Apr 222013
 

ಮತ್ತೇಭ ಅಥವಾ ಶಾರ್ದೂಲ ವಿಕ್ರೀಡಿತ ಛಂದಸ್ಸುಗಳ, ಕೊನೆಯ ಸಾಲಿನ ಎರಡನೆ ಭಾಗ ಇಂತಿದೆ ::‌ ‘ಚೆಲ್ವಾಯ್ತು ಚಂದ್ರೋದಯಂ

ಇಡಿಯ ಪದ್ಯವನ್ನು ನಿಮ್ಮ ಕಲ್ಪನೆಯಂತೆ ಪೂರಣಿಸಿರಿ.

[ಇದು ಸಮಸ್ಯಾಪೂರಣದ ಒಂದು ಪ್ರಬೇಧವೇ ಆಗಿದೆ. ಆದರೆ, ಇಲ್ಲಿ ಸಮಸ್ಯೆಯಿಲ್ಲ. ಕೇವಲ ಕಲ್ಪನೆಗೆ ಸಾಕಗುವಷ್ಟು ಸೂಚನೆಯಷ್ಟೇ ಇದೆ. ಹಾಗಾಗಿ ಅನೇಕ ವಿಧವಾದ ಕಲ್ಪನೆಗಳಿಗೆ ಅವಕಾಶವಿದೆ. ನಿಮ್ಮ ಸರ್ಜನತೆಯನ್ನು ಹುರಿದುಂಬಿಸಿರಿ ಹಾಗೂ ಪದ್ಯಾಮೃತವನ್ನು ಕುಡಿಸಿರಿ. ]

  71 Responses to “ಪದ್ಯಸಪ್ತಾಹ – ೬೭ : ಪದ್ಯ ಪೂರಣ”

  1. ಒಂದು ಸಣ್ಣ ಸೇರ್ಪಡೆ 🙂
    ಮತ್ತೇಭ, ಶಾರ್ದೂಲದ ಜೊತೆಗೆ ಪಂಚಮಾತ್ರಾ ಚೌಪದಿಯ ೨ ಅಥವಾ ೪ನೆಯ ಸಾಲಿನ ಕೊನೆಯ ೨ ಗಣಗಳು ಮತ್ತು ಒಂದು ಗುರುವೆಂದೂ ಇದನ್ನು ಭಾವಿಸಬಹುದು…ಮತ್ತು ಈ ಮಾತ್ರಾ ವಿಧಾನವನ್ನು ಅಡಗಿಸಿಕೊಳ್ಳುವ/ಒಳಗೊಳ್ಳುವ ಇನ್ನಾವುದಾದರೂ ಛಂದಸ್ಸನ್ನೂ ಬಳಸಬಹುದು…..

    • ಪ್ರಿಯ ಶ್ರೀಶ,
      ಸೇರ್ಪಡೆಯೇನೋ ಸಮುಚಿತವಾಗಿದೆ. ಆದರೆ ಸುಲಭದ ಮಾತ್ರಾಛಂದಸ್ಸುಗಳ ಮೋಹದಲ್ಲಿ ಹಚ್ಚಿನವರು ಶಾರ್ದೂಲ-ಮತ್ತೇಭಗಳನ್ನು ಅವಗಣಿಸಿದರೆ ಇಂಥ ಭವ್ಯೋಜ್ಜ್ವಲವೃತ್ತಗಳ ಗತಿಯೇನು? ಬೆಕ್ಕು- ಆಡುಗಳಿಂದ ಹಳ್ಳಿಯ ಚಿತ್ರ ಚೆನ್ನಾದೀತು. ಆದರೆ ಹುಲಿ-ಹಸ್ತಿಗಳಿಂದಲೇ ಮಹಾರಣ್ಯದ ಸಾಕ್ಷಾತ್ಕಾರ ಸಾಧ್ಯವಲ್ಲವೇ! ಸಂದರ್ಭವು ಸ್ವಯಂ ಸರಸ ಮತ್ತು ಸುಲಭವಾಗಿರುವ ಕಾರಣ ಕಲ್ಪನೆ ಮತ್ತು ಛಂದಸ್ಸುಗಳಲ್ಲಿಯಾದರೂ ಪದ್ಯಪಾನಿಗಳು ’ಬಗ್ಗಿಸಲಿ”
      ವಿ.ಸೂ: ಬಗ್ಗಿಸು ಎಂಬ ಕ್ರಿಯಾಪದವು ಹಾಡು, ಉಲಿ ಎಂಬರ್ಥದಿಂದ ಹಳಗನ್ನಡಲ್ಲಿ
      ಪ್ರಸಿದ್ಧ. ನನ್ನ ಇಂಗಿತ ಇದೇ:-)

  2. ದಲದಿಂದೀವರಚೂತಚೈತ್ರಸಮಯಂ ತಾರಾವಲೀಚಾತಕಾ-
    ಕುಲತೋನ್ಮೂಲನಕಾಲಮೇಘಸಮಯಂ ವಾರಾಶಿರಾಡ್ವಾಹಿನೀ-
    ವಲನೋತ್ಸಾಹಕಶಾರದಾರ್ಘಸಮಯಂ ಶೃಂಗಾರಸಂಗೀತಿಕಾ-
    ಕಲಮಾಧುರ್ಯರಸಜ್ಞರಾಜಿಸಮಯಂ ಚೆಲ್ವಾಯ್ತು ಚಂದ್ರೋದಯಂ

    ಇದೊಂದು ಆಲಂಕಾರಿಕಪದ್ಯ. ಇಲ್ಲಿ ಪ್ರಧಾನವಾಗಿ ಚಂದ್ರಸಂಬಂಧಿತವಾದ ವಿವಿಧರೂಪಕಗಳ ಮೇಳವಿದೆ. ಪದ್ಯಪಾನಿಗಳು ನಮ್ಮ ಪ್ರಾಚೀನಕನ್ನಡಕಾವ್ಯಗಳಲ್ಲಿ ಕಾಣಬಹುದಾದ ಇಂಥ ಶೈಲಿಯನ್ನೂ ಗಮನಿಸಿ ಅಳವಡಿಸಿಕೊಳ್ಳಲೆಂಬ ಆಶಯದಿಂದ ನಾನೀ ಪದ್ಯವನ್ನು ಹೆಣೆದೆನೆನ್ನಬೇಕು:-)

    ಇದರ ಸರಳತಾತ್ಪರ್ಯವಿಂತಿದೆ:
    ಕನ್ನೈದಿಲೆಗಳೆಂಬ ಮಾವುಗಳಿಗೆ ಸುಗ್ಗಿಯಂತಾಗಿ, ಅರಿಲ್ಗಳೆಂಬ ಚಾದಗೆಗಳಿಗೆ ಕಾರ್ಗಾಲದಂತಾಗಿ, ಮುನ್ನೀರೆಂಬ ಅರಸನ ಜೈತ್ರಯಾತ್ರೆಗೆ ಶರತ್ಕಾಲದಂತಾಗಿ, ಶೃಂಗಾರವೆಂಬ ಸಂಗೀತ(ಗೀತ-ನೃತ್ತ-ವಾದ್ಯ)ವನ್ನು ಆಸ್ವಾದಿಸುವ ರಸಿಕಸಮಾಜದ ರೀತಿ-ನೀತಿಯಂತಾಗಿ ಮೂಡಿದ ಪೆರೆಯೇರು (ಚಂದ್ರನ ಉದಯ; ಪೆರೆ=ಚಂದ್ರ, ಏರ್=ಉದಯ) ಚೆಲುವಾಯಿತು.

    • ಗಣೇಶ್ ಸರ್,
      ನೀವು ತಂದಿರುವ ಪೆರೆಯೇರಿನ “ಪೆಣೆಯೇರು” ಮನೋಜ್ಞವಾಗಿದೆ. ಧನ್ಯವಾದಗಳು.

  3. दीने दुर्धरकाननान्तमटते गाढान्धकारावृते
    मातस्त्वं शरणागते मयि कृतो कारुण्यपूर्णोज्वलः |
    नूनं दीर्घतरान्धकारभिदुरो भक्त्यैकदीप्तो हृदि
    अम्ब त्वत्पदपङ्कजातिरुचिरो चन्द्रोदयो राजते ||

    • ಪ್ರಿಯವಯಸ್ಯ, ಅತ್ರ ಸಂತಿ ಕೇಚನ ದೋಷಾಃ. ತೇ ಕೃಪಯಾ ಭವತಾ ನಿವಾರಣೀಯಾಃ. ಯಥಾ: “ಕಾರುಣ್ಯಪೂರ್ಣೋಜ್ಜ್ವಲಃ” ಇತ್ಯಸ್ಯ ವಿಶೇಷಣಸ್ಯ ಕೋ ವಾ ವಿಶೇಷಃ? ನಾತ್ರ ಸ್ಪಷ್ಟೋsಯಮಂಶಃ. ಅಪಿ ಚ ಹೃದಿ + ಅಂಬ ಇತ್ಯತ್ರ ಸಂಧಿರವಶ್ಯಂ ಭಾವೀ. ಕ್ರಿಯತೇ ಚೇತ್, ವೃತ್ತಭಂಗದೋಷಸ್ಸಮಾಪತತಿ. ವಿಶಿಷ್ಯ ಸಮಗ್ರೇ ಪದ್ಯೇ ತ್ವಾಶಯಸ್ಪಷ್ಟತಾ ನ ಸಾಧಿತಾ. ಕೃಪಯಾ ಸಮಂಜನೀಯಾ ಏತೇ.

      • ಪ್ರಿಯ ಗಣೇಶ,

        ಸೂಚನೆಗಳಿಗೆ ಧನ್ಯವಾದಗಳು . ಸರಿಪಡಿಸಲು ಯತ್ನಿಸಿದ್ದೇನೆ .

        ಕಾರುಣ್ಯಪೂರ್ಣೋಜ್ವಲವು ಚಂದ್ರೋದಯಕ್ಕೆ ವಿಶೇಷಣ.

        ನಿರ್ಗತಿಕವಾಗಿ ಅಲೆಯುತ್ತಿದ್ದ ನನ್ನ ಮನಸ್ಸಿನಲ್ಲಿ ನಿನ್ನ ಪಾದಾರವಿಂದಗಳ ಆವಿರ್ಭಾವವೆಂಬ ಚಂದ್ರೋದಯವು ರಾಜಿಸುತ್ತಿದೆ ಎಂದು ಭಾವಾರ್ಥ.

        दीने दुर्धरकाननान्तमटते गाढान्धकारावृते
        मातस्त्वं शरणागते मयि कृतो कारुण्यपूर्णोज्वलः |
        नूनं दीर्घतरान्धकारभिदुरो भक्त्यैकदीप्तो हृदि
        मातस्त्वत्पदपङ्कजातिरुचिरो चन्द्रोदयो राजते ||

        • ವಯಸ್ಯವರ, ಪುನಶ್ಚ ದೋಷದರ್ಶಕಸ್ಸಂಜಾತೋsಸ್ಮೀತಿ ಖಿನ್ನಂ ಮೇ ಮನಃ. ಹೃದಿ ಇತ್ಯತ್ರ ದಿಕಾರೋ ಹ್ರಸ್ವಃ ಕಿಲ! ಅತ್ರ ಸರ್ವಥಾ ಗುರುಣಾ ಭಾವ್ಯಂ; ಯತೋ ವಿಷಮಪಾದಾಂತೇಷು ತ್ರಿಷ್ಟುಭ್ವರ್ಗಾಧಿಕೇಷು ವೃತ್ತೇಷು ಪಾದಾಂತವರ್ಣೋ ಲಘುರಪಿ ಗುರುರ್ಭವತೀತಿ ನಿಯಮೋ ನ ಲಗತಿ. ಅತಃ ಪ್ರಮೃಜ್ಯತಾಂ ಲೋಪೋsಯಮ್. ಅನ್ಯಚ್ಚ ಪ್ರಥಮೇ ಪಾದೇ ಅಟ್ ಧಾತೋಶ್ಶತೃಪ್ರತ್ಯಯಃ “ಅಟತೇ” ಇತಿ ನ. ತತ್ತು “ಅಟತಿ” ಇತಿ ಭವತಿ. ಅನೇನ ಪುನಶ್ಚ ಚ್ಛಂದೋದೋಷಃ ಸಂಜಾಯತೇ. ಕೃಪಯಾ ನಿವಾರ್ಯತಾಮೇತದಪಿ. ಅಹಂ ಭವತ್ಪರಿಚಯಾಕಾಂಕ್ಷೀ. ದಯಯಾ ಭವತ್ಪೂರ್ವಾಪರೌ ಮೇ ಪ್ರದಿಶಂತುಮರ್ಹಂತಿ ತತ್ರಭವಂತೋ ಭವಂತಃ

          • ಬಾಲಾನಾಂ ಕವಿತ್ವಂ ಕ್ಷಂತವ್ಯಂ .

            ಅಟತೇ ಸತಿ ಮಯಿ ಇತಿ ಸಾಧು ಕಿಲ ?

            ಹೃದಿ ಶಬ್ದೋ ಧಿಯಾಂ ಇತಿ ಪರಿವರ್ತವ್ಯಂ ವಾ
            ಪೂರ್ವಂ ತು ಜಾನಾಮಿ ನಾಪರಂ. ವದಾಮಿ ಶೀಘ್ರಮೇವ .

  4. ಶ್ರೀಕಾಂತಾ ವರಕೌಸ್ತುಭಂಗಳೆಸೆವಾ ಶಾರ್ಙ್ಗಾಯುಧಂ ಸಂದಿರಲ್
    ಶ್ರೀಕಾಂತಂ ಧರಣೀಕುಭಾರಮಿಳಿಸಲ್ ಕೈಗೊಂಡಪನ್ ಶೈಶವಂ
    ಬೇಕೆಂದಿಲ್ಲದೊಡುಣ್ಣೆನೆಂದಳುವನುಂ ಕಾಂಸ್ಯಸ್ಥನಂ ಕಂಡು ಸೀ
    ತಾಕಾಂತಂಗುರೆ ಹರ್ಷಮಾದಪುದೆನಲ್ ಚೆಲ್ವಾಯ್ತು ಚಂದ್ರೋದಯಂ

    ಚೆಲುವು ಸಾರ್ಥಕ್ಯದಿಂದ ಇಮ್ಮಡಿಸುತ್ತದೆ ಎಂಬ ಭಾವ.

    • ಶ್ರೀಕಾಂತಾ ವರಕೌಸ್ತುಭಂಗಳೆಸೆವಾ ಶಾರ್ಙ್ಗಾಯುಧಂ ಸಂದಿರಲ್
      ಶ್ರೀಕಾಂತಂ ಧರಣೀಕುಭಾರಮಿಳಿಸಲ್ ಕೈಗೊಂಡಪನ್ ಶೈಶವಂ
      ಬೇಕೆಂದಿಲ್ಲದೊಡುಣ್ಣೆನೆಂದಳುವನುಂ ಕಾಂಸ್ಯಸ್ಥನಂ ಪೊಂದಿ ಸೀ
      ತಾಕಾಂತಂಗುರೆ ಹರ್ಷಮಾದಪುದೆನಲ್ ಚೆಲ್ವಾಯ್ತು ಚಂದ್ರೋದಯಂ

      (ಸಣ್ಣ ತಿದ್ದುಪಾಟಿನೊಂದಿಗೆ)

      • ಪದ್ಯಮಾತ್ರದಿಂದ ಭಾವವು ಸ್ಫುಟವಾಗುತ್ತಿಲ್ಲ. ದಯಮಾಡಿ ಪದ್ಯವನ್ನು ಮತ್ತಷ್ಟು ಮೊನೆಗೊಳಿಸಲಾದೀತೇ?

    • ಆ ಕಂಸಾರಿಯನೀಯೆ ಗೋಪಪತಿಗಂ ಕೊಂಡೊಯ್ವುದುಂ ನಕ್ತದೊಳ್
      ಶ್ರೀಕಾಂತಾಸಹಜಂ ನವೋದಿತನುಮಾ ಕಾರ್ಗತ್ತಲಂ ನೀಗಿದಂ
      ನಾಕಾಂತರ್ಗತನಂ ಕುಮಾರಬಗೆಯಲ್ ಕಾಂಸ್ಯಾಸ್ಯದೊಳ್ ಪೊಂದಿ ಸೀ
      ತಾಕಾಂತಂಗುರೆ ಹರ್ಷಮಾದಪುದೆನಲ್ ಚೆಲ್ವಾಯ್ತು ಚಂದ್ರೋದಯಂ

      ತೀದಿರ್ದುಮ್ ಸಲೆ ಮೋಡಾಗಿರ್ಕುಂ. ಕ್ಷಮಿಕ್ಕಿಂ

      • ನಿಮ್ಮ ಪದ್ಯದ ಹೊಸರೂಪವನ್ನು ಈಗಷ್ಟೇ ಮಿಂಚೆಯಲ್ಲಿ ಕಂಡೆ. ಚೆನ್ನಾಗಿದೆ. “ಕುಮಾರ ಬಗೆಯಲ್’ ಎಂಬುದನ್ನು ಕುಮಾರನರಿಯಲ್ ಎಂದು ಸವರಿಸಿದರೆ ಮತ್ತೂ ಉತ್ತಮ.

        • ಬಯಸು ಎಂಬರ್ಥದಲ್ಲಿ ‘ಬಗೆ’ ಬಳಸಿದೆ. ‘ಕುಮಾರನೊಲಿಯಲ್’ ಎಂದಾಗಿಸಬಹುದಲ್ಲವೆ?

  5. ಸರಿಯಲ್ ಸಂಜೆಯೊಳಂಜಿರಲ್ ಶರಧಿಯೊಳ್ ಮುಳ್ಗಿದ್ದ ತಾನೇಸರಂ
    ಎರೆದನ್ ಕೆಂಪನೆಪೆಂಪನುಂ ಮುಗಿಲಿನೊಳ್ ಹಚ್ಚಿತ್ತು ತಾದೀಪಮಂ
    ಎರೆಚಲ್ ಬೆಲ್ಬೆಳಕಂದಮಂ ಸರದಿಯೊಳ್, ಚೆಲ್ವಾಯ್ತು ಚಂದ್ರೋದಯಂ
    ಒರೆಸಲ್ ಬಿಟ್ಟಿರೆಕಟ್ಟಿರಲ್ ಚಿಮಣಿಯಿಂದಿಲ್ವಾಯ್ತೆ ಚಂದ್ರೋದಯಂ ॥

    (ಬಾನಿನ “ಚಂದಿರ”, ಸೂರ್ಯ ಪ್ರತಿರಾತ್ರಿ ಸರದಿಯಲ್ಲಿ ಹಚ್ಚುವ ಬಗೆಬಗೆಯ “ಚಂದ್ರದೀಪ”ದಂತೆ. ಅಮಾವಾಸ್ಯೆಯಂದು, ಮಸಿ ಕಟ್ಟಿದ ಚಿಮಣಿಯಿಂದಾಗಿ, ಈ ದೀಪ ಕಾಣದಾಗಿದೆ ಎನ್ನುವ ಭಾವನೆಯಲ್ಲಿ )

    • ನಿಮ್ಮ ಕಲ್ಪನೆಯು ವ್ಯಾಖ್ಯಾಮಾತ್ರವೇದ್ಯ:-) ಆದರೆ ಪದ್ಯಮಾತ್ರದಿಂದ ಅದು ತಿಳಿಯುವಂತಿಲ್ಲ:-) ಅಲ್ಲದೆ ಮೊದಲನೆಯ ಪಾದಾಂತ್ಯದಿಂದ ವಿಸಂಧಿದೋಷವಾಗಿದೆ. ತಾನೇಸರಂ + ಎರೆದನ್, ದೀಪಮಂ + ಎರಚಲ್, ಚಂದ್ರೋದಯಂ + ಒರೆಸಲ್ ಎಂಬೀ ಎಡೆಗಳಲ್ಲಿ ಸಂಧಿ ಕಡ್ಡಾಯ. ಅದನು ನೀವಿಲ್ಲಿ ಮಾಡಿದರೆ ಛಂದಸ್ಸು ಕೆಡುತ್ತದೆ! ಹೀಗಾಗಿ ಇಡಿಯ ಪದ್ಯವನ್ನು ದಯಮಾಡಿ ಸವರಿಸಿರಿ.

    • ಧನ್ಯವಾದಗಳು ಗಣೇಶ್ ಸರ್,
      ನನ್ನ ಪದ್ಯದಲ್ಲಿ ಪಾದದಿಂದ ಪಾದಕ್ಕೆ ಹರಿವಿಲ್ಲದ ಕಾರಣ ಪೂರ್ಣ ಅರ್ಥವನ್ನು ಬಿಂಬಿಸಲಾಗುತ್ತಿಲ್ಲವೆಂದನಿಸುತ್ತಿದೆ. (ನಿಮ್ಮ ಪದ್ಯದಲ್ಲಿ ಅದನ್ನು ಸ್ಪಷ್ಟ ಕಂಡಿದ್ದೇನೆ.) ದಯವಿಟ್ಟು ಸರಿಪಡಿಸಿಕೊಳ್ಳಲು ಸಹಾಯಮಾಡಿ. ವಿಸಂಧಿ ದೋಷಗಳನ್ನು ತಿದ್ದಿದ್ದೇನೆ.

      ಸರಿಯಲ್ ಸಂಜೆಯೊಳಂಜಿರಲ್ ಶರಧಿಯೊಳ್ ಮುಳ್ಗಿದ್ದನಾನೇಸರಂ
      ಕರೆಯಲ್ ಕೆಂಪನೆಪೆಂಪನುಂ ಮುಗಿಲಿನೊಳ್ ಹಚ್ಚಿಟ್ಟು ತಾದೀಪಮಂ
      ಸುರಿಸಲ್ ಬೆಲ್ಬೆಳಕಂದಮಂ ಸರದಿಯೊಳ್, ಚೆಲ್ವಾಯ್ತು ಚಂದ್ರೋದಯಂ
      ಮರೆತುಂ ಬಿಟ್ಟಿರೆಮಾಸಿರಲ್ ಚಿಮಣಿಯಿಂದಿಲ್ವಾಯ್ತೆ ಚಂದ್ರೋದಯಂ ॥

      • ನಮಸ್ಕಾರ, ನಿಮ್ಮ ಆಸಕ್ತಿ-ಪರಿಶ್ರಮಶ್ರದ್ಧೆಗಳು ಸರ್ವಥಾ ಸ್ತುತ್ಯ. ಸದ್ಯಕ್ಕೆ ಈ ಪದ್ಯವು ವ್ಯಾಕರಣದೃಷ್ಟ್ಯಾ ಅನವದ್ಯ. ಆದರೆ ಅರ್ಥದ ಕ್ಲೇಶವು ಹಾಗೆಯೇ ಉಳಿದಿದೆ:-)

    • ಧನ್ಯವಾದಗಳು ಗಣೇಶ್ ಸರ್,
      ಪದ್ಯವನ್ನು ಸ್ವಲ್ಪ ತಿದ್ದಿದ್ದೇನೆ. ಆದರೂ ಪೂರ್ಣ ಕಲ್ಪನೆಯನ್ನು (ಈ ಛಂದಸ್ಸಿನಲ್ಲಿ) ತರಲಾಗುತ್ತಿಲ್ಲ.ಬೇರೆ ಛಂದಸ್ಸಿನಲ್ಲಿ ಪ್ರಯತ್ನಿಸಬಹುದೇ?

      ಸರಿಯಲ್ ಸಂಜೆಯೊಳಂಜಿರಲ್ ಸರದಿಯೊಳ್ ಹಚ್ಚಿಟ್ಟು ತಾದೀಪಮಂ
      ಕರೆವನ್ ಕೆಂಪನೆಪೆಂಪನುಂ ಮುಗಿಲಿನೊಳ್ ನೋಡಲ್ಲಿ ತಾನೇಸರಂ
      ಸುರಿಯಲ್ ಬೆಳ್ಬೆಳಕಂದವುಂ ಧರಣಿಯೊಳ್, “ಚೆಲ್ವಾಯ್ತು ಚಂದ್ರೋದಯಂ”
      ಮರೆಯಲ್ ಚಿಮ್ಮಣಿಕಟ್ಟಿರಲ್ಲೊರೆಸಲುಂ ನೋಡಿಂದಮಾವಾಸ್ಯೆಯುಂ ॥

  6. ಉತ್ತರ ಭಾರತದಲ್ಲಿ ಹೆಚ್ಚು ಪ್ರಸಿದ್ಧಿಯಲ್ಲಿರುವ (ಕರ್ವಾ ಚೌತ್) ಈ ಹಬ್ಬದ ದಿನ ಮಹಿಳೆಯರು ತಮ್ಮ ಪತಿಯ ಆಯಸ್ಸಿಗಾಗಿ, ಶ್ರೇಯಸ್ಸಿಗಾಗಿ ವ್ರತಮಾಡಿ ದಿನವಿಡೀ ಉಪವಾಸದಲ್ಲಿಲದ್ದು, ಸಂಜೆ ಪತಿಯೊಡನೆ ಚಂದ್ರನ ದರ್ಷನವಾದ ನಂತರ ಆಹಾರವನ್ನು ಸೇವಿಸುತ್ತಾರೆ.. ಇದರ ವರ್ಣನೆ….

    ಅಲ್ಲಿ ಇಲ್ಲಿ ಸವರಿಸಿದ ಸೋಮಣ್ಣನಿಗೆ ಧನ್ಯವಾದಗಳು 🙂

    ಪತಿಗಾಯುಷ್ಯವ ಪೆರ್ಚಿಸಲ್ಕೆ ಸತಿಯಿಂ ಕೈಗೊಂಡರಲ್ ಭಕ್ತಿಯಾ
    ವ್ರತಮಂ ತಿನ್ನದೆ ಚೌತಿಯಾದಿನದೆತಾಂ ಸಾನಂದದಿಂ ಶ್ರದ್ಧೆಯಿಂ
    ಸ್ತುತಿಪಳ್ ದೇವಗೆ ಪಾತಿವ್ರತ್ಯಮೆನಗಂ ನೀಡೆಂದು ಸೂರ್ಯಾಸ್ತಮಂ
    ಗತಿಸಲ್ ವೀಕ್ಷಿಸೆ ನಲ್ಲನಾಮೊಗದೊಳಂ ಚೆಲ್ವಾಯ್ತು ಚಂದ್ರೋದಯಂ

    • ಸುಂದರವಾದ ಕಲ್ಪನೆ ಚೀದಿ. ಬಹಳ ಇಷ್ಟವಾಯಿತು. 🙂

    • ಪ್ರಿಯ ಶ್ರೀಧರ,

      ಕಲ್ಪನೆ ಚೆನ್ನಾಗಿದೆ. ಆದರೆ ಭಾಷೆ ಮತ್ತೂ ಹದವಾಗಬೇಕು. ಈ ಬಗೆಗೆ ಮುಖತಃ ವಿಸ್ತರಿಸುತ್ತೇನೆ.

  7. ಜಗತ್ಸ್ವಾಮಿಯಾದ ಕೃಷ್ಣನ ರಾಸಕ್ರೀಡೆಯ ಬಗ್ಗೆ ಬೇರೆಯದಾಗಿ ಹೇಳುವುದರ ಅಗತ್ಯವೇ ಇಲ್ಲ. ಶೃಂಗಾರ ಮತ್ತು ಭಕ್ತಿಗಳ ಮೇಳವಾದ ರಾಸಲೀಲೆಯನ್ನು ಕುರಿತಾದ ಪದ್ಯ ಇದಾಗಿದೆ. ರಾಸಲೀಲೆಯು ನಡೆಯುತ್ತಿರಲು ಪರಮಾತ್ಮನು ಗೋಪಿಕೆಯರೆಂಬ ತಾರಾಗಣದ ನಡುವಿನ ಚಂದ್ರನಂತೆ ಗೋಚರಿಸುತ್ತಿದ್ದನು. ಇದರಿಂದಾಗಿ ಅಂದಿನ ಚಂದ್ರೋದಯದ ಸೊಬಗು ನೂರ್ಮಡಿಯಾಯಿತು ಎಂಬುದು ಪದ್ಯದ ಸಾರ.

    ಮ || ಜಗದೀಶಂ ಸುರಸಾರ್ದ್ರಮೋಹಕವಿಲಾಸಕ್ರೀಡೆಯೊಳ್ ಕಲ್ಯನೆಂ
    ದಗಲಲ್ಕೊಲ್ಲದ ಗೋಪಿಕಾಸರಸಿಯರ್ ರಾಸೋತ್ಸವಂ ಗೈದಿರಲ್
    ಭಗಣೋದ್ದೀಪಿತ ಕಾಳವ್ಯೋಮದೊಡಲೊಳ್ ರಾಕೇಶನಂ ಪೋಲ್ವವೊಲ್
    ನಗಧಾತ್ರಂ ಸೊಗದಿಂದೆ ನರ್ತಿಸೆ ಗಡಾ ಚೆಲ್ವಾಯ್ತು ಚಂದ್ರೋದಯಂ ||

    • ಬಹಳ ಚೆನ್ನಾಗಿದೆ 🙂

    • ಪ್ರಿಯ ಮೌರ್ಯ,

      ನಿಮ್ಮ ಪದ್ಯವೂ ಕಲ್ಪನೆಯೂ ಸೊಗಸಾಗಿವೆ. ಒಂದೆರಡು ಸವರಣೆಗಳು:
      ಗೋಪಿಕಾವನಿತೆಯರ್ ಎಂಬ ಪ್ರಯೋಗವು ಉತ್ತಮ. ಕಾಳವ್ಯೋಮ ಎಂಬಲ್ಲಿ ಛಂದಸ್ಸು ಎಡವುತ್ತದೆ. ಹೀಗಾಗಿ ಅದನ್ನು ಕಾಲಿಮಾಭ್ರ ಎಂದು ತಿದ್ದಿದರೆ ಯುಕ್ತ. ನಗಧಾರಂ ಎಂದಾದರೆ ಒಳಿತು.

      • ಪೂಜ್ಯ ಅವಧಾನಿವರ್ಯರೇ,

        ಸವರಣೆಗಳಿಗೆ ಧನ್ಯವಾದಗಳು ಸರ್…ನಾನೂ ಮೊದಲು “ನಗಧಾರಂ” ಎಂತಲೇ ಯೋಚಿಸಿದ್ದೆ. ಆದರೆ ಆ ಪದದ ಬಗೆಗಿನ ಸಂಶಯ ನನ್ನನ್ನು “ನಗಧಾತ್ರಂ” ಬಳಸುವಂತೆ ಮಾಡಿದ್ದಿತು. ಪದ್ಯವನ್ನು ತಾವು ಬಯಸಿದಂತೆ ಸವರಿಸಿದ್ದೇನೆ –

        ಜಗದೀಶಂ ಸುರಸಾರ್ದ್ರಮೋಹಕವಿಲಾಸಕ್ರೀಡೆಯೊಳ್ ಕಲ್ಯನೆಂ
        ದಗಲಲ್ಕೊಲ್ಲದ ಗೋಪಿಕಾವನಿತೆಯರ್ ರಾಸೋತ್ಸವಂ ಗೈದಿರಲ್
        ಭಗಣೋದ್ದೀಪಿತ ಕಾಲಿಮಾಭ್ರದೊಡಲೊಳ್ ರಾಕೇಶನಂ ಪೋಲ್ವವೊಲ್
        ನಗಧಾರಂ ಸೊಗದಿಂದೆ ನರ್ತಿಸೆ ಗಡಾ ಚೆಲ್ವಾಯ್ತು ಚಂದ್ರೋದಯಂ ||

        • ಪ್ರಿಯ ಮೌರ್ಯ,
          ದಯಮಾಡಿ ನನ್ನನ್ನು ’ಪೂಜ್ಯ” ’ಅವಧಾನಿವರ್ಯ’ ಇತ್ಯಾದಿ
          ದಪ್ಪ ದಪ್ಪ ಪದಗಳಿಂದ ಸಂಬೋಧಿಸಬೇಡಿರಿ:-) ಸುಮ್ಮನೆ ಗಣೇಶ್ ಎಂದರೆ ಸಾಕು.

          • ಅಯ್ಯಯ್ಯೋ…ನಾನು ತಮ್ಮನ್ನು ಹಾಗೆಲ್ಲ ಹೆಸರೊಡನೆ ಸಂಬೋಧಿಸಲಾದೀತೆ? ದಯಮಾಡಿ ಮನ್ನಿಸಿರಿ. ತಮ್ಮನ್ನು ಗುರುಗಳೆಂದು ಭಾವಿಸಿರುವ ನಾನು ಹಾಗೆ ಮಾಡುವುದು ಸರ್ವದಾ ಅನುಚಿತ… ತಮಗೆ ಕಸಿವಿಸಿಯುಂಟುಮಾಡುವುದು ನನ್ನ ಉದ್ದೇಶವಲ್ಲ…ಆದರೆ ತಮಗಾಗಿರುವ ಮುಜುಗರವನ್ನು ಕಳೆಯಲು ತಮ್ಮನ್ನು ಸರ್ ಜೀ ಅಥವಾ ಮಾಸ್ಟರ್ ಜೀ ಎಂದು ಸಂಬೋಧಿಸುತ್ತೇನೆ…ತಾವೂ ಸಹ ನನ್ನನ್ನು ಬಹುವಚನದಲ್ಲಿ ಸಂಬೋಧಿಸದೆ ,”ಹೋಗು” “ಬಾ” ಎಂತಲೇ ಮುಕ್ತವಾಗಿ ಸಂಬೋಧಿಸಬೇಕೆಂಬುದು ನನ್ನ ಸಣ್ಣ ವಿನಂತಿ. ಈ ಒಪ್ಪಂದ ತಮಗೆ ಒಪ್ಪಿತವೇ ? 🙂

    • ಪ್ರಿಯ ಮೌರ್ಯ,
      ಸೊಗಸಾದ ಕಲ್ಪನೆ. ನಿನ್ನ ಪದ್ಯರಚನೆಯ ಪ್ರೌಢಿಮೆ ನಿಜವಾಗಿ ಬೆರಗು ಮೂಡಿಸಿದೆ.(ಹಲವು ಪದಗಳ ಅರ್ಥ ತಿಳಿಯಲು ನಿಘಂಟಿನ ಮೊರೆಹೋಗಬೇಕಾಯಿತು) ಇದೆಲ್ಲ ಹೇಗೆ ಸಾಧ್ಯವಾಯಿತೆಂದು ನಮ್ಮೊಂದಿಗೆ ಹಂಚಿಕೊಳ್ಳಬಹುದೇ? “अगले” “ಸಾಲು” ಬೇಗಬರಲಿ – ಎಂದು ಮತ್ತೆ ಆಶಿಸುತ್ತಿದ್ದೇನೆ.

      • ಮಾನಿನಿಯರೇ,

        ನಿಜ ಹೇಳಬೇಕೆ ? It’s funny… ಈಗ ಬೇಸಿಗೆ ಕಾಲವಾದ್ದರಿಂದ ಒಮ್ಮೊಮ್ಮೆ ರಾತ್ರಿಯ ವೇಳೆ ನಿದ್ದೆ ಹಾರಿಹೋಗುತ್ತದೆ. ಏನು ಮಾಡಬೇಕೆಂದು ತಿಳಿಯುವುದಿಲ್ಲ. ಬಲವಂತದ ನಿದ್ದೆ ಬರುವುದೂ ಇಲ್ಲ. ಆ ಸಮಯದಲ್ಲಿ ಈ ಕೆಲ ಅಡ್ಡಕಸಬಿ ಸಾಲುಗಳನ್ನು ರಚಿಸುತ್ತೇನೆ. ಎರಡು ವಾರಗಳ ಹಿಂದಿನ ಸಮಸ್ಯೆಯಾದ “ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ” ಎಂಬುದಕ್ಕೆ ನಾನು ಪೂರಣವನ್ನು ಮಾಡಿದ್ದು ಕೂಡ ಹೀಗೆಯೇ..ಮುಂದಿನ ಪದ್ಯ ರಚನಾ ಹಂತದಲ್ಲಿದೆ…ಕೆಲಹೊತ್ತಿನಲ್ಲೇ ಬರಲಿದೆ !! 🙂 😛

        • ಇಂದಿನ ಮಹಾವೀರ ಜಯಂತಿಯ ಪ್ರಯುಕ್ತ ತೀರ್ಥಂಕರ ಮಹಾವೀರರನ್ನು ಕುರಿತಾದ ಈ ಪದ್ಯವನ್ನು ಅರ್ಪಿಸುತ್ತಿದ್ದೇನೆ.

          ಶಾ || ವೈಶಾಲೀಶಸಹಾನುಜಾಪರೆಯೊಳಂ ಜೈನೇಂದು ತಾ ಜನ್ಮಿಸಲ್
          ಕ್ಲೇಶಾತೀತ ಸುಕೇವಲೀಪತಿಸುರಾಧೀಶಾದಿ ಸಂಸ್ತುತ್ಯನಿಂ
          ದಾಶೀತಾಂಶು ಸಪೂರ್ಣಷೋಡಶಕಳಾಧಾರಂ ಸದಾನಂದದಿಂ
          ತಾ ಶೋಕಂ ಕಳೆಯಲ್ಕೆ ಮಾನಿಸರಿಗಂ ಚೆಲ್ವಾಯ್ತು ಚಂದ್ರೋದಯಂ ||

          ವೈಶಾಲೀಶಸಹಾನುಜಾ = ವೈಶಾಲಿಯ ದೊರೆ ಚೇಟಕನ ತಂಗಿಯಾದ ತ್ರಿಶಲಾದೇವಿ – ಮಹಾವೀರರ ತಾಯಿ
          ಅಪರೆ = ಗರ್ಭ

          • ಮೌರ್ಯರೆ, ಅಪರೆ = ಗರ್ಭ – ಇದಕ್ಕೆ ಪ್ರಯೋಗಾಧಾರವೆಲ್ಲಿಯದು?

          • Samskruthadalli “aparaa” endare “garbha” emba arthavu baruttade…Samskrutada padagalu kannadadalli nadeyuttavalla !!

          • ಶಂಕೆಯಿಲ್ಲದೆ ನಡೆಯುತ್ತವೆ. ನನಗೆ ಈ ಪ್ರಯೋಗ ಹೊಸತು, ಆಗಿ ಕೇಳಿದೆ.

          • ಮಾನ್ಯರೆ,
            ಒಮ್ಮೊಮ್ಮೆ ನನಗೆ ಪದ್ಯರಚನೆ ಮಾಡಲು ಛಂದಸ್ಸಿಗೆ ಹೊಂದುವಂತಹ ಸೂಕ್ತ ಪದಗಳ ಅವಶ್ಯಕತೆಯಿರುತ್ತದೆ. ನನ್ನ ಪದಗಳ ಜ್ಞಾನಭಂಡಾರ ಚಿಕ್ಕದು. ಹೀಗಾಗಿ ಕೆಲವೊಮ್ಮೆ ಕನ್ನಡ ಇಲ್ಲವೇ ಸಂಸ್ಕೃತ ನಿಘಂಟುಗಳ ಮೊರೆ ಹೋಗಬೇಕಾಗಿ ಬರುತ್ತದೆ…ಈ ಪದ್ಯದಲ್ಲಿ “ಅಪರೆ” ಎಂಬ ಪದವು ಸಂಸ್ಕೃತ ನಿಘಂಟಿನ ಸಹಾಯದಿಂದ ಬಂದದ್ದು…”ಅಪರಾ” ಎಂಬ ಸಂಸ್ಕೃತ ಪದವನ್ನು “ಅಪರೆ” ಎಂದು ಮಾಡಿ ಕನ್ನಡದ ಪದವನ್ನಾಗಿ ಮಾಡಿದೆ.
            ಸಂಸ್ಕೃತ ಪದಗಳ ಬಳಕೆಯಿಂದ ಪದ್ಯಗಳ ಸಾಂದ್ರತೆ ಹೆಚ್ಚುವುದರಿಂದ ಅದೊಂದು ಪದವನ್ನು ಮಾತ್ರವೇ ಎರವಲು ಪಡೆಯಬೇಕಾಯಿತು.

  8. ಹರಿದಶ್ವಂ ಸೆಳೆಯಲ್ ಸ್ಥಿರೆ ಭ್ರಮಣಮಂ ಗೆಯ್ದಿರ್ಪಳಲ್ತೆ ಪ್ರಭಾ-
    ಕರನಿಂ ಪರ್ವತರಾಜನುಂ ಪೊಳೆವ ಶೀರ್ಷಾಲಂಕೃತಂ ಸಿಂಧುವುಂ
    ಮೆರೆಗುಂ ವೃಷ್ಟಿಯ ವಾರಿಯಿಂದೆ ತಪನಂ ಸಂರಕ್ಷಕಂ ಜೀವರ್ಗಂ
    ಮರೆಯೊಳ್ ತಾಂ ದುಡಿದಿರ್ಪ ಸೂರ್ಯನೊಲವಿಂ ಚೆಲ್ವಾಯ್ತು ಚಂದ್ರೋದಯಂ

    ಹರಿದಶ್ವಂ, ತಪನಂ – ಸೂರ್ಯ
    ಸ್ಥಿರೆ – ಭೂಮಿ

    ಸೂರ್ಯಪ್ರತಾಪದಿಂ ಸರ್ವರ್ ಒಳಿತನ್ ಆಂಪರಲ್ತೆ!

    • ಸೋಮ – ಸುಂದರವಾದ ಕವಿತೆ.
      ‘ಜೀವರ್ಗಂ’ ಎನುತೊಂದೆ ಪಾದವೆಗರಲ್ ಛಂದಸ್ಸದೆಡವಿರ್ಪುದೈ.

      • ಶಿಥಿಲದ್ವಿತ್ವವು ಸಲ್ಗುಮಲ್ತೆ ವಿರಳಂ ಗೈದಿರ್ಪೆನಾಂ ನೋಡಿರಯ್

        ಪದ್ಯದಲ್ಲಿ ಒಂದಕ್ಕಿಂತ ಹೆಚ್ಚು ಶಿಥಿಲದ್ವಿತ್ವವನ್ನು ಬಳೆಸಿಲ್ಲ, ಒಮ್ಮೆಯಷ್ಟೆ ಬಳಸಿದ್ದೇನೆ 🙂

    • ಪ್ರಿಯ ಸೋಮ,
      ಪದ್ಯವೂ ತದಂತರ್ಗತಕಲ್ಪನೆಯೂ ಸೊಗಸಾಗಿವೆ. ಇಲ್ಲಿಯ ಭಾಷಾಪಾಕವೂ ಅನುಕರಣೀಯವಾಗುತ್ತಿದೆ. ಮತ್ತಷ್ಟು ಸವರಣೆಗಳು:
      …………………………ಭ್ರಮಣಮಂ ಗೆಯ್ದಿರ್ಪಳಲ್ತೆ…….
      ………………………………………………ಸಿಂಧುವುಂ
      ಮೆರೆಗುಂ ವೃಷ್ಟಿಯ ವಾರಿಯಿಂದೆ………………………….
      ಮರೆಯೊಳ್ ತಾಂ ದುಡಿದಿರ್ಪ ಸೂರ್ಯನೊಲವಿಂ…………..

      ಈ ಮೂಲಕ ಪದ್ಯಕ್ಕೆ ಮತ್ತಷ್ಟು ಅರ್ಥಸ್ಪಷ್ಟತೆ ಹಾಗೂ ಹಳಗನ್ನಡದ ಹದವನ್ನು ತರುವಂತಾದರೆ ಈ ಸವರಣೆ ಸಾರ್ಥಕ:-) ಶಿಥಿಲದ್ವಿತ್ವದ ಬಗೆಗೆ ಅಡ್ಡಿಯೇನಿಲ್ಲ:-)

    • ಹೌದು ಸೋಮ, ಸೂರ್ಯನ”ದಯ” ಚಂದ್ರೋದಯ, ಇದು ನಿಜವಾದ “ಸೋಮೋದಯ”.

  9. ಪ್ರಿಯ ಶ್ರೀರಾಮ ಅವರೇ,

    ಮತ್ತೆ ನಿಮಗೆ ಕಷ್ಟಕೊಡುತ್ತಿದ್ದೇನೆ:-) ’ಅಟ್ ’ ಧಾತುವು ಆತ್ಮನೇಪದಿಯಾಗಿದ್ದಲ್ಲಿ ನಿಮ್ಮ ಪ್ರಯೋಗವು ಯುಕ್ತವಾಗಿರುತ್ತಿತ್ತು. ಆದರೆ ಅದು ಕೇವಲ ಪರಸ್ಮೈಪದಿ. ಹೀಗಾಗಿ ಅಟತೇ ಎಂದಾಗದೆ ಅಟತಿ ಎಂದೇ ಆಗುತ್ತದೆ. ಈ ಕಾರಣದಿಂದ ನಿಮ್ಮ ಪದ್ಯಕ್ಕೆ ತಿದ್ದುಪಡಿ ತಪ್ಪದು. ನಾನು ಈಗಾಗಲೇ ನೀಡಿದ ತಿದ್ದುಗೆಯನ್ನು ಒಪ್ಪಲು ನಿಮಗೇನಾದರೂ ಅಭ್ಯಂತರವೇ? 🙂

  10. ಹಾದಿರಂಪರಲಂಪುಸೊಂಪಿರದ ಕಂತಿದೇಂ
    ಮೋದಾವಹಂ ಪದ್ಯಪಾನಿಗಳ್ಗಂ?
    ಚೋದಿಸುತೆ ಬೋ(ಬಾ)ಧಿಸುತೆ ಸಾಧಿಸುತೆ ನಾ(ವಾ)ದಿಸುತೆ
    ಮಾದಕತೆಯಿತ್ತುದಂ ಮರೆಯಲಳವೇ?

    ಈ ಕಂತಿಗವರ ಪ್ರತಿಕ್ರಿಯಾತಂತುಗಳ್
    ಸಾಕಲ್ಯದಿಂ ಸಲ್ಲದಾದುವೆಂದು
    ವ್ಯಾಕುಲಂಗೊಂಡಿರ್ಪುದೆನ್ನ ಮನಮೆನೆ ನನ್ನಿ
    ಬೇಕು ಬೇಕೆನಿಪುದಾ ಹಾದಿರಂಪಂ:-)

  11. ಸಂಗದಲಿ ಸುತ್ತಲಂತರದೊಳನುದಿನವು ಬಾ
    ನಂಗಳದಿ ಚೆಲ್ಲಾಯ್ತು ಸೂರ್ಯೋದಯಂ। (ಸೂರಿಯ”ದಯಂ”)
    ಕಂಗಳನು ಮುತ್ತಲಂಬರದೆ ಕತ್ತಲೆಯಾಗೆ
    ತಿಂಗಳಲಿ “ಚೆಲ್ವಾಯ್ತು ಚಂದ್ರೋದಯಂ” ॥

    (ಗಣೇಶ್ ಸರ್ ಹೇಳಿರುವಂತೆ, ಪದ್ಯರಚನೆಯಲ್ಲಿ “ಅಜಗಜಾಂತರದ” ಉದಾಹರಣೆಗಾಗಿ)

  12. ತನಗೇಂ ಮಚ್ಚೆಯೆ ಸ್ವಚ್ಛಮಾನಸನೆನಲ್ ಶೈವಾಸ್ಯ ಶೈಲಾಗ್ರ ಸಿಂ-
    ಚನಮಾ ಜೊನ್ನಮದಾತ್ಮಭಕ್ತಿರಸಮೇಂ ರುದ್ರಾಭಿಷೇಕಂ? ಸುಮಾ
    ರ್ಚನೆ ನಕ್ಷತ್ರಗಳಿಂ ನಭಾಗ್ರರುಚಿತಾಂ ದೀಪೂತ್ಸವಂ ಪೂಜೆಗೇಂ?
    ಜನಕಂ ಹರ್ಷತರಂಗಮಾಗೆ ನೆನೆದುಂ ಚೆಲ್ವಾಯ್ತು ಚಂದ್ರೋದಯಂ

    ಗಿರಿಶಿಖರಾಗ್ರದಲ್ಲಿ ಚಂದ್ರೋದಯ: ಸ್ವಚ್ಛಮಾನಸನಾದವನಿಗೆ ಮಚ್ಚೆಯಿದ್ದರೇನು? ಶೈಲವೆಂಬ ಶಿವಲಿಂಗಶಿರೋಭೂಷಣನಾಗಿ, ತನ್ನ ಬೆಳದಿಂಗಳ ಭಕ್ತಿರಸದ ರುದ್ರಾಭಿಷೇಕಕ್ಕೆ, ನಕ್ಷತ್ರಗಳೇ ಕುಸುಮಗಳಾಗಿ ಗಗನಭಾಗದ ವರ್ಣಮಯಕಾಂತಿಯೇ ದೀಪವಾಯಿತೇ? ತನ್ನ ಮಗನ ಸ್ವಾಮಿ ಭಕ್ತಿಯನ್ನು ಕಂಡು ಸಾಗರ ಉಬ್ಬಿಹೋಗಿ ಅಲೆಗಳಾಗಿ (ಜನಕಂ- (ಚಂದ್ರನ ತಂದೆ ಸಾಗರ) ಹರ್ಷತರಂಗಮಾಗೆ) ನೆನೆಯುತ್ತಾ ನೆನೆದುಹೋದ. ಜನರಿಗೂ ಚಿತ್ತಸಾಮ್ರಾಜ್ಯ ಚಕ್ರವರ್ತಿಯಾದ ಚಂದ್ರನಿಂದ ಪ್ರೇಮಾನುರಾಗ ತರಂಗಗಳು ಎದ್ದು (ಜನಕಂ- ಜನಕ್ಕೂ ಹರ್ಷತರಂಗಮಾಗೆ) ನೆನಪುಗಳಲ್ಲಿ ಮನಸ್ಸು ಮುಳುಗಿ, ಒದ್ದೆಯಾಗಿ, ರಸಭರಿತವಾಗಲು.. ಚೆಲ್ವಾಯ್ತು ಚಂದ್ರೋದಯಂ

  13. Can anybody tell me how to edit or delete a comment in padyapaana ?

    • Authors (of posts), Editors and Administrators can modify comments. Others cannot 🙁

    • ಒಪ್ಪಣ್ಣ ಅವರ ಸಲಹೆಯ ಮೇರೆಗೆ, ಒಂದು ಹೊಸ plug-in ಅನ್ನು ಈ ತಾಣಕ್ಕೆ ಅಳವಡಿಸಲಾಗಿದೆ. ಈ ಕಾರಣದಿಂದ, comment ಹಾಕಿ ಒಂದು ದಿನದವರೆಗೆ, ಅದನ್ನು ಬದಲಾಯಿಸಲು ಅವಕಾಶವಿದೆ. ಹಾಕಿದ comment ನ್ನು ತೆಗೆಯಲೂ ಅವಕಾಶವಿದೆ.
      ಈ ತಾಣವನ್ನು ಉಪಯೋಗಿಸುವಲ್ಲಿ, ಇನ್ನೇನಾದರೂ ತೊಂದರೆಗಳಿದ್ದಲ್ಲಿ, ದಯಮಾಡಿ ತಿಳಿಸಿರಿ (rkekkar@gmail.com)

  14. ಇದುದಲ್ ತಂಬೆಲರಾಗಸಕ್ಕೆ ಮೆರುಗಂ ಮೇಘಂಗಳಿತ್ತಿರ್ಪುವಯ್
    ಪೊದೆವಳ್ ಸಿಂಧುವನದ್ರಿಯಂ ತೊಡುವಳಯ್ ಭೂದೇವಿ ಬಲ್ಚಂದದಿಂ
    ಮೊದಲೀ ಪುಷ್ಪಕಮೇರ್ದ ಪೊತ್ತು ಕಳೆಯಲ್ಕಾನಿನ್ನೆಗಂ ಕಾಣದಾ
    ಮುದಮಂ ವೀಕ್ಷಿಪೆನಾಣ್ಮನಿಂದೆ ಮನದೊಳ್ ಚೆಲ್ವಾಯ್ತು ಚಂದ್ರೋದಯಂ

    ಸೀತೆಯು ಎರಡನೆಯ ಬಾರಿ ಪುಷ್ಪಕವನ್ನೇರಿದಾಗ ಅಂದರೆ ರಾಮನೊಡನೆ ಪುಷ್ಪಕವನ್ನೇರಿದಾಗ ಅವಳಮನದ ಭಾವನೆ. ಸೀತಾಪಹರಣವಾದನಂತರ ಈಗ ಮೊದಲಬಾರಿ ಪ್ರಕೃತಿಯ ಸೊಬಗನ್ನು ಮತ್ತೆ ಮೆಚ್ಚುವ ತನ್ನಮನವನ್ನು ತಾನೇ ಗಮನಿಸಿದಳೆಂಬ ಭಾವ

    • ಪ್ರಿಯ ಸೋಮ,

      ಒಳ್ಳೆಯ ಶೈಲಿ. ಆದರೆ ಕೆಲವೊಂದು ಹಳಗನ್ನಡದ ನಿಟ್ಟಿನಿಂದ ಒಂದೆರಡು ವ್ಯಾಕರಣದ ತಿದ್ದುಪಡಿಗಳು ಬೇಕಾಗಿವೆ. ಸಿಂಧುವನ್, ಕಳೆಯಲ್ಕಾನಿನ್ನೆಗಂ, ಮುದಮಂ ವೀಕ್ಷಿಪೆನ್…… ಇತ್ಯಾದಿ ಸಾಧುರೂಪಗಳು ಉಪಾದೇಯ.

      • ಗಣೇಶ್ ಸರ್ ಧನ್ಯವಾದಗಳು, ಮೂಲದಲ್ಲೇ ಸರಿಪಡಿಸಿದ್ದೇನೆ 🙂

  15. ಧನಮಂ ಕಂಡವೊಲಪ್ಪುಗುಂ ಮನುಜಗಂ ಸತ್ಪಾತ್ರರಾಸಂಗದಿಂ
    ಸನಿಹಂ ಸಾರ್ದು ಬರಲ್ಕೆ ಸದ್ಗೆಣೆಯ ತಾಮಾನಂದ ಮೈದೋರದೇಂ
    ಜಿನುಗಲ್ಕಾಗಸದಿಂದ, ಧಾರಿಣಿಯು ತಾಂ ಪೂದಾಳುತುಂ ಹರ್ಷಿಪಳ್
    ಹನಿಸಲ್ ತಾರೆಗಳಂಬರಂ ನಲಿದರಿಂ ಚೆಲ್ವಾಯ್ತು ಚಂದ್ರೋದಯಂ

    [ಸದ್ವಸ್ತುಪ್ರಾಪ್ತಿಯಿಂದ ಉಲ್ಲಾಸವು ವ್ಯಕ್ತವಾಗುದಷ್ಟೆ. ಅಂಬರದಲ್ಲಿ ತಾರೆಗಳ ಮಳೆ ಸುರಿದಾಗ, ಅಂಬರದಾನಂದವು ಚೆಲ್ವಾದ ಚಂದ್ರೋದಯವಾಗಿ ತೋರ್ಪಟ್ಟಿದೆ ಎಂಬ ಭಾವ]

  16. ಬೆಳದಿಂಗಳ ರಾತ್ರಿಯಲ್ಲಿ ನಾಚಿಕೆ ಗಿಡದ ಮೇಲೆ ಮಂಜು ಸುರಿದಾಗಿನ ಸನ್ನಿವೇಶ,ಇದೊಂದು ಹೊಸಗನ್ನಡ ಮಿಶ್ರಿತ ಪ್ರಯತ್ನವಷ್ಟೆ, ಕೃಪಯಾ ಪರಿಗ್ರಹಿಸಿ ಸುಧಾರಿಸುವುದು

    ತಿಳಿನೀಲಾಗಸದಂಚಿನಲ್ಲಿ ಬರೆದಾ ಢಾಳಾದ ಚಿತ್ರಂಗಳಾ
    ಹೊಳೆವಾಚಂದವ ನೋಡಿ ನಾಚಿ-ಕೆಗಿಡಂ ಬಾಗಿಟ್ಟು ಪತ್ರಂಗಳಾ
    ಇಳೆಯಾಯ್ತಾಗಲೆ ನಾಕ ಮಂಜು ಗರೆಯಲ್ ತಂಗಾಳಿ ಸುಂಯ್ಯೆನ್ನುತಾ
    ಭಳಿರೇ ನೀರವ ರಾತ್ರಿಯೊಳ್ ಸರಸವೂ ಚೆಲ್ವಾಯ್ತು ಚಂದ್ರೋದಯಂ

  17. ನವದಾಂಪತ್ಯದ ಮೋದದಿಂ ಯುಗಳರೊಳ್ ಭೋಗಂಗಳಂ ಪ್ರೇಮದಾ
    ಛವಿಯಿಂ ಕಟ್ಟಿಡುವಾಟ ಸಾಗೆ ಸತಿತಾಂ ಲಜ್ಜಾಭಿಶಿಕ್ತಳ್ ಗಡಾ |
    ಜವುಗುತ್ತಿರ್ದುದು ಸಾಂದ್ರ ಸಗ್ಗದ ಸೊಗಂ ವಿಶ್ವಾತ್ಮಚಿತ್ತಾಗುತುಂ
    ನವುರಾಗೆತ್ತಿರಲಾ ಮನೋಹರ ಮೊಗಂ ಚೆಲ್ವಾಯ್ತು ಚಂದ್ರೋದಯಂ ||

    [ಜವುಗು = ಜಿನುಗು]
    [ವಿಶ್ವಾತ್ಮಚಿತ್ = ಆ ಪ್ರೇಮಿಗಳ ಸೊಗವೇ ವಿಶ್ವಾತ್ಮದ ಕೇಂದ್ರವಾಯಿತೆಂಬ ಭಾವ. Ref – ಕುವೆಂಪು :-)]

  18. ಕಿಸಿಯುತ್ತುಂ ಕಡುಕಷ್ಟಕೋಟಲೆಗಳಂ ಮೆಲ್ಲುತ್ತಲಾಸ್ವಾದಿಪರ್
    ಪೊಸೆಯಲ್ ಬೈಗುಳ ಕಾಯುತಿರ್ಪರಕಟಾ ಗಾಯಂಗಳಂ ತೀಡುತುಂ
    ರಸಮೀಂಟಲ್, ವಿರಹಾದಿ ಬಂಧುರಗಳಂ ಕಾವ್ಯಂಗಳೊಳ್ ಪೆರ್ಚಿಸಲ್,
    ಪಸಿದಿರ್ಪರ್ಗೆಡೆಯಿತ್ತ ಭೋಜನದವೊಲ್ ಚೆಲ್ವಾಯ್ತು ಚಂದ್ರೋದಯಂ

    [ಕಿಸಿ = ಅಗಲವಾಗಿಸು]
    [ಬಂಧುರ = ಸುಂದರವಾದ, ಚೆಲುವಾದ ಅಲ್ಲದೆ, ನೋವುಂಟುಮಾಡುವ ಎಂಬರ್ಥವೂ ಇದೆ]
    [ಕರುಣ ರಸವನ್ನು ಹೆಚ್ಚಿಸಬಯಸುವವರಿಗೆ, ಚಂದ್ರೋದಯ ಚೆಲುವಾಯ್ತು ಎಂಬ ಭಾವ]

  19. ಪ್ರಿಯ ಬಂಧು ಗಣೇಶ, ಸರಿಪಡಿಸುವ ಯತ್ನ :

    ದೀನೇ ಜೀವನದುಸ್ತರಾಸ್ತಮಯನೇ ಗಾಢಾoಧಕಾರಾವೃತೇ
    ಮಾತಸ್ತ್ವಂ ಶರಣಾಗತೇ ಮಯಿ ಕೃತೋ ಕಾರುಣ್ಯಪೂರ್ಣೋಜ್ವಲಃ ।
    ನೂನಂ ದೀರ್ಘತರಾಂಧಕಾರಭಿದುರೋ ಭಕ್ತ್ಯೈಕದೀಪ್ತೋ ಧಿಯಾಂ
    ಅಂಬ ತ್ವತ್ಪದಪಂಕಜಾತಿರುಚಿರೋ ಚಂದ್ರೋದಯೋ ರಾಜತೇ ॥

    ಜೀವನ ಸಂಧ್ಯಾಕಾಲದಲ್ಲಿ ನನ್ನ ಮನಸ್ಸಿನಲ್ಲಿ ನಿನ್ನ ಪಾದಾರವಿಂದಗಳ ಆವಿರ್ಭಾವವೆಂಬ ಚಂದ್ರೋದಯವು ರಾಜಿಸುತ್ತಿದೆ ಎಂದು ಭಾವಾರ್ಥ.

    ನನ್ನೂರು ಮಾಳಗ್ರಾಮ. ಪರಿಚಯಕ್ಕೆ sriramadongre@yahoo.com test mail ಕಳುಹಿಸಿರಿ.

    • ಸನ್ಮಾನ್ಯ ಡೋಂಗ್ರೆಯವರೇ, ಯಾಕೋ ನೀವು ಶತಾವಧಾನಿಗಳಿಗೆ ’ಗಣೇಶ’ ಎಂದು ಬರೆಯುವುದು ನನಗೆ ಸರಿಬರುತ್ತಿಲ್ಲ, ದಯಮಾಡಿ ಅವರ ಸ್ಥಾನಕ್ಕೆ ಸಲ್ಲಬೇಕಾದ ಗೌರವವನ್ನು ಅರ್ಪಿಸುವುದಾಗಿ ನಂಬಿರುತ್ತೇನೆ.

      • ಸಲಹೆ ಸ್ವೀಕರಿಸಿದ್ದೇನೆ . ಧನ್ಯವಾದಗಳು .

        • ಪ್ರಿಯ ಭಟ್ಟರೇ! ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. ಆದರೆ ನಾನು ಕೇವಲ ಗಣೇಶನೆಂದೇ ಕರೆಸಿಕೊಳ್ಳಲು ಇಷ್ಟಪಡುತ್ತೇನೆ:-) ದಯಮಾಡಿ ಶ್ರೀ ಡೋಂಗ್ರೆಯವರಲ್ಲದೆ ಎಲ್ಲರೂ ನನ್ನನ್ನು ಹೀಗೆ ಸರಳವಾಗಿ ಕರೆದರೆ ಒಳಿತು.
          ಪದ್ಯಪಾನದಲ್ಲಿ ನನ್ನ ಸ್ಥಾನ ಕೇವಲ ಒಬ್ಬ ಪದ್ಯಪಾನಿಯಾಗಿ ಮಾತ್ರ. ಉಳಿದದ್ದೆಲ್ಲ ಬರಿಯ ಆಕಸ್ಮಿಕ, ಆಗಂತುಕ.

          • ಪ್ರಿಯ ಗಣೇಶರೆ ಹಾಗೂ ಪದ್ಯಪಾನ ಮಿತ್ರರೇ

            ಗಣೇಶರ ಸೌಜನ್ಯ ಮತ್ತು ಸಹೃದಯತೆಗಳಿಗೆ ಅವರ ಈ ಮಾತು ನಿದರ್ಶನವಾಗಿದೆ. ಪಾಶ್ಚತ್ಯದೆಶದಲ್ಲಿರುವ ನನಗೆ ಇಲ್ಲಿಯ ಸಂಸ್ಕೃತಿಯ ಈ ವಿಷಯ ಬಹಳ ಅನುಕರನೀಯವೆನಿಸಿದೆ . ಇಲ್ಲಿ ಪ್ರಿಯರಾದ ವ್ಯಕ್ತಿಗಳನ್ನು ಅವರ ಪ್ರಥಮ ಹೆಸರಿನಿಂದಲೂ ಪರಿಚಯವಿಲ್ಲದವರನ್ನು sir / mister so and so ಎಂದೂ ಕರೆಯುವುದು ವಾಡಿಕೆ .ಈ ಮಾತನ್ನು ಗಣೇಶರು ಅನೇಕ ಬಾರಿ ಒತ್ತಿ ಹೇಳಿ ನನಗೆ ಮತ್ತಷ್ಟು ಪ್ರಿಯರಾಗಿದ್ದಾರೆ. Truly greatness comes in a cloak of modesty.

    • ಅನವದ್ಯಮಿದಂ ಪದ್ಯಂ ಹೃದ್ಯಾರ್ಥಸ್ಫುರಿತಂ ತಥಾ|
      ಉಚ್ಯತಾಂ ಪರಿಚಿತ್ಯುಕ್ತಿರ್ಯಾವಚ್ಛೀಘ್ರಂ ಹಿತಂ ಮಿತಮ್||

  20. ಶಾರ್ದೂಲವಿಕ್ರೀಡಿತದಲ್ಲೊಂದು ಪ್ರಯತ್ನ:

    ಸೀತಾಮಾತೆಯ ಕಾಣಪೋದ ಹನುಮಂ ಕಂಡಾಕೆಯಂ ರಾತ್ರಿಯಲ್
    ಮಾತೊಂದಾಡದೆ ಮುನ್ನಮೇ ತೆಗೆಯುತುಂ ಪೊನ್ನುಂಗುರಂ ಮುದ್ರೆಯಂ
    ತಾ ತಂದಿರ್ಪುದ ತೋರಿ “ರಾಮ ಬರುವನ್” ಎನ್ನುತ್ತ ಸಂತೈಸಿರಲ್
    ಹಾ! ತಂಪಾದುದು ತಾಪಗೊಂಡ ಮನಮುಂ! ಚೆಲ್ವಾಯ್ತು ಚಂದ್ರೋದಯಂ !

    (ಸುಂದರ ಕಾಂಡದಲ್ಲಿ ಸೀತೆಯನ್ನು ಅಶೋಕ ವನದಲ್ಲಿ ಹನುಮ ಕಂಡು ಅವಳಿಗೆ ಮುದ್ರೆಯುಂಗುರ ವನ್ನು ತೋರಿ, ರಾಮ ಬರುವನೆಂಬ ಮಾತನ್ನು ಹೇಳಿದಾದ ಸೀತೆಯ ಮನಸ್ಸೂ ತಂಪಾಗಿ, ಆಗ ಉದಯಿಸುತ್ತಿದ್ದ ಚಂದ್ರನೂ ಸೊಗಸಾಗಿ ಕಂಡ)

    ಮೂರನೇ ಸಾಲಿನಲ್ಲೊಂದು ವಿಸಂಧಿಯಿದೆ. ಯತಿ ಸ್ಥಾನವಾದ್ದರಿಂದ ಹಾಗೇ ಇಡಬಹುದೆಂದು ಭಾವಿಸಿ ಇಟ್ಟಿದ್ದೇನೆ. ಅಲ್ಲದೆ ಹಳೆಗನ್ನಡದ ಬಳಕೆ ಸೊರಗಿದೆಯೆಂದೂ ತೋರುತ್ತಿದೆ. ಪದ್ಯಪಾನಿಗಳ ವಿಮರ್ಶೆಯನ್ನು ಎದುರು ನೋಡುತ್ತಿರುವೆ.

    • ಮೊದಲ ಸಾಲು ಹೀಗೆ ಬದಲಾಯಿಸಿದರೆ ಹಳೆಗನ್ನಡಕ್ಕೆ ಹೆಚ್ಚು ಸರಿಹೋಗಬಹುದೇನೋ ಅಲ್ಲವೆ?

      ಸೀತಾಮಾತೆಯ ಕಾಣಪೋದ ಹನುಮಂ ಕಂಡಾಕೆಯಂ ರಾತ್ರಿಯೊಳ್

  21. ॥ ಮತ್ತೇಭವಿಕ್ರೀಡಿತ ॥

    ಸತಿ ಚಿನ್ನಾಂಬಿಕೆ ಮಾಘದೊಂದಿರುಳೊಳಾ ಪಂಪಾನದೀ ತೀರದೊಳ್
    ಮತಿಯೊಳ್ ಬೇಡುತ ರಾಯನಾವಿಜಯಮಂ ತಾ ಚಿಂತಿಸುತ್ತಿರ್ದಪಳ್
    ಸ್ಮೃತಿಯೊಳ್ ವೇಂಕಟನಾಥನಂ ಬಗೆದಿರಲ್ ಬಂದೋರ್ವ ದೂತಂ ಸುಸಂ-
    ಗತಿಯಂ ಪೇಳ್ದೊಡನಾಕೆಗಾದುದು ಮುದಂ! ಚೆಲ್ವಾಯ್ತು ಚಂದ್ರೋದಯಂ!

    ಹಿನ್ನಲೆ: ಹದಿನೈದನೇ ಶತಮಾನದ ಕಥೆ – ಕೃಷ್ಣದೇವರಾಯನು ಯಾವುದೋ ಯುದ್ಧಕ್ಕೆ ಹೋಗಿರುವಾಗ, ಅವನ ಮಡದಿ ಚಿನ್ನಾದೇವಿಯು ಒಂದು ಸಂಜೆ ತುಂಗಭದ್ರೆಯ ದಡದಲ್ಲಿ ಪತಿಗೆ ಗೆಲುವಾಗಲೆಂದು ದೇವರನ್ನು ಬೇಡುತ್ತಿರುವಾಗಲೇ ದೂತನೊಬ್ಬ ಬಂದು ಒಳ್ಳೆಯ ಸುದ್ದಿ (ಪತಿಯ ಗೆಲುವನ್ನೋ, ಊರಿಗೆ ಮರಳುತ್ತಿರುವುದನ್ನೋ) ಹೇಳಲಾಗಿ, ಆಗ ಉದಯಿಸುತ್ತಿದ್ದ ಚಂದ್ರ ಆಕೆಗೆ ಸೊಗಸಾಗಿ ಕಂಡನು! – ನನ್ನ ಕಲ್ಪನೆಯ ಸಂದರ್ಭವಷ್ಟೇ

    (ಈ ಪದ್ಯವನ್ನು ಬರೆಯುವಾಗ ಸವರಣೆಗಳನ್ನು ಮಾಡಿದ ಜೀವೆಂ ಅವರಿಗೆ ನಾನು ಆಭಾರಿ)

    • ಹಂಸಾನಂದಿಯವರೇ! ಪದ್ಯವು ಸೊಗಸಾಗಿದೆ. ಒಳ್ಳೆಯ ರಸಸ್ಫೂರ್ತಿಯ ಕಲ್ಪನೆ. ಧನ್ಯವಾದಗಳು.

    • hamsAnandiyavarE tumbA chennAgide

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)