Apr 292013
 

ಈ ಬಾರಿಯ ಸಾಮೂಹಿಕ ಕಥಾರಚನೆಯ ವಿಷಯ :: “ರಾಮ, ಲಕ್ಷ್ಮಣ ಹಾಗೂ ಸೀತೆಯರು ವನವಾಸಕ್ಕೆಂದು ಅಯೋಧ್ಯೆಯಿಂದ ತೆರಳಿದ್ದು“. ವನವಾಸಕ್ಕೆ ತೆರಳುವುದೇ ಹೌದೆಂದು ರಾಮ ನಿರ್ಧಾರ ಮಾಡಿದ್ದಾನೆ ಎಂಬಲ್ಲಿಂದ ತೆಗೆದುಕೊಂಡು, ಅಯೋಧ್ಯೆಯನ್ನು ದಾಟುವ ವರೆವಿಗು ಕಥೆಯನ್ನು ತೆಗೆದುಕೊಂಡೊಯ್ಯೋಣ.

ಈ ಕಥೆಯಲ್ಲಿ, ಲಕ್ಷ್ಮಣ ಹಾಗೂ ಸೀತೆಯರು ತಾವೂ ಬರಬೇಕೆಂದು ಹಠ ಮಾಡಿದ್ದು, ಅವರನ್ನು ನಿರಾಕರಿಸುವುದಕ್ಕೆ ರಾಮ ಮಾಡಿದ ಪ್ರಯತ್ನ, ಹೋಗಬೇಡ ಎಂದು ಕೆಲವರು ದುಂಬಾಲು ಬಿದ್ದದ್ದು, ಅಯೋಧ್ಯೆಯ ಪ್ರಜೆಗಳು ಹಿಂಬಾಲಿಸಿದ್ದು, ಎಲ್ಲವನ್ನು ವಿಷಯಕ್ಕೆಂದು ತೆಗೆದುಕೊಳ್ಳಬಹುದು.

ಎಂದಿನಂತೆ, ನಿಧಾನವಾಗಿ ಅನೇಕ ವರ್ಣನೆಗಳಿಗೆ ಅವಕಾಶವಿಟ್ಟುಕೊಂಡು ಬರೆಯೋಣ. ಯಾವ. ಛಂದಸ್ಸು ಬೇಕಾದರೂ ಆಯ್ದುಕೊಳ್ಳಬಹುದು.

[ಈ ವಿಷಯಕ್ಕೆ  ಸಾಮೂಹಿಕವಾಗಿ ನ್ಯಾಯ ಒದಗಿಸಬೇಕೆಂದರೆ, ೨ ವಾರಗಳಷ್ಟಾದರೂ ಬೇಕಾದೀತು – ಆದುದರಿಂದ ಈ ಕಂತಿಗೆ ಪದ್ಯ ಸಪ್ತಾಹದ ಬದಲು ಪದ್ಯ ಪಕ್ಷ ಎಂದಾದರೂ ಹೇಳಬಹುದು. ಕಥೆ ಹೇಗೆ ಬೆಳೆಯುತ್ತದೆ ಎಂದು ನೋಡೋಣ.]

  129 Responses to “ಪದ್ಯಸಪ್ತಾಹ – ೬೮: ಸಾಮೂಹಿಕ ಪದ್ಯ ಕಥಾ ರಚನೆ”

  1. ಶ್ರೀಮದ್ರಾಜ್ಯಪ್ರಾಜ್ಯ-
    ಪ್ರೇಮಾಯತನಂ ವಿವಾಸ್ಯಮೆಂದರಿಯುತ್ತುಂ|
    ಸೌಮಿಕಶಾಂತಿಯಿನಟವೀ-
    ಸೀಮೆಗೆ ತಾನಾದ ರಾಮನವನಭಿರಾಮಂ||

    ನುಡಿಯೌ ನುಡಿವೆಣ್ಣೇ! ನೀನೊಡೆದೀತೆಂದೆಂಬ ಶಂಕೆಯಿಲ್ಲದೆ ಹೃದಯಂ|
    ಪಿಡಿದಿರೆ ವಿಧಿ ರಾಮಕಥೆಯ ಕುಡಿಯಂ, ಮಿಡಿಯಲ್ಕೆ ತಳುವಲಾರ್ಪರೆ ಕವಿಗಳ್||

  2. ನಡೆದಿರಲು ಹುನ್ನಾರು ತಡೆಯುವವರಿನ್ನಾರು
    ಕೊಡಲು ಕಾಡಿರಲು ಕಾಡಿನದೆ ಕೊಡುಗೇ।
    ಪಡಕೊಂಡುದಾರಿಲ್ಲಿ ಕಳಕೊಂಡುದೇನಲ್ಲಿ
    ಕಡೆಗೆ ಕಾಡಿನ ಕಡೆಗೆ ಕಾಲನಡಿಗೇ ॥

    (ರಾಮನಿಗೆ ವನವಾಸ ಒದಗಿದ ಪ್ರಸಂಗದ ಸಂಕ್ಷಿಪ್ತ ವಿವರೆಣೆ )

  3. ತಾಯ ಕಂಗಳು ತುಂಬಿ ತುಳುಕಿವೆ
    ಗಾಯಗೊಂಡಿದೆ ಹೆಣ್ಣು ಹೃದಯವು
    ಬೇಯುತಿರ್ಪುದು ಮನವು ನೆನೆದೇ ಕುಡಿಯ ಕಾಡಿನೊಳು
    ರಾಯ ಹೂಡಿಹ ಹಠವ ನೋಡಿಯೆ
    ಮಾಯವಾಗಿದೆ ಮಂದಹಾಸವು
    ನೋಯುತಿರ್ಪಳು ಮನದೊಳಗೆಯೇ ಸಾಧ್ವಿಯೂರ್ಮಿಳೆಯು

  4. ಶ್ರೀಮತಿಯರಾದ ಉಷಾ ಮತ್ತು ಅದಿತಿಯರಿಬ್ಬರೂ ಬರೆದಿರುವ ಪದ್ಯಗಳು ಸೊಗಸಾಗಿವೆ. ಭಾವ-ಭಾಷೆಗಳೆರಡೂ ಹದವಾಗಿ ಹರಳುಗಟ್ಟಿವೆ. ಧನ್ಯವಾದಗಳು.

    ಇನ್ನೂ ಯಾರೂ ಕಥಾಭಾಗಕ್ಕೆ ನೇರವಾಗಿ ಬರದಿರುವ ಕಾರಣ ನಾನೇ ಮುಂದಾಗುತ್ತಿದ್ದೇನೆ:-)
    ಲಕ್ಷ್ಮಣ ಮತ್ತು ಸೀತೆಯರು ರಾಮನೊಡನೆ ಕಾಡಿಗೆ ಸಾಗಲು ಉದ್ಯುಕ್ತರಾದ ಪರಿ:

    ರಾಮಂ ಸಾಗಿರೆ ಸಂಜೆಗೆಂಪಿನ ಲಸದ್ಭಾನುಪ್ರತೀಕಂ ವನಾ-
    ರಾಮಂ ಲಕ್ಷ್ಮಣನಾತನಂ ದಿನದವೊಲ್ ಪಿಂಬಾಲಿಸಲ್ ನೋಂತಿರಲ್
    ಪ್ರೇಮಸ್ಥೇಮದ ಜಾನಕೀಸತಿ ನೆಳಲ್ವೊಲ್ ಬರ್ಪೆನೆಂದೊಪ್ಪಿಸಲ್
    ಸೀಮಾತೀತನಿಶೀಥವೇದನೆಗೆ ತುತ್ತಾದತ್ತಯೋಧ್ಯಾಪುರಂ

    • ರಮ್ಯಂಬೀಸಹಜೋಪಮಾನ ರಚನಾವೈಚಿತ್ರಚಿತ್ರಂಭಳಾ !

  5. ಪೋಗೆನ್ನಲ್ಕಾ ಮಾತೆ ಸಾಮ್ರಾಜ್ಯಮೆಲ್ಲಂ
    ತ್ಯಾಗಂ ಗೈದಂ ತೊಟ್ಟು ನಾರ್ವಟ್ಟೆಯಂ ಮೇಣ್
    ಸಾಗಿರ್ಪಂ ದೂರಂ ಸುತಂ ತಂದೆಯಿಂದಂ
    ರೋಗಗ್ರಸ್ತಂಗಾಯುವೊಲ್ ಕಾನನಕ್ಕಂ
    _ _ _ _ _U_ _U_ _

    ಇದು ಯಾವ ಛಂದಸ್ಸು?

    • ಇದು ಶಾಲಿನೀ ಅಲ್ಲವೇ?

      • Raghavendra,

        While coming to office in the morning, was thinking about this and I too realized that it is the chaMdas of ‘EkO devaH kEshavOvA shivOvA’ and also ‘nana nana’ padya of shatAavadhAna on jayachamarajEndra woDeyar. Also bApaT used it for garbha chitra along with mandAkraMta chandas… but the chaMdas name was not coming to mind. Thanks for clarifying that. This is my first padya in shAlini 🙂

    • ಒಳ್ಳೆಯ ಪದ್ಯ; ಸೊಗಸಾದ ಅಲಂಕಾರವು ನಾಲ್ಕನೆಯ ಸಾಲಿನಲ್ಲಿದೆ. ಶಾಲಿನಿಯು ಗಂಭೀರವೂ ವಿಷಣ್ಣವೂ ಆದ ಸಂದರ್ಭಗಳಿಗೆ ಹೊಂದುವ ವೃತ್ತ.

  6. ತಂದೆಯಿಂ ವಾಕ್ಯಮಂ ಕೇಳಿ ಸಂತೋಷದಿಂ
    ಸ್ಪಂದಿಸಲ್ ತಾಯಿಯಾಕ್ರೋಷಕಂ ಸತ್ಸುತಂ
    ವಂದಿಪಂ ರಾಮತಾನ್ ಭಕ್ತಿಯಿಂ ಪಾದಗಂ
    ತಂದೆತಾ ಮೌನದಿಂ ರೋದಿಪಂ ಸರ್ವದಾ

    • ಘಟನಾವಳಿಯ ಚಿತ್ರಣ ಚೆನ್ನಾಗಿದೆ. ಪಾದ ಏಕವಚನವಾದಾಗ ಪಾದಕಂ ಆಗುವುದು. ರೋದಿಪಂ ಸರ್ವದಾ ಎಂಬುದಕ್ಕಿಂತ ರೋಧಿಪಂ ಶೋಕದಿಂ ಎಂದು ಮಾಡಬಹುದೇನೊ.

  7. ಮೋಡ ಮುಸುಕಿದ ರವಿಯ ತೆರದಲಿ
    ನಾಡಲೆಲ್ಲರ ಮೋರೆ ಬಾಡಿದೆ
    ಕಾಡಿ ಚಿಂತೆಯು ಭೂತ ರೂಪದಿ ಮುಂದೆ ಹೇಗೇನೋ
    ನೋಡುತಿದ್ದಿಹ ಕೆಲರು ತಾಳದೆ
    ಮಾಡಿ ನಿರ್ಣಯ ಹಿಂದೆ ಹೋದರು
    ಕಾಡ ಜಾಡಲಿ ರಾಮ ಬಳಗವು ಮುಂದೆ ಹೋದಂತೆ

  8. ಕಥೆ ಬೆಳೆಯುವ ಮೊದಲೇ ಈ ಪದ್ಯವನ್ನು ಬರೆಯಬೇಕೆಂದಿದ್ದರೂ ಆಗದೇ ಹೋಯ್ತು – ಇದು ರಾಮ ಕಾಡಿಗೆ ಹೋಗಬೇಕಾದ ವಿಷಯವಿನ್ನೂ ಸೀತೆಗೆ ತಿಳಿಯುವುದಕ್ಕೆ ಮುಂಚಿನ
    ಕಥಾ ಭಾಗ. ಸಖಿಯರೊಡನೆ ಮಾತಾಡುತ್ತಲಿರಲು, ಸೀತೆ ಅವರು ಅಲ್ಲಿಟ್ಟಿದ್ದ ನಾರು ಮಡಿಯೊಂದನ್ನು ಕಂಡು, ತಾನು ಅದನ್ನು ಉಟ್ಟು ನೋಡಬೇಕೆಂದು ಆಸೆ ಪಟ್ಟು ಉಟ್ಟಳು.

    ಸರಸದಲ್ಲಾ ಹಗಲು ಸೀತೆಯು
    ಹರಟುತಲಿ ಗೆಳತಿಯರ ಸಂಗಡ
    ವಿರಲು ಕಂಡಳು ನಾರು ಮಡಿಯನು ಮಡಿಸಿಯಿಟ್ಟಿಹುದ |
    ಹರುಷದಲಿ ತಾನುಟ್ಟು ನೋಡುವೆ
    ವಿರಳವಿದೆನಗೆ ಸೊಗಸಿತೆಂದಳು
    ಬರಿಯ ಪೀತಾಂಬರವನುಟ್ಟೆನಗಾಯ್ತು ಬೇಸರವು ||

    (ಮೊದಲು ಬರೆದಿದ್ದ – ವಿರಲು ಕಂಡಳು ನಾರು ಮಡಿಯ ಸೀರೆಯೊಂದನ್ನು |ಎಂಬ ಕೊರೆಯಿದ್ದ ಸಾಲನ್ನು ಬದಲಿಸಿದ್ದೇನೆ)

    ಆಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ರಾಮ ತಾವು ಕಾಡಿಗೆ ಹೋಗಬೇಕಾದ ವಿಷಯವನ್ನು ಇನ್ನೂ ಸೀತೆಗೆ ತಿಳಿಸಬೇಕಿದೆ. ಈ ಸಂದರ್ಭ (ನನ್ನ ನೆನಪು ಸರಿಯಾಗಿದ್ದರೆ) ಭಾಸನ(ದೆನ್ನಲಾಗುವ) ಅಭಿಷೇಕ ನಾಟಕದಲ್ಲಿ ಬರುತ್ತದೆ.

    -ಹಂಸಾನಂದಿ

    • ಒಳ್ಳೆಯ ಪದ್ಯ. ಆನುಪೂರ್ವಿಯು ಹಿಂದುಮುಂದಾದರೂ ಅಡ್ಡಿಯಿಲ್ಲ. ಚೆಲುವಾದ ಕವಿತೆಗಳು ಹೊಮ್ಮಿದರೆ ಸಾಕು.
      ಇದು ಭಾಸನದೆಂದು ಪ್ರಸಿದ್ಧಿಯಿರುವ ಪ್ರತಿಮಾ ನಾಟಕದ್ದು; ಅಭಿಷೇಕದ್ದಲ್ಲ. ಮೂರನೆಯ ಪಾದದಲ್ಲಿ “ಮಡಿಯ” ಎಂಬಲ್ಲಿ ಒಂಡು ಮಾತ್ರೆ ಕಡಮೆಯಾಗಿದೆ. ದಯಮಾಡಿ ಸವರಿಸಿರಿ.

      • ಈಗ ಟಿಪ್ಪಣಿಗಳನ್ನು ತಿದ್ದುವ ಅನುಕೂಲವಾಗಿರುವುದು ಬಹಳ ಒಳ್ಳೆಯ ಸಮಾಚಾರ! ತಪ್ಪನ್ನು ತಿದ್ದಿದ್ದೇನೆ. ಪ್ರತಿಮಾನಾಟಕವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು ಗಣೇಶರೆ.

  9. ಕೈಕೇಯಿಗೂ ಮಂಥರೆಗೂ ರಾಮನ ವನಗಮನವು ಕಂಡ ಬಗೆ:

    ತಾಲಮಹಾತರುವೊಲ್ ಸುವಿ-
    ಶಾಲಂ ನಿಜತಂತ್ರಮೆಂದು ಖಳೆಯರ್ ತಿಳಿವರ್ |
    ಕಾಲಂ ವಿಪರಿಣಮಿಸೆ ಪುಂ-
    ತಾಲಂ ತಾನೆಂತು ಫಲಮನೀವುದು ಜಗದೊಳ್ ||

    ತಾಳೆಯ ಮರವು ಫಲವೀಯುವಂತೆ ತಮ್ಮ ತಂತ್ರವೂ ಫಲಿಸುವುದೆಂದು ಅವರಿಬ್ಬರೂ ಹಿಗ್ಗಿದರಾದರೂ ತಾಳವೃಕ್ಷಗಳಲ್ಲಿ ಪುಂ-ಸ್ತ್ರೀಭೇದವಿರುವ ಕಾರಣ ಮತ್ತು ಗಂಡುಮರವನ್ನು ಅದು ಬೆಳದ ಹೊರತೂ ಗುರುತಿಸಲಾಗದ ಕಾರಣ ನಿಷ್ಫಲವಾದ ಆ ಗೊಡ್ಡುಮರವನ್ನು ಕಂಡು ಗೋಳಿಡುವುದಷ್ಟೇ ಕಡೆಗೆ ಉಳಿಯುವುದೆಂದು ಪದ್ಯದ ಭಾವ.

    • ಗಣೇಶ್ ಸರ್, ಗೊಡ್ಡಾದ ಗಂಡು ತಾಳೆಮರಕ್ಕೆ ನೀರೆರೆದುದನ್ನು ತಿಳಿಯದೆ ಕೃತ್ರಿಮವೂ ಫಲಿಸಲಿಲ್ಲವೆಂಬ ಭಾವ ಬಹಳಚೆನ್ನಾಗಿದೆ.

  10. ಭಟನೊರ್ವಂಗಡ ಪೇಳ್ದನಿಂತು ಸತಿಗಂ ರಾಜ್ಯಾಭಿಷೇಕಕ್ರಿಯಾ-
    ತಟನೀ ಶಾಂತದೆ ತೋರ್ಗುಮೈದೆ ತೆರೆಗಳ್ ಭೋಯೆನ್ನುತಾಕ್ರೋಶದಾ-
    ರ್ಭಟಮಂ ಗೋಪ್ಯದೆ ಗೈಯುತಿರ್ದೊಡಲಿನೊಳ್ ಕಿಚ್ಚಿರ್ದುದಂ ಬಣ್ಣಿಪೆಂ-
    ತುಟು ಕೈಕೇಯಿಯು ಪಾಂಗಿನೊಳ್ ರಚಿಸಿದಾ ಕೀಳ್ಗಬ್ಬದಾವೇಶಮಂ

    ಅಂತ:ಪುರದ ಭಟ ಕೈಕೇಯಿಯ ಮತ್ತು ದಶರಥನ ಮಾತುಗಳನ್ನು ಕೇಳಿ ಹೆಂಡತಿಯೊಡನೆ ಇಂತೆಂದನು

    • ಅಮಮಾ! ಸೋಮನ ವಿಕ್ರಮಂ ದಿನದಿನಂ ತ್ರೈವಿಕ್ರಮೋದ್ಭಸಿ!! ವಿ-
      ಶ್ರಮಮಂ ನೀಗುತೆ ನಿತ್ಯಸಾಧನೆಯನೊಂದಂ ನೋಂತು ಕರ್ಣಾಟವಾ-
      ಗ್ರಮಣೀಪ್ರಾಕ್ತನಭೂಷಣಾವಳಿಯ ನಿರ್ಮಾಣಕ್ಕೆ ನಾಡಿಂಧಮೋ-
      ತ್ತಮಕೌಶಲ್ಯಮಹಲ್ಯಮಾಗೆ ಬಳೆದಿರ್ಕುಂ ಸಯ್ಯೆನಲ್ ಕಬ್ಬಿಗರ್

      ಸೋಮನ ಹಳಗನ್ನಡದ ಹದವು ಹೀಗೆ ಕಳೆಯೇರಿ ಕಾಳೂರಿ ಗಟ್ಟಿಗೊಳ್ಳುತ್ತಿರುವ ಪರಿಯನ್ನು ಕಂಡು ಹರ್ಷಿಸಿದ ನನ್ನ ಹಾರ್ದಿಕಾಭಿನಂದನೆಗಳು.
      ವಿ ಸೂ: ಇಲ್ಲಿ ಹಲಕೆಲವು (ಸಣ್ಣ ಪುಟ್ಟ) ಸವರಣೆಗಳು ಬೇಕಿವೆ. ಅವನ್ನು ನಾಳೆಯ ಮೃಚ್ಛಕಟಿಕದ ಅಧ್ಯಯನಗೋಷ್ಠಿಯ ಭೇಟಿಯಲ್ಲಿ ಸೂಚಿಸುತ್ತೇನೆ:-)

      • dhanyavAdagaLU Ganesh Sir,
        Will discuss with you about the corrections in tomorrow class 🙂

  11. Bhale!!

  12. ಸಿರಿಯಂ ತೊರೆದುಂ ನಡೆದನ್
    ಧರಣಿಜೆಯೊಡೆ ಕಾಡಿಗೆಂದು ದಶರಥಕುವರಂ |
    ಪಿರಿಯ ಸ್ಥಾನಕ್ಕೇರ್ದನ್
    ತಿರೆಯೊಳ್ ಪಿತನಾಣೆಯಂ ಬಿಡದೆ ಪಾಲಿಸುತಂ ||

    ತಿಳಿದೂ ಕಾಡ ಕಠಿಣತೆಯ
    ಬಳಿಯಿಂ ದೂರ, ನಲಿವಿಂ ನಡೆದನಾ ರಾಮಂ |
    ಎಳಸದೆ ಪೊರಟವು ಬೇಧವ –
    ನೆಳಸಲರೊಳ್ ಬಿರುಸುಗಲ್ಲಿನೊಳ್ಪಾದಂಗಳ್ ||

    [ಬಳಿ = ವಂಶ]
    [ಎಳಸು = ಬಗೆ, ಎಳೆಯ]

    • ಮೊದಲಿನ ಕಂದಂ ಭಾಷಾ-
      ಬಂಧದೆ ಮಾಕಂದದಂತೆ ಸುಮಧುರಮಿರೆ ಮ-
      ತ್ತೊಂದದು ಪಲವೆಡೆ ಶಿಥಿಲತ-
      ರಂಗಿಣಿವೊಲ್ ಗ್ರೀಷ್ಮತಪ್ತೆ ತೋರ್ದಪುದೆಂಬೆಂ 🙂

      • Thank you, Ganesh Sir. I wish to do better next time.

        • ನಾನು ಮೊದಲ ಪದ್ಯದ ಭಾಷೆ-ಭಾವಗಳೆರಡನ್ನೂ ತುಂಬ ಮೆಚ್ಚಿಕೊಂಡಿದ್ದೇನೆ. ಎರಡನೆಯ ಪದ್ಯದ ಬಗೆಗೆ ಮಾತ್ರ ತುಸು ತಗಾದೆ:-)

          • ನಿಮ್ಮ ಇಂಗಿತ ಅರ್ಥವಾಗಿತ್ತು. ಎರಡನೆಯ ಪದ್ಯವನ್ನು ಸರಿಪಡಿಸಲಾಗದ್ದರಿಂದ ಮುಂದಿನಾವರ್ತದಲ್ಲಿ ಪ್ರಯತ್ನಿಸುತ್ತೇನೆ ಎಂದೆ, ಅಷ್ಟೆ. 🙂

  13. ಕಾನನದ ಹಾದಿಯೊಳ್ಬರುವ ಕಷ್ಟವತಿಳಿದು
    ಮಾನಸದೆ ಮಾಡಿದಳ್ ಸಂಕಲ್ಪವಾ
    ತಾನಾರಿಸಿದ ಪುರುಷನೊಡೆ ಪೋಪುವುದೆ ಲೇಸು
    ಹೀನರೋಡೆ ಬಾಳುವುದಕಿಂತಮಲ್ತೇ?

    ಸೀತೆಯ ತೀರ್ಮಾನ

    • ಪದ್ಯದ ಭಾವವು ಚೆನ್ನಾಗಿದೆ. ಅರ್ಥಾಂತರನ್ಯಾಸಾಲಂಕಾರವಿಲ್ಲಿ ಅರಳಿದೆ. ಆದರೆ ಭಾಷೆಯ ಹದ ಮತ್ತೂ ಪಾಕಗೊಂಡರೆ ಚೆನ್ನ. ಇದನ್ನು ಹೀಗೆ ಸವರಿಸಬಹುದು:

      ಕಾನನದ ಹಾದಿಯೊಳ್ ಬರ್ಪ ಕಷ್ಟಮನರಿತು
      ಮಾನಸದೆ ಮಾಡಿದಳ್ ಸಂಕಲ್ಪಮಂ|
      ತಾನೊಲ್ದ ಪುರುಷನೊಡನೇಗುವುದೆ ಲೇಸಲ್ತೆ
      ಹೀನರೊಡನಿರ್ಪ ಬಾಳ್ಗೇಂ ಬಾಗಿನಂ?

      • ಸವರಣೆಗೆ ಧನ್ಯವಾದಗಳು ಸಾರ್ 🙂 ಭಾಷೆಯ ಕಡೆ ಹೆಚ್ಚು ಗಮನಕೊಡುತ್ತೇನೆ…

  14. ಮುಡಿಕಟ್ಟಿ ನಾರಮಡಿಯುಟ್ಟು ಸಹಗಮನ ಸತಿ
    ಯೊಡನೆ ಸಹಜದೆ ಸಾಗೆ ಸಹಜಾತನುಂ ।
    ಮಡುಗಟ್ಟಲಾಗ ಮರುಗುಟ್ಟಿ ಸಹ ಜನಗಳೆದೆ
    ಯೊಡೆದು ಸನಿಹದೆ ಸಂದ ಸಹಜಾತ್ರೆಯುಂ ॥

    (ವನವಾಸಕ್ಕೆ ಹೊರಟ ರಾಮ,ಸೀತೆ,ಲಕ್ಷ್ಮಣರು ಮತ್ತು ಅಲ್ಲಿ ಮುತ್ತಿದ್ದ ದುಃಖತಪ್ತ ಜನಗಳ ಚಿತ್ರಣ)

  15. ಸಂಗಡ ಬರುತ್ತೇನೆಂಬ ಸೀತೆಗೆ ಬೇಡವೆನ್ನುವ ರಾಮನ [ಸ್ವಲ್ಪ ಅಶಕ್ತವಾದ] ವಾದ ::

    ವನವಾಸಕ್ಕೆನೆ ತಂದೆ ನೀಳ್ದ ವಚನಂ ಬೇರಾರಿಗುಂ ಸಲ್ಲ ಜೀ –
    ವನಮೇಕಾಂತದ ಮಾರ್ಗಮಲ್ತೆ ಮುಗುದೇ! ಕರ್ಮಾನುಸಾರಕ್ಕೆ ಕಾ –
    ನನಮೋ, ಸಾಗರಮಧ್ಯಮೋ, ಭವನಮೋ ಸಾಗೆನ್ನುತುಂ ಬೊಮ್ಮ ಲೇ –
    ಖನಿಯನ್ನಾಡಿಸಿ ಪೂಡಿಪಂ ಶರಗಳೊಲ್ ತೂಣೀರದಿಂದೆತ್ತುತಂ ||

    ನಲವಿಂ ಬಾಳಿದೆವಲ್ತೆ ಜೋಡಿ ತನುಗಳ್ ಮೇಣೇಕಮೇ ಜೀವದೊಲ್
    ಹಲವೇಕಾಂತದ ಕಾಲಮಂ ಕಳೆಯುತುಂ ಸಗ್ಗಕ್ಕೆ ಕಿಚ್ಚೊಟ್ಟುವೊಲ್ |
    ಕೆಲದೂರಕ್ಕಿರಲಪ್ಪುಗುಂ ಚದುರೆ ಕೇಳ್ ಸಂಸ್ಕಾರವೆಮ್ಮಾತ್ಮಕಂ
    ಜಲ ತಾನಬ್ಧಿಯ ಬಿಟ್ಟೊಡಂ ಮರಳದೇಂ ನೂರ್ಪಟ್ಟ ವಾತ್ಸಲ್ಯದಿಂ ||

    • ಅತಿಸುಂದರಭಾವಬಂಧುರಂ
      ಹಿತವೃತ್ತಾನ್ವಿತನೈಜವಾಚಿಕಂ |
      ಸತಿ ಸೀತೆಗೆ ರಾಮನೆಂಬುದಂ
      ಕೃತಕೃತ್ಯೋಕ್ತಿಯಿನಿಂತು ರೂಪಿತಂ ||

      ಸಹಜಸುಂದರಕವಿತೆ, ಲೋಕರೂಢಿಯ ನುಡಿತ,
      ಮಹಿತಮೋಹಕಮಾನುಷಾನುರಾಗ |
      ವಿಹಿತವೈದರ್ಭರೀತಿಯ ಸೌಖ್ಯಮುಂಸೇರ-
      ಲಹಹ! ಮೆಚ್ಚದರಾರು ರಾಮಚಂದ್ರ!!

      • ಮೆಚ್ಚುಗೆಗಾಗಿ ಧನ್ಯವಾದಗಳು. ವೈದರ್ಭ ರೀತಿ ಎಂದರೆ ಏನೆಂದು ತಿಳಿಯದು !

        • ಸಮಗ್ರಗುಣಾ ವೈದರ್ಭೀ

          ಓಜಸ್ಸು, ಪ್ರಸಾದ, ಮಾಧುರ್ಯ ಮೊದಲಾದ ಸಕಲಗುಣಗಳನ್ನೂ ಒಳಗೊಂಡಿರುವ ಕಾವ್ಯಪ್ರಕಾರವೇ ವೈದರ್ಭೀ ರೀತಿ.

          ಅಸ್ಪೃಷ್ಟಾ ದೋಷಮಾತ್ರಾಭಿಃ ಸಮಗ್ರಗುಣಗುಂಫಿತಾ|
          ವಿಪಂಚೀಸ್ವರಸೌಭಾಗ್ಯಾ ವೈದರ್ಭೀ ರೀತಿರಿಷ್ಯತೇ||

          ಯತಿ ಪಾಲಿತವಾಗಿರುವುದರಿಂದ ಒಳ್ಳೆಯ ಗೇಯಗುಣದಿಂದ ಕೂಡಿದ ರಚನೆ!

          ಧನ್ಯವಾದಗಳು .

          • ವಿವರಣೆಗಾಗಿ ಧನ್ಯವಾದಗಳು ಹಾಗೂ ಪದ್ಯಪಾನಕ್ಕೆ ಸ್ವಾಗತ 🙂

    • ಸೀತಾ ಉವಾಚ ::
      ಕಷ್ಟವನು ನಾ ಕಾಣೆನಾದರು
      ಇಷ್ಟ ದೇವನ ಕೂಡೆ ಬಾಳುವೆ
      ಸ್ಪಷ್ಟ ತಿಳುವಿನ ನಿಷ್ಠ ಬಗೆಯವಳೆಂದು ನೀಂ ಬಲ್ಲೆ |
      ದೃಷ್ಟದೊಳೆ ಸರ್ವರ್ಸ್ವವೆನಗಿರ –
      ಲಿಷ್ಟು ಭಯ ಕಾತರಗಳಿಲ್ಲವ –
      ದೃಷ್ಟವೆನ್ನಯ ಮುಷ್ಠಿಯೊಳು ತಾನಿರ್ಕು ಸಮ್ಮತದಿಂ ||

      ಶರವು ನೀನಾಗಿರ್ದೊಡಾಂ ತುದಿ –
      ಗರಿಯ ತೆರದೊಳೆ ಮಾರ್ಗಕಪ್ಪೆನು
      ಪರಿವ ಗಾಳಿಯನನುವು ಮಾಡುತೆ ಕರ್ಮಮಂ ಗೈವೆಂ |
      ಕರಕೆ ಕಂಕಣ, ಕೊರಳ ಭೂಷಣ,
      ಹರವಿನೆದೆಯೊಳು ಶುಭದ ಲಾಂಛನ –
      ವರಳೊ ಕಣ್ಣಿನ ನೋಟವಾಗುತೆ ತಂಪನೆರೆದಪೆನಾಂ ||

    • ಅಭಿನಂದನೆಗಳು ರಾಮಚಂದ್ರ ಸರ್,
      ಪದಕಟ್ಟೆ(ಮತಗಟ್ಟೆ)ಯಲ್ಲಿ “ಪದ್ಯ ಪಕ್ಷ”ವನ್ನು (ಪದ್ಯಪಾನ ಮಾಡಿಸಿ) ಗೆಲ್ಲಿಸಿದ್ದೀರ !!

    • ರಾಮ್ ಅವರ ರಾಮನವಾದಕ್ಕೆ ಸೀತೆಯ ಉತ್ತರ, ಕ್ರಮವಾಗಿ ಎರೆಡು ಪದ್ಯಗಳು

      ಕೈಪೆಯಿದಪ್ಪುಗುಮೆನಗುಂ
      ಕೋಪಂಗೈಯೆದೆನೆ ಕೇಳು ಗಾರ್ಹಸ್ತ್ಯಮನಾಂ
      ಸೈಪಿಂ ಪಾಲಿಪೆನೆಂದುಂ
      ತಾಪಮನೆಚ್ಚಲ್ಕೆ ವಿಧಿಯು, ಮಸುಳ್ವುದೆ ನೇಹಂ? -> ಶಿಥಿಲ ದ್ವಿತ್ವ

      ಕೈಪೆ – ಕಹಿ
      ವಿಧಿ – ಬ್ರಹ್ಮನ ಬರಹ
      ಎಚ್ಚು – ಪ್ರಯೋಗಿಸಲು

      ಸಲಿಲಮದಗಲ್ದು ಪೋಪುದು
      ಭಳಿರೆಂಬುವೊಲದು ಮರಳ್ದು ಸಂಧಿಪುದಲ್ತೇ
      ಛಲದಿಂ ಭಾಸ್ಕರನು ಮಹಾ-
      ಬಿಲದೊಳ್ ಪದಿನಲ್ಕು ಬರಿಸಗಳ್ ಬಂಧಿಪನೇಂ?

      ಮಹಾಬಿಲ – ಮೋಡ
      ಬರಿಸ – ವರ್ಷ

  16. ಪೋದಂ ರಾಮಂ ಪಿಂತೆ ಪೋದತ್ತು ಮೋದಂ
    ಪೋದಳ್ ಸೀತಾ ಪಿಂತೆ ಸೌಭಾಗ್ಯಮುಂ ಹಾ
    ಪೋದಂತೊಯ್ದಂ ಲಕ್ಷಮಣಂ ನೆಚ್ಚನೆಲ್ಲಂ
    ಪೋದರ್ ಪೋದರ್ ಪೋಗದೇಂ ಜೀವಮೆನ್ನಾ

    • ತುಂಬ ಒಳ್ಳೆಯ ಶಾಲಿನೀವೃತ್ತನಿರ್ಮಿತಿ. ಆದರೆ ಸೀತಾ ಎಂಬ ರೂಪ ಕನ್ನಡದ ಜಾಡಿನದಲ್ಲ. ಅದು ಸೀತೆಯೆಂದಾಗಬೇಕು. ಹಾಗೆ ತಿದ್ದಿದಾಗ ಛಂದಸ್ಸು ಕೆಡುತ್ತದೆ. ಹೀಗಾಗಿ ಸವರಣೆಯ ಹವಣು ಇಂತಿರಬೇಕಾದೀತು:
      “ಪೋದಳ್ ಪಿಂತಾ ಸೀತೆ ಸೌಭಾಗ್ಯಮುಂ ತಾಂ”

      • ಬೆತೆಯಿದನೆಂತು ಬಣ್ಣಿಪುದು? ರಾಮನಯೋಧ್ಯೆಯ ಸಂ
        ಗತಿಯನೆ ನೀಗಿ ಸಾಗೆ ಮಗನಂ ಸಖನಂ ಕಳೆದುಂ
        ಗತಸುಖಮಲ್ತೆ? ಪರ್ಬ್ಬಿದುರೆ ಮಂಕಿನ ನೀರವದೊಳ್
        ಚಿತೆಯವೊಲಾದುದಾನಗರಿ ತಾಪಮನಾಂತು ಕರಂ

        ‘ಪೋದಳ್ ಸೀತಾ’ ಹಿತವಾಗಿ ಕೇಳುತ್ತಿರಲಿಲ್ಲವಾದರೂ ಯಾಕೆಂದು ತಿಳಿಯಲಿಲ್ಲ. 🙂 ನಿಮ್ಮ ತಿದ್ದುಗೆ ನಮಗೆ ಸರ್ವಥಾ ಮಾನ್ಯ. ಧನ್ಯೋಸ್ಮಿ.

        • ಆಹಾ! ಮೊತ್ತ ಮೊದಲ ಬಾರಿಗೆ ಪದ್ಯಪಾನ್ದಲ್ಲಿ ನರ್ಕುಟಕ ಅಥವಾ ನರ್ದಟಕ ಇಲ್ಲವೇ ಕೋಕಿಲಕ ಎಂದು ಹೆಸರಾದ ನಮ್ಮ ಚಿರಪರಿಚಿತವಾದ ಚಂಪಕಮಾಲಿಕೆಯ ಹತ್ತಿರದ ಬಂಧುವಿನ ಬಳಕೆಯನ್ನು ಬಲ್ಸೊಗಸಾಗಿ ಮಾಡಿದ್ದೀರಿ; ಅಭಿನಂದನೆಗಳು.

  17. ರಾಮನು ಕಾಡಿಗೆ ಹೊರಟದ್ದರಿಂದ ::
    ಶೂನ್ಯಮಾಯ್ತುಂ ಜನಾನಂದಂ
    ಮಾನ್ಯ ರಾಮನ ಕಾರಣಂ |
    ನೆತ್ತಿ ಮೇಲಿರ್ದೊಡಾ ಸೂರ್ಯಂ
    ಕತ್ತಲಾಗಿರ್ತಯೋಧ್ಯೆಗಂ ||

    • ಸ್ವಾಗತಂ ಸೋದರೀ! ಶ್ಲೋಕಂ
      ಬೇಗದಿಂ ಬಂದುದಕ್ಕಿದೋ!!

  18. ಪತಿಯೊಲುಮೆಗೊಲಿದು ಸಖನೊಡನೆ ತಾನಂದು ವಸು
    ಮತಿಯಿಟ್ಟಳೇಳೇಳು ಹೆಜ್ಜೆ ಹರುಷಂ ।
    ಪತಿಗಿಲ್ಲದಾ ಸುಖವು ತನಗೆ ಬೇಡೆಂದಿಂದು
    ಗತಿಯಿಟ್ಟಳೆರಡೇಳು ವಜ್ಜೆ ವರುಷಂ ॥

    (ಅಂದು ಸಖನೊಡನೆ ಸಪ್ತಪದಿಯ ಸಹವಾಸದ ಹರ್ಷ / ಇಂದು ಸುಖತೊರೆದು ವನವಾಸ ಹದಿನಾಲ್ಕು (ಎರಡೇಳು) ವರ್ಷ )

    • 4ನೇ ಸಾಲು ಸ್ವಲ್ಪ ತಿದ್ದುಪಡಿ :
      * ಗತಿಯಿಟ್ಟಳೀರೇಳು ವಜ್ಜೆ ವರುಷಂ ॥
      ( ಈರೇಳು = ಹದಿನಾಲ್ಕು)

    • ಒಳ್ಳೆಯ ಪದ್ಯ, ಒಳ್ಳೆಯ ಕಲ್ಪನೆ. ಆದರೆ ವಸುಮತಿ ಎಂದರೆ ಭೂಮಿ ಎಂದು ಪ್ರಸಿದ್ಧಾರ್ಥ. ಅದು ಸೀತೆಗೆ ಹೇಗೆ ಅನ್ವಯ? ಇರಲಿ, ಇದನ್ನು ಶ್ರೀಮತಿ ಎಂಬ ಅರ್ಥದಲ್ಲಿಯೂ ಗ್ರಹಿಸಬಹುದು:-)

      • ಧನ್ಯವಾದಗಳು ಗಣೇಶ್ ಸರ್ ,
        “ಬರಹ” ನಿಘಂಟಿನಲ್ಲಿ “ಸೀತೆ”ಗೆ “ಭೂಮಿ”ಎಂಬ ಅರ್ಥವೂ ಇದೆ. ಸರಿಯೇ?

  19. ಸೀತೆಯ ಉತ್ತರ

    ಅರಮನೆಸಿರಿಯಾಸೆಯಿಂದ ನಿನ್ನಂ
    ವರಿಸಿದೆನೇನಹ ಬಾಪುರೇ ಪ್ರಲಾಪಂ
    ತೊರೆ ಪೊರಮಡು ತೋಡು ಬರ್ಪೆನಾನುಂ
    ನೆರೆಕೊರೆಯೇನೊಡ ನೀನಿರಲ್ಕೆ ಸಗ್ಗಂ

    • ಬಲುದಿನಗಳ ಬಳಿಕ ಕಾಣಿಸಿಕೊಂಡ ನಿಮಗೆ ಮತ್ತೆ ಸ್ವಾಗತ:-) ಪದ್ಯಪಾನದಲ್ಲಿ ತೀರ ವಿರಳವಾಗಿ ಬಲಕೆಮಾಡಿರುವ ಈ ಸುಂದರವಾದ ಪುಷ್ಪಿತಾಗ್ರವೃತ್ತವನ್ನು ಎಲ್ಲ ಪದ್ಯಪಾನಿಗಳೂ ಗಮನಿಸಲಿ.

      • ಗಣೇಶರೆ. ನನಗೆ “ವಿತ್ಡ್ರಾವಲ್” ಸೂಚನೆಗಳು ಷುರುವಾಗಿದುವು. ಅದಕ್ಕೆ ವಾಪಸ್ಸು ಬಂದೆ 😉

      • http://padyapaana.com/?p=1354#comments ಪುಷ್ಪಿತಾಗ್ರದಲ್ಲಿ ನನ್ನೊಂದು ಪ್ರಯತ್ನವನ್ನು ಮತ್ತು ಈ ಛಂದಸ್ಸು ಹಾಗೂ ಅರಿಸಮಾಸದ ಬಗ್ಗೆಯ ಚರ್ಚೆಯನ್ನು ಇಲ್ಲಿ ನೋಡಬಹುದು.

    • ಶ್ರೀಕಾಂತ್ ಸರ್,
      ನಿಮ್ಮ ಸುಂದರ ಹೆಣ್ಣು ಧ್ವನಿಗೆ ಧನ್ಯವಾದಗಳು.

      • ಉಷರವರೆ. ನಿಮ್ಮ ಮೆಚ್ಚಿನ ಮಾತಿಗೆ ನಾನು ಋಣಿ

  20. ಊರ್ಮಿಳೆಯು ಸ್ನಾನ ಮಾಡುತ್ತಿರುವಾಗಲೆ, ರಾಮಲಕ್ಷ್ಮಣ ಸೀತೆಯರು ಹೊರಟಿದ್ದರಿಂದ ಹದಿನಾಲ್ಕು ವರ್ಷಗಳನ್ನೂ ಸ್ನಾನದ ಮನೆಯಲ್ಲೇ ಕಳೆದಳು ಅಂತ ಒಂದು ಕಥೆ. ಇದಕ್ಕೆ ವಾಲ್ಮೀಕಿ ರಾಮಾಯಣದಲ್ಲಿ ಆಧಾರವಿದೆಯೋ ಇಲ್ಲವೋ ಗೊತ್ತಿಲ್ಲ. ಇರಲಿ. ಸ್ವಲ್ಪ ಅದನ್ನ ಆಧರಿಸಿ:

    ತರುಣಿ ಮರುಗಿದಳೈ ಸುಗುಣವತಿ-
    ಯರಿಯದೇ ಹೋದನೈ ಪತಿಯೆನ-
    ಗೆರಡು ಮಾತನ್ನೆನ್ನಗೆ ಪೇಳದೆ ವನಕೆ ತೆರಳುವುದೆ?
    ಸರಿಯೆ ಸೀತೆಯು ರಾಮನೊಡನೆಯೆ
    ಹೊರಟಿದುದು ವನವಾಸಕೆಂದಳು
    ವರುಷವೀರೇಳಾಯ್ತೆ ಸೆರೆಯಿನ್ನರಮನೆಯೆ ನನಗೆ!

    • ಊರ್ಮಿಳೆಯ ವೃತ್ತಾಂತವೇನೋ ವಾಲ್ಮೀಕಿರಾಮಾಯಣದಲ್ಲ. ಆದರೆ ಅದರ ಚೆಲುವು ಮಾತ್ರ ಎಲ್ಲ ಕವಿಗಳಿಗೂ ಉಪದೇಯ. ಹೀಗಾಗಿ ಹಂಸಾನಂದಿಯವರಿಗೆ ಈ ಬಗೆಗೆ ಮುಜುಗರ ಬೇಡ. ಅಮ್ಡಹಾಗೆ, ಎರಡನೆಯ ಸಾಲಿನಲ್ಲಿ ಛಂದಸ್ಸು ಎಡವಿದೆ. ದಯಮಾಡಿ ಸವರಿಸಿ.

  21. ನಾಡತಾಂ ತೊರೆದು ಪೋಗಿರೆ ರಾಮಂ
    ನಾಡಿನೋಳ್ ಕವಿಯಲೆಲ್ಲೆಡೆ ಶೂನ್ಯಂ
    ಕಾಡಿನೊಳ್ ಪ್ರಭುವಿನಾಗಮನಕ್ಕಂ
    ಮೂಡಿತಯ್ ಮಿಗಗಳೊಳ್ ನಲಿವಾಗಳ್

    ಕಡೆಯ ಸಾಲನ್ನು ಸವರಿಸಿದ ಸೋಮನಿಗೆ ಧನ್ಯವಾದಗಳು

    • ಸೋಮನು ರೂಪಿಸಿದ ಕಡೆಯ ಸಾಲಂತೂ ಅತ್ಯುತ್ತಮಕವಿತೆ. ಹೀಗಾಗಿ ಇಡಿಯ ಈ ಪದ್ಯಕ್ಕೇ ಮಿಗಿಲಾದ ಸೊಗಸು ಬಂದಿದೆಯೆಂದರೆ ಅತಿಶಯದ ಮಾತಲ್ಲ. ಈ ಸಾಲಿನ ಮೂಲಕ ಪದ್ಯದಲ್ಲಿ ಚೆಲುವಾದ ವ್ಯತಿರೇಕಾಲಂಕಾರ-ವಿಷಮಾಲಂಕಾರಗಳ ಮಿಂಚೂ ಮೂಡಿದೆ.
      ನಾಡು ಎಂಬ ಪದವು ಎರಡು ಬಾರಿ ಬಂದಿರುವುದು ಪುನರುಕ್ತಿದೋಷಕ್ಕೆ ಆಸ್ಪದವಾಗುವುದು. ಪದ್ಯವೊಂದರಲ್ಲಿ ಯಾವುದೇ ಪದವಾದರೂ ಔಚಿತ್ಯ ಮತ್ತು ಧ್ವನಿಸ್ವಾರಸ್ಯಗಳಿಗೆ ನೆರವಾಗುವ ಹಾಗಿಲ್ಲದಿದ್ದಲ್ಲಿ ಮರುಬಳಕೆಗೊಳ್ಳಬಾರದು. ಬೇಕಾದರೆ ಪರ್ಯಾಯಪದಗಳ ರೂಪದಲ್ಲಿ ಬರಬಹುದು. ಇದು ನಮ್ಮ ಅಭಿಜಾತಕಾವ್ಯದ ರೂವಾರಿಗಳ ಶಿಸ್ತು ಮತ್ತು ಶ್ರದ್ಧೆಗಳ ಆಳ-ಅಗಲಗಳನ್ನು ಸೂಚಿಸುವಂಥ ನಿಯಮ. ದಿಟವೇ, ಇದು ಯಾರಿಗೂ ಒಂದು ಸವಾಲಿನಂಥ ನಿಯಮ. ಆದರೆ ಈ ಮೂಲಕ ರಸಸಿದ್ಧಿಯೂ ಕವಿಯ ಪದಸಂಪದದ ಸಮೃದ್ಧಿಯೂ ತನ್ಮೂಲ್ಕ ಸಹೃದಯರಿಗೆ ಒದಗುವ ಆನಂದ-ವ್ಯುತ್ಪತ್ತಿಗಳೂ ಅಪಾರ, ಅನುಭವವೇದ್ಯ. ಇದನ್ನು ಪದ್ಯಪಾನಿಗಳೆಲ್ಲ ಗಮನಿಸಬೇಕಾಗಿ ವಿನಂತಿ. ಸದ್ಯದ ಪದ್ಯದ ಸವರಣೆಯನ್ನು ಹೀಗೆ ಮಾಡಬಹುದುದು:

      ಬೀಡನೇ ತೊರೆದು ಪೋಗಿರೆ ರಾಮಂ
      ನಾಡಿನೊಳ್ ಕವಿದುದೆಲ್ಲೆಡೆ ಶೂನ್ಯಂ|
      ……………………………………
      …………………………………..||

    • ರಾಮನಿಗೆ “ಸ್ವಾಗತ”ವೃತ್ತದಲ್ಲಿ ಸ್ವಾಗತವಿತ್ತ ಸೋಮಧರರಿಗೆ ಧನ್ಯವಾದಗಳು.

  22. ಧನ್ಯವಾದಗಳು ಸಾರ್.. ಬೀಡು ಎಂಬ ಪದವು ಮನಸ್ಸಿನಲ್ಲಿ ಇತ್ತು, ಆದರೆ ಅದನ್ನು ಹೇಗೆ ಬಳಸಬೇಕೆಂಬುದು ತಿಳಿಯದೆ ಅದೇ ಪದವನ್ನು ಬಳಸಿದೆ.. ಸವರಣೆಗಳಿಗೆ ಮತ್ತೊಮ್ಮೆ ವಂದನೆಗಳು 🙂

  23. ಊರ್ಮಿಳೆಯ ವೃತ್ತಾಂತದ ಮೇಲೇ ಮತ್ತೊಂದು:ರಾಮನೊಡನೆ ಸೀತೆ ಹೊರಟಿರಲು, ಲಕ್ಷ್ಮಣ ತಾನೊಬ್ಬನೇ ಕಾಡಿಗೆ ಹೋಗಿದ್ದು ಎಷ್ಟು ಸರಿಯೆಂದು ಪುರಜನರಲ್ಲೊಬ್ಬರ ಪ್ರಶ್ನೆ.

    ಚಿನ್ನದಂತಹ ಹೆಂಡತಿಯ ಬಿ-
    ಟ್ಟಿನ್ನಿದೇತಕೆ ಹೊರಟೆ ಲಕ್ಷ್ಮಣ
    ಮುನ್ನವೂರ್ಮಿಳೆಗೊಮ್ಮೆ ಪೇಳದೆ ಅಣ್ಣನೊಡಗೂಡಿ?
    ಸನ್ನಡತೆಯಲ್ಲವಿದು ನೀ ಮನ-
    ದನ್ನೆಯನು ಕಡೆಗಣಿಸಿ ಹೋದುದು!
    ಇನ್ನಿವಳ ಮನದಲಿಹ ಬೇಗೆಯ ಸಂತಯಿಪರಾರು?

  24. ಗಣೇಶ್ ಸರ್ ಜೀ,
    ತಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗುವ ಇಚ್ಛೆಯಾಗುತ್ತಿದೆ. ಇದೇ ತಿಂಗಳಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ೧೬ನೇ ತಾರೀಖಿನಿಂದ ೧೯ರವರೆಗೂ ಉಪನಿಷತ್ತುಗಳ ಬಗೆಗಿನ ತಮ್ಮ ಸರಣಿ ಉಪನ್ಯಾಸ ಉಂಟು ಎಂದು ಕೇಳಿದ್ದೇನೆ. ಆದ್ದರಿಂದ ೧೬ನೇ ತಾರೀಖಿನಂದು ತಮ್ಮೊಡನೆ ಒಂದು ಭೇಟಿ ಸಾಧ್ಯವಾಗಬಹುದೇ….ದಯವಿಟ್ಟು ತಿಳಿಸುವಿರಾ ? ನಾನು ತಮ್ಮ ಹೆಚ್ಚು ಸಮಯವನ್ನು ವ್ಯರ್ಥಮಾಡಬಯಸುವುದಿಲ್ಲ. ಕೇವಲ ತಮ್ಮ ಒಂದೈದು ನಿಮಿಷಗಳಷ್ಟು ಸಮಯವನ್ನು ಬೇಡುತ್ತಿದ್ದೇನೆ. ತಮಗೆ ಒಪ್ಪಿತವೇ ?

  25. ಸತ್ಯವೇ ತಾಯೆಂದ ಪುಣ್ಯಕೋಟಿಯತೆರದಿ
    ಸತ್ಪುತ್ರ ತಾನಡೆಯೆ ಕಾಡಿನೆಡೆಗಂ ।
    ವತ್ಸೆಯುಂ ತಾಸಾಗೆ ಪುಣ್ಯಪೂರ್ವಕದಿ ಸೌ
    ಮಿತ್ರಿಯುಂ ತಾಸೇರೆ ಕಾವ ಪಡೆಯಂ ॥

    (ಸತ್ಯ ಪರಿಪಾಲನೆಗಾಗಿ ಕಾಡಿಗೆ ನಡೆದ ಪುಣ್ಯಕೋಟಿ “ಹಸು”ವಿನಂತೆ ಕಂಡ ರಾಮ, ಅವನ ಹಿಂದೆ “ಕರು”ವಿನಂತೆ ಸಾಗಿದ ಸೀತೆ, ಜೊತೆಗೆ ರಕ್ಷೆಣೆಗಾಗಿ ಸಹ ಗೋವಿನಂತೆ ಸೇರಿದ ಲಕ್ಷ್ಮಣ )

  26. ರಾಮ ಸೀತೆಯ ಬಗೆಗೆ ಕಾಳಜಿಯಿಂದ ನುಡಿದಿದ್ದು

    ಕಲ್ಲಿರ್ಕುಂ ಮುಳ್ಳಿರ್ಕುಂ
    ಮೆಲ್ಲಡಿ ನೊಂದೀತು ಮೃದುಲೆ ಮೆಲ್ವಾಸಿರದೇ!
    ಕಲ್ಲಿನ ಮಂಚದ ಮೇಲೊಣ-
    ವುಲ್ಲಿನ ಶಯ್ಯೆ ತನುವೊತ್ತಿ ಪುಣ್ಣಾಗಿಸುಗುಂ

    • ಎನ್ನಾಣ್ಮನಪ್ಪುಗೆಯಿರಲ್
      ಪನ್ನಂಗಂ ಪಾಸು ಕಲ್ಲು ಪುಣ್ಗಳ್ ಪುಲ್ಲೈ
      ನಿನ್ನನುಚರೆಯಾಂ ಮಾರ್ಗಂ
      ಕೆನ್ನೆತ್ತರವೆಜ್ಜೆಗುರತಿನಿಂ ತೋರಿರಲುಂ

      ಸೀತೆಯ ಮಾರ್ನುಡಿ

    • ರಾಮನ ಅಕ್ಕರೆಯ ಮಾತಿಗೆ ಸೀತೆಯ ಉತ್ತರ

      ಕಲ್ಲೆನ್ನ ತಾಯ ಮಡಿಲಯ್
      ಮೆಲ್ಲನೆ ನನ್ನಡಿಯನಾಂತು ಮೆತ್ತೆಯೆನಿಸುಗುಂ
      ಪುಲ್ಲೆನ್ನೊಡವುಟ್ಟು ಕಣಾ
      ಲಲ್ಲೈಸುತಲೆನ್ನನಪ್ಪಿ ಲಳಿಯನೆಸಗುಗುಂ ||

      ಲಳಿ- ಹುರುಪು, ಆನಂದ, ಉತ್ಸಾಹ

  27. ಸೀತೆಗೆ ಕೌಸಲ್ಯೆ ಮತ್ತಿತರರ ಹಿತವಚನ

    ನಲ್ಲನಿಗೆ ತಂದೆಯಪ್ಪಣೆ-
    ಯಲ್ಲದೆ ನಿನಗಲ್ತು ಮಗಳೆ ಅನುಚರಿಸಿದೊಡೇಂ?
    ಸಲ್ಲದು ನಿನಗೀ ಕಷ್ಟಂ
    ಪಲ್ಲಕಿಯೊಳ್ ಪೋಗಿ ಬರ್ಕೆ ಬವಣಿಸದಿರು ನೀಂ

    • ಕೌಸಲ್ಯಾದಿಗಳಿಗೆ ಸೀತೆಯ ಉತ್ತರ

      ಇಟ್ಟೊಡನೇಳಡಿಗಳನಾಂ
      ತೊಟ್ಟೆಂ ಸುಖದುಃಖದೊಳಗು ತೊಣೆಯಿರ್ಪ ಪಣಂ |
      ಕೊಟ್ಟೆನವಗೆ ಸರ್ವಸ್ವಂ
      ಬಿಟ್ಟಿರೆನೇನ್ ನಗುತಲರಸುಬಿನ್ನಣಮನಣಂ ||

  28. ರಾಮ ಕಾಡಿಗೆ ಪೋದೊಡನೆಯೇ
    ಕ್ಷಾಮದಾ ಕಳೆಪೊತ್ತಯೋಧ್ಯದೆ
    ತಾಮಸಂಗೊಳೆ ಜನರು ಶೋಕದೆ ಮೌನಮಾಪುರಿಯು|
    ಪ್ರೇಮಮೀವಾ ಪ್ರಭುವನಗಲಿರ
    ಲಾಮಹಾತ್ಮನ ಪೆರ್ಮೆ ನೆನೆಯುತ
    ಕ್ಷೇಮಕೋರುವರವರು ರಾಮಗೆ ನಮಿಸಿ ದೇವನೊಳು|

  29. ಶ್ರೀಕಾಂತ್ ಮೂರ್ತಿ ಮತ್ತು ಜೀವೆಂ ಅವರ ಕಂದಗಳು ತುಂಬ ಸೊಗಸಾದ ಹಳಗನ್ನಡದ ಹದದಿಂದಲೂ ಹೃದ್ಯ-ಸಹಜಭಾವಗಳ ಚಿತ್ರಣದಿಂದಲೂ ಕೂಡಿ ನನಗೆ ಮುದವಿತ್ತುವು. ಇದಕ್ಕಾಗಿ ಧನ್ಯವಾದಗಳು. ಅಂದಹಾಗೆ ಜೀವೆಂ ಅವರ ಈ ಮೊದಲಿನ ನರ್ಕುಟಕ(ಕೋಕಿಲಕ)ವೃತ್ತವನ್ನು ನೋಡಿದೆ. ಇದು ಹೇಗೆ ನನ್ನ ಕಣ್ತಪ್ಪಿಸಿಕೊಂಡಿತ್ತೋ!
    ಉಷಾ ಉಮೇಶರ ಚೌಪದಿಯೂ ಶ್ರೀಧರ್ ಅವರ ಭಾಮಿನಿಯೂ ಭಾಷಾ-ಶೈಲಿಗಳ ದೃಷ್ಟಿಯಿಂದ ಚೆನ್ನಾಗಿವೆ, ಅದರೆ ಕಲ್ಪನೆಯಲ್ಲಿ ವೈಚಿತ್ರ್ಯ ಕಡಮೆಯಾಗಿವೆ. ಏನು ಮಾಡೋಣ? ಕಾವ್ಯರಚನೆಯ ಪಯಣದಲ್ಲಿವೆಲ್ಲ ಅನಿವಾರ್ಯವಾದ ಬರಡುಜಾಡುಗಳು. ನಾನು ಈ ದಿನಗಳಲ್ಲಿ ಪ್ರಸ್ತುತ ವಸ್ತುವನ್ನು ಕುರಿತು ಕವನಿಸೋಣವೆಂದರೆ ಕಲ್ಪನೆಯೇ ಹೊಮ್ಮುತ್ತಿಲ್ಲ!! ಹೀಗಾಗಿ ಬರಿದೇ ಶಪದ್ಯಪಾನಿಗಗಳ ಪದ್ಯಗಳ ”ವಿಮರ್ಶೆ’ಗೆ ತೊಡಗಿದ್ದೇನೆ:-)
    ಕಬ್ಬಮನೊರೆಯಲ್ಕಾಗದ
    ಸುಬ್ಬಂ ಸುವಿಮರ್ಶಕಾಗ್ರಣಿಯೆನಿಪನಲ್ತೇ !
    ಗಬ್ಬಕ್ಕೋನದ ಗೋವೇ
    ನಿಬ್ಬರದಿಂ ದಾನಕೆಂದು ಮುಡಿಪಾದಪುದಯ್ !!

    • ಗಣೇಶರೆ- ಸ್ಫೂರ್ತಿಯ ಚಿಲುಮೆ ಆಗಿಂದಾಗಿಗೆ ಕ್ಷೀಣಿಸುವುದು ನಿಜ. ಆದರೆ, ಮತ್ತೆ ಅದು ಇಮ್ಮಡಿಸಿ ಹರಿಯೋಕಿದು ಬುನಾದಿಯಷ್ಟೆ.

  30. ರಾಮನು ಕಾಅಡಿಗೆ ತೆರಳಿದಾಗ ಪ್ರಜೆಗಳಿಗಾದ ಖೇದದ ಬಗೆಗಳು:

    ಸೀಸಪದ್ಯ:

    ಚೊಚ್ಚಲ್ ಮಗಂವೆತ್ತ ತಾಯ್ ನಲಂವೆತ್ತಿಲ್ಲ-
    ಮಿಚ್ಚೆಗೊಡುದು ಸಲಲ್ಕಕಳ್ಕರಿಲ್ಲಂ
    ನಲ್ಲ-ನಲ್ಲೆಯರಲ್ಲಿ ಮಿಲನದುತ್ಸವಮಿಲ್ಲ-
    ಮುಲ್ಲಾಸಭಾವಕಂ ಬದುಕದಿಲ್ಲಂ
    ಕಳೆದ ವಸ್ತುವು ಮರ್ತೆ ದೊರೆಯೆ ಸಂಬರಮಿಲ್ಲ-
    ಮಿಳೆಯ ಚೆಲ್ವಿಗೆ ಕಣ್-ಮನಂಗಳಿಲ್ಲಂ
    ದೈವ-ದಿಷ್ಟಿಗಳಲ್ಲಿ ನಚ್ಚು-ನೋಂಪಿಗಳಿಲ್ಲ-
    ಮಾವುದೇ ಮೌಲ್ಯದೊಳ್ ಮೆಚ್ಚದಿಲ್ಲಂ

    ಇಂತು ಕೋಸಲಾವರ್ತದೊಳ್ ಶಾಂತಿಯಿರದೆ
    ಕಂತಿರಲ್ ಮೋದರವಿ, ಲಸತ್ಕಾಂತಿಯಿರದೆ |
    ಕೃಂತಿತಾತ್ಮರಿರ್ದರ್ ಜನರ್ ಸರ್ವರಾರ್ತರ್
    ಸಂತವಿಸಿ ಸಾಗೆ ಕಾಡಿಗಂ ರಾಮಭದ್ರಂ ||

    • ಪುತ್ರಂ ಪ್ರಥಮಜಂ ಲಬ್ದ್ವಾ ಜನನೀ ನಾಭ್ಯನನ್ದತ…,ಅನರ್ಥಿನಃ ಸುತಾಃ ಸ್ತ್ರೀಣಾಂ ಭರ್ತಾರೋ ಭ್ರಾತರಸ್ತಥಾ ಮೊದಲಾದ ವಾಲ್ಮೀಕಿವಾಕ್ಯಗಳ ಮೆರುಗನ್ನು ಹೆಚ್ಚಿಸುವ ನೂತನಾಂಶಗರ್ಭಿತ ವರ್ಣನೆಗಳ ಲೇಸಾದ ಸೀಸ.

      • ಧನ್ಯವಾದ. ಮಹಾಕವಯಿತ್ರಿ ಗಂಗಾದೇವಿಯು ಹೇಳಿದಂತೆ
        “ಪೃಥಿವ್ಯಾಂ ಪದ್ಯಿರ್ಮಾಣವಿದ್ಯಾಯಾಃ ಪ್ರಥಮಂ ಪದಮ್ ”
        ಎಂದು ಸರ್ವೋಪಜೀವ್ಯರಾದ ವಾಲ್ಮೀಕಿಮುನಿಗಳ ಮಾತುಗಳನ್ನೇ ಇಲ್ಲಿ
        ಬಳಸಿಕೊಳ್ಳುವ ಮೂಲಕ ಆದಿಕವಿಗೆ ಕಬ್ಬಿಗರ ಅನಾದಿಯಾದ ಋಣವನ್ನು ಸಲ್ಲಿಸುತ್ತಿದ್ದೇನೆ:-)

  31. ನೀಳಕಾಯರು ಪೋಗ್ವರೆಲ್ಲಿಗೆ
    ಖೂಳರೆಂದಾರ ಜರೆಯುತಿಹರು
    ಪೇಳಲಾರೆಯ ನೋವು ಗದ್ದಲ ದುಃಖವೇಕೆಂದು
    ಮೇಳದಂತೆಯೆ ಸೇರಿ ರೋಧಿಸಿ
    ಗೋಳುಗುಟ್ಟುವ ಜನರ ನೋಡುತ
    ಕೇಳಿತಬ್ಬೆಯ ಲೋಕವರಿಯದ ಮುಗ್ಧಮಗುವೊಂದು

    • ಇಲ್ಲಿಯ ಕೆಲವೊಂದು ತಪ್ಪುಗಳಿಗೆ ಸವರಣೆಗಳು:

      ನೀಳಮೆಯ್ಯವರೆಲ್ಲಿ ಪೋಪರು (”ನೀಳಕಾಯ” ಅರಿಸಮಾಸ ಪೋಗ್ವರೆಲ್ಲಿಗೆ ಎಂಬುದು ಪೋಪರೆಲ್ಲಿಗೆ ಎಂದಾಗಬೇಕು). “ರೋದಿಸಿ” ಎಂಬುದು ಸಾಧುರೂಪ; “ರೋಧಿಸಿ” ಅಲ್ಲ. “ಮುಗ್ಧಮಗು” ಅರಿಸಮಾಸ; ಅದು ಮುಗ್ಧಶಿಶು ಎಂದಾಗಬೇಕು.
      ಇಡಿಯ ಪದ್ಯದಲ್ಲಿ ಗೋಳು, ದುಖಃ, ನೋವು, ರೋದನ ಮುಂತಾದ ಪದಗಳು ಮತ್ತೆ ಮತ್ತೆ ಬಂದುದರ ಔಚಿತ್ಯವು ಅಷ್ಟಾಗಿ ತೋರುತ್ತಿಲ್ಲವೇನೋ….ಚಿಂತಿಸಿರಿ.

      • ಸರ್,
        ಸವರಿಸಿದ್ದಕ್ಕೆ ತುಂಬಾ ಧನ್ಯವಾದಗಳು. 🙂
        ತಪ್ಪುಗಳನ್ನು ತಿದ್ದಿ ಬರೆಯಲು ಈ ಕೆಳಗಿನಂತೆ ಪ್ರಯತ್ನಸಿದ್ದೇನೆ.

        ನೀಳಮೆಯ್ಯವರೆಲ್ಲಿ ಪೋಪರು
        ಖೂಳರೆಂದಾರ ಜರೆಯುತಿಹರು
        ಪೇಳಲಾರೆಯ ನೀನೆನಗೆ ನಡೆಯುತಿಹುದೇನೆಂದು
        ಮೇಳದಂತೆಯೆ ಗುಂಪುಗೂಡಿಹ
        ಗೋಳುಗುಟ್ಟುವ ಜನರ ನೋಡುತ
        ಕೇಳಿತಬ್ಬೆಯ ಲೋಕವರಿಯದ ಮುಗ್ಧಶಿಶುವೊಂದು

  32. ಅರಿವಿಗೆ, ಅಂಬುಜಕ್ಕೆ ಪ್ರಿಯನಾದವನು ರವಿ. ರವಿಕುಲತಿಲಕ ವನವಾಸಕ್ಕೆ ತೆರಳಿದ ಘಟನೆ; ಜ್ಞಾನ, ಕಮಲವಿಲಸಿತ ಮತ್ತು ಶತಪತ್ರ ವೃತ್ತಗಳಲ್ಲಿ :

    ಜ್ಞಾನ (೧೬ ಅಷ್ಟಿ ೧೫೮೦೫ ತ-ನ-ಭ-ಭ-ಸ-ಗ)

    ಅಜ್ಞಾನದ ಪೊರೆಜಾರಿದ ಶೇಷನೆ ಜೊತೆಯಲ್ತೆ
    ಪ್ರಜ್ಞಾನವು ಪರಬೊಮ್ಮನ ಪಿಂತಿಹುದೆನೆಸೀತೆ
    ಸುಜ್ಞಾನವು ತನುಬಂಧವ ನೀಗುವಪರಿ ರಾಜ್ಯ
    ವಿಜ್ಞಾನದ ವಿಧಿಯಜ್ಞಕೆ ರಾಮನನಡೆಯಾಜ್ಯ

    ತನ್ನರೋಷದಪೊರೆಯನ್ನು ಬಿಟ್ಟ ಆದಿಶೇಷಾವತಾರಿ ಲಕ್ಷ್ಮಣ ಅಣ್ಣನಿಗೆ ನೆರಳು. ಆತ್ಮವಸ್ತುವಿನ ಹಿಂದಿನ ಪ್ರಜ್ಞಾನದಂತೆ ಸೀತೆಯ ಅನುಸರಣೆ, ದೇಹೇಂದ್ರಿಯಮನೋಭುದ್ಧ್ಯಹಂಕಾರರಾಜ್ಯವನ್ನು ಸುಜ್ಞಾನಸಾಮ್ರಾಜ್ಯ ತ್ಯಜಿಸುವಂತೆ ರಾಮನ ತ್ಯಾಗ. ಅವನ ನಡಿಗೆಯೇ ಮುಂದಿನ ಮಹಾಯಜ್ಞಕ್ಕೆ ಆಜ್ಯ.

    ಕಮಲವಿಲಸಿತ (ಸುರುಚಿರ, ಉಪಚಿತ್ರ ಅಥವಾ ಸುಪವಿತ್ರಿ) ೧೪ ಶಕ್ವರಿ ೪೦೯೬ ನ-ನ-ನ-ನ-ಗ-ಗ

    ವನಸುಮಗಳುನಗಲಳುವುದಯೋಧ್ಯೆ
    ದಿನರಜನಿಯೆಪುರಿ ವನಶಶಿಮಧ್ಯೆ
    ಜನವಶನವಬಿಡೆ ವನಕದು ಹಬ್ಬ
    ದಿನಪತಿಕುಲಮಣಿ ತಿರುಗಿಸೆ ಹುಬ್ಬ

    ರಾಮ ವನವಾಸಕ್ಕೆ ತನ್ನ ದೃಷ್ಟಿಯನ್ನು ತಿರುಗಿಸಲು, ವನದೇವತೆ ಹರ್ಷದಿಂದ ಕುಸುಮಿತಳಾದರೆ ಅಯೋಧ್ಯಾಕುಸುಮ ಅಳುತ್ತಾಬಾಡಿತು, ಆ ದಿನವೆಂಬುದು ಅಯೋಧ್ಯೆಗೆ ರಾತ್ರಿ, ಕಾಡಿಗೋ ಬೆಳಗಿನಜೊತೆ ಬೆಳದಿಂಗಳು. ಅಯೋಧ್ಯೆಯ ಸಮಸ್ತರು ಏನನ್ನೂ ಮಾಡದೆ ನಿರಶನವ್ರತಿಗಳಾದರೆ ವನಸಾಮ್ರಾಜ್ಯಕ್ಕೆ ಮಹೋತ್ಸವ.

    ಶತಪತ್ರ (ಚಾರುಮತಿ) (ಭ-ಜ-ಸ-ನ-ಭ-ಜ-ಸ-ನ-ಗ)

    ನಿಂದಿಸಿರೆ ಮಂಥರೆಯ ಕುತ್ಸಿತವ ಭೂಜನರು, ದೇವಗಣ ವಂದಿಸಿರಲು
    ಕುಂದಿದಜನಂತೆರಳೆ ಭೂಮಿಬರಿದೈ, ಗಗನ ತುಂಬಿಹುದು ಯಕ್ಷಸುರರಿಂ
    ಮುಂದಿನ ಮಹಾಘಟನೆಯಂದಗಳ ಕೌತುಕದ ಬಂಧಗಳ ಸಂಧಿಯಿದು ತಾ
    ನೆಂದೆನುತ ಮೂಜಗದ ದಿವ್ಯಜನ ರಾಮಪಥ ಸಂಚಲನೆ ವೀಕ್ಷಿಸುತಿರಲ್

    ವನವಾಸಕ್ಕೆ ಕಾರಣಳಾದ ಮಂಥರೆಯನ್ನು ಜನರೆಲ್ಲಾ ನಿಂದಿಸುತ್ತಿರಲು, ದೇವತೆಗಳು ದಾನವದಮನಮುಹೂರ್ತಕಾರಿಣಿಯಾದ ಅವಳ ಕಾರ್ಯದೀಕ್ಷೆಯನ್ನು ಹೊಗಳಿದರು. ರಾಮನು ಕಾಡಿಗೆ ತೆರಳುವ ಘೋರ ದೃಶ್ಯವನ್ನು ನೋಡಲಾಗದೆ ಜನ ತಮ್ಮಮನೆಗಳಲ್ಲೇ ಉಳಿದು ಭೂಮಿ ಬರಿದಾದರೆ, ದುಷ್ಟಶಿಕ್ಷಣ ದೀಕ್ಷಾಯಾತ್ರೆಯ ಪ್ರಾರಂಭವನ್ನು ನೋಡಲು ದಿವಿಜರಿಂದ ಗಗನ ಕಿಕ್ಕಿರಿದು ತುಂಬಿತು. ಈಗ ಅದ್ಭುತವಾದ ಘಟನೆಗಳು ಮೊದಲಾಗುವವಲ್ಲವೇ ಎಂದು ತ್ರಿಲೋಕದ ದಿವ್ಯಪುರುಷರು ಏಕವಾಹಿನಿಯ ಸಮೀಪದರ್ಶನವನ್ನು ನೋಡುತ್ತಾ ಮೈಮರೆತರು !

    • ಪ್ರಿಯ ಚಂದ್ರಮೌಳಿಯವರೇ ಬಲು ಸೊಗಸಾಗಿವೆ ಪದ್ಯಗಳ ಬಂಧ ಮತ್ತು ಉಪಮೆಗಳು . ಹಾರ್ದಿಕ ಅಭಿನಂದನೆಗಳು

      • ಧನ್ಯವಾದಂ ಮಾನ್ಯ ಬದರೀಶ ರಸಪೋಷ

        • ಲಯಾನ್ವಿತಗತಿಸ್ಫುರ-
          ನ್ನವಲವೃತ್ತಖಂಡೇಂದುವಂ
          ಪ್ರಯೋಗಿಸಿ ನಿಜೋಕ್ತಿಯೊಳ್ ಮುಡಿಯೊಳೆಂಬವೊಲ್ಬಲ್ಮೆಯಿಂ |
          ಪ್ರಿಯಪ್ರಜೆಗಳಾರ್ತಿಯಂ
          ರಘುಜನಾ ನಿರೂಪಿಪ್ಪ ನಿ-
          ಮ್ಮಯ ವ್ಯತಿಕರಂ ಕರಂ
          ತುಹಿನಭಾನುಚೂಡೋಪಮಂ ||

          • ಮಲಗಿರ್ಪ ಚೈತನ್ಯಮೊಗೆದೇಳ್ವ ಮೆಚ್ಚುನುಡಿ
            ಪಲವರ್ಗಮಧಿಕಾರಿಭೇದಮೊಪ್ಪಲ್
            ಸಲುವಂತೆ ಕೇಶವಗೆ ಸರ್ವದೇವರ ನಮನ
            ನಲವಿಂದ ರಾಗರಿಗೆ ಪೂವೆ ಕವನ

  33. ಮುನಿಗಳ್ ಕಾವ್ಯಮನೊರೆಯಲ್
    ಬನಮಂ ದಶರಥನಪುತ್ರಮಾಶ್ರಿಪುದಂ ತಾಂ
    ಮನದೊಳ್ ಚಿಂತಿಸುತಿರೆಕಂ
    ಬನಿಗಳ್ ಸುರಿಯಲ್ಕೆ ಚಿರದೊಳಾರ್ದ್ರಂ ಕಬ್ಬಂ

    ಮತ್ತೊಮ್ಮೆ ಕಡೆಯ ಸಾಲನ್ನು ಸೋಮಣ್ಣನಿಂದ ಸವರಿಸಲಾಗಿದೆ 🙂 thanks Soma….

  34. ಮಧ್ಯದಲ್ಲೆಲ್ಲಾದರೂ ಸೇರಿಸಬಹುದಾದ ಈ ಸಣ್ಣ ಪ್ರಯತ್ನ. ಕಾರಣಾಂತರಗಳಿಂದ ಮೊದಲೇ ಕಳಿಸಲಾಗಲಿಲ್ಲ.

    ಜನರಾಜ್ಯಮಂ ತೊರೆದು ವನರಾಜ್ಯಮಂ ಪುಗಲು
    ಮನವಾಂತು ನಿಂತನವನಭಿರಾಮಚಂದ್ರಂ |
    ಇನವಂಶದರಸುಗಳ ಘನಕೀರ್ತಿಯಂ ಬೆಳಗ-
    ಲನುವಾದನೆಂತಹುದೊ ಪಿತೃಭಕ್ತಿಯಿದಲಾ ||

    ಇನಕುಲೋದ್ಭವ ರಾಮನಟವಿ ಪುಗಲನುವಾಗ-
    ಲನುಸರಿಸುವುದೆ ಪತಿಯ ಸತಿಯ ಧರ್ಮಂ |
    ತನಗಿಂದು ದೊರಕಿಹುದು ಯೋಗವಿದುಯೆಂದೆಣಿಸಿ
    ಜನಕಾತ್ಮಜೆಯು ಜತೆಗೆ ಬರ್ಪೆನೆಂದಳ್ ||

  35. ತುರುವಂ ಕಳೆದು ತವಕಿಪೆಳ-
    ಗರುವೋಲಾಸರೆಯನೀವ ತರುವುರುಳಿರೆ ತ-
    ತ್ತರ ನಡುಗುವ ಲತಿಕೆಯವೋಲ್
    ಸೊರಗಿ ಕೊರಗಿದತ್ತಯೋಧ್ಯೆ ಶೋಕಾರ್ಣವದೊಳ್||

    • ಉಪಮೆಗಳು ಸೊಗಸಾಗಿವೆ 🙂

      • ರಾಮಚಂದ್ರನೇ ಮೆಚ್ಚಿದಮೇಲೆ ಇನ್ನು ಚಿಂತೆಯಿಲ್ಲ 🙂

  36. ರಾಮನಂ ಪೆತ್ತಿರ್ದ ಸಾಕೇತಪುರಿಗಾಗ
    ಜಾಮವೊಂದೊಂದು ಯುಗದಂತಲಾಯ್ತುಂ
    ಪ್ರೇಮದಿಂದಲಿ ಗೋವು ಮೊಲೆವಾಲನೀವಾಗ –
    ಲೇ ಮನುಜ ಕರುವ ಬೇರ್ಪಡಿಸಿದಂತೆ

  37. ತನ್ನ ಮನೋಭಾವನೆಯನ್ನು ತೋರ್ಪಡಿಸದೆ ಸೀತೆಯನ್ನು ಸಂತೈಸಲು ರಾಮ ತೆರಳಿದ್ದು. ಮದ್ಧ್ಯದಲ್ಲಿ ಸೇರಿಸಿರಿ.

    ಕೌಶೇಯಮತ್ಯಜನ್ ರಾಮೋ ವಲ್ಕಲಂ ಪರಿಧಾನವಾನ್

    ಮುಖರಾಗಂ ಸಮಂ ಧೃತ್ವಾ ಸೀತಾಸಂನಿಹಿತಂ ಗತಃ

    • ಪ್ರಿಯ ಡೋಂಗ್ರೆಯವರೇ,

      ಕೆಲವೊಂದು ತಿದ್ದುಪಡಿಗಳನ್ನು ಸೇರಿಸಿ ಈ ನಿಮ್ಮ ಪದ್ಯವನ್ನು ಪುನಾರಚಿಸಿರುವೆ:

      ಕೌಶೇಯಮತ್ಯಜದ್ರಾಮೋ ವಲ್ಕಲಂ ಪರಿಧತ್ತವಾನ್|
      ಮುಖರಾಗೇಣ ಸಾಮ್ಯೇನ ಸೀತಾಯಾ ನಿಕಟಂ ಯಯೌ||

  38. ತೆರಳುತಿರೆ ರಘುರಾಮ ಕಾಡಿಗೆ
    ತರುಣ ಲಕ್ಷ್ಮಣನೊಡನೆ ಭೂಮಿಜೆ
    ತರಳೆ ಜಾನಕಿ ಕರವಪಿಡಿಯುತ ರಾಜ ಮಾರ್ಗದಲಿ
    ಪುರನಿವಾಸಿಗಳೆಲ್ಲ ದುಃಖದಿ
    ಸುರಿಸಿರುವ ಕಣ್ಣೀರಿನಿಂದಲಿ
    ನೆರೆಯು ಬಂತೈ ಸರಯು ನದಿಯಲಿ ಶ್ರಾವಣಕೆ ಮೊದಲೆ

    • ಕೊನೆಯ ಸಾಲಿನಲ್ಲಿರುವ ಶಿಥಿಲದ್ವಿತ್ತ್ವವನ್ನು ತೆಗೆಯಲು ಹೀಗೆ ಬದಲಾಯಿಸಬಹುದೇನೋ:

      ಪುರನಿವಾಸಿಗಳೆಲ್ಲ ದುಃಖದಿ
      ಸುರಿಸಿರುವ ಕಣ್ಣೀರ ಹೊಳೆಯಾ-
      ಸರಯುವಿಗು ಮಿಗಿಲಾಗಿ ಹರಿದಿಹುದೂರಿನೊಳಗಿಂದು

  39. (ಕೆಲವು ಸರ್ವಲಘು ಪ್ರಯೋಗಗಳಿಂದ ಕೇಳಲು ಸ್ವಲ್ಪ ಗಡುಸಾಗಿರಬಹುದಾದರೂ ಹಾಕುತ್ತಿದ್ದೇನೆ)

    ನಡೆದನೇನಿವನೂರ ಲೋಗರ-
    ನೆಡರುಗಳ ಬೆಂಕಿಯಲಿ ಬೀಳಿಸಿ
    ಕೆಡವಿದನೆ ಕದಡುತ್ತ ಕೋಸಲ ಜನರ ನೆಮ್ಮದಿಯ!
    ಹುಡುಗ ಮುದುಕರೆನದೆಯೆ ಮನವ ಮು-
    ದುಡಿಸಿದನೆ! ರಾಣಿಯರ ಹದುಳವ
    ಕೆಡೆಸಿದನೆ! ಮಡದಿಯನು ನಡೆಸುತ್ತ ದೂಳಿನಲಿ?

    • ಕೊನೆಯ ಸಾಲಿನಲ್ಲಿ ಚ್ಂದಸ್ಸು ಎಡವಿದಂತಿದೆ.

      • ಹೌದು – ತಪ್ಪನ್ನು ತೋರಿದ್ದಕ್ಕೆ ಧನ್ಯವಾದಗಳು ರಾಮಚಂದ್ರ ಅವರೆ.

        ಹೀಗೆ ಬದಲಾಯಿಸಬಹುದೇನೋ:

        ಕೆಡೆಸಿದನೆ! ಮಡದಿಯನು ನಡೆಸುತ ಮಣ್ನ ದೂಳಿನಲಿ?

  40. ಸಿಡುಕು ಮೂತಿಯ ಗೂನಿ ಮಂಥರೆ
    ಕೆಡಕು ಮಾತನು ರಾಣಿ ಕೈಕೆಗೆ
    ನುಡಿದು ಕಲಿಸಿರಲಂದು ದುಡುಕುತ ಮನೆಮುರಿವ ನಡತೆ |
    ಸಿಡಿಲಿನಂತೆಯೆ ಕೇಳಿಸಿದ ನುಡಿ
    ಯುಡುಗಿಸಿತು ದಶರಥನ ನಾಲಿಗೆ
    ಯೊಡನೆ ಕೆಡಹುತ ಬಿದ್ದನರಸನು ಕೋಪಗೃಹದೊಳಗೆ ||

    (ಕೈಕೆಯು ಅರಮನೆಯ ಕೋಪಗೃಹದಲ್ಲಿ ತನಗೆ ಬೇಕಾದ ಎರಡು ವರಗಳನ್ನು ಕೇಳುವುದೂ, ಅದನ್ನು ಕೇಳಿ ದಶರಥನು ಬಾಳೆಕಂಬದಂತೆ ಉರುಳುವುದೂ – ಈ ಕಥೆಯ ಪೀಠಿಕೆಯಲ್ಲೇ ಬರಬೇಕಾಗಿದ್ದ ಸಂದರ್ಭ)

  41. ರಾಮಾದಿಗಳು ಕಾಡಿಗೆ ಸಾಗಿದಾಗ ಅವರನ್ನು ಅನುಸರಿಸಿ ಆಹಿತಾಗ್ನಿಗಳಾದ ಸೋಮಯಾಜಿಗಳೆಷ್ಟೋ ಮಂದಿ ಸಾಗಿದ ಉಲ್ಲೇಖ ರಾಮಾಯಣದಲ್ಲಿದೆ. ಅದನ್ನು ಆಧರಿದ ಕಲ್ಪನೆ:

    ತ್ರೇತಾಗ್ನಿಗಳೆಂಬಂದದೆ
    ಸೀತಾಸೌಮಿತ್ರಿರಾಮರೊಯ್ಯನೆ ಸಾಗಲ್ |
    ಬೀತುದು ನಿಜಾಹಿತಾನಲ-
    ಚೈತನ್ಯಮೆನುತ್ತೆ ಪಿಂತೆ ನಡೆದರ್ ಮಖಿಗಳ್ ||

    (ಅನಲ = ಅಗ್ನಿ, ಮಖಿ = ಯಾಜಕ )

    ಕೊಡೆಯಂ ನೀಳ್ದಿರೆ ವಾಜಪೇಯಿನಿಚಯಂ ರಾಮಾದಿಗಳ್ಗಳ್ತಿಯಿಂ
    ನಡೆದರ್ ಕಾವಡಿಗಿಟ್ಟು ತಮ್ಮ ವಿಲಸದ್ಧಾರ್ಯಾಗ್ನಿಯಂ ದೀಕ್ಷಿತರ್ |
    ಕಡುಗೋಪಂ ಮಿಗಿಲಾಗೆ ವಹ್ನಿ ಪೊಗೆಯಂ ಮೇಣ್ ಜ್ವಾಲೆಯಂ ಸೂಸುತುಂ
    ನಡೆ ತಪ್ಪಿರ್ದ ನೃಪಾಲನಂ ಸುಡುವವೊಲ್ ಮೇಲೆರ್ದುದೇನೆಂಬೆನೋ !

    ರಾಮನು ಅಯೋಧ್ಯೆಯ ಆಚೆಗೆ ಬಂದು ಅದಕ್ಕೆ ನಮಿಸಿ ತೆರಳಿದ ಬಗೆ:

    ಪುರದ ಬಾಹೆಗೆ ಸಂದ ರಾಮಂ
    ಭರದೊಳಿಳಿದು ವರೂಥಮಂ ನಿ-
    ರ್ಭರವಿನಮ್ರತೆಯಿಂದೆ ಸಾಯಂತನದ ಕಮಲದವೊಲ್ |
    ಕರಯುಗಳಮಂ ಮುಗಿದು ಮೆಯ್ಯಂ
    ತಿರೆಗೆ ಸಾರ್ಚುತೆ ತವರ ಮಣ್ಣಂ
    ಧರಿಸಿ ನೊಸಲೊಳ್ ಬೇಡಿಕೊಂಡಂ ಮರ್ತೆ ಕಾಣಲ್ಕೆ ||

    • ಎರಗಿದ ರಾಮನಿಗೆ ಅಯೋಧ್ಯೆ ಇಂತೆಂದಳು ::

      ತೊರೆವೆಯೇಂ ಮಗ! ತಾಯ ಮಡಿಲಂ ?
      ಮರಳಿ ಬಾ ನಾ ಕಾಯುತಿರ್ಪೆನು
      ಮರೆಯದಿರು ಯೆನ್ನಂತರಂಗದ ಮಿಡಿತ ತುಡಿತಗಳ
      ವರ, ಹರಕೆಗಳ ಬಿಟ್ಟರೀ ಸ್ಥಾ –
      ವರಳು ನೀಡಲಶಕ್ತಳೇನನು
      ಮರುಗದಿರು ನಾನಿರ್ಪೆ ಲಕ್ಷ್ಮಣ ಸೀತೆ ರೂಪಗಳೊಳ್

      ಖೂಳ ಕೂಟಗಳೆಲ್ಲ ಪಿಂದೆಯೆ
      ಹೂಳುತಲಿ ಮನವೇರಲೈ ಘನ –
      ಕಾಳ ರಾತ್ರೆಯ ಕಳೆದು ಹೊಮ್ಮುವ ಬೆಳಗಿನಂದದೊಲು
      ಏಳು ನಡೆ ನೀ ಕರ್ಮವೊಯ್ದೆಡೆ
      ಸೀಳುತಲಿ ತಾಮಸದ ಭಾವವ
      ಬಾಳ ಸಾಗಿಸು ಲೋಕವೆಂದಿಗು ಮರೆಯಲಾಗದವೊಲ್

      • ಮೊದಲನೇ ಪದ್ಯ is amazing ರಾಮ್! 🙂

        • ಚೀದಿ – ನಿಮಗೆ ಪದ್ಯ ಇಷ್ಟವಾದರೆ, ಬರೆದದ್ದು ಸಾರ್ಥಕವಾಯಿತು 🙂

    • ಸುತ್ತು ಕೂಡಿದ ಜನಸಮೂಹವು
      ತತ್ತರಿಸಲುದ್ವೇಗದಿಂ ಸುತ
      ಮೆತ್ತನೆದ್ದವ ಮೂಕ ಭಾವದಿ ನಡೆದ ಕಾಡಿನೆಡೆ
      ಅತ್ತ ಕಾನನ ಮೋಹದಿಂ ಚಾ –
      ಚುತ್ತ ಕರಗಳ ಸೆಳೆಯುತಿರ್ದುದು
      ಪೆತ್ತ ತಾಯೊಡಲಿಂದಲೆತ್ತುವ ಮುತ್ತಿನಂದದೊಲು

      [ತಾಯಿಯ (ಅಯೋಧ್ಯೆಯ) ಒಡಲಿಂದ ಶಿಶುವನ್ನು ಪರರು (ಕಾಡು) ಎತ್ತಿಕೊಂಡಂತೆ ತೋರಿತು ಎಂಬರ್ಥ]

      • ತಾನೆ ಸಾರಿದ ಮಣಿಯನೆತ್ತಳೆ
        ಜೈನ ಮುನಿಯೇಂ ಕಾನನಾಂಬೆಯು
        ದಾನಿಸಾಕೇತಬುವಿಗೆಂದಿಗು ಬಾಧ್ಯಳೆನಿಸಿಹಳು||
        ಯಾನಪೂರ್ತಕೆ ಪಾಲಿಸವರನು
        ದೀನದಿಂದಿರ್ದು ಕಡೆಗೆ ಸ್ವ
        ಸ್ಥಾನಕಂ ತಾ ಕಳಿಸದಿರ್ದಳೆ ಸಾಕುತಾಯಿಯವೋಲ್||

  42. ಕೆಲ ಪದ್ಯಗಳನ್ನು ಯಕ್ಷಗಾನದಿಂದ ಆಯ್ದಿದ್ದೇನೆ.
    ನನ್ನವಲ್ಲ. ಸರಿಕಂಡಲ್ಲಿ ಸೇರಿಸಿರಿ.

    ವಾರ್ಧಿಕ್ಯ

    ಮಂಗಲಂ ಮನೆಯನುಳಿವಂದದಿಂ ರಥದಿ ರಘು |
    ಪುಂಗವಂ ಪೊರಡೆ ಕಂಡಖಿಲ ಪುರಜನರಳುತ |
    ಸಂಗಡಿಸಿ ತೆರಳೆ ತಮಸಾನದಿಯ ದಂಡೆಯೋಳ್ ತಂಗಿರಲ್ಕಂದಿನಿರುಳು ||
    ತಿಂಗಳೇಳಲು ಪೌರರನ್ನಗಲಿ ಜವದಿ ಹೊಳೆ |
    ಯಂಗಳೆದು ಮಂತ್ರಿಯೊಡನೈದಿ ಗಂಗಾ ತಟದಿ |
    ತುಂಗ ವಿಕ್ರಮ ತೇರನಿಳಿದು ಗುಹನಾತಿಥ್ಯಮಂಗೊಂಡು ಮರುವುದಯದಿ || ೧ ||

    ಭಾಮಿನಿ

    ತರಲು ನಾವೆಯ ಗುಹ ಸುಮಂತ್ರನ |
    ಕರೆದು ನೀತಿಯನರುಹಿ ರಾಘವ |
    ಪುರಕೆ ತೆರಳಿಸುತೇರ್ದನೊತ್ತಿಗರೊಡನೆ ಹರಿಗೋಲ ||
    ಸರಿದು ಗಂಗೆಯ ದಾಂಟಿ ಗಿರಿ ಗೌ |
    ಹರವ ಕಳೆವುತ ವಲ್ಮಿಕಾದ್ಯರ |
    ದರುಶನಾಂತದಿ ಮೂವರಿರ್ದರು ಚಿತ್ರಕೂಟದಲಿ || ೧ ||

    ಕಂದ ಪದ್ಯ

    ಬಿಸಜಾಂಬಕ ನಗಲಿಕೆಯಿಂ |
    ಮಸಣವ ಪುಗುವೊಲಯೋಧ್ಯೆಯ ಪೊಕ್ಕಾಸಚಿವಂ ||
    ದಶರಥನೆಡೆಗೈತರೆ ಸುತ |
    ರೊಸಗೆಯದೇನೆಂದಳಲುವ ನೃಪಗಳುತೆಂದಂ

    ವಾರ್ಧಿಕ್ಯ

    ಸೃಷ್ಟಿಪತಿಯಿಂತು ಮತಿವೈಕಲ್ಯವಾಂತು ದೆಸೆ |
    ಗೆಟ್ಟೋಡುತಿರಲಾ ಸುಮಿತ್ರೆ ಕೌಸಲೆ ಮುನಿ ವ |
    ಶಿಷ್ಠಾದಿಗಳು ಪಿಡಿದು ಪರ್ಯಂಕಕೊಯ್ಯೆ ಕೈಗೊಟ್ಟ ಕೈಕೆಯ ಕಾಣುತ ||
    ಮುಟ್ಟದಿರು ತೊಲಗು ತಂನಿದಿರು ನಿಲದಿರು ಪಾಪಿ |
    ದುಷ್ಟೆ ನಿನ್ನನು ಕಂಡನರ್ಥಕೆಡೆ ಗೈದವೀ |
    ದೃಷ್ಟಿ ತನಗೇಕೆನುತ ಕಿತ್ತೆಸೆದು ಋಷಿಹತ್ಯ | ಕೃತ್ಯಕಿದೆ ಶಾಪವೆನುತ || ೧ ||

    ಕಂದ ಪದ್ಯ

    ಎತ್ತಣ ಶಾಂತಿಯಿದೋ ಕಾಂತಿಯಿ |
    ದೆತ್ತಣ ದಿವ್ಯ ಮೂರ್ತಿ ಸಂದರ್ಶನವಮಮ ||
    ಪುತ್ರನು ನೀನೆಂದೆನಿಸಿದ |
    ಕಿತ್ತೆನಿದೋ ಮಸ್ತಕವ ದೇವ ನಿನ್ನಡಿಗೆನುತಂ || ೧ ||

    ಭಾಮಿನಿ

    ಮಂಚದಿಂದಿಳೆಗುರುಳಿ ದಶರಥ |
    ಪಂಚತುವವೈದಿದನು ಕಂಡರ |
    ಸಂಚೆಗಮನೆಯರಳಲ ಗುರು ಸಂತೈಸಲಾ ರಾತ್ರಿ ||
    ಮಿಂಚಿತತಿ ದುಸ್ವಪ್ನ ತಿಳಿದಾ |
    ಕುಂಚ ಮಾನಸನಾಗುತುದಯದ |
    ಮುಂಚೆ ಪೊರಟನು ಭರತನನುಜ ಸಮೇತ ನಿಜಪುರಕೆ

    • ಪ್ರಿಯ ಡೋಂಗ್ರೆಯವರೇ,
      ತೀರ ಅನಿವಾರ್ಯವಿದ್ದಲ್ಲಿ (ಹೋಲಿಕೆಗಾಗಿಯೋ ಉಪಜೀವಿತ್ವಸ್ಥಾಪನಕ್ಕಾಗಿಯೋ) ಇತರಪೂರ್ವಕವಿಗಳ ಪದ್ಯಗಳನ್ನು ಇಲ್ಲಿ ಉದ್ಧರಿಸಬಹುದಲ್ಲದೆ ಇತರಸಂದರ್ಭಗಳಲ್ಲಿ ಅಲ್ಲ. ಪದ್ಯಪಾನವಿರುವುದು ಪ್ರಧಾನವಾಗಿ ಹೊಸತಾಗಿ ಛಂದೋಬದ್ಧವಾದ ಪದ್ಯರಚನೆಯನ್ನು ಪ್ರೇರಿಸಲಲ್ಲವೇ! ದಯಮಾಡಿ ಅನ್ಯಥಾ ತಿಳಿಯದಿರಿ.

  43. ತಪ್ಪು ಮಾಡದೆ ಕೊಟ್ಟು ಕಪ್ಪವ
    ನೊಪ್ಪುತೀಗಲೆ ಕಾಡ ಕಷ್ಟವ
    ನಪ್ಪಿನಡೆದಿರೆ ನಾಡು ಕೇಳಿದೆ ಸೀತೆಗೇಕೆಂದು ।
    ತಪ್ಪಿತಾದರು ರಾಜ್ಯಭಾರವ
    ನೊಪ್ಪುತೀಗಲೆ ಕಾದ ಭಾಗ್ಯವ
    ನಪ್ಪಿನಡೆದಿರೆ ಕಾಡು ಕರೆದಿದೆ ರಾಮ ಬಾರೆಂದು ॥

  44. ರಾಮನ ಹಿಂದೆ ಜನಸಮೂಹದ ಸಂಚಲನದಿಂದೆದ್ದ ಧೂಳಿಯ ರೂಪಿನಿಂದ ಅಯೋಧ್ಯೆ ತನ್ನ ಒಡೆಯನನ್ನು ಹಿಂಬಾಲಿಸಿದಳೆಂಬ ಕಲ್ಪನೆ:

    ಇಳೆಯಂ ಕೇಕಯರಾಜಪುತ್ರಿ ಕಸಿದಳ್ ಶ್ರೀರಾಮನಿಂದಿರ್ಕೆ, ಮಾ-
    ರ್ಪೊಳೆವೆಂ, ಧೂಳಿಯ ಪಾಳಿಯಾಗಿ ನಡೆವೆಂ ಮೇಣಾತನಂ ಪಿಂತಣಿಂ |
    ಬಳಿಯೊಳ್ ನಾಂ ವಿಡಿವೆಂ ಗಡೆಂದು ಜನತಾಪಾದಾಹತಿಪ್ರೋತ್ಥಿತೋ-
    ಜ್ಜ್ವಲರೇಣುತ್ವಮನಾಂತಯೋಧ್ಯೆ ತೆರಳ್ದಳ್ ಕಾಂತಾರಮಂ ತಾರಮಂ ||

    ರಾಮನು ತನ್ನೂರಿನಿಂದ ದೂರವಾದಷ್ಟೂ ರಾವಣನು ಯಮನೂರಿಗೆ ಹತ್ತಿರವಾದನೆಂಬ ಭಾವದ ಇಂದ್ರವಂಶಚ್ಛಂದಸ್ಸಿನ ಪದ್ಯ:

    ಎಂತೆಂತು ರಾಮಂ ನಿಜರಾಜ್ಯದತ್ತಣಿಂ
    ಕಾಂತಂ ವಿದೂರಂ ಸರಿದಂ ಗಡನ್ನೆಗಂ |
    ಭ್ರಾಂತಂ ದಶಾಸ್ಯಂ ಮುಗುಳಂತುಟಂತುಟೇ
    ತಾಂತಂ ಕೃತಾಂತಾಲಯಕಾದನಂತಿಕಂ ||

  45. ಬಡಿದಿರಲು ಸಿಡಿಲಂತೆ ಕೈಕೆಯ
    ನುಡಿಯಯೋಧ್ಯೆಯ ಸಕಲ ಜನರಿಗು
    ಮಡುವುಗಟ್ಟಿಸಿ ದುಃಖದಾವೇಗವನ್ನೆಲ್ಲರೊಳು
    ಸಡಗರದ ರಾಜ್ಯದಭಿಷೇಕವು
    ನಡೆಯದೆಲೆ ಹೋಯಿತದು ನಾರಿನ
    ಮಡಿಯನುಟ್ಟಿಹ ರಾಮಲಕ್ಸ್ಹಣ ವನಕೆ ತೆರಳಿದರು

    • ಮೂರನೆಯ ಪಾದದ ’ಗವನ್ನೆಲ್ಲರೊಳು’ ಎಂಬಲ್ಲಿ ಲಗಂ ಬಂದಿದೆ. ಭಾಷೆಯನ್ನು ಹಳತಾಗಿಸಲು ಸ್ವಲ್ಪ ತಿದ್ದಿದ್ದೇನೆ. ಇನ್ನೂ ಸವರಬಹುದು:
      ಸಿಡಿಲವೊಲು ತಟ್ಟಿರಲು ಕೈಕೆಯ
      ನುಡಿಯಯೋಧ್ಯೆಯ ಸಕಲರಿಂಗಂ
      ಮಡುವುಗಟ್ಟಿದುದವರ ಮನದೊಳ್ ದುಃಖದಾವೇಗಂ|
      ಸಡಗರದ ರಾಜ್ಯದಭಿಷೇಕವು
      ತಡೆದುದಲ್ಲದೆ ಪೊರಡೆ ವನಕಂ
      ಮಡಿಯನುಟ್ಟರೆ ರಾಮ-ಲಕ್ಷ್ಮಣ-ಸೀತೆಯೊಡನೆಯೆ ತಾವ್||

  46. ಶಪಥಂಗೈದಾ ತಾಯಂ
    ಶಪಿಸದೆ ನಮಿಸಲ್ ಸುಪುತ್ರತಾಂ ಸುವಿನಯದಿಂ
    ತಪನಂಗೊಂಡಾ ಮಾತೆಂ
    ಕೃಪೆಯಿಂ ತಾನಾ ಸುಪಾತ್ರನಂ ಹರಸಿಹಳೇಂ ॥

    (ವನವಾಸಕ್ಕೆ ಹೊರಟ ರಾಮ ಕೈಕೆಗೆ ನಮಸ್ಕರಿಸಿದ ಚಿತ್ರಣ)

  47. ಕಾಳ್ಗಿಚ್ಚು ಎಲ್ಲವನ್ನೂ ಸುಡುತ್ತದೆ ಎಂಬರ್ಥದಲ್ಲಿ :

    ರಾವಣನ ಕೊನೆ ಕೈಕೆಯಾಸೆಯ

    ಭಾವವನು ಮೈತಳೆದು ಬಳಿಕಾ

    ಭೂವರನ ವರಮಾತ್ರದಿಂದಲಿ ನಗರದಿಂ ಪೊರಟು

    ನಾವೆಯಲಿ ದಾಟುತ್ತ ಜಾಹ್ನವಿ

    ದಾವವನು ಸೇರಲ್ಕೆ ವೇಗದಿ

    ದಾವದವಗಾಹುತಿಯು ದಶರಥ ದಶಶಿರಗೆ ಮೊದಲು

  48. ಏನಿಹುದು ದೋಷ ಕೈಕೇಯಿ ಮೇಣ್ ದಶರಥರ
    ಯಾನಕಂ ರಾಮಗಂ ವ್ಯಾಜರಾಗಲ್|
    ಮಾನವರ ರಾಮರಾಜ್ಯವವ ಸ್ಥಾಪಿಪ ಮುನ್ನ
    ತಾನವರ ಪೂರ್ವಜರ ಕಂಡುಕೊಳ್ಳಲ್||

    (ಕಪಿಗಳೊಂದಿಗೆ ಪಳಗಿಬಂದಮೇಲೆ ಮಾನವರನ್ನು ಹದ್ದುಬಸ್ತಿನಲ್ಲಿಟ್ಟು ರಾಮರಾಜ್ಯ ಸ್ಥಾಪಿಸಲು ಸಾಧ್ಯವಾಯಿತು)

  49. ಕಾಡಿsಗೆ ಹೊರಟಾನ ನೋಡಿsರೆ ರಾಮsನು
    ನೀಡಿsರಲವನಿsಗೆ ವನವಾಸ್ವ । ಮಲತಾಯಿ
    ಬೇಡಿsರೆ ಮಗನಿsಗೆ ಸಿಂಹಾಸ್ನ ॥

    ನಾಡಾಗೆ ವನವಿsದೆ ಕಾಡಿsಗೆ ಬೇಡೆಂದು
    ಕಾಡಿsರಲವನುಡಿದ ಸತ್ಯಾವ್ನ । ಮಲತಾಯಿ
    ಬೇಡಿsರಲವ ಪಾಡುಪಡುವಾಸ್ವ ॥

    (ಗಣೇಶ್ ಸರ್ ರವರು, ತಮ್ಮ ಪ್ರವಚನದಲ್ಲಿ “ಸತ್ಯ”ದ ಸ್ವರೂಪವನ್ನು ವಿವರಿಸುವಾಗ ಕೊಟ್ಟಿದ್ದ ಈ ಉದಾಹರಣೆಯಿಂದ ಪ್ರೇರೇಪಿತ – ಕೈಕೆ ಬಯಸಿದ್ದು ರಾಮನಿಗೆ “ಕಷ್ಟ”ದ ವನವಾಸ. ಅದೇ “ಸತ್ಯ”. ಹೀಗಾಗಿ ರಾಮ ಅದನ್ನೇ ಪಾಲಿಸಿದ, ನಾಡಿನ ವನದಲ್ಲಿ ಉಳಿಯದೇ ನಿಜ ಕಾಡಿಗೇ ತೆರಳಿದ )

  50. ಪ್ರಸ್ತುತ ಪ್ರಸಂಗದ ಚಿತ್ರಣ ಕವಿಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣವಿರಚಿತ ಶೀಮದ್ರಾಮಾಯಣ ಕಲ್ಪವೃಕ್ಷಂ ಕಾವ್ಯದಲ್ಲಿ ಹೇಗೆ ಬಂದಿದೆ, ಯಾವ ಹೊಸತನ್ನುಕವಿ ತಂದಿರಬಹುದು ಎಂಬ ಕುತೂಹಲಕ್ಕೆ ಲಭ್ಯವಾದದ್ದು ಈ ಅಪೂರ್ವ ಧ್ವನಿ ಗರ್ಭಿತವಾದ ಸುಮಂತ್ರನ ನುಡಿ, ದಶರಥನಿಗೆ ಬಲವಾದ ಮರ್ಮಾಘಾತ…

    ಸೀತಾರಾಮಲಕ್ಷ್ಮಣರನ್ನು ಕಾಡಿಗೆ ಬಿಟ್ಟು ಬಂದ ಸುಮಂತ್ರ ದಶರಥನಿಗೆ ಹೇಳುವ ಮಾತು….

    ಓ ಮಹಾರಾಜ ನಿನ್ನೂರಿನೊಳು ನೀರಿನೊಳು ಕೆರೆಕುಂಟೆಯೊಳಗಿಲ್ಲವೊಂದು ಮೀನು
    ಭೂಮೀಂದ್ರ ಸಸ್ಯತರುಕೂಟದಲಿ ತೋಟದಲಿ ಕಾಣಲೊಂದಿಲ್ಲ ಝೇಂಕರಿಪ ದುಂಬಿ
    ಸ್ವಾಮಿ ನಿಮ್ಮಯರಾಜ ಬೀದಿಯಲಿ ಹಾದಿಯಲಿ ಪುರದೊಳೆಲ್ಲಿಯು ಒಂದು ಹುಳುವ ಕಾಣೆ
    ಈ ಮಹಾನಗರದಲಿ ಹಸುರನೋ ಹುಲ್ಲನೋ ಮೇಯ್ವ ಪಶುವೊಂದನುಂ ಕಂಡುದಿಲ್ಲ

    ತರುಣಿ ರಾಮ ಲಕ್ಷ್ಮಣರ ವನಕಟ್ಟಿಬಂದ
    ದುರುಳ ದೌರ್ಭಾಗ್ಯ ವದನಕ್ಕೆ ದೂರಮಾಗಿ
    ಹೊರಟು ಬೆನ್ನಾಗಿ ಮುನ್ನಡೆದು ಮನೆಯಸೇರಿ
    ಸರಿದರೆಂಬಂತೆ ಮನೆಬಾಗಿಲುಗಳ ಮುಗಿವು

    ಮಹಾರಾಜ ನಿನ್ನ ಸೊಸೆಯನ್ನೂ ಮಕ್ಕಳನ್ನೂ ಕಾಡಿಗೆ ಕಳುಹಿಸಿಬಂದೆ. ನಿನ್ನೂರು ಹಾಳುಕೊಂಪೆಯಂತಾಗಿದೆ. ನೀರಿನಲ್ಲಿ ಎಲ್ಲೂ ಒಂದೇ ಒಂದು ಮೀನಾಗಲೀ ಇಲ್ಲ (ಶುದ್ಧ ಜಲದಲ್ಲಿ ಮೀನಿನ ಆಟ, ಸುಳಿದಾಟ. ಸಂಕಟದಿಂದ ಬೆಂದ ನೀರಿನಲ್ಲಿ ಮೀನಿರಲು ಸಾಧ್ಯವೇ, ರಾಮನಿಗಾಗಿ ತಪಿಸಿ ನೀರೆಲ್ಲ ಬತ್ತಿದೆ). ಭೂಮೀಂದ್ರ (ಇಂದ್ರ ಸ್ವರ್ಗಪಾಲಕ, ನಿನ್ನ ಪಾಲನೆಯಲ್ಲಿ ಭೂಮಿ ನರಕವಾಗಿದೆ –ದಶರಥನಿಗೆ ನೇರವಾದ ಬೈಗಳು ). ನಿನ್ನ ತೋಟಗಳಲ್ಲಿ ಒಂದು ದುಂಬಿಯೂ ಇಲ್ಲ (ಹೂವಿದ್ದರಲ್ಲವೇ ದುಂಬಿಬರುವುದು !) ನಿನ್ನ ರಾಜ ಬೀದಿಗಳಲ್ಲಿ ಒಂದು ಹುಳುವೂ ಕಂಡುಬರಲಿಲ್ಲ (ನಿರಂತರವಾಗಿ ಜನಗಳಿಂದ ನಿಬಿಡವಾದ ರಾಜಬೀದಿಗಳು..) ನೀನು ಪ್ರತಿದಿನ ಹೋಗುವ ವಿಹಾರಸ್ಥಳಗಳಲ್ಲಿ ಮೇವು ತಿನ್ನುವ ಒಂದು ಹಸುವೂ ಕಾಣದಾಗಿದೆ (ಭೌತಜೀವಿಗಳು ನಿರಾಹಾರಿಗಳಾಗಿವೆ ನನಗೆ ನಿನಗೆ ಅರಮನೆಯಲ್ಲಿ ಆಹಾರ ಆರೋಗಣೆ ನಡೆದೇ ಉಂಟು).. ನಿನ್ನಸೊಸೆಯೊಂದಿಗೆ ರಾಮಲಕ್ಷ್ಮಣರನ್ನು ಬಿಟ್ಟುಬಂದ ನನ್ನ ದೌರ್ಭಾಗ್ಯಮುಖದರ್ಶನ ಜನಕ್ಕೆ ಬೇಡವಾಯಿತು (ಛೀ ಈ ಪಾಪಿಯೆ ಸೀತಾರಾಮರನ್ನು ಕಾಡಿಗೆ ಕಳುಹಿಸಿದ್ದು, ಇವನ ದರಿದ್ರ ಮುಖದರ್ಶನಮಾಡಬಾರದು ಎಂದು ಜನ ತಮ್ಮ ಮನೆಸೇರಿ ನನ್ನ ಮುಖಕ್ಕೆ ಬಾಗಿಲು ಜಡಿದರು. ನಿನ್ನಸೇವಕನಾದ ನನ್ನಮುಖವನ್ನೇ ನೋಡಲು ಜನ ಹೇವರಿಸಿಕೂಂಡರೆ, ಎಲ್ಲಕ್ಕೂ..ಮೂಲಕಾರಣನಾದ ನಿನ್ನ ಮುಖವನ್ನು ನೋಡಲು ಅಯೋಧ್ಯೆಯಲ್ಲಿ ಯಾರಿದ್ದಾರೆ?)

  51. ಯುಗ್ಮ

    ಬರುತಿಹನು ಶ್ರೀ ರಾಮಚಂದ್ರನು
    ಪುರವ ತ್ಯಜಿಸುತ ಕಾನು ಪ್ರಾಂತಕೆ
    ವರವು ತಾನಾಗಿಹುದು ಕಾನನಜೀವಿಗಳಿಗೆಲ್ಲ |
    ಸುರನುತನು ಮುನಿಗಣಸುವಂದ್ಯನು
    ಸಿರಿಪತಿಯು ಪುರುಷೋತ್ತಮನು ತಾ
    ನಿರುವ ತಾಣವೆ ಪರಮಪದ ವೈಕುಂಠಮಾದಪುದು || 1 ||

    ಎಂದು ಭಾವಿಸಿ ಸರ್ವದಿಶೆಯಿಂ
    ದಿಂದಿರೇಶನ ಸೇವೆಗೈಯಲು
    ಬಂದು ಸೇರ್ದರು ಗುಂಪಿನಲಿ ಋಷಿಮುನಿಗಳಾ ವನದಿ |
    ಇಂದು ನಮ್ಮಯ ಪಾಪ ಕಳೆಯುವು
    ದೆಂದು ಧಾವಿಸುತಿರ್ದರೆಲ್ಲರು
    ಕಂದದುತ್ಸಾಹದಲಿ ಮೆರೆಯುತ ರಾಮದರುಶನಕೆ || 2 ||

    ಇತ್ತ ದಶರಥನ ಪರಿಸ್ಥಿತಿ

    ರಾಮ ಲಕ್ಷ್ಮಣ ಸೀತೆಯರು ನಿಜ
    ಧಾಮದಿಂ ಪೊರಮಟ್ಟರೆಂಬುವ
    ಭೀಮಭೀಕರವಾರ್ತೆಯನು ಚಾರಣರು ತಂದಿರಲು
    ಸೋಮಶೇಖರಪೂಜ್ಯನಯ್ಯನು
    ರಾಮನನ್ನಿನ್ನೆಂದು ಕಾಣ್ಬೆನೊ
    ಕಾಮಿನಿಯ ಕೈಗೊಂಬೆಯಾದೆನೆಯೆಂದು ಹಲುಬಿದನು ||

  52. ಪೊರಟನಯ್ಯೋ ರಾಮ ಕಾಡಿಗೆ
    ಧರಣಿ ಜಾತೆಯ ಕೂಡಿ ನಡೆದನೆ!
    ತರಳ ಲಕ್ಷ್ಮಣನಿವರ ಹಿಂದೆಯೆ ಹೆಜ್ಜೆ ಹಾಕಿಹನು
    ಮರೆತರೇಕೈ ನಮ್ಮನೆಲ್ಲರ
    ನಿರುತ ಕಾಯುವ ನಿಚ್ಚ ನೋಂಪಿಯಿ-
    ವರೆನುತಾ ಪುರದೆಲ್ಲ ಪ್ರಜೆಗಳು ಹಿಂದೆ ಹೊರಟಿಹರು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)