Feb 102013
 

ಈ ಚಿತ್ರಕ್ಕೆ ಹೊಂದುವಂತೆ ನಿಮಗಿಷ್ಟವಾದ ಛಂದಸ್ಸುಗಳಲ್ಲಿ ಪದ್ಯಗಳನ್ನು ಬರೆಯಿರಿ ::

ಮಹಾಕುಂಭ

ಮಹಾಕುಂಭ

  88 Responses to “ಪದ್ಯಸಪ್ತಾಹ ೫೮: ಚಿತ್ರಕ್ಕೆ ಪದ್ಯ”

 1. ಗಂಗಾವತರಣಕಾಲದೆ
  ಪೊಂಗುವ ಸುರನದಿಯನಂದು ಜಟೆಯೊಳ್ ತಳೆದಾ|
  ಭೃಂಗಿಪತಿಯ ಲೀಲೆಯನೀ
  ಗಂಗಾವತರಣರತಂ ಯತಿಯು ತೋರ್ದಪನೇಂ?

  (ಗಂಗಾವತರಣ ಎಂಬ ಪದಕ್ಕೆ ಸಮಾಸಭೇದದಿಂದ ಗಂಗೆಯ ಇಳಿಯುವಿಕೆ ಹಾಗೂ ಗಂಗೆಯಲ್ಲಿ ಇಳಿಯುವಿಕೆ ಎಂದು ಎರಡು ಅರ್ಥಗಳಿರುವುದು ಪ್ರಕೃತಪದ್ಯದಲ್ಲಿ ವಿವಕ್ಷಿತ)

 2. ಸುರನದಿಯೊಳು ಮೀಹಂ ಲೋಗರಿಂದಪ್ಪುದಲ್ತೆಂ
  ದರಿತು ಯತಿಯು ತಾ ಕುಂಭಾಖ್ಯಮೇಳಕ್ಕೆ ಬಂದಂ
  ನೆರೆಯನಣೆದು ಮೈಯಿಂ ತೀರ್ಥಮಂ ತೀವಿ ಕೇಶಂ
  ಬಿರಿಯೆ ಕೊಡಹುತೆಂಟುಂ ದಿಕ್ಕಿಗಂ ಪ್ರೋಕ್ಷಿಸಿರ್ಪನ್

 3. ಯತಿಯೆಂಬೆ ಈತ ಸು
  ದತಿಯಂತೆ ತೋರ್ವ ನಿ
  ರ್ಮಿತಿಯುಳ್ಳನೋ ಕಾಣೋ ರಾಮಚಂದ್ರ!

  • ಯತಿ ತಪ್ಪದಿರ್ದೊಡಂ
   ಗತಿ ತಪ್ಪದಿರ್ದೊಡಂ
   ಮಿತಿ ತಪ್ಪಿತೇಂ ಸಂಧಿನಿಯಮಂಗಳಾ?? 🙂

   • 🙂 ಹೇಗಿದ್ದರೂ ‘ಬೇ..” ಎಂದು ಎಳೆಯಬೇಕಲ್ಲ, ಸಂಧಿಯಾದರೂ ಬಿಟ್ಟುಕೊಳ್ಳುತ್ತೆಂದು ಮಾಡಲೇ ಇಲ್ಲ!

  • (KBS) ರಾಮಚಂದ್ರನಿಗೆ ಕಾಣಿಸಿತೋ ಇಲ್ಲವೋ ಇದು!

 4. ಸೊಗಯಿಸಿದುದು ಪದ್ಯಂ ಮಾಲಿನೀವೃತ್ತಸಾಧ್ಯಂ
  ಮಿಗಿಲುಚಿತಮನೋಜ್ಞಂ ಕಲ್ಪನಂ ಭಾಷೆಯುಂ ಮೇಣ್ |
  ಮುಗುಳಿಸುಗುಮುದಾರಂ “ತಾಂ” ಪದಂ ”ತಾ”ಗಮೊಪ್ಪಲ್
  ಜಗುಳಿರೆ ಕಚ(ಡ)ತೀರ್ಥಂ ತಾಳ್ವುದೆಂತಕ್ಕಟಾ! ಮೇಲ್ ||

  • 🙂 ಧನ್ಯೋಸ್ಮಿ

  • ‘ತಾಳ್ವುದೆಂತಕ್ಕಟಾ’ ಎನಿಸುವಂತಹ ‘ಕಚಡ’ವನ್ನು ಜೀವೆಂರವರು ‘ಮೇಲ್‍’ನಲ್ಲಿ ನಿಮಗೆ ವಿವಿಕ್ತವಾಗಿ ಬರೆದಿದ್ದಾರೆಯೆ?

   • ವಿಕಟಕವಿವರೇಣ್ಯಾ! ವಾದವಿದ್ಯಾಗ್ರಗಣ್ಯಾ!! ಲಾಲಿಪುದೆನ್ನಯ ಮಾತ!
    ಯಾವುದೇ ಕಚಡವನ್ನು ಜೀವೆಂ ಅವರು ವಿವಿಕ್ತವಾಗಿಯಾಗಲಿ, ಅವಿವಿಕ್ತವಾಗಿಯಾಗಲಿ ನನಗೆ ಈ ಮೇಲಿನಲ್ಲಾಗಲಿ ಆ ಕೆಳಗಿನಲ್ಲಾಗಲಿ
    ಫೀಮೇಲಿನಲ್ಲಾಗಲಿ, ಷೀ ಮೇಲಿನಲ್ಲಾಗಲಿ ಬರೆದಿರಲಿಲ್ಲ. ಅವೆಲ್ಲ ನಿಮ್ಮ ಗರಡಿಯ ವರಸೆ-ಪಟ್ಟುಗಳು:-). ಪಾಪ, ಶುದ್ಧ ಶ್ರೋತ್ರಿಯರಿಗೆ ಇಂಥವೇ?
    ಇದೀಗ ಸೀರಿಯಸ್ ಸ್ಟಫ್:
    ಕಚ(ತಲೆಗೂದಲು)ತೀರ್ಥ ಎಂಬುದೇ ಮಾಲಿನೀಛಂದಸ್ಸಿಗೆ ಯುಕ್ತ. ಚಿತ್ರದ ಆ ಸಾಧುವಿನ ಜಟೆಯಿಂದ ಹಾರಿದ ತೀರ್ಥವು ಕಚತೀರ್ಥ ತಾನೆ! ಆದರೆ ಅದು ಕಚಡವೂ ಆಗಿರುತ್ತದೆಂದು ಧ್ವನಿಸಲು ಆವರಣದಲ್ಲಿ ಡಕಾರವನ್ನಿರಿಸಿದೆ. ಇದು ರಸಿಕಸುವೇದ್ಯ. ವಸ್ತುತಃ ಕಚ್ಚರ>ಕಚರ>ಕಚಡ ಎಂದಾಗಿದೆ.ಕಚ್ಚರ ಎಂದರೆ ಕೊಳೆ, ಮಾಲಿನ್ಯ, ಮಲಿನಜಲ ಎಂದೆಲ್ಲ ಅರ್ಥಗಳುಂಟು. ಇದೇ ಕಚಡದಲ್ಲಿಯೂ ಉಳಿದಿದೆ.

    • ಹಾಲು ಹಸುಳೆಯೆಂದು ನೀವು ಸುಳ್ಳೆ ಮರುಗುವಿರ್
     ಬಾಲನಾಗವಾಲಸೂತ್ರ ಪಾಲಿಸಿರ್ಕೆನಾಂ

     😀

     • *ಪಾಲಿಸಿರ್ಪನಂ

     • ಪೆರರೆನಿತು ದೂಷಿಸಲಿಚ್ಛಿಸಿರ್ದೊಡೇಂ? ನೆಲಸಿ ಜಿಹ್ವೆಯೊಳ್ ನುಡಿಪನಲ್ತೆ ದೇವಂ ನೈಜಮಂ; ಕಾವನಲ್ತೆಲಮಾಯಕ ಕಿಂಕರರಂ.

     • ಪೆರರೆನಿತು = ಪೆರರ+ಎನಿತು = ಪೆರರನೆನಿತು

     • ಪೆರರೆನಿತು = ಪೆರರ್ + ಎನಿತು ಆಗಬೇಕೆ ಹೊರತು
      ಪೆರರ + ಎನಿತು ಆಗಲು ಸಾಧ್ಯವೇ ಇಲ್ಲ. ಕಾರಣ ಪೆರರಂ ಎನ್ನುವುದೆ ಸಾಧು ರೂಪ.

      ಅದು ಹೇಗಾದರಿರಲಿ, ನಿಮ್ಮ ಮಾತುಗಳು (ಪದ್ಯ?) ನನಗೆ ನಿಗೂಢಗಿಯೇ ಇದೆ. ದೀಪನಮ್ ಗೆಯ್ದೋಡಾಂ ಕಾಂಬನಪ್ಪೆಮ್

   • ೧) ಪೆರರ್+ಎನಿತು ಸರಿ. ಟೈಪೊ ಕ್ಷಮಿಸಿ.

    ೨) ನೀವು ಗಣೇಶರಿಗೆ ನನ್ನ ವಿರುದ್ಧ ದೂರು ನೀಡುವಾಗ ‘ಪಾಲಿಸಿರ್ಪನಂ’ ಎನ್ನುವ ಬದಲು ‘ಪಾಲಿಸಿರ್ಕೆನಾಂ’ ಎಂದು ದೇವನು ನಿಮ್ಮ ನಾಲಗೆಯಲ್ಲಿ ದಿಟವನ್ನೇ ನುಡಿಸಿ ನನ್ನನ್ನು (ಕಿಂಕರನ್ನು) ಕಾಪಾಡಿದ್ದಾನೆ ಎಂಬುದು ನನ್ನ ಗದ್ಯದ (ಅದು ಪದ್ಯ ಅಲ್ಲ) ತಾತ್ಪರ್ಯ.

 5. ಶಾಲಿನೀ ವೃತ್ತದಲ್ಲಿ ಎರಡು ಪದ್ಯಗಳು

  1) ಒಬ್ಬನೇ ಸಾಧು ಮೀಯುತ್ತಿರುವ ಈ ಚಿತ್ರ ಖಂಡಿತ ಕುಂಭಮೇಳದ್ದಲ್ಲ:
  ಚಿತ್ರಂ ತಾನೇಂ, ಕುಂಭದೊಳ್ ಮೀವಸಾಧುಂ?
  ಯಾತ್ರಂ ಕೈಗೊಂಡಿರ್ಪರೈ ಕೋಟಿಸಂಖ್ಯರ್|
  ಮಾತ್ರಂ ತಾನೊರ್ವಾತ ಮಿಂದೇಳುತಿರ್ಪೀ
  ಕ್ಷೇತ್ರಂ ತಾನೇನಲ್ಲವೈ ಸಂಗಮಂ ಕೇಳ್||

  2) ಯೇsಪಾಂ ಪುಷ್ಪಂ ವೇದ ತೇ ಪುಷ್ಪವಂತಾಃ
  ಪೆಂಪಿಂದಿಂತುಂ ಸಾರ್ದಿರಲ್ ವೇದಮಂತ್ರಂ|
  ಪಾಪಂ ತೀರ್ಚಿರ್ಕುಂ ನದೀತೀರದೊಂದೇ
  ಸೈಪಂ ತಾಂ ತ್ರೈಸಂಗಮಂ ಗೈವುದೆಂತೋ||

  (ಎರಡೂ ಪದ್ಯವನ್ನು ಒಮ್ಮೆ post ಮಾಡಿದ್ದೆ. ಮಾಯವಾಗಿವೆ! ಈಗ ಮತ್ತೆ ಹಾಕಿದ್ದೇನೆ. ಸೋಮ ಒಂದು ಪದ್ಯ ಬರೆದಿದ್ದರು. ಅದೂ ಮಾಯ!)

  • ಪ್ರಸಾದು! ಶಾಲಿನಿಯ ಪ್ರಯತ್ನ ಸ್ತುತಿಶಾಲಿನಿಯೇ ಸರಿ. ಆದರೆ ಕೆಲವೊಂದು ವ್ಯಾಕರಣದೋಷಗಳಾಗಿವೆ. ಸಾಧುಶಬ್ದವು ಅಕಾರಾಂತೇತರವಾದ ಕಾರಣ ಹಳಗನ್ನಡದಲ್ಲಿ ಬಿಂದು ಬಾರದು. ಹೀಗಾಗಿ ರಾಮಂ ಎಂಬಂತೆ ಭ್ರಮಿಸಿ ಸಾಧುಂ ಎಂದರೆ ಅದು ಅಸಾಧುವಾಗುತ್ತದೆ:-) ಹೀಗೆಯೇ ಯಾತ್ರೆಯು ಯಾತ್ರಾ ಎಂಬ ಸ್ತ್ರೀಲಿಂಗದ ಶಬ್ದದ ಕನ್ನಡರೂಪವಾಗಿದೆ. ಈ ಏಕಾರಾಂತ ಶಬ್ದಕ್ಕೆ ಬಿಂದು ಬಾರದು. ಏಕೆಂದರೆ ಇದೂ ಅಕಾರಾಂತವಲ್ಲ. ಹೀಗಾಗಿ ಇಲ್ಲೆಲ್ಲ ವ್ಯಾಕರಣವನ್ನು ತಿದ್ದುವುದಾದರೆ ಛಂದಸ್ಸು ಎಡವುತ್ತದೆ.
   ಎರಡನೆಯ ಪದ್ಯದ ಅರ್ಥ ತಿಳಿಯುತ್ತಿಲ್ಲ. ಆದರೆ ಮೊದಲ ಸಾಲಿನಲ್ಲಿ ಸಂಸ್ಕೃತವ್ಯಾಕರಣದ ಹಲವು ಎಡಹುಗಳಿವೆ. ಮುಖತಃ ತಿಳಿಸಿಯೇನು

  • ತಿಳುವಳಿಕೆಗಾಗಿ ಕೃತಜ್ಞತೆಗಳು. ಸವರಿದ್ದೇನೆ.

   ೧) ಚಿತ್ರಂ ತಾನೇಂ, ಕುಂಭದೊಳ್ ಮೀಯುವೊರ್ವಂ?
   ಹೋತ್ರಂ ಕೈಗೊಂಡಿರ್ಪರೈ ಕೋಟಿಸಂಖ್ಯರ್|
   ಮಾತ್ರಂ ತಾನೊರ್ವಾತ ಮಿಂದೇಳುತಿರ್ಪೀ
   ಕ್ಷೇತ್ರಂ ತಾನೇನಲ್ಲವೈ ಸಂಗಮಂ ಕೇಳ್||

   ೨) ‘ಯೋsಪಾಂ ಪುಷ್ಪಂ ವೇದ, ಪುಷ್ಪವಾನ್ ಭವತಿ’ ಎನ್ನುತ್ತದೆ ವೇದ. ಒಂದೇ ನದಿಯಲ್ಲಿ ಮಿಂದರೂ ಸಾಕು ಪಾಪ ತೀರುತ್ತದೆ. ಹೀಗಿರುವಾಗ ತ್ರಿವೇಣಿ ಸಂಗಮದಲ್ಲಿ ಮಿಂದರೆ ಎಂತೋ ಪುಣ್ಯ ಸಿಗುತ್ತದೆ.
   ‘ಜಾಪಂ ಗೈಯಲ್ ನೀರನೆಂತೋ ಸುಕೃತ್ಯಂ’
   ಭಾಪಿಂದೆಂತೋ ಸಾರ್ದಿರಲ್ ವೇದಮಂತ್ರಂ|
   ಪಾಪಂ ತೀರ್ಗುಂ ಸ್ನಾನದಿಂದೇಕತೀರ್ಥಂ
   ಸೈಪಂ ತಾಂ ತ್ರೈಸಂಗಮಂ ಗೈವುದೆಂತೋ||

   • ಸವರಣೆಗಳು ಸೊಗಸಾಗಿವೆ. ಮೊದಲ ಪದ್ಯವು ಅನವದ್ಯವೇ ಸರಿ. (ಆತ ಎಂಬಲ್ಲಿ ಬಿಂದುಲೋಪವಾಗಿದೆ ಇದನ್ನು ಹಚ್ಚಿದರೆ ಛಂದಸ್ಸು ಕೆಡುತ್ತದೆ:-)
    ಎರಡನೆಯ ಪದ್ಯವೂ ಸ್ತುತ್ಯ. ಆದರೆ ಸಾರಿರಲ್ ಎಂಬುದು ಮತ್ತೂ ಉತ್ತಮ ಹಾಗೂ ಸರಳರೂಪ. ಅಲ್ಲದೆ ಎಂತೋ(ಹೇಗೋ) ಎಂಬ ಪದವು ಅದಕ್ಕಿಲ್ಲದ ಅರ್ಥವನ್ನು ಅಭಿವ್ಯಂಜಿಸುವಂತೆ(ಎಷ್ಟೋ) ಎಲ್ಲ ಕಡೆಗಳಲ್ಲಿಯೂ ಬಳಕೆಯಾಗಿದೆ. ತೆಲುಗಿನಲ್ಲಿ ಮಾತ್ರ ಎಂತೋ ಪದವು ಎಷ್ಟೋ ಎಂಬ ಅರ್ಥಕ್ಕೆ ಹೊಂದುತ್ತದೆ. ಅಲ್ಲದೆ ಪದ್ಯದ ಉತ್ತರಾರ್ಧದವು ನಿಮ್ಮ ವಿವಕ್ಷಿತಾರ್ಥವನ್ನು ಹೇಳುವಲ್ಲಿ ಅಸ್ಪಷ್ಟವಾಗಿದೆ. ಮುಖ್ಯವಾಗಿ ಶಾಲಿನಿಯ ಗುರುಬಾಹುಳ್ಯ ಹಾಗೂ ಅಲ್ಪಕುಕ್ಷಿತ್ವ, ಮತ್ತು ಪ್ರಾಸತ್ರಾಸಗಳು ಈ ತೊಡಕಿಗೆ ಹೆಚ್ಚಿನ ಕಾರಣಗಳೆನ್ನಬೇಕು. ಇದು ಯಾರಿಗೂ ಕಾಡುವಂಥದ್ದೇ:-) ಆದುದರಿಂದಲೇ ನಾನು ಎಷ್ಟೋ ಬಾರಿ ಒಂದು ideaವನ್ನು ಪದ್ಯರೂಪಕ್ಕಿಳಿಸುವಾಗ ಹಲವು ಛಂದಸ್ಸುಗಳ, ಹಲವು ಪ್ರಾಸ/ಪದಪುಂಜಗಳ ಸಾಧ್ಯತೆಗಳನ್ನು ಅನುಭವಿಸಿ ಅರಿತು (ಅಂದರೆ ಬರೆದು, ಹೊಡೆದು:-) ಕಡೆಗೊಂದು ಗತಿಗಾಣುವಷ್ಟರಲ್ಲಿ ಮೂಲದ ಭಾವವೇ ಸಾಕಷ್ಟು ಮಾರ್ಪಟ್ಟ ಇಲ್ಲವೇ ಪರಿಷ್ಕೃತವಾದ ಉದಾಹರಣೆಗಳಿಲ್ಲದಿಲ್ಲ.
    ಇದು ನಿಮ್ಮದೇ ಭಾವಕ್ಕೆ, ವೃತ್ತಕ್ಕೆ ನನ್ನ ಯತ್ನ:
    (ಅತ್ಯಾಶುವಾದ ಕಾರಣ ಗುಣಪರಿಪಾಕವಿಲ್ಲಿ ಗೌಣ:-)

    ಒಂದೇ ತೀರ್ಥಸ್ನಾನದಿಂ ಪುಣ್ಯಮೆಷ್ಟೋ
    ಸಂದಿರ್ಕುಂ ತಾನೆಂದುದಯ್ ವೇದಮಾದಂ|
    ಬಂದಿರ್ಪೀ ಕುಂಭಂ ಮಹಾತೀರ್ಥರಾಜ-
    ಸ್ಪಂದಕ್ಕಂ ಮತ್ತೇನನೆಲ್ಲಂ ಗಡೀಗುಂ||

   • ೧) ಉತ್ತೇಜಕ ನುಡಿಗಳಿಗೂ, ಅದಕ್ಕಿಂತ ಹೆಚ್ಚಾಗಿ ಸವರಣೆಗೂ ಕೃತಜ್ಞನಾಗಿದ್ದೇನೆ. ‘ವೇದಮಾದಂ’, ‘ಗಡೀಗುಂ’ಗಳಂತಹ ಪ್ರಯೋಗ ಕಲಿವುದಾಯಿತು.
    ೨) ‘ಎಂದುದಯ್ ವೇದಮಾದಂ’ ಎಂದರೆ ‘ಆದಿವೇದ ಹೇಳಿದೆ’ ಎಂದೆ? ಅಥವಾ ‘ವೇದವು ಮೊದಲಿಗೇ ಹೇಳಿದೆ’ ಎಂದೆ?
    ೩) ‘ಸ್ಪಂದಕ್ಕಂ’?
    ೪) ಹೌದು. ನೀವೆಂದಂತೆ ‘ಗುಣಪರಿಪಾಕವಿಲ್ಲಿ ಗೌಣ’. ಏಕೆಂದರೆ, ಇನ್ನೂ ಹೆಚ್ಚಿನ ಪರಿಪಾಕಕ್ಕೆ ಇಲ್ಲಿ ಅವಕಾಶವೇ ಇಲ್ಲ.

    • ಧನ್ಯವಾದ ಪ್ರಸಾದು. ನಾನು ನನ್ನ ಪದ್ಯದ ವಿಲಕ್ಷಣಪ್ರಯೋಗಗಳ ವಿವರಣೆಯನ್ನು ಮೊದಲೇ ನೀಡಬೇಕಿತ್ತು. ಮನ್ನಿಸಿರಿ. ಉದ್ದಿಷ್ಟಪದವಿವರಣೆ ಇಂತಿದೆ:
     ವೇದಂ+ಆದಂ (ಅಂದ, ಅಲಂಕಾರ), ಗಡ+ಈಗುಂ (ಕೊಡುವುದು; ಈಯುವುದು)

  • Sri Prasaadu , Nimma padya sogasaagide. Nanage Pls Shaalini Vriththa lakshana Thilisi. Haage Nimma parichaya emailisi. Naanu jayanagara Nivaasi, Lic-HFL agent kelasa nannadu.
   ithi Tongatle Rgds-galondhige,
   Suhas D.P.

   • ಸ್ಪಂದಕ್ಕಾಗಿ ಧ್ಯನ್ಯವಾದಗಳು ಸುಹಾಸ್. ನನ್ನ ಮಿಂಚೆ sanaatani@gmail.com

    ಶಾಲಿನಿಯೇಂ? ವಸಂತತಿಲಕಂ, ಪ್ರಮಿತಾಕ್ಷರ, ಯಿಂದ್ರವಂಶಗಳ್
    ಮಾಲಿನಿತಾಂ, ವಿಯೋಗಿನಿಯು ಪುಷ್ಪಿತದಗ್ರವು, ಯಿಂದುನಂದನಂ|
    ಮಾಲೆಗಳೆಲ್ಲ ಮಲ್ಲಿಗೆಯ ಚಂಪಕ-ವುತ್ಪಲ, ಯಿಂದ್ರವಜ್ರ ಶಾ
    ರ್ದೂಲಗಳೆಂತೊ ಪಾಠಗಳು ತಾವಿಹವೈ ಸಖ ಪದ್ಯಪಾನದೊಳ್||
    (ಉತ್ಪಲಮಾಲೆ)

    ‘Learn Prosody – ಪದ್ಯವಿದ್ಯೆ’ ಎಂಬ link ಇದೇ ಪುಟದ ಮೇಲ್ಗಡೆ ಇದೆ. ಕ್ಲಿಕ್ಕಿಸಿ ಕಲಿಯಿರಿ.

    • ಶ್ರೀ ಗಣೇಶರೆ,
     ಮತ್ತೆ ‘ಎಂತೊ’ ಪ್ರಯೋಗ ನುಸುಳಿತು. ಇನ್ನು ಎಚ್ಚರದಿಂದಿರುತ್ತೇನೆ.

    • ಛಂದೋನಾಮಂಗಳನಿಂ-
     ತಂದಂ ಪೊಣ್ಮಿಸುವ ಪಾಂಗಿನಿಂ ಛಂದಸ್ಸಿಂ|
     ಬಂದಿಗೊಳಿಸಿದ ಭವತ್ಪ್ರತಿ-
     ಭೇಂದಿರೆ ತಾಂ ಗೆಲ್ಗೆ ಪದ್ಯಪಾನಿಹರಿಗಳಿಂ||

   • ನೀವು ಆಂಗ್ಲಲಿಪಿ ಬಳಸಿದ್ದರಿಂದ ತುಸುಹೊತ್ತು ನನಗೆ ಅಯೋಮಯವಾಯಿತು. ನೀವು ‘ಟನ್ಗಟ್ಲೆ’ ಎಂದು ಬರೆದಿರುವುದು “ಇದೇನಪ್ಪ ಕಣ್ಗತ್ಲೆ ಇದ್ದಂತೆ ತೊನ್ನ್-ಗಟ್ಲೆ” ಎಂದು ಯೋಚನೆಗಿಟ್ಟುಕೊಂಡಿತ್ತು 😉

 6. ‘ಪಿಡಿಯಲ್ ಕೈತವಬ೦ಧಗಳ್ ವಿಷಯದಿ೦ ಸ್ವಜ್ಞಪ್ತಿನಾಶ೦ ಗಡಾ
  ಜಡದಿ೦ದಾವೃತನಲ್ತೆ ದೇಹಿ ಮುಳುಗಲ್ ಸ೦ಸಾರಘೋರಾಬ್ಧಿಯೊಳ್
  ತೊಡೆಯುತ್ತೇಳುತೆ ಜಾಡಿಸಲ್ಕೆ ಮುಸುಕ೦ ತೋರ್ಗು೦ ನಿಜ೦’ ಕು೦ಭದೊಳ್
  ಮಡಿಯ೦ ಗಯ್ಯುತೆ ಸಾಧುವೇಳ್ದ ಬಗೆಯಿ೦ ಲೋಗರ್ಗೆ ಸ೦ದೇಶಮಯ್

  ಹಳಗನ್ನಡದ ಸವರಣೆಗಳು ಬೇಕೆನಿಸುತಸತದೆ, ದಯವಿಟ್ಟುಸೂಚಿಸಿ

  • ಒಳ್ಳೆಯ ವೇದಾಂತಗರ್ಭಿತವಾದ ಪದ್ಯ:-)
   ಆದರೆ ನೀನೆಂದಂತೆ ಕೆಲವೊಂದು ಹಳಗನ್ನಡದ ಒಪ್ಪ ಬೇಕಿದೆ. ಬಂಧಂಗಳ್ ಎಂದಾಗಬೇಕು ಆದರೆ ಆಗ ಛಂದಸ್ಸು ಹಳಿ ತಪ್ಪುತ್ತದೆ. ಹೀಗಾಗಿ ’ಬಂಧನಂ ವಿಷಯದಿಂ…” ಇತ್ಯಾದಿ ಸವರಿಸಬೇಕು. ಮುಳುಗಲ್ ಎಂಬುದು ಮುಳುಂಗಲ್ ಎಂದಾದರೆ ಮತ್ತೂ ಉತ್ತಮ. ಅದರೆ ಅದು ಛಂದಸ್ಸನ್ನು ಮುಳುಗಿಸುತ್ತದೆ:-) ಹೀಗಾಗಿ ಸದ್ಯಕ್ಕಿಷ್ಟು ಸಾಕು.

   • ಸರ್ ಸವರಿಸಿದ್ದೇನೆ, ಸದ್ಯಕ್ಕಿಷ್ಟು ಸಾಕು ಚೆನ್ನಾಗಿದೆ, ನಮ್ಮ ಬಾಪಟ್ ನೆನಪಾಯ್ತು 🙂

    ‘ಪಿಡಿಯಲ್ ಕೈತವಬ೦ಧನ೦ ವಿಷಯದಿ೦ ಸ್ವಜ್ಞಪ್ತಿನಾಶ೦ ಗಡಾ
    ಜಡದಿ೦ದಾವೃತನಲ್ತೆ ದೇಹಿ ಮುಳುಗಲ್ ಸ೦ಸಾರಘೋರಾಬ್ಧಿಯೊಳ್
    ತೊಡೆಯುತ್ತೇಳುತೆ ಜಾಡಿಸಲ್ಕೆ ಮುಸುಕ೦ ತೋರ್ಗು೦ ನಿಜ೦’ ಕು೦ಭದೊಳ್
    ಮಡಿಯ೦ ಗಯ್ಯುತೆ ಸಾಧುವೇಳ್ದ ಬಗೆಯಿ೦ ಲೋಗರ್ಗೆ ಸ೦ದೇಶಮಯ್

   • ಅವೆರಡನ್ನು ಹೊರತುಪಡಿಸಿ ಉಳಿದೆಲ್ಲ ಹಳಗನ್ನಡ ಸಖತ್ತಾಗಿದೆ ಸೋಮ

 7. ಹರನ ಜಟೆಯಿ೦ದಿಳಿದ ಗ೦ಗೆಯ
  ಶಿರದಿ ಧರಿಸುವೆನೆ೦ದು ಯತಿ ದಿನ
  ಚರಿಯನಾಗಿಸಿ ಯತ್ನಿಸುತಲಿಹ ಪರಿಯನೀಕ್ಷಿಸುತೆ
  ಕರುಣಸಾಗರಿ ಮುದವ ತೋರುತ
  ಝರಿಯ ತೆರ ಧುಮ್ಮುಕ್ಕಿದಳು ಮೇ
  ಲರಿಯದಿಹನೀತನದೊ ತನುವನು ಕೊಡಹಿ ನಿ೦ದಿಹನು

  • ಕಲ್ಪನೆಯ ಜಾಡು ಚೆನ್ನಾಗಿದೆ. ಆದರೆ ‘ಝರಿಯ ತೆರ ಧುಮ್ಮುಕ್ಕಿದಳು ಮೇಲೆ’ ಎಂಬುದು, ಅವನು ಜಲಪಾತದ ಕೆಳಗೆ ನಿಂತಿದ್ದರೆ ಸೂಕ್ತವಿರುತ್ತಿತ್ತು.

   ನಾನಾಗಿದ್ದರೆ, ಶಿವ naturalಆಗಿ ಗಂಗೆಯನ್ನು ಹರಿಸಿದ, ಇವನು artificialಆಗಿ ಅದೇ ಗಂಗೆಯನ್ನು ಚಿಮ್ಮಿಸುತ್ತಿದ್ದಾನೆ ಎಂದುಬಿಡುತ್ತಿದ್ದೆ 😉

   • ಪ್ರಸಾದು ಅವರೆ,ನೀವ೦ದದ್ದು ನಿಜ.ನಾನು ಯೋಚಿಸಿದ್ದು ಗುಡ್ಡದಿ೦ದ ಕೆಳಗೆ ಹರಿಯುವ ರಭಸದಲ್ಲೇ ಮೇಲಕ್ಕೆ ಚಿಮ್ಮಿದಳು ಎ೦ಬುದಾಗಿತ್ತು.
    “ಝರಿಯ ತೆರ ಧುಮ್ಮಿಕ್ಕಿದಳು ಮೇಲ್ “ಎ೦ದು ಪ್ರಯೋಗ ಮಾಡಿದೆ.ಸ್ಪಷ್ಟತೆ ಬರಲಿಲ್ಲವೇನೋ.

  • ರಘು ಮುಳಿಯರೇ! ದಿಟವೇ, ಪ್ರಸಾದು ಅವರ ಆಕ್ಷೇಪವು ಅನುಲ್ಲಂಘ್ಯ:-) ಆದರೂ ಒಳ್ಳೆಯ ಸೊಗಸಾದ ಕಲ್ಪನೆಯ, ಚೆಲುವಾದ ನಡುಗನ್ನಡದ, ಸುಕುಮಾರಶೈಲಿಯ ರಚನೆ. ಇದಕ್ಕಾಗಿ ಹಾರ್ದಿಕವಾದ ಅಭಿನಂದನೆಗಳು.

 8. ಗಂಗಾಸೈಕತಲಿಂಗಮಂ ನೆನೆಯುತಂ ಕುಂಭೋತ್ಸವಾರಂಭದೊಳ್
  ಲಿಂಗಾಕಾರವಮೆಲ್ಲು ಗೈಯದಲೆ ಮೇಣ್ ಕಾಂಚಾಣದಾ ಕಂತೆಯಂ |
  ಭಂಗಂಗೊಳ್ಳದರೀತಿಯಿಂದವುಚುತಂ ತಾಂ ಕಂಕುಳೊಳ್ ರಕ್ಷಿಪಾ
  ರಂಗೇನದ್ಭುತಮಲ್ತೆ! ಸಾಧುವಿನದೀ ವಿತ್ತೇಷಣಾವೈಖರೀ ||

  • ಭಲೆ!
   ‘ಲಿಂಗಾಕಾರವಮೆಲ್ಲು ಗೈಯದಲೆ’ ಎಂದರೆ?

   • ಪ್ರಸಾದರೇ, ನಲ್ನಮನಗಳು.
    ಪಂಚತಂತ್ರದಲ್ಲಿ ಬರುವ ಸಾಧುವೊಬ್ಬ ಇದೇರೀತಿ ನದಿಯಲ್ಲಿ ಸ್ನಾನ ಮಾಡುವಾಗ ತನ್ನ ತಾಮ್ರದ ಚೊಂಬೊಂದನ್ನು ಮರಳಿನಲ್ಲಿ ಹೂತಿಟ್ಟು ಗುರುತಿಗಾಗಿ ಮಮರಳಿನಿಂದ ಒಂದು ಶಿವಲಿಂಗದ ಆಕೃತಿಯನ್ನು ಮಾಡಿ, ಸ್ನಾನಕ್ಕೆ ಹೋಗಿ, ಬಂದು ನೋಡುವ ಹೊತ್ತಿಗೆ ಅಲ್ಲಿ ಸಾವಿರಾರು ಲಿಂಗಗಳು ಸೃಷ್ಟಿಯಾಗಿದ್ದುವಂತೆ. ಪರಿಣಾಮ ಆತ ತನ್ನ ಹಣದ ಚೊಂಬನ್ನು ಕಳೆದುಕೊಂಡು ಅತ್ತನಂತೆ. ಈತ ಅವನ ಹಾಗೆ ದಡ್ಡನಲ್ಲ.ಹಣದ ಚೀಲವನ್ನು ಬಗಲಲ್ಲೇ ಒತ್ತಿ ಹಿಡಿದಿಟ್ಟು ಕೊಂಡಿದ್ದಾನೆ ಅಲ್ಲವೇ?

   • ಸಖ,

    ಪೋದೈ ಪೇಳದೆ ಗೂಢದರ್ಥಮನು ನೀಂ| ಸುಜ್ಞಾನಿ ನಾನೆಂಬೆಯೇಂ?
    ನೀ ದೈತ್ಯಂ ಸರಿ, ಕೀರಿಯೆಂದೆನುತಲೆ| ನ್ನೊಳ್ತೋರ್ವೆಯೇನಾಗ್ರಹಂ?
    “ಓದೈ ನಿಚ್ಚಮು ಪಂಚತಂತ್ರಮನು ನೀ”|ನೆಂದಾಜ್ಞೆಯಂ ಗೈದೆಯೇಂ
    ಧೀದೈಪಂ ದ್ಯುತಮಲ್ತೊಡಾನರಿವೆ ದಲ್| ನಿಕ್ಷಿಪ್ತದಾ ಪಾದುಕಂ|

    1) ಕೀರಿ = ಕುಕವಿ
    2) ಧೀದೈಪಂ… – ನನ್ನ ಧೀಶಕ್ತಿದೀಪವು ಅಷ್ಟು ಪ್ರಖರವಾಗಿಲ್ಲದಿದ್ದರೂ, ನೀವು ಶಾಲಿನಲ್ಲಿ ಸುತ್ತಿ ಹೊಡೆದಿದ್ದೀರಿ ಎಂಬಷ್ಟು ಅರ್ಥವಾಗಿದೆ 😉
    3) ಎರಡನೆಯ ಪಾದದಲ್ಲಿ ಯತಿ ಉಲ್ಲಂಘನೆಯಾಗಿದೆ. ಕ್ಷಮೆ ಇರಲಿ.

    • ಕೊನೆಯ ಪಾದ ಸವರಿದ್ದೇನೆ:
     ಧೀದೈಪಂ ದ್ಯುತಮಲ್ತೊಡಾನರಿಯೆನೇಂ, ನಿಕ್ಷಿಪ್ತ ಶ್ರೀಪಾದುಕಂ|

     • ಆವಾರೈ ನಿಮಗಾಜ್ಞೆಯ
      ನೀವರ್ ? ಕುಕವಿಗಳ್ ಹಾ! ನೀವೆಂತಪ್ಪಿರೈ? |
      ನಾವೆಲ್ಲರೀ ಭಾವದಾ
      ನಾವೆಯನೇರ್ದವರ್ ಅಲ್ತೆ? ಕಬ್ಬಗಳ ಕಡಲೊಳ್ ||

   • ಧನ್ಯವಾದಗಳು. ಛಂದಸ್ಸು?

  • ಪದ್ಯಭಾವವು ಸ್ಪಷ್ಟವಾಗಲಿಲ್ಲ.ಬಿಡುವಿದ್ದಲ್ಲಿ ದಯಮಾಡಿ ವಿವರಿಸಿರಿ

   • ನಮಸ್ಕಾರ, ಗಣೇಶರಿಗೆ.
    ಈ ಪದ್ಯವು ಪಂಚತಂತ್ರದ “ಗತಾನುಗತಿಕೋ ಲೋಕಃ ನ ಲೋಕಃ ಪಾರಮಾರ್ಥಿಕಃ | ಗಂಗಾಸೈಕತಲಿಂಗೇನ ನಷ್ಟಂ ಮೇ ತಾಮ್ರಭಾಜನಮ್ ||” ಎಂಬ ಕಥೆಯ ಹಿನ್ನಲೆಯಲ್ಲಿ ರಚಿಸಿದ್ದು.ಆ ಕಥೆಯನ್ನು ಕೇಳಿದ್ದ ಈ ಚಿತ್ರದ ಸಾಧುವು ಕುಂಭಮೇಳದಲ್ಲಿ ನಿರ್ಜನ ಸ್ಥಳದಲ್ಲಿ ಸ್ನಾನಮಾಡಲು ನದಿಯಲ್ಲಿಳಿಯುವಾಗ ತನ್ನ ಹಣದ ಚೀಲವನ್ನು ಮರಳಿನಲ್ಲಿ ಹೂತಿಟ್ಟು, ಮೇಲೆ ಗುರುತಿಗಾಗಿ ಮರಳಿನ ಲಿಂಗಾಕಾರವೊಂದನ್ನು ಮಾಡದೇ ಕಂಕುಳಲ್ಲಿ ಇಟ್ಟುಕೊಂಡೇ ಮುಳುಗುತ್ತಾನೆ. (ಈಸಾಧುವಿನ ಮೈಮೇಲೆ ಅರಿವೆ ಇಲ್ಲದಿದ್ದರೂ ಕಂಕುಳಲ್ಲಿ ಚೀಲವೊಂದನ್ನು ಅವುಚಿ ಹಿಡಿದುಕೊಳ್ಳಬೇಕೆಂಬ ಅರಿವು ಇದೆಯಲ್ಲ!) ಇದು ಸಾಧುವಿನ ವಿತ್ತೇಷಣೆ. ಅಸಾಧುವಿನ ವಿತ್ತೇಷಣೆಯು ಇನ್ನು ಹೇಗಿದ್ದೀತು? ಎಂಬ ಭಾವ. ಆದರೆ ಪದ್ಯ ನನ್ನ ಮನಸ್ಸಿಗೆ ತೃಪ್ತಿ ತಂದಿಲ್ಲ. ಮಾನ್ಯರೇ, ಕಾವ್ಯದೋಷವನ್ನು ಸಂಕೋಚವಿಲ್ಲದೇ ಹೇಳಬೇಕೆಂದು ಕೋರುತ್ತೇನೆ.

    • ನಿಮ್ಮ ಪ್ರಾಂಜಲಮನಸ್ಸಿಗಾಗಿ ಧನ್ಯವಾದಗಳು. ಈ ನಿಮ್ಮ ಪದ್ಯದಲ್ಲಿ ಅಸ್ಪಷ್ಟತೆಯೇ ದೋಷ:-)…ಕಾವ್ಯದಲ್ಲಿ ಕಠಿನಪದಗಳ ಹಾಗೂ ಶಾಸ್ತ್ರಗಂಧಿತ್ವದ ಬಗೆಗೆ ಪ್ರಾಯಿಕವಾಗಿ ವಿವರಣೆಯನ್ನು ನೀಡಬಹುದಾದರೂ ಇಂಥ ಮುಕ್ತಕಗಳಲ್ಲಿ (ವಸ್ತುತಃ ಮುಕ್ತಕವೆಂದರೆ ಯಾವುದೇ ಬಗೆಯ ಪೂರ್ವಾಪರವಿವರಣನಿರಪೇಕ್ಷವಾದ ಪದ್ಯವೆಂದು ತಾತ್ಪರ್ಯ:-) ಪದ್ಯವು ಸರ್ವಥಾ ವಿವರಣಸಾಪೇಕ್ಷವಾಗಿ ವಿದ್ವದ್ರಸಿಕರಿಗೆ ತೋರಬಾರದು. ಇದು ನಮ್ಮೆಲ್ಲರಿಗೂ ಪಾಠ:-) ಉಳಿದಂತೆ ಯಾವ ತೊಡಕಿಲ್ಲ.

     • ತಾವು ನಿಡಿದ ವಿವರಣೆಗಳಿಗೆ ಸ್ವಾಗತ.ಹೌದು ಇಂಥ ವಸ್ತುನಿಷ್ಠ ಮತ್ತು ಸಾಂದರ್ಭಿಕವಾದ ಪದ್ಯಗುಚ್ಛಗಳು ವಿವರಣಸಾಪೇಕ್ಷವಾಗಿ ಇರಬಾರದು. ಇನ್ನು ಮುಂದಾದರೂ ಈವಿಷಯದಲ್ಲಿ ತಮ್ಮ ಸಲಹೆಯನ್ನು ಅನುಸರಿಸಲು ಪ್ರಯತ್ನಿಸುವೆ. ವಂದನೆಗಳು.

 9. ಬ೦ದು ನೆರೆದಿರ್ಪರಿಲ್ಲೀ ಕು೦ಭಮೇಳಕ್ಕೆ
  ಮ೦ದಿ ಸಾವಿರ ಲಕ್ಷವೆಣಿಕೆಯೊಳಗೆ |
  ಮು೦ದೆ ಸ್ನಾನಾರ್ಥಿಗಳ್ಗೆಡೆಯಿರುವುದೇನಿಲ್ಲಿ
  ಎ೦ದು ಯತಿ ನಸುಕಿನಲೆ ಸ್ನಾನಗೈವನ್ ||

  ಹರಿಪಾದಚ್ಯುತೆ ಗಂಗೆಯಂ ಜಟೆಯೊಳಾ ಹರ ಬಂಧಿಸಿರ್ದಾದೊಡಂ |
  ಪುರಹರನಿಂದ ವಿಮುಕ್ತಳಾಗಿ ಧರೆಯಂ ತಣಿಸುತ್ತೆ ಸಾಗಿರ್ದಪಳ್ ||
  ಕರುನಾಡಿಂಗೊದಗಿರ್ಪ ನೀರ ಬರಮಂ ನೀಗಿಪ್ಪಲೀ ಸಾಧುವುಂ |
  ಶಿರಮಂ ಕೊಡವುತ ನೀರನೀಯುತಿಹನೋ ಎಂಬಂತೆ ಕಾಣ್ದಿರ್ಪನೈ ||

  ನನ್ನ ಕಲ್ಪನೆಗೆ ಒ೦ದು ರೂಪ ಕೊಡಲು ಪ್ರಯತ್ನಿಸಿದ್ದೇನೆ. ದೋಷಗಳಿದ್ದರೂ ಇರಬಹುದು. ದಯವಿಟ್ಟು ಸೂಚಿಸಿ.

  • ಮತ್ತೇಭವಿಕ್ರೀಡಿತದಂತೆ ತೋರುವ ಈ ಪದ್ಯದಲ್ಲಿ ಸಾಕಷ್ಟು ಛಂದೋದೋಷಗಳಾಗಿವೆ. ದಯಮಾಡಿ ವೃತ್ತಲಕ್ಷಣದೊಡನೆ ಹೋಲಿಸಿಕೊಂಡು ಸವರಣೆ ಮಾಡಿಕೊಳ್ಳಿರಿ. ಕಲ್ಪನೆಯಂತೂ ನವೀನವಾಗಿದೆ:-)
   ಅಂತೆಯೇ ಮೊದಲ ಪಂಚಮಾತ್ರಾಚೌಪದಿಯಲ್ಲಿ ಮೂರನೆಯ ಹಾಗೂ ನಾಲ್ಕನೆಯ ಸಾಲುಗಳ ನಡುವೆ ಸಂಧಿಯಾಗಿಲ್ಲ. ಇದು ವ್ಯಾಕರಣದೋಷವಲ್ಲವಾದರೂ ಪದ್ಯರಚನಾನಿಯಮಗಳ ಅನುಸಾರ ಅವಾಂಛಿತ. ನಿಮ್ಮ ಪದ್ಯದಲ್ಲಿ ಮೂರನೆಯ ಪಾದಾಂತ್ಯ ಹಾಗೂ ನಾಲ್ಕನೆಯ ಪಾದಾದಿಯಲ್ಲಿ ಸಂಧಿ ಮಾಡಿದರೆ ಛಂದಸ್ಸು ಕೆಡುತ್ತದೆ. ಹೀಗಾಗಿ ಸವರಿಸುವಾಗ ಎಚ್ಚರವಿರಲಿ:-)

   • ತಕ್ಕಮಟ್ಟಿಗೆ ಸವರಿಸಿದ್ದೇನೆ. ಸರಿಯಾಗಿದೆಯೇ ತಿಳಿಸಿರಿ.

    ಬ೦ದು ನೆರೆದಿರ್ಪರಿಲ್ಲೀ ಕು೦ಭಮೇಳಕ್ಕೆ
    ಮ೦ದಿ ಸಾವಿರ ಲಕ್ಷವೆಣಿಕೆಯೊಳಗೆ |
    ಮು೦ದೆ ಸ್ನಾನಾರ್ಥಿಗಳ್ಗೆಡೆಯಿರುವುದಿಲ್ಲವೆ೦-
    ದಿ೦ದು ಯತಿ ನಸುಕಿನಲೆ ಸ್ನಾನಗೈವನ್ ||

    ಹರಿಪಾದಚ್ಯುತೆ ಗಂಗೆಯಂ ಹರನು ತಾ೦ ಶೀರ್ಷಾಗ್ರದಿ೦ ಬಿಟ್ಟಿರಲ್ |
    ಭರದಿ೦ ಸಾಗುತ ನಾಡಿನಾ ನೆಲದ ಹಾಹಾಕಾರಮ೦ ತೀರ್ದಪಳ್ ||
    ಕರುನಾಡಿಂಗೊದಗಿರ್ಪ ನೀರ ಬರಮಂ ನೀಗಿಪ್ಪಲೀ ಸಾಧುವುಂ |
    ಶಿರಮಂ ಝಾಡಿಸಿ ನೀರನೀಯುತಿಹನೋ ಎಂಬಂತೆ ಕಾಣ್ದಿರ್ಪನೈ ||

    • ಒಳ್ಳೆಯ ಪ್ರಯತ್ನ, ಆದರೆ ಮೊದಲ್ ಪದ್ಯದಲ್ಲಿ ಯಾವುದೇ ಕಲ್ಪನೆಯ ಸೊಗಸಿಲ್ಲ. ಇರುವುದೆಲ್ಲ ಬರಿಯ ವಸ್ತುಸ್ಥಿತಿಯಾಗಿದೆ. ಹೀಗಾಗಿ ಕವಿತೆಯಿಲ್ಲಿ ಇಲ್ಲ. ಇರುವುದೆಲ್ಲ ವಾರ್ತಾನಿರೂಪಣೆ:-) ಮತೇಭವಿಕ್ರೀಡಿತದಲ್ಲಿ ತುಂಬ ಸೊಗಸಿನ ವಿನೂತನಕಲ್ಪನೆಯುಂಟು. ಹೀಗಾಗಿ ಇದು ಕಾವ್ಯ.ಆದರೆ ಕೆಲವೊಂದು ಸವರಣೆಳು ಬೇಕು. ಉದಾ: ತೀರ್ಚುವಳ್,
     ….ನೀರನೀವನೆನುವದಂದಂ ಕಣ್ಗೆ ಕಂಡಿರ್ಪನಯ್.

 10. ಜಂಭಮೆಲ್ಲಮನಿಳಿಸುವ ಜಾತ್ರೆಗೆ ಬಾರೊ ತಮ್ಮ
  ಡಂಭಕರಿಗಿಲ್ಲಿ ನಿಲ್ಲಲೂ ಠಾವಿಲ್ಲ ಬಿಡೆಲೋ ಬಿಮ್ಮನ್
  ಅಂಭಸ್ಸೊಳಗೊಮ್ಮೆ ಮುಳುಗೆದ್ದೊಡಪ್ಪುದು ಮನಮೈ ಜುಮ್ಮ
  ಕುಂಭಮೇಳಕ್ಕೆ ದೊರೆಯುಂಟೆ ಕುಂಭಿನಿಯೊಳಗಮ್ಮಮ್ಮ

  • ಪದ್ಯಪಾನದಲ್ಲಿ ಅಕ್ಕರಗಳ ಆಗಮನ ಅಪರೂಪವೇ. ಇದೀಗ ಇಂಥ ನಲ್ಬರವಾಗಿದೆ. ಇದಕ್ಕೆ ಒಸಗೆಯಾಗಲಿ. ಆದರೆ ಚಿತ್ರಕ್ಕೂ ಈ ಪದ್ಯದ ಭಾವಕ್ಕೂ ನೇರವಾದ ಸಂಬಂಧವಿದ್ದಂತೆ ಸ್ಫುರಿಸುತ್ತಿಲ್ಲ. ಆದರೆ ಈ ಮುಂದಿನ ಮಾಲಿನೀವೃತ್ತದಲ್ಲಿ ಹೀಗಿಲ್ಲ. ಏನೇ ಇರಲಿ, ಈ ಪದ್ಯವು ಮಾತ್ರ ತುಂಬ ಚೆಲುವಾಗಿದೆ. ಧನ್ಯವಾದಗಳು

   • ತಮ್ಮ ನಲ್ವಾತಿಗೆ ಧನ್ಯವಾದಗಳು ಗಣೇಶರೆ. ಪದ್ಯ ರಚಿಸುವಾಗ I was looking at the larger picture ಅಷ್ಟೆ. ಆ ಸಾಧು ನಿರ್ವಸ್ತ್ರನಾಗಿ ನೀರೊಳಗೆ ಮಿಂದು ಏಳುವುದನ್ನು ನೋಡಿ ಇಲ್ಲಿ ತೋರಿಕೆಗಾಗಲಿ ಹೊರವೇಷಕ್ಕಾಗಲಿ ಎಡೆಯೂ ಇಲ್ಲ ಬೆಲೆಯೂ ಇಲ್ಲ. ಅನಿಸಿತು. ಜಂಭಮಾಡಿದರೆ ಅಥವಾ ಆ ಜನಜಂಗುಳಿಯಲ್ಲಿ ಅದನ್ನು ನೋಡುವ ವ್ಯವಧಾನ ಯಾರಿಗಿದೆ? ಆದ್ದರಿಂದ ಜಂಭ ಡಂಭಕತೆ ಎರಡೂ ಇಲ್ಲಿ ಗೌಣ ಮತ್ತೆ ಅಪ್ರಸ್ತುತ.

 11. ಜಳದೆ ಮುಳುಗಿ ಕೇಶಂ ಝಾಡಿಸುತ್ತೇಳ್ವ ಭಾವಂ
  ಕೊಳೆಕಳೆಯಿತೊ ಕಾಣೆನ್ ಕೂಡೆ ಗಂಟೊತ್ತಿ ಕಾವಂ
  ಕಳಚಿತು ಪೊರಬೇಸಂ ಗಂಟದೇಕೆಂದೊಡೀವಂ
  ಜಳಕನೆ ತಿರುಮಾತಂ ಸಂಚಿತಂ ಕೊಳ್ಗೆ ದೈವಂ

  • ಬಂಧ ಸೊಗಸಾಗಿದೆ. ಆದರೆ ಮುಖ್ಯವಾಗಿ ನಾಲ್ಕನೆಯ ಪಾದದ ಭಾವವು ನನಗೆಟುಕುತ್ತಿಲ್ಲ. ತಿರು ಎಂಬುದು ತಮಿಳಿನಲ್ಲಲ್ಲದೆ ಕನ್ನಡದಲ್ಲಿ ಶ್ರೀಕಾರಪ್ರತೀಕವಾಗಿ ಬಳಕೆಯಲ್ಲಿಲ್ಲ. ಇಲ್ಲಿ ಹಾಗುಂಟೇ?

   • ತಿರುಮಾತು ಅನ್ನೋದನ್ನ ಉತ್ತರ ಎಂಬರ್ಥದಲ್ಲಿ ಬಳಸಿದ್ದೇನೆ. ತಿರುಗು+ಮಾತು= ತಿರುಮಾತು (ತಿರುಮಂತ್ರದಂತೆ). ಮರುಮಾತು ಎಂದು ಹಾಕಬಹುದಿತ್ತು.. ಉದ್ದೇಶಪೂರ್ವ್ಕವಾಗಿ ಅದನ್ನು ಬಳಸಲಿಲ್ಲ. ನೀವು ಹೇಳಿರುವ ಎರಡನೆ ಅರ್ಥವೂ ಸ್ಫುರಿಸಲಿ ಎಂಬ ಆಶಯದಿಂದ ಹಾಗೆ ಮಾಡಿದೆ. ಕ.ಸಾ.ಪ ನಿಘಂಟುವಿನಲ್ಲಿ “ತಿರು” ಎನ್ನುವುದನ್ನು ತಮಿಳಿನಂತೆಯೆ ಕನ್ನಡದಲ್ಲೂ ಪ್ರಯೋಗವುಂಟೆಂದು ನೋಡಿದ ನೆನಪು ಸ್ಪಷ್ಟವಾಗಿದೆ. ಆ ನಿಟ್ಟಿನಿಂದ ತಿರುಮಾತು ಎಂದರೆ ಉಪದೇಶ ಎಂದಾಯಿತು. ಆದರೂ ಅದು ಪ್ರಧಾನಾರ್ಥವಲ್ಲ. ಸಂಚಾರಿ ಭಾವವಷ್ಟೆ.

    ಸಂಚಿತಂ ಕೊಳ್ಗೆ ದೈವಂ= ಸಂಚಿತಪಾಪವನ್ನು ನಾವಾಗಿಯೆ ಬಿಡುವುದಿಲ್ಲ. ಪರಮಾತ್ಮ ಬಿಡಿಸಬೇಕು. ಅದರಂತೆಯೆ ನನ್ನ ಗಳಿಕೆಸಂಚಿತ)/ ಕೂಡಿಟ್ಟಿರುವ ಹಣವನ್ನೂ (ಸಂಚಿತ)ಆ ದೇವರೆ ತೆಗೆದು ಕೊಳ್ಳಲಿ, ನಾನಾಗಿ ಹೇಗೆ/ಏಕೆ ಬಿಡುವುದು ಎಂದು ಸಾಧು ಹೇಳಿದಂತೆ

 12. ಮತ್ತೊಂದು ಕಲ್ಪನೆ:

  ನೀರೊಳ್ “ಅಪಾಂ ನ ಪಾತ್” ಎನುವ ರೂಪದೆ ವಹ್ನಿಯಡಂಗಿಸಲ್ಗುಮೆಂ-
  ದಾರಯೆ ವಿಜ್ಞರೊಕ್ಕಣಿಪರಾ ಶಿಖಿಯೇ ಯತಿಮೂರ್ತಿಯಾಗಿ ವಿ-
  ಸ್ಫಾರಿಸಿತೇಂ? ತದೀಯಮಹಿತಾಸಿತಧೂಮದ ಲೇಖೆಯೇ ಜಟಾ-
  ಕಾರದೆ ದಿಗ್ದಿಶಾಂತಮವಿಶಾಂತಮನಂತಮದಿಂತು ತೋರಿತೇಂ?

 13. ಮತ್ತೂ ಒಂದು ಕಲ್ಪನೆ:

  ಮಲಿನಮಾಗೆ ಕುಂಭಮೇಳದೊಳ್ ಸುರಗಂಗೆ
  ಮೆಲನೆ ಬಂದ ಸಾಧುವದರೊಳಿಳಿದು|
  ಮಲಮನೆಲ್ಲ ತನ್ನ ಜಟೆಯ ರೂಪಿಂದಿಂತು
  ತಲೆಯಿನೆತ್ತಿ ಕೊಡವುವಂತೆ ತೋರ್ಕುಂ||

  (ಇದು ತೆಲುಗಿನ ಆಟವೆಲದಿ ಎಂಬ ಛಂದಸ್ಸಿನಲ್ಲಿದೆ. ಪದ್ಯಪಾನಕ್ಕಿದು ಅಪರಿಚಿತವಲ್ಲವಾದರೂ ವಿರಳವಾಗಿ ಭೇಟಿಯೀಯುವ ”ಕುಣಿವ ಹೆಣ್ಣು” (ಆಟವೆಲದಿ ಎಂಬ ಪದದ ಅರ್ಥವೇ ಇದು:-)
  ಇದರ ಲಕ್ಷಣ ಹೀಗಿದೆ:
  ಬ್ರ ಬ್ರ ಬ್ರ ವಿ ವಿ (ಮೊದಲ ಹಾಗೂ ಮೂರನೆಯ ಪಾದಗಳಲ್ಲಿ)
  ಬ್ರ ಬ್ರ ಬ್ರ ಬ್ರ ಬ್ರ (2ನೆಯ ಮತ್ತು 4ನೆಯ ಪಾದಗಳಲ್ಲಿ)

  ಬ್ರಹ್ಮವಾಗಿ ಸದಾ uuu ಅಥವಾ – u ಗಣಗಳೂ ವಿಷ್ಣುವಾಗಿ ಸದಾ (uu – u) (- u -)
  ( – -u) (uuu – ) ಗಣಗಳೂ ಬಂದಾಗಲೇ ಎಲ್ಲ ಅಂಶಚ್ಛಂದಸ್ಸಿನ ಪದ್ಯಗಳ ಗತಿ ಮಿಗಿಲಾಗಿ ಸೊಗಯಿಸುತ್ತದೆ. ಇದಕ್ಕೆ ಈ ಪ್ರಭೇದವೂ ಹೊರತಲ್ಲ.

  • ಕ್ಷಮಿಸಬೇಕು; ನಾನು ಈ ಪದ್ಯದ ಮೂರನೆಯ ಸಾಲನ್ನು ಸಮಪಾದಗಳ ಹಾಗೆ ಕಣ್ಮರವೆಯಿಂದ ಟಂಕಿಸಿದೆ. ಅದರ ಯುಕ್ತರೂಪ ಹೀಗೆ:
   “ಮಲಮನೆಲ್ಲ ತನ್ನ ಜಟೆಯ ರೂಪಿಂದಿಂತು”
   (ಶ್ರೀಶನೋ ರಾಮನೋ ಇದನ್ನು ಮೂಲದಲ್ಲಿಯೇ ತಿದ್ದಲಾದಲ್ಲಿ ಮತ್ತೂ ಒಳಿತು)

  • ಒಳ್ಳೆಯ ಬಂಧ ಗಣೇಶರೆ. ನೀವು ಹೇಳಿದಂತೆ ಗಣಗಳ ಆದಿಯಲ್ಲಿ ದ್ವಿಲಘು ಬಂದರೇ ಈ ಕುಣಿವಹೆಣ್ಣು ಸೊಗಯಿಸುವುದು. ಆಗ ತಕಥೈ ಧಿಮಿತೈ ನಡೆ ಬಲುಚೆನ್ನಾಗಿಒದಗಿಬರುವುದು. ಮಧ್ಯೆ ಯುಕ್ತ ಸ್ಥಳಗಳಲ್ಲು _ _ ಬಳಸುದರೆ ತಾತೈ ತಕಧಿತ್ತಾಮ್ ತತ್ತರಿ ತಜ್ಝಣು ಎನ್ನುವ ನಾನಾ ನಾಟ್ಯಲಯಗಳು ಸ್ಫುರಿಸುತ್ತವೆ.

  • ಹಾಗಾದರೆ, ‘ತೋರ್ಕುಂ’ ಎಂಬ ಬಳಕೆಯು ಸಂಗೀತಶಾಸ್ತ್ರದಿಂದ ಮಾತ್ರ ಸಮರ್ಥನೀಯವೆ? ಛಂದಸ್ಸಿನಲ್ಲಿ ಮಾತ್ರ ಪ್ರವೇಶವಿರುವವರಿಗೆ ಇದು ನಿಲುಕದೆ?

 14. ಹಾರಾಟವಿಲ್ಲಾ ಖಗಕುಲದ ಗಗನದಲ್ಲಿ
  ತೂರಿಲ್ಲ ರವಿರಶ್ಮಿ ಮೋಡದಾ ತೆರೆಯಲ್ಲಿ
  ನೀರಾಟಕೆಂದಿಳಿದಿಹೇಕಾಂಗಿ ಸಂತನಿವನಾರೀ ಸಮಯದಲ್ಲಿ
  ನೂರಾರು ತೊರೆಕೊಳ್ಳದಾ ಸಮ್ಮಿಲನದಲ್ಲಿ
  ಬೇರಾವ ನರ ನುಸುಳಿರದಾ ನದಿಕರೆಯಲ್ಲಿ
  ಯಾರೀತ ಜಲಜಾಲವ ನೇಯ್ದವ ತನ್ನ ಜಟೆಕುಂಚದಲ್ಲಿ

  • ಪದ್ಯಪಾನಕ್ಕೆ ಸ್ವಾಗತ. ತಮ್ಮ ರಚನೆಯಲ್ಲಿ ಸ್ವಲ್ಪ ವ್ಯಾಕರಣದ ತಿದ್ದುಗೆಯೂ ಛಂದಸ್ಸಿನ ಪರಿಷ್ಕಾರವೂ ಬೇಕಾಗಿದೆ:-) ಮುಖ್ಯವಾಗಿ ಛಂದೋನಿರ್ವಾಹದ ನಿರ್ಬಂಧದಿಂದ ಗುರುವೊಂದನ್ನು ರೂಪಿಸಿಕೊಳ್ಳಲೆಂದು ಮತ್ತೆ ಮತ್ತೆ ಮೋಡದಾ, ತೆರೆದುಕೊಳ್ಳದಾ, ನುಸುಳಿರದಾ ಎಂಬಿತ್ಯಾದಿ ಆ-ಕಾರಗಳ ಬಳಕೆ ಒಳಿತಲ್ಲ. ಇದು ರಸಮಾರಕ:-)
   ಮತ್ತೊಮ್ಮೆ ಪಾಠಗಳನ್ನು ಕಂಡು ಸವರಿಸಿಕೊಳ್ಳಿರಿ. ಸಹಪದ್ಯಪಾನಿಗಳೂ ನೆರವಾಗುತ್ತಾರೆ.

   • ತಮ್ಮ ಸಲಹೆಗೆ ಧನ್ಯವಾದಗಳು.
    ಪಾಠಗಳನ್ನು ನೋಡಲು ಆರಂಭಿಸಿದ್ದೇನೆ.
    ಇನ್ನು ಮುಂದೆ ತಾವು ಹೇಳಿದ ವಿಷಯಗಳನ್ನು ಗಮನದಲ್ಲಿರಿಸಿ ಪದ್ಯರಚನೆಗೆ ಪ್ರಯತ್ನಿಸುತ್ತೇನೆ.

 15. ಮಾಘ ಸ್ನಾನದಿ ಮಿಂದಿಹ
  ನಾಗ ಮುನಿಜಟೆಯೊಳು ಗಂಗೆಗಂ ಸಿಂಚನವೈ ।
  ಮೇಘ ಧ್ಯಾನದಿ ಸಂಧಿಸ
  ಲಾಗ ದಿನಕರದೊಳು ಗಂಗೆಯಿಂ ಸಿಂಚನವೈ ।।

  • (ಸ್ವಲ್ಪ ತಿದ್ದುಪಡಿ)
   ಮಾಘ ಸ್ನಾನದಿ ಮಿಂದೆ
   ದ್ದಾಗಲ್ ಮುನಿಜಟದಿ ಗಂಗೆಗಂ ಸಿಂಚನವೈ ।
   ಮೇಘ ಧ್ಯಾನದಿ ಸಂಧಿಸ
   ಲಾಗಲ್ ದಿನಕರದಿ ಗಂಗೆಯಿಂ ಸಿಂಚನವೈ ।।

   • ಪ್ರಾಸ ತಪ್ಪಿದೆ. ಸಿಂಚನ ಎಂಬುದು ಅಸಾಧುರೂಪ. ಸೇಚನ ಎಂದಾಗಬೇಕು.ಜಟದಿ ಎಂಬುದೂ ಅಸಾಧುರೂಪ. ಜಟೆಯಿಂ ಎಂದಾಗಬೇಕು. ಸಿಂಚನ(ಸೇಚನ) ಪದದ ಪುನರುಕ್ತಿಗೆ ಪದ್ಯದಲ್ಲಿ ಯಾವುದೇ ಹೆಚ್ಚಿನ ಪ್ರಯೋಜನವಿಲ್ಲ. ಹೀಗಾಗಿ ಈ ಪುನರುಕ್ತಿದೋಷವನ್ನು ಪರಿಹರಿಸಿ. ತಮ್ಮ ಪದ್ಯಬಂಧದಲ್ಲಿ ಹಳಗನ್ನಡದ ಹದ ಈಚೀಚೆಗೆ ಸೊಗಯಿಸುತ್ತಿದೆ.:-)

    • ಧನ್ಯವಾದಗಳು ಗಣೇಶ್ ಸರ್,
     “ಗ” – “ಘ” ಪ್ರಾಸಾಕ್ಷರಗಳ “ಗಜ ಪ್ರಾಸ” ತಪ್ಪಾಗಿದೆಯಲ್ಲವೇ? “ಸಿಂಚನ” ವೆಂದರೆ “ಪ್ರೋಕ್ಷಣ”ವೆಂದು ತಿಳಿದು, “ಗಂಗೆಗೇ” / “ಗಂಗೆಯಿಂದ” ಪ್ರೋಕ್ಷಣ ಎಂಬ ಅರ್ಥದಲ್ಲಿ ಪ್ರಯತ್ನಿಸಿದ್ದು. “ಜಟದಿ” ಬಂದದ್ದು “ಜಗಣ” ಕ್ಕಾಗಿ. “ಸೇಚನ” ಪದ ತಿಳಿದು ಸಂತೋಷವಾಯಿತು. ನೀವು ಹೇಳಿದ ಕೃತಿಗಳನ್ನು ಓಡುತ್ತಿದ್ದೇನೆ. ತಿದ್ದಿದ ಪದ್ಯ ಸರಿಯಿದಯೇ?

     ಮಾಘ ಸ್ನಾನದಿ ಮಿಂದಿರ
     ಲಾ ಘನಸಾರದೊಳು ಯೋಗಿಜಟೆಯಿಂ ಸೇಚನವೈ ।
     ಮೇಘ ಸ್ತೋಮವೆ ಸಂಧಿಸ
     ಲಾ ಘನಕಾಲದೊಳು ಬಾನು ಭುವಿಗಂ ಸಂಭ್ರಮವೈ ।।
     (ಘನಸಾರ = ನೀರು , ಘನಕಾಲ = ಮಳೆಗಾಲ )

    • ಮಾಘ ಸ್ನಾನದಿ ಮಿಂದಿರ
     ಲಾಘನಸಾರದೊಳು ಯೋಗಿಜಟೆಯಿಂ ಸುಳಿಯೈ ।
     ಮೇಘ ಸ್ತೋಮವೆ ಸಂಧಿಸ
     ಲಾಘನಕಾಲದೊಳು ಬಾನು ಭುವಿಗಂ ಸೊಗವೈ ।।

 16. ಬಟ್ಟೆಯನುಟ್ಟಿಲ್ಲ ಜುಟ್ಟನು ಕಟ್ಟಿಲ್ಲ
  ನಿಟ್ಟೆಯಿಂ ನೀರೊಳ್ ಮುಳುಗೆದ್ದ ಮುಯ್ವೊಳು
  ಪೊಟ್ಟಣ ಮಾತ್ರ ಬಿಟ್ಟಿಲ್ಲ
  ——
  ಬ್ಯೂಟಿ ಪೇಜೆಂಟೆಂಬ ಪೋಟಿಯ ಸ್ಪರ್ಧಿಯ
  ಪಾಟಿ ತಾ ಕಂಡನಿವನಾರೊ- ಸ್ವಿಮ್ಮಿಂಗು
  ಸೂಟಿಟ್ಟ ಚೆಲ್ವ ಯತಿವರ್ಯ

 17. ಕುಂಭಮೇಳದಲ್ಲಿ ಒಬ್ಬನೇ ಸಾಧವೇ ಎನ್ನುವಿರಾ? ಈತ ಕುಂಭಕ್ಕೆ ಹೋಗಲೇ ಇಲ್ಲ!

  ಕಂಗೆಟ್ಟರಂ ಡಾವರದಿಂದೆ ಬೇವರಂ
  ದಂಗಾದರಂ ಸೀವರಿಸುತ್ತೆ ಪೋಪೆಯೇಂ?
  ಹಂಗೇಕೆ ನಿನ್ನೀ ಜಲಮೊಯ್ಗೆ ಕಾರ್ಮುಗಿಲ್
  ಗಂಗಾರ್ಪಣಂ ಗೆಯ್ ಕೊಳಮುಂಟು ಮೀಹಕೆಂ

 18. ಭಂಯಂ ದ ದ ಗಂ
  ನವರಂ
  ಗಂ ಯಮು ಸರಸಯದುೂ ಲ
  ಯ  ಉಟ ೕಂಬರದ
  ರಗಂ ಹದು ೕದ
  ನವ ಮುಚ ಗಂ

  (ಛಂದನ ಹ ಮ ತರಬಹುದು…ಪಯಸು)

 19. ಇಹದೊಳು ಬೇಗುದಿ
  ಸಹಿಸಲಸಾಧ್ಯವು
  ದಹಿಸಲಿ ದೇಹವು ಜಲಧಿಯಲಿ
  ಬೃಹದಾಕಾಶದಿ
  ವಿಹರಿಸಲೀ ಮನ
  ಮಹಿಮೆಯ ಜಳಕದ ಪುಳಕದಲಿ

 20. iam just enjoyed all the poems sorry i can not write any poetry i became a member just to taste the sweetness of peoetry iam feeling sorry because i did not try to write poeetry from my younger days but i really enjoy reading them in kannada, english or hindi. hope iam not hurting any bodys feelings thank u padyapana for giving such nice rasaduta

 21. ಭಂಗಿಯಂಬಿಗಿದಪ್ಪಿದ ನಾಗಂ
  ನಗ್ನಾವತಾರದಿಂ ಗಂಗೆ ಯಮುನೆ
  ಸರಸತಿಯರೆದುರೊಳ್
  ನಿಲ್ಲಲ್ ನಾರಿಯರ್ ನಾಚಿ
  ಉಟ್ಟ ಶ್ವೇತಾಂಬರದಸೆರಗಂ ಹರಿದು
  ಬೀಸಿದರ್ ಮಾನವ ಮುಚ್ಹಲ್ ನಾಗ೦ಗೆ

  ತ್ರಿವೇಣಿ ಸಂಗಮದಲ್ಲಿಯ ನಾಗಸಾದು.
  (ಟೈಪಿಸಿದ್ದು ತಪ್ಪಾಗಿತ್ತು ಕ್ಷಮೆಕೋರಿ )

 22. ಅಡಿಗಡಿಗಡರುವ
  ಕಡುಬಿಸಿಲಸುಡುತಾಪವ
  ನಡಗಿಸುತಲುಡುಗಿಸುವ
  ಧುಡುಧುಡುಧುಮ್ಮಿಡುವ
  ಭಂಡನರಸಿಯ
  ಭಂಗದಲಿಬೇಡುತಲಿ
  ನಿಡುಜಡೆಯ
  ಫಡಫಡನೊಡೆಯುತಲಿ
  ಗಂಗೆಯೊಡಲಲಿ
  ಮಿಂದುನಲಿಯುತಲಿಹ
  ನೀನಾಗನಾಥಂ

 23. ನನ್ನ ಆತ್ಮೀಯ ಗುರುಗಳಾದ ಗಣೇಶ್ ರವರೇ, ನಿಮ್ಮ ಬಗ್ಗೆ ಬಹಳವಾದ ಗೌರವವಿದೆ. ಆ ಗೌರವದಲ್ಲಿ ಯಾವುದೇ ಎರಡು ಮಾತಿಲ್ಲ. ನನಗೆ ಒಂದು ಎರಡೇ ಸಾಲಿನಲ್ಲಿ ” ಬ್ರಹ್ಮ “ವಿಲ್ಲದೇ ಪದ್ಯವನ್ನು ಓದಬೇಕೆಂಬ ಆಸೆಯಿದೆ ನೆರೆವೇರಿಸುವಿರೆಂದು ಭಾವಿಸುತ್ತೇನೆ.

 24. ನನ್ನ ಆತ್ಮೀಯ ಗುರುಗಳಾದ ಗಣೇಶ್ ರವರೇ, ನಿಮ್ಮ ಬಗ್ಗೆ ಬಹಳವಾದ ಗೌರವವಿದೆ. ಆ ಗೌರವದಲ್ಲಿ ಯಾವುದೇ ಎರಡು ಮಾತಿಲ್ಲ. ನನಗೆ ಒಂದು ಎರಡೇ ಸಾಲಿನಲ್ಲಿ ” ಬ್ರಹ್ಮ “ವಿಲ್ಲದೇ ಪದ್ಯವನ್ನು ಓದಬೇಕೆಂಬ ಆಸೆಯಿದೆ ನೆರೆವೇರಿಸುವಿರೆಂದು ಭಾವಿಸುತ್ತೇನೆ.

  • ಆತ್ಮೀಯರೇ! ನಿಮ್ಮ ವಿಶ್ವಾಸಕ್ಕಾಗಿ ಧನ್ಯವಾದಗಳು. ಅವಶ್ಯವಾಗಿ ನಿಮ್ಮ ಯಾವುದೇ ಪದ್ಯಸಂಬಂಧಿತವಾದ ಬಯಕೆಯನ್ನು ಈಡೇರಿಸಲು ಮನಸಾ ಯತ್ನಿಸುತ್ತೇನೆ. ಆದರೆ ಪ್ರಸ್ತುತ ನೀವು ಕೋರಿರುವುದೇನೆಂದು ಸ್ಪಷ್ಟವಾಗುತ್ತಿಲ್ಲ. ನೀವೇನು ಕೇವಲ ಬ್ರಹ್ಮಗಣಘಟಿತವಾದ ಪದ್ಯವನ್ನು ನಿರೀಕ್ಷಿಸುತ್ತಿದ್ದೀರೋ? ಹಾಗಿದ್ದಲ್ಲಿ ಕೀ. ಶೇ. ಜಿ ಪಿ ರಾಜರತ್ನಂ ಅವರ “ಯಂಡ್ಕುಡ್ಕ ರತ್ನನ್ ಪದಗ್ಳು” ಎಂಬ ಅತಿಪ್ರಸಿದ್ಧವಾದ ಕವನಸಂಕಲವನ್ನೇ ನೋಡಬಹುದು. ಅದು ಆದ್ಯಂತ ಬ್ರಹ್ಮಗಣಘಟಿತ.

 25. kShamisi, nAnu mattE mattE prayatnisuttalE iddEne.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)