Mar 272013
 

HoLi

 

 

 ಬರಲಿ ಬಣ್ಣಬಣ್ಣದ ಬಣ್ಣನೆ!!!

  66 Responses to “ಪದ್ಯಸಪ್ತಾಹ – ೬೪ : ಚಿತ್ರಕ್ಕೆ ಪದ್ಯ”

 1. ಬಗೆಬಗೆ ಬಣ್ಣದೆ ಜನರ್ಗಳ
  ಮೊಗಗಳ್ ಕಾಂಬುದದನನ್ಯತೆಯೊಳಂತೆಯೆ ಕೇಳ್
  ಸಿಗದಯ್ ಕುರುಹುಗಳಾರರ್ಗಂ,
  ಸೊಗದೀ ಹೋಳಿಯೊಳನನ್ಯತೆಯುಮೇಕತೆ ದಲ್

  ಹೋಳಿಯ ರಂಗಿನಾಟದಲ್ಲಿ ಬಣ್ಣವೆರೆಚಲ್ಪಟ್ಟ ಮುಖಗಳು ಒಂದು ಇದ್ದಹಾಗೆ ಇನ್ನೊಂದಿರದೆ ಅನನ್ಯತೆಯನ್ನು ಪಡೆದುಕೊಳ್ಳುತ್ತದೆ, ಆದರೇ ಯಾರ ಗುರುತೂ ಸಿಗದೆ ಎಲ್ಲರೂ ಒಂದೇ ರೀತಿಯಲ್ಲಿ ಕೂಡ ಕಾಣುತ್ತಾರೆ. ಹೀಗೆ ಅನನ್ಯತೆಯಲ್ಲಿ ಏಕ್ಯತೆ ಸಾಧಿಸುವ ಹೋಲಿಯೇ ಚಂದ 🙂

  • ಪ್ರಿಯ ಸೋಮ,

   ಒಳ್ಳೆಯ ಕಲ್ಪನೆ. ಆರ್ಗುಂ ಎಂಬುದು ಹಳಗನ್ನಡದಲ್ಲಿ ಅಸಾಧುರೂಪ. ಆರ್ಗಂ ಎಂದು ತಿದ್ದಿದರೆ ಒಳಿತು. ಐಕ್ಯತೆಯೂ ಅಸಾಧುರೂಪ. ಏಕಸ್ಯ ಭಾವಃ ಐಕ್ಯಂ ಅಥವಾ ಏಕತಾ ಎಂದು ನಿಷ್ಪತ್ತಿ. ಹೀಗಾಗಿ …”ಅನನ್ಯತೆಯುಮೇಕತೆ ದಲ್ ” ಎಂದು ತಿದ್ದಿದರೆ ಯುಕ್ತ.

   • ಧನ್ಯವಾದ ಸರ್, ಮೂಲದಲ್ಲೆ ಸವರಿಸಿದ್ದೇನೆ

    • SomaNNa,
     kalpane balu sogasu…even having uniqueness we become identity less…great…
     please change janargaLa to janagaLa to reduce 1 maatre…

     • ಪ್ರಿಯ ಶ್ರೀಶ,
      ಸೋಮನ ಪದ್ಯದಲ್ಲಿ “ಜನರ್ಗಳ” ಎಂಬುದು ಶಿಥಿಲದ್ವಿತ್ವದ ಕಾರಣ ನಾಲ್ಕು ಮಾತ್ರೆಗಳ ಮಿತಿಯಲ್ಲಿಯೇ ಇದೆ. ಹೀಗಾಗಿ ದೋಷವೇನಿಲ್ಲ.
      ಪದ್ಯವೊಂದರಲ್ಲಿ ಒಮ್ಮೆಯೋ ಇಮ್ಮೆಯೋ ಶಿಥಿಲದ್ವಿತ್ವವು ಶ್ರುತಿಕಟುವೂ ಆಗದು. ಈ ಮಟ್ಟಿಗೆ ಅಂಗೀಕಾರ್ಯ:-)

 2. ನರಲೋಕದೆ ವಿಧಿನಿರ್ಮಿತವರ್ಣಭೇದದಿಂದಂ
  ತಿರೆ ಕಂಡುದಲಾ ವೈರದ ರುಧಿರತಟಿನಿಯೆಂದುಂ |
  ನರನಿರ್ಮಿತಮಪ್ಪೀ ಮಧುವರ್ಣಭೇದದಿಂದಂ
  ಪರಿದಿರ್ಪುದು ಸಗ್ಗಕಿರದ ರಾಗಿಲಧುನಿಯಿಂದು !!

  (ನನ್ನ ಎಷ್ಟೋ ಪದ್ಯಗಳ ಗುಣ-ದೋಷಗಳ ಬಗೆಗೆ ಅದೇಕೋ ಪದ್ಯಪಾನದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಕಂಡಿಲ್ಲ. ಇದೇನು ಉಪೇಕ್ಷೆಯೋ, ಅಳುಕೋ ಅನವಧಾನವೋ ತಿಳಿಯದಾಯಿತು:-) ಹೀಗಾಗಿ ಇವುಗಳ ಅರ್ಥಕ್ಲೇಶವೇನಾದರೂ ತೊಡಕುತಂದಿರಬಹುದೇ ಎಂಬ ಇಂಗಿತದಿಂದ ಇಲ್ಲೀಗ ಪ್ರಕೃತಪದ್ಯದ ತಾತ್ಪರ್ಯವನ್ನು ನೀಡುತ್ತಿದ್ಡೇನೆ. “ಕಟ್ಟಿಯುಮೇನೊ ಮಾಲೆಕಾರನ ಪೊಸ ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೇ?” (ಜನ್ನನ ಅನಂತನಾಥಪುರಾಣ)

  ಸೃಷ್ಟಿಕರ್ತನು ಮಾನವರಲ್ಲಿ ಮಾಡಿದ ವರ್ಣಭೇದದಿಂದ ಇತಿಹಾಸವು ರಕ್ತದ ಹೊಳೆಯನ್ನೇ ಕಂಡಿದೆ. ಆದರೆ ಮಾನವರು ಇಂದು ಮಾಡಿಕೊಂಡ ಈ ಪರಿಯ “ವರ್ಣಭೇದ”ದಿಂದ ಸ್ವರ್ಗವೇ ಅಸೂಯಿಸುವಂಥ ರಾಗಿಲಧುನಿ (ಬಣ್ಣಗಳ ಹೊಳೆ)
  ಹರಿದಿದೆಯೆಂಬುದು ಈ ಪದ್ಯದ ತಾತ್ಪರ್ಯ. ಇದು ಸಂತುಲಿತಮಧ್ಯಾವರ್ತಗತಿಯ ಮಾತ್ರಾಛಂದಸ್ಸು.

  • ಗಣೇಶ್ ಸರ್,

   ಸ್ವರ್ಗವೇ ಅಸೂಯೆಯಿಂದ ನೋಡುವ ಮನುಷ್ಯನಿರ್ಮಿತ ಬಣ್ಣದಾಟದ ಕಲ್ಪನೆ ಅತ್ಯುತ್ತಮವಾಗಿದೆ 🙂

   ಅಳುಕೆಂತದು ಮನದಿಂಗಿತಮಂ ಪೇಳ್ವುದೆ ಲೇಸಯ್
   ತಿಳಿವಿರ್ಪುದೆ ಅವಧಾನದ ದೀಕ್ಷೆ ಮರೆಯೆ ಛಾತ್ರಂ

   ಸಂತುಲಿತಮಧ್ಯಾವರ್ತಗತಿ ಎಂದರೆ ೬ ೬ ಮಾತ್ರೆಗಳ ೩ ಗಣ ಮತ್ತು ೨ ಗುರುವೇ? ೬ ಮಾತ್ರೆಯನ್ನು ೨-೪, ೪,೨, ೩-೩ ಆಗಿ ಒಡೆಯಬಹುದೆ? ದಯವಿಟ್ಟು ತಿಳಿಸಿಕೊಡಿರಿ

   • ಪ್ರಿಯ ಸೋಮ,

    ಇದರ ಬಗೆಗೆ ಹಳೆಯ ವಿಡಿಯೋ ಪಾಠಗಳಲ್ಲಿಯೇ ಇದೆ:-). ನೀನೆಂದಂತೆ ೨+೪ ಅಥವಾ ೪+೨ ಎಂಬ ಪ್ರಧಾನಗಣಗಳಲ್ಲದೆ ಆಗೊಮ್ಮೆ ಈಗೊಮ್ಮೆ (ಕೇವಲ ಏಕತಾನತೆಯನ್ನು ನೀಗಲು) ೩+೩ ಗಣಗಳೂ ಬರಬಹುದು. ಆದರೆ ಇವು ಮಿಗಿಲಾಗಿ ಬಂದರೆ ಇಡಿಯ ಬಂಧವೇ ಸರಳವೂ ಯಾಂತ್ರಿಕವೂ ಆದ ವಿಶುದ್ಧತ್ರಿಮಾತ್ರಾಗತಿಯ ರಚನೆಯಾದೀತು! ಇನ್ನು ಈ ಬಗೆಯ ಛಂದಸ್ಸುಗಳ ಗಣಸಂಖ್ಯೆಯು (ಅಂದರೆ ಪಾದವೊಂದರ ಉದ್ದವು) ಎಷ್ಟೂ ಇರಬಹುದು. ಅಂದರೆ ಆರು ಮಾತ್ರೆಗಳ ನಾಲ್ಕು ಗಣಗಳು ಹಾಗೂ ಕಡೆಗೆ ನಾಲ್ಕು ಮಾತ್ರೆಗಳ ಒಂದು ಊನಗಣವೂ ಪಾದವೊಂದಕ್ಕೆ ಬರಬೇಕಿರುವುದು ಕನಿಷ್ಠಾರ್ಹತೆ. ಗರಿಷ್ಠವಾಗಿ ಏಳು ಗಣಗಳೂ ಕಡೆಗೊಂದು ನಾಲ್ಕುಮಾತ್ರೆಗಳ ಊನಗಣವೂ ಬರಬಹುದು. ಆದರೆ ನಾನಿಲ್ಲಿ ಬಳಸಿದ ಬಂಧವು ಹೆಚ್ಚು ಹದ ಮತ್ತು ಹಾಳತ.ಕುವೆಂಪು ಅವರ ಫಾಲ್ಗುನರವಿ ಕುಂಕುಮಛವಿ(ಶತಮಾನದ ಸಂಧ್ಯೆ), ನಿಸಾರ್ ಅವರ ಜೋಗದ ಸಿರಿಬೆಳಕಿನಲ್ಲಿ (ನಿತ್ಯೋತ್ಸವ) ಮುಂತಾದುವು ಈ ಗತಿಯ ಪ್ರಸಿದ್ಧನಿದರ್ಶನಗಳು.

  • ಜ್ಞಾನಬಲಂ ಸ್ಥಾನಬಲಂ
   ಮಾನಿತ ಗುಣಗಣಗಳಿಂಗೆ ಮೆಚ್ಚುಗೆ ಸತತಂ
   ವ್ಯಾನಕ್ರಮದಿಂ ಚರಿಸಲ್
   ತಾನೆಲ್ಲಿಯ ದೋಷಚರ್ಚೆ ಶಶಿಶಶತೋರ್ಕೆ?

  • ಮಾನ್ಯ ಗಣೇಶರೆ

   ನನ್ನ ಪರಿಚಯ – ಇಂಗ್ಲೆನ್ಡ್ನಲ್ಲಿ ಶಸ್ತ್ರ ವೈದ್ಯನಾಗಿ ಕೆಲಸ ಮಾಡುತ್ತಿರುವೆ. ನಾಲ್ಕು ತಿಂಗಳ ಹಿಂದೆ ಶತಾವಧಾನದ ತುಣುಕೊಂದನ್ನು ಅನ್ತರ್ಜಾಲದ ಮೂಲಕ ನೋಡಿ ಕಳೆದ ೪ ದಶಕಗಳ ಹಿಂದೆ ಯಾರಾದರೂ ಕನ್ನಡ ಪದ್ಯ ಸಾಹಿತ್ಯದ ಪರಿಚಯವನ್ನು ಈ ರೀತಿ ಮಾಡಿದ್ದರೆ ಎಶ್ಟು ಚೆನ್ನಾಗಿರುತ್ತೆಂದು ಅನಿಸಿತು.
   ಪದ್ಯಪಾನದ ಕವಿಗಳ ಕಲ್ಪನೆ, ಚಾತುರ್ಯ ಮತ್ತು ಪಾಂಡಿತ್ಯವನ್ನು ನೋಡಿ ನನ್ನಂಥ ಪಾಮರರಿಗೆ ವಿಸ್ಮಯ ಮಿಶ್ರಿತ ಮನರಂಜನೆ.
   ಭಾರತೀಯನಾಗಿ ಕ್ರಿಕೆಟ್ಟಿಗೆ ಹೋಲಿಸುವುದಾದರೆ ಹೋಲಿಕೆಯಲ್ಲಿ ಪದ್ಯಪಾನದ ಕವಿಗಳು ಇಂಡಿಯ ಪಟುಗಳಾದರೆ ನಿಮ್ಮ ಸ್ಥಾನ ಸಚಿನ್ ತೆಂಡುಲ್ಕರ್ ಅಂತಿದೆ.
   ನಿಮಗೂ, ಪದ್ಯಪಾನಿಗಳಿಗೂ ನನ್ನ ಕೃತಜ್ಞತೆಗಳು

   • ಮಾನ್ಯ ಬದರೀನಾಥರಿಗೆ ಹಾರ್ದಿಕವಂದನೆಗಳು. ನೀವು ನಮ್ಮ ಈ ಎಲ್ಲ ಗೆಳೆಯರ ಪ್ರಯತ್ನವನ್ನು ಮೆಚ್ಚಿದುದಕ್ಕಾಗಿ ಮಿಗಿಲಾಗಿ ಧನ್ಯವಾದ. ಅಲ್ಲದೆ ಅದನ್ನು ಹೀಗೆ ನಮ್ಮೆಲ್ಲರೊಡನೆ ಹಂಚಿಕೊಂಡುದಕ್ಕಾಗಿ ಮತ್ತೂ ಧನ್ಯವಾದಗಳು. ದಯಮಾಡಿ ಪದ್ಯಪಾನಕ್ಕೆ ಆಗೀಗಲಾದರೂ ಭೇಟಿ ನೀಡಬೇಕಾಗಿ ವಿನಂತಿ. ನೀವು ತುಂಬ ಅಭಿಮಾನದಿಂದ ನನ್ನ ಬಗೆಗೆ ಆಡಿರುವ ಒಳ್ಳೆಯ ಮಾತುಗಳಿಗೆ ಋಣಿಯಾಗಿದ್ದೇನೆ. ಇತ್ತ ಬಂದಾಗ ದಯಮಾಡಿಸಿ.

 3. In that combo picture, there is a pic of a closed eye. Eye should see colour, it should not itself be colourful.
  ಸ್ರಗ್ವಿಣೀ||
  ಕಾಣವೇಳ್ಕುಂ ಸದಾ ಬಣ್ಣಮಂ ನೇತ್ರ ತಾ
  ನೂಣೆಯಲ್ತೆಂದಿಗುಂ ತಾಳೆ ತಾನ್ ವರ್ಣಮಂ|
  ಕಾಣದಿರ್ದೇನನುಂ ಕಂಡೋಡೇಮನ್ಯರಿಂ?
  ಕೌಣಪಂ (ರಾಕ್ಷಸ) ರೂಪಮಂ ಸಜ್ಜನಂ ತಾಳ್ವನೇಂ?

  • ಪ್ರಸಾದು, ಚೆನ್ನಾಗಿದೆ… ಆದರೆ… ನಿಮ್ಮ ಪದ್ಯದ ಪ್ರಕಾರ

   ಹೋಳಿಯಿಂ ರಂಜಿಪರ್ಗಳ್ ಸದಾ ಕ್ಷೌಣಪರ್
   ಆಗುತ್ತದೆ ಅಲ್ಲವೇ?

   ಹಾಗಿದ್ದರೆ…
   ಸಜ್ಜನರ್ ಬಣ್ಣಮಂ ಗೈವುದಂ ಬಣ್ಣಿಸಯ್

   ಕಂಡೋಡೇಮನ್ಯರಿಂ – ಕಂಡೋಡೇನನ್ಯರಿಂ

   🙂

  • ಸಜ್ಜನರ್ ಬಣ್ಣಮಂ ಗೈವುದಂ ಬಣ್ಣಿಸಬೇಕೆ? ನಿಜ, ಸಜ್ಜನರು ಬಣ್ಣ ಮಾಡುವ ರೀತಿಯೇ ಬೇರೆ.
   ಉತ್ಪಲಮಾಲೆ||
   ಸಜ್ಜನರಂತೆ ದುರ್ಜನರು ಮಾಳ್ಪರೆ ಬಣ್ಣವ ಸಾತ್ತ್ವಿಕತ್ವದಿಂ
   ಕಜ್ಜದೆ ಕೈತವಂ ಸಲುಗು ಸೇರಿರೆ ಬಣ್ಣದೆ ದುರ್ರಸಾಯನಂ|
   ಗೊಜ್ಜಿನ ಪಾಕದೋಲಿಹುದು! ಮೇದದ ದುಷ್ಟಿಯ ಗೈಯದಿರ್ಪುದೆ
   ಅಜ್ಜನ ಕಾಲದೋಕುಳಿಯೆ ಚಂದಮದಲ್ತೆಲೆ ಕುಂಕುಮಂಜಲಂ||
   (ಮೇದಸ್ – ಚರ್ಮದ ಹಿಂದಿರುವ ಪಿಷ್ಟ. ರಾಸಾಯನಿಕವು ಚರ್ಮವನ್ನು ಕೊರೆದು ಒಳಗಿನ ಮೇದಸ್ಸನ್ನೂ ನಾಶಗೊಳಿಸುತ್ತದೆ)

 4. ಸಪ್ತ ವರ್ಣದ ಕಲನ ತಂದಿರೆ
  ಲುಪ್ತ ಬಿಳುಪೊಡೆ ಕರಿಯ ಕದನವ
  ಸಪ್ತ ವರ್ಣದ ಮಿಲನದಿಂದಲೆ ಶಬ್ದ ಮೌನವದೈ ।
  ಸಪ್ತ ಸಾಗರ ಮಥನ ತಂದಿರೆ
  ಸುಪ್ತ ಸುಧೆಯೊಡೆ ವಿಷದ ಜನನವ
  ತೃಪ್ತ ಜೀವರ ಮನದೆ ಮೂಡಿದ ವರ್ಣ ವರ್ಣನೆಯೈ ॥

  • ಬಣ್ಣ(ವರ್ಣ)ಗಳ ಬಗೆಗೆ ಮನುಜರ ಮನದಲ್ಲಿರುವ ವಿರುಧ್ಧಭಾವಗಳಬಗ್ಗೆ, ಪ್ರಕೃತಿಯಲ್ಲಿನ “ವಿಷಮಸ್ಥಿತಿ”ಗಳೊಂದಿಗೆ ಹೋಲಿಸಿಬರೆಯಲು ಪ್ರಯತ್ನಿಸಿದ್ದು. ಕಡೆಯ ಸಾಲನ್ನು ಹೀಗೆ ಬದಲಾಯಿಸಿದರೆ ಸರಿಯಾಗುವುದೇ?
   *ತಪ್ತ ಜೀವರ ತೃಪ್ತ ಭಾವದ ವರ್ಣ ವರ್ಣನೆಯೈ ॥

 5. ಚಿತ್ರದ ಎಲ್ಲ ಮಜಲುಗಳನ್ನು ಹಿಡಿದಿಡುವುದು ದುಃಸಾಧ್ಯವೆಂದೆನಿಸಿ ಇಡಿಯಾಗಿ ಹೋಳಿಹಬ್ಬದ ಬಗ್ಗೆ ಪದ್ಯ ಬರೆಯಲು ಶುರುಮಾಡಿ ತುಂಬಾ ಅನ್ವಯಕ್ಲೇಶವಿರುವ,ಅರ್ಥಸ್ಪಷ್ಟತೆಯಿಲ್ಲದ ಮತ್ತು ತಪ್ಪುಗಳಿಂದ ಕೂಡಿರಬಹುದಾದ ಪ್ರಯತ್ನ ಸ್ರಗ್ಧರಾ ಛಂದಸ್ಸಿನಲ್ಲಿ

  वसन्तः सूत्रधारो ललिततरुलताः नर्तिताः मारुतैस्तैः
  भूसुन्दर्या सहेमाः पिककृतकुतुपे वर्णकेलीं च यस्मिन् |
  क्रीडिष्यन्ते च पुष्पैः बहुबहलरुचैः रूपके संनिमग्नाः
  दातुं तत्पूर्वरङ्गं बहुतरमनुजा अद्य होल्यां च तस्मिन् ||

  ಅನ್ವಯ:
  यस्मिन् रूपके वसन्तः सूत्रधारः, तैः मारुतैः नर्तिताः इमाः ललिततरुलताः पिककृतकुतुपे भू सुन्दर्या सह बहुबहलरुचैः पुष्पैः वर्णकेलीं क्रीडिष्यन्ते, तस्मिन् (रूपके) अद्य पूर्वरङ्गं दातुं बहुतरमनुजाः होल्यां संनिमग्नाः (सन्ति) |

  “ಯಾವ ರೂಪಕದಲ್ಲಿ ವಸಂತನು ಸೂತ್ರಧಾರನೋ ಕೋಗಿಲೆಯ ಹಿಮ್ಮೇಳವಿರುವುದೋ ಹಾಗು ಯಾವುದರಲ್ಲಿ ಗಾಳಿಯಿಂದ ಹೊಯ್ದಾಡುತ್ತ ಸುಂದರ ತರುಲತೆಗಳು ಭೂಸುಂದರಿಯೊಂದಿಗೆ ವಿಧವಿಧವಾದ (ಬಣ್ಣದ) ಹೂಗಳಿಂದ ರಂಗಿನ ಆಟ ಆಡುತ್ತವೆಯೋ ಆ ರೂಪಕಕ್ಕೆ ಪೂರ್ವರಂಗವನ್ನು ಒದಗಿಸಲು ಈಗ/ಈ ನಡುವೆ ಮಾನವರು ಹೋಳಿ ಆಡುವಲ್ಲಿ ಮಗ್ನರಾಗಿದ್ದಾರೆ.”

  ಫಾಲ್ಗುಣ ಮಾಸದಲ್ಲಾಗುವ ಹೋಳಿ ಹಬ್ಬದಲ್ಲಿ ನಾವೆಲ್ಲಾ ಆಟ ಆಡಿದ ಮೇಲೆ ಸ್ವಲ್ಪ ದಿನಗಳ ನಂತರ ವಸಂತಾಗಮನವಾಗಿ ಮರಗಳು ಹೂಗಳಿಂದ ತುಂಬಿ ಗಾಳಿ ಬಂದಾಗ ಬೇಕಾದಷ್ಟು ಹೂಗಳನ್ನುದುರಿಸುತ್ತಾ ಭೂದೇವಿಯೊಡನೆ ಹೋಳಿಯಾಟ ಆಡುತ್ತವೆ ಎಂಬ ಕಲ್ಪನೆ

  • ಸೌಜನ್ಯದಿಂದಲಂತುಂ ನೀಂ
   ಪೇಳಿರ್ದೊಡದು ’ಪದ್ಯ’ವೈ|
   ಪೇಳ್ದವೊಲ್ ನೀಂ ಸದುಷ್ಟಂ ತಾ
   ನಿರ್ದೊಡಾ ಪದ್ಯ ’ಪಾಠ’ವೈ||

  • ಪ್ರಿಯ ರಾಘವೇಂದ್ರ,
   ಈ ಪದ್ಯದ ಕಲ್ಪನೆ ಹಾಗೂ ಸ್ರಗ್ಧರೆಯ ಮಹತ್ತ್ವಾಕಾಂಕ್ಷೆ ಆದರಣೀಯ. ಆದರೆ ಕೆಲವೊಂದು ಸವರಣೆಗಳಾಗಬೇಕಿವೆ. ಇದನ್ನು ಮುಖತಃ ತಿಳಿಸುವೆ.

 6. ರಂಗಿನ ತರಂಗಗಳೆ ಅಂತರಾಳದ ಬೇಕು-ಬೇಡಗಳ ರಾಹಸ್ಯ ಕೆಂಪು ಹಸಿರು
  ಅಂಗಜನ ಮಂಗಾಟಕೆಲ್ಲಕೀದಿನ ಖುಲ್ಲ ಅದುಮಿಟ್ಟ ತೂಬುಗೋಲಿಲ್ಲ ಕೆಸರು
  ಸಂಗತಿಗಳೇನಲ್ಲ ಸರಸಾಟ ಬಯಲಾಟ, ವರುಷಕೊಂದಾವರ್ತಿ ಹರಳತೈಲ
  ವಿಂಗಡಣೆ ದೂರಾಗೆ ನಾಮರೂಪಗಳಳಿದು ಬಣ್ಣಗಳ ಬಳಿದು ಕೊಳೆಕಳೆದು ಶುದ್ಧ

  ತಿರೆಗಿದನುಗಾಲ ಋತುಲೀಲೆ ಒಳಗು ಹೊರಗು
  ವರುಷಕೊಂದೊಮ್ಮೆ ನರನಿಗೀ ಕ್ರೀಡೆ ಬೆರಗು
  ಪರಿಮಿತಿಯಕಟ್ಟಿನಲ್ಲಿಲ್ಲ ಕೆಡುಕು ಕೊಳಕು
  ಅರಿಯೆ ಹಾಳಿಲ್ಲ ಹೋಳಿಯೇ ಬಣ್ಣ ಬೆಳಕು

  • ಸೀಸದ ಕೊನೆಯ ಪಾದ – ’ಪಗಳಳಿದು’ ಹಾಗೂ ’ಬಳಿದುಕೊಳೆ’ – ಅಂಶದಲ್ಲಿ ಸರ್ವಲಘು ಸಾಧುವೆ?

   • ಪ್ರಿಯ ಪ್ರಸಾದು,
    ನಿಮ್ಮ ಜಿಜ್ಞಾಸೆಯು ಸರ್ವಥಾ ಸ್ತುತ್ಯ. ಆದರೆ ಸರ್ವಲಘುಗಣದ (ಅಥವಾ ನಾನನನ ರೀತಿಯ ಗಣದ) ಬಳಕೆಯು ಅಂಶ/ತ್ರಿಮೂರ್ತಿಗಣಘಟಿತವಾದ ಸೀಸ-ಗೀತಿಗಳಿಗೆ ಸಲ್ಲದಾದರೂ ಮಾತ್ರಾಸೀಸಕ್ಕೆ ದೋಷವಾಗದು. ಮಾತ್ರಾಸೀಸವನ್ನೇ ಕನ್ನಡದ ಗೋವಿಂದ ಪೈ, ಡಿವಿಜಿ, ಬೇಂದ್ರೆ, ಕುವೆಂಪು ಮುಂತಾದವರು ಬಳಸಿದ್ದಾರೆ. ನಾನೂ ಅನೇಕತ್ರ ಹೀಗೆ ಮಾಡಿದ್ದೇನೆ(ಮೊನ್ನೆಯ ಶತಾವಧಾನದಲ್ಲಿಯೂ ಇದು ಬಳಕೆಯಾಗಿದೆ). ಮಾತ್ರಾಸೀಸವನ್ನೂ ಅಂಶಗಣೀಯವಾದ ಎತ್ತುಗೀತಿಯನ್ನೂ ಮಿಶ್ರಮಾಡಿ ಕೂಡ ರಚಿಸಬಹುದು. ಪ್ರಕೃತ ಮೌಳಿಯವರ ಪದ್ಯ ಇದೇ ಜಾಡಿನದು.ನಾನೂ ಹೀಗೆ ಮಾಡಿದ್ದೇನೆ; ಶುದ್ಧವಾಗಿ ಕೇವಲ ತ್ರಿಮೂರ್ತಿ(ಅಂಶ)ಗಣೀಯಬಂಧಗಳನ್ನೂ ದಾರಾಳವಾಗಿ ಬಳಸಿದ್ದೇನೆ.
    ಮಾತ್ರಾಸೀಸದಲ್ಲಿ ಮೊದಲ ಭಾಗವು ನಮ್ಮ ಚಿರಪರಿಚಿತಬಂಧವಾದ ಪಂಚಮಾತ್ರಾಚೌಪದಿಯೇ ಆಗಿರುತ್ತದೆ. ಎತ್ತುಗೀತಿಯಲ್ಲಿ ಮಾತ್ರ ವ್ಯತ್ಯಾಸ. ಈ ಬಗೆಗೆ ವಿಡಿಯೋಪಾಠಗಳಲ್ಲಿ ಹೇಳಿದಂತೆ ನೆನಪು. ಅದೇನೇ ಇರಲಿ, ಸೀಸಪದ್ಯದ ಎಲ್ಲ ಪ್ರಯೋಗೋಚಿತವಾದ ವೈವಿಧ್ಯಗಳನ್ನೂ ಸಾಧ್ಯತೆಗಳನ್ನೂ ನನ್ನ ಋತುಷಡ್ವರ್ಗವೆಂಬ ಕವಿತೆಯಲ್ಲಿ ಲಕ್ಷ್ಯರೂಪದಿಂದಲೇ ನಿರೂಪಿಸಿದ್ದೇನೆ. ಆಸಕ್ತರು ಇದನ್ನು ಕಾಣಬಹುದು.

 7. ರಾಷ್ಟ್ರೋತ್ಸವಂಗಳುಮೆಲ್ಲರುಮೆಂಬಂತೆ ಸ್ವಾತಂತ್ರ್ಯ-ಗಣತಂತ್ರೋತ್ಸವಗಳ್ ತಾಮೇಂ?
  ಭಾರತೀಯತೆ ಸನಾತನ-ವಲ್ತರ್ವಾಚೀನವಿರ್ಪುದಖಂಡಮಲುಪ್ತಮೆಂದುಂ
  ವರ್ಣಾಶ್ರಮಂಗಳಿಗನುಗುಣವಾಗಿರ್ಪ ಉತ್ಸವಂಗಳು ವೃತ್ತಿಸಂಬಂಧಿತವೈ
  ಆನಂದಕಾರಕ ತಾನೊಂದೇ ಇಹುದಂತೆ ರಸಿಕರಿಗೆಲ್ಲರ್ಗೀ ಕಲೆಯಪರ್ವಂ

  ಬನ್ನಿ ನಾಮೆಲ್ಲ ಕೂಡುತ್ತಲಾಚರಿಸುಗೆ
  ಪರ್ವವಿದನಿಂದಿನಿಂದಲಿ ಪ್ರಚುರಗೊಳಿಸಿ|
  ಬಣ್ಣದೋಕುಳಿಯೊಳು ವಸಂತೋತ್ಸವದಲಿ
  ವರ್ಷ ಭರತನ ತೋಯಲದೆಂದೆಂದಿಗು ತಾನ್||

  • ಎತ್ತುಗೀತಿಯ ಕಡೆಯ ಎರಡುಸಾಲುಗಳಲ್ಲಿ ಛಂದಸ್ಸು ತಪ್ಪಿದೆ. ದಯಮಾದಿ ಸವರಿಸಿರಿ.

  • ಬಣ್ಣs/ದೋಕುsಳಿs/ಯೊಳು ವsಸಂ/ತೋತ್ಸs/ವದಲಿs
   ವರ್ಷs/ ಭರತsನs/ ತೋಯsಲs/ದೆಂದೆಂ/ದಿಗು ತಾನ್||
   You would be referring to ‘ಯೊಳು ವsಸಂ’ and ‘ಭರತsನs’. ನನನsನಾ and ನನನsನs are permitted gaNas as per http://padyapaana.com/?page_id=1024. Please guide.

 8. ಬಣ್ಣ ಕಂಡುದು ಕರಿಯ ಕಣ್ಣಿಂ
  ಬಣ್ಣ ಬಂದುದು ಬಿಳಿಯ ಬೆಳಕಿಂ
  ಕಣ್ಗೆ ಕಂಡುದು ಕೊಟ್ಟ ಬಣ್ಣವು ತೊಟ್ಟುದಲ್ಲವದೈ ।
  ಬಣ್ಣ ಕಾಣ್ವುದು ತೆರೆದ ಕಣ್ಣಿಂ
  ಬಣ್ಣ ಬಂದುದು ತಡೆದ ಬೆಳಕಿಂ
  ಕಣ್ಗೆ ಕಂಡಿದೆ ಮುಕ್ತ ಬಣ್ಣವು ಮೆತ್ತುದಲ್ಲವದೈ ॥

  (ಉಳಿದ ಬಣ್ಣವ ಹೀರಿ – “ಕೆಂಪ”ನ್ನು ಬೀರಿ ಕೆಂಪಾಗಿಕಾಣುವ , ಎಲ್ಲ ಬಣ್ಣವ ಹೀರಿ ಕಪ್ಪಾಗಿ – ಎಲ್ಲ ಬಣ್ಣವ ಬೀರಿ ಬಿಳಿಯಾಗಿ ಕಾಣುವ, ಬಣ್ಣದ “ಪಕ್ರಿಯೆ”ಯಿಂದ ಪ್ರಭಾವಿತ )

 9. ಹರಳುಗಟ್ಟಿಹ ಮನದ ಭಾವನೆ
  ಹರಡಿ ತಂದಿರೆ ಬಣ್ಣ ಬಣ್ಣನೆ
  ಯೊರವೆ ಕೇಳೀ ಬೆಳಕ ಭೇದಿಪ ತಂತ್ರವಿದುವೆಂದುಂ।
  ಬರಿಯ ಗಾಜಲಿ ನಿಜವು ಕಂಡೀ
  ಪರಿಯ ಚಂದವ ಬಣ್ಣ ತಂದಿರೆ
  ಲರಿತು ಪೇಳೀ ಬೆಳಕ ಹಾಯಿಪ ಮಂತ್ರವಿದುವೆಂದುಂ ॥

  ( ಬೆಳಕನ್ನು ಏಳು ಬಣ್ಣಗಳಾಗಿ ವಿಭಜಿಸುವ PRISM EFFECT ಬಗ್ಗೆ )

 10. ಒತ್ತರಿಸಿ ಪೇರುತಿರೆ ರಂಗಾದ ಭಾವಗಳ
  ಚಿತ್ತವಹುದಾಗ ಸಂಕಟದ ತೋಂಟ
  ಸುತ್ತರಿದ ಜನರೊಡನೆ ಮನಬಿಚ್ಚಿ ಆಡಿದೊಡ –
  ಲೆತ್ತಲಿಂ ಹುಡುಕುವುದು ಮನಸು ಕೆಡುಕ ?

  [ಆಡು = ಮಾತನಾಡು, ಆಟ ಆಡು]
  [ಕೆಡುಕು = ದುಃಸ್ಥಿತಿ]

 11. ಬಣ್ಣಗಳ ಕಲ್ಪನೆಯದೇನೆಂಬುದಂ ತಿಳಿಯೆ
  ದೊಣ್ಣೆಯೇ ಗಡಮೆನಗೆ ಚಕ್ಷುದ್ವಯಂ|
  ಅಣ್ಣನೀ ಪೇಳೆನಗದಾವ ಬಣ್ಣಮನಿತ್ತು
  ಕಣ್ಣಿನೊಳ್ ದೇವನೋಕುಳಿಯಾಡಿದಂ ||

  ಒಬ್ಬ ಕುರುಡ ತನ್ನ ಮನಸ್ಸಿನ ವೇದನೆಯನ್ನು ಮತ್ತೊಬ್ಬರಲ್ಲಿ ಹೇಳಿಕೊಳ್ಳುತ್ತಿದ್ದಾನೆ

  • Congratulations for this wonderful poem! One small correction:
   As the word chakshus is sa-kaaraanta in Sanskrit, the compound word chakShudvayaM, according to grammar is chakShurdvayaM. The rest is absolutely flawless.

 12. ಇನ್ನೆರಡು ಪದ್ಯಗಳು

  ನಾರಿನರರೆನ್ನದೆಯೆ ವರ್ಣಬೇದವತೊರೆದು
  ಸೇರಿರಲು ಹೋಳಿಯಾಟವನಾಡಲು|
  ಹಾರುತಿರೆ ನೀಲಿಯಕಾಶದೊಳು ಬಣ್ಣಗಳು
  ಸಾರುತಿರೆ ಸಂತಸದ ಹೊನಲುಗಳನು|

  ಮೆಚ್ಚುಗೆಯ ಪಡೆವುದಕೆ ಸಿಂಗಾರ ಮಾಡುತ್ತ
  ಬಿಚ್ಚಿದಳ್ ಕೊಡೆಯ ತಾ ನಡುಬೀದಿಯೊಳ್|
  ಹುಚ್ಚೆದ್ದು ಹೋಳಿಯಾಡುವ ಪುಂಡರನು ಕಂಡು
  ಕೊಚ್ಚೆಯೊಳ್ ಜಾರಿಬಿದ್ದಳು ಓಟದಿ

  ತಪ್ಪಿದ್ದಲ್ಲಿ ತಿಳಿಹೇಳಿರಿ

  • ಚೀದಿ, ಕೊಡೆಯ ಪದ್ಯವನ್ನು ಬೇರೆ ರೀತಿ ಬರೆದಿದ್ದೇನೆ:

   ಮೆಚ್ಚುಗೆಯನಾಂಪೆನೆನೆ ಯುವತಿ ಪೊಸ ಕೊಡೆಯನ್ನು
   ಬಿಚ್ಚಿದಳ್ ನಡುಬೀದಿಯೊಳ್, ಪುಂಡರಿಂ
   ಮುಚ್ಚಿಟ್ಟ ಬಣ್ಣಗಳಿನಭಿಷೇಕದೊಳ್ ಮುನಿಯೆ
   ಹುಚ್ಚೆದ್ದು ಕೇಕೆಯಂ ಪೋರರಿಟ್ಟರ್

 13. ಬಣ್ಣಂ ರೂಪಂ ಪ್ರಭಿನ್ನಂ ಪಲತೆರನ ಜನಂ ಪಬ್ಬದೊಳ್ ಕೂಡುತಿರ್ಕುಂ
  ಬಣ್ಣಂ ಪೂಸುತ್ತೆ ಮೋದಂಬಡೆದು ಸಡಗರಂಬಟ್ಟು ಕೊಂಡಾಡುತಿರ್ಕುಂ
  ಕಣ್ಣಂ ತಾನೊಂದು ಬಣ್ಣಂ ಕವಿದೊಡನಕಟಾ ಕತ್ತಲೊತ್ತೊತ್ತಿ ಬರ್ಕುಂ
  ಸುಣ್ಣಂ ತಾನಾಯ್ತು ಬಣ್ಣಂ ಸೊಗಸೆನಿತಿರಲೇನ್ ಶೋಭೆಯಂ ನೋಟತರ್ಕುಂ

 14. ಬೆಣ್ಣೆಯ ರಂಗಿನ ಶಿಲೆಯೊಳ್
  ಬಣ್ಣನೆ ಮೀರಿರ್ಪ ಮೂರ್ತಿಯ ಗುರುತಿಸಲವನ್
  ಬಣ್ಣದ ಹೊಳೆಯ ನೋಡಲ್
  ಕಣ್ಣೊಳು ಮೂಡುವುದೆ ಚಿತ್ರವೆನುವಾಸೆಯಿದೈ

  ರೋಮನ್ ಕಲಾವಿದ ಮೈಖೆಲ್ ಏಂಜೆಲೊ ಅಮೃತ ಶಿಲೆಯನ್ನು ನೋಡಿದಾಗ ತಾನು ಕೆತ್ತಲಿರುವ ಮೂರ್ತಿ ಅದರೊಳಗೆ ಕಾಣುತ್ತದೆ ಎಂದು ಹೇಳಿದ್ದನಂತೆ. ಹೋಳಿ ಹಬ್ಬದಲ್ಲಿ ಹರಿಯುವ ಬಣ್ಣದ ಹೊಳೆಯನ್ನು ನೋಡಿದಾಗ ಯಾವುದಾದರೂ ಸುಂದರ ಚಿತ್ರ ಮನಃಪಟಲದಲ್ಲಿ ಮೂಡಲಿ ಎನ್ನುವ ಆಸೆ ನನ್ನದು.

  • A corollary:

   ದಿಣ್ಣೆಯ ಕಲ್ಲೊಳ್ ತೋರ್ವನ್
   ಬಣ್ಣನೆ ಮೀರಿರ್ಪ ಮೂರ್ತಿಯಂ ಶಿಲ್ಪಿ ವಲಂ|
   ಬಣ್ಣವು ಮರೆಸಿಹ ರೂಪವ
   ಕಣ್ಣಿಗೆ ಕಾಂಬವೊಲು ಮಾಳ್ಪುದು ಬರಿಯ ಜಲಂ||

   ಕೆತ್ತುವ ಕೆಲಸವೇ ಇಲ್ಲ! ಬರಿದೆ ತೊಳೆದರೆ ಆಯಿತು!!

 15. ಹೋಳಿ ಹುಣ್ಣಿಮೆಯಂದು
  ಮೇಳ ಸೇರಿಹುದಿಲ್ಲಿ
  ಪೇಳಲಾಗದಿರುವುತ್ಸಾಹದಿಂದ |
  ಬಾಳಿನಾ ಕಹಿ ಮರೆತು
  ನಾಳೆಚಿಂತೆಯ ತೊರೆಯ –
  ಲೇಳುತಿದೆ ರಂಗಿನಲೆಯೊಲುಮೆಯಿಂದ ||

 16. ಹೋಳೀಯ ಹಬ್ಬಾಕೆ ಬಳಿಯಾಕೆ ಬಣ್ಣಾವ
  ಮಳೆರಾಯ ತಂದಾನ ಮಳೆಬಿಲ್ಲ । ಜೊತೆಯಾಗ
  ತಿಳಿನೀರ ತಂದಾನ ತೊಳಿಯಾಕ ॥

  (ಹೋಳಿಯ ಹಬ್ಬದ ನಂತರ ಬಂದ ಮಳೆಯ ಸನ್ನಿವೇಶ – ಮಳೆರಾಯ ತರುವ ಬಣ್ಣ(=ಕಾಮನೆ)ದ”ಬಿಲ್ಲು”, ಜೊತೆಗೆ ತಿಳಿ(=ಅರಿವು )+ನೀರು(=ಅಂಬು=”ಬಾಣ”), ಜೊತೆಗೆ ಹೋಳಿಯಾಟದ ನಲಿವು)

  • ಕರ್ಷಣವನ್ನು ಅವಗ್ರಹಚಿನ್ಗೆಯಿಂದ ಗುರುತಿಸಿ. ದೀರ್ಘ ಮಾಡಿದರೆ ಕಾಗುಣಿತ ತಪ್ಪಾಗುತ್ತದೆ: ಹೋಳಿsಯs ಹಬ್ಬsದೆs

   • ಧನ್ಯವಾದಗಳು ಪ್ರಸಾದ್ ಸರ್,
    ಅಂಶ ಛಂದಸ್ಸಿನ ಬಗ್ಗೆ ಸ್ಪಷ್ಟ ತಿಳಿಯಬೇಕಿದೆ. ಸಾಂಗತ್ಯ, ಸೀಸ ಪದ್ಯಗಳಲ್ಲಿ ಪದ್ಯ ರಚಿಸುವ ಇಚ್ಛೆ ಇದೆ.

   • ಅಂಶದ ಬಗೆಗೆ ’ಸ್ಪಷ್ಟ’ ತಿಳಿಯಬೇಕೆ? ಇದುವರೆಗೆ ನಾನು ಕಂಡುಕೊಂಡಂತೆ, ಅಸ್ಪಷ್ಟತೆಯೇ ಅಂಶದ ಜೀವಾಳ!

 17. ಪೂಜ್ಯ ಅವಧಾನಿವರ್ಯರಿಗೆ ನಮನಗಳು,
  ನನ್ನ ಪರಿಚಯ –
  ನಾಮಧೇಯ: ಸುದರ್ಶನ್
  ಕಾವ್ಯನಾಮ: ಮೌರ್ಯ
  ವೃತ್ತಿ : ವಿದ್ಯಾರ್ಥಿ
  ವಯಸ್ಸು: ೧೮ ವರ್ಷಗಳು
  ಗುರಿ: ಪದ್ಯಪಾನದ ಬಳಗಕ್ಕೆ ಸೇರಬೇಕೆಂಬುದು.
  ಹಿಂದಿನಿಂದಲೂ ಛಂದೋಬದ್ಧವಾದ ಕವಿತೆಗಳಲ್ಲಿ ಬಹಳ ಆಸಕ್ತಿ. ತಮ್ಮ ಶತಾವಧಾನ ಕಾರ್ಯಕ್ರಮವನ್ನು ವೀಕ್ಷಿಸಿದ ನಂತರ ಆ ಆಸೆಯು ಪ್ರಬಲವಾಯಿತು. ತಾವು ನಡೆದು ಬಂದ ಹಾದಿಯು ನನಗೆ ಸ್ಫೂರ್ತಿಯಾಯಿತು. ಪದ್ಯಪಾನದಲ್ಲಿ ತಮ್ಮ ವಿಡಿಯೋ ತರಗತಿಗಳನ್ನು ವೀಕ್ಷಿಸಿ ಪದ್ಯರಚನೆಗೆ ಕೈ ಇಟ್ಟೆ. ತಮಗಾಗಿ ಒಂದು ಪದ್ಯಪುಷ್ಪವನ್ನು ಅರ್ಪಿಸುತ್ತಿದ್ದೇನೆ.ಈ ಪದ್ಯವು ಒಂದು ಪ್ರಯತ್ನವಷ್ಟೇ. ನಾನಿನ್ನೂ ಅನುಭವದಲ್ಲಿ ವಯಸ್ಸಿನಲ್ಲಿ ಎಳೆಯ. ಕಲಿಯಬೇಕಾದ್ದು ಬೆಟ್ಟದಷ್ಟಿದೆ. ಅಲ್ಲದೆ ಇತರೆ ಪದ್ಯಪಾನಿಗಳೆದುರಿಗೆ ಇನ್ನೂ ಪುಟ್ಟ ಸಸಿ. ಪದ್ಯದಲ್ಲಿ ಲೋಪದೋಷಗಳು ಕಂಡುಬಂದರೆ ಕ್ಷಮಿಸಿ ತಿದ್ದಿ ಕೈ ಹಿಡಿದು ನಡೆಸಿರಿ. ಇದೇ ನನ್ನ ಸವಿನಯ ಪ್ರಾರ್ಥನೆ. ಪ್ರಸ್ತುತ ಪದ್ಯವು ಮತ್ತೇಭವಿಕ್ರೀಡಿತದಲ್ಲಿದೆ.

  ಮ || ಪಟುಗಳ್ ತಾವ್ ಕವಿಕಾವ್ಯಮಲ್ಲಕಣದೊಳ್ ಶಬ್ದಾರ್ಥಕ್ಷೋಣೀಧ್ರರೈ
  ಕಟಿಬದ್ಧರ್ ಸವಿಛಂದಪದ್ಯಸುಧೆಯಂ ಕರ್ಣಾಟದೇ ಪ್ರೋಕ್ಷಿಸಲ್
  ದಿಟದಿಂ ಖೇಳವೆ ಛಾಂದಸರ್ಗೆ ಕವನಂ ಶ್ರೀರಾಗಣೇಶರ್ ಬುಧರ್
  ವಟವೇ ದಲ್ ಕವಿಕೋಕಿಲಾದಿಗಳಿಗಿಂತೀ ಪದ್ಯಪಾನಾಲಯಂ

  • ಸುದರ್ಶನ್ ಅವರೇ,
   ನಿಮ್ಮ ಆಸಕ್ತಿ ಮತ್ತು ಪದ್ಯವನ್ನು ನೋಡಿ ಬಹಳ ಸಂತಸವಾಗುತ್ತಿದೆ.
   ಪದ್ಯಪಾನಕ್ಕೆ ಸ್ವಾಗತ. ದಯಮಾಡಿ ಹೆಚ್ಚು ಹೆಚ್ಚು ಪದ್ಯರಚನೆಯಲ್ಲಿ ತೊಡಗಿ, ಪದ್ಯಪಾನದಲ್ಲಿ ಸಕ್ರಿಯರಾಗಿರಿ.
   ಬಹುಶ: ಸದ್ಯದ ಮಟ್ಟಿಗೆ ಪದ್ಯಪಾನದ ಅತ್ಯಂತ ಕಿರಿಯ ಸದಸ್ಯರು ನೀವೇ ಇರಬಹುದು. ಅಂತೂ ಪದ್ಯಪಾನವು ಇಂದಿನ ಟೀನೇಜಿಗರಿಗೂ ಇಷ್ಟವಾಗುತ್ತಿರುವುದು ಮತ್ತು ಉತ್ತೇಜಿಸುತ್ತಿರುವುದು ನಮ್ಮೆಲ್ಲರಿಗೂ ಅಪಾರವಾದ ಸಂತಸ ತಂದಿದೆ; ಅಂತೆಯೇ ಜವಾಬ್ದಾರಿಯನ್ನು ಹೆಚ್ಚಿಸಿದೆ.

   • ಮಾನ್ಯರೆ,
    ತಾವು ಆದೇಶಿಸಿರುವಂತೆ ಖಂಡಿತ ಪದ್ಯರಚನೆಯಲ್ಲಿ ತೊಡಗುತ್ತೇನೆ. ಆದರೆ ಇನ್ನೂ ಒಂದೂವರೆ ತಿಂಗಳು ಹಿಡಿಯಬಹುದು. Right now I’m bound by a very tight schedule. ಇನ್ನೂ ಎಲ್ಲ ಪರೀಕ್ಷೆಗಳು ಪೂರ್ಣವಾಗಿಲ್ಲ. ಇವೆಲ್ಲ ಕಳೆಯಲಿ. ರಜೆಗಳಲ್ಲಿ ಖಂಡಿತವಾಗಿಯೂ ಸಕ್ರಿಯವಾಗಿ ಭಾಗವಹಿಸುತ್ತೇನೆ. ಸ್ವಲ್ಪ ಬಿಡುವಿನ ಸಮಯ ದೊರೆತಿದುದರಿಂದ ಪದ್ಯವನ್ನು ರಚಿಸಲನುವಾಯಿತು.

  • ಪ್ರಿಯ ಸುದರ್ಶನ,

   ನಿಮ್ಮ ಮೊದಲನೆ ಗುರಿಯನ್ನು ನೀವಾಗಲೇ ತಲುಪಿದ್ದೀರಿ (ಗುರಿ: ಪದ್ಯಪಾನದ ಬಳಗಕ್ಕೆ ಸೇರಬೇಕೆಂಬುದು ಎಂದಿದ್ದೀರಲ್ಲವೆ…)

   ಪದ್ಯಪಾನಕ್ಕೆ ಆತ್ಮೀಯ ಸ್ವಾಗತ, ಶ್ರೀಶ ಹೇಳಿದಂತೆ ಹೆಚ್ಚು ಪದ್ಯರಚನೆಗೆ ತೊಡಗಿರಿ. ಮೊದಮೊದಲೇ ಮತ್ತೇಭವಿಕ್ರೀಡಿತವನ್ನು ನೀವು ನಿಭಾಯಿಸಿರುವುದು ನಿಮ್ಮ ಉತ್ಸಾಹವನ್ನೂ, ಮಹತ್ವಾಕಾಂಕ್ಷೆಯನ್ನೂ ಬಿಂಬಿಸುತ್ತದೆ. ಬಹಳ ಸಂತೋಷ, ಪದ್ಯಪಾನದೊಡನೆ ನಿಮ್ಮ ಒಡನಾಟ ನಿರಂತರವಾಗಿರಲಿ ಎಂದು ಆಶಿಸುತ್ತೇನೆ.

   • ಮಾನ್ಯರೆ,
    ತಮ್ಮನ್ನು ನಾನು ಶತಾವಧಾನದಲ್ಲಿ ಕಂಡಿದ್ದೆ. ತಾವು ಅವಧಾನಿವರ್ಯರನ್ನು ಚೆನ್ನಾಗಿ ಬಲ್ಲವರಾದ್ದರಿಂದ ತಮ್ಮ ಉತ್ತೇಜನದ ವಾಕ್ಯಗಳನ್ನು ಕೇಳಿ ಹಾಲು ಕುಡಿದಷ್ಟು ಸಂತಸವಾಯಿತು. ತಾವು ನನ್ನಂತಹ ಬಾಲಕನಿಗೆ ಪ್ರೋತ್ಸಾಹ ನೀಡಿದುದು ತಮ್ಮ ಅತ್ಯಂತ ದೊಡ್ಡ ಉಪಕೃತಿ. ಇದಕ್ಕಾಗಿ ಪದ್ಯಪಾನ ಬಳಗಕ್ಕೆ ನಾನು ಸದಾ ಋಣಿ.

    • ನನಗೆ ಪದ್ಯಪಾನ ಬಳಗದವರಲ್ಲಿ ಸ್ಥಾನವನ್ನು ನೀಡಿದುದಕ್ಕಾಗಿ ಕೋಟಿ ಧನ್ಯವಾದಗಳು. ಈ ಪದ್ಯವು ಒಂದು ಸಣ್ಣ ಪ್ರಯತ್ನವಷ್ಟೇ. ಇದರ ಬಗೆಗಿನ ಅವಧಾನಿಗಳ ಅಭಿಪ್ರಾಯವನ್ನು ನನಗೆ ದಯಮಾಡಿ ತಿಳಿಸುತ್ತೀರಾ ?
     ಅವರಿಗಾಗಿಯೇ ರಚಿಸಿದ ಈ ಪದ್ಯದ ಬಗ್ಗೆ ಅವರ ಅಭಿಪ್ರಾಯವನ್ನು ತಿಳಿಯಲು ಚಾತಕಪಕ್ಷಿಯಂತೆ ಕಾಯುತ್ತಿದ್ದೇನೆ. ತಾವು ಅವಧಾನಿಗಳನ್ನು ಚೆನ್ನಾಗಿ ಬಲ್ಲವರಾದ್ದರಿಂದಲೇ ತಮ್ಮಲ್ಲಿ ಯಾಚಿಸುತ್ತಿದ್ದೇನೆ. Please please ತಿಳಿಸುತ್ತೀರಾ ?
     ಅವರ ಅಭಿಪ್ರಾಯವನ್ನು ತಿಳಿದುಕೊಂಡರೆ ನನ್ನ ಉತ್ಸಾಹ ಇಮ್ಮಡಿಯಾದೀತು.

     • ಪ್ರಿಯ ಸುದರ್ಶನ,

      ನಿಮ್ಮ ಪದ್ಯವನ್ನು ಅವಧಾನಿಗಳು ಖಂಡಿತವಾಗಿಯೂ ವೀಕ್ಷಿಸುತ್ತಾರೆ… ತಾಳ್ಮೆ 🙂

     • ಆಗ ನೀವು ’ಇಮ್ಮಡಿ ಮೌರ್ಯ’ ಎನಿಸುವಿರಿ

     • Hahaha…I wish if there were a LIKE button like the one on facebook for such nice catchy comments…!! Anyway superlike for Prasadu sir’s comment ! 🙂 😀

  • ಪದ್ಯ ಚೆನ್ನಾಗಿದೆ. ನನ್ನ ಆರಂಭಿಕ ಪದ್ಯಗಳಿಗೆ ಇದನ್ನು ಹೋಲಿಸಿ ನೋಡಿ. ದೊಡ್ಡ reward ಸಿಕ್ಕಂತೆ ಆಗುತ್ತದೆ. ಪಾನಗೋಷ್ಠಿಗೆ ನಲ್ಬರವು.

  • ಮೌರ್ಯ, ನೀನು ಗುರುಗಳಿಗರ್ಪಿಸಿರುವ ಪ್ರಥಮ “ಪದ್ಯಪುಷ್ಪ”ವು, ಆ ವೃತ್ತದ ಸೂತ್ರದ ಸಾಲಿನಂತೇ ಸುಂದರವಾಗಿದೆ.
   “ಗತಿ ಗಾಂಭೀರ್ಯದ ತುಂಬುಚೆಲ್ವು ಮೆರೆಯಲ್ಮತ್ತೇಭವಿಕ್ರೀಡಿತಂ”.
   ತುಂಬು ಹೃದಯದ ಅಭಿನಂದನೆಗಳು .

  • ಪ್ರಿಯ ಮೌರ್ಯ ಅವರಿಗೆ ಅಭಿನಂದನೆಗಳು ಮತ್ತು ಪದ್ಯಪಾನಕ್ಕೆ ಮತ್ತೊಮ್ಮೆ ಸ್ವಾಗತ.
   ನನ್ನ ಮಿಂಚೆಯ ವ್ಯವಸ್ಥೆಯಲ್ಲಿ ಏರುಪೇರಾಗಿದ್ದರಿಂದ ಹಾಗೂ ಒಂದು ದಿನದ ಮಟ್ಟಿಗೆ ಊರಿನಲ್ಲಿಲ್ಲದಿದ್ದುದರಿಂದ ನಿಮ್ಮ ಪದ್ಯಕ್ಕೆ ತತ್ಕ್ಷಣದ ಪ್ರತ್ಯುತ್ತರವನ್ನು ಕೊಡಲಾಗಲಿಲ್ಲ; ಮನ್ನಿಸಿರಿ. ನಿಮ್ಮನ್ನು ನನ್ನ ಇನ್ನಿತರ ಗೆಳೆಯರೆಲ್ಲ ಸ್ವಾಗತಿಸಿ ಮೆಚ್ಚಿರುವುದು ಮುದಾವಹ. ಅವರ ಮಾತಿಗೆ ನನ್ನದೂ ಈ ಓಂಕಾರಪುರಸ್ಸರವಾದ ಅಂಗೀಕಾರ.

   ಎಳವೆಯೊಳಿಂತು ವೃತ್ತರಚನಾಚಣನಪ್ಪ ಕವಿತ್ವಕೌತುಕಂ
   ಭಳಿರೆ! ಭವದ್ರಸಾರ್ದ್ರಗುಣಗೌರವಮುತ್ಕಟಹರ್ಷಕಾರಿ; ಪೆಂ-
   ಪುಳಿಗೊಳೆ ಪದ್ಯಪಾನಿಜನರೆಲ್ಲರುದಾರಮನಸ್ಕರ್; ಇಂತುಟೀ
   ಬಳಿಗೊಲಿದಿರ್ಪ ನಿನ್ನ ಕಲೆ ಪೆರ್ಚುಗೆ ಮೌರ್ಯನೆ! ವಾಣಿಯೊಲೆಮೆಯಿಂ

   ನಿಮ್ಮ ಪದ್ಯವು ಬಲುಮಟ್ಟಿಗೆ ಅನವದ್ಯ. ಕೇವಲ ಅದರ ವಸ್ತು ಮಾತ್ರ ಅಷ್ಟಾಗಿ ಹಿತವಲ್ಲ. ’ಸವಿಛಂದಸುಧೆ….” ಎಂಬಲ್ಲಿ ಅರಿಸಮಾಸ ಮತ್ತು ಅಯುಕ್ತಸಂಧಿಯ ದೋಷವಿದೆ. ಇದು ದೊಡ್ದ ತಪ್ಪೇನಲ್ಲ. ಇದನ್ನು ಹಿತವೃತ್ತಸುಧೆ ಎಂದು ಸವರಿಸಿದರೆ ಎಲ್ಲ ಸರಿಯಾದೀತು. ನಿಮ್ಮ ಪರೀಕ್ಷೆಗಳು ಮುಗಿದ ಬಳಿಕ ತಪ್ಪದೆ ಪದ್ಯಪಾನಕ್ಕೆ ಬರೆಯಿರಿ. ಸ್ನೇಹವಿರಲಿ.

   • ವರೇಣ್ಯರ ಚರಣಗಳಿಗೆ ಅನಂತಾನಂತ ಪ್ರಣಾಮಗಳು
    ಬಹಳ ದಿನಗಳಿಂದ ಪದ್ಯಪಾನದಲ್ಲಿ ಸೇರಿ ತಮ್ಮಿಂದ ಕಲಿಯುವ ಆಸೆ ಹಪಹಪಿಸುತ್ತಿತ್ತು. ಈಗ ತಾವು ಅದನ್ನು ಪೂರೈಸಿರುವಿರಿ. ಧನ್ಯವಾದ. ಬುದ್ಧನು ಹೇಳುವಂತೆ ಆಪ್ತ ಸಲಹೆ ನೀಡುವವರ ನುಡಿಗಳನ್ನು ನಿಧಿಯೊಂದರ ರಹಸ್ಯವನ್ನು ತಿಳಿಸುತ್ತಿದ್ದಾರೇನೋ ಎಂಬಂತೆ ಕೇಳಬೇಕು. ಅಂತೆಯೇ ತಾವು ಸೂಚಿಸಿರುವ ಸವರಣೆಗಳು ನನಗೆ ಯಾವ ನಿಕ್ಷೇಪದ ರಹಸ್ಯಕ್ಕಿಂತಲೂ ಕಡಿಮೆಯಿಲ್ಲ. ಖಂಡಿತವಾಗಿಯೂ ತಮ್ಮ ಆದೇಶದಂತೆ ನಡೆಯುತ್ತೇನೆ. ಪದ್ಯಪಾನದ ರಥಿಕರಾದ ತಮ್ಮ ಆದೇಶ ನನಗೆ ಸರ್ವದಾ ಆದರಣೀಯ.
    ಬಹು ಕಾಲದಿಂದಲೂ ಪದ್ಯ ರಚನೆಯನ್ನು ಮಾಡಿ ಪದ್ಯಪಾನದಲ್ಲಿ ದಾಖಲಿಸುವುದೋ ಬೇಡವೋ ಎಂಬ ಇಬ್ಬಂದಿತನದ ಭಾವ ನನ್ನನ್ನು ಇರಿಯುತ್ತಿತ್ತು. ಇಲ್ಲಿನ ದಿಗ್ಗಜರ ಮುಂದೆ ನಾನೆಷ್ಟರವನು ಎನ್ನುವ ಭಾವನೆ. ಆದರೂ ಧೈರ್ಯ ತಂದುಕೊಂಡು ಹೇಗಾದರಾಗಲಿ ಎಂದು ಪೋಸ್ಟ್ ಮಾಡಿದೆ. ಆದರೆ ತಮ್ಮೆಲ್ಲರಿಂದ ಬಂದಂತಹ ಉತ್ತಮ ಪ್ರತಿಕ್ರಿಯೆ ಹಾಗೂ ಸ್ನೇಹಪೂರ್ಣವಾದ ಸ್ವಾಗತ ನನ್ನನ್ನು ಮೂಕನನ್ನಾಗಿಸಿದೆ. ಇಲ್ಲಿಯವರೆಗೂ ನನ್ನದು ಬರಿಯ ಏಕಲವ್ಯನ ವಿದ್ಯೆಯೇ ಆಯಿತು. ತಾವು ದ್ರೋಣಾಚಾರ್ಯರಂತೆ ಸಿಕ್ಕಿರುವಿರಿ. ಆದರೆ ದ್ರೋಣರಂತೆ ತಾವು ನನ್ನನ್ನು ನಿರಾಕರಿಸಲ್ಲಿಲ್ಲ. ತುಂಬ ಸಂತೋಷ. ತಮ್ಮ ಮಾರ್ಗದರ್ಶನದಲ್ಲಿ ಬಹಳಷ್ಟು ಕಲಿಯಲಿಕ್ಕೆ ಸಿಗುತ್ತದೆ. ತಮ್ಮ ನಂಬಿಕೆಯನ್ನು ನಾನು ಖಂಡಿತ ಹುಸಿ ಮಾಡುವುದಿಲ್ಲ.

  • ಷೋಡಶೋತ್ತರವರ್ಷೀಯಮ್
   ಹ್ಯಾದೌ ಮತ್ತೇಭಕ್ರೀಡಿತಮ್|
   ’ಮೌರ್ಯಮಿಮ್ಮಡಿ’ಮಾಹ್ವೇsಹಂ
   ಪದ್ಯಪಾನಾಂಗಣೇsಧುನಾ||

   • Sorry sir nanage samskrutha baralla…dayavittu arthavannu heltira ??

   • ಹದಿನೆಂಟರೊಳೇ ಪದ್ಯಂ
    ಮತ್ತೇಭಕ್ರೀಡ ಛಂದದೊಳ್|
    ಗೈದಿರಲ್ ಪದ್ಯಪಾನಕ್ಕಿ
    ಮ್ಮಡಿಮೌರ್ಯಂಗೆ ಸ್ವಾಗತಂ||

   • Error in my sanskrit verse. Here is the corrected one:
    ಷೋಡಶೋತ್ತರವರ್ಷೀಯಮ್
    ಹ್ಯಾದೌ ಮತ್ತೇಭಕ್ರೀಡಿತಮ್|
    ಪದ್ಯಪಾನಾಂಗಣೇ ಸದ್ಯಂ
    ’ಮೌರ್ಯಮಿಮ್ಮಡಿ’ಮಾಹ್ವಯೇ||

 18. ಮೊಗಮೊಂದ೦ ರವಿ ತೋರ್ಪನಲ್ತೆ ದಿನವೂ. ವೈವಿಧ್ಯವರ್ಣಂಗಳಂ
  ಜಗದೊಳ್ನಿರ್ಮಿಪ ತನ್ನಹೆಬ್ಬಯಕೆಗಂ ಮು೦ಗಾರನೇ ಕಾಯ್ವನೈ
  ತೊಗಲೊಳ್ ಮೂಡಿಹ ವರ್ಣದೇಕತೆಯನುಂ ನೀಗಲ್ಕೆತಾ ಮಾನವಂ
  ಸೊಗಸಿಂ ಪುಣ್ಣಿಮೆಪಬ್ಬದೋಕುಳಿಯನುಂ ಚೆಲ್ಲಾಡುವಂ ಹರ್ಷದೀ – ಮತ್ತೇಭ|

  ದಿನವೂ ಒಂದೇ ಬಣ್ಣದಲ್ಲಿ ಹೊಳೆಯುವ ತನ್ನ ಮುಖವನ್ನು ತೋರಿಸುವ ಸೂರ್ಯನು, ಬಣ್ಣ ಬಣ್ಣದ ಕಾಮನಬಿಲ್ಲನ್ನು ಮೂಡಿಸಲು ಮುಂಗಾರಿನ ಬರುವಿಕೆಗಾಗಿ ಕಾಯುತ್ತಾನೆ. ಅಂತೆಯೇ, ಚರ್ಮದ ಒಂದೇ ಬಣ್ಣದಿಂದ ಏಕತಾನತೆಯನ್ನು ಅನುಭವಿಸುವ ಮನುಷ್ಯ, ಹಲವುಬಣ್ಣಗಳನ್ನು ತೊಡಲು, ಮಾಘಪೂರ್ಣಿಮೆಯ ಹೋಳಿಹಬ್ಬಕ್ಕಾಗಿ ಕಾದು, ಬಣ್ಣದಾಟವಾಡುತ್ತಾನೆ.

  • ಉಪಮಾನಾಲಂಕಾರ ತುಂಬ ಚೆನ್ನಾಗಿದೆ. ಸ್ವಲ್ಪ ಹಳಗನ್ನಡ ಸವರಣೆ ಬೇಕಿದೆ:
   ……………
   ಜಗದೊಳ್ನಿರ್ಮಿಪ………
   …….. ಪೌರ್ಣಮಿಪರ್ವದೋಕುಳಿಯನುಂ…….
   ……….

   • ಓಹ್ ಥಾಂಕ್ಸು…ತಿದ್ದಿದ್ದೇನೆ..ಮೊದಲನೇ ತಿದ್ದುಪಡಿ ನೀವೆಂದ೦ತೆ…ಎರಡನೆಯದು ಪಳಗನ್ನಡದಂತೆ 🙂

  • ಪ್ರಿಯ ಶ್ರೀಶ ಕಾರಂತರೇ

   ಬಲು ಮುದ್ದಾದ ಪದ್ಯ. ಓದಿ ಬಹಳ ಆನಂದವಾಯಿತು .ಸೊಗಸಾದ ಕಲ್ಪನೆ ಹಾಗೂ ಅಚ್ಚಕನ್ನಡದ ಸೊಬಗಿನಿಂದ ಕಂಗೊಳಿಸಿದೆ . congratulations

 19. ಹೋಳಿಯಾಡಲು ಬನ್ನಿರೆಲ್ಲರು
  ನಾಳಿನಾಚಿಂತೆಯನು ಮರೆಯುತ
  ಕೇಳಿಪಡೆಯಿರದಾವ ಬಣ್ಣವು ನಿಮಗೆ ಬೇಕೆಂದು
  ಸೀಳೊಡೆಯುತಲಿ ಪೊಟ್ಟಣಗಳಂ
  ಧೂಳನೆಬ್ಬಿಸಿ ಬೀದಿಯೊಳ್ನೀವ್
  ಬೀಳಬೇಡೀರಿ ನೀರಹಂಡೆಯೊಳಾಟವಾಡುತಲಿ

  • ನಾಳಿನಾ ಚಿಂತೆಯನು ಮರೆಯಲು
   ಪೇಳಿದಿರಿ ನೀಮೆಂದು ನಾವ್ಗಳ್
   ಕಾಳಫೀಮನು ಭಂಗಿರೂಪದೊಳಿಂದು ಸೇವಿಸಿರಲ್|
   ಮೇಳವಿಸಿದರೊಳಾಡುವಾಟದೆ
   ಗೋಳುಹೊಯ್ವುದು ಮೀರೆ ಮಿತಿಯನು
   ಕೋಳಿಯೊಲು ಕಾಲ್ಕೆರೆದು ನಿಲ್ಲೆವೆ ಜಗಳ ಕಾಯಲು ನಾವ್||

 20. ಬಗೆಗಳ್ ನಾಲ್ಕೆಂದು ಗುಣದ
  ಬಗೆದಂ ನಾಲ್ಬಣ್ಣಕಟ್ಟನೊಗೆಸಲ್ ದೇವಂ
  ಬಗೆಮೀರ್ದ ಬಣ್ಣಮೊಗೆವೀ
  ಬಗೆಯಿಂ ಜನರಿವರುದಾತ್ತನಾರಾಯಣರೈ

Leave a Reply to ಸೋಮ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)