Mar 102013
 

ಶಿವನನ್ನು ಕುರಿತು ವಿವಿಧ ಛಂದಸ್ಸುಗಳಲ್ಲಿ ಪದ್ಯಗಳನ್ನು ರಚಿಸಿರಿ. ಒಂದು ಛಂದಸ್ಸು ಈ ಸರಣಿಯಲ್ಲಿ ಆಗಲೇ ಉಪಯೋಗಿಸಲ್ಪಟ್ಟಿದ್ದರೆ, ಬೇರೊಂದು ಛಂದಸ್ಸಿನಲ್ಲಿ ರಚಿಸಿರಿ

ಶಿವ ಪಾರ್ವತಿ

ಶಿವ ಪಾರ್ವತಿ

  94 Responses to “ಪದ್ಯಸಪ್ತಾಹ – ೬೨: ಶಿವನ ಪದ್ಯಗಳು”

  1. वामार्धमशिवं पुंसां दक्षिनार्धञ्च सुभ्रुवां |
    ते द्वेप्यर्धे ततस्त्यक्त्वा संपृक्तौ निश्चितं शिवौ ||

    • ಸಾಮಾನ್ಯ ಗಂಡಸರ ಎಡಭಾಗ ಮತ್ತು ಹೆಂಗಸರ ಬಲಭಾಗ ಅಶುಭವೆಂದು ಪ್ರತೀತಿ. ಅದರಿಂದಲೇ ಶಿವ ಮತ್ತು ಪಾರ್ವತೀ ತಮ್ಮ ಬಲ ಮತ್ತು ಎಡ ಭಾಗಗಳ ಸಂಪೃಕ್ತಿಯಿಂದ ಅರ್ಧನಾರೀಶ್ವರರಾದರು ಎಂದು ಪದ್ಯದ ತಾತ್ಪರ್ಯ. ಹಾಗೆ ನಾವು ಪರಸ್ಪರ ನಮ್ಮಲ್ಲಿರುವ ಇರುವ ಕೆಟ್ಟದನ್ನು (ಅಶುಭವನ್ನ) ತ್ಯಜಿಸಬೇಕೆಂಬ ಆಶಯ (ಉಡುಪಿ ಅವಧಾನಕ್ಕೋಸ್ಕರ ಬರೆದ ಪದ್ಯ)

    • ರಾಘವೇಂದ್ರ ಅವರ ಪದ್ಯದ ಕಲ್ಪನೆಯು ನಿರತಿಶಯರಮಣೀಯವಾದದ್ದು. ಇದನ್ನು ಸ್ವಲ್ಪ ಭಂಗ್ಯಂತರದಿಂದ ಕಂದಪದ್ಯದಲ್ಲಿ ಕನ್ನಡಿಸಿದ್ದೇನೆ.

      ತೊಡೆಯಲೆಡಬಲಂಗಳ್ಗಂ
      ಬಿಡದವೊಲಾಣ್ಪೆಣ್ಗಳೊಳ್ ನೆಲಸಿದಶುಭಶುಭಾ-
      ಜಡಿಮೆಯನಾಂತರೆ ತಮ್ಮೊಳ್
      ಮೃಡರಿಂತೆಡಬಲದೆ ತಮ್ಮನೇ ಬಲ್ಜಾಣಿಂ !

  2. ಹರಿಣರೂಪಿಯಾಗಿದ್ದ ಯಜ್ಞವನ್ನು ಬೆನ್ನಟ್ಟಿ ಕಡೆಗದನ್ನು ಕೈಯಲ್ಲಿ ತಳೆದನೆಂಬ ಪುರಾಣಪ್ರಸಿದ್ಧಿಯಿರುವ ಮಹಾದೇವನು ಮಹಾಶಿವರಾತ್ರಿಯಂದು ಹರಿಣಗಳನ್ನು ಹರಸಿದಂತೆಯೂ ಕಲ್ಪೋಕ್ತಿಯುಂಟು. ಹೀಗಾಗಿ ಹರಿಣಾಂಕ(ಚಂದ್ರ)ಧರನಾದ ಆತನನ್ನು ಈ ಮಹಾಶಿವರಾತ್ರಿಯಂದು ಹರಿಣೀವೃತ್ತದಲ್ಲಿ ಸ್ತುತಿಸುವ ಯತ್ನವಿದು.

    ನಿಶೆಯನಳಿಸಲ್ ವೇಳ್ಕುಂ ನಿಚ್ಚಂ ದಿನೋದಯಮೆಂದಿಗಂ
    ಪ್ರಶಮಕರಮುದ್ವೇಗಕ್ಕಂ ತಾನೆನುತ್ತೆ ನೆಗಳ್ವರಾಃ |
    ಪಶುಪತಿಯದೇಂ ಚೋದ್ಯಂ ಖೇಲಂ ಮಹಾಶಿವರಾತ್ರಿಯೊಳ್
    ಪಶುಸಕಲದಾ ನೈಶಂ ಪಾಶಂ ಕರಂಗಿ ತೊಳಂಗುಗುಂ||

    ಇಲ್ಲಿ ವಿರೋಧಮೂಲವಾದ ವ್ಯತಿರೇಕಾಲಂಕಾರವಿದೆ.

  3. जटाजूटे गङ्गां धर्ति शशिनं च त्रिनयने
    ललाटेऽग्निं कण्ठे गरलमुरगं चाक्षवलयान् ।
    विभूतिं सर्वाङ्गॆ हिमगिरिसुतामङ्कफलके
    महिम्नश्चापारान् जगदवनभारान् किमु शुचः? ॥
    ಇದು ಶಿಖರಿಣೀ ವೃತ್ತ,
    ಅರ್ಥ- ತ್ರಿನಯನನಾದ ಶಿವನು ತನ್ನ ಜಟಾಜೂಟದಲ್ಲಿ ಗಂಗೆ ಮತ್ತು ಚಂದ್ರರನ್ನೂ, ಹಣೆಯಲ್ಲಿ ಅಗ್ನಿಯನ್ನೂ, ಕೊರಳಲ್ಲಿ ವಿಷ, ಸರ್ಪ, ಮತ್ತು ರುದ್ರಾಕ್ಷಮಾಲೆಗಳನ್ನೂ ಸರ್ವಾಂಗದಲ್ಲಿ ವಿಭೂತಿ (ಅಷ್ಟಸಿದ್ಧಿ)ಗಳನ್ನು ತೊಡೆಯಮೆಲೆ ಗಿರಿಜೆಯನ್ನೂ, ಹಾಗೂ ಜಗತ್ತಿನ ಯೋಗಕ್ಷೇಮದ ಭಾರವನ್ನು ಹೊತ್ತಿರುವ ಅಪಾರ ಮಹಿಮೆಗಳನ್ನು ಧರಿಸಿರುತ್ತಿರಲು ನಾವು ದುಃಖಪಡುವುದು ಏಕೆ?

    • ಮೊದಲನೇ ಸಾಲಿನಲ್ಲಿ धर्ति ಎಂಬುದನ್ನು धरति ಎಂದು ಓದಿಕೊಳ್ಳಬೇಕು.

    • ಒಳ್ಳೆಯ ರಚನೆ. ಆದರೆ ಮೊದಲ ಮತ್ತು ಎರಡನೆಯ ಪಾದಗಳಲ್ಲಿ ಪುನರುಕ್ತವಾದ ಚಕಾರವನ್ನು ನಿವಾರಿಸಿದ್ದರೆ ಮತ್ತೂ ಒಳ್ಳೆಯದಿರುತ್ತಿತ್ತು.

      • ಧನ್ಯವಾದಗಳು, ಗಣೇಶರಿಗೆ.
        ನಮ್ಮಂತಹ ಗೃಹಕವಿಗಳು ಆಶುಕವಿತ್ವವ್ಯಾಮೋಹಿಗಳಾದರೆ ಈ ಚಕಾರಕುಕ್ಷಿತ್ವದಂತಹ ಎಡವಟ್ಟುಗಳು ಸಹಜ. ಈಗ ಸವರಿದ್ದೇನೆ.
        जटाजूटे गङ्गां धरति शशिबिंबं त्रिनयने
        ललाटेऽग्निं कण्ठे गरलभुजगेन्द्राक्षवलयान् ।
        विभूतिं सर्वाङ्गे हिमगिरिसुतामङ्कफलके
        महिम्नश्चापारान् जगदवनभारान् किमु शुचः ॥

        • ಅಡ್ದಿಯಿಲ್ಲ. ಇಲ್ಲಿ ನಾವೆಲ್ಲ ಚಕಾರಕುಕ್ಷಿಗಳೇ:-)ಮಾತ್ರವಲ್ಲ “ಚಾ”ಕಾ(ಖಾ)ರ ಕುಕ್ಷಿಗಳೂ ಹೌದು:-)

        • ಹಾಳ್ಹೊಟ್ಟೆ!

  4. ತನ್ನ ಧ್ಯಾನಿಪ ಶಿವನ ಭಾವವ
    ತನ್ಮಯತೆಯಲಿ ನೋಳ್ಪ ಶಕ್ತಿಯ
    ಧನ್ಯ ಭಾವವದೇನು ಕಾಣಲ್ ಸತ್ಯ ಸುಂದರವೈ ।
    ತನ್ನ ಭಕ್ತಿಯ ಭಾವ ಚಿತ್ತದೆ
    ಮುನ್ನ ಮೂಡಿಹ ರೂಪ ಮನದಲ
    ನನ್ಯ ಭಾವವ ತಾನು ತುಂಬಲ್ ನಿತ್ಯ ಸಂಭ್ರಮವೈ ॥

    (ಶಿವರಾತ್ರಿಯ ಶುಭದಿನ ಪದ್ಯಪಾನದ ಚಿತ್ರ ತೋರಿದ, ಶಿವ-ಶಕ್ತಿಯರ ಅವಿನಾಭಾವ ಬಂಧದ ಸತ್ಯ ಸುಂದರತೆ / ಭಕ್ತಿಯ ಸ್ಪರ್ಶದಿಂದ ನಿರಾಕಾರಗೆ ಆಕಾರ ಕಲ್ಪಿಸಿ ಸಂಭ್ರಮಿಸುವ ಭಕ್ತನ ನಿತ್ಯತೆಯ ಭಾವದಲ್ಲಿ)

    • ರಚನೆ ತಿಳಿಯಾಗಿದೆ. ಆದರೆ ಆದಿಪ್ರಾಸದಲ್ಲಿ ಸ್ವಲ್ಪ ಶೈಥಿಲ್ಯ ಕಂಡಿದೆ. ಅಡ್ಡಿಯಿಲ್ಲ. ಇಂಥ ಸಮೀಪಪ್ರಾಸಗಳನ್ನು ನಮ್ಮ ಷಟ್ಪದಿ-ಸಾಂಗತ್ಯಕವಿಗಳೂ ಯಕ್ಷಗಾನಕವಿಗಳೂ ಹರಿದಾಸರೂ ಬಳಸಿದ್ದಾರೆ. ಡಿವಿಜಿ ಮುಂತಾದವರಲ್ಲಿಯೂ ಇದು ಕಾಣಸಿಗುತ್ತದೆ. ಆದರೆ ನಮ್ಮ ಅಂತಿಮಲಕ್ಷ್ಯವು ಸರ್ವಾಂಗಸುಂದರವೂ ಅನವದ್ಯವೂ ಆದ ಪದ್ಯವನ್ನು ರಚಿಸುವಲ್ಲಿದೆ.

      • ಓಹೋ.., ಕ್ಷಮಿಸಿ ಗಣೇಶ್ ಸರ್, ತಿಳಿಯದೆ ತಪ್ಪಾಗಿದೆ. (ಪದ್ಯ ವಿದ್ಯೆಯಲ್ಲಿ ಸಮೀಪಪ್ರಾಸದ ಬಗ್ಗೆ ಓದಿಯೂ.) ಗಮನಿಸಿಯೇ ಇಲ್ಲ. ಹೀಗಾಗದಂತೆ ಎಚ್ಚರವಹಿಸುತ್ತೇನೆ.

  5. ಗಂಗಾಹಿಮಜಲಶ್ರಾಂತಂ ಲಿಂಗರೂಪೀಸದಾಶಿವಮ್ ।

    ಸುಖೋಷ್ಣಚುಂಬನೋದ್ಯುಕ್ತಾ ಪ್ರಿಯಂ ಪ್ರೀಣಾತಿ ಪಾರ್ವತೀ ।।

    ಗಂಗೆಯ ಶೀತಲ ಜಲದಿಂದ ಬಳಲಿದ ಶಿವನನ್ನು ಬೆಚ್ಚಗಿನ ಚುಂಬನದಿಂದ ಪಾರ್ವತಿ ಸಂತೈಸುತ್ತಾಳೆ

    • ಪ್ರಿಯ ಶ್ರೀರಾಮ್, ನೀವು ಈಚೆಗೆ ಸಂಸ್ಕೃತದಲ್ಲಿ ಪದ್ಯರಚನೆಗೆ ತೊಡಗಿರುವುದು ತುಂಬ ಮುದಾವಹ. ಸದ್ಯದ ಕಲ್ಪನೆ ಸೊಗಸಾಗಿದೆ. ಸ್ವಲ್ಪ ಸವರಣೆಗಳು ಬೇಕಷ್ಟೆ. ಅವು ಹೀಗೆ:
      ………… ………………ಲಿಂಗರೂಪಿಸದಾಶಿವಮ್ |
      …………………………..ಪ್ರೀಣಯತ್ಯಭವಂ ಸತೀ ||

  6. ಶ್ರೀಹೈಮಾತ್ಮಭವಾಮನಪ್ರಣಯಪುಷ್ಪಾಂತರ್ಯಮಾಧುರ್ಯತಾ
    ಗ್ರಾಹಿಭ್ರಾಮರವೃತ್ತಿಮಾನಸವಿಭೋ ಕೈಲಾಸಲೋಕೇಶ್ವರ..|
    ಮೋಹಾಕಾರ ವಿಪಾಟನೋತ್ಕಟಪಟೋ ಭಸ್ಮಾತಿಲಿಪ್ತಾಂಗನೇ
    ಹಾಹಾಕಾರವಿರಾಜಭೂತಗಣದಾ ನೇತಾರನೇ ವಂದಿಪೆ.||೧||

    ರುಂಡಸ್ತೋಮವ ಪೋಣಿಸಿರ್ಪ ವಿಲಸನ್ಮಾಲಾದಿಯಿಂ ಮಂಡಿತಂ
    ತುಂಡಶ್ರೀಜಿತಭಾಸ್ಕರಾಭ ಧರಿಪಂ ಗಂಗಾಜಲಂ ಮಂಡೆಯೋಳ್.|
    ಗಾಂಡೀವಾಶ್ರಯಗಸ್ತ್ರದಾಯಕ ಮಹತ್ ಗಂಡಾಂತರಾಖಂಡನಮ್
    ಚಂಡಾಗ್ನಿಸ್ಥಿತನೇತ್ರನಂ ಭಜಿಸುವೆ ತ್ರೈಶೂಲದಂಡಾಯುಧಂ..||೨||

    • ಭೀಮಸೇನರೆ,
      ಭಾಷೆ, ಬ೦ಧಗಳೆರೆಡೂ ಬಹಳ ಚೆನ್ನಾಗಿದೆ

    • ಒಳ್ಳೆಯ ಓಜಸ್ವಿಭಾಷೆಯನ್ನು ಬಳಸುವ ಮಹಾಕಾಂಕ್ಷೆಯಿಂದ ನಿಮ್ಮಪದ್ಯಗಳೆರಡೂ ಸಾಗಿವೆ. ಆದರೆ ಒಟ್ಟಂದದ ಅಭಿಪ್ರಾಯ ತಿಳಿಯುತ್ತಿದೆಯಲ್ಲದೆ ಪರ್ತಿಯೊಂದು ಪದದ ಸಾಧುತ್ವವಾಗಲಿ, ಸಾರ್ಥಕ್ಯವಾಗಲಿ ಸಾಬೀತಾಗುತ್ತಿಲ್ಲ. ದಯಮಾಡಿ ಮತ್ತೂ ಎಚ್ಚರದಿಂದ ಸಂಸ್ಕೃತಶಬ್ದಗಳನ್ನು ಬಳಸಿರಿ. ಇಲ್ಲಿ ಹಲವು ಕಡೆ ಸಮಾಸಗಳು ಅನ್ವಿತವಾಗಿಲ್ಲ, ಉದ್ದಿಷ್ಟಾಶಯವನ್ನೂ ಕೊಡುತ್ತಿಲ್ಲ. ಆದುದರಿಂದ ತಾವು ದಯಮಾಡಿ ಇಂಥ ವಿವರಗಳಿಗೆ ಮತ್ತಷ್ಟು ಗಮನವೀಯಬೇಕಾಗಿ ನಿವೇದನೆ.

      • ಖಂಡಿತ..ನಿಮ್ಮ ಮಾರ್ಗದರ್ಶನದಲ್ಲಿ ಮುಂದುವರೆಯುವೆ..

        ಯಾವ ಸಮಾಸ ಅನ್ವಿತವಾಗಿಲ್ಲ ಅನ್ನೋದು ಗೊತ್ತಾಗ್ಲಿಲ್ಲ..

        • ನನಗೆ ದೂರವಾಣಿ ಮಾಡುವುದಾದರೆ ವಿಸ್ತರಿಸಿ ವಿವರಿಸಿಯೇನು:-)

          • ಖಂಡಿತ ನಾಳೆಯೇ ಫೋನಾಯಿಸುತ್ತೇನೆ..

            ಮೇಲಿನ ಶ್ಲೋಕಗಳಲ್ಲಿ ದೋಷವಿರೋದ್ರಿಂದ, ಸಂಪೂರ್ಣ ಸಂಸ್ಕೃತದಲ್ಲೇ, ಕೆಲವು ಮಾರ್ಪಾಡುಗಳೊಂದಿಗೆ ಪುನಾರಚನೆ ಮಾಡಿದ್ದೇನೆ.. ತಪ್ಪಿದ್ದಲ್ಲಿ ಎಂದಿನಂತೆ ಮಾರ್ಗದರ್ಶಿಸಿ..

            श्रीहैमात्मभवामनःप्रणयपुष्पान्तर्यमाधुर्यता-
            ग्राहिभ्रामरवृत्तिमानस विभो कैलासलोकेश्वर..|
            मोहाकारविपाटनोत्कटपटो भस्मातिलिप्ताङ्ग नो
            हाहाकारविराजभूतगणनेतः त्वं प्रसीद प्रभो..||

            रुण्डस्तोमसुभासमानगलमालाभ्राजमानं शिवं
            तुण्डश्रीजितभास्कराभसुरगङ्गाचन्द्रभूषान्वितं |
            गाण्डीव्यस्त्रदनन्दिवाहनमृडं वन्दे पुरध्वंसनम्
            चण्डाग्निस्थितलोचनं सुमनसा त्रैशूलदण्डायुधं ||

  7. ಉಮೆ ಪ್ರಕೃಷ್ಟಸಿತೆ ಸಿತಾ೦ಶು ಚ೦ದ್ರಮಂ
    ಹಿಮಾಲಯ೦ ಬಿಳಿದು ವಲಕ್ಷೆ ಗ೦ಗೆ ಮೇಣ್
    ಸಮಾರ್ಜುನ೦ ವೃಷಭಮದೊಪ್ಪೆ ಶ೦ಕರ೦
    ತಮಾವೃತರ್ಕಳಿಗವದಾತನಾದಪಂ

    ಸಿತ, ವಲಕ್ಷ, ಅರ್ಜುನ = ಬಿಳಿ
    ಅವದಾತ = ಬಿಳಿ (ಜ್ಞಾನ)

    • ಪ್ರಿಯ ಸೋಮ, ಇದು ಸೊಗಸಾದ ರುಚಿರಾವೃತ್ತ. (ಮಗಳ ಹೆಸರಿನ ಅಭಿಮಾನವಿಲ್ಲಿ ಕೆಲಸ ಮಾಡಿದೆಯೇ?:-) ಇದನ್ನು ಮತ್ತೂ ಹದಗೊಳ್ಸುವ ಬಗೆ ಹೀಗೆ:
      ಉಮೆ………..ಸಿತಾಂಶು ಚಂದ್ರಮಂ
      ……………….ವಲಕ್ಷೆ ಗಂಗೆ……….|
      ………………..ವೃಷಭಮದೊಪ್ಪೆ …….
      ತಮೋವೃತರ್ಕಳಿಗವದಾತನಾದಪಂ ||

      • ಹೌದು ಸರ್, ಈ ವೃತ್ತದ ಹೆಸರು ಮಗಳಿಗೂ ಇಟ್ಟಿರುವ ಅಭಿಮಾನವೇ ಕೆಲಸಮಾಡಿರುವುದು 🙂

        ಮೂಲದಲ್ಲೆ ತಿದ್ದುಪಡಿ ಮಾಡಿದ್ದೇನೆ, ನಿಮ್ಮ ಸವರಣೆಗಳಾದಮೇಲೆ ತು೦ಬ ಪದ್ಯ ಚೆನ್ನಾಯ್ತೆನಿಸುತ್ತಿದೆ

  8. Imagery borrowed from the movie ‘Towering Inferno’.

    ಭುಜಂಗಪ್ರಯಾತ||
    ಶಿರೋಭಾಗದೊಳ್ ಗಂಗೆಯನ್ನಾತ ತಾಳಲ್
    ವರಂ ಕಾರಣಂ ತಾನದೊಂದಿರ್ಪುದೆಂಬೆಂ|
    ನಿರಾಕೃಶ್ಟನನ್ನಾಗಿಸಲ್ ಧಾರೆಯಿಂದಂ
    ಪರೇಶಂ ಸುಡಲ್ ಮುಕ್ತಫಾಲಾಕ್ಷಿಯಿಂದಂ||

    • ಪ್ರಸಾದು, ಚೆನ್ನಾಗಿದೆ 🙂

      ಮರುಚ್ಛೇಷ್ಟಿತ೦ ದಲ್ ನಿರಾಕೃಷ್ಟನೇ೦ ಪೇಳ್? ಶಿರಶ್ಶೂಲೆಯ೦ ಹಾ! ಚಿರ೦ ತಾಳ್ವನಲ್ತೇ?

      • ಸೋಮ, “ಚಿರಂ ಆಂಪನಲ್ತೇ” ಎಂಬಲ್ಲಿ ವಿಸಂಧಿದೋಷವಾಗಿದೆ. ಇದು ಸಂಧಿಯಾದರೆ ಛಂದೋದೋಷಕ್ಕೆ ದಾರಿಯೀಯುತ್ತದೆ:-) ಹೀಗಾಗಿ ತಾಳ್ವನಲ್ತೇ ಎಂದಲ್ಲಿ ಯುಕ್ತ. ಇದನ್ನುಳಿದು ಮಿಕ್ಕೆಲ್ಲ ಭಾಗವೂ ತುಂಬ ಸೊಗಸಾದ ಹಳಗನ್ನಡದ ಹದದಿಂದ ಕೂಡಿದೆ.

    • ಸ್ವಲ್ಪ ಹಳಗನ್ನಡದ ಹದ ಅಪೇಕ್ಷಿತ. ಅದು ಹೀಗೆ:
      ………………………ಗಂಗೆಯಂ ತಾಳಲಾತಂ
      ……………………………………………
      ನಿರಾಕೃಷ್ಟನಾಗಲ್ಕೆ ವಾರ್(ನೀರು)ಧಾರೆಯಿಂದಂ
      …………………………………………….

    • ನಿರಾಕೃಶ್ಟ is misspelled, due to which Soma was misled. ಆಕರ್ಷಣೆ>ಆಕೃಷ್ಟ. ಆಕ್ರೋಶ>ಆಕ್ರುಷ್ಟ. Here is the corrected and honed verse:
      ಶಿರೋಭಾಗದೊಳ್ ಗಂಗೆಯಂ ತಾಳಲಾತಂ
      ವರಂ ಕಾರಣಂ ತಾನದೊಂದಿರ್ಪುದೆಂಬೆಂ|
      ನಿರಾಕ್ರುಷ್ಟನಾಗಲ್ಕೆ ವಾರ್ಧಾರೆಯಿಂದಂ
      ಪರೇಶಂ ಸುಡಲ್ ಮುಕ್ತಫಾಲಾಕ್ಷಿಯಿಂದಂ||

  9. ಶಿವನಿಗೆ ಎರಡು ರೂಪ – ಒಂದು ಕಾವ್ಯಪರ (anthropomorphic), ಇನ್ನೊಂದು ಶುದ್ಧತತ್ತ್ವಪರ (Lingaroopa). ಇತರ ದೇವತೆಗಳಿಗೆ ಈ ಸೌಭಾಗ್ಯವಿಲ್ಲ.

    ಶಾಲಿನೀ||
    ರುದ್ರಂ ತಾನುಂ ತತ್ತ್ವ-ಕಾವ್ಯಾಂಗ ಮೇಳಂ
    ಭದ್ರಂ, ರೂಪಿಂ ಕಾವ್ಯಲೀಲರ್ಗೆ ಗ್ರಾಸಂ|
    ಅದ್ರಿಂ ನೋಡಲ್ ಲಿಂಗರೂಪಂ ಸುಪೂಜ್ಯಂ
    ಕ್ಷುದ್ರರ್, ಬೇರಾರುಂಟು ದೇವರ್ಗಳಿಂತುಂ||

    • ಅದ್ರಿಂ ಎಂಬ ರೂಪವು ಅಸಾಧು. ಬಿಂದುವು ಕೇವಲ ಅಕಾರಾಂತಪದಗಳಿಗೆ ಬರುತ್ತದೆ.
      ಅಥವಾ ಇದೇನು ಆದುದರಿಂದ ಎಂಬ ಪದದ ಜನ್ಯವೋ? ಹಾಗಿದ್ದರೂ ಇದು ವ್ಯಾಕರಣವಿರುದ್ಧ, ಗ್ರಾಮ್ಯ:-)

    • ‘ಅದ್ರಿಕ್ಷೇತ್ರನ್ ಲಿಂಗರೂಪಿಂ ಸುಪೂಜ್ಯಂ’ ಎಂದರೆ ಸರಿಯಾದೀತೆ?

  10. ಹುಡುಕ್ ಘುಡುಕ್ ಹುಡುಕ್ ರವಂ
    ಹುಡುಕ್ಕೆಯಿಂದಮುದ್ಭವಂ
    ಧಡದ್ಧಡದ್ದ ತಾಂಡವಂ
    ಕಡಂಗುತಾಡುವಂಭವಂ

    ಧಣಧಣದ್ದ ಹೆಜ್ಜೆಗಂ
    ಝಣಜ್ಝಣಜ್ಜ ಗೆಜ್ಜೆಗಂ
    ಗಣಾರ್ಯನೋಪ ಬಿಜ್ಜೆಗಂ
    ಕಣಂ ಮಡಲ್ದ ಮುಜ್ಜಗಂ

    • ಶ್ರೀಕಾ೦ತರೆ,
      ಚೆನ್ನಾಗಿದೆ “ಕಣಂ ಮಡಲ್ದ ಮುಜ್ಜಗಂ” ಬಹಳ ಹಿಡಿಸಿತು

    • ಶ್ರೀಕಾಂತ್ ಸರ್,
      ತುಂಬಾ ಚೆನ್ನಾಗಿದೆ. ಛಂದಸ್ಸು ಯಾವುದೆಂದು ಗೊತ್ತಾಗುತ್ತಿಲ್ಲ. ದಯವಿಟ್ಟು ತಿಳಿಸಿಕೊಡಿ.

      • ಧನ್ಯವಾದ ಉಷರವರೆ. ಇದು “ಪಪ್ರಮಾಣಿಕಾ” ಛಂದಸ್ಸು- ಅನುಷ್ಟುಪ್ಪಿನ ಒಂದು ಪ್ರಭೇದ- ಲಗಂಲಗಂಲಗಂಲಗಂ- ನಾಲ್ಕು ಪಾದಗಳಲ್ಲಿಯು ಸಹ

        • *”ಪ್ರಮಾಣಿಕಾ”

          • ಇದು ಅನುಷ್ಟುಪ್ ವರ್ಗದ ಒಂದು ಸತಾನವೃತ್ತ. ಇದರ ದುಪ್ಪಟ್ಟು ಗಾತ್ರದ ವೃತ್ತವೇ ಸುಪ್ರಸಿದ್ಧವಾದ ಪಂಚಚಾಮರ. ಎಲ್ಲರಿಗೂ ಗೊತ್ತಿರಬಹುದಾದ ’ಮುದಾ ಕರಾತ್ತಮೋದಕಂ….” ಎಂಬ ಗಣೇಶಪಂಚರತ್ನವು ಇದೇ ಛಂದಸ್ಸಿನಲ್ಲಿದೆ.

        • ಧಾಟಿ ತುಂಬಾ ಪರಿಚಿತವೆನ್ನಿಸ್ಸಿತ್ತು. ಇವು ಸಂಸ್ಕೃತ ಭಾಷೆಯ ವೃತ್ತಗಳೇ? ಈ ವೃತ್ತದಲ್ಲಿ “ಶಿವಸ್ತುತಿ” ಇದೆಯೇ? ಗಣೇಶ್ ಸರ್, ನೀವು ರಚಿಸಿರುವ “ಶಿವಸ್ತುತಿ”ಯ ಬಗ್ಗೆ
          ಕೇಳಿರುವೆ. ಸಾದ್ಯವಾದರೆ ಅದನ್ನಿಲ್ಲಿ ದಯವಿಟ್ಟು ಹಾಕಿಸಿ.

  11. ನೆನೆದೊಮ್ಮೆ ಗಂಗಾಭಿಷೇಕದಲಿ , ಸೋಲೊಮ್ಮೆ
    ಮೊನಚಾದ ಸಹದೇಹಿದೃಷ್ಟಿಶರಕೇ
    ಮನದೊಳೊಲಿವನದಾರಿಗೆಂದು ಕಾದಿರೆಭಕ್ತ
    ಜನ, ಅದುವೆ ಶಿವರಾತ್ರಿಯಾಯ್ತೆ ಜಗದೊಳ್ ?

    ಸಹದೇಹಿ – body mate (souls who have shared the common body).
    ಶಿವ, ಗಂಗೆಗೆ ಒಲಿಯುತ್ತಾನೋ, ಪಾರ್ವತಿಗೆ ಒಲಿಯುತ್ತಾನೋ ಎ೦ದು ಕಾಯುತ್ತಾ ಭಕ್ತರು ಕಾದಿದ್ದೇ ಶಿವರಾತ್ರಿಯ ಜಾಗರಣೆಯಾಯ್ತೇ ಎಂಬುದು ತಾತ್ಪರ್ಯ.

    • ಪ್ರಿಯ ಶ್ರೀಶ, ತುಂಬ ಚೆಲುವಾದ ಚೌಪದಿಯನ್ನು ಕೊಡುವ ಮೂಲಕ ಬಹುಕಾಲದ ಬಳಿಕ ಪದ್ಯಪಾನಕ್ಕೆ ಒಳ್ಳೆಯ ಪುನರಾಗಮನವನ್ನು ಮಾಡಿದ್ದೀರ:-) ಇಲ್ಲಿಯ ಕಲ್ಪನೆ ತುಂಬ ಸ್ವೋಪಜ್ಞ, ಸುಂದರ. ಅಭಿನಂದನೆಗಳು.

      • ಧನ್ಯವಾದಗಳು ಸಾರ್. ಇನ್ನು ಪ್ರತೀ ಸಪ್ತಾಹಕ್ಕೂ ಪದ್ಯವನ್ನು ಬರೆಯುವನಾಗುತ್ತೇನೆ. ದಯವಿಟ್ಟು ಮನ್ನಿಸಿ.

        • ”ಪದ್ಯವನ್ನು’ ಎಂಬ ಏಕವಚನದ ಚೌಕಾಸಿಯೇಕೆ ಶ್ರೀಶ? 🙂
          ಹೊಳ್ಳಂ ಮದುವೆಯ ಬಳಿಕಂ
          ಹೊಳ್ಳಾದಂ ಪದ್ಯಪಾನದಾಕಾಂಕ್ಷೆಗೆನಲ್ |
          ಜಳ್ಳಾಗುವರೇಂ ತರುಣರ್
          ದಳ್ಳಿಸೆ ವೈವಾಹಯೋಗಮೆಂದಾಂ ಬಗೆವೆಂ ||

    • ಶ್ರೀಶ, ಚೆನ್ನಾಗಿದೆ, ನಿನ್ನ ಏಡಿಯಾ ಬೆಳೆಸಿ…

      ಜನ ಜಾಗರಣೆಮಾಡಿ ಯೋಚಿಸಿ ಹೀಗೆ ಹೇಳಬಹುದೆ? 🙂

      ಕೋಪೋದ್ವಿಗ್ನಳ್ ಧಾತ್ರಿಯ೦ ಸೀಳ್ವುದ೦ ತಾ೦
      ಕಾಪಿಟ್ಟ೦ ಭೂತೇಶನೈದೇ, ಪ್ರಭಾವ೦
      ತಾಪ೦ಗೈದಾ ಪಾರ್ವತೀ ಮಾಳ್ದಪಳ್ ನಿ-
      ಕ್ಷೇಪ೦ ಗೆಲ್ದಳ್ ಶಾ೦ಕರಾರ್ಧಾ೦ಗಮಲ್ತೇ

  12. ಹರನೇ ಸರ್ವೇಶ್ವರನೀ ಜಗದೊಳು ಹರನ೦ ಭಜಿಸುವುದತಿಶಯವು |
    ಹರನಿ೦ ಭಕ್ತರ ಭಾಗ್ಯವು ತೆರೆವುದು ಹರನಿಗೆ ನಮಿಸುವೆ ಭಕ್ತಿಯಲಿ ||
    ಹರನಾ ದೆಸೆಯಿ೦ ಸೃಷ್ಟಿಯ ತೋಲನ ಹರನ ಕೀರ್ತನವೆ ಪುಣ್ಯಕರ |
    ಹರನೊಳ್ ನೆಲೆಸಲಿ ಚಿತ್ತವದನಿಶ೦ ಹೇ ಹರ ಎನ್ನೊಳು ಕೃಪೆದೋರು ||

    ಶಿವನ೦ ಮೆಚ್ಚಿಸೆ ಗೈದಳಗಜೆ ತಪಮ೦ ಪ೦ಚಾಗ್ನಿಯಾ ಮಧ್ಯದೋಳ್ |
    ಶಿವನ೦ ಧ್ಯಾನಿಸಿ ಗೆಲ್ದ ಪಸುಳೆ ಮಾರ್ಕ೦ಡೇಯ ಜವರಾಯನ೦ |
    ಶಿವನ೦ ಕೀರ್ತಿಸುತಾತ್ಮಲಿ೦ಗವನೆ ತಾ೦ ಪಡೆದ೦ ದಶಾಸ್ಯ೦ ಸದಾ-
    ಶಿವನ೦ ಪೊ೦ದಲು ಭಕ್ತಿಯೊ೦ದೆ ಪಥಕ೦ ಲೋಗರ್ಗೆ ಕಲಿಗಾಲದೋಳ್ ||

    • ತಮ್ಮ ಮೊದಲ ಪದ್ಯವೇನೋ ಚತುರ್ಮಾತ್ರಾಗಣಘಟಿತವೆಂಬಂತೆ ತೋರಿದೆ. ಆದರೆ ಎರದನೆಯ ಪದ್ಯದಲ್ಲಿ ಮತ್ತೇಭವಿಕ್ರೀಡಿತದ ಛಾಯೆಯಿದ್ದು ಹಲವೆಡೆ ಅದು ಭಗ್ನಗೊಂಡೂ ಇದೆ. ದಯಮಾಡಿ ಸವರಿಸಿಕೊಳ್ಳಿರಿ.

  13. ಸ್ರಗ್ಧರಾ||
    ದಿವ್ಯಳ್ ತಾನಾದೊಡೇಂ ದಲ್ ಶಿವಸತಿಯಳು ಪೇಳ್ ಮುಕ್ತಳೇಮೀರ್ಷ್ಯೆಯಿಂದಂ
    ಸೇವ್ಯನ್ ತಾನಾಗೆ ಭರ್ತಂ ಹರಿಪದಭವಳಿಂ ಕುಂದು ತನ್ನಾತ್ಮಕೆಂದುಂ|
    ಭಾವ್ಯಳ್ ತಾ ಮಾತ್ರಳಾಗಲ್ ಹಿಡಿದಿರಿಸಿಹಳೈ ಈಶನಂ ನೋಟದಿಂದಂ
    ಸವ್ಯಂಬದ್ಧಂ, ನಿರೀಹಂ ಶಿವನದಿಹುದು ಕಣ್, ದಿಟ್ಟಿ ತಾಕಾಣದನ್ಯಂ||

    (ನಿರೀಹಂ – motionless, inactive)

    • praAdu tumba chennAgide 🙂

    • ಸೋಮ,
      ನನ್ನ ಹೆಸರನ್ನು ಹೆಚ್ಚುಕಮ್ಮಿ ’ಪ್ರವಾದಿ’ ಎಂಬಂತೆ ಟಂಕಿಸಿದ್ದೀರಿ 😉

      ’ಅರ್ಥಮಾದುದು ಪದ್ಯ’ಮೆಂದಿರ್ದೊಡಾಗಿತ್ತು
      ಸಾರ್ಥಕ್ಯವಿಂತುಟೇ ಪೊಂದುತಿದ್ದೆನ್|
      ಪಾರ್ಥಕ್ಯಕಾಗಿ’ಪ್ರವಾದಿ’ಯೆಂದೆಂಬೆಯೇಂ?
      ಪ್ರಾರ್ಥಿಪನು ಬೇಡಯ್ಯ – ಹಾದಿರಂಪ||
      (ಪಾರ್ಥಕ್ಯ – Variety)

    • ಪಿರಿದಾದ ವೃತ್ತಕುಕ್ಷಿಗೆ
      ಸುರಿಯಲ್ಕಾರೋಗ್ಯಪೂರ್ಣಭೋಜನಮಂ ನೀಂ |
      ಬರಿದೇ ಸೊಲ್ಗಳ ಬೊಜ್ಜಂ
      ಬರಿಸಿದಿರೇಂ ಹಾದಿರಂಪ? ನಿರ್ಜಿತಪಂಪಾ!!

      ಬಳಲ್ದುದು ಭಾಷಾಸೌಷ್ಠವ-
      ದೆಳಲತೆ ಮೇಣ್ ಬಳಲ್ದುದಂತೆಯೇ ವ್ಯಾಕರಣಂ|
      ತೊಳಲ್ದುದು ಪೊರುಳುಂ ನೋಡಲ್
      ತಿಳಿತನಮಂ ತೀವಿರಣ್ಣ ಸೀರ್ನಾಡ್ ಚಿಣ್ಣಾ !!

    • ಬಳಲಿದೊಡಂ ಭಾಷೆಯು ಮೇಣ್
      ತೊಳಲಿದೊಡಂ ವ್ಯಾಕೃತಿ ವ್ಯವಸ್ಥೆಯು ಪೊರುಳುಂ|
      ಝಳಪಿಸಿತೀರ್ ನಿಂದಾಸ್ತುತಿ!
      ಹುಳುಕಂ ತೋರಿದಿರಿ ಗುರುವೆ ಧನ್ಯಂ ಚಿಣ್ಣಂ|

      ಕ್ಲುಪ್ತತೆಯನ್ನು ಸಾಧಿಸುವೆ.

  14. ಒಂದು ತ್ರಿಪದೆ

    ಎರಳೆಯಂ ಪಿಡಿದಂಗೆ ಪೆರೆಯಂ ತಾನ್ ಮುಡಿದಂಗೆ
    ತರಳೆಯನೆದೆಯೊಳಿಡಿದಂಗೆ ತನ್ನಿಂದಂ
    ಪೆರತಿಲ್ಲದಂಗೆ ಪೆಣೆ ಕೈಯಂ

  15. ಗೀತಿಕೆ, ಕಂದ ಎರಡರ ಲಕ್ಷಣಗಳೂ ಸಮೀಕರಿಸಿ ಪದ್ಯ ರಚಿಸಿದ್ದೇನೆ- ದಕ್ಷಿಣಾಮೂರ್ತಿಯ ಮೇಲೆ. ಗೀತಿಕೆಯ ಒಂಫೊಂದು ಅರ್ಧದಲೂ ಎಂಟು ಗಣಗಳು. ನಾಲ್ಕನೆಯ ಗಣಾದಿಯಲ್ಲಿ ಪ್ರಾಸ. ಎರಡು ಅರ್ಧಗಳಲ್ಲು ಎರಡು ಮತ್ತು ಆರನೆಯ ಸ್ಥಾನಗಳಲ್ಲಿ ಬ್ರಹ್ಮ ಗಣ. ಉಳಿದುವು ವಿಷ್ಣು ಅಥವಾ ರುದ್ರ ಬರಬಹುದು. ಪದ್ಯವನ್ನು ಸರಳವಾಗಿ ಎಸಗಿದ್ದೇನೆ. ವಿಶೇಷತೆಯಿನ್ನೇನು ಇಲ್ಲ.

    ಆಲದ ಕೆಳಗೆ ಕುಳಿತು ತಾ
    ನಾಲಪಿಸದೆ ಬೋಧಿಸಿರ್ಪನಾಚಾರ್ಯಂ ಪಾರ್
    ಆಲಿಪರಿದನೆ ಕುಳಿತು ತಾ-
    ಮಾಲಕುಮಿಯ ಮೊಮ್ಮಗಂದಿರರ್ಥೈಸುತ್ತಂ

    ಪಾರ್- ನೋಡು
    ಲಕುಮಿಯ ಮೊಮ್ಮಗಂದಿರ್- ಸನಕ, ಸನಂದನ, ಸನಾತನ, ಸನತ್ಕುಮಾರರು

    • ನಿಮ್ಮಯ ನಮ್ರತೆ ಸೌಜನ್ಯಕಮ್ರತೆ
      ಹೊಮ್ಮಿಸಿತೀ ಪರಿ ಮಾತ |
      ಸುಮ್ಮನೆ ಮಾತೇನು ಗೀತಿಕೆ ಕಂದಕೆ
      ಬಿಮ್ಮನಸೆಯನಲ್ಕಧೀತ !

      • ನಾನು ಬಲ್ಲಂತೆ ತ್ರಿಮೂರ್ತಿಚ್ಛಂದಸ್ಸುಗಳ ಪೈಕಿ ಗೀತಿಕೆಯೇ ಅತ್ಯಂತಗತಿಕೃಪಣಬಂಧ. ಇದನ್ನು ಲಕ್ಷಣಶುದ್ಧವಾಗಿ ಹಾಡಲು ಸೇಡಿಯಾಪು ಅವರಿಗೂ ಆಗಲಿಲ್ಲವೆನ್ನಬೇಕು. ಒಟ್ಟಿನಲ್ಲಿ ಇದಕ್ಕೆ ಶಾಸ್ತ್ರೋಪವಸತಿಯಿದೆಯಲ್ಲದೆ ಅನುಭವೋಪವಸತಿ ಮೃಗ್ಯ. ಹೀಗಾಗಿ ಇಂಥ ಬಂಧವನ್ನೂ ಗರ್ಭಕವಿತೆಗೆ ಆಯ್ದು ಗೆದ್ದ ನಿಮಗೆ ಅಭಿನಂದನೆಗಳು ಸಲ್ಲಲೇಬೇಕು.

      • ಧನ್ಯವಾದಗಳು ಗಣೇಶರೆ

  16. ||ಶಂಭುನಟನಂ||

    ವಿರಿಂಚಿ ಹರಿ ಶಂಕರರದೇಂ ಜನನ ಪೋಷಣ ವಿನಾಶಗಳಭಿನ್ನಮವುತಾಂ
    ನಿರಂತರ ಮನೋಂಗಣನಟದ್ವಿಷಯ ಭಾವಗಳಡಂಗಲದೆ ರಾತ್ರಿಯ ಸುಷು-
    ಪ್ತಿರಂಗಮದು, ಮೇಣ್ ಮನವ ಮೆಟ್ಟುತ ವಿಕೋಪವ ನಿಯಂತ್ರಿಸೆ ಸದಾಶಿವ ಫಲಂ
    ಪುರಾರಿ ಯುರಿಗಣ್ಣದರಿವೈ ತೆರೆಯಲಿಂದು ಶಿವರಾತ್ರಿಯೆ ಋತಂ ಕರುಣಿಸಲ್

    ಲಯವಿಲ್ಲದೆ ಸೃಷ್ಟಿಯಿಲ್ಲ. ಸೃಷ್ಟಿಸ್ಥಿತಿಗಳು ಲಯಕ್ಕಿಂತ ಹೊರತಲ್ಲ. ಮನಸ್ಸಿನಲ್ಲಿ ಭಾವಗಳು ನಶಿಸಿ “ಆಚಿಂತೆ ಈಗಿಲ್ಲ “ ಎಂದಾಗ, ಎದ್ದಕೋಪವಿಳಿದಾಗ ಕ್ರಿಯಾಶೀಲವಾಗುವುದೇ ಲಯಶಕ್ತಿ. ಭಾವತರಂಗವೆದ್ದು ನಶಿಸದ್ದಿದ್ದರೆ ಮತ್ತೊಂದು ಭಾವದ ಹುಟ್ಟಿಗೆ ಅವಕಾಶವಿಲ್ಲ. ಆ ಶಕ್ತಿತ್ರಯಗಳು ಒಂದೇ ಕಾರ್ಯದ ಮೂರು ಹಂತಗಳು. ಎಲ್ಲಾ ಭಾವಸಂಘರ್ಷಗಳು ಅಡಗಿ ಸಂಪೂರ್ಣಲಯವಾಗುವುದೇ ನಿತ್ಯದ ಸುಷುಪ್ತಿ ಸುಖಶಿವಫಲ. ಗಿರಿಶಿಖರಾಗ್ರದ ತಪದಿಂದ ಮೇಲೆದ್ದು ನಾಟ್ಯಭಂಗಿಗಳ ಆನಂದತಾಂಡವದ ಪರಮಾನಂದಪದವಿಯ ಅನುಭವದಲ್ಲಿ ತೆರೆದ ಅರಿವಿನ ಕಣ್ಣಿಗೆ ಋತ-ಸತ್ಯದರ್ಶನ. ನೋಡುವವ, ಭಾವಿಸುವವ, ಯೋಚಿಸುವವ, ದೇಹ, ಮನಸ್ಸು, ಬುದ್ಧಿ, ಅಹಂಕಾರಗಳು ಲಯವಾಗಿ, ಕತ್ತಲಲ್ಲಿ ಏನೇನೂ ಕಾಣದಂತಾದಾಗ ಶಿವರಾತ್ರಿ, ಯಾರೋ ಮಾಡುವುದಲ್ಲ. ನಾವೇ ಮಾಡಿಕೊಳ್ಳಬೇಕಾದ್ದು. ವರ್ಷಕ್ಕೊಮ್ಮೆಯಲ್ಲ. ಸದಾ ಸರ್ವದಾ. (ಈ ಭಾವನೆಗೆ ಸ್ಪೂರ್ತಿ: ಸ್ವಾಮಿ ಚಿನ್ಮಯಾನಂದರ ಒಂದು ಉಪನ್ಯಾಸ)

    • ಅನಿರೀಕ್ಷಿತಮಹಾವೃತ್ತವಿನಿಯೋಗ!! ಶಿವರಾತ್ರಿಗೆ ಸಮುಚಿತನಿಯೋಗ. ಸಣ್ಣದೊಂದು ತಿದ್ದುಪಡಿ: ಮನಸ್ಸು ಸಕಾರಂತಶಬ್ದವಾದ ಕಾರಣ ಸಮಾಸದಲ್ಲಿ ಅದು ಮನಾಂಗಣವಾಗದೆ ಮನೋs೦ಗಣವಾಗಬೇಕು.

  17. ಗಿರಿರಾಜಪುತ್ರಿಯಂ ಸರಸಕ್ಕೆ ಕರೆದಲ್ಲಿ ಶಿರದಿಂದೆ ಗಂಗೆ ತಣ್ಣೀರೆರೆಚುವಳ್
    ಗಿರಿಕಂದರಗಳಲ್ಲಿ ಸುರಗಂಗೆ ಕೈಮೀರಿ ಹರಿವಂತೆ ಗಿರಿಕನ್ಯೆ ಏರ್ಪಡಿಸುವಳ್
    ಪರಮಸುಂದರಮೂರ್ತಿ ಹೆಂಡಿರೀರ್ವರಗಂಡ ಸಂಗೀತನಾಟ್ಯಕೋವಿದನು ರಸಿಕನ್
    ತಿರಿದಾನೆ ತೊಗಲುಟ್ಟು ಮಸಣಬೂದಿಯ ಬಳೆದು ತಪವಗೈವನೆ? ಕೇಳು ಚೋದ್ಯಮಲ್ತು

    • *ಮಸಣಬೂದಿಯ ಪೂಸಿ*

    • ಗಂಗೆ-ಗೌರಿಯರ ಸಾಮರ್ಥ್ಯವನ್ನು ತುಂಬ ಚೆನ್ನಾಗಿ ಹೊಂದಿಸಿದ್ದೀರಿ. ಧನ್ಯವಾದಗಳು.
      ಕೊನೆಯ ಪಾದದಲ್ಲಿ ‘ಗೈವನೆ?’ ಎನ್ನುವುದಕ್ಕಿಂತ ‘(ರಸಿಕನು) ತೊಗಲುಟ್ಟು ತಿರಿಯುವಂತಾದುದೆ? ಬೂದಿಬಳಿದು ತಪಗೈಯುವಂತಾದುದೆ?’ ಎಂದು ಮಾಡಿದರೆ ಇನ್ನೂ ಸೊಗಯಿಸುತ್ತದೆ.
      ಕರೆದಲ್ಲಿ, ಹರಿವಂತೆ – ಇಂಥವುಗಳನ್ನು ಹಳಗನ್ನಡವಾಗಿಸಿ.

    • ಪದ್ಯಮಂ ರಂಪಾರ್ಯ ತಿದ್ದಿದನಿದಕೊಳ್ಳಿಂ ಪಳತುಗನ್ನಡವಾತು ಪೊಸತು ಸೀಸ

      ಗಿರಿರಾಜ ತನಯಳಂ ಸರಸಕ್ಕೆ ಕರೆವುದುಂ ಶಿರದಿಂದೆ ಗಂಗೆ ತಣ್ಣೀರೆರೆಚುವಳ್
      ಗಿರಿಕಂದರಗಳೊಳಂ ಸುರಗಂಗೆ ಪರಿದು ಕೈಮೀರಲ್ಕೆ ಗಿರಿಕನ್ಯೆ ಏರ್ಪಡಿಸುವಳ್
      ಪರಮಸುಂದರಮೂರ್ತಿ ಹೆಂಡಿರೀರ್ವರಗಂಡ ನಾಟ್ಯಸಂಗೀತಕೋವಿದನು ರಸಿಕನ್
      ತಿರಿವನೇಂ? ಮಂಜಿನೊಳ್ ತೊಗಲುಟ್ಟು ತಪಿಪನೇಂ? ಸುಡುವನೇಂ ಕಾಮನಂ? ಚೋದ್ಯಮಲ್ತು

    • ಒಳ್ಳಿತಾದುದಯ್ ಜೀವೆಂ. ವಯಸ್ಯವರ್ಯ!
      ಬೆಳ್ಳಿಪಾಣಿವಟ್ಟಕ್ಕೆ ಜೋಡಪ್ಪ ಸೀಸಂ
      ಸಲ್ಲುವಂತಾಯ್ತು. ಮತ್ತೆತ್ತುಗೀತಿಯೆಂಬ
      ಸಲ್ಲಲಿತರತ್ನಲಿಂಗಮಂ ಮರೆತಿರೇಕೆ?

  18. ಕರದಾಗ ಸಿರಿಗೌರಿ ಪರಶಿವನ ಹಿಡಿದಾಳ
    ಸುರಗಂಗೆ ಶಿರಕೆ ಸರಿನೀರ। ಸುರಿದಾಳ
    ನರನೋಡದೆಂತ ಹರಲೀಲ।

    (ಗಂಗೆ-ಗೌರಿಯ ಶಿರ-ಕರಾಮತ್ತು !!)
    “ಶಿವಲೀಲೆ”ಯಲ್ಲಿ ಬ್ರಹ್ಮ-ವಿಷ್ಣುಗಣಗಳನ್ನು ಕಡೆಗಣಿಸಿದ್ದಲ್ಲಿ ನೀವು ಮಾತ್ರಾ ಗಣನೆಗೆ ತೆಗೆದುಕೊಳ್ಳಬಾರದೆಂದು ವಿನಂತಿ.

    • ರಚಿಸಿದ್ದೀರ.ಒಳ್ಳೆಯ ಅಚ್ಯುತ ರಚನೆ. ನಾನು ಅಂಶಗಣಗಳ ತ್ರಿಪದಿಯನ್ನು ರಚಿಸಿದರೆ ನೀವು ಮಾತ್ರೆಗಳ ಗಣನೆಯ ತ್ರಿಪದಿಯಲ್ಲಿ ರಚಿಸಿದ್ದೀರ.

      • ಧನ್ಯವಾದಗಳು ಶ್ರೀಕಾಂತ್ ಸರ್,
        ಸರ್ವಜ್ಞನ ವಚನಗಳ ಧಾಟಿಯಲ್ಲಿ ಬರೆದದ್ದು.(ಜೋಗುಳದ ಹಾಡುಗಳು ಇದೇ ಧಾಟಿಯಲ್ಲಿವೆ.) “ಅಂಶಗಣ”ಗಳಬಗ್ಗೆ ಸ್ಪಷ್ಟ ತಿಳಿಯಬೇಕಿದೆ. ತ್ರಿಪದಿಯಲ್ಲಿ “ಗ್ರಾಮ್ಯ”ಪದಗಳ ಬಳಕೆ ಅವಶ್ಯವೇ?

        • ಗ್ರಾಮ್ಯ ಪಸಗಳನ್ನು ಬಳಸಬೇಕೆನ್ನುವ ಅಗತ್ಯ ಇಲ್ಲವಲ್ಲ. ಕಾವ್ಯಗಳಲ್ಲಿ ತ್ರಿಪದಿ ವಿಪುಲವಾಗಿ ಬಳಕಯಾಗುವೆ. ಅಷ್ಟೇ ಪ್ರಚುರವಾಗಿ ಜಾನಪದ ಸಾಹಿತ್ಯದಲ್ಲೂ ತ್ರಿಪದಿ ಉಂಟಷ್ಟೆ. ಅದರಿಂದ ಆಡುಮಾತು ಮತ್ತು ಗ್ರಾಮ್ಯ ರೂಪಗಳು ಕೂಡ ಸುಲಲಿತವಾಗಿ ಹೊಂದಿಕೊಳ್ಳುತ್ತವೆ.

          ಸಿನಿಮಾ ಹಾಡುಗಳೂ ಉಂಟು- “ಜಗದೀಶ ಸರ್ವೇಶ ಮಲ್ಲೇಶ ಗೌರೀಶ” ಇದೇಧಾಟಿಯದು.

  19. || ಮತ್ತೇಭ ವಿಕ್ರೀಡಿತ ||
    ಶಿರದೊಳ್ ಸೂಡಿದ ಕೊಂಬದಲ್ತೆ, ಬಗೆದೆನ್ ಚಂದ್ರನ್ನ ನಾ ಕಂಡೆನೆಂ
    ಪರಿದಿರ್ದಾ ತುಸು ತೇವಮಂ ಭ್ರಮೆಯೊಳಾಂ ಸಾರಿರ್ದೆನೈ ಗಂಗೆಯೆಂ
    ಕೊರಳೊಳ್ ಸುತ್ತಿದ ಹಗ್ಗ ಪಾವ ತೆರದೊಳ್ ತೋರಿರ್ದುದೈ ತಂದೆಯೇ
    ಮರುಳನ್ ಪ್ರೀತಿಯ ಭಾವಮಂ ಗ್ರಹಿಸದಾಂ ದಂಗಾಗಿ ಪೋದೆಂ ಗಡಾ

  20. ಇನ್ನೂ ಕೆಲವು ವೃತ್ತಗಳು.

    ಉದಾತ್ತ ವೃತ್ತ

    ಒರೆಯದ ಚಿತ್ತನ್
    ಪೆರೆದೊರೆವೊತ್ತನ್
    ತೊರೆದನನುತ್ತನ್
    ಪರಮನುದಾತ್ತನ್
    —-

    ಕಾಮಾಂಗ ವೃತ್ತ

    ಕಾಮಾರಿಗಂ | ಕಾಮಂ ಸೊಗಂ |
    ಕಾಮಾಕ್ಷಿಯಾ | ಕಾಮಾಂಗದಿಂ ||
    ……….

    ಕಮಲ ವೃತ್ತ

    ಎಕ್ಕಂ ನೈಕಮಲಂ | ಠಕ್ಕಂ ದೃಕ್ಕಮಲಂ |
    ಪಿಕ್ಕಲ್ ಮಂಕಮಲಂ | ಚೊಕ್ಕಂ ಬರ್ಕಮಲಂ ||

    ನೈಕಮಲಂ- ಅನೇಕನಲ್ಲನ್
    ಮಂಕ ಮಲಂ- ಅಜ್ಞಾನದ ಕಷ್ಮಲ
    ———

    ಸರಳ ವೃತ್ತ

    ಇರುಳಿಂದೀಳ್ವ ಶಿವಂ | ಮರುಳಿಂ ಮಗ್ಗದವಂ |
    ಕರುಳಿಂ ಕಾವ ಭವಂ | ಸರಳಂ ಶರ್ವನಿವಂ ||

    ——–
    ಶಶಾಂಕ ವೃತ್ತ

    ಪದಪೊಗುಂ ನವಿರ್ ತಾ-| ನದೆ ಜಗಕ್ಕಗಲ್ವಾನ್ |
    ಅದರೊಳೊಪ್ಪುತಿರ್ಕುಂ | ಪದಕಮೇ ಶಶಾಂಕಂ ||

    ಅಗಲ್ವಾನ್- ವಿಶಾಲ ಗಗನ
    —-
    ಜಗದ್ವಿಭೂತಿ ವೃತ್ತ

    ಮೂಜಗಕ್ಕಮಾದಿಯಂ | ತೇಜಮುಳ್ಳನಾದಿಯಂ |
    ಪೂಜಿಪೆಂ ಸುಭಕ್ತಿಯಿಂ-| ದಾ ಜಗದ್ವಿಭೂತಿಯಂ ||

    • ದೇವರಮ್ಯಚ್ಛಂದಸ್ಸು

      ನಿಮ್ಮ ವೃತ್ತಂ
      ಸಮ್ಮುದಾತ್ತಂ|
      ನಿಮ್ಮ ವೃತ್ತಂ
      ನೆಮ್ಮುದಾತ್ತಂ||

      ತನುಮಧ್ಯಾ ಛಂದಸ್ಸು

      ಶರ್ವಸ್ತುತಿವೃತ್ತಂ|
      ಸರ್ವೋತ್ತಮವೃತ್ತಂ|
      ಪರ್ವಾಯಿತಚಿತ್ತಂ
      ಚಾರ್ವಂಕಮುದಾತ್ತಂ||

      • ನಂದನ ವೃತ್ತ

        ನಿಮ್ಮ ಮಾತಿನಿಂ
        ಸೊಮ್ಮು ಸಿಕ್ಕಿದಂ-
        ತೆಮ್ಮ ಚಿತ್ತದೊಳ್
        ಸಮ್ಮದಂ ಮಿಗುಂ

        • ಶ್ರೀಕಾಂತ್ ಸರ್,
          ಪದ್ಯಪಾನದಲ್ಲಿ ಇದು ನಿಮ್ಮ ಎಷ್ಟನೆಯ ವೃತ್ತ?(ROUND?!)

          • ಲೆಕ್ಕ ತಪ್ಪಿಹೋಯ್ತು ಉಷರವರೆ. ಅದೂ ವೃತ್ತ/ರೌಂಡ್ ಆದ್ದರಿಂದ ತುದಿಮೊದಲೇ ತಿಳೀತಿಲ್ಲ

      • Congrats ಮೂರ್ತಿಗಳೆ. ಗುರುಗಳು ಉದಾತ್ತರಾಗಿ ನಾಲ್ಕು ಅಂಕಗಳನ್ನು ದಯಪಾಲಿಸಿದ್ದಾರೆ.

        • ಅವರು ಉದಾತ್ತರಾದ್ದರಿಂದ ನಾಲ್ಕು ಅಂಕಗಳು ಗಿಟ್ಟಿದುವು. ಇಲ್ಲದಿದ್ದರೆ ಅದೂ ಬರ್ತಿರ್ಲಿಲ್ಲ ಅಂತಲೋ ನಿಮ್ಮ ಅರ್ಥ? ಇರಲಿ ನಿಮಗೆ ಅಷ್ಟೂ ಬಂದಿಲ್ಲವಲ್ಲ ಅನ್ನೋದೊಂದೇ ಸಮಾಧಾನ 🙂

        • ಸ್ವಾದಿಷ್ಟಮೀ ಸ್ಯಾಡಿಸಮ್!

    • ಆಹಾ.. ಎಂಥ “ಮೋದಕ” ವೃತ್ತಗಳು !! ಪರಿಚಯಿಸಿದ್ದಕ್ಕೆ ಧನ್ಯವಾದಗಳು.

  21. ಶೈಲಾಲಿ ತೋರ್ದೆ ಶಿವೆಯೊಳ್ ಶುಚಿಯಾದ ಮೋಹಂ
    ಕೈಲಾಸ ವಾಸಿ ನಮಿಪೆಂ ನಟರಾಜ ನಿನ್ನಂ
    ಲಾಲಿತ್ಯಮಂ ಕಠಿಣ ಬಾಳಿನೊಳು ತೊಡುತ್ತುಂ
    ಕಲ್ಲಾದೆಯೇಂ ಜಗಕೆ ಮಾದರಿಯನ್ನು ಕೊಟ್ಟುಂ

    • ಮೂರನೆಯ ಪಾದದಲ್ಲಿ ಛಂದಸ್ಸು ತಪ್ಪಿದೆ (ಳು ತೊ).
      ನಾಲ್ಕನೆಯ ಪಾದವು ಗಜವಲ್ಲದೆ ಹಯಪ್ರಾಸವಾಗಿದೆ.
      ’ಕೊಟ್ಟುಂ’ ಪದವನ್ನು ಹಳಗನ್ನಡವಾಗಿಸಿ.
      ಪದ್ಯಭಾವ ಚೆನ್ನಾಗಿದೆ.

  22. ಶಿವಂ ವಿವಶನಾಗನೈ ಗಿರಿಜೆ ಕೂಡೆ ತಾನಿರ್ದೊಡಂ
    ಶವಂ ಸಮದೆ ಯೋಗದೊಳ್ ಮುಳುಗುತಿರ್ಪನೇನದ್ಭುತಂ
    ಸವಂ! ರಮಣಿಗಂಗೆಯೇ ತೊಳೆವಳಾ ವಿಮೋಹಾಗ್ನಿಯಂ
    ಲವಂ ಚುಮುಕಿಸಮ್ಮಗಂ ಹರನೆ ವೇದಗಂಗೋದಕಂ
    (ಲವ = ಸ್ವಲ್ಪ)

    • ಹೊಳ್ಳಂ,
      ರತಿಯಿಂದೆ ಪೊರಮಡೈ, ಸಖನೆ ಋತ (order) ಸಮಗೈಯು
      ಮತಿ ಜಿತದಿನಿರೆ ವಿಮೋಹಾಗ್ನಿಯೆಲ್ಲೈ?
      ನುತಿಪೆ ಸುಮ್ಮನೆ ಗಂಗೆಗೇಂ ಕಾರ್ಯವಿಲ್ಲಿ ಪ
      ನ್ನತಿಕೆ ಮೆರೆಯೈ ಪೂರ್ವದಾಶ್ರಮದವೋಲ್||

  23. ಯುಗಮಲ್ತೆಲಿದು ಗಣಕಯಂತ್ರದದರೊಳಗೆ ತಾಂ
    ಮಿಗೆ ತಳ್ತಿರರೆ ಸುರಾಸುರರಾಶೆಯಿಂ|
    ತೆಗೆದಿರಿಸುವಂತಲ್ಲಿ ಬ್ಯಾಕಪ್ಪು, ಗೌರಿಯಳ
    ಮೊಗದೆ ನಗೆ, ಪಿಂತೆ ಶೂಲವನು ನೋಡೈ||

  24. ಸಾಂಗತ್ಯ||
    ಈರ್ಷ್ಯೆsಯೇನಿಲ್ಲsವು ಗೌರಮ್ಮsನಿಗೆ ನೋಡಾ
    ಧರ್ಷ್ಯsಳೇಂ ಗಂಗವ್ವsಳಿಂದೆs?
    ವರ್ಷ್ಯsರೀರ್ವರುಮರ್ಧsನಾರೀಶ್ವsರರು ನೋಡೆ
    ಹರ್ಷ್ಯsಭಾವರುಮೆಂದುಂ ಸಮದೆs||

    (ಆಧರ್ಷ್ಯ = to be injured or insulted)

    ನೋಡಾಧರ್ಷ್ಯ – ಅರಿಸಮಾಸವೆ? ಬೇರೆ ತಪ್ಪುಗಳೇನಿವೆಯೆಂದು ತಿಳಿಯುತ್ತಿಲ್ಲ. ದಯವಿಟ್ಟು ತಿದ್ದಿ.

  25. ಕರಿವದನ ಪಿತನು ನೀಂ ಗಂಗಾಧರನೆ ಶಿವನೆ
    ಸುರರೆಲ್ಲರ ಪ್ರಿಯನು ನಾಗಧರ ನೀ ಹರನೆ
    ಕರುಣಾಳು ಸಜ್ಜನಗೆ. ಬಲು ಘೋರ ದುರ್ಜನಗೆ ರುದ್ರ ಶಾಂತ ಭಯಂಕರ
    ಹರನೇಕೆ ಮೆಚ್ಚುಗೆಯೊ ನಾನರಿಯೆ ಸುರರೊಳಗೆ
    ಬರಿಯವನ ಸರಳತೆಯೆ ಪೂರಕವೆ ನಾ ತಿಳಿಯೆ
    ಕರಿಮರಿಯ ಕೊಂದರೂ ಶಿವನಲ್ಲಿ ಭಕುತಿಯಿದೆ ಬದಲಾಗದಾಲೋಚನೆ

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)