇಂ
1) ರಾಮನಾಮಾಖ್ಯ = ಪೋಲಂಕಿ
2) ಗತಿ ಬೆಳಗೆರೆ ತೋರ್ದರ್ – ಕೃಷ್ಣಶಾಸ್ತ್ರಿಗಳ ‘ಏಗ್ದಾಗೆಲ್ಲ ಐತೆ’ ಓದಿ
ಪದ್ಯರಚನೆ ಹಾಗೂ ಕಲ್ಪನೆ ಸೊಗಸಾಗಿವೆ. ಮಾತ್ರವಲ್ಲ, ಈ ಸಮಸ್ಯೆಯನ್ನು ಮಾಲಿನಿಯಲ್ಲಿ ಅಳವಡಿಸಿಕೊಂಡಿರುವುದೇ ಮತ್ತೂ ಸ್ತುತ್ಯ. ಆದರೆ ಓರ್ವಾತ ಎಂಬುದು ಅಸಾಧುರೂಪ. ಸೀತೆಗಿನ್ನೋರ್ವನೇ ಪೇಳ್ ಎಂದು ಸವರಿಸಿರಿ.
ಕೃತಜ್ಞತೆಗಳು.
ದಯವಿಟ್ಟು ‘ಸೀತೆಗಿನ್ನೋರ್ವನೇ ಪೇಳ್’ ಎಂಬುದಕ್ಕಿಂತ ಸೂಕ್ತವಾದುದನ್ನು ಸೂಚಿಸುವಿರ? ‘ಒಬ್ಬನೇ? ಇಬ್ಬರೇ?’ ಎಂಬ ಭಾವ ಬರಬೇಕು. ‘ಸೀತೆಗೊಬ್ಬಾತನೇನೇಂ’ ಎಂದರೆ ಸರಿಯಾದೀತೆ?
‘ಓರ್ವಾತ’ ಸಾಧುರೂಪವಲ್ಲ ಎಂದಿದ್ದೀರಿ. ‘ಒರ್ವಾತ’ ಸಾಧುರೂಪವೆ?
‘ಸೀತೆಗೇನೊಬ್ಬನೇ ಪೇಳ್’ ಸರಿಯೆ?
ಪ್ರಸಾದು
ಚೆನ್ನಾಗಿದೆ ಪದ್ಯ. “ಕಾಂಟೆಂಪೊರರಿ” ವಸ್ತು. “ಸೀತೆಗೇನೊರ್ವನೇ ಪೇಳ್” ಎಂದರೆ ನಿಮಗೆ ಸಮಾಧಾನವಾದೀತೆ? “ಸೀತೆಗಿನ್ನೊರ್ವನೇಯೇಂ” ಅಂದೂ ಹಾಕ ಬಹುದು
ಚ್ಯುತಿಯ ಬಗೆವರೆಂತೋ ಬದಲಾಗಿ “ಚ್ಯುತಿಯನೆಣಿಪರೆಂತೋ” ಹಾಕಿದರೆ, “ಚ್ಯುತಿಯಂ” ಎಮ್ದು ಸರಿಯಾದ ವಿಭಕ್ತಿ ಬಂದು ವಿಭಕ್ತಿ ಪಲ್ಲಟವನ್ನು ತಪ್ಪಿಸುತ್ತೆ.
“ಪೋಲಂಕಿ” ಪದ ನನಗೆ ತಿಳಿದಿರಲಿಲ್ಲ. “ಪೋಲ್+ಅಂಕಿ” ಎಂದು ಊಹಿಸುತ್ತೇನೆ Namesake/ parody ಎಂತಲೆ?
1) ವಿಭಕ್ತಿಪಲ್ಲಟ ಕುರಿತ ಸಲಹೆಗಾಗಿ ಧನ್ಯವಾದಗಳು.
2) ಪೋಲಂಕಿ ರಾಮಮೂರ್ತಿ ಎಂಬ ಲೇಖಕರೊಬ್ಬರು ರಾಮಾಯಣಕಥೆಯನ್ನು ಲೇವಡಿಮಾಡಿದ್ದಾರೆ. ಬೆಳಗೆರೆ ಕೃಷ್ಣಶಾಸ್ತ್ರಿಗಳು ಅವರ ಮೇಲೆ ಒಂದು practical joke ಮಾಡಿ ಸರಿಯಾಗಿ ಛೀಮಾರಿ ಹಾಕಿದ್ದಾರೆ.
3) ‘ಸೀತೆಗಿನ್ನೊರ್ವನೇಯೇಂ’ ಸರಿಯಾಗದು. ‘ಒಬ್ಬನೇ? ಇಬ್ಬರೇ?’ ಎಂಬ ಭಾವ ಬರಬೇಕು. ‘ಸೀತೆಗೇನೊರ್ವನೇ ಪೇಳ್’ ಸರಿಯಾಗುತ್ತದೆ.
‘ಸೀತೆಗಿನ್ನೊರ್ವನೇಯೇಂ’, ‘ಸೀತೆಗೇನೊರ್ವನೇ ಪೇಳ್’, ‘ಸೀತೆಗೊಬ್ಬಾತನೇನೇಂ’, ‘ಸೀತೆಗಿನ್ನೋರ್ವನೇ ಪೇಳ್’ – ಇವೆಲ್ಲದುರ ಭಾವವೂ ಒಂದೇ ಆಗಿದೆ.
ಸಮಸ್ಯೆಯ corruption ಓಕೆ, hair-splitting ಯಾಕೆ?
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೋರ್ವರೇ? ಇರ್ವರೇ?
ಜೊತೆಯೊಳ್ ಲಕ್ಷ್ಮಣರಾಮರಂ ಹನುಮನಂ ವಾಲ್ಮೀಕಿಯಂ ಬಲ್ಲೆವೇಂ
ಗತಿಗೆಟ್ಟಾವನವಾಸ ಹಾಸ ಪರದೇಶತ್ರಾಸ ಪಾತಿವ್ರತಾ
ಮಿತಿಯೊಳ್ ಸೀತೆಯದೆಷ್ಟು ಬಂದಿ ತಣಿಸಲ್ಕೇoಸಾಧ್ಯಮೇ ನೋವನುಂ।
(ಪತಿ = ರಕ್ಷಕರು, ಹಾಸ = ಬಂಧನ)
ಪತಿ ಎಂಬುದಕ್ಕೆ ರಕ್ಷಕ ಎಂಬ ಲಕ್ಷಣಾಮೂಲದ ಅರ್ಥವನ್ನು ಮಾಡಬಹುದು. ಆದರೆ ಅದು ಈ ಸಮಸ್ಯೆಯ ಸಮಸ್ಯಾತ್ವಕ್ಕೆ ಸಾಲದಾಗುತ್ತದೆ. ಏಕೆಂದರೆ ಪೂರ್ವಪದವಿಲ್ಲದೆ ಪತಿ ಎಂಬ ಪದವು ಈ ಅರ್ಥವನ್ನು ನೀಡುವುದು ಲೋಕರೂಢಿಯಲ್ಲಿಲ್ಲ. ಅದು ತಾನೆ ಇಲ್ಲಿಯ ಸಮಸ್ಯಾತ್ವ! ಜೊತೆಗೆ ನೀವು ಹಾಸ ಎಂಬ ಪದಕ್ಕೆ ಬಂಧನ ಎನ್ನುವ ಅರ್ಥ ನೀಡಿದ್ದೀರಿ. ಇದು ನಿಘಂಟುಗಳಲ್ಲಿ ಉಂಟೇ? ಅಥವಾ ಪೂರ್ವಕವಿಪ್ರಯುಕ್ತವೇ?
ಛಂದಸ್ಸಿಗಾಗಿ ಬಲ್ಲೆವೇಂ ಎನ್ನುವ ರೂಪವನ್ನು ಮಾಡಿಕೊಂಡದ್ದು ಹಿತವಾಗದು. ಪಾತಿವ್ರತಾ ಎಂಬುದೂ ಇದೇ ಜಾಡಿನದು, ಅಪಶಬ್ದ. ಜೊತೆಗೆ ಅಲ್ಲಲ್ಲಿ ಭಾಷೆಯೂ ಸಡಲಿ, ಭಾವವೂ ಬಳಲಿದೆ. ದಯಮಾಡಿ ತಿದ್ದಿಕೊಳ್ಳಿರಿ:-)
ನಮಸ್ಕಾರಗಳು ಗಣೇಶ್ ಸರ್,
“ಪತಿ” ಪದಕ್ಕೆ ಪೂರ್ವಪದವಿಲ್ಲದೆ “ರಕ್ಷಕ” ಅರ್ಥ ಬಾರದೆಂದು ತಿಳಿಯದೆ, ಸಮಸ್ಯೆಯ ಸಾಲನ್ನು ಹಾಗೆ ಬಳಸಿದ್ದು. ಇಷ್ಟೆಲ್ಲ ಸಮರ್ಥ “ರಕ್ಷಕ”ರಿದ್ದೂ ಸೀತೆಯ ನೋವು ತಣಿಸಲು ಸಾಧ್ಯವಾಗದ ವ್ಯಥೆಯಲ್ಲಿ ಬರೆದದ್ದು. ಭಾವ / ಭಾಷೆ ಸಡಿಲಿಕೆಗೆ ನನ್ನ ಅನುಭವ / ಅಧ್ಯಯನದ ಕೊರತೆ ಕಾಡುತ್ತಿದೆ. ವೃತ್ತ ದಲ್ಲಿ ಪದ್ಯರಚನೆ ಇನ್ನೂ ಪಳಗಿಲ್ಲವಾದ್ದರಿಂದ, ಮಾಡಿರುವ ಅಪಶಬ್ದಗಳ ಬಳಕೆಗೆ ಕ್ಷಮೆಇರಲಿ.
೨ ನೇ ಸಾಲು :” ….ಬಲ್ಲೆವೇಂ” ತಿದ್ದಲು ದಯವಿಟ್ಟು ಸಹಾಯ ಮಾಡಿ.
೩ ನೇ ಸಾಲು :”…… ಪಾತಿವ್ರತಾ” / “….. ಪರದೇಶತ್ರಾಸದೊಳ್ ಜೀವಿತಂ” ಸರಿಯಾಗುವುದೇ?
ಪದ್ಯಪಾನಮಿತ್ರರ ಪರಿಚಯವಾದಲ್ಲಿ (ಫೋನ್ ನಂಬರ್ ಗಳು ಸಿಕ್ಕಿದಲ್ಲಿ) ಪದ್ಯರಚನೆಯ ಸಂದರ್ಭದಲ್ಲಿ ಬರುವ ಈ ರೀತಿ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಸಹಾಯವಾಗುವುದು.
ಹಾಸ = ಬಂಧನ,ಪಾಶ,ಕಟ್ಟು (“ಬರಹ” ನಿಘಂಟಿನಲ್ಲಿ ದೊರೆತದ್ದು). ಅನುಪ್ರಾಸಕ್ಕಾಗಿ “ಹಾಸ” ಉಪಯೋಗಿಸಿದ್ದು.
ಧನ್ಯವಾದಗಳು. ಹಾಸ ಪದಕ್ಕೆ ಬಂಧನವೆಂಬ ಅರ್ಥವಿರುವುದು ನನಗೆ ತಿಳಿದಿರಲಿಲ್ಲ. ಮತ್ತೊಮ್ಮೆ ಧನ್ಯವಾದಗಳು.. ನೀವೇ ಸೂಚಿಸಿರುವ ಸವರಣೆಗಳು ಸರಿಯಾಗಿವೆ. ರನ್ನ, ಮುದ್ದಣ, ಬಸವಪ್ಪಶಾಸ್ತ್ರಿ ಮುಂತಾದವರ ಕೃತಿಗಳು ಗಾತ್ರದಲ್ಲಿ ಚಿಕ್ಕವು; ಹಳಗನ್ನಡಕ್ಕೆ ಒಳ್ಳೆಯ ಪ್ರವೇಶಿಕೆಗಳು. ಹೀಗಾಗಿ ಅವನ್ನು ಚೆನಾಗಿ ಓದಿರಿ. ಜೊತೆಗೆ ಪದ್ಯಪಾನದಲ್ಲಿಯೇ ಇರುವ ಎಸ್. ಜಿ. ನರಸಿಂಹಾಚಾರ್ಯರ ಕಾವ್ಯಗಳನ್ನೂ ಓದಿರಿ.
ಸತಿಯಂ ಮಾಯೆಯ ರೂಪಿನಿಂ ಮರೆಸಿರಲ್| ಮಾರೀಚನಾ ರಾಕ್ಷಸಂ
ಮತಿಯಂ ಜಾರಿಸೆ ಕಳ್ಳತಾಪಸಿವೊಲಾ| ಲಂಕಾಪುರೀ ನಾಥನುಂ
ಖತಿಗೊಂಡಿರ್ದಿರಲಾ ಜಟಾಯುವನು ತಾವ್| ನಿರ್ಲೇಪದಿಂ ಕಂಡ ದಿ
ಕ್ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್, ತಾವೊರ್ವರೇ ಇರ್ವರೇ?
ದಿಕ್ಪತಿಗಳ್ = ಅಷ್ಟದಿಕ್ಪಾಲಕರು
ಮಗದೊಂದು ಪೂರ್ಣ
ಪತಿಗಳ್ಕರ್ಗರೆದಾತನಂತೆ ನಡೆದಾ ಮಾತಾಯ ಮೆಯ್ಯಂ ನದೀ
ಪತಿಗಳ್ಚಿ ಸ್ವಯಮೇವ ಪೂತನೆನಿಕುಂ ಸ್ವಾಹಾಪತಿಶ್ಚಾಪಿ ವಾ-
ಕ್ಪತಿಗಳ್ ಸತ್ಕಥೆಯಂ ಪ್ರಕೀರ್ತಿಸಿಯರಂಬೆತ್ತಿರ್ಪರೀಪಾಂಗಿನಾ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇಯೀರ್ವರೇ?
ಅಳ್ಕರ್-ಅಕ್ಕರೆ, ಪ್ರೀತಿ
ನದೀಪತಿ-ಸಮುದ್ರ
ವಾಕ್ಪತಿ- ಕವಿ
ಅರ-ಧರ್ಮ, ಪುಣ್ಯ
——–
ಸ್ವಾಹಾಪತಿಶ್ಚಾಪಿ ಎಂದು ಸಂಸ್ಕೃತಪದಪ್ರಯೋಗ ಮಾಡಿದ್ದೇನೆ. “ಸ್ವಾಹಾಪತಿಕ್ಕಂ” ಅಥವಾ “ಸ್ವಾಹಾಪತಿಕ್ಕಂತೆ” ಎಂದು ಹಾಕುವುದು ಸರಿಯಾದ ಪ್ರಯೋಗವೆ ತಿಳಿಯುತಿಲ್ಲ. ಆಗಬಹುದೆಂದರೆ ಅದನ್ನೇಹಾಕ್ತೇನೆ. ಇನ್ನೂ ಸೂಕ್ತವಾಗುತ್ತೆ.
ಕಳ್ಚಿ- ತೊಳೆದು
ಇಂಥ ಅನಿರೀಕ್ಷಿತ ಮತ್ತು ಅನಪೇಕ್ಷಿತ ಮಣಿಪ್ರವಾಳವು ಇಲ್ಲಿಯ ಸಂದರ್ಭಕ್ಕೆ ಹಿತವಾಗಾದೇನೋ. ಪ್ರತ್ಯೇಕವಾಗಿ ಸಂಸ್ಕೃತವಾಕ್ಯವೇ ಬಂದಾಗ ಉಚಿತವಾದೀತು.ಅಂತೆಯೇ ನಿಮ್ಮ ಪರ್ಯಾಯಕ್ರಮದ ಸೂಚನೆಗೂ ವ್ಯಾಕರಣ ಒಪ್ಪದು:-) ನೀವು ಸಮರ್ಥರಿದ್ದೀರಿ; ಭಂಗ್ಯಂತರದಿಂದ ಅನವದ್ಯವಾಗಿ ಪರಿಹರಿಸಿರಿ:-)
ಪತಿಗಳ್ಕರ್ಗರೆದಾತನಂತೆ ನಡೆದಾ ಮಾತಾಯ ಮೆಯ್ಯಂ ಶುಚೀ-
ಪತಿಗಳ್ಚಿ ಸ್ವಯಮಪ್ಪನಪ್ಪತಿಯೊಡಂ ನಿತ್ಯಂ ಪವಿತ್ರಂ ಸುವಾ-
ಕ್ಪತಿಗಳ್ ಸತ್ಕಥೆಯಂ ಪ್ರಕೀರ್ತಿಸಿಯರಂಬೆತ್ತಿರ್ಪರೀಪಾಂಗಿನಾ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇಯೀರ್ವರೇ?
ಗಣೇಶರೆ- ತಮ್ಮ ವಿಶ್ವಾಸಕ್ಕೆ ಕೃತಜ್ಞತೆಗಳು. ಭಂಗಿಯಂ ಬದಲಿಸಿ ಬರೆದಪೆನ್
ಶುಚೀಪತಿ- ಅಗ್ನಿ
ಅಪ್ಪತಿ- ಸಮುದ್ರ
ಕಳ್ಚು- ತೊಳೆ
ನನ್ನ ಪರಿಹಾರದಲ್ಲಿ ಭಾಷಾ ಶೈಥಿಲ್ಯವನ್ನು ಕ್ಶಮಿಸಿ. ಐಡಿಯಾ ಗೆ ಕಾಸು ಕೊಡಿ. 🙂
(Comments and more important, Criticism welcome)
ಕಪಿಗಳ್ ಸೋತಿರೆ ಯುದ್ಧದೊಳ್ ಮಹಿಮೆಯo. ಆ ದೇವ ತಾ ತೋರಿರಲ್
ಎಡಕೂ ನೋಡಲು ರಾಮ, ರಾಮ ಬಲಕೂ, ಎಲ್ಲೆಲ್ಲು ಆ ದೇವನೇ
ಕೊಡವುತ್ತಾ ತಲೆ, ರಕ್ಕಸರ್ ಹೆದರಿಕೊoಡಾಗಾಡಿದಾ ಮಾತಿದು –
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಸುಧೀರ್ – ಬಹಳ ಒಳ್ಳೆಯ ಕಲ್ಪನೆ. ಎಷ್ಟು ಬೇಕಾದರೂ ಕಾಸು ಕೊಡಬಹುದು 🙂
ಸುಸ್ವಾಗತಂ ಸುಕವಿವರ್ಯ! ಸುಧೀರ! ಧೀರ-
ಪ್ರಸ್ತಾವನಾಪರಿಮಲಾಮಲಪದ್ಯಪಾನೇ|
ಡಿಂಡಿತ್ವಮದ್ಯ ಮಧುರಂ ನನು ಸಾಧಿತಂ ನಃ
ಪಾಂಡಿತ್ಯಮತ್ರ ಭವತೋ ಭವತು ಪ್ರತಿಷ್ಠಮ್ ||
ಐಡಿಯಾಗೆ ಕಾಸು; ಐಡಿಯಾಗೇ ಕಾಸು:-)
ಮಾಡಿಕೊಡಿರಿ ಬಾಸು! ಇಂಥ ಪದ್ಯ
ತೀಡಿಕೊಂಡು ಮತ್ತೆ ಮತ್ತೆ ಕಲ್ಪನೆಯನ್ನು
ಮಾಡಿಕೊಳ್ಲಿ ಕವಿತೆ ಮಡದಿಯಾಗಿ:-)
ತೀಡಿಕೊಳ್ಳೋದು ಅ೦ದರೆ ನನಗೆ ಗೊತ್ತಿರೋದು ಒ೦ದೇ. ೩ನೇ ಸಾಲು ಹೀಗಾ? – “ಕೊಡವುತ್ತಾ ತಲೆ, ನಿ೦ತ ರಕ್ಷಭಟರಾ ಡೈಲಾಗು ಸೂಪರ್ ಮಚಾ”
ಮಾಮs 🙂
@Ganesh – ಮತ್ತೇಭ ಬರೆಯುವಾಗ ನನಗೆ ಅನ್ನಿಸಿದ್ದು – ಕನ್ನಡದಲ್ಲಿ ಶಾರ್ದೂಲವೇ ಸುಲಭ. ಏರಡು ಲಘುಗಳಿ೦ದ ಪ್ರಾರ೦ಭ ಮಾಡುವುದೇ ಕಷ್ಟ. ಏಕೆ ಹೀಗೆ ಇನ್ನೊ೦ದು ವೃತ್ತ ಮಾಡಿದರು? ನಿಮಗೆ ಯಾವುದು ಸುಲಭ?
ಇಲ್ಲ ಸುಧೀರ್, ಮತ್ತೇಭವೇ ಸುಲಭ. ಇದಕ್ಕೆ ಸಾವಿರವರ್ಷಗಳ ಕನ್ನಡಸಾಹಿತ್ಯವೇ ಪುರಾವೆಯಾಗುತ್ತದೆ. ಆದಿಪ್ರಾಸದ ತೊಡಕನ್ನು ನೆನೆದಾಗ ಈ ತಥ್ಯ ಮತ್ತೂ ಮನವರಿಕೆಯಾಗುತ್ತದೆ. ಆದರೂ ಈ ಬಗೆಗೆ ಮುಖತಃ ವಿವರವಾಗಿ ಚರ್ಚಿಸೋಣ. ಏಕೆಂದರೆ “ನ ಸುಧೀರಃ ಪ್ರವಿಭಾಷತೇ ಕ್ವಚಿದಪಿ ಕ್ಷುದ್ರಂ ವಿಚಾರಚ್ಯುತಮ್” 🙂
ಸುಧೀರರೆ,
ಶಾರ್ದೂಲ-ಮತ್ತೇಭಗಳ ನಡುವೆ ನಾನು ಗಮನಿಸಿದ ವ್ಯತ್ಯಾಸವೊಂದನ್ನು ಹೇಳುತ್ತೇನೆ. ಶಾರ್ದೂಲ ಹೇಳುವಾಗ ‘ನಾನಾನಾ’ ಆದಮೇಲೆ ವಿರಾಮ ಕೊಟ್ಟಂತೆ ಮಾಡಿ ‘ನನನಾನನಾನ ನನನಾ’ ಹೇಳುತ್ತೇವೆ. ಆ ಮೊದಲ ಗುರುವನ್ನು ಎರಡು ಲಘುಗಳಾಗಿ ಒಡೆದ ತಕ್ಷಣ, ಗೇಯಗುಣವನ್ನು ಕಾಪಾಡಿಕೊಳ್ಳಲು ಆ ವಿರಾಮ ಎರಡು ಅಕ್ಷರ ಮುಂದಕ್ಕೆ ಹೋಗುತ್ತದೆ. ಮತ್ತೇಭದಲ್ಲಿ ‘ನನನಾನಾನನ’ ಎಂದು ಹೇಳಿದಮೇಲೆ ವಿರಾಮ ಕೊಟ್ಟಂತೆ ಮಾಡಿ ‘ನಾನನಾನ ನನನಾ’ ಎಂದು ಹೇಳುತ್ತೇವೆ. ಮತ್ತೇಭವನ್ನು ಬೇರೆಯಾಗಿ ಮಾಡಿರುವುದು ಈ ವೈವಿಧ್ಯಕ್ಕಾಗಿಯೇ/ ಕಾರಣಕ್ಕಾಗಿಯೇ ಎಂದು ನನಗೆ ಖಾತ್ರಿ.
Sudheer,
Sakkattaagide…Grand Entry to padyapaana….welcome to Padyapaana sir.
It made me visualize the TV ramayana’s War scenes 🙂
ಮತ್ತೊಂದು ಪ್ರಯತ್ನ –
ಸತಿಗೀ ಧಾತ್ರಿಯೆ ಮಾತೆಯಯ್ ಹದುಳವಂ ಹಾರೆಯ್ಸಿದ ಪ್ರತ್ನದಂ-
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇಯಿರ್ವರೇ |
ಪಿತನುಂ ಧರ್ಮದ ಮೂರ್ತಿಯೇ, ಪತಿ ಪುನರ್ವಿಶ್ವೇಶನೇ, ಆದರುಂ
ಹೃತಿಯಂ ಪೊಂದಿದಳಲ್ತೆ ! ಲೋಗದೆಸೆಗಳ್ಗಾ ಭಾಗ್ಯಮೇ ಕಾರಣಮ್ ||
ಪ್ರತ್ನದಂಪತಿಗಳ್ – ಅರುಂಧತೀ-ವಸಿಷ್ಠರೇ ಮೊದಲಾದ ಪ್ರಾಚೀನದಂಪತಿಗಳು.
Wow! too good pUraNas from all, really enjoyable! IMO this is the best response so for in padyapAna for any samasye (especially vRitta samasye). Hope to see more pUraNas 🙂
ಹೌದು. ನಿರೀಕ್ಷೆಗೆ ಮೀರಿ, ಇಷ್ಟೆಲ್ಲಾ ಉತ್ತರಗಳು ಸಾಧ್ಯ ಎಂದೇ ತೋರುವುದಿಲ್ಲ.
ಅಪಹೃತಳಾದ ಸೀತೆಯ ಮನವು ಏನೇಮಾಡಿದರೂ ಗೆಲುವನ್ನು ಕಾಣದಿರಲು ಹತ್ತು ತಲೆಯ ರಾವಣನು ಹಾಸ್ಯದಿ೦ದ (ಪ್ರತಿ ತಲೆಯೂ ಒಬ್ಬ ವ್ಯಕ್ತಿಯೆನ್ನುವ ಧ್ವನಿಯಿ೦ದ) ಈ ರೀತಿ ಗೆಲ್ಲಲ್ಲೆತ್ನಿಸಿರಬಹುದೇ ಎ೦ಬ ಕಲ್ಪನೆ
ಸ್ತುತಿಗಳ್, ಭೋಗಗಳಾಮಿಷ೦ಗಳಸುರರ್ ಕೊ೦ಡಾಡುವೀ ಕೀರ್ತಿಯು೦
ಮತಿಯೊಳ್ ಗ್ಲಾನಿಯನಾರಿಸಲ್ಕೆ ವಿಫಲ೦, ಪತ್ತಿರ್ಪ ಶೀರ್ಷoಗಳಿ೦
ಹೃತಳ೦ ಹಾಸ್ಯದೆ ಗೆಲ್ವೆನೆನ್ನುತುಲಿದ೦ “ಲ೦ಕಾಧಿಪ೦ ಸೇರೆ ನೀ೦,
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇಯಿರ್ವರೇ!!!”
ರಾವಣನಿಗೆ ಹಾಸ್ಯಪ್ರಜ್ಞೆಯೂ workout ಆಗ್ಲಿಲ್ಲ 🙂
ನೀವು ಸ್ವಲ್ಪ ಮುಂಚೆನೇ ರಾವಣನಿಗೆ ಈ ಐಡಿಯ ಕೊಟ್ಟಿದ್ದರೆ ವರ್ಕೌಟ್ ಆಗ್ತಿತ್ತೋ ಏನೋ!
ಪ್ರಸಾದು ನಾನು ಮರೆತೆ, ನೀವಾದರೂ ಹೇಳಬಾರದಿತ್ತೆ 😉
ಆ ಸರ್ತಿ ಕಾಮಣ್ಣ ಹಂಗಾಯ್ತು!
ಹೋಗಲಿ ಬಿಡಿ. ಇನ್ನೊಂದು ವಿಷಯವನ್ನು ನೀವು ಮರೆಯುವ ಮುನ್ನ ಈಗಲೇ ಜ್ಞಾಪಿಸಿಬಿಡುತ್ತೇನೆ. ನಿಮಗೆ ಒಬ್ಬ ಹೆಂಡತಿಯಿದ್ದಾರೆ.
ಪ್ರಸಾದು,
‘ಹೋಗಲಿ ಬಿಡಿ’ ಅ೦ದರೆ ನೀವು ಬಿಡ್ತೀರೇನು?
‘ಕಾಮಣ್ಣ’ ಪ್ರಯೋಗ ಏಕೆ? ಯಾರನ್ನು ಕುರಿತು ಈ ಅನಿಸಿಕೆ, ಸ೦ಬೋಧನೆ?
ನಾನು ಮರೆಯುವುದಕ್ಕೆ ಮು೦ಚೆ (ನನ್ನ ನೆನಪಿನಲ್ಲಿರುವುದನ್ನು) ನೀವು ನನಗೇ ನೆನಪಿಸುವುದರ ಉಪಯೋಗವೇನು?
ಇದಕ್ಕೆ ಉತ್ತರಿಸದೆ ನೀವು ಜಾರಿಕೊ೦ಡರೆ ನಿಮ್ಮನ್ನು ‘ಹನುಮಣ್ಣ’ ಎ೦ದೇ ತಿಳಿಯುತ್ತೇನೆ 🙂
ಕಾಮನಹಬ್ಬದಲ್ಲಿ ತುಂಡ್ ಹೈಕ್ಳು ಹೇಳುವ ಮಾತದು – ಆ ಸರ್ತಿ ಕಾಮಣ್ಣ ಹಂಗಾಯ್ತು. ನಾನು ಅದನ್ನು ಬಳಸಿದ್ದು ‘ಹೇಳುವುದು ಮರೆತೆ. ಹೋಗಲಿ ಬಿಡಿ. ಏನೋ ಆಯ್ತು’ ಎಂಬ ಸೀಮಿತ ಅರ್ಥದಲ್ಲಿ ಅಷ್ಟೆ. ಎಲ್ಲ ಶುದ್ಧವಿನೋದದ ಮಾತು.
ವನವಾಸದ ಹಾದಿಯಲ್ಲಿ, ಕಾಡು-ಮೇಡು-ಹಳ್ಳಿ-ನಗರಗಳನ್ನು ಹಾದುಹೋದರಲ್ಲ, ಸೀತಾರಾಮಾದ್ಯರು, ಅವರನ್ನು ಅಲ್ಲಲ್ಲೆಲ್ಲ ಸೇವಿಸಿದ ಪೌರಮುಖ್ಯರೆಷ್ಟೋ! ಒಬ್ಬಳೂ ಜೊತೆಗಾರಳಿಲ್ಲದ, ನಿಲ್ಲದ ಅಂಡಲೆತದ ಅವಳ ಬವಣೆಗೆ ಅವರು ಸಾಕ್ಷಿಯಾಗಿದ್ದಾರೆ.
ಸತಿಯಳ್ ಭರ್ತನ ಕೂಡೆ ಸಾಗಿರುತಿರಲ್| ಕಾಡಿಂದೆ ಕಾಡಿಂಗೆ ತಾ
ಹಿತಮೇನಾ ಮಿತಿಮೀರಿದಂಡಲೆತಗಳ್| ನಾಡಿಂದೆ ನಾಡಿಂಗದೇಂ
ಜೊತೆಗಾರಳ್ ಬಳಿಯಿಲ್ಲವಾವೊರುವಳೂ| ಸಾಕ್ಷಿಂಗಳಾಗಿರ್ಪ ವಿ
ಶ್ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್, ತಾವೊರ್ವರೇ ಇರ್ವರೇ?
ವಿಶ್ಪತಿ = ಒಂದು ಬುಡಕಟ್ಟಿನ ಮುಖ್ಯಸ್ಥ
ಸಾಮರ್ಥ್ಯವಿಲ್ಲದೆ ಅಯೋಧ್ಯೆಯಿಂದ ಲಂಕೆವರೆಗೆ ಬರುವರೆ? ಎದುರಾಳಿಯ ಬಗೆಗೆ ಇಷ್ಟನ್ನೂ ತಿಳಿದುಕೊಳ್ಳದೇಹೋದದ್ದರಿಂದ ರಾವಣನ ಅದೆಷ್ಟೋ ಸೇನಾಪತಿಗಳು ಯುದ್ಧದಲ್ಲಿ ಮಡಿದರು.
ಧೃತಿಯಿರ್ದಲ್ತೆಲಯೋಧ್ಯೆಯಿಂ ಕ್ರಮಿಪನೇಂ| ಲಂಕಾಪುರೀ ಹಾದಿಯಂ
ನುತಿಪಾತ್ರನ್ ಕಪಿಸೇನೆಯಂ ನೆರೆಸಿದಾ| ಶ್ರೀರಾಮ ತಾ ಗಟ್ಟಿಗಂ
ಮತಿಗಿಂತು ಸ್ಫುರಿಸಿರ್ದೊಡಂ ಮಡಿವರೇಂ| ಸಾಹಸ್ರದೊಳ್ ವಾಹಿನೀ-
ಪತಿಗಳ್! ಸೀತೆಗದೆಷ್ಟು ಮಂದಿ ಗಣಿಸಲ್, ತಾವೊರ್ವರೇ ಇರ್ವರೇ?
ವಾಹಿನೀಪತಿಗಳ್ = Commanders, Generals
ರಂಧ್ರಾನ್ವೇಷಣೆಯಂ ಪ್ರಸಾದಪದದೊಳ್ ನಾ ಮಾಡಲೇಂ ಹಾಸ್ಯಕೆಂ ::
ಮಡಿದ ವಾಹಿನೀಪತಿಗಳಿಗೂ ಸೀತೆಗೂ ಸಂಬಂಧ ಸ್ಫುಟವಾಗಿಲ್ಲ. ಯಾಕೆಂದರೆ, ಮಡಿದವರು ರಾವಣನ ಸೇನಾಪತಿಗಳಲ್ಲವೆ? ಅವರು ಸೀತೆಗಾಗಿಯಲ್ಲ, ರಾವಣ / ಲಂಕೆಗಾಗಿ ಸತ್ತರಲ್ಲವೇ?
ರಾಮ ಮತ್ತವನ ಸೇನೆ ಅಯೋಧ್ಯೆಯಿಂದ ಬರಲಿಲ್ಲ – ಕಿಷ್ಕಿಂದೆಯಿಂದ ಬಂದರು. ರಾಮ ಅಯೋಧ್ಯೆಯಿಂದ ಹೊರಟು ೧೩+ ವರ್ಷವಾಗಿತ್ತು
🙂
ಎದುರಾಳಿಯ ಇಂತಿಷ್ಟು ಮಂದಿಯನ್ನು ಸದೆಬಡಿದೆವು ಎಂಬ ಅಂಕಿಅಂಶ ಸಂಗ್ರಹಿಸುವುದು ಅಗತ್ಯವಲ್ಲವೆ?
ಸರಿ. ಇದನ್ನು ಒಪ್ಪಿದೆ. ಇನ್ನೊಂದು? 🙂
ನಾನು ಹೇಳಿರುವುದು ‘ಕಪಿಸೇನೆ’. ‘ರಾಮಸೇನೆ’ಯಲ್ಲ.
ಎಲ್ಲರ ಗಮನಕ್ಕೆ,
ಪ್ರಸಾದರ ವೃತ್ತನಿರ್ವಾಹಪಾರಮ್ಯ ಮುದಾವಹ. ಸಮಸ್ಯಾಪೂರಣದಲ್ಲಿಯೂ ಪ್ರತಿಕ್ರಿಯಾಪ್ರಕ್ರಿಯೆಯಲ್ಲಿಯೂ ಅವರು ಎಲ್ಲರನ್ನು ರಂಜಿಸುವ ಮತ್ತು ಪದ್ಯಪಾನಕ್ಕೆ ಸೊಗಸಾದ (ಉಪ್ಪು-ಖಾರ ಜೋರಾಗಿರುವ) ಉಪದಂಶಗಳನ್ನೊದಗಿಸುವ ಸ್ವಾಗತಾರ್ಹಕಾರ್ಯದ ಮೂಲಕ ಪ್ರಶಂಸನೀಯರಾಗಿದ್ದಾರೆ.
ಪ್ರಸಾದು, ಇದೀಗ ಸದ್ಯದ ಪದ್ಯದಲ್ಲಿ ಲಂಕಾಪುರೀಮಾರ್ಗಮಂ ಎಂದು ಸವರಿಸಿದರೆ ಅರಿಸಮಾಸಸಿಂಹಿಕೆಯಿಂದ ನಿಮ್ಮ ಪದ್ಯಪಾವಮಾನಿಯು ಪಾರಾಗುತ್ತಾನೆ:-)
ಕೃತಜ್ಞತೆಗಳು.
ನಿಮ್ಮ ಪಾಯಿಂಟ್ ಈಗ ಅರ್ಥವಾಯಿತು ರಾಮ್. Ravana was not Rama’s target till Seeta was abducted. And the abduction happened in Kishkinda, not in Ayodhya. ಸರಿಪಡಿಸಿದ ಮೊದಲಸಾಲು:
ಧೃತಿಯಿಂ ಲಂಕೆಯ ಹಾದಿಯಂ ಕ್ರಮಿಸಿಹನ್| ಕಿಷ್ಕಿಂದೆಯಿಂ ರಾಮ ತಾನ್
ತ್ರೇತಾಯುಗದ ಸೀತೆ ದ್ವಾಪರದ ದ್ರೌಪದಿಗೆ ಮಾದರಿಯೆಂದಾದರೆ, arithmetics 1:5 ಆಯಿತು. ಒಂದೊಮ್ಮೆ ವಾಲ್ಮೀಕಿಗಳು ಅವಳನ್ನು ರಾವಣನಿಗೆ ಕಟ್ಟಿದ್ದರೆ, ವ್ಯಾಸರು ದ್ರೌಪದಿಗೆ 50 ವರಗಳನ್ನು ಹುಡುಕಬೇಕಿತ್ತು!
ಸಿತೆಯಂ ರಾವಣಗೀವನೇಂ ಕವಿವರಂ? ತಾವೆಂಬರಾಗಳ್ ಜನರ್
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್, ತಾವೊರ್ವರೇ ಇರ್ವರೇ?
ದ್ಯುತಿಮಂತರ್ ಗಡ ಪತ್ತು ಮಂದಿಯಿರುವರ್| ಮೈಗಂತೆ ಮುಖ್ಯಂ ಶಿರಂ
ಗತಿಯೆಂತಿರ್ಪುದೊ ಕೃಷ್ಣೆ ಮುಂದಿದನೆ ತಾ| ಪ್ರಾಮಾಣ್ಯಮೆಂದಿರ್ದೊಡಂ
ಸಿತೆ = ಸೀತೆ
ಪತಿನೇತ್ರೋತ್ಪಲಫುಲ್ಲನಂಗೊಳಿಸುಗುಂ ವಾಮಾಸ್ಯಚಂದ್ರಂ ನಖ
ಕ್ಷತಿಯಿಂದೊಪ್ಪುತೆ ತಾಂ ಕಲಾಧರರೆನುತ್ತುರ್ವುಂ ಕುಚದ್ವಂದ್ವಮುಂ
ಕ್ಷಿತಿಭಾರಂ ತಮರಿತ್ತ ಪೆರ್ಸಿರಿಯೆನಲ್ಕಿರ್ಕುಂ ಸ್ಥಿಕಂಗಳ್ ನಿಶಾ
ಪತಿಗಳ್ ಸೀತೆಗೆನಿತ್ತು? ಮಂದಿ ಗಣಿಸಲ್ಕೇನೊರ್ವರೇಯೀರ್ವರೇ?
ಫುಲ್ಲನ- ಅರಳುವಿಕೆ
ಕಲಾಧರ- ಚಂದ್ರ/ ಕಲೆಯುಳ್ಳವನು
ಉರ್ವು- ಹಿಗ್ಗು/ಬೀಗು
ತಮರ್- ತವರು, ತಾಯ್ವನೆ
ಸ್ಥಿಕ- ನಿತಂಬ
ಸಮಸ್ಯಾವಾಕ್ಯದಲ್ಲಿ ಒಂದು ಸಣ್ಣ ಬದಲಾವಣೆ ಮಾಡಿದ್ದೇನೆ. ಎಷ್ತು ಜಾಗದಲ್ಲಿ ಎನಿತ್ತು ಸೂಕ್ತವೆನಿಸಿತು. ಕ್ಷಮೆಯಿರಲಿ
ತುಂಬ ಒಳ್ಳೆಯ ಪ್ರಾಬಂಧಿಕಶೈಲಿ ಮತ್ತು ಕಲ್ಪನೆ. ಪದ್ಯಪಾನದಲ್ಲಿ ಮೊತ್ತಮೊದಲ ಬಾರಿಗೆ ಇಂಥ ಪದ್ಯವು ಬಂದಿದೆ. ಧನ್ಯವಾದ, ಅಭಿನಂದನೆಗಳು! ಮಡಿವಂತರು ಮಾತ್ರ ಇದೇನಿದು XXX ರಚನೆಯೆಂದು ಮೂಗುಮುರಿದಾರು:-) ಆದರೆ ಮೂರನೆಪಾದದ ತಾತ್ಪರ್ಯವು ಸ್ಪಷ್ಟವಾಗಲಿಲ್ಲ. ಇಲ್ಲಿಯೂ ಚಂದ್ರನ ಪ್ರಸಕ್ತಿ ಬರಬೇಕಲ್ಲವೇ! ಆದರೆ ಅದು ನನಗೆ ಕಾಣುತ್ತಿಲ್ಲ. ದಯಮಾಡಿ ವಿವರಿಸಿರಿ.
ಧನ್ಯವಾದಗಳು ಗಣೇಶರೆ.
ಸೀತೆಯ ತಾಯಿ ಭೂಮಿಯಲ್ಲವೆ. ಅವಳ ತಾಯಿಮನೆಯಿಂದ ತಂದ ಆಸ್ತಿಯೋ ಎಂಬಂತೆ ಭೂಮಿ ಭಾರವನ್ನೆ ಹೊತ್ತ ಸೀತೆಯ ನಿತಂಬಗಳು ಇನ್ನೆರಡು ಚಂದ್ರರು ಎಂದು ಕಲ್ಪಿಸಿದ್ದೇನೆ. ಕೊಂಚಮಟ್ಟಿಗೆ ಇಲ್ಲಿ ಸೌಂದರ್ಯಲಹರಿಯ 81ನೆ ಶ್ಲೋಕದ ಭಾವ ಬಿಂಬಿತವಾಗಿದೆ (ಗುರುತ್ವಮ್ ವಿಸ್ತಾರಮ್—)
ಅಬ್ಬ! ಇಷ್ಟು xxx ನಡುವೆಯೂ ಇದು ‘ಚಂದ್ರಪ್ರಸಕ್ತ’ ಎಂಬಷ್ಟು ನನಗೂ ಬೋಧೆಯಾಗಿತ್ತು. ಧನ್ಯೋಸ್ಮಿ. I too was not able to fully connect though.
ಗೊಂದಲವೇಕೆಂದು ಮೂರನೆಯ ಪಾದವನ್ನು ಬದಲಿಸಿದ್ದೇನೆ.
ಪತಿನೇತ್ರೋತ್ಪಲಫುಲ್ಲನಂಗೊಳಿಸುಗುಂ ವಾಮಾಸ್ಯಚಂದ್ರಂ ನಖ
ಕ್ಷತಿಯಿಂದೊಪ್ಪುತೆ ತಾಂ ಕಲಾಧರರೆನುತ್ತುರ್ವುಂ ಕುಚದ್ವಂದ್ವಮುಂ
ಪತಿಹಸ್ತಾಂಬುದಪೀಡಿತೇಂದುಯುಗಳಂ ಬಿಂಬಸ್ಥಿಕಂಗಳ್ ನಿಶಾ-
ಪತಿಗಳ್ ಸೀತೆಗೆನಿತ್ತು? ಮಂದಿ ಗಣಿಸಲ್ಕೇನೊರ್ವರೇಯೀರ್ವರೇ?
ಕನ್ನಡದ ಸೊಗಡು ಹೆಚ್ಚಿರಲೆಂದರೆ ಮೂರನೆಯ ಪಾದವನ್ನು ಹೀಗೂ ಹಾಕಬಹುದು
ರತಿಯೊಳ್ ನಲ್ಲನ ಕೈಮುಗಿಲ್ ತುರುಗಮಳ್ದಿಂಗಳ್ ಸ್ಥಿಕಂಗಳ್ ನಿಶಾ
ಆಹಾ! ಬಹುಸೊಗಸಾದ, ಚೇತೋಹಾರಿಯಾದ ಕಲ್ಪನೆ. ಮೆಚ್ಚಿದೆ ಮೆಚ್ಚಿದೆ!
ಮಂಜುನಾಥರೆ ಥ್ಯಾಂಕ್ಸ್
ಕೊಳ್ಳೇಗಾಲರೆ,
ನೀವು ‘ಮೆಚ್ಚಿದೆ, ಮೆಚ್ಚಿದೆ’ ಎಂದು ಹೇಳಿರುವುದರಲ್ಲಿ ಆಶ್ಚರ್ಯವೇನಿಲ್ಲ. http://padyapaana.com/?p=343#comments ಪುಟದ serial No.10ರಲ್ಲಿನ ತಮ್ಮ ಮೂರನೆಯ ಪದ್ಯವೂ ಇದೇ ಜಾಡಿನಲ್ಲಿದೆ. ಇಂತೆಯೇ ಚೆನ್ನಾಗಿದೆ 😉
ಹೌಫು ಪ್ರಸಾದರೆ. ಮಂಜುನಾಥರೆ ಪೂರಣಗಳನ್ನು ಓದಿದೆ. ಸೊಗಸಾಗಿವೆ. ನಿರರ್ಗಳಾವಾಗಿ ಓಡುತ್ತವೆ. ಆ ಮೂರನೆಯದು ಸರ್ವಜ್ಞನ ಕೆಲವು ತ್ರಿಪದಿಗಳನ್ನ್ನು ನೆನಪಿಸುತ್ತವೆ
ಮಾಳಿಗೆಯ ಮನೆ ಲೇಸು ಗೂಳಿಯಾ ಪಶು ಲೇಸು
ಈಳೆಯಾ ಹಿತ್ತಲಿರ ಲೇಸು- ಪತಿವ್ರತೆಯ
ಬಾಳು ಲೇಸೆಂದ ಸರ್ವಜ್ಞ್ನ
ಟೈಪೋಸ್ಗೆ ಕ್ಷಮೆಯಿರಲಿ
ಯಾವುದು? ‘ಸ್ವರ್ಗಕ್ಕೆ ಕಿಚ್ಚುಹಚ್ಚೆಂದ ಸರ್ವಜ್ಞ’, ‘ಎಲೆಮೆಲಲು ಶುದ್ಧ ಸರ್ವಜ್ಞ’ ಎಂಬಂಥವೆ? 😉
ಪ್ರಸಾದು,
ಬಾಲರೈ ನಾವೆಮ್ಮ ಕನಸಿನ
ಕಾಲು ಚಿಕ್ಕದು ಮುಂದೆ ಸಾಗದು
ವಾಲು ಪೋಸ್ಟರಿನಾಚೆ ’ಹಿರಿಯ’ರ ಚಿತ್ರ ಮಂದಿರದ
ಮೇಲುಗಾಣಿನ ಬಣ್ಣನೆಯನಿನಿ
ಗಾಲ ಪಳಗಿದ ಚೆಲುವುಗಬ್ಬಕೆ
ಹೋಲಿಸುವರೇ ಮಿತ್ರ ಸಾಕೈ ನಾಚಿಸದಿರೆನ್ನಂ 🙂
೧) ಆ ಚಿಕ್ಕ ಕಾಲನ್ನು compensate ಮಾಡೋಕೆ ಬಾಲ ಇದೆಯಲ್ಲ! (“ಬಾಲರೈ ನಾವೆಮ್ಮ…”)
೨) ಇದೇನು, ಮೂರ್ತಿಗಳಿಗೆ ‘A’ certificate ಕೊಟ್ಟುಬಿಟ್ಟಿರಲ್ಲ!
ಸ್ವಾಮೀ, ನಾನಲ್ಲ ನಾನಲ್ಲ. ಅದನ್ನು ಗಣೇಶರೇ ಕೊಟ್ಟಾಯಿತು. ನಾನು ಕೇವಲ ನೋಡುಗರಷ್ಟೇ 🙂
ಸರಿ ಹೋಯ್ತು. ನನ್ನ ಹತ್ತಾರು ಪದ್ಯಗಳಿದ್ದರು ಇದೊಂದರಿಂದ ನನ್ನ ಹೆಸರು ಕೆಡಿಸಿಸರಿಪಡಿಸಿಕೊಳ್ಳಬೇಕು.ಪೂರ್ವಕವಿಗಳ ಮೇಲ್ಪಙ್ತಿಯ ಮೇರೆಗೆ ರಚಿಸಿದ್ದಷ್ಟೆ. ಹೇಗಾದರು ಮಾಡಿ ಸರಿಪಡಿಸಿಕೊಳ್ಳಬೇಕು. 🙂
ನೊಣ ತಿಂದು ಜಾತಿ ಕೆಡಿಸಿಕೊಳ್ಳುವುದು ಎಂದರೆ ಇದೇಯ.
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ-
ನತಿ ಸ್ವಾರಸ್ಯಮಯಂ ಸಮಸ್ಯೆಯಿದು ದಲ್ ಪೂರ್ಣಾಯಿಸಲ್ ನೀಡಿದಾ |
ಮತಿವಂತರ್ ಬಹಳಷ್ಟು ಪೂರಣಗಳಂ ನೀಡಿರ್ದಪರ್ ಚೆಲ್ವಿದಾ-
ಯ್ತತಿಶಯ ಬಂಧುರಛಂದದಾಯ್ಕೆಯು ಗಡಾ ಮತ್ತೇಭವಿಕ್ರೀಡಿತಂ ||
clap clap
ಒಳ್ಳೆಯ ವಿನೂತನಪರಿಹಾರ!!ಹಳಗನ್ನಡದ ಹದದ ದೃಷ್ಟಿಯಿಂದ ಕೆಲವೊಂದು ಸವರಣೆಗಳು:
ಪೂರಯ್ಸಲೆಂದಿತ್ತಿರಲ್, ಮತಿಮಂತರ್ ಬಹುಪೂರಣಂಗಳನೆ ತಾಂ,
ಚೆಲ್ವಿದಾಯ್ತತಿಮಾತ್ರಂ ಹಿತವೃತ್ತಮಾದುದಲ್ತೆ ಬಗೆಯಲ್ ….
ಸಲಹೆಗಳಿಗಾಗಿ ಧನ್ಯವಾದಗಳು. ಪೂರಣವು ಬಿಗಿಯಾಗಿಲ್ಲವೆಂದು ನನಗೂ ಅನಿಸಿತ್ತು. ಆದರೆ ಛಂದೋಬದ್ಧವಾಗಿರುವುದೇ ಎಂಬ ಸಂದೇಹವಿತ್ತು.
ಮತಿವಂತರ್, ಮಿಗೆ ಪ್ರಾಜ್ಞರೀ ಕವಿಗಳೈ| ಆಲಸ್ಯದಿಂದಿರ್ಪರೇಂ
ಸತಿಯುಂ ದೂಷಿತಳೆನ್ನೆ ನಾಲಗೆಯು ತಾನ್| ಆಧಾರರಾಹಿತ್ಯದಿಂ
ಚ್ಯುತಮಾಯ್ತೇ ನಿಜಮಾತೆನಾಮಮೆನುತುಂ| ಧಾವಂತ ತಾವ್‍ಗೊಳ್ಳುವರ್
ಗತಿಯಂ ಕಾಣಿಪರಲ್ತೆ ಶಾಸ್ತಿವಚದಿಂ| ಮಾತಾಡದಂತಂತವರ್
???
ಈ ಪರಿಯಗಿ ಸಮಸ್ಯಾಪರಿಹಾರವನ್ನು ಕೊಟ್ಟವರನ್ನು ‘ಮತಿವಂತರ್’ ಎಂದಿರುವಿರಿ. ನನ್ನ ಪ್ರತಿಕ್ರಿಯೆ ಏನೆಂದರೆ:
ಇವರು ಮತಿವಂತರ್ ಮಾತ್ರರಲ್ಲ, ಪ್ರಾಜ್ಞರೂ ಸಹ. ಸೀತೆಯು ದೂಷಿತಳೆಂದು ಶ್ವಾನಜಿಹ್ವಗಳು ಆಧಾರರಹಿತವಾಗಿ ಬಳುಕಿರಲು, ಇವರು ಆಲಸ್ಯದಿಂದಿರದೆ, ಧಾವಂತಗೊಂಡು (ಸೀತಾ)ಮಾತೆಗಾದ ಅವಮಾನವನ್ನು ಖಂಡಿಸಲು ತಕ್ಷಣವೇ ಉದ್ಯುಕ್ತರಾಗಿ ಆ ದುಷ್ಟರ ಮೇಲೆ ವಿಧವಿಧವಾಗ್ಬಾಣಗಳನ್ನು ಎಸೆದಿದ್ದಾರೆ.
ಶಾಸ್ತಿವಚದಿಂ = ತಕ್ಕ ಶಾಸ್ತಿಯ ಮಾತುಗಳಿಂದ
ಮಾತಾಡದಂತಂತವರ್ = ಮಾತಾಡದಂತೆ + ಅಂತು + ಅವರ್ (ದುಷ್ಟರ್)
Thanks for your explanation
ಅತಿಯಾಯ್ತೈ ಕಹಿಯೋರ್ವ ದಂಪತಿಯರೊಳ್ ಸೀತಾಪರಿತ್ಯಾಗದಿಂ
ಪತಿಯುಂ ರಾಮನ ರಾಜಧರ್ಮಮದೆನಲ್ ತಪ್ಪೆಂದಳಾಪತ್ನಿ ತಾಂ
ಕತದಿಂ ಪೇಳ್ದಳು – “ಪೋಗಿ, ನೀಂ ಮುನಿಯಲೇಂ, ಕೊಂಡಾಟಮಂ ಗೈವ ಸ –
ತ್ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇಯಿರ್ವರೇ”
[ಕತ = ದುಃಖ, ವ್ಯಥೆ]
ಆಹ!! ಕಾಂಚನ ಅವರ ಈ ಪರಿಹಾರವು ಸರ್ವವಿಧದಿಂದಲೂ ಅಭಿರಾಮ!! ನಿಜಕ್ಕೂ ಇದು ಕವಿತಾಕಾಂಚನ, ಸಮಸ್ಯಾಪರಿಹಾರಶಾರದಾಮಂಜುಮಂಜೀರಶಿಂಜಾನಸುವರ್ಣಕಾಂತಿಕಾಂತಿತ!
Ganesh Sir, Thank you very much for your kind words.
ಈ ಐಡಿಯಾ ಹೆಂಗೆ 😉
ದ್ಯುತಿಮನ್ಮಂಡಪದೊಳ್ ಜಸಂಬಡೆದ ಜಾದೂಗಾರ ನಾನಾಚಮ-
ತ್ಕೃತಿಯಿಂ ಮೋದಮನುರ್ಕಿಸುತ್ತೆ ಬಳಿಕಾ ಗೂಡೊಳ್ಗೆ ನಲ್ಜೋಡಿಯ |
ಪತಿಯಂ ಪೊಕ್ಕಿಸಿ ಪೆಣ್ಣಿಗಂ ನಟಿಸುತಾ ಮಂತ್ರಂಗಳಂ ಪೇಳ್ದ ನಿನ್
ಪತಿಗಳ್ see ತೆಗದೆಷ್ಟು ಮಂದಿ ? ಗಣಿಸಲ್ಕ್ಲೇನೊರ್ವರೇಯಿರ್ವರೇ ||
ಜಾದೂಗಾರ ದಂಪತಿಗಳನ್ನು ವೇದಿಕೆಗೆ ಕರೆದು, ಗಂಡನನ್ನು ಗೂಡಿನ ( ಪೆಟ್ಟಿಗೆಯ ) ಒಳಗೆ ಕಳುಹಿ, ತನ್ನ ಜಾದೂ-ಮಂತ್ರಗಳನ್ನು ಪಠಿಸಿ, ಪೆಟ್ಟಿಗೆ ತೆರೆದಾಗ ಅಲ್ಲಿ ಇಬ್ಬರು ಕಾಣುವಂತೆ ಮಾಡಿ, ಆ ಪತ್ನಿಗೆ ಹೇಳುವ ಮಾತು. ಪೆಟ್ಟಿಗೆ ತೆಗದು ( ತೆಗೆದು ಎಂಬರ್ಥದಲ್ಲಿ ಆದೀತೇ ?) ನೋಡು ( see ). ನಿನ್ನ ಪತಿಗಳೆಷ್ಟು ಮಂದಿ ?
ಹಾಸ್ಯಕ್ಕಾಗಿ ಮಾಡಿದ ಪೂರಣವಿದು. ಎಲ್ಲೆ ಮೀರಿದಂತಾದರೆ ಕ್ಷಮೆಯಿರಲಿ.
ಆಹಾ! ಎಂಥ ಲಘುವಿನೋದಕ್ಕೆ ಸೊಗಸಾಗುವ ಅಭಿನವ-ಅಭಿರಾಮಪರಿಹಾರ!! ಈ ಕಾರಣದಿಂದಲೇ ಇಲ್ಲಿಯ ಭಾಷಿಕಲೋಪಗಳು ಗೌಣವಾಗುತ್ತವೆ:-)
ಧನ್ಯವಾದಗಳು ಸರ್ 🙂 ನಿಮ್ಮೀ ಮೆಚ್ಚುಗೆ ಧೈರ್ಯೋತ್ಸಾಹಗಳನ್ನು ಹೆಚ್ಚಿಸಿದೆ. ಏನೇ ಲೋಪದೋಷಗಳಿದ್ದರೂ ನಿರ್ದಾಕ್ಷಿಣ್ಯವಾಗಿ ತಿಳಿಸಿರೆಂದು ನನ್ನ ನಮ್ರ ನಿವೇದನೆ.
ಸೊಗಸಾಗಿದೆ
thank you 🙂
ಧನ್ಯವಾದಗಳು ಸರ್,
“ಪದ್ಯಪಾನ”ದಲ್ಲಿ “see double” ಮಾಡಿರುವ ನಿಮ್ಮ “ಜಾದು” ಬಹಳ ಇಷ್ಟವಾಯಿತು.
Thank you madam: -)
ಅತಿಯಾಗಲ್ ಕಿವಿಯಾರೆ ಕಂಡಚಲುವನ್ ಬೇಡಿತ್ತು ಕಣ್ಣು ಕಣಾ
ಕತದೀ ಕಾಯವ ಸೀತಯಕ್ಷಿ ಕಿರಣ ಕ್ಕೊಡ್ಡಾದರೂ ಬರುವೆನ್
ಸತಿಯರ್ ಸಾವಿರ ವಿದ್ದರೂ ಸಕಲ ವೀಡಾಡಲ್ ಕಣಾ ಬಂದ ಭೂ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
(2nd line ಕತ – ತುಕ್ಕು)
ವೀಣಾ,
ಛಂದೋದೋಷಗಳಿವೆ. ನನಗೆ ತಿಳಿದಂತೆ ತಿದ್ದಿದ್ದೇನೆ.
ಇತಿವೃತ್ತಂ ಕಿವಿಯೊಳ್ ಕನಲ್ದು, ಚೆಲುವಂ| ತಾ ಬೇಡಿ ಕಾಡಿತ್ತು ಕಣ್
ಸತಿಯರ್ ಸಾಸಿರಮಿದ್ದೊಡಂ ಭರಿಸರೈ| ಈಡಾಡಿ ಸೇದಿರ್ದೊಡಾ
ಚ್ಯುತಕಾಯಂ ಖನಿಸೀತೆಯಕ್ಷಿಕರದಿಂ| ದೇದೀಪ್ಯಮೆಂತೆಂದ ಭೂ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಕತೆಯೊಳ್ ಕಾಣದ ಕೇಳದೀ ಪದಗಳಂ ಸಾರಸ್ವತರ್ ಲೀಲೆಯಿಂ
ದತಿಯುತ್ಸಾಹದೆ ಪೂರಣಂಗಳೊರೆವಾ ಸಾಮಗ್ರಿಯನ್ನಾಗಿಸಲ್
ಪ್ರತಿಯೊಂದಿರ್ಪುದು ಕಲ್ಪನೋತ್ಕಟತೆಯಾ ಪೂಮಾಲೆ ಸೊಲ್ವೆಣ್ಣಿಗೆ
ನನ್ನ ಪದ್ಯಕ್ಕೆ ಸರಿಯಾದ ರೂಪವನ್ನು ಕೊಟ್ಟಿ ಸವರಿಸಿದ್ದಕ್ಕೆ ಅಣ್ಣ ಸೋಮನಿಗೆ ಧನ್ಯವಾದಗಳು
ಒಳ್ಳೆಯ ಪೂರಣ. ಮತ್ತೂ ಹಳಗನ್ನಡದ ಹದ ತುಂಬಲು ಒಂದೆರಡು ಸವರಣೆ:
ಸಾಮಗ್ರಿಯಂ ಕಲ್ಪಿಸಲ್, ಸೊಲ್ವೆಣ್ಣಿಗಂ.
ತುಂಬ ಚೆಲುವಾದ ಭಾಷೆ, ಭಾವ. ವಿಶೇಷತಃ ಸೊಲ್ವೆಣ್ಣು ಎಂಬ ಪದಪ್ರಯೋಗ ಗಮನಾರ್ಹ.
ಪ್ರಶ್ನೋತ್ತರ ರೀತಿಯಿಂದ ಪರಿಹಾರ.
ಕಿತವರ್ ದ್ರೌಪದಿಗಾರದಾರ್ಗೆ ದಹನಂ ತಂಪಿತ್ತುದೈ ಸಾಕ್ಷಿವೋಲ್?
ಸ್ಮೃತಕೇನೇಸೆನಲರ್ಥವೇನ್? ಜನಗಣಕ್ಕೀರಕ್ಕರಂ ಶಬ್ದವೇನ್ ? |
ಮತಿಯೇತಕ್ಕೆಲೆ? ದೇವರೇಸು? ಹಿತವರ್ ಮಕ್ಕಳ್ಗದೇಸೀರ್ಪರೈ?
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೋರ್ವರೇ ಇರ್ವರೇ ||
ಅಮೋಘವಾದ ಪೂರಣ.
ಶ್ರೀ ರಾಜಗೋಪಾಲರೇ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಮೆಚ್ಚಿದ್ದಕ್ಕೆ ಸವಿನೆನಹುಗಳು.
ಒಳ್ಳೆಯ ಪೂರಣ. ಇದು ಕಡೆಯ ತಂತ್ರವೆಂಬಂತೆ ಬಳಸುವ ಬ್ರಹ್ಮಾಸ್ತ್ರ;-)
ಅಂದಹಾಗೆ,ಇದುವರೆಗೂ ನನಗೆ ತಮ್ಮ ಪರಿಚಯವಾಗಲಿಲ್ಲ…ಈ ಮಾಧ್ಯಮವಂತೂ ತೀರ ಅಸಂಮುಖವಾದುದರಿಂದ ಅನ್ಯಥಾ ತಿಳಿಯದೆ ನನ್ನ ಕುತೂಹಲವನ್ನು ತಣಿಸುವಿರಾ?
ರಾ.ಗಣೇಶರಿಗೆ ನಮಸ್ಕಾರ.
ಎಲ್ಲಾ ಪದ್ಯಪಾನಿಗಳಿಗೂ ಸಂಸ್ಮರಣೆಗಳು.
ಶತಾವಧಾನದಲ್ಲಿ “ವಿಘ್ನೇಶ್ ಭಟ್ಟ” ಎಂದು ಪೃಚ್ಛಕಸಮುದಾಯದಲ್ಲಿ ಪರಿಚಯಿಸಲ್ಪಟ್ಟವನೇ ನಾನು. ಯಲ್ಲಾಪುರ ಸೀಮೆಯವನು. ಯಲ್ಲಾಪುರದ ಪ್ರಾಂತಗಳಲ್ಲಿ ಹಿಂದೆ ತಾವು ನಡೆಸಿದ ಸಂಸ್ಕೃತ ಅಷ್ಟಾವಧಾನಗಳಲ್ಲಿ ಪೃಚ್ಛಕನಾಗಿದ್ದೆನು. ಸಂಸ್ಕೃತದಲ್ಲಿ ಶ್ಲೋಕಗಳನ್ನು ಗುಣಿಸುವ ಹವ್ಯಾಸವಿದೆ. ಇತ್ತಿತ್ತಲಾಗಿ ಪದ್ಯಪಾನದ ಪರಿಚಯವಾದಮೇಲೆ ಈ ಅಂಕಣದಲ್ಲಿ ಕನ್ನಡದಲ್ಲಿ “ಚಟ” ತೀರಿಸಿಕೊಳ್ಳ ತೊಡಗಿದ್ದೇನೆ. ರಾಜಶೇಖರ ಧೂಳಿ ಯವರ ಸಮೀಪವರ್ತಿ. (ಹಾರ್ದಿಕವಾಗಿ ಕೂಡ.) ಇಷ್ಟಕ್ಕೆ ನನ್ನ ನೆನಪು ತಮಗೆ ಆಗಿರಬೇಕೆಂದು ಕೊಳ್ಳುತ್ತೇನೆ. ಧನ್ಯವಾದಗಳು.
ಶ್ರೀವಿಘ್ನೇಶ್ವರ ಭಟ್ಟರಿಗೆ ನಮಸ್ಕಾರಗಳು. ಆಹಾ! ಅಂತೂ ನನ್ನ ಸಂದೇಹ ದಿಟವಾಯಿತು. ನೀವು ನನಗೆ ಪೂರ್ವಪರಿಚಿತರಾದ ಯಲ್ಲಾಪುರದವರೇ ಹೌದೆಂಬುದು ನನಗೆ ತುಂಬ ಹರ್ಷವಾಗಿದೆ. ನೀವೆಲ್ಲ ಪದ್ಯಪಾನದಲ್ಲಿ ಸಕ್ರಿಯವಾಗಿರುವುದು ಬಹುಮುದಾವಹ. ನಿಮ್ಮನ್ನು ನಾನು ಮರೆಯುವುದುಂಟೇ? ಒಂದೇ ಹೆಸರಿನ ಹಲವರಿರಬಹುದೆಂಬ ಶಂಕೆಯಿಂದ ಈ ಪ್ರಶ್ನೆಯುದಿಸಿತಷ್ಟೆ:-) ನೀವು ಸದಾ ಪದ್ಯಪಾನಕ್ಕೆ ಅನುಬದ್ಧರಾಗಿರಬೇಕೆಂದು ಬಿನ್ನಹ.
ಪೂರ್ವದಾ ಸಂಧಿರಾಗಮ
ಪೂರ್ವದೀ ತಾಣದೆ ಮೂಡಿದಕ್ಕರಗಡಲೊಳ್ |
ನೂರ್ವಡಿಸಿರ್ಕುಮಿದೆಂದಾ
ಶೀರ್ವದಿಸಲ್ಕೆ ತಾಯ್ ಸರಸತಿಯೆಮ್ಮಲ್ಲರಂ ||
ವಿತತಂ ದಂಡಕಕಾನೊಳಿರ್ದ ಮುನಿಗಳ್ ಕಾಣಲ್ಕೆ ಶ್ರೀರಾಮನಂ
ಸತತಂ ಪರ್ಣಕುಟೀರಕಾಗಮಿಸುವರ್ ಹರಿ ನೀನೆಯೆಂದೆನ್ನುತಽ | (ನೀನೆಯೆಂದೆನ್ನುತುಂ)
ಋತಮೀ ಹರಿಯೆಂಬ ಶಬ್ದಕಿಹುದೈ ನಾನಾರ್ಥಮದರಿಂದಲೇ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವನೇ? ಇರ್ವರೇ ||
ಛಂದಸ್ಸು ತುಂಬ ತಪ್ಪಾಗಿದೆ ರಜಗೋಪಾಲರೇ! ಸವರಿಸಿಕೊಳ್ಲಿರಿ
ನನಗೆ ತಿಳಿದ ಮಟ್ಟಿಗೆ ಸವರಿಸಿದ್ದೇನೆ. ಇದರಲ್ಲಿಯೂ ಏನಾದರೂ ಕು೦ದುಗಳಿದ್ದರೆ ದಯವಿಟ್ತು ತಿಳಿಸಿರಿ.
ವಿತತ೦ ದ೦ಡಕಕಾನೊಳಿರ್ದ ಮುನಿಗಳ್ ಕಾಣಲ್ಕೆ ಶ್ರೀರಾಮನ೦
ಸತತ೦ ಪರ್ಣಕುಟೀರಕೈದಿ ಹರಿಯೇ ನೀನೆಮ್ಮ ಕಾಯೆನ್ನುವರ್
ಋತಮೀ ಶಬ್ದಮದ೦ತು ಪೊ೦ದಿಹುದಲಾ ನಾನಾರ್ಥಮಾನೇಮದಿ೦
ಪತಿಗಳ್ ಸೀತೆಗದೆಷ್ಟು ಮ೦ದಿ ಗಣಿಸಲ್ಕೇನೊರ್ವನೇ ಇರ್ವರೇ ||
When Rama left for the forest, greatly pained that he was, Dasharatha stayed back in his palace.
The trees of the forests envied
1) the citizens of Ayodhya that walked a distance alongside Rama to see him off,
2) the mud they raised in their wake that also seemed to follow the Lord (per Kalidasa)
3) Guha who served as the Lord’s navigator across the river etc.
They tell Rama that as they are unable to walk alongside him, they have communicated among their fraternity (ಜಾತ್ಯರೊಳ್) through the medium of wind, that they shall take turns (ಪರ್ಯಾಯ) to keep Rama-seeta-Lakshmana cool.
ಸುತನೈದಲ್ ವನಕಂ, ಪಿತಂ ದಶರಥಂ| ತಾ ವಾಸದೊಳ್ನಿಂತೊಡೇಂ
ಶತದೋಪಾದಿ ಜನರ್ ಸುದೂರದನಕಂ| ಹಿಂಬಾಲಿಸುತ್ತಿರ್ದಿರಲ್
ಸಿತವರ್ಣಂ ತಿರುಗುತ್ತೆ ಭೂಕಣಗಳುಂ| ಭೂಭರ್ತನಂ ಸಾರಿರಲ್
ಗತಿಯಾರೆಂದೆನುತಾ ಸುಮಿತ್ರೆಯ ಸುತಂ| ಭ್ರಾತೃತ್ವಮಂ ತೋರಿರಲ್
ಹಿತ ತೋರ್ದನ್, ಗುಹನೆಂತೊ ಪುಣ್ಯಪುರುಷನ್| ಪಾರಂಗೆ (ದೇವಂಗೆ) ತಾ ನಾವಿಕಂ
ಹತಭಾಗ್ಯರ್ ಗಡ ಚಾಲ್ತಿಯಿಲ್ಲೆಮಗಿದೋ| ಸಂದೇಶಮಂ ಜಾತ್ಯರೊಳ್
ಹಿತನೀಡಲ್ ಕಳಿಸಿರ್ಪೆವಾವ್ ಪವನನೊಳ್| ಪರ್ಯಾಯದೆಂದಂ (ಪರ್ಯಾಯದೆ ಎಂದಂ) ವನ
ಸ್ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಪ್ರಸಾದು – ಚೆನ್ನಾಗಿದೆ. ಒಳ್ಳೆಯ ಭಾವನೆಗಳನ್ನು ಪದ್ಯ ರೂಪಕ್ಕಿಳಿಸಿದ್ದೀರ. ವನಸ್ಪತಿಯ ಬಗೆಗೆ ನಾನೂ ಕೊಂಚ ತಿಣುಕಾಡಿದೆ. ‘ಮಂದಿ’ ಗೆ ಸರಿಹೊಂದಿಸಲಾರದೆ ಬಿಟ್ಟೆ.
ಧಯ್ನವಾದ ರಾಮ್. Next time ಅಂಥ faulty piece ಯಾವುದಾದರೂ ಇದ್ದರೆ ನನ್ನ ಕಡೆಗೆ ಎಸೆಯಿರಿ. ನಾನು ಹೊಲಿಯುತ್ತೇನೆ 😉
ಸರಿಹೊಂದಾಣಿಕೆ ‘ಮಂದಿ’ಗಾಗದಿರಲೇನ್ ನಮ್ಮಂಥ ಕಾಣ್ ಮಂದಿಯನ್|
ಅದೊ, ‘ಕಾಣ್’ ಶಬ್ದದೊಳಂಗೆ ಭಂಡ, ಣಡಯೋಃ ಗೈಬೇಡ ಭೇದಂ ವೃಥಾ||
ಅಯ್ಯೋ, ಆದಿಪ್ರಾಸವನ್ನೇ ಮರೆತೆ. ಮೊದಲ ಪದ ‘ಪದ’ ಎಂದಾಗಬೇಕು. ಪದಹೊಂದಾಣಿಕೆ…..
ಹಲಕಾಲಂ ಕಳೆದಿಂದು ಬಂದೆನಿದೆಕೊಳ್ ಪದ್ಯಾಂಗಣಾರಾಮದೊಳ್
ಬಲವದ್ವೇದನೆಯಾದುದೈ ಬಹುದಿನಂ ಕೈಗಟ್ಟಿದಂತಾನಿರಲ್
ಬಳಿಕೀ ನೋಳ್ಪೊಡೆ ಪದ್ಯಪಾನ ವನದೊಳ್ಗೇನೈ ವಸಂತೋದಯಂ!
ಎಲರೊಳ್ ಕೋಕಿಲಕೂಜನಂ ಕವಿಕಲಾಪೋತ್ಸಾಹ ಸಂಸೇಚನಂ
ಮನದೊಳ್ ಕೂರ್ಮೆಯ ಭಾವದೊಳ್ ಕನಸಿನೊಳ್ ಜಾಗೃತ್ ಸುಸಂಷುಪ್ತಿಯೊಳ್
ಮನವಂದಳ್ ರಘುರಾಮನೇ ಪತಿಯೆನಲ್ ದಾವಾಗ್ನಿ ಸಂಶೋಧಿತಳ್
ಕೊನೆಗೇನೈ ಕಿಡಿಗೇಡಿಕಾರತನಮೀ ನಾಮಕ್ಕಮೀ ಚೋದ್ಯಮೇಂ?
“ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?”
ಸತಿಯಾ ಸೀತೆಯ ಪೋಲ್ಗುಮೆಂದು ಮಗುಗಳ್ಗಿತ್ತರ್ ಪೆಸರ್ ಪೆತ್ತವರ್
ಪತಿಗಳ್ ಕಾಂಬರೆ ರಾಘವೇಶ್ವರವೆಸರ್ವೊತ್ತರ್ ಪೆಸರ್ಗಾದೊಡಂ
ಗತಿಯೊಳ್ ದಕ್ಕಿರೆ ರಾಮನೋ ಹನುಮನೋ ಮೇಣ್ ರಂಗನೋ ಸಿಂಗನೋ
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
1) ‘ಪೊತ್ತರ್ ಪೆಸರ್ಗಾದೊಡಂ’, ‘ಸುಸಂಷುಪ್ತಿಯಂ’ – Beautiful
2) ‘ಮೇಣ್ ರಂಗನೋ’ ಎಂದು ನನ್ನನ್ನೇಕೆ ಸೇರಿಸಿದಿರಿ ಸ್ವಾಮಿ, ಯಾದಿಯಲ್ಲಿ?
3) ಎಲ್ಲಿಯೂ ಲೇಶವೂ ಅರ್ಥಕ್ಲೇಶವಿಲ್ಲ. ಹೀಗೆ ಬರೆಯಲು ಕಲಿಯಬೇಕು.
4) For the N’th time ನಿಮಗೆ ನಲ್ಬರವು. ಮತ್ತೆ ಯಾವಾಗ ಮಾಯವಾಗುವಿರಿ?
ನಿಮ್ಮೊಬ್ಬರನ್ನೇ ಸೇರಿಸಿದೆನೆಂದು ಯಾಕೆ ಸ್ವಾಮಿ ದುಃಖಿಸುತ್ತೀರಿ? ಜೊತೆಗೇ ಹನುಮನೂ ಸಿಂಗನೂ ಇರುವರಲ್ಲ 😉
ಈಗಷ್ಟೇ ಬಂದಿಹೆ ನಾ
ನಾಗಳೆ ಮತ್ತೆಂದು ಮಾಯವಾಗುವಿರೆಂಬೀ
ಕೂಗಿನ ಮರ್ಮಮನೆನಗನು
ರಾಗದೊಳರುಹೈ ಪ್ರಸಾದ ನಾಮಕ ಮಿತ್ರಾ!
🙂
ಬಂದಾಗಳಾಗಳೀಗಳ
ದೊಂದಾರೆಂಟು ಪದಿಯಂಗಳ ಗೀಚಿ ಕ್ಷಿಪ್ರಂ|
ಕಂದಿಪುವುದೇಳ್ಗೆಯನದೆ
ನ್ನಂದರೊಳನವರತ ತರವೆ ಸಂಕ್ರಾಂತಿನರಂ?|
*ದೊಂದಾರೆಂಟು ಪದಿಯಂಗಳನು ಗೀಚಿರ್ದುಂ|
ಸೊಬಗಿಂದಿರ್ಪುದು ಮಂಜುನಾಥ ಕವಿತಾಸ್ತೋಮಂ ತವಾಖ್ಯಾನುಗಂ |
ಕೆಲವು ಸಣ್ಣ ತಿದ್ದುಪಾಡುಗಳನ್ನು ಮಾಡಿದರೆ ಇನ್ನೂ ಸೊಗಯಿಸುವುದು.
ಬಳಿಕೀ- ಇಲ್ಲಿ ಪ್ರಾಸ ತಪ್ಪಿದೆ
ವನದೊಳ್ಗೇನೈ- ಒಳ್ಗು ಅಸಾಧು ರೂಪ. “ವನದೊಳ್ ಕಂಡೆನ್” ಎಂದು ಹಾಕಬಹುದು. ತಮ್ಮ ಲಹರಿಯಂತೆ ಬೇರೆಯೂ ಹಾಕಬಹುದು.
ಎಲರೊಳ್— ಇಲ್ಲಿ ವಿಸಂಧಿ ಇದೆ. ಎಲರ್ ಪದ ಸರಿಯಾಗಿ ಕೂರುವುದಿಲ್ಲ. “ಚಲದೊಳ್2 ಎಂದು ಹಾಕಬಹುದು. ಚಲ ಎಂದರೆ ಗಾಳಿ ಎಂಬ ಅರ್ಥವೂ ಇದೆ.
ಸೀತೆಯ ಫೊಗುಮೆಂದು- ವಿಭಕ್ತಿ ಪಲ್ಲಟ. “ಸೀತೆಯವೋಲಿರಲ್ಕೆ” ಎಂದರಾದೀತು.
ಮಗುಗಳ್- ಹಳೆಗನ್ನದದಲ್ಲಿ “ಮಗವು” ಪದ ಸರಿಯಾದುದು. ಇದರ ಬಹುವಚನ ಮಾಕ್ಕಳ್. ಮಗುಗಳ್ ಪ್ರಯೋಗಕ್ಕೆ ಪ್ರಸಿದ್ಧಕವಿಪ್ರಯೋಗಬಲವಿದೆಯೆ ಎಂದು ಗಣೇಶರು ತಿಳಿಸಿದರೊಳಿತು. ಪರ್ಯಾಯವಾಗಿ “ಮಗವಿಂಗಿತ್ತರ್” ಎಂದು ಹಾಕಬಹುದೇನೊ
ರಾಘವೇಶ್ವರವೆಸರ್- ಅರಿಸಮಾಸ. “ರಾಘವೇಶನ ಪೆಸರ್” ಸರಿಯಾಗುತ್ತೆ.
ಬರೆಯುತ್ತಿರಿ. ನಿಮ್ಮ ಪದ್ಯಗಳನ್ನು ಓದಿ ನಾವೂ ಆನಂದಿಸುತ್ತೇವೆ.
ರಾಘವೇಶ್ವರವೆಸರ್ – ನಾಮಪದಕ್ಕೆ ಅರಿಸಮಾಸ ದೋಷ ಬರಲಾರದೆಂದು ತಿಳಿದಿದ್ದೆ !
2 = ಟೂ = ಗುರ್ವಕ್ಷರ
‘ಚಲದೊಳ್2’ವಿಹುದೇನ್ ಚಲತ್ ಸಿನೆಮಗಳ್| ಧೂಂ2 ದಬಂಗ್2ಗಳೊಲ್?
ಕೊಳ್ಳೇಗಾಲರ ಪದ್ಯಗಳಲ್ಲಿ ಇಷ್ಟೊಂದು ದೋಷಗಳಿದ್ದುವೆ? ಸದ್ಯ, ಅವನ್ನು ನಾನು ಹೊಗಳಿದಾಗ ‘ಅರ್ಥಕ್ಲೇಶವಿಲ್ಲ’ ಎಂದಷ್ಟೇ ಹೇಳಿದ್ದೇನೆ. ಛಂದ-ವ್ಯಾಕರಣ-ಕಾಗುಣಿತಗಳನ್ನೆಲ್ಲ ಗಮನಿಸಲಿಲ್ಲ. 😉
ಗಮನಿಸದಷ್ಟು ರಸಮಯವಾಗಿ ಬರೆದಿದ್ದಾರೆ 🙂
ಆಹಾ, ನನ್ನ ಪದ್ಯಗಳಲ್ಲಿ ದೋಷಗಳನ್ನು ಕಂಡರೆ ತಮಗೆ ಅಷ್ಟು ಹಿಗ್ಗೇ? ಮತ್ತೆ “ರಸಮಯವಾಗಿ” ಎಂದು ಸಕ್ಕರೆ ಸವರುವುದು ಬೇರೆಯೋ? 🙂
ಶ್ರೀಕಾಂತ ಮೂರ್ತಿಯವರೇ, ತಮ್ಮ ಪರಿಚಯವಾದದ್ದು ಬಹಳ ಸಂತೋಷ. ನಾನು ಪದ್ಯಪಾನದ ಕಡೆ ಬಂದು ವರ್ಷವೇ ಕಳೆಯಿತು. ತಮ್ಮ ಪದ್ಯಗಳನ್ನು ಈಗಷ್ಟೇ ನೋಡಿದೆ, ಲಲಿತವಾಗಿವೆ, ಪ್ರೌಢವಾಗಿವೆ, ಚೇತೋಹಾರಿಯಾಗಿವೆ.
ತಮ್ಮ ಅಭಿಪ್ರಾಯಗಳಿಗೆ ಧನ್ಯವಾದ. ಅವಕ್ಕೆ ಉತ್ತರಿಸಲೆತ್ನಿಸುತ್ತೇನೆ.
“ಬಳಿಕೀ…” ಇಲ್ಲಿ ಪ್ರಾಸ ತಪ್ಪಿಲ್ಲ. ಲ-ಳ ಗಳನ್ನು ಒಂದರ ಬದಲಿಗೊಂದಾಗಿ ಬಳಸುವ ಪರಿಪಾಠ ಕನ್ನಡದಲ್ಲಿರುವುದರಿಂದ, ಪ್ರಾಸದ ದೃಷ್ಟಿಯಿಂದಂತೂ ಇದು ದೋಷವೆನಿಸುವುದಿಲ್ಲ. ಲ-ಳ ಗಳನ್ನು ಸಮೀಪಪ್ರಾಸವಾಗಿ ಬಳಸುವ ಪರಿಪಾಠ ಪ್ರಸಿದ್ಧ ಕವಿಗಳೆಲ್ಲರಲ್ಲೂ ಹೇರಳವಾಗಿಯೇ ಇದೆ. ಉದಾಹರಣೆಗಾಗಿ ಕೆಳಗಿನ ಕೆಲವು ಪದ್ಯಗಳನ್ನು ನೋಡೋಣ:
ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ (ಕುಮಾರವ್ಯಾಸ)
ಲಲಿತಪದಂ ಪ್ರಸನ್ನ ಕವಿತಾಗುಣಮಿಲ್ಲದೆ ಪೂಣ್ದು ಪೇೞ್ದ ಬೆ
ಳ್ಗಳ ಕೃತಿಬಂಧಮುಂ ಬರೆಪಕಾಱಂ ಕೈಗಳ ಕೇಡು ನುಣ್ಣನ
ಪ್ಪಳಕದ ಕೇಡು ಪೇೞಸಿದೊಡರ್ಥದ ಕೇಡೆನೆ ಪೇೞ್ದು ಬೀಗಿ ಪೊ
ಟ್ಟಳಿಸಿ ನೆಗೞ್ತೆಗಾಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೇ (ಪಂಪ – ವಿಕ್ರಮಾರ್ಜುನ ವಿಜಯ)
ಜಲದೊಳ್ ಮೀನಿರ್ಪವೊಲ್ ನೀಂ ಕೊಳದೊಳೆ ಮುಳುಗಿರ್ದಕ್ಕಟಾ ಕೋಡ ಸೇಡಿಂ
ಗೊಳಗಾದಯ್ ನಿನ್ನ ದುರ್ಯೋಧನವೆಸರ್ಗಿದು ಲಜ್ಜಾಕರಂ ತೋರಿದಯ್ ನಿ
ನ್ನಳವಂ ಚಿ: ಸತ್ತರೇಂ ಪುಟ್ಟರೆ ಪೊರಮಡು ನೀಂ ಕೈದುಗೊಳ್ ಕೌರವೇಂದ್ರಾ
ಚಳವಜ್ರಂ ಬಂದನೀಗಳ್ ಕುರಕುಲಮಥನೋದ್ಭೀಕರಂ ಭೀಮಸೇನಂ (ರನ್ನ – ಸಾಹಸಭೀಮವಿಜಯ)
ವಿಸಂಧಿದೋಷದ ಬಗ್ಗೆ ಈ ಹಿಂದೆ ಪದ್ಯಪಾನದಲ್ಲಿ ವಿಸ್ತೃತವಾದ ಚರ್ಚೆ ನಡೆದಿದೆ. ಸಂಧಿಯಾಗಬೇಕಾದ ಕಡೆ ಸಂಧಿಯನ್ನು ಮಾಡದಿದ್ದರೆ ವಿಸಂಧಿ ದೋಷವುಂಟಾಗುತ್ತದೆ. ಆದರೆ “ಸಂಧಿಯಾಗಬೇಕಾದ ಕಡೆ” ಎಂಬ ಸಂದರ್ಭ ಯಾವುದು? ಸ್ವರಾಕ್ಷರದಿಂದ ಕೊನೆಯಾದ ಪದವೊಂದರ ಮುಂದೆ ಸ್ವರಾಕ್ಷರದಿಂದ ಮೊದಲಾಗುವ ಪದವೊಂದು ಬಂದಮಾತ್ರಕ್ಕೆ ಸಂಧಿಯನ್ನು ಮಾಡಬೇಕಾದ್ದಿಲ್ಲ. ಕೆಲವೆಡೆ ಮಾಡಲೇ ಬೇಕು, ಕೆಲವೆಡೆ ಮಾಡಬಹುದು, ಮಾಡದಿರಬಹುದು, ಮತ್ತು ಎಷ್ಟೋ ಕಡೆ ಹೀಗೆ ಸಂಧಿ ಮಾಡುವ ಕಾರಣದಿಂದಲೇ ಅರ್ಥ ವ್ಯತ್ಯಾಸಗೊಳ್ಳುವ ಅಪಾಯವಿರುತ್ತದೆ. ಹಿಂದಿನ ಪದದಿಂದ ಮುಂದಿನ ಪದಕ್ಕೆ ಅರ್ಥದ ಹರಿವಿದೆಯೇ, ಅರ್ಥಖಂಡ ಅಲ್ಲಿಗೇ ಕೊನೆಗೊಂಡಿತೇ ಇತ್ಯಾದಿ ವಿಷಯಗಳನ್ನು ಗಮನಿಸಬೇಕಾಗುತ್ತದೆ. ಕುಮಾರವ್ಯಾಸನಲ್ಲಂತೂ ಇಂಥ ಪ್ರಯೋಗಗಳನ್ನು ಹೇರಳವಾಗಿ ಕಾಣಬಹುದು:
ಆದರಿಸಿದನು ರಾಧೆಯಲಿ ಮಗ
ನಾದನೆಂದುತ್ಸವವ ಮಾಡಿ ಮ
ಹೀ ದಿವಿಜರನು ದಾನ ಮಾನಂಗಳಲಿ ಸತ್ಕರಿಸಿ
ಆ ದಿನಂ ಮೊದಲಾಗಿ ಉಧ್ಬವ
ವಾದುದವನೈಶ್ವರ್ಯ ಉನ್ನತ
ವಾದನಾ ರವಿನಂದನನು ರಾಧೇಯ ನಾಮದಲಿ
ಈತನಾ ಮಧು ಕೈಟಭರ ಮುರಿ
ದಾತ ಜಲಧಿಯೊಳಿಳಿದು ವೇದವ
ನೀತ ತಂದನು ಜಯನ ವಿಜಯನ ದೈತ್ಯಜನ್ಮವನು
ಈತನೊದೆದನು ಪೌಂಡ್ರಕನನಂ
ದೀತ ಕೊಂದನು ಹಂಸ ಡಿಬಿಕರ
ನೀತನೊರಸಿದನರಸ ಚಿತ್ತೈಸೆಂದನಾ ವಿದುರ
ಆದ್ದರಿಂದ ವಿಸಂಧಿದೋಷದ ವಿಷಯವನ್ನು ಸಂದರ್ಭೋಚಿತವಾಗಿ ಪರಿಗಣಿಸಬೇಕಾಗುತ್ತದೆ. “ಏನೈ ವಸಂತೋದಯಂ!” ಎಂಬಲ್ಲಿಗೆ ವಾಕ್ಯವೂ, ಅರ್ಥದ ಹರಿವೂ ಮತ್ತು ಸಾಲೂ ಕೊನೆಗೊಳ್ಳುವುದರಿಂದ “ಎಲರೊಳ್… ” ಎಂಬ ಹೊಸದೇ ಸಾಲೊಂದನ್ನು ಆರಂಭಿಸುವುದರಲ್ಲಿ ಅಡ್ಡಿ ಕಾಣುವುದಿಲ್ಲ. ಈ ಬಗೆಗಿನ ಈ ಹಿಂದಿನ ಚರ್ಚೆ, ನನ್ನ ವಿವರಣೆ ಇಲ್ಲಿದೆ ನೋಡಿ. http://padyapaana.com/?p=844#comment-2682
“ಸೀತೆಯ ಫೊಗುಮೆಂದು- ವಿಭಕ್ತಿ ಪಲ್ಲಟ” ತಮ್ಮ ಅಭಿಪ್ರಾಯ ಅರ್ಥವಾಗಲಿಲ್ಲ. ನಾನು ಬಳಸಿದ್ದು “ಸೀತೆಯ ಪೋಲ್ಗುಮೆಂದು”. ತಾವು ಹೇಳಿದ ಸೀತೆಯವೋಲಿರಲ್ಕೆ (ಸೀತೆಯ ವೋಲ್ ಇರಲ್ಕೆ – ಸೀತೆಯನ್ನು ಹೋಲುವಂತೆ ಇರಲ್ಕೆ – ದ್ವಿತೀಯಾವಿಭಕ್ತಿ); ನಾನು ಬಳಸಿದ ಸೀತೆಯ ಪೋಲ್ಗುಮೆಂದು (ಸೀತೆಯ ಪೋಲ್ಗುಮೆಂದು – ಸೀತೆಯನ್ನು ಹೋಲುವುದೆಂದು – ದ್ವಿತೀಯಾ ವಿಭಕ್ತಿ). ಈ ಎರಡೂ ಪ್ರಯೋಗಗಳು ಬಳಕೆಯಲ್ಲಿರುವುದೇ ಅಲ್ಲವೇ?
ಮಕ್ಕಳ್ ಎಂಬುದು ಸಾಧುತರ ಪ್ರಯೋಗವೆಂಬುದೇನೋ ನಿಜ. ಆದರೆ ಮಗುಗಳ್ ಎಂಬ ಪ್ರಯೋಗವೂ ಅಲ್ಲಲ್ಲಿ ಬಳಕೆಯಲ್ಲಿದೆ. ಪುರಂದರದಾಸರು ಹೀಗೆ ಅನೇಕ ಕಡೆ ಬಳಸಿದ್ದಾರೆ (ಮಗುಗಳ ಮಾಣಿಕ್ಯನ ಆಡಿಸಿದಳೆಶೋದೆ; ಮಗುಗಳ ಮಾಣಿಕ್ಯ ತಗುಲಿತು ಕರಕೆಂದು…). ಪೂರ್ವ ಕವಿಪ್ರಯೋಗವೂ ಇದ್ದೀತೆಂದೇ ನನ್ನ ಅನಿಸಿಕೆ, ಗಣೇಶರೇ ಇದನ್ನು ಸ್ಪಷ್ಟಪಡಿಸಬೇಕು.
ರಾಘವೇಶ್ವರವೆಸರ್ – ಸ್ವಭಾವತಃ ಅರಿಸಮಾಸವೇನೋ ಹೌದು, ಆದರೆ ನಾಮಪದಕ್ಕೆ ಅದರಲ್ಲೂ ಅಂಕಿತನಾಮಕ್ಕೆ ಅರಿಸಮಾಸದ ದೋಷವಿರುವಂತಿಲ್ಲ. ಮೇಲೆ ತೋರಿದ ರನ್ನನ ಪದ್ಯದಲ್ಲಿ “ದುರ್ಯೋಧನವೆಸರ್ಗಿದು ಲಜ್ಜಾಕರಂ ತೋರಿದೈ” ಎಂಬ ಪ್ರಯೋಗವನ್ನು ಗಮನಿಸಿ.
“ವನದೊಳ್ಗೇನೈ (ವನದ ಒಳ್ಗು ಏನೈ)” ಪ್ರಯೋಗವು ಅಷ್ಟಾಗಿ ಸರಿಯಲ್ಲ, ಅಹುದು. ವನದೊಳೇನೈ ಎಂಬುದು ಸಾಧು. ಆದರೂ ಹಾಗೆಯೇ ಲಹರಿಯಲ್ಲಿ ಬಂದದ್ದರಿಂದ ಬಳಸಿಬಿಟ್ಟೆ. ವನದ ಒಳ್ಗು (ವನದ ಒಳಭಾಗದಲ್ಲಿ) ಎಂದು ಸಮರ್ಥಿಸಿಕೊಳ್ಳಬಹುದು, ಆದರೆ ಕುಪುತ್ರನನ್ನು ಎಷ್ಟು ಸಮರ್ಥಿಸಿಕೊಂಡರೇನು 🙂 ಹಾಗೂ ಅದರ ತಂಟೆಯೇ ಬೇಡವೆಂದರೆ “ಬಳಿಕೀ ನೋಳ್ಪೊಡೆ ಪದ್ಯಪಾನ ವನಕಿಂತೇನೈ ವಸಂತೋದಯಂ!” ಎಂದು ಕೊಸರಿಸಬಹುದೇನೋ 🙂
ನಮಸ್ಕಾರ ಮಂಜುನಾಥರೆ
ನನ್ನ ಪದ್ಯಗಳ ಬಗ್ಗೆ ತಾವಾಡಿದ ನಲ್ನುಡಿಗಳಿಗೆ ಧನ್ಯವಾದಗಳು.
ಲ-ಳ ಪರ್ಯಾಯಪ್ರಯೋಗ ಸಾಮಾನ್ಯವಾಗಿ ಸಂಸ್ಕೃತದ ಶಬ್ದಗಳಲ್ಲಿ ಬರುವ ಲಕಾರಕ್ಕೆ ಅನ್ವಯಿಸುವುದು. ನೀವು ಕೊಟ್ಟಿರುವ ಉದಾಹರಣೆಗಳು ಇದಕ್ಕೆ ಹೊರತಲ್ಲವಷ್ಟೆ? ಬಳಿಕ ಕನ್ನಡ ಶಬ್ದವಾಯಿತಲ್ಲ. ಕನ್ನಡದಲ್ಲಿ ಲಕಾರ ಳಕಾರಗಳು ವಿಭಿನ್ನಚಾದುವಲ್ಲ.
ಇನ್ನು ವಿಸಂಧಿಯ ಮಾತು. ನೀವು ಕೊಟ್ಟಿರುವ ಎರಡು ಉದಾಹರಣೆಗಳಲ್ಲೂ ವಿಸಂಧಿ ಇರುವುದು ಷಟ್ಪದಿಯ ಪೂರ್ವ ಮತ್ತು ಉತ್ತರಾರ್ಧಗಳ ನಡುವೆ. ಇವು ಎರಡು “ಪ್ರತ್ಯೇಕ” ವಿಭಾಗಗಳಾಗಿ ಕಾರ್ಯ ನಿರ್ವಧನ್ಯವಾದಗಳು.ಇದನ್ನೇ ವೃತ್ತಕ್ಕೂ ಅಳವಡಿಸಲಾದೀತೆ? ನಿಮ್ಮ ಪದ್ಯದಲ್ಲಿ “ವಸಂತೋದಯಮೆಲರೊಳ್” ಎಂದು ಸಂಧಿಯಾಗಬೇಕು. ಅದನ್ನು ಪ್ರತ್ಯೇಕವಾಗಿಟ್ಟು ಪಾದಾಂತ್ಯದ ಗುರುವನ್ನು ಉಳಿಸಿಕೊಂಡಿದ್ದೀರ. ನೀವು ಹಿಂದೆ ಈ ಬಗ್ಗೆ ಪದ್ಯಪಾನದಲ್ಲಿ ಬರೆದಿರುವುದನ್ನು ಓದಿದೆ. ಅದು ಇಲ್ಲಿ ಅಸಮಂಜಸ ಎನ್ನುವುದ್ಯ್ ನನ್ನ ತಿಳಿವಳಿಕೆ. ವಿಸಂಧಿ ಎಲ್ಲಿ ಸಮಂಜಸ ಎನ್ನುವುದಕ್ಕೆ ನಾಗವರ್ಮನ ಸೂತ್ರಗಳಿವೆಯಲ್ಲ
ಏದೋದಂತಾ ನಿಪಾತಾಃ ಸ್ವರೇ ಪರೇ ಪ್ರಕೃತ್ಯಾ
ವಿಶಂಕಾವಧಾರಣಯೋಃ
ಪ್ಲುತಾಶ್ಚ
ಸೀತೆಯ ಪೋಲ್ಗುಮೆಂದು ( ಐಪ್ಯಾಡ್ನಲ್ಲಿ ಟಿಪೋನುಸುಳಿತ್ತು). ಸರಿಯಾದ ವಿಭಕ್ತಿಪ್ರಯೋಗ ಸೀತೆಯಂ ಪೋಲ್ಗುಮೆಂದು. ಇದನ್ನೆ ಹಿಂದೆ ನಾನು ಹೇಳಿದ್ದು. ತಪ್ಪಿಸಲು ಸಾಧ್ಯವಾದಲ್ಲಿ ತಪ್ಪಿಸಬಹುದಲ್ಲ ಎಂದಷ್ಟೆ ನಾನು ಹೇಲಿದ್ದು. ಇದರಿಂದ ಪ್ರಮಾದವಾಗಿಲ್ಲ.
ಮಗುಗಳ್ ಪ್ರಯೋಗ ಪೂರ್ವಕವಿಗಳಲ್ಲಿ ಹಳೇಗನ್ನಡದಲ್ಲಿ ಸಿಗುತ್ತದೆಯೆ ಗಣೇಶರು ಕ್ಲಾರಿಫೈ ಮಾಡಬೇಕು. ಪುರಂದರದಾಸರ ಭಾಷೆ ನಡುಗನ್ನಡ. ಅವರು ಹಾಡೂಗಾರರು.
ಅರಿಸಮಾಸ ಬಿರುದಾಂಕಿತಗಳಿಗಿಲ್ಲ ಸರಿ. ನಾಮಪದಕ್ಕೂ ಇಲ್ಲವೆ? ನೀವು ನಿಮ್ಮ ನಿಲುವಿಗೆ ಉತ್ತಮ ನಿದರ್ಶನವನ್ನು ಕೊಟ್ಟಿದ್ದೀರ. ಇದು ಅಪವಾದವೆ ಅಥವಾ ಸಾಮಾನ್ಯ ನಿಯಮವೆ ಎಂದು ಗಣೇಶರು ತಿಳಿಸಿದರೆ ಒಳಿತು.
ಇದು ಸತ್ಯಾನ್ವೇಷಣೆ ಮತ್ತು ಸಾಧುಪ್ರಯೋಗ ತಿಳೀಯಲು ಮಾಡಿದ ಜಿಜ್ಞಾಸೆಯಷ್ಟೆ. ಮೊತ್ತಮೊಅಲೆ ನಾನು ಹೇಳಿರುವ ಹಾಗೆ ನಿಮ್ಮ ಶೈಲಿಬಂಧಗಳು ಸೊಗಸಾಗಿವೆ.
ವೃತ್ತವೊಂದನ್ನು ಬರೆಯಲು *ಮೊತ್ತಮೊದಲ* ಪ್ರಯತ್ನ. ತಪ್ಪುಗಳನ್ನು ದಯವಿಟ್ಟು ತೋರಿಸಿಕೊಡಿ.
ಹಿತದೊಳ್ ತೋರ್ಪೆನು ಶಾಸ್ತ್ರಪಾಠಗಳನೂ ನೀ ಬೇಗನೇ ಬಾರೆನ-
ಲ್ಲತಿಯುತ್ಸಾಹದಿ ಬಂದಿಹಳ್ ಲಲನೆ ತಾನ್ ಕಣ್ಣಲ್ಲೆ ಕಣ್ಣಾಗಿ ಜಾ-
ಗೃತಿಯಿಂ ನೋಡಿರೆ ಕೈಲಿಹ ತ್ರಿಭುಜದೊಳ್ ಬಾನಲ್ಲಿ ಕಂಡರ್ ದಿವ-
ಸ್ಪತಿಗಳ್ ಸೀತೆಗದೆಷ್ಟು ಮಂದಿ! ಗಣಿಸಲ್ಕೇನೊರ್ವರೇಯಿರ್ವರೇ ?
ತ್ರಿಭುಜ = ಪಟ್ಟಕ (prism) = ಇಲ್ಲಿ ಕೆಲೈಡೋಸ್ಕೋಪ್ ಎಂಬ ಅರ್ಥದಲ್ಲಿ ಬಳಸಿದ್ದೇನೆ
ದಿವಸ್ಪತಿ = ಸೂರ್ಯ
ಸ್ವಲ್ಪ ವಿವರವಿಲ್ಲದಿದ್ದರೆ ಅರ್ಥವಾಗದೆಂದೆನಿಸಿ ( ಹಾಗಾಗಿ ಪದ್ಯ ಒಂದು ರೀತಿ ಸೋತಿತೆಂದರೂ) ಈ ಟಿಪ್ಪಣಿ
ಸೀತೆಗೆ (ರಾಮಾಯಣದ ಸೀತೆಯೇ ಇರಬಹುದು, ಅಥವಾ ನಂತರದ ಯಾರೇ ಸೀತೆಯೆಂಬ ಹೆಣ್ಣೂ ಇರಬಹುದು) – ಗುರುವೋರ್ವನು ಭೌತ ಶಾಸ್ತ್ರ ಪಾಠಮಾಡುವ ಸಂದರ್ಭ. Kaleidoscope ನ ಬಗ್ಗೆ ಹೇಳಿಕೊಡುತ್ತಾ ಪ್ರಾಯೋಗಿಕವಾಗಿ ಮಾಡಿದ ಒಂದು ಮಾದರಿಯಲ್ಲಿ ನೋಡಿರಲು, ಆಗಸದಲ್ಲಿ ಅವಳು ಲೆಕ್ಕವಿಲ್ಲದಷ್ಟು ಸೂರ್ಯದರನ್ನು ಕಂಡಳು ಅನ್ನುವುದೇ ಪದ್ಯದ ವಸ್ತು.
(ಕೆಲೈಡೋಸ್ಕೋಪು ತ್ರಿಭುಜಾಕೃತಿಯಲ್ಲಿರುವುದರಿಂದ, ಅದನ್ನೇ ಪಾರಿಭಾಷಿಕ ಪದವಾಗಿ ಬಳಸಿರುವೆ )
ಶಾಸ್ತ್ರ ಪಾಠಗಳನೂ ಅನ್ನುವ ಬದಲು ಶಾಸ್ತ್ರಪಾಠಗಳನುಂ ಎಂದರೆ ವಾಸಿಯೇ?
ಹೌದು
ಕಡೆಗೂ ವೃತ್ತದಯತ್ನವನ್ನೆಸಗಿ ಹಂಸಾನಂದಿ ನೀಂ ಗೆದ್ದಿರೈ 🙂
ಒಂದೆರಡು ಸವರಣೆಗಳು ಬೇಕಿವೆ, ಆದರೆ ನೀವು ಮಾತ್ರಾಬಂಧನವನ್ನು ಬಿಡಿಸಿಕೊಂಡು ವೃತ್ತವನ್ನು ಸುತ್ತಹತ್ತಿದ್ದು ಸಂತೋಷಕರವು.
ಮಂಜುನಾಥ ಕೊಳ್ಳೇಗಾಲ ಅವರ ತಿದ್ದುಪಡಿಗಳು:
ಹಿತದೊಳ್ ತೋರ್ಪೆಖಗೋಳ ಸೋಜಿಗಮನೀಗಳ್ ಬೇಗ ಬಾರೆಂದೆನ-
ಲ್ಕತಿಸಂತೋಷದಿ ಬಾಲೆ ಸೀತೆ ಕುಣಿದಳ್ ಕಣ್ಣಲ್ಲೆ ಕಣ್ಣಾಗಿ ಜಾ-
ಗೃತಿಯಿಂ ನೋಡಿರೆ ಕಾಂಬುದೇಂ ತ್ರಿಭುಜದೊಳ್ ಬಾನ್ತುಂಬೆ ಕಂಡರ್ ದಿವ-
ಸ್ಪತಿಗಳ್ ಸೀತೆಗದೆಷ್ಟು ಮಂದಿ! ಗಣಿಸಲ್ಕೇನೊರ್ವರೇಯಿರ್ವರೇ ?
ಯತಿಗಳ್ ಸೇವಿಪ ರಾಮ ತನ್ನ ತೊರೆಯಲ್ಕಾ ಸೀತೆ ಸೇರ್ದಳ್ ವನ೦
ನುತ ವಾಲ್ಮೀಕಿಮಹರ್ಷಿಯಾಶ್ರಮದೊಳ೦ದಾಗಿತ್ತು ಪುತ್ರೋತ್ಸವ೦
ಸುತರಿರ್ವರ್ಗಳ ನೋಡಿ ಮೋಹಗೊಳುತು೦ ಹಾರೈಸಲೈದಿರ್ಪ ದ೦-
ಪತಿಗಳ್ ಸೀತೆಗದೆಷ್ಟು ಮ೦ದಿ ಗಣಿಸಲ್ಕೇನೊರ್ವನೇ ಇರ್ವರೇ ||
ವೃತ್ತ ರಚನೆಯಲ್ಲಿ ಲೋಪದೋಷಗಳಿದ್ದರೆ ಅವಶ್ಯವಾಗಿ ತಿಳಿಸಿರಿ.
There are many variations of Ramayana in the eastern world. The characteristics of the characters are also varied. But Seeta’s virtue has been a constant.
1) ಮಾರರಿವಳಂ > ಮಾರು > ಮಾರ್ಪಾಟು > change (ಇವಳಂ = ಸೀತೆಯಂ)
2) ಸ್ವೀಯ > ಸೀತೆಯ
3) ವಾಕ್ಪತಿಗಳ್ = ಕವಿಗಳ್
ಕತೆ ರಾಮಾಯಣ ಪ್ರಾಂತಪ್ರಾಂತದೊಳಗಂ| ನಾನಾವಿಧಂ ಪೇಳ್ವರೈ
ಕೃತಿಕರ್ತರ್ ಬೆಳೆಸಿರ್ಪರಲ್ತೆ ಕಥೆಯಂ| ಸಂಸ್ಕಾರದೊಲ್ ತಮ್ಮ. ಮಾ
ರುತಿ ರಾಮಾದಿಗಳಂತೆ ಮಾರರಿವಳಂ| ಸ್ವೀಯದ್ಯುತಿಂ ತೋರ್ದ ವಾ
ಕ್ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಪ್ರಿಯಪ್ರಸಾದರೆ,
ನಿಮ್ಮ ಪದ್ಯರಚನಾಸಕ್ರಿಯವೈವಿಧ್ಯ ಗಮನೀಯ. ಇಲ್ಲಿನ ಪದ್ಯದಲ್ಲಿನ ಎರಡು ಪದಪ್ರಯೋಗವನ್ನು ಕುರಿತು ಒಂದುಮಾತು.
ಮಾರು – ಪದಕ್ಕೆ ಕನ್ನಡದಲ್ಲಿ ವಿಕ್ರಯ, ವಶ, ಎದುರು ಎಂಬ ಅರ್ಥಗಳಿವೆ. ಮಾರ್ಪಾಟು, ಬದಲಾವಣೆ ಎಂಬ ಅರ್ಥ ತೆಲುಗಿನಲ್ಲಿ ಸಾಧ್ಯ. ’ ದ್ಯುತಿಂ ತೋರ್ದ” ದ್ವಿತೀಯಾವಿಭಕ್ತಿರೂಪದಲ್ಲಿ ದ್ಯುತಿಯಂ ತೋರ್ದ ಆಗಬೇಕು.
ಸಲಹೆಗಳಿಗಾಗಿ ಕೃತಜ್ಞತೆಗಳು. ತಿದ್ದುತ್ತೇನೆ.
ಪ್ರಸಾದರೆ
ಈ ನಿಮ್ಮ ಪದ್ಯದ ಓಟ ಸುಗಮವಾಗಿಲ್ಲ ಅನ್ನೋದು ನನ್ನ ಅಭಿಪ್ರಾಯ. ತುಂಬ ತಿರುವುಮುರುವುಗಳಿದ್ದು ಅರ್ಥ ಸಂದಿಗ್ಧವಾಗಿದೆ. ಇನ್ನು ಪದಪ್ರಯೋಗಗಳ ಬಗ್ಗೆ ನನ್ನ ನೋಟ
ಪ್ರಾಂತಪ್ರಾಂತದೊಳಗಂ- ಎರಡುಕಡೆಯೂ ಶಿಥಿಲದ್ವಿತ್ವಕ್ಕೆ ಶರಣು ಹೋಗಿದ್ದೀರ. “ದೇಶದೇಶದೊಳಗಂ” ಎಂದು ಹಾಕಿದರೆ ಲೇಸಲ್ತೆ?
ಸಂಸ್ಕಾರದೊಲ್- ಸಂಸ್ಕಾರದವೋಲ್ ಬರಬೇಕು
ಮಾಱು, ಮಾರು, ಮಾರ್- ಪದಕ್ಕೆ “ಬದಲಾಗು” ಎಂಬ ಅರ್ಥ ಕನ್ನಡದಲ್ಲಿ ಇದೆ. ಬದಲಾಯಿಸು ಎಂಬ ಅರ್ಥ ಇಲ್ಲ. ಸಂಸ್ಕೃತ ವ್ಯಾಕರಣದ ಮಾತಿನಲ್ಲಿ ಹೇಳುವುದಾದರೆ ಇದು ಒಂದು “ಆತ್ಮನೇ” ಪದ. “ಪರಸ್ಮೈ” ಪದವಲ್ಲ. ಮಾರ್ಚು ಅಂತ ನೀವು ಹಾಕಿ ಸಾವರಿಸಬಹುದು.
ಚಂದ್ರಮೌಳಿಗಳು ಹೇಳಿರುವಂತೆ ಸ್ವೀಯದ್ಯುತಿಂ ಅಸಾಧು ಪ್ರಯೋಗ. ಸಂಸ್ಕೃತದಲ್ಲಿ ಇದು ದ್ವಿತೀಯಾವಿಭಕ್ತಿ, ಕನ್ನಡದಲ್ಲಲ್ಲ. ಅಲ್ಲದೆ ಇದು ನಿಮ್ಮ ಪದ್ಯದ ಭಾವಕ್ಕೆ ವಿರುದ್ಧವಾಗಿದೆ. ಕವಿಗಳು ಸೀತೆಯ ಮಟ್ಟಿಗೆ ಸ್ವೀಯದ್ಯುತಿಯನು ಮೆರೆದಿಲ್ಲ ಎಂದಲ್ಲವೆ ನೀವು ಹೇಳುತ್ತಿರುವುದು?
ನೀವು “ಪಪೇಳ್ವರೈ, “ಬೆಳಸಿರ್ಪರ್” ಎಂದು ಒಂದೇ ವಿಷಯದ ಬಗ್ಗೆ ಎರಡು ಬಾರೆ ಹೇಳಿದ್ದೀರ. ಇದರಲ್ಲಿ ಒಂದನ್ನು ತೆಗೆದು ಆ ಎಡೆಯನ್ನು ತಿದ್ದುಪಾಡಿಗೆ ಬಳಸಬಹುದು.
1) ವಿಶದವಾಗಿ ವಿಮರ್ಶೆ ಮಾಡಿರುವಿರಿ. ಕೃತಜ್ಞತೆಗಳು. ಈ ಕೆಲವು ದೋಷಗಳನ್ನು ತಿದ್ದುಗೊಳ್ಳಲು ಹೆಣಗುತ್ತಿದ್ದೇನೆ. ನೀವು ಇಷ್ಟುಪರಿಯಾಗಿ ಹೇಳಿರುವುದು ಒಳ್ಳೆಯದೇ ಆಯಿತು. ಮನನಮಾಡುತ್ತೇನೆ. ಪದ್ಯವನ್ನು ಸವರುತ್ತೇನೆ.
2) ಸ್ವೀಯದ್ಯುತಿಂ – ಇಲ್ಲ. ಇದು ಪದ್ಯದ ಭಾವಕ್ಕೆ ವಿರುದ್ಧವಾಗಿಲ್ಲ. ವಿವಿಧ ರಾಮಾಯಣಗಳಲ್ಲಿ ಇತರ ಪಾತ್ರಗಳು ವ್ಯತ್ಯಯವಾಗಿದ್ದರೂ, ಸೀತೆಪಾತ್ರದ ದ್ಯುತಿಯನ್ನು ಏಕವಾಗಿ (presumption) ಕಾಣಿಸಿದ ವಾಕ್ಪತಿಗಳು ಬಹಳ ಎಂದು ಹೇಳಿದ್ದೇನೆ.
3) ‘ಪೇಳ್ವರೈ’ ‘ಬೆಳಸಿರ್ಪರ್’ – ಎರಡನ್ನೂ ಉಳಿಸಿಕೊಳ್ಳಬಹುದು. ಕವಿಗಳ್ ಬೆಳೆಸಿರ್ಪರ್ (Is it ಬೆಳ or ಬೆಳೆ?). ಜನರ್ ಪೇಳ್ವರ್.
ಪ್ರಸಾದರೆ
ನೀವು ಹೇಳದೆ ಹೋದರೆ, ಜನರನು ಪ್ರತ್ಯೇಕವಾಗಿ ಕಲ್ಪಿಸಿಕೊಳ್ಳಲಾಗುತ್ತಿಲ ನನಗೆ. ಕಾವ್ಯಕರ್ತರಿಗೇ ಎರಡು ಮಾತೂ ಅನ್ವಯಿಸುವ ಹಾಗೆ ಇದೆ. ಅಲ್ಲದೆ ಇಲ್ಲಿ ಜನರನ್ನು ಆವಾಹನೆ ಮಾಡುವೆ ಅಗತ್ಯವೇಕೆ. ಪದ್ಯಭಾವಕ್ಕೆ ಅವರೊಂದು “ಡಿಸ್ಟ್ರಾಕ್ಷನ್” ಅಲ್ಲವೆ.
ಮತ್ತೆ “ಸ್ವೀಯದ್ಯುತಿ” ಕವಿಗಳು ತಮ್ಮ ಸ್ವೀಯದ್ಯುತಿ ಮೆರೆದಿದ್ದಾರೆ ಎನ್ನುವ ಅರ್ಥ ನನಗೆ ಗೊಚರವಾಗುತ್ತಿದೆಯೆ ವಿನಹ ಸೀತೆಯ ಸ್ವೀಯದ್ಯುತಿ ಉಳಿದಂತೆ ಭಾಸವಾಗುತ್ತಿಲ್ಲ. ಇದಕ್ಕೆ “ಅವಳಂ” ಎಂದು ದ್ವಿತೀಯಾ ವಿಭಕ್ತಿ ಆದ ತತ್ಕ್ಷಣ ಬಂದಿರುವುದೂ ಒಂದು ಕಾರಣವಿರಬೇಕು. ಈ ಅರ್ಥ ಸ್ಪಷ್ಟೀಕರಣ ಸ್ಫುಟವಾಗಿ ಪದ್ಯದಲ್ಲೇ ಬರುವಂತೆ ತಿದ್ದಿರಿ.
“ಬೆಳೆಸಿರ್ಪರ್” ಓಕೆ
ನನ್ನ “ಅನಾಲಿಸಿಸ್” ನಿಮಗೆ ಬೇಸರೆ ತರಲು ಮಾಡಿದ್ದಲ್ಲ. ಅನ್ಯಥಾ ಭಾವಿಸ ಬೇಡಿ
೧) ಸ್ವೀಯದ್ಯುತಿ – ಹೌದು ಆ ಇಬ್ಬಂದಿ ಇದೆ. ಆ ಇನ್ನೊಂದು ಸಲಹೆಯನ್ನೂ ಪರಿಗಣಿಸಿ ಪದ್ಯವನ್ನು ಪುನಾರಚಿಸುತ್ತೇನೆ.
೨) ಬೇಸರವೇನೂ ಇಲ್ಲ. ಸದಾ ನಿಮ್ಮ ವಿಮರ್ಶೆಯ ನಿರೀಕ್ಷೆಯಲ್ಲಿರುತ್ತೇನೆ.
ಏನು ಮಾಡೋಣ? ಪೂರ್ವಾಗ್ರಹಪೀಡೆ!
ಹವಿಶ್ಪತಿ (ಅಗ್ನಿ) ಎಂಬ ಕೀಲಕವನ್ನು ಆಯೋಜಿಸಿಕೊಂಡುಬಿಟ್ಟೆ. ಆದರೆ ಇಲ್ಲಿ ನಾನು ಹವ್ಯವಾಹನನನ್ನು ಬಿಟ್ಟು, ಹವಿಸ್ಸನ್ನು ಸ್ವೀಕರಿಸುವ ಇತರ ದೇವತೆಗಳು ಎಂಬರ್ಥದಲ್ಲಿ ಪದ್ಯ ಹೊಸೆದಿರುವೆ. ಇದೂ ಸಾಧುವೆಂದಾದರೆ ಧನ್ಯ.
ಸತಿ ತಾನಾದ ಸುಕಾಲದಿಂ ಜನಕಜಳ್| ತಾ ಭಾಜನಳ್ ಯಜ್ಞಕಂ
ಅತಿರಾತ್ರಾದಿ ಮಹಾಸವಂಗಳನವಳ್| ಗೈದಿರ್ಪಳೆಂತೋ, ಸದಂ
ಚಿತಿಯೊಳ್ ನೀಡಿದ ಭಾಗಮಂ ಗಳಿಸುತಲ್| ಹಾರೈಕೆ ಪೇಳ್ದಾ ಹವಿ
ಷ್ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಪ್ರಸಾದರೆ- ಬಂಧ ಚೆನ್ನಾಗಿದೆ. ಕೀಲಕವೂ ಸಾಧು. ಎರಡನೆಯ ಪಾದದಲ್ಲಿ ವಿಸಂಧಿ ಆಯಿತಲ್ಲ (ಅತಿರಾತ್ರಾದಿ)
ಹವಿಷ್ಪತಿ ಎಂದರೆ ಅಗ್ನಿಯಲ್ಲ. ಅಗ್ನಿ ಹವ್ಯವಾಹನ ಅಷ್ಟೆ. ಅದು ಒಳಿತೇ ಆಯಿತು. ಏಕಂದರೆ ನೀವು ಅಗ್ನಿಯನ್ನು ಸದಂಚತಿಯಲ್ಲಿ ಆಗಲೆ ಆವಾಹನೆ ಮಾಡಿಯಾಗಿದೆ. ಹಾಗಾಗಿ ಹವಿಷ್ಪತಿ ಅಗ್ನಿಯಾಗಿದ್ದರೆ ಅರ್ಥ ಹಳಿ ತಪ್ಪುತ್ತಿತ್ತು.
1) ಹೌದು. ವಿಸಂಧಿ ಆಯಿತು. ಸ್ವಲ್ಪ ತಿಣುಕಿ ಕೈಬಿಟ್ಟಿದ್ದೆ.
2) ಅಬ್ಬ! ಇಷ್ಟೆಲ್ಲವನ್ನೂ ನಾನೂ ಯೋಚನೆ ಮಾಡಿದ್ದೆ – ‘ಅಂಚಿತಿ’ಯನ್ನು ಆಗಲೇ ತಂದಿದ್ದೇನೆ, ಹವಿಷ್ಪತಿಯೂ ಅಗ್ನಿ ಎಂದಾದರೆ ಅನರ್ಥವಾಗುತ್ತದೆ ಇತ್ಯಾದಿ. ಮರ್ಮಸ್ಥಾನಕ್ಕೇ ಕೈಹಾಕಿದ್ದೀರಿ! ವಿಮರ್ಶೆಗಾಗಿ ಧನ್ಯವಾದಗಳು.
Seeta has no worries about warding off Ravana. He dare not touch her. Her only worry is about the number of oceans (ನಿಮ್ನಗಾಪತಿಗಳ್) Rama has to cross to reach Lanka. I have based this composition on the song ಏಳೇಳು ಶರಧಿಯು ಏಕವಾಗಿದೆ ಕಂಡ್ಯ, ಹೇಗೆ ಬಂದೆಯೋ ಹೇಳು ಕೋತಿ.
ಸತಿ ಧರ್ಮಿಷ್ಠಳಿರಲ್, ಕಲಂಕಮಿರದೆಲ್ ತಾನಿದ್ದಳಾ ಲಂಕೆಯೊಳ್
ದಿತಿಪುತ್ರನ್ ಕರಕಾಗುವನ್ ಚಣದೊಳಂ| ತಾ ಸೀತೆಯಂ ಸಾರ್ದೊಡಂ
ವ್ಯಥೆಯಿಂತಂತುಟೆ ಲಂಕೆಗಂ ರಘುವರನ್| ದಾಂಟಲ್ಕಿಹಾ ನಿಮ್ನಗಾ-
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
(Prasa exception in 3rd line)
ನಿಮ್ನಗಾಪತಿ = ocean? or worry?
ಅರ್ಥ ಯಾವುದಾದರೂ, ‘ಮಂದಿ’ ಎಂಬುದಕ್ಕೆ ಹೊಂದುವುದಿಲ್ಲ. ಹಿಂದಿನ ವನಸ್ಪತಿಗಳ ಹಾಗೆಯೇ ಇದು ಕೂಡ.
ರಾಮ್,
ನಿಮ್ನಗಾ = ನದಿ (ಕೆಳಗೆ ಹರಿಯುವಂಥದು). ನದಿಗಳ ಪತಿ = ಸಮುದ್ರ. Worry ಹೇಗೆ?
ನಿಜವೇ. ಕನ್ನಡದಲ್ಲಿ ಸಮುದ್ರ, ವನಸ್ಪತಿಗಳು ನಪುಂಸಕಲಿಂಗವೇ. ಇವನ್ನು ಸಮುದ್ರರಾಜ, ವೃಕ್ಷರಾಜ ಎಂಬಂತೆ ಗ್ರಹಿಸಬೇಕು.
ಪ್ರಸ್ಸದು,
ocean or worry ಎಂದು ಕೇಳಿದ್ದು ನಿಮ್ಮ ವ್ಯಾಖ್ಯಾನದಿಂದಾಗಿ. ನಿಮ್ನ ಅಂದರೆ ಆಳ ಎಂದೂ ಅರ್ಥವಿದೆಯಲ್ಲವೇ?
ಮರ ಅಥವಾ ಸಮುದ್ರಕ್ಕೆ ಪುಲ್ಲಿಂಗವನ್ನು ಉಪಯೋಗಿಸುವುದರಲ್ಲಿ ನನ್ನ ಅಭ್ಯಂತರವಿಲ್ಲ. ಕುವೆಂಪುರವರು ‘ಮರನು’ ಎಂದುಪಯೋಗಿಸುತ್ತಾರೆ. ಆದರೆ, ಮಂದಿ ಅಂದರೆ – ಜನ ಅಥವಾ ಜನಸಮೂಹ. ಮರಗಳ ಅಥವಾ ಸಮುದ್ರಗಳ ಗುಂಪಿಗೆ ಮಂದಿ ಎಂದು ಅರ್ಥೈಸುವುದು ಸ್ವಲ್ಪ ಕಷ್ಟ – ಅಷ್ಟೆ.
ನಾನೇನು ಸುಲಭದ ಪದ್ಯ ಬರೆದಿದ್ದೇನೆ ಎಂದುಕೊಂಡಿರ? 😉
ಇರಲಿ. ನಿಮ್ಮ ಮಾತಿನಿಂದಲೇ justificationನ್ನು ಮೊಗೆದುಕೊಳ್ಳುತ್ತೇನೆ. ‘ಮರನು’ ಸಾಧು ಎಂದಿದ್ದೀರಿ.
ಮರನು > ಮರರು > ಮರರ ಗುಂಪು ಆಗೋಲ್ಲವೆ?
Ultimately, ಮರ/ಸಮುದ್ರರನ್ನು ‘ಮಂದಿ’ ಎನ್ನಲಾಗದು ಎಂಬುದನ್ನು ನಾನು ನಿರಾಕರಿಸಲಾರೆ.
ಅಲ್ಲ ಇಲ್ಲಿ ಅಷ್ಟು ಗೊಂದಲಕ್ಕೆ ಕಾರಣವಿಲ್ಲ ಅಂತ ನನಗೆನಿದುತ್ತೆ
-ಪತಿಗಳ್ಸೀತೆಗದೆಷ್ಟು? ಮಂದಿ ಗಣಿಸಲ್ಕೇನೊರ್ವರೇಯೀರ್ವರೆ?
ಅಂತ ಬಿಡಿಸಿಕೊಂಡರಾಯಿತು.ಅಂದರೆ ಜನ ಎಣಿಸಲು ಏನೊಬ್ಬರೆ ಇಬ್ಬರೆ ಅಂತ ಹೇಳಿದ ಹಾಗಾಯಿತು.
ಅಂದಹಾಗೆ ಮರನ್ ನೆಲನ್ ಮುಂತಾದ ರೂಪಗಳು ಕವಿಗಳು ತಮ್ಮ ಸ್ವೇಚ್ಛೆಯಿಂದ ಮಾಡಿಕೊಂಡಿದ್ದಲ್ಲ. ಅವೆ ಸಾಧು ರೂಪಗಳು ಮತ್ತೆ ಮರಂ ನೆಲಂ ಈ ಪದಗಳಿಗೆ ಪರ್ಯಾಯವಾಗಿ ಬೇರೆಯ ನಾಮಪದಗಳ ಸಾಮ್ಯದಿಂದ ಹುಟ್ಟಿದುವು ಎನ್ನುವುದು ಭಾಷಾತಜ್ಞರ ನಿಲುವು.
ಸೀತೆಯ ಬಾಲ್ಯದ ಸ್ವಾರಸ್ಯಗಳ ಮುಂದುವರಿಕೆ ::
ಮತಿ ಚಾತುರ್ಯಮದೆಂತು ಪೇಳ್ವುದಮಮಾ ಮುಗ್ಧಸ್ವಭಾವಂಗಳೊಳ್
ಪಿತ, ಮಾತಾ, ಗುರು, ರಾಜ, ರಾಣಿ, ಜನರಂ ಕೂಡಾಡುತಾ ಬಿಂಬಿಪರ್
ಸತಿಪಾತ್ರಂಗಳೆ ಬಾಲೆಪಾಲಿಗೆ ಬರಲ್ಕಾಬಾಲ್ಯದಾಟಂಗಳೊಳ್
ಪತಿಗಳ್ ಸೀತಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೋರ್ವರೇನಿರ್ವರೇ
ನತಿಯಾಯ್ತೀ ಪರಿ ಕೇಳ್ವಿ ಕೇಳ್ವುದನಿತುಂ ರಾಮಾಯಣಂ ಬಲ್ಲನಂ
ಖತಿಯೈಯಾಲಿಸು ಪೇಳ್ವೆನಾ ತರಣಿಯಾ ಸದ್ವಂಶವೃತ್ತಾಂತಮಂ
ಸತಿಯಾ ಸೀತೆಗಮವರೈ ಧವರವರ್ ಮಾದ್ರೀಸುತರ್ ಪಾಂಡವರ್
ಕ್ಷಮಿಸಿ, ಕೊಂಚ ಎಡವಟ್ಟಾಗಿತ್ತು ಈಗ ಸವರಿದ್ದೇನೆ:
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೋರ್ವರೇನಿರ್ವರೇ
ನತಿಯಾಯ್ತೀ ಪರಿ ಕೇಳ್ವಿ ಕೇಳ್ವುದನಿತುಂ ರಾಮಾಯಣಂ ಬಲ್ಲನಂ
ಖತಿಯೈಯಾಲಿಸು ಪೇಳ್ವೆನಾಂ ತರಣಿಯಾ ಸದ್ವಂಶವೃತ್ತಾಂತಮಂ
ಸತಿಯಳ್ ಸೀತೆಗಮವರೈ ಧವರವರ್ ಮಾದ್ರೀಸುತರ್ ಕೌರವರ್
i really enjoy this though i can not write single line of poetry i really enjoyed reading this with help from my patideva (single) about number of pati’s for seetha kannada bari first language odidini hagagi bari hosagannada barathe halegannada artha aagathe
padma bangalore
4-3-13
That is paradoxical – Your patideva being ‘single’ despite being married to you!
Well, we invite you to give half an hour a day to video lessons in prosody available in the link ‘Learn Prosody’ at the top of this page.