Feb 182013
ಈ ಸಮಸ್ಯೆಯ ಉಳಿದ ಸಾಲುಗಳನ್ನು ಒದಗಿಸಿ ಸಮಸ್ಯೆಯನ್ನು ಪರಿಹರಿಸಿ
ಸಂಸ್ಕೃತದಲ್ಲಿ
दश भवन्ति मनोभवसायकाः (द्रुतविलम्बिता)
ಕನ್ನಡದಲ್ಲಿ ಪೂರಣ ಮಾಡಬಯಸುವವರಿಗೆ
ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ
ಅಥವಾ
ಮನ್ಮಥನ ಬಳಿ ಹತ್ತುಬಾಣಗಳಿರುವುದೇ ನಿಜವೈ (ಭಾಮಿನೀ ಷಟ್ಪದಿ)
ಈ ಸಮಸ್ಯೆಯ ಉಳಿದ ಸಾಲುಗಳನ್ನು ಒದಗಿಸಿ ಸಮಸ್ಯೆಯನ್ನು ಪರಿಹರಿಸಿ
ಸಂಸ್ಕೃತದಲ್ಲಿ
दश भवन्ति मनोभवसायकाः (द्रुतविलम्बिता)
ಕನ್ನಡದಲ್ಲಿ ಪೂರಣ ಮಾಡಬಯಸುವವರಿಗೆ
ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ
ಅಥವಾ
ಮನ್ಮಥನ ಬಳಿ ಹತ್ತುಬಾಣಗಳಿರುವುದೇ ನಿಜವೈ (ಭಾಮಿನೀ ಷಟ್ಪದಿ)
ಮನಸಿಜನ ದೆಸೆಯಿಂದೆ ಮೂಡಿರ
ಲನುಭವವು ದಶರಸವ ತುಂಬಿರೆ
ಮನದೊಳಗೆ ಬಗೆ ಹತ್ತು ಭಾವಗಳಿರುವುದೇ ದಿಟವೈ ।
ಮನುಜ ಚಂಚಲ ಚಿತ್ತ ಚಲಿಸಿರ
ಲನುದಿನವು ದಶದಿಶೆಗೆ ವೇಗದಿ
ಮನಸಿಜನ ಬಳಿ ಹತ್ತು ಬಾಣಗಳಿರುವುದೇ ನಿಜವೈ ।।
ಒಳ್ಳೆಯ ಪರಿಹಾರ; ಶೈಲಿಯೂ ಚೆಲುವಾಗಿದೆ. ಪದ್ಯವಿದು ಅನವದ್ಯ. ಅಭಿನಂದನೆಗಳು
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಗಣೇಶ್ ಸರ್ .
ಮೊದಲೊಳ್ ಬಿಣ್ಗನ್ನಡದೊಳ್ ಸಮಸ್ಯಾಪೂರಣಂ:
ಮನ್ಮನಃಪ್ರಿಯನಾಸ್ಯಕಮಲಂ
ಹೃನ್ಮನೋಹರನಯನಕುಮುದಂ
ತನ್ಮಯೀಭವದಧರವಂಜುಲಮಂತೆಯೇ ಕಲೆಯಲ್ |
ಚಿನ್ಮಯಂ ರಸನಾಮ್ರಕಿಸಲಯ-
ಮುನ್ಮದಂ ಸ್ಮಿತಮಲ್ಲಿಕಾದೃತಿ;
ಮನ್ಮಥಂ ಶರದಶಕಯುತನೆನೆ ಸರ್ವಥಾ ಯುಕ್ತಂ||
इदानीं संस्कृतसमस्यापूरणम् :
प्रियतमामथ घातयितुं तथा
प्रियतमं च परस्परलॊकितैः।
स्मितवचःपरिपाकविशॆषकै-
र्दश भवन्ति मनॊभवसायकाः
ಭಾಮಿನಿಯ ರೂಪಲಾವಣ್ಯಕ್ಕೆ-ಒನಪುವಯ್ಯಾರಕ್ಕೆ-ಬೆಡಗುಬಿನ್ನಾಣಕ್ಕೆ ಮನಸೋತ ರಸಿಕನಿಗೆ, ಮನಸಿಜನ ಬಾಣಗಳೆಷ್ಟು ನಾಟಿದವು ಎಂಬುದರ ಎಣಿಕೆ ತಪ್ಪುತ್ತಲೇ ಇತ್ತು :
ಮನಸಿನಲಿ ಭಾಮಿನಿಯ ನೆನೆಸುತ
ಕನಸು ಕಾಣುತಲಿರ್ದೆನೀಪರಿ
ಎನಿತು ಸೊಗಸಿನ ರೂಪರಾಶಿಯು ಎನ್ನ ಮಣಿಸಿಹುದು |
ತಿನಿಸು ಬೇಡೆಲೆ ಊಟರುಚಿಸದು
ತಣಿಸೆ ತನುವನು ಬೇಕು ಅವಳೇ
ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ ||
ಎಣಿಸುತೊಂದನು ಕಂಡೆ ಮಗ್ಗುಲೊ
ಳನತಿ ದೂರದಿ ಕಂಡೆ ಚೂತವ
ತಿಣುಕಿ ತೆಗೆದರೆ ಮತ್ತೆ ನಾಟುವುದೊಂದು ವೇಗದಲಿ |
ಘನಥರದ ಗಾಯಂಗಳೆದೆಯಲಿ
ಕನಿಕರದಿ ಬಿಡಲೊಲ್ಲ ರತಿಪತಿ
ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ ||
ಕೆಣಕುತಷ್ತೆಸೆದಿರ್ದನೆನ್ನಲು
ಸೆಣಸುತಿಹಳಲ ಹುಲ್ಲೆಗಣ್ಣೊಳು
ಅನುಸರಿಸಿ ಬಳಿಸಾರಿ ನಡೆವೇಂ ಬಾಹಳೇ ಅವಳು?
ಮಿಣುಕು ನೋಟದೆ ಮಿಂಚ ಪಸರಿಸೆ
ಎಣಿಕೆ ತಪ್ಪಿತು ಐದು ಆರೆನಲ್
ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ ||
(with corrections from Dr.Ganesh)
मधुरसावृतुपञ्चकवैरिणो
दमयितुं विनियोज्यशरावलिं |
गणयते यदि मारशरैस्तथा
दश भवन्ति मनोभवसायकाः ||
ಮನ್ಮಥನು ತನ್ನ ಸ್ನೇಹಿತನಾದ ವಸಂತನ ಆಗಮನಕ್ಕೆ ತಡೆಯೊಡ್ಡುವ ಇತರ ಐದು ಋತುಗಳನ್ನು ನಿವಾರಿಸುವುದಕ್ಕೆ (ಋತುವೊಂದಕ್ಕೆ ಒಂದು ಬಾಣ) ವಿನಿಯೋಗಿಸುವ ಐದು ಬಾಣಗಳನ್ನು ಪ್ರಸಿದ್ಧವಾದ ಅವನ ಇತರ ಐದು ಬಾಣಗಳೊಂದಿಗೆ ಸೇರಿಸಿದರೆ ಹತ್ತಾಗುತ್ತದೆ ಎನ್ನುವ ಕಲ್ಪನೆ.
ಪ್ರಿಯ ರಾಘವೇಂದ್ರ,
ಇಲ್ಲಿ ವಸಂತನೇ ಕರ್ತೃ. ಮನ್ಮಥನು ಕರ್ತೃವಲ್ಲ! ಅಲ್ಲವೇ?
ಪ್ರಿಯ ವಿಘ್ನೇಶ ಭಟ್ಟರೇ,
ಪದ್ಯದಲ್ಲಿನ ಅರ್ಥ ಸ್ಪಷ್ಟತೆಯ ಅಭಾವವನ್ನು ತಿಳಿಸಿ ಸಹಾಯವನ್ನೇ ಮಾಡಿದ್ದೀರಿ. ಮೊದಲ ಸಾಲನ್ನು ಹೀಗೆ ಸವರಣೆ ಮಾಡಬಹುದೇನೋ
मधुसखेन सुहृत्परिपन्थकान्
सुहृत्परिपन्थक —> सुहृदः परिपन्थक ಅಂದುಕೊಂಡಿದ್ದೇನೆ.ಪೂರ್ಣ ಪದ್ಯ ಹೀಗಾಗುತ್ತದೆ
मधुसखेन सुहृत्परिपन्थकान्
दमयितुं विनियोज्यशरावलिं |
गणयते यदि मारशरैस्तथा
दश भवन्ति मनोभवसायकाः ||
ರಾಘವೇಂದ್ರ!
ಕ್ಷಮಿಸಿ. ಸವರಣೆಯಲ್ಲೂ ತಪ್ಪು ನುಸುಳಿದೆ. “ಗಣಯತೇ” ಎಂಬಕ್ರಿಯಾಪದವು ಕರ್ತರಿ. ಅದು “ಗಣ್ಯತೇ”ಎಂದಾಗಬೇಕು.ಆದರೆ ಆಗ ವೃತ್ತ ಕೆಡುತ್ತದೆ.ಅಲ್ಲದೇ ಮಧುಸಖನು ಮನ್ಮಥನೇ ಆಗಿರುವುದರಿಂದ “ಮಾರಶರೈಃ” ಪುನರುಕ್ತಿದೋಷವು ಎಡತಾಕುತ್ತದೆ.ಆದ್ದರಿಂದ ನನ್ನ ಸಲಹೆ ಹೀಗೆ-
…………………………..
……….ವಿನಿಯುಕ್ತಶರಾವಲಿಃ |
ಯದಿ ತದಾ ಸ್ವಶರಕೈಃ ಸಹ ಗಣ್ಯತೇ
………………………………….|| (ಗಣಕಯಂತ್ರದಲ್ಲಿ ಸಂಸ್ಕೃತ ಅಕ್ಷರಗಳು ಸರಿಯಾಗಿ ಮೂಡದಿದ್ದರಿಂದ ಕನ್ನಡದಲ್ಲಿ ಬರೆದಿದ್ದೇನೆ)
ಒಬ್ಬ ಅಯೋಗ್ಯಪುರುಷನು ಇಬ್ಬರೊಡನೆ ಪ್ರೇಮಸಲ್ಲಾಪವಾಡುವುದನ್ನು ನೋಡಿ ಜನ ಹೇಳುವ ಮಾತು
ಅನುಪಮಳೆ ನೀನೆನ್ನ ಕಯ್ವಿಡಿ-
ದನುನಯಿಸು ಕಾಲ್ವಿಡಿವೆ ಸು೦ದರಿ-
ಯನಲಬಾಧೆಯ ತೊಡೆಯದೆನ್ನುತಲೀರ್ವ ವನಿತೆಯರ೦
ಅನುದಿನವು ಯಾಚಿಸುತಲೊರ್ವಳ
ಸನಿಹ ಮತ್ತೊರ್ವಳನು ಮುಚ್ಚಿಡೆ
ಮನಸಿಜ೦ ಶರದಶಕನೆ೦ಬುದು ಸರ್ವಥಾ ಯುಕ್ತಂ
ಕನ್ನಡದಲ್ಲಿ ಸಮಸ್ಯಾಪೂರಣ ಮಾಡುವಲ್ಲಿ ನನ್ನ ಮೊದಲ ಪ್ರಯತ್ನ. ತಪ್ಪುಗಳಿದ್ದರೆ ತೋರಿಸಿಕೊಡಿ
ಮನಸಿಜನು ಹತನಾದರೇನು ಶಿ-
ವನ ಮನಸ್ಸನು ಗೆದ್ದ ಗಿರಿಜೆಗೆ
ಮನವನರ್ಪಿಸಲೆಂದು ಬಂದನು ಹರನು ತಾ ಭರದಿ ।
ನಯನಪಂಕ್ತಿಯ ನೋಡಿ ಪಂಚಾ-
ನನನ, ಸತಿ ತಾ ಮನಕೆ ಪೇಳ್ದಳು
“ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ” ।।
ಪಂಕ್ತಿ = ಹತ್ತು
ಪ್ರಿಯ ರಾಘವೇಂದ್ರ! ಅತೀವಸುಂದರವೂ ನಿರ್ದುಷ್ಟವೂ ಆದ ಭಾಮಿನೀ ಷಟ್ಪದಿ. ಮೊದಲ ಯತ್ನಕ್ಕೇ ಒಳ್ಳೆಯ ಇಳುವರಿಯನ್ನು ತೆಗೆದಿದ್ದೀರಿ. ಧನ್ಯವಾದಗಳು.
ರಾಘವೇಂದ್ರರೆ. ಚೆನ್ನಾಗಿದೆ. ನಾಲ್ಕನೆಯ ಪಾದದಲ್ಲಿ ಪ್ರಾಸ ತಪ್ಪಿದೆ.ತಕ್ಕ ಮಾರ್ಪಾಟು ಮಾಡಿ ಸರಿಪಡಿಸಿರಿ
@ಗಣೇಶರೇ,
ಧನ್ಯವಾದಗಳು.
@ಶ್ರೀಕಾಂತರೇ,
ಪ್ರಾಸಸ್ಥಾನದಲ್ಲಿರಬೇಕಾದ ‘ನ’ ಒಂದು ಅಕ್ಷರ ಮುಂದೆ ಹೋಗಿದ್ದನ್ನು ಗಮನಿಸಿರಲಿಲ್ಲ . ಹೀಗೆ ತಿದ್ದಿದ್ದೇನೆ
ಮನಸಿಜನು ಹತನಾದರೇನು ಶಿ-
ವನ ಮನಸ್ಸನು ಗೆದ್ದ ಗಿರಿಜೆಗೆ
ಮನವನರ್ಪಿಸಲೆಂದು ಬಂದನು ಹರನು ತಾ ಭರದಿ ।
ನೆನೆದು ಪಂಚಾನನನ ಕಣ್ಗಳ
ಮನಕೆ ಸತಿ ತಾ ನಾಚಿ ನುಡಿದಳು
“ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ” ।।
ವನಿತೆ ವಿಟನನುರಕ್ತಿಯರಸುತ
ಸನಿಹಕೈತರುತಿರುತಲನುಮಿಸೆ
ತನಿಯಲಿರ್ದವನೆದ್ದು ಬಳಸಿಹ ಬಾಹು ಬ೦ಧನದಿ |
ತನುಗಳೆರಡದೊ ಬೆಸೆಯುತಿರೆ ಪೂ
ಕಣೆಗಳುಭಯರ ಸೋ೦ಕಲರಿತರು
ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ ||
Please review and correct this verse (solution based on q & a)
कति दिशोवद चातुरबालकः?
हृदि हतोपि च जीवति कश्चिरं?
युधि किमीश्र्यति शत्रु निबर्हणः?
‘दश भवन्ति’ ‘मनोभव’ ‘सायकाः’
कः ಪುಲ್ಲಿಂಗ ಆದ್ದರಿಂದ हतमपि हतोऽपि ಎಂದಾಗಬೇಕು. ಆಗ ಛಂದಸ್ಸು ಕೆಡುತ್ತದೆ. ಹೀಗೆ ಸಾವರಿಸಬಹುದೇನೋ मनसि जीवति को नु हतोऽपि माम् . ಇದು ತುಂಬಾ ಒಳ್ಳೆ ಶೈಲಿಯ ಸವರಣೆ ಏನಲ್ಲ 😛
Thanks raghavendra 🙂 ‘ हतमपि’ is wrong, I have corrected it as ‘हृदि हतोपि च जीवति कश्चिरं?’. tried to avoid ‘माम्’ though it is true ;). Pl check whether it is ok now
dear Somanna,
firstly many many thanks for attempting in samskruta.
Sorry I got your verse by mail as हतमपि ह्रदि जीवति कश्चिरं. so in an attempt to bring the same idea i suggested the above. but still my objection for हतमपि is valid. also by sandhi rules प्रयतः + न becomes प्रयतो न.
Dear Raghavendra,
I am editing my verse parallely at the source and hence the confusion, please check now 🙂
similar to प्रयतः + न = प्रयतो न we get दिशः + वद = दिशो वद .other than that i can’t find anything else
corrected thanks 🙂
ಮನದ ಹರಣವದಾಗಿ ಕೂರ್ಮೆಯ –
ದಿನಿತುವಡ್ಡಿಗಳಿರದೆ ಹರಿದಿರೆ
ತನುವ ಕಣಕಣವೇಳುತರಳುವ ಹರ್ಷದುನ್ಮಾದ |
ಮನನಕೆಟುಕದ ಗಣಿಸಲಾಗದ
ಅನುಭವಂಗಳು ಕುಹಕಗೈಯವೆ :
“ಮನಸಿಜ೦ ಶರದಶಕನೆ೦ಬುದು ಸರ್ವಥಾ ಯುಕ್ತಂ” ?
ಅನುದಿನ ಕಠಿಣ ತಪವಗೈದಿರ
ಲನಿಮಿಷನ ಸಖಿ ಮೇನಕೆಯ ನ
ರ್ತನಕೆ ಚಂಚಲ ಚಿತ್ತನಾಗೆಚ್ಚೆತ್ತನಾ ಮುನಿಯು |
ತನುವ ಕಂಡು ಪುಳಕದಲಿ ಮಹಾ
ಮುನಿಯುಲಿದನೈ ಮೋಹದಿಂದಲಿ
ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ ||
ಕಾದಲೆಯರೊಳು ಗಳಹುವಂದದಿ
ಕಾದಲೆನಗಾಗದೆನೆ ಗಣಿಸುತ
ಕೈದುಗೊಳ್ಳದೆ ಗಡಗಡನೆ ನಡುಗಿದ್ದನುತ್ತರನು
ಈ ದಶೆಯಲವನೆಡೆಗೆ ಬಿಡಿಶರ
ಹಾದು ಬರಲದು ಹಡೆದು ಸಲೆ ಹ-
ತ್ತಾದುದಳುಕಿದವಗೆ ಮನೋಭವ ಬಾಣ ಹತ್ತಲ್ತೆ!
ಮನೋಭವ- ಕಾಲ್ಪನಿಕ
ಕಾಮನನ್ನೇ ದೂರವಿಟ್ಟು ಮಾಡಿದ ಪರಿಹಾರ ಚೆನ್ನಾಗಿದೆ.
Thanks
१) प्रतिवनेषु मधौ रसशालिषु
प्रतिसुमॆषु वधूष्वपि सालिषु ।
प्रगुणितॆ सुषमॆ जगतीतले
दश भवन्ति मनॊभवसायकाः ॥
ವಸಂತ ಕಾಲದಲ್ಲಿ ಎಲ್ಲಾ ವನಗಳೂ ಸೌಂದರ್ಯಭರಿತವಾದಾಗ, ಪ್ರತಿಯೊಂದು ಪುಷ್ಪಗಳಲ್ಲಿ ದುಂಬಿಗಳೂ, ಪ್ರತಿಯೊಂದು ಯುವತಿಯರಲ್ಲಿ ಪ್ರಿಯಕರರು ಜೊತೆಗೂಡಿರುವಾಗ, ಜಗತ್ತಿನಲ್ಲೆಲ್ಲ ಸೌಂದರ್ಯವು ಇಮ್ಮಡಿಸಿರಲು, ಮನೋಜನ ಶರಗಳು ಹತ್ತಾಗುತ್ತವೆ.
ಸಂಸ್ಕೃತದಲ್ಲಿ ಮತ್ತೊಂದು ಪೂರಣ.
॒२) बहुतिथॆ वितथे प्रियसङ्गमे
मुहुरहॊ! विरहॊपचये प्रिया ।
गणयति स्म मुधा दिवसान्यथा
दश भवन्ति मनॊभवसायकाः ॥
ಬಹುದಿನಗಳು ಕಳೆದರೂ ಪ್ರಿಯಕರನ ಸಹಯೋಗವು ನಿಜವಾಗದಿದ್ದಾಗ ಮತ್ತೆ ವಿರಹವು ಚಿಗಿಯಲು ತೊಡಗುತ್ತಿರುವಾಗ ವಿರಹಕಾತರೆಯಾದ ನಾಯಕಿಯು ಮನ್ಮಥನ ಬಾಣಗಳು ಹತ್ತಾಗುತ್ತಿವೆ ಎಂಬಂತೆ ಹಿಂದುಮುಂದಿನ ದಿವಸಗಳನ್ನು ವ್ಯರ್ಥವಾಗಿ ಎಣಿಸುತ್ತಿದ್ದಳು.
ಕನ್ನಡದಲ್ಲೊಂದು ಪ್ರಯತ್ನ
೩) ಅನವರತ ಕುಸುಮಗಳ ಕೋಮಲ
ತನದ ದೆಸೆಯಿಂ ಘಾಸಿಗೊಳ್ಳದೆ
ಘನತಪೋಬಲದಿಂದ ಮೆರೆಯುವ ಸಾಧುಸಜ್ಜನರಾ |
ಮನವ ಚಂಚಲಗೊಳಿಸಿ ಸುಮಚೇ
ತನೆಯರಾ ವಶಗೈಯಲೋಸುಗ
ಮನಸಿಜನ ಬಳಿ ಹತ್ತು ಬಾಣಗಳಿರುವುದೇ ನಿಜವೈ ||
ತುಂಬ ಸೊಗಸಾದ ಸಂಸ್ಕೃತಭಾಷಾಶೈಲಿ. ಧನ್ಯವಾದಗಳು. ಕನ್ನಡದ ಹದವೂ ಸೊಗಯಿಸಿದೆ.
ಧರೆಯೊಳೆಲ್ಲರು ಗೆಳೆಯರೆನಿಪರು
ಹರುಷವುಕ್ಕುತಲೇತರದಭಯ
ವಿರದು ಚಿತ್ತದಿ ಹೆಂಡಕುಡಿದಾ ಮತ್ತಿಳಿಯದನಕ
ಹೊರಡದೈ ರಸೆ ಹೊರಳುವುದು ಪದ
ವೆರಡೆರಡು ಕಾಣಿಸಲು ಹರಯದ
ತರುಣಿ ಮುಂದಿರೆ ಮನಸಿಜನಬಾಣಗಳು ಹತ್ತಹುದೈ
ತುಂಬ ಒಳ್ಳೆಯ ವಿನೂತನಕಲ್ಪನೆ; ಅಭಿನಂದನೆ.
Thanks Ganeshare. Please also look at my other poor and on post number 11
*poorana
ಜನ್ಮ ಜೀವಕದೈದು ಬಗೆಯಿಂ
ಸನ್ಮನವ ಮರುಳಾಗಿಸೆಳೆಯಲು
ತನ್ಮತಿಗೆ ಮತ್ತುಣಿಸೆ ಶಬ್ದ ಸ್ಪರ್ಶ ರುಚಿ ರೂಪಂ
ಉನ್ಮದವ ನವನಣ್ಣ ಪೊಡೆಯೊಳು
ಜನ್ಮತಳೆದವತುಂಬೆ- ತಮ್ಮಂ
ಮನ್ಮಥಂ, ಶರದಶಕಯುತನೆನೆ ಸರ್ವಥಾ ಯುಕ್ತಂ
ನನ್ನಲ್ಲಿ ಕೇವಲ ಐದೇ ಬಾಣಗಳಿವೆ. ಈ ಜೀವಸಂಕುಲವನ್ನು ಹೇಗೆ ಗೆಲ್ಲಲಿ ಎಂದು ಮನ್ಮಥ, ಅವನ ಅಣ್ಣನಾದ ಆ ಸೃಷ್ಟಿಕರ್ತನ ಸಹಾಯಬೇಡಿದಾಗ, ಬ್ರಹ್ಮ ಹೇಳಿದ: ತಮ್ಮ ಯೋಚಿಸಬೇಡೆ, ನಿನ್ನ ಹೊರಬಾಣಗಳಿಗೆ ಪೂರಕವಾಗಲು ಶಬ್ದಸ್ಪರ್ಷರೂಪರಸಗಂಧಗಳೆಂಬ ಒಳಬಾಣಗಳಿವೆ, ಹಾಗಾಗಿ ನೀನು ದಶಬಾಣನೇ ಎಂದಾಗ ಮದನ ವಿಜೃಂಭಿಸಿದ !
ಅತ್ಯದ್ಭುತಕಲ್ಪನೆ! ತುಂಬ ಸೊಗಸು!! ಧನ್ಯವಾದಗಳು.
ದುಷ್ಕರಪ್ರಾಸಗಳು ಪದಗಳ
ತಸ್ಕರಿಸೆ ಬಗೆಮುಂದುಕಾಣದೆ
ಶುಷ್ಕದಲೆತೊಟ್ಟಿಟ್ಟೆನಷ್ಟೇ, ಮೆಚ್ಚುಗೆಗೆನಮನ
fabulous. Apologies for not offering my congratulations in Kannada, I haven’t been able to work out how to do it.
ಬದರೀನಾಥರಿಗೆ ಧನ್ಯವಾದಗಳು. ಪದ್ಯಪಾನದ ಬಳಗದಲ್ಲಿ ನಿಮ್ಮಪರಿಚಯವಾದ ನೆನಪಿಲ್ಲ. ಸುಸ್ವಾಗತ.
ಬರಹ ಅಥವಾ kditor (Google Chrome) ಉಪಯೋಗಿಸಿ ಯತ್ನಿಸಿ.
ಅನವರತದೊಳು ತ್ಯಾಗರಾಜನು
ವಿನಯದಲಿ ಸೀತಾಪತಿಯನರ್ಚಿಸಿ
ಕನವರಿಕೆಯಲು ಭಕ್ತಿವೈರಾಗ್ಯವನೆ ನೆನೆದಾತ;
ಕೊನೆಯುಸಿರೆಳೆಯೆ ಮಡದಿ ಪಾರ್ವತಿ
ಯನುಜೆಯನು ಮರುಲಗ್ನವಾದನೆ!
ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ!!
(ವಾಗ್ಗೇಯಕಾರ ತ್ಯಾಗರಾಜರು ತಮ್ಮ ಪತ್ನಿ ಪಾರ್ವತಿ ಸಾವನ್ನೈದಿರಲು,ಆಕೆಯ ತಂಗಿ ಕಮಲೆಯನ್ನೇ ಮದುವೆಯಾದರೆಂಬುದು ಅವರ ಜೀವನ ಚರಿತ್ರೆಯಿಂದ ತಿಳಿದು ಬರುವ ಸಂಗತಿ. ಏಕಪತ್ನೀವ್ರತನಾದ ರಾಮನ ಅಪರಿಮಿತ ಭಕ್ತರಾದಂಥಾ ತ್ಯಾಗರಾಜರೇ ಹೀಗೆ ಎರಡನೇ ಮದುವೆಯಾಗಿರಲು, ಮನ್ಮಥನ ಬಳಿ ಐದು ಬಾಣಗಳ ಬತ್ತಳಿಕೆಯಲ್ಲ, ಅದರ ಎರಡರಷ್ಟು, ಅಂದರೆ ಹತ್ತು ಬಾಣಗಳು ಇದ್ದಿರಬೇಕೆಂಬ ಕಲ್ಪನೆ)
ಪ್ರಾಸಕ್ಕೆ ಪದವನ್ನು ಹುಡುಕುತ್ತಿದ್ದಾಗ ನೆರವಾದ ಗೆಳೆಯ ಸುಬ್ರಹ್ಮಣ್ಯ ಭಟ್ ಅವರಿಗೆ ವಂದನೆಗಳು 🙂
(ಕ್ಸಮಿಸಿ – ತಪ್ಪಾದ ಸಾಲುಗಳಿರುವ ಪದ್ಯವನ್ನು ಪೋಸ್ಟಿಸಿದ್ದೆ. ಕಾಪಿ-ಪೇಸ್ಟ್ ಮಹಿಮೆ! ಅಲ್ಲೇ ತಿದ್ದುವ ಅವಕಾಶವಿಲ್ಲದ್ದರಿಂದ ಮತ್ತೆ ಹಾಕುತ್ತಿದ್ದೇನೆ)
ಅನವರತದೊಳು ತ್ಯಾಗರಾಜನು
ವಿನಯದಲಿ ಜಾನಕಿಯ ಪತಿಯನೆ
ಕನವರಿಕೆಯಲು ಭಕ್ತಿವೈರಾಗ್ಯದಲಿ ನೆನೆದಾತ;
ಕೊನೆಯುಸಿರೆಳೆಯೆ ಮಡದಿ ಪಾರ್ವತಿ
ಯನುಜೆಯನು ಮರುಲಗ್ನವಾದನೆ!
ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ!!
ಕ್ಷಮಿಸಿರಿ; ನಿಮ್ಮ ತಿದ್ದುಗೆಯನ್ನು ತಿಳಿಯದೆ ಅಭಿಪ್ರಾಯ ನೀಡಿದೆ.
ಅತ್ಯಂತಸುಂದರಕಲ್ಪನೆ; ಧನ್ಯವಾದಗಳು. ಆದರೆ ಎರಡನೆಯ ಪಾದದಲ್ಲಿ ಸ್ವಲ್ಪ ಛಂದಸ್ಸು ಎಡವಿದೆ. ದಯಮಾಡಿ ಸವರಿಸಿರಿ
ಮತ್ತೊಂದು ಸಂಸ್ಕೃತದ ಪರಿಹಾರ:
रतिकपॊलमनॊहरदर्पणॆ
निजशरान् प्रविलोक्य मुदा स्मरः।
समदमाह बली किल लीलया
दश भवन्ति मनोभवसायकाः॥
ಕನವರಿಕೆಯೊಳುಮಮರಕೋಶಮ-
ನಿನಿತು ತಪ್ಪದೆ ಪೇಳ್ವ ಜಾಣಗ-
ದೆನಿತು ಬಾಣವು ಮನ್ಮಥ೦ಗೆನೆ ಕೇಳೆ ತಾ೦ ಪೇಳ್ದ೦
ನೆನೆಯುತರವಿ೦ದಮಿಹುದುನ್ಮಾ-
ದನದ ಪದ್ಯದೊಳೈದು ಐದೆನೆ
ಮನಸಿಜ೦ ಶರದಶಕನೆ೦ಬುದು ಸರ್ವಥಾ ಯುಕ್ತಂ
ಅಮರಕೋಶದಲ್ಲಿ ಮನ್ಮಥನಬಾಣಕ್ಕಿರುವ ಎರಡು ಪದ್ಯಗಳಿರುದನ್ನು ಕೂಡಿ ಹತ್ತು ಎ೦ದ ವಿದ್ಯಾರ್ಥಿಯ ಪರಿಹಾರ-
ಅರವಿ೦ದಮಶೋಕ೦ ಚ ಚೂತ೦ ಚ ನ ವಮಲ್ಲಿಕಾ ನೀಲೋತ್ಪಲ೦ ಚ…
ಉನ್ಮಾದನಃ ಸ್ಥಾಪನಃ ಚ ಶೋಷಣಃ ಸ್ಥ೦ಭನಸ್ತಥಾ ಸಮ್ಮೋಹನಶ್ಚ …
ಮುನಿದಪುಸಿನೋಟದೊಳು ಕೊಲ್ವಳ-
ದನುನಯಿಪ ನೋಟದೊಳು ಕೊಲ್ವಳು
ಮನಸಿಜ೦ ಶರದಶಕನೆ೦ಬುದು ಸರ್ವಥಾ ಯುಕ್ತಂ
ಅರ್ಧ ಭಾಮಿನಿ ಪೂರಣ 🙂
ಶಶಧರಾನನನಾಯಕ ಕಾಣದಿ-
ರ್ದಶನನೀರ್ ತೊರೆದಕ್ಕಟ ಬಾಡಿದಳ್
ದೃಶೆಗೆ ನಲ್ಲನ ನಲ್ಮೊಗ ಬಿದ್ದೊಡಂ
ದಶವದಾಯ್ತು ಮನೋಭವನಂಬುಗಳ್
ಅಷ್ಟಾವಧಾನ ಅತಿಸುಲಭ
ಶತಾವಧಾನ ಬಹುಸುಲಭ
ಅಷ್ಟೋತ್ತರಶತಾವಧಾನವೂ ಸುಲಭ
ಪತ್ನೀ ಅವಧಾನ ಎಂಬುದೊಂದುಂಟಯ್ಯಾ
ಆ (ರ್) ಗಣೇಶನಿಂದಲೂ ಸಾಧ್ಯವಿಲ್ಲ ನೋಡಾ
– ನೈಕಾವಧಾನೀ ಶ್ರೀರಾಮ ಡೊಂಗ್ರೆ
ದಯವಿಟ್ಟು ನಿಮ್ಮ ಹೆಸರು ತಿಳಿಸಿ. ಇಲ್ಲಿ ‘ಶ್ರೀರಾಮ ಡೋಂಗ್ರೆ’ ಹೆಸರಲ್ಲಿ ಬರೆಯುತ್ತಿರುವುದು ನಾನಲ್ಲ. ಇಲ್ಲಿ ಯಾರೋ ನನ್ನ ಹೆಸರಲ್ಲಿ ಬರೆಯುತ್ತಿರುವುದು ತಿಳಿಯಿತು ಹಾಗಾಗಿ ದಯಮಾಡಿ ನನ್ನ ಹೆಸರಲ್ಲಿ ಬರೆಯುವುದನ್ನ ನಿಲ್ಲಿಸಿ.
ಮತ್ತಪಿಕ ತಂಪೊಂದಿ ಪಾಯ್ವ ಮ
ರುತ್ತ ರಮ್ಯೋದ್ಯಾನ ಲತೆಗಳ್
ಪೆತ್ತಪೂಗಂಪಿತ್ತಲೆತ್ತಲು ಸುಳಿಯದರ ನಿಕರ
ಕುತ್ತುಗಳಿವಿರ್ಮಡಿಸವೇಂ ಸಖ
ನಿತ್ತ ಮಾತಿಗೆ ತಪ್ಪಿ ನಡೆದೊಡೆ
ಚಿತ್ತಜನ ಬತ್ತಳಿಕೆಯಲಿ ಕಣೆ ಹತ್ತು ಮೀರಹುದೈ
ಸಮಸ್ಯಾಪಾದದ adaptation ಚೆನ್ನಾಗಿದೆ. ಸ್ವಲ್ಪ ಸವರಣೆ: ಚಿತ್ತಜನ ಬತ್ತಳಿಕೆಯೊಳು ಕಣೆ ಹತ್ತ ಮೀರಹುದೈ
ದುಷ್ಕರ ಪ್ರಾಸಗಳನ್ನೊಳಗೊಂಡ ಪ್ರಶ್ನೆ ಕೊಟ್ಟಮೇಲೆ ಪೂರಣದ ಬಾಧ್ಯತೆ ಹೊತ್ತು ಈ ಪದ್ಯ 😛 ಹೆಚ್ಚು ಕಮ್ಮಿ ಬೇರೆಯವರು ಪ್ರಾಸ ಸ್ಥಾನಕ್ಕೆ ಬಳಸಿರುವ ಪದಗಳನ್ನೇ ಬಳಸಿ ಮಾಡಲು ಪ್ರಯತ್ನಿಸಿದ್ದೇನೆ. ತಪ್ಪುಗಳಿದ್ದರೆ ದಯವಿಟ್ಟು ತಿದ್ದಿರಿ
ಮೃಣ್ಮಯರ ದೇಹಂಗಳಲಿ ಹರಿ
ಸನ್ಮನಗಳಲಿ ಜಾಗ ಪಡೆಯಲು
ಜನ್ಮಗಳು ಹತ್ತೆತ್ತಿಯೂ ಉಪಯೋಗವಾಗದಿರಲ್ ।
ಚಿನ್ಮಯನು ತಾನಿಂತು ಪೇಳ್ದನು
ಹೃನ್ಮನಂಗಳ ಬೇಗ ಸೆಳೆಯುವ
ಮನ್ಮಥಂ ಶರದಶಕಯುತನೆನೆ ಸರ್ವಥಾ ಯುಕ್ತಂ ।।
ಹತ್ತು ಅವತಾರಗಳನ್ನು ಎತ್ತಿದರೂ ಜನರನ್ನು ‘ಮರುಳು’ ಮಾಡಲಾಗಲಿಲ್ಲ. ಜನರನ್ನು ಬೇಗ ಸೆಳೆಯುವ ಮನ್ಮಥನ ಬಳಿ ಐದಲ್ಲ ಹತ್ತು ಬಾಣಗಳೇ ಇರಬೇಕೆಂದು ಶ್ರೀಹರಿಯ ಅಂಬೋಣ 🙂
ರಾಘವೇಂದ್ರರ ಯತ್ನಸಫಲವು ಪ್ರಾಸಪೋಷಕವೇ…
ಉಳಿದಗೆಳೆಯರಿಗೊಂದು ಕಿವಿನುಡಿ…
ಕೊಟ್ಟಿರುವ ಪದಗಳನು ಪ್ರಾಸವ
ನಿಟ್ಟೆ ಪೂರಣವೆಸಗೆ ಸೊಗಯಿಪು
ದಷ್ಟೆ ! ಪ್ರಾಸಾಕ್ಷರವಬದಲಿಪುದಾರತೆಯು ಸುಲಭಂ !!
ಪಟ್ಟಿದಿಷ್ಟೆ ಸಮಸ್ಯೆ ಪದಗಳ
ಕಟ್ಟೊಡೆಯದೆಲೆ ಯತ್ನಿಸಲದೇಂ
ಪುಟ್ಟವೇ ಪದಪದ್ಯಪಾನಪ್ರತಿಭೆಮೂಸೆಯಲಿ
ಚ೦ದ್ರಮೌಳಿಯವರೇ ಒಪ್ಪುತ್ತೇನೆ ಸರ್,
ಇಲ್ಲೊ೦ದು ಪ್ರಯತ್ನ,
ಸನ್ಮನಸ್ಕಳು, ಜಾಣೆ, ಸುರಿಪಳ್
ಪೊನ್ಮಳೆಯ, ಕೋಮಲೆಯು, ಶೀಲೆಯು
ಹೃನ್ಮನವ ಗಾಯನದೆ, ನಾಟ್ಯದೆ, ಲಾಸ್ಯದೊಳ್ ತಣಿಪಳ್
ತನ್ಮಯಳುಮೆನ್ನಲ್ಲೆ, ಸು೦ದರಿ
ಜನ್ಮಸಾರ್ಥಕಮೆನುವ ವರನಿಗೆ
ಮನ್ಮಥಂ ಶರದಶಕನೆ೦ಬುದು ಸರ್ವಥಾ ಯುಕ್ತಂ
ತಾನು ವರಿಸುವ ವಧುವಿನಲ್ಲಿ ಹತ್ತು ಗುಣಗಳನ್ನು ಮನಸಾರೆ ಮೆಚ್ಚಿದ ಯುವಕನ ಭಾವ… 🙂
ಇನ್ನೊಂದು ಪ್ರಯತ್ನ, ಆಸ್ಟ್ರೋನಮಿ ಹಿನ್ನೆಲೆಯಲ್ಲಿ:
ಉತ್ತರದಲರೆಭಾಗ ಪೃಥಿವಿಗೆ
ಚಿತ್ತಚೋರ ವಸಂತ ಕಾಲದ
ಲತ್ತ ಹೂಡುವನೈದು ಹೂವಿನ ಶರವ ಮುದದಿಂದ
ಮತ್ತೆ ಪೋಗುವ ದಕ್ಷಿಣದ ಕಡೆ
ಗತ್ತ ಪ್ರೀತಿಯ ಸುಧೆಯ ಹಂಚಲು!
ಹತ್ತುಬಾಣಗಳಿಹುದೆ ಸೈ ಮನ್ಮಥನ ಚೀಲದಲಿ !
ಕೊ: ಮನ್ಮಥನು ವಸಂತ (ನೊಡನೆ) ಕಾಲದಲ್ಲಿ ಅರವಿಂದ ಅಶೋಕ ಚೂತ ನೀಲೋತ್ಪಲ ಮತ್ತು ನವಮಲ್ಲಿಕೆಗಳ ಬಾಣಗಳನ್ನು ಹೂಡಿ ಜೀವರಾಶಿಯಲ್ಲಿ ಪ್ರೀತಿ ಹುಟ್ಟಿಸುವನು. ಆದರೆ, ಭುವಿಯ ಉತ್ತರಾರ್ಧಗೋಳದಲ್ಲಿ ವಸಂತ ಗ್ರೀಷ್ಮವಾದ ನಂತರ ಅವನು ದಕ್ಷಿಣಾರ್ಧಗೋಳಕ್ಕೂ ಅಲ್ಲಿಯ ವಸಂತ ಕಾಲದಲ್ಲಿ ಹೂಡಿ ಹೊಸ ಬಾಣಗಳನ್ನು ಹೂಡುವುದರಿಂದ ಅವನ ಬತ್ತಳಿಕೆಯಲ್ಲಿ ಹತ್ತು ಬಾಣಗಳಿರಲೇಬೇಕೆಂಬ ಕಲ್ಪನೆ.
अयुतसूर्यनिभाकरशूलिनि
परिसहस्रविलोचनवाञ्छया
शतशितया कलया प्रयोजिताः
दश भवन्ति मनोभवसायकाः ||
ಮನೆಯವರ ಸಹಮತಿಯು ದೊರಕಿರ-
ಲಿನಿತು ಸಾಲದು ಯುವಕಯುವತಿಯ
ಮನದಿ ಪ್ರೀತಿಯ ಪುಟ್ಟಿಸಲ್ಕೆಂದೆಣಿಸಿ ಸುಮಶರದಿ |
ಇನಿಯನನು ನೋಯಿಸುವುದರ ಜೊತೆ-
ಗಿನಿಯಳನು ಸಹ ಘಾಸಿಪಡಿಸಲು
ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ ||
ಸರಳಗನ್ನಡದಲ್ಲಿ ಒಂದು ಬಾಲಿಶಪ್ರಯತ್ನ
Manmatha rides on a chariot formed by ten female figures – 2 form the wheels, one is co-charioteer to a parrot and the remaining form the body of the chariot.
ಬಿನದ ನೋಡುಗೆ ಮದನ ರಥವದು
ವನಿತೆಯರೆನಿತೊ ಹೆಣೆದುಕೊಂಡಂ
ತೊನಪಿನೀರ್ವರದಾಚಿನೀಚಿನ ಚಕ್ರದೊಳ,ಗೋರ್ವಳ್|
ಜಿನಸು ಹಿಡಿದಿರ್ದಾಗಿಳಿಯ ಬಳಿ,
ತನುವೆ ರಥದಿನ್ನೇಳು ಮಂದಿಯು!
ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ||
ಶರಭಪ್ರಾಸಕ್ಕೆ ಪೂರಣ:
ತನಗಿಂತ ಮುಂಚೆ (ಉನ್ಮುಖದೆ) ಹುಟ್ಟಿದ ಹತ್ತು ಮಂದಿ ಪ್ರಜಾಪತಿಗಳನ್ನು ಸಂಮೋಹನಗೊಳಿಸಿ ಅವರ ಆಯುಧ (ಬಾಣ)ಗಳನ್ನು ಕಿತ್ತುಕೊಂಡ ಕಾಮ ಎಂಬ (ಕ್ಷುದ್ರ)ಕಲ್ಪನೆ.
ಜನ್ಮ ತಾಳಿಹ ಕಾಮದೇವನ
ದುನ್ಮುಖರು ತಾವಾದ ನಂತರ
ಸನ್ಮತಿಗಳಾ ದಶಪ್ರಜಾಪತಿ, ತಾಳರವನಿದಿರು|
ಕ್ಷುನ್ಮದದೆ ನಿಜದಣ್ನರನು ತಾ
ನುನ್ಮಥವಗೈದವರಿನಾರ್ಜಿಸೆ,
ಮನ್ಮಥನ ಬಳಿ ಹತ್ತುಬಾಣಗಳಿರುವುದೇ ನಿಜವೈ||
ಹೊನಲದಿಳಿಮುಖಮಲ್ತು ಮದನಗೆ,
ಕೊನರುವುನ್ಮಾದವನು ಹಿಗ್ಗಿಪ,
‘ಜಿನಸು’ ಶಬ್ದವದಿಲ್ಲವಾತನದಾವ (ನಿ)ಘಂಟುವೊಳೂ|
ತಣಿದೊಡಂ ತಾ ಶ್ರಾಂತ ನಿರುವನ
ದನತಿ ಕಾಲವೆ, ಮತ್ತೆ ಮೊರೆವನು!
ಮನಸಿಜನ ಬಳಿ ಹತ್ತು(ಏರು)ಬಾಣಗಳಿರುವುದೇ ನಿಜವೈ||
ಅನುಮತಿಸೆ ಲೋಕದೊಳು ದಶಶಿರ
ನನುಗೆಡಲು ಕಾರಣನೆ ಕಾಮನು
ಮನಸಿಜನು ಶರದಶಕನೆಂಬುದು ಸರ್ವಥಾ ಯುಕ್ತಂ ।
ಅನುಭವದೆ ಲೋಕದಿ ದಶಭುಜ
ನನುಗುಣನು ಕಾಮಗೆನೆ ಕಾಣಲು
ಮನಸಿಜನು ಶರದಶಕಯುತನೆನೆ ಸರ್ವಥಾ ಯುಕ್ತಂ ॥
(ಅನುಗೆಡು – ದಾರಿತಪ್ಪು , ಅನುಗುಣ = ಅನುರೂಪ )
(ಹೋಳಿ ಹುಣ್ಣಿಮೆಯ ದಿನ “ಕಾಮದಹನ”ಕ್ಕಾಗಿ ರಾವಣನ ಪ್ರತಿಕೃತಿಯನ್ನು ದಹಿಸುವ ಹಿನ್ನಲೆಯಲ್ಲಿ ಸಮಸ್ಯಾ ಪೂರಣ )
ಹೋಳಿ ಹುಣ್ಣಿಮೆಯ ದಿನ “ರಾವಣ ಪ್ರತಿಕೃತಿ” ದಹನವೆಂದು ತಪ್ಪಾಗಿ ತಿಳಿದಿದ್ದೆ. ಅದು ನವರಾತ್ರಿಯ “ರಾಮಲೀಲಾ” ಸಂದರ್ಭದ ಆಚರಣೆ. ಉತ್ತರ ಭಾರತದಲ್ಲಿ ಕೆಲವೆಡೆ ಅದನ್ನು “ಹೋಳಿ”ಎಂದು ಆಚರಿಸುತ್ತಾರೆ.
Improved version :
अयुतभानुनिभाकरशूलिनि
परिसहस्रविलोचनशासिताः
शतशिता जटिना द्विधा कृताः
दशभवन्ति मनोभवसायकाः ||
ಹತ್ತುಸಾವಿರಸೂರ್ಯಪ್ರಭೆಯುಳ್ಳ ಶಿವನಿಂಗೆ
ಸಾವಿರದ ಕಣ್ಣಿನವ (ಇಂದ್ರ ) ನೊತ್ತಾಸೆಯಿಂದ
ನೂರಲಗಿನಂಬುಗಳ ಹೂಡೆ ಜಟಿ ತುಂಡರಿಸಿ
ಹತ್ತಾದವಯ್ಯೊ ಆ ಸುಮಶರನ ಬಾಣಗಳು
ಸಂಖ್ಯಾಲಂಕಾರ ಎಂಬುದೊಂದಿದೆಯೇ ?
अयुतभानुनिभाकरशूलिनि
परिसहस्रविलोचनशासिताः
शतशिता जटिना द्विधा कृताः
दशभवन्ति मनोभवसायकाः ||
Abhinandanegalu, sakkathaagide.
ಶ್ರೀಗಣೇಶರಿಗೆದುರು ಸಾವಿರ
ಬಾಣಗಳು ಅವಧಾನದಲಿಯಿರೆ
ಮನ್ಮಥನ ಬಳಿ ಹತ್ತು ಬಾಣಗಳಿರುವುದೇ ನಿಜವೈ ||
ಆದರೂ ಅವಧಾನಿಗಳು ಸಂ
ನ್ಯಾಸಿಗಳ ಸಮವಾಗಿ ಗೆಲುವರು
ಮನ್ಮಥನ ಬಳಿ ನೂರು ಬಾಣಗಳಿರುವುದೇ ನಿಜವೈ ||
ಒಂದು ಕಡೆ ಮನ್ಮಥ = ಮದನ, ಕಾಮ.ಇನ್ನೊಂದೆಡೆ ಮನ್ಮಥ = ಪೃಚ್ಛಕ.
ಸಂನ್ಯಾಸಿಗಳು(ನಿಜವಾದ ಸಂನ್ಯಾಸಿಗಳು) ಹೇಗೆ ಕಾಮನ ಬಾಣಗಳನ್ನು ಗೆಲ್ಲುವರೋ, ಆ ರೀತಿ ಗಣೇಶರೂ ಅವಧಾನದಲ್ಲಿ ಪೃಚ್ಛಕರ ಬಾಣಗಳನ್ನು ಗೆಲ್ಲುವರೆಂದು ಅಭಿಪ್ರಾಯ.
श्रीगणेशमहोदये दश-
बाणपातो भवति पृच्छक-
सङ्कुलाद्दशदिग्भ्य उत्तरितुं समर्थ अहो ।
तादृशेऽपि यतेः समाने
पद्यरचनं शुद्धमिति चे-
न्मनसिजे दशबाणवत्त्वं सम्भवीति बुधाः ॥
क्षन्तव्यः । अत्र “दिक्सङ्ख्ये संज्ञायाम्” इति सूत्रमुल्लङ्घ्य समासः कृतः ।
मन्मथस्य सत्त्वेऽपि यथा यतिः शुद्धाचारो भवति, तथा गणेशमहोदयस्यापि पृच्छकानां प्रश्नेषु सत्स्वपि शुद्धं पद्यरचनम् इति यतिसादृश्यम् ॥